ಮರಾಠಿ ಮಾಣುಸ್ ಮನಸ್ಸಾಗ ಮನಸೇ ಐತ್ರೀಪಾ!!

ಮೊನ್ನಿ ಮೂರು ರಾಜ್ಯದಾಗ್ ಆದ ವಿಧಾನಸಭಾ ಚುನಾವಣಿಗಳೊಳಗಾ, ಮಹಾರಾಷ್ಟ್ರದಾಗಿನ ಚುನಾವಣಿ ಭಾಳ್ ಕುತೂಹಲ ಹುಟ್ ಹಾಕಿದ್ದಂತೂ ಖರೇ ರೀ ಯಪ್ಪಾ! ಮಂದೀ ಎಲ್ಲಾ "ಅಲ್ಲಾ, ಈ ಮಕ್ಳು ಈ ಪರಿ ಮರಾಟಿಗ್ರು, ಮರಾಟಿಗ್ರೂ ಅಂತ್ ಹೊಯ್ಕೊಳಾಕ್ ಹತ್ಯಾರಲ್ಲಾ, ಮಹಾರಾಷ್ಟ್ರದಾಗಿನ್ ಮಂದಿ ಇದುಕ್ ಮಣಿ ಹಾಕ್ಕ್ಯಾರೋ? ಇಲ್ಲೋ?" ಅನ್ನೂ ಮಾತ್‍ನ ಮಹಾರಾಷ್ಟ್ರ ನವನಿರ್ಮಾಣ ಸೇನಾ ಬಗ್ಗಿ ಆಡಾಕ್ ಹತ್ತಿತ್ರೀಪಾ. ಚುನಾವಣೀ ಆತು. ರಾಜ್‍ಠಾಕ್ರೆ ಮುಂದಾಳ್ತನದ ಎಂ.ಎನ್.ಎಸ್ ಒಟ್ಟು ಹದಿಮೂರು ಕಡಿ ಗೆಲುವು ಕಾಣ್ತು. ಅಲ್ರೀಪಾ... ಇರೂ ಇನ್ನೂರೆಂಬತ್ತೆಂಟರಾಗಾ ಹದಿಮೂರಂದ್ರಾ ಯಾ ಮೂಲಿಗಾತು ಅನ್ನಾಕ್ ಹತ್ತೀರೇನೂ? ಬರ್ರಲಾ... ಎಂ.ಎನ್.ಎಸ್ ಏನ್ ಮಾಡೈತಿ ಅನ್ನೂದ್ ನೋಡೋಣು...

ಚುನಾವಣಾ ವಿಷ್ಯಾ ಆತು ಮ-ಮ-ಮ!!

ಹಿಂದಾ ಅಲ್ಲೀ ಚುನಾವಣ್ಯಾಗಾ ಮರಾಠಿ-ಮರಾಠಿಗ-ಮಹಾರಾಷ್ಟ್ರ ಅನ್ನೂ ಮಾತು ಇಲ್ಲೀಮಟಾ ಶಿವಸೇನಾ ಪಾರ್ಟಿ ಪ್ರಣಾಳಿಕಿಯೊಳಗಾ ಇರ್ತಿತ್ರೀಪಾ... ಆದ್ರಾ ನಡಬರಕಾ ಶಿವಸೇನಾ ತನ್ನ ಗಮನಾನ ಬ್ಯಾರೀ ಕಡೀಗ್ ಹರ್ಸಾಕ್ ಹತ್ತೈತಿ ಅಂತಾ ಮಂದಿಗಾ ಅನ್ಸಾಕ್ ಚಾಲೂ ಆತ್ರೀಪಾ. ಅಷ್ಟರಾಗ ಇಂವಾ, ರಾಜ್ ಠಾಕ್ರೆ ಇತ್ತೀಚಿನ್ ದಿನಗಳಾಗ ಮರಾಠಿ ಮಂದಿ ಬದುಕು, ಕೆಲ್ಸಾ ಅಂತಾ ಜೋರ‍್ಜೋರಲೇ ಮಾತಾಡಕ್ ಹತ್ತಿದ್ದೇ ತಡಾ... ಎಲ್ಲಾ ಪಾರ್ಟಿ ಮಂದಿ ತಮ್ ಪ್ರಣಾಳಿಕಿ ಒಳಗಾ ಈ ಮಾತ್ ಆಡಾಬೇಕಾತ್ರೀ ಗುರುಗಳಾ.... ನೀವಾ ನೋಡ್ರಲಾ... ಭಾರತೀಯ ಜನತಾ ಪಕ್ಷ, ಶಿವಸೇನಾ ಕೂಡಾ ಬಿಡುಗಡಿ ಮಾಡಿದ್ದ ಪ್ರಣಾಳಿಕೆಯೊಳಗಾ "ಅನಿಯಂತ್ರಿತ ವಲಸಿ ತಡ್ಯಾಕ್ ಮುಂದಾಗ್ತೀವೀ" ಅಂದಾರ! ಈ ಮಂದಿ ಅಂತಾರಾ... "ಮಾರಾಷ್ಟ್ರಾದಾಗಿನ ೮೦% ಕೆಲಸ ಮರಾಠಿ ಮಂದೀಗಾ ಮೀಸಲು ಮಾಡ್ತೇವಾ" ಅಂತಾ.
A museum will be set up in Mumbai depicting the 'Samyukta Maharashtra' movement and a permanent mechanism would be created to stop the inflow of illegal migrants, Thackeray said.

Stating that 80 per cent of the skilled and unskilled jobs will be provided to locals, it vowed to encourage the sons-of-the soil to take up self-employment

ಫಲಿತಾಂಶ ಹೀಂಗದಾ!

ಇನ್ನು ಒಟ್ಟು ಫಲಿತಾಂಶಾ ಕಂಡಾಗ ತನ್ನ ಮೊದಲನೇ ಚುನಾವಣಿಯಾಗಾ ಎಂ.ಎನ್.ಎಸ್ ಹದಿಮೂರು ಸ್ಥಾನಾ ಗಳಸೈತಿ ಅದೂ ಯಾರ್ ಕೂಡಾ ಹೊಂದಾಣಿಕೆ ಮಾಡ್ಕೊಳ್ದೆ ಅನ್ನೋದು ದೊಡ್ ಮಾತೇ ಬಿಡ್ರೀಪಾ. ಮಹಾರಾಷ್ಟ್ರದೊಳಗಾ ಮುಂದಿನ ದಿನಗಳಾಗ ಎಂ.ಎನ್.ಎಸ್ ಒಂದು ದೊಡ್ಡ ಶಕ್ತಿಯಾಗ್ತೈತಿ ಅನ್ನೋ ಸೂಚನಿ ಕೊಟ್ಟಿರೋದಂತೂ ಖರೆ ಐತಿ. ಒಟ್ಟಾರೆ ಮರಾಠಿ ಮಾಣುಸ್ ಮನಸ್ಸಾಗ ಮ.ನ.ಸೇ ಐತ್ರೀಪಾ. ಅದ್ಕಿಂತ ದೊಡ್ ಮಾತಂದ್ರಾ ಮರಾಠಿ-ಮಹಾರಾಷ್ಟ್ರ-ಮರಾಠಿಗ ಅನ್ನೂದಂತೂ ರಾಜಕಾರಣದ ನಡುಮನಿ ಒಳಗ್ ದೊಡ್ಡಾಟ ಆಡೂದಂತೂ ಖರೀ ಐತ್ರಪಾ! ಏನಂತೀರ್ರೀ ಗುರುಗಳಾ?

ಕನ್ನಡ ಕಲಿಸೋ ಹೊಸ ತಾಣ!

ಸೆಪ್ಟೆಂಬರ್ 30ರ ಮೈ ಬ್ಯಾಂಗಲೊರ್‍ನಲ್ಲಿ ಕನ್ನಡ ಕಲಿ ಇದೀಗ ಆನ್ ಲೈನ್‍ನಲ್ಲಿ ಸಿಗ್ತಿದೆ ಅಂತಾ ಒಂದು ಸುದ್ದಿ ಪ್ರಕಟವಾಗಿದೆ ಗುರು! ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ರೂಪಿಸಿದ್ದಾರಂತೆ. ಅವರ ಉದ್ದೇಶ ಹೊರನಾಡಿನಿಂದ ನಮ್ಮೂರುಗಳಿಗೆ ಬರುವ ಪರಭಾಷಿಕರಿಗೆ ಕನ್ನಡ ಜನ, ನುಡಿ ಮತ್ತು ಸಂಸ್ಕೃತಿಗಳ ಪರಿಚಯ ಮಾಡಿಕೊಡುವುದಂತೆ.

ಇಂಥವರ ಸಂತತಿ ಸಾವಿರವಾಗಲಿ...

ತಮ್ಮ ಕಾಲೇಜಿನ ಪರಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರೋ ಈ ತಂಡದೋರು ಪೋಸ್ಟರ್, ಆಡಿಯೋ ವಿಡಿಯೋಗಳನ್ನು ಬಳಸೋ ಮೂಲಕ ಕನ್ನಡ ನುಡಿಯ ಪರಿಚಯ ಮಾಡಿಸಿಕೊಡೋದ್ರ ಜೊತೆಯಲ್ಲೇ ಕನ್ನಡದ ಹಿರಿಯ ಚೇತನಗಳ ಪರಿಚಯವನ್ನು, ನಾಡಿನ ಪ್ರವಾಸಿ ತಾಣಗಳ ಪರಿಚಯ ಮಾಹಿತಿಗಳನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಾಡಿಕೊಡೋ ಯೋಜನೆಗಳನ್ನು ಹೊಂದಿದಾರಂತೆ. ಕರ್ನಾಟಕಕ್ಕೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸುವ ಈ ಯೋಜನೆ ಉಳಿದ ಕಾಲೇಜುಗಳಿಗೆ ಮಾದರಿಯಾಗಲಿ. ಈ ಯೋಜನೆಯ ಹಿಂದಿರುವ ತಂಡದ ಸ್ಪೂರ್ತಿ ನೂರ್ಮಡಿಸಲಿ, ನೂರ್ಕಾಲ ಹೀಗೆ ಇರಲಿ.. ಇಂಥವರ ಸಂತತಿ ಸಾವಿರವಾಗಲಿ ಅಂತಾ ಹಾರೈಸೋಣ ಗುರು!

ಮಾಹಿತಿ ಹಕ್ಕು ಎಲ್ಲಾ ನುಡಿಯಲ್ಲಿರಬೇಕು ಅಂದೋರ್ಯಾರು ಗೊತ್ತಾ?

ಮೊನ್‍ಮೊನ್ನೆ ಅಂದ್ರೆ 2009ರ ಅಕ್ಟೋಬರ್ 13ನೇ ತಾರೀಕಿನಂದು ನವದೆಹಲಿಯಲ್ಲಿ ನಡೆದ, 2005ರ ಮಾಹಿತಿ ಹಕ್ಕು ಕಾಯ್ದೆಯ ನಾಲ್ಕನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಮೊಹಮದ್ ಹಮೀದ್ ಅನ್ಸಾರಿಯವರು ಒಂದು ಸೊಗಸಾದ ಹೇಳಿಕೆ ಕೊಟ್ಟಿದಾರೆ ಅಂತ ಯಾಹೂ ಸುದ್ದಿ ಹೇಳ್ತಿದೆ ಗುರು!

ಪ್ರಜಾತಂತ್ರಕ್ಕಿದು ನಿಜವಾದ ಅರ್ಥ!

ಭಾರತ ಒಪ್ಪಿರೋ 22 ಅಧಿಕೃತ ಭಾಷೆಗಳಲ್ಲಿರೋ ಎಲ್ಲಾ ಭಾಷೆಗಳಲ್ಲಿ ಈ ಮಾಹಿತಿ ಹಕ್ಕು ಕಾಯ್ದೆ ಇರಬೇಕು ಮತ್ತು ವ್ಯವಹಾರ ನಡೀಬೇಕು ಅನ್ನೋ ಉಪರಾಷ್ಟ್ರಪತಿಗಳ ಈ ಅನಿಸಿಕೆ ಭಾರತ ಒಪ್ಪುಕೂಟಕ್ಕೆ ನಿಜವಾಗಿ ಗೌರವ ತರೋ ಕೆಲಸ. ಜನರಿಂದ ಜನರಿಗಾಗಿ ಇರೋ ವ್ಯವಸ್ಥೆಗಳು ಸಹಜವಾಗಿ ಜನರ ನುಡಿಯಲ್ಲಿ ಇರಬೇಕಾಗ್ತದೆ. ಆ ಕಾರಣದಿಂದ ಈ ನಿಲುವು ಸರಿಯಾಗಿದೆ. ಹಿಂದಿಯೆನ್ನುವ ನುಡಿನುಂಗಣ್ಣನನ್ನು ತಲೆಮೇಲೆ ಹೊತ್ತು ಮೆರೆಸುತ್ತಿರುವ ಭಾರತ ದೇಶದ ಇಂದಿನ ವ್ಯವಸ್ಥೇಲಿ ಭಾರತ ದೇಶದೊಂದು ಉನ್ನತ ಸ್ಥಾನದಲ್ಲಿರೋ ವ್ಯಕ್ತಿ ಈ ಥರ ಮಾತಾಡ್ತಿರೋದು ಒಳ್ಳೇ ಬೆಳವಣಿಗೆ!

ಹೌದು, ಪ್ರಜಾತಂತ್ರಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ಆಯಾ ಪ್ರದೇಶದ ಆಡಳಿತ ಆಯಾ ಭಾಷೇಲಿ ನಡೀಬೇಕು. ಕೇಂದ್ರ ಸರ್ಕಾರ ತನ್ನ ಪಟ್ಟೀಲಿರೋ 22 ಭಾಷೇಲಿ ಇಂಥಾ ಮಾಹಿತೀನಾ ಒದಗಿಸಿಕೊಡಲಿ. ಆದ್ರೆ ಇಂಥಾ ವ್ಯವಸ್ಥೆ ಭಾರತ ಒಪ್ಪುಕೂಟ ಶುರು ಆದಾಗಿನಿಂದಲೂ ಸಹಜವಾಗೇ ಇರಬೇಕಿತ್ತು, ಈಗ ಅಂಥ ಕೊರತೇನಾ ಉಪರಾಷ್ಟ್ರಪತಿಗಳು ಗುರುತಿಸಿ ಹೇಳಿರೋದು ತಡವಾಗಿ ಆಗ್ತಿರೋ ಜ್ಞಾನೋದಯದ ಗುರುತಲ್ವಾ ಗುರು?

ಹೊರದೇಶದೋರ ಕಣ್ಣಲ್ಲಿ ಕನ್ನಡಿಗ!

ಹಂಪಿ ವಿಶ್ವವಿದ್ಯಾಲಯದೋರು ೨೦೦೫ರಲ್ಲಿ ಡಾ. ವಿವೇಕ್ ರೈ ಅವರ ಸಂಪಾದಕತ್ವದಲ್ಲಿ “ಪ್ರವಾಸಿ ಕಂಡ ವಿಜಯನಗರ” ಅನ್ನೋ ಹೆಸರಿನ ಪುಸ್ತಕ ಹೊರತಂದಿದಾರೆ. ಕನ್ನಡದೋರೆಲ್ಲಾ ಒಮ್ಮೆ ಆ ಪುಸ್ತಕ ಓದಲೇ ಬೇಕು ಗುರು! ಅದರಲ್ಲಿ ಬಲು ಸೊಗಸಾಗಿ ನಮ್ಮ ನಾಡಿನ ಬಗ್ಗೆ ಮೈ ಝುಂ ಅನ್ಸೋ ಹಾಗೆ ಬರೆದಿದಾರೆ. ಕರ್ನಾಟಕ ಸಾಮ್ರಾಜ್ಯವನ್ನು ಭೇಟಿ ಮಾಡಿದ ಪರದೇಶಿಯರಲ್ಲಿ ಪ್ರಮುಖರೆಂದರೆ. ಇಬ್-ನೆ-ಬತೂತ, ನಿಕೊಲೋ-ದೆ-ಕೊಂತಿ, ದುಆರ್ತೆ ಬಾರ್ಬೋಸಾ, ಡೊಮಿಂಗೋ ಪ್ಯಾಸ್ ಮೊದಲಾದವರು. ಪರ್ಷಿಯಾ ದೇಶದವನಾದ ಅಬ್ದುಲ್ ರಜಾಕ್‌ನ ಮಾತುಗಳಲ್ಲಿ ಕೆಲವನ್ನು ನೋಡಿ :

ಬಿಜನಗರದಂತಹ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಭಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿರುವರು. ಇವುಗಳನ್ನು ಒಂದರ ಪಕ್ಕ ಒಂದರಂತೆ ಹೇಗೆ ಹೂತಿದ್ದಾರೆಂದರೆ, ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದ ಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಗಳಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಲು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಿರುತ್ತಾರೆ. ಯಾರನ್ನೂ ಪೂರ್ಣಪರೀಕ್ಷೆ ಮಾಡದೆ ಒಳಗೆ ಬಿಡುವುದಿಲ್ಲ...

ಅರಮನೆಯ ಆನೆಗಳಿಗೆ ಕಿಚಡಿಯನ್ನು ತಿನ್ನಿಸುತ್ತಾರೆ. ಇ‌ದನ್ನು ತಾಮ್ರದ ಹಂಡೆಗಳಲ್ಲಿ ಬೇಯಿಸಿ ಆನೆಗಳ ಮುಂದೆಯೇ ಹೊರಗೆ ತೆಗೆದು, ಹರಡಿ ಅದರ ಮೇಲೆ ಉಪ್ಪನ್ನೂ ಸಕ್ಕರೆಯನ್ನೂ ಎರಚಿ ಚೆನ್ನಾಗಿ ಕಲಸುತ್ತಾರೆ. ಹೀಗೆ ಕಲಸಿದ ಮೇಲೆ ಅದನ್ನು ಎರಡು ಮಣದಷ್ಟು ತೂಕದ ಉಂಡೆಗಳನ್ನಾಗಿ ಮಾಡುತ್ತಾರೆ. ಈ ಉಂಡೆಗಳನ್ನು ತುಪ್ಪದಲ್ಲಿ ಅದ್ದಿ ಆನೆಯ ಬಾಯೊಳಗೆ ಇಡುತ್ತಾರೆ...

ಹೀಗೆ ವಿಜಯನಗರದ ಪ್ರತಿ ವಿವರವೂ ಇಲ್ಲಿ ದಾಖಲಾಗಿದೆ. ಅಂದಿನ ಸಾಮಾಜಿಕ ಜೀವನ, ಸಾಹಸ, ವೈಭವ, ಇತಿಹಾಸ, ಕ್ರೌರ್ಯ, ಮೌಢ್ಯ ಎಲ್ಲವನ್ನೂ ಓದ್ತಾ ಇದ್ರೆ ಮೈಮೇಲೆ ಮುಳ್ಳೇಳುತ್ತೆ ಗುರು! ಈ ಪುಸ್ತಕಾನ ಮುಂದಿನ ಸಲ ಹಂಪೆಗೆ ಹೋದಾಗ ಖಂಡಿತಾ ಕೊಳ್ಳಿ. ಇದು ನಿಮ್ಮ ಹತ್ತಿರದ ಪುಸ್ತಕದ ಅಂಗಡಿಯಲ್ಲಿಯೂ ಸಿಗಬಹುದು. “ಪ್ರವಾಸಿ ಕಂಡ ವಿಜಯನಗರ” ಹೊತ್ತಿಗೆ ಮನೆಗೊಂದು ಶೋಭೆ.

ಅಲ್ಲಿರೋವ್ರು ಕನ್ನಡ ಬಳುಸ್ತಿಲ್ಲಾ ಅಂದ್ರೆ ಇಲ್ಲಿರೋವ್ರು ತಾನೆ ಹೊಣೆ?


ಆರು ಲಕ್ಷಕ್ಕೂ ಹೆಚ್ಚಿರುವ ಕರ್ನಾಟಕ ಸರ್ಕಾರಿ ನೌಕರರ ಪೈಕಿ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ (ಅಂದರೆ ಸುಮಾರು 17% ನೌಕರರು!!) ಕನ್ನಡ ಬಳಸಕ್ಕೆ ತ್ರಾಸಂತೆ! ಇವರಿಗೆ ಸುಲಲಿತವಾಗಿ ಕನ್ನಡಾನ ಬರೆಯಕ್ಕೆ ಬರಲ್ಲ ಅನ್ನೋ ಹೌಹಾರುವಂತಾ ಸುದ್ದೀನಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಹೊರ ಹಾಕಿದ್ದಾರೆ ಗುರು! ಈಗ ಇವರೆಲ್ಲರಿಗೂ ಸುಮಾರು 2.5 ಕೋಟಿ ರೂಪಾಯಿ ಸರ್ಕಾರಿ ವೆಚ್ಚದಲ್ಲಿ ಕನ್ನಡ ಕಲಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಲಿದೆ ಅಂತಾನೂ ಹೇಳಿದ್ದಾರೆ. ಕರ್ನಾಟಕದ ಆಡಳಿತ ಭಾಷೆಯನ್ನೇ ಸಲೀಸಾಗಿ ಬಳಸಕ್ಕೆ ಬರದವರು ನಮ್ಮ ರಾಜ್ಯಸರ್ಕಾರಿ ನೌಕರಿಯಲ್ಲಿ ವರ್ಷಗಟ್ಲೆ ಅರಾಮಾಗಿ ಕೆಲಸ ಮಾಡಕ್ಕೆ ಆಗುತ್ತೇ ಅನ್ನೋದೆ ತಮಾಷೆ ಸುದ್ದಿ ಅಲ್ವಾ? ಪಾಪಾ! ಚಂದ್ರು ಅವ್ರು ಈಗ ಇವರಿಗೆ ಪಾಠ ಹೇಳಿಕೊಡೋದು ಬಿಟ್ಟು ಇನ್ನೇನು ತಾನೆ ಮಾಡಬಲ್ಲರು?

ಕನ್ನಡ ಬಳುಸ್ತಿಲ್ಲ ಅಂದ್ರೆ ಯಾರು ಕಾರಣ?

ಅಲ್ಲಾ ಗುರು! ನಾಡಿನ ಜನರ ನುಡಿಯಾದ ಕನ್ನಡದಲ್ಲೇ ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳೆಲ್ಲಾ ನಡೀಬೇಕು ಅನ್ನೋದನ್ನು ಸರಿಯಾಗಿ ಸರ್ಕಾರ ಅರ್ಥ ಮಾಡ್ಕೊಂಡು ವ್ಯವಸ್ಥೆ ಜಾರಿಗೆ ತಂದಿದ್ರೆ ಇಂಥಾ ಕೆಟ್ಟ ಪರಿಸ್ಥಿತಿ ಬರ್ತಿತ್ತಾ? ಈಗ ಇರೋರಲ್ಲಿ ಲಕ್ಷಾಂತರ ಜನಕ್ ಕನ್ನಡ ಬಳಸಕ್ ಆಗದೆ ಇರೋದ್ರಿಂದ ಎಷ್ಟು ಜನರಿಗೆ ಸಮಸ್ಯೆ ಅಲ್ವಾ? ಸರ್ಕಾರಗಳು ಮೊದ್ಲಿಂದ ಬಿಗಿಯಾಗಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡದೇ ಈಗ 17% ನೌಕರರಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಕ್ ಆಗಲ್ಲಾ ಅಂದ್ರೆ ಕನ್ನಡ ಅನುಷ್ಠಾನ ಮಾಡಕ್ಕೆ ನಮ್ಮ ಸರ್ಕಾರಗಳು ಎಷ್ಟೊಂದು ಕಾಳಜಿ ತೋರಿಸಿವೆ ಅನ್ನೋದ್ ತಿಳಿಯಲ್ವಾ? ಆಡಳಿತ ಭಾಷೆಯ ಅನುಷ್ಠಾನಕ್ಕೆ ಅಂತ ಯಾವ್ದೋ ಸಮಿತಿ, ಸುಡ್ಗಾಡು ಶುಂಠಿ ಅಂತ ಮಾಡಿ ಸರ್ಕಾರ ಕೈತೊಳ್ಕೊಂಬುಟ್ರೆ ಆಗೋಯ್ತಾ? ಪಾಪಾ, ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ನೋ ಹಲ್ಲು ಕಿತ್ತ ಹಾವು ಎಷ್ಟು ಭುಸುಗುಟ್ಟುದ್ರೆ ತಾನೇ ಏನಾಗುತ್ತೆ? ಈಗಲಾದರೂ ಸರ್ಕಾರ ತನ್ನ ಕೆಲಸದಲ್ಲಿ ಆಗ್ತಿರೋ 20% ಕ್ಷಮತೆಯ ನಷ್ಟಾನಾ ಅರ್ಥ ಮಾಡ್ಕೊಂಡು ಸರೀಗೆ ಕನ್ನಡದಲ್ಲಿ ಆಡಳಿತ ಮಾಡಬೇಕು ಗುರು!

ಕನ್ನಡದ ದೊಡ್ಡಜನ ನಾಗರೀಕ ದನಿಯಾಗಬೇಕು!

ಇತ್ತೀಚಿನ ದಿನಗಳಲ್ಲಿ ನಮ್ಮೂರುಗಳು ಹಂಗೀರ್ಬೇಕು, ಹಿಂಗಿರ್ಬೇಕು ಅಂತಾ ಹೇಳಕ್ಕೆ, ಏನೇನ್ ಬದಲಾಗಬೇಕು, ಏನೇನು ಸುಧಾರಣೆ ಆಗ್ಬೇಕು ಅನ್ನಕ್ಕೆ, ಈಗಾಗ್ಲೆ ಇರೋ ಜನಪ್ರತಿನಿಧಿ ವ್ಯವಸ್ಥೆಗೆ ಹಿಡಿದಿರೋ ತುಕ್ಕು ಬಿಡಿಸೋಕ್ಕೆ ನಾಗರೀಕರೇ ಸೇರ್ಕೊಂಡು ಕಟ್ಕೊಂಡಿರೋ ಹಲವಾರು ಸಂಸ್ಥೆಗಳು ಕೆಲಸ ಮಾಡ್ತಿವೆ. ಅದ್ರಲ್ಲಿ ನಮ್ಮ ಬೆಂಗಳೂರಲ್ಲಿ ಜನಾಗ್ರಹ, ಬ್ಯಾಂಗಲೂರ್ ಸಿಟಿಜನ್ ಮ್ಯಾಟರ್ಸ್.ಇನ್ ಮೊದಲಾದವು ಇವೆ. ಈ "ಲಾಭರಹಿತ" ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ಕೆಲಸ ಮಾಡ್ತಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳನ್ನು ಕಟ್ಕೊಂಡಿರೋರು, ನಡುಸ್ತಿರೋರು ಯಾರಪ್ಪಾ ಅಂತಾ ನೋಡುದ್ರೆ ಅದರಲ್ಲಿ ನಮ್ಮ ಜನ ಅಂದ್ರೆ ಕನ್ನಡಿಗರಿರೋದು ಬೆರಳೆಣಿಕೆಯಷ್ಟು ಮಾತ್ರಾ ಕಣ್ರೀ.. ಅಲ್ಲಾರೀ, ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ರಾಜಾಸ್ಥಾನದಿಂದ, ಮುಂಬೈಯಿಂದ, ಕೇರಳದಿಂದ, ತಮಿಳುನಾಡಿಂದ ವಲಸೆ ಬಂದಿರೋ ಹೈಕ್ಳು ನಿರ್ಧಾರ ಮಾಡಬೇಕಾ? ಇದರಲ್ಲಿ ಯಾವ ತಪ್ಪೂ ಇಲ್ಲಾ ಅಂದ್ರೂ ಇವರಿಗೆ ನಮ್ಮೂರು, ನಮ್ಮೂರ ಜನ, ನಮ್ಮೂರ ಸಂಸ್ಕೃತಿಗಳು ಇದನ್ನೆಲ್ಲಾ ಲೆಕ್ಕಕ್ಕೆ ತಗೊಂಡು ಕೆಲಸ ಮಾಡೋ ಉಮ್ಮೇದಿ ಅದೆಂಗ್ ಇರಕ್ ಆಗುತ್ತೆ ಹೇಳಿ. ಇದ್ರಾಗೆಲ್ಲಾ ನಮ್ ಜನಗಳು ಇರಬೇಕು. ಆಗ ಸಮಸ್ಯೇನೂ ಸರಿಯಾಗಿ ಅರ್ಥ ಆಗುತ್ತೆ, ಪರಿಹಾರಾನೂ ಸರಿಯಾಗ್ ಸಿಗ್ತದೆ.

ಇವ್ರು ಯಾವ ಸೀಮೆ ಬೆಂಗಳೂರಿನ ಪ್ರತಿನಿಧಿಗಳು?

ದೊಡ್ಡ ಓದು ಓದಿದೀವಿ ಅಂತಾನೋ, ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇದೀವೀ ಅಂತಾನೋ ಇವರು ತಮ್ಮುನ್ ತಾವು ಇಡೀ ಬೆಂಗಳೂರಿನ ಪ್ರತಿನಿಧಿಗಳು ಅಂತ ಅಂದ್ಕೊಂಡಿದ್ರೆ ಮೂರ್ಖರಾಗ್ತಾರೆ ಅಷ್ಟೆ. ಈ ಬೆಂಗಳೂರಿನಲ್ಲಿ ಇರೋ ಕನ್ನಡಿಗರನ್ನೇ ಗಣನೆಗೆ ಇಟ್ಕೊಳ್ದೆ, ಹೊರಗಿಂದ ಬಂದೋರ ಹಿತ ಕಾಯೋದೊಂದೇ ಗುರಿ ಅನ್ನೋ ಹಾಗೆ ಇವರುಗಳು ನಡ್ಕೊತಿರೋದು ಎದ್ದು ಕಾಣ್ತಿದೆ. ಯಾಕಪ್ಪಾ ಅಂದ್ರೆ, ಬೆಂಗಳೂರಿನ ನಾಗರೀಕರನ್ನು ಪ್ರತಿನಿಧುಸ್ತೀವಿ ಅಂತಾ ಹೇಳ್ಕೊಳ್ಳೋ ಇವರ ಅಂತರ್ಜಾಲ ತಾಣಗಳಲ್ಲಿ ಕನ್ನಡವೇ ಇಲ್ಲ. ಅಂಥಾದ್ರಲ್ಲಿ ಇವರು ಯಾವ ಸೀಮೆ ಬೆಂಗಳೂರನ ನಾಗರೀಕರ ಪ್ರತಿನಿಧಿಗಳಾಗ್ತಾರೆ? ನೀವೆ ಹೇಳಿ. ಕನ್ನಡದೋರ ಅನುಭವ, ಸಮಸ್ಯೆ, ಯೋಜನೆ ಇವುನ್ನೆಲ್ಲಾ ಇವರ ತಾಣಗಳು, ಸಂಸ್ಥೆಗಳೂ ಪ್ರತಿನಿಧಿಸಲಾರವು. ಇವತ್ತಿನ ದಿವ್ಸ ಇವರ ಜೊತೆ ಕೆಲಸ ಮಾಡ್ತಿರೋ ಒಬ್ರೋ ಇಬ್ರೋ ಕನ್ನಡಿಗರೂ ಕೂಡಾ ಕನ್ನಡ ಬಳುಸೋದು ಹೆಂಗಪ್ಪಾ ಅನ್ನೋ ಕೀಳರಿಮೆಯಲ್ಲಿ ನರಳ್ತಿದಾರೇನೋ ಅನ್ಸುತ್ತೆ. ಇಲ್ದಿದ್ರೆ ಇಷ್ಟ್ ಹೊತ್ತಿಗೆ ಇವರ ಅಂತರ್ಜಾಲ ತಾಣದಲ್ಲಿ ದೇವ್ರಾಣೆಗೂ ಕನ್ನಡ ಇರ್ತಿತ್ತು. ಹೀಗೆ ಬುಡಹಂತದಲ್ಲೇ ಹುಳುಕು ಇಟ್ಕೊಂಡು, ತಮ್ಮ ಬರಹಗಳಲ್ಲಿ ನೇರವಾಗೇ ಪರಭಾಷೆಯೋರುನ್ನಾ ಮೆರುಸೋ ಸಲುವಾಗಿ ಕನ್ನಡದವರನ್ನೇ ಕಡೆಗಣುಸ್ತಿರೋ ಇವರಿಂದ ಬೆಂಗಳೂರು ಉದ್ಧಾರ ಆದ ಹಾಗೇ ಗುರೂ!

ಇದ್ಯಾವ ಮಹಾ ಸಂಸ್ಥೆಗಳು ಅನ್ನೋ ಅಸಡ್ಡೆ ಬೇಡಾ!

ಹಾಗಂತಾ ಇವ್ಯಾವ ಮಹಾ ಸಂಸ್ಥೆಗಳು ಅಂತಾ ನಾವೂ ನೀವೂ ಇವುಗಳ್ನ ಕಡೆಗಣಿಸಕ್ಕೆ ಆಗಲ್ಲಾ. ಯಾಕಂದ್ರೆ ಇವತ್ತು ಈ ಸಂಸ್ಥೆಗಳು ಎತ್ತುತಿರೋ ದನಿ ಆಡಳಿತದಲ್ಲಿರೋರ ಕಿವಿಗೆ ಮುಟ್ತಾಯಿದೆ. ಮಾಧ್ಯಮಗಳಲ್ಲಿ ಇವರ ಕೂಗು ಕೇಳಿ ಬರ್ತಾಯಿದೆ. ಹೌದಪ್ಪಾ, ಇವರು ಹೇಳ್ತಿರೋ ಸುಧಾರಣೆ ಮಾಡುದ್ರೆ ಊರು ಉದ್ಧಾರ ಆಗುತ್ತೆ ಅಂತಾ ಆಳೋರಿಗೆ ಅನ್ಸೋಕೆ ಶುರು ಆಗಿದೆ. ಇಂಥಾ ಸಂಸ್ಥೆಗಳು ಕೂಡಾ ನಿಜವಾಗಿ ಬೆಂಗಳೂರಿನ ವ್ಯವಸ್ಥೆಯನ್ನು ಸುಧಾರಿಸಬೇಕು ಅಂತಾ... ಬಹಳ ಅಧ್ಯಯನ ಮಾಡಿ ತಮ್ಮೆಲ್ಲಾ ಪರಿಣಿತಿ ಅನುಭವಗಳನ್ನು ಸುರಿದು ನಿಜವಾದ ಕಾಳಜಿಯಿಂದಲೇ ಕೆಲಸ ಮಾಡ್ತಿರಬಹುದು. ಆದರೇನು? ಇದರಲ್ಲಿ ನಮ್ಮ ಜನ ಇಲ್ಲದಿದ್ರೆ ಇವರ ಪರಿಹಾರಗಳು, ಯೋಜನೆಗಳೆಲ್ಲಾ ಇಲ್ಲಿಗೆ ಬರೋ ವಲಸಿಗರ ಬದುಕನ್ನು ಹಸನು ಮಾಡೋದ್ರಲ್ಲಿ ಮುಗಿದು ಹೋಗುತ್ತೆ! ಅದೆಂಗೇ ಅಂತೀರಾ? ಈಗ ನೋಡಿ, ಬೆಂಗಳೂರಿನ ಬಸ್ಸುಗಳಲ್ಲಿ ಇಂಗ್ಲಿಷ್ ಬರಹ ಬೇಕು ಅಂತಾ ಇವರು ಬಲವಾಗಿ ಪ್ರತಿಪಾದುಸ್ತಾರೆ. ಆದ್ರೆ ಇದೇ ಜನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ, ಬೆಂಗಳೂರಿನ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಬರೀ ಕನ್ನಡ ಬರೋ ನಮ್ಮ ಎಂಕ ವ್ಯವಹರಿಸಕ್ಕೆ ಅನುಕೂಲ ಆಗೋ ಅಂಥಾ ವ್ಯವಸ್ಥೆ ಬೇಕು ಅನ್ನಲ್ಲ. ಇವರ್ಯಾರೂ ಅಂಥಾ ವ್ಯವಸ್ಥೆ ಬೇಡಾ ಅನ್ನಲ್ಲ. ಆದ್ರೆ ಈಗ ಇಂಗ್ಲಿಷ್ ಬೋರ್ಡ್ ಬೇಕು ಅನ್ನೋ ಹಾಗೆ ಎಂಕಂಗೆ ಅನುಕೂಲ ಆಗೋ ಥರದ ವ್ಯವಸ್ಥೆ ಕಟ್ಟಿ ಅನ್ನಲ್ಲ. ಅನ್ನಲ್ಲ ಅನ್ನಬಾರದು, ಇದುವರ್ಗೂ ಅಂದಿಲ್ಲಾ ಅಷ್ಟೆ.

ಜನಾಭಿಪ್ರಾಯದ ನಾಟಕ!

ಇವ್ರು ಜನಾಭಿಪ್ರಾಯ ತಿಳ್ಕೊಳಕ್ಕೆ ಅಂತಾ ಮತಕ್ಕೆ ಹಾಕಿರೋ ಈ ಪ್ರಶ್ನೆ ನೋಡಿ : ಇದರ ಉತ್ತರಗಳಲ್ಲಿ ಯಾವುದನ್ನು ಆರಿಸಿದ್ರೂ ನೀವು ಇಂಗ್ಲಿಷ್ ಬೋರ್ಡನ್ನು ಒಪ್ಪಿದ ಹಾಗೇ. ಇಂಥಾ ಸಂಸ್ಥೆಗಳು ನಿಜಕ್ಕೂ ಬೆಂಗಳೂರನ್ನು, ಬೆಂಗಳೂರಿನ ಜನತೆಯನ್ನು ಪ್ರತಿನಿಧಿಸ್ತಾ ಇದಾರಾ? ಇವರು ಪ್ರತಿನಿಧಿಸ್ತಾ ಇರೋ ಬೆಂಗಳೂರು ಕನ್ನಡಿಗರನ್ನು ಒಳಗೊಂಡಿದ್ಯಾ ಇಲ್ವಾ? ಅಂತೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಹುಟ್ತಿಲ್ವಾ ಗುರುಗಳೇ! ಇನ್ನೂ ಏನು ಯೋಚನೇ ಮಾಡ್ತಿದೀರಾ? ಸಮಾಜದಲ್ಲಿ ದೊಡ್ಡ ಸ್ಥಾನ ಹೊಂದಿರೋ ಕನ್ನಡಿಗರು ಇಂಥಾ ಸಂಸ್ಥೆಗಳ ಒಳಹೊಕ್ಕು ಚುಕ್ಕಾಣಿ ಹಿಡೀದಿದ್ರೆ, ಮಾತು ನಡ್ಯೋ ಹಂತಕ್ ತಲುಪದೇ ಇದ್ರೆ, ಅಥ್ವಾ ಈ ಸಂಸ್ಥೆಗಳಿಗಿಂತಾ ಪ್ರಭಾವಶಾಲಿಯಾದ ದೊಡ್ಡ ಸಂಸ್ಥೆಗಳ್ನ ಕಟ್ಟದೇ ಹೋದ್ರೆ ಮುಂದೆ ಅನಾಹುತಾ ಗ್ಯಾರಂಟಿ.

ಇವರ ನಿಲುವೇ ಬೆಂಗಳೂರಿಗರದ್ದೇನು?

ಮೊನ್ನೆ ನೋಡಿ ತಿರುವಳ್ಳುವರ್ ಸ್ಥಾಪನೆ ಮಾಡಿದ್ದೇ ಸರಿ ಅಂತಾ ಅಭಿಪ್ರಾಯಾನ ಬೆಂಗಳೂರು ಸಿಟಿಜನ್ ಮ್ಯಾಟರ್ಸ್‍‍ನ ಸಂಪಾದಕರು ಬರೆದಿದ್ದಾರೆ. ಇದನ್ನು ಮೀರಿಸೋ ಹಾಗೆ ಜನಾಗ್ರಹದ ಸಂಪಾದಕೀಯ ಇದೆ. ಇದೇನು ಇಡೀ ಕನ್ನಡಿಗರ ಅಭಿಪ್ರಾಯವೇನು? ಈ ಪ್ರತಿಮೆ ವಿಚಾರದಲ್ಲಿ ಸರ್ಕಾರ ಹೇಗೆ ನಡ್ಕೊಳ್ತು ಅಂತಾ ಇಡೀ ನಾಡಿಗೇ ಗೊತ್ತಿದೆ. ಜನರ ಅಭಿಪ್ರಾಯ ಏನಿತ್ತು ಅನ್ನೋದನ್ನು ಗಣನೆಗೆ ತೊಗೊಳ್ದೆ, ಸುದ್ದಿ ಕೊಡಬೇಕಾದೋರು ಅಭಿಪ್ರಾಯ ಕೊಡ್ತಾ ಅವರಿವರ ಪರ ವಕೀಲಿಕೆ ಮಾಡ್ತಾ ಇರೋದು ಎಷ್ಟರ ಮಟ್ಟಿಗೆ ಒಪ್ಪೋ ಮಾತು? ಇವರ ಸಂಪಾದಕೀಯಾನೂ, ಇವರ ಸಂಸ್ಥೇನೂ ಬೆಂಗಳೂರು ಜನತೆಯ ಪ್ರತಿನಿಧಿಸೋವು ಅಂತಾಗ್ಬುಟ್ರೆ, ನಾಳೆ ಇಡೀ ಬೆಂಗಳೂರಿನ ಒಟ್ಟಭಿಪ್ರಾಯವೇ ಇದು ಅಂತಾ ಅಗೋಗಲ್ವಾ? ಇಂಥಾದ್ದೆಲ್ಲಾ ಆಗಬಾರ್ದು ಅಂದ್ರೆ ಇರೋದು ಒಂದೇ ದಾರಿ. ಇಂಥಾ ಸಂಸ್ಥೆಗಳಲ್ಲಿ ನಾವೂ ತೊಡುಗುಸ್ಕೋಬೇಕಾಗಿದೆ. ಅದಕ್ಕಿಂತಾ ಪರಿಣಾಮಕಾರಿಯಂದ್ರೆ ಇಂಥಾ ಸಂಸ್ಥೆಗಳಿಗಿಂತ ದೊಡ್ಡ ಸಂಸ್ಥೆಗಳನ್ನು ಕನ್ನಡಿಗರು ಕೂಡಿ ಕಟ್ಟಬೇಕಾಗಿದೆ. ಏನಂತೀರಾ ಗುರುಗಳೇ?

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!

ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!

ಎಚ್ಚರವಾಗ್ತಿರೋ ಮರಾಠಿ ಮಾಣುಸ್!


ಮೊನ್ ಮೊನ್ನೆ ಸಿ.ಎನ್.ಎನ್-ಐ.ಬಿ.ಎನ್‍ನೋರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದಿಬ್ರು ರಾಜಕೀಯ ನಾಯಕರನ್ನು ಸಂದರ್ಶನ ಮಾಡುದ್ರು ಗುರು! ಒಬ್ರು ಶಿವಸೇನೆಯ ಬಾಳಾಠಾಕ್ರೆಯ ಉತ್ತರಾಧಿಕಾರಿಯಾದ ಉದ್ಧವ್ ಠಾಕ್ರೆಯವರು. ಇನ್ನೊಬ್ರು ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ದಂಡನಾಯಕರಾದ ರಾಜ್ ಠಾಕ್ರೆಯವರು. ನೀವು ಆ ಸಂದರ್ಶನಗಳ್ನ ನೋಡುದ್ರಾ ಗುರು? ಇಲ್ದಿದ್ರೆ ಇಕಾ ಇಲ್ಲಿ ನೋಡಿ.

ಕಳಚುತ್ತಿರುವ ಸುಳ್ಳಿನ ಪೊರೆ ಒಂದೆಡೆ! ತನ್ನತನವ ತೊರೆದವರೊಂದೆಡೆ!!

ಶಿವಸೇನೆ ಅನ್ನೋದು ಹೇಗೆ ದಿಕ್ಕೆಟ್ಟು, ಸಿದ್ಧಾಂತದ ಗೊಂದಲದಲ್ಲಿ ತೊಳಲಾಡ್ತಾ ಇದೆ ಅನ್ನೋದನ್ನು ತಿಳ್ಯಕ್ಕೆ ಉದ್ಧವ್ ಆಡಿರೋ ಮಾತುಗಳ್ನ ನೋಡುದ್ರೆ ಸಾಕು. ಹಿಂದಿಯಲ್ಲಿ ಮಾತಾಡ್ತಾ, ಮಹಾರಾಷ್ಟ್ರ-ಮರಾಠಿ-ಮರಾಠಿಗರ ಬಗ್ಗೆ ಯಾವ್ದೇ ವಿಶೇಷ ಯೋಜನೆಗಳಿಟ್ಕೊಳ್ದೇ ರಾಷ್ಟ್ರೀಯ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧವಾಗಿರೋ ಶಿವಸೇನೆ ತಾನು ಹುಟ್ಟಿದ್ದು ಯಾಕೆ ಅನ್ನೋದನ್ನೇ ಮರೆತು ಹೋದಂಗಿದೆ ಗುರು! ಇವರಿಗಿಂತಾ ಹೆಚ್ಚು ದಿಟದ ಮನವರಿಕೆ ಎಂ.ಎನ್.ಎಸ್‍ನವರಿಗೆ ಆಗಿರೋ ಹಾಗೆ, ರಾಜ್ ಠಾಕ್ರೆಯ ಮಾತುಗಳನ್ನು ಕೇಳ್ದಾಗ ಅನ್ಸುತ್ತೆ. ತಮಾಷೆ ಅಂದ್ರೆ ರಾಜ್‍ಠಾಕ್ರೆಯವರು ಮರಾಠಿಯಲ್ಲಿ ಮಾತಾಡೋದನ್ನೇ ಈ ಚಾನೆಲ್‍ನವರು ದೇಶ ಒಡೆಯೋ ಪ್ರಯತ್ನ ಅನ್ನೋಹಾಗೆ ಪ್ರಶ್ನೆಮಾಡಿರೋದನ್ನು ನೀವು ನೋಡಬಹುದು. ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್ ಆಗಿರೋದು ಅನ್ನೋದನ್ನು ಅರ್ಥ ಮಾಡ್ಕೊಂಡಂಗಿರೋ ರಾಜ್‍ಠಾಕ್ರೆ, ಇದರಿಂದ ಚೂರು ಗಲಿಬಿಲಿಗೆ ಈಡಾಗಿದ್ದಂಗೆ ಕಾಣ್ಸಿದ್ರೆ ಅದುಕ್ಕೆ ಕಾರಣ, ಪಾಪಾ ಅವರೂ ಹಿಂದೀನಾ ರಾಷ್ಟ್ರಭಾಷೆ ಅಂತ ತಪ್ಪಾಗಿ ಭಾವಿಸಿರೋದೆ ಆಗಿದೆ ಗುರು! ಈ ಸಂದರ್ಶನ ಮಾಡಿದ ಮಹನೀಯ ರಾಜ್‍ದೀಪ್ ಕೂಡಾ ಪೆದ್ದುಪೆದ್ದಾಗಿ (ಅತಿ ಜಾಣತನ ಅಂತನ್ನೋ ಗುಮಾನೀನೂ ಇದೆ) ಹಿಂದೀನಾ ರಾಷ್ಟ್ರಭಾಷೇ ಅಂತನ್ನೋದುನ್ನ ನೋಡುದ್ರೆ, ಅವರ ಅಜ್ಞಾನಕ್ಕೆ ಮರುಗಬೇಕೋ ಅಥವಾ ಭಾರತೀಯರ ತಲೇಲಿ ಕೇಂದ್ರಸರ್ಕಾರ ಎಷ್ಟು ಯೋಜಿತವಾಗಿ ಒಂದು ಸುಳ್ಳುನ್ನ ತುಂಬ್ಕೊಂಡು ಬಂದಿದೆ ಅಂತಾ ಅಚ್ಚರಿ ಪಡಬೇಕೋ ಅರಿಯದಾಗಿದೆ ಗುರು! ಏನೇ ಆದರೂ ಹಿಂದಿಯಿಂದಾಗಿರೋ ಅಪಾಯದ ಅರಿವು ಮರಾಠಿಗರಿಗೆ ಅರ್ಥವಾಗ್ತಾ ಇರೋದೂ, ಜೊತೆಯಲ್ಲಿ ಈ ಅರಿವಿನ ರಾಜಕೀಯ ಪಕ್ಷ ಬೆಳೀತಾ ಇರೋದೂ ಒಳ್ಳೇ ಬೆಳವಣಿಗೆ ಆಗಿದೆ.

ರಾಜ್‍ಠಾಕ್ರೆ ಮಾತಿನ ಎರಡು ಸತ್ಯಗಳು!

ಮೊದಲನೇದಾಗಿ ಹಿಂದೀಲಿ ಮಾತಾಡದೆ ಮರಾಠಿ ಭಾಷೆಯನ್ನು ಬಳಸೋ ಮೂಲಕ ‘ಭಾರತದಲ್ಲಿ ಹಿಂದಿಯಷ್ಟೇ ಮರಾಠಿಯೂ ಭಾರತೀಯ’ ಅನ್ನೋ ಸಂದೇಶ ಕೊಡ್ತಾ, ‘ಇಷ್ಟು ದಿವಸ ಹಿಂದೀನ ಒಪ್ಕೊಂಡು ತಲೆಮೇಲೆ ಹೊತ್ತು ಮೆರೆಸಿದ್ದಕ್ಕೆ ಮರಾಠಿಗರ ಬದುಕು, ಉದ್ಯೋಗ ಎಲ್ಲಾ ಮಠ ಹತ್ತೋಗಿದೆ ಅನ್ನೋದು ನಮಗೆ ಗೊತ್ತಾಗಿದೆ. ಇನ್ಮೇಲೆ ಮರಾಠಿ ಸ್ವಾಭಿಮಾನ ಜಾಗೃತವಾಗಿದೆ ಅನ್ನೋದರ ಕುರುಹಾಗಿ ಹೀಗೆ ಮರಾಠಿಯಲ್ಲಿ ಮಾತಾಡ್ತಾ ಇದೀನಿ’ ಅನ್ನೋ ಸಂದೇಶಾನೂ ರಾಜ್ ಕೊಟ್ಟಿದಾರೆ. ಇದರ ಜೊತೆಗೆ ಯಾವ ಪಕ್ಷ ಮಹಾರಾಷ್ಟ್ರ, ಮರಾಠಿ ಮತ್ತು ಮರಾಠಿಗರ ಏಳಿಗೆಗೆ ದುಡಿಯಲು ಸಿದ್ಧವೋ, ಯಾವ ಪಕ್ಷ ಕಾಲಮಿತಿ ಹಾಕಿಕೊಂಡು ಏಳಿಗೆಯ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವೋ ಅಂತಹ ಪಕ್ಷಗಳನ್ನು ಬೆಂಬಲಿಸುವುದಾಗಿಯೂ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಈ ಸಂದರ್ಶನ ನೋಡಿದಾಗ ರಾಜ್‍ಠಾಕ್ರೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೆಚ್ಚು ಹೆಚ್ಚು ಸ್ಪಷ್ಟವಾದ ಚಿಂತನೆಯನ್ನೂ, ನಿಲುವನ್ನೂ ಮೈಗೂಡಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ಅಂತೂ ಮರಾಠಿ ಮಾಣುಸ್ ಎಚ್ಚೆತ್ತುಕೊಳ್ತಿರೋದು ಭಾರತದ ಏಳಿಗೆಯ, ಒಕ್ಕೂಟದ ಸ್ವರೂಪದ ದೃಷ್ಟಿಯಿಂದ ಭಾಳಾ ಒಳ್ಳೇದು ಗುರು!!

ಸಂಸ್ಕೃತ ವಿವಿ : ಬೇಕೆಂದವರಿಗೊಂದು ಪ್ರತ್ಯುತ್ತರ

ಕರ್ನಾಟಕ ರಾಜ್ಯ ಸರ್ಕಾರವು ಸಂಸ್ಕೃತ ವೇದ ವಿಶ್ವವಿದ್ಯಾಲಯವೊಂದನ್ನು ಶುರುಮಾಡಲು ಮುಂದಾಗಿದೆ. ಇದು ಬೇಕೇ ಬೇಡವೇ ಎಂಬ ಬಗ್ಗೆ ವಿಜಯಕರ್ನಾಟಕ ದಿನಪತ್ರಿಕೆಯು ಒಂದು ಸಂವಾದವನ್ನು ನಡೆಸಿತು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ಪ್ರೊ. ಎನ್.ಎಸ್ ರಘುನಾಥ್ ಅವರು ಈ ಬಗ್ಗೆ ಮಂಡಿಸಿದ್ದ ಅಪ್ರಕಟಿತ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಶ್ರೀಯುತರು NCERTನಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಕಲಿಕೆಯರಿಗರು. ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸಿದ್ದರೂ ಪ್ರಕಟ ಮಾಡುವ ದೊಡ್ಡಮನಸ್ಸನ್ನು ಆ ಪತ್ರಿಕೆಯು ಮಾಡಿಲ್ಲವೆಂಬುದನ್ನು ತಿಳಿಸಲು ಕೂಡ ಶ್ರೀಯುತರು ಇಷ್ಟಪಡುತ್ತಾರೆ. ಈ ಬರಹದಲ್ಲಿರುವ ಅಭಿಪ್ರಾಯಗಳು ಪ್ರೊ. ರಘುನಾಥ್ ಅವರದು. ಅವರನ್ನು ಸಂಪರ್ಕ ಮಾಡಬೇಕಾದರೆ ಅವರಿಗೆ ಮಿಂಚೆ ಬರೆಯಿರಿ. -- ಸಂಪಾದಕ, ಏನ್ ಗುರು

"ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಸ್ಕೃತ ವಿವಿ ಪೂರಕವಾಗಲಿ" (ಡಾ ಎಸ್ ಎಲ್ ಭೈರಪ್ಪ, ವಿಕ 10.08.2009) ಭೈರಪ್ಪನವರ ಲೇಖನವು ತನ್ನ ತಲೆಬರಹ ಹೇಳುವಂತೆ ಕನ್ನಡ ಭಾಷೆಯ ಬೆಳವಣಿಗೆಗೆ ಏನಾದರೂ ಆಗುವುದಾದರೆ ಅದು ಆಗಬಾರದು ಎಂದು ಯಾರೂ ಹೇಳುವುದಿಲ್ಲ, ಹೇಳಲು ಸಾಧ್ಯವಿಲ್ಲ. ಆದರೆ ಅದು ಸಂಸ್ಕೃತದ ಮೂಲಕ ಹೇಗೆ ಆಗುತ್ತದೆ ಎಂದು ಭೈರಪ್ಪನವರು ತಮ್ಮ ಲೇಖನದಲ್ಲಿ ಎಲ್ಲೂ ಹೇಳುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಅವರ ಬರವಣಿಗೆಗೆ ಸಾಧ್ಯವಾಗಿಲ್ಲ. ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಏಕೆ ಆರಂಭಿಸಬೇಕು ಎನ್ನುವುದಕ್ಕೆ ಅವರ ಲೇಖನದಲ್ಲಿ ಎಲ್ಲೂ ತಾರ್ಕಿಕ ಅಥವಾ ವೈಜ್ಞಾನಿಕ ಸಮರ್ಥನೆ ಇಲ್ಲ. ಹಾಗೆ ನೋಡಿದರೆ ವಿವಿಯನ್ನು ಸ್ಥಾಪಿಸಲು ಅವರ ಲೇಖನದಲ್ಲಿ ಒಂದು ವಾದವೇ ಇಲ್ಲ. ಆದರೂ ಅವರು ಹೇಳುತ್ತಿರುವ ಕೆಲವು ಅಂಶಗಳನ್ನು ಇಲ್ಲಿ ಚರ್ಚೆ ಮಾಡುತ್ತೇನೆ. ಸಂಸ್ಕೃತ ವಿವಿ ಸ್ಥಾಪನೆಯ ಬಗ್ಗೆ
“ಎಷ್ಟೋ ಕನ್ನಡದ ತೂಕವುಳ್ಳ ವಿದ್ವಾಂಸರು ಮತ್ತು ಸಾಹಿತಿಗಳು ಮೌನವಾಗಿದ್ದಾರೆ.”
ಆದುದರಿಂದ “ಮೌನಂ ಸಮ್ಮತಿ ಲಕ್ಷಣಂ” ಎಂದಿದ್ದಾರೆ. ಇದು ಗಂಭೀರವಾದ ಹೇಳಿಕೆ. ಯಾರೀ ತೂಕದವರು? ಹಾಗಾದರೆ ತೂಕವಿಲ್ಲದವರು ಯಾರು? ಹೆಸರು ಹೇಳಲು ಭೈರಪ್ಪನವರು ಏಕೆ ಹಿಂಜರಿದಿದ್ದಾರೆ? ಭೈರಪ್ಪನವರೂ ಸಹ ಭ್ರಷ್ಟತೆಯ ಬಗ್ಗೆ ಮೌನವಾಗಿದ್ದಾರೆ. ಗಣಿಗಳು ಲೂಟಿಯಾಗುತ್ತಿರುವ ಬಗ್ಗೆ ಮೌನವಾಗಿಯೆ ಇದ್ದಾರೆ. ಇದರ ಅರ್ಥ “ಮೌನಂ ಸಮ್ಮತಿ ಲಕ್ಷಣಂ” ಎಂದು ಗ್ರಹಿಸಬಹುದೆ? ಇಂಥ ತುಕ್ಕು ಹಿಡಿದ ಕ್ಲೀಶೆ ತುಂಬಿದ ಭಾಷೆಯಲ್ಲಿ ಬರೆದಿರುವ ಬಾಲಿಶ ಹೇಳಿಕೆಗಳು ಲೇಖನದಲ್ಲಿ ಬೇಕಾದಷ್ಟು ಇವೆ. ಇವರ ಮತ್ತೊಂದು ಹೇಳಿಕೆ: “ಸಂಸ್ಕೃತ ವ್ಯಾಕರಣದ ಹಿನ್ನೆಲೆ ಇಲ್ಲದೆ ಭಾರತದ ಭಾಷಾ ಶಾಸ್ತ್ರದ ಅಧ್ಯಯನ ಸಾಧ್ಯವೆ?” ಇದಕ್ಕೆ ಇವರು ಕೊಡುವ ಉದಾಹರಣೆ “ಕನ್ನಡದಲ್ಲಿ ಎಂಎ ಮಾಡಿದವರನ್ನು ಕನ್ನಡದ ಹೊಸ ಪತ್ರಕರ್ತರನ್ನು ನಾನು ಪರೀಕ್ಷಿಸಿದ್ದೇನೆ.” ಇವರಿಗೆ ಕನಿಷ್ಟ ಸರಿಯೋ, ಕನಿಷ್ಠ, ಪುಷ್ಟಿಯೋ, ಪುಷ್ಠಿಯೋ, ಸೀತೆ ರೋಧಿಸಿದಳು, ರೋದಿಸಿದಳು” ಇತ್ಯಾದಿಗಳು ಗೊತ್ತಿಲ್ಲ ಎನ್ನುವುದನ್ನು ಹೇಳುತ್ತಾರೆ. ಇದನ್ನು ನಿಜವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಂಸ್ಕೃತಕ್ಕೂ ಈ ಸಮಸ್ಯೆಗೂ ಸಂಬಂಧ ಕಲ್ಪಿಸುವುದು ತರ್ಕಬದ್ದವಲ್ಲ. ಸಂಸ್ಕೃತ ಎಂಎ ಮಾಡಿರುವ ಪದವೀಧರರು ಆ ಭಾಷೆಯಲ್ಲಿ ಮಾತನಾಡುವಾಗ ಅಥವಾ ಬರೆಯುವಾಗ ಮಾಡಬಹುದಾದ ತಪ್ಪುಗಳನ್ನು ಇವರು ಇದೇ ರೀತಿ ಗಮನಿಸಲಿಲ್ಲವೇಕೆ? ಹಾಗೆ ಅವರು ಮಾಡುವ ತಪ್ಪುಗಳನ್ನು ಸರಿಪಡಿಸಲು ಯಾವ ಭಾಷೆ ಕಲಿಯಬೇಕು? ಇಂತಹ ಸಮಸ್ಯೆಗಳನ್ನು ಸುಧಾರಿಸಲು ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪ್ರಾಧ್ಯಾಪಕರುಗಳು ಅನುಸರಿಸುತ್ತಿರುವ ಮೆತೆಡಾಲಜಿ, ಅವರೇ ಬೋಧನೆಯಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ, ಅಂತಹವರನ್ನು ಪರಿಕ್ಷೆಯಲ್ಲಿ ಉತ್ತೀರ್ಣಗೊಳಿಸುತ್ತಿರುವ ಕಾರಣಗಳ ಬಗ್ಗೆ ವಿವಿಗಳು ಗಮನಿಸಬೇಕು. ಭೈರಪ್ಪನವರು ಹೇಳಿರುವ ವಿಷಯವನ್ನು ತಿದ್ದಬೇಕಾದರೆ ಎಂಎ ಪಠ್ಯಕ್ರಮವನ್ನು ಗಂಭೀರ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಅವಶ್ಯವೆನಿಸಿದರೆ ಪರೀಕ್ಷಾ ಕ್ರಮವನ್ನೂ ಸೇರಿಸಿ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಆದರೆ ಇದೆಲ್ಲ ಸಂಸ್ಕೃತ ಭಾಷೆ ಕಲಿತರೆ ಸರಿಹೋಗಿಬಿಡುತ್ತದೆ ಎನ್ನುವಷ್ಟು ಸರಳ ಮಾಡುವುದು ಅಂಧ ತತ್ವವಾದವಾಗುತ್ತದೆ. ಮತ್ತು ಒಂದು ಭಾಷೆಯ ಕಲಿಕೆಯನ್ನು ಅದರ ವ್ಯಾಕರಣವನ್ನು ಮತ್ತೊಂದು ಭಾಷೆಯ ಕಲಿಕೆಯಿಂದ ಸರಿಪಡಿಸಬೇಕು/ ಸರಿಪಡಿಸಬಹುದು ಎನ್ನುವ ವಾದ ಭಾಷಾವಿಜ್ಞಾನದ ಸಿದ್ಧಾಂತಗಳಲ್ಲಿ ಓದಿದ ನೆನೆಪು ನನಗಿಲ್ಲ.

ಭೈರಪ್ಪನವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಉದಾಹರಣೆ ತೆಗೆದುಕೊಂಡಿದ್ದಾರೆ. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದಿದ್ದಾರೆ. ಕಲಿಯಲಿ. ಭಾರತೀಯರು, ಯೂರೋಪಿಯನ್ನರು ಎಲ್ಲರು ಸಂಸ್ಕೃತವನ್ನೂ ಕಲಿಯಲಿ. ಯಾರೂ ಬೇಡವೆಂದಿಲ್ಲ. ಇಲ್ಲಿ ಸಂಸ್ಕೃತ ಕಲಿಯುವಿಕೆ ಮತ್ತು ವಿವಿಸ್ಥಾಪನೆಗಳ ಸ್ಥಾಪನೆಯ ನಡುವೆ ಗೊಂದಲ ಸೃಷ್ಟಿಸುವುದು ಬೇಡ. ಸಂಸ್ಕೃತ ಎಲ್ಲರೂ ಕಲಿಯಲಿ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ವಿವಿಯ ಸ್ಥಾಪನೆ ಬೇರೆ ಮಾತು. ಯೂರೋಪಿನಲ್ಲಿ ಎಲ್ಲೂ ಲ್ಯಾಟಿನ್ ವಿಶ್ವವಿದ್ಯಾಲಯ ಇದ್ದಂತೆ ಕಾಣುವುದಿಲ್ಲ. ಗ್ರೀಕ್ ಒಂದು ದೇಶದ ಜೀವಂತ ಭಾಷೆ. ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಯೂರೋಪಿನಲ್ಲಿ ರೋಮನ್ ಸಾಮ್ರಾಜ್ಯ ಕುಸಿದು ಬಿದ್ದಾಗ, ಲ್ಯಾಟಿನ್ ಭಾಷೆ ಸ್ಯ್ಪಾನಿಷ್, ಇಟ್ಯಾಲಿಯನ್, ಫ್ರೆಂಚ್, ರುಮೇನಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಾಗಿ ವಿಭಜನೆಯಾಯಿತು. ಅಂದರೆ ಅಸ್ತಿತ್ವದಲ್ಲಿದ್ದ ಈ ಭಾಷೆಗಳು ಪ್ರಮುಖ ಭಾಷೆಗಳಾಗಿ ಬೆಳೆದವು. ಈ ಭಾಷೆಗಳ ಜೊತೆ ಇಂಗ್ಲಿಷ್, ಜರ್ಮನ್ ಇತ್ಯಾದಿ ಭಾಷೆಗಳು ಸೇರಿದಂತೆ ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಿಕೊಂಡವು. ಕಾಲಕ್ರಮೇಣ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ವ್ಯಾಕರಣವನ್ನೂ ಈ ಭಾಷೆಗಳು ತಮ್ಮ ಭಾಷೆಗಳ ವ್ಯಾಕರಣ ಬರೆಯಲು ಅಳವಡಿಸಿಕೊಂಡುಬಿಟ್ಟವು. ಆಗ ಭಾಷಾವಿಜ್ಞಾನ ಎನ್ನುವುದು ಮೊಳಕೆಯ ರೂಪದಲ್ಲೂ ಇರಲಿಲ್ಲ. ಆದರೆ 20ನೇ ಶತಮಾನದ ಮಧ್ಯ ಭಾಗದಲ್ಲಿ ಭಾಷಾವಿಜ್ಞಾನ ಚೆನ್ನಾಗಿಯೆ ಬೆಳೆಯಿತು. ಅಲ್ಲಿಂದ ನೋಮ್ ಚಾಮ್ಸ್‌ಕಿಯವರ ಬರಹಗಳಿಂದಾಗಿ ಭಾಷಾವಿಜ್ಞಾನದಲ್ಲಿ ಆಮೂಲಾಗ್ರ ಬದಲಾವಣೆ ಆಯಿತು. ಆಯಾ ಭಾಷೆಗಳಿಗೆ ಆಯಾ ಭಾಷೆಗಳನ್ನೇ ಆಧರಿಸಿ ವ್ಯಾಕರಣ ಬರೆಯುವ ಆವಶ್ಯಕತೆಯನ್ನು ವಿದ್ವಾಂಸರು ಕಂಡುಕೊಂಡರು. ಹದಿನೆಂಟನೇ ಶತಮಾನದಲ್ಲಿಯೆ ಪತ್ತೆಯಾಗಿದ್ದರೂ ಮತ್ತೊಂದು ಶತಮಾನದ ನಂತರ ಪಾಣಿನಿಯ ವ್ಯಾಕರಣ ಇವರಿಗೆ ಪ್ರಮುಖ ಮಾದರಿಯಾಯಿತು. ಈತನಷ್ಟು ಪರಿಪೂರ್ಣ ವೈಯ್ಯಾಕರಣಿ ವಿಶ್ವದಲ್ಲಿ ಮತ್ತೊಬ್ಬನಿಲ್ಲ ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ. ಪಾಣಿನಿಯ ವ್ಯಾಕರಣ ಯಾವುದೇ ಸಿದ್ದಾಂತದ ಮೇಲೆ ರಚಿತವಾಗಿಲ್ಲ. ಅದು ಭಾಷೆ ಹೇಗೆ ವರ್ತಿಸುತ್ತದೆ ಎನ್ನುವುದರ ಸೂಕ್ಷ್ಮಾವಲೋಕನದ ಮೇಲೆ ರಚಿತವಾಗಿದೆ ಎನ್ನುವ ಅಂಶ ವಿಶ್ವ ಭಾಷಾವಿಜ್ಞಾನಿಗಳಿಗೆ ಕಣ್ಣು ತೆರೆಸುವ ಹೊಸ ಸಂಶೋಧನೆಗೆಯ ಸಾಧನವಾಯಿತು. ಇದನ್ನೇ ಅವರು ಅನುಸರಿಸಿದರು. ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್, ಡೇವಿಡ್ ಕ್ರಿಸ್ಟಲ್ ಇತ್ಯಾದಿಯವರು ಇದನ್ನು ಇಂಗ್ಲಿಷ್ ಭಾಷೆಯ ರಚನೆ ಮತ್ತು ಅದು ಬಳಕೆಯಾಗುತ್ತಿರುವ ಮತ್ತು ವರ್ತಿಸುವ ರೀತಿಗಳನ್ನು ವಿವರವಾಗಿ ಪರೀಕ್ಷಿಸುವುದರ ಮೂಲಕ ಹೊಸ ವ್ಯಾಕರಣವನ್ನು ರಚಿಸಿ ತೋರಿಸಿದರು. ವಿವರಣಾತ್ಮಕ (Descriptive) ವ್ಯಾಕರಣ ಅಸ್ತಿತ್ವಕ್ಕೆ ಬಂದಿತು. ವ್ಯಾಕರಣ ರಚಿಸಲು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೇಗೆ ವರ್ತಿಸುತ್ತವೆ ಎನ್ನುವುದು ಇವರಿಗೆ ಅಪ್ರಸ್ತುತವಾಯಿತು. ಇದರಿಂದಾಗಿ ಇಂಗ್ಲಿಷ್ ಭಾಷೆಯ ‘ಬೈಬಲ್’ ಎಂದೇ ಹೆಸರುವಾಸಿಯಾಗಿದ್ದ ಸಲಹಾತ್ಮಕ (ಪ್ರಿಸ್ಕ್ರಿಪ್ಟಿವ್) (prescriptive) ವೈಯ್ಯಾಕರಣಿಗಳಾದ ರೆನ್ ಅಂಡ್ ಮಾರ್ಟಿನ್ ನಿವೃತ್ತರಾಗಿ ಕಸದ ಬುಟ್ಟಿ ಸೇರಿದರು. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಒಂದು ವಿಧದಲ್ಲಿ ಪಾಣಿನಿಯೂ ಇದಕ್ಕೆ ಪರೋಕ್ಷವಾಗಿ ಕಾರಣಕರ್ತ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಸಂಸ್ಕೃತ ಆಧಾರಿತ ಕನ್ನಡ ವ್ಯಾಕರಣಗಳನ್ನು ಈಗ ಯಾರು ಅನುಸರಿಸುತ್ತಿದ್ದಾರೆ? ತೀನಂಶ್ರೀ ಅವರ ‘ಕನ್ನಡ ವ್ಯಾಕರಣ’ ಈಗ ಯಾರು ಬಳಸುತ್ತಿದ್ದಾರೆ? ಡಿ ಎನ್ ಶಂಕರ ಭಟ್ ಅವರ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಬಂದಾಗ ಭೈರಪ್ಪನವರು ಏಕೆ ಇದನ್ನು ತಿರಸ್ಕರಿಸಬೇಕು ಎಂದು ಹೇಳಲಿಲ್ಲ? ನಮಗೆ ಗೊತ್ತಿರುವಂತೆ ಭಟ್ ಅವರು ಗಮನಿಸಬಹುದಾದಂಥ ಉತ್ತಮ ಭಾಷಾವಿಜ್ಞಾನಿಗಳು. ಆದುದರಿಂದ ಅವರು ಈ ರೀತಿ ವ್ಯಾಕರಣ ಬರೆಯಲು ಕಾರಣವೇನು ಎನ್ನುವುದನ್ನು ನೋಡಬೇಕು. ಸರಿ ಎನಿಸದಿದ್ದರೆ ಅವರು ಚರ್ಚಿಸುತ್ತಿರುವ ಭಾಷಾವಿಜ್ಞಾನದ ನೆಲೆಯಿಂದಲೇ ಅದನ್ನು ಏಕೆ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅದರ ಬದಲು ಭೈರಪ್ಪನವರು:
“ನಿಮ್ಮ ಸಂಸ್ಕೃತ ವ್ಯಾಕರಣ ನಿಯಮಗಳನ್ನು ನಾವು ಯಾಕೆ ಅನುಸರಿಸಬೇಕು? ನಮಗೆ ಇಷ್ಟ ಬಂದಂತೆ ನಾವು ಬಳಸುತ್ತೇವೆ; ಎಂಬ ಉಡಾಫೆಯನ್ನು ಎಷ್ಟೋ ಜನ ವೀರ ಕನ್ನಡ ಭಕ್ತರು ಹೊಡೆಯುತ್ತಾರೆ.”
ಎನ್ನುತ್ತಾರೆ. ಯಾಕೆ ಅನುಸರಿಸಬೇಕು ಎನ್ನುವುದನ್ನು ಮಾತ್ರ ಅವರ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ. ಈ ವಾಕ್ಯದ ಭಾಷೆ ಮತ್ತು ಧ್ವನಿಗಳು, ಭೈರಪ್ಪನವರಂಥ ವಿದ್ವಾಂಸರ ಘನತೆಗೆ ತಕ್ಕುದಾದುದು ಎನಿಸುವುದಿಲ್ಲ. ಇದು ಪೂರ್ವಾಗ್ರಹ ಪೀಡಿತ ಸಿನಿಕತನದ ತೀರ್ಮಾನ ಎನಿಸುತ್ತದೆ. ಕಾದಂಬರಿಕಾರರು ಭಾಷಾವಿಜ್ಞಾನದ ಬಗ್ಗೆ ಬರೆಯುವಾಗ ಅದೊಂದು ವಿಶಾಲವಾಗಿ ಬೆಳೆದಿರುವ ವಿಷಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಶಂಕರ ಭಟ್ ಅವರು ತಮ್ಮ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಕೃತಿಗೆ ಪೀಠಿಕೆ ಬರೆಯುತ್ತ:
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದು ದರಿಂದಾಗಿ ಕನ್ನಡ ವಯ್ಯಾಕರಣಿಗಳು ಕನ್ನಡದ ವ್ಯಾಕರಣ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳುವಲ್ಲಿ ಅಸಮರ್ಥರಾಗಿದ್ದಾರೆ ಎಂಬುದನ್ನು ನಿದರ್ಶನಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶ.” (ಪು 23)
ಎಂದು ಬರೆಯುತ್ತಾರೆ. (ಇದಕ್ಕೆ ಕರ್ನಾಟಕ ಸಾಹಿತ್ಯ ಅಕೆಡೆಮಿ ಬಹುಮಾನ ಬಂದಾಗ ನಾನೂ ಆ ಸಮಿತಿಯ ಸದಸ್ಯನಾಗಿ ಅದನ್ನು ಅನುಮೋದಿಸಿ ನಾನೆ ವಾದ ಮಂಡಿಸಿದ್ದೆ.) ಇವರು ಕೊಟ್ಟಿರುವ ನಿದರ್ಶನಗಳನ್ನು ಭೈರಪ್ಪನವರು ಈಗ, ಅಲ್ಲಗಳೆದು ತೋರಿಸಬೇಕಾಗುತ್ತದೆ. ಆದರೆ ಅವರ ಸುದೀರ್ಘ ಲೇಖನದಲ್ಲಿ ಸಿದ್ಧಾಂತ ಅಥವಾ/ ಮತ್ತು ತರ್ಕಗಳಿಗೆ ಸ್ಥಾನವಿಲ್ಲ. ಬರೆದಿರುವ ಕೇವಲ ಹೇಳಿಕೆಗಳು ಇವೆ. ಆದುದರಿಂದ ಕನ್ನಡದಲ್ಲಿ ಸಂಸ್ಕೃತ ಭಾಷೆಯನ್ನಾಧರಿಸಿ ಬರೆದ ವ್ಯಾಕರಣ ಹಳಸಿಹೋಗಿರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಭೈರಪ್ಪನವರು ತಮ್ಮ ಲೇಖನವನ್ನು ಅಚ್ಚಿಗೆ ಕಳುಹಿಸುವುದಕ್ಕೆ ಮುಂಚೆ ಗಮನಿಸಬೇಕಿತ್ತು. ಯಾವುದೋ ಎರಡು ಭಾಷೆಗಳನ್ನು ಏಕರೀತಿಯಲ್ಲಿ ನೋಡುವುದು ಮತ್ತು ಶಾಸ್ತ್ರೀಯ ಭಾಷೆ ಎಂದು ಸಂಸ್ಕೃತವನ್ನು ಆರಾಧಿಸುವುದು ಸನಾತನ ಪದ್ಧತಿ. ಆದರೆ ಭೈರಪ್ಪನವರ ಲೇಖನದಲ್ಲಿ ಅದೇ ಪ್ರಮುಖ ಅಂಶ. ವಿವಿಯ ಪರ ಬರೆಯುತ್ತಿರುವವರಲ್ಲಿ ಅನೇಕರು ಸಂಸ್ಕೃತದ ಸನಾತನ ಚರಿತ್ರೆಯನ್ನು ವೈಭವೀಕರಿಸುವದೇ ವಿವಿಯನ್ನು ಸ್ಥಾಪಿಸಲು ಪ್ರಮುಖ ಕಾರಣವಾಗಿಟ್ಟುಕೊಂಡು ಬರೆದಿದ್ದಾರೆ. ಒಂದು ಭಾಷೆಯ ಪ್ರಭಾವವನ್ನು ಮತ್ತೊಂದು ಭಾಷೆಯ ಮೇಲೆ ಗುರುತಿಸಬಹುದು. ಸಂಸ್ಕೃತ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಶತಮಾನಗಳ ಬಳಕೆಯಿಂದ ಈ ಭಾಷೆಗಳು ತಮ್ಮದೇ ಆದ ಅಸ್ತಿತ್ವವನ್ನು ಪಡೆದುಕೊಂಡಿವೆ. ಅಂದರೆ ಎಲ್ಲ ಭಾಷೆಗಳನ್ನೂ ಅಯಾ ಭಾಷೆಗಳ ರಚನೆ, ಶಬ್ದವಿನ್ಯಾಸ, ಪದವಿನ್ಯಾಸ, ಪದಗಳ ಜೋಡಣೆ, ಅರ್ಥ ಮತ್ತು ಅವುಗಳು ಬಳಕೆಯಾಗುವ ರೀತಿ, ಇತ್ಯಾದಿಗಳನ್ನು ಗಮನಿಸಿಯೆ ವ್ಯಾಕರಣ ರಚಿಸಬೇಕಾಗುತ್ತದೆ; ರಚಿಸಲಾಗಿದೆ. ಉದಾಹರಣೆಗೆ ಈಗ ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್ ವ್ಯಾಕರಣಗಳನ್ನು ನೋಡಬಹುದು. ಈ ವಿಚಾರದಲ್ಲಿ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ದೂರ ಸರಿದಿದ್ದಾರೆ. ಇದರ ಜೊತೆಗೆ ಸಂಸ್ಕೃತದಿಂದ ದಿನದಿಂದ ದಿನಕೆ ದೂರ ಹೋಗುತ್ತಿರುವ ತಮಿಳು ಭಾಷೆಯ ಬಗ್ಗೆ ಭೈರಪ್ಪನವರು ಚಕಾರವೆತ್ತದಿರುವುದು ಗಮನಾರ್ಹ.
“ಸಂಸ್ಕ್ರೃತವೆಂದರೆ ವೇದ, ವೇದವೆಂದರೆ ನಾವು ವಿರೋಧಿಸಲು ಮಾತ್ರ ಅರ್ಹವಾದದ್ದು, ಎಂಬ ಮನಃಸ್ಥಿತಿಯನ್ನು ಒಂದು ಗುಂಪು ಬಂಡಾಯದ ಕಾಲದಿಂದ ಕನ್ನಡದಲ್ಲಿ ಗದ್ದಲ ಮಾಡುತ್ತಾ ಸೆಮಿನಾರುಗಳಲ್ಲಿ ಭಾಷಣಗಳಲ್ಲಿ ಅನಂತರ ಕ್ರಮೇಣವಾಗಿ ಶಾಲಾ ಕಾಲೇಜುಗಳ ಪ್ರವಚನಗಳಲ್ಲೂ ಸೇರಿಕೊಂಡು ವಿಷಬೀಜವನ್ನು ಬಿತ್ತುತ್ತಾ ಬೆಳೆದಿದೆ.”
ನಮ್ಮ ನಾಗರಿಕತೆಯಲ್ಲಿ “ವಿಷಬೀಜವನ್ನು ಬಿತ್ತುತ್ತಾ” ಸಮುದಾಯಗಳ ಬದುಕನ್ನೆ ಕತ್ತು ಹಿಸುಕಿ ಕೊಂದವರಾರು ಎನ್ನುವುದನ್ನು ಚರಿತ್ರೆಯ ಕಡೆ ಮುಖ ಮಾಡಿ ನೋಡಿದರೆ ಕೆಲವು ಕ್ರೂರವಾದ ಮತ್ತು ಅಮಾನುಷ ಎನಿಸುವ ಸತ್ಯಗಳನ್ನು ಎದುರಿಸಬೇಕಾಗಬಹುದು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಚರಿತ್ರೆಯಲ್ಲಿ ಎಂದೂ ದೇವ ಭಾಷೆಗಳೆಂದು ಹಣೆಪಟ್ಟಿ ಕಟ್ಟಿಸಿಕೊಂಡವಲ್ಲ; ಅವುಗಳ ಕಲಿಕೆ ಗುರುಕುಲಾಶ್ರಮಗಳ ಪ್ರವೇಶಕ್ಕೆ ಅರ್ಹರಾದ ಸಮುದಾಯಕ್ಕೆ ಸೇರಿದ ಜನಗಳಿಗೆ ಮಾತ್ರ ಮೀಸಲಾಗಿರಲಿಲ್ಲ. ಬೇರೆಯವರು ಅವನ್ನು ಕಲಿತರೆ ಭಾಷೆಯೇ ಅಪವಿತ್ರವಾಗಿಬಿಡುತ್ತದೆ ಎನ್ನುವ ಅವಿದ್ಯಾವಂತ ಮೂಢನಂಬಿಕೆಯನ್ನು ರೋಮ್ ಮತ್ತು ಗ್ರೀಸ್ ದೇಶದವರು ಎಂದೂ ಎಲ್ಲಿಯೂ ಬಿತ್ತಲಿಲ್ಲ. ಹಿಂದುಳಿದ, ಆಗ ‘ಅಸ್ಪೃಶ್ಯ’ರೆಂದು ಕರೆಯಲ್ಪಟ್ಟ ದಲಿತರು ಆ ಭಾಷೆಗಳಲ್ಲಿರುವ ಸಾಹಿತ್ಯವನ್ನು ಓದುವುದನ್ನು ಕೇಳಿದರೂ ಶಿಕ್ಷಿಸಬೇಕು, ಅವರ ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯಬೇಕು ಎಂದು ಬರೆದು ಯಾರೂ ಸ್ಮೃತಿಗಳನ್ನು ಸೃಷ್ಟಿಸಲಿಲ್ಲ. ಸಂಸ್ಕೃತವನ್ನು ಈ ರೀತಿಯ ಹಿಂಸೆಗೆ ಒಳಪಡಿಸಿ, ಅದನ್ನು ಒಂದು ಸಮುದಾಯದ ಗೃಹ ಬಂಧನದಲ್ಲಿಟ್ಟು, ಉಸಿರು ಕಟ್ಟಿಸಿ ಸಾಂಸ್ಕೃತಿಕವಾಗಿ ಜೀವ ಹಿಂಡಿ ವಿಷಹಾಕಿದವರು ಇವರಲ್ಲವೆ? ಅತ್ಯಂತ ಸಮೃದ್ಧವಾಗಿ ಬೆಳೆದಿದ್ದ ಆ ಭಾಷೆಗೆ “ಮೃತ ಭಾಷೆ” ಎನ್ನುವ ಹಣೆಪಟ್ಟಿ ಬರಲು ಕಾರಣರು ಇವರೆ ಅಲ್ಲವೆ!? ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಂತೆ ದೇಶದ ಎಲ್ಲ ಪ್ರಜೆಗಳಿಗೂ ಇದನ್ನು ಕಲಿಸಿದ್ದರೆ ಬಹುಶಃ ಸಂಸ್ಕೃತ ಈ ದಿನ ಭಾರತದ ದೇಶ ಭಾಷೆಯಾಗಿರಬಹುದಿತ್ತು ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಅದಕ್ಕೆ ಪಾವಿತ್ರತೆಯ ವಿಷ ಹಾಕಿ ಕೊಂದವರಾರು? ಈಗ ಅದಕ್ಕೆ ಒಂದು ವಿವಿಯನ್ನು ಸ್ಥಾಪಿಸಲು ಹೊರಟರೆ ಅದಕ್ಕೆ ಜನಬೆಂಬಲ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತರಾಗಿ ಅವಮರ್ಯಾದೆಯಲ್ಲಿ ಬೆಂದು ಈಗ ಕೇವಲ ಕೆಲವು ದಶಕಗಳಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ಸಮುದಾಯಗಳಿಗೆ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಎಂದಾಗ ಅನುಮಾನ ಹುಟ್ಟುವುದು ಸಹಜವೆ.

ಈಗ ನಮ್ಮ ವಿವಿಗಳಲ್ಲಿ ಸಂಸ್ಕೃತದ ವಿಭಾಗಗಳಿವೆ. ಅದಕ್ಕೆ ಎಷ್ಟುಜನ ನೊಂದಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿ. ಇದಕ್ಕೆ ಭೈರಪ್ಪನವರು ಹೇಳುವುದು:
“ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ, ಕಾಲೇಜಿನಲ್ಲಿ ಬೆಳೆಯಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ ಇರುವುದಕ್ಕೇ ವಿದ್ಯಾರ್ಥಿಗಳಿಲ್ಲವೆಂಬ ಕೂಗುಹಾಕುವ ಹುನ್ನಾರಕ್ಕೆ ಏನನ್ನಬೇಕು?”
ಕೊಲೆ, ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡ ರಾಜಕಾರಣಿಗಳು “ಇದು ವಿರೋಧ ಪಕ್ಷದವರ ರಾಜಕೀಯ ಹುನ್ನಾರ” ಎಂದು ಬೊಬ್ಬೆ ಹಾಕುತ್ತಾರೆ. ಈ ರೀತಿ ವಾಕ್ಯಗಳಿಗೆ ಏನನ್ನಬೇಕು? ರಾಜಕಾರಣಿಗಳಿಗಿಂತ ಭೈರಪ್ಪನವರ ಭಾಷೆ ಭಿನ್ನವೇನಲ್ಲ. ಮೈಸೂರು ವಿವಿಯ ಸಂಸ್ಕೃತ ವಿಭಾಗದಲ್ಲಿ ಹಿಂದಿನ 5 ವರ್ಷಗಳ ನೊಂದಣಿಯನ್ನು ನೋಡಿದರೆ ಯಾವ ವರ್ಷವೂ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿಲ್ಲ. ಕೆಲವರ್ಷ 2-3 ವಿದ್ಯಾರ್ಥಿಗಳು ಸೇರಿರುವುದುಂಟು. ಬೇರೆ ವಿವಿಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಸಂಸ್ಕೃತವನ್ನು ಓದಬೇಡಿ ಎಂದು ವಿದ್ಯಾರ್ಥಿಗಳನ್ನು ತಡೆದಿರುವವರಾರು ಎಂಬುದನ್ನು ಭೈರಪ್ಪನವರು ತಿಳಿಸಬೇಕು. ಆಧಾರವಿಲ್ಲದೆ ಆಪಾದನೆ ಹೊರಿಸುವುದು ವಿದ್ವಾಂಸರಿಗೆ ತಕ್ಕುದಲ್ಲ. ಇರುವ ಒಂದು ವಿಭಾಗಕ್ಕೆ 5 ಜನಕ್ಕಿಂತ ಹೆಚ್ಚು ಬರದಿದ್ದಾಗ ಒಂದು ವಿಶ್ವವಿದ್ಯಾಲಯವನ್ನೆ ಆರಂಭಿಸುವುದು ಎಷ್ಟು ಸೂಕ್ತ? ಇಂಗ್ಲಿಷ್ ದಬ್ಬಾಳಿಕೆಯಿಂದ ಕನ್ನಡ ಈಗ ಮೂಲೆಗುಂಪಾಗುತ್ತಿದೆ. ಆದರೆ ಅದನ್ನು ಇಂಗ್ಲಿಷ್ ಬಲ್ಲವರು ಕನ್ನಡ ಕಲಿಯಬೇಡಿ ಎಂದು ತಡೆಯುವ ಹುನ್ನಾರ ಮಾಡುತ್ತಿದ್ದಾರೆ ಎನ್ನಲಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಆರ್ಥಿಕ ಬದಲಾವಣೆಗಳು, ಸಂವಹನ, ತಂತ್ರಜ್ಞಾನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು ವಿವಿಧ ದೇಶಗಳಲ್ಲಿ ಎಲ್ಲ ಸ್ಥಳೀಯ ಭಾಷೆಗಳನ್ನೂ ತಿನ್ನುತ್ತಿವೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಇತ್ಯಾದಿ ಭಾಷೆಗಳಿಗೆ ಇದನ್ನು ಎದುರಿಸುವ ಆಂತರಿಕ ಶಕ್ತಿ ಇದೆಯೆ? ಈ ಜೀವಂತ ಭಾಷೆಗಳನ್ನು ಆಡುತ್ತಿರುವ ಕೋಟಿಗಟ್ಟಲೆ ಜನರಿಗೆ ಆ ಶಕ್ತಿ ಇದೆಯೆ? ಎನ್ನುವುದನ್ನು ನಾವು ಪರಿಗಣಿಸಬೇಕು. ಜನರೇ ಅದನ್ನು ತೀರ್ಮಾನ ಮಾಡಬೇಕು. ಸಂಸ್ಕೃತ ಇವನ್ನು ರಕ್ಷಿಸುವುದಿಲ್ಲ.

ಕರ್ನಾಟಕದಲ್ಲಿ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ತೆರೆಯಬೇಕೆ ಬೇಡವೆ ಎನ್ನುವುದರ ಬಗ್ಗೆ ಕರ್ನಾಟಕದಾದ್ಯಂತ ಈಗ ವಾದವಿವಾದಗಳು ಎದ್ದಿವೆ. ಸರ್ಕಾರವಂತೂ ಈಗಾಗಲೇ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿ ವಿವಿಯನ್ನು ಆರಂಭಿಸಲು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಹಿಂದಿನ ಕಾರಣವಾದಿ ಚಿಂತನೆ ಏನು ಎನ್ನುವುದು ಕರ್ನಾಟಕದ ಜನತೆಗೆ, ಚಿಂತಕರಿಗೆ ಸ್ಪಷ್ಟವಾಗಿಲ್ಲ. ಇದರ ಪರವಾಗಿ ವಾದಮಾಡುವ ಚಿಂತಕರು ಸಂಸ್ಕೃತ ಭಾಷೆಯ ಪುರಾತನತೆಯನ್ನು ಮುಂದಿಟ್ಟುಕೊಂಡು ಅದನ್ನು ವೈಭವೀಕರಿಸಿ ಭಾವುಕತನದಿಂದ ವಾದವನ್ನು ಮುಂದಿಟ್ಟಿದ್ದಾರೆ. ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ:
" ‘ಇನ್ನು ಮುಂದೆ ಸಂಸ್ಕೃತದ ಎಲ್ಲ ಸತ್ವವನ್ನೂ ಕನ್ನಡಕ್ಕೆ ಕಂಡುಕೊಳ್ಳಬೇಕು. ಆದ್ದರಿಂದ ಸಂಸ್ಕೃತದ ಸಾರವನ್ನೆಲ್ಲ ಕನ್ನಡದ ಮೂಲಕ ಪ್ರಚಾರ ಮಾಡಬೇಕು. ಸಾಹಿತ್ಯ ಭಾಗ, ಶಾಸ್ತ್ರಭಾಗ - ಈ ಎರಡೂ ಕ್ಷೇತ್ರಗಳ ಉನ್ನತ ಗ್ರಂಥಗಳೆಲ್ಲವನ್ನೂ ಕನ್ನಡಕ್ಕೆ ತಂದು ಅವುಗಳ ಉಪಯೋಗವನ್ನು ಪಡೆಯಬೇಕು. ಕನ್ನಡ ಮಾತಿನಲ್ಲಿ ಸಂಸ್ಕೃತ ಹಿರಿಮೆಯನ್ನು ಸಾಧಿಸಬೇಕು.’ ಈ ಅಭಿಪ್ರಾಯವು ನಿಜವಾಗಿ ಅನುವಾದ ಕಾರ್ಯ ಸಾಹಿತ್ಯ ಭಾಗದಲ್ಲಿ ಸ್ವಲ್ಪ ನಡೆಯಬೇಕು. ಆದರೆ ಶಾಸ್ತ್ರ ಭಾಗದಲ್ಲಿ ಏನೇನೂ ಆಗಲಿಲ್ಲ."
ಎನ್ನುವುದು ಪ್ರೊ ಜಿ ವೆಂಕಟಸುಬ್ಬಯ್ಯನವರ ಅಭಿಪ್ರಾಯ. (ವಿಕ, 17.08.2009) ಆದರೆ ಈ ಶಾಸ್ತ್ರಭಾಗದಲ್ಲಿ ಸಮಕಾಲೀನ ಕನ್ನಡ ಜನತೆಗೆ ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳು, ಭಾರತದ ಸಂವಿಧಾನದ ಮೌಲ್ಯಗಳು ಹೇಗೆ ಗಟ್ಟಿಯಾಗಲು ಸಾಧ್ಯ ಎನ್ನುವುದನ್ನು ಹೇಳುವುದಿಲ್ಲ. ನಾವಿರುವುದು ವೇದಗಳು ಮತ್ತು ಸ್ಮೃತಿಗಳು ಬರೆದ ಊಳಿಗಮಾನ್ಯ ಪದ್ಧತಿಯ ಕಾಲವಲ್ಲ. ಆಗ ಶೋಷಣೆಯೆ ನಮ್ಮ ಸಂಸ್ಕೃತಿಯಾಗಿತ್ತು.
“ಜ್ಞಾನಾರ್ಜನೆ ಪ್ರಸ್ತುತ ಕಾಲದ ಲಾಭ ದೃಷ್ಟಿಯಿಂದ ಮಾತ್ರವೇ ಮಾಡುವಂಥದಲ್ಲ. ಸಂಸ್ಕೃತದಂಥ ವಿಶ್ವಮರ್ಯಾದಿತ ಪ್ರಾಚೀನ ಭಾಷೆ ಮತ್ತು ಅದರ ಮೂಲಕ ಸೃಷ್ಟಿಯಾದ ಜ್ಞಾನ ಈ ದೇಶದ ಅಮೂಲ್ಯ ಆಸ್ತಿ.”
ಎನ್ನುವ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು (ವಿಕ, 25.08.2009) ಈ ಸ್ಮೃತಿಗಳು ಸೃಷ್ಟಿಸಿದ ಕ್ರೂರ ಅಮಾನವೀಯ ಭಯಾನಕ “ಶಾಸ್ತ್ರಭಾಗ”ದ ವ್ಯವಸ್ಥೆಯನ್ನು ನಮ್ಮ “ಆಸ್ತಿ” ಎಂದು 21ನೇ ಶತಮಾನದಲ್ಲಿ ಹೇಳುವುದಾದರೆ, ವಿಶ್ವವಿದ್ಯಾಲಯವನ್ನು ಇವರು ಏತಕ್ಕಾಗಿ ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ಮುಂದೆ ಮತ್ತೆ ಚರ್ಚಿಸುತ್ತೇನೆ.

ಈ “ಅಮೂಲ್ಯ ಆಸ್ತಿ”ಯನ್ನು ಓದಿದವರಿಗೆ ಭಾರತದ 90% ಜನಜೀವನದ ಚಿತ್ರ ಸಿಗುವುದೇ ಇಲ್ಲ. ಬೆಸ್ತರು, ಗಾಣಿಗರು, ಕುಂಚಿಟಿಗರು, ಕುರುಬರು, ಬುಡುಬುಡುಕೆಯವರು, ಹೊಲೆಯ, ಮಾದಿಗ, ಚಂಡಾಲ ಎನಿಸಿಕೊಂಡ ದಲಿತರು ಇತ್ಯಾದಿ ಜನರ ಬದುಕಿನ ದುರಂತದ ಚಿತ್ರ ಯಾವ ಸಂಸ್ಕೃತ ಕೃತಿಯಲ್ಲಿ ರೂಪಿತವಾಗಿದೆ ಎನ್ನುವುದನ್ನು ಭಟ್ಟರು ತೋರಿಸ ಬಲ್ಲರೆ? ಆದರೂ ಅದು ಅವರಿಗೆ “ಅಮೂಲ್ಯ ಆಸ್ತಿ”! ಇದು ಪ್ರತಿಗಾಮಿ ಧೋರಣೆ. ಕೇಂದ್ರದಲ್ಲಿ ಬಿಜೆಪಿ ನಾಯಕತ್ವದಲ್ಲಿ ಆಡಳಿತದಲ್ಲಿದ್ದ ಎನ್‌ಡಿಎ ಸರ್ಕಾರ ಸಹ ಎನ್‌ಸಿಇಆರ್‌ಟಿಯ ಮೂಲಕ ಸಂಸ್ಕೃತ ಕಲಿಕೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕೆಂದು ಯೋಚನೆ ಮಾಡಿತ್ತು. ಈ ವೇದ ಉಪನಿಷತ್ತುಗಳಲ್ಲಿರುವ ಅಥವಾ ಮಹಾಕಾವ್ಯಗಳಲ್ಲಿರುವ ಹಲವಾರು ಸತ್ಯಗಳನ್ನು ಇವರ ಚರಿತ್ರೆ ಪುಸ್ತಕಗಳಲ್ಲಿ ತಿರುಚಿ ಬರೆಯಲಾಯಿತು ಎನ್ನುವುದನ್ನು ಮರೆಯಲು ಸಾಧ್ಯವೇ? ಸಂಸ್ಕೃತ ವೇದ ವಿಶ್ವ ವಿದ್ಯಾಲಯದಲ್ಲಿ ಹೀಗಾಗುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ?

ಹೀಗಿದ್ದರೂ ಡಾ ಬಿ ವಿ ಕುಮಾರ ಸ್ವಾಮಿಯವರ (ವಿಕ, 22.08.2009) ಅನಿಸಿಕೆ :
“ಈ ಭಾಷೆಯಲಿ ರಚಿತವಾಗಿರುವ ಸಾಹಿತ್ಯಗಳು ಭಾರತದ ಇತಿಹಾಸದಲ್ಲಿ ಮಾನವ ಬೌದ್ದಿಕ ಸುವರ್ಣಯುಗವನ್ನು ಸೃಷ್ಟಿಸಿದವು ಎನ್ನುವುದು ಜಗತ್ತೇ ತಿಳಿದಿರುವ ವಿಷಯ. ಈ ಸಂಸ್ಕೃತ ‘ರಸಸಾರ’ದಿಂದ ವಂಚಿತರಾಗಿರುವ ಜನರ ಇಂದಿನ ಸಮಾಜ ಸೃಷ್ಟಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಚಿಂತಕರ-ಶಿಕ್ಷಣ ತಜ್ಞರ ಗುರಿಯಾಗಿತ್ತು.”
ನಿಜವಿರಬಹುದು. ಆದರೆ ಈ ‘ರಸಸಾರ’ವನ್ನು ಭಾರತದ ಶೇಕಡ ಎಷ್ಟು ಜನ ವಿದ್ಯಾರ್ಥಿಗಳಿಗೆ ಇವರು ಉಣಬಡಿಸಿದರು ಎನ್ನುವುದು ಮುಖ್ಯವಲ್ಲವೆ? ತಮ್ಮ ಜನಗಳನ್ನು ತಾವೇ ಪ್ರಾಣಿಗಳಂತೆ ನಡೆಸಿಕೊಂಡ ಇವರು ಬ್ರಿಟಿಷರನ್ನು ದೋಷಿಗಳನ್ನಾಗಿ ಮಾಡುವ ಅವಶ್ಯಕತೆ ಏನು? ಇವರ ಇನ್ನೊಂದು ವಾಕ್ಯ...
“ಮೌರ್ಯ ಸಾಮ್ರಾಜ್ಯದಲ್ಲಿ ನಳಂದ, ವಿಶ್ವವಿದ್ಯಾಲಯ ಸ್ಥಾಪಿಸಿ ಜಗತ್ತನ್ನೇ ಆಕರ್ಶೀಸಿತಂತೆ..”
ಅದೂ ನಿಜವೆ. ಆದರೆ ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಕೋರಿ ಬರುತ್ತಿದ್ದ 10 ಜನರಲ್ಲಿ 8 ಜನ ವಿದ್ಯಾರ್ಥಿಗಳನ್ನು ದ್ವಾರ ಪಂಡಿತರುಗಳು ಪ್ರವೇಶವೇ ಕೊಡದಂತೆ ಅಲ್ಲಿಂದಲೇ ಹಿಂದಕ್ಕೆ ಕಳುಹಿಸುತ್ತಿದ್ದರಂತೆ! ಹೀಗೆ ಹಿಂದಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಯಾರು? ಈ ಬಗ್ಗೆ ಸಂಶೋಧನೆ ನಡೆದಿದೆಯೆ? 3೦೦೦-4೦೦೦ ವರ್ಷಗಳಿಂದ ಭಾರತದ ಎಲ್ಲ ಮಕ್ಕಳಿಗೂ ಈ ‘ರಸಸಾರ’ ಸಿಕ್ಕಿದ್ದರೆ, ಈ ದಿನ 2೦ ಮಿಲಿಯನ್ ಮಕ್ಕಳು ಬೀದಿಯಲ್ಲಿರುತ್ತಿರಲಿಲ್ಲ; ಅಂಬೇಡ್ಕರ್ ಅವರು ಮೀಸಲು ಕೇಳುತ್ತಿರಲಿಲ್ಲ; ಮಂಡಲ್ ಉದಯವಾಗುತ್ತಿರಲಿಲ್ಲ. ಈ ಜನ ಸಂಸ್ಕೃತ ವಿವಿಗೆ ಹೇಗೆ ಬೆಂಬಲಕೊಡುತ್ತಾರೆ? ಯಾವ ಕಾರಣಕ್ಕಾಗಿ ಕೊಡಬೇಕು? ಇದುವರೆಗೂ ಇಲ್ಲದ ಸಂಸ್ಕೃತ ವೇದ ವಿಶ್ವ ವಿದ್ಯಾಲಯದ ಪ್ರಸ್ತಾವನೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ಏಕೆ ಆಗುತ್ತದೆ? ಲಕ್ಷ್ಮೀನಾರಾಯಣ ಭಟ್ಟರು, ಸತ್ಯನಾರಾಯಣ ಭಟ್ಟರು, ಕೊಕ್ಕಡ ವೆಂಕಟರಮಣ ಭಟ್, ಎಲ್ ಶೇಷಗಿರಿ ರಾವ್ ಅವರು, ಎಂ ಚಿದಾನಂದ ಮೂರ್ತಿಯವರು, ಭೈರಪ್ಪನವರು ಏಕೆ ಈ ಸಮಯದಲ್ಲೇ ಸಂಸ್ಕೃತ ವಿವಿಗೆ ಬೆಂಬಲ ಕೊಟ್ಟು ದ್ವನಿ ಎತ್ತಿದ್ದಾರೆ ಎನ್ನುವುದು ಅತ್ಯಂತ ಗಮನಾರ್ಹ.

ಭಾರತದಲ್ಲಿ ಈಗ 12 ಸಂಸ್ಕೃತ ವಿವಿಗಳಿವೆ. ಅವುಗಳಲ್ಲಿ ನಡೆಯುತ್ತಿರುವ ಸಂಶೋಧನೆ ಕಾರ್ಯಕ್ರಮಗಳನ್ನು ಬಲಪಡಿಸಲಿ. ನಮ್ಮ ವಿವಿಗಳಲ್ಲಿರುವ ಸಂಸ್ಕೃತದ ವಿಭಾಗಗಳಿಗೆ ಮತ್ತು ಮೈಸೂರಿನ ‘ಸಂಸ್ಕೃತ ಪಾಠಶಾಲೆ’, ಶೃಂಗೇರಿ ‘ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ’, ಉಡುಪಿ ‘ಪೂರ್ಣಪ್ರಜ್ಞ ವಿದ್ಯಾಪೀಠ’, ಬೆಂಗಳೂರಿನ ‘ಸಂಸ್ಕೃತ ಕಾಲೇಜು’, ಮೇಲುಕೋಟೆ ಇತ್ಯಾದಿ ಸಂಸ್ಥೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಆಧುನೀಕರಣಗೊಳಿಸಿ. ಅದರ ಪ್ರಾಚಾರ್ಯರು, ಪ್ರಾಧ್ಯಾಪಕರುಗಳಿಗೆ ಯುಜಿಸಿ ವೇತನಗಳನ್ನು ಕೊಡಿ. ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರೋತ್ಸಾಹವಾಗುವಂತೆ ಆರ್ಥಿಕ ನೆರವನ್ನು ಘೋಷಿಸಿ. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ಆವಶ್ಯಕತೆ ಈಗ ಇಲ್ಲ.

ಭೈರಪ್ಪನವರು ವಾದವಿವಾದಗಳನ್ನು ಕೊನೆಗಳಿಸುತ್ತ ‘ವಿವೇಕಯುಕ್ತ ಕೆಲಸವನ್ನು ಆರಂಭಿಸುವುದೇ ಒಳ್ಳೆಯದು’ (ವಿಕ, 06.09.2009) ಎನ್ನುವ ಲೇಖನದಲ್ಲಿ ಹಲವಾರು ವಿದ್ಯಾಂಸರು ಎತ್ತಿರುವ ಯಾವುದೇ ವಿರೋಧವನ್ನು ಎದುರಿಸದೆ ಸಿನಿಕತನದಲ್ಲಿ ಮತ್ತೆ ತಮ್ಮ ತೀರ್ಮಾನಗಳನ್ನು ಕೊಟ್ಟಿದ್ದಾರೆ. ಅಷ್ಟೇಅಲ್ಲ ಲೇಖನದಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. “ಬೇಡವೇ ಬೇಡವೆಂದೂ ಮೂವರು ವಾದಿಸಿದ್ದಾರೆ.” ಇವರ ಪ್ರಕಾರ ಇದು “ಅವರಲ್ಲಿ ನೂರಕ್ಕೆ ತೊಂಬತ್ತೈದು ಭಾಗ ಸಂಸ್ಕೃತ ವಿಶ್ವವಿದ್ಯಾಲಯವು ಬೇಕೆಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದಾರೆ.” ವಿಜಯ ಕರ್ನಾಟಕದಲ್ಲಿ ಬಂದ ಲೇಖನಗಳಲ್ಲಿ 7 ಜನ ಬೇಡವೆಂದಿದ್ದಾರೆ, 15 ಜನ ಬೇಕೆಂದಿದ್ದಾರೆ (73%.) ಇದು “ಮೂವರು” ಹೇಗಾಯಿತು? ಮತ್ತು ಇದು “ನೂರಕ್ಕೆ ತೊಂಬತ್ತೈದು ಭಾಗ” ಹೇಗಾಯಿತು? ಮಾರ್ಕ್ಸ್‌ವಾದಿಗಳನ್ನು ಮತ್ತು ಪ್ರಗತಿಪರರನ್ನು ಮನಸೋಇಚ್ಚೆ ಪೂರ್ವಾಗ್ರಹ ಪೀಡನೆಯಿಂದ ತೆಗಳುವುದು ಬಿಟ್ಟರೆ ಈ ಲೇಖನದಲ್ಲೂ ಯಾವುದೇ ಹುರುಳಿಲ್ಲ. ತರ್ಕಕ್ಕೂ ತಮಗೂ ಇರುವ ದೂರವನ್ನು ಹಾಗೆ ಉಳಿಸಿಕೊಂಡಿದ್ದಾರೆ. ವೈದಿಕ ಧರ್ಮವನ್ನು ಒರಟು ಒರಟಾಗಿ ವೈಭವೀಕರಿಸುತ್ತಿರುವ ಇವರಿಗೆ ಸಂಸ್ಕೃತ ವಿಶ್ವವಿದ್ಯಾಲಯವು ಬೇಕು ಎನ್ನುವುದಕ್ಕೆ ಸಮರ್ಪಕವಾದ ವಾದವೊಂದನ್ನು ಮಂಡಿಸಲು ಸಾಧ್ಯವಾಗಿಲ್ಲ ಎನ್ನುವುದು ಆಶ್ಚರ್ಯವೇನಲ್ಲ. ಬೈರಪ್ಪನವರನ್ನು ಈ ಚರ್ಚೆಯಲ್ಲಿ ಪ್ರೈಮ್ ಮೂವರ್ ಆಗಿ ಬಳಸಿಕೊಳ್ಳಲಾಗಿದೆ ಆದರೆ ಇದಕ್ಕೆ ಇಲ್ಲಿ ಪ್ರೈಮ್ ಅಪೋಸರ್ ಇಲ್ಲ. ಇದರ ಪರಿಣಾಮ ಚರ್ಚೆಯ ಕೊನೆಯಲ್ಲಿ ತೀರ್ಮಾನ ಕೊಡುವ ಅಧಿಕಾರ ಭೈರಪ್ಪನವರದಾಗುತ್ತದೆ.

ಮೈಸೂರು ದಸರಾ! ಈಗ ವೆಬ್‍ಸೈಟೂ ಸುಂದರಾ!!


2009ರ ಸಾಲಿನ ಮೈಸೂರು ದಸರ ಹಬ್ಬ ಭರ್ಜರಿಯಾಗಿ ನಡೀತಿದೆ. ಪ್ರವಾಸಿಗರಿಗೆ ಮಾಹಿತಿ ನೀಡಲು, ಅವರನ್ನು ಸೆಳೆಯಲು ಆಧುನಿಕ ತಂತ್ರಜ್ಞಾನವಾದ ಅಂತರ್ಜಾಲವನ್ನು ಈ ಬಾರಿಯೂ ಬಳಸಿದ್ದಾರೆ. ಇಂದು ನಾವೆಲ್ಲಾ ಖುಷಿ ಪಡೋಕೆ ಇರೋ ಕಾರಣ ಏನಪ್ಪಾ ಅಂದ್ರೆ ಈ ಅಂತರ್ಜಾಲ ತಾಣಾನ ರೂಪಿಸಿರೋ ಬಗೆ. ಹೌದೂ ಗುರು! ಈ ಸಲದ ವೆಬ್‍ಸೈಟ್ ಸೂಪರ್ ಆಗಿ ಮೂಡಿಬಂದಿದೆ. ಕಳೆದ ವರ್ಷದ ತಾಣ ನೋಡಿ ಇದು ನಮ್ಮ ದಸರಾ ಅನ್ಸೋ ಹಾಗಿಲ್ಲಾ, ಇಲ್ಯಾಕೆ ಕನ್ನಡಕ್ಕೆ ತಕ್ಕ ಸ್ಥಾನಮಾನ ಇಲ್ಲ. ಇರೋ ಕನ್ನಡದ ಕೊಂಡಿಗಳು ಯಾಕೆ ಕೆಲ್ಸ ಮಾಡ್ತಿಲ್ಲಾ ಅಂತ ಏನ್‍ಗುರೂನಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದುಕ್ಕೆ ಅದ್ಭುತವಾಗಿ ಸ್ಪಂದಿಸಿದ್ದ ಕನ್ನಡದ ಜನರನೇಕರು ಸದರಿ ಅಂತರ್ಜಾಲ ತಾಣ ರೂಪಿಸಿದವರಿಗೆ ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಸರಿಯಾಗಿ ಕನ್ನಡದಲ್ಲಿ ರೂಪಿಸಲು ಸಹಾಯಾನೂ ನೀಡಿದ್ರು. ನಿಮ್ಮೆಲ್ಲರ ಶ್ರಮದ ಫಲವಾಗಿ ಇಂದು ಈ ಬದಲಾವಣೆಯನ್ನು ಕಾಣ್ತಿದೀವಿ ಗುರು!

ಈ ತಾಣದಲ್ಲೇನಿದೆ?

ಈ ತಾಣದ ಡಿ-ಫಾಲ್ಟ್ ಭಾಷೆ ಕನ್ನಡ. ಮುಖಪುಟದಲ್ಲೇ ಬೇಕೆಂದವರಿಗೆ ಇಂಗ್ಲೀಷಿನ ಆಯ್ಕೆಯ ಅವಕಾಶವಿದೆ. ಈ ತಾಣದಲ್ಲಿ ಕನ್ನಡದಲ್ಲಿ ಬರೆದಿರೋ ಮಾಹಿತಿಗಳು ಕೂಡಾ ಉತ್ತಮವಾಗಿದೆ. ಎಲ್ಲಾ ಲಿಂಕುಗಳು ಕೆಲಸ ಮಾಡ್ತಿವೆ. ಈ ಬಾರಿ ಕಳೆದ ವರ್ಷ ಕಂಡಿದ್ದ ಬಹುಪಾಲು ತೊಂದರೆ-ಕೊರತೆಗಳನ್ನೂ ಸರಿಪಡಿಸಿದೆ ಗುರು. ನಿಜವಾಗ್ಲೂ ಮೈಸೂರು ದಸರಾ ಅಂತರ್ಜಾಲ ತಾಣ ಹುಡ್ಕೋರಿಗೆ ಇದು ಕನ್ನಡಿಗರ ನಾಡಹಬ್ಬ, ಇದರಲ್ಲಿ ವಿಶೇಷವಿದೆ, ವೈಭವವಿದೆ, ಸೊಗಡಿದೆ ಅನ್ನಿಸೋ ಹಾಗೆ ಇಡೀ ತಾಣವನ್ನು ರೂಪಿಸಲಾಗಿದೆ. ಅಷ್ಟೇ ಅಲ್ಲದೆ ಈ ಬಾರಿ ದಸರೆಯ ಮಹಿಮೆ ಮತ್ತು ಸೊಬಗುಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ನಿಲ್ಲಿಸಿ ಅಂತರ್ಜಾಲದಲ್ಲಿ ಹೊಸ ಬಗೆಯ ದಸರಾ ಮೆರವಣಿಗೆಯನ್ನೇ ನಡೆಸಿದೆ! ನಿಜಕ್ಕೂ ಇಂದು ಈ ತಾಣದ ವಿನ್ಯಾಸ ಮತ್ತು ಅದರ ಹಿಂದೆ ಆಗಿರುವ ಕೆಲಸ ಕನ್ನಡಿಗರನ್ನು ಜಗತ್ತಿನ ಎದುರು ಹೆಮ್ಮೆ ಪಡುವಂತೆ ಮಾಡಿದೆ. ಈ ವಿಷಯದಲ್ಲಿ ಮೈಸೂರು ದಸರಾ ಅಂತರ್ಜಾಲ ತಾಣ ರೂಪಿಸಿದೋರು ನಾಡಿನೆಲ್ಲರ ಅಭಿನಂದನೆಗಳಿಗೆ ಅರ್ಹರು. ಇವರಿಗೆ ಶಭಾಷ್... ಅಂತಾ ಹಂಗೇ ನೀವೊಂದು ಮಿಂಚೆ ಕಳುಸ್ಬುಡಿ ಗುರುಗಳೇ!
Related Posts with Thumbnails