ಅವರೆ ಬೆಳೆ ಮೇಳ ಒಂದು ಉದ್ಯಮವಾಗಬೇಕು ಗುರು !

ಸಂಕ್ರಾಂತಿ ಸಮಯದಲ್ಲಿ ಬಸವನಗುಡಿಯ ಸಜ್ಜನ ರಾವ್ ವೃತ್ತದ ಬಳಿ ಹತ್ತು ದಿನಗಳ ಕಾಲ ನಡೆದ ವಾರ್ಷಿಕ ಅವರೆ ಮೇಳಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ ಗುರು. ಅವರೆ ಕಾಳೊಂದರಿಂದಲೇ ಮಾಡಿದ 30ಕ್ಕೂ ಹೆಚ್ಚು ಬಗೆಯ ತಿಂಡಿ-ತಿನಿಸುಗಳ ರುಚಿಯನ್ನು ಜನರು ಮುಗಿಬಿದ್ದು ಸವಿದರು. ಗ್ರಾಹಕರಿಗೂ ಖುಷಿ ಕೊಡೊ, ರೈತರಿಗೂ ಲಾಭ ಮಾಡ್ಕೊಡೋ ಈ ಮೇಳವನ್ನು ಪ್ರತಿ ವರ್ಷ ಯಶಸ್ವಿಯಾಗಿ ಒಂದು ಉದ್ಯಮದಂತೆ ನಡೆಸುಕೊಂಡು ಬರುತ್ತಿರುವ ಕನ್ನಡತಿ, ಕೆ.ಎಸ್. ಗೀತಾ ಶಿವಕುಮಾರ್ ಅವರ ಪ್ರಯತ್ನ, ಕನ್ನಡಿಗರಿಗೆ ಉದ್ಯಮಶೀಲರಾಗಲು ಪ್ರೇರಣೆ ನೀಡುವಂತಿದೆ ಗುರು !

ಇಷ್ಟೇ ಸಾಕಾ ಗುರು ?
ಕನ್ನಡ ನಾಡಲ್ಲಿ ಬೆಳೆಯೋ, ಅದರಲ್ಲೂ ಮಾಗಡಿ ಭಾಗದಲ್ಲಿ ಬೆಳೆಯೋ ಅವರೆ ಕಾಳಿನ ರುಚಿಗೆ ಸಾಟಿಯಿಲ್ಲ. ಇಂತಹ ಅವರೆ ಕಾಳಿಂದ ಹುಳಿ, ಉಪ್ಪಿಟ್ಟು, ನಿಪ್ಪಟ್ಟು, ಒಬ್ಬಟ್ಟು ಅಂತಾ ಒಂದು ಮೂರೋ ನಾಲ್ಕೋ ಪದಾರ್ಧ ಮಾಡ್ಕೊಂಡು ಚಿಕ್ಕ ಅಂಗಡಿಲಿ ಮಾರಾಟ ಮಾಡ್ಕೊಂಡು, ಅಷ್ಟರಲ್ಲೇ ತೃಪ್ತಿ ಪಟ್ಕೊಂಡು ಇರದೇ, ಈ ಮೇಳದ ರೂಪದಲ್ಲಿ ಅವರೆಕಾಯಿಯ ಹೊಸ ಹೊಸ ರುಚಿಯನ್ನು ಜನಪ್ರಿಯಗೊಳಿಸುವತ್ತ, ಬೆಳೆ ಬೆಳೆದ ರೈತನಿಗೂ ಲಾಭ ಕಲ್ಪಿಸುವತ್ತ ಆಯೋಜಕರು ಮಾಡಿರೋ ಕೆಲಸ ಪ್ರಶಂಸೆಗೆ ಅರ್ಹವಾದದ್ದು. ಆದ್ರೆ ಇಷ್ಟೇ ಸಾಕಾ ಗುರು ?

ಈ ಮೇಳ ಇನ್ನೊಂದು ಹೆಜ್ಜೆ ಮೇಲ್ ಹೋಗಬೇಕು
ಈ ಮೇಳ ಬರೀ ಕೆಲವು ತಿಂಡಿ ತಿನಿಸುಗಳ ಪ್ರದರ್ಶನ, ಮಾರಾಟಕ್ಕೆ ಸೀಮಿತವಾಗದೇ, ಅವರೆಬೆಳೆಯ ಹಲವು ಉತ್ಪನ್ನಗಳ ಕುರಿತ ಮಾಹಿತಿ, ದೇಶ-ವಿದೇಶಗಳಲ್ಲಿ ಅವುಗಳಿಗಿರುವ ಬೇಡಿಕೆ, ಬೆಳೆಯಲು ಇರುವ ಅವಕಾಶಗಳು, ಮಾರುಕಟ್ಟೆ ಕಟ್ಟಿಕೊಳ್ಳಲು ಆಗಬೇಕಾದ ಕೆಲಸಗಳು, ಇರುವ ಸವಾಲುಗಳು ಹೀಗೆ ಇದನ್ನೊಂದು ಉದ್ಯಮದಂತೆ ಬೆಳೆಸುವ, ಆ ಮೂಲಕ ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ಚರ್ಚಿಸುವ, ರೈತರಿಗೆ ಮಾರ್ಗದರ್ಶನ ನೀಡುವ ವೇದಿಕೆಯಾಗಬೇಕು ಗುರು. ಈ ಮಾತು ವರ್ಷಕ್ಕೊಮ್ಮೆ ನಡೆಯೋ ಕಳ್ಳೆಕಾಯ್ ಪರಿಷೆಗೂ ಅನ್ವಯಿಸುತ್ತೆ. ನಮ್ಮ ನಾಡಿನ ಮಣ್ಣಲ್ಲಿ ಅದ್ಭುತವಾಗಿ ಬೆಳೆಯೋ ಈ ಬೆಳೆಗಳಿಂದ ಉಪ್ಪಿನಕಾಯಿ, ಚಟ್ನಿ, ಸಾಸ್, ಕಾರದ ಕಡ್ಡಿ, ಚಿಪ್ಸು, ರೆಡಿ ಟು ಈಟ್ ಸಾರಿನ ಪುಡಿ... ಹೀಗೆ, ಜಗತ್ತಿನ ಜನರು ಮೆಚ್ಚಿ ಇಷ್ಟಪಟ್ಟು ಬಳಸೋ ಉತ್ಪನ್ನಗಳನ್ನ ಮಾಡೋವಂತ ಉದ್ಯಮಗಳನ್ನ ಕನ್ನಡಿಗರು ಕಟ್ಟಬೇಕು. ಈ ಕೆಲಸ ನಾವು ಮಾಡದೇ ಹೋದ್ರೆ, ಹೊರಗಿಂದ ಬಂದೋನು ಯಾರೋ ಮಾಡಿ ಲಾಭ ಮಾಡ್ಕೊತಾನೆ, ನಾವು ಮಾತ್ರ ವರ್ಷಕ್ಕೊಮ್ಮೆ ಬಂದು ಪರಿಷೆ, ಮೇಳ ಅಂತ ಮಾಡ್ಕೊಂಡು ಅಲ್ಲಿ ಮಾರಾಟದಿಂದ ಬರೋ ಚಿಲ್ಲರೆ ಕಾಸು ಎಣುಸ್ಕೊಂಡೇ ಇರಬೇಕಾಗುತ್ತೆ. ಏನಂತೀಯಾ ಗುರು?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails