ಮೈಸೂರು ದಸರಾ - ವೆಬ್ ಸೈಟ್ ನೋಡಿದ್ರೆ ಬೇಸರಾ !

ಮೈಸೂರು ದಸರೆಯ ಅಧಿಕೃತ ವೆಬ್ ಸೈಟ್ ನೋಡಿದ್ಯಾ ಗುರು ? ಕನ್ನಡಕ್ಕೆ ಕೊಟ್ಟಿರೊ ಮರ್ಯಾದೆ ನೋಡಿ ತಾಯಿ ಚಾಮುಂಡೇಶ್ವರಿ ಕಣ್ಣಲ್ಲಿ ಗಳ ಗಳ ಅಂತಾ ನೀರು ಬರ್ತಾ ಇದೆ ಗುರು !

ನಮ್ಮ ನಾಡ ಹಬ್ಬಕ್ಕೆ ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರನ್ನ ಸೆಳೆಯೊಕೆ ಇರೋ ಒಂದು ಮುಖ್ಯ ಮಾಧ್ಯಮ ಅಂದ್ರೆ ದಸರೆಯ ಅಧಿಕೃತ ವೆಬ್ ಸೈಟ್. ಪ್ರವಾಸಿಗಳ್ನ ಸೆಳೆಯೋಕೆ ಮತ್ತು ಅವರಿಗೆ ಅನುಕೂಲ ಮಾಡಿಕೊಡಬೇಕು ಅಂತ ಅವರುಗಳ ಭಾಷೇಲಿ ಇರ್ಲೇಬೇಕು, ನಿಜ. ಆದ್ರೆ ಕನ್ನಡದಲ್ಲಿ ಇಲ್ಲದೇ ಇರೋದು ಅಥ್ವಾ ಇದ್ರೂ ಕೆಟ್ಟದಾಗಿ ಅರೆಬರೆ ಇರೋದು ಮಾತ್ರ ಖಂಡಿತ ತಪ್ಪು ಗುರು! ಅದ್ಯಾಕೆ ನಮ್ಮ ಜನಕ್ಕೆ ನಮ್ಮ ಭಾಷೇನ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಾಗಿಡಬೇಕು ಅನ್ನೋ ರೋಗವೋ ಗೊತ್ತಿಲ್ಲ! ಅಥವಾ ಕನ್ನಡಿಗರಿಗೆ ಮೈಸೂರು ದಸರಾ ಬಗ್ಗೆ ಮಾಹಿತಿ ಬೇಡವೇ ಬೇಡ ಅನ್ನೋದು ಅವರ ತೀರ್ಮಾನವೇನು? ಏನು ಪೆದ್ದತನ! ಚೀನಿಯರು, ಒಲಂಪಿಕ್ಸ್ ಸಂಧರ್ಭವನ್ನು ಹೇಗೆ ತಮ್ಮ ಭಾಷೆಯನ್ನು ಇಡಿ ಜಗತ್ತಿಗೆ ಹೆಮ್ಮೆಯಿಂದ ತೋರಿಸಲು, ತಿಳಿಸಲು ಬಳಸಿಕೊಂಡರು ಅನ್ನೋದನ್ನ ನೋಡಿದ ಮೇಲಾದ್ರೂ ಈ ದಡ್ಡರಿಗೆ ಬುದ್ಧಿ ಬರಬಾರದಾ?

ತಾಣದಲ್ಲಿ ಕಡೆಗಣಿಸಲಾದ ಕನ್ನಡ

ಆ ಇಡೀ ತಾಣವನ್ನು ರೂಪಿಸಿರೋದು ಇಂಗ್ಲಿಷ್ ಭಾಷೇಲಿ. ಗೂಗಲ್ ಟ್ರಾನ್ಸಲೇಟ್ ಬಳಸಿ ವಿಶ್ವದ ಮೂವತೈದು ಭಾಷೆಗಳಲ್ಲಿ ಮಾಹಿತಿ ಸಿಗೋಹಾಗೆ ಮಾಡಿ ಕನ್ನಡವನ್ನ ಮೂಲೆಗೆ ತಳ್ಳಿದಾರಲ್ಲ, ಇವರಿಗೇನು ಬಂತು? ಸುಮ್ನೆ ಕಾಟಾಚಾರಕ್ಕೆ ಅನ್ನೊ ಹಾಗೆ, ಬರಿ ಒಂದು ಪುಟ (ಪಿ.ಡಿ.ಎಫ್ ) ದಷ್ಟು ಮಾಹಿತಿನಾ ಕನ್ನಡದಲ್ಲಿ ಕೊಟ್ಟು, ದಸರೆ ವೆಬ್ ಸೈಟ್ ಗೆ ಚಾಲನೆ ನೀಡಿದ್ರು ಈ ಭೂಪರು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ರು ಅನ್ನೊ ಹಾಗೆ, ದಸರೆ ಇನ್ನೆನು ಶುರು ಆಗ್ತಾ ಇದೆ ಅನ್ನೋವಾಗ, ಐ.ಟಿ.ಕನ್ನಡಿಗರ ಒತ್ತಾಯ, ಪ್ರತಿಭಟನೆಗೆ ಮಣಿದು ಕನ್ನಡದಲ್ಲಿ ಒಂದೆರಡು ಪುಟದಷ್ಟು ಮಾಹಿತಿ ಹಾಕಿದ್ದಾರೆ, ಅದು ಕೂಡ ಐ.ಟಿ.ಕನ್ನಡಿಗರ ಸಹಾಯ ಪಡೆದು! ದೇಶದ ಒಂದು ಪ್ರಾದೇಶಿಕ ಭಾಷೆಯಾದ ಹಿಂದಿಯಲ್ಲಿ ಪ್ರತಿ ಪುಟವನ್ನು ವಿನ್ಯಾಸ ಮಾಡಲು ಆಸಕ್ತಿ ತೆಗೆದುಕೊಂಡ ಈ ತಂಡ, ನಾಡ, ನಾಡಿಗರ ಭಾಷೆಯಾದ ಕನ್ನಡದ ಬಗ್ಗೆ ಯಾಕೆ ತಾತ್ಸಾರ ತಳೆದರೋ ?

ನಮ್ಮತನಾನ ತೋರಿಸಿಕೊಳ್ಳೋದೇ ಪ್ರವಾಸೋದ್ಯಮದ ಬೆನ್ನೆಲುಬು ಅಂದಾಗ ಈ ನಮ್ಮತನದಲ್ಲಿ ನಮ್ಮ ಭಾಷೇನೂ ಬರತ್ತೆ ಅನ್ನೋ ಬುದ್ಧಿ ಬೇಡವಾ? ಇಡೀ ಪ್ರಪಂಚದ ಕಣ್ಣಿಗೆ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಎರಡನ್ನೂ ತೋರ್ಸೋ ಒಳ್ಳೇ ಅವಕಾಶ ಇದು. ಇದನ್ನೆಲ್ಲ ಬಿಟ್ಟು ಪ್ರವಾಸಿಗಳಿಗೆ ಬರೀ ಅವರತನವನ್ನೇ ತೋರಿಸಿಕೊಡಕ್ಕೆ ದಸರಾ ಯಾಕೆ ಮಣ್ಣು ಹುಯ್ಕೊಳಕ್ಕೆ? ನಮ್ಮೂರಿನ ಬಗ್ಗೆ ಇರೋ ನಮ್ಮದೇ ಅಂತರ್ಜಾಲ ತಾಣದಲ್ಲಿ ನಮ್ಮ ಭಾಷೇನೇ ನಾವು ಕಡೆಗಣುಸ್ತಾ ಇದೀವಿ ಅಂದ್ರೆ ಇದು ಎಂಥಾ ಕೀಳರಿಮೆ ಗುರು?! ಅಥವಾ ಫ್ರೆಂಚ್ ಪ್ರವಾಸಿಯೊಬ್ಬ ಇದನ್ನ ನೋಡಿ "ನಿಮ್ಮದು ಅಂತ ಯಾವ ಭಾಷೇನೂ ಇಲ್ಲವಾ ಗುರು?" ಅಂದ್ರೆ ಏನ್ ಮಾಡ್ತಾರಂತೆ ಆ ತಾಣವನ್ನ ಮಾಡಿರೋ ಭೂಪತಿಗಳು?

ಆ ತಾಣದ ಡಿಫಾಲ್ಟ್ ಭಾಷೆ ಕನ್ನಡವಾಗಬೇಕು

ನಮ್ಮತನವನ್ನ ಬರೀ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಿಡಬೇಕು ಅನ್ನೋ ಮನೆಹಾಳು ಬುದ್ಧಿ ಬಿಸಾಕಿ ಕೂಡಲೇ ಆ ತಾಣದಲ್ಲಿ ಈ ಕೆಳಗಿನ ಬದಲಾವಣೆಗಳಾಗಬೇಕು ಅಂತ ಆ ತಾಣ ಮಾಡಿರೋರ್ಗೆ ಒಸಿ ಬರಿಯೋಣ ಗುರು:

  • ಈ ತಾಣವನ್ನು ತೆರೆದ ಕೂಡಲೇ ಕನ್ನಡದ ಅಕ್ಷರಗಳು ಕಾಣಬೇಕು
  • ಬದಿಯಲ್ಲಿ ಭಾಷಾ ಆಯ್ಕೆ ಅಂತ ಬೇರೆ ಬೇರೆ ಭಾಷೆಗಳ ಆಯ್ಕೆಯ ಪಟ್ಟಿ ಇರಬೇಕು
  • ಎಲ್ಲ ಲಿಂಕುಗಳೂ ಕನ್ನಡದ ಆಯ್ಕೆ ಇದ್ದಾಗಲೂ ಕೆಲಸ ಮಾಡಬೇಕು.
ಕನ್ನಡದಲ್ಲಿ ಮಾಡಿ ಅಂದ್ರೆ ಕನ್ನಡದಲ್ಲಿ ಅದಾಗಲ್ಲ, ಇದಾಗಲ್ಲ, ಎಲ್ಲರಿಗೂ ಕಾಣೋಹಾಗೆ ಮಾಡಕ್ಕಾಗಲ್ಲ, ತಂತ್ರಾಂಶ ಇಲ್ಲ, ಗಿಂತ್ರಾಂಶ ಇಲ್ಲ, ಅಂತರ್ಜಾಲದ ಡಿಫಾಲ್ಟ್ ಭಾಷೆ ಇಂಗ್ಲೀಷ್, ಅದು-ಇದು, ಮಣ್ಣು-ಮಸಿ ಅಂತ ಉತ್ತರ ಕೊಡೋಕೆ ಮುಂದೆ ಬಂದ್ರೆ ಎಲ್ಲಕ್ಕೂ ನಮ್ಮಹತ್ತಿರ ಉತ್ರ ಇದೆ ಅಂತ ಹೇಳ್ಬೇಕು ಗುರು! ಈ ತಂತ್ರಾಂಶ-ಗಿಂತ್ರಾಂಶದ ತೊಂದರೆಗಳೆಲ್ಲ ಕುಣೀಲಾರದೇ ಇರೋರಿಗೆ ಮಾತ್ರ. ಕುಣೀಲೇಬೇಕು ಅಂತಿದ್ರೆ ತಂತ್ರಾಂಶವೂ ಬರತ್ತೆ, ಮಣ್ಣು-ಮಸೀನೂ ಬರತ್ತೆ ಅನ್ನೋದಕ್ಕೆ ಕನ್ನಡದಲ್ಲಿ ಇವತ್ತಿನ ದಿನ ಇರೋ ಸಾವಿರಗಟ್ಲೆ ಬ್ಲಾಗುಗಳೇ ಸಾಕ್ಷಿ ಗುರು! ನಮ್ಮ ಸರ್ಕಾರದ ದುಡ್ಡಲ್ಲಿ ಮಾಡೋ ಈ ವೆಬ್ ಸೈಟ್ ಅಲ್ಲಿ ಕನ್ನಡದ ಪರಿಸ್ಥಿತಿ ಹೀಗಿದೆ ಅಂದ್ರೆ, ಅದು ನಮ್ಮ ಸರ್ಕಾರಕ್ಕೆ ಕನ್ನಡ ಅನುಷ್ಟಾನದ ಬಗ್ಗೆ ಇರೋ ಕಳಕಳಿ, ಪ್ರಾಮಾಣಿಕತೆ ಏನು ಅಂತ ತೋರ್ಸುತ್ತೆ ಗುರು !

4 ಅನಿಸಿಕೆಗಳು:

Anonymous ಅಂತಾರೆ...

ಸರ್ಕಾರಕ್ಕೆ ಕಾಳಜಿ ಇದೆ ಅ೦ತ ನಾವು ಕನಸಲ್ಲೂ ಅ೦ದುಕೊಳ್ಳಬಾರದು. ಸರ್ಕಾರಕ್ಕೆ ಅದು ಎಲೆಕ್ಷನ್ ಇಶ್ಯು ಆದರೆ ಮಾತ್ರ ಕಾಳಜಿ ಇರುತ್ತದೆ. ಆದ್ದರಿ೦ದ ಇದನ್ನು ಎಲೆಕ್ಷನ್ ಇಶ್ಯು ಮಾಡೋಣ. ಕನ್ನಡ ಕನ್ನಡಿಗ ಹಾಗೂ ಕರ್ನಾಟಕಕ್ಕೆ ಹೋರಾಡೋಹಾಗಿದ್ರೆ ಮಾತ್ರ ವೋಟು ಇಲ್ಲದಿದ್ದರೆ ಇಲ್ಲ! ಮು೦ದಿನ ವರ್ಷನೂ ಈ ರೀತಿ ಆಗಬಾರದೆ೦ದರೆ ಆ ಅಧಿಕಾರಿಗಳಿಗೆ ಫೋನ್ ಮಾಡಿ ಸ್ವಲ್ಪ ಸರಿಯಾಗಿ ವಿಚಾರಿಸೋಣ.

Anonymous ಅಂತಾರೆ...

ಕನ್ನಡ ಅನ್ನೋದು ಅಡುಗೆ ಮನೆ ಬಚ್ಚಲುಮನೆಗಳಿಂದ ಕೂಡ ಮಾಯ ಅಗುತ್ತಿದೆ. ನಮ್ಮ ಪದಗಳನ್ನು ಬಿಟ್ಟು ತೂರ್ ದಾಲ್, ಮೂಂಗ್ ದಾಲ್, ದಹಿ, ಬೇಸನ್ ಗೂಸನ್ ಅಂತ ಮಾತಾಡುತ್ತಾರೆ. ಬಚ್ಚಲು ಮನೆ ಅಂತ ಕೂಡ ಯಾರೂ ಹೇಳೂದಿಲ್ಲ ಬಾಥ್ ರೂಮ್ ಅಂತಾರೆ .....

dasara08@gmail.com
ಈ ವಿಳಾಸಕ್ಕೆ ಎಲ್ಲರು ಇಮೈಲ್ ಕಳಿಸೋಣ. ಎಲ್ಲಾ ಪುಟಗಳನ್ನೂ ಕನ್ನಡಲ್ಲೇ ಕೊಡಿ. ಇದರ ಡೀಫಾಲ್ಟ್ ಭಾಷೆಯಾಗಿ ಕನ್ನಡವನ್ನು ಕೊಡಿ ಎಂದು ಕೇಳೋಣ.

ನಿಮ್ಮ ಲೇಖನದಲ್ಲಿ "ದೇಶದ ಒಂದು ಪ್ರಾದೇಶಿಕ ಭಾಷೆಯಾದ ಹಿಂದಿಯಲ್ಲಿ ಪ್ರತಿ ಪುಟವನ್ನು ವಿನ್ಯಾಸ ಮಾಡಲು ಆಸಕ್ತಿ ತೆಗೆದುಕೊಂಡ ಈ ತಂಡ, ನಾಡ, ನಾಡಿಗರ ಭಾಷೆಯಾದ ಕನ್ನಡದ ಬಗ್ಗೆ ಯಾಕೆ ತಾತ್ಸಾರ ತಳೆದರೋ ?"
ಈ ವಿವರ ಅರ್ಥವಾಗಲಿಲ್ಲ. ಯಾವ ತಂಡದ ಬಗ್ಗೆ ನೀವು ಹೇಳುತ್ತಿರುವುದು? ಐ ಟಿ ಕನ್ನಡಿಗರ ತಂಡದವರೇ ವಿಕಿಯಲ್ಲಿ ಬರೆದಿರುವುದು ಅಥವ ದಸರಾದವರೇ?

ಮೇಗನ್

clangorous ಅಂತಾರೆ...

website onde alla guru.... yuva dasara dalli kannadakke yaava sthana antha nodidre namma yuvakaru hindiya vyamohadalli yestu thalleenaragiddare annodu alli pradarshanavagittirooo haadugaLu haagu haadugararanna nodidre nijavaagalu namma yuvakaru kannadana uLasthara annodu yaksha prashne anstha ide guru. namma prathiBegalanna jagattige torsokke idakkintha olle vedike beka guru...aadre illu namma kannadigaru keeLarime meradiddare... . ivella nodtha iddare mysooru nijavaaglu samskruthika nagari na anno anumana untagutte ... . sampoorNavaagi namma cinema/jaanapada/sugama sangeetha vanna yuva dasara dalli bimbisokke nammalli haadagaLa/haadugaarara korathe idiyaaa athava namma yuvakarige kannada andare astondu tatsara na ... ? ondu artha agtha illa guru...heLokke maatra naaDa habba karyakramadalli nammadallada hindi.. punjabi haadugaLa dhimaaku.... . E reethi naaDa habba madi kannadakke avamaana maduvudara badalu idakkagi Karchu maduva haNavannu sooktha reethi yalli kannada kannadiga karnataka upyogisuvudu dharma alvaa guru.. . hindi/punjabi haadgaLige namma naaDina haNa upyogisi namma kannada davare adukke huch munde makkala Tharaha langu lagam illade kuniyodu... hettammana heNada munde yaavdo thirboki na thale mele kudskondu oorella meravaNige madidange.... . summane onderadu dollu kunitha, kamsaLe nruthya na itbutre namma samskruthi agoglilla guru... adukke karaNavaada namma bhaasheyanne kade ganisooo intaha desha drohigaLanna nodtha iddare raktha kudyutte guru...

Anonymous ಅಂತಾರೆ...

ಅ೦ತಹ ಜನರನ್ನು ಮಾತಾಡಿಸಬೇಕು. ಅವರ ಸ೦ಪರ್ಕ ಮಾಡಬೇಕು ಮತ್ತ್ತು ಅವರ ಜೊತೆ ಸಮಾಲೋಚನೆ ಮಾಡಬೇಕು. ಆ ಅಧಿಕಾರಿಗಳನ್ನು ನಮ್ಮವರಾಗಿಸಿಕೊಳ್ಳಬೇಕು. ಸಿ೦ಹಗನ್ನಡಿಯನ್ನು ಅವರೆದುರು ಇಡಬೇಕು. ಅವರ ಧ್ಯೇಯ ಏನಾಗಿರಬೇಕೆ೦ದು ನಾವು ಹೇಳಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails