“ಅಣ್ಣದೀರಾ! ನಿಮ್ಮ ಭಾಷೇನಾ ನೀವು ಮನೇಲಿ ಬಳುಸ್ಕೊಳ್ಳಿ, ಬೆಳುಸ್ಕೊಳ್ಳಿ… ಆದ್ರೆ ಸರ್ಕಾರದ, ಸಮಾಜದ ಜೊತೆಗಿನ ವ್ಯವಹಾರಾನ್ನೆಲ್ಲಾ ನಮ್ ಭಾಷೇಲಿ ಮಾಡಿ. ಯಾಕಂದ್ರೆ ಭಾರತದಲ್ಲಿ ಒಗ್ಗಟ್ಟು ಹೆಚ್ಚಬೇಕು, ಭಾರತ ದೇಶದ ಎಲ್ಲಾ ಪ್ರಜೆಗಳ್ಗೂ ಅರ್ತ ಆಗೋಕೆ ನಮ್ ಭಾಷೇನೆ ಬಳುಸ್ಬೇಕು. ಇದೇ ಕಾರಣಕ್ಕೆ ನೀವು ನಮ್ ಭಾಷೇನ ಕಲೀಬೇಕು, ಇಲ್ದಿದ್ರೆ ಭಾರತದಲ್ ಇರಕ್ ನಾಲಾಯಕ್ಕು. ಇದುನ್ ಬ್ಯಾಡಾ ಅಂದ್ರೆ, ವಿರೋಧಾ ಮಾಡುದ್ರೆ, ಇದುನ್ ಕಲೀದೆ ಹೋದ್ರೆ ನೀವು ದೇಶದ್ರೋಹಿಗಳಾಗ್ತೀರಾ, ಇದುನ್ ಒಪ್ಪಿ ಕಲಿತರೆ ನಿಮಗೆ ದೇಶಪ್ರೇಮ ಇದೆ ಅಂತಾ ಅರ್ತ” ಅನ್ನೋ ಮಾತುನ್ನ ಏನಂತಾ ಕರೀತೀರಾ? ಈ ಮಾತಿಗೆ ಮರುಳಾದ್ರೆ ನಮ್ಮ ಗುಂಡೀನಾ ನಾವೇ ತೋಡ್ಕೊಂಡಂಗ್ ಆಗಲ್ವಾ ಗುರು?
ದೇಶಪ್ರೇಮ ಮತ್ತು ಹಿಂದಿ!ನೀವು ಹಿಂದೀ ಕಲೀದಿದ್ರೆ ನಿಮಗೆ ದೇಶಪ್ರೇಮ ಇಲ್ಲಾ ಅನ್ನೋ ಮಾತಾಡೋರು ತಿಳ್ಕೊಬೇಕಾದ್ದು ಒಂದಿದೆ. ಯಾವುದೇ ವ್ಯಕ್ತಿ ತನ್ನಂತಾನೆ ಹಿಂದಿ ಕಲೀಬಾರ್ದು, ಅಸ್ಸಾಮೀಸ್ ಕಲೀಬಾರ್ದು ಅಂತನ್ನೋ ಮಾತೇ ಆಡ್ತಿಲ್ಲ. ನಮ್ಮ ಜನರನ್ನು ಕಾಪಾಡಬೇಕಾದ ಭಾರತ ಸರ್ಕಾರಾನೇ ಹಿಂದೀನ ಕಲೀದಿದ್ರೆ ನಿಮಗೆ ನೀರಿಲ್ಲ, ನೆರಳಿಲ್ಲ ಅನ್ನೋ ಧೋರಣೆ ಹೊಂದಿರೋದು ಸರಿಯಲ್ಲ ಅಂತಿದೀವಿ. ಹಿಂದೀ ಹೇರಿಕೆಯ ಇಂಥಾ ಪರಿಸ್ಥಿತಿ ಹುಟ್ಟುಹಾಕಕ್ಕೆ ನಾವೇ ಆರಿಸೋ ಸರ್ಕಾರ ಮುಂದಾಗೋದ್ರ ಅರ್ಥ ಇದು ನಮ್ಮ ಸರ್ಕಾರ ಅಲ್ಲಾ, ನಮ್ಮತನಾನ ಅಳಿಸಲು ಮುಂದಾಗಿರೋ ಸರ್ಕಾರ ಅಂತಾ ಅಲ್ವಾ? ಹಾಗೂ ನಾವೆಲ್ಲಾ ಹಿಂದೀನ ಕಲುತ್ರೆ ಮಾತ್ರಾ ದೇಶಪ್ರೇಮಿಗಳಾ?
ಹಿಂದಿ ಭಾಷೆಯ ಗಂಧ ಗಾಳಿ ಇಲ್ಲದಿದ್ದ ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಶಿವಪುರದ ಸತ್ಯಾಗ್ರಹಿಗಳು, ವಿದುರಾಶ್ವತ್ಥದ ಗೋಲೀಬಾರಿನಲ್ಲಿ ಜೀವ ತೆತ್ತವರು… ಇವರೆಲ್ಲಾ ಹಾಗಾದ್ರೆ ದೇಶದ್ರೋಹಿಗಳಾ? ಅಥವಾ ಇವರೆಲ್ಲಾ ಹಿಂದೀ ಕಲಿತು ದೇಶಪ್ರೇಮ ಬರುಸ್ಕೊಂಡ್ರಾ? ಹಿಂದಿ ಕಲಿಕೆಗೂ ದೇಶಭಕ್ತಿಗೂ ತಳುಕು ಹಾಕೋದು ಅಂದ್ರೆ ಇದು ನಮ್ಮೊಳಗಿರೋ ಭಾರತದ ಬಗೆಗಿನ ಶ್ರದ್ಧೆ ನಿಷ್ಠೇನಾ ಸಾಣೆ ಹಿಡೀತೀವಿ ಅನ್ನುತ್ತ ತಮ್ಮ ಬೇಳೆ ಬೇಯುಸ್ಕೊಳಕ್ಕೆ ಹಿಂದಿ ಪ್ರದೇಶದ ಜನರು ಹೂಡಿರೋ ತಂತ್ರಾ ಅನ್ಸಲ್ವಾ ಗುರು? ಇಷ್ಟಕ್ಕೂ ಈ ಥರಾ ನಾವೆಲ್ಲಾ ಹಿಂದಿ ಕಲುತ್ರೆ ಭಾರತಕ್ಕೆ ಏನು ಲಾಭ ಅಂತಾ ನೋಡೋಣ ಬಾ ಗುರು!!
ಸಂಪರ್ಕ ಭಾಷೆ ಹಿಂದಿ ಆದ್ರೇನಾಗುತ್ತೆ ಗೊತ್ತಾ?“ನೀವು ಕರ್ನಾಟಕದಿಂದ ಹೊರಗ್ ಬಂದು ನೋಡಿ, ಅಲ್ಲಿನ ಊರುಗಳಿಗೆ ಹೋದಾಗ ಯಾವ ಭಾಷೆ ಮಾತಾಡ್ತೀರಿ? ಎಷ್ಟೂ ಅಂತಾ ಭಾಷೆಗಳನ್ನು ಕಲೀತೀರಿ? ಅಧಿಕೃತವಾಗೇ 22 ಭಾಷೆಗಳಿವೆ, ಅವೆಲ್ಲಾ ಕಲಿಯಕ್ ಆಗುತ್ತಾ? ಅದರ ಬದಲಾಗಿ ಒಂದು ಭಾಷೆಯಾಗಿ ಹೆಚ್ಚು ಜನಕ್ ತಿಳಿದಿರೋ ಹಿಂದೀ ಬಳಸೋದು ಒಳ್ಳೇದಲ್ವಾ?” ಅಂತ ಹಿಂದಿ ಬೇಕೆನ್ನೋ ಗೆಳೆಯರು ವಾದಿಸೋದನ್ನು ನಾವೂ ನೀವೂ ಕೇಳೇ ಇರ್ತೀವಿ. ಈಗ ಒಂದು ಕಡೆಯಿಂದ ನಾವು ಹೀಗ್ ಮಾಡೋದ್ರು ಪರಿಣಾಮ ಏನಾದೀತು ಅಂತ ನೋಡೋಣ. ನಮ್ಮ ಕನ್ನಡನಾಡಿನ ಒಂದು ಊರಿಗೆ (ಉದಾಹರಣೆಗೆ ಶಿವಮೊಗ್ಗಾ ಅಂದ್ಕೊಳ್ಳಿ) ಭಾರತದ ಬೇರೆ ಬೇರೆ ಮೂಲೆಗಳಿಂದ ತಮಿಳ್ರು, ತೆಲುಗ್ರು, ಗುಜರಾತಿಗಳೂ, ಪಂಜಾಬಿಗಳೂ, ಅಸ್ಸಾಮಿಗಳೂ, ಬೆಂಗಾಲಿಗಳೂ, ಒರಿಯಾದವರೂ… ಅವ್ರೂ ಇವ್ರೂ ಎಲ್ಲಾ ಬರ್ತಾರೆ. ಇವರೆಲ್ಲಾ ಯಾಕೆ ಬರ್ತಾರೆ ಅಂದ್ರೆ ಅಲ್ಲಿಗೆ ಹೊಸ ಹೊಸ ಉದ್ದಿಮೆಗಳನ್ನು ತರೋ ಮೂಲಕ ನಮ್ಮ ಯಡ್ಯೂರಪ್ಪನೋರು ಉದ್ಯೋಗಾವಕಾಶಗಳನ್ನು ಹೆಚ್ಚಿಸಿದ್ರು ಅಂತಾನೆ ಇಟ್ಕೊಳ್ಳಿ. ಇವರೆಲ್ಲಾ ನಮ್ಮ ಘನಸರ್ಕಾರದ ಮತ್ತು ಹಿಂದೀವಾದಿಗಳ ಆಶಯದಂತೆ ಹಿಂದಿಯನ್ನು ಕಲಿತೇ ಬರ್ತಾರೆ ಅಂದುಕೊಳ್ಳೋಣ. ಈಗ ಇವರ ಜೊತೆ ವ್ಯವಹರಿಸಬೇಕಾಗಿರೋ ನಮ್ಮೂರಿನ ಆಟೊದವ್ರು, ಬಸ್ಸಿನವ್ರು, ತರಕಾರಿಯೋರು, ಮನೆಕೆಲ್ಸದೋರು, ದಿನಸಿ ಅಂಗಡಿಯೋರು, ಮಾಲ್‍ಗಳೋರು, ನಗರಪಾಲಿಕೆಯೋರು, ತೆರಿಗೆ ಇಲಾಖೆಯೋರು, ರಾಜ್ಯಸರ್ಕಾರದೋರು ಎಲ್ಲಾ ಹಿಂದೀಲಿ ತಾನೇ ವ್ಯವಹರಿಸಬೇಕು? ಅಷ್ಟೇ ಅಲ್ಲಾ, ನೀರಿನ ಬಿಲ್ಲಿಂದ ಹಿಡ್ದು ಜಾಹೀರಾತು ಫಲಕಗಳ ತನಕ ಎಲ್ಲಾದ್ರಲ್ಲೂ, ಇವರೆಲ್ಲಾ ಕಲಿತು ಬಂದಿರೋ ಹಿಂದೀ ತಾನೇ ಇರಬೇಕಾದ್ದು? ಪಕ್ಕದ ಗಾಜನೂರಿನ ಗಂಡು, ಓದು ತಲೆಗೆ ಹತ್ತಿಲ್ಲಾ ಅಂತಾ ಶಿವಮೊಗ್ಗಾಕ್ಕೆ ಬಂದು ಏನಾದ್ರೂ ಕೆಲಸ ಹುಡುಕ್ಕೊತೀನ್ ಅಂದ್ರೆ ಆಗುತ್ತಾ? ಆಟೋ ಓಡ್ಸೋದ್ರಿಂದ ಹಿಡ್ದು ಅಂಗಡಿ ಸೇಲ್ಸ್‍ಬಾಯ್ ಆಗೋಕೂ ಬರೀ ಹಿಂದೀ ಬರಲ್ಲಾ ಅನ್ನೋ ಒಂದು ಕಾರಣಕ್ಕೆ ಅವ ನಾಲಾಯಕ್ಕಾಗಲ್ವಾ? ಇಂಥಾ ಶಿವಮೊಗ್ಗದಲ್ಲಿ ಕನ್ನಡದ ಗತಿ ಏನಾಗಿರುತ್ತೆ? ಕನ್ನಡಿಗರ ಗತಿ ಏನಾಗಿರುತ್ತೆ? ಅಂತಾ ಒಸಿ ಯೋಚ್ಸು ಗುರು… ಕನ್ನಡ ಅನ್ನೋದು ಅಡುಗೆ ಮನೆ ಸೇರ್ಕೊಂಬುಡುತ್ತೆ ಅಂತೀರಾ? ಊಹೂ, ಅದೂ ಆಗಲ್ಲ. ಯಾಕಂದ್ರೆ ಅಷ್ಟು ಹೊತ್ತಿಗೆ ಮಾರ್ಕೆಟ್‍ನಲ್ಲಿ ಕೊಂಡು ಅಡುಗೆ ಮನೆಗೆ ನಾವು ತಂದಿಡೋದು ಸಬ್ಜಿ., ದಾಲ್, ಚಾವಲ್ ಆಗೋಗಿರುತ್ತಲ್ಲಾ? ಸೌಹಾರ್ದತೆ ಅಂತಾ ನಾವೇನಾದ್ರೂ ಹಿಂದೀನಾ ಒಪ್ಪೋದಾದ್ರೆ ನಮಗಾಗಿ ನಾವೇ ಸರಿಯಾದ ಅಳತೆಯ, ಒಳ್ಳೇ ಶ್ರೀಗಂಧದ ಸೊಗಸಾದ ಶವಪೆಟ್ಟಿಗೆ ಮಾಡ್ಕೊಂಡಂಗೆ ಅಂತಾ ಅನ್ಸಲ್ವಾ ಗುರು?
ಹಿಂದಿ ಬೇಕು ಅನ್ನೋದ್ರು ಹಿಂದಿರೋ ನಿಜಕಾರಣ“ಕನ್ನಡದ ಮಂಕುಮುಂಡೇವಾ, ಭಾರತದ ಒಗ್ಗಟ್ಟು ಅಂದ್ರೇನು ಗೊತ್ತಾ? ಇಡೀ ಭಾರತದ ಯಾವ ಮೂಲೆಗೆ ಹೋದ್ರೂ ಹಿಂದಿಯೆನ್ನುವ ನಮ್ಮ ಭಾಷೆ ನಡೀಬೇಕು. ಹಿಂದಿ ಮಾತಾಡೋಕೆ ಬರದಿದ್ರೆ ಭಾರತೀಯ ಅಲ್ಲಾ ಅಲ್ವಾ, ಹಾಗಾಗಿ ಹಿಂದಿ ಮಾತಾಡೋರಿಗೆ ಅಂದ್ರೆ ಭಾರತೀಯರಿಗೆ ಭಾರತದ ಯಾವ ಮೂಲೇಲೂ ಕಳ್ಳೇಕಾಯಿ ತೊಗೊಳ್ಳೋಕೂ ಭಾಷಾ ಸಮಸ್ಯೆ ಆಗಬಾರದು. ನೀವು ಚೆನ್ನಾಗಿ ಹಿಂದೀನ ಕಲಿತುಕೊಳ್ಳಿ ಅಂತಾನೆ
ರೈಲ್ವೇ ಡಿ ದರ್ಜೆ ಕೆಲಸಗಳ ಥರದ ಕೇಂದ್ರಸರ್ಕಾರದ ಕೆಲಸಗಳು ಬೇಕು ಅನ್ನೋದಾದ್ರೆ ಅರ್ಜೀನಾ ಹಿಂದೀಲಿ ಬರೀರಿ ಅನ್ನೋದು. ಇಲ್ಲಾಂದ್ರೆ ನೀವು ಕೆಲಸ ಮಾಡೋ ರೈಲು ನಿಲ್ದಾಣಕ್ಕೆ ಬರೋ ಭಾರತೀಯರಿಗೆ ತೊಂದರೆ ಆಗಲ್ವಾ? ಇವತ್ತು ನಿಮಗೆ ಅನ್ನ ಕೊಡಕ್ಕೆ ಇಂಗ್ಲೀಷ್ ಇದೆ ಅಂತೀರಾ? ಥೂ… ಅದು ನಮ್ಮನ್ನು ಮುನ್ನೂರು ವರ್ಷ ಗುಲಾಮರನ್ನಾಗಿಸಿದ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಕುರುಹು. ಹೋಗಿ ಹೋಗಿ ಅಷ್ಟು ದೂರದಲ್ಲಿರೋ ಇಂಗ್ಲೀಷ್ ಸೂಜಿಯಿಂದ ಯಾಕೆ ಕಣ್ಣು ಚುಚ್ಕೋತೀರಾ? ಇಗೋ ನೋಡಿ, ನಿಮ್ಮದೇ ದೇಶದ ಹೊಚ್ಚ ಹೊಸ ಚಿನ್ನದ ಸೂಜಿಯಿದೆ, ತಗೊಂಡು ಹೆಟ್ಕೊಳ್ಳಿ” ಅಂತೆಲ್ಲಾ ಹೇಳುದ್ರೆ ಜನಾ ಕೇಳ್ತಾರಾ ಗುರು? ಅದುಕ್ಕೆ ನಿಮ್ಮ ರಾಷ್ಟ್ರಪ್ರೇಮದ ಕುರುಹಾಗಿ, ಭಾರತದ ಒಗ್ಗಟ್ಟಿಗಾಗಿ, ಭಾರತೀಯರೆಲ್ಲರೂ ಒಂದೆಂದು ಸಾರಲಿಕ್ಕಾಗಿ, ಹಿಂದೀ ಎಂಬ ರಾಷ್ಟ್ರೀಯ ಮಟ್ಟದ ಉರುಫ್ ರಾಷ್ಟ್ರೀಯ ಉರುಫ್ ರಾಷ್ಟ್ರಭಾಷೇನಾ (ನೀವು ಸುಮ್ನೆ ಗೊಂದಲ ಮಾಡ್ಕೊಳ್ಳಿ ಅಂತಾ ಅಷ್ಟು ಹೆಸರು) ಒಪ್ಪಿಕೊಳ್ರೋ ಹುಚ್ಚಪ್ಪಗಳಿರಾ ಅಂತಿದಾರೆ ಅನ್ನೋದೇ ದಿಟ ಅಲ್ವಾ ಗುರು?