Showing posts with label ಚಿಂತನೆ. Show all posts
Showing posts with label ಚಿಂತನೆ. Show all posts

ಭಾರತ ಒಪ್ಪುಕೂಟ ಮತ್ತು ಚಿಕ್ಕರಾಜ್ಯಗಳು!


ಇತ್ತೀಚಿಗೆ ಔಟ್‍ಲುಕ್ ಪತ್ರಿಕೆಯಲ್ಲಿ ಒಂದು ಬರಹ ಪ್ರಕಟವಾಗಿದೆ. ಇಂದಿನ ಭಾರತದೇಶವನ್ನು "ಯುನೈಟಡ್ ಸ್ಟೇಟ್ಸ್ ಆಫ್ ಇಂಡಿಯಾ" ಎಂದು ತೋರಿಸಲಾಗಿರುವ ಚಿತ್ರದ ಸಹಿತ ಆ ಬರಹವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ೨೦೪೦ರ ವೇಳೆಗೆ ಸುಮಾರು ೧೬೦ ಕೋಟಿ ಜನಸಂಖ್ಯೆಯಾಗುವ ಭಾರತವು ಐವತ್ತು ರಾಜ್ಯಗಳ ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರಬಹುದು ಎನ್ನುವ ಮಾತುಗಳನ್ನು ಆಡಲಾಗಿದೆ.

ಭಾರತ ಏಕೆ ಚಿಕ್ಕರಾಜ್ಯಗಳನ್ನು ಹೊಂದಿರಬೇಕು?

ಅತ್ಯುತ್ತಮ ಆಡಳಿತಕ್ಕಾಗಿ ಅಧಿಕಾರವು ವಿಕೇಂದ್ರೀಕರಣವಾಗಲು ಭಾರತವು ಚಿಕ್ಕ ಚಿಕ್ಕ ರಾಜ್ಯಗಳನ್ನು ಹೊಂದಿರಬೇಕೆನ್ನುತ್ತದೆ ಲೇಖನ. ೧೯೫೬ರ ರಾಜ್ಯ ಪುನರ್ವಿಂಗಡನಾ ಆಯೋಗದ ಪರಿಣಾಮಗಳನ್ನು ವಿಶ್ಲೇಷಣೆ ಮಾಡುತ್ತಾ `ಭಾಷಾವಾರು ಪ್ರಾಂತ್ಯಗಳ ರಚನೆ ಉದ್ದೇಶಿತ ಪರಿಣಾಮಗಳನ್ನು ನೀಡಿಲ್ಲ ಬದಲಾಗಿ ಚಿಕ್ಕ ರಾಜ್ಯಗಳು ಹೆಚ್ಚು ಆಕರ್ಶಣೀಯವಾಗಿದೆ' ಎನ್ನುತ್ತಾ ಹರ್ಯಾಣದ ಉದಾಹರಣೆಯನ್ನು ಕೊಟ್ಟಿದ್ದಾರೆ. ಒಂದು ಕಡೆ ಚಿಕ್ಕ ಚಿಕ್ಕ ರಾಜ್ಯಗಳಾದ ಕೂಡಲೇ ಏಳಿಗೆ ಹೊಂದಿಬಿಡುತ್ತವೆ ಎನ್ನುವದಕ್ಕೂ ಅಪವಾದವಾಗಿ ಹೊಸ ಚಿಕ್ಕ ರಾಜ್ಯಗಳು ಇನ್ನೂ ಆರ್ಥಿಕವಾಗಿ ತಡಬಡಾಯಿಸುತ್ತಿರುವುದನ್ನೂ ನಾವು ಕಾಣಬಹುದಾಗಿದೆ. ಈ ನಡುವೆ ತೆಲಂಗಣಾ ರಾಜ್ಯ ಬೇಕೆಂಬ ಕೂಗು, ಉತ್ತರ ಪ್ರದೇಶವನ್ನು ಹೋಳಾಗಿಸಬೇಕೆನ್ನುವ ಮಾಯಾವತಿ ಸರ್ಕಾರದ ಪ್ರಯತ್ನಗಳನ್ನು ಈ ಬರಹ ಹೊಸ ರಾಜ್ಯಗಳ ಆಕಾಂಕ್ಷೆ ಎನ್ನುವುದಾಗಿ ಬರೆದಿದ್ದಾರೆ. ಈಗ ತೆಲಂಗಣದ್ದೋ, ಹರಿತಖಂಡದ್ದೋ ಒಂದೋ ಎರಡೋ ವಿಷಯಗಳನ್ನು ಮಾತ್ರಾ ಕೈಗೆತ್ತಿಕೊಳ್ಳದೆ ದೂರದೃಷ್ಟಿಯಿಂದ ಕೆಲಸ ಮಾಡಬಲ್ಲ ಎರಡನೇ "ರಾಜ್ಯ ಪುನರ್ವಿಂಗಡನಾ ಆಯೋಗ"ವನ್ನೇ ರಚಿಸಿ ಮುಂದಿನ ಭಾರತದ ಆರ್ಥಿಕ ಏಳಿಗೆಯ ಗುರಿಯೊಂದಿಗೆ ಸಾಂಸ್ಕೃತಿಕ, ಭಾಷಿಕ, ಆಡಳಿತಾತ್ಮಕ ಅಂಶಗಳನ್ನು ಪರಿಗಣಿಸಿ ಮತ್ತೆ ರಾಜ್ಯಗಳು ರೂಪಗೊಳ್ಳಬೇಕು ಎಂಬ ಅಭಿಪ್ರಾಯ ಆ ಲೇಖನದ್ದಾಗಿದೆ.

ಭಾಷಾವಾರು ಪ್ರಾಂತ್ಯಗಳ ಮೂಲೋದ್ದೇಶ...

ಭಾಷೆಯೆನ್ನುವುದು ಒಂದು ಜನಾಂಗದ ಸಂವಹನ ಮಾಧ್ಯಮ ಮಾತ್ರವಲ್ಲ, ಅದು ಸಹಕಾರದ ಮಾಧ್ಯಮ. ನಾಗರೀಕ ಮನುಜನ ಅತಿ ಹಳೆಯ ಗುರುತು ಆತನ ನುಡಿ. ಇದರೊಂದಿಗೇ ಆತನ ನಂಬಿಕೆ, ಆಚರಣೆ, ಸಂಸ್ಕೃತಿ, ಕಲಿಕೆ, ದುಡಿಮೆ, ಏಳಿಗೆಗಳೆಲ್ಲಾ ತಳುಕುಹಾಕಿಕೊಳ್ಳಲಾಗಿದೆ ಎನ್ನುವುದೊಂದು ನಂಬಿಕೆ. ಅಂತೆಯೇ ಪ್ರಜಾಪ್ರಭುತ್ವದ ಮೂಲ ಆಶಯವಾಗಿರುವ ‘ನಮ್ಮನ್ನು ನಾವೇ ಆಳಿಕೊಳ್ಳುವುದು’ ಎನ್ನುವುದು ಪರಿಣಾಮಕಾರಿಯಾಗುವಲ್ಲೂ ಕೂಡಾ ನುಡಿಯ ಪಾತ್ರ ಹಿರಿದು. ಹಾಗಾಗಿ ಭಾರತದಲ್ಲಿ ಶಾಸನ ಮಾಡಬಲ್ಲ ಬುಡಮಟ್ಟದ ಘಟಕವೆಂದರೆ ರಾಜ್ಯವೇ ಆಗಿದ್ದು... ಇದು ಒಂದೇ ಭಾಷಿಕ ಜನರಿಂದ ಕೂಡಿರುವುದು ಪ್ರಜಾಪ್ರಭುತ್ವದ ಆಶಯಗಳ ಈಡೇರಿಕೆಗಿರುವ ಹೆದ್ದಾರಿಯಾಗಿದೆ. 

ಇಷ್ಟಕ್ಕೂ ಒಂದೇ ಕರ್ನಾಟಕವೇಕೆ?

ಹೌದು! ಕರ್ನಾಟಕವೇಕೆ ಒಂದೇ ಆಗಿರಬೇಕು? ಮೂರಾದರೆ ಏನಂತೆ? ಎನ್ನುವ ಮಾತುಗಳು ಈ ಹಿಂದೆಯೇ ಎದ್ದಿತ್ತು. ಸಂಯುಕ್ತ ಕರ್ನಾಟಕದಲ್ಲಿ ಒಂದು ಬರಹವನ್ನು ಬರೆದಿದ್ದಾಗ ಪ್ರತಿಕ್ರಿಯಿಸಿ ನಾವು ಬರೆದಿದ್ದದು ನಾಡಜನರಿಗೆ/ ನಾಡಿಗೆ ಚಿಕ್ಕರಾಜ್ಯಗಳಾಗೋದ್ರಲ್ಲಿಯೇ ಒಳಿತಿದ್ದರೆ ಅದೇ ಆಗಲಿ ಎಂದು! ಈಗ ಅದನ್ನೇ ಮತ್ತಷ್ಟು ವಿಸ್ತಾರವಾಗಿ ಚರ್ಚಿಸೋಣ! ಮೂಲತಃ ಕನ್ನಡನಾಡು ಒಂದಾಗಬೇಕೆಂಬ ಕನಸಿನ ರೂವಾರಿ "ಕರ್ನಾಟಕ ಕುಲಪುರೋಹಿತ"ರೆನ್ನಿಸಿದ ಆಲೂರು ವೆಂಕಟರಾಯರು. ಇವರು ಕೂಡಾ ಹಾಗೆ ಹೇಳಲು ಇದ್ದ ಕಾರಣಗಳು ಕನ್ನಡನಾಡು ಹಲವು ಆಡಳಿತಗಳಲ್ಲಿ ಹಂಚಿಹೋಗಿದ್ದು, ಕನ್ನಡೇತರ ಆಡಳಿತಗಾರರ/ ಸಾಮ್ರಾಜ್ಯಗಳ ಭಾಗವಾಗಿದ್ದು ಕನ್ನಡಿಗರ ಬದುಕು ಹೀನಾಯವಾಗುತ್ತಿದೆ ಎನ್ನಿಸಿದ್ದು. ನಾವೆಲ್ಲಾ ಒಂದುಗೂಡಿ ಒಮ್ಮನದಿಂದ ಒಗ್ಗಟ್ಟಿನಿಂದ ನಮ್ಮ ನಾಡು ಕಟ್ಟೋಣ ಎನ್ನುವ ಹಿರಿಯಾಸೆಯಿಂದಲೇ ಅಂತಹ ಏಕೀಕರಣದ ಕನಸು ಕಂಡಿದ್ದು. ಅಂದು ಒಂದುಗೂಡಿದ ಕರ್ನಾಟಕದಲ್ಲಿ ಇಂದಿಗೂ ಅಂದಿದ್ದ ಅಸಮಾನ ಏಳಿಗೆಯ ಸನ್ನಿವೇಶಗಳಿರುವುದರಿಂದಲೇ ಇಂದು ಇಲ್ಲಿನ ಆಡಳಿತ ಸಮರ್ಪಕವಾಗಿಲ್ಲ ಎನ್ನುವ ಭಾವನೆ ಕೆಲಭಾಗದ ಜನರಲ್ಲಿ ಮೊಳೆತದ್ದು. ಸಮರ್ಥವಾದ, ಎಲ್ಲ ಭಾಗದ ಏಳಿಗೆಗೆ ದುಡಿಯಬಲ್ಲ ನಾಯಕರ ಕೊರತೆಗಿಂತಲೂ ತನ್ನ ಕ್ಷೇತ್ರಕ್ಕಾಗಿ ಮಿಡಿಯದ ನಾಯಕರ ಕಾರಣದಿಂದಲೇ ಇಂತಹ ಹಿಂದುಳಿದಿರುವಿಕೆಯುಂಟಾಗಿದೆ ಎನ್ನುವುದು ಹೆಚ್ಚು ನಂಬಲರ್ಹವಾಗಿದೆ. ಆದರೂ ಕೆಲವರು ಇಂದಿನ ಕರ್ನಾಟಕವು ಮೂರಾಗಬೇಕು ಎಂದರೆ ಅದರಿಂದ "ಖಂಡಿತವಾಗಿ" ಆಗುವ ಕೆಟ್ಟದ್ದನ್ನು ಅಲಕ್ಷಿಸಿ "ಆಗಬಹುದಾದ" ಒಳಿತುಗಳನ್ನು ಮಾತ್ರಾ ಗಮನದಲ್ಲಿಟ್ಟುಕೊಂಡಿದ್ದಾರೆ ಎನ್ನಬೇಕಾಗುತ್ತದೆ. ಕನ್ನಡಿಗರೆಲ್ಲಾ ಇರುವ ಪ್ರದೇಶಗಳು ಒಂದೇ ರಾಜ್ಯವಾಗಿರದಿದ್ದರೆ ಕನ್ನಡನಾಡಿನ ಕಲಿಕಾ ವ್ಯವಸ್ಥೆಯು ಏಕರೂಪವಾಗಿರುವುದಿಲ್ಲ. ನಾಡಿನ ಸಂಪನ್ಮೂಲಗಳ ಮೇಲೆ ಹಕ್ಕು/ ಹಂಚಿಕೆಗಳು ಅಸಮಾನವಾಗಿರುತ್ತದೆ. ಎಲ್ಲಾ ಭಾಗಗಳೂ ಈ ವಿಷಯಗಳಲ್ಲಿ ಸಹಯೋಗದಿಂದ ವರ್ತಿಸಿದಲ್ಲಿ ಮಾತ್ರಾ ಕರ್ನಾಟಕ ಮೂರಾದರೂ ನೂರಾದರೂ ತೊಡಕಾಗದು! ಇನ್ನೂ ಸರಿಯಾಗಿ ಹೇಳಬೇಕೆಂದರೆ ಸಮಾನ ಗೌರವದ ಸರಿಯಾದ ಒಕ್ಕೂಟ ವ್ಯವಸ್ಥೆಯು ಸರಿಯಾದ ಅಂತರರಾಜ್ಯ ರೀತಿನೀತಿಗಳನ್ನು ರೂಪಿಸಿದಲ್ಲಿ ಈ ಸಮಸ್ಯೆಯು ತಕ್ಕಮಟ್ಟಿಗೆ ಪರಿಹಾರವಾಗಬಹುದಾಗಿದೆ.

ಚಿಕ್ಕರಾಜ್ಯಗಳು "ಯುಎಸ್‍ಐ"ನಲ್ಲಿ ಮಾತ್ರಾ ಸುರಕ್ಷಿತ!


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಉತ್ತರ ಮತ್ತು ದಕ್ಷಿಣ ಭಾರತಗಳೇ ಎದುರಾಳಿಗಳಾಗಬಹುದೆಂಬ ಆತಂಕ ವ್ಯಕ್ತಪಡಿಸಿ ಇದನ್ನು ಸರಿದೂಗಿಸಲು ಎಲ್ಲಾ ರಾಜ್ಯಗಳ ಜನಸಂಖ್ಯೆಯೂ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿರಲಿ, ಇದಕ್ಕಾಗಿ ಉತ್ತರದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಚಿಕ್ಕರಾಜ್ಯಗಳನ್ನಾಗಿಸುವುದು ಒಳ್ಳೆಯದು ಎಂದಿದ್ದರು. ಹಾಗೆ ಮಾಡುವುದರಿಂದ ಕೇಂದ್ರಸರ್ಕಾರದ ಮೇಲೆ ದೊಡ್ಡ ರಾಜ್ಯದ ಹಿಡಿತ ತಪ್ಪಿಸಲು ಸಾಧ್ಯವೆಂದಿದ್ದರು. ದಕ್ಷಿಣ ಭಾರತದ ಹೈದರಾಬಾದ್ ಭಾರತದ ಎರಡನೇ ರಾಜಧಾನಿಯಾಗಲೀ ಎನ್ನುವವರೆಗೂ ಅವರು ಹೇಳಿದ್ದರು. ಎಂದರೆ ಕೇಂದ್ರದ ಮೇಲೆ ಯಾವ ರಾಜ್ಯವು ದೊಡ್ಡದೋ ಅದರ ಪ್ರಭಾವ, ಹಿಡಿತ ಇರುತ್ತದೆ ಮತ್ತು ಅದು ಸರಿಯಲ್ಲಾ ಎನ್ನುವ ಕಾಳಜಿಯಿಂದಲೇ ಹೇಳಿದ್ದರು.

ಇಂದು ಭಾರತದ ರಾಜಕಾರಣದಲ್ಲಿ ಯಾವ ಪಕ್ಷಗಳು ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾವೋ ಆ ಪಕ್ಷಗಳು ದೇಶದ ಒಪ್ಪುಕೂಟ ಸ್ವರೂಪದ ಬಗ್ಗೆ ನಂಬಿಕೆಯನ್ನು ಹೊಂದಿರುವಂತೆ ತೋರುತ್ತಿಲ್ಲ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆನ್ನುವ ಮನಸ್ಥಿತಿಯಿಲ್ಲದೆ, ಚಿಕ್ಕರಾಜ್ಯ ಮಾಡಬೇಕೆನ್ನುವುದು "ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ"ದ ನಿರ್ಮಾಣದ ಪ್ರಯತ್ನವಾಗುತ್ತದೆ. ಇಂದು ಇಪ್ಪತ್ತೆಂಟು ಸಂಸದರ ಕರ್ನಾಟಕವು ಹೇಗೆ ಹೆಚ್ಚಿನ ಸಂಸದರ ಮಹಾರಾಷ್ತ್ರ, ತಮಿಳುನಾಡು ಹಾಗೂ ಆಂಧ್ರಗಳ ದೆಹಲಿ ಲಾಬಿಯ ಎದುರು ಕೈಚೆಲ್ಲುತ್ತದೆ ಎನ್ನುವುದು ಒಂದು ಕಡೆ, ಹಾಗೇ ಕಡಿಮೆ ಸಂಸದರನ್ನು ಹೊಂದಿರುವ ಹೆಚ್ಚು ರಾಜ್ಯಗಳಿರುವ ಈಶಾನ್ಯ ಭಾರತದ ಸಮಸ್ಯೆಗಳಿಗೆ ಭಾರತದ ಸಂಸತ್ತಿನಲ್ಲಿ ಸಿಗುವ ಆದ್ಯತೆಗಳ ಬಗ್ಗೆ ಕಣ್ಣು ಹಾಯಿಸಿದರೆ ಚಿಕ್ಕ ರಾಜ್ಯಗಳು ಭಾರತದಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಕಷ್ಟವೇನೋ ಎನ್ನುವ ಅನುಮಾನ ಮೂಡುತ್ತದೆ.

ಭಾರತವು ಸರಿಯಾದ ಸಂಯುಕ್ತ ಸಂಸ್ಥಾನವಾದಲ್ಲಿ ಇಂತಹ ತೊಡಕುಗಳನ್ನು ನಿವಾರಿಸಬಹುದಾಗಿದೆ. ‘ದೊಡ್ಡದಕ್ಕೆ ಬಲ/ ಪ್ರಭಾವ ಹೆಚ್ಚು’ ಎನ್ನುವ ಪರಿಸ್ಥಿತಿ ಇಂದಿನ ಭಾರತದಲ್ಲಿರುವುದು ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯದಿರಲು, ಬಗೆಹರಿದರೂ ಪರಿಹಾರಗಳು ಪಕ್ಷಪಾತತನದಿಂದ ಕೂಡಿವೆ ಎನ್ನಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಇದನ್ನು ಬಗೆಹರಿಸುವುದು ಎಂಬುದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ!

ಭಾರತ ಒಪ್ಪುಕೂಟದಲ್ಲಿ...


ರಾಜ್ಯಸಭೆಗೆ ಇಂದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ ಎನ್ನುವ ಅರ್ಥವಿದ್ದರೂ ಸದಸ್ಯ ಬಲ, ಆರ್ಥಿಕ ವಿಷಯಗಳಲ್ಲಿನ ಮಿತಿಯಂತಹ ಹಲವಾರು ವಿಷಯಗಳಲ್ಲಿ ಲೋಕಸಭೆಗಿಂತಲೂ ಕಡಿಮೆ ಅಧಿಕಾರಗಳಿವೆ. ಎರಡೂ ಸದನಗಳ ಸದಸ್ಯ ಬಲವನ್ನು ಸಮಾನವಾಗಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ರಾಜ್ಯಸಭೆಯಲ್ಲಿ ಪ್ರತಿರಾಜ್ಯದಿಂದ ಸಮಾನ ಪ್ರಾತಿನಿಧ್ಯವಿರುವುದೂ ಕೂಡಾ ಅಗತ್ಯವಾಗಿದೆ. ಅಮೇರಿಕಾದ ಸೆನೆಟ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಮರುರೂಪಿಸಬಹುದಾಗಿದೆ.

ಎಷ್ಟೇ ಚಿಕ್ಕ ರಾಜ್ಯವಿರಲಿ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು, ಅದರ ಸಹಮತಿಯಿಲ್ಲದೆ ಜಾರಿಮಾಡುವಂತಿಲ್ಲ ಎನ್ನುವ ವ್ಯವಸ್ಥೆ ಇರಬೇಕಾಗಿದೆ. ಇದು ಬಹುಮತದ ಕಾರಣದಿಂದಲೇ ರಾಜ್ಯವೊಂದರ ಮೇಲೆ ಕೇಂದ್ರ ಅಧಿಕಾರ ಚಲಾಯಿಸುವುದನ್ನು ತಪ್ಪಿಸುತ್ತದೆ. ಇಡೀ ಭಾರತದ ಸಂಸತ್ತು ಒಮ್ಮತದಿಂದ ತನ್ನೆಲ್ಲಾ ಸದಸ್ಯ ಬಲ ಬಳಸಿ ರಾಜ್ಯವೊಂದರ ಹಕ್ಕುಗಳನ್ನು ಮೊಟಕುಗೊಳಿಸಿಬಿಡಬಹುದಾದ ಅಪಾಯ ಇದರಿಂದ ದೂರವಾಗಬಹುದಾಗಿದೆ.

ಚಿಕ್ಕರಾಜ್ಯಗಳು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವೆನ್ನುವ ಮಾತಿಗೆ ಅರ್ಥ ಸಿಗಬೇಕೆಂದರೆ ರಾಜ್ಯಗಳಿಗೆ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವಾದರೂ ಇರಬೇಕಲ್ಲವೇ? ಹಾಗಾಗಿ ಕೇಂದ್ರವು ಕೇಂದ್ರಪಟ್ಟಿ ಮತ್ತು ಜಂಟಿ ಪಟ್ಟಿಯಲ್ಲಿರುವ ಆಡಳಿತಾತ್ಮಕ ವಿಷಯಗಳಲ್ಲಿನ ತನ್ನ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮೊದಲಾದ ಕೆಲವೇ ಕೆಲವು ವಿಷಯಗಳನ್ನು ಮಾತ್ರಾ ತಾನುಳಿಸಿಕೊಳ್ಳಬೇಕು. ಇನ್ನು ಕೆಲವರು ಪ್ರತಿಪಾದಿಸಿದಂತೆ ದ್ವಿಪೌರತ್ವವನ್ನೂ ಪರಿಗಣಿಸಬಹುದಾಗಿದೆ.

ಇಂಥಾ ವಿಷಯಗಳೆಲ್ಲಾ ಜಾರಿಯಾದಾಗ ರಾಜ್ಯಗಳ ಸ್ವಾಯತ್ತತೆಗೆ ಭದ್ರತೆ ಸಿಗುತ್ತವೆ. ಇಂದಿನ ಭಾರತದಲ್ಲಿ ಔಟ್‍ಲುಕ್‍ನಲ್ಲಿನ ಬರಹದಂತೆ ಆಡಳಿತದ ಕಾರಣಕ್ಕಾಗಿ ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಾಗುವುದಾದಲ್ಲಿ ರಾಜ್ಯಗಳು ಮತ್ತಷ್ಟು ಅತಂತ್ರವಾಗುವುದು ಖಚಿತ. ಬಲಿಷ್ಠವಾದ ಕೇಂದ್ರವು ಸಾಧ್ಯವಾಗುವುದು ಬಲಶಾಲಿಯಾದ ರಾಜ್ಯಗಳಿಂದಲೇ ಹೊರತು ರಾಜ್ಯಗಳನ್ನು ಚಿಕ್ಕದಾಗಿಸಿ, ಕೇಂದ್ರದಲ್ಲಿ ಅವುಗಳ ಪ್ರಾತಿನಿಧ್ಯ ಕಡಿಮೆ ಮಾಡಿಸಿ, ಅವುಗಳ ಬಲಕುಂದಿಸುವುದರಿಂದಲ್ಲಾ!!

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

(ಫೋಟೋ ಕೃಪೆ: kannada.oneindia.in - http://bit.ly/ww4Wn2)
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ "ಚಿಂತನಗಂಗಾ"ದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, `ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ,  ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ `ಶತ್ರುವಿನ ಸಂಚು' ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ "ಚಿಂತನಗಂಗಾ"ವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ’ಪ್ರವೇಶ’ದಲ್ಲಿ ಹೇಳಿರುವಂತೆ "ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು..."
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ‘ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು’ ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!

ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!


ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ‘ಯಾಕೆ ಮಾಡಿದಿರಿ?’ ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?

ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.

ಸಮಾಜದಲ್ಲಿ ಒಡಕಿನ ವಿಷ ತುಂಬುವ ‘ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ’ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು "ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ" ಎನ್ನುವುದನ್ನು. ಇಲ್ಲವೇ "ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ" ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ "ಇಲ್ಲಾ.. ಇಲ್ಲಾ.." ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.

ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...

ಪ್ರತಿಕ್ರಿಯೆಗಳ ಸಾರ!
"ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ... "
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ  (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.

ಇವೆಲ್ಲಾ ತೋರಿಸುವುದಾದರೂ ಏನನ್ನು? ‘ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ’ ಎನ್ನುವ ನೇರವಂತಿಕೆಯಾಗಲೀ, ‘ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು’ ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.

ಬರಹದ ಆಶಯ

ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. "ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ" ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ’ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?

ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮೊನ್ನೆ ಪಾರಿಭಾಷಿಕ ಪದಗಳ ಬಗ್ಗೆ ಭೈರಪ್ಪನವರು ಹೊಂದಿರುವ ನಿಲುವಿನ ಬಗ್ಗೆ ಮಾತಾಡಿದ್ದೆವು. ಇದೀಗ ಭೈರಪ್ಪನವರು ಪಾರಿಭಾಷಿಕ ಪದಗಳ ಬಗ್ಗೆ ತಮ್ಮ ಅನಿಸಿಕೆ ಹೇಳಲು ಪ್ರೇರೇಪಿಸಿದ ಪ್ರಶ್ನೆ ಮತ್ತು ಅದಕ್ಕೆ ನೀಡಿದ ಉತ್ತರದಲ್ಲಿನ ಮತ್ತೊಂದು ಮಹತ್ವದ ನಿಲುವಿನ ಬಗ್ಗೆ ಮಾತಾಡೋಣ.


ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆ!


ಹೌದು! ಈ ಪ್ರಶ್ನೆಗೆ ಭೈರಪ್ಪನವರು ನೀಡಿದ ಉತ್ತರದ ಬಗ್ಗೆ ಮಾತಾಡುವುದಕ್ಕೂ ಮುನ್ನ ಪ್ರಶ್ನೆಯ ಒಳಮರ್ಮದತ್ತ ನೋಡೋಣ. ಶ್ರೀ ಶತಾವಧಾನಿ ಗಣೇಶ್ ಅವರು ಹೀಗೆ ಪ್ರಶ್ನೆ ಕೇಳಿದ್ದಾರೆ:

೧೪. ಈ ಹೊತ್ತು ಪ್ರಾದೇಶಿಕ ಭಾಷೆಗಳ, ಪ್ರಾಂತಗಳ ಮತ್ತು ಸಂಸ್ಕೃತಿಗಳ ಬಗೆಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಷಣವೆನಿಸಿದೆ. ಆದರೆ ಭಾರತದ ಬಗ್ಗೆ ಮಾತನ್ನಾಡುವುದು ಸಂಕುಚಿತತೆ ಎನ್ನಿಸಿದೆ. ಏಕೆ?
ಮೊದಲಿಗೆ, `ಭಾರತದಲ್ಲಿ ನಾನಾ ಭಾಷೆಗಳೂ, ಪ್ರಾಂತಗಳೂ ಇರುವುದು ಎಷ್ಟು ಸ್ಪಷ್ಟವಾಗಿದೆಯೋ ಅಂತೆಯೇ ನಾನಾ ಸಂಸ್ಕೃತಿಗಳಿರುವುದೂ ಸ್ಪಷ್ಟವಾಗಿದೆ' ಎಂಬುದನ್ನು ಗಣೇಶರು ಒಪ್ಪಿರುವುದು ಸಂತಸದ ವಿಷಯ. ಆದರೆ ತಮ್ಮ ಪ್ರಶ್ನೆಯಲ್ಲೇ ಪ್ರಾದೇಶಿಕತೆಯನ್ನು ಭಾರತೀಯತೆಗೆ ಎದುರಾಳಿಯಾಗಿ ನಿಲ್ಲಿಸಿರುವುದು, ಅವರಿಗೆ ಪ್ರಾಂತೀಯ ವಾದದ ಬಗ್ಗೆ ತಪ್ಪುಗ್ರಹಿಕೆ/ ಪೂರ್ವಾಗ್ರಹಗಳು ಇವೆಯೇನೋ ಎನ್ನಿಸುವಂತಿದೆ. ಯಾಕೆಂದರೆ, ‘ಪ್ರಾದೇಶಿಕತೆ ಬಗ್ಗೆ ಮಾತಾಡುವುದು ವಿಶಾಲ ಮನೋಭಾವನೆಯೆಂದಾಗಲೀ, ಭಾರತದ ಬಗ್ಗೆ ಮಾತಾಡುವುದು ಸಂಕುಚಿತತೆ ಎನ್ನುವುದಾಗಲೀ’ ಶ್ರೀಯುತರಿಗೆ ಮನವರಿಕೆಯಾದದ್ದು ಹೇಗೆಂದು ಅವರೇನೂ ತಿಳಿಸಿಲ್ಲ. ಆದರೂ ಅದೇ ದಿಟವೆನ್ನುವಂತೆ ಪ್ರಶ್ನೆ ಕೇಳಿ ಆ ಮೂಲಕ "ಪ್ರಾದೇಶಿಕವಾದವುಗಳ ಬಗ್ಗೆ ಮಾತನ್ನಾಡುವುದು  ಭಾರತದ ಬಗ್ಗೆ ಮಾತನ್ನಾಡುವುದಕ್ಕೆ ವಿರೋಧವಾದದ್ದು" ಎನ್ನುವ ಮನೋಭೂಮಿಕೆಯನ್ನು ಓದುಗರಲ್ಲಿ ಹುಟ್ಟುಹಾಕಿ, ಅದಕ್ಕೆ ಕಾರಣವೇನು? ಎಂದು ಜಾಣ್ಮೆಯಿಂದ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ಆ ಮೂಲಕ ಉತ್ತರದ ದಿಕ್ಕನ್ನೂ ನಿರ್ದೇಶಿಸಿದ್ದಾರೆ. ಇದು ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆಯಾಗಿದೆಯಲ್ಲವೇ?


ಭೈರಪ್ಪನವರ ನಿಲುವು ಹುಟ್ಟು ಹಾಕಿದ ಪ್ರಶ್ನೆಗಳು!


ಭೈರಪ್ಪನವರು ಈ ಪ್ರಶ್ನೆಗೆ ಉತ್ತರಿಸುವಾಗ ಸ್ವಲ್ಪ ತಡವರಿಸಿ ಉತ್ತರವನ್ನು ಸುತ್ತಿ ಬಳಿಸಿ ನೀಡಲು ಯತ್ನಿಸಿರುವುದು ಕಾಣುತ್ತದೆ ಮತ್ತು ಈ ಉತ್ತರ ನೀಡುವ ಭರದಲ್ಲಿ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ತಿಳಿಯುತ್ತದೆ. ಹೇಗೆಂದು ನೋಡೋಣ...
ಈ ಭಾವನೆಯು ಪ್ರಧಾನವಾಗಿ ಡಿಎಂಕೆಯದು. ಮಹಾರಾಷ್ಟ್ರ, ಪಂಜಾಬ್, ಆಂಧ್ರ, ಗುಜರಾತುಗಳಲ್ಲಿಲ್ಲ.
> ಭಾರತದ ಮೊದಲ ಭಾಷಾವಾರು ರಾಜ್ಯ ಆಂಧ್ರ. ಇಲ್ಲಿ ತೆಲುಗು ನುಡಿ, ನಾಡಿನ ಬಗ್ಗೆ ದನಿಯೆತ್ತಿ ೫೮ ದಿವಸ ಉಪವಾಸ ಮಾಡಿ ಪ್ರಾಣ ತೆತ್ತವರು ಶ್ರೀ ಪೊಟ್ಟಿ ಶ್ರೀರಾಮುಲು. ಮೂಲತಃ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಕಾರಣವಾದದ್ದೇ ಆಂಧ್ರದ ಈ ಚಳವಳಿ.
> ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರನ್ನು ಕೇಂದ್ರವಾಗಿಸಿಕೊಂಡು ಹುಟ್ಟಿದ್ದು... ಶಿವಸೇನಾ. ಮರಾಠಿ ಕೇಂದ್ರಿತ ರಾಜಕೀಯ ಯುಗ ಆರಂಭವಾದದ್ದು ೧೯೬೬ರಲ್ಲೇ. ಮುಂದೆ ಅದು ಎಂ.ಇ.ಎಸ್, ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ಉದಯದವರೆಗೂ ಸಾಗಿ ಬಂದಿದೆ. 
> ಪಂಜಾಬ್ ಪ್ರಾಂತ್ಯದಲ್ಲಿ ಖಲೀಸ್ಥಾನದ ಬೇಡಿಕೆ, ಆ ಒಂದು ರಕ್ತಸಿಕ್ತ ಹೋರಾಟದ ಚಳವಳಿ, ಆನಂದ್‌ಪುರ್ ಸಾಹೇಬ್ ನಿರ್ಣಯವಾದ ಪ್ರತ್ಯೇಕ ಖಾಲಿಸ್ತಾನದ ಘೋಷಣೆಯೂ ಪಂಜಾಬಿ ಪ್ರಾಂತೀಯತೆಯ ಅಭಿವ್ಯಕ್ತಿಗಳೇ ಅಲ್ಲವೇ?
> ತನ್ನದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವ ಯಾವ ಪ್ರಾಂತ್ಯವೂ ತನ್ನ ಭಾಷೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನೂ, ತನ್ನ ಬೇರನ್ನು ಅದರಲ್ಲೇ ಗುರುತಿಸಿಕೊಳ್ಳುವುದನ್ನೂ ಬಿಡುವುದಿಲ್ಲಾ ಎನ್ನಲು ಕಟ್ಟಾ ರಾಷ್ಟ್ರೀಯವಾದದ ಬಿಜೆಪಿಯ ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ "ಗುಜರಾತಿ ಅಸ್ಮಿತಾ" ಘೋಷಣೆಯೇ ಸಾಕ್ಷಿಯಾಗಿದೆ. ಮತ್ತಿದು ಸರಿಯಾಗೂ ಇದೆ.
ಬೆಂಗಾಲಿಗಳ ಭಾಷೆ ಸಂಸ್ಕೃತಿಗಳ ಅಭಿಮಾನವಂತೂ ವಿಶ್ವವಿಖ್ಯಾತ. ರವೀಂದ್ರನಾಥರ ಸೋನಾರ್ ಬಾಂಗ್ಲಾ ಆಗಲೀ, ಬಂಕಿಮರ ವಂದೆಮಾತರಂ ಆಗಲೀ ಬಂಗಾಳಿ ಸಂಸ್ಕೃತಿಯ ಅಭಿವ್ಯಕ್ತಿಯೇ ಅಲ್ಲವೇನು?


ಇವೆಲ್ಲಾ ಒಂದು ಕಡೆಯಿದ್ದು ಮತ್ತೊಂದೆಡೆ ಪ್ರಾದೇಶಿಕ ಚಿಂತನೆಗಿಂತಾ ಮಿಗಿಲಾಗಿ ರಾಷ್ಟ್ರೀಯತೆಯ ಚಿಂತನೆಯೊಂದಿಗೇ ಕೈಗೂಡಿಸಿದ ಕನ್ನಡನಾಡಿನಲ್ಲಿ ಪ್ರಾದೇಶಿಕ ಚಿಂತನೆ ಮೂಡುವುದರ ಬಗ್ಗೆ ಗಣೇಶ್ ಮತ್ತು ಭೈರಪ್ಪನವರು ಎತ್ತಿದ ಆಕ್ಷೇಪದ ಮಾತುಗಳೇಕೋ ಉಚಿತವಾದುದಲ್ಲ ಅನ್ನಿಸುತ್ತದೆ. ಗಮನಿಸಿ ನೋಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಹೆಚ್ಚಿನವರೆಲ್ಲಾ ಈ ಮೇಲಿನ ಪ್ರದೇಶಗಳ ಜನರೇ ಆಗಿದ್ದಾರೆ. ಹಾಗಾದರೆ ಪ್ರಾದೇಶಿಕ ಚಿಂತನೆ ರಾಷ್ಟ್ರೀಯತೆಗೆ ಮಾರಕವಾಗುವುದಾದರೂ ಹೇಗೆ? ಕನ್ನಡಿಗರಿಗೆ ಕರ್ನಾಟಕತ್ವ ಎನ್ನುವುದೇ ಭಾರತೀಯತೆ ಅಲ್ಲವೇ? ಆಲೂರು ವೆಂಕಟರಾಯರ ಮಾತು "ಕರ್ನಾಟಕಾಂತರ್ಗತ ಭಾರತಮಾತೆ" ಎನ್ನುವುದನ್ನು ಅರಿತರೆ ಪ್ರಾದೇಶಿಕತೆ ಮತ್ತು ಭಾರತೀಯತೆಗಳೆರಡೂ ಒಂದೇ ಎನ್ನುವುದು ಅರಿವಾಗುತ್ತದೆ.


ಮುಂದುವರೆಯುತ್ತಾ ಭೈರಪ್ಪನವರು ಈ ಭಾವನೆಗೆ ಕಾರಣವನ್ನು ಸಂಸ್ಕೃತ ದ್ವೇಷ/ ವೇದದೆಡೆಗಿನ ದ್ವೇಷ/ ಪರಭಾಷಿಕರ ಪ್ರಾಬಲ್ಯಗಳಿಗೆ ಆರೋಪಿಸುತ್ತಾರೆ. ಆಂಗ್ಲರು ಭಾರತವನ್ನು ಒಡೆಯಲು ಬಳಸಿದ್ದ ತಂತ್ರಗಳ ಫಲ ಎಂದಿದ್ದಾರೆ. ವೈಜ್ಞಾನಿಕವಾಗಿ ಭಾಷಾ ವಿಜ್ಞಾನಿಗಳು ಗುರುತಿಸಿರುವ ದಿಟವಾದ ‘ಕನ್ನಡದ ಬೇರುಗಳು ಸಂಸ್ಕೃತದಲ್ಲಿಲ್ಲ’ ಎಂಬುದನ್ನು ಶ್ರೀಯುತರೂ ಒಪ್ಪುತ್ತಾರೆಂದುಕೊಳ್ಳೋಣ. ಹೀಗಿರುವಾಗ ನಮ್ಮತನದ ಬೇರನ್ನು ನಾವು ಅರಸುವುದೇ ಪಾಪವೆನ್ನುವಂತಹ ನಿಲುವು ಸರಿಯೇ? ನಮ್ಮ ಸಂಸ್ಕೃತಿಯ ಅನನ್ಯತೆಯ ಬಗ್ಗೆ ಮಾತಾಡಿದರೆ ಅದೆಂತು ಸಂಸ್ಕೃತ ದ್ವೇಷವಾಗುವುದೋ ತಿಳಿಯದು. ಕರ್ನಾಟಕದಲ್ಲಿ ಪರಭಾಷಿಕರ ಪ್ರಾಬಲ್ಯದ ಬಗ್ಗೆ ಹೇಳಿರುವ ಮಾತೊಂದೇ ಇದ್ದುದ್ದರಲ್ಲಿ   ಅರೆ ಸರಿಹೊಂದುವ ಮಾತು. ಆದರೂ ಭಾರತದ ಒಗ್ಗಟ್ಟನ್ನು ಆಂಗ್ಲರನ್ನು ತೋರಿಸಿ, ಚೀನೀಯರನ್ನು ತೋರಿಸಿ, ಪಾಕೀಸ್ತಾನಿಗಳನ್ನು ತೋರಿಸಿ, ಭಯೋತ್ಪಾದನೆಯನ್ನು ತೋರಿಸಿ... ಸಮಾನ ಶತೃತ್ವದ ಆಧಾರದ ಮೇಲೆ ಕಟ್ಟುವ ಹಾಗೂ ಉಳಿಸುವ ಪ್ರಯತ್ನಗಳನ್ನೇ ನಮ್ಮ ಸುತ್ತಮುತ್ತೆಲ್ಲಾ ಕಾಣುತ್ತಿರುವಾಗ, ಭೈರಪ್ಪನವರ ಈ ಅನಿಸಿಕೆ ಇನ್ನು ಹೇಗೆ ತಾನೇ ಇರಲು ಸಾಧ್ಯ ಅನ್ನಿಸದಿರದು. ಪ್ರಾದೇಶಿಕ ಚಿಂತನೆಗೆ ಕಾರಣ, ನಮ್ಮತನದ ಮೇಲೆ ನಡೆಯುವ ಭಾಷಾ, ಸಾಂಸ್ಕೃತಿಕ ಆಕ್ರಮಣಗಳಷ್ಟೇ ಅಲ್ಲಾ... ನಮ್ಮ ನಾಡು ಏಳಿಗೆ ಹೊಂದಬೇಕೆಂಬ ತುಡಿತವೇ ಮುಖ್ಯಕಾರಣವೆನ್ನುವುದನ್ನು ಭೈರಪ್ಪನವರೂ, ರಾ ಗಣೇಶರೂ ಗುರುತಿಸಿದ್ದರೆ ಚೆನ್ನಿತ್ತು.. ಒಟ್ಟಾರೆ ಶತಾವಧಾನಿಗಳ ಪ್ರಶ್ನೆಗೆ ಭೈರಪ್ಪನವರು ನೀಡಿರುವ ಉತ್ತರವು ನೇರವಾಗಿಲ್ಲದೆ ಕೊಂಕಣವನ್ನೆಲ್ಲಾ ಸುತ್ತಿಸಿ ಮೈಲಾರದ ಪಕ್ಕದೂರಿಗೆ ಕರೆತಂದು ನಿಲ್ಲಿಸಿದಂತಿದೆ.


ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಹಿರಿದಾದ ಸಾಧನೆಗೈದಿರುವ ಈ ಇಬ್ಬರು ಗೌರವಾನ್ವಿತ ಮಹನೀಯರ ಪ್ರಶ್ನೆ ಮತ್ತು ಉತ್ತರಗಳೆರಡನ್ನೂ ನೋಡಿದಾಗ ಒಟ್ಟಾರೆಯಾಗಿ ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳ ಬಗ್ಗೆ ಇವರುಗಳು ಹೊಂದಿರುವ ನಿಲುವುಗಳು ಸರಿಯಿಲ್ಲದಿರುವುದು ಕಾಣುತ್ತದೆ. ಸತ್ಯದ ಹುಡುಕಾಟವೇ ಪರಮಗುರಿಯಾಗಿದೆ ಎನ್ನುವ ಈರ್ವರೂ ಈ ದಿಕ್ಕಿನಲ್ಲಿ ಮುಂದಾದರೂ ಯೋಚಿಸಿಯಾರು ಅಂದ್ಕೊಳ್ಳೋಣ... ಅಲ್ವಾ ಗುರೂ!

ಪಾರಭಾಷಿಕ ಪದಗಳು ಮತ್ತು ಭೈರಪ್ಪನವರ ನಿಲುವು!

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದರಲ್ಲಿ ಮುಖ್ಯವಾಗಿ ಕನ್ನಡಿಗರ ನುಡಿ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಇವರ ಅನಿಸಿಕೆಗಳು ನಿಜಕ್ಕೂ ನಮ್ಮನ್ನು ಚಿಂತನೆಗೆ ಒಡ್ದುವಂತಿದೆ. ಇಡೀ ಭಾರತವೆಲ್ಲಾ ಒಂದೇ ಪದಗಳನ್ನು ಬಳಸಬೇಕು, ಆ ಕಾರಣಕ್ಕಾಗಿ ಅವು ಸಂಸ್ಕೃತ ಮೂಲದ್ದಾಗಿರಬೇಕು ಎನ್ನುವ ನಿಲುವಿನ ಶ್ರೀ ಭೈರಪ್ಪನವರು ಇಲ್ಲೂ ಅದನ್ನೇ ಪ್ರತಿಪಾದಿಸಿದ್ದಾರೆ.
೪೫ ವರ್ಷಗಳ ಹಿಂದಿನ ಶಾಸ್ತ್ರಗಳ ಪಾರಿಭಾಷಿಕ ಪದಗಳನ್ನು ಕಟ್ಟುವ ಬಗ್ಗೆ ನೇಮಿಸಿದ್ದ ಒಂದು ಸಮಿತಿಯ ಸಭೆಯಲ್ಲಿ ತಮಿಳರು ಇಂಥಹ ನಡೆಯನ್ನು ವಿರೋಧಿಸಿದ್ದನ್ನು ಶ್ರೀಯುತರು ಹೇಳುತ್ತಾ ಇದರ ಪರಿಣಾಮವಾಗಿ ತಮಿಳಿನ ಪಾರಿಭಾಷಿಕ ಪದಗಳು ತಮಿಳರಿಗಷ್ಟೇ ತಿಳಿಯಬೇಕು ಎಂದಿದ್ದಾರೆ. ಹೀಗೆ ತಮಿಳರು ತಮಿಳಲ್ಲೇ ಪದಗಳನ್ನು ಹುಟ್ಟುಹಾಕಿ ಬಳಸೋದು (ಕನ್ನಡಿಗರು ಕನ್ನಡದಲ್ಲೇ) ಬೇರೆ ಭಾಷೆಗಳವರಿಗೆ ಆಯಾ ಭಾಷೆಯ ವೈಜ್ಞಾನಿಕ ಸಂಶೋಧನಾ ಬರಹಗಳನ್ನು ಅರ್ಥ ಮಾಡ್ಕೊಳ್ಳೋಕೆ ತೊಂದರೆಯಾಗುತ್ತೆ ಎಂದಿದ್ದಾರೆ. ಇವರ ಮಾತಿನ ಒಟ್ಟು ಸಾರವೆಂದರೆ ಇಡೀ ದೇಶದ ಎಲ್ಲೆಡೆ ಒಂದೇ ಪಾರಿಭಾಷಿಕ ಪದಗಳು ಇರಬೇಕು ಎನ್ನುವುದು. (ಕನಿಷ್ಠ ಅದು ತಮಿಳರಿಗಾದರೂ ಅರ್ಥವಾಗುತ್ತದೆ, ಭೈರಪ್ಪನವರು ಪ್ರತಿಪಾದಿಸಿದ ಕನ್ನಡ ಪದಗಳು(?) ಕನ್ನಡದ ಮಕ್ಕಳಿಗೂ ಅರ್ಥವಾಗದಲ್ಲಾ ಗುರೂ? ಅವರು ಕೊನೆಯಲ್ಲಿ ಹೇಳಿದಂತೆ ತಮಿಳಿನ ಪದಗಳೂ ಸರಿಯಿಲ್ಲಾ ಅನ್ನುವುದೇ ನಿಜವಾದರೆ ಅದಕ್ಕೆ ಅವರು ಸಂಸ್ಕೃತ ಬೇರಿನ ಪದಗಳನ್ನು ಒಪ್ಪದ್ದು ಕಾರಣವಲ್ಲ, ಸರಿಯಾಗಿ ಪದಗಳನ್ನು ಕಟ್ಟದ್ದೇ ಹೋದದ್ದು ಕಾರಣ ಅನ್ನೋದು ನಂಬಲರ್ಹವಾಗಿದೆ.)

ಭಾಷೆ: ಸರಳ ಕಲಿಕೆಗೋ? ಪರಭಾಷೆಯವರು ತಿಳಿಯಲಿಕ್ಕೋ?

ಸರಳವಾದ ಒಂದು ಪ್ರಶ್ನೆ: ಭಾಷೆ ಇರುವುದು ಕಲಿಕೆಗೋ? ಪರಭಾಷಿಕರು ಅರ್ಥ ಮಾಡಿಕೊಳ್ಳಲಿಕ್ಕೋ?
ಕಲಿಕೆ ಶುರುವಾಗುವುದೇ ಮಗು ತನ್ನ ಸುತ್ತಮುತ್ತಲಿನ ವಸ್ತುಗಳನ್ನು ಗುರುತಿಸುವ ಮೂಲಕ. ಈಗ 'ಮಗು ಏನನ್ನಾದರೂ ಬಳಸುತ್ತಿರಲಿ, ಪಾರಿಭಾಷಿಕ ಪದ ಮಾತ್ರಾ ಆಡುನುಡಿಯಿಂದ ದೂರವಿರುವುದೇ ಸರಿ' ಎಂದರೆ ಹೇಗೆ? ಇದಕ್ಕೆ ಸಣ್ಣ ಉದಾಹರಣೆಯೆಂದರೆ ನೀರನ್ನು 'ನೀರು' ಎಂದು ಗುರುತಿಸಿ ಬೆಳೆಯುವ ಮಗು ಮುಂದೆ ಅದನ್ನೇ 'ಜಲ'ವೆಂದೋ 'ಉದಕ'ವೆಂದೋ ಎಂದು ಬಳಸಿ ಕಲಿಕೆ ಮಾಡಬೇಕೆನ್ನುವುದು. ಇದು ಸಣ್ಣ ಉದಾಹರಣೆಯಾದರೂ ಇಂತಹ ನೂರಾರು ನಮ್ಮ ಪಠ್ಯಗಳಲ್ಲಿವೆ. ಕನ್ನಡಿ = ದರ್ಪಣ, ಉಬ್ಬು = ನಿಮ್ನ, ತಗ್ಗು = ಪೀನ, ಎಲೆ = ಪತ್ರ... ಹೀಗೆ!

ಇವುಗಳಲ್ಲಿ ಯಾವುದರಲ್ಲಿ ಕಲಿಯುವುದು ಸೂಕ್ತವೆಂದು ಇವರನ್ನೇನಾದರೂ ಕೇಳಿದರೆ "ಕರ್ನಾಟಕದಲ್ಲಿ ಬೇರೆ ಬೇರೆ ಒಳನುಡಿಗಳಿವೆ, ಅವುಗಳಲ್ಲೆಲ್ಲಾ ಹೇಗೆ ಕಲಿಕೆ ಮಾಡೋದು" ಎಂಬ ಆಕ್ಷೇಪ ಎತ್ತುತ್ತಾರೆ. ನಿಜವಾಗಿ ಆಯಾ ಒಳನುಡಿಗಳಲ್ಲಿ ಕಲಿಯುವ ವ್ಯವಸ್ಥೆ ಇರಬೇಕಾದ್ದು ಕಲಿಕೆಯ ಪರಿಣಾಮದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಹಾಗೆ ಸಿದ್ಧಪಡಿಸುವಲ್ಲಿನ ತೊಡಕಿನ ಕಾರಣದಿಂದಾಗಿ ನಂತರದ ದೂರದ ನುಡಿಯನ್ನು ಆಶ್ರಯಿಸುತ್ತೇವೆ. ಕನ್ನಡದ ವಿಷಯಕ್ಕೆ ಬಂದರೆ ಇದನ್ನು ನಾವು ಎಲ್ಲರ ಕನ್ನಡ ಎಂದಿದ್ದೇವೆ. ಇರಲಿ, ನಮ್ಮ ನಡುವೆ ನಾನಾ ಒಳನುಡಿಗಳಿವೆ ಎನ್ನುವುದು ನಮ್ಮಿಂದ ದೂರದ ಸಂಸ್ಕೃತವನ್ನು ಆಶ್ರಯಿಸಲು ಕಾರಣವಾಗುವುದು ಹೇಗೆ ಸರಿ? ಹಾಗೆ ನಮ್ಮ ಸಂಶೋಧನೆಗಳನ್ನು ಪರಭಾಷಿಕರು ಓದಿ ಅರಿಯಬೇಕು ಎಂದರೆ ಎಷ್ಟು ಜನ ಪರಭಾಷೆಯವರು ಕನ್ನಡ ಸಂಶೋಧನಾ ಪ್ರಬಂಧ ಓದುತ್ತಾರೆ? ಅಥವಾ ಕನ್ನಡಿಗರು ಎಷ್ಟು ಪರಭಾಷಾ ಸಂಶೋಧನಾ ಪ್ರಬಂಧಗಳನ್ನು ಓದುತ್ತಾರೆ? ಅರೆರೆ, ಇಷ್ಟಕ್ಕೂ ನಮ್ಮ ಸಂಶೋಧನಾ ಪ್ರಬಂಧಗಳನ್ನು ಜಗತ್ತಿನ ಜನರೆಲ್ಲಾ ಓದುವುದು ಬೇಡವೇ? ಬರೀ ಭಾರತೀಯ ಪರಭಾಷಿಕರು ಓದಲು ಸಹಾಯವಾಗುವಂತೆ ಸಂಸ್ಕೃತ ಬೇರಿನ ಪದಗಳನ್ನು ಕಟ್ಟುವುದು, ತಮಿಳರ 'ತಮಿಳಿನಲ್ಲಿ ಮಾತ್ರಾ ಇರಲಿ' ಎನ್ನುವ ಸಂಕುಚಿತತೆ(?)ಗಿಂತಾ ಹೀನಾಯವಲ್ಲವೇ? ಇವರ ವಾದವನ್ನು ವಿಸ್ತರಿಸಿಕೊಂಡು ಹೋಗಿ ನಾವು ಪ್ರಪಂಚಕ್ಕೆಲ್ಲಾ ಒಂದೇ ಪಾರಿಭಾಷಿಕ ಪದಗಳಿರಬೇಕು ಎನ್ನಬೇಕಾಗುತ್ತದೆ. ಆದರೆ ಇಂತಹ ನಿಲುವು ವೈವಿಧ್ಯ ವಿರೋಧಿ, ಜೀವ ವಿರೋಧಿ ನಿಲುವಾಗುತ್ತದೆ. ನೀವೇ ಹೇಳಿ...ಈ ವಿಷಯದಲ್ಲಿ ತಮಿಳರ ನಿಲುವು ಸರಿಯಾಗಿದೆಯೋ? ಭೈರಪ್ಪನವರ ನಿಲುವೋ? ಎಂದು ನೋಡಿದರೆ ಭೈರಪ್ಪನವರ ನಿಲುವಿನಲ್ಲಿನ ತೊಡಕು ಕಾಣುತ್ತದೆಯಲ್ಲವೇ?

ಕಲಿಕೆ ಅತ್ಯುತ್ತಮವಾಗೋದು ಕಲಿಯುವವನು ಈಗಾಗಲೇ ಕಲಿತಿರುವುದನ್ನು ವಿಸ್ತರಿಸಿಕೊಂಡು ಹೋಗುವುದರಿಂದಲೇ. ಪರಿಸರದಲ್ಲಿರುವ ಗ್ರಹಿಕೆಗೆ ಸಿಗುವ ಕಾಣುವ ಎಟುಕುವ ವಸ್ತುಗಳಿಂದಲೇ ಆಳವಾದ ಅರಿವುಗಳನ್ನು ದಕ್ಕಿಸಿಕೊಳ್ಳುವುದು ಸಾಧ್ಯವಲ್ಲವೇ? ಅಂದರೆ ಕಲಿಕೆಯನ್ನು ಜನರ ಹತ್ತಿರ ಹತ್ತಿರಕ್ಕೆ ಒಯ್ಯಲು ಇರುವ ಸಾಧನ ಅವರಾಡುವ ನುಡಿಯಲ್ಲೇ ಅದನ್ನು ಒದಗಿಸಿಕೊಡುವುದೇ ಆಗಿದೆ. ಇವತ್ತು ಕನ್ನಡದಲ್ಲಿ ಇಂಥಾ ಏರ್ಪಾಟಿಲ್ಲಾ ಅನ್ನೋದು ಗೊತ್ತೊರೋದೆ... ಆದರೆ ನಾವು ಸಾಗಬೇಕಾದ ದಿಕ್ಕು ಯಾವ ಕಡೆಗಿರಬೇಕು? ಜನರಿಗೆ ಹತ್ತಿರದ ನುಡಿಯಲ್ಲಿ ಪದಗಳನ್ನು, ಅವು ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ್ದಿರಲಿ, ಕಟ್ಟುವ ಕಡೆಗಿರಬೇಕು. ಹೀಗೆ ಇಲ್ಲದ ಸಮಾನ ಪದಗಳನ್ನು ಕೃತಕವಾಗಿ ಕಟ್ಟುವುದರಲ್ಲಲ್ಲ ಮತ್ತು ಅಂತಹ ಕಟ್ಟುವಿಕೆಯ ಕಾರಣದಿಂದಾಗಿ ನಾಡಿನ ಜನರ ಕಲಿಕೆಯನ್ನು ತೊಡಕಾಗಿಸುವುದರಲ್ಲಲ್ಲ!

ಕೊನೆಹನಿ: ಮೇಲಿನ ನಿಲುವಿಗೆ ಎದುರಾಗಿ 'ಮಕ್ಕಳು ತುಂಬಾ ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ, ಅವರಿಗೆ ಚಿಕ್ಕಂದಿನಿಂದಲೇ ಈ ಪರದೇಶಿ ಪಾರಿಭಾಷಿಕ ಪದಗಳನ್ನು ಪರಿಚಯಿಸಿದರೆ ಅದನ್ನೇ ಕಲಿಯುತ್ತಾರೆ' ಎನ್ನುವ ವಾದವನ್ನು ಮುಂದಿಡಬಹುದು. ಒಪ್ಪೋಣ... ಹಾಗಾದರೆ ಈ ತೊಡಕಿನ ಕೆಲಸಕ್ಕೆ ಮುಂದೆಂದೂ ಉಪಯೋಗಕ್ಕೆ ಬಾರದ ಪದಗಳಿಗಿಂತ ಮೂಲ ಇಂಗ್ಲೀಶ್ ಅಥವಾ ಲ್ಯಾಟೀನ್ ಅಥವಾ ಗ್ರೀಕ್ ನುಡಿಯ ಪದಗಳನ್ನೇ ಕಲಿಸಬಹುದಲ್ವಾ?

ಕನ್ನಡ ಇಷ್ಟಕ್ಕೇ ಲಾಯಕ್ಕಾಗಬೇಕಾ?


ಎರಡನೇ ವಿಶ್ವಕನ್ನಡ ಸಮ್ಮೇಳನ ಸಮಾರೋಪದ ಹಂತಕ್ಕೆ ಬಂದಿದೆ. ಈ ಸಮ್ಮೇಳನದಲ್ಲಿ ಅನೇಕ ಕನ್ನಡಿಗ ಸಾಧಕರು ಭಾಗವಹಿಸಿ ನಾಡಿಗೆ ಸಂದೇಶ ನೀಡಿದರು. ಹೆಚ್ಚಾಗಿ ಮನರಂಜನೆ, ಸಾಹಿತ್ಯ ಕ್ಷೇತ್ರಗಳ ಸುತ್ತಲೇ ವಿಶ್ವಕನ್ನಡ ಸಮ್ಮೇಳನ ನಡೆದಂತಿತ್ತು. ಹಲವರ ಮಾತುಗಳು ಸ್ಪೂರ್ತಿ ನೀಡುವಂತಿದ್ದವು. ಆದರೆ ಮುಖ್ಯವಾಗಿ ನಾರಾಯಣ ಮೂರ್ತಿಗಳ ಸಂದೇಶಗಳನ್ನು ಗಮನಿಸಿದರೆ ಇವರ ಕಣ್ಣಿನಲ್ಲಿ ಕನ್ನಡವೆಂದರೆ ಏನು? ಇದಕ್ಕಿರಬೇಕಾದ ಸ್ಥಾನಮಾನವೇನು? ಅನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ಕನ್ನಡವೆಂದರೆ... ಇಷ್ಟೇನಾ?

ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು. ನನ್ನ ತಾಯಿಗೆ ಪತ್ರ ಬರೆಯೋದು ಕನ್ನಡದಲ್ಲೇ. ನನ್ನ ಮಕ್ಕಳು ಶಾಲೆಯಲ್ಲಿ ಎರಡನೇ ಭಾಷೆಯಾಗಿ ಕನ್ನಡವನ್ನೇ ಓದಿದ್ದು. ನನ್ನ ಭಾವನೆಯ ಭಾಷೆ ಕನ್ನಡ. ನನಗೆ ಸಿಟ್ಟು ಬಂದರೆ, ಸಂತೋಷವಾದರೆ ಅದನ್ನು ತೋರಿಸೋದು ಕನ್ನಡದಲ್ಲೇ. ನನ್ನ ಮನೆಯ ಮಾತು ಕನ್ನಡ. ನನಗೆ ನಮ್ಮ ಊರಿನ ಕಾಫಿ ಕುಡಿದಾಗ ಸಮಾಧಾನವಾಗುತ್ತದೆ. ನಾನು ಕನ್ನಡದ ಕಾದಂಬರಿಗಳನ್ನು ಓದಿದ್ದೇನೆ. ಅನಂತಮೂರ್ತಿ, ಎಸ್.ಎಲ್.ಭೈರಪ್ಪನವರ ಪುಸ್ತಕಗಳನ್ನು ಓದಿದ್ದೇನೆ. ಇತ್ಯಾದಿಯಾಗಿ ತಮ್ಮ ಬದುಕಿನಲ್ಲಿ ಕನ್ನಡದ ಪಾತ್ರವನ್ನು ವಿವರಿಸಿದ್ದಾರೆ.

ಆದರೆ ವ್ಯವಹಾರದ ಭಾಷೆಯಾಗಿ ಕನ್ನಡ ಬಳಸಲು ಆಗದು, ಅದಕ್ಕೆ ಇಂಗ್ಲೀಷೇ ಆಗಬೇಕು ಅನ್ನೋ ಮಿತಿಯ ಚಿಂತನೆಯನ್ನು ತೋರಿದ್ದಾರೆ. ಕನ್ನಡಿಗರು ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಬಳಸಿ, ಮನೆಯಲ್ಲಿ ಮಾತಾಡಿಕೊಂಡರೆ ಸಾಕು ಎನ್ನುವ ಅನಿಸಿಕೆ ಮೂಡುವಂತಹ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಇವರಂದಂತೆ ಆಗುವುದೆಂದರೆ... ಕನ್ನಡವನ್ನು ಕನ್ನಡಿಗರು ತಮ್ಮ ಮನೆಯ ಮಟ್ಟಿಗೆ ಸೀಮಿತ ಮಾಡಿಕೊಳ್ಳಬೇಕು. ಆ ಮೂಲಕ ತಮ್ಮ ಭಾವನೆಗಳ ಅಭಿವ್ಯಕ್ತಿಗೆ, ಸಾಹಿತ್ಯಕ್ಕೆ, ಮನೆಯಲ್ಲಿ , ಮಾತಾಡಲಿಕ್ಕೆ ಕನ್ನಡ ಬಳಸಿದರೆ ಸಾಕು ಅನ್ನುವ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿರುವಂತಿದೆ. ಇಷ್ಟೇ ಅಲ್ಲದೆ ಇದು ಕರ್ನಾಟಕ ರಾಜ್ಯ ಸರ್ಕಾರದ ಕಲಿಕೆಯಲ್ಲಿನ ಭಾಷಾನೀತಿಯನ್ನು ತಪ್ಪೆನ್ನುವಂತಿತ್ತು.

ಕಲಿಕೆಗೆ ಯೋಗ್ಯವಲ್ಲವೇ ಕನ್ನಡ!

ಕಲಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಇವರು ಇಂಗ್ಲೀಷ್ ಮಾಧ್ಯಮದ ಪರವಾಗಿ ದನಿ ಎತ್ತಿದ್ದರು. ಇವರ ಅನಿಸಿಕೆಗೆ ಇನ್ಫೋಸಿಸ್ ಸಂಸ್ಥೆಯ ಬಡ ಕೆಲಸಗಾರ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲಾಗದೇ ಇವರ ಶಿಫಾರಸ್ಸಿಗೆ ಮಾಡಿದ ಮನವಿ ಕಾರಣವಂತೆ. ಆ ನಂತರ ತಾವು ಕಲಿಕೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಭಾಗವಹಿಸಿದ್ದಾಗ, ಆ ಸಭೆಯಲ್ಲಿದ್ದವರ ಮಕ್ಕಳೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಾರೆ ಎನ್ನುವುದನ್ನು ಕಂಡುಕೊಂಡು, ಬಡವರ ಮಕ್ಕಳಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಅವಕಾಶ ಇರಬೇಕು ಅನ್ನೋದನ್ನು ಹೇಳಿದರಂತೆ. ಆ ಮೂಲಕ ಕನ್ನಡಿಗರಿಗೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆಂದೂ, ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಬೇಕೆಂದೂ ಹೇಳುತ್ತಾ ಇರುವರೇನೊ ಎನ್ನುವ ಅನಿಸಿಕೆ ಮೂಡಿಸಿದರು.

ಇದ್ದಲ್ಲೇ ಇರೋಣವೇ? ತಿದ್ಕೊಂಡು ಮುಂದೆ ಹೋಗೋಣವೇ?

ಕನ್ನಡನಾಡಲ್ಲಿ ಇಂದು ಇವರು ಹೇಳುತ್ತಿರುವ ಮಿತಿಗಳು ಇರುವುದೇ ದಿಟವಾದಲ್ಲಿ ನಾಳೆಗೆ ಇವರು ನೀಡುತ್ತಿರುವ ಪರಿಹಾರ ಕನ್ನಡಿಗರ ಏಳಿಗೆಗೆ ಮಾರಕವೋ ಪೂರಕವೋ ನಿಜಕ್ಕೂ ಚರ್ಚೆಯಾಗಬೇಕಾಗಿದೆ. ಇಷ್ಟಕ್ಕೂ ನಮ್ಮ ಮಕ್ಕಳಿಗೆ ಇಂಗ್ಲೀಷ್ ಭಾಷೇನಾ ಕಲಿಸಕ್ಕೆ ಯಾರು ಬೇಡಾ ಅಂದಿದಾರೆ? ಗಣಿತ, ವಿಜ್ಞಾನ, ಸಮಾಜಗಳನ್ನೂ ಇಂಗ್ಲೀಷಲ್ಲಿ ಕಲಿಸಬೇಕಾ? ಹಾಗೆ ಕಲಿತು ನಮ್ಮ ಮಕ್ಕಳು ನಿಜಕ್ಕೂ ಬುದ್ಧಿವಂತರಾಗ್ತಾರಾ? ಕನ್ನಡದ ಮಕ್ಕಳನ್ನು ಎಳೆವೆಯಿಂದಲೇ ಕನ್ನಡದಿಂದ ಬೇರೆ ಮಾಡಿದರೆ ಅವಕ್ಕೆಂಥಾ ಅಡಿಪಾಯ ಸಿಕ್ಕೀತು ಗುರೂ? ನಾಳಿನ ವಿಶ್ವವು, ಜ್ಞಾನಾಧಾರಿತ ಪೈಪೋಟಿಯ ವಿಶ್ವವಾಗುತ್ತದೆಯೆಂಬ ಸನ್ನಿವೇಶದಲ್ಲಿ ನಮ್ಮ ಮುಂದಿನ ಪೀಳಿಗೆ ಅದಕ್ಕೆ ಸಜ್ಜಾಗುವುದೆಂತು? ನಾಳಿನ ಜ್ಞಾನಾಧಾರಿತ ಉದ್ದಿಮೆಗಳ ಮೂಲಕ ಸಾಧಿಸುವ ಏಳಿಗೆಗೂ ಇಂಗ್ಲೀಷ್ ಮಾಧ್ಯಮವೇ ದಾರಿಯೆಂದು ನಾರಾಯಣ ಮೂರ್ತಿಗಳು ಹೇಳುವರೇನು? ಅಥವಾ ನಮಗೆ ಜ್ಞಾನಾಧಾರಿತ ಏಳಿಗೆ ಬೇಕಿಲ್ಲ ಅನ್ನುವುದಾದರೆ ಕನ್ನಡ ನಾಡಿನ ತಾತ್ಕಾಲಿಕ ಏಳಿಗೆಯತ್ತ ಮಾತ್ರವೇ ಇವರ ಚಿಂತನೆಗಳು ನಿಂತಂತಾಗುವುದಿಲ್ಲವೇ? ಇಂದು ಕನ್ನಡದಲ್ಲಿ ಜ್ಞಾನ ವಿಜ್ಞಾನಗಳು ಇನ್ನೂ ಎಳವೆಯಲ್ಲಿವೆ. ಹಾಗಾದರೆ ಈಗಿನ ಕಲಿಕೆಯ ಮಟ್ಟವನ್ನು ಮೇಲೆ ತರುವ ಯೋಚನೆ ಮಾಡುವುದು ಬಿಟ್ಟು ಈಗಿರುವುದನ್ನಷ್ಟೇ
ಬಳಸಿಕೊಳ್ಳುತ್ತಾ ಇಂಗ್ಲೀಷ್ ಮಾತಾಡಬಲ್ಲ, ಕಾಲ್ ಸೆಂಟರ್ ಮಟ್ಟದ ಪೀಳಿಗೆಯನ್ನೇ ನಾಳೆಗೂ ಹುಟ್ಟು ಹಾಕುವುದು ತರವೋ? ಸಮ್ಮೇಳನದಲ್ಲಿ ಡಾ. ಅನಂತಮೂರ್ತಿಯವರು ಆಡಿದ ಮುನ್ನಡೆಯ ಮಾತುಗಳು ನಮ್ಮವರ ಕಣ್ತೆರೆಸೀತೆ?

ಹಂಪಿ: ಕನ್ನಡ ವಿಶ್ವವಿದ್ಯಾಲಯದ ನೆಲವೇ ಬೇಕೆಂಬ ಹಟ ಬೇಡ!


ಕರ್ನಾಟಕದ ಬಿಜೆಪಿ ಸರ್ಕಾರ ಇತ್ತೀಚಿಗೆ ಯಾಕೋ ಹಂಪಿಯಲ್ಲಿರೋ ಕನ್ನಡ ವಿಶ್ವವಿದ್ಯಾಲಯದ ನೆಲದ ಮೇಲೆ ಕಣ್ಣು ಹಾಕಿಬಿಟ್ಟಿದೆಯಲ್ಲಾ! ಈಗ ಇದು ವಿಜಯನಗರ ಪುನಶ್ಚೇತನಾ ಪ್ರತಿಷ್ಠಾನ ಎನ್ನೋ ಹೆಸರಿನ ಒಂದು ಟ್ರಸ್ಟಿಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರೋ ಎಂಬತ್ತು ಎಕರೆ ಜಮೀನನ್ನು ಕೊಡಕ್ಕೆ ಮುಂದಾಗಿದೆ. ಈ ಪರಭಾರೆ ಬಗ್ಗೆ ಸಾಕಷ್ಟು ವಿರೋಧಗಳು ಹುಟ್ಟಿದೆ. ಇತ್ತೀಚಿಗೆ ರಾಜ್ಯಪಾಲರು ಕೂಡಾ ಸರ್ಕಾರಕ್ಕೆ ಬೇಡಾ ಅನ್ನೋ ಸಲಹೆ ಸೂಚನೆ ನೀಡಿದ್ದಾರೆ.

ಯಾಕೆ ಈ ಪರಭಾರೆಗೆ ವಿರೋಧ?
1990ನೇ ಇಸವಿಯಲ್ಲಿ ಹಂಪಿಯಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ, ಗುಡ್ಡಗಾಡುಗಳ ನಡುವೆ ಆರಂಭವಾದ ಕನ್ನಡ ವಿಶ್ವವಿದ್ಯಾಲಯ ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಇಲ್ಲಿ ಕಲಿಕೆಗಿಂತ ಹೆಚ್ಚಿನ ಮಹತ್ವವನ್ನು ಅಧ್ಯಯನ, ಸಂಶೋಧನೆಗಳಿಗೆ ಕೊಡಲಾಗಿದ್ದು ನಾಳೆಯ ದಿನಕ್ಕೆ ಉನ್ನತ ಶಿಕ್ಷಣವನ್ನು ಕನ್ನಡದಲ್ಲೇ ತರಬೇಕು ಅನ್ನುವ ಹೊಣೆಯನ್ನೂ ಹೊರಿಸಲಾಗಿದೆ. ಈಗ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರೋ ಜಾಗಾನೆ ಈ ಟ್ರಸ್ಟಿಗೆ ವಹಿಸಬೇಕು ಅಂತಾ ಸರ್ಕಾರ ಯಾಕೆ ಹಟ ಹಿಡಿದಿದೆ? ಅನ್ನೋದು ಯಕ್ಷ ಪ್ರಶ್ನೇನೆ ಆಗಿದೆ. ಮಾನ್ಯ ಮಂತ್ರಿಗಳು ವಿಶ್ವವಿದ್ಯಾಲಯ ಯೋಗ್ಯವಾಗಿ ಕೆಲಸ ಮಾಡ್ತಿಲ್ಲಾ, ಅದ್ಕೇ ಟ್ರಸ್ಟ್ ಮಾಡಿದೀವಿ ಅನ್ನೋ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದು ನಿಜವೇ ಆಗಿದ್ದ ಪಕ್ಷದಲ್ಲಿ ಸರ್ಕಾರ ವಿವಿಯನ್ನು ಹೇಗೆ ಬಲಗೊಳಿಸಬೇಕು ಅಂತಾ ಯೋಚ್ಸಿ ಅದುಕ್ ಬೇಕಾದ ಅನುದಾನ ಮತ್ತು ಜಮೀನುಗಳನ್ನು ಕೊಡಬೇಕೇ ಹೊರತು ಇರೋದನ್ನು ಕಿತ್ತುಕೋಬಾರದು!

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳು!
ಇಷ್ಟುಕ್ಕೂ 800 ಎಕರೆ ಪ್ರದೇಶ ಈ ವಿಶ್ವವಿದ್ಯಾಲಯಕ್ಕೆ ಯಾಕೆ ಬೇಕು ಅನ್ನೋದಾದ್ರೆ ಇದು ನಮ್ಮ ನಾಡಿನ ನಾಳೆಗಳನ್ನು ರೂಪಿಸಬಲ್ಲ ಸಾಮರ್ಥ್ಯ ಇರೋ ಶಕ್ತಿಕೇಂದ್ರ. ಇಲ್ಲಿಂದಲೇ ಕರ್ನಾಟಕದ ಏಳಿಗೆಯ ಬೆಳಕಿರಣಗಳು ಹೊಮ್ಮಬೇಕು. ಆ ಕೆಲಸಗಳು ನಮ್ಮ ನುಡಿಯ ಅಧ್ಯಯನ, ನುಡಿಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್) ನಂತಹ ಮಹತ್ವದ ಕೆಲಸಗಳ ಮೂಲಕ ಆಗಬೇಕು. ಸುಮ್ನೆ ಈ ಕೆಳಗಿನ ಪಟ್ಟಿ ನೋಡಿ:

೧. ಹಳೆಗನ್ನಡ ಮತ್ತು ಹೊಸಗನ್ನಡದ ಕೊಂಡಿಯ ಬಗ್ಗೆ ಅಧ್ಯಯನ.
೨. ನುಡಿಯರಿಮೆ (ಭಾಷಾ ವಿಜ್ಞಾನ).
೩. ಪದ ಟಂಕಸಾಲೆ - ಹೊಸ ಪದಗಳನ್ನು ಕಟ್ಟುವ ವಿಭಾಗ.
೪. ಕನ್ನಡ ಭಾಷಾ ಸ್ವರೂಪ/ ವ್ಯಾಕರಣ ಶಾಸ್ತ್ರದ ಅಧ್ಯಯನ.
೫. ದ್ರಾವಿಡ ಭಾಷೆಗಳ ಜೊತೆ ಕನ್ನಡದ ಸಂಬಂಧದ ಅಧ್ಯಯನ.
೬. ತಂತ್ರಜ್ಞಾನ/ ಉನ್ನತ ಕಲಿಕೆ ತರ್ಜುಮೆ.
೭. ಪಠ್ಯ ಪುಸ್ತಕ ರಚನೆ.
೮. ಕಲಿಕೆ, ಮಾರುಕಟ್ಟೆ, ಗ್ರಾಹಕಸೇವೆ, ಆಡಳಿತಗಳಲ್ಲಿ ಬಳಸಬೇಕಾದ ಭಾಷಾ ಸ್ವರೂಪ.
೯. ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಘಂಟು.
೧೦. ಕನ್ನಡದ ಒಳನುಡಿಗಳ ಅಧ್ಯಯನ.
೧೧. ನುಡಿ ಮತ್ತು ಪ್ರದೇಶಗಳ ಅನುಬಂಧದ ಅಧ್ಯಯನ.
೧೨. ನಾಡಿಗೆ ನುಡಿ ಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್).
೧೩. ವ್ಯವಸಾಯ, ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆಯಂತಹ ಕುಶಲ ಕೆಲಸಗಳ ಅರಿಮೆಯ ದಾಖಲಿಸುವಿಕೆ.
೧೪. ಶಾಸ್ತ್ರೀಯ ಭಾಷೆಯ ಅನುದಾನದ ಸದ್ಬಳಕೆಗೆ ಯೋಜನೆಗಳು.

ಅಬ್ಬಬ್ಬಾ... ಎಷ್ಟೆಲ್ಲಾ ಕೆಲಸಗಳನ್ನು ಮಾಡಬಲ್ಲ ಸಾಧ್ಯತೆ ಅವಕಾಶಗಳು ಇವೆಯಲ್ಲವೇ? ಈ ದಿಕ್ಕಿನಲ್ಲಿ ಸರ್ಕಾರ ಯೋಚಿಸಿದರೆ ಗತವೈಭವದ ನಕಲು ಸೃಷ್ಟಿ ಮಾಡೋಕೆ ಸುರಿದ/ ಸುರಿಯಲು ಮುಂದಾಗಿರುವ ನೂರಾರು ಕೋಟಿ ರೂಪಾಯಿ ಉಳಿಯುತ್ತೆ. ಜನರ ತೆರಿಗೆ ಹಣ ಸದ್ಬಳಕೆ ಆಗುತ್ತೆ. ರಾಜ್ಯ ಸರ್ಕಾರ ನಾಡಿಗೆ ಏನಾದ್ರೂ ಒಳ್ಳೇದು ಮಾಡಬೇಕು ಅಂತಾ ಪ್ರಾಮಾಣಿಕವಾಗಿ ಯೋಚಿಸಿದ್ದಲ್ಲಿ ಇನ್ನೊಂದು ನೂರಿನ್ನೂರು ಎಕರೆ ಭೂಮೀನಾ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಲಿ, ಕನ್ನಡದ ಜನರ ಬದುಕು ಕಟ್ಟಿಕೊಡಬಲ್ಲ ಮೇಲಿನ ಕೆಲಸಗಳಿಗಾಗಿ ಸರಿಯಾಗಿ ಅನುದಾನ ಕೊಡಲಿ, ಕನ್ನಡದ ಕೆಲಸಗಳಿಗಾಗಿ ಯೋಗ್ಯರಾದ ಸಮರ್ಥರಾದ ಸಿಬ್ಬಂದಿಯನ್ನು ನೇಮಿಸಲಿ, ಮಹಾಪಂಡಿತರನ್ನು ಹುಟ್ಟುಹಾಕಲು ಕಾರಣವಾಗಲಿ...

ಹಾಗಾದ್ರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಲ್ಲ ಈ ಪುನಶ್ಚೇತನ, ನಕಲು ನಿರ್ಮಾಣಗಳು, ಥೀಮ್ ಪಾರ್ಕುಗಳು ಬೇಡ್ವಾ ಅಂತೀರಾ? ಆ ಚರ್ಚೆ ಬೇರೆಯಾಗಿ ನಡೆಯಲಿ. ಆದರೆ ಆ ಯೋಜನೆಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಟ್ಟಿರೋ ಭೂಮೀನೇ ಬೇಕು ಅನ್ನೋ ಹಟಾ ಯಾಕೆ? ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡೋದಕ್ಕಾಗಿ ಕನ್ನಡದ ನುಡಿಗುಡಿಯ ಹೊನ್ನಗಂಟೆ ಕೀಳುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಕೈಬಿಡಲಿ.

ಭಾಷಾವಾರು ಪ್ರಾಂತ್ಯ ಮತ್ತು ಭಾರತ!


ಮನುಷ್ಯ ಬದುಕೋಕೆ ತನ್ನ ಸುತ್ತ ಒಂದು ಸಮಾಜ ಕಟ್ಕೊಂಡಿರ್ತಾನೆ ಮತ್ತು ಸಹಕಾರದ ಆಧಾರದ ಮೇಲೇ ಬದುಕು ಸಾಗುಸ್ತಾನೆ. ಆ ಕಾರಣದಿಂದಲೇ ತಾನಿರುವ ಸಮಾಜದಲ್ಲಿ ಕೊಂಡಿಯಂತೆ ಒಗ್ಗಟ್ಟನ್ನು ಇಟ್ಕೊಂಡಿರ್ತಾನೆ. ಈ ಒಗ್ಗಟ್ಟು ಎರಡು ತೆರನಾಗಿದ್ದು ಮೊದಲನೇದು ‘ದೇಶದಲ್ಲಿನ ಒಗ್ಗಟ್ಟು’. ಅಂದರೆ ಆ ಸಮಾಜ ಹರಡಿರೋ ಪ್ರದೇಶದ ಒಟ್ಟೂ ಜನರಲ್ಲಿರುವ ಒಗ್ಗಟ್ಟು ಮತ್ತು ಎರಡನೇದು ‘ಕಾಲದಲ್ಲಿನ ಒಗ್ಗಟ್ಟು’. ಅಂದ್ರೆ ತಲತಲಾಂತರವಾಗಿ ಹರಿದು ಬಂದ/ ಹರಿದು ಸಾಗುವ ಒಗ್ಗಟ್ಟುಗಳಾಗಿರುತ್ತವೆ. ನಾಡೆಂಬುದರಲ್ಲಿ ಒಂದು ಪ್ರದೇಶದ ಸಮಾಜ, ಅದರ ನಂಬಿಕೆಗಳು, ಮನಸ್ಥಿತಿ, ಆಚರಣೆ, ವಿಚಾರ ಮಾಡೋ ವಿಧಾನಗಳು, ಅದರಲ್ಲಿನ ಸಹಕಾರಗಳೆಲ್ಲಾ ಅಡಕವಾಗಿರುತ್ತವೆ. ಇದೇ ಒಂದು ನಾಡಿನ ಒಳಗಿರೋ ಸಹಜವಾದ ನಿಜ ಸ್ವರೂಪ. ಒಂದು ಸಮಾಜ ತನ್ನೊಳಗೆ ಮಾಡಿಕೊಂಡಿರುವ ಕಟ್ಟುಪಾಡುಗಳು, ಕಲಿಕೆಗೆ ದುಡಿಮೆಗೆ ರೂಪಿಸಿಕೊಳ್ಳುವ ವ್ಯವಸ್ಥೆಗಳೆಲ್ಲಾ ಆ ಪ್ರದೇಶದ ಹಣೆಬರಹಾನ ಬರೆದಿಡುತ್ತೆ. ನಾಗರೀಕತೆ ಬೆಳೆದಂತೆಲ್ಲಾ ಇಂಥಾ ವ್ಯವಸ್ಥೆಗಳೂ ಆಧುನಿಕವಾಗುತ್ತಾ ಬಂದಿವೆ ಮತ್ತು ಇವುಗಳಲ್ಲಿ ಎಲ್ಲಾ ದೇಶಗಳಿಗೂ, ಸಮಾಜಗಳಿಗೂ ಅನ್ವಯವಾಗೋ ಅನೇಕ ಸಮಾನ ಅಂಶಗಳು ರೂಪುಗೊಂಡಿವೆ.

ಭಾಷೆ ಮತ್ತು ಸಮಾಜ

ಒಂದು ಸಮಾಜದ ಅಡಿಗಲ್ಲೇ ಸಹಕಾರವಾಗಿರುವಾಗ, ಅಂತಹ ಸಹಕಾರಕ್ಕೆ ಪ್ರಮುಖ ಸಾಧನವಾಗೋದು ಜನರ ನಡುವಿನ ಸಂವಹನ ಮತ್ತು ಹೆಚ್ಚಿನೆಡೆಗಳಲ್ಲಿ ಸಂವಹನದ ಸಾಧನವಾದ ಆ ಜನರಾಡುವ ನುಡಿ. ಹೌದೂ... ಭಾಷೆ ಸಮಾಜದ ಸಂಪರ್ಕ ಮಾಧ್ಯಮ ಮಾತ್ರಾ ಅಲ್ಲ, ಅದು ಸಹಕಾರದ ಮಾಧ್ಯಮ. ಇದೇ ಒಂದು ಭಾಷೆಗಿರುವ ಪ್ರಾಮುಖ್ಯ. ಒಂದು ಪ್ರದೇಶದ ಏಳಿಗೆಗೆ ಅಥವಾ ಹಿಂಬೀಳುವಿಕೆಗೆ ಆ ಪ್ರದೇಶದ ಜನರು ತಮ್ಮ ನುಡಿಗೆ ತಮ್ಮ ಸಮಾಜದಲ್ಲಿ ಯಾವ ಸ್ಥಾನ ಕೊಟ್ಟುಕೊಂಡಿದ್ದಾರೆಂಬುದು ಮಹತ್ವದ ಕಾರಣವಾಗಿರುತ್ತದೆ. ಒಂದು ಪ್ರದೇಶದಲ್ಲಿನ ಜನತೆ ಸಹಜವಾಗಿಯೇ ತಮ್ಮ ನುಡಿಗಳಲ್ಲಿ ಕಲಿಕೆ, ಆಡಳಿತ, ದುಡಿಮೆಯೇ ಮೊದಲಾದ ಪ್ರತಿಯೊಂದು ಕೆಲಸವನ್ನು ಮಾಡಿಕೊಳ್ಳುವುದು ಸರಿಯಾದ ಮತ್ತು ಸಹಜವಾದ ವಿಧಾನ. ಇದೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವ ತತ್ವ. ಇನ್ನೊಂದು ಮಹತ್ವದ ವಿಷಯವೂ ಇದೆ. ಅದೆಂದರೆ ಭೌಗೋಳಿಕವಾಗಿ ಒಂದು ಪ್ರದೇಶ ದೊಡ್ಡದಾಗಿದ್ದು... ಆ ಪ್ರದೇಶದ ಜನಸಂಖ್ಯೆಯು ಹೆಚ್ಚಾಗಿರುವುದು ಬಲದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಿರುವುದೇನೋ ಸರಿಯೇ. ಆದರೆ ಇಂತಹ ದೊಡ್ಡ ಪ್ರದೇಶದ ಅಸ್ತಿತ್ವ ಸಹಜವೋ, ರೂಪಿತವೋ ಅನ್ನುವುದು ಗಮನಿಸಬೇಕಾದ ಅಂಶ. ಒಂದು ದೇಶದ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯು, ಆ ಪ್ರದೇಶದಲ್ಲಿ ವಾಸಿಸುವ ವಿಭಿನ್ನ ಜನಾಂಗಗಳ ಕಲಸು ಮೇಲೋಗರವಾದರೆ ಏನಾಗುವುದು? ಹೀಗೆ ಭಿನ್ನ ಜನಾಂಗಗಳ ನಡುವೆ ಒಗ್ಗಟ್ಟು ಮೂಡಿಸಬೇಕಾದಾಗ ಸಹಜವಾಗಿರುವ ಸಾಮಾನ್ಯ ವಿಷಯವನ್ನು ಆಧಾರವಾಗಿಸಿಕೊಳ್ಳದೇ, ಇಲ್ಲದ ಸಮಾನತೆಯನ್ನು ಹೇರುವುದನ್ನು ಮಾಡುವುದು ಆ ಪ್ರದೇಶದ ಒಗ್ಗಟ್ಟಿಗೆ ದೀರ್ಘಾವಧಿಯಲ್ಲಿ ಮಾರಕವೇ ಆಗಿದೆ. ಬಲ ತೋರಿಕೆಗಾಗಿ ಅಸಹಜವಾದ ಒಗ್ಗಟ್ಟು ರೂಪಿಸಲು ಮಾಡುವ ಪ್ರಯೋಗಗಳು ಅಂತಹ ನಾಡುಗಳ ಒಳಗಣ ಒಗ್ಗಟ್ಟು ಮುರಿಯುವ ಸಾಧ್ಯತೆಯೇ ಹೆಚ್ಚು.

ಭಾರತ ಮತ್ತು ಏಕತೆ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದ ಮೇಲೆ ‘ನಾಡು ಅಷ್ಟು ಶತಮಾನಗಳ ಗುಲಾಮಗಿರಿಗೆ ಒಳಗಾಗಿದ್ದೇ ಒಗ್ಗಟ್ಟಿನ ಕೊರತೆಯಿಂದಾಗಿ’ ಎನ್ನುವ ನಂಬಿಕೆಯ ಆಧಾರದ ಮೇಲೆ ದೇಶದಲ್ಲಿ ಒಗ್ಗಟ್ಟು ಸಾಧಿಸಲು ಅನುಸರಿಸಿದ ಕ್ರಮಗಳು ದುರಾದೃಷ್ಟವಶಾತ್ ಎರಡನೇ ಮಾದರಿಯದಾಗಿದ್ದವು. ಈ ಮಾತನ್ನು ಕೊಂಚ ಬದಿಗಿಟ್ಟು ನೋಡಿದರೆ 1947ರ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದ ಕಾರಣವಾಗಿ ಅಧಿಕಾರವನ್ನು ಜನರೆಡೆಗೇ ಒಯ್ಯುವ ವ್ಯವಸ್ಥೆ ರೂಪಿಸಲು ಮುಂದಾಗಲಾಯಿತು. ಹಾಗಾಗಿ ಅನೇಕ ಪ್ರಾಂತ್ಯಗಳನ್ನು ರಚಿಸಬೇಕಾಯ್ತು. ಇಂಥಾ ಪ್ರಾಂತ್ಯಗಳನ್ನು ಯಾವ ಆಧಾರದ ಮೇರೆಗೆ ರೂಪಿಸಬೇಕು? ಎನ್ನುವ ಪ್ರಶ್ನೆಗೆ ಉತ್ತರವಾಗಿ ಕೆಲ ನಾಯಕರು ಭೂಪಟಾನಾ ಮುಂದಿಟ್ಟುಕೊಂಡು ಉದ್ದುದ್ದ ಅಡ್ಡಡ್ಡ ಗೆರೆ ಎಳೆದು ಪ್ರಾಂತ್ಯಗಳನ್ನು ಮಾಡೋದೇ ಸರಿ ಎಂದರು. ಅನೇಕರು ಯಾವುದೇ ಒಂದು ಸಮಾಜದ ಆಡಳಿತ, ಕಲಿಕೆ, ದುಡಿಮೆ, ಒಗ್ಗಟ್ಟು ಮತ್ತು ಏಳಿಗೆಗಳ ಸಹಜ ಸೂತ್ರವಾದ ಭಾಷೆಯ ಆಧಾರದ ಮೇಲೆ ಇಂತಹ ಪ್ರಾಂತ್ಯಗಳನ್ನು ರೂಪಿಸುವುದು ಸರಿಯೆಂದರು. ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡಾ ಈ ನಿಲುವನ್ನೇ ಹೊಂದಿತ್ತು. ಆದರೆ ಇದನ್ನು ಜಾರಿ ಮಾಡಲು ಸರ್ಕಾರ ಮೀನ ಮೇಷಾ ಎಣಿಸುತ್ತಿದ್ದಾಗ, 1952ರಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ರಚನೆಗೆ ಒತ್ತಾಯಿಸಲಾಯಿತು. ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಚೆನ್ನೈನ ಪೊಟ್ಟಿ ಶ್ರೀರಾಮುಲು (ಅಮರಜೀವಿ ಶ್ರೀರಾಮುಲು) 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದರು. ಕೊನೆಗೆ ಡಿಸೆಂಬರ್ 15ರ ನಡುರಾತ್ರಿಯಲ್ಲಿ ಮರಣಹೊಂದಿದರು. ಇದಾದ ನಂತರ ಭಾರತದ ಮೊಟ್ಟ ಮೊದಲ ಭಾಷಾವಾರು ಪ್ರಾಂತ್ಯವಾಗಿ ಆಂಧ್ರಪ್ರದೇಶ ಹುಟ್ಟಿಕೊಂಡಿತು. ಮೂರು ವರ್ಷಗಳಾದ ಮೇಲೆ ರಾಜ್ಯಗಳ ಪುನರ್ವಿಂಗಡನಾ ಸಮಿತಿಯ ವರದಿಯ ಆಧಾರದ ಮೇಲೆ ತೆಲಂಗಣಾ ಪ್ರದೇಶ ಆಂಧ್ರವನ್ನು ಸೇರಿಕೊಂಡಿತು. ಆಗಲೇ ನಮ್ಮ ನಾಡಿನಲ್ಲೂ ಐವತ್ತು ವರ್ಷಕ್ಕೂ ಹಿಂದಿನಿಂದ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳವಳಿ ಫಲ ನೀಡಿ ಕರ್ನಾಟಕ ರಾಜ್ಯ ನಿರ್ಮಾಣವಾಯ್ತು. ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವುದರ ಹಿಂದಿರುವ ಉದ್ದೇಶವೇ ಭಾಷಾವಾರು ರಾಜ್ಯಗಳ ಸರ್ವತೋಮುಖ ಏಳಿಗೆಯಾಗಲಿ, ಆ ಮೂಲಕ ಭಾರತದ ಏಳಿಗೆಯಾಗಲೀ ಎಂಬುದೇ ಆಗಿದೆ. ಇದನ್ನು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ಹೇಳಿದ್ದಾರೆ - "ಬಹುಭಾಷಿಕ ರಾಜ್ಯಗಳಾದರೆ, ಅಂದ್ರೆ ಭಾಷಾವಾರು ರಾಜ್ಯಗಳಾಗದೇ ಹೋದರೆ ಭಾರತ ಒಡೆದು ಹೋದೀತು". ಸರಿಯಾದ ಮಾತಲ್ವಾ ಗುರೂ!!

ಬೆಂಗಳೂರಲ್ಲಿ ದೀವಟ್ರಾನಳ್ಳಿ ಯಾವ್ದು ಗೊತ್ತಾ?

ಇವತ್ತು ಬೆಂಗಳೂರೆಂಬ ಬೆಂಗಳೂರು ಎಷ್ಟೊಂದು ದೊಡ್ಡದಾಗಿದೆಯಲ್ವಾ? ಈ ಬೆಂಗಳೂರಲ್ಲಿ ದೀವಟ್ರಾನಹಳ್ಳಿ ಯಾವ್ದು ಗೊತ್ತಾ ಅಂದ್ರೆ ಹೇಗಪ್ಪಾ ಅಂತಾ ತಲೆ ಕೆರಕೋತಾ ಇದೀರಾ ಗುರು? ಇರಲಿ, ಈ ಹಳ್ಳಿಗೆ ಆ ಹೆಸರು ಹ್ಯಾಗ್ ಬಂತೋ ಮೊದಲು ಹೇಳ್ತೀವಿ ಕೇಳಿ.

ಸ್ವಾಮಿಭಕ್ತಿಗೆ ಒಲಿದ ಒಡೆಯರು!

ಹಿಂದೆ ಅಂದ್ರೆ ಮೈಸೂರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವ್ರು ಆಳ್ತಿದ್ದ ಕಾಲದಲ್ಲಿ, ಮಹಾರಾಜರು ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ರಂತೆ. ಹೀಗೆ ಮಹಾಸ್ವಾಮಿಗಳು ಬರ್ತಾರೆ ಅಂದಾಗ ಬೆಂಗಳೂರಿನ ಹೊರವಲಯದ ಒಂದು ಪ್ರದೇಶದ ಮೂಲಕಾನೆ ಹಾದು ಬರಬೇಕಿತ್ತಂತೆ. ಹಾಗೆ ಅವ್ರು ಬರೋವಾಗ ಪ್ರತೀಸಾರ್ತಿನೂ ರಾಮ ಅನ್ನೋ ಒಬ್ಬ ಹಳ್ಳಿಗ ಗೌರವದಿಂದ ’ದೀವಟಿಗೆ’ ಸಲಾಮು ಮಾಡ್ತಿದ್ನಂತೆ. ಹೀಗೆ ಪ್ರತೀಸಾರಿ ವಿನಯದಿಂದ ಶ್ರದ್ಧೆಯಿಂದ ಮಹಾರಾಜರಿಗೆ ’ದೀವಟಿಗೆ ಸಲಾಮು’ ಸಲ್ಲಿಸುತ್ತಿದ್ದ ಅವನಿಗೆ ಅಲ್ಲೇ ಹತ್ತಿರದಲ್ಲಿ ಮನೆ ಕಟ್ಕೊಳಕ್ ಅವಕಾಶ ಮಾಡಿಕೊಟ್ರಂತೆ. ರಾಮ ಗುಡಿಸಲು ಕಟ್ಕೊಂಡ. ಅವನ ಗುಡುಸ್ಲು ಸುತ್ತಾ ಮನೆಗಳಾಗಿ ಆ ಬಡಾವಣೆ ’ದೀವಟಿಗೆ ರಾಮನಹಳ್ಳಿ’ ಆಯ್ತಂತೆ. ಮುಂದೆ ಅದು ದೀವಟ್ರಾಮನ ಹಳ್ಳಿ ಆಗಿ ಆಮೇಲಿಂದ ದೀವಟ್ರಾನ ಹಳ್ಳಿ ಆಯ್ತಂತೆ. ಇವತ್ತಿಗೂ ಆ ಬಡಾವಣೆಯಲ್ಲಿರೋ ಹಿರಿಯರ ಬಾಯಲ್ಲದು ’ದಿವಟ್ರಾನಹಳ್ಳೀ’ನೆ. ಯಾವುದಪ್ಪಾ ಈ ಏರಿಯಾ? ಯಾವುದೇ ಶಾಸನ, ತಾಮ್ರಪತ್ರ ಅಥವಾ ಇತರೆ ದಾಖಲೆಗಳಲ್ಲಿ ದೀವಟಿಗೆ ರಾಮನಿಗೆ ರಾಜರು ನಿವೇಶನ ನೀಡಿದ ದಾಖಲೆ ಇರದಿದ್ದರೂ ಆ ಪ್ರದೇಶ ಆ ಹೆಸರು, ಹೆಸರಿನ ದಂತಕತೆ ಇತಿಹಾಸವನ್ನು ಉಳಿಸಿಕೊಂಡು ಬಂತು. ಆದರೆ ಇವತ್ತಿನ ದಿನ ಆ ಜಾಗಾನಾ ದೀವಟ್ರಾನಳ್ಳಿ ಅಂತನ್ನಲ್ಲಾ... ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರೋ ಬಿ.ಎಚ್.ಇ.ಎಲ್ ಸಮೀಪದ ದೀಪಾಂಜಲಿ ನಗರವೇ ಈ ದೀವಟ್ರಾನಳ್ಳಿ.
( ಈ ಮಾಹಿತಿ ಡಾ. ಎಂ.ಚಿದಾನಂದಮೂರ್ತಿಗಳ "ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ" ಎಂಬ ಹೊತ್ತಿಗೆಯಲ್ಲಿದೆ)

ಹೆಸರುಗಳ ಬದಲಾವಣೆ ಇತಿಹಾಸಕ್ಕೆ ಅಪಚಾರ?

ಪ್ರತಿ ಪ್ರದೇಶಕ್ಕೂ ಅದು ದಾಖಲಾಗಿರಲಿ ಇಲ್ಲದಿರಲಿ ಅದಕ್ಕೊಂದು ಇತಿಹಾಸವಿರುತ್ತದೆ, ಸೊಗಡಿರುತ್ತದೆ. ದೀವಟ್ರಾಮನಳ್ಳಿ ದೀಪಾಂಜಲಿನಗರವಾಗೋದೂ, ಸೂಳೆಕೆರೆ ಶಾಂತಿಸಾಗರವಾಗೋದೂ, ಮೇಟಗಳ್ಳಿ ಮಥುರಾನಗರವಾಗೋದೂ, ಬ್ಯಾಡರಹಳ್ಳಿ ಬೃಂದಾವನನಗರವಾಗೋದೂ, ಚಿಕ್ಕಬಳ್ಳಾಪುರ ವಿಶ್ವೇಶ್ವರಯ್ಯ ಜಿಲ್ಲೆ ಆಗೋದೂ, ಕೋತಿಬಂಡೆ ಮಾರುತಿ ಮಂದಿರವಾಗೋದೂ, ಆನೆಪಾಳ್ಯ ಗಜೇಂದ್ರನಗರವಾಗೋದೂ ನಮ್ಮ ಇತಿಹಾಸಕ್ಕೆ ನಾವೆಸಗೋ ಅಪಚಾರ ಅಲ್ವಾ ಗುರು?

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೮: ಸರಣಿಯ ಸಾರಾಂಶ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ಕಳೆದ ಹದಿನೈದು ದಿನಗಳಿಂದ ಇಡುತ್ತ ಬಂದಿದೆ. ಈ ಕಡೆಯ ಬರಹದಲ್ಲಿ ಸರಣಿಯ ಸಾರಾಂಶವನ್ನು ಕೊಟ್ಟಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ / ಕೆಲಸಗಳನ್ನು ಮಾಡಲು ಆಸೆಯಿರುವವರು ನಮಗೊಮ್ಮೆ ಮಿಂಚಿಸಿ.

-- ಸಂಪಾದಕ, ಏನ್ ಗುರು

ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಅದರ ಜನರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳು ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿರುತ್ತವೆ. ಆದ್ದರಿಂದ ಇವುಗಳನ್ನು ಏಳಿಗೆಯ ಮೂರು ಕಂಬಗಳೆಂದು ಕರೆಯಬಹುದು. ಇವುಗಳನ್ನು ಭದ್ರವಾಗಿ ನಿಲ್ಲಿಸದೆ ಹೋದರೆ ಯಾವ ಜನಾಂಗವೂ ಏಳಿಗೆಹೊಂದಲು ಸಾಧ್ಯವಿಲ್ಲ. ಇವುಗಳನ್ನು ನಿಲ್ಲಿಸದೆ ಹೋದ ಜನಾಂಗಗಳು ಇತಿಹಾಸದಲ್ಲಿ ಕುಸಿದುಬಿದ್ದಿವೆ. ಇವತ್ತಿನ ದಿವಸ ಕನ್ನಡಿಗರು ಕಲಿಕೆ, ದುಡಿಮೆ ಮತ್ತು ಒಗ್ಗಟ್ಟು - ಈ ಮೂರರಲ್ಲೂ ಬಹಳ ಹಿಂದಿದ್ದಾರೆ. ಈ ಮೂರು ಕಂಬಗಳನ್ನು ಕನ್ನಡದಿಂದಲೇ ಕಟ್ಟಲಾಗುವುದು. ಕನ್ನಡಿಗರೆಲ್ಲರ ಕಲಿಕೆಯನ್ನು ಕನ್ನಡವಲ್ಲದ ಬೇರೆಯೊಂದು ನುಡಿಯಲ್ಲಿ ಸಾಧಿಸಲಾಗುವುದಿಲ್ಲ. ಕನ್ನಡಿಗರೆಲ್ಲರ ದುಡಿಮೆಯ ನುಡಿಯೂ ಕನ್ನಡವಲ್ಲದೆ ಬೇರೊಂದು ನುಡಿಯಾಗಲಾರದು. ಕನ್ನಡಿಗರೆಲ್ಲರನ್ನೂ ಒಗ್ಗೂಡಿಸುವುದು ಕನ್ನಡವೊಂದೇ.

ಕನ್ನಡಕ್ಕೆ ಇಷ್ಟೆಲ್ಲ ಮಹತ್ವವಿರುವುದರಿಂದ ಅದರ ಸ್ವರೂಪವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ಎಂತಹ ನಂಟಿದೆಯೆಂಬುದರ ಬಗ್ಗೆ ಕನ್ನಡಿಗರಲ್ಲೇ ಸಾಕಷ್ಟು ತಪ್ಪು ತಿಳುವಳಿಕೆಯಿದೆ. ಕನ್ನಡವು ಸಂಸ್ಕೃತದಿಂದ ಹುಟ್ಟಿಬಂದ ನುಡಿಯೆಂಬ ತಪ್ಪು ತಿಳುವಳಿಕೆಯಿದೆ. ಸಾಮಾನ್ಯವಾಗಿ ಜನರು ಆಡುವ ಕನ್ನಡವು ಕೀಳುಮಟ್ಟದ್ದೆಂದೂ ಸಂಸ್ಕೃತದ ಪದಗಳಿಂದ ತುಂಬಿದ್ದರೆ ಮಾತ್ರ ಅದು ಒಳ್ಳೆಯ ಕನ್ನಡವೆಂದೂ ಜನರಲ್ಲಿ ತಪ್ಪು ತಿಳುವಳಿಕೆಯಿದೆ.

ಇದರಿಂದ ಕನ್ನಡಿಗರಲ್ಲಿ ಮೇಲು-ಕೀಳು ಮನೋಭಾವನೆಯೇ ಮೊದಲಾದ ತೊಂದರೆಗಳು ಹುಟ್ಟಿಕೊಂಡುಬಿಟ್ಟಿವೆ. ಆದ್ದರಿಂದ ಎಲ್ಲಾದರೂ ಎಂತಾದರೂ ಇರುವ ಕನ್ನಡಿಗರು ಇವತ್ತಿನ ದಿವಸ ಆಡುತ್ತಿರುವ ನುಡಿಯೇ ಕನ್ನಡವೆಂದು ಕಾಣಬೇಕಾದ್ದು ನುಡಿಯರಿಮೆಯ ನಿಟ್ಟಿನಿಂದಲೂ ಕನ್ನಡಿಗರಲ್ಲಿರುವ ಸಾಮಾಜಿಕ ತೊಂದರೆಗಳ ಹೋಗಲಾಡಿಸುವಿಕೆಯ ನಿಟ್ಟಿನಿಂದಲೂ ಬಹಳ ಮುಖ್ಯ. ಈ ಮೂಲಕ ಕನ್ನಡಿಗರ ಕಲಿಕೆ ಮತ್ತು ದುಡಿಮೆಗಳು ಹೆಚ್ಚುತ್ತವೆ, ಮತ್ತು ಕನ್ನಡಿಗರ ಒಗ್ಗಟ್ಟೂ ಹೆಚ್ಚುತ್ತದೆ.

ಹಿಂದೆ ಸಂಸ್ಕೃತದ ಪದಗಳನ್ನು ಎಡೆತಡೆಗಳಿಲ್ಲದೆ ಕನ್ನಡದ ಬರಹಗಳಿಗೆ ಮತ್ತು ತಿಳುವಳಿಕಸ್ತರ ಆಡುನುಡಿಗೆ ಸೇರಿಸಿಕೊಂಡ ಕಾಲಕ್ಕೂ ಈಗಿನ ಕಾಲಕ್ಕೂ ಅನೇಕ ಸಾಮಾಜಿಕ ಬದಲಾವಣೆಗಳಾಗಿವೆ. ಉದಾಹರಣೆಗಾಗಿ ಅಂದು ಓದು-ಬರಹಗಳು ನಾಡಿಗರಿಗೆಲ್ಲ ಬರಬೇಕೆಂಬುದೇ ಇರಲಿಲ್ಲ. ಬೆರಳೆಣಿಕೆಯ ಕೆಲವರಿಗೆ ಓದು-ಬರಹ ಬಂದಿದ್ದರೆ ಸಾಕಾಗಿತ್ತು. ಆದರೆ ಈಗ ಹಾಗಿಲ್ಲ. ಇವತ್ತಿನ ದಿವಸ ಜುಟ್ಟಿಗೆ ಮಲ್ಲಿಗೆ ಹೂವಿಗಿಂತ ಹೊಟ್ಟೆಗೆ ಹಿಟ್ಟಿನ ಮಹತ್ವ ಹೆಚ್ಚಿದೆ. ಇವತ್ತಿನ ದಿವಸ ಧರ್ಮ-ಮೋಕ್ಷಗಳಿಗಿಂತ ಅರ್ಥ-ಕಾಮಗಳ ವಿದ್ಯೆಗಳ ಬೇಕಾಗುವಿಕೆ ಹೆಚ್ಚಿದೆ. ಆದ್ದರಿಂದ ಈಗ "ಎಲ್ಲರ ಕನ್ನಡ"ಕ್ಕೆ ಸಂಸ್ಕೃತಮಯವಾದ ಕನ್ನಡಕ್ಕಿಂತ ಬಹಳ ಹೆಚ್ಚಿನ ಮಹತ್ವವಿದೆ.

ಹಿಂದೆ ಬರಹದ ಉದ್ದೇಶವೇ ಬೇರೆಯಿತ್ತು. ಬರೆದಿದ್ದನ್ನು ಇಡೀ ಕನ್ನಡಜನಾಂಗವೇ ಓದಲಿ ಎಂಬ ಉದ್ದೇಶವೇ ಬರಹಕ್ಕಿರಲಿಲ್ಲ. ಆದರೆ ಈಗ ಇಡೀ ನಾಡೇ ಓದಬೇಕಾದಂಥದ್ದೆಲ್ಲ ಬರಹದ ರೂಪದಲ್ಲಿ ಬರುತ್ತಿದೆ. ಮುಂದೆ ಹೋಗುತ್ತ ಇಂಥವು ಇನ್ನೂ ಹೆಚ್ಚುತ್ತವೆ, ಹೆಚ್ಚಬೇಕು. ಆದ್ದರಿಂದ ಸಂಸ್ಕೃತವೆಂಬ ಗ್ರಾಂಥಿಕ ಭಾಷೆಯಿಂದ ಪ್ರೇರಣೆಯನ್ನು ಪಡೆದು ಜನರಿಗೆ ಉಲಿಯಲಾರದ್ದನ್ನೆಲ್ಲ, ಅರ್ಥವಾಗದ್ದನ್ನೆಲ್ಲ ಸಂಸ್ಕೃತದ ಪದಗಳೆಂಬ ಕಾರಣಕ್ಕೆ ಬರಹಕ್ಕೆ ಸೇರಿಸಿಕೊಂಡರೆ ಬದಲಾದ ಬರಹದ ಉದ್ದೇಶವು ಈಡೇರಿದಂತಾಗುವುದಿಲ್ಲ. ಅದರ ಬದಲಾಗಿ ಜನರಿಗೆ ಉಲಿಯಲಾಗುವ ಮತ್ತು ಸುಲಭವಾಗಿ ಅರ್ಥವಾಗುವ ಕನ್ನಡದ ಪದಗಳನ್ನು ಬಳಸುವುದೇ ಜಾಣತನ.

ಯಾವುದೇ ಜನಾಂಗದವರ ನಾಲಿಗೆಯಲ್ಲಿ ಓಡಾಡುವ ಪದಗಳು ಅವರ ಏಳಿಗೆ ಮತ್ತು ಏಳಿಗೆಯ ಹರವು - ಎಂಬಿವೆರಡರ ಗುರುತು. ಕನ್ನಡದ ಪದಗಳೆಂದರೆ ಯಾವುವು ಎಂಬ ವಿಷಯದಲ್ಲಿ ಅನೇಕರಿಗೆ ಗೊಂದಲವಿದೆ. ಆ ಗೊಂದಲದ ನಿವಾರಣೆಯನ್ನು ನಾವು ಈ ಸರಣಿಯಲ್ಲಿ ಮಾಡಿಸಿರುತ್ತೇವೆ. ಮುಖ್ಯವಾಗಿ ಹಿಂದಿನವರಿಗೂ ನಮಗೂ ಈ ವಿಷಯವಾಗಿ ಇರುವ ವ್ಯತ್ಯಾಸವೇನೆಂದರೆ ಹಿಂದಿನವರು ಕನ್ನಡದಲ್ಲಿ ಹುಟ್ಟಿಸಿದ ಹೊಸ ಪದಗಳು ಕನ್ನಡಿಗರಿಗೆ ಉಲಿಯಲಾಗಬೇಕು, ಅವರು ಉಲಿಯಬೇಕು ಎಂಬುದನ್ನೇ ಮರೆತಿರುವುದು, ಮತ್ತು ನಾವದನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ಆಗಿದೆ. ಎಂದರೆ - ಕನ್ನಡಿಗರು ಹಿಂದೆ ಉಲಿದಿದ್ದು, ಇಂದು ಉಲಿಯುತ್ತಿರುವುದು ಮತ್ತು ಮುಂದೆ ಉಲಿಯುವುದು - ಇವುಗಳನ್ನೇ ಕನ್ನಡದ ಪದಗಳೆನ್ನಲಾಗುವುದು. ಈ ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗದ ಪದಗಳು ಕನ್ನಡದ ಪದಗಳೆಂದು ಎಣಿಸಲಾಗುವುದಿಲ್ಲ. ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗುವ ಪದಗಳೆಂಥವು ಎಂದು ನಾವು ಈ ಸರಣಿಯಲ್ಲಿ ನಮ್ಮ ಕೈಲಾದಷ್ಟು ತೋರಿಸಿಕೊಟ್ಟಿದ್ದೇವೆ.

ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಸಂಸ್ಕೃತದ ಸೊಲ್ಲರಿಮೆಯ ಅಪಭ್ರಂಶವೆಂಬಂತೆ ಹಿಂದೆ ಸೊಲ್ಲರಿಗರು ತಪ್ಪಾಗಿ ಕಂಡಿದ್ದಾರೆ. ಇದರಿಂದ ಕನ್ನಡದ ನಿಜವಾದ ಸೊಲ್ಲರಿಮೆಗಳೇ ಹೊರಬಂದಿಲ್ಲವೆನ್ನುವ ಕಟು ಸತ್ಯವನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ. ಹೀಗಿರುವುದರಿಂದ ಕನ್ನಡವನ್ನು ಕಲಿಯುವುದು ಮತ್ತು ಕಲಿಸುವುದು ಮುಂತಾದ ಕಡೆ ಬಹಳ ತೊಡಕುಂಟಾಗಿವೆ. ಇದೇ ಮುಂತಾದ ಅನೇಕ ತೊಂದರೆಗಳನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ, ಮತ್ತು ಈ ತೊಂದರೆಗಳನ್ನೆಲ್ಲ ಹೋಗಲಾಡಿಸಬಲ್ಲ ಒಂದು ನಿಜವಾದ ಕನ್ನಡದ ಸೊಲ್ಲರಿಮೆಯ ಬೇಕಿರುವಿಕೆ ಎಷ್ಟಿದೆಯೆಂದು ವಾದಿಸಿದ್ದೇವೆ. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರ ಸಂಶೋಧನೆಗಳು ಮತ್ತು ಹೊತ್ತಗೆಗಳು ಎಷ್ಟು ವೈಜ್ಞಾನಿಕವಾಗಿವೆ, ಮತ್ತು ಈ ತೊಂದರೆಗಳನ್ನು ಹೋಗಲಾಡಿಸುವಲ್ಲಿ ಎಷ್ಟು ಮುಖ್ಯವಾದ ಪಾತ್ರವನ್ನು ಹೊತ್ತಿವೆಯೆಂದು ಕೂಡ ವಾದಿಸಿದ್ದೇವೆ.

ಇವತ್ತಿನ ದಿವಸ ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ಬಯಸುವವರಿಗೆ ಇಂಗ್ಲೀಷ್ ನುಡಿಯು ಬಹಳ ನೆರವು ನೀಡಿದೆ. ಆದರೆ ಕನ್ನಡಿಗರ ಏಳಿಗೆಯಲ್ಲಿ ಇಂಗ್ಲೀಷಿನ ನಿಜವಾದ ಪಾತ್ರವೇನು ಎಂಬ ವಿಷಯದಲ್ಲಿ ಜನರಿಗೆ ಬಹಳ ಗೊಂದಲವಿದೆ. ಆ ಗೊಂದಲವನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಿದ್ದೇವೆ. ಕನ್ನಡಿಗರೆಲ್ಲ ಇಂಗ್ಲೀಷಿನಿಂದ ಅರ್ಥ-ಕಾಮಗಳನ್ನು ಪಡೆದುಕೊಳ್ಳುತ್ತಾರೆ ಎಂಬ ತಪ್ಪು ತಿಳುವಳಿಕೆಯು ಹೋಗಬೇಕಿದೆ (ಇದೇ ತಪ್ಪನ್ನು ಇಂದು ಕೂಡ ಸಂಸ್ಕೃತದ ವಿಷಯದಲ್ಲಿ ಜನರು ಮಾಡುತ್ತಾರೆ). ಅದರ ಬದಲಾಗಿ ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆದುಕೊಂಡು ಬಿಡಬೇಕಾದ್ದನ್ನು ಬಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಇಂಗ್ಲೀಷು ಇವತ್ತಿನ ದಿವಸ ಪ್ರಪಂಚದಲ್ಲಿ ಪಡೆದುಕೊಂಡಿರುವ ಸ್ಥಾನವನ್ನು ಕನ್ನಡವು ಪಡೆದುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ" ಕನ್ನಡಿಗರಲ್ಲಿ ಹುಟ್ಟಬೇಕಿದೆ. ಈ ಆಸೆಯು ಈಡೇರದಿದ್ದರೂ ಆ ನಿಟ್ಟಿನಲ್ಲಿ ಆಗುವ ಕೆಲಸದಿಂದ ನಾಡಿನ ಏಳಿಗೆಯಾಗುತ್ತದೆ. ಅಷ್ಟೇ ಅಲ್ಲದೆ, ಕನ್ನಡಕ್ಕೆ ಆ ಸ್ಥಾನವನ್ನು ಪಡೆದುಕೊಳ್ಳುವ ಯೋಗ್ಯತೆಯೆಲ್ಲ ಇದೆ. ಇಲ್ಲದಿರುವುದು ಕನ್ನಡಿಗರ ಯೋಗ್ಯತೆ ಮಾತ್ರ. ಆ ಯೋಗ್ಯತೆಯನ್ನು ಬರಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಿಗರು ಕೆಲಸ ಮಾಡಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೭: ಏಳಿಗೆಗೆ ಇಂಗ್ಲೀಷನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಳ್ಳಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಹಿಂದೆ ಸಂಸ್ಕೃತವು ಹೇಗೆ ತಿಳುವಳಿಕಸ್ತ ಕನ್ನಡಿಗರ ಧರ್ಮ ಮತ್ತು ಮೋಕ್ಷಗಳ ಬೇಡಿಕೆಗಳನ್ನು ಪೂರೈಸಿತ್ತೋ, ಹಾಗೆ ಇಂದು ಇಂಗ್ಲೀಷು ತಿಳುವಳಿಕಸ್ತ ಕನ್ನಡಿಗರ ಅರ್ಥ ಮತ್ತು ಕಾಮಗಳ ಬೇಡಿಕೆಗಳನ್ನು ಪೂರೈಸುತ್ತಿದೆ. ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ತಂದುಕೊಡುವ ವಿದ್ಯೆಗಳು ಕನ್ನಡದಲ್ಲಿ ಇನ್ನೂ ಎಳವೆಯಲ್ಲಿವೆಯೆಂದರೆ ತಪ್ಪಾಗಲಾರದು. ಇವತ್ತಿನ ದಿವಸ ಇಂಗ್ಲೀಷಿನಿಂದ ಕನ್ನಡಿಗರು ಪಡೆದುಕೊಳ್ಳಬೇಕಾದದ್ದು ಬಹಳವಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಪಡೆದುಕೊಳ್ಳಬೇಕಾದ್ದನ್ನು ಪಡೆದುಕೊಂಡು ಬೇಡದ್ದನ್ನು ದೂರವಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಕನ್ನಡದ ದೀಪವನ್ನು ಹಚ್ಚಲು ಹೊರಟಾಗ ಇಂಗ್ಲೀಷಿನ ಗಾಳಿಯು ಬೇಕೇ ಬೇಕು. ಆದರೆ ಇಂಗ್ಲೀಷಿನ ಬಿರುಗಾಳಿ ಬಂದರೆ ಆ ದೀಪ ಆರಿಹೋಗುತ್ತದೆ. ಇಂಗ್ಲೀಷು ಇವತ್ತಿನ ದಿನ ಕನ್ನಡಕ್ಕಿಂತ ಹೆಚ್ಚು ಅನ್ನ ತಂದುಕೊಡುವ ಭಾಷೆಯಾಗಿದೆಯೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಹೀಗೇ ಮುಂದುವರೆದರೆ ಕನ್ನಡಜನಾಂಗಕ್ಕೆ ಏಳಿಗೆಯಿಲ್ಲ. ಕನ್ನಡಜನಾಂಗದ ಭಾಷೆ ಕನ್ನಡವಾಗಿರುವಾಗ ಎಲ್ಲರೂ ಇಂಗ್ಲೀಷಿನಿಂದಲೇ ಅನ್ನವನ್ನು ಗಳಿಸಿಕೊಳ್ಳಲಿ ಎನ್ನುವುದು ಮಾಡಿತೀರಿಸಲಾರದ ಮಾತು.

ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆಯಬೇಕು, ಬಾರದ್ದನ್ನು ಕೈಬಿಡಬೇಕು. ಮಡಿವಂತಿಕೆ ಬೇಡ.

ಕೆಲವರಿಗೆ ಇಂಗ್ಲೀಷು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ವಸಾಹತುಶಾಹಿ ಇಂಗ್ಲೇಂಡಿನ ನುಡಿ. ಆದ್ದರಿಂದ ಅದನ್ನು ನಮ್ಮ ಹತ್ತಿರವೇ ಸೇರಿಸಿಕೊಳ್ಳಬಾರದು ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ಇವತ್ತಿನ ದಿವಸ ಇಂಗ್ಲೀಷಿನಲ್ಲಿರುವಷ್ಟು ಜ್ಞಾನ-ವಿಜ್ಞಾನಗಳು ಪ್ರಪಂಚದ ಯಾವ ನುಡಿಯಲ್ಲೂ ಇಲ್ಲ. ಅದಕ್ಕೆ ಪ್ರಪಂಚದಲ್ಲೆಲ್ಲ ಒಪ್ಪಿಗೆಯೂ ಇದೆ. ಆದ್ದರಿಂದ ಅದನ್ನು ಕನ್ನಡಿಗರೆಲ್ಲ ಕಲಿಯಲೇಬೇಕು. ಇನ್ನೂ ಕೆಲವರಿಗೆ ಇಂಗ್ಲೀಷು ಕನ್ನಡದ ಹಗೆಯೆಂಬ ಅನಿಸಿಕೆಯಿದೆ. ಆದರೆ ಇಂಗ್ಲೀಷು ಕನ್ನಡದ ಹಗೆಯಲ್ಲ. ಇಂಗ್ಲೀಷಿನಿಂದ ನಮಗೆ ಸಿಗಬೇಕಾದದ್ದು ಬಹಳವಿದೆ. ಅದನ್ನು ಕನ್ನಡಿಗರು ಬೇಕಾದಷ್ಟು ಮಾತ್ರ ಬಳಸಿಕೊಂಡು, ಮಿಕ್ಕಿದ್ದನ್ನು ಬಿಡಬೇಕು. ಕನ್ನಡದ ತಿಳುವಳಿಕಸ್ತರಿಗೆ ಇಂಗ್ಲೀಷಿನ ಪದಗಳನ್ನು ಕನ್ನಡಕ್ಕೆ ಸೇರಿಸಿದರೆ ಕನ್ನಡ ಕೆಡುತ್ತದೆ ಎಂಬ ಅನಿಸಿಕೆಯಿದೆ. ಆದರೆ ಈ ಮಡಿವಂತಿಕೆಯ ಅವಶ್ಯಕತೆಯಿಲ್ಲವಷ್ಟೇ ಅಲ್ಲ, ಈ ಮಡಿವಂತಿಕೆಯನ್ನು ಜನರೇ ದೂರಮಾಡಿಕೊಂಡಿದ್ದಾರೆ. ಯಾವ ನುಡಿಯಿಂದ ಬೇಕಾದರೂ ಕನ್ನಡಕ್ಕೆ ಪದಗಳು ಎರವಲು ಬರಬಹುದು. ಎರವಲು ಬಂದ ಪದಗಳು ಕನ್ನಡಜನಾಂಗದ "ನಾಲಿಗೆಯ ಪರೀಕ್ಷೆ"ಯಲ್ಲಿ ಪಾಸಾಗಿ ಅವುಗಳು ಯಾವ ರೂಪವನ್ನು ಪಡೆಯುತ್ತವೋ ಅವೆಲ್ಲ ಕನ್ನಡದ ಪದಗಳೇ.

ಇಂಗ್ಲೀಷನ್ನು ಮುಂದುವರೆದ ಮತ್ತು ಮುಂದುವರೆಯದ ಜನಾಂಗಗಳು ಕಾಣುವ ಬಗೆಯಲ್ಲಿ ಇರುವ ಹೆಚ್ಚು-ಕಡಿಮೆ

ಮುಂದುವರೆದ ಜನಾಂಗಗಳಿಗೂ ಮುಂದುವರೆಯದ (ಇಲ್ಲವೇ ಮುಂದುವರೆಯುತ್ತಿರುವ) ಜನಾಂಗಗಳಿಗೂ ಇಂಗ್ಲೀಷನ್ನು ನೋಡುವ ರೀತಿಯಲ್ಲಿ ಬಹಳ ವ್ಯತ್ಯಾಸಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇವೆ. ಈ ಪಟ್ಟಿಯನ್ನು ಓದುವಾಗ ನಾವು - ಎಂದರೆ ಕನ್ನಡಿಗರು - ಆಯಾ ಸಂದರ್ಭಗಳಲ್ಲಿ ಯಾವ ನಿಲುವನ್ನು ಇಟ್ಟುಕೊಂಡಿದ್ದೇವೆ ಎಂದು ನೀವೇ ಯೋಚನೆ ಮಾಡಿದಾಗ ನಾವು ಮುಂದುವರೆಯದ ಜನಾಂಗಗಳಂತೆ ನಮ್ಮ ನುಡಿಯನ್ನೇ ಕಡೆಗಣಿಸಿ ಇಂಗ್ಲೀಷಿಗೆ ಹಾಕಬಾರದ ಮಣೆಯನ್ನು ಹಾಕುತ್ತಿದ್ದೇವೆ ಎಂಬ ಅರಿವು ನಿಮಗಾಗುತ್ತದೆ. ಇಲ್ಲಿ ನಾವು ಮುಂದುವರೆದ ಜನಾಂಗಗಳೆಂದು ಕರೆದಿರುವುದು ಉದಾಹರಣೆಗೆ ಜಪಾನೀಸರು, ಡಚ್ಚರು, ಫ್ರೆಂಚರು, ಜರ್ಮನ್ನರು, ಇಸರೇಲಿಗಳು, ತೆಂಕಣ ಕೊರಿಯನ್ನರು, ಮುಂತಾದವರು. ಮುಂದುವರೆಯದವೆಂದು ಕರೆದಿರುವ ಜನಾಂಗಗಳಿಗೆ ಉದಾಹರಣೆಗಳು ಎಲ್ಲಾ ಭಾರತೀಯ ನುಡಿಜನಾಂಗಗಳು, ಆಫ್ರಿಕಾದ ನುಡಿಜನಾಂಗಗಳು, ಮುಂತಾದವು.

(ಗಮನಿಸಿ: ಕೆಲವು ಜನಾಂಗದವರಿಗೆ ಇಲ್ಲಿ ಏನನ್ನು ಇಂಗ್ಲೀಷೆಂದು ಕರೆದಿರುವೆವೋ ಅದು ಫ್ರೆಂಚ್, ಡಚ್ ಮುಂತಾದ ಇತರ ಯೂರೋಪಿನ ಭಾಷೆಗಳಾಗಿವೆ)
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಇನ್ನೊಂದು ನುಡಿಜನಾಂಗದವರೊಡನೆ ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ (ಅರಿವಿನ ಹೆಚ್ಚಳಗಳಿಗೆ) ಬಳಸುತ್ತಿವೆ. ಮುಂದುವರೆಯದವು ತಮ್ಮೊಳಗೇ. ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ ಇಡೀ ಜಗತ್ತಿನಲ್ಲೆಲ್ಲ ಇಂಗ್ಲೀಷನ್ನೇ ಬಳಸಿಕೊಳ್ಳಬೇಕೆಂಬ ತಪ್ಪುತಿಳುವಳಿಕೆಯು ಮುಂದುವರೆಯದ ಜನಾಂಗದವರಿಗೆ ಇದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ತಮ್ಮ ನಾಡಿನ ಎಲ್ಲೆಯೊಳಗೆ, ಎಂದರೆ ತಮಗಾಗಿಯೇ ಕಟ್ಟಿರುವ ಯಾವ ಏರ್ಪಾಟುಗಳಲ್ಲೂ ಬಳಸುವುದಿಲ್ಲ. ಮುಂದುವರೆಯದವು ಬಳಸುತ್ತವೆ. ಮುಂದುವರೆದ ಜನಾಂಗಗಳಿಗೆ ಮುಂದುವರಿಕೆಗೂ ತಮ್ಮ ನಾಡಿನ ಏರ್ಪಾಟುಗಳು ತಮ್ಮದೇ ನುಡಿಯಲ್ಲಿರುವುದಕ್ಕೂ ಯಾವ ವಿರೋಧವೂ ಕಾಣಿಸುವುದಿಲ್ಲ; ಇನ್ನೂ ಅದು ಪೂರಕವಾಗಿಯೇ ಕಾಣುತ್ತದೆ.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯನ್ನು ಕೈಬಿಟ್ಟು ಇಂಗ್ಲೀಷನ್ನೇ ತಮ್ಮ ಜನಾಂಗದವರು ಎಲ್ಲಾ ಕೆಲಸಗಳಿಗೂ ಬಳಸಬೇಕು ಎಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯ ಕೈಯಲ್ಲಿ ಏನೂ ಆಗುವುದಿಲ್ಲವೆಂಬ ತಪ್ಪು ತಿಳುವಳಿಕೆಯಿದೆ. ಆದರೆ ನಿಜಕ್ಕೂ ನೋಡಿದರೆ ಆಗುವುದು ಬಿಡುವುದು ನುಡಿಯ ಕೈಯಲ್ಲಲ್ಲ, ಜನರ ಕೈಯಲ್ಲಿ. ಮುಂದುವರೆಯದ ಜನಾಂಗದ ಜನರ ಕೈಯಲ್ಲಿ ಕೆಲಸವಾಗಿದ್ದರೆ ಆಗ ಅವರ ನುಡಿಯೇ ಎಲ್ಲಾ ಕೆಲಸಗಳಿಗೂ ಬಳಸಲ್ಪಡುತ್ತಿತ್ತು.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯಲ್ಲಿ ಜ್ಞಾನ-ವಿಜ್ಞಾನಗಳ ಅರಿವೆಚ್ಚಳಗಳಿಗೆ ಬಳಸಲು ಸಾಧ್ಯವಿಲ್ಲವೆಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಈ ಜ್ಞಾನ-ವಿಜ್ಞಾನಗಳಿಗಂತೂ ತಮ್ಮ ನುಡಿಯು ಹೇಳಿ ಮಾಡಿಸಿಲ್ಲವೆಂದೂ ಇಂಗ್ಲೀಷನ್ನು ಹೇಳಿ ಮಾಡಿಸಿದೆಯೆಂದೂ ಇವುಗಳು ತಿಳಿದಿವೆ. ಇದು ಬರೀ ತಪ್ಪು.
  • ಮುಂದುವರೆದ ಜನಾಂಗಗಳು ಬೇರೆ ನುಡಿಜನಾಂಗಗಳೊಡನೆಯೂ ಮೊದಲು ತಮ್ಮ ನುಡಿಯಲ್ಲೇ ವ್ಯವಹರಿಸಲು ಹೊರಡುತ್ತವೆ. ಮುಂದುವರೆಯದವು ಇಂಗ್ಲೀಷಿನಲ್ಲಿ. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಎಲ್ಲೆಲ್ಲೂ ಬಳಸಿ ಅಭ್ಯಾಸವಾಗಿಹೋಗಿರುತ್ತದೆ. ಆದ್ದರಿಂದ ಇನ್ನೊಬ್ಬರೊಡನೆ ಮಾತನಾಡುವಾಗಲೂ ಮೊದಲಿಗೆ ತಮ್ಮ ನುಡಿಯನ್ನೇ ಬಳಸಲು ಮುಂದಾಗುತ್ತವೆ. ಆದರೆ ಮುಂದುವರೆಯದವಕ್ಕೆ ಬೇರೆ ಜನಾಂಗದವರೊಡನೆ ಮಾತನಾಡಿದಾಗೆಲ್ಲ ಇಂಗ್ಲೀಷನ್ನೇ ಬಳಸಬೇಕು, ಇಲ್ಲದಿದ್ದರೆ ತಮ್ಮನ್ನು ಕೀಳಾಗಿ ಅವರು ಕಂಡಾರು ಎಂಬ ಆಧಾರವಿಲ್ಲದ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷಿನಲ್ಲಿರುವ ಒಳ್ಳೆಯದನ್ನು ಬಳಸಿಕೊಂಡು ತಮಗೆ ಹಾನಿಯಾಗುವುದನ್ನು ಬಿಡುತ್ತಾರೆ. ಮುಂದುವರೆಯದವು ಹಾನಿಯಾಗುವುದನ್ನೇ ಹೆಚ್ಚು ತೆಗೆದುಕೊಳ್ಳುತ್ತವೆ. ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಮಹತ್ವ ಚೆನ್ನಾಗಿ ಗೊತ್ತಿದೆ. ಅದರಿಂದ ಸಿಗಬೇಕಾದ್ದೇನು ಎನ್ನುವುದು ಚೆನ್ನಾಗಿ ಗೊತ್ತಿದೆ. ಅದರಿಂದ ಏನನ್ನು ಒಳಕ್ಕೆ ಸೇರಿಸಿಕೊಳ್ಳಬಾರದು ಎಂದೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವುಗಳಿಗೆ ಈ ವಿಷಯದಲ್ಲಿ ನಿಧಾನವಾಗಿ ಅಳತೆ ಮಾಡಿ ಬೇಕಾದ್ದನ್ನು ಬರಮಾಡಿಕೊಳ್ಳುವ ಶಕ್ತಿಯಿದೆ.
  • ಮುಂದುವರೆದ ಜನಾಂಗಗಳು ಅವಕಾಶ ಸಿಕ್ಕಾಗೆಲ್ಲ ತಮ್ಮ ನುಡಿಯನ್ನು ಪ್ರಪಂಚದಲ್ಲೆಲ್ಲ ಹರಡುವ ಪ್ರಯತ್ನ ಮಾಡುತ್ತವೆ. ಮುಂದುವರೆಯದವು ಇಂಗ್ಲೀಷನ್ನು. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆದಷ್ಟೂ ಬಳಕೆಯಲ್ಲಿಟ್ಟಿರಬೇಕು, ಪ್ರಪಂಚದವರಿಗೆಲ್ಲ ಅದನ್ನು ಕಲಿಸಬೇಕು ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿಯು ತಮಗೇ ಬೇಡವಾಗಿರುತ್ತದೆ. ಆದ್ದರಿಂದ ಅದನ್ನು ಹರಡುವ ಆಸೆಯಾಗಲಿ ಅದಕ್ಕೆ ಬೇಕಾದ ಯೋಗ್ಯತೆಯಾಗಲಿ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಂದ ಅವರವರ ನುಡಿಗೆ ಹೆಚ್ಚು ಹೆಚ್ಚು ಪದಗಳು ಸೇರಿಸಲ್ಪಡುತ್ತಿದೆ. ಮುಂದುವರೆಯದವಿಂದ ಇಂಗ್ಲೀಷಿಗೆ. ಮುಂದುವರೆದ ಜನಾಂಗಗಳು ಹೊಸ ಸಂಶೋಧನೆಗಳನ್ನು ತಮ್ಮ ನುಡಿಯಲ್ಲೇ ಮಾಡುವುದರಿಂದ, ತಮ್ಮ ಏರ್ಪಾಟುಗಳಿಗೆ ತಮ್ಮ ನುಡಿಯನ್ನೇ ಬಳಸುವುದರಿಂದ ಅವುಗಳಲ್ಲಿ ಬೇಕಾಗುವ ಹೊಸ ವಸ್ತು ಮತ್ತು ಎಣಿಕೆಗಳಿಗೆ ತಮ್ಮ ನುಡಿಯ ಪದವನ್ನೇ ಸಹಜವಾಗಿ ಹುಟ್ಟಿಸುತ್ತವೆ. ಆದರೆ ಮುಂದುವರೆಯದವು ಎಲ್ಲೆಲ್ಲೂ ಇಂಗ್ಲೀಷನ್ನು ಬಳಸುವುದೇ ಹೆಗ್ಗಳಿಕೆಯೆಂದು ತಪ್ಪಾಗಿ ತಿಳಿದಿರುವುದರಿಂದ ಇವುಗಳಿಂದ ಇಂಗ್ಲೀಷಿನ ಪದಗಳು ಹುಟ್ಟಿಸಲ್ಪಡುತ್ತವೆ.
  • ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಗೌರವವೂ ಇದೆ, ಹೊಟ್ಟೆಕಿಚ್ಚೂ ಇದೆ. ಮುಂದುವರೆಯದವಿಗೆ ಗೌರವವು ಮಾತ್ರ. ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಅಖಾಡದಲ್ಲಿ ಸೋಲಿಸಬೇಕಾದ ತನ್ನದೇ ಮಟ್ಟದ ಕುಸ್ತಿಯ ಪಟುವೆಂದು ತಿಳಿದಿರುತ್ತವೆ. ಆದರೆ ಮುಂದುವರೆಯದವಿಗೆ ಇಂಗ್ಲೀಷೆಂಬುದು ಅಖಾಡದಲ್ಲಿ ಎಂದಿಗೂ ಸೋಲಿಸಲಾರದ ಇಡೀ ಜಗತ್ತನ್ನೇ ಗೆಲ್ಲುವ ಕುಸ್ತಿಯ ಪಟುವೆಂಬ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯ ಉಪಯೋಗ ಬರೀ ಜುಟ್ಟಿಗೆ ಮಲ್ಲಿಗೆ ಹೂವಿಗೆ ಎನಿಸುವುದಿಲ್ಲ. ಮುಂದುವರೆಯದವಿಗೆ ಅನಿಸುತ್ತದೆ. ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯೆಂದರೆ ಬರೀ ನಾಟಕ, ಕವಿತೆ, ಕಾದಂಬರಿ ಮುಂತಾದವುಗಳಿಗೆ ಮೀಸಲಾಗಿರುವುದು ಎಂಬ ಅನಿಸಿಕೆಯಿರುವುದಿಲ್ಲ. ಮುಂದುವರೆಯದವಕ್ಕೆ ಇವುಗಳಿಗೆ ಮಾತ್ರವೇ ತಮ್ಮ ನುಡಿ ಹೇಳಿಮಾಡಿಸಿದೆಯೆಂಬ ತಪ್ಪು ತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯು ಇಂಗ್ಲೀಷಿಗಿಂತ ಕಡಿಮೆ ಸ್ಥಾನದಲ್ಲಿರುವುದಕ್ಕೆ ತಾವೇ (ಎಂದರೆ ಆ ಜನಾಂಗದ ಜನರೇ) ಕಾರಣವೆಂಬ ಅರಿವಿದೆ. ಮುಂದುವರೆಯದವಕ್ಕೆ ವಿಧಿ ಕಾರಣವೆಂಬ ತಪ್ಪುತಿಳುವಳಿಕೆಯಿದೆ. ಎಂದರೆ - ಮುಂದುವರೆದ ಜನಾಂಗಗಳಿಗೆ ನುಡಿಯ ಮೇಲು-ಕೀಳೆಂಬುದು ತಮ್ಮ ಮೇಲು-ಕೀಳಿನ ಸ್ಥಿತಿಯನ್ನೇ ಪ್ರತಿಬಿಂಬಿಸುತ್ತದೆಯೆಂಬುದರ ಅರಿವಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿ ಕೀಳಾಗಿರುವುದಕ್ಕೆ ತಮ್ಮ ಕೈಗೆಟುಕದಂತಹ ಶಕ್ತಿಗಳು ಕಾರಣವೆಂಬ ತಪ್ಪುತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯಲ್ಲಿ ಯಾವ ಕೊರತೆಯೂ ಇದೆಯೆನಿಸುವುದಿಲ್ಲ. ಮುಂದುವರೆಯದವಿಗೆ ಇದೆಯೆನಿಸುತ್ತದೆ. ನಿಜಕ್ಕೂ ನೋಡಿದರೆ ಯಾವ ನುಡಿಯಲ್ಲೂ ಕೊರತೆಯೆಂಬುದಿರುವುದಿಲ್ಲ. ಕೊರತೆಯೆಲ್ಲಾದರೂ ಇದ್ದರೆ ಅದನ್ನಾಡುವ ಜನರಲ್ಲಿ. ಹೀಗಿರುವುದರಿಂದ ಮುಂದುವರೆಯದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಅತಿ ಹೆಚ್ಚು ಮೋಹವಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಗೆ ಒಂದಲ್ಲೊಂದು ದಿನ ಇಂಗ್ಲೀಷಿಗಿರುವ ಪಟ್ಟವನ್ನು ತಮ್ಮ ನುಡಿಯು ತೆಗೆದುಕೊಳ್ಳಬೇಕೆಂಬ ಹಂಬಲವಿದೆ, ತಮ್ಮ ಸರದಿಗಾಗಿ ಕಾಯುತ್ತಿವೆ. ಮುಂದುವರೆಯದವಿಗಿಲ್ಲ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯು ಇನ್ನೇನು ಸಾಯಿತ್ತಿದೆ, ಇದು ಇಂಗ್ಲೀಷನ್ನು ಸೋಲಿಸುವ ಮಟ್ಟಕ್ಕೆ ಬರುವುದು ಹಾಗಿರಲಿ, ತಾನು ಅಡುಗೆಮನೆಯಲ್ಲಿ ಬದುಕಿ ಬಾಳುವುದೇ ಕಷ್ಟವಿದೆಯೆಂಬ ಹೇಡಿತನವಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷ್ ಬಾರದವರಿಗೆ ತಮ್ಮ ನಾಡಿನಲ್ಲಿ ತಾವೇ ಪರದೇಸಿಗಳೆನಿಸುವುದಿಲ್ಲ. ಮುಂದುವರೆಯದವಲ್ಲಿ ಅನಿಸುತ್ತದೆ. ಇದು ಏಕೆಂದರೆ ಮುಂದುವರೆಯದ ಜನಾಂಗಗಳಲ್ಲಿ ಇಂಗ್ಲೀಷನ್ನು ತಲೆಯಮೇಲೆ ಕೂಡಿಸಿಕೊಂಡು ಪ್ರತಿಯೊಂದಕ್ಕೂ ಇಂಗ್ಲೀಷು ಬೇಕೇ ಬೇಕೆಂಬ ಪರಿಸ್ಥಿತಿ ಹುಟ್ಟಿಬಿಟ್ಟಿರುವುದರಿಂದ. ಆದರೆ ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷನ್ನು ಎಲ್ಲಿಡಬೇಕೋ ಅಲ್ಲಿಟ್ಟಿರುವುದರಿಂದ ಜನರಿಗೆ ಇಂಗ್ಲೀಷ್ ಬರದೆ ಹೋದರೂ ಎಲ್ಲಾ ಸೌಲತ್ತುಗಳೂ ಕಲಿಕೆಯೂ ಕೆಲಸವೂ ಸಿಗದೆ ಹೋಗುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ದುಡಿಮೆಯಲ್ಲಿ ಅವರವರೇ ಇಂಗ್ಲೀಷಿನಲ್ಲಿ ಮಾತನಾಡಿಕೊಳ್ಳುವುದಿಲ್ಲ. ಮುಂದುವರೆಯದವಲ್ಲಿ ಹೀಗಿದೆ. ಇದೇಕೆಂದರೆ ಅನ್ನವೆಂಬುದು ಇಂಗ್ಲೀಷಿನಿಂದಲೇ ಗಿಟ್ಟಬಲ್ಲುದು ಎಂಬ ತಪ್ಪು ತಿಳುವಳಿಕೆಯು ಮುಂದುವರೆಯದ ಜನಾಂಗಗಳಲ್ಲಿ ಚೆನ್ನಾಗಿ ಹಬ್ಬಿರುತ್ತದೆ. ಇಂಗ್ಲೀಷನ್ನು ಬಳಸದೆ ತಮ್ಮ ನುಡಿಯನ್ನೇನಾದರೂ ಬಳಸಿದರೆ ಅವರನ್ನು ಯಾರಾದರೂ ಕೀಳೆಂದು ತಿಳಿದಾರು ಎಂಬ ಹೆದರಿಕೆ ಅವರಿಗಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯನ್ನು ಕಡೆಗಣಿಸಿದರೆ ಒಗ್ಗಟ್ಟು ಹಾಳಾಗುತ್ತದೆಯೆಂಬ ಅರಿವಿದೆ. ಮುಂದುವರೆಯದವಿಗಿಲ್ಲ. ಮುಂದುವರೆಯದವಿಗೆ ತಮ್ಮ ಒಗ್ಗಟ್ಟೇ ಬೇಕಾಗಿರುವುದಿಲ್ಲ. ತಮ್ಮ ಒಗ್ಗಟ್ಟಿನಿಂದ ಏನನ್ನು ಸಾಧಿಸಬಹುದು ಎಂಬ ಅರಿವೂ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ತಿಳುವಳಿಕಸ್ತರು ಇಂಗ್ಲೀಷಿನಿಂದ ಜನರು ಕಲಿಯಬೇಕಾದ್ದನ್ನೆಲ್ಲ ತಮ್ಮ ನುಡಿಗೆ ಅನುವಾದಿಸಿಕೊಳ್ಳುತ್ತಾರೆ. ಮುಂದುವರೆಯದವಲ್ಲಿ ಅನುವಾದಿಸುವುದಿಲ್ಲ, ಇಂಗ್ಲೀಷ್ ಬಲ್ಲವರು ಮಾತ್ರ ಅದನ್ನು ಕಲಿಯುತ್ತಾರೆ. ಇದು ಏಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಜನರೆಲ್ಲ ಆ ತಿಳುವಳಿಕೆಯ ಉಪಯೋಗವನ್ನು ಪಡೆಯಬೇಕು, ಏಳಿಗೆಯೆಂಬುದು ಆದಷ್ಟೂ ತಮ್ಮ ಜನಾಂಗದಲ್ಲಿ ಹಬ್ಬಬೇಕೆಂಬ ಆಸೆಯಿರುತ್ತದೆ. ಮುಂದುವರೆಯದವಕ್ಕೆ ಹಾಗೆ ಆಸೆಯಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷಿನ ಮಾಧ್ಯಮಗಳಿಗೆ ಕ್ಯಾರೆಯೆನ್ನುವವರಿಲ್ಲ. ಮುಂದುವರೆಯದವಲ್ಲಿ ಅವುಗಳದೇ ಎತ್ತಿದ ಕೈ. ಮಾಧ್ಯಮಗಳು ಇತ್ತೀಚೆಗೆ ಬಹಳ ಮುಖ್ಯವಾದ ಪಾತ್ರವನ್ನು ಪಡೆದುಕೊಂಡಿವೆ. ಇಂಗ್ಲೀಷ್ ಮಾಧ್ಯಮಕ್ಕೆ ಮುಂದುವರೆಯದ ಜನಾಂಗಗಳಲ್ಲಿ ಅತಿಹೆಚ್ಚು ಪ್ರಾಮುಖ್ಯ ಸಿಗುವುದಕ್ಕೆ ಕಾರಣವೇನೆಂದರೆ ಈ ಜನಾಂಗಗಳಿಗೆ ಕೇಳಬೇಕಾದ, ಓದಬೇಕಾದ ಸುದ್ದಿಯಿರುವುದು ಇಂಗ್ಲೀಷಿನಲ್ಲೇ ಎಂಬ ತಪ್ಪು ತಿಳುವಳಿಕೆ.
  • ಮುಂದುವರೆದ ಜನಾಂಗಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೋಗಲು ಇಂಗ್ಲೀಷ್ ಕಲಿಯಬೇಕೆಂಬ ಕಟ್ಟಳೆಯಿಲ್ಲ. ಮುಂದುವರೆಯದವಲ್ಲಿದೆ. ವಿಶ್ವವಿದ್ಯಾಲಯಗಳು ಒಂದು ಜನಾಂಗದ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುತ್ತವೆ. ಆದರೆ ಮುಂದುವರೆಯದ ಜನಾಂಗಗಳಿಗೆ ಆ ವಿಶ್ವವಿದ್ಯಾಲಯಗಳನ್ನು ತಮ್ಮ ಜನರಿಗೋಸ್ಕರ ಮಾಡಬೇಕೆಂಬುದರ ಅರಿವೇ ಇರುವುದಿಲ್ಲ. ಹಾಗಿದ್ದಿದ್ದರೆ ಅವುಗಳಲ್ಲಿ ತಮ್ಮ ನುಡಿಯನ್ನೇ ಹೆಚ್ಚಾಗಿ ಬಳಸುತ್ತಿದ್ದವು.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯ ಸೊಲ್ಲರಿಮೆಯನ್ನು ಬಲ್ಲ ಪಂಡಿತರಿದ್ದಾರೆ. ಮುಂದುವರೆಯದವಲ್ಲಿ ಇಂಗ್ಲೀಷಿನ ಸೊಲ್ಲರಿಮೆಯನ್ನು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆಳವಾಗಿ ತಿಳಿಯುವುದರಿಂದ ಬಹಳ ಉಪಯೋಗಗಳಿವೆಯೆಂಬ ಅರಿವಿರುತ್ತದೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯಿಂದ ಯಾವ ಬಿಡಿಗಾಸು ಪ್ರಯೋಜನವೂ ಇಲ್ಲವೆನಿಸಿರುವುದರಿಂದ ಅವುಗಳ ಸೊಲ್ಲರಿಮೆಯನ್ನು ಬಲ್ಲವರು ಅವುಗಳಲ್ಲಿ ಇರುವುದಿಲ್ಲ.
  • ಮುಂದುವರೆದ ಜನಾಂಗಗಳ ಅತ್ಯುತ್ತಮ ಶಾಲೆಗಳು ಇಂಗ್ಲೀಷ್ ಮಾಧ್ಯಮದವಲ್ಲ. ಮುಂದುವರೆಯದವಲ್ಲಿ ಇಂಗ್ಲೀಷ್ ಮಾಧ್ಯಮದವು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಮಕ್ಕಳು ತಮ್ಮ ನುಡಿಯಲ್ಲೇ ಕಲಿತು ಅದನ್ನು ಇನ್ನು ಹೆಚ್ಚು ಬೆಳೆಸಲಿ, ಅದರಿಂದ ಪಡೆಯುವುದೆಲ್ಲವನ್ನೂ ಪಡೆಯಲಿ ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದ ಜನಾಂಗಗಳಿಗೆ ಅನ್ನವೆಂಬುದೇ ಇಂಗ್ಲೀಷಿನಿಂದ ಸಿಕ್ಕುವುದು ಎಂಬ ತಪ್ಪು ತಿಳುವಳಿಕೆಯಿರುತ್ತದೆ.
ಕನ್ನಡವು ಇಂಗ್ಲೀಷಿನ ಸ್ಥಾನವನ್ನು ಕಿತ್ತುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ"ಯನ್ನು ಕನ್ನಡಿಗರು ಇಟ್ಟುಕೊಳ್ಳಬೇಕು!

ಸಾರಾಂಶವಾಗಿ ಹೇಳುವುದಾದರೆ ಇಂಗ್ಲೀಷಿನಿಂದ ಕಲಿಯಬೇಕಾದ್ದನ್ನು ಕಲಿಯುವುದು ಇವತ್ತು ಅನಿವಾರ್ಯ. ಆದರೆ ಇಂಗ್ಲೀಷಿನಿಂದಲೇ ಕನ್ನಡಿಗರೆಲ್ಲರ ಏಳಿಗೆಯಾಗುತ್ತದೆ, ಏಳಿಗೆಯ ಹಂಚಿಕೆಯಾಗುತ್ತದೆ ಎಂಬ ಹುಚ್ಚು ಅನಿಸಿಕೆಯನ್ನು ಕನ್ನಡಿಗರು ಕೈಬಿಡಬೇಕು. ಬಲು ಎತ್ತರದಿಂದ ಹರಿದುಕೊಂಡುಬಂದಿರುವ ಹೊಳೆಯನ್ನು ಹೇಗೆ ನಿಲ್ಲಿಸಲಾಗುವುದಿಲ್ಲವೋ ಹಾಗೆ ಸಾವಿರಾರು ವರ್ಷಗಳಿಂದ ಬಾಳಿಕೊಂಡು ಬಂದಿರುವ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷನ್ನು ಅದರ ಬದಲಾಗಿ ಕರ್ನಾಟಕದಲ್ಲೆಲ್ಲ ಬಳಸಲಾಗುವುದಿಲ್ಲ. ಆದ್ದರಿಂದ ಏಳಿಗೆಯ ಹಂಚಿಕೆ ಮತ್ತು ಜ್ಞಾನ-ವಿಜ್ಞಾನಗಳಿಗೆ ಕನ್ನಡಿಗರು ಕೊಡಬೇಕಾದ ಮುಂದಿನ ಕೊಡುಗೆಗಳನ್ನೆಲ್ಲ ಮನಸ್ಸಿನಲ್ಲಿಟ್ಟು ಕನ್ನಡಕ್ಕೆ ಕನ್ನಡಿಗರಲ್ಲಿರುವ ಮೊದಲ ಸ್ಥಾನವನ್ನು ಗಮನಿಸಬೇಕು. ನಿಧಾನವಾಗಿ ಕನ್ನಡವನ್ನು ಕಲಿಕೆಯಲ್ಲಿ ಎಲ್ಲೆಲ್ಲೂ ಬಳಸುವಂತೆ ಮಾಡಬೇಕು. ಹಾಗೆಯೇ ಇವತ್ತಿನ ದಿವಸ ಗ್ರಾಹಕ ಸೇವೆ, ಸರ್ಕಾರದ ಲೆಕ್ಕಪತ್ರಗಳು, ಬೀದಿಗಳಲ್ಲಿ ಬರೆದಿರುವುದೆಲ್ಲ ಇಂಗ್ಲೀಷುಮಯವಾಗಿರುವುದು ಹೋಗಿ ಎಲ್ಲವೂ ಕನ್ನಡಮಯವಾಗಬೇಕು. ಕನ್ನಡಕ್ಕೆ ಇಲ್ಲೆಲ್ಲೂ ನಿಲ್ಲಲು ಕಾಲಿಲ್ಲವೆಂದೇನಿಲ್ಲ.

ಇವತ್ತು ಉನ್ನತಶಿಕ್ಷಣವೊಂದನ್ನು ಬಿಟ್ಟು ಮಿಕ್ಕ ಇನ್ನೆಲ್ಲೆಲ್ಲಿ ಇಂಗ್ಲೀಷಿನ ಬಳಕೆಯಾಗುತ್ತಿದೆಯೋ ಅಲ್ಲೆಲ್ಲ ಕನ್ನಡವು ಇಂಗ್ಲೀಷಿನ ಬದಲಾಗಿ ಬರುವಂತಾಗಿಸುವುದು ಬಹಳ ಸುಲಭ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಜನರು ಕೆಲಸ ಮಾಡಬೇಕು. ಕೊನೆಗೆ ಉನ್ನತಶಿಕ್ಷಣವೂ ಕನ್ನಡದಲ್ಲಿ ದಕ್ಕುವುದಿಲ್ಲ ಎಂಬ ಪರಿಸ್ಥಿತಿಯನ್ನು ನಿಧಾನವಾಗಿ ತೆಗೆದುಹಾಕಬೇಕು.

ಇವತ್ತು "ಹುಚ್ಚು" ಎನಿಸಿದರೂ ಕನ್ನಡವು ಒಂದು ದಿನ ಇಂಗ್ಲೀಷಿನ ಪಾತ್ರವನ್ನು ಜಗತ್ತಿನಲ್ಲೆಲ್ಲ ವಹಿಸಬೇಕೆಂಬ ಕನಸನ್ನು ಕನ್ನಡಿಗರು ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಅರ್ಹತೆಗಳೂ ಕನ್ನಡಕ್ಕಿದೆ. ಪ್ರಶ್ನೆ ಇಲ್ಲಿ ಬರುವುದು "ಕನ್ನಡಿಗರಿಗೆ ಆ ಅರ್ಹತೆ, ಯೋಗ್ಯತೆಗಳು ಇವೆಯೆ?" ಎಂಬುದು. ಆ ಅರ್ಹತೆ, ಯೋಗ್ಯತೆಗಳನ್ನು ಕನ್ನಡಿಗರು ಬರಿಸಿಕೊಳ್ಳಬೇಕು. ಅದಕ್ಕೆ ಇಂಗ್ಲೀಷನ್ನು ಉಪಯೋಗಿಸಿದರೂ ಚಿಂತೆಯಿಲ್ಲ.

ಮುಂದಿನ ಬರಹ: ಈ ಸರಣಿಯ ಕಡೆಯ ಬರಹ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೬: ಕನ್ನಡದ ನಿಜವಾದ ಸೊಲ್ಲರಿಮೆಯು ಹುಟ್ಟಿ ಜನಪ್ರಿಯವಾಗಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಸೊಲ್ಲರಿಮೆ (ವ್ಯಾಕರಣ) ಎಂದರೇನು?

ಸೊಲ್ಲರಿಮೆಯೆಂದರೆ ಮಾತಿನ ಕಟ್ಟಳೆ. (ಅಂದಹಾಗೆ ಸೊಲ್ಲು ಎಂದರೆ ಮಾತು. ಅರಿಮೆ ಎಂದರೆ ಅರಿವಿನ ಒಂದು ಬಗೆ -- ಎಷ್ಟು ಸುಲಭ!).

ಒಂದೇ ನುಡಿಯನ್ನಾಡುವ ಪ್ರತಿಯೊಬ್ಬರೂ ಮಾತನಾಡುವಾಗ ತಮಗೆ ಗೊತ್ತಿಲ್ಲದೆಯೇ ಕೆಲವು ಕಟ್ಟಳೆಗಳನ್ನು ಒಪ್ಪಿನಡೆದಿರುತ್ತಾರೆ. ಬೇರೆಬೇರೆ ನುಡಿಗಳಲ್ಲಿ ಈ ಕಟ್ಟಳೆಗಳು ಬೇರೆಬೇರೆಯಾಗಿರಲು ಸಾಧ್ಯವಿದೆ. ಉದಾಹರಣೆಗೆ ಕನ್ನಡದಲ್ಲಿ "ಮೂರು ಕರಿ ಕುರಿ ಮೇಯ್ತಿತ್ತು" ಎನ್ನುವಾಗ ಯಾವ ಸೊಲ್ಲರಿಮೆಯ ಕಟ್ಟಳೆಯನ್ನೂ ಮುರಿದಂತಲ್ಲ. ಆದರೆ ಇಂಗ್ಲೀಷಿನಲ್ಲಿ "three black sheep was grazing" ಎಂದರೆ ತಪ್ಪಾಗುತ್ತದೆ. ಸಂಸ್ಕೃತ ಹಾಗೂ ಹಿಂದಿಗಳಲ್ಲೂ ಹೀಗೆ ಹೇಳಿದರೆ ತಪ್ಪಾಗುತ್ತದೆ.

ಸಾಮಾನ್ಯವಾಗಿ ಒಂದೇ ನುಡಿಯನ್ನು ತುಸು ಬೇರೆಬೇರೆ ಬಗೆಗಳಲ್ಲಿ ಆಡಲ್ಪಡುವ ಒಳನುಡಿಗಳು (dialects) ಇರುತ್ತವೆ. ಒಂದು ಒಳನುಡಿಯವರ ಮಾತು ಇನ್ನೊಂದು ಒಳನುಡಿಯವರಿಗೆ ಅರ್ಥವಾಗುತ್ತದೆ, ಆದರೆ ಒಂದರೊಳಗೆ ಇನ್ನೊಂದರವರು ಆಡುವಂತೆ ಸಾಮಾನ್ಯವಾಗಿ ಮಾತನಾಡುವುದಿಲ್ಲ. ಹೀಗಿರುವಾಗ ಬೇರೆಬೇರೆ ಒಳನುಡಿಯವರ ನಡುವೆ ಸಂಪರ್ಕ ಇದ್ದೇ ಇರುವುದರಿಂದ (ಮತ್ತು ಇರುವುದು ಒಗ್ಗಟ್ಟು ಮತ್ತು ಅದರ ಮೂಲಕ ಏಳಿಗೆಗೆ ಬೇಕಾಗಿಯೂ ಇರುವುದರಿಂದ) ಎಲ್ಲರಿಗೂ ಒಪ್ಪುವ "ಮಾತಿನ ಕಟ್ಟಳೆಗಳು" ಹುಟ್ಟಿಕೊಂಡಿರುತ್ತವೆ. ಇವುಗಳನ್ನೇ ಆ "ಎಲ್ಲರ ನುಡಿ"ಯ ಸೊಲ್ಲರಿಮೆಯೆನ್ನುವುದು.

ಗಮನಿಸಿ: ಈ ಬರಹದ ಮಟ್ಟಿಗೆ "ಸೊಲ್ಲರಿಮೆ" ಎಂದರೆ "ಸೊಲ್ಲರಿಮೆಯ ಹೊತ್ತಗೆ" ಎಂಬ ಅರ್ಥದಲ್ಲೂ ಬಳಸಿದ್ದೇವೆ. ಎಲ್ಲಿ ಯಾವ ಅರ್ಥವು ಹೊಂದುತ್ತದೆಯೋ ಅದನ್ನೇ ಓದುಗರು ತೆಗೆದುಕೊಳ್ಳಬೇಕು.

ಸೊಲ್ಲರಿಮೆಯನ್ನು ಕಲಿಯುವುದರಿಂದ ಏನು ಪ್ರಯೋಜನ?

ಯಾವುದೇ ನುಡಿಯ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಟ್ಟಿರಲಿ ಇಟ್ಟಿಲ್ಲದಿರಲಿ ಆ ಕಟ್ಟಳೆಗಳಂತೂ ಇದ್ದೇ ಇರುತ್ತವೆ. ಜನರಿಗೆ ತಾವಾಡುವ ಮಾತಿನ ಕಟ್ಟಳೆಗಳು ಇಂಥವು ಎಂದು (ಒಬ್ಬ ಸೊಲ್ಲರಿಗನಿಗೆ ತಿಳಿದಂತೆ) ತಿಳಿದಿರಲಿ ತಿಳಿದಿಲ್ಲದಿರಲಿ, ಅವರು ಮಾತನಾಡುವಾಗ ಆ ಕಟ್ಟಳೆಗಳನ್ನು ಒಪ್ಪಿಯೇ ನಡೆಯುತ್ತಾರೆ. "ಕನ್ನಡದಲ್ಲಿ ಎಷ್ಟು ರೀತಿಯ ಜೋಡಿಪದಗಳಿವೆ?" ಎನ್ನುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ ಆವೆಲ್ಲ ಬಗೆಯ ಜೋಡಿಪದಗಳನ್ನೂ ಜನರು ಆಡುತ್ತಲೇ ಇರುತ್ತಾರೆ.

ಆದರೂ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಡುವುದರಿಂದ ಮತ್ತು "ನಮ್ಮ ನುಡಿಯಲ್ಲಿ ಇಂತಹ ಕಟ್ಟಳೆಗಳಿವೆ" ಎಂದು ಹೇಳಿಕೊಡುವುದರಿಂದ/ಕಲಿಯುವುದರಿಂದ ಬಹಳ ಉಪಯೋಗವಿದೆ. ನುಡಿಯನ್ನು ಕಲಿಯುವವರಿಗೆ ಇದರಿಂದ ಬಹಳ ನೆರವಾಗುತ್ತದೆ. ಬರಹವು ಎಂತಹ ಕಟ್ಟಳೆಗಳನ್ನು ಪಾಲಿಸಬೇಕು ಎಂದು ತಿಳಿಸಿಕೊಡುವಲ್ಲಿ ನೆರವಾಗುತ್ತದೆ. ಬರಹವನ್ನು ಬರೆಯುವಾಗ ಮಾತನಾಡುವಾಗಿದ್ದಂತೆ ಮುಂದೆ ಯಾರೋ ಒಬ್ಬರಿದ್ದು ಅವರೊಡನೆ ಕೊಟ್ಟು-ತೊಗೊಳ್ಳುವಿಕೆ ನಡೆಯಬೇಕು ಎಂಬುದೇನೂ ಇಲ್ಲದಿರುವುದರಿಂದ ಬರಹಕ್ಕಂತೂ ಈ ಕಟ್ಟಳೆಗಳ ಅರಿವಿರುವುದು ಬಹಳ ಮುಖ್ಯ. ಅವುಗಳ ಅರಿವಿಲ್ಲದಿದ್ದರೆ ಬರೆದ ಒಂದೇ ಸೊಲ್ಲನ್ನು ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ. ಮಕ್ಕಳಿಗೆ ನುಡಿಯನ್ನು ಕಲಿಸಲು ಕೂಡ ಬಹಳ ನೆರವಾಗುತ್ತದೆ. ಹೊಸ ಪದಗಳನ್ನು ಹುಟ್ಟಿಸುವ ಕೆಲಸಕ್ಕೂ ಬಹಳ ನೆರವಾಗುತ್ತದೆ. ಈಗಾಗಲೇ ಇರುವ ಪದಗಳನ್ನು ಅರ್ಥಮಾಡಿಕೊಂಡಾಗ ತಾನೇ ಹೊಸ ಪದಗಳನ್ನು ಹುಟ್ಟಿಸಲಾಗುವುದು? ಆದ್ದರಿಂದ.

ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳು

ಕನ್ನಡದ ಸೊಲ್ಲರಿಮೆ ಎಂಥದ್ದು ಎಂದು ತಿಳಿದುಕೊಳ್ಳುವಲ್ಲಿ ಹಿಂದಿನ ಸೊಲ್ಲರಿಗರು (grammarians) ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಆದ್ದರಿಂದ ಕನ್ನಡದ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ದಾಖಲಿಸುವಾಗ ಅದೇ ತಪ್ಪುಗಳು ಉಳಿದುಕೊಂಡುಬಿಟ್ಟಿವೆ. ಈ ಕೊರತೆಗಳಿಗೆಲ್ಲ ಕಾರಣವೇನೆಂದರೆ ಹಿಂದಿನವರು ಕನ್ನಡದ ಸೊಲ್ಲರಿಮೆಯನ್ನು ಸಂಸ್ಕೃತದ ವ್ಯಾಕರಣದ ಆಧಾರದ ಮೇಲೆ ಕಟ್ಟಿದ್ದು. ಹೀಗೇಕೆ ಆಧಾರವಾಗಿಟ್ಟುಕೊಂಡಿದ್ದರು ಎಂದು ಹಿಂದೆಯೇ ನಾವು ತಿಳಿಸಿಕೊಟ್ಟಿರುವುದರಿಂದ ಮತ್ತೊಮ್ಮೆ ಅದನ್ನೇ ಹೇಳುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಆಧಾರವಾಗಿ ಇಟ್ಟುಕೊಂಡಿದ್ದರಿಂದ ಕನ್ನಡದ ಸೇರಿಕೆಯ ನಿಯಮಗಳು, ಪದವರ್ಗಗಳು, ಪದಗಳ ಒಳರಚನೆ, ಸಮಾಸಗಳು, ಲಿಂಗಗಳು, ವಚನಗಳು, ವಿಭಕ್ತಿಗಳು, ಸರ್ವನಾಮಗಳು ಮತ್ತು ಎಣಿಕೆಯ ಪದಗಳು, ಕ್ರಿಯಾರೂಪಗಳು -- ಮುಂತಾದ ಹೆಚ್ಚುಕಡಿಮೆ ಪ್ರತಿಯೊಂದು ಸೊಲ್ಲರಿಮೆಯಂಶವನ್ನು ತಿಳಿಸಿಕೊಡುವುದರಲ್ಲೂ ಬಹಳ ತಪ್ಪುಗಳು ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಸೇರಿಕೊಂಡುಬಿಟ್ಟಿವೆ. ಈ ತಪ್ಪುಗಳು ಯಾವುಯಾವವು ಎಂದು ತಿಳಿದುಕೊಳ್ಳಲು ಡಾ|| ಡಿ. ಎನ್. ಶಂಕರಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಎಂಬ ಹೊತ್ತಗೆಯನ್ನು ಓದಿರಿ. ಈ ತಪ್ಪುಗಳೆಲ್ಲ ಎಷ್ಟಿವೆಯೆಂದರೆ ಈಗಿರುವ ಸೊಲ್ಲರಿಮೆಯ ಹೊತ್ತಗೆಗಳನ್ನು ನಿಜವಾದ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳೆಂದು ಕರೆಯುವುದೇ ತಪ್ಪೆನಿಸುತ್ತದೆ.

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಿಲ್ಲದಿರುವುದರಿಂದ ತೊಂದರೆಗಳು

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳಿಂದ/ತಪ್ಪುಗಳಿಂದ ಆಗುತ್ತಿರುವ ತೊಂದರೆಗಳಲ್ಲಿ ಕೆಲವು ಹೀಗಿವೆ:
  1. ಕನ್ನಡಕ್ಕೆ ಸಂಸ್ಕೃತವೇ ಮೂಲವೆಂಬ ಸುಳ್ಳು ಇನ್ನಷ್ಟು ಹರಡುತ್ತಿದೆ ("ನೋಡಿ, ಕನ್ನಡದ ಸೊಲ್ಲರಿಮೆಯ ಪುಸ್ತಕದಲ್ಲೇ ಇದೆ!"). ಈ ಸುಳ್ಳು ಹರಡುವುದರಿಂದ ಕನ್ನಡಿಗರ ನಡುವೆ ಒಗ್ಗಟ್ಟು ಹೇಗೆ ಕುಸಿಯುತ್ತಿದೆಯೆಂದು ಕೂಡ ನಾವು ಈಗಾಗಲೇ ವಾದಿಸಿದ್ದೇವೆ.
  2. ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಅವೈಜ್ಞಾನಿಕತೆಯು ತಾಂಡವಾಡುತ್ತಿರುವುದರಿಂದ ಕೆಲವು ಕನ್ನಡಿಗರಿಗೆ ಕನ್ನಡವೇ ಅವೈಜ್ಞಾನಿಕ ಭಾಷೆ ಎಂಬ ಕೀಳರಿಮೆ ಬಂದುಬಿಟ್ಟಿದೆ. ಇದರಿಂದ ಕನ್ನಡದಿಂದಲೇ ಅವರು ದೂರ ಹೊರಟುಹೋಗುತ್ತಿದ್ದಾರೆ. ಆದರೆ ನಿಜಕ್ಕೂ ನೋಡಿದರೆ ಭಾಷೆಗಳು ವೈಜ್ಞಾನಿಕ ಇಲ್ಲವೇ ಅವೈಜ್ಞಾನಿಕವಾಗಿರುವುದಿಲ್ಲ (ಸೊಲ್ಲರಿಮೆಗಳು ಇರಬಹುದಷ್ಟೆ). ಆದ್ದರಿಂದ ಸರಿಯಾದ, ವೈಜ್ಞಾನಿಕವಾದ ಕನ್ನಡದ ಸೊಲ್ಲರಿಮೆಯು ಬೆಳಕಿಗೆ ಬರಬೇಕಿದೆ.
  3. ಕನ್ನಡದ ಸೊಲ್ಲರಿಮೆಯನ್ನು ಬಳಸಿಕೊಂಡು ಕನ್ನಡವನ್ನು ಸರಿಯಾಗಿ ಕಲಿಸುವುದಕ್ಕೇ ಆಗದೆ ಹೋಗಿರುವುದರಿಂದ ಕನ್ನಡಿಗರಿಗೇ ಕನ್ನಡವು "ಕಷ್ಟವಾದ ಭಾಷೆ" ಎನಿಸಿಬಿಟ್ಟಿದೆ. ಆದರೆ ಹೀಗಿಲ್ಲ. ಕನ್ನಡವು ಕನ್ನಡಿಗರ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿದೆ ಎಂದು ಈಗಾಗಲೇ ನಾವು ವಾದಿಸಿದ್ದೇವೆ. ಮುಂದೆಯೂ ಈ ವಿಷಯವಾಗಿ ಹೇಳುವುದಿದೆ. ಕನ್ನಡವನ್ನು ಕಲಿಸುವ ಏರ್ಪಾಟಿನಲ್ಲೇ ತಪ್ಪುಗಳು ತುಂಬಿಕೊಂಡಿರುವುದು ಈ ಏಳಿಗೆಗೆ ಪೂರಕವಾದ್ದಲ್ಲ.
  4. ಕನ್ನಡಿಗರ ನಾಲಿಗೆಯು ಉಲಿಯುವ ಮತ್ತು ಉಲಿಯದ ಅಕ್ಷರಗಳು ಯಾವುವು ಎನ್ನುವುದನ್ನೇ ನಾವು ಸರಿಯಾಗಿ ಕಲಿಯದೆ ಹೋಗಿದ್ದೇವೆ. ಇದರಿಂದಲೇ ಕನ್ನಡದ ಅಕ್ಷರಮಾಲೆಯಲ್ಲಿ ನಾವು ಎಂದಿಗೂ ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿಕೊಂಡಿರುವುದು!
  5. ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಬಹಳ ಕಷ್ಟವಾಗುತ್ತಿದೆ. ಇದರಿಂದ ಕನ್ನಡದಲ್ಲಿ ಜ್ಞಾನ-ವಿಜ್ಞಾನಗಳ ಕಲಿಕೆ-ಕಲಿಸುವಿಕೆಗಳು ನಡೆಯಬೇಕಾದಷ್ಟು ಚೆನ್ನಾಗಿ ನಡೆಯುತ್ತಿಲ್ಲ, ಜನಪ್ರಿಯವೂ ಆಗುತ್ತಿಲ್ಲ.
  6. ಕನ್ನಡದ ಬರಹವು ಈಗಿರುವ ಕನ್ನಡದ್ದಲ್ಲವೇ ಅಲ್ಲ ಎನ್ನಬಹುದಾದ ಸೊಲ್ಲರಿಮೆಯನ್ನು ಆಧರಿಸಿರುವುದೆ ಆಗಿರುವುದರಿಂದ ಕನ್ನಡದ ಬರಹವು ಕನ್ನಡಿಗರಿಂದ ಬಹಳ ದೂರ ಹೊರಟುಹೋಗಿದೆ. ಆದ್ದರಿಂದ ಕನ್ನಡದಲ್ಲಿರುವ ಬೇರೆಬೇರೆ ದಾಖಲೆಗಳು ಮತ್ತು ಸರ್ಕಾರದ ಪತ್ರವ್ಯವಹಾರವೆಲ್ಲ ಕನ್ನಡಿಗರಿಗೇ ಅರ್ಥ ಮಾಡಿಕೊಳ್ಳದಷ್ಟು ಕಷ್ಟವಾಗಿಹೋಗಿದೆ.
  7. ಕನ್ನಡದ ಸೊಲ್ಲರಿಮೆಯ ಕಲಿಕೆ ಬಹಳ ಅವೈಜ್ಞಾನಿಕವಾಗಿ ಹೋಗುತ್ತಿದ್ದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ಸೊಲ್ಲರಿಮೆಯಿಂದಲೇ ದೂರ ಹೊರಟುಹೋಗುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡವನ್ನು ಆಳವಾಗಿ ಅರ್ಥಮಾಡಿಕೊಂಡಿರುವವರು ಯಾರೂ ಇಲ್ಲವೇ ಇಲ್ಲವೆಂಬ ಪರಿಸ್ಥಿತಿ ಬಂದುಬಿಡುತ್ತದೆ. ಹೀಗಾದರೆ ಕನ್ನಡವು ಎಂದಿಗೂ ಕನ್ನಡಿಗರ ಜೀವನದಲ್ಲಿ ಪಡೆದುಕೊಳ್ಳಬೇಕಾದ ಮೇಲಿನ ಸ್ಥಾನವನ್ನು ಪಡೆದುಕೊಳ್ಳುವುದೇ ಇಲ್ಲ; ಆ ಮೂಲಕ ಕನ್ನಡಿಗರ ಏಳಿಗೆಯು ಎಂದಿಗೂ ಆಗುವುದಿಲ್ಲ.
  8. ಬೇರೆಬೇರೆ ಜಾಗಗಳ ಮತ್ತು ಜಾತಿಗಳ ಕನ್ನಡಿಗರನ್ನೆಲ್ಲ ಒಗ್ಗೂಡಿಸುವುದೇ ಕನ್ನಡ. ಆ ಕನ್ನಡವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದದ್ದು ಈ ನಾಡನ್ನು ನಡೆಸುವ ಜವಾಬ್ದಾರಿಯಿರುವವರ ಮೊದಲ ಅರ್ತವ್ಯ. ತಪ್ಪು ಸೊಲ್ಲರಿಮೆಗಳಿಂದ ಆ ಕನ್ನಡದ ಸ್ವರೂಪವೇನೆಂದು ತಿಳಿಯದೆ ಹೋಗಿರುವುದರಿಂದ ಕನ್ನಡಿಗರಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದೆ.
ವೈಜ್ಞಾನಿಕವಾಗಿ ಚಿಂತಿಸುವ ಯುವಕರಿಂದಲೇ ಕನ್ನಡದ ಸೊಲ್ಲರಿಮೆಯ ರಿಪೇರಿ ಸಾಧ್ಯ

ಕನ್ನಡದ ಸೊಲ್ಲರಿಮೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ಚೆನ್ನಾಗಿ ಅಧ್ಯಯನ ಮಾಡಿರುವವರಲ್ಲಿ ಸುಮಾರು ವರ್ಷ ಮೈಸೂರಿನಲ್ಲಿದ್ದು ಈಗ ಹೆಗ್ಗೋಡಿನಲ್ಲಿ ವಾಸವಾಗಿರುವ ಡಾ|| ಡಿ. ಎನ್. ಶಂಕರಭಟ್ಟರ ಹೆಸರು ಮೊದಲು ಬರುತ್ತದೆ. ಇವರು ಈಗಾಗಲೇ ತಮ್ಮ ಅನೇಕ ಹೊತ್ತಗೆಗಳಲ್ಲಿ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ತೊಂದರೆಗಳನ್ನು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಕನ್ನಡದ ನಿಜವಾದ ಸೊಲ್ಲರಿಮೆಯೆಂಥದ್ದೆಂದು ತಿಳಿಸಿಕೊಡಲೂ ಪ್ರಯತ್ನಿಸಿದ್ದಾರೆ. ಬಹಳ ವೈಜ್ಞಾನಿಕವಾಗಿ ಕನ್ನಡವನ್ನು ಅರಿತುಕೊಂಡಿರುವ ಸೊಲ್ಲರಿಗರ ಪಟ್ಟಿಯಲ್ಲಿ ಭಟ್ಟರ ಹೆಸರು ಮೊದಲು ಬರುತ್ತದೆ ಎಂದರೆ ತಪ್ಪಾಗಲಾರದು. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಅಧ್ಯಯನ ನಡೆಯುವಾಗ ಡಾ|| ಡಿ. ಎನ್. ಶಂಕರಭಟ್ಟರ ತತ್ವಗಳ ಅಧ್ಯಯನ ನಡೆಯಬೇಕಿದೆ. ಅವುಗಳ ಆಧಾರದ ಮೇಲೆ ಕನ್ನಡದ ನಿಜವಾದ ಸೊಲ್ಲರಿಮೆಗಳು ಹುಟ್ಟಿಬರಬೇಕಿವೆ, ಜನಪ್ರಿಯವಾಗಬೇಕಿವೆ.

ಹಿಂದಿನಿಂದ ಹೇಳಿಕೊಂಡು ಬಂದಿರುವ ತಪ್ಪೇ ಇವತ್ತಿಗೂ ಸರಿಯೆಂದು ತಿಳಿಯುವವರು ಎಲ್ಲಿಯವರೆಗೆ ಕನ್ನಡಿಗರ ಕಲಿಕೆಯನ್ನು ಹತೋಟಿಯಲ್ಲಿಟ್ಟುಕೊಂಡಿರುವರೋ ಅಲ್ಲಿಯವರೆಗೆ ಕನ್ನಡದ ನಿಜವಾದ ಸೊಲ್ಲರಿಮೆಯು ಜನಪ್ರಿಯವಾಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ವೈಜ್ಞಾನಿಕವಾಗಿ ಚಿಂತಿಸುವ ಯುವ ಕನ್ನಡಿಗರು ಡಾ|| ಡಿ. ಎನ್. ಶಂಕರಭಟ್ಟರ ಹೊತ್ತಗೆಗಳನ್ನು ಓದಬೇಕಿದೆ. ಕನ್ನಡಿಗರ ಏಳಿಗೆಯು ಹಿಂದಿನವರ ತಪ್ಪುಗಳನ್ನು ಮುಂದುವರೆಸುವುದರಿಂದ ಆಗುವುದಿಲ್ಲ. ಇಂದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ತೆಗೆದುಕೊಳ್ಳುವ ಸರಿಯಾದ ತೀರ್ಮಾನಗಳಿಂದಲೇ ಸಾಧ್ಯ. ತಪ್ಪುಗಳನ್ನು ಎಲ್ಲ ಜನಾಂಗಗಳೂ ಮಾಡುತ್ತವೆ. ಆದರೆ ಆ ತಪ್ಪುಗಳನ್ನು ತಿದ್ದುಕೊಂಡು ಮುಂದುವರೆಯುವ ಜನಾಂಗಗಳು ಮಾತ್ರ ಏಳಿಗೆಯಾಗುವುದು. ಕನ್ನಡಜನಾಂಗವು ಅಂತಹ ಒಂದು ಜನಾಂಗವಾಗಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೫: ಪದಗಳಲ್ಲಿ ಏಳಿಗೆ ಮತ್ತು ಅದರ ಹರವುಗಳೆರಡೂ ಅಡಗಿವೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಒಂದು ಜನಾಂಗದ ಏಳಿಗೆಗೂ ಪದಗಳಿಗೂ ನಂಟು

ಯಾವುದೇ ಒಂದು ಜನಾಂಗದ ಏಳಿಗೆಯ ಸ್ಥಿತಿಯನ್ನು ಆ ಜನಾಂಗದವರ ನಾಲಿಗೆಯ ಮೇಲೆ ಏನೆಲ್ಲ ಪದಗಳು ಓಡಾಡುತ್ತವೆ ಎನ್ನುವುದರಿಂದ ಅಳೆಯಬಹುದು. ಆ ಜನಾಂಗದಲ್ಲಿ ಏಳಿಗೆಯು ಎಷ್ಟು ಸಮವಾಗಿ ಎಲ್ಲರಿಗೂ ಹರಡಿದೆಯೆನ್ನುವುದನ್ನು ಹೆಚ್ಚು ಏಳಿಗೆಹೊಂದಿದವರು ಬಳಸುವ ಪದಗಳನ್ನು ತೀರ ಏಳಿಗೆ ಹೊಂದದವರಿಗೆ ಅರ್ಥಮಾಡಿಸಲು ಎಷ್ಟು ಹೊತ್ತು ಬೇಕಾಗುತ್ತದೆ ಎನ್ನುವುದರಿಂದ ಅಳೆಯಬಹುದು. ಇವೆರಡು ಅಳತೆಗೋಲುಗಳಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಒಂದು ಜನಾಂಗದವರು ಎಷ್ಟು ಗಿಟ್ಟಿಸಿಕೊಂಡಿದ್ದಾರೆ, ಮತ್ತು ಅವುಗಳಲ್ಲಿ ಏಳ್ಗೆಯೆಂಬುದು ಎಷ್ಟು ಸಮವಾಗಿ ಇಡೀ ಜನಾಂಗದಲ್ಲಿ ಹರಡಿದೆ ಎಂದು ಸುಲಭವಾಗಿ ತಿಳಿದುಬಿಡುತ್ತದೆ.

ಹೆಚ್ಚು ಏಳಿಗೆಹೊಂದಿದವರ ಆಡುನುಡಿಯು ಕಡಿಮೆ ಏಳಿಗೆಹೊಂದಿದವರ ನುಡಿಯೇ ಆಗಿರದೆ ಹೋದರೆ ಇಲ್ಲವೇ ಹೊರನುಡಿಗಳ ಪದಗಳಿಂದ ತುಂಬಿದ್ದರೆ (ಉದಾಹರಣೆಗೆ ಕರ್ನಾಟಕದಲ್ಲಿ ಇಂಗ್ಲೀಷಾಗಿದ್ದರೆ ಇಲ್ಲವೇ ಸಂಸ್ಕೃತವಾಗಿದ್ದರೆ ಇಲ್ಲವೇ ಅವುಗಳ ಪದಗಳಿಂದ ತುಂಬಿದ್ದರೆ) ಅದನ್ನು ಕಡಿಮೆ ಏಳಿಗೆ ಹೊಂದಿದವರಿಗೆ ಹೇಳಿಕೊಡಲು ತೀರ ಕಷ್ಟವಾಗುತ್ತದೆ. ಆಗ ಏಳಿಗೆಯೆನ್ನುವುದು ಕೆಲವರ ಸೊತ್ತು ಮಾತ್ರ ಆಗುತ್ತದೆ. ಆದ್ದರಿಂದ ಏಳಿಗೆಹೊಂದಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಜನಾಂಗವೂ ತನ್ನ ನುಡಿಯನ್ನೇ ಎಲ್ಲಾ ಕಸುಬುಗಳಲ್ಲೂ ಬಳಸಲು ಹಂಬಲಿಸಬೇಕು, ಮತ್ತು ಆ ನುಡಿಗೆ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವಾಗ ಅವುಗಳು ಆದಷ್ಟೂ ಹೆಚ್ಚು ಜನರಿಗೆ ತಿಳಿಯುವಂತಿರಬೇಕು. ಯಾರಿಗೇ ಆಗಲಿ, ತಮಗೆ ಈಗಾಗಲೇ ತಿಳಿದಿರುವುದನ್ನು ಬಳಸಿಕೊಂಡು ಹೊಸತನ್ನು ಕಲಿತರೆ ಏಳಿಗೆಯ ಹಂಚಿಕೆ ಸುಲಭವಾಗುತ್ತದೆ. ತಮಗೆ ಈಗಾಗಲೇ ತಿಳಿದಿರುವುದನ್ನೆಲ್ಲ ತೊರೆದು ಹೊಸತನ್ನು ಕಲಿಯಬೇಕಾದರೆ ಏಳಿಗೆಯ ಹಂಚಿಕೆ ಕಷ್ಟವಾಗುತ್ತದೆ. ಆದ್ದರಿಂದ ಕನ್ನಡಿಗರ ಏಳಿಗೆ ಮತ್ತು ಏಳಿಗೆಯ ಹಂಚಿಕೆಯು ಚೆನ್ನಾಗಿ ಆಗಬೇಕೆಂಬುದಾದರೆ ಅದು ಎಲ್ಲರ ಕನ್ನಡದಲ್ಲೇ ಸಾಧ್ಯ.

ಹಾಗೆಯೇ ಹೊಸ ಹೊಸ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವುದು ಬಹಳ ಮುಖ್ಯವಾದದ್ದು ಕೂಡ. ಹೊಸ ಪದಗಳಿಲ್ಲದೆ ಹೊಸತೆಂಬುದಿರುವುದಿಲ್ಲ. ಹೊಸಹೊಸದನ್ನು ಒಂದು ಜನಾಂಗದವರು ಅರಿತುಕೊಳ್ಳುತ್ತ ಹೋಗಬೇಕಾದರೆ ಅದಕ್ಕೆ ಹೊಸ ಪದಗಳಿಲ್ಲದೆ ಆಗುವುದಿಲ್ಲ. ಒಂದು ಜನಾಂಗದ ಏಳಿಗೆಯು ಎಷ್ಟು ಬೇಗಬೇಗನೆ ಆಗುತ್ತಿದೆಯೆಂಬುದರ ಗುರುತು ಒಂದು ವರ್ಷಕ್ಕೆ ಅದರ ಆಡುನುಡಿಗೆ ಎಷ್ಟು ಹೊಸ ಪದಗಳು ಸೇರಿಕೊಂಡಿವೆ, ಮತ್ತು ಆ ಹೊಸ ಪದಗಳು ಎಷ್ಟು ಎಲ್ಲೆಲ್ಲೂ ಹರಡಿವೆ ಎಂಬುದಾಗಿದೆ. ಆದ್ದರಿಂದ ಕನ್ನಡಿಗರ ಆಡುನುಡಿಗೆ ಹೊಸ ಹೊಸ ಪದಗಳು ಸೇರಿಕೊಳ್ಳುತ್ತ ಹೋಗಬೇಕು. ಪದಗಳು ಸೇರುವುದು ನಿಂತರೆ ಕನ್ನಡಿಗರ ಏಳಿಗೆ ನಿಂತಂತೆ. ಒಂದು ವರ್ಷದಲ್ಲಿ ಈ ಪದಗಳಲ್ಲಿ ಎಷ್ಟನ್ನು ಇಡೀ ಪ್ರಪಂಚದವರೆಲ್ಲ ಬಳಸಲು ಶುರುಮಾಡುತ್ತಾರೆ ಎನ್ನುವುದು ಆ ಜನಾಂಗದವರು ಪ್ರಪಂಚದ ಇತರ ಜನಾಂಗದವರಿಗಿಂತ ಎಷ್ಟು ಹೆಚ್ಚು ಆಯಾ ಕ್ಷೇತ್ರಗಳಲ್ಲಿ ಏಳಿಗೆ ಹೊಂದಿದ್ದಾರೆ ಎನ್ನುವುದರ ಗುರುತು. ಆದ್ದರಿಂದ ಕನ್ನಡಿಗರು ಹೊಸತನ್ನು ಕಂಡುಹಿಡಿದು ಆ ಕಂಡುಹಿಡಿಯುವಿಕೆಯಲ್ಲಿ ಕನ್ನಡವನ್ನೇ ಬಳಸಿ, ಕಂಡುಹಿಡಿದದ್ದಕ್ಕೆ ಕನ್ನಡದ ಹೆಸರನ್ನೇ ಇಟ್ಟು ಪ್ರಪಂಚದವರೆಲ್ಲ ಅದನ್ನು ಬಳಸುವಂತೆ ಮಾಡುವುದು ಕನ್ನಡಿಗರು ಪ್ರಪಂಚದ ಬೇರೆ ಜನಾಂಗದವರಿಗಿಂತ ಎಷ್ಟು ಏಳಿಗೆಹೊಂದಿದ್ದಾರೆ ಎನ್ನುವುದರ ಗುರುತು.

"ಕನ್ನಡದ ಪದಗಳು" ಎಂದರೆ ಯಾವುವು?

ಎಲ್ಲಾದರೂ ಎಂತಾದರೂ ಇರುವ (ಇಲ್ಲವೇ ಇದ್ದ) ಕನ್ನಡಿಗರು ಆಡುನುಡಿಯಲ್ಲಿ ಈಗ ಬಳಸುತ್ತಿರುವ (ಇಲ್ಲವೇ ಹಿಂದೆ ಬಳಸುತ್ತಿದ್ದ) ಪದಗಳೆಲ್ಲ ಕನ್ನಡದ ಪದಗಳು. ಇವುಗಳನ್ನೆಲ್ಲ ಕನ್ನಡದ ನಿಘಂಟುಗಳಿಗೆ ಸೇರಿಸತಕ್ಕದ್ದು. ಆಡುನುಡಿಯ ಮೂಲಕ ಕನ್ನಡದ ನಿಘಂಟುಗಳಿಗೆ ಪದಗಳು ನೇರವಾಗಿ ಸೇರಬಹುದು. ಆಡುನುಡಿಯಲ್ಲಿ ಪದಗಳನ್ನು ಕನ್ನಡಿಗರು ಹೇಗೆ ಉಲಿಯುವರೋ ಹಾಗೇ ಅವುಗಳನ್ನು ನಿಘಂಟಿಗೆ ಸೇರಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ (ಇಲ್ಲವೇ ಬಳಸಿಲ್ಲದ), ಬರೀ ಬರಹಗಳಲ್ಲಿ ಬಳಸುತ್ತಿರುವ (ಇಲ್ಲವೇ ಬಳಸುತ್ತಿದ್ದ) ಪದಗಳು ಕನ್ನಡದ ಪದಗಳಲ್ಲ. ಕನ್ನಡದ ನಿಘಂಟುಗಳಲ್ಲಿ ಈಗಾಗಲೇ ಇರುವ ಇಂತಹ ಪದಗಳಿಂದ ಕನ್ನಡಿಗರಿಗೆ ಹೆಚ್ಚು ಉಪಯೋಗವಿಲ್ಲ. ಪದಗಳನ್ನು ಆಡುನುಡಿಯಲ್ಲಿ ಹಿಂದೆ ಬಳಸುತ್ತಿದ್ದರೋ ಇಲ್ಲವೋ ಎಂಬ ಪ್ರಶ್ನೆಯನ್ನು ಉತ್ತರಿಸಲು ಆಗದಿದ್ದಲ್ಲಿ ಅಂತಹ ಪದಗಳನ್ನು ಮತ್ತೊಮ್ಮೆ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ ಪದಗಳನ್ನು ಬರಹದ ಮೂಲಕ ನೇರವಾಗಿ ಕನ್ನಡದ ನಿಘಂಟುಗಳಿಗೆ ಸೇರಿಸಿದ ಮಾತ್ರಕ್ಕೆ ಅವುಗಳನ್ನು ಕನ್ನಡಿಗರೆಲ್ಲ (ಇಲ್ಲವೇ ಆಯಾ ಕಸುಬಿನ ಕನ್ನಡಿಗರೆಲ್ಲ) ಆಡುತ್ತಾರೆ ಎಂದೇನಿಲ್ಲ. ಆಡಲೇಬೇಕು ಎಂಬುದಂತೂ ಮೊದಲೇ ಇಲ್ಲ. ಆಡದೆಹೋದರೆ ಜನರೇ ಕೀಳೆಂಬುದಂತೂ ಎಂದೆಂದಿಗೂ ಇಲ್ಲ. ಬರಹದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಆ ಪದಗಳನ್ನು ಇಡೀ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತದಂತೆ ಮಾತ್ರ. ನಿಘಂಟುಗಳಿಗೆ ನೇರವಾಗಿ ಬರಹದಿಂದ ಪದಗಳನ್ನು ಸೇರಿಸುವವರು ಆ ಮೂಲಕ ತಾವು ಸೇರಿಸಿದ ಪದಗಳಿಗೆ ಇಡೀ ಕನ್ನಡಜನಾಂಗದವರ (ಇಲ್ಲವೇ ಆಯಾ ಕಸುಬಿನ ಕನ್ನಡಿಗರ) ಒಪ್ಪಿಗೆಯನ್ನು ಬೇಡುತ್ತಾರಷ್ಟೆ. ಆ ಒಪ್ಪಿಗೆ ಕೊಡುವುದು ಬಿಡುವುದು ಜನರಿಗೆ ಬಿಟ್ಟಿದ್ದು.

ಹೀಗೆ ಪ್ರಾಯೋಗಿಕವಾಗಿ ಕನ್ನಡದ ಬರಹಕ್ಕೆ ಇಲ್ಲವೇ ನಿಘಂಟುಗಳಿಗೆ ಸೇರಿಸಿದ ಪದಗಳು ಸಾಕಷ್ಟು ಕಾಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಮೇಲೆ ಆ ಪದಗಳು ಯಾವ ಹೊಸ ರೂಪವನ್ನು ಪಡೆಯುತ್ತವೋ (ಇಲ್ಲವೇ ಹಾಗೇ ಉಳಿದಿರುತ್ತವೋ) ಅವುಗಳಿಗೆ ಮಾತ್ರ ಕನ್ನಡದ ಪದಗಳೆನಿಸಿಕೊಳ್ಳುವ ಯೋಗ್ಯತೆಯಿರುವುದು.

ಬರಹದಲ್ಲಿ ಜನರು ಆಡದಿರುವುದನ್ನೆಲ್ಲ ಬರೆಯಬಹುದಾದ್ದರಿಂದ ಬರಹದ ಆಧಾರದ ಮೇಲೆ ಯಾವುದು ಕನ್ನಡದ ಪದವೆಂದು ತೀರ್ಮಾನಿಸಲಾಗುವುದಿಲ್ಲ. ಬರಹದಲ್ಲಿ ಏನನ್ನು ಬೇಕಾದರೂ ಬರೆಯುವುದಕ್ಕೆ ಯಾವ ಅಡೆತಡೆಗಳೂ ಇರುವುದಿಲ್ಲ. ಜನರು ಆ ಪದಗಳನ್ನು ಆಡಬೇಕೆಂಬ ಕಟ್ಟಳೆಯಿಲ್ಲದೆ ಹೋದರೆ ನಿಘಂಟಿಗೆ ಏನನ್ನು ಸೇರಿಸಬೇಕು, ಏನನ್ನು ಸೇರಿಸಬಾರದು ಎನ್ನುವುದನ್ನು ತೀರ್ಮಾನಿಸಲಾಗುವುದಿಲ್ಲ. ಈ ಕಟ್ಟಳೆಯಿಲ್ಲದಿದ್ದರೆ ಜನರಿಗೆ ಇಷ್ಟಬಂದ ಪದ ಮತ್ತು ಪದವಲ್ಲದ್ದನ್ನೆಲ್ಲ ಆ ನುಡಿಯ ಲಿಪಿಯಲ್ಲಿ ಬರೆದು ನಿಘಂಟಿಗೆ ಸೇರಿಸಿಬಿಡಬಹುದು! ಬೆರಳೆಣಿಕೆಯ ಜನರು ಇಲ್ಲವೇ ಒಬ್ಬರೇ ಒಬ್ಬರು ಬೇಕಾದ ಅಕ್ಷರಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಪದಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಹುಟ್ಟಿಸಿಕೊಳ್ಳಬಹುದು. ಆದರೆ ಒಂದು ಜನಾಂಗದ ಒಪ್ಪಿಗೆಯಿಲ್ಲದೆ ಅವುಗಳಾವುವೂ ಆ ಜನಾಂಗದ ನುಡಿಗೆ ಸೇರಿದವೆಂದು ಹೇಳಲು ಬರುವುದಿಲ್ಲ. ಇಂತಹ ಪದಗಳನ್ನೆಲ್ಲ ಉಳ್ಳ ನಿಘಂಟುಗಳನ್ನು ಪ್ರಯೋಗದ ನಿಘಂಟುಗಳೆಂದು ಕರೆಯಬಹುದಷ್ಟೆ.

ಎಂತಹ ಹೊಸ ಪದಗಳನ್ನು ಜನರು ಒಪ್ಪುತ್ತಾರೆ?

ಕನ್ನಡಿಗರು ಏಳಿಗೆ ಹೊಂದಬೇಕಾದರೆ ಕನ್ನಡಿಗರ ಬಾಯಲ್ಲಿ ಹೊಸ ಹೊಸ ಪದಗಳು ಹುಟ್ಟುತ್ತಲೇ ಇರಬೇಕೆಂಬುದನ್ನು ಮೇಲೆ ಆಗಲೇ ನೋಡಿದ್ದೇವೆ. ಆದ್ದರಿಂದ ಹೊಸ ಹೊಸ ಪದಗಳನ್ನು ಹುಟ್ಟಿಸದೆ ಏಳಿಗೆಯಿಲ್ಲ. ಆ ಹೊಸ ಪದಗಳನ್ನು ಹುಟ್ಟಿಸುವವರು ಕನ್ನಡದಿಂದಷ್ಟೇ ಅಲ್ಲ, ಬೇರೆ ನುಡಿಗಳಿಂದಲೂ ಪ್ರೇರಣೆಯನ್ನು ಪಡೆದುಕೊಂಡು ಹುಟ್ಟಿಸಬಹುದು. ಆದರೆ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ ಎಂದು ತಿಳಿದಿದ್ದರೆ ಪದಗಳನ್ನು ಹುಟ್ಟಿಸುವವರ ಕೆಲಸವೂ ಸಾರ್ಥಕವಾದಂತೆ, ಆ ಮೂಲಕ ಏಳಿಗೆಗೆ ನಾಂದಿಯನ್ನೂ ಹಾಡಿದಂತಾಗುತ್ತದೆ. ಆದ್ದರಿಂದ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ, ಎಂಥವನ್ನು ಒಪ್ಪುವುದಿಲ್ಲವೆಂದು ಸ್ವಲ್ಪ ನೋಡೋಣ. ಇದು ಮುಖ್ಯವೇಕೆಂದರೆ ಕನ್ನಡದ ಜನರು ಒಪ್ಪಿದ್ದೇ ಕನ್ನಡದ ಪದ. ಮತ್ತೊಂದಲ್ಲ. ಕೆಲವರು ಸಂಸ್ಕೃತದಲ್ಲಿ ಹುಟ್ಟಿಸಿದ ಪದಗಳನ್ನೆಲ್ಲ ಜನರು ಒಪ್ಪುತ್ತಾರೆ (ಇಲ್ಲವೇ ಒಪ್ಪುವುದು ಅವರ ಕರ್ತವ್ಯ) ಎಂದು ತಿಳಿದಿರುತ್ತಾರೆ. ಇದಂತೂ ತಿಳುವಳಿಕೆಯಿಲ್ಲದ್ದು ಎಂದು ಈ ಬರಹದ ಸರಣಿಯಲ್ಲಿ ನಿಮಗೆ ಅರ್ಥವಾಗಿರಲೇಬೇಕೆಂದುಕೊಂಡಿದ್ದೇವೆ.

ಇಲ್ಲಿ "ಹೀಗೆ ಮಾಡಿದರೆ ಜನರು ಖಂಡಿತ ಒಪ್ಪುತ್ತಾರೆ" ಎಂದು ಹೇಳುವ ಯೋಗ್ಯತೆ ನಮಗಿಲ್ಲ. ಆದರೆ ಜನರ ಒಲವುಗಳೆಂಥವೆಂದು ನಾವು ಹುಡುಕುವ ಪ್ರಯತ್ನವನ್ನು ಮಾಡಿದ್ದೇವೆ, ಅಷ್ಟೆ.

ಮೊದಲನೆಯದಾಗಿ ಈಗಾಗಲೇ ತಾವು ಬಳಸುತ್ತಿರುವ ಪದಗಳಿಗೆ ಬದಲಾಗಿ ಸೂಚಿಸುವ ಪದಗಳನ್ನು ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮತ್ತು ಜನರಿಗೆ ಈಗಾಗಲೇ ಗೊತ್ತಿರುವುದರಿಂದ ಆ ಪದಗಳು ಕನ್ನಡದ ಪದಗಳೇ. ಆ ಪದಗಳು ಕನ್ನಡದ ಮೂಲದವೇ ಆಗಿರಲಿ, ದ್ರಾವಿಡಮೂಲದವೇ ಆಗಿರಲಿ, ಸಂಸ್ಕೃತಮೂಲದವೇ, ಇಂಗ್ಲೀಷ್ ಮೂಲದವೇ, ಇಲ್ಲವೇ ಮತ್ತೊಂದು ಮೂಲದವೇ ಆಗಿರಲಿ ಈ ಮಾತು ನಿಜ. ಜನರಿಗೆ ಬೇಕಾದದ್ದು ವಸ್ತುಗಳಿಗೆ ಮತ್ತು ಎಣಿಕೆಗಳಿಗೆ ಒಂದು ಹೆಸರು ಮಾತ್ರ. ಅದನ್ನೇ ಪದವೆನ್ನುವುದು. ಆ ಪದವು ಯಾವ ನುಡಿಯ ಮೂಲದ್ದು ಎನ್ನುವುದು ನುಡಿಯರಿಗರ ತಲೆಯನೋವೇ ಹೊರತು ಜನರದಲ್ಲ. ಆ ಹಳೆಯ ಪದಗಳಲ್ಲಿ "ಇಂಥದ್ದು ಸರಿಯಿಲ್ಲ, ಅಂಥದ್ದು ಸರಿಯಿಲ್ಲ" ಎಂಬ ಅಭಿಪ್ರಾಯವು ಕೆಲವರಿಗೆ ಇದ್ದರೂ ಅದೆಲ್ಲ ಜನರಿಗೆ ಬೇಕಿಲ್ಲ. ಒಪ್ಪುವ ಜನರದೇ ಕೊನೆಯ ತೀರ್ಪಾದ್ದರಿಂದ ಆ ಪದಗಳಿಗೆ "ಎಲ್ಲವೂ ಸರಿಯಿದೆ" ಎಂದೇ ಒಪ್ಪಿಕೊಳ್ಳಬೇಕು! ಜನರಿಗೆ ಅಭ್ಯಾಸಬಲದಿಂದ ಈಗಾಗಲೇ ಇರುವ ಪದಗಳೇ ಹೆಚ್ಚು ಬಾಯಿಗೆ ಬರುತ್ತವೆ. ಸಂಸ್ಕೃತಮೂಲದ ಒಂದು ಪದವು ಕನ್ನಡಿಗರ ಬಾಯಲ್ಲಿ 500BC ನಿಂದ ಓಡಾಡುತ್ತಿದ್ದರೆ ಅದನ್ನು 2008AD ನಲ್ಲಿ ಬದಲಾಯಿಸುವ ಆಸೆಯನ್ನೇ ಇಟ್ಟುಕೊಳ್ಳಬಾರದು. ಆ ಹಳೆಯ ಪದವು ಕನ್ನಡಿಗರ ನಾಲಿಗೆಯೆಂಬ ಪರೀಕ್ಷೆಯಲ್ಲಿ ಪಾಸಾಗಿಲ್ಲವೆ? ಅಷ್ಟೇ ಸಾಕು ಅವುಗಳನ್ನು ಕನ್ನಡದ ಪದಗಳೆಂದು ಕರೆಯಲು! ಹಾಗೆಯೇ 500BC ನಿಂದ ಓಡಾಡುತ್ತಿರುವ ಒಂದು ಅಚ್ಚಕನ್ನಡದ ಪದವನ್ನು ಕೂಡ ಮತ್ತೊಂದು ಕನ್ನಡದ ಪದದಿಂದ 2008AD ನಲ್ಲಿ ಬದಲಾಯಿಸುವುದೂ ಕಷ್ಟ. ಜನರು ಅಭ್ಯಾಸಬಲದಿಂದ ಬೇಡವೆನ್ನುತ್ತಾರೆ. ಆದ್ದರಿಂದ ಮೊದಲನೆಯದಾಗಿ ಈಗಾಗಲೇ ಕನ್ನಡದಲ್ಲಿರುವ ಪದಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಬದಲಾಯಿಸಲು ಹೊರಡುವುದರಿಂದ ಕನ್ನಡಕ್ಕೆ ಹೆಚ್ಚು ಪದಗಳು ಸೇರಿದರೆ ಅದರಿಂದ ಕನ್ನಡದಲ್ಲಿ ಪದಗಳನ್ನು ಹುಟ್ಟಿಸುವುದು ಹೇಗೆಂದು ಜನರಿಗೆ ಅರ್ಥವಾಗುವುದರಿಂದ ಹುಟ್ಟಿಸುವವರಿಗೆ ಅದು ಒಳ್ಳೆಯದೇ. ಆದರೆ ಅವುಗಳನ್ನು ಜನರು ಒಪ್ಪಲಿಲ್ಲವೆಂದು ಬೇಜಾರು ಮಾಡಿಕೊಳ್ಳಬಾರದಷ್ಟೆ!

ಇನ್ನು ಜನರು ಈಗಾಗಲೇ ಬಳಸದ ಪದಗಳು. ಈಗಾಗಲೇ ಬಳಸದ ಪದಗಳು ಯಾವ ವಸ್ತು ಇಲ್ಲವೇ ಎಣಿಕೆಯನ್ನು ಸೂಚಿಸುತ್ತವೋ ಆ ವಸ್ತುಗಳು ಇಲ್ಲವೇ ಎಣಿಕೆಗಳನ್ನು ಅವರು ಕಂಡೇ ಇರಲಿಲ್ಲ, ಇಲ್ಲವೇ ಕಂಡಿದ್ದರೂ ಅದಕ್ಕೆ ಒಂದು ಪದವನ್ನು ತಾವೇ ಕೊಟ್ಟುಕೊಂಡಿಲ್ಲ ಇಲ್ಲವೇ ಇನ್ನೊಬ್ಬರಿಂದ ಕೇಳಿ ತಿಳಿದುಕೊಂಡಿಲ್ಲವೆಂದರ್ಥ. ಇಂತಹ ವಸ್ತುಗಳಿಗೆ ಇಲ್ಲವೇ ಎಣಿಕೆಗಳಿಗೆ ಪದಗಳನ್ನು ಕೊಡುವುದು ತುಸು ಸುಲಭ. ಈ ಗುಂಪಿನ ಪದಗಳಿಗೆ ಕನ್ನಡಿಗರ ಒಲವು ಹೀಗಿದೆ (ಇದು ಪೂರ್ಣ ಪಟ್ಟಿಯಲ್ಲ):
  • ಕನ್ನಡದಲ್ಲಿ ಈಗಾಗಲೇ ಜನರಿಗೆ ತಿಳಿದಿರುವ ಪದಗಳನ್ನು ಬಳಸಿ ಕಟ್ಟಿದ ಪದಗಳು ಬಹಳ ಸುಲಭವಾಗಿ ಒಪ್ಪಲ್ಪಡುತ್ತವೆ, ಎಕೆಂದರೆ ಅವುಗಳನ್ನು ಉಲಿಯುವುದೂ ಸುಲಭ ಮತ್ತು ಹೊಸ ಪದದ ಅರ್ಥವನ್ನು ಕೂಡ ಅವು "ಹೆಚ್ಚು" ಗುರುತಿಸುತ್ತವೆ.
  • ಪದಗಳು ಚಿಕ್ಕದಾಗಿರಬೇಕೆಂಬುದು ಕೂಡ ಒಂದು ಕಟ್ಟಳೆ. ತುಂಬ ದೊಡ್ಡದಾದಷ್ಟೂ ಅವುಗಳನ್ನು ಉಲಿಯುವುದು ಕಷ್ಟ. ಕನ್ನಡದವೇ ಆಗಿದ್ದರೂ ದೊಡ್ಡ ಪದಗಳನ್ನು ಜನರು ತೊರೆದು ಚಿಕ್ಕದಾದ ಬೇರೆಯ ನುಡಿಯ ಪದವನ್ನಾದರೂ ಆಡುತ್ತಾರೆ.
  • ಹಳಗನ್ನಡದ ಪದಗಳನ್ನು ನೇರವಾಗಿ ಇಲ್ಲವೇ ಅವುಗಳನ್ನು ಬಳಸಿ ಕಟ್ಟಿದ ಪದಗಳನ್ನು ಕೂಡ ಜನರು ಸುಲಭವಾಗಿ ಒಪ್ಪುತ್ತಾರೆ, ಎಕೆಂದರೆ ಆ ಪದಗಳಲ್ಲಿ ಈಗಿನ ಕನ್ನಡದ ಪದಗಳದೇ ಸೊಗಡಿರುತ್ತದೆ, ಮತ್ತು ಅವುಗಳನ್ನು ಉಲಿಯುವುದೂ ಸುಲಭ.
  • ಈಗಾಗಲೇ ತಿಳಿದಿರುವ ಪದಗಳಂತೆಯೇ ಕೇಳಿಸುವ ಪದಗಳನ್ನು ಜನರು ಒಪ್ಪುವ ಸಾಧ್ಯತೆ ಹೆಚ್ಚು. ಇದೇಕೆಂದರೆ ಒಂದೇ ಬಗೆಯಲ್ಲಿ ಕೇಳಿಸುವ ಪದಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ
  • ಹೊಸ ಪದಗಳ ಅರ್ಥವನ್ನು ಅವರು ಸುಲಭವಾಗಿ ಗುರುತಿಸಲಾದರೆ ಅದನ್ನು ಒಪ್ಪುವ ಸಾಧ್ಯತೆ ಹೆಚ್ಚು. ಇದಕ್ಕೂ ನೆನಪಿಟ್ಟುಕೊಳ್ಳುವುದು ಸುಲಭವೆನ್ನುವುದೇ ಕಾರಣ.
  • ತಂತಮ್ಮ ಕಸುಬುಗಳಲ್ಲಿ ಹೆಸರುವಾಸಿಯಾದ ನುಡಿಗಳ ಪದಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ, ಅವುಗಳಂತೆ ಕೇಳಿಸುವ ಪದಗಳನ್ನೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.
ಹೀಗೆ ಒಂದು ಹೊಸ ಪದವನ್ನು ಜನರು ಒಪ್ಪುವಂತೆ ಮಾಡುವುದು (ಮತ್ತು ಆ ಮೂಲಕ ಕನ್ನಡಕ್ಕೆ ಸೇರಿಸುವುದು) ಸುಲಭದ ಕೆಲಸವಲ್ಲ. ಹಾಗೆಯೇ ಅಷ್ಟು ಕಷ್ಟದ ಕೆಲಸವೂ ಅಲ್ಲ. ಯಾವ ಬಗೆಯ ಪದಗಳನ್ನು ಕನ್ನಡಿಗರು ಒಪ್ಪುತ್ತಾರೆ ಎನ್ನುವ ವಿಷಯದಲ್ಲಿ ನಾವು ಬಹಳ ಮೇಲೆಮೇಲೆ ಇಲ್ಲಿ ತಿಳಿಸಿಕೊಟ್ಟಿದ್ದೇವೆ. ಈ ವಿಷಯದಲ್ಲಿ ಇನ್ನೂ ಹೆಚ್ಚು ಸಂಶೋಧನೆಯಾಗಬೇಕು. ಕನ್ನಡಿಗರಾದ ನಾವು ಈ ಮೂಲಕ ನಮ್ಮನ್ನೇ ಅರ್ಥಮಾಡಿಕೊಳ್ಳಬೇಕು, ಹೊಸ ಹೊಸ ಪದಗಳನ್ನು ನಮ್ಮ ನುಡಿಗೆ ಸೇರಿಸಿಕೊಳ್ಳುತ್ತ ಹೋಗಬೇಕು, ಮತ್ತು ಆ ಮೂಲಕ ಏಳಿಗೆ ಹೊಂದಬೇಕು. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೪: ಬರೆಯುವುದರ ಗುರಿಯನ್ನು ತಿಳಿದಾಗ ಸಂಸ್ಕೃತದ ಬಳಕೆ ಕಡಿಮೆಯಾಗಲೇಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಕನ್ನಡಿಗರಿಗೆ ಸಂಸ್ಕೃತವು ಪರಿಚಯವಾದದ್ದು ಗ್ರಾಂಥಿಕ ಭಾಷೆಯಾಗಿ

ಸಂಸ್ಕೃತವು ಹಿಂದೆ ಎಂದು ಎಲ್ಲಿ ಯಾವ ಜನರ ಆಡುನುಡಿಯಾಗಿತ್ತೆಂಬುದರ ವಿಷಯದಲ್ಲಿ ತಿಳುವಳಿಕಸ್ತರಲ್ಲಿ ಒಮ್ಮತವಿಲ್ಲ. ಆದರೆ ಸಂಸ್ಕೃತವು ಇಂದಿನ ಬಿಹಾರ ರಾಜ್ಯದಲ್ಲಿ ಸುಮಾರು 500BC ವರೆಗಾಗಲೇ ಆಡುನುಡಿಯಾಗಿ ಉಳಿದಿರಲಿಲ್ಲವೆಂದು ಹೇಳಲು ಗೌತಮ ಬುದ್ಧನು "ಎಲ್ಲರ ನುಡಿ"ಯಾಗಿದ್ದ ಪಾಳಿಯಲ್ಲಿ ತನ್ನ ಸಿದ್ಧಾಂತವನ್ನು ಹರಡಿದ್ದೇ ಆಧಾರವಾಗಿದೆ. ಇನ್ನು ಕರ್ನಾಟಕದ ಮಟ್ಟಿಗಂತೂ ದ್ರಾವಿಡನುಡಿಯು ಸುಮಾರು 1500BC ಯಿಂದಲೇ ಚಾಲ್ತಿಯಿತ್ತೆಂಬುದು ನುಡಿಯರಿಗರ ಮತವಾಗಿದೆ. ಹೀಗಿರುವುದರಿಂದ ಕರ್ನಾಟಕದ ಗೊತ್ತಿರುವ 3,500 ವರ್ಷಗಳ ಹಳಮೆಯಲ್ಲಿ ಕರ್ನಾಟಕದಲ್ಲಿ ಎಲ್ಲೂ ಸಂಸ್ಕೃತವು ಯಾರ ಆಡುನುಡಿಯೂ ಆಗಿರಲಿಲ್ಲವೆಂದು ತೀರ್ಮಾನಿಸಬಹುದು.

ಹಲ್ಮಿಡಿ ಶಾಸನದ ಕಾಲವನ್ನು (450 AD) ಕನ್ನಡದ ಬರಹದ ಹುಟ್ಟೆಂದು ಏಣಿಸಿದರೆ ಕನ್ನಡದ ಬರಹವು ಹುಟ್ಟಿದಾಗಲೇ ಸಂಸ್ಕೃತವು ಆಡುನುಡಿಯಾಗಿರಲಿಲ್ಲ, ಬರಿಯ ಗ್ರಾಂಥಿಕ ಭಾಷೆಯಾಗಿತ್ತು. ಇವತ್ತಿನ ಬಿಹಾರ ರಾಜ್ಯದಲ್ಲಿ ಆಡುನುಡಿಯಾಗಿ ಸಂಸ್ಕೃತವು ಸತ್ತು ಹಲ್ಮಿಡಿ ಶಾಸನದ ಕಾಲದಲ್ಲೇ ಕಡಿಮೆಯೆಂದರೆ 950 ವರ್ಷಗಳಾಗಿದ್ದವು. ಕರ್ನಾಟಕದಲ್ಲಂತೂ ಹಲ್ಮಿಡಿ ಶಾಸನದ 1950ವರ್ಷಗಳ ಹಿಂದಿನ ಹಳಮೆಯಲ್ಲೆಲ್ಲೂ ಸಂಸ್ಕೃತವು ಆಡುನುಡಿಯಾಗಿರಲಿಲ್ಲವೆಂದು ತೀರ್ಮಾನಿಸಬಹುದು.

ಹಾಗೆಂದ ಮಾತ್ರಕ್ಕೆ ಸಂಸ್ಕೃತದಲ್ಲಿ ವೇದ-ಉಪನಿಷತ್ತುಗಳ ಕಲಿಕೆ-ಕಲಿಸುವಿಕೆಗಳು ನಡೆಯುತ್ತಿರಲಿಲ್ಲವೆಂದೇನು ನಾವು ಹೇಳುತ್ತಿಲ್ಲ. ಕರ್ನಾಟಕದಲ್ಲೂ ಅವು ನಡೆಯುತ್ತಿದ್ದವೆಂದು ನಂಬಲು ಆಧಾರಗಳಿವೆ. ಆದರೆ ವೇದ-ಉಪನಿಷತ್ತುಗಳ ಕಲಿಕೆ-ಕಲಿಸುವಿಕೆಗಳು ಇದ್ದ ಮಾತ್ರಕ್ಕೆ ಸಂಸ್ಕೃತವನ್ನು ಆಡುನುಡಿಯೆನ್ನಲಾಗುವುದಿಲ್ಲ. ಕರ್ನಾಟಕದ ಆಗಿನ ಬ್ರಾಹ್ಮಣರು ಸಂಸ್ಕೃತದಲ್ಲಿ ತಮ್ಮ ಕಲಿಕೆ-ಕಲಿಸುವಿಕೆಗಳನ್ನು ನಡೆಸಿದ್ದರೂ ಬೇರೆಲ್ಲ ಕೆಲಸಗಳಿಗೆ ಸಂಸ್ಕೃತವನ್ನು ಬಳಸುತ್ತಿರಲಿಲ್ಲ.

ಒಟ್ಟಿನಲ್ಲಿ ಕನ್ನಡದಲ್ಲಿ ಬರಹವು ಹುಟ್ಟಿದಾಗಲೇ ಸಂಸ್ಕೃತವನ್ನು ಕನ್ನಡಿಗರು ಒಂದು ಆಡುನುಡಿಯಾಗಿ ಕಾಣದೆ ಬರಿಯ ಗ್ರಾಂಥಿಕ ಭಾಷೆಯಾಗಿ ಮಾತ್ರ ಕಾಣುತ್ತಿದ್ದರು ಎನ್ನುವುದು ಸ್ಪಷ್ಟ. ಸಂಸ್ಕೃತವು ಗ್ರಾಂಥಿಕ ಭಾಷೆಯಾಗಿ ಉಳಿದುಕೊಂಡಿದ್ದಕ್ಕೆ ಕಾರಣ ಅದರಲ್ಲಿದ ಅಪಾರವಾದ ಜ್ಞಾನದ ಭಂಡಾರವೇ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಇಂತಹ ಯಾರೂ ಮಾತನಾಡದ, ಬರಿಯ ಬರಹದಲ್ಲಿ ಮಾತ್ರ ಉಳಿದುಕೊಕೊಂಡಿರುವ ಒಂದು ನುಡಿಯು ತಿಳುವಳಿಕಸ್ತ ಕನ್ನಡಿಗರಿಗೆ ಪ್ರೇರಣೆಯಾಗಿತ್ತು. ಈ ಪ್ರೇರಣೆಯಿಂದ ಒಂದು ದೊಡ್ಡ ತಪ್ಪು ಕನ್ನಡದಲ್ಲಿ ಈ ತಿಳುವಳಿಕಸ್ತರಿಂದ ಅವರ ಅರಿವಿಲ್ಲದೆಯೇ ನಡೆದುಹೋಯಿತು. ಅದೇನೆಂದು ಮುಂದೆ ನೋಡೋಣ.

ಗ್ರಾಂಥಿಕ ಭಾಷೆಗಳಿಗೂ ಆಡುನುಡಿಗಳಿಗೂ ಇರುವ ಮುಖ್ಯವಾದ ವ್ಯತ್ಯಾಸ

ಗ್ರಾಂಥಿಕ ಭಾಷೆಗಳಲ್ಲಿ ಬರೆದದ್ದನ್ನು ಇಂಥದ್ದೊಂದು ಜನಾಂಗದವರ ನಾಲಿಗೆಗೆ ಯಾವುದೇ ತೊಡಕಿಲ್ಲದೆ ಉಲಿಯಲು ಆಗಬೇಕು ಎಂಬುದೇ ಇರುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗ್ರಾಂಥಿಕ ಭಾಷೆಗಳನ್ನು ಉಲಿಯುವವರೇ ಇಲ್ಲದಿರುವುದರಿಂದ ಉಲಿಯಲಾಗದ್ದನ್ನೆಲ್ಲ ಆ ಭಾಷೆಯಲ್ಲಿ ಬರೆದರೂ ತೊಂದರೆಯಿಲ್ಲ. ಗ್ರಾಂಥಿಕ ಭಾಷೆಗಳಲ್ಲಿ ಬರೆಯುವುದರ ಉದ್ದೇಶ ಅದನ್ನು ಇಂಥದ್ದೊಂದು ಜನಾಂಗವು ಉಲಿಯಲಿ ಎಂಬುದಾಗಿರುವುದೇ ಇಲ್ಲ. ಯಾರಿಗೂ ಉಲಿಯಲಾಗದಿದ್ದರೂ ಸರಿ, ಗ್ರಾಂಥಿಕ ಭಾಷೆಗಳಲ್ಲಿ ಬೇಕಾದ್ದನ್ನು ಬರೆದುಕೊಂಡು ಹೋಗಬಹುದು. ಆದರೆ ಗ್ರಾಂಥಿಕ ಭಾಷೆಗಳಿಗೂ ಇಂಥದ್ದೆಂಬ ಸೊಲ್ಲರಿಮೆಯು ಇದ್ದೇ ಇರುತ್ತದೆ. ಈ ಸೊಲ್ಲರಿಮೆಯು ಗಣಿತದ ಸೂತ್ರಗಳಿದ್ದಂತೆ. ಈ ಗಣಿತದ ಸೂತ್ರಗಳನ್ನು ಮೀರದಿದ್ದರೆ ಸಾಕು, ಬರೆದಿದ್ದೆಲ್ಲ "ಸರಿ"ಯೆಂದೇ ಎಣಿಸಲಾಗುವುದು. ಹೀಗೆ ಯಾವ ಪದವು ಸರಿ, ಯಾವ ಪದವು ಸರಿಯಲ್ಲ ಎನ್ನುವುದಕ್ಕೆ ಗ್ರಾಂಥಿಕ ಭಾಷೆಗಳಿಗೆ ಅವುಗಳ ಸೊಲ್ಲರಿಮೆಗಳದೇ ಕೊನೆಯ ತೀರ್ಪು, ಯಾವುದೇ ಜನಾಂಗದ್ದಲ್ಲ.

ಆದರೆ ಆಡುನುಡಿಗಳು ಹಾಗಲ್ಲ. ಇವುಗಳನ್ನು ಜನರು "ಆಡು"ವುದರಿಂದಲೇ ಇವುಗಳನ್ನು ಆಡುನುಡಿಯೆಂದು ಕರೆಯುವುದು. ಜನರ ಆಡುನುಡಿಗೆ ಯಾವುದಾದರೂ ಹೊಸದೊಂದು ಪದವು ಸೇರಬೇಕಾದರೆ ಅವುಗಳನ್ನು ಇಂಥದ್ದೆಂಬ ಒಂದು ಜನಾಂಗವು ಪ್ರಯೋಗಿಸಿ, "ಸೈ!" ಎಂದು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಳ್ಳಬೇಕಾದರೆ ಆ ಪದಗಳು ಈ ಜನಾಂಗದವರ ನಾಲಿಗೆಗಳಿಗೆ ಯಾವುದೇ ತೊಡಕಿಲ್ಲದೆ ಉಲಿಯಲಾಗಬೇಕು. ಉಲಿಯಲು ತೊಡಕಾದರೆ ಆ ಪದವನ್ನು ಈ ಜನಾಂಗದವರು ಇಲ್ಲವೇ ಬೇಡ, "ಪೋ!" ಎಂದು ಹಿಂತಿರುಗಿಸಿ ಕಳುಹಿಸಬಹುದು, ಇಲ್ಲವೇ ಅದಕ್ಕೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡು ಉಲಿಯುವಂತಾಗಿಸಿಕೊಂಡು ತಮ್ಮ ಆಡುನುಡಿಗೆ ಸೇರಿಸಿಕೊಳ್ಳಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಡುನುಡಿಗಳಿಗೆ ಉಲಿಯುವ ಇಂಥದ್ದೆಂಬ ಜನಾಂಗವು ಇರುವುದರಿಂದ ಉಲಿಯಲಾರದ್ದು ಯಾವುದೂ ಇವುಗಳಲ್ಲಿ ಇರುವುದೇ ಇಲ್ಲ. ಉಲಿಯಲಾರದನ್ನು ಇವುಗಳ ಮೇಲೆ ಹೇರಲಾಗುವುದಿಲ್ಲ. ಹೀಗಿರುವುದರಿಂದ ಆಡುನುಡಿಗಳಲ್ಲಿ ಯಾವ ಪದವು "ಸರಿ", ಯಾವುದುದು "ತಪ್ಪು" ಎನ್ನುವುದನ್ನು ತೀರ್ಮಾನಿಸುವುದು ಆ ಆಡುನುಡಿಯನ್ನಾಡುವ ಜನಾಂಗವೇ.

ಆ ವ್ಯತ್ಯಾಸವನ್ನು ಅರಿಯದವರಿಂದ ಕನ್ನಡಕ್ಕಾದ ತೊಂದರೆ

ಇನ್ನು ಸಂಸ್ಕೃತ-ಕನ್ನಡಗಳ ವಿಷಯಕ್ಕೆ ಹಿಂತಿರುಗೋಣ. ಬಹಳ ಹಿಂದೆ ಬರಿಯ ಗ್ರಾಂಥಿಕ ಭಾಷೆಯಾಗಿದ್ದ ಸಂಸ್ಕೃತದಿಂದ ಪ್ರೇರಣೆ ಪಡೆದ ಕನ್ನಡದ ತಿಳುವಳಿಕಸ್ತರಿಗೆ ಈಗ ಮೇಲಿನ ಎರಡು ಪ್ಯಾರಾಗಳಲ್ಲಿ ನಾವು ತಿಳಿಸಿಕೊಟ್ಟಿರುವ ಗ್ರಾಂಥಿಕ ಭಾಷೆಗಳಿಗೂ ಆಡುನುಡಿಗಳಿಗೂ ಇರುವ ವ್ಯತ್ಯಾಸವನ್ನು ಅರಿತಿರಲಿಲ್ಲವೆನ್ನಬಹುದು. ಹೀಗಿರುವುದರಿಂದ ಆ ತಿಳುವಳಿಕಸ್ತರು ಕನ್ನಡದಲ್ಲಿ ಬರೆಯಲು ಹೊರಟಾಗ ಗ್ರಾಂಥಿಕ ಭಾಷೆಯ ನಿಯಮಗಳನ್ನೇ ತಮ್ಮ ಬರಹಗಳಿಗೆ ಹಚ್ಚಿಕೊಂಡುಬಿಟ್ಟರು. ಎಂದರೆ - ತಾವು ಬರೆದ ಕನ್ನಡದ ಬರಹಗಳನ್ನು "ಆಡುವ" ಒಂದು ಜನಾಂಗವಿದೆಯೆನ್ನುವುದನ್ನೇ ಮರೆತುಬಿಟ್ಟರು. ತಾವು ಬರೆದದ್ದನ್ನೆಲ್ಲ ಪ್ರಯೋಗ ಮಾಡಿ "ಸೈ!" ಎನ್ನುವ ಇಲ್ಲವೇ "ಪೋ!" ಎನ್ನುವ ಕೋಟಿಗಟ್ಟಲೆ ನಾಲಿಗೆಗಳಿವೆಯೆನ್ನುವುದನ್ನೇ ಮರೆತುಬಿಟ್ಟರು.

ತಾವು ಬರೆದದ್ದು ಹುಲುಜನರಿಗೆ ತಲುಪಬೇಕೆಂಬ ಮಹದಾಸೆಯನ್ನೂ ಅವರು ಇಟ್ಟುಕೊಂಡಿರಲಿಲ್ಲವೇನೋ (ಆಗ ಮುದ್ರಣವೆನ್ನುವುದೂ ಇರಲಿಲ್ಲ). ಇಷ್ಟಲ್ಲದೆ ತಿಳುವಳಿಕಸ್ತರಿಗೂ ಹುಲುಜನರಿಗೂ ನಡುವೆ ಆ ವರೆಗಾಗಲೇ ಒಂದು ಕಂದರವು ಏರ್ಪಟ್ಟಿದ್ದರಿಂದ ತಾವು ಬರೆದ ವಿಷಯಗಳನ್ನು ಅರಿತುಕೊಳ್ಳುವ ಯೋಗ್ಯತೆಯೇ ಹುಲುಜನರಿಗೆ ಇಲ್ಲವೆಂದೂ ಅವರು (ಸರಿಯಾಗಿ) ಎಣಿಸಿರಬಹುದು. ಹಾಗೆ ಎಣಿಸಿಲ್ಲದಿದ್ದರೂ ಆ ಯೋಗ್ಯತೆಯು ಹುಲುಜನರಿಗೆ ಬರಬೇಕಾದರೆ ತಮ್ಮ ಬರಹವು ಯಾವ ರೀತಿ ಇರಬೇಕೆಂದು (ಬುದ್ಧನು ಪಾಳಿಯಲ್ಲಿ ಹೇಳಿಕೊಡಲು ತೀರ್ಮಾನಿಸಿದಂತೆ) ವೈಜ್ಞಾನಿಕವಾಗಿ ತೀರ್ಮಾನಿಸಿಲ್ಲದಿರುವುದಂತೂ ಖಂಡಿತ.

ಅಲ್ಲದೆ, ಬುದ್ಧನು ಜನರ "ಮೈಮೇಲೆ ಬಿದ್ದು" ತಿಳಿಹೇಳಲು ಹೊರಟಂತೆ ಕನ್ನಡದ ಈ ಮೊದಮೊದಲ ತಿಳುವಳಿಕಸ್ತರು ಹೋಗಲಿಲ್ಲವೆನ್ನುವುದೂ ಸ್ಪಷ್ಟವಾಗಿದೆ (ಈ ಕೆಲಸವನ್ನು ಮಾಡಿದ ಕನ್ನಡದ ಮೊಟ್ಟಮೊದಲಿಗನೆಂದರೆ 12ನೇ ಶತಮಾನದ ಬಸವಣ್ಣನವರು ಎನ್ನಬಹುದು. ಹೀಗೆ ಹುಲುಜನರ ಬಗೆಗಿನ ಕಾಳಜಿಯು ಬಸವಣ್ಣನವರಿಗೆ ಇದ್ದುದರಿಂದಲೇ ವಚನಸಾಹಿತ್ಯವು ಆಡುನುಡಿಗೆ ಬಹಳ ಹತ್ತಿರವಾಗಿರುವುದು). ಒಟ್ಟಿನಲ್ಲಿ ಕನ್ನಡದ ಬರಹವು ಹುಟ್ಟಿದಾಗಲೇ ಅದಕ್ಕೂ 99% ಕನ್ನಡಿಗರಿಗೂ ಯಾವುದೇ ನಂಟಿರಲಿಲ್ಲ, ಆ ನಂಟು ಮುಂದೆ ಬರುತ್ತದೆಯೆಂಬ ಮುನ್ನೋಟವಂತೂ ಮೊದಲೇ ಅವರಿಗಿರಲಿಲ್ಲ, ಆ ನಂಟು ಬರದೆ ಹೋದರೆ ಕನ್ನಡಿಗರಿಗೆ ಏಳಿಗೆಯಿಲ್ಲವೆಂಬ ವಿಷಯವೂ ಅವರಿಗೆ ತಿಳಿದಿರಲಿಲ್ಲ. ಹೀಗೆ ಸಂಸ್ಕೃತದಿಂದ ಪ್ರೇರಣೆ ಪಡೆದ ಕನ್ನಡದ ತಿಳುವಳಿಕಸ್ತರು ಕನ್ನಡದ ಬರಹವನ್ನು ಕನ್ನಡಿಗರಿಗೇ ನಂಟಿಲ್ಲದಂತೆ ಬೆಳೆಸಿದರು. ಇದು ಆ ತಿಳುವಳಿಕಸ್ತರ ಅರಿವಿಲ್ಲದೆ ಅವರ ಕೈಯಿಂದಲೇ ಕನ್ನಡ-ಕನ್ನಡಿಗ-ಕರ್ನಾಟಕಗಳಿಗಾದ ಒಂದು ದೊಡ್ಡ ದುರಂತವು. ಇದೇ ತಪ್ಪು ಇಂದಿಗೂ ಮುಂದುವರೆಯುತ್ತಿದೆ.

ಮುಂದಾಗಬೇಕಾದುದು

ಇಲ್ಲಿಯವರೆಗೆ ಕನ್ನಡದ ಬರಹಕ್ಕೆ ಯಾವ ರೀತಿಯ ತೊಂದರೆಯಿದೆಯೆಂದು ತೋರಿಸಿದ್ದಾಯಿತು. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯುವಂತೆ ಬರೆಯಬೇಕೆಂದು ತಿಳುವಳಿಕಸ್ತರು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕಾದ ವಿಷಯಗಳು ಬಹಳ ಇವೆಯೆಂದೂ ಅರಿತುಕೊಳ್ಳಬೇಕು. ವಿಜ್ಞಾನ - ಗಣಿತ - ಮುಂತಾದವುಗಳು ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯಬೇಕಾದವುಗಳೇ. ಹಾಗೆಯೇ ಸರ್ಕಾರದ ಮತ್ತು ಖಾಸಗಿ ಕಂಪನಿಗಳ ಸುತ್ತೋಲೆಗಳು, ಪತ್ರಿಕೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಳಸಲಾಗುವ ಸೂಚನೆಗಳು - ಇವೆಲ್ಲವೂ ಎಲ್ಲರಿಗೂ ತಿಳಿಯುವಂತಹ ಕನ್ನಡದಲ್ಲಿರಬೇಕು. ಜನರಿಗೆ ತಿಳಿಯಬೇಕಾದದ್ದೇ ಬರಹದ ಮುಖ್ಯವಾದ ಉಪಯೋಗವೆಂದು ಮರೆಯಬಾರದು. ಸಂಸ್ಕೃತದಲ್ಲಿ ಬರೆಯುವುದಕ್ಕೂ ಕನ್ನಡದಲ್ಲಿ ಬರೆಯುವುದಕ್ಕೂ ಇರುವ ಈ ಹೆಚ್ಚು-ಕಡಿಮೆಯನ್ನು ಜನರು ಚೆನ್ನಾಗಿ ಅರಿತುಕೊಳ್ಳಬೇಕು. ಒಟ್ಟಿನಲ್ಲಿ ಬರೆಯುವುದರ ಗುರಿಯೇನೆಂದು ತಿಳಿದುಕೊಂಡರೆ ಅತಿಯಾಗಿ ಸಂಸ್ಕೃತದ ಪದಗಳನ್ನು ಬಳಸಿ ಕನ್ನಡದಲ್ಲಿ ಬರೆಯುವುದು ಪೆದ್ದತನವೇ ಎಂದು ತಿಳುವಳಿಕಸ್ತರಿಗೆ ಅರಿವಾಗದೆ ಹೋಗುವುದಿಲ್ಲವೆಂದು ನಮ್ಮ ಅನಿಸಿಕೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೩: ಬದಲಾಗಿರುವ ಸಾಮಾಜಿಕ ನೆಲೆ, ಕುಗ್ಗಿರುವ ಸಂಸ್ಕೃತದ ಬೇಕಾಗುವಿಕೆ, ಹಿಗ್ಗಿರುವ ಕನ್ನಡದ ಬೇಕಾಗುವಿಕೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಕನ್ನಡದಲ್ಲಿ ಸಂಸ್ಕೃತದ ಪದಗಳನ್ನು ಹೆಚ್ಚು ಹೆಚ್ಚು ಬಳಸುವುದು "ಒಳ್ಳೆಯ ಕನ್ನಡ"ವೆಂಬ ತಪ್ಪು ತಿಳುವಳಿಕೆಯು ಕನ್ನಡಿಗರಿಗೆ ಇದೆಯೆಂದೂ, ಅದು ಅಡಿಪಾಯವಿಲ್ಲದ ಕಟ್ಟಡವೆಂದೂ, ಅದರಿಂದ ಆಗುತ್ತಿರುವ ತೊಂದರೆಗಳೇನೆಂದೂ ಇಲ್ಲಿಯವರೆಗೆ ತೋರಿಸಿದ್ದಾಯಿತು. ಈಗ ಸಂಸ್ಕೃತವನ್ನು ಮೊಟ್ಟಮೊದಲಿಗೆ ಕನ್ನಡಿಗರು ಗೌರವದಿಂದ ಕಾಣಲು ಶುರುಮಾಡಿದ ದಿನಗಳಿಗೂ ಇವತ್ತಿಗೂ ಯಾವ ಯಾವ ಸಾಮಾಜಿಕ ಬದಲಾವಣೆಗಳಾಗಿವೆ, ಆ ಬದಲಾವಣೆಗಳಿಂದ ಹೇಗೆ ಸಂಸ್ಕೃತದ ಬೇಕಾಗುವಿಕೆ ಕುಗ್ಗಿದೆ, ಮತ್ತು ಹೇಗೆ ಎಲ್ಲರ ಕನ್ನಡದ ಬೇಕಾಗುವಿಕೆ ಹೆಚ್ಚಿದೆಯೆಂದು ನೋಡೋಣ. ಬದಲಾಗಿರುವ ಸಾಮಾಜಿಕ ನೆಲೆಯನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದಲೇ ಕನ್ನಡವು ಸಂಸ್ಕೃತಮಯವಾಗದಿದ್ದರೆ ಅದು "ಅಭಿವೃದ್ಧಿ ಹೊಂದದೆ ಹೋಗುತ್ತದೆ" ಎಂಬ ಹೆದರಿಕೆಯು ಕೆಲವರಿಗೆ ಇರುವುದು. ಬದಲಾಗಿರುವ ಸಾಮಾಜಿಕ ನೆಲೆಯನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದಲೇ ಬರಹದ ಕನ್ನಡವು ಸಂಸ್ಕೃತಮಯವಾಗಿರುವುದು. ಈ ವಿಷಯವನ್ನು ಸರಿಯಾಗಿ ಅರಿತುಕೊಂಡರೆ ಜ್ಞಾನ-ವಿಜ್ಞಾನಗಳ ಕಲಿಕೆ ಮತ್ತು ಕಲಿಸುವಿಕೆಗೆ ಎಲ್ಲರಿಗೂ ಈಗಾಗಲೇ ತಿಳಿದಿರುವ ಕನ್ನಡವೇ ಸರಿಯಾದದ್ದೆಂದು ತಿಳಿಯಾಗುತ್ತದೆ. ಆದ್ದರಿಂದ ಆ ಬದಲಾವಣೆಗಳು ಎಂಥವು, ಅವುಗಳಿಂದ ಸಂಸ್ಕೃತಮಯವಾದ ನುಡಿಯು ಈಗ ನಮ್ಮ ಸಮಾಜಕ್ಕೆ ಹೇಗೆ ಸರಿಹೊಂದುವುದಿಲ್ಲ ಎಂದು ನೋಡೋಣ. ನಾವು ಇಲ್ಲಿ ಆ ಬದಲಾವಣೆಗಳನ್ನು ದಾಖಲಿಸುವಾಗ ಅವುಗಳ ಸಂಖ್ಯೆ ೯ ಎಂಬಂತೆ ಮೂಡಿಬಂದಿದ್ದರೂ ಸಂಖ್ಯೆಗೆ ಹೆಚ್ಚಿನ ಬೆಲೆಯನ್ನೇನು ಕೊಡುವ ಅವಶ್ಯಕತೆಯಿಲ್ಲ. ನಿಜಕ್ಕೂ ನೋಡಿದರೆ ಬದಲಾವಣೆಯು ಎಷ್ಟಾಗಿದೆಯೆಂದರೆ ಬರೀ ಒಂಬತ್ತೇ ಬದಲಾಣೆಗಳಾಗಿವೆ ಎಂದು ಹೇಳಲು ಬರುವುದಿಲ್ಲ.

ಕಲಿಕೆ ಮತ್ತು ಕಸುಬುಗಳಲ್ಲಿ ಆಗಿರುವ ಬದಲಾವಣೆಗಳು



ಅಂದು - ಎಂದರೆ ಯಾವಾಗ ಸಂಸ್ಕೃತವು ಕರ್ನಾಟಕಕ್ಕೆ ಮೊದಲು ದಾಪುಗಾಲಿಟ್ಟಿತೋ ಆಗ - ಕನ್ನಡಿಗರ ಸಾಮಾಜಿಕ ಸ್ಥಿತಿ ಇವಾಗಿನದಕ್ಕಿಂತ ಬಹಳ ಬೇರೆಯಾಗಿತ್ತು. ಆಗ ಬೆರಳೆಣಿಕೆಯ ಕನ್ನಡಿಗರಿಗೆ ಮಾತ್ರವೇ ಓದು-ಬರಹಗಳು ಬೇಕಾಗಿದ್ದವು. ಕನ್ನಡಿಗರೆಲ್ಲರಿಗೂ ಓದು-ಬರಹಗಳು ಬರುವುದಿರಲಿ, ಬರಬೇಕೆಂಬ ಚಿಂತನೆಯೇ ಸಮಾಜದಲ್ಲಿ ಇರಲಿಲ್ಲ. ಕನ್ನಡ ನುಡಿಯನ್ನಾಡುವವರು ಅಲ್ಲಲ್ಲಿ ತಮ್ಮತಮ್ಮ ಕೆಲಸಗಳನ್ನು ಮಾಡಿಕೊಂಡು ಬಾಳುತ್ತಿದ್ದರು. ಎಲ್ಲಾ ಕಸುಬಿನವರೂ ಒಟ್ಟಗೆ ಕುಳಿತು ಯಾವ ಒಂದು ವಿಷಯವನ್ನೂ ಕಲಿಯಬೇಕಿರಲಿಲ್ಲ. ಆಯಾ ಕಸುಬಿನವರು ಆಯಾ ಕಸುಬುಗಳನ್ನು ತಮ್ಮ ಹೆತ್ತವರು ಮತ್ತು ನೆಂಟರಿಂದ ಕಲಿತುಬಿಡುತ್ತಿದ್ದರು.

ಇಂದು - ಈಗ ಕನ್ನಡಿಗರೆಲ್ಲರಿಗೂ ಓದು ಬರಹಗಳು ಬೇಕೇಬೇಕೆಂಬ ಸ್ಥಿತಿಯಿದೆ. ಓದು ಬರಹ ಬರದಿದ್ದರೆ ಇವತ್ತಿನ ದಿವಸ ಬದುಕಿ ಬಾಳುವುದೇ ಕಷ್ಟವಾಗಿಹೋಗಿದೆ, ಏಕೆಂದರೆ ಚೆನ್ನಾಗಿ ಕಲಿತವರ ಕಡೆಗೆ ಅನ್ನವು ಹರಿದುಹೋಗುತ್ತಿದ್ದು ಕಲಿಯದವರಿಗೆ ಅನ್ನವು ಕಡಿಮೆಯಾಗುತ್ತಿದೆ. ಇವತ್ತಿನ ದಿವಸ ಕನ್ನಡಿಗರಿಗೆಲ್ಲ ಓದು-ಬರಹಗಳು ಬರಬೇಕೆಂಬ ಚಿಂತನೆ ಸಮಾಜದಲ್ಲಿ ಇದೆ. ಎಲ್ಲಾ ಕಸುಬಿನವರೂ ಕೆಲಿಯಬೇಕಾದ ಗಣಿತ, ಮೂಲಭೂತ ವಿಜ್ಞಾನ, ಸಮಾಜವಿಜ್ಞಾನ ಮುಂತಾದವುಗಳಿವೆ. ಕುಲಕಸುಬುಗಳು ಇವತ್ತು ಹೆಚ್ಚು-ಕಡಿಮೆ ಬೆಲೆ ಕಳೆದುಕೊಂಡಿವೆ. ಇವತ್ತಿನ ದಿವಸದ ಕಸುಬುಗಳೇ ಬೇರೆ, ಹಿಂದಿದ್ದ ಕಸುಬುಗಳೇ ಬೇರೆ. ಆ ಕಸುಬುಗಳನ್ನೇ ಕಲಿತು ಮುಂದುವರೆಯುವುದಕ್ಕೆ ಈ ಹೊಸ ಪ್ರಪಂಚದಲ್ಲಿ ಆಗುವುದಿಲ್ಲ.

ಆದ್ದರಿಂದ -
ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಆ ಕಸುಬುಗಳಿಗೆ ಬೇರೊಂದು ಕಸುಬಿನವರು ತಮ್ಮದೇ ಆದ ತಿಳುವಳಿಕೆಯನ್ನು ತರುವುದು ಎಂದಿಗೂ ಸಾಧ್ಯವಿರಲಿಲ್ಲ.

ಇಂದು - ಇವತ್ತಿನ ದಿವಸ ಎಂಜಿನಿಯರುಗಳು ಡಾಕ್ಟರಿಗೆ ತಮ್ಮ ತಿಳುವಳಿಕೆಯನ್ನು ನೀಡಿ ಅವರ ಕೆಲಸವನ್ನು ಸುಲಭ ಮಾಡುವುದನ್ನು ಕಾಣುತ್ತೇವೆ. ಆದರೆ ಹಿಂದೆ ಇದು ಸಾಧ್ಯವೇ ಇರಲಿಲ್ಲ. ಬೇರೆಬೇರೆ ಕಸುಬಿನವರ ನಡುವೆ ಈ ರೀತಿಯ ಮಾತುಕತೆಯೇ ಆಗುತ್ತಿರಲಿಲ್ಲ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಹಾಗೆಯೇ ಎಲ್ಲಾ ಕಸುಬಿನವರೂ ಕೂತು ಎಲ್ಲರಿಗೂ ಸಮನಾದ ಕಾಳಜಿಗಳ ಬಗ್ಗೆಯೂ ಹೆಚ್ಚು ಚಿಂತಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಯಾವ ಒಂದು ಕಸುಬಿನವರೂ ಕೂಡ ತಮ್ಮ ಕಸುಬಿನಿಂದ ತಾವು ಗಳಿಸಿದ ತಿಳುವಳಿಕೆಯನ್ನು ಬರಹದಲ್ಲಿ ದಾಖಲಿಸುವುದಾಗಲಿ ಶಾಲೆಗಳಲ್ಲಿ ಕಲಿಸುವುದಾಗಲಿ ಮಾಡುತ್ತಿರಲಿಲ್ಲ. ಹಾಗೆ ಮಾಡಬೇಕೆನ್ನುವ ತಿಳುವಳಿಕೆಯೂ ಅವರಿಗಿರಲಿಲ್ಲ. ಹಾಗೆ ಮಾಡುವುದರಿಂದ ತಮ್ಮ ಕಸುಬಿನವರೇ ಕೆಲಸದಲ್ಲಿ ಕೈಚಳಕವನ್ನು ಹೆಚ್ಚಿಸಿಕೊಳ್ಳಬಹುದೆಂದೂ ಅವರು ಅರಿತಿರಲಿಲ್ಲ. ಅಷ್ಟೇ ಅಲ್ಲದೆ, ಆಗಿನ ಕಸುಬುಗಳಲ್ಲಿ ಇವತ್ತಿನಂತೆ ದೊಡ್ಡ ದೊಡ್ಡ ಹೊತ್ತಗೆಗಳಲ್ಲಿ ಬರಿದಿಡುವಷ್ಟು ವಿಷಯವೂ ಇರುತ್ತಿರಲಿಲ್ಲ, ಬಹಳ ಸುಲಭವಾಗಿರುತ್ತಿದ್ದವು. ಆಗ ಜನರು ಲೌಕಿಕ ವಿಷಯಗಳಲ್ಲಿ ಇವತ್ತಿನಷ್ಟು ನಿಪುಣತೆಯನ್ನು ಪಡೆದುಕೊಳ್ಳಲು ಹವಣಿಸುತ್ತಿರಲಿಲ್ಲ. ತಮ್ಮ ಕಸುಬಿನಲ್ಲೇ ಹೆಚ್ಚು ಹೆಚ್ಚು ಹಣ ಗಳಿಸಿಕೊಳ್ಳುವ ವಿದ್ಯೆಗಳು ಇವಾಗಿನಷ್ಟು ಕಷ್ಟದ ವಿದ್ಯೆಗಳಾಗಿರಲಿಲ್ಲ.

ಇಂದು - ಇಂದು ಎಲ್ಲಾ ಕಸುಬಿನವರಿಗೂ ಸಮನಾದ ಕಾಳಜಿಗಳ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿಯಿದೆ. ನಾಡಿನ ಸಮಸ್ಯೆಗಳು, ಬೇರೆಬೇರೆ ರೋಗಗಳು, ಆಡಳಿತ, ಮುಂತಾದವುಗಳು ಇದಕ್ಕೆ ಉದಾಹರಣೆಗಳು. ಇವತ್ತಿನ ಕಸುಬುಗಳು ಬರಹವಿಲ್ಲದೆ, ಅವುಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಮೀಸಲಾದ ವಿಭಾಗಗಳಿಲ್ಲದೆ ಉದ್ಧಾರವಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಕಸುಬಿನವರಿಗೂ ತಮ್ಮದೇ ಆದ ಸಾಹಿತ್ಯದ ಪರಂಪರೆಯಿದೆ, ಬರಹದ ಪರಂಪರೆಯಿದೆ, ತಮ್ಮದೇ ಆದ ವಿಶ್ವವಿದ್ಯಾಲಯಗಳ ವಿಭಾಗಗಳಿವೆ. ಇವತ್ತಿನ ಕಸುಬುಗಳಿಗೆ ಜ್ಞಾನ-ವಿಜ್ಞಾನಗಳ ಬಹಳ ಆಳವಾದ ಅಧ್ಯಯನ ಬೇಕಿದೆ. ಜನರಿಗೆ ಈಗ ಲೌಕಿಕ ವಿಷಯಗಳಲ್ಲಿ ನಿಪುಣತೆಯು ಬೇಕೆಂಬ ಹಂಬಲವಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಮತ್ತೂ ಏನೆಂದರೆ ಆಗ ಕನ್ನಡದ ಮಕ್ಕಳಿಗೆಲ್ಲ ಸೇರಿ ಒಂದೇ ಕಲಿಕೆಯ ಏರ್ಪಾಡೆಂಬುದೂ ಇರಲಿಲ್ಲ. ಅದು ಯಾರಿಗೂ ಬೇಕಾಗಿಲ್ಲವೆಂದು ಜನರ ಅನಿಸಿಕೆಯಾಗಿದ್ದಹಾಗೆ ಕಾಣುತ್ತದೆ. ಕಲಿಕೆಯಿಂದ ಏನೂ ಉಪಯೋಗವಿಲ್ಲವೆಂದು ಜನರ ಅನಿಸಿಕೆಯಾಗಿತ್ತು (ಈ ಅನಿಸಿಕೆಯು ಹಳ್ಳಿಗಳಲ್ಲಿ ಇವತ್ತಿಗೂ ಕೆಲವರಿಗಿದೆ).

ಇಂದು - ಇಂದು ಕನ್ನಡದ ಮಕ್ಕಳೆಲ್ಲ ಸೇರಿ ಒಂದೇ ಕಲಿಕೆಯ ಏರ್ಪಾಡಿನಲ್ಲಿ ಕಲಿಯಬೇಕೆಂಬುದಿದೆ. ಜನರಿಗೆ ಕಲಿಕೆಯೇ ಬೇಕಿಲ್ಲವೆಂಬ ಅನಿಸಿಕೆ ಹೆಚ್ಚಾಗಿ ಇವತ್ತು ಉಳಿದಿಲ್ಲ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಆಗ ಮನಸ್ಸು ಮಾಡಿದರೆ ಯಾರು ಬೇಕಾದರೂ ಯಾವ ಕಸುಬನ್ನು ಬೇಕಾದರೂ ಸುಲಭವಾಗಿ ಕಲಿಯಬಹುದಾಗಿತ್ತು. ಆದರೆ ಹಾಗೆ ಮಾಡದೆ ಇದ್ದದ್ದು ಆ (ಬೇರೆ) ಕಸುಬನ್ನು ಕಲಿಯುವುದು ಕಷ್ಟವೆಂದಲ್ಲ, ಆ (ಬೇರೆ) ಕಸುಬು ತಮ್ಮ ಹಿಂದಿನವರು ಮಾಡಿಕೊಂಡು ಬಂದಿದ್ದ ಕಸುಬಲ್ಲವೆಂದು ಮಾತ್ರವಾಗಿತ್ತು. ಅಲ್ಲದೆ, ಬೇರೆಯವರು ಸುಲಭವಾಗಿ ಕಲಿಯಬಹುದಾದ ತಮ್ಮ ಕಸುಬನ್ನು ಎಲ್ಲರೂ ಕಲಿತರೆ ಅದರಿಂದ ತಮ್ಮ ಅನ್ನಕ್ಕೇ ಕುತ್ತುಬಂದೀತೆಂದು ತಮ್ಮ ಕಸುಬುಗಳ ಗುಟ್ಟನ್ನು ಒಂದುಚೂರೂ ಹೊರಗೆ ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ತಿಳುವಳಿಕೆಯನ್ನು ಕನ್ನಡಿಗರೆಲ್ಲ ಹಂಚಿಕೊಳ್ಳುವುದು ಎಂಬುದೇ ಆಗಿನ್ನೂ ಹುಟ್ಟಿರಲಿಲ್ಲ.

ಇಂದು - ಈಗ ಕಸುಬುಗಳನ್ನು ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದು ಎಂಬ ಸ್ಥಿತಿಯಿಲ್ಲ. ಅವುಗಳಲ್ಲಿ ಬಹಳ ನಿಪುಣತೆಯಿದ್ದರೆ ಮಾತ್ರ ಆ ಕಸುಬುಗಳನ್ನು ಮಾಡಿಕೊಂಡಿರಲಾಗುವುದು. ಆದ್ದರಿಂದ ಈಗ ಜನರು ಬೇರೆ ಕಸುಬುಗಳಿಗೆ ಹೋಗದಿರುವುದು ಆ ಕಸುಬಿಗೆ ಬೇಕಾದ್ದನ್ನು ಕಲಿಯುವುದು ಕಷ್ಟವಾಗಿರುವುದರಿಂದ. ಕಲಿಯುವುದು ಕಷ್ಟವಾಗಿರುವುದು ಆ ಕಸುಬಿನ ಗುಟ್ಟು ರಟ್ಟಾಗಿಲ್ಲವೆಂದಲ್ಲ, ರಟ್ಟಾಗಿರುವ ಗುಟ್ಟೇ ಕಲಿಯಲು ಕಷ್ಟ, ಅದರ ಬದಲು ತಮ್ಮ ಕಸುಬನ್ನೇ ಮುಂದುವರೆಸಿಕೊಂಡು ಹೋಗುವುದು ವಾಸಿ ಎನ್ನುವ ಕಾರಣದಿಂದ. ಆದ್ದರಿಂದ ಒಂದು ಕಸುಬಿನವರು ಇನ್ನೊಂದು ಕಸುಬಿನವರಿಗೆ ತಮ್ಮ ವಿದ್ಯೆಯನ್ನು ಹೇಳಿಕೊಡಲು ಹಿಂಜರಿಯುವುದಿಲ್ಲ. ಈಗ ಹಾಗೆ ಹೇಳಿಕೊಳ್ಳುವುದರಿಂದ ಎರಡು ಪಾರ್ಟಿಗಳೂ ಲಾಭಗಳಿಸುತ್ತವೆ ಎಂಬ ಅನಿಸಿಕೆ ಜನರಲ್ಲಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಆಡಳಿತದ ಏರ್ಪಾಡಿನಲ್ಲಿ ಆಗಿರುವ ಬದಲಾವಣೆಗಳು


ಅಂದು - ಆಗಿನ ಕಾಲದಲ್ಲಿ ಆಡಳಿತವೆನ್ನುವುದು ಅರಸರ ಕೈಯಲ್ಲಿರುತ್ತಿತ್ತು. ಅರಸನ ಕೆಲಸವು ನಾಡಿಗರನ್ನು ಹೊರಗಿನವರಿಂದ ಕಾಪಾಡುವುದು, ಒಳಜಗಳಗಳಲ್ಲಿ ತೀರ್ಪುಕೊಡುವುದು - ಇವುಗಳಷ್ಟೇ ಆಗಿದ್ದವು. ಆಗ ಕಲಿಕೆಯೆನ್ನುವುದು ಆಡಳಿತದ ಒಂದು ಭಾಗವಾಗಿರಲಿಲ್ಲ. ಜನರು ಕಾಲಕಾಲಕ್ಕೆ ತಮ್ಮ ಗಳಿಕೆಗೆ ತಕ್ಕಂತೆ ತೆರಿಗೆಯನ್ನು ಅರಸನಿಗೆ ಕಟ್ಟುತ್ತಿದ್ದರು. ಅರಸನಿಗೂ ಪ್ರಜೆಗಳ ಆರ್ಥಿಕ ಏಳಿಗೆಗೂ ಇನ್ನಾವ ಹೆಚ್ಚಿನ ನಂಟೂ ಇರಲಿಲ್ಲ. ಪ್ರಜೆಗಳಿಗೆ ಕಲಿಕೆಯನ್ನು ಕೊಡುವುದು ಅರಸನ ಜವಾಬ್ದಾರಿಯಾಗಿರಲಿಲ್ಲ. ಪ್ರಜೆಗಳಿಗೆ ತನ್ನ ಯೋಜನೆಗಳನ್ನೆಲ್ಲ ತಿಳಿಸುವುದು ಬೇಕಾಗಿರಲಿಲ್ಲ.

ಇಂದು - ಆದರೆ ಈಗ ಹಾಗಲ್ಲ. ಈಗ ಕರ್ನಾಟಕದಲ್ಲಿ ಒಂದು ಪ್ರಜಾಪ್ರಭುತ್ವವಿದೆ. ಕರ್ನಾಟಕದ ಸರಕಾರಕ್ಕೆ ಕನ್ನಡಿಗರ ಕಲಿಕೆಯ ಜವಾಬ್ದಾರಿಯೆನ್ನುವುದು ಇದೆ. ಜಗಳಗಳಲ್ಲಿ ತೀರ್ಪುಕೊಡುವ ಕೆಲಸವೂ ಇವತ್ತಿನ ದಿನ ಬರಹವಿಲ್ಲದೆ ಆಗುವುದಿಲ್ಲ. ಇವತ್ತಿನ ದಿವಸ ಕರ್ನಾಟಕ ಸರ್ಕಾರಕ್ಕೆ ಬರೀ ಜನರಿಂದ ತೆರಿಗೆಯನ್ನು ವಸೂಲಿ ಮಾಡುವುದೆಂಬ ಒಂದೇ ಕೆಲಸವಿಲ್ಲ. ಸರ್ಕಾರದ ಮೆಲೆ ಜನರ ಆರ್ಥಿಕ ಬೆಳವಣಿಗೆಯ ಹೊಣೆಯೂ ಇದೆ. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹುಟ್ಟಿಹಾಕುವ ಹೊಣೆ ಸರ್ಕಾರಕ್ಕಿದೆ. ಜನರೊಡನೆ ಸರ್ಕಾರವು ಹಿಂದೆಗಿಂತ ಬಹಳ ಜಾಸ್ತಿ ವ್ಯವಹರಿಸಬೇಕಾಗಿದೆ. ತನ್ನ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕಾಗಿದೆ. ಏನೇನು ಯೋಜನೆಗಳನ್ನು ಮಾಡಬೇಕೆಂಬುದನ್ನೂ ಜನರಿಂದಲೇ ತಿಳಿದುಕೊಳ್ಳಬೇಕಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಜನರ ಹಂಬಲಿಕೆಗಳಲ್ಲಿ ಆಗಿರುವ ಬದಲಾವಣೆಗಳು


ಅಂದು - ಆಗ ಬೆರಳೆಣಿಕೆಯ ಕೆಲವರು ಮೋಕ್ಷದ ಕಡೆಗೆ ವಾಲಿಕೊಂಡು ಮೋಕ್ಷವನ್ನು ಸಾಧಿಸಲು ಬೇಕಾದ ವಿದ್ಯೆಯ ಕಡಲೇ ಆಗಿದ್ದ ಸಂಸ್ಕೃತದ ಪರಿಚಯವು ಅವರಿಗೆ ಆಗಿರಬೇಕು. ಅವರಿಗೆ ಮೋಕ್ಷಕ್ಕಿಂತ ಹೆಚ್ಚಿನ ಪುರುಷಾರ್ಥವೇ ಇಲ್ಲವೆನಿಸಿರಬೇಕು. ಹಾಗೆನಿಸಿ ಇವರುಗಳು ಸಂಸ್ಕೃತವನ್ನು ಚೆನ್ನಾಗಿ ಕಲಿತರು ಎನ್ನಬಹುದು. ಮೋಕ್ಷವನ್ನು ಗುರಿಯಾಗಿಟ್ಟುಕೊಂಡ ಇವರುಗಳು ಧರ್ಮದಿಂದ ನಡೆಯುತ್ತಿದ್ದರು ಎನ್ನಬಹುದು. ಇವೆಲ್ಲ ಕಾರಣಗಳಿಂದ ಇವರನ್ನು ಸಮಾಜವು ಗೌರವಿಸಲಾರಂಭಿಸಿತು ಎನ್ನಬಹುದು. ಒಟ್ಟಿನಲ್ಲಿ ಸಂಸ್ಕೃತವನ್ನು ಕಲಿತಿದ್ದ ಇವರಿಗೆ ಸಮಾಜವು ಒಂದು ಮೇಲಿನ ಸ್ಥಾನವನ್ನು ಕೊಟ್ಟು ಗೌರವಿಸಿತು. ಅರಸರು ಕೂಡ ಇವರನ್ನು ಗೌರವಿಸಿ ಇವರನ್ನು ಗುರುಗಳಾಗಿ ಕಾಣುತ್ತಿದ್ದರು.

ಇಂದು - ಈಗ ಮೋಕ್ಷದ ಕಡೆಗೆ ವಾಲಿಕೊಂಡು ಮೋಕ್ಷವನ್ನು ಸಾಧಿಸಲು ಹೊರಡುವವರ ಸಂಖ್ಯೆ ಹೆಚ್ಚಾಗಿದೆ (ಜನಸಂಖ್ಯೆಯೇ ಹೆಚ್ಚಾಗಿದೆ). ಇವರುಗಳೂ ಮೋಕ್ಷದ ವಿದ್ಯೆಯನ್ನು ಕಲಿಯಬೇಕಿದೆ, ಇವರೂ ಧರ್ಮದಿಂದ ನಡೆಯಲು ಆಸೆಪಡುತ್ತಾರೆ. ಇವರಿಗೆ ಸಮಾಜವು ಯಾವುದೇ ಮೇಲಿನ ಸ್ಥಾನವು ಕೊಡಲಿ ಎಂಬ ಆಸೆಯಿಲ್ಲದಿದ್ದರೂ, ಇವರನ್ನು ಗುರುಗಳೆಂದು ಜನರು ಕರೆಯದಿದ್ದರೂ ಇವರಿಗೆ ಅಧ್ಯಾತ್ಮದ ಒಲವಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.


ಅಂದು - ಬೆರಳೆಣಿಕೆಯ ತಿಳುವಳಿಕಸ್ತರಲ್ಲದೆ ಆಗ ಬರಹವೆಂಬುದು ಹೇಗಿರುತ್ತದೆಯೆಂದೇ ಇತರರು ನೋಡಿರಲಿಲ್ಲವಾದ್ದರಿಂದ ಇವರೇ ಕನ್ನಡಕ್ಕೆ ಬರಹವೆಂಬುದನ್ನು ತಂದರು. ಹಾಗೆ ತರುವಾಗ ಸಂಸ್ಕೃತದ ಮೇಲಿನ ತಮ್ಮ ಅಭಿಮಾನದಿಂದ ಆ ಬರಹವನ್ನು ಸಂಸ್ಕೃತದ ಪದಗಳಿಂದ ತುಂಬಿಸಿದರು, ಆ ಬರಹದಲ್ಲೂ ಕನ್ನಡದ ನಾಲಿಗೆಯು ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿದರು ಎಂದು ಹಿಂದೆಯೇ ನಾವು ಹೇಳಿದ್ದೇವೆ. ಆದರೆ ಇವರಿಗೆ ಲೌಕಿಕ ವಿಷಯಗಳೇ ಬೇಡವಾಗಿದ್ದುದರಿಂದ ಇವರ ಬರಹಗಳಲ್ಲಿ ಮತ್ತು ಇವರ ಮಾತುಗಳಲ್ಲಿ ಸಂಸ್ಕೃತದ ಪದಗಳನ್ನು ಉಪಯೋಗಿಸಿ ಧರ್ಮ-ಅಧ್ಯಾತ್ಮದ ವಿಷಯಗಳು ಮಾತ್ರ ಇರುತ್ತಿದ್ದವು. ಕನ್ನಡದಲ್ಲಿ ಮೊದಮೊದಲು ಬರಹಗಳು ಬಂದಾಗ ಧರ್ಮ-ಅಧ್ಯಾತ್ಮಗಳೇ ಅವುಗಳ ವಿಷಯವಾಗಿದ್ದವು ಎಂಬುದನ್ನು ಹಳಮೆಯರಿಗರು ತಿಳಿದೇ ಇದ್ದಾರೆ. ಇವರು ಬರೆದಿದ್ದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದವರೆಲ್ಲ ಇವರಂತೆಯೇ ಮೋಕ್ಷವನ್ನು ಗುರಿಯಾಗಿಸಿಕೊಂಡ ಬೆರಳೆಣಿಕೆಯವರು ಮಾತ್ರವಾಗಿರುತ್ತಿದ್ದರು. ಕನ್ನಡದ ಬರಹದ ಪರಂಪರೆಯು ಬೆರಳೆಣಿಕೆಯವರಿಗೆ ಮಾತ್ರ ಬೇಕಾಗಿದ್ದ ಧರ್ಮ-ಅಧ್ಯಾತ್ಮಗಳ ಬರಹದ ಪರಂಪರೆಯಾಗಿ ಮಾತ್ರ ಉಳಿದುಬಿಟ್ಟಿತು, ಎಲ್ಲರಿಗೂ ಅದು ಹರಡಲೇ ಇಲ್ಲ ಎನ್ನುವುದನ್ನು ಈ ಮೂಲಕ ಕಾಣಬಹುದು. ಇವರು ಲೌಕಿಕವಾಗಿ ಮಾಡುತ್ತಿದ್ದುದು ಹೆಚ್ಚೆಂದರೆ ಅರಸರು ಹೇಳಿದಾಗ ಆಡಳಿತಕ್ಕೆ ಬೇಕಾದ ಸುತ್ತೋಲೆಗಳು, ಅಪ್ಪಣೆಗಳು, ಕಲ್ಲುಬರಹಗಳು, ತಾಮ್ರಬರಹಗಳು ಮುಂತಾದವುಗಳನ್ನು ಬರೆದುಕೊಡುತ್ತಿದ್ದುದು ಮಾತ್ರ, ಮತ್ತು ತಮ್ಮ ಶಿಷ್ಯರಿಗೆ ಪಾಠ ಹೇಳುವುದು ಮಾತ್ರ. ಶಾಸನಗಳು ಕೆಲವೊಮ್ಮೆ ಕನ್ನಡದ ಆಗಿನ ಬರಹದಲ್ಲಿದ್ದರೂ ಸಂಸ್ಕೃತದ ಶ್ಲೋಕಗಳೇ ಆಗಿರುತ್ತಿದ್ದವು ಎಂದು ಗಮನಿಸಿ. ಒಟ್ಟಿನಲ್ಲಿ ಇವರುಗಳು ಬರೆದಿದ್ದು ಸಮಾಜದ ಮುಂದೆ ಬಂದಾಗಲೂ ಅದನ್ನು ಜನರು ಓದಿ ತಿಳಿದುಕೊಳ್ಳಬೇಕೆಂಬುದೇನು ಇರಲಿಲ್ಲ, ಎಕೆಂದರೆ ಬರಹವೆಂಬುದೇ ಜನರಿಗೆ ಆಗ ಬರುತ್ತಿರಲಿಲ್ಲ. ಹೀಗೆ ಬರಹವೆಂಬುದು ಜನರಿಗೆ ತಿಳಿಯದೆ ಹೋದರೂ ಪರವಾಗಿಲ್ಲವೆಂಬ ಪರಂಪರೆಯು ಕನ್ನಡದ ಬರಹಕ್ಕೆ ಅಂಟಿಕೊಂಡಿತು.

ಇಂದು - ಇಂದು ಬರಹವು ಎಲ್ಲರಿಗೂ ಬೇಕಾಗಿದೆಯೆಂದು ಮೇಲೇ ಹೇಳಾಯಿತು. ಆದ್ದರಿಂದ ನಾಲಿಗೆಯಲ್ಲಿ ಉಲಿಯದನ್ನೆಲ್ಲ ಸೇರಿಸಿಕೊಳ್ಳುವುದು ಇವತ್ತಿನ ದಿವಸ ಪೆದ್ದತನವೇ ಆದೀತು. ಆಡುನುಡಿಯಲ್ಲಿ ಇರುವ ಪದಗಳನ್ನು ಬಿಟ್ಟು ಸಂಸ್ಕೃತದ ಪದಗಳನ್ನು ತಂದು ಸೇರಿಸಿಕೊಳ್ಳುವುದು ಇನ್ನೂ ದೊಡ್ಡ ಪೆದ್ದತನವೇ ಆದೀತು. ಇವತ್ತಿನ ದಿವಸ ಬರಹ ಬರೆಯುವವರಿಗೆಲ್ಲ ಲೌಕಿಕ ವಿಷಯಗಳೇ ಹೆಚ್ಚಾಗಿ ಬೇಕಾಗಿದೆ. ಇವತ್ತಿನ ಬರಹಗಳ ವಿಷಯ ಹೆಚ್ಚಾಗಿ ಅರ್ಥ-ಕಾಮಗಳೇ ಆಗಿದೆ. ಧರ್ಮ-ಮೋಕ್ಷಗಳ ವಿಷಯಗಳು ಈಗ ಜನರಿಗೆ ಹೆಚ್ಚು ಬೇಕಗಿಲ್ಲ. ನಮ್ಮ ಆರ್ಥಿಕ ಸ್ಥಿತಿ ಇವತ್ತಿನ ದಿವಸ ಬಹಳ ಕೀಳುಮಟ್ಟದ್ದಾಗಿರುವುದರಿಂದ ಮೊದಲು ಹೊಟ್ಟೆಗೆ ಅನ್ನವನ್ನು ತಂದುಕೊಳ್ಳುವುದೇ ಜನರ ಮುಂದಿರುವ ಮೊದಲ ಸವಾಲಾಗಿದೆ. ಇವತ್ತಿನ ದಿವಸ ಸರಕಾರವು ಹೊರಡಿಸುವ ಅಪ್ಪಣೆ, ಜಾಹೀರಾತು, ಟೆಂಡರುಗಳು ಮುಂತಾದವೆಲ್ಲ (ಆವತ್ತಿನ ಶಾಸನಗಳಿದ್ದಂತೆ) ಅರ್ಥವಾಗದಿದ್ದರೂ ಪರವಾಗಿಲ್ಲವೆಂಬ ಪರಿಸ್ಥಿತಿಯಿಲ್ಲ. ಅದು ಇವತ್ತಿನ ದಿವಸ ಅರ್ಥವಾಗಲೇಬೆಕು. ಬರಹವೆಂಬುದು ಜನರಿಗೆ ತಿಳಿಯದೆ ಹೋದರೂ ಪರವಾಗಿಲ್ಲವೆಂಬ ಪರಂಪರೆಯು ಇವತ್ತಿನ ದಿವಸ ಮುರಿದುಹೋಗಲೇಬೇಕು. ಬರಹವೆಂಬುದು ಜನರಿಗೆ ಅರ್ಥವಾಗುವುದೇ ಅದರ ಬಹಳ ಮುಖ್ಯವಾದ ಕೆಲಸವಾಗಿಹೋಗಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.


ಅಂದು - ಅಂದು ನಮ್ಮಲ್ಲಿ ಅರ್ಥ-ಕಾಮಗಳಿಗೆ ಕೊರತೆ ಇವತ್ತಿನಷ್ಟು ಇಲ್ಲದಿದ್ದುದರಿಂದ ಧರ್ಮ-ಮೋಕ್ಷಗಳ ವಿದ್ಯೆಯೇ ಜನರಿಗೆ ಹೆಚ್ಚಾಗಿ ಬೇಕಾಗಿತ್ತು. ಧರ್ಮ-ಮೋಕ್ಷಗಳ ವಿಷಯದಲ್ಲಿ ಹೊಸಹೊಸದನ್ನು ಕಂಡುಹಿಡಿಯುವುದು ಇಲ್ಲವೇ ಜನರೇ ಆ ವಿದ್ಯೆಗಳನ್ನು ಮತ್ತಷ್ಟು ಹೆಚ್ಚಿಸುವುದು ಎಂಬುದೇನೂ ಇರುವುದಿಲ್ಲ. ಹಿಂದೆ ಒಂದಾನೊಂದು ಕಾಲದಲ್ಲಿ ಬರೆದಿಟ್ಟಿರುವ ವೇದ-ಉಪನಿಷತ್ತುಗಳೇ ಮೊದಲಾದವುಗಳಿಗೆ ಸೇರಿಸಬೇಕಾದ್ದೇನೂ ಇಲ್ಲ. ಅವುಗಳಲ್ಲಿರುವ ವಿದ್ಯೆಗಳಿಗೆ ಯಾವುದೇ ರೀತಿಯ ಕೊರತೆಗಳಿವೆಯೆಂದು ಕೂಡ ಹೇಳಲು ಬರುವುದಿಲ್ಲ. ಅವುಗಳು ಸದಾ "ಪೂರ್ಣ"ವಾಗಿವೆ. ಅದ್ದರಿಂದ ಜನರು ಈ ವಿದ್ಯೆಗಳಿಗೆ ಕೊಡುಗೆ ನೀಡಬೇಕು ಎನ್ನುವುದೆನೂ ಇರಲಿಲ್ಲ. ಸಾಮಾನ್ಯ ಜನರಿಂದ ಶಾಲೆಗಳೇ ಪಾಠ ಕಲಿಯಬೇಕು ಎನ್ನುವುದಿರಲಿಲ್ಲ. ಆದ್ದರಿಂದ ಜನರ ನುಡಿ ಮುಖ್ಯವೇ ಆಗಿರಲಿಲ್ಲ.

ಇಂದು - ಇಂದು ಅರ್ಥ-ಕಾಮಗಳೇ ಧರ್ಮ-ಮೋಕ್ಷಗಳಿಗಿಂತ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡಿವೆ. ಏಕೆಂದರೆ ಅರ್ಥ-ಕಾಮಗಳಲ್ಲಿ ನಾವು ಹಿಂದೆ ಬಿದ್ದಿರುವುದರಿಂದ. ಧರ್ಮ-ಮೋಕ್ಷಗಳ ವಿದ್ಯೆಗೂ ಅರ್ಥ-ಕಾಮಗಳ ವಿದ್ಯೆಗೂ ಇರುವ ವ್ಯತ್ಯಾಸವೇನೆಂದರೆ ಅರ್ಥ-ಕಾಮಗಳ ವಿದ್ಯೆಗಳು ಎಂದಿಗೂ "ಪೂರ್ಣ"ವಾಗಿರುವುದಿಲ್ಲ. ಇವುಗಳಿಗೆ ಪ್ರತಿದಿನವೂ ಹೊಸಹೊಸ ದಿಟಗಳನ್ನು ಸೇರಿಸಬೇಕಾಗಿದೆ. ಇವುಗಳಲ್ಲಿ ಆಗಾಗಗ್ಗೆ ಸಾಮಾನ್ಯ ಜನರೇ ಕೊಡುಗೆಗಳನ್ನು ನೀಡಬೇಕಾಗಿದೆ. ಜನರಿಂದ ಶಾಲೆಗಳೇ ಪಾಠ ಕಲಿಯಬೇಕೆಂಬುದು ಈಗಿದೆ. ಆದ್ದರಿಂದ ಜನರ ನುಡಿ ಇಂದು ಬಹಳ ಮುಖ್ಯವಾಗಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಈ ಮೇಲಿನ ಬದಲಾವಣೆಗಳನ್ನು ಕಣ್ಣುಬಿಟ್ಟು ನೋಡಿದಾಗ "ಎಲ್ಲರ ಕನ್ನಡವು" ಕಡೆಗಣಿಸಲ್ಪಟ್ಟರೆ ಕನ್ನಡಿಗರ ಏಳಿಗೆ ಎಂದೆಂದಿಗೂ ಆಗುವುದಿಲ್ಲವೆಂಬ ಅರಿವು ಯಾರಿಗೇ ಆದರೂ ಆಗದೆ ಹೋಗುವುದಿಲ್ಲವೆಂಬುದು ನಮ್ಮ ನಂಬಿಕೆಯಾಗಿದೆ. ಈ ಬರಹವನ್ನು ತೆರೆದ ಮನಸ್ಸಿನಿಂದ ಓದಿದವರಿಗೆ ಸಂಸ್ಕೃತದ ಬಗೆಗಿನ ಕುರುಡು ಅಭಿಮಾನವೂ ಹೋಗುವುದೆಂದು ಕೂಡ ನಮ್ಮ ನಂಬಿಕೆಯಾಗಿದೆ.

ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೪: ಬರೆಯುವುದರ ಗುರಿಯನ್ನು ತಿಳಿದಾಗ ಸಂಸ್ಕೃತದ ಬಳಕೆ ಕಡಿಮೆಯಾಗಲೇಬೇಕು
Related Posts with Thumbnails