ಕನ್ನಡ ಮತ್ತು ಕನ್ನಡಿಗರ ಏಳಿಗೆ - ೫: ಪದಗಳಲ್ಲಿ ಏಳಿಗೆ ಮತ್ತು ಅದರ ಹರವುಗಳೆರಡೂ ಅಡಗಿವೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಒಂದು ಜನಾಂಗದ ಏಳಿಗೆಗೂ ಪದಗಳಿಗೂ ನಂಟು

ಯಾವುದೇ ಒಂದು ಜನಾಂಗದ ಏಳಿಗೆಯ ಸ್ಥಿತಿಯನ್ನು ಆ ಜನಾಂಗದವರ ನಾಲಿಗೆಯ ಮೇಲೆ ಏನೆಲ್ಲ ಪದಗಳು ಓಡಾಡುತ್ತವೆ ಎನ್ನುವುದರಿಂದ ಅಳೆಯಬಹುದು. ಆ ಜನಾಂಗದಲ್ಲಿ ಏಳಿಗೆಯು ಎಷ್ಟು ಸಮವಾಗಿ ಎಲ್ಲರಿಗೂ ಹರಡಿದೆಯೆನ್ನುವುದನ್ನು ಹೆಚ್ಚು ಏಳಿಗೆಹೊಂದಿದವರು ಬಳಸುವ ಪದಗಳನ್ನು ತೀರ ಏಳಿಗೆ ಹೊಂದದವರಿಗೆ ಅರ್ಥಮಾಡಿಸಲು ಎಷ್ಟು ಹೊತ್ತು ಬೇಕಾಗುತ್ತದೆ ಎನ್ನುವುದರಿಂದ ಅಳೆಯಬಹುದು. ಇವೆರಡು ಅಳತೆಗೋಲುಗಳಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಒಂದು ಜನಾಂಗದವರು ಎಷ್ಟು ಗಿಟ್ಟಿಸಿಕೊಂಡಿದ್ದಾರೆ, ಮತ್ತು ಅವುಗಳಲ್ಲಿ ಏಳ್ಗೆಯೆಂಬುದು ಎಷ್ಟು ಸಮವಾಗಿ ಇಡೀ ಜನಾಂಗದಲ್ಲಿ ಹರಡಿದೆ ಎಂದು ಸುಲಭವಾಗಿ ತಿಳಿದುಬಿಡುತ್ತದೆ.

ಹೆಚ್ಚು ಏಳಿಗೆಹೊಂದಿದವರ ಆಡುನುಡಿಯು ಕಡಿಮೆ ಏಳಿಗೆಹೊಂದಿದವರ ನುಡಿಯೇ ಆಗಿರದೆ ಹೋದರೆ ಇಲ್ಲವೇ ಹೊರನುಡಿಗಳ ಪದಗಳಿಂದ ತುಂಬಿದ್ದರೆ (ಉದಾಹರಣೆಗೆ ಕರ್ನಾಟಕದಲ್ಲಿ ಇಂಗ್ಲೀಷಾಗಿದ್ದರೆ ಇಲ್ಲವೇ ಸಂಸ್ಕೃತವಾಗಿದ್ದರೆ ಇಲ್ಲವೇ ಅವುಗಳ ಪದಗಳಿಂದ ತುಂಬಿದ್ದರೆ) ಅದನ್ನು ಕಡಿಮೆ ಏಳಿಗೆ ಹೊಂದಿದವರಿಗೆ ಹೇಳಿಕೊಡಲು ತೀರ ಕಷ್ಟವಾಗುತ್ತದೆ. ಆಗ ಏಳಿಗೆಯೆನ್ನುವುದು ಕೆಲವರ ಸೊತ್ತು ಮಾತ್ರ ಆಗುತ್ತದೆ. ಆದ್ದರಿಂದ ಏಳಿಗೆಹೊಂದಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಜನಾಂಗವೂ ತನ್ನ ನುಡಿಯನ್ನೇ ಎಲ್ಲಾ ಕಸುಬುಗಳಲ್ಲೂ ಬಳಸಲು ಹಂಬಲಿಸಬೇಕು, ಮತ್ತು ಆ ನುಡಿಗೆ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವಾಗ ಅವುಗಳು ಆದಷ್ಟೂ ಹೆಚ್ಚು ಜನರಿಗೆ ತಿಳಿಯುವಂತಿರಬೇಕು. ಯಾರಿಗೇ ಆಗಲಿ, ತಮಗೆ ಈಗಾಗಲೇ ತಿಳಿದಿರುವುದನ್ನು ಬಳಸಿಕೊಂಡು ಹೊಸತನ್ನು ಕಲಿತರೆ ಏಳಿಗೆಯ ಹಂಚಿಕೆ ಸುಲಭವಾಗುತ್ತದೆ. ತಮಗೆ ಈಗಾಗಲೇ ತಿಳಿದಿರುವುದನ್ನೆಲ್ಲ ತೊರೆದು ಹೊಸತನ್ನು ಕಲಿಯಬೇಕಾದರೆ ಏಳಿಗೆಯ ಹಂಚಿಕೆ ಕಷ್ಟವಾಗುತ್ತದೆ. ಆದ್ದರಿಂದ ಕನ್ನಡಿಗರ ಏಳಿಗೆ ಮತ್ತು ಏಳಿಗೆಯ ಹಂಚಿಕೆಯು ಚೆನ್ನಾಗಿ ಆಗಬೇಕೆಂಬುದಾದರೆ ಅದು ಎಲ್ಲರ ಕನ್ನಡದಲ್ಲೇ ಸಾಧ್ಯ.

ಹಾಗೆಯೇ ಹೊಸ ಹೊಸ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವುದು ಬಹಳ ಮುಖ್ಯವಾದದ್ದು ಕೂಡ. ಹೊಸ ಪದಗಳಿಲ್ಲದೆ ಹೊಸತೆಂಬುದಿರುವುದಿಲ್ಲ. ಹೊಸಹೊಸದನ್ನು ಒಂದು ಜನಾಂಗದವರು ಅರಿತುಕೊಳ್ಳುತ್ತ ಹೋಗಬೇಕಾದರೆ ಅದಕ್ಕೆ ಹೊಸ ಪದಗಳಿಲ್ಲದೆ ಆಗುವುದಿಲ್ಲ. ಒಂದು ಜನಾಂಗದ ಏಳಿಗೆಯು ಎಷ್ಟು ಬೇಗಬೇಗನೆ ಆಗುತ್ತಿದೆಯೆಂಬುದರ ಗುರುತು ಒಂದು ವರ್ಷಕ್ಕೆ ಅದರ ಆಡುನುಡಿಗೆ ಎಷ್ಟು ಹೊಸ ಪದಗಳು ಸೇರಿಕೊಂಡಿವೆ, ಮತ್ತು ಆ ಹೊಸ ಪದಗಳು ಎಷ್ಟು ಎಲ್ಲೆಲ್ಲೂ ಹರಡಿವೆ ಎಂಬುದಾಗಿದೆ. ಆದ್ದರಿಂದ ಕನ್ನಡಿಗರ ಆಡುನುಡಿಗೆ ಹೊಸ ಹೊಸ ಪದಗಳು ಸೇರಿಕೊಳ್ಳುತ್ತ ಹೋಗಬೇಕು. ಪದಗಳು ಸೇರುವುದು ನಿಂತರೆ ಕನ್ನಡಿಗರ ಏಳಿಗೆ ನಿಂತಂತೆ. ಒಂದು ವರ್ಷದಲ್ಲಿ ಈ ಪದಗಳಲ್ಲಿ ಎಷ್ಟನ್ನು ಇಡೀ ಪ್ರಪಂಚದವರೆಲ್ಲ ಬಳಸಲು ಶುರುಮಾಡುತ್ತಾರೆ ಎನ್ನುವುದು ಆ ಜನಾಂಗದವರು ಪ್ರಪಂಚದ ಇತರ ಜನಾಂಗದವರಿಗಿಂತ ಎಷ್ಟು ಹೆಚ್ಚು ಆಯಾ ಕ್ಷೇತ್ರಗಳಲ್ಲಿ ಏಳಿಗೆ ಹೊಂದಿದ್ದಾರೆ ಎನ್ನುವುದರ ಗುರುತು. ಆದ್ದರಿಂದ ಕನ್ನಡಿಗರು ಹೊಸತನ್ನು ಕಂಡುಹಿಡಿದು ಆ ಕಂಡುಹಿಡಿಯುವಿಕೆಯಲ್ಲಿ ಕನ್ನಡವನ್ನೇ ಬಳಸಿ, ಕಂಡುಹಿಡಿದದ್ದಕ್ಕೆ ಕನ್ನಡದ ಹೆಸರನ್ನೇ ಇಟ್ಟು ಪ್ರಪಂಚದವರೆಲ್ಲ ಅದನ್ನು ಬಳಸುವಂತೆ ಮಾಡುವುದು ಕನ್ನಡಿಗರು ಪ್ರಪಂಚದ ಬೇರೆ ಜನಾಂಗದವರಿಗಿಂತ ಎಷ್ಟು ಏಳಿಗೆಹೊಂದಿದ್ದಾರೆ ಎನ್ನುವುದರ ಗುರುತು.

"ಕನ್ನಡದ ಪದಗಳು" ಎಂದರೆ ಯಾವುವು?

ಎಲ್ಲಾದರೂ ಎಂತಾದರೂ ಇರುವ (ಇಲ್ಲವೇ ಇದ್ದ) ಕನ್ನಡಿಗರು ಆಡುನುಡಿಯಲ್ಲಿ ಈಗ ಬಳಸುತ್ತಿರುವ (ಇಲ್ಲವೇ ಹಿಂದೆ ಬಳಸುತ್ತಿದ್ದ) ಪದಗಳೆಲ್ಲ ಕನ್ನಡದ ಪದಗಳು. ಇವುಗಳನ್ನೆಲ್ಲ ಕನ್ನಡದ ನಿಘಂಟುಗಳಿಗೆ ಸೇರಿಸತಕ್ಕದ್ದು. ಆಡುನುಡಿಯ ಮೂಲಕ ಕನ್ನಡದ ನಿಘಂಟುಗಳಿಗೆ ಪದಗಳು ನೇರವಾಗಿ ಸೇರಬಹುದು. ಆಡುನುಡಿಯಲ್ಲಿ ಪದಗಳನ್ನು ಕನ್ನಡಿಗರು ಹೇಗೆ ಉಲಿಯುವರೋ ಹಾಗೇ ಅವುಗಳನ್ನು ನಿಘಂಟಿಗೆ ಸೇರಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ (ಇಲ್ಲವೇ ಬಳಸಿಲ್ಲದ), ಬರೀ ಬರಹಗಳಲ್ಲಿ ಬಳಸುತ್ತಿರುವ (ಇಲ್ಲವೇ ಬಳಸುತ್ತಿದ್ದ) ಪದಗಳು ಕನ್ನಡದ ಪದಗಳಲ್ಲ. ಕನ್ನಡದ ನಿಘಂಟುಗಳಲ್ಲಿ ಈಗಾಗಲೇ ಇರುವ ಇಂತಹ ಪದಗಳಿಂದ ಕನ್ನಡಿಗರಿಗೆ ಹೆಚ್ಚು ಉಪಯೋಗವಿಲ್ಲ. ಪದಗಳನ್ನು ಆಡುನುಡಿಯಲ್ಲಿ ಹಿಂದೆ ಬಳಸುತ್ತಿದ್ದರೋ ಇಲ್ಲವೋ ಎಂಬ ಪ್ರಶ್ನೆಯನ್ನು ಉತ್ತರಿಸಲು ಆಗದಿದ್ದಲ್ಲಿ ಅಂತಹ ಪದಗಳನ್ನು ಮತ್ತೊಮ್ಮೆ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ ಪದಗಳನ್ನು ಬರಹದ ಮೂಲಕ ನೇರವಾಗಿ ಕನ್ನಡದ ನಿಘಂಟುಗಳಿಗೆ ಸೇರಿಸಿದ ಮಾತ್ರಕ್ಕೆ ಅವುಗಳನ್ನು ಕನ್ನಡಿಗರೆಲ್ಲ (ಇಲ್ಲವೇ ಆಯಾ ಕಸುಬಿನ ಕನ್ನಡಿಗರೆಲ್ಲ) ಆಡುತ್ತಾರೆ ಎಂದೇನಿಲ್ಲ. ಆಡಲೇಬೇಕು ಎಂಬುದಂತೂ ಮೊದಲೇ ಇಲ್ಲ. ಆಡದೆಹೋದರೆ ಜನರೇ ಕೀಳೆಂಬುದಂತೂ ಎಂದೆಂದಿಗೂ ಇಲ್ಲ. ಬರಹದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಆ ಪದಗಳನ್ನು ಇಡೀ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತದಂತೆ ಮಾತ್ರ. ನಿಘಂಟುಗಳಿಗೆ ನೇರವಾಗಿ ಬರಹದಿಂದ ಪದಗಳನ್ನು ಸೇರಿಸುವವರು ಆ ಮೂಲಕ ತಾವು ಸೇರಿಸಿದ ಪದಗಳಿಗೆ ಇಡೀ ಕನ್ನಡಜನಾಂಗದವರ (ಇಲ್ಲವೇ ಆಯಾ ಕಸುಬಿನ ಕನ್ನಡಿಗರ) ಒಪ್ಪಿಗೆಯನ್ನು ಬೇಡುತ್ತಾರಷ್ಟೆ. ಆ ಒಪ್ಪಿಗೆ ಕೊಡುವುದು ಬಿಡುವುದು ಜನರಿಗೆ ಬಿಟ್ಟಿದ್ದು.

ಹೀಗೆ ಪ್ರಾಯೋಗಿಕವಾಗಿ ಕನ್ನಡದ ಬರಹಕ್ಕೆ ಇಲ್ಲವೇ ನಿಘಂಟುಗಳಿಗೆ ಸೇರಿಸಿದ ಪದಗಳು ಸಾಕಷ್ಟು ಕಾಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಮೇಲೆ ಆ ಪದಗಳು ಯಾವ ಹೊಸ ರೂಪವನ್ನು ಪಡೆಯುತ್ತವೋ (ಇಲ್ಲವೇ ಹಾಗೇ ಉಳಿದಿರುತ್ತವೋ) ಅವುಗಳಿಗೆ ಮಾತ್ರ ಕನ್ನಡದ ಪದಗಳೆನಿಸಿಕೊಳ್ಳುವ ಯೋಗ್ಯತೆಯಿರುವುದು.

ಬರಹದಲ್ಲಿ ಜನರು ಆಡದಿರುವುದನ್ನೆಲ್ಲ ಬರೆಯಬಹುದಾದ್ದರಿಂದ ಬರಹದ ಆಧಾರದ ಮೇಲೆ ಯಾವುದು ಕನ್ನಡದ ಪದವೆಂದು ತೀರ್ಮಾನಿಸಲಾಗುವುದಿಲ್ಲ. ಬರಹದಲ್ಲಿ ಏನನ್ನು ಬೇಕಾದರೂ ಬರೆಯುವುದಕ್ಕೆ ಯಾವ ಅಡೆತಡೆಗಳೂ ಇರುವುದಿಲ್ಲ. ಜನರು ಆ ಪದಗಳನ್ನು ಆಡಬೇಕೆಂಬ ಕಟ್ಟಳೆಯಿಲ್ಲದೆ ಹೋದರೆ ನಿಘಂಟಿಗೆ ಏನನ್ನು ಸೇರಿಸಬೇಕು, ಏನನ್ನು ಸೇರಿಸಬಾರದು ಎನ್ನುವುದನ್ನು ತೀರ್ಮಾನಿಸಲಾಗುವುದಿಲ್ಲ. ಈ ಕಟ್ಟಳೆಯಿಲ್ಲದಿದ್ದರೆ ಜನರಿಗೆ ಇಷ್ಟಬಂದ ಪದ ಮತ್ತು ಪದವಲ್ಲದ್ದನ್ನೆಲ್ಲ ಆ ನುಡಿಯ ಲಿಪಿಯಲ್ಲಿ ಬರೆದು ನಿಘಂಟಿಗೆ ಸೇರಿಸಿಬಿಡಬಹುದು! ಬೆರಳೆಣಿಕೆಯ ಜನರು ಇಲ್ಲವೇ ಒಬ್ಬರೇ ಒಬ್ಬರು ಬೇಕಾದ ಅಕ್ಷರಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಪದಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಹುಟ್ಟಿಸಿಕೊಳ್ಳಬಹುದು. ಆದರೆ ಒಂದು ಜನಾಂಗದ ಒಪ್ಪಿಗೆಯಿಲ್ಲದೆ ಅವುಗಳಾವುವೂ ಆ ಜನಾಂಗದ ನುಡಿಗೆ ಸೇರಿದವೆಂದು ಹೇಳಲು ಬರುವುದಿಲ್ಲ. ಇಂತಹ ಪದಗಳನ್ನೆಲ್ಲ ಉಳ್ಳ ನಿಘಂಟುಗಳನ್ನು ಪ್ರಯೋಗದ ನಿಘಂಟುಗಳೆಂದು ಕರೆಯಬಹುದಷ್ಟೆ.

ಎಂತಹ ಹೊಸ ಪದಗಳನ್ನು ಜನರು ಒಪ್ಪುತ್ತಾರೆ?

ಕನ್ನಡಿಗರು ಏಳಿಗೆ ಹೊಂದಬೇಕಾದರೆ ಕನ್ನಡಿಗರ ಬಾಯಲ್ಲಿ ಹೊಸ ಹೊಸ ಪದಗಳು ಹುಟ್ಟುತ್ತಲೇ ಇರಬೇಕೆಂಬುದನ್ನು ಮೇಲೆ ಆಗಲೇ ನೋಡಿದ್ದೇವೆ. ಆದ್ದರಿಂದ ಹೊಸ ಹೊಸ ಪದಗಳನ್ನು ಹುಟ್ಟಿಸದೆ ಏಳಿಗೆಯಿಲ್ಲ. ಆ ಹೊಸ ಪದಗಳನ್ನು ಹುಟ್ಟಿಸುವವರು ಕನ್ನಡದಿಂದಷ್ಟೇ ಅಲ್ಲ, ಬೇರೆ ನುಡಿಗಳಿಂದಲೂ ಪ್ರೇರಣೆಯನ್ನು ಪಡೆದುಕೊಂಡು ಹುಟ್ಟಿಸಬಹುದು. ಆದರೆ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ ಎಂದು ತಿಳಿದಿದ್ದರೆ ಪದಗಳನ್ನು ಹುಟ್ಟಿಸುವವರ ಕೆಲಸವೂ ಸಾರ್ಥಕವಾದಂತೆ, ಆ ಮೂಲಕ ಏಳಿಗೆಗೆ ನಾಂದಿಯನ್ನೂ ಹಾಡಿದಂತಾಗುತ್ತದೆ. ಆದ್ದರಿಂದ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ, ಎಂಥವನ್ನು ಒಪ್ಪುವುದಿಲ್ಲವೆಂದು ಸ್ವಲ್ಪ ನೋಡೋಣ. ಇದು ಮುಖ್ಯವೇಕೆಂದರೆ ಕನ್ನಡದ ಜನರು ಒಪ್ಪಿದ್ದೇ ಕನ್ನಡದ ಪದ. ಮತ್ತೊಂದಲ್ಲ. ಕೆಲವರು ಸಂಸ್ಕೃತದಲ್ಲಿ ಹುಟ್ಟಿಸಿದ ಪದಗಳನ್ನೆಲ್ಲ ಜನರು ಒಪ್ಪುತ್ತಾರೆ (ಇಲ್ಲವೇ ಒಪ್ಪುವುದು ಅವರ ಕರ್ತವ್ಯ) ಎಂದು ತಿಳಿದಿರುತ್ತಾರೆ. ಇದಂತೂ ತಿಳುವಳಿಕೆಯಿಲ್ಲದ್ದು ಎಂದು ಈ ಬರಹದ ಸರಣಿಯಲ್ಲಿ ನಿಮಗೆ ಅರ್ಥವಾಗಿರಲೇಬೇಕೆಂದುಕೊಂಡಿದ್ದೇವೆ.

ಇಲ್ಲಿ "ಹೀಗೆ ಮಾಡಿದರೆ ಜನರು ಖಂಡಿತ ಒಪ್ಪುತ್ತಾರೆ" ಎಂದು ಹೇಳುವ ಯೋಗ್ಯತೆ ನಮಗಿಲ್ಲ. ಆದರೆ ಜನರ ಒಲವುಗಳೆಂಥವೆಂದು ನಾವು ಹುಡುಕುವ ಪ್ರಯತ್ನವನ್ನು ಮಾಡಿದ್ದೇವೆ, ಅಷ್ಟೆ.

ಮೊದಲನೆಯದಾಗಿ ಈಗಾಗಲೇ ತಾವು ಬಳಸುತ್ತಿರುವ ಪದಗಳಿಗೆ ಬದಲಾಗಿ ಸೂಚಿಸುವ ಪದಗಳನ್ನು ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮತ್ತು ಜನರಿಗೆ ಈಗಾಗಲೇ ಗೊತ್ತಿರುವುದರಿಂದ ಆ ಪದಗಳು ಕನ್ನಡದ ಪದಗಳೇ. ಆ ಪದಗಳು ಕನ್ನಡದ ಮೂಲದವೇ ಆಗಿರಲಿ, ದ್ರಾವಿಡಮೂಲದವೇ ಆಗಿರಲಿ, ಸಂಸ್ಕೃತಮೂಲದವೇ, ಇಂಗ್ಲೀಷ್ ಮೂಲದವೇ, ಇಲ್ಲವೇ ಮತ್ತೊಂದು ಮೂಲದವೇ ಆಗಿರಲಿ ಈ ಮಾತು ನಿಜ. ಜನರಿಗೆ ಬೇಕಾದದ್ದು ವಸ್ತುಗಳಿಗೆ ಮತ್ತು ಎಣಿಕೆಗಳಿಗೆ ಒಂದು ಹೆಸರು ಮಾತ್ರ. ಅದನ್ನೇ ಪದವೆನ್ನುವುದು. ಆ ಪದವು ಯಾವ ನುಡಿಯ ಮೂಲದ್ದು ಎನ್ನುವುದು ನುಡಿಯರಿಗರ ತಲೆಯನೋವೇ ಹೊರತು ಜನರದಲ್ಲ. ಆ ಹಳೆಯ ಪದಗಳಲ್ಲಿ "ಇಂಥದ್ದು ಸರಿಯಿಲ್ಲ, ಅಂಥದ್ದು ಸರಿಯಿಲ್ಲ" ಎಂಬ ಅಭಿಪ್ರಾಯವು ಕೆಲವರಿಗೆ ಇದ್ದರೂ ಅದೆಲ್ಲ ಜನರಿಗೆ ಬೇಕಿಲ್ಲ. ಒಪ್ಪುವ ಜನರದೇ ಕೊನೆಯ ತೀರ್ಪಾದ್ದರಿಂದ ಆ ಪದಗಳಿಗೆ "ಎಲ್ಲವೂ ಸರಿಯಿದೆ" ಎಂದೇ ಒಪ್ಪಿಕೊಳ್ಳಬೇಕು! ಜನರಿಗೆ ಅಭ್ಯಾಸಬಲದಿಂದ ಈಗಾಗಲೇ ಇರುವ ಪದಗಳೇ ಹೆಚ್ಚು ಬಾಯಿಗೆ ಬರುತ್ತವೆ. ಸಂಸ್ಕೃತಮೂಲದ ಒಂದು ಪದವು ಕನ್ನಡಿಗರ ಬಾಯಲ್ಲಿ 500BC ನಿಂದ ಓಡಾಡುತ್ತಿದ್ದರೆ ಅದನ್ನು 2008AD ನಲ್ಲಿ ಬದಲಾಯಿಸುವ ಆಸೆಯನ್ನೇ ಇಟ್ಟುಕೊಳ್ಳಬಾರದು. ಆ ಹಳೆಯ ಪದವು ಕನ್ನಡಿಗರ ನಾಲಿಗೆಯೆಂಬ ಪರೀಕ್ಷೆಯಲ್ಲಿ ಪಾಸಾಗಿಲ್ಲವೆ? ಅಷ್ಟೇ ಸಾಕು ಅವುಗಳನ್ನು ಕನ್ನಡದ ಪದಗಳೆಂದು ಕರೆಯಲು! ಹಾಗೆಯೇ 500BC ನಿಂದ ಓಡಾಡುತ್ತಿರುವ ಒಂದು ಅಚ್ಚಕನ್ನಡದ ಪದವನ್ನು ಕೂಡ ಮತ್ತೊಂದು ಕನ್ನಡದ ಪದದಿಂದ 2008AD ನಲ್ಲಿ ಬದಲಾಯಿಸುವುದೂ ಕಷ್ಟ. ಜನರು ಅಭ್ಯಾಸಬಲದಿಂದ ಬೇಡವೆನ್ನುತ್ತಾರೆ. ಆದ್ದರಿಂದ ಮೊದಲನೆಯದಾಗಿ ಈಗಾಗಲೇ ಕನ್ನಡದಲ್ಲಿರುವ ಪದಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಬದಲಾಯಿಸಲು ಹೊರಡುವುದರಿಂದ ಕನ್ನಡಕ್ಕೆ ಹೆಚ್ಚು ಪದಗಳು ಸೇರಿದರೆ ಅದರಿಂದ ಕನ್ನಡದಲ್ಲಿ ಪದಗಳನ್ನು ಹುಟ್ಟಿಸುವುದು ಹೇಗೆಂದು ಜನರಿಗೆ ಅರ್ಥವಾಗುವುದರಿಂದ ಹುಟ್ಟಿಸುವವರಿಗೆ ಅದು ಒಳ್ಳೆಯದೇ. ಆದರೆ ಅವುಗಳನ್ನು ಜನರು ಒಪ್ಪಲಿಲ್ಲವೆಂದು ಬೇಜಾರು ಮಾಡಿಕೊಳ್ಳಬಾರದಷ್ಟೆ!

ಇನ್ನು ಜನರು ಈಗಾಗಲೇ ಬಳಸದ ಪದಗಳು. ಈಗಾಗಲೇ ಬಳಸದ ಪದಗಳು ಯಾವ ವಸ್ತು ಇಲ್ಲವೇ ಎಣಿಕೆಯನ್ನು ಸೂಚಿಸುತ್ತವೋ ಆ ವಸ್ತುಗಳು ಇಲ್ಲವೇ ಎಣಿಕೆಗಳನ್ನು ಅವರು ಕಂಡೇ ಇರಲಿಲ್ಲ, ಇಲ್ಲವೇ ಕಂಡಿದ್ದರೂ ಅದಕ್ಕೆ ಒಂದು ಪದವನ್ನು ತಾವೇ ಕೊಟ್ಟುಕೊಂಡಿಲ್ಲ ಇಲ್ಲವೇ ಇನ್ನೊಬ್ಬರಿಂದ ಕೇಳಿ ತಿಳಿದುಕೊಂಡಿಲ್ಲವೆಂದರ್ಥ. ಇಂತಹ ವಸ್ತುಗಳಿಗೆ ಇಲ್ಲವೇ ಎಣಿಕೆಗಳಿಗೆ ಪದಗಳನ್ನು ಕೊಡುವುದು ತುಸು ಸುಲಭ. ಈ ಗುಂಪಿನ ಪದಗಳಿಗೆ ಕನ್ನಡಿಗರ ಒಲವು ಹೀಗಿದೆ (ಇದು ಪೂರ್ಣ ಪಟ್ಟಿಯಲ್ಲ):
  • ಕನ್ನಡದಲ್ಲಿ ಈಗಾಗಲೇ ಜನರಿಗೆ ತಿಳಿದಿರುವ ಪದಗಳನ್ನು ಬಳಸಿ ಕಟ್ಟಿದ ಪದಗಳು ಬಹಳ ಸುಲಭವಾಗಿ ಒಪ್ಪಲ್ಪಡುತ್ತವೆ, ಎಕೆಂದರೆ ಅವುಗಳನ್ನು ಉಲಿಯುವುದೂ ಸುಲಭ ಮತ್ತು ಹೊಸ ಪದದ ಅರ್ಥವನ್ನು ಕೂಡ ಅವು "ಹೆಚ್ಚು" ಗುರುತಿಸುತ್ತವೆ.
  • ಪದಗಳು ಚಿಕ್ಕದಾಗಿರಬೇಕೆಂಬುದು ಕೂಡ ಒಂದು ಕಟ್ಟಳೆ. ತುಂಬ ದೊಡ್ಡದಾದಷ್ಟೂ ಅವುಗಳನ್ನು ಉಲಿಯುವುದು ಕಷ್ಟ. ಕನ್ನಡದವೇ ಆಗಿದ್ದರೂ ದೊಡ್ಡ ಪದಗಳನ್ನು ಜನರು ತೊರೆದು ಚಿಕ್ಕದಾದ ಬೇರೆಯ ನುಡಿಯ ಪದವನ್ನಾದರೂ ಆಡುತ್ತಾರೆ.
  • ಹಳಗನ್ನಡದ ಪದಗಳನ್ನು ನೇರವಾಗಿ ಇಲ್ಲವೇ ಅವುಗಳನ್ನು ಬಳಸಿ ಕಟ್ಟಿದ ಪದಗಳನ್ನು ಕೂಡ ಜನರು ಸುಲಭವಾಗಿ ಒಪ್ಪುತ್ತಾರೆ, ಎಕೆಂದರೆ ಆ ಪದಗಳಲ್ಲಿ ಈಗಿನ ಕನ್ನಡದ ಪದಗಳದೇ ಸೊಗಡಿರುತ್ತದೆ, ಮತ್ತು ಅವುಗಳನ್ನು ಉಲಿಯುವುದೂ ಸುಲಭ.
  • ಈಗಾಗಲೇ ತಿಳಿದಿರುವ ಪದಗಳಂತೆಯೇ ಕೇಳಿಸುವ ಪದಗಳನ್ನು ಜನರು ಒಪ್ಪುವ ಸಾಧ್ಯತೆ ಹೆಚ್ಚು. ಇದೇಕೆಂದರೆ ಒಂದೇ ಬಗೆಯಲ್ಲಿ ಕೇಳಿಸುವ ಪದಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ
  • ಹೊಸ ಪದಗಳ ಅರ್ಥವನ್ನು ಅವರು ಸುಲಭವಾಗಿ ಗುರುತಿಸಲಾದರೆ ಅದನ್ನು ಒಪ್ಪುವ ಸಾಧ್ಯತೆ ಹೆಚ್ಚು. ಇದಕ್ಕೂ ನೆನಪಿಟ್ಟುಕೊಳ್ಳುವುದು ಸುಲಭವೆನ್ನುವುದೇ ಕಾರಣ.
  • ತಂತಮ್ಮ ಕಸುಬುಗಳಲ್ಲಿ ಹೆಸರುವಾಸಿಯಾದ ನುಡಿಗಳ ಪದಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ, ಅವುಗಳಂತೆ ಕೇಳಿಸುವ ಪದಗಳನ್ನೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.
ಹೀಗೆ ಒಂದು ಹೊಸ ಪದವನ್ನು ಜನರು ಒಪ್ಪುವಂತೆ ಮಾಡುವುದು (ಮತ್ತು ಆ ಮೂಲಕ ಕನ್ನಡಕ್ಕೆ ಸೇರಿಸುವುದು) ಸುಲಭದ ಕೆಲಸವಲ್ಲ. ಹಾಗೆಯೇ ಅಷ್ಟು ಕಷ್ಟದ ಕೆಲಸವೂ ಅಲ್ಲ. ಯಾವ ಬಗೆಯ ಪದಗಳನ್ನು ಕನ್ನಡಿಗರು ಒಪ್ಪುತ್ತಾರೆ ಎನ್ನುವ ವಿಷಯದಲ್ಲಿ ನಾವು ಬಹಳ ಮೇಲೆಮೇಲೆ ಇಲ್ಲಿ ತಿಳಿಸಿಕೊಟ್ಟಿದ್ದೇವೆ. ಈ ವಿಷಯದಲ್ಲಿ ಇನ್ನೂ ಹೆಚ್ಚು ಸಂಶೋಧನೆಯಾಗಬೇಕು. ಕನ್ನಡಿಗರಾದ ನಾವು ಈ ಮೂಲಕ ನಮ್ಮನ್ನೇ ಅರ್ಥಮಾಡಿಕೊಳ್ಳಬೇಕು, ಹೊಸ ಹೊಸ ಪದಗಳನ್ನು ನಮ್ಮ ನುಡಿಗೆ ಸೇರಿಸಿಕೊಳ್ಳುತ್ತ ಹೋಗಬೇಕು, ಮತ್ತು ಆ ಮೂಲಕ ಏಳಿಗೆ ಹೊಂದಬೇಕು. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails