ಸಿಬಿಎಸ್‌ಇ: ಇನ್ಮುಂದೆ ಕಡಿವಾಣವಿಲ್ಲದ ಕುದುರೆ!

(ಚಿತ್ರಕೃಪೆ: ಉದಯವಾಣಿ)
ಇದುವರೆವಿಗೆ ರಾಜ್ಯಸರ್ಕಾರದ ಅನುಮತಿ (ನಿರಾಕ್ಷೇಪಣಾ ಪತ್ರ) ಇಲ್ಲದೆ ಸಿ.ಬಿ.ಎಸ್.ಇ ಶಾಲೆಗಳನ್ನು ಶುರುಮಾಡುವಂತಿಲ್ಲಾ ಎಂದಿದ್ದ ನಿಯಮವನ್ನು ಸಡಿಲ ಮಾಡಿರುವ ಕೇಂದ್ರದ ಕ್ರಮದಿಂದಾಗಿ, ರಾಜ್ಯಸರ್ಕಾರದ ಬಳಿಯಿದ್ದ ಒಂದೇ ಒಂದು ಅಂಕುಶವೂ ಇಲ್ಲದಂತಾಗಿರುವ ಕಳವಳಕಾರಿ ಸುದ್ದಿ ೨೭.೧೦.೨೦೧೩ರ ಉದಯವಾಣಿ ದಿನಪತ್ರಿಕೆಯಲ್ಲಿ ಬಂದಿದೆ.

ರಾಜ್ಯಸರ್ಕಾರದ ಬಳಿಯಿದ್ದ ಕಡಿವಾಣ

ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ ಶಾಲೆಗಳು ಸಿಬಿಎಸ್‌ಇ ಬೋರ್ಡ್ ಅಧೀನ ಬರುತ್ತವೆ ಮತ್ತು ಇವುಗಳನ್ನು ಆರಂಭಿಸಲು ರಾಜ್ಯಸರ್ಕಾರದ ಅನುಮತಿ ಕಡ್ಡಾಯ ಎನ್ನಲಾಗಿತ್ತು. 
ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು ವಿಧಿಸಿರೋ ಕರಾರು...
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (N.O.C) ಸಲ್ಲಿಸಬೇಕು ಅನ್ನೋ ನಿಯಮಾನ ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆ ಇಲ್ಲ.
ನಿರಾಕ್ಷೇಪಣಾ ಪತ್ರ ಕೊಡಲು ಇರೋ ನಿಯಮಾ...
ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ ಕೊಡಕ್ಕೆ ಅಂತಾನೆ ಒಂದು ನಿಯಮಾನಾ 1989ರಲ್ಲೇ ಮಾಡಿದೆ. ಅದುಕ್ಕೆ ಆಗಿಂದಾಗ್ಗೆ ತಿದ್ದುಪಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.
- ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
ಇದಕ್ಕೆ 2002ರಲ್ಲಿ ಒಂದು ತಿದ್ದುಪಡಿ ಮಾಡಿ, ‘ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು’ ಎಂದು ಸೇರಿಸಿದ್ದಾರೆ. ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
ಇಂಥಾ ನಿಯಮವಿದ್ದಾಗಲೂ ರಾಜ್ಯಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿಮಾಡುವಲ್ಲಿ ಪೂರ್ತಿ ಯಶಸ್ವಿಯಾಗದಿದ್ದರೂ, ಹೀಗೆ ಹೇಳಿಕೊಳ್ಳಲಿಕ್ಕಾದರೂ ಒಂದು ನಿಯಮವನ್ನು ರಾಜ್ಯಸರ್ಕಾರ ಮಾಡಿತ್ತು. ಇದೀಗ ರಾಜ್ಯಸರ್ಕಾರದ ಅನುಮತಿಯ ಅಗತ್ಯವಿಲ್ಲ ಎಂದು ಸಿಬಿಎಸ್‌ಇ ಬೋರ್ಡು ನಿಯಮ ಬದಲಾಯಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಎಗ್ಗುಸಿಗ್ಗಿಲ್ಲದೆ ಸಿಬಿಎಸ್‌ಇ ಶಾಲೆಗಳು ಇನ್ಮುಂದೆ ಆರಂಭವಾಗಲಿವೆ.

ಇದು ಒಕ್ಕೂಟದ ಮೇಲಿನ ದಾಳಿ

ಕಲಿಕೆ ಎನ್ನುವುದು ೧೯೭೬ಕ್ಕೆ ಮೊದಲು ರಾಜ್ಯಪಟ್ಟಿಯಲ್ಲಿದ್ದದ್ದು ಇದೀಗ ಜಂಟಿಪಟ್ಟಿಯಲ್ಲಿದೆ. ಅಂದರೆ ಕೇಂದ್ರ ಮಾಡುವ ಕಟ್ಟಳೆಗಳೇ ಅಂತಿಮ. ಇಂಥಾ ನಿಯಮದಿಂದಾಗಿ ರಾಜ್ಯಗಳು ತನ್ನ ನಾಡಿನ ಪ್ರಜೆಗಳಿಗೆ ಏನು ಕಲಿಸಬೇಕು ಎನ್ನುವುದನ್ನು ಕೇಂದ್ರ ನಿರ್ಧರಿಸುತ್ತಿದೆ. ಇದು ಸರಿಯಾಗಬೇಕೆಂದರೆ ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣವೆನ್ನುವುದು ರಾಜ್ಯಪಟ್ಟಿಗೆ ಮರಳಿ ಬರಬೇಕು. ಅಧಿಕಾರ ವಿಕೇಂದ್ರೀಕರಣ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎನ್ನುವುದಕ್ಕೆಲ್ಲಾ ಆಗ ಅರ್ಥ ಸಿಕ್ಕೀತು! ಒಕ್ಕೂಟ ವ್ಯವಸ್ಥೆಯ ಮೇಲಿನ ಈ ದಾಳಿಯನ್ನು ಕೊನೆಗೊಳಿಸಲು ರಾಜ್ಯಸರ್ಕಾರಗಳು ಒಟ್ಟಾಗಿ ದನಿಯೆತ್ತಬೇಕು.

ಕನ್ನಡಕ್ಕೆ ಸಂಸ್ಕೃತ ತಾಯಿ - ದಾಯಿ ಎಂಬ ಮತ್ತದೇ ಕಾಗಕ್ಕ ಗುಬ್ಬಕ್ಕನ ಕಥೆ!


ನಿನ್ನೆಯ ದಿವಸ, ಸಂಸ್ಕೃತ ಸಂಜೆ ಕಾಲೇಜು ಉದ್ಘಾಟನೆಯ ಕಾರ್ಯಕ್ರಮ ನಡೆಯಿತೆಂಬ ಸುದ್ದಿ ಇವತ್ತಿನ (೨೦.೧೦.೨೦೧೩ರ) ಸುದ್ದಿಹಾಳೆಗಳಲ್ಲಿ ಬಂದಿದೆ. ಇದರಲ್ಲಿ ಕರ್ನಾಟಕ ರಾಜ್ಯಪಾಲರು ಪಾಲ್ಗೊಂಡು ಮಾತಾಡಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ಼್ ಲಿವಿಂಗ್ ಆಶ್ರಮದಲ್ಲಿ ನಡೆದ ಮತ್ತೊಂದು ಇಂಥದ್ದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಕತೆಗಾರರಾದ ಶ್ರೀ ಎಸ್.ಎಲ್.ಭೈರಪ್ಪನವರೂ, ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರೂ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ಮಾತಾಡಿದ ಸುದ್ದಿ ಪ್ರಕಟವಾಗಿದೆ. ಎರಡೂ ಸುದ್ದಿಗಳ ಸಾರ ಒಂದೇ ಆಗಿರೋದು ಕಾಗೆ ಕೂತು ಟೊಂಗೆ ಮುರಿದ ಹಾಗೇನೂ ತೋರುತ್ತಿಲ್ಲ.

ಸುಳ್ಳುಗಳ ಸರಮಾಲೆ

ಸಂಸ್ಕೃತವನ್ನು ಒಪ್ಪಿಸುವ ಮತ್ತು ಮೆಚ್ಚಿ ಕೊಂಡಾಡುವ ಹುಮ್ಮಸ್ಸಿನಲ್ಲಿ ಎರಡೂ ಕಡೆ ಹೇಳಲಾದ ಸುಳ್ಳುಗಳನ್ನು ನೋಡಿ. ಇದುವರೆವಿಗೂ ಸಂಸ್ಕೃತವನ್ನು ಕನ್ನಡಕ್ಕೆ ತಾಯಿ ಎನ್ನುತ್ತಿದ್ದ ಸುಳ್ಳನ್ನೇ ರಾಜ್ಯಪಾಲರು ಮುಂದುವರೆಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಮತ್ತೊಬ್ಬ ಹಿರಿಯರಾದ ನ್ಯಾಯಮೂರ್ತಿ ಎನ್. ಕುಮಾರ್ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತೀಯ ಸಂಸ್ಕೃತಿ ಅಡಗಿರುವುದೇ ಸಂಸ್ಕೃತದಲ್ಲಿ.. ಸಂಸ್ಕೃತ ಅರಿಯದೇ ಭಾರತದ ಸಂಸ್ಕೃತಿ ಅರಿಯಲು ಕಷ್ಟ... ಕನ್ನಡ ಸಂಸ್ಕೃತದ ಮಗಳು.. ಎಂದೆಲ್ಲಾ ಹೇಳಿದ್ದಾರೆ. ಹೀಗೆ ಕನ್ನಡದ ತಾಯಿಯ ಹೊಣೆಗಾರಿಕೆಯನ್ನು ಸಂಸ್ಕೃತಕ್ಕೆ ಪುಕ್ಕಟೆಯಾಗಿ ಹೊರಿಸಿಬಿಟ್ಟಿದ್ದನ್ನು ನೋಡಿದರೆ ಹಿಂದೊಮ್ಮೆ ತಮಿಳ ಕರುಣಾನಿಧಿಯವರು "ಕನ್ನಡಿಗರು - ತಮಿಳರ ಚಿಕ್ಕತಮ್ಮಂದಿರು" ಎಂಬ ಹೇಳಿಕೆ ನೀಡಿ ಅಣ್ಣನ ದೊಡ್ಡಸ್ತಿಕೆ ತೋರಿದ್ದು ನೆನಪಾಗುತ್ತದೆ. ಇದೇ ದೊಡ್ಡತನ ತೋರುತ್ತಾ ಕುಮಾರ್ ಅವರು ಕನ್ನಡ ಬೆಳೆದರೆ ಸಂಸ್ಕೃತಕ್ಕೆ ಬೇಸರವಾಗದು ಎಂದು ಬೇರೆ ಹೇಳಿದ್ದಾರೆ.

ಆಶ್ರಮದಲ್ಲಿ ಮಾತಾಡಿದ ಸ್ವಾಮಿಯವರು ಸಂಸ್ಕೃತ ಭಾಷೆ ಉಲಿಯುವುದರಿಂದ ಮಕ್ಕಳ ಬುದ್ದಿಮಟ್ಟ ಹೆಚ್ಚುತ್ತೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡದ ತಾಯಿ ಸಂಸ್ಕೃತವಲ್ಲಾ ಎಂಬುದನ್ನು ಅರಿತವರಂತೆ ಮಾತಾಡಿರುವ ಭೈರಪ್ಪನವರು ಸಂಸ್ಕೃತಕ್ಕೆ ತಾಯಿಯ ಬದಲು ದಾಯಿಯ ಸ್ಥಾನ ನೀಡಿದ್ದಾರೆ. ಕನ್ನಡದಲ್ಲಿ ೮೦%ರಷ್ಟು, ಹಿಂದೀಯಲ್ಲಿ ೯೦%ರಷ್ಟು ಸಂಸ್ಕೃತವಿದೆ ಎಂದಿದ್ದಾರಲ್ಲದೆ ಕನ್ನಡ ವ್ಯಾಕರಣದ ೮೦% ಭಾಗ ಸಂಸ್ಕೃತವೇ ಎಂದಿದ್ದಾರೆ. ಕನ್ನಡ ಅಧ್ಯಾಪಕರಿಗೆ ಕನ್ನಡ ಬಾರದು... ಮತ್ತು ಇದಕ್ಕೆ ಕಾರಣ ಅವರಿಗೆ ಸಂಸ್ಕೃತ ಗೊತ್ತಿಲ್ಲದಿರುವುದು ಎಂದೆಲ್ಲಾ ಹೇಳಿದ್ದಾರೆ.

ದಿಟ ಹೇಳಲು ಹಿಂದೇಟೇಕೆ?

ಕನ್ನಡ ಸಂಸ್ಕೃತಗಳು ಬೇರೆ ಬೇರೆ ಬೇರಿನ ನುಡಿಗಳು. ಕನ್ನಡಿಗರಲ್ಲಿ ಓದು ಬರಹದ ಬಳಕೆ ಬಹಳವಾಗಿ ಹೆಚ್ಚಾಗಿರುವುದು ೨೦ನೇ ಶತಮಾನದಲ್ಲಿ. ಅದುವರೆವಿಗೂ ಕೆಲವೇ ಜನರ ಬಳಕೆಯಲ್ಲಿ ಓದು ಬರಹವಿತ್ತು ಮತ್ತು ಅಂತಹವರು ಸಂಸ್ಕೃತ ಬಲ್ಲವರೂ ಆಗಿದ್ದುದು ಸಾಮಾನ್ಯ. ಕಲಿಕೆಯ, ಅರಿಮೆಯ ವಿಷಯಗಳೆಲ್ಲಾ ಆಗ ಸಂಸ್ಕೃತದಲ್ಲಿರುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ. ಇದೇ ಕಾರಣಕ್ಕಾಗಿ ಕನ್ನಡದ ಬರಹಗಾರರ ಬರಹಗಳಲ್ಲೂ ಸಂಸ್ಕೃತದ ಬಳಕೆ ಹೆಚ್ಚಾಗಿ ತುಂಬಿರುತ್ತಿತ್ತು. ಇದೇ ಕಾರಣಕ್ಕೇ ಕನ್ನಡದ ಲಿಪಿಯಲ್ಲೂ ಸಂಸ್ಕೃತಕ್ಕೆ ಬೇಕಾದ ಅಕ್ಷರಗಳನ್ನು ಸೇರಿಸಲಾಯಿತು. ಇದೇ ಕಾರಣಕ್ಕಾಗೇ ಸಂಸ್ಕೃತದ ಕಟ್ಟುಪಾಡು ವಿವರಿಸುವ ವ್ಯಾಕರಣದ ಸಿದ್ಧ ಅಂಗಿಯನ್ನೇ ಕನ್ನಡಕ್ಕೂ ತೊಡಿಸಲಾಯಿತು...ಇದು ದಿಟವೋ ಅಲ್ಲವೋ? ಇದು ದಿಟವಾದರೆ ಹೇಳಲೇಕೆ ಹಿಂಜರಿಕೆ?

ಇಂದು ನಾಡಿನಲ್ಲಿ ಹೆಚ್ಚು ಜನರಿಗೆ ಕಲಿಕೆಯು ಬೇಕಾಗಿರುವುದರಿಂದ, ಈ ಹಿಂದಿನ ಏರ್ಪಾಟನ್ನು ತಿರುಗಿ ನೋಡಬೇಕಾಗಿದೆ. ನಿಜಕ್ಕೂ ಕನ್ನಡ ಯಾವುದು? ಯಾವುದು ಕನ್ನಡದ ಸೊಲ್ಲರಿಮೆ? ಯಾವುದು ಕನ್ನಡಪದ? ಕನ್ನಡದ ಕಸುವನ್ನು ಹೆಚ್ಚಿಸುವ ಬಗೆ ಯಾವುದು? ಕಲಿಕೆಯು ಹೆಚ್ಚು ಜನರನ್ನು ತಲುಪಬೇಕಾಗಿರುವುದರಿಂದಾಗಿ ಹೇಗೆ ಮುಂದುವರೆಯಬೇಕು? ಎಂಬುದಾಗೆಲ್ಲಾ ನಾವು ಯೋಚಿಸಬೇಕಾಗಿದೆ. ಹಲವೆಡೆ ಅಂತಹ ಪ್ರಯತ್ನಗಳೂ ಕೂಡಾ ನಡೆಯುತ್ತಿದೆ. ಇದನ್ನು ಸಹಿಸದ ಕೆಲವು ಮಂದಿ ಇಂತಹ ಪ್ರಯತ್ನವನ್ನೇ "ಸಂಸ್ಕೃತ ವಿರೋಧಿ" ಎಂದು ಕರೆಯುತ್ತಿರುವುದು ಇಂದು ಕಾಣುತ್ತಿದೆ. ಹೀಗೆ ಕರೆಯಲು ಅದ್ಯಾವುದೋ ದಿಗಿಲು ಕಾರಣವಾಗಿರುವಂತಿದೆ. ಈ ದಿಗಿಲೇ ಕನ್ನಡ ಕಟ್ಟುವ ಪ್ರಯತ್ನವನ್ನು "ತಮಿಳರ ನಕಲು" ಎನ್ನುತ್ತಿರುವುದು, "ಸಂಸ್ಕೃತ ವಿರೋಧಿ" ಎನ್ನುತ್ತಿರುವುದು.. ತಮಾಶೆ ಎಂದರೆ ಇದರ ಮುಂದುವರೆದ ಭಾಗವಾಗಿ ಭಾರತದ ಸಂಸ್ಕೃತಿಗೂ ಸಂಸ್ಕೃತಕ್ಕೂ ಸಲ್ಲದ ನಂಟನ್ನು ಬೆಸೆಯುವುದು ಮತ್ತು ಆ ಮೂಲಕ ಇಂತಹ ಪ್ರಯತ್ನಗಳನ್ನು ಸಂಸ್ಕೃತಿ ವಿರೋಧಿ ಎನ್ನುವುದು ಕೂಡಾ ಸಾಮಾನ್ಯವಾಗಿದೆ. ಸಂಸ್ಕೃತ ಕಲಿಯಬೇಕಾ? ಕಲಿಯಿರಿ... ಅದು ಬಿಟ್ಟು ಕನ್ನಡ - ಸಂಸ್ಕೃತದ ನಡುವೆ ಯಾವುದೋ ವೈರತ್ವ ಇರುವಂತೆ ಬಿಂಬಿಸುವುದು "ಪಾಕಿಸ್ತಾನದ ಭೀತಿ ಹುಟ್ಟಿಸಿ...ಇಂಡಿಯಾದ ಒಗ್ಗಟ್ಟು ಕಟ್ಟುವ" ಪ್ರಯತ್ನದ ಹಾಗೇ ಅನ್ನಿಸಿಬಿಡುತ್ತದೆ.

ಮೇಲಿನ ಕಾಯ್ರಕ್ರಮಗಳಲ್ಲಿ ಆಡಿದ ಒಂದು ಮಾತಿನಂತೆ ಕನ್ನಡದಲ್ಲಿ ೮೦%, ಹಾಗೇ ಹಿಂದಿಯಲ್ಲಿ ೯೦%ರಷ್ಟು ಸಂಸ್ಕೃತವಿದೆಯಂತೆ. ಹಿಂದೀಯಲ್ಲಿರದೆ ಕನ್ನಡದಲ್ಲಿ ಮಾತ್ರವಿರುವ ಸಂಸ್ಕೃತವನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಹೇಳುವುದಾದರೆ ಕನ್ನಡದಲ್ಲಿ ಸುಮಾರು ೭೦%ರಷ್ಟು ಹಿಂದೀ ಇದೆಯೆಂದಂತಾಗಲಿಲ್ಲವೇ? ಇಲ್ಲಿ ಸಮಸ್ಯೆಯಿರುವುದು ಸಂಸ್ಕೃತ ಶಾಲೆ ನಡೆಸುವುದರ ಬಗ್ಗೆ ಅಲ್ಲಾ! ಕನ್ನಡಿಗರು ಸಂಸ್ಕೃತವನ್ನು ಕಲಿಯಬೇಕು ಎನ್ನುವುದರ ಬಗ್ಗೆಯೂ ಅಲ್ಲಾ! ಪ್ರಶ್ನೆಯಿರುವುದು ಸಂಸ್ಕೃತವನ್ನು ಕನ್ನಡದ ತಾಯಿ ಎನ್ನುವ ಬಗ್ಗೆ! ಕನ್ನಡದ ಬೇರು ಎನ್ನುವ ಬಗ್ಗೆ! ಸಂಸ್ಕೃತ ಕಲಿಯದಿದ್ದರೆ ಕನ್ನಡ ಬರುವುದಿಲ್ಲಾ ಎನ್ನುವ ಬಗ್ಗೆ! ಸಂಸ್ಕೃತ ಭೂಯಿಷ್ಟ ಕನ್ನಡವೇ ಕನ್ನಡ ಎನ್ನುವ ಮನಸ್ಥಿತಿಯ ಬಗ್ಗೆ! ನಿಜವಾಗಿಯೂ ಆಡುಮಾತಿನಲ್ಲಿ ೬೦% - ೭೦% - ೮೦% ಸಂಸ್ಕೃತವಿದ್ದಿದ್ದರೆ... ಸಂಸ್ಕೃತವನ್ನು ಕಲಿಸಲು ಈ ಮಂದಿ ಈ ಪಾಟಿ ತಿಣುಕಬೇಕಿತ್ತಾದರೂ ಏಕೆ? ಸಂಸ್ಕೃತವನ್ನು ಇಡೀ ಕನ್ನಡ ಜನರ ಆಡುನುಡಿಯಾಗಿಸಬೇಕೆನ್ನುವ ದೀಕ್ಷೆ ಕೈಗೊಳ್ಳಬೇಕಿತ್ತಾದರೂ ಏಕೆ?

ಕೊನೆಹನಿ: ಕನ್ನಡಕ್ಕೆ ಸಂಸ್ಕೃತ ತಾಯಿ. ಕನ್ನಡ ಏಳಿಗೆ ಕಂಡು ಸಂಸ್ಕೃತಕ್ಕೆ ಬೇಸರವಿಲ್ಲಾ ಎಂದೆಲ್ಲಾ ಮುತ್ತು ಉದುರಿದ ಸದರಿ ಕಾರ್ಯಕ್ರಮದ ಫೋಟೋವನ್ನೊಮ್ಮೆ ನೋಡಿ. ವೇದಿಕೆಯ ಮೇಲೆ ಹಾಕಿರುವ ಬ್ಯಾನರಿನಲ್ಲಿ ಕನ್ನಡದ ಒಂದಕ್ಷರವೂ ಕಾಣುತ್ತಿಲ್ಲಾ! ಅಂದರೆ ಕನ್ನಡಿಗರಿಗೆ ಸಂಸ್ಕೃತವನ್ನು ಕಲಿಸಬೇಕೆನ್ನುವ ದೊಡ್ಡಜನರಿಗೆ, ಹೀಗೆ ಮಗಳನ್ನು ಕಡೆಗಣಿಸುವುದು ತಪ್ಪು ಎಂದು ಅನ್ನಿಸಲಿಲ್ಲವಾ ಗುರೂ!?

ನಿಮ್ಮ ಸಲಹೆ ಬರಲಿ! ಆದರೆ ಅದು ನಮ್ಮ ನುಡಿಯಲ್ಲಿರಲಿ!!

ಮಾಹಿತಿ ಹಕ್ಕು ಕಾಯ್ದೆ(೨೦೧೩)ನ್ನು ಸಂಸತ್ತಿನ ಮುಂದಿಡಲಾಗಿದ್ದು, ಇದನ್ನು ಸಾರ್ವಜನಿಕರ ಆಕ್ಷೇಪಣೆ, ಸಲಹೆ ಸೂಚನೆಗಳಿಗೆ ತೆರೆದಿಡಲಾಗಿದ್ದು ಸಾರ್ವಜನಿಕರು, ಸಂಘಸಂಸ್ಥೆಗಳು ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು - ಅಂತರ್ಜಾಲದಲ್ಲಿ ಸಿಗುವ ಕರಡು ಮಸೂದೆಯನ್ನು ಅಧ್ಯಯನ ಮಾಡಿ - ನೀಡಬೇಕೆಂದು ಒಂದು ಸಾರ್ವಜನಿಕ ಜಾಹೀರಾತನ್ನು ರಾಜ್ಯಸಭಾ ಸೆಕ್ರೆಟೆರಿಯೇಟ್ ಹೊರಡಿಸಿದೆ.

ಪ್ರಜಾಪ್ರಭುತ್ವಕ್ಕೆ ಮಸಿ ಬಳಿದ ಜಾಹೀರಾತು

ಓಹೋ! ಬಹಳ ಒಳ್ಳೆಯದು ಎಂದು ಯಾರಾದರೂ ಈ ಜಾಹೀರಾತಿಗೆ ಪ್ರತಿಕ್ರಿಯೆ ನೀಡಲು ಮುಂದಾಗಿ ತಮ್ಮ ಸಲಹೆ ನೀಡಲು ಹೋದರೆ ಭಾರತದ ಭಾಷಾನೀತಿಯ ಹುಳುಕು ಮುಖಕ್ಕೆ ರಾಚುತ್ತದೆ. ಈ ಜಾಹೀರಾತಿನ ಪ್ರಮುಖವಾದ ಕಟ್ಟಳೆಯೇನೆಂದರೆ ಸಾರ್ವಜನಿಕರು ಸಲಹೆಗಳನ್ನು "ಇಂಗ್ಲೀಷ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವೇ ನೀಡತಕ್ಕದ್ದು" ಎನ್ನುವುದು. ಅಂದರೆ ಸರ್ಕಾರಿ ಅಂಕಿಅಂಶದಂತೆ ೪೧% ಹಿಂದೀಯವರೂ(ಒಟ್ಟು ಹಿಂದೀಯವರನ್ನು ೪೧% ಎಂದು ಭಾರತ ಕರೆಯುತ್ತಿದ್ದರೂ ಅದರಲ್ಲಿ ಹಿಂದೀ ನುಂಗಿರುವ ೪೯ ಭಾಷೆಗಳಿದ್ದು ಬರಿಯ ಹಿಂದೀ ತಾಯ್ನುಡಿಯ ಜನಸಂಖ್ಯೆ ೨೯% ಮಾತ್ರಾ ಇದೆ.), ಇನ್ನೊಂದು ೪% ಇಂಗ್ಲೀಷ್ ಬಲ್ಲ ಹಿಂದೀಯೇತರರು (ಒಟ್ಟು ಇಂಗ್ಲೀಷ್ ಬಲ್ಲವರ ಸಂಖ್ಯೆ ೭%ರ ಆಸುಪಾಸಿನಲ್ಲಿದೆ. ಆ ಏಳರಲ್ಲಿ ೩% ಹಿಂದೀಯವರೂ ಆಗಿರಬಹುದು ಎನ್ನುವ ಅಂದಾಜು) ಮಾತ್ರವೇ ಸಲಹೆ ಕೊಡಲು ಸಾಧ್ಯ ಎಂದಾಯಿತಲ್ಲಾ! ಹೀಗಾದರೆ ಪ್ರಜಾಪ್ರಭುತ್ವಕ್ಕೇನು ಅರ್ಥ? ಇಡೀ ಪ್ರಕ್ರಿಯೆಯೇ ಪೊಳ್ಳಿನದ್ದು ಎಂದಾಯಿತಲ್ಲಾ! ದೇಶದ ಅರ್ಧಕ್ಕಿಂತ ಹೆಚ್ಚು ಜನರನ್ನು ಒಂದು ಮಸೂದೆಗೆ ಸಲಹೆ ನೀಡುವುದರಿಂದ ಹೊರಗಿಡುವುದು ಎಂಥಾ ಪ್ರಜಾಪ್ರಭುತ್ವ? ಇಂಥಾ ಘಟನೆಗಳು ಭಾರತದಲ್ಲಿ ಮೂಲಭೂತವಾಗಿ ಸರಿಹೋಗಬೇಕಾದ್ದೇ ಸಾಕಷ್ಟಿದೆ ಎನ್ನುವುದನ್ನು ಸಾರುತ್ತಿದೆ. ಇದೀಗ ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ಎಂಬ ಸರ್ಕಾರೇತರ ಸಂಸ್ಥೆ ಈ ಬಗ್ಗೆ ದನಿ ಎತ್ತಿದೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದರೆ...

ಭಾರತ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದರೆ ಎಲ್ಲಾ ಭಾಷೆಯ ಪತ್ರಿಕೆಗಳಲ್ಲೂ ಆಯಾ ಭಾಷೆಯಲ್ಲಿ ಈ ಜಾಹೀರಾತನ್ನು ಹೊರಡಿಸಿ ಯಾವುದೇ ಭಾಷೆಯಲ್ಲೂ ತಮ್ಮ ಸಲಹೆ ಕೊಡಬಹುದು ಎನ್ನುತ್ತಿತ್ತು! ಅಂಥದ್ದೊಂದು ದಿನ ಬೇಗನೆ ಬರಲಿ ಎಂಬ ಆಶಯ ನಮ್ಮದು. ಹಾಗಾಗಬೇಕಾದರೆ ಭಾರತದ ಹುಳುಕಿನ ಭಾಷಾನೀತಿ ಬದಲಾಗಲೇ ಬೇಕು. ರಾಜ್ಯಗಳು ಈ ನಿಟ್ಟಿನಲ್ಲಿ ದನಿಯೆತ್ತದಿದ್ದರೆ ನಾವೆಲ್ಲಾ ಈ ದೇಶಕ್ಕೆ ಜೈಕಾರ ಹಾಕುತ್ತಾ ಹಾಕುತ್ತಲೇ ಗುಲಾಮಗಿರಿಗೆ ಒಳಗಾಗುವ ಎರಡನೇ ದರ್ಜೆಯ ಪ್ರಜೆಗಳಾಗಬೇಕಾದೀತು!

ಸಾರ್ವಜನಿಕ ಶಿಕ್ಷಣ ಇಲಾಖೆ: ಆರ್.ಟಿ.ಐ ಮೇಲ್ಮನವಿ ಸಲ್ಲಿಕೆ!


ಕಳೆದ ತಿಂಗಳ ಮೊದಲಲ್ಲಿ "ಮಕ್ಕಳ ಕಲಿಕೆಯಲ್ಲಿ ತ್ರಿಭಾಷಾ ಸೂತ್ರವೆಂಬ ಶೂಲವಿದೆಯೇ?" ಎಂಬ ತಲೆಬರಹದಡಿಯಲ್ಲಿ ಒಂದು ಬರಹವನ್ನು ಬರೆದಿದ್ದೆವು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾಮಕ್ಕಳ ಕಲಿಕೆಯಲ್ಲಿ ಅಳವಡಿಸಿಕೊಳ್ಳಲಾಗಿರುವ ಭಾಷಾನೀತಿಯ ಬಗ್ಗೆ ಕೆಲವಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೀಗ ಮೊದಲ ಮೇಲ್ಮನವಿಯನ್ನು ಸಲ್ಲಿಸಲಾಗಿದೆ.

ಮಾಹಿತಿ ಹಕ್ಕು!

ಮಾಹಿತಿ ಹಕ್ಕು ಕಾಯ್ದೆ ೨೦೦೫ರ ಪ್ರಕಾರ ಯಾವುದೇ ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಮೂವತ್ತು ದಿನಗಳೊಳಗಾಗಿ ವಿಲೇವಾರಿ ಮಾಡಬೇಕು. ಹಾಗೆ ಮಾಡದಿದ್ದಲ್ಲಿ ಕೇಳಿದ ಮಾಹಿತಿಯನ್ನು ನಿರಾಕರಿಸಿದ ಹಾಗೇ ಎನ್ನುತ್ತದೆ ಕಾಯ್ದೆ. ಅದರಂತೆಯೇ ಈಗ ಕೇಳಿದ ಮಾಹಿತಿಯು ಮೂವತ್ತು ದಿನಗಳಲ್ಲಿ ಬಾರದ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊದಲ ಮೇಲ್ಮನವಿಯನ್ನು ಸಲ್ಲಿಸಲಾಗಿದೆ. ಈ ಮೇಲ್ಮನವಿಗೆ ಸೂಕ್ತ ಉತ್ತರವನ್ನು ಗೊತ್ತುಮಾಡಿದ ಹೊತ್ತಿನೊಳಗೆ ಸಂಬಂಧಿಸಿದವರು ಕೊಡುತ್ತಾರೆಂದು ಆಶಿಸೋಣ.

ಬಂಡಿಪುರ: ಸರಿಯಾದ ನಿಲುವು ತೋರಿದ ಸರ್ಕಾರ!

(ಫೋಟೋ ಕೃಪೆ: ಉದಯವಾಣಿ)

ಬಂಡಿಪುರದ ಕಾಡಿನ ನಡುವೆ ಕರ್ನಾಟಕ - ಕೇರಳ - ತಮಿಳುನಾಡಿಗೆ ಸಾಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ದಾರಿಗಳಲ್ಲಿ ಇರುಳು ಸಂಚಾರವನ್ನು ನಿಶೇಧಿಸಲಾಗಿದೆ. ಇದಕ್ಕೆ ಈ ದಾರಿಗುಂಟಾ ಇರುವ ವೈವಿಧ್ಯಮಯ ವನ್ಯಜೀವಿಗಳ ಜೀವ ಮತ್ತು ಖಾಸಗಿತನದ ರಕ್ಷಣೆಯ ಬಗ್ಗೆ ಇರುವ ಕಾಳಜಿಯೇ ಕಾರಣವಾಗಿದ್ದು... ಕರ್ನಾಟಕ ಸರ್ಕಾರ ತನ್ನ ನೆಲದಲ್ಲಿ ಈ ನಿಶೇಧವನ್ನು ಜಾರಿಮಾಡಿದೆ. ಈ ನಿಲುವಿನಿಂದಾಗಿ ಕೇರಳ ಕಸಿವಿಸಿಗೊಳಗಾಗಿದ್ದು ಈ ಇರುಳು ಸಂಚಾರ ನಿಶೇಧವನ್ನು ತೆಗೆದುಹಾಕುವಂತೆ ಎಲ್ಲಾ ಬಗೆಯಲ್ಲಿ ಒತ್ತಡವನ್ನು ಕರ್ನಾಟಕದ ಮೇಲೆ ಹಾಕುತ್ತಾ ಬಂದಿದೆ.

ಇಂಥದ್ದೇ ಒತ್ತಡ ಹಾಕಲು ಈ ಬಾರಿಯೂ ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಉಮ್ಮಾನ್ ಚಾಂಡಿಯವರು ಬೆಂಗಳೂರಿಗೆ ಬಂದಿದ್ದರು. ಇವರನ್ನು ಭೇಟಿ ಮಾಡಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿಯೇ ನಿಶೇಧ ತೆರವು ಮಾಡಲಿಕ್ಕಾಗದು ಎಂದಿದ್ದಾರೆ. ಬದಲಿ ಮಾರ್ಗವನ್ನು ಕಂಡುಕೊಳ್ಳುವ ಬಗ್ಗೆ ಒಲವು ತೋರಿದ್ದಾರೆ.. ಕರ್ನಾಟಕದ ಆನೆ, ಹುಲಿ, ಕಾಡೆಮ್ಮೆ, ಜಿಂಕೆಗಳೇ ಸೇರಿದಂತೆ ವನ್ಯಜೀವಿ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿನಿಲುವು ತೋರಿದ್ದಾರೆ. ಅಭಿನಂದನೆಗಳು.

ಕೊನೆಹನಿ: ಕರ್ನಾಟಕದ ಜನರಿಂದಲೇ ಆಯ್ಕೆಯಾಗಿರುವ ವಲಸಿಗರಾದ ಒಬ್ಬ ಸಚಿವಮತ್ತೊಬ್ಬ ಶಾಸಕರು ಈ ವಿಷಯವಾಗಿ ಕೇರಳದ ಪರವಾದ ಲಾಬಿಯನ್ನು ನಡೆಸಿ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಲು ಮುಂದಾದರು ಎಂಬ ಸುದ್ದಿಯನ್ನು ನೋಡಿದಾಗ ನಮ್ಮವರೇ ನಮ್ಮ ಜನಪ್ರತಿನಿಧಿಗಳಾಗಿರಬೇಕಾದ ಅಗತ್ಯ ಅರಿವಾಗುತ್ತದೆ. ಯೋಚಿಸಿ ನೋಡಿ... ರಾಜಕೀಯದ ಈ ಏರಿಳಿತದಾಟದಲ್ಲಿ ನಾಳೆ ನಮ್ಮ ನಾಡಿನವರಲ್ಲದ ವ್ಯಕ್ತಿಯೇ ಕರ್ನಾಟಕದ ಮುಖ್ಯಮಂತ್ರಿಯಾಗಿಬಿಟ್ಟರೆ ನಾಡನ್ನು ತಮ್ಮ ತವರಿನ ಪದತಳಕ್ಕೆ ಅರ್ಪಿಸುವುದಿಲ್ಲಾ ಎನ್ನಲಾಗುವುದೇ!




ಕನ್ನಡ ನೆಲದಲ್ಲಿನ ಕೆಲಸ - ಕನ್ನಡಿಗರ ಹಕ್ಕು!


ನಾಳೆ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಿಂದೊಂದು ಮೆರವಣಿಗೆ ಹೊರಡಲಿದೆ. ಇದು ಸ್ವಾತಂತ್ರ್ಯ ಉದ್ಯಾನದವರೆಗೂ ಸಾಗಲಿದ್ದು "ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ..." ಎಂಬ ಹಕ್ಕೊತ್ತಾಯವನ್ನು ಹೊತ್ತು ಸಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಏರ್ಪಡಿಸಿರುವ ಈ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದು ಕನ್ನಡಿಗರ ಬದುಕು ಹಸನುಗೊಳಿಸುವ ಸಲುವಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಹಕ್ಕೊತ್ತಾಯವಾಗಿದೆ.

ಈ ಹಕ್ಕೊತ್ತಾಯ ಅಸಹಜವೇನು?!

ನಮ್ಮ ನಾಡಲ್ಲಿರುವ ಸಂಪನ್ಮೂಲಗಳನ್ನು ಕಡಿಮೆ ಬೆಲೆಗೆ/ ಉಚಿತವಾಗಿ ಸರ್ಕಾರ ಕೊಡುವುದೇ ಇಲ್ಲಿನ ಜನರಿಗೆ ಕೆಲಸದ ಅವಕಾಶ ಸಿಗಬೇಕೆಂದು. ಆ ಮೂಲಕ ಜನರ ಬದುಕು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು. ಆದರೆ ಇಲ್ಲಿ ನಮ್ಮ ಜನ ಎಂದರೆ ಯಾರು ಎನ್ನುವುದರಲ್ಲೇ ಗೊಂದಲ ಹುಟ್ಟುಹಾಕಿದ ವ್ಯವಸ್ಥಿತ ಕ್ರಿಯೆ ನಡೆದಿದೆ. ಈ ಕಾರಣದಿಂದಾಗಿಯೇ ನಮ್ಮ ನಾಡಿಗೆ ಕೇಂದ್ರಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು ಬಂದಾಗ "ಓಹೋ ಆ ಸಂಸ್ಥೆ ಬಂತು... ಆಹಾ ಈ ಸಂಸ್ಥೆ ಬಂತು" ಎಂದು ಹಿಗ್ಗುವ ಹಾಗೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ! ಯಾಕೆಂದರೆ ಹೀಗೆ ಬರುವ ಉದ್ದಿಮೆಗಳು ಉದ್ದಿಮೆಯ ಜೊತೆಯಲ್ಲಿ ಸಾವಿರಾರು ಹೊರನಾಡಿನವರನ್ನು ನಮ್ಮ ನಾಡಿಗೆ ವಲಸೆ ಮಾಡಿಸಿದೆ. ನಮ್ಮ ಜನರ ಕೆಲಸದ ಅವಕಾಶಗಳನ್ನು ಕಳೆದು ಹಾಕುವುದರ ಜೊತೆಯಲ್ಲೇ ನಮ್ಮೂರಿನ ಜನಲಕ್ಷಣವನ್ನು ಇದು ಬದಲಿಸಿಹಾಕಿದೆ. ಭಾರತದ ಸಂವಿಧಾನದ ರೀತ್ಯಾ "ಕರ್ನಾಟಕದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು" ಎಂಬ ಈ ಹಕ್ಕೊತ್ತಾಯ ಅಸಂವಿಧಾನಿಕವಾದುದೂ, ರಾಷ್ಟ್ರೀಯವಾದಿಗಳ ರೀತ್ಯಾ ಇದು ಸಂಕುಚಿತ ಬುದ್ಧಿಯದ್ದೂ ಆಗಿ ಕಾಣಬಹುದು. ಆದರೆ ನ್ಯಾಯದ ದೃಷ್ಟಿಯಲ್ಲಿ ಅತ್ಯಂತ ಸಹಜವೂ, ಸರಿಯೂ ಆದುದಾಗಿದೆ. ಇಷ್ಟಕ್ಕೂ ನಮ್ಮೂರಿನ ಜನರಿಗೆ ಕೆಲಸ ಒದಗಿಸದ, ನಮ್ಮ ಜನರ ಬದುಕನ್ನು ಹಸನು ಮಾಡುವ ಉದ್ದೇಶವಿರದ ಯಾವುದೇ ಉದ್ದಿಮೆಯಾದರೂ ನಮ್ಮ ನಾಡಿಗೆ ಏಕೆ ಬೇಕು ಎಂಬುದು ಸರಳವಾದ ನೇರತರ್ಕವಾಗಿದೆ!

ಸರೋಜಿನಿ ಮಹಿಷಿ ವರದಿ ಮತ್ತು ಕೆಲಸದಲ್ಲಿ ಮೀಸಲು!

ಡಾ. ಸರೋಜಿನಿ ಮಹಿಷಿಯವರ ಮುಂದಾಳ್ತನದಲ್ಲಿ ಸ್ಥಳೀಯರಿಗೆ ಕೆಲಸದಲ್ಲಿ ಮೀಸಲಾತಿ ನೀಡುವ ಬಗ್ಗೆ ಒಂದು ಅಧ್ಯಯನ ನಡೆಸಿ ವರದಿಯನ್ನು ಕರ್ನಾಟಕ ರಾಜ್ಯಸರ್ಕಾರದ ವತಿಯಿಂದ ತರಿಸಿಕೊಳ್ಳಲಾಗಿತ್ತು. ವರದಿಯಲ್ಲಿ ಅಂದಿನ ಕಾಲಕ್ಕೆ ಹೊಂದುವಂತೆ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮೀಸಲು ಇರಬೇಕು ಎಂದೂ ಬರೆಯಲಾಗಿತ್ತು. ಈ ವರದಿ ಸಲ್ಲಿಕೆಯಾಗಿ ೨೮ ವರ್ಷಗಳೇ ಆದವು. ಇದುವರೆಗಿನ ಯಾವುದೇ ಸರ್ಕಾರಕ್ಕೂ ಈ ವರದಿಯನ್ನು ಜಾರಿಮಾಡಲು ಸಾಧ್ಯವಾಗಿಲ್ಲ. ಒಂದು ಜನಪರವಾದ ವರದಿಯನ್ನು ಇದುವರೆವಿಗೂ ಜಾರಿ ಮಾಡಲಾಗದಿರುವುದಕ್ಕೆ ರಾಜಕೀಯ ಇಚ್ಚಾಶಕ್ತಿ ಮತ್ತು ಚಾಣಾಕ್ಷತನದ ಕೊರತೆ ಕಾರಣವೆನ್ನದೇ ವಿಧಿಯಿಲ್ಲಾ! "ಕರ್ನಾಟಕ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲಿ" ಎನ್ನುವುದು ಸರಿಯಾದ ಹಕ್ಕೊತ್ತಾಯವೇ ಆಗಿದೆ. ಇಲ್ಲವೇ ಸರ್ಕಾರಕ್ಕೆ ಈ ವರದಿಯನ್ನು ಜಾರಿ ಮಾಡಲು ತಾಂತ್ರಿಕವಾದ ಅಡ್ಡಿಗಳಿದ್ದರೆ ವರದಿಯನ್ನು ತಿರಸ್ಕರಿಸಲಿ.. ಇನ್ನು ಈ ವರದಿ ಇಂದಿನ ದಿನಕ್ಕೆ ಹೊಂದುವಂತಿಲ್ಲಾ ಎನ್ನುವುದಾದರೆ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ ಸಂವಿಧಾನದ ರೀತಿಯೇ ಸ್ಥಳೀಯರಿಗೆ ಕೆಲಸ ಕೊಡಿಸಿಕೊಡಬಲ್ಲ ನೀತಿಗಳನ್ನು ರೂಪಿಸಲು ಬೇಕಾದ ಸಲಹೆಗಳನ್ನು ಪಡೆದುಕೊಳ್ಳಲಿ. ಒಟ್ಟಿನಲ್ಲಿ ಆದಷ್ಟು ಬೇಗನೆ ಸರಿಯಾದ ತೀರ್ಮಾನ ಕೈಗೊಳ್ಳಲಿ. ಈ ಆಶಯದೊಡನೆ ನಾಳೆ ನಡೆಯಲಿರುವ ಮೆರವಣಿಗೆ ಯಶಸ್ವಿಯಾಗಲಿ. ಯಾರ ಬಗ್ಗೆಯೇ ಆಗಲಿ ನಿಜವಾದ ಕಾಳಜಿಯಿದ್ದರೆ ಅಂಥವರ ಆರ್ಥಿಕ ಸಬಲತೆಗಾಗಿ ದುಡಿಯುವುದು ಸೂಕ್ತವಾಗುತ್ತದೆ. ನಾಳಿನ ಪ್ರತಿಭಟನಾ ಕಾರ್ಯಕ್ರಮ ಕನ್ನಡಿಗರ ನಿಜವಾದ ಏಳಿಗೆಗೆ ಕಾರಣವಾಗಬಲ್ಲುದಾದ, ಅನಿಯಂತ್ರಿತ ವಲಸೆ ತಡೆ- ಬಡತನ ನಿರ್ಮೂಲನೆ - ಆರ್ಥಿಕ ಏಳಿಗೆಗಳಿಗೆ ಕಾರಣವಾಗಬಲ್ಲ ಮಹತ್ವದ ಕಾರ್ಯಕ್ರಮವಾಗಿದೆ. ಈ ಹೋರಾಟ ಗೆಲ್ಲಲಿ!

ಕೊನೆಹನಿ: ಜಪಾನಿನಲ್ಲಿನ ಕೆಲಸಗಳನ್ನು ಜಪಾನಿಯರಿಗೇ ಕೊಡಿ ಎನ್ನುವುದು, ಇಂಗ್ಲೇಂಡಿನಲ್ಲಿರುವ ಕಾರುಗಳ ನೇಮ್‌ಪ್ಲೇಟುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಬಿಡಿ ಎನ್ನುವುದು, ಜರ್ಮನಿಯಲ್ಲಿ ಎಲ್ಲಾ ಗ್ರಾಹಕಸೇವೆಗಳನ್ನು ಜರ್ಮನ್ ನುಡಿಯಲ್ಲಿ ಕೊಡಿ ಎನ್ನುವುದು ಅಸಹಜವಾಗುವುದಾದರೆ ಕನ್ನಡನಾಡಿನ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಕೆಲಸಗಳನ್ನು ಕೊಡಿ ಎನ್ನುವುದು ಕೂಡಾ ಅಸಹಜ ಎನ್ನಬಹುದು!

ಕನ್ನಡಿಗರ ಕೆಲಸಕ್ಕೆ ಕಲ್ಲು! ರೈಲು, ಬ್ಯಾಂಕು ಆಯ್ತು.. ಇದೀಗ ವಿಮೆ..

ಭಾರತದ ಹುಳುಕಿನ ಭಾಷಾನೀತಿಗೆ ಮತ್ತು ಆ ಮೂಲಕ ಹಿಂದೀ ಭಾಷಿಕರಿಗೆ ವಿಶೇಷ ಉಪಕಾರ ಮಾಡಿಕೊಡುತ್ತಾ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುತ್ತಿರುವುದಕ್ಕೆ ಕೇಂದ್ರಸರ್ಕಾರದ ಅಧೀನದಲ್ಲಿರುವ ವಿಮಾ ಸಂಸ್ಥೆಗಳಲ್ಲಿ ಇತ್ತೀಚಿಗೆ ಆಗುತ್ತಿರುವ ನೇಮಕಾತಿ ಪ್ರಕ್ರಿಯೆಗಳು ತಾಜಾ ಉದಾಹರಣೆಯಾಗಿ ನಿಂತಿವೆ. 

ಹಿಂದೀಭಾಷಿಕರಿಗೆ ಸುಲಭ!

ಕೇಂದ್ರದ ಅಧೀನದ ಸಾರ್ವಜನಿಕ ವಲಯದ ನಾಲ್ಕು ವಿಮಾಸಂಸ್ಥೆಗಳಾದ ನ್ಯಾಶನಲ್, ಓರಿಯಂಟಲ್, ನ್ಯೂ ಇಂಡಿಯಾ ಮತ್ತು ಯುನೈಟಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಗಳಲ್ಲಿ ೨೬೦೦, ಕ್ಲಾಸ್ ಮೂರರ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇದಲ್ಲದೆ  ಭಾರತಾದ್ಯಂತ ಒಂದೇಸಲಕ್ಕೆ ನಡೆಸಲಾಗುತ್ತಿರುವ ಈ ನೇಮಕಾತಿಯ ಅಂಗವಾಗಿ ಕರ್ನಾಟಕದಲ್ಲಿ ಒಟ್ಟು ೧೮೧ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿದೆ. ವಿಷಯವೇನೆಂದರೆ ಈ ನೇಮಕಾತಿಯು ಹಿಂದೀ ಭಾಷಿಕರಿಗೆ ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಮಾಡಿಕೊಡುತ್ತಿದೆ ಮತ್ತು ಹಿಂದೀಯೇತರರ ಅವಕಾಶಗಳನ್ನು ಮೊಟಕು ಮಾಡುತ್ತಿದೆ. 

ಕನ್ನಡಿಗರಿಗೆ ಮೋಸ!

ಈ ಪರೀಕ್ಷೆಗಳು ನಡೆಯುವ ಬಗೆಯನ್ನು ನೋಡಿ. ಇಂಗ್ಲೀಶ್ ಭಾಷೆಯ ಬಗ್ಗೆ ಇರುವ ಒಂದು ಪ್ರಶ್ನೆಪತ್ರಿಕೆಯನ್ನು ಬಿಟ್ಟರೆ ಉಳಿದೆಲ್ಲವನ್ನೂ ಹಿಂದೀ/ ಇಂಗ್ಲೀಶುಗಳಲ್ಲಿ ನೀಡಲಿದ್ದಾರಂತೆ. ಈ ಪ್ರಶ್ನೆಗಳು "ಸರಿ ಉತ್ತರವನ್ನು ಗುರುತಿಸಿ" ಎಂಬ ಮಾದರಿಯವಾದ್ದರಿಂದ ಹಿಂದೀ ಭಾಷೆಯವರಿಗೆ ಉಳಿದವರಿಗಿಂತಲೂ ಈ ಪ್ರಶ್ನೆಗಳು ಸುಲಭವಾಗುತ್ತದೆ. ಕನ್ನಡಿಗನೊಬ್ಬ ಇಂಗ್ಲೀಶ್ ಅಥವಾ ಹಿಂದೀಯಲ್ಲಿ ಈ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕು. ಆದರೆ ಹಿಂದೀಯವರು ಹಿಂದೀ ಅಥವಾ ಇಂಗ್ಲೀಶಿನಲ್ಲಿ ಎದುರಿಸಬಹುದು ಎಂಬ ನೀತಿಯೇ ದುರುದ್ದೇಶದ್ದು! ಹೀಗಾಗಿ ನೇರವಾಗಿ ಈ ಪ್ರವೇಶ ಪರೀಕ್ಷೆಗಳು ತಾರತಮ್ಯದ ಅನ್ಯಾಯವನ್ನು ಎತ್ತಿಹಿಡಿಯುವ ನಡೆಯಾಗಿವೆ ಎನ್ನದೆ ವಿಧಿಯಿಲ್ಲಾ! ಇದೇ ರೀತಿಯ ತಾರತಮ್ಯದ ಕೆಲಸವನ್ನು ಈ ಹಿಂದೆ ಭಾರತೀಯ ರೈಲ್ವೇ ಇಲಾಖೆಯು ಮಾಡಿತ್ತು! ಬ್ಯಾಂಕುಗಳ ನೇಮಕಾತಿಯಲ್ಲೂ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ  "ಹಿಂದೀ"ಯನ್ನು ಓದಿರುವ ಪುರಾವೆ ಇರಬೇಕು ಎಂದಿತ್ತು! ಈಗ ವಿಮಾ ಸಂಸ್ಥೆಗಳ ನೇಮಕಾತಿಯಲ್ಲೂ ಇಂಥದ್ದೇ ಏರ್ಪಾಡಿರುವುದು ಕಾಣುತ್ತಿದೆ. ಒಟ್ಟಾರೆ ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಿಂದೀಯವರ ಸ್ವತ್ತು ಎಂಬಂತೆ ಭಾರತ ಸರ್ಕಾರದ ನೀತಿಗಳು ಕೊರಳೆತ್ತಿ ಸಾರುತ್ತಿರುವಂತಿದೆ. ಇದು ಸರಿ ಹೋಗಬೇಕೆಂದರೆ ಹುಳುಕಿನ ಭಾಷಾನೀತಿಯನ್ನು ಬದಲಿಸುವುದೊಂದೇ ದಾರಿ.

ಕೊನೆಹನಿ: ಈ ನೇಮಕಾತಿಯ ಜಾಹೀರಾತಿನಲ್ಲಿ ಸ್ಥಳೀಯ ಭಾಷೆಯ ಅರಿವು ಅಭ್ಯರ್ಥಿಗಳಿಗೆ ಇರಬೇಕು ಎಂದು ಬರೆಯಲಾಗಿದೆ. ಅಂದರೆ ಕರ್ನಾಟಕದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಬರಬೇಕು ಎನ್ನುವುದು ಇದರ ಅರ್ಥ. ತಮಾಶೆಯೆಂದರೆ ಅಭ್ಯರ್ಥಿಗಳ ಸ್ಥಳೀಯ ಭಾಷೆಯ ಜ್ಞಾನವನ್ನು ಹೇಗೆ ಅಳೆಯಲಾಗುತ್ತದೆ? ಅದಕ್ಕೆ ಯಾವ ಪರೀಕ್ಷೆಯಿದೆ? ಯಾವ ಮಟ್ಟದ ಅರಿವು ಇರಬೇಕು? ಇತ್ಯಾದಿಗಳ ಬಗ್ಗೆ ಏನೂ ಮಾಹಿತಿಯಿಲ್ಲಾ! ಅಂದರೆ ಈ ನಿಯಮವನ್ನು ಬರೀ ತೋರಿಕೆಗಾಗಿ ಕಾಟಾಚಾರಕ್ಕೆಂಬಂತೆ ಮಾಡಿರಬಹುದೆನ್ನುವ ಅನುಮಾನ ಮೂಡುತ್ತದೆ.

ಹಿಂದೀಹೇರಿಕೆಗೆ ಬ್ಯಾಂಕುಗಳನ್ನೂ ಬಿಡದೆ ಬಳಸಿಕೊಳ್ಳೋ ಭಾರತ ಸರ್ಕಾರ!

(ಫೋಟೋ ಕೃಪೆ: ಉದಯವಾಣಿ ಈ ಪತ್ರಿಕೆ)

"ಹಿಂದೀ ಭಾರತದ ರಾಷ್ಟ್ರಭಾಷೆ, ಇದು ರಾಷ್ಟ್ರೀಯ ಭಾವನಾತ್ಮಕ ಭಾಷೆ, ದೇಶದ ಸಂಸ್ಕೃತಿಯ ಹಿರಿಮೆ ಮತ್ತು ಸಾಮಾಜಿಕ ಬಾಂಧವ್ಯ ಉಳಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ" ಎಂದೆಲ್ಲಾ ಸುಳ್ಳಾಡಿಯಾದರೂ ಸರಿ ಹಿಂದೀಯನ್ನು ಹರಡಬೇಕೆನ್ನೋ ಹಂತಕ್ಕೆ ಭಾರತದ ಕೇಂದ್ರಸರ್ಕಾರದ ಅಧಿಕಾರಿಗಳು ತಲುಪಿದ್ದಾರೆಂಬ ಅನುಮಾನಕ್ಕೆ ಕಾರಣವಾಗುವಂತೆ... ಮಂಗಳೂರಿನಲ್ಲಿ ಟೋಲಿಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಆಶ್ರಯದಲ್ಲಿ ನಡೆದ ೨೦೧೩ರ ಹಿಂದೀ ದಿವಸ್ ಕಾರ್ಯಕ್ರಮದಲ್ಲಿ ಶ್ರೀ ಅಮರ್‌ಲಾಲ್ ದೌಲ್ತಾನಿ ಎಂಬ ಕಾರ್ಪೋರೇಶನ್ ಬ್ಯಾಂಕಿನ ದೊಡ್ಡ ಅಧಿಕಾರಿಯೊಬ್ಬರು ಮಾತಾಡಿದ್ದಾರೆ.

ಸುಳ್ಳಿನ ಸರಮಾಲೆ!

ಹೀಗೆ ಹಿಂದೀ ದಿವಸ್ ಎನ್ನುವ ಆಚರಣೆಗೂ, ಬ್ಯಾಂಕುಗಳೆಂಬ ಹಣಕಾಸು ವಹಿವಾಟಿನ ಉದ್ದೇಶದ ಸಂಸ್ಥೆಗಳಿಗೂ ಏನು ಸಂಬಂಧವೆನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಬ್ಯಾಂಕುಗಳು ರಾಷ್ಟ್ರೀಕರಣವಾದ ಮೇಲೆ ಅವು ಕೇಂದ್ರಸರ್ಕಾರಿ ಉದ್ದಿಮೆಗಳಾದ ನಂತರ, ಅಲ್ಲಿಯೂ ಭಾರತದ ಭಾಷಾನೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತದೆ, ರಾಜ್‌ಭಾಷಾ ಇಲಾಖೆ. ಅಂತೆಯೇ ನಿಮ್ಮ ಗ್ರಾಹಕರನ್ನು ಹಿಂದೀಯಲ್ಲಿ ವ್ಯವಹರಿಸಲು ಉತ್ತೇಜಿಸಿ ಎನ್ನುತ್ತಾ ಹಿಂದೀ ಪ್ರಚಾರ ಮಾಡುವ ಬ್ಯಾಂಕಿಗೆ ಪ್ರಶಸ್ತಿಯನ್ನು ಕೊಡುತ್ತದೆ. ಹೀಗೆಲ್ಲಾ ಮಾಡೋದಕ್ಕೆ ಮುಖ್ಯ ಕಾರಣ ಭಾರತೀಯರೆಲ್ಲಾ, ಅವರು ಯಾವುದೇ ಭಾಷೆಯವರಾದರೂ ಒಂದಲ್ಲಾ ಒಂದು ದಿವಸ, ಯಾವುದಾದರೂ ಬ್ಯಾಂಕಿಗೆ, ಯಾವುದಾದರೂ ಕೆಲಸಕ್ಕೆ ಬರಲೇಬೇಕು. ಆಗಾದರೂ ಅವರಿಗೆ ಹಿಂದೀಯನ್ನು ಕಲಿಸೋಣ ಎನ್ನುವ ದೂರದ ದುರಾಲೋಚನೆಯೇ ಎನ್ನಿಸುತ್ತದೆ. ಇಲ್ಲದಿದ್ದರೆ ಎಲ್ಲಾ ಬ್ಯಾಂಕುಗಳಲ್ಲಿ ದಿನಕ್ಕೊಂದು ಪದ ಎಂದು, ಒಂದು ಹಿಂದೀ ಪದವನ್ನು ಕಲಿಸುವಂತೆ ಬೋರ್ಡಿನ ಮೇಲೆ ಬರೆದು ಎಲ್ಲರಿಗೂ ಕಾಣುವಂತೆ ಹಾಕುವುದಾದರೂ ಏಕೆ? ಒಟ್ಟಲ್ಲಿ ಹೀಗೆ ಜನರ ಅನಿವಾರ್ಯತೆಯನ್ನು ತನ್ನ ಹಿಂದೀ ಹೇರಿಕೆಯ ಉದ್ದೇಶಕ್ಕೆ ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿರುವ ಭಾರತ ಸರ್ಕಾರದವರು ನಾಳೆ ಮಸಣದಲ್ಲಿ ಸಂಸ್ಕಾರ ಮಾಡುವ ಅರ್ಜಿಯನ್ನು ಹಿಂದೀಯಲ್ಲೇ ತುಂಬಬೇಕು ಎಂದು ಮಾಡಿದರೂ ಮಾಡಬಹುದು. ಏಕೆಂದರೆ ಹುಟ್ಟಿದವರೆಲ್ಲಾ ಸಾಯಲೇಬೇಕು. ಅವರ ಹೆಣಕ್ಕೆ ಸಂಸ್ಕಾರವಾಗಲೇ ಬೇಕಲ್ಲವೇ!? ಆಗ ಎಲ್ಲಾ ಭಾರತೀಯರಿಗೂ ಹಿಂದೀ ಕಲಿಸಿಬಿಡಬಹುದಲ್ಲಾ!?

ಒಟ್ಟಾರೆಯಾಗಿ ಭಾರತದ ಹುಳುಕಿನ ತಾರತಮ್ಯದ ಈ ಭಾಷಾನೀತಿ ಬದಲಾಗಬೇಕೆಂದು ಬಯಸುವವರು ಇನ್ನಾದರೂ ದನಿ ಎತ್ತಬೇಕಾಗಿದೆ. ನೀವೂ ನಮ್ಮೊಡನೆ ದನಿಗೂಡಿಸುವುದಿದ್ದಲ್ಲಿ ಸಮಾನತೆಯ ಭಾಷಾನೀತಿಯನ್ನು ಒತ್ತಾಯಿಸುವ ಈ ಪಿಟಿಷನ್ನಿಗೆ ಸಹಿ ಮಾಡಿರಿ! ಹಿಂದೀ ಹೇರಿಕೆಯ ವಿರುದ್ಧ ದನಿ ಎತ್ತಿರಿ!

ರೈಲ್ವೇ ಉದ್ಧಟತನಕ್ಕೆ ಭಾರತದ ಹುಳುಕಿನ ಭಾಷಾನೀತಿಯೇ ಕಾರಣ!


ನೈರುತ್ಯ ರೈಲ್ವೇ ವಲಯದ ಕೇಂದ್ರಕಚೇರಿ ಇರೋದು ನಮ್ಮ ಹುಬ್ಬಳ್ಳಿಯಲ್ಲಿ... ಈ ವಲಯದ ಹರವು ಇಡೀ ಕರ್ನಾಟಕದ ಎಲ್ಲಾ ರೈಲುಮಾರ್ಗಗಳನ್ನು ಒಳಗೊಳ್ಳುತ್ತದೆ. ಈ ಹಿಂದೆ ಕೇಂದ್ರ ರೈಲ್ವೆ ವಲಯದಲ್ಲಿದ್ದ ಹುಬ್ಬಳ್ಳಿ, ದಕ್ಷಿಣ ವಲಯದಲ್ಲಿದ್ದ ಬೆಂಗಳೂರು ಮತ್ತು ಮೈಸೂರುಗಳನ್ನು ಒಗ್ಗೂಡಿಸಿ ೨೦೦೩ರಲ್ಲಿ ಈ ನೈರುತ್ಯ ರೈಲ್ವೇ ವಲಯವನ್ನು ಹುಟ್ಟುಹಾಕಲಾಯಿತು. ಈ ವಲಯದಲ್ಲಿ ಇರುವ ಹೆಚ್ಚಿನ ಪ್ರದೇಶ ಕನ್ನಡನಾಡು. ಆದರೆ ಈ ವಿಭಾಗದಲ್ಲಿ ಕನ್ನಡದ ಬಳಕೆ ಇಲ್ಲವೇ ಇಲ್ಲಾ ಎನ್ನಬಹುದು. ರೈಲ್ವೇ ಟಿಕೆಟ್ಟುಗಳಲ್ಲಿ ಕನ್ನಡವೇ ಇರುವುದಿಲ್ಲಾ. ರೈಲ್ವೇ ಮುಂಗಡ ಕಾಯ್ದಿರುಸುವಿಕೆಯ ಪಟ್ಟಿಯನ್ನು ರೈಲಿನ ಬೋಗಿಗಳ ಮೇಲೆ ರೈಲು ಹೊರಡುವ ಅರ್ಧಗಂಟೆ ಮೊದಲು ಅಂಟಿಸುತ್ತಾರೆ. ಯಾವ ಬೋಗಿಯಲ್ಲಿ ನಮ್ಮ ಹೆಸರಿದೆ ಎಂದು ಹುಡುಕುವವರಿಗೆ ಕನ್ನಡವೊಂದೇ ಬರುತ್ತಿದ್ದರೆ ದೇವರೇ ಗತಿ. ಯಾಕೆಂದರೆ ಈ ಪಟ್ಟಿ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರಾ ಇರುತ್ತದೆ. ಇದು ರೈಲಿನ ಒಳಗಡೆಯಿರುವ ತುರ್ತು ನಿರ್ಗಮನದಲ್ಲೂ ಹಾಗೇ ಇರುತ್ತದೆ. ಯಾಕಪ್ಪಾ ಹೀಗೇ? ಕನ್ನಡದವರಿಗೆ ಕನ್ನಡದಲ್ಲಿ ಸೇವೆ ಯಾಕೆ ಕೊಡೋದಿಲ್ಲಾ ನೀವು? ಎಂದು ಗೆಳೆಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿರುವ  ಮಾಹಿತಿ ಕೋರಿಕೆ ಅರ್ಜಿಗೆ, ಇಲಾಖೆಯವರು ಕೊಟ್ಟಿರುವ ಉತ್ತರವನ್ನು ಇಲ್ಲಿ ನೋಡಿ:


ಯಾಕೆ ಕನ್ನಡದಲ್ಲಿ ಟಿಕೆಟ್ ಕೊಡಲಾಗದು ಎಂಬುದಕ್ಕೆ ನೈರುತ್ಯ ರೈಲ್ವೇ ಮಂದಿ ಹೇಳಿರುವುದು "ಕಾಯ್ದಿರಿಸದ ಚೀಟಿಗಳನ್ನು ಭಾರತದ ಯಾವುದೇ ನಿಲ್ದಾಣಕ್ಕೆ ಕೊಡಲಾಗುವುದರಿಂದ ಪ್ಯಾನ್ ಇಂಡಿಯನ್ ಭಾಷೆಗಳಾದ ಹಿಂದೀ/ ಇಂಗ್ಲೀಷುಗಳಲ್ಲಿ ಕೊಡಲಾಗುತ್ತದೆ" ಎಂದು. ಇದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರೈಲಿನಲ್ಲಿ ನೀವು ನಾಯಂಡಹಳ್ಳಿ ನಿಲ್ದಾಣದಲ್ಲಿ ರೈಲು ಹತ್ತಿ ಮಂಡ್ಯಕ್ಕೆ ಟಿಕೆಟ್ ಕೊಂಡುಕೊಂಡರೆ ಅದರಲ್ಲಿ ಕನ್ನಡದಲ್ಲಿ ಮಾಹಿತಿ ಕೊಡಲಾಗುವುದಿಲ್ಲಾ.. ಏಕೆಂದರೆ ನಾಯಂಡಹಳ್ಳಿಯಿಂದ ನೀವು ದೆಹಲಿಗೂ, ದಿಬ್ರೂಗಡಕ್ಕೂ, ಅಮೃತಸರಕ್ಕೂ, ಇಂದೂರಿಗೂ, ಕೊಲ್ಕತ್ತಾಗೂ ಕೂಡಾ ಟಿಕೆಟ್ ಕೊಳ್ಳಲು ಸಾಧ್ಯವಿದೆ... ಹಾಗಾಗಿ ಹಿಂದೀ/ ಇಂಗ್ಲೀಷಿನಲ್ಲಿ ಮಾತ್ರಾ ಟಿಕೆಟ್ ಕೊಡಲಾಗುತ್ತದೆ ಎಂದು. ಇದೊಂದು ಅವಿವೇಕದ ಪರಮಾವಧಿಯ ಸಮರ್ಥನೆ ಎನ್ನಿಸುವುದಿಲ್ಲವೇ?!

ಏನಿದು ಪ್ಯಾನ್ ಎಂದರೆ? ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಪ್ಯಾನ್ ಎಂದರೆ "ಸಂಪೂರ್ಣ, ಒಟ್ಟಾರೆ, ಎಲ್ಲವನ್ನೂ ಒಳಗೊಂಡ" ಎಂದು ಅರ್ಥ. ಇಲ್ಲಿ ಹಿಂದೀ/ ಇಂಗ್ಲೀಷು ಅದು ಹೇಗೆ ಎಲ್ಲಾ ಭಾರತೀಯರ ನುಡಿಯಾಗಿದೆ? ಸರಿಯಾದ ಏರ್ಪಾಡಿನಲ್ಲಿ ಕರ್ನಾಟಕದಿಂದ ಹೊರಡುವ ಎಲ್ಲಾ ರೈಲುಗಳಲ್ಲಿ ಟಿಕೆಟ್ಟು ಮತ್ತು ಸೂಚನೆಗಳು ಕನ್ನಡದಲ್ಲಿ ಇರಬೇಕಿತ್ತು. ರೈಲ್ವೇ ಹೇಳುತ್ತಿರುವ ನೆಪವಾದ ಭಾರತದ ಯಾವ ರೈಲ್ವೇ ನಿಲ್ದಾಣಕ್ಕೆ ಬೇಕಾದರೂ ಟಿಕೆಟ್ ಕೊಡಬೇಕಿದ್ದರೆ ಆ ನಿಲ್ದಾಣವಿರುವ ರಾಜ್ಯದ ನುಡಿ ಮತ್ತು ನಡುವಿನ ಅಧಿಕಾರಿಗಳ ಅನುಕೂಲಕ್ಕಾಗಿ ಇಂಗ್ಲೀಷಿನಲ್ಲಿ ಮಾಹಿತಿ ಇರಬೇಕಿತ್ತು. ಇದು ಸರಿಯಾದ ತ್ರಿಭಾಷಾಸೂತ್ರವಾದೀತು!

ನೈರುತ್ಯ ರೈಲ್ವೇ ಇಲಾಖೆಯವರು ಇದೀಗ ನೀಡಿರುವ ಉತ್ತರ ಕೈಲಾಗದವರು ನೀಡುವ ನೂರೆಂಟು ನೆಪದ ಹಾಗೆ ಕಾಣುತ್ತಿದೆ. ಇಂಥಾ ಉದ್ಧಟತನದ ಉತ್ತರಕ್ಕೆ ಕಾರಣವೇ ಭಾರತದ ಹುಳುಕಿನ ಭಾಷಾನೀತಿಯಾಗಿದೆ. ಸಂವಿಧಾನವೇ ಹಿಂದೀಯವರಿಗೆ "ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇಡಿಯಾಗಿ ನಿಮ್ಮದು, ಇದನ್ನು ನಿಮ್ಮನುಕೂಲಕ್ಕೆ ಬೇಕಾದಂತೆ ಆಳಿಕೊಳ್ಳಿ" ಎಂದು ಬರೆದುಕೊಟ್ಟಿರುವಂತೆ ರೂಪಿಸಲಾಗಿರುವ ಭಾಷಾನೀತಿಯ ಕಾರಣದಿಂದಲೇ ರೈಲ್ವೇಯವರಿಗೆ ಇಂಥಹ ಉದ್ಧಟತನದ ಉತ್ತರ ನೀಡಲು ಆಗುತ್ತಿರುವುದು. ಈ ನೀತಿ ಬದಲಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ ಹಿಂದೀಯೇತರ ಜನಗಳ ಮೇಲಿನ ಈ ದೌರ್ಜನ್ಯ ಹೀಗೇ ಮುಂದುವರೆಯುತ್ತದೆ. ಸಮಾನತೆಯ ಕೂಗಿಗೆ ನಿಮ್ಮ ದನಿಗೂಡಿಸಲು "ಭಾರತದ ಭಾಷಾನೀತಿ ಬದಲಾಗಬೇಕು" ಎನ್ನುವ ಈ ಪಿಟಿಷನ್ನಿಗೆ ಸಹಿ ಮಾಡಿರಿ.

ರಾಷ್ಟ್ರೀಯ ಪಕ್ಷಗಳು ಮತ್ತು ಹಿಂದೀ ಹೇರಿಕೆ!


ಈ ಮೇಲೆ ಹಾಕಿರುವ ಫೋಟೋ ನೋಡಿರಿ. ಇದನ್ನು ಬೆಂಗಳೂರಿನ ಪ್ರಮುಖ ಬಡಾವಣೆಯೊಂದರಲ್ಲಿ ಹಾಕಿದ್ದಾರೆ. ಇದನ್ನು ಹಾಕಿರುವವರು ಭಾರತೀಯ ಜನತಾ ಪಕ್ಷದವರು. ಶುದ್ಧಕನ್ನಡನಾಡಲ್ಲಿ ಪರಿಶುದ್ಧ ಹಿಂದೀಯಲ್ಲಿ ಅಷ್ಟು ದೊಡ್ದದಾಗಿ ಅದೇನನ್ನೋ ಬರೆಯಲಾಗಿದೆ. ಇಷ್ಟಕ್ಕೂ ಈ ಫಲಕವನ್ನು ಯಾರಿಗಾಗಿ ಹಾಕಲಾಗಿದೆ? ಹೋಗಿ ಬರುವ ದಾರಿಹೋಕರಿಗಾಗಿದ್ದರೆ ಇದನ್ನು ಜನರ ನುಡಿಯಾದ ಕನ್ನಡದಲ್ಲಿ ಹಾಕಬೇಕಿತ್ತಲ್ಲಾ? ಏನು ಹೀಗೆ ಹಿಂದೀಯಲ್ಲಿ ಹಾಕುವ ಉದ್ದೇಶ? ಬೆಂಗಳೂರಿನ ಸಾರ್ವಜನಿಕ ಜಾಗದಲ್ಲಿ ಹಾಕುವ ಜಾಹೀರಾತನ್ನು ಹಿಂದೀಯಲ್ಲಿ ಹಾಕಿದರೆ ಇನ್ನೊಂದು ಔನ್ಸ್ ಹೆಚ್ಚಿನ ದೇಶಪ್ರೇಮ ಪ್ರದರ್ಶನವಾಗುತ್ತದೆ ಎಂದು ಬಿಜೆಪಿಯವರು ಭಾವಿಸಿರಬಹುದೇನೋ? ಸಂಘ ಸಿದ್ಧಾಂತದ ಮೂಸೆಯಲ್ಲಿ ಸಿದ್ಧವಾಗಿರುವ ಭಾರತೀಯ ಜನತಾಪಕ್ಷವು ಮೊದಲಿನಿಂದಲೂ ಹಿಂದೀವಾದಿಯೇ ಆಗಿದೆ. ಅದಕ್ಕೆ ಈ ಮೇಲಿನ ಫೋಟೋ ಸಾಕ್ಷಿಯಾಗಿದೆ.

ಹಿಂದೀ ಭಾಷೆಯನ್ನು ಭಾರತದ ಮೇಲೆ ಹೇರಿದವರಲ್ಲಿ ಮೊದಲಿಗರು ಕಾಂಗ್ರೆಸ್ ಪಕ್ಷದವರು. ಈ ಪಕ್ಷದ ಮಹಾನ್ ನಾಯಕರಾಗಿದ್ದ ರಾಷ್ಟ್ರಪಿತ ಶ್ರೀ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರೇ ಹಿಂದೀಭಾಷೆಯ ಪ್ರಬಲ ಸಮರ್ಥಕರಾಗಿದ್ದರು. ಹೀಗಿದ್ದಾಗ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ಸಿನ ಸರ್ಕಾರಗಳು ಸಾಗಿದ್ದು ಸಹಜವಾಗಿದ್ದು ಅದೇ ಇಂದಿನ ಹುಳುಕಿನ ಭಾಷಾನೀತಿಗೆ ಕಾರಣವಾಗಿದೆ ಮತ್ತು ಇಂದೂ ಮುಂದುವರೆದುಕೊಂಡು ಬರುತ್ತಿದೆ. ಈ ಫೋಟೋ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ಅರ್ಜಿಯಲ್ಲಿನ ಒಂದು ಪುಟ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವವರೆಲ್ಲಾ ಈ ಕರಾರನ್ನು ಒಪ್ಪಬೇಕಾಗಿದೆ. ಇದರಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ಹಿಂದೀ ಭಾಷೆಯ ಪ್ರಚಾರಕ್ಕಾಗಿ ಶ್ರಮಿಸುತ್ತೇವೆ ಎಂದು ಬರೆದುಕೊಡಬೇಕು!


ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಬೇಕೆಂದರೆ ಹಿಂದೀ ಹೇರಿಕೆಯನ್ನು ಮಾಡಲೇಬೇಕೆಂದು ಈ ಎರಡೂ ಪಕ್ಷಗಳು ಅಂದುಕೊಂಡಿರಬಹುದು. ಭಾರತದ ಹುಳುಕಿನ ಭಾಷಾನೀತಿಯು ಬದಲಾಗಬೇಕೆಂದರೆ ಇದು ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಂತಾನೆ ಆಗುವುದು ಕನಸಿನ ಮಾತು! ಈ ಕೆಲಸಗಳಾಗಬೇಕೆಂದರೆ ಜನರ ಮನದಾಶಯ ಇವುಗಳ ಕಿವಿಗೆ ಬೀಳಬೇಕು. ಜನರ ಈ ಸಮಾನತೆಯ ಒತ್ತಾಯದ ಕೂಗು ಈ ಪಕ್ಷಗಳ ರಾಜ್ಯಘಟಕಗಳು ಈ ದನಿಯನ್ನು ತಮ್ಮ ಕೇಂದ್ರಕಚೇರಿಗಳಿಗೆ ಮುಟ್ಟಿಸಬೇಕು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬನವಾಸಿ ಬಳಗವು ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಿ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚಿನ ನಾಗರೀಕರು, ಹನ್ನೆರಡು ಮಂದಿ ಗಣ್ಯರು ಈ ಪಿಟಿಷನ್ನಿಗೆ ಸಹಿ ಹಾಕಿದ್ದಾರೆ. ಕನ್ನಡನಾಡಿನಿಂದ ಎದ್ದಿರುವ ಈ ಬದಲಾವಣೆಯ ಹಕ್ಕೊತ್ತಾಯದ ಕೂಗಿಗೆ ತಮ್ಮ ದನಿಯನ್ನೂ ಸೇರಿಸಿರಿ.
Related Posts with Thumbnails