ಕರ್ನಾಟಕದ 13 ಊರುಗಳ ಹೆಸರನ್ನು ಇಂಗ್ಲೀಷಿನಲ್ಲಿ ಬರೆಯುವಾಗ ಕನ್ನಡಕ್ಕೆ ಆದಷ್ಟೂ ಹತ್ತಿರವಾಗೋಹಂಗೆ ಮಾಡುವುದಕ್ಕೆ ಕೇಂದ್ರದ ಮುಂದಿಟ್ಟಿರೋ ಕರ್ನಾಟಕ ಸರ್ಕಾರದ ಮನವಿ ಒಂದು ವರ್ಷದಿಂದ ಫ್ರಿಜ್ಜಲ್ಲಿ ಕೊಳೀತಿರೋದು
18ನೇ ತಾರೀಖಿನ ಹಿಂದು ಪತ್ರಿಕೆಯಲ್ಲಿ ವರದಿಯಾಗಿದೆ. 13 ಹೆಸರುಗಳಲ್ಲಿ 12ಕ್ಕೆ ಸರಿ ಅಂದಿದ್ರೂ ಬೆಳಗಾವಿ ವಿಚಾರದಲ್ಲಿ ಮಾತ್ರ ಕೇಂದ್ರ ನಕಾರಾತ್ಮಕ ನಿಲುವು ತೋರಿದೆ. ಮನ್ನಣೆ ಪಡೆಯುವ ಕ್ರಮವನ್ನು ನಿಯತ್ತಾಗಿ ಪಾಲಿಸಿದ್ದರೂ ನಮಗೆ ಮೋಸ ಆಗಿದೆ. ಆದ್ರೆ ಇಂತಹ ನಿಯಮ ಪಾಲನೆ ನಡೀದಿದ್ರೂ ಈ ಹಿಂದೆ ತಮಿಳುನಾಡಿನ, ಮಹಾರಾಷ್ಟ್ರ ಮತ್ತು ಬಂಗಾಳದ ಹೆಸರುಗಳ ಬದಲಾವಣೆ ಮಿಂಚಿನ ವೇಗದಲ್ಲಿ ಸಾಗಿತ್ತು. ಈ ವಿಷಯದಲ್ಲಿ ನಿಯಮಗಳ್ನ ಪಾಲಿಸಿದ್ದಕ್ಕೆ ಕನ್ನಡಿಗರಿಗೆ ಒಳ್ಳೆ ಫಲ ಸಿಕ್ಕ ಹಾಗಾಯ್ತು ಗುರು!
ಹೆಸರಲ್ಲೇನಿದೆ ಅಂತೀರಾ?ನಮ್ಮ ಊರುಗಳು, ನಮ್ಮ ಬೀದಿಗಳು, ನಮ್ಮ ಮನೆಗಳು, ನಮ್ಮ ಮಕ್ಕಳು, ನಮ್ಮ ಮುಂದಿನ ಪೀಳಿಗೆ ಮತ್ತವುಗಳ ಹೆಸರುಗಳ ಮಧ್ಯೆ ನಿಕಟ ಸಂಬಂಧವಿರತ್ತೆ. ಇವುಗಳ ಮೇಲೆ ಇರ್ಬೇಕಾದ್ದು ನಮ್ಮ ಪ್ರಭಾವವೋ ಹೊರಗಿನ ದೇಶದವರ ಪ್ರಭಾವವೋ ಅಂತ ಇಲ್ಲಿ ಕಾಣಬೇಕು. ಹೆಸರುಗಳಲ್ಲಿ ಅಡಗಿರೋ ನಮ್ಮ ಭಾಷೆಯ ಬಳಕೆ ಬಹಳ ಮುಖ್ಯ, ಅದನ್ನ ನಾವು ಬಿಟ್ಟುಕೊಡ್ಬಾರ್ದು.
ನಮ್ಮೂರುಗಳನ್ನು ನಾವು ಯಾವ ಹೆಸರುಗಳಿಂದ ಕರೀತೀವೋ ಅದು ನಮ್ಮ ಮುಂದಿನ ಪೀಳಿಗೆ ಯಾವ ಸಂಪ್ರದಾಯ ಆಚರಿಸ್ತಾರೋ ಅದನ್ನ ನಿರ್ಧರಿಸತ್ತೆ. ನಮ್ಮ ಸಂಪ್ರದಾಯ/ಸಂಸ್ಕೃತಿ ಉಳೀಬೇಕು ಅಂದ್ರೆ, ಕನ್ನಡಿಗ ಕನ್ನಡಿಗನಾಗೇ ಉಳೀಬೇಕು ಅಂದ್ರೆ ಈ ಹೆಸರುಗಳು ಬದಲಾಗ್ಲೇಬೇಕು.
ಒಂದು ಊರಿನ ಹೆಸರು ಅದ್ರಲ್ಲಿ ನೆಲೆಸಿರುವ ಜನರ ಪ್ರತಿನಿಧಿ ಹೊರತು ಹೊರಗಿನೋರದಾಗೋದು ಸರಿಯಲ್ಲ. ಮೈಸೂರು ಅನ್ನೋದರ ನಿಜವಾದ ಇತಿಹಾಸ ಮಹಿಶೂರು ಅನ್ನೋದ್ರಲ್ಲಿ ಇದೆ ಹೊರತು ಮೆಸೂರು ಅನ್ನೋದ್ರಲ್ಲಿಲ್ಲ. ಹೊರಗಿನಿಂದ ಬಂದ ಬ್ರಿಟಿಷರು ಅವರಿಗೆ ನಮ್ಮೂರುಗಳ ಹೆಸರು ಹೇಳಲು ಕಷ್ಟ ಆಯ್ತು ಅಂತ ಅವಾಗ ಹೆಸ್ರನ್ನೇ ಬದಲಾಯ್ಸಿದ್ರು. ಈಗ ಅವರು ಯಾರೂ ಇಲ್ಲಿ ಉಳಿದಿಲ್ಲ. ಇನ್ನು ಏಕೆ ಅದೇ ಹಳೆ ಹೆಸರು? ಶ್ರೀರಂಗಪಟ್ಟಣ ಅನ್ನೋ ಹೆಸರಿಂದ ಅಲ್ಲಿಯ ಜನರಿಗೆ ತಿಳಿಯುವುದಾದ್ರು ಏನು, ಅದೇ ಸೆರಿಂಗಪಾಟಿನಂ ಅನ್ನೋದ್ರಿಂದ ತಿಳಿದುಬರೋದು ಏನು? ಇಂತಹ ದೊಡ್ಡ ವ್ಯತ್ಯಾಸವೇ ನಮ್ಮ ಜನರು ನಮ್ಮತನವನ್ನು ಮರೆತು ಹೋಗುವ ಹಾಗೆ ಮಾಡ್ತಿರೋದು.
ನಿಯಮ ಪಾಲಿಸಿದ್ದಕ್ಕೆ ಪಂಗನಾಮಹೆಸರಿನಲ್ಲಿ ಕಂಡಿರೋ ಇಂತಹ ವ್ಯತ್ಯಾಸಗಳಿಂದ ಕನ್ನಡಿಗನಿಗೆ ತನ್ನದೇ ಆದ ನಿಜವಾದ ಇತಿಹಾಸ ತಿಳಿಯದೇ ಹೋಗಿ ತನ್ನ ನಾಡಿನಲ್ಲಿ ಬಂದು ನೆಲೆಸಿದ್ದ ಹೊರಗಿನೋರ ಮಾಹಿತಿಯೇ ಇತಿಹಾಸ ಅಂತಾಗಿದೆ. ಇದರಿಂದ ದಿನ-ನಿತ್ಯವೂ ತನ್ನ ಭಾಷೆಯ ಒಂದೊಂದು ಅಂಶ ಬೇರೆ ಭಾಷೆಗಳಿಂದ ಹೇರಿಕೆಗೀಡಾಗುತ್ತಿರೋದು ಕಂಡು ಬರ್ತಿದೆ. ನಮ್ಮ ಅಡಿಗೆ ತೊಡುಗೆಗಳಲ್ಲೂ ಇಂದು ಹೊರಗಿನೋರ ಉಚ್ಚಾರ ದೋಶದಿಂದ ಬದಲಾವಣೆಯಾಗ್ತಿದೆ.
ದೋಸೆ-ದೋಸಾ, ವಡೆ-ವಡ, ಬೇಳೆ-ದಾಲ್, ಕೋಸು-ಗೋಬಿ ಆಗಿದೆ. ಹಿಂಗೇ ಉಪ್ಯೋಗವಾಗ್ತಿದ್ದ ನಮ್ಮ ಹೆಸರುಗಳೆಲ್ಲಾ ಮಾಯವಾಗ್ತಿವೆ.
ಕನ್ನಡ ನಾಡಿನಲ್ಲಿ ಸೇರೋದೇ ಸರಿ ಅಂತ ಭಾಷಾವಾರು ಪ್ರಾಂತ್ಯ ರಚನೆ ಸಮಯದಲ್ಲಿ ನಿರ್ಧಾರವಾಗಿ ನಮ್ಮ ರಾಜ್ಯಕ್ಕೆ ಬೆಳಗಾವಿ ಸೇರಿಸಿತ್ತು. ಬೆಳ್ಗಾವಿ ಅನ್ನೋ ಒಂದು ಹಳ್ಳಿಯನ್ನು ಬ್ರಿಟಿಷರು ಅಂದು
ಬೆಳ್ಗಾಮ್ ಅಂತ ಕರ್ದಿದ್ರು, ಆದ್ರೆ ಇಂದೂ ಕೂಡ ಅಲ್ಲಿಯ ಜನರು ಬೆಳ್ಗಾವಿ ಅಂತ ಉಪ್ಯೋಗ ಮಾಡೋದೇ ಹೆಚ್ಚು. ಹೀಗಿರುವಾಗ ಈ ವ್ಯತ್ಯಾಸವೇಕೆ? ಬೇರೆ ರಾಜ್ಯಗಳ ಇದೇ ರೀತಿಯ ಬೇಡಿಕೆಗಳಿಗೆ ಕೂಡಲೆ ಮನ್ನಣೆ ನೀಡಿದ್ದು ನಮ್ಮ ರಾಜ್ಯಕ್ಕೆ ಮಾಡ್ತಿರೋದು ಇದು ಮಾತ್ರ ಮಲ-ತಾಯಿ ಧೋರಣೆ ಅಲ್ದೆ ಇನ್ನೇನು ಗುರು? ವ್ಯವಸ್ಥೆಗೆ ಸರಿಯಾಗಿ ಮರ್ಯಾದೆ ಕೊಟ್ಟು ಅದರ ನಿಯಮ ಪಾಲಿಸಿದಕ್ಕೆ ಕೇಂದ್ರ ಸರ್ಕಾರ ನಮಗೆ ಇಟ್ಟಿರೋ ಈ ಪಂಗನಾಮ ಕನ್ನಡಿಗರಿಗೆ ಎಲ್ಲೀ ನ್ಯಾಯ ಗುರು?!
ಕನ್ನಡಿಗರಿಂದ ಚುನಾಯಿತರಾಗಿರೋ ಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಾಯ ಕೊಟ್ಟು ಈ ಕೆಲ್ಸ ಮಿಂಚಿನ ವೇಗದಲ್ಲಿ ಮಾಡಿಸಿಕೊಡ್ಬೇಕು ಗುರು! ನಿಧಾನವಾಗಿ ಬೆಳಗಾವಿ ಇಂದ ಬೆಳ್ಗಾವ್, ಮುಂದೆ ಈಗಾಗಲೇ ಕಂಡಂತೆ
ಮಂಗಳಾಪುರಂ, ಹೀಗೇ ನಮ್ಮ ಗಡಿ ಭಾಗದಿಂದ ಅಕ್ಕಪಕ್ಕದ ರಾಜ್ಯದೋರು ಒಳಬಂದು ನಮ್ಮೂರುಗಳ ಹೆಸರನ್ನು ಬದಲಾಯಿಸೋದಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿ, ಕ್ರಮೇಣ ಕನ್ನಡ ನಾಡಿನೆಲ್ಲೆಡೆ ಕನ್ನಡವೇ ಅನಿಸದ ಹೆಸರುಗಳು ತುಂಬಿಹೋಗತ್ತೆ ಗುರು! ಆ ದಿನ ನೋಡ್ಬೇಕಾ?