ನೀವು ಕನ್ನಡ ಶಿವಯ್ಯ ಆಗ್ತೀರಾ?

 


ಅಂತೂ ಸಿದ್ದರಾಮಯ್ಯನವರ ಪರ್ವ ಮುಗಿದಂಗಾಯ್ತು ಗುರೂ! ಕನ್ನಡನಾಡಿಗೆ ಹೊಸ ಸಾರಥಿಯಾಗಿ ಶ್ರೀ ಡಿ. ಕೆ ಶಿವಕುಮಾರ್ ಅವರು ಇನ್ನೇನು ನೇಮಕವಾಗಲಿದ್ದಾರೆ.. ಅಭಿನಂದನೆಗಳು ಅವರಿಗೆ!


ಕನ್ನಡ ರಾಮಯ್ಯ!

ಶ್ರೀ ಸಿದ್ದರಾಮಯ್ಯನವರಿಗೆ ಅವರ ಕೆಲವುಕನ್ನಡ ಪರವಾದ ಕೆಲಸಗಳಿಂದ ಕನ್ನಡ ರಾಮಯ್ಯ ಅಂತಾರೆ. ಬೆಂಗಳೂರಿನ ನಮ್ಮ ಮೆಟ್ರೋ ಹೋರಾಟ ಗೆಲ್ಲೋದಕ್ಕೆ ಕಾರಣವೇ ಅವರು. ಇತ್ತೀಚಿಗೆ ಜಾರಿಯಾದ ನಾಮಫಲಕ ಕಾಯ್ದೆಯು ಜಾರಿಯಾದದ್ದೂ ಇವರದ್ದೇ ಕಾಲದಲ್ಲಿ. ಕನ್ನಡ ನಾಡಿನ ಕಲಿಕೆಯಲ್ಲಿರುವ ತ್ರಿಭಾಷಾನೀತಿಯನ್ನು ಕೈಬಿಟ್ಟು ದ್ವಿಭಾಷಾನೀತಿಯ ಜಾರಿಗೆ ಒಲವು ತೋರಿಸಿದವರು ಅವರು. ಕನ್ನಡದ ಕೆಲಸಗಳು ಸಾಕಷ್ಟಿದ್ದರೂ, ಕೆಲವನ್ನಾದರೂ ಧೈರ್ಯವಾಗಿ ಮಾಡಿದ್ದು ಶ್ರೀ ಸಿದ್ದರಾಮಯ್ಯನವರು. ಹೀಗಾಗಿ ಅವರನ್ನು ತುಸುಮಟ್ಟಿಗಾದರೂ ಕನ್ನಡ ರಾಮಯ್ಯ ಎನ್ನಬಹುದು...


ನೀವಾಗಿ ಕನ್ನಡ ಶಿವಯ್ಯ!

ಕನ್ನಡ ಪರ ಯಾವುದು, ಕನ್ನಡ ವಿರೋಧ ಯಾವುದು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು, ಕನ್ನಡಿಗರ ಪರವಾಗಿ ಕೆಲಸ ಮಾಡಲು ಡಿ ಕೆ ಶಿವಕುಮಾರ್ ಅವರು ಮನಸ್ಸು ಮಾಡಬೇಕಿದೆ. ಕನ್ನಡಪರ ದನಿಗಳಿಗೆ ಕಿವಿಯಾಗಬೇಕಿದೆ. ಮೊದಲಿಗೆ, ಏನಿಲ್ಲದಿದ್ದರೂ ತ್ರಿಭಾಷಾನೀತಿಯಂಥಾ ಕನ್ನಡ ವಿರೋಧಿ ನೀತಿಗಳನ್ನು ಕೈಬಿಡಲು ಮನಸ್ಸು ಮಾಡಬೇಕಿದೆ. 

ಈಗ ನಾಡಿನ ಮುಖ್ಯಮಂತ್ರಿಗಳಾಗಲಿರೋ ಶಿವಕುಮಾರ್ ಅವರನ್ನು ಎಲ್ಲಾ ಕನ್ನಡಪರರೂ ಕೇಳೋದು ಒಂದೇ ಪ್ರಶ್ನೆ! ನೀವಾಗ್ತೀರಾ, ಕನ್ನಡ ಶಿವಯ್ಯ? ಅವರೆಲ್ಲರ ಆಶಯವೂ ಒಂದೇ... ನೀವಾಗಿ ಕನ್ನಡ ಶಿವಯ್ಯ!

ನಿನ್ನದೂ ಇದೇ ಮಾತಲ್ವಾ ಗುರೂ!!   

ಅಯ್ಯೋ! ದಳಕ್ಕೆಂಥಾ ಗತಿ ಬಂತು!!

 


ಒಂದು ರಾಷ್ಟ್ರ ಒಂದು ಚುನಾವಣೆಯೆನ್ನುವ ಪ್ರಾದೇಶಿಕ ಪಕ್ಷಗಳ ಸಾವಿನ ಕುಣಿಕೆಯನ್ನು ಮುತ್ತಿಕ್ಕಿ ಬೆಂಬಲಿಸುತ್ತಿರುವ ಜನತಾ ದಳದವರ ಅಸಹಾಯಕತೆಯನ್ನು ಕಂಡರೆ ಅಯ್ಯೋ ಅನ್ನಿಸುತ್ತಿಲ್ವಾ ಗುರೂ? ಪಾಪ, ಅದರ ಮುಖ್ಯಸ್ಥರು ಕೆಲವು ಬೇಡಿಕೆಗಳನ್ನೂ ಇಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಧಕ್ಕೆಯಾಗಬಾರದು, ಸಮ್ಮಿಶ್ರ ಸರ್ಕಾರಗಳಿಗೆ ರಕ್ಷಣೆಯ ಭರವಸೆ ನೀಡಬೇಕು ಅನ್ನೋದು ಅವರ ಬೇಡಿಕೆ.

ಎರಡು ಪಕ್ಷದ ರಾಜಕಾರಣದೆಡೆಗೆ!


ಹಾಗೆ ನೋಡಿದರೆ. ’ಹಣ ಉಳಿಯುತ್ತೆ - ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ’ ಮುಂತಾದ ಕಾರಣಗಳನ್ನು ’ಒಂದು ರಾಷ್ಟ್ರ ಒಂದು ಚುನಾವಣೆ’ಗೆ ಸಮರ್ಥನೆಯಾಗಿ ನೀಡಲಾಗುತ್ತದೆ. ಆದರೆ ಅವು ಕೇವಲ ಹೇಗೆ "ನೆಪ"ಗಳಾಗಿವೆ ಎಂಬುದನ್ನು ಇಲ್ಲಿ ಓದಿ. 

ಮಹಾನ್ ರಾಜಕೀಯ ಮುತ್ಸದ್ದಿಗಳಾದ ಶ್ರೀ ಕುಮಾರಸ್ವಾಮಿಯವರಿಗಾಗಲೀ, ಅವರ ಪಿತಾಶ್ರೀಯವರೂ, ರಾಜಕೀಯ ಭೀಷ್ಮರೂ (ವಯಸ್ಸಿನಲ್ಲಿ) ಆಗಿರುವ ಶ್ರೀ ದೇವೇಗೌಡರಿಗಾಗಲೀ ಇವೆಲ್ಲಾ ತಿಳಿಯುವುದಿಲ್ಲ ಎಂಬುದನ್ನು ಯಾರದರೂ ನಂಬಲು ಸಾಧ್ಯವೇ? ಪಕ್ಷವನ್ನು ಗಟ್ಟಿಗೊಳಿಸಬೇಕೆಂದರೆ ಅದು ಉಳಿಯಬೇಕು ಸರಿ. ಆದರೆ ಉಳಿಸಿಕೊಳ್ಳುವ ಭರದಲ್ಲಿ ಪಕ್ಷಕ್ಕೆ ಕುಣಿ ತೆಗೆಯಲು ಇವರು ಮುಂದಾಗಿಬಿಟ್ಟರೇ ಎಂಬುದನ್ನು ಬೆಂಬಲಿಗರು ಯೋಚಿಸಬೇಕಿದೆ. ನೀನೇನಂತೀಯಾ ಗುರೂ?

ಮಕ್ಕಳಿರಲವ್ವ ಮನೆ ತುಂಬಾ!

ಮೊನ್ನೆ ತಾನೇ ಆಂಧ್ರದ ಮುಖ್ಯಮಂತ್ರಿಗಳಾದ ಶ್ರೀ ಚಂದ್ರಬಾಬು ನಾಯ್ಡು ಅವರೊಂದು ಯೋಜನೆ ಘೋಷಣೆ ಮಾಡಿದ್ದಾರೆ. ಮೂರನೇ ಮಗು ಹೆತ್ತರೆ 30,000 ರೂಪಾಯಿ, ನಾಲ್ಕನೇ ಮಗು ಹೆತ್ತರೆ 40,000 ರೂಪಾಯಿ ಪ್ರೋತ್ಸಾಹಧನ ಕೊಡ್ತೀವಿ ಅಂತನ್ನೋದೆ ಅದು!!

ಜನಸಂಖ್ಯೆ ಸ್ಫೋಟದ ಸಮಸ್ಯೆ!


ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ? ತಾಳಿ, ತಾಳಿ.. "ಇದು ದೇಶದ್ರೋಹ" ಅನ್ನೋ ತೀರ್ಮಾನ ಮಾಡೊ ಮೊದಲು "ಜನಸಂಖ್ಯಾ ಸ್ಫೋಟ"ದ ಸಮಸ್ಯೆ ಅಂದ್ರೇನು, ಎಲ್ಲಿದೆ, ಎಷ್ಟಿದೆ, ನಮಗಿದ್ಯಾ ಅನ್ನೋದನ್ನು ತಿಳ್ಕೋಬೇಕು ಗುರೂ!! ಅದನ್ನು ಈ ಚಿತ್ರದಲ್ಲಿ ನೋಡಿ..

ಒಂದು ನಾಡಿನ ಹೆರುವೆಣಿಕೆ 2.1ಕ್ಕಿಂತ ಹೆಚ್ಚಿದ್ದರೆ ಜನಸಂಖ್ಯಾ ಸ್ಫೋಟ ಆಗುತ್ತೆ. ಭಾರತದಲ್ಲಿ ನಿಜವಾಗ್ಲೂ ಸಮಸ್ಯೆ ಇರೋದು ನಿಜಾ. ಆದರೆ ಸಮಸ್ಯೆ ಇರೋದು ಆಂಧ್ರ, ಕರ್ನಾಟಕ, ತಮಿಳುನಾಡಲ್ಲಲ್ಲ! 


ಎತ್ತಿಗೆ ಜ್ವರ! ಎಮ್ಮೆಗೆ ಬರೆ!

ನಮ್ಮ ಸ್ಥಿತಿ ಹಿಂಗಿದೆ ಗುರೂ! ಬಿಹಾರ, ಉತ್ತರಪ್ರದೇಶ ಸೇರಿದಂತೆ ಉತ್ತರದಲ್ಲಿ ಜನಸಂಖ್ಯಾ ಸ್ಫೋಟ ಇದೆ. ಅಲ್ಲಿ ಪ್ರತಿ ಕುಟುಂಬದ ಸರಾಸರಿ ಮಕ್ಕಳ ಸಂಖ್ಯೆ ಅಂದ್ರೆ ಹೆರುವೆಣಿಕೆ 2.1ಕ್ಕಿಂತ ಹೆಚ್ಚಿದೆ. ಅದು 3.1ರವರೆಗೂ ಇದೆ. ಆದರೆ ಎಮ್ಮೆಗಳ ಹಾಗೆ ತೆಪ್ಪಗಿರುವ ನಮ್ಮ ಹೆರುವಣಿಕೆ 1.6~1.7ರಲ್ಲಿದ್ದು.. ಕುಸಿಯುತ್ತಾ ಇದೆ. ನಾವುಗಳು ಮನೆಗೊಂದು ಮಗು, ದೇಶಕ್ಕೆ ನಗು ಅಂತಾನೋ ಬೀದಿಗೊಂದು ದೀಪ, ಮನೆಗೊಂದು ಪಾಪ ಅಂತಾನೋ ಕಡಿಮೆ ಮಕ್ಕಳನ್ನು ಹೆತ್ತುಕೊಂಡೇ ಇದ್ದರೆ ಕೆಲವು ದಶಕಗಳಲ್ಲಿ ಕನ್ನಡಿಗರ ಜನಸಂಖ್ಯೆ ಕುಸಿದು ಹೋಗುತ್ತೆ! ಈಗ ನಮಗೆ ಬೇಕಿರುವ ಘೋಷವಾಕ್ಯ "ಮಕ್ಕಳಿರಲವ್ವ ಮನೆ ತುಂಬಾ" ಅನ್ನೋದೇ ಆಗಿದೆ.


ನಮ್ಮಲ್ಲೂ ಎಚ್ಚರಿಕೆ ಮೂಡಲಿ!

ಹಾಗಾಗಿ, ನಾಯ್ಡು ಅವರು ಕೈಗೊಂಡಿರುವ ಕ್ರಮ ಮೆಚ್ಚುಗೆಗೆ ಅರ್ಹವಾಗಿದೆಯಷ್ಟೇ ಅಲ್ಲದೇ ನಾವು ಮುಂದೇನೇನು ಮಾಡಬೇಕು ಎಂಬುದನ್ನು ನೆನಪು ಮಾಡುತ್ತಿದೆ. ಕರ್ನಾಟಕ ಸರ್ಕಾರ ಮಾಡಬಹುದಾದ ಕ್ರಮಗಳನ್ನು ಪಟ್ಟಿ ಮಾಡೋಣ ಬಾ ಗುರೂ!

  •  ಕುಸಿಯುತ್ತಿರುವ ಜನಸಂಖ್ಯೆಯ ಬಗ್ಗೆ ಅರಿವು ಮೂಡಿಸಿಕೊಂಡು, ಜನರಲ್ಲಿ ಅರಿವು  ಮೂಡಿಸಲಿ.
  •  ಆಂಧ್ರದಂತೆ ಇಲ್ಲಿಯೂ ಮೂರನೇ ಮಗುವನ್ನು ಹೆರುವ ವಲಸಿಗರಲ್ಲದ ನಮ್ಮವರಿಗೆ (ದಂಪತಿಗಳಲ್ಲಿ ಯಾರಾದರೊಬ್ಬರು ಕನ್ನಡನಾಡಲ್ಲಿ ಹುಟ್ಟಿದವರಾಗಿದ್ದರೆ) ಪ್ರೋತ್ಸಾಹ, ನೆರವು ನೀಡಲಿ.
  •  ತಜ್ಞರನ್ನು ಬಳಸಿಕೊಂಡು, 1.7ರ ಹೆರುವಣಿಕೆಯನ್ನು 2.1ಕ್ಕೆ ಏರಿಸುವ ಬಗ್ಗೆ ಕ್ರಮಗಳನ್ನು ಯೋಜಿಸಲಿ. 
  •  ಕನ್ನಡನಾಡಿನಲ್ಲಿ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆ ಎಂದು ತಪ್ಪಾಗಿ ನಂಬಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿ.
ಇನ್ನೂ ಏನೇನು ಮಾಡಬಹುದೋ ಎಲ್ಲಾನೂ ಮಾಡಲಿ... 


ಕೊನೆಹನಿ: ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಕುಸೀತಾ ಇದೆ ಅನ್ನೋದು ಸುಳ್ಳು.. ಮುಕ್ಕೋಟಿ ಕನ್ನಡಿಗರು ಆರು ಕೋಟಿ ನಲವತ್ತು ಲಕ್ಷ ಆಗಿಲ್ವಾ ಅನ್ನಬೇಡ ಗುರೂ! ಅದು ಆ ಪ್ರಮಾಣದಲ್ಲಿ ನಾಡಿಗೆ ಹೊರಗಿನಿಂದ ವಲಸೆ ಆಗ್ತಿದೆ ಎನ್ನೋದರ ಕುರುಹು. ಜನಲಕ್ಷಣ ಬದಲಾಯಿಸಲು ಇರುವ ಎರಡು ಸಾಧನಗಳೆಂದರೆ ಹೆರುವಣಿಕೆ ಕುಸಿತ ಮತ್ತು ಅನಿಯಂತ್ರಿತ ವಲಸೆ!

Related Posts with Thumbnails