ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ, ಕಳೆದ ಕೆಲವು ದಿನಗಳಿಂದ ಎದ್ದಿರೋ ಕೋಲಾಹಲ ನೋಡ್ತಾಯಿದ್ರೆ ಈ ಚಿತ್ರರಂಗದ ಒಳಗಿನ ಮಂದೀನೇ ಕನ್ನಡ ಚಿತ್ರರಂಗವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಿರೋ ಹಾಗೆ ಕಾಣ್ತಾಯಿಲ್ಲಾ ಗುರೂ! ಇಲ್ಲಿರೋ ಜನಾ ಇಡೀ ನಾಡುನ್ನ, ಉದ್ಯಮಾನಾ ಮತ್ತು ಸರ್ಕಾರಾನಾ ಬ್ಲಾಕ್‍ಮೇಲ್ ತಂತ್ರ ಉಪಯೋಗಿಸಿ ಆಡುಸ್ತಾ ಇದಾರಾ ಅನ್ನೋ ಅನುಮಾನ ಜನರಲ್ಲಿ ಇಷ್ಟೊತ್ತಿಗೆ ಮೂಡಿರಲೂಬಹುದು. ಒಟ್ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತಪ್ಪು ನಡೆ ಇಡ್ತಿದ್ಯಾ? ಇಂಥಾ ನಡೆಗಳಿಂದಾಗಿ ಇಡೀ ಚಿತ್ರೋದ್ಯಮ ಮತ್ತು ಕನ್ನಡನಾಡಿಗೇ ಹಾನಿ ಮಾಡ್ತಿದ್ಯಾ? ಅನ್ನೋ ಪ್ರಶ್ನೆಗಳು ಜನರಲ್ಲಿ ಹುಟ್ಕೊಂಡಂಗಿದೆ ಗುರೂ!
ಚಿತ್ರರಂಗ ಕಡೆಗಣಿಸಿರೋ ಅನ್ನದಾತರು!
ಹೌದೂ, ಮಾತೆತ್ತುದ್ರೆ ಅನ್ನದಾತರು, ಅಭಿಮಾನಿ ದೇವರೂ ಅಂತಾ ಜನರನ್ನು ಅಟ್ಟಕ್ಕೇರಿಸೋ ಈ ಜನ, ನಿಜಕ್ಕೂ ಈ ಇಡೀ ಪ್ರಕರಣದಲ್ಲಿ ಜನರ `ಆಯ್ಕೆಯ ಸ್ವಾತಂತ್ರ್ಯಾ'ನ ಮತ್ತು ಜನರು ತಮ್ಮ `ತಾಯ್ನುಡಿಯಲ್ಲಿ ಮನರಂಜನೆ' ಪಡೆಯೋ ಹಕ್ಕುನ್ನ ನಿರಾಕರುಸ್ತಾನೆ ಬಂದಿದಾರೆ. ಪರಭಾಷಾ ಚಿತ್ರಗಳ ಬಗ್ಗೆ, ಡಬ್ಬಿಂಗ್ ಬಗ್ಗೆ ಕಿಡಿ ಕಾರುವ ಸದರಿ ವಾಣಿಜ್ಯ ಮಂಡಲಿಯವನ್ನೂ, ಇವರನ್ನು ಬೆಂಬಲಿಸೋ ಚಿತ್ರರಂಗದವರನ್ನೂ "ಅನ್ನದಾತರೂ, ಅಭಿಮಾನಿ ದೇವರೂ - ಅಂತಾ ನೀವು ಪದೇ ಪದೇ ಹೊಗಳಿ ಅಟ್ಟಕ್ಕೇರಿಸುವ ಕನ್ನಡ ಪ್ರೇಕ್ಷಕನಿಗೆ ಏನು ಬೇಕು? ಏನು ಬೇಡಾ? ಅಂತಾ ಯಾವತ್ತಾದ್ರೂ ಯೋಚಿಸಿದ್ದೀರಾ" ಅಂತಾ ಕೇಳಬೇಕಾಗಿದೆ. "ಹೊಲಸು ರಿಮೇಕುಗಳು, ಕೆಟ್ಟದಾಗಿ ಕನ್ನಡ ಉಲಿಯುವ ಹಾಡುಗಾರರು, ಇಲ್ಲಿ ಅವಕಾಶಕ್ಕಾಗಿ ಕಾದಿರುವ ಪ್ರತಿಭಾವಂತರನ್ನು ಕಡೆಗಣಿಸಿ ಕರೆತರೋ ನಾಯಕಿಯರು, ನಟರುಗಳು ಇವನ್ನೆಲ್ಲಾ ಯಾಕೆ ತಂದಿರಿ ಅಂತಾ ನಾವೇನೂ ಕೇಳಿಲ್ಲಾ… ನಮಗೆ ಇಷ್ಟವಾದಾಗ ಗೆಲ್ಸಿದೀವಿ, ಚೆನ್ನಾಗಿಲ್ಲದಿದ್ದಾಗ ಸೋಲಿಸಿದ್ದೀವಿ... ಜನಕ್ ಬೇಡದಿದ್ರೆ ಮಾರುಕಟ್ಟೆ ಗೆಲ್ಲಕ್ ಆಗಲ್ಲಾ" ಅನ್ನೋದೇ ದಿಟವಾದ ಮಾತು. ಆದರೆ ಜನರಿಗೆ ಆಯ್ಕೆಯ ಸ್ವಾತಂತ್ರ ಇರಬೇಕು, ಅವರಿಗೆ ಬೇಕಾದ್ದನ್ನು ಪಡೆದುಕೊಳ್ಳುವ, ಬೇಡದ್ದನ್ನು ನಿರಾಕರಿಸುವ ಹಕ್ಕು ಇರಬೇಕು ತಾನೆ? 500 ಸಿನಿಮಾ ಸರದಿಯಲ್ಲಿ ಡಬ್ ಆಗಿ ಕಾಯ್ತಿದೆ ಅಂದ್ರೆ… ಬರಲಿ ಬಿಡಿ. ಜನ ಬೇಕಾದ್ದನ್ನು ಹಿಟ್ ಮಾಡ್ತಾರೆ, ಬೇಡದಿದ್ರೆ ಡಬ್ಬಾ ಸೇರುಸ್ತಾರೆ. ವರ್ಷಕ್ಕೆ ನಾಲ್ಕೇ ಸಿನಿಮಾ ಹಿಟ್ ಮಾಡ್ಬೇಕು ಅಂತಾ ಜನರೇನೂ ಆಣೆ ಮಾಡಿಲ್ವಲ್ವಾ? ಚೆನ್ನಾಗಿರೋ ಸಿನಿಮಾ ಕನ್ನಡದೋರು ತೆಗೆದರೂ ಓಡುತ್ತವೆ. ಹಾಗಾಗಿ ಇದ್ದಕ್ಕಿದ್ದಂತೆ ಹತ್ತು ಪರಭಾಷೆಯ ಚಿತ್ರಗಳು ಡಬ್ ಆಗಿ ಬಂದು ಚೆನ್ನಾಗಿ ಓಡುದ್ರೆ ಕನ್ನಡ ಚಿತ್ರಾನ ಜನ ನೋಡಲ್ಲಾ ಅನ್ನೋ ಭಯಾ ಏಕೆ? ಹೊಸಬರ ಅನೇಕ ಸಿನಿಮಾಗಳು ಕೂಡಾ ಯಶಸ್ವಿಯಾಗುತ್ತಿರೋದು ಆ ಚಿತ್ರಗಳು ಚೆನ್ನಾಗಿವೆ ಅನ್ನೋ ಒಂದೇ ಕಾರಣಕ್ಕ ತಾನೇ? ಇಷ್ಟಕ್ಕೂ ಗ್ರಾಹಕನಿಗೆ ಇರಬೇಕಾದ ಆಯ್ಕೆಯ ಸ್ವಾತಂತ್ರವನ್ನು ನಿರಾಕರಿಸೋ ಹಕ್ಕನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗಾಗಲೀ ಚಿತ್ರರಂಗಕ್ಕಾಗಲೀ ಕೊಟ್ಟೋರು ಯಾರು? ಇವರು ‘ಚಿತ್ರರಂಗದ ಕಾರ್ಮಿಕರ ಹಿತ’ ಅನ್ನೋ ವಾದ ಮುಂದಿಟ್ಟುಕೊಂಡು ಕನ್ನಡದ ಗ್ರಾಹಕರ ಹಿತವನ್ನು ಕಡೆಗಣಿಸೋದು ಸರೀನಾ… ಗುರೂ?
ನೆನಪಿರಲಿ...
ಇಷ್ಟೆಲ್ಲಾ ಆಗ್ತಿದ್ರೂ ಕನ್ನಡ ಚಲನಚಿತ್ರರಂಗದವರು ತಾವು ಸ್ವತಂತ್ರವಾಗಿ ಬದುಕಬೇಕು ಅನ್ನೋ ಮನಸ್ಥಿತೀಲೇ ಇದ್ದಂಗಿಲ್ಲಾ. ಸಿನಿಮಾ ತೆಗೆದರೆ ಸಬ್ಸಿಡಿ, ತೆರಿಗೆ ವಿನಾಯ್ತಿ ಅಂತಾ ಸರ್ಕಾರದ ಕಡೆ ಊರುಗೋಲಿಗಾಗಿ ನೋಡೋದನ್ನು ಇನ್ನಾದ್ರೂ ಬಿಡಬೇಕಾಗಿದೆ. ಇದನ್ನು ಒಂದು ಇಂಡಸ್ಟ್ರಿ ಅಂತಾ ಪರಿಗಣಿಸಿ, ತಮ್ಮ ಸಿನಿಮಾನ ಒಂದು ಮಾರುಕಟ್ಟೆಯನ್ನು ಗೆಲ್ಲಲಿ ಅಂತಾ ಬಿಡಬೇಕಾದ ಉತ್ಪನ್ನ ಎಂದು ಪರಿಗಣಿಸಬೇಕಾಗಿದೆ. ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು - ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಇದು ಬಡಕಲು, ಇದು ಅಳಿವಿನಂಚಿನಲ್ಲಿದೆ - ಅಂತ ಅಂದಂದೇ ಸಬ್ಸಿಡಿ ರೂಪದಲ್ಲೂ, ವಿನಾಯ್ತಿ ರೂಪದಲ್ಲೂ ಪಡೆದುಕೊಳ್ತಾನೆ ಇದ್ರೆ ಯಾವಾಗ ನಮ್ಮ ಚತ್ರರಂಗ ತನ್ನ ಕಾಲಮೇಲೆ ತಾನು ನಿಲ್ಲುವುದು? ಹೀಗೆ ಊರುಗೋಲನ್ನೇ ನಂಬಿರೋ ಚಿತ್ರರಂಗ ಹೇಗೆ ತಾನೇ ಉಳಿದೀತು? ಪರಭಾಷೆ ಚಿತ್ರ ಬ್ಯಾನ್, ಡಬ್ಬಿಂಗ್ ಬ್ಯಾನ್ ಅನ್ನುವಂತಹ ನಕಾರಾತ್ಮಕ ಕ್ರಮಮಗಳಿಂದ ಚಿತ್ರರಂಗಕ್ಕೆ ಏನುಪಯೋಗ? ಎನ್ನುವುದನ್ನೆಲ್ಲಾ ಚಿಂತಿಸಬೇಕಾಗಿದೆ.
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ? ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ? ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ಹೊಸಹೊಸ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದ್ರು ಬಗ್ಗೆ ಚಿತ್ರರಂಗ ಯೋಚಿಸಬೇಕಾಗಿದೆಯೇ ಹೊರತು ಬರೀ... ಸರ್ಕಾರ ನಮಗೆ ಸಬ್ಸಿಡಿ ಅದೂ ಇದೂ ಅಂತಾ ಜನರ ತರಿಗೆ ದುಡ್ಡುನ್ನ ಕೊಡ್ತಾನೆ ಇರಬೇಕು, ನಮ್ಮ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಬಾರದು, ಬೇರೆ ಭಾಷೆಯ ಚಿತ್ರಗಳು ಬರಬಾರದು, ನಮಗೆ ಇಂತಿಷ್ಟು ಸವಲತ್ತುಗಳು ಬೇಕು ಅನ್ನೋ ‘ದೇಹಿ’ ಅನ್ನೋ ಮನಸ್ಥಿತಿಯಿಂದ ಹೊರಬರಬೇಕಾಗಿದೆ ಗುರೂ! ಊರುಗೋಲಿನ ಆಸರೆ ಬಯಸುತ್ತಲಿದ್ದಷ್ಟು ದಿನವೂ ಕನ್ನಡ ಚಿತ್ರರಂಗ ಏಳಿಗೆ ಕಾಣೋದು ಕಷ್ಟ ಅನ್ನೋದು ಕನ್ನಡ ಚಿತ್ರರಂಗಕ್ಕೆ ನೆನಪಿರಲಿ...