
"ನಾನು ಮೈಸೂರಲ್ಲಿ ಹುಟ್ಟಿರಬಹುದು, ಆದರೂ ನಾನು ಕನ್ನಡತಿಯಲ್ಲ, ನನ್ನ ಮೈಯಲ್ಲಿ ಹರಿಯುತ್ತಿರುವುದು ತಮಿಳು ರಕ್ತ" ಅಂತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರ ಒಂದು ಹೇಳಿಕೆ ನೆನ್ನೆ
ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಯಾಗಿದೆ. ಯಾವ ತಮಿಳ್ನಾಡಿನ ಸೀರೆ-ಪಂಚೆ ರಾಜಕೀಯದ ಉಸಾಬರೀಗೂ ಹೋಗದೆ ಜಯಲಲಿತಾ ಔರಿಗೆ ಒಂದು ಚಿಕ್ಕ ಪ್ರಶ್ನೆ ಹಾಕಿ ನಮ್ಮ ಕೆಲಸ ಮುಗಿಸೋಣ.
ಮೈಸೂರಿಂದ ಮದರಾಸಿಗೆ
ಅಕಸ್ಮಾತ್ ನಿಮಗೆ ಗೊತ್ತಿಲ್ಲದೇ ಇದ್ರೆ...ಜಯಲಲಿತಾ ಔರು ಮೈಸೂರಲ್ಲಿ ಹುಟ್ಟಿ ವಲಸೆ ಹೋಗಿದ್ದು ತಮಿಳುನಾಡಿಗೆ. ಅಲ್ಲೇ ದುಡಿಮೆ ಮಾಡಿ, ಜನ ಮೆಚ್ಚುಗೆ ಗಳಿಸಿ, ಕೊನೆಗೆ ತಮಿಳು ಜನಗಳನ್ನು ಪ್ರತಿನಿಧಿಸಿ ರಾಜ್ಯದ ಮುಖ್ಯಮಂತ್ರಿಯೂ ಆಗಿ ರಾಜಕೀಯವಾಗೂ ಏಳಿಗೆ ಪಡೆದದ್ದು ತಮಿಳುನಾಡಿನಲ್ಲೇ.
ಜಯಲಲಿತಾ ಔರಿಗೆ ಒಂದು ಬಹಿರಂಗ ಪ್ರಶ್ನೆಜಯಲಲಿತಾ ಔರು ತಮ್ಮ ರಕ್ತದ ಬಗ್ಗೆ ಒಂದು ಸಕ್ಕತ್ ಡೈಲಾಗ್ ಹೊಡೆದಿರೋದು ಹಾಗಿರಲಿ. ಆದ್ರೆ ಇಲ್ಲಿ ನಮ್ಮ ಪ್ರಶ್ನೆ:
ಮೈಸೂರಲ್ಲಿದ್ದಾಗ ಈಕೆ ಕನ್ನಡ ಮಾತಾಡ್ತಾ ಇದ್ದರೋ ಇಲ್ಲವೋ? ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಇವರು ಪೂರಕವಾದಂಥಾ ನಿಲುವುಗಳ್ನ ಇಟ್ಟುಕೊಂಡಿದ್ದರೋ ಇಲ್ಲವೋ?
ಇವರ ಉತ್ತರ "ಹೌದು, ಕನ್ನಡ ಮಾತಾಡ್ತಾ ಇದ್ದೆ, ಪೂರಕವಾದ ನಿಲುವುಗಳ್ನ ಇಟ್ಕೊಂಡಿದ್ದೆ" ಅನ್ನೋದಾದರೆ (
ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಇವತ್ತು ಔರು ತಮ್ನ ತಮಿಳ್ನೋರು ಅಂತ ಕರ್ಕೊಂಡ್ರೂ "ಭೇಷ್! ನೀವು ಮೈಸೂರಲ್ಲಿದ್ದಾಗ ಕನ್ನಡತಿಯೇ ಆಗಿದ್ದಿದ್ದು" ಅಂತ ಔರಿಗೆ ಹೇಳಬೇಕು. ಯಾಕೇಂತೀರಾ? ಒಂದು ಪ್ರದೇಶದಲ್ಲಿ ವಾಸ ಮಾಡೋ ಬೇರೆ ತಾಯಿನುಡಿಯ ಜನರು ಆಯಾ ಪ್ರದೇಶದ ಭಾಷೆ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು, ಆಯಾ ಭಾಷಾ ಜನಗಳ, ಪ್ರಾಂತ್ಯದ ಅನನ್ಯತೆಗೆ ಪೂರಕವಾಗಿ ಬದುಕು ಸಾಗಿಸಿದ್ರೆ ಆಯಾ ಭಾಷಿಕರೇ ಆಗಿ ಹೋದಂಗೆ ಗುರು. ಹಾಗಾಗೇ ನಾವೆಲ್ಲ ಮಾಸ್ತಿ, ಬೇಂದ್ರೆ ಮೊದಲಾದೋರ್ನ ಕನ್ನಡಿಗರು ಅಂತ ಕರ್ಯೋದು. ಕರ್ನಾಟಕಕ್ಕೆ ಯಾವಾಗಲೋ ನೂರಾರು ವರ್ಷಗಳ ಹಿಂದೆ ವಲಸೆ ಬಂದೋರ ಮನೆಯಲ್ಲಿ ಹುಟ್ಟಿದ ಜನ ತಮ್ಮ ಮನೆ ಮಾತು ಬೇರೆ ಅನ್ನೋ ಕಾರಣಕ್ಕೆ ತಾವು ಕನ್ನಡದವರಲ್ಲ ಅಂದುಕೊಳ್ಳೋದು ಮಹಾ ತಪ್ಪು!
ಇದು ಬಿಟ್ಟು "ಇಲ್ಲ, ನಾನು ಮೈಸೂರಲ್ಲಿ ಕನ್ನಡ ಮಾತಾಡ್ತಾ ಇರಲಿಲ್ಲ, ನಾನು ಕರ್ನಾಟಕದಲ್ಲಿ ಇದ್ದುಗೊಂಡೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಪೂರಕವಾದ ನಿಲುವುಗಳ್ನ ಇಟ್ಕೊಂಡಿರಲಿಲ್ಲ" ಅನ್ನೋದಾದರೆ (ತಿರ್ಗಾ
ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಮ್ಯಾಟ್ರು ಒಸಿ ಬೇರೇನೇ ಆಗೋಗತ್ತೆ. ಯಾಕೇಂತೀರಾ? ಇಲ್ಲೇ ಹುಟ್ಟಿ, ಓದು-ಬರಹ ಕಲ್ತು, ಯೌವನ ಕಳೆದು, ಇಲ್ಲೀ ಸೌಲತ್ತುಗಳ್ನೆಲ್ಲಾ ಬಳಸಿಕೊಂಡು, ಇಲ್ಲೀ ಉಪ್ಪು ತಿಂದು, ಇಲ್ಲೀ ನೀರು ಕುಡಿದು, ಇಲ್ಲೀ ಸಂಸ್ಕೃತಿಗೆ, ಇಲ್ಲೀ ನಾಡು-ನುಡಿ-ನಾಡಿಗರಿಗೆ ಗೌರವ ಕೊಡದೇ ಇದ್ದೆ ಅನ್ನೋ ಮಾತು ಇವರಿಗೆ ಶೋಭಿಸೋದೇ ಇಲ್ಲ ಗುರು! ಇವತ್ತಿನ ದಿನ ಬೆಂಗ್ಳೂರಲ್ಲಿ ಕೆಲವು ವಲಸಿಗ್ರು ಇದಾರಲ್ಲ - ಉಂಡ ಮನೆಗೇ ಎರಡು ಬಗೆಯೋಂಥೋರು, ಕನ್ನಡಾನ ಕಸದಬುಟ್ಟೀಗೆ ಎಸಿಯೋರು, ನಮಗೇ ಔರ್ ಭಾಷೆ ಕಲಿಸ್ತೀವಿ ಅನ್ನೋ ಸೊಕ್ಕಿನ ಜನ - ಔರಿಗೂ ಇವ್ರಿಗೂ ಏನು ವೆತ್ಯಾಸ ಅಂತ ಕೇಳಬೇಕಾಗತ್ತೆ (
ಆಗತ್ತೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ಹೇಳ್ತಿಲ್ಲ).
ಏನ್ ಜಯಲಲಿತಾ ಔರೆ? ನಿಮ್ಮ ಉತ್ತರ ಏನು?