ಕನ್ನಡದ ದೊಡ್ಡಜನ ನಾಗರೀಕ ದನಿಯಾಗಬೇಕು!

ಇತ್ತೀಚಿನ ದಿನಗಳಲ್ಲಿ ನಮ್ಮೂರುಗಳು ಹಂಗೀರ್ಬೇಕು, ಹಿಂಗಿರ್ಬೇಕು ಅಂತಾ ಹೇಳಕ್ಕೆ, ಏನೇನ್ ಬದಲಾಗಬೇಕು, ಏನೇನು ಸುಧಾರಣೆ ಆಗ್ಬೇಕು ಅನ್ನಕ್ಕೆ, ಈಗಾಗ್ಲೆ ಇರೋ ಜನಪ್ರತಿನಿಧಿ ವ್ಯವಸ್ಥೆಗೆ ಹಿಡಿದಿರೋ ತುಕ್ಕು ಬಿಡಿಸೋಕ್ಕೆ ನಾಗರೀಕರೇ ಸೇರ್ಕೊಂಡು ಕಟ್ಕೊಂಡಿರೋ ಹಲವಾರು ಸಂಸ್ಥೆಗಳು ಕೆಲಸ ಮಾಡ್ತಿವೆ. ಅದ್ರಲ್ಲಿ ನಮ್ಮ ಬೆಂಗಳೂರಲ್ಲಿ ಜನಾಗ್ರಹ, ಬ್ಯಾಂಗಲೂರ್ ಸಿಟಿಜನ್ ಮ್ಯಾಟರ್ಸ್.ಇನ್ ಮೊದಲಾದವು ಇವೆ. ಈ "ಲಾಭರಹಿತ" ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ಕೆಲಸ ಮಾಡ್ತಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳನ್ನು ಕಟ್ಕೊಂಡಿರೋರು, ನಡುಸ್ತಿರೋರು ಯಾರಪ್ಪಾ ಅಂತಾ ನೋಡುದ್ರೆ ಅದರಲ್ಲಿ ನಮ್ಮ ಜನ ಅಂದ್ರೆ ಕನ್ನಡಿಗರಿರೋದು ಬೆರಳೆಣಿಕೆಯಷ್ಟು ಮಾತ್ರಾ ಕಣ್ರೀ.. ಅಲ್ಲಾರೀ, ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ರಾಜಾಸ್ಥಾನದಿಂದ, ಮುಂಬೈಯಿಂದ, ಕೇರಳದಿಂದ, ತಮಿಳುನಾಡಿಂದ ವಲಸೆ ಬಂದಿರೋ ಹೈಕ್ಳು ನಿರ್ಧಾರ ಮಾಡಬೇಕಾ? ಇದರಲ್ಲಿ ಯಾವ ತಪ್ಪೂ ಇಲ್ಲಾ ಅಂದ್ರೂ ಇವರಿಗೆ ನಮ್ಮೂರು, ನಮ್ಮೂರ ಜನ, ನಮ್ಮೂರ ಸಂಸ್ಕೃತಿಗಳು ಇದನ್ನೆಲ್ಲಾ ಲೆಕ್ಕಕ್ಕೆ ತಗೊಂಡು ಕೆಲಸ ಮಾಡೋ ಉಮ್ಮೇದಿ ಅದೆಂಗ್ ಇರಕ್ ಆಗುತ್ತೆ ಹೇಳಿ. ಇದ್ರಾಗೆಲ್ಲಾ ನಮ್ ಜನಗಳು ಇರಬೇಕು. ಆಗ ಸಮಸ್ಯೇನೂ ಸರಿಯಾಗಿ ಅರ್ಥ ಆಗುತ್ತೆ, ಪರಿಹಾರಾನೂ ಸರಿಯಾಗ್ ಸಿಗ್ತದೆ.

ಇವ್ರು ಯಾವ ಸೀಮೆ ಬೆಂಗಳೂರಿನ ಪ್ರತಿನಿಧಿಗಳು?

ದೊಡ್ಡ ಓದು ಓದಿದೀವಿ ಅಂತಾನೋ, ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇದೀವೀ ಅಂತಾನೋ ಇವರು ತಮ್ಮುನ್ ತಾವು ಇಡೀ ಬೆಂಗಳೂರಿನ ಪ್ರತಿನಿಧಿಗಳು ಅಂತ ಅಂದ್ಕೊಂಡಿದ್ರೆ ಮೂರ್ಖರಾಗ್ತಾರೆ ಅಷ್ಟೆ. ಈ ಬೆಂಗಳೂರಿನಲ್ಲಿ ಇರೋ ಕನ್ನಡಿಗರನ್ನೇ ಗಣನೆಗೆ ಇಟ್ಕೊಳ್ದೆ, ಹೊರಗಿಂದ ಬಂದೋರ ಹಿತ ಕಾಯೋದೊಂದೇ ಗುರಿ ಅನ್ನೋ ಹಾಗೆ ಇವರುಗಳು ನಡ್ಕೊತಿರೋದು ಎದ್ದು ಕಾಣ್ತಿದೆ. ಯಾಕಪ್ಪಾ ಅಂದ್ರೆ, ಬೆಂಗಳೂರಿನ ನಾಗರೀಕರನ್ನು ಪ್ರತಿನಿಧುಸ್ತೀವಿ ಅಂತಾ ಹೇಳ್ಕೊಳ್ಳೋ ಇವರ ಅಂತರ್ಜಾಲ ತಾಣಗಳಲ್ಲಿ ಕನ್ನಡವೇ ಇಲ್ಲ. ಅಂಥಾದ್ರಲ್ಲಿ ಇವರು ಯಾವ ಸೀಮೆ ಬೆಂಗಳೂರನ ನಾಗರೀಕರ ಪ್ರತಿನಿಧಿಗಳಾಗ್ತಾರೆ? ನೀವೆ ಹೇಳಿ. ಕನ್ನಡದೋರ ಅನುಭವ, ಸಮಸ್ಯೆ, ಯೋಜನೆ ಇವುನ್ನೆಲ್ಲಾ ಇವರ ತಾಣಗಳು, ಸಂಸ್ಥೆಗಳೂ ಪ್ರತಿನಿಧಿಸಲಾರವು. ಇವತ್ತಿನ ದಿವ್ಸ ಇವರ ಜೊತೆ ಕೆಲಸ ಮಾಡ್ತಿರೋ ಒಬ್ರೋ ಇಬ್ರೋ ಕನ್ನಡಿಗರೂ ಕೂಡಾ ಕನ್ನಡ ಬಳುಸೋದು ಹೆಂಗಪ್ಪಾ ಅನ್ನೋ ಕೀಳರಿಮೆಯಲ್ಲಿ ನರಳ್ತಿದಾರೇನೋ ಅನ್ಸುತ್ತೆ. ಇಲ್ದಿದ್ರೆ ಇಷ್ಟ್ ಹೊತ್ತಿಗೆ ಇವರ ಅಂತರ್ಜಾಲ ತಾಣದಲ್ಲಿ ದೇವ್ರಾಣೆಗೂ ಕನ್ನಡ ಇರ್ತಿತ್ತು. ಹೀಗೆ ಬುಡಹಂತದಲ್ಲೇ ಹುಳುಕು ಇಟ್ಕೊಂಡು, ತಮ್ಮ ಬರಹಗಳಲ್ಲಿ ನೇರವಾಗೇ ಪರಭಾಷೆಯೋರುನ್ನಾ ಮೆರುಸೋ ಸಲುವಾಗಿ ಕನ್ನಡದವರನ್ನೇ ಕಡೆಗಣುಸ್ತಿರೋ ಇವರಿಂದ ಬೆಂಗಳೂರು ಉದ್ಧಾರ ಆದ ಹಾಗೇ ಗುರೂ!

ಇದ್ಯಾವ ಮಹಾ ಸಂಸ್ಥೆಗಳು ಅನ್ನೋ ಅಸಡ್ಡೆ ಬೇಡಾ!

ಹಾಗಂತಾ ಇವ್ಯಾವ ಮಹಾ ಸಂಸ್ಥೆಗಳು ಅಂತಾ ನಾವೂ ನೀವೂ ಇವುಗಳ್ನ ಕಡೆಗಣಿಸಕ್ಕೆ ಆಗಲ್ಲಾ. ಯಾಕಂದ್ರೆ ಇವತ್ತು ಈ ಸಂಸ್ಥೆಗಳು ಎತ್ತುತಿರೋ ದನಿ ಆಡಳಿತದಲ್ಲಿರೋರ ಕಿವಿಗೆ ಮುಟ್ತಾಯಿದೆ. ಮಾಧ್ಯಮಗಳಲ್ಲಿ ಇವರ ಕೂಗು ಕೇಳಿ ಬರ್ತಾಯಿದೆ. ಹೌದಪ್ಪಾ, ಇವರು ಹೇಳ್ತಿರೋ ಸುಧಾರಣೆ ಮಾಡುದ್ರೆ ಊರು ಉದ್ಧಾರ ಆಗುತ್ತೆ ಅಂತಾ ಆಳೋರಿಗೆ ಅನ್ಸೋಕೆ ಶುರು ಆಗಿದೆ. ಇಂಥಾ ಸಂಸ್ಥೆಗಳು ಕೂಡಾ ನಿಜವಾಗಿ ಬೆಂಗಳೂರಿನ ವ್ಯವಸ್ಥೆಯನ್ನು ಸುಧಾರಿಸಬೇಕು ಅಂತಾ... ಬಹಳ ಅಧ್ಯಯನ ಮಾಡಿ ತಮ್ಮೆಲ್ಲಾ ಪರಿಣಿತಿ ಅನುಭವಗಳನ್ನು ಸುರಿದು ನಿಜವಾದ ಕಾಳಜಿಯಿಂದಲೇ ಕೆಲಸ ಮಾಡ್ತಿರಬಹುದು. ಆದರೇನು? ಇದರಲ್ಲಿ ನಮ್ಮ ಜನ ಇಲ್ಲದಿದ್ರೆ ಇವರ ಪರಿಹಾರಗಳು, ಯೋಜನೆಗಳೆಲ್ಲಾ ಇಲ್ಲಿಗೆ ಬರೋ ವಲಸಿಗರ ಬದುಕನ್ನು ಹಸನು ಮಾಡೋದ್ರಲ್ಲಿ ಮುಗಿದು ಹೋಗುತ್ತೆ! ಅದೆಂಗೇ ಅಂತೀರಾ? ಈಗ ನೋಡಿ, ಬೆಂಗಳೂರಿನ ಬಸ್ಸುಗಳಲ್ಲಿ ಇಂಗ್ಲಿಷ್ ಬರಹ ಬೇಕು ಅಂತಾ ಇವರು ಬಲವಾಗಿ ಪ್ರತಿಪಾದುಸ್ತಾರೆ. ಆದ್ರೆ ಇದೇ ಜನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ, ಬೆಂಗಳೂರಿನ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಬರೀ ಕನ್ನಡ ಬರೋ ನಮ್ಮ ಎಂಕ ವ್ಯವಹರಿಸಕ್ಕೆ ಅನುಕೂಲ ಆಗೋ ಅಂಥಾ ವ್ಯವಸ್ಥೆ ಬೇಕು ಅನ್ನಲ್ಲ. ಇವರ್ಯಾರೂ ಅಂಥಾ ವ್ಯವಸ್ಥೆ ಬೇಡಾ ಅನ್ನಲ್ಲ. ಆದ್ರೆ ಈಗ ಇಂಗ್ಲಿಷ್ ಬೋರ್ಡ್ ಬೇಕು ಅನ್ನೋ ಹಾಗೆ ಎಂಕಂಗೆ ಅನುಕೂಲ ಆಗೋ ಥರದ ವ್ಯವಸ್ಥೆ ಕಟ್ಟಿ ಅನ್ನಲ್ಲ. ಅನ್ನಲ್ಲ ಅನ್ನಬಾರದು, ಇದುವರ್ಗೂ ಅಂದಿಲ್ಲಾ ಅಷ್ಟೆ.

ಜನಾಭಿಪ್ರಾಯದ ನಾಟಕ!

ಇವ್ರು ಜನಾಭಿಪ್ರಾಯ ತಿಳ್ಕೊಳಕ್ಕೆ ಅಂತಾ ಮತಕ್ಕೆ ಹಾಕಿರೋ ಈ ಪ್ರಶ್ನೆ ನೋಡಿ : ಇದರ ಉತ್ತರಗಳಲ್ಲಿ ಯಾವುದನ್ನು ಆರಿಸಿದ್ರೂ ನೀವು ಇಂಗ್ಲಿಷ್ ಬೋರ್ಡನ್ನು ಒಪ್ಪಿದ ಹಾಗೇ. ಇಂಥಾ ಸಂಸ್ಥೆಗಳು ನಿಜಕ್ಕೂ ಬೆಂಗಳೂರನ್ನು, ಬೆಂಗಳೂರಿನ ಜನತೆಯನ್ನು ಪ್ರತಿನಿಧಿಸ್ತಾ ಇದಾರಾ? ಇವರು ಪ್ರತಿನಿಧಿಸ್ತಾ ಇರೋ ಬೆಂಗಳೂರು ಕನ್ನಡಿಗರನ್ನು ಒಳಗೊಂಡಿದ್ಯಾ ಇಲ್ವಾ? ಅಂತೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಹುಟ್ತಿಲ್ವಾ ಗುರುಗಳೇ! ಇನ್ನೂ ಏನು ಯೋಚನೇ ಮಾಡ್ತಿದೀರಾ? ಸಮಾಜದಲ್ಲಿ ದೊಡ್ಡ ಸ್ಥಾನ ಹೊಂದಿರೋ ಕನ್ನಡಿಗರು ಇಂಥಾ ಸಂಸ್ಥೆಗಳ ಒಳಹೊಕ್ಕು ಚುಕ್ಕಾಣಿ ಹಿಡೀದಿದ್ರೆ, ಮಾತು ನಡ್ಯೋ ಹಂತಕ್ ತಲುಪದೇ ಇದ್ರೆ, ಅಥ್ವಾ ಈ ಸಂಸ್ಥೆಗಳಿಗಿಂತಾ ಪ್ರಭಾವಶಾಲಿಯಾದ ದೊಡ್ಡ ಸಂಸ್ಥೆಗಳ್ನ ಕಟ್ಟದೇ ಹೋದ್ರೆ ಮುಂದೆ ಅನಾಹುತಾ ಗ್ಯಾರಂಟಿ.

ಇವರ ನಿಲುವೇ ಬೆಂಗಳೂರಿಗರದ್ದೇನು?

ಮೊನ್ನೆ ನೋಡಿ ತಿರುವಳ್ಳುವರ್ ಸ್ಥಾಪನೆ ಮಾಡಿದ್ದೇ ಸರಿ ಅಂತಾ ಅಭಿಪ್ರಾಯಾನ ಬೆಂಗಳೂರು ಸಿಟಿಜನ್ ಮ್ಯಾಟರ್ಸ್‍‍ನ ಸಂಪಾದಕರು ಬರೆದಿದ್ದಾರೆ. ಇದನ್ನು ಮೀರಿಸೋ ಹಾಗೆ ಜನಾಗ್ರಹದ ಸಂಪಾದಕೀಯ ಇದೆ. ಇದೇನು ಇಡೀ ಕನ್ನಡಿಗರ ಅಭಿಪ್ರಾಯವೇನು? ಈ ಪ್ರತಿಮೆ ವಿಚಾರದಲ್ಲಿ ಸರ್ಕಾರ ಹೇಗೆ ನಡ್ಕೊಳ್ತು ಅಂತಾ ಇಡೀ ನಾಡಿಗೇ ಗೊತ್ತಿದೆ. ಜನರ ಅಭಿಪ್ರಾಯ ಏನಿತ್ತು ಅನ್ನೋದನ್ನು ಗಣನೆಗೆ ತೊಗೊಳ್ದೆ, ಸುದ್ದಿ ಕೊಡಬೇಕಾದೋರು ಅಭಿಪ್ರಾಯ ಕೊಡ್ತಾ ಅವರಿವರ ಪರ ವಕೀಲಿಕೆ ಮಾಡ್ತಾ ಇರೋದು ಎಷ್ಟರ ಮಟ್ಟಿಗೆ ಒಪ್ಪೋ ಮಾತು? ಇವರ ಸಂಪಾದಕೀಯಾನೂ, ಇವರ ಸಂಸ್ಥೇನೂ ಬೆಂಗಳೂರು ಜನತೆಯ ಪ್ರತಿನಿಧಿಸೋವು ಅಂತಾಗ್ಬುಟ್ರೆ, ನಾಳೆ ಇಡೀ ಬೆಂಗಳೂರಿನ ಒಟ್ಟಭಿಪ್ರಾಯವೇ ಇದು ಅಂತಾ ಅಗೋಗಲ್ವಾ? ಇಂಥಾದ್ದೆಲ್ಲಾ ಆಗಬಾರ್ದು ಅಂದ್ರೆ ಇರೋದು ಒಂದೇ ದಾರಿ. ಇಂಥಾ ಸಂಸ್ಥೆಗಳಲ್ಲಿ ನಾವೂ ತೊಡುಗುಸ್ಕೋಬೇಕಾಗಿದೆ. ಅದಕ್ಕಿಂತಾ ಪರಿಣಾಮಕಾರಿಯಂದ್ರೆ ಇಂಥಾ ಸಂಸ್ಥೆಗಳಿಗಿಂತ ದೊಡ್ಡ ಸಂಸ್ಥೆಗಳನ್ನು ಕನ್ನಡಿಗರು ಕೂಡಿ ಕಟ್ಟಬೇಕಾಗಿದೆ. ಏನಂತೀರಾ ಗುರುಗಳೇ?

5 ಅನಿಸಿಕೆಗಳು:

subba ಅಂತಾರೆ...

ಕರ್ನಾಟಕವನ್ನು ಒಡೆದು ವಲಸಿಗರಿಗೆ ಬೆ೦ಗಳೂರನ್ನೋ ಒ೦ದು ರಾಜ್ಯವನ್ನು ಕಟ್ಟುವ ಹುನ್ನಾರದ ರೀತಿ ಕಾಣಿಸುತ್ತಿದೆ. ಕನ್ನಡಿಗರು ಈ ರೀತಿ ಜನಪ್ರತಿನಿಧಿಗಳ ರೀತಿ ಕೆಲಸಮಾಡಕ್ಕೆ ಆಗಬೇಕಾದ್ರೆ ಮೊದಲು ಹೊಟ್ಟೆ ಬಟ್ಟೆಗೆ ಯೋಚನೆ ಇಲ್ಲದಿರುವ ಕನ್ನಡಿಗರೆಷ್ಟು ಇದ್ದಾರೆ ಎ೦ದು ಲೆಕ್ಕಮಾಡಿ ಹುಡುಕಬೇಕು.

Anonymous ಅಂತಾರೆ...

ನಾಗರೀಕ ಅಲ್ಲ ನಾಗರಿಕ.

ಇನ್ನೂ ವಿಷಯವಾಗಿ... ಇವರೇನಾರ ಬಡೆದುಕೊಳ್ಳಲಿ, ಅದಕ್ಕೆಲ್ಲ ಪ್ರಚಾರ ಯಾಕೆ ಕೊಡಬೇಕು?

ಕರ‍್ನಾಟಕದಲ್ಲಿ ಇವರೆಲ್ಲ ಬಂದು ಸೇರಿಕೊಂಡಿದ್ದು, ಕನ್ನಡಿಗರನ್ನ ಉದ್ಧಾರ ಮಾಡಕ್ಕೆ ಅಂತ ಅವರು ಯಾವಾಗ ಹೇಳಿದ್ದಾರೆ?

ಕನ್ನಡಿಗರು ಆ ಕೆಲಸ ಮಾಡಲ್ಲ ಈ ಕೆಲಸ ಮಾಡಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಲ್ಲ. ನಾನು ತುಂಬಾ ಕಟ್ಟುನಿಟ್ಟು. ಅಂತ ಇದ್ರೆ, ಅದು ಅವರ ತಪ್ಪ?

ಬೆಂಗಳೂರಲ್ಲಿ ಮಯ್ಸೂರಲ್ಲಿ ಮಂಡ್ಯದಲ್ಲಿ ಇಡೀ ಕರ‍್ನಾಟಕದ ಹೆಚ್ಚಿನ ಕಡೆ ಮುನಿಸಿಪಾಲಿಟಿ ಕೆಲಸ ಮಾಡಕ್ಕೆ ತಮಿಳರು, ತೆಲುಗರು, ಈಗೀಗ ಒರಿಯ ಬಂಗಾಳಿಗಳೇ ಬೇಕು. ಯಾಕೆಂದರೆ ನಾವು ಕನ್ನಡಿಗರು ಆ ಕೆಲಸಗಳನ್ನು ಮಾಡಲ್ಲ. ಅಂತಹ ಕೆಲಸ ಮಾಡೋರನ್ನ ಚಾರಿತ್ರಿಕವಾಗಿ ಕೀಳಾಗಿ ಕಂಡುಕೊಂಡುಬಂದಿದ್ದೀವಿ.

ಅದೇ ತಮಿಳುನಾಡಲ್ಲಿ, ಬೀದಿ ಕಸಗುಡಿಸೋನು ತಮಿಳನೇ. ಆಂದ್ರದಲ್ಲೂ ಅದೇ! ಅಲ್ಲೆಲ್ಲ ಅದೆ ಹೇಗೆ ಅದೇ ಜಾಗದ ಜನ ಅಂತಹ ಕೆಲಸಗಳನ್ನ ಮಾಡ್ತಾರೆ?
ಕನ್ನಡಿಗ ಹತ್ತಿರ ನೆರವು ಕೇಳೋದು, ಪಡೆಯೋದು ಇಲ್ಲ ಕನ್ನಡಿಗನಾಗಿ ನೆರವಾಗೋದು ಬಲು ಕಷ್ಟ. ಯಾಕೆಂದ್ರೆ ಕನ್ನಡಿಗರೆಲ್ಲ ಸಭ್ಯರು, ಶಾಂತ ಸ್ವಾಭಾವದವರು ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳೋ "ನಮಗ್ಯಾಕ್ ಬೇಕು" ಎಂಬ ಮನಃಸ್ಥಿತಿಯವರು.

ಇನ್ನು ತಿರುವಳ್ಳುವರ‍್ ವಿಷಯ ಮತ್ತೆ ಕೆದುಕಿ, ಆ ಪ್ರತಿಮೆ ತೆರೆದಿದ್ದು ಕನ್ನಡಿಗ ಯಡಿಯೂರಪ್ಪರೇ! ಕರುಣಾನಿಧಿಯವರು ಡಿಎಂಕೆ ನಮ್ಮ ರಾಜ್ಯವನ್ನಾಳುತ್ತಿಲ್ಲವಲ್ಲ.! ಆದರೆ ಯಡಿಯೂಪ್ಪನವರ ಬಗ್ಗೆ ಟೀಕೆಗಳೇ ಇಲ್ಲ!

ಮೇಲೆಲ್ಲ ಕನ್ನಡಿಗರು ಅಂದಾಗ ನಾನೂ ಅದರಲ್ಲಿ ಸೇರಿಕೊಂಡಿದ್ದೀನಿ.

ಸಾಗರದಾಚೆಯ ಇಂಚರ ಅಂತಾರೆ...

ಮನುಷ್ಯನಿಗೆ ಭಾಷಾ ಪ್ರೆಮವಿಲ್ಲದೆ ಹೋದರೆ ಆ ನಾಗರಿಕತೆ ಸತ್ತಂತೆಯೇ ಸರಿ. ಬೆಂಗಳೂರನ್ನು ಈಗಾಗಲೇ ಕನ್ನಡ ರಹಿತ ಊರು ಮಾಡಿದ್ದೀವಿ. ಅದೇ ನೆರೆಯೇ ತಮಿಳುನಾಡು, ಕೇರಳ, ಗಳೆಲ್ಲ ತಮ್ಮ ಭಾಷಾ ಪ್ರೇಮ ವನ್ನು ಮೆರೆದಿದ್ದಾರೆ.
ಇಂಥಹ ಸಂದರ್ಭದಲ್ಲಿ ನಿಮ್ಮ ಲೇಖನ ಬಹು ಸೂಕ್ತವಾಗಿದೆ. ನಾವು ಹೇಗಿರಬೇಕೆಂದು ನಿರ್ಧರಿಸುವ ಹಕ್ಕು ಕೇವಲ ನಮ್ಮದು ಮಾತ್ರ. ಅದಕ್ಕೆ ಸಲಹೆ ಬರಲಿ ಆದರೆ ಮೂಗು ತೋರಿಸುವ ಅವಶ್ಯಕತೆ ಇಲ್ಲ

Anonymous ಅಂತಾರೆ...

oMthara asahya aagatte I jana nODi. idE jana uda.ge jarmanige hOgi ti* muckoMDu jarman kalItAre... adE iMDiyan jana `namma iMDiyA'da innoMdu bhAShe kalirO aMdre Enella lA pAyiMT hAktAre.
- Freespirit

Anonymous ಅಂತಾರೆ...

aShTE alla alli ZDF (Germany's DD) nalli oMdu "immigrants"gOskara oMdu kAryakrama nODidde. adralli sarkArada adhikAri obbaLu turki heMgasannu tanna hiri magana jote turkiyalli mAtADOd nODi, "nIvu I dEshada prajeyaagi innu nimma magana jote jarmanalli yAke maataaDalla" aMta kELidru. nAnu adanna kELi daMg!!

I dRushyAvaLi namma beMgaLooralli AgO sAdhya ideyA? UhegU asAdhya :(

-fsp

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails