ಕನ್ನಡ ಮತ್ತು ಕನ್ನಡಿಗರ ಏಳಿಗೆ - ೪: ಬರೆಯುವುದರ ಗುರಿಯನ್ನು ತಿಳಿದಾಗ ಸಂಸ್ಕೃತದ ಬಳಕೆ ಕಡಿಮೆಯಾಗಲೇಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಕನ್ನಡಿಗರಿಗೆ ಸಂಸ್ಕೃತವು ಪರಿಚಯವಾದದ್ದು ಗ್ರಾಂಥಿಕ ಭಾಷೆಯಾಗಿ

ಸಂಸ್ಕೃತವು ಹಿಂದೆ ಎಂದು ಎಲ್ಲಿ ಯಾವ ಜನರ ಆಡುನುಡಿಯಾಗಿತ್ತೆಂಬುದರ ವಿಷಯದಲ್ಲಿ ತಿಳುವಳಿಕಸ್ತರಲ್ಲಿ ಒಮ್ಮತವಿಲ್ಲ. ಆದರೆ ಸಂಸ್ಕೃತವು ಇಂದಿನ ಬಿಹಾರ ರಾಜ್ಯದಲ್ಲಿ ಸುಮಾರು 500BC ವರೆಗಾಗಲೇ ಆಡುನುಡಿಯಾಗಿ ಉಳಿದಿರಲಿಲ್ಲವೆಂದು ಹೇಳಲು ಗೌತಮ ಬುದ್ಧನು "ಎಲ್ಲರ ನುಡಿ"ಯಾಗಿದ್ದ ಪಾಳಿಯಲ್ಲಿ ತನ್ನ ಸಿದ್ಧಾಂತವನ್ನು ಹರಡಿದ್ದೇ ಆಧಾರವಾಗಿದೆ. ಇನ್ನು ಕರ್ನಾಟಕದ ಮಟ್ಟಿಗಂತೂ ದ್ರಾವಿಡನುಡಿಯು ಸುಮಾರು 1500BC ಯಿಂದಲೇ ಚಾಲ್ತಿಯಿತ್ತೆಂಬುದು ನುಡಿಯರಿಗರ ಮತವಾಗಿದೆ. ಹೀಗಿರುವುದರಿಂದ ಕರ್ನಾಟಕದ ಗೊತ್ತಿರುವ 3,500 ವರ್ಷಗಳ ಹಳಮೆಯಲ್ಲಿ ಕರ್ನಾಟಕದಲ್ಲಿ ಎಲ್ಲೂ ಸಂಸ್ಕೃತವು ಯಾರ ಆಡುನುಡಿಯೂ ಆಗಿರಲಿಲ್ಲವೆಂದು ತೀರ್ಮಾನಿಸಬಹುದು.

ಹಲ್ಮಿಡಿ ಶಾಸನದ ಕಾಲವನ್ನು (450 AD) ಕನ್ನಡದ ಬರಹದ ಹುಟ್ಟೆಂದು ಏಣಿಸಿದರೆ ಕನ್ನಡದ ಬರಹವು ಹುಟ್ಟಿದಾಗಲೇ ಸಂಸ್ಕೃತವು ಆಡುನುಡಿಯಾಗಿರಲಿಲ್ಲ, ಬರಿಯ ಗ್ರಾಂಥಿಕ ಭಾಷೆಯಾಗಿತ್ತು. ಇವತ್ತಿನ ಬಿಹಾರ ರಾಜ್ಯದಲ್ಲಿ ಆಡುನುಡಿಯಾಗಿ ಸಂಸ್ಕೃತವು ಸತ್ತು ಹಲ್ಮಿಡಿ ಶಾಸನದ ಕಾಲದಲ್ಲೇ ಕಡಿಮೆಯೆಂದರೆ 950 ವರ್ಷಗಳಾಗಿದ್ದವು. ಕರ್ನಾಟಕದಲ್ಲಂತೂ ಹಲ್ಮಿಡಿ ಶಾಸನದ 1950ವರ್ಷಗಳ ಹಿಂದಿನ ಹಳಮೆಯಲ್ಲೆಲ್ಲೂ ಸಂಸ್ಕೃತವು ಆಡುನುಡಿಯಾಗಿರಲಿಲ್ಲವೆಂದು ತೀರ್ಮಾನಿಸಬಹುದು.

ಹಾಗೆಂದ ಮಾತ್ರಕ್ಕೆ ಸಂಸ್ಕೃತದಲ್ಲಿ ವೇದ-ಉಪನಿಷತ್ತುಗಳ ಕಲಿಕೆ-ಕಲಿಸುವಿಕೆಗಳು ನಡೆಯುತ್ತಿರಲಿಲ್ಲವೆಂದೇನು ನಾವು ಹೇಳುತ್ತಿಲ್ಲ. ಕರ್ನಾಟಕದಲ್ಲೂ ಅವು ನಡೆಯುತ್ತಿದ್ದವೆಂದು ನಂಬಲು ಆಧಾರಗಳಿವೆ. ಆದರೆ ವೇದ-ಉಪನಿಷತ್ತುಗಳ ಕಲಿಕೆ-ಕಲಿಸುವಿಕೆಗಳು ಇದ್ದ ಮಾತ್ರಕ್ಕೆ ಸಂಸ್ಕೃತವನ್ನು ಆಡುನುಡಿಯೆನ್ನಲಾಗುವುದಿಲ್ಲ. ಕರ್ನಾಟಕದ ಆಗಿನ ಬ್ರಾಹ್ಮಣರು ಸಂಸ್ಕೃತದಲ್ಲಿ ತಮ್ಮ ಕಲಿಕೆ-ಕಲಿಸುವಿಕೆಗಳನ್ನು ನಡೆಸಿದ್ದರೂ ಬೇರೆಲ್ಲ ಕೆಲಸಗಳಿಗೆ ಸಂಸ್ಕೃತವನ್ನು ಬಳಸುತ್ತಿರಲಿಲ್ಲ.

ಒಟ್ಟಿನಲ್ಲಿ ಕನ್ನಡದಲ್ಲಿ ಬರಹವು ಹುಟ್ಟಿದಾಗಲೇ ಸಂಸ್ಕೃತವನ್ನು ಕನ್ನಡಿಗರು ಒಂದು ಆಡುನುಡಿಯಾಗಿ ಕಾಣದೆ ಬರಿಯ ಗ್ರಾಂಥಿಕ ಭಾಷೆಯಾಗಿ ಮಾತ್ರ ಕಾಣುತ್ತಿದ್ದರು ಎನ್ನುವುದು ಸ್ಪಷ್ಟ. ಸಂಸ್ಕೃತವು ಗ್ರಾಂಥಿಕ ಭಾಷೆಯಾಗಿ ಉಳಿದುಕೊಂಡಿದ್ದಕ್ಕೆ ಕಾರಣ ಅದರಲ್ಲಿದ ಅಪಾರವಾದ ಜ್ಞಾನದ ಭಂಡಾರವೇ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಇಂತಹ ಯಾರೂ ಮಾತನಾಡದ, ಬರಿಯ ಬರಹದಲ್ಲಿ ಮಾತ್ರ ಉಳಿದುಕೊಕೊಂಡಿರುವ ಒಂದು ನುಡಿಯು ತಿಳುವಳಿಕಸ್ತ ಕನ್ನಡಿಗರಿಗೆ ಪ್ರೇರಣೆಯಾಗಿತ್ತು. ಈ ಪ್ರೇರಣೆಯಿಂದ ಒಂದು ದೊಡ್ಡ ತಪ್ಪು ಕನ್ನಡದಲ್ಲಿ ಈ ತಿಳುವಳಿಕಸ್ತರಿಂದ ಅವರ ಅರಿವಿಲ್ಲದೆಯೇ ನಡೆದುಹೋಯಿತು. ಅದೇನೆಂದು ಮುಂದೆ ನೋಡೋಣ.

ಗ್ರಾಂಥಿಕ ಭಾಷೆಗಳಿಗೂ ಆಡುನುಡಿಗಳಿಗೂ ಇರುವ ಮುಖ್ಯವಾದ ವ್ಯತ್ಯಾಸ

ಗ್ರಾಂಥಿಕ ಭಾಷೆಗಳಲ್ಲಿ ಬರೆದದ್ದನ್ನು ಇಂಥದ್ದೊಂದು ಜನಾಂಗದವರ ನಾಲಿಗೆಗೆ ಯಾವುದೇ ತೊಡಕಿಲ್ಲದೆ ಉಲಿಯಲು ಆಗಬೇಕು ಎಂಬುದೇ ಇರುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗ್ರಾಂಥಿಕ ಭಾಷೆಗಳನ್ನು ಉಲಿಯುವವರೇ ಇಲ್ಲದಿರುವುದರಿಂದ ಉಲಿಯಲಾಗದ್ದನ್ನೆಲ್ಲ ಆ ಭಾಷೆಯಲ್ಲಿ ಬರೆದರೂ ತೊಂದರೆಯಿಲ್ಲ. ಗ್ರಾಂಥಿಕ ಭಾಷೆಗಳಲ್ಲಿ ಬರೆಯುವುದರ ಉದ್ದೇಶ ಅದನ್ನು ಇಂಥದ್ದೊಂದು ಜನಾಂಗವು ಉಲಿಯಲಿ ಎಂಬುದಾಗಿರುವುದೇ ಇಲ್ಲ. ಯಾರಿಗೂ ಉಲಿಯಲಾಗದಿದ್ದರೂ ಸರಿ, ಗ್ರಾಂಥಿಕ ಭಾಷೆಗಳಲ್ಲಿ ಬೇಕಾದ್ದನ್ನು ಬರೆದುಕೊಂಡು ಹೋಗಬಹುದು. ಆದರೆ ಗ್ರಾಂಥಿಕ ಭಾಷೆಗಳಿಗೂ ಇಂಥದ್ದೆಂಬ ಸೊಲ್ಲರಿಮೆಯು ಇದ್ದೇ ಇರುತ್ತದೆ. ಈ ಸೊಲ್ಲರಿಮೆಯು ಗಣಿತದ ಸೂತ್ರಗಳಿದ್ದಂತೆ. ಈ ಗಣಿತದ ಸೂತ್ರಗಳನ್ನು ಮೀರದಿದ್ದರೆ ಸಾಕು, ಬರೆದಿದ್ದೆಲ್ಲ "ಸರಿ"ಯೆಂದೇ ಎಣಿಸಲಾಗುವುದು. ಹೀಗೆ ಯಾವ ಪದವು ಸರಿ, ಯಾವ ಪದವು ಸರಿಯಲ್ಲ ಎನ್ನುವುದಕ್ಕೆ ಗ್ರಾಂಥಿಕ ಭಾಷೆಗಳಿಗೆ ಅವುಗಳ ಸೊಲ್ಲರಿಮೆಗಳದೇ ಕೊನೆಯ ತೀರ್ಪು, ಯಾವುದೇ ಜನಾಂಗದ್ದಲ್ಲ.

ಆದರೆ ಆಡುನುಡಿಗಳು ಹಾಗಲ್ಲ. ಇವುಗಳನ್ನು ಜನರು "ಆಡು"ವುದರಿಂದಲೇ ಇವುಗಳನ್ನು ಆಡುನುಡಿಯೆಂದು ಕರೆಯುವುದು. ಜನರ ಆಡುನುಡಿಗೆ ಯಾವುದಾದರೂ ಹೊಸದೊಂದು ಪದವು ಸೇರಬೇಕಾದರೆ ಅವುಗಳನ್ನು ಇಂಥದ್ದೆಂಬ ಒಂದು ಜನಾಂಗವು ಪ್ರಯೋಗಿಸಿ, "ಸೈ!" ಎಂದು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಳ್ಳಬೇಕಾದರೆ ಆ ಪದಗಳು ಈ ಜನಾಂಗದವರ ನಾಲಿಗೆಗಳಿಗೆ ಯಾವುದೇ ತೊಡಕಿಲ್ಲದೆ ಉಲಿಯಲಾಗಬೇಕು. ಉಲಿಯಲು ತೊಡಕಾದರೆ ಆ ಪದವನ್ನು ಈ ಜನಾಂಗದವರು ಇಲ್ಲವೇ ಬೇಡ, "ಪೋ!" ಎಂದು ಹಿಂತಿರುಗಿಸಿ ಕಳುಹಿಸಬಹುದು, ಇಲ್ಲವೇ ಅದಕ್ಕೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡು ಉಲಿಯುವಂತಾಗಿಸಿಕೊಂಡು ತಮ್ಮ ಆಡುನುಡಿಗೆ ಸೇರಿಸಿಕೊಳ್ಳಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಡುನುಡಿಗಳಿಗೆ ಉಲಿಯುವ ಇಂಥದ್ದೆಂಬ ಜನಾಂಗವು ಇರುವುದರಿಂದ ಉಲಿಯಲಾರದ್ದು ಯಾವುದೂ ಇವುಗಳಲ್ಲಿ ಇರುವುದೇ ಇಲ್ಲ. ಉಲಿಯಲಾರದನ್ನು ಇವುಗಳ ಮೇಲೆ ಹೇರಲಾಗುವುದಿಲ್ಲ. ಹೀಗಿರುವುದರಿಂದ ಆಡುನುಡಿಗಳಲ್ಲಿ ಯಾವ ಪದವು "ಸರಿ", ಯಾವುದುದು "ತಪ್ಪು" ಎನ್ನುವುದನ್ನು ತೀರ್ಮಾನಿಸುವುದು ಆ ಆಡುನುಡಿಯನ್ನಾಡುವ ಜನಾಂಗವೇ.

ಆ ವ್ಯತ್ಯಾಸವನ್ನು ಅರಿಯದವರಿಂದ ಕನ್ನಡಕ್ಕಾದ ತೊಂದರೆ

ಇನ್ನು ಸಂಸ್ಕೃತ-ಕನ್ನಡಗಳ ವಿಷಯಕ್ಕೆ ಹಿಂತಿರುಗೋಣ. ಬಹಳ ಹಿಂದೆ ಬರಿಯ ಗ್ರಾಂಥಿಕ ಭಾಷೆಯಾಗಿದ್ದ ಸಂಸ್ಕೃತದಿಂದ ಪ್ರೇರಣೆ ಪಡೆದ ಕನ್ನಡದ ತಿಳುವಳಿಕಸ್ತರಿಗೆ ಈಗ ಮೇಲಿನ ಎರಡು ಪ್ಯಾರಾಗಳಲ್ಲಿ ನಾವು ತಿಳಿಸಿಕೊಟ್ಟಿರುವ ಗ್ರಾಂಥಿಕ ಭಾಷೆಗಳಿಗೂ ಆಡುನುಡಿಗಳಿಗೂ ಇರುವ ವ್ಯತ್ಯಾಸವನ್ನು ಅರಿತಿರಲಿಲ್ಲವೆನ್ನಬಹುದು. ಹೀಗಿರುವುದರಿಂದ ಆ ತಿಳುವಳಿಕಸ್ತರು ಕನ್ನಡದಲ್ಲಿ ಬರೆಯಲು ಹೊರಟಾಗ ಗ್ರಾಂಥಿಕ ಭಾಷೆಯ ನಿಯಮಗಳನ್ನೇ ತಮ್ಮ ಬರಹಗಳಿಗೆ ಹಚ್ಚಿಕೊಂಡುಬಿಟ್ಟರು. ಎಂದರೆ - ತಾವು ಬರೆದ ಕನ್ನಡದ ಬರಹಗಳನ್ನು "ಆಡುವ" ಒಂದು ಜನಾಂಗವಿದೆಯೆನ್ನುವುದನ್ನೇ ಮರೆತುಬಿಟ್ಟರು. ತಾವು ಬರೆದದ್ದನ್ನೆಲ್ಲ ಪ್ರಯೋಗ ಮಾಡಿ "ಸೈ!" ಎನ್ನುವ ಇಲ್ಲವೇ "ಪೋ!" ಎನ್ನುವ ಕೋಟಿಗಟ್ಟಲೆ ನಾಲಿಗೆಗಳಿವೆಯೆನ್ನುವುದನ್ನೇ ಮರೆತುಬಿಟ್ಟರು.

ತಾವು ಬರೆದದ್ದು ಹುಲುಜನರಿಗೆ ತಲುಪಬೇಕೆಂಬ ಮಹದಾಸೆಯನ್ನೂ ಅವರು ಇಟ್ಟುಕೊಂಡಿರಲಿಲ್ಲವೇನೋ (ಆಗ ಮುದ್ರಣವೆನ್ನುವುದೂ ಇರಲಿಲ್ಲ). ಇಷ್ಟಲ್ಲದೆ ತಿಳುವಳಿಕಸ್ತರಿಗೂ ಹುಲುಜನರಿಗೂ ನಡುವೆ ಆ ವರೆಗಾಗಲೇ ಒಂದು ಕಂದರವು ಏರ್ಪಟ್ಟಿದ್ದರಿಂದ ತಾವು ಬರೆದ ವಿಷಯಗಳನ್ನು ಅರಿತುಕೊಳ್ಳುವ ಯೋಗ್ಯತೆಯೇ ಹುಲುಜನರಿಗೆ ಇಲ್ಲವೆಂದೂ ಅವರು (ಸರಿಯಾಗಿ) ಎಣಿಸಿರಬಹುದು. ಹಾಗೆ ಎಣಿಸಿಲ್ಲದಿದ್ದರೂ ಆ ಯೋಗ್ಯತೆಯು ಹುಲುಜನರಿಗೆ ಬರಬೇಕಾದರೆ ತಮ್ಮ ಬರಹವು ಯಾವ ರೀತಿ ಇರಬೇಕೆಂದು (ಬುದ್ಧನು ಪಾಳಿಯಲ್ಲಿ ಹೇಳಿಕೊಡಲು ತೀರ್ಮಾನಿಸಿದಂತೆ) ವೈಜ್ಞಾನಿಕವಾಗಿ ತೀರ್ಮಾನಿಸಿಲ್ಲದಿರುವುದಂತೂ ಖಂಡಿತ.

ಅಲ್ಲದೆ, ಬುದ್ಧನು ಜನರ "ಮೈಮೇಲೆ ಬಿದ್ದು" ತಿಳಿಹೇಳಲು ಹೊರಟಂತೆ ಕನ್ನಡದ ಈ ಮೊದಮೊದಲ ತಿಳುವಳಿಕಸ್ತರು ಹೋಗಲಿಲ್ಲವೆನ್ನುವುದೂ ಸ್ಪಷ್ಟವಾಗಿದೆ (ಈ ಕೆಲಸವನ್ನು ಮಾಡಿದ ಕನ್ನಡದ ಮೊಟ್ಟಮೊದಲಿಗನೆಂದರೆ 12ನೇ ಶತಮಾನದ ಬಸವಣ್ಣನವರು ಎನ್ನಬಹುದು. ಹೀಗೆ ಹುಲುಜನರ ಬಗೆಗಿನ ಕಾಳಜಿಯು ಬಸವಣ್ಣನವರಿಗೆ ಇದ್ದುದರಿಂದಲೇ ವಚನಸಾಹಿತ್ಯವು ಆಡುನುಡಿಗೆ ಬಹಳ ಹತ್ತಿರವಾಗಿರುವುದು). ಒಟ್ಟಿನಲ್ಲಿ ಕನ್ನಡದ ಬರಹವು ಹುಟ್ಟಿದಾಗಲೇ ಅದಕ್ಕೂ 99% ಕನ್ನಡಿಗರಿಗೂ ಯಾವುದೇ ನಂಟಿರಲಿಲ್ಲ, ಆ ನಂಟು ಮುಂದೆ ಬರುತ್ತದೆಯೆಂಬ ಮುನ್ನೋಟವಂತೂ ಮೊದಲೇ ಅವರಿಗಿರಲಿಲ್ಲ, ಆ ನಂಟು ಬರದೆ ಹೋದರೆ ಕನ್ನಡಿಗರಿಗೆ ಏಳಿಗೆಯಿಲ್ಲವೆಂಬ ವಿಷಯವೂ ಅವರಿಗೆ ತಿಳಿದಿರಲಿಲ್ಲ. ಹೀಗೆ ಸಂಸ್ಕೃತದಿಂದ ಪ್ರೇರಣೆ ಪಡೆದ ಕನ್ನಡದ ತಿಳುವಳಿಕಸ್ತರು ಕನ್ನಡದ ಬರಹವನ್ನು ಕನ್ನಡಿಗರಿಗೇ ನಂಟಿಲ್ಲದಂತೆ ಬೆಳೆಸಿದರು. ಇದು ಆ ತಿಳುವಳಿಕಸ್ತರ ಅರಿವಿಲ್ಲದೆ ಅವರ ಕೈಯಿಂದಲೇ ಕನ್ನಡ-ಕನ್ನಡಿಗ-ಕರ್ನಾಟಕಗಳಿಗಾದ ಒಂದು ದೊಡ್ಡ ದುರಂತವು. ಇದೇ ತಪ್ಪು ಇಂದಿಗೂ ಮುಂದುವರೆಯುತ್ತಿದೆ.

ಮುಂದಾಗಬೇಕಾದುದು

ಇಲ್ಲಿಯವರೆಗೆ ಕನ್ನಡದ ಬರಹಕ್ಕೆ ಯಾವ ರೀತಿಯ ತೊಂದರೆಯಿದೆಯೆಂದು ತೋರಿಸಿದ್ದಾಯಿತು. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯುವಂತೆ ಬರೆಯಬೇಕೆಂದು ತಿಳುವಳಿಕಸ್ತರು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕಾದ ವಿಷಯಗಳು ಬಹಳ ಇವೆಯೆಂದೂ ಅರಿತುಕೊಳ್ಳಬೇಕು. ವಿಜ್ಞಾನ - ಗಣಿತ - ಮುಂತಾದವುಗಳು ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯಬೇಕಾದವುಗಳೇ. ಹಾಗೆಯೇ ಸರ್ಕಾರದ ಮತ್ತು ಖಾಸಗಿ ಕಂಪನಿಗಳ ಸುತ್ತೋಲೆಗಳು, ಪತ್ರಿಕೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಳಸಲಾಗುವ ಸೂಚನೆಗಳು - ಇವೆಲ್ಲವೂ ಎಲ್ಲರಿಗೂ ತಿಳಿಯುವಂತಹ ಕನ್ನಡದಲ್ಲಿರಬೇಕು. ಜನರಿಗೆ ತಿಳಿಯಬೇಕಾದದ್ದೇ ಬರಹದ ಮುಖ್ಯವಾದ ಉಪಯೋಗವೆಂದು ಮರೆಯಬಾರದು. ಸಂಸ್ಕೃತದಲ್ಲಿ ಬರೆಯುವುದಕ್ಕೂ ಕನ್ನಡದಲ್ಲಿ ಬರೆಯುವುದಕ್ಕೂ ಇರುವ ಈ ಹೆಚ್ಚು-ಕಡಿಮೆಯನ್ನು ಜನರು ಚೆನ್ನಾಗಿ ಅರಿತುಕೊಳ್ಳಬೇಕು. ಒಟ್ಟಿನಲ್ಲಿ ಬರೆಯುವುದರ ಗುರಿಯೇನೆಂದು ತಿಳಿದುಕೊಂಡರೆ ಅತಿಯಾಗಿ ಸಂಸ್ಕೃತದ ಪದಗಳನ್ನು ಬಳಸಿ ಕನ್ನಡದಲ್ಲಿ ಬರೆಯುವುದು ಪೆದ್ದತನವೇ ಎಂದು ತಿಳುವಳಿಕಸ್ತರಿಗೆ ಅರಿವಾಗದೆ ಹೋಗುವುದಿಲ್ಲವೆಂದು ನಮ್ಮ ಅನಿಸಿಕೆ.

11 ಅನಿಸಿಕೆಗಳು:

ತಿಳಿಗಣ್ಣ ಅಂತಾರೆ...

ಹುರುಳು ತುಂಬಿದ ಬರಹ. ಬಲು ಚೊಕ್ಕಟವಾಗಿದೆ ಅರುಹಿದ್ದು.

ವಚನಕಾರರೂ, ದಾಸರು ಮತ್ತು ಅಂಡಯ್ಯನಂತಹ ಕೆಲ ಹಾಡುಕಟ್ಟುಗರು ಆಡುಗನ್ನಡದ ಪೆರ್‍ಮೆಯನ್ನು ಚನ್ನಾಗಿ ಅರಿತು ಬಳಕೆಗೆ ತಂದರು.

ಹಾಗೇ ನಿಮ್ಮಂತಹ ಬಲ್ಲರ ದೆಸೆಯಿಂದಲೂ ಆಡುಗನ್ನಡವು ಕೀಳರಿಮೆ ಮತ್ತು ಕೊರತೆಗಳನ್ನು ನೀಗಿ ಹೆಚ್ಚು ಬಾಳಿಕೆಗೆ ಬರುವುಂತಾದರೆ ಅದೇ ಬಲು ನಲಿವಿನ ಸಂಗತಿ.

ಒದವಿ ನೆನೆಪಿಸಿಕೊಳ್ಳುತ್ತ
ನನ್ನಿಯೊಂದಿಗೆ
ಮಹೇಶ

Anonymous ಅಂತಾರೆ...

ಬಹಳ ಚಂದ ಐತ್ರಿ ನಿಮ್ಮ ಬರಹ...ಇದರಿಂದ ಆಡುನುಡಿಗೂ ಗ್ರಾಂಥಿಕ ನುಡಿಗೂ ಇರುವ ವ್ಯತ್ಯಾಸ ತಿಳಿಸಿಕೊಟ್ರಿ..ನಾಕೂ ತುಂಡುಗಳನ್ನು ಓದಿದ ಮ್ಯಾಲೆ ನನಗ ಬಾಳ ನಲಿವಾತು..ನನಗಿದ್ದ ಕನ್ನಡದ ಅಭಿಮಾನ(ಮನ್ನಿಸಿ ಅಭಿಮಾನಕ್ಕ ಕನ್ನಡದಾಗ ಏನಂತ ಗೊತ್ತಿಲ್ಲ)ಹತ್ತು ಪಟ್ಟು ಹೆಚ್ಚಾತು...
ಹೆನ್ನನ್ನಿ,
ಗಿರೀಶ ರಾಜನಾಳ

Anonymous ಅಂತಾರೆ...

ಸ೦ಸ್ಕ್ರುತವೇ ಕನ್ನಡ, ಸ೦ಸ್ಕ್ರುತದಿ೦ದ ಕನ್ನಡ, ಸ೦ಸ್ಕ್ರುತಕ್ಕಾಗಿ ಕನ್ನಡ ಅ೦ತ ಏನೇನೋ ತಿಳಿದಿದ್ದರು ಜನ. ಈಗ ಆ ಕೊರತೆ ನಿವಾಗಣೆಯಾಗುತ್ತಿದೆ.

Anonymous ಅಂತಾರೆ...

ಕನ್ನಡವು ಮಾತಾಡುವಾಗ ಬೇರೆ, ಬರೆಯುವಾಗನೇ ಬೇರೆ ಅ೦ತ ಚಿಕ್ಕ೦ದಿನಿ೦ದ ಕೇಳ್ಕೊ೦ಡು ಬ೦ದಿದಿವಿ. ಈ ಬೇರೆತನದ ಅವಶ್ಯಕತೆ ಬಗ್ಗೆ ತಲೆಕೆಡಿಸಿಕೊ೦ಡಿರಲಿಲ್ಲ. ಯಾಕೇ೦ದ್ರೆ ಇದೇ ಕನ್ನಡ ಅನ್ನೋ ಬ್ರಮೆ ಇತ್ತು.
ಪ್ರಶ್ನೆ :- ಸೊಲ್ಲರಿಮೆ - ಸೊಲ್ಲು ಅನ್ನೋದು ತಮಿಳಿನ ಪದ ಅಲ್ವಾ?

Anonymous ಅಂತಾರೆ...

sollu annOdu baree thamiLalla.

amma, appa, aNNa, taay, naay, kay, kaal heege saaviraaru padagaLu eraDuu nuDigaLalloo iruva haage sollu kUDa eraDu nuDigaLallu ide.

thamiLu mattu kannaDa ondE bEru-nuDiyinda banDive.

-mahesha

Anonymous ಅಂತಾರೆ...

olle baraha aadre 'ಉಲಿ' andre Odu/Helu anta bega gottaglilla .... alde illivargu yaavude aadu bhasheyalli 'ಸೊಲ್ಲರಿಮೆ' anno pada balasiddu gottilla .....

Anonymous ಅಂತಾರೆ...

ಉಲಿ ಎಂಬುದು ಬಲು ಬಳಕೆಯಲ್ಲಿರುವ ಪದ. ತಮಳಲ್ಲಿ ಒಲಿ ಎಂಬ ರೂಪು.

ಇನ್ನು ಸೊಲ್ಲರಿಮೆ ಎಂದು ಹೊಸ-ಶಾಲೆ ಬಳಸಿದರೆ ಅದು ತಕ್ಕದ್ದೇ ಅಲ್ಲವೇ?


ಹೆಸರಿಲ್ಲದೇ ಇರುವವರಿಗೆ ಗೊತ್ತಾಗದೇ ಇರಬಹುದು.. ಆದರೆ ಹಲವರಿಗೆ ಈಗಾಗಲೇ ಗೊತ್ತು. ಗೊತ್ತಿಲ್ಲದೇ ಇದ್ದರೆ ಮುಂದೆ ಹೊಸ-ಶಾಲೆಯವರು ಕಲಿಯುವರು.


ಹೊಸತು ಯಾವಾಗ ’ಗೊತ್ತಿಲ್ಲ’ ಎಂಬುವುದರಿಂದಲೇ ಮೊದಲಾಗುವುದು.

Anonymous ಅಂತಾರೆ...

ohh ಹೆಸರಿಲ್ಲದೇ ಇರುವವರು tumba 'ಉಲಿ' taare anta kaansutte ... esht jana ಹೊಸ-ಶಾಲೆಗೆ hOgi ಸೊಲ್ಲರಿಮೆ kalitaare noDona ...

ಕುಕೂಊ.. ಅಂತಾರೆ...

ಮನ್ನಿಸಿ ಅಭಿಮಾನಕ್ಕ ಕನ್ನಡದಾಗ ಏನಂತ ಗೊತ್ತಿಲ್ಲ

ಅಭಿಮಾನ- ಕಯ್ವಾರ(ಕೈವಾರ)
ಅಭಿಮಾನಿ- ಕಯ್ವಾರಿ

ಸ್ವಾಮಿ
ಪುಣೆ

Anonymous ಅಂತಾರೆ...

ಅಭಿಮಾನ ಎಂದರೇನು?

ಕಾರ್ಯಕರ್ತ ಅಂತಾರೆ...

ಕನ್ನಡ ಮತ್ತು ಸಂಸ್ಕೃತ ಎಂದೂ ಒಂದಕ್ಕೊಂದು ಪ್ರತಿಸ್ಪರ್ಧಿಯಾಗಿರಲಿಲ್ಲ. ಬದಲಾಗಿ ನಮ್ಮ ಹಿರಿಯರ ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿದ್ದವು. ಕನ್ನಡವನ್ನು ಖಂಡಿತವಾಗಿ ಬೆಳೆಸೋಣ. ಹಾಗೆಯೇ ಸಂಸ್ಕೃತಕ್ಕೂ ಅದರದೇ ಆದ ಮಹತ್ವ ಮತ್ತು ಉಪಯೋಗವಿದೆ. ಹಾಗಾಗಿ, ನಿಮ್ಮ ಎಲ್ಲ ಅಭಿಪ್ರಾಯದ ಹಿಂದಿನ ಅಭಿಮಾನ ಮೆಚ್ಚುವಂತಹುದಾದರೂ, ನಾವು ನಮ್ಮ ಶಕ್ತಿಯನ್ನು ಇಂದು ಕ್ರೂಢೀಕರಿಸುವ ಅಗತ್ಯವಿದ್ದು ಅದು ಆಂಗ್ಲ ಭಾಷೆಯ ವಿರುದ್ಧವಾಗಿರಬೇಕು.

ನಮ್ಮ ನಿಜವಾದ ’ವೈರಿ’ ಯಾರೆಂಬುದು ನಮಗೆ ಅರಿವಾಗಬೇಕಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails