Showing posts with label ಆಟೋಟ. Show all posts
Showing posts with label ಆಟೋಟ. Show all posts

ಸೋನಿ ಸ್ಪೋರ್ಟ್ಸ್ ಕನ್ನಡ: ಅವ್ರು ಕೊಟ್ಟಾಯ್ತು! ನಾವು ನೋಡೋದು ಬಾಕಿ ಅಷ್ಟೇ!!

 


ಹೌದೂ ಗುರೂ, ಕನ್ನಡ ಆಟೋಟದ ವಾಹಿನಿಗೆ ಸೋನಿ ಕೂಡ ಸೇರ್ಪಡೆಯಾಗಿದೆ. ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲಿ ಸಿಗಬೇಕು, "ಕೇಳಲಿ ಕನ್ನಡ - ಕಾಣಲಿ ಕನ್ನಡ" ಅನ್ನೋದನ್ನು ಸಾಧಿಸಬೇಕು ಅನ್ನೋ ಮಾತಿಗೆ ಪೂರಕವಾಗಿ ಈ ವಾಹಿನಿ ಶುರುವಾಗಿದೆ. ಸೋನಿ  ಸ್ಪೋರ್ಟ್ಸ್ ಚಾನಲ್‌ಗೆ ಅಭಿನಂದನೆಗಳು.


ಇದು ಒಂದು ದಿನದಲ್ಲಿ ಆದದ್ದಲ್ಲ!

ಕನ್ನಡದಲ್ಲಿ ಆಟೋಟದ ಚಾನಲ್ ಬರಬೇಕು ಅನ್ನೋದರ ಬೀಜ ಹುಟ್ಟಿದ್ದು, ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟರಿ ಬರಬೇಕು ಅನ್ನೋ ಮೂಲಕ. ಕ್ರಿಕೆಟ್ ಇತಿಹಾಸದಲ್ಲಿ ಐಪಿಎಲ್ ಆರಂಭವಾದದ್ದು ಒಂದು ದೊಡ್ಡ ಮೈಲಿಗಲ್ಲಿನ ಘಟನೆ. 2008ರಲ್ಲಿ ಮೊದಲ ಸೀಸನ್ ನಡೆಯಿತು. ಆಗಿಂದಲೂ ಕನ್ನಡದಲ್ಲಿ ಕಾಮೆಂಟರಿ ಬರಬೇಕು ಅನ್ನೋ ಕೂಗು ಇತ್ತು. 2017ರಲ್ಲಿ ಸೋನಿಯವರು ಐಪಿಎಲ್ ಕಾಮೆಂಟರಿಯನ್ನು ಇಂಗ್ಲೀಷ್, ತಮಿಳು, ತೆಲುಗು, ಹಿಂದೀ ಮತ್ತು ಬಂಗಾಳಿ ಭಾಷೆಗಳಲ್ಲಿ ಕಾಮೆಂಟರಿ ಆರಂಭಿಸುತ್ತೇವೆ ಎಂದಾಗ "ಮಲಗಿದ್ದ" ಕನ್ನಡಿಗರಿಗೆ ಎಚ್ಚರವಾಯಿತು. ಅಂತರ್ಜಾಲ ತಾಣದಲ್ಲಿ ಒತ್ತಾಯದ ಕೂಗು ಮೊಳಗಿತು. ಆದರೆ ಸೋನಿ ಮಣಿದಿರಲಿಲ್ಲ. ಆನಂತರವೂ ಕನ್ನಡ ಗ್ರಾಹಕ ಕೂಟದ ವತಿಯಿಂದ 2020ರಲ್ಲಿ ಒಂದು ಆನ್‌ಲೈನ್ ಪಿಟಿಷನ್ ಆರಂಭವಾಗಿತ್ತು. ಸುಮಾರು 9000ಕ್ಕೂ ಹೆಚ್ಚು ಜನರು ಅದಕ್ಕೆ ಸಹಿ ಹಾಕಿ ಸೋನಿ ಸಂಸ್ಥೆಯು ಕನ್ನಡದಲ್ಲಿ ಸ್ಪೋರ್ಟ್ಸ್ ಚಾನಲ್ ಶುರು ಮಾಡಬೇಕೆಂದು ಆಗ್ರಹಿಸಿದ್ದರು. ಕನ್ನಡದ ಸ್ಪೋರ್ಟ್ಸ್ ಚಾನಲ್‌ಗಾಗಿ ಗ್ರಾಹಕರ ಕೂಟದ ಸದಸ್ಯರು ಮುಂಬೈಗೂ ಭೇಟಿ ನೀಡಿ, ವಾಹಿನಿಗಳ ಮಾಲೀಕರಿಗೆ ಕನ್ನಡದ ಮಾರುಕಟ್ಟೆಯಲ್ಲಿನ ಬಹುದೊಡ್ಡ ಅವಕಾಶವನ್ನು ಮನವರಿಕೆ ಮಾಡಿಕೊಟ್ಟಿದ್ದರು.


ಸ್ಟಾರ್ ಸ್ಪೋರ್ಟ್ಸ್ ಕನ್ನಡ

2018ರಲ್ಲಿ ಸ್ಟಾರ್ ಸ್ಪೋರ್ಟ್ಸ್‌ನವರು ಐಪಿಎಲ್ ಕಾಮೆಂಟರಿ ಪ್ರಸಾರವನ್ನು ವಹಿಸಿಕೊಂಡ ನಂತರ ಆ ವರ್ಷವೇ ಭಾರತೀಯ ಭಾಷೆಗಳಲ್ಲಿ ಕಾಮೆಂಟರಿ ನೀಡುವ ಪ್ರಯೋಗ ಮಾಡಿದರು. 2019ರಲ್ಲಿ ಮೊದಲನೆಯ ಕನ್ನಡದ ಸ್ಪೋರ್ಟ್ಸ್ ಚಾನಲ್ ಅನ್ನು ಶುರು ಮಾಡಿದರು. ಇದಕ್ಕಾಗೇ ಬಕಪಕ್ಷಿಗಳಂತೆ ಕಾಯುತ್ತಿದ್ದ ಕನ್ನಡ ಪ್ರೇಕ್ಷಕರು ಮುಗಿಬಿದ್ದರು. ಕನ್ನಡದ ವಾಹಿನಿ ಮುಂಚೂಣಿ ಚಾನಲ್‌ಗಳಲ್ಲಿ ಒಂದಾಯಿತು.  2019ರಿಂದ ಪ್ರೋ-ಕಬಡ್ಡಿ, ಐಪಿಎಲ್, ವಿಶ್ವಕಪ್... ಹೀಗೆ ನಾನಾ ಆಟೋಟಗಳು ಕನ್ನಡದಲ್ಲಿ ಪ್ರ್ವಸಾರ ಕಂಡವು. 2025ರಲ್ಲಿ ಸ್ಟಾರ್ ಸ್ಪೋರ್ಟ್ಸ್ ತನ್ನ ಎರಡನೆಯ ಕನ್ನಡ ಸ್ಪೋರ್ಟ್ಸ್ ಆರಂಭಿಸಿತು. 


ಸೋನಿ ಸ್ಪೋರ್ಟ್ಸ್ ಚಾನಲ್ 

ಇದೀಗ 2026ರ ಏಪ್ರಿಲ್ ತಿಂಗಳಿನಿಂದ ಕನ್ನಡದಲ್ಲಿ ತನ್ನ ಮೊದಲನೆಯ ಸ್ಪೋರ್ಟ್ಸ್ ಚಾನಲ್ ಅನ್ನು ಸೋನಿ ಕೂಡ ಆರಂಭಿಸಿತು. ಇಂಥದ್ದೊಂದು ಬೆಳವಣಿಗೆ ಕನ್ನಡ ನಾಡಿನ ಒಳಿತಿನ ದೃಷ್ಟಿಯಿಂದ ಒಳ್ಳೆಯದು. ಇನ್ನು ಕನ್ನಡದಲ್ಲೇ ಆಟೋಟಗಳನ್ನು ನೋಡಿ, ಕನ್ನಡದ ಚಾನಲ್‌ಗಳನ್ನು ಬೆಳೆಸುವ ಹೊಣೆಗಾರಿಕೆ ನಾಡಿನ ಎಲ್ಲ ಕನ್ನಡಿಗರದ್ದು! 

ಇನ್ನೇನು, ಇನ್ಮೇಲೆ ಕನ್ನಡದಲ್ಲೇ ಎಲ್ಲಾ ಆಟೋಟಗಳನ್ನು ನೋಡೋಣ. ಇದು ಸಾಮಾನ್ಯ ಕನ್ನಡಿಗರು ಕನ್ನಡಕ್ಕೆ  ನೀಡುವ ದೊಡ್ಇಡ ಕೊಡುಗೆ ಆಗಿದೆ ಅಂದರೆ, ಅದರಲ್ಲಿ ತಪ್ಪೇನಿಲ್ಲಾ ಗುರೂ!! 


ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಕರ್ನಾಟಕದ್ದೂ ತಂಡವಿರಲಿ!


ಇತ್ತೀಚಿಗೆ ಹೆಸರಾಂತ ಕ್ರಿಕೆಟ್ ಬಣ್ಣನೆಗಾರರಾದ ಶ್ರೀ ಹರ್ಷ ಬೋಗ್ಲೆಯವರು ಭಾರತೀಯ ಕ್ರಿಕೆಟನ್ನು ಬಲಪಡಿಸೋ ದಿಕ್ಕಿನಲ್ಲಿ ಏನೇನು ಮಾಡಬೇಕು ಅಂತಾ ಮಾತಾಡಿರೋ ಸುದ್ದಿ ಪ್ರಕಟವಾಗಿದೆ. ಬಲಶಾಲಿಯಾದ ರಾಷ್ಟ್ರೀಯ ತಂಡವೊಂದನ್ನು ಹುಟ್ಟುಹಾಕುವಲ್ಲಿ ಅನುಕೂಲವಾಗುವಂತೆ ರಣಜಿ ತಂಡಗಳನ್ನು ಮರುರೂಪಿಸಬೇಕು ಎಂದಿರುವ ಅವರ ಮಾತುಗಳು  ಒಂದಿಷ್ಟು ಬೇರೆಯೇ ಆಲೋಚನೆಗೆ ಹಚ್ಚುವಂತಿವೆ! ಅವರೇನೋ ಈಗಿರುವ ೨೭ ತಂಡಗಳನ್ನು ಹನ್ನೆರಡಕ್ಕೆ ಇಳಿಸುವ ಮೂಲಕ ಗುಣಮಟ್ಟ ಹೆಚ್ಚಿಸಬಹುದು ಎಂದಿದ್ದಾರೆ. ಆದರೆ...

ಭಾರತ ತಂಡ ವಿಶ್ವ ಕ್ರಿಕೆಟ್ಟಿನಲ್ಲಿ ದೊಡ್ಡ ಹೆಸರಾಗಿರುವುದು ತನ್ನ ಸಾಧನೆಗಿಂತಲೂ ಹೆಚ್ಚಾಗಿ ತಾನು ಹೊಂದಿರುವ ದೊಡ್ಡ ಸಂಖ್ಯೆಯ ಅಭಿಮಾನಿಗಳ ಕಾರಣದಿಂದ ಎಂದರೆ ತಪ್ಪಾಗಲಾರದು. ತೀರಾ ಇತ್ತೀಚಿನವರೆಗೆ ಅಷ್ಟೇನೂ ಯಶಸ್ಸು ಕಂಡಿಲ್ಲದ ತಂಡಗಳಲ್ಲಿ ಭಾರತವೂ ಒಂದು (೪೬೨-ಟೆಸ್ಟ್, ೧೧೨-ಗೆಲುವು, ೧೪೬-ಸೋಲು). ಮೊದಲೆಲ್ಲಾ ಹೊರದೇಶಗಳಿಗೆ ಹೋದರೂ, ಅವೇ ಇಲ್ಲಿಗೆ ಬಂದರೂ ಸರಣಿ ಸೋಲು ಕಟ್ಟಿಟ್ಟ ಬುತ್ತಿಯಾಗಿದ್ದ ಭಾರತ ಕ್ರಿಕೆಟ್‍ನಲ್ಲಿ ನಿಧಾನವಾಗಿ ಅಲ್ಲೊಂದು ಇಲ್ಲೊಂದು ಗೆಲುವು ಶುರುವಾಗಿ, ಆಮೇಲೆ ತವರಿನಲ್ಲಿ ಸರಣಿ ಗೆಲುವು ಕಂಡು... ಅಪರೂಪಕ್ಕೆ ವಿದೇಶದಲ್ಲಿ ಗೆಲುವು ಎನ್ನುವ ಹಂತ ತಲುಪಿದ್ದೇವೆ ಎನ್ನುವ ಮಾತಿನಲ್ಲಿ ದಿಟವಿದ್ದಂತಿದೆ. ಇತ್ತೀಚಿಗೆ ಇಂಗ್ಲೇಂಡ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಸಂದರ್ಭದಲ್ಲಿ ಯಾಕೆ ಹೀಗಾಯ್ತು ಎನ್ನುವ ಪ್ರಶ್ನೆಗಳು, ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನಗಳೂ ನಡೆದಿರುವುದನ್ನು ಕಾಣಬಹುದಾಗಿದೆ. ಇಂತಹುದೇ ಪ್ರಯತ್ನವನ್ನು ಶ್ರೀ ಹರ್ಷ ಬೋಗ್ಲೆಯವರ ಲೇಖನವೂ ಮಾಡಿದೆ.  ಭಾರತೀಯ ಕ್ರಿಕೆಟ್ಟಿನ ಗುಣಮಟ್ಟ ಹೆಚ್ಚಿಸಲು ಈಗಿನ ರಣಜಿ ಕ್ರಿಕೆಟ್ ತಂಡಗಳ ಸಂಖ್ಯೆಯನ್ನು ಕಡಿತಗೊಳಿಸಿ ಹೆಚ್ಚೆಚ್ಚು ಸ್ಪರ್ಧಾತ್ಮಕವಾಗಿ ಆಡಿಸಬೇಕು. ತಂಡದಲ್ಲಿ ಕಡಿಮೆ ಸ್ಥಾನಗಳಿರುತ್ತವೆಯಾದ್ದರಿಂದ ಸ್ಪರ್ಧೆ ಹೆಚ್ಚಿ ಗುಣಮಟ್ಟದ ಆಟಗಾರರನ್ನು ಹುಟ್ಟುಹಾಕಲು, ಅಂತಹವರನ್ನು ತರಬೇತು ನೀಡಲು, ಅನುಭವ ದೊರಕಿಸಿಕೊಡಲು ಅನುಕೂಲವಾಗಲಿದೆ ಎಂಬ ಅನಿಸಿಕೆ ಅವರದ್ದು. ಆದರೆ ನಮ್ಮನ್ನು ಕಾಡೋ ಪ್ರಶ್ನೆಗಳು ಬೇರೇನೇ ಇವೆ. ಅದಕ್ಕೆ ಮೊದಲು ಕ್ರಿಕೆಟ್ ಆಡೋ ದೇಶಗಳ ಬಗೆಗಿನ ಸಣ್ಣ ಮಾಹಿತಿಯನ್ನು ನೋಡೋಣ.

ಕ್ರಿಕೆಟ್ ಆಡೋ ದೇಶಗಳು!

ಕ್ರಿಕೆಟ್ ಆಡುವ ಹದಿನಾರು ಪ್ರಮುಖ  ದೇಶಗಳ ಜನಸಂಖ್ಯೆಯ ಪಟ್ಟಿಯನ್ನು ನೋಡಿ. ಕ್ರಿಕೆಟ್ ತಂಡವೊಂದು ಬಲಿಷ್ಟವಾಗಿರುವುದಕ್ಕೂ, ಆ ದೇಶದ ಜನಸಂಖ್ಯೆಗೂ ಯಾವ ಸಂಬಂಧವೂ ಇಲ್ಲಾ ಎನ್ನಬಹುದು. ಹದಿನಾರರಲ್ಲಿ ಹದಿಮೂರು ದೇಶಗಳ ಜನಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತಲೂ (೫.೨ ಕೋಟಿಗಳಿಗಿಂತಾ) ಕಡಿಮೆ ಇದೆ. ಮೂರು ದೇಶಗಳು ಅಂದ್ರೆ ಪಾಕಿಸ್ತಾನ್, ಬಾಂಗ್ಲಾ ಮತ್ತು ಭಾರತಗಳು ಮಾತ್ರಾ ಹತ್ತುಕೋಟಿಗಿಂತಾ ಹೆಚ್ಚಿನ ಜನಸಂಖ್ಯೆ ಹೊಂದಿವೆ. ಭಾರತದ ಜನಸಂಖ್ಯೆ ನೂರಿಪ್ಪತ್ತು ಕೋಟಿಯಿದ್ದು ಉಳಿದ ಎಲ್ಲಾ ಕ್ರಿಕೆಟ್ ಆಡೋ ದೇಶಗಳ ಒಟ್ಟು ಜನಸಂಖ್ಯೆಯ ಎರಡರಷ್ಟಿದೆ. ನಕ್ಷೆಯಲ್ಲಿ   ಕಾಣದಂತಿರುವ ಸ್ಕಾಟ್‍ಲ್ಯಾಂಡ್,ಐರ್‍ಲ್ಯಾಂಡ್, ನ್ಯೂಜಿಲ್ಯಾಂಡ್‍ಗಳಲ್ಲಿನ ಜನಸಂಖ್ಯೆ ಸುಮಾರು ಐವತ್ತು ಲಕ್ಷದ ಆಸುಪಾಸಿದೆ. ಇನ್ನು ವೆಸ್ಟ್ ಇಂಡೀಸ್ ಎನ್ನುವುದಂತೂ ಸಣ್ಣಸಣ್ಣ ದ್ವೀಪರಾಷ್ಟ್ರಗಳ ಒಕ್ಕೂಟವಾಗಿದ್ದು ಒಟ್ಟು ಜನಸಂಖ್ಯೆ ಕೇವಲ ೩೩ ಲಕ್ಷಗಳಷ್ಟಿದೆ. ಹೀಗಿರುವಾಗ ಇಂತಹವುಗಳ ನಡುವೆ ಭಾರತವೇ "ಗುಂಪಿಗೆ ಸೇರದ ಪದ"ದಂತೆ ಕಾಣುತ್ತದೆ.

ಕರ್ನಾಟಕದ್ದೂ ಅಂತರರಾಷ್ಟ್ರೀಯ ತಂಡವಿರಲಿ!

ಯಾಕೆ ಭಾರತದ್ದು ಒಂದೇ ತಂಡವಿರಬೇಕು? ಭಾರತದಿಂದ ಒಂದಕ್ಕಿಂತಾ ಹೆಚ್ಚು ತಂಡಗಳು ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಡುವುದು ಸರಿಯೆನ್ನಿಸದೇ? ಕರ್ನಾಟಕದ ತಂಡ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಂದು ತಂಡವಾಗಿ ಪಾಲ್ಗೊಳ್ಳುವುದು ಸರಿಯಾದುದಲ್ಲವೇ?  ಕ್ರಿಕೆಟ್ ಆಡುತ್ತಿರುವ ದೇಶಗಳ ಸಾಮಾನ್ಯ ಜನಸಂಖ್ಯೆಯನ್ನು ಗಮನಿಸಿದರೆ ಕರ್ನಾಟಕದಿಂದ ತಂಡ ಕಳಿಸೋದು ಸೂಕ್ತ ಎನ್ನಿಸುತ್ತದೆ. ತಂಡವೊಂದರಲ್ಲಿ ಇಂತಿಷ್ಟೇ ಜನರಿರಬೇಕೆನ್ನುವಾಗ ಇರುವ ೧೬ ಸ್ಥಾನಕ್ಕಾಗಿ ಈಗಿದೆ ಎನ್ನಲಾಗುವ ವಲಯವಾರು ಪ್ರಾತಿನಿಧ್ಯ, ಆಯ್ಕೆ ಸಮಿತಿ ಸದಸ್ಯರ ಪಕ್ಷಪಾತ ಮೊದಲಾದ ದೂರುಗಳಿಲ್ಲವಾಗುತ್ತದೆ.  ಜೊತೆಯಲ್ಲಿ ತಂಡದೊಳಗಿನ ಸಾಮರಸ್ಯ ಹೆಚ್ಚುವುದೂ ಇದರಿಂದಾಗುವ ಮಹತ್ವದ ಲಾಭವಾಗಿರುತ್ತದೆ. ಯಾಕೆಂದರೆ ಇಂದಿನ ಭಾರತ ತಂಡ ಒಂದು ತಂಡವಾಗಿ ಆಡುವುದು ಯಾವುದಾದರೂ ಸರಣಿಗೆ ತಂಡ ಆಯ್ಕೆಯಾದ ಮೇಲೆ ನಡೆಸಲಾಗುವ ಶಿಬಿರಗಳು ಮತ್ತು ಅಭ್ಯಾಸ ಪಂದ್ಯಗಳಲ್ಲಿ ಮಾತ್ರಾ! ಅಂದರೆ ಸಚಿನ್ ಮತ್ತು ದ್ರಾವಿಡ್ ಒಟ್ಟಾಗಿ ತಂಡವಾಗಿ ಆಡುವುದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಅವುಗಳ ಸಿದ್ಧತಾ ಪಂದ್ಯಗಳಲ್ಲಿ ಮತ್ತು ತರಬೇತಿ ಶಿಬಿರಗಳಲ್ಲಿ ಮಾತ್ರವೇ ಆಗಿದೆ. ಇದೇ ಮಾತು ರಾಜ್ಯ ತಂಡಕ್ಕೆ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ಯುವಪ್ರತಿಭೆ ಅಭಿಮನ್ಯುಗೆ ಅವಕಾಶ ಇಲ್ಲ ಅನ್ನೋ ದೂರು ಕರ್ನಾಟಕದಿಂದಾಗಲೀ, ಕರ್ನಾಟಕ ತಂಡದ ಏಳೇಳು ಆಟಗಾರರು ಆಯ್ಕೆಯಾಗಿದ್ದಾರೆ ಅನ್ನೋ ದೂರು ಉಳಿದವರಿಂದಾಗಲೀ ಇಲ್ಲವಾಗುತ್ತಲ್ವಾ ಗುರೂ!
ಇನ್ನು ಭಾರತ ಕ್ರಿಕೆಟ್ ತಂಡವೆನ್ನುವುದು ವಾಸ್ತವವಾಗಿ ಭಾರತ ರಾಷ್ಟ್ರೀಯ ತಂಡವಾಗಿರದೆ ಬಿಸಿಸಿಐ ಸಂಸ್ಥೆಯ ತಂಡವಾಗಿದೆ. ಬಿಸಿಸಿಐ ಸಂಸ್ಥೆಯು ಐಸಿಸಿ ಎನ್ನುವ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಸ್ಥೆಯಾಗುವುದಾದಲ್ಲಿ ಕೆಎಸ್‍ಸಿಏ ಕೂಡಾ ಆಗಬಹುದು! ಇಂತಹ ಏರ್ಪಾಟು ಈಗಾಗಲೇ ಇಂಗ್ಲೇಂಡಿನಲ್ಲಿದೆ.

ಕೊನೆಹನಿ: ಒಂದು ದೇಶದಿಂದ ಒಂದೇ ತಂಡ ಇರಬೇಕು, ಇಲ್ದಿದ್ರೆ ದೇಶ ಒಡ್ದೋಗುತ್ತೆ, ಒಗ್ಗಟ್ಟಿರಲ್ಲ ಅನ್ನೋ ಭಾವನೆ ಖಂಡಿತಾ ಬೇಕಿಲ್ಲ. ಯಾಕಂದ್ರೆ ಯುನೈಟಡ್ ಕಿಂಗ್‍ಡಮ್ ಅನ್ನೋ ರಾಜಕೀಯವಾಗಿ ಒಂದಾಗಿರೋ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯಿದ್ದು ಅಲ್ಲಿಂದಲೇ ಇಂಗ್ಲೇಂಡು, ಸ್ಕಾಟ್‍ಲ್ಯಾಂಡು, ಐರ‍್ ಲ್ಯಾಂಡುಗಳ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಇವೆ!! ಇನ್ನು ಭಾರತದಿಂದ ಅನೇಕ ತಂಡಗಳಿರುವಾಗ ನಮ್ಮದೇ ಒಂದು ತಂಡ ಗೆಲ್ಲೋ ಸಾಧ್ಯತೆ ಹೆಚ್ಚಾಗೋದ್ರಿಂದ ಭಾರತ ಗೆಲ್ಲುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗುತ್ತದೆಯಲ್ವಾ ಗುರೂ!

ವಿಶ್ವಕಪ್ ಹಾಕಿ: ಮೊದಲು ಕನ್ನಡದಲ್ಲಿ ಜಾಹೀರಾತು ಹಾಕಿ!

ಇದೇ ಫೆಬ್ರವರಿ 28 ರಿಂದಾ ದಿಲ್ಲೀಲಿ ಹಾಕಿ ವಿಶ್ವ ಕಪ್ ಶುರುವಾಗಲಿದೆ. ಇದೇ ಹೊತ್ತಲ್ಲಿ ಹಾಕಿ ವಿಶ್ವ ಕಪ್ಪಿಗೆ ಪ್ರೋತ್ಸಾಹ ಕೊಡಿ ಎಂಬರ್ಥದ ಜಾಹೀರಾತುಗಳು ಅಲ್ಲಲ್ಲಿ ಕಾಣಿಸಿಕೊಳ್ತಾ ಇವೆ. ಕ್ರಿಕೆಟ್ ಆಟಕ್ ಮಾತ್ರಾ ಯದ್ವಾತದ್ವಾ ಮಹತ್ವ, ಪ್ರೋತ್ಸಾಹ ಸಿಕ್ಕುತ್ತಾ... ಬಾಕಿ ಎಲ್ಲಾ ಆಟಗಳು, ಆಟಗಾರರು ಬೆಲೆ ಇಲ್ಲದೇ ಇರೋ ಹಾಗಿರೋ ಇವತ್ತಿನ ದಿನಗಳಲ್ಲಿ ಈ ರೀತಿ ಹಾಕಿ ಕ್ರೀಡೆಗೆ ಪ್ರೋತ್ಸಾಹ ಕೊಡಿ ಅನ್ನೋ ಜಾಹೀರಾತು ಬರುತ್ತಿರೋದೆನೋ ಒಳ್ಳೆದೇ, ಆದ್ರೆ ಇದು ಜನರ ಮನಸ್ಸನ್ನ ತಲುಪೋಕೆ ಯಶಸ್ವಿ ಆಗುತ್ತಾ ಅನ್ನೋದು ಮಾತ್ರಾ ಬಲೇ ಅನುಮಾನಾ ಗುರು. ಯಾಕಂತೀರಾ? ಈ ಜಾಹೀರಾತುಗಳು ನಮ್ಮ ಜನರ ಭಾಷೇಲಿದ್ರೆ ತಾನೇ ಜನರಿಗೆ ಅರ್ಥ ಆಗೋದು, ಜನರ ಪ್ರೋತ್ಸಾಹ ಸಿಗೋದು ?


ಹಿಂಗ್ಲೀಷ್ ಜಾಹೀರಾತು - ದುಡ್ಡು ದಂಡ !


ಬೆಂಗಳೂರಲ್ಲಿ ಅಲ್ಲಲ್ಲಿ ಇಂಗ್ಲಿಷಲ್ಲಿ (ರೋಮನ್ ಲಿಪಿಯಲ್ಲಿ) ಬರೆದಿರೋ, ಹಿಂದಿ ವಾಕ್ಯಗಳು ಇರೋ ಜಾಹೀರಾತುಗಳನ್ನು ಹಾಕಿದಾರೆ. ಜನರಿಗೆ ಅರ್ಥ ಆಗದ ಭಾಷೇಲಿ ಅದೇನ್ ಬರುದ್ರು ಏನ್ ಬಂತು ಭಾಗ್ಯ? ಕ್ರಿಕೆಟ್‍ನ ಜನಪ್ರಿಯತೆಗೆ, ಅದರಲ್ಲೂ ವಿಶೇಷವಾಗಿ ಈಗಿನ ಐ.ಪಿ.ಎಲ್‍ನ ಜನಪ್ರಿಯತೆಗೆ ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೇನಾ ಬಳಸ್ಕೊಂಡು ಪ್ರಚಾರ ಮಾಡ್ತಿರೋದು ಒಂದು ಮಟ್ಟಿಗೆ ಕಾರಣ ಅನ್ನೋದು ಸಕತ್ ನಿಜ. ಈಗ ಡಿ.ಎಲ್.ಎಫ್ ಐ.ಪಿ.ಎಲ್‍ನ ಸರಣಿಯ ಬಗ್ಗೆ ರೇಡಿಯೋ, ಟಿ.ವಿಗಳಲ್ಲಿ ಬರ್ತಿರೋ ಕನ್ನಡ ಜಾಹೀರಾತನ್ನೇ ನೋಡಿ. ಜಾಹೀರಾತು ಕೇಳ್ತಿದ್ರೆನೇ, ಜನಕ್ಕೆ ಆಟ ನೋಡಬೇಕು ಅನ್ನಿಸೋ ಹಾಗಿದೆ. ಹಾಕಿಯೋರು ಮಾತ್ರ ಅದೇನೆನೋ ಹಿಂದೀಲಿ ಬರ್ಕೊಂಡು ದುಡ್ಡು ದಂಡಾ ಮಾಡ್ತಾ ಇದ್ದಾರೆ ಅನ್ಸಲ್ವಾ ಗುರು?

ಕೆ.ಪಿ.ಎಲ್ ಅನ್ನೋ ಕ್ರಿಕೆಟ್ ಹಬ್ಬ!!!



ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೋರು ಈ ವರ್ಷದಿಂದ ಶುರು ಮಾಡಿರೋ ಕೆ.ಪಿ.ಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಸರಣಿ ಪಂದ್ಯಗಳು ನಿನ್ನೆ ಮುಗಿದವು. ಮೊದಲ ಬಾರಿಗೆ 20-20 ಮಾದರಿಯ ಈ ಸರಣಿಯಲ್ಲಿ ಬೆಂಗಳೂರು ಗ್ರಾಮಾಂತರ ತಂಡವಾದ ಬೆಂಗಳೂರು ಪ್ರಾವಿಡೆಂಟ್ ತಂಡದೋರು ಪ್ರಶಸ್ತಿ ಗೆದ್ದುಕೊಂಡರು. ಈ ಕೆ.ಪಿ.ಎಲ್‍ನ ಶುರುಮಾಡಿದ ಉದ್ದೇಶವೇ ಜಿಲ್ಲಾ ಪ್ರತಿಭೆಗಳ ಶೋಧ ಮತ್ತು ರಾಷ್ಟ್ರೀಯ ತಂಡಕ್ಕೆ ಪೂರೈಕೆ ಅನ್ನೋದು ಒಳ್ಳೇ ನಿಲುವಾಗಿದೆ ಮತ್ತು ಒಳ್ಳೆಯ ನಡೆಯಾಗಿದೆ. ಒಟ್ಟು 31 ಪಂದ್ಯಗಳು ಮತ್ತು ಅದರಲ್ಲೂ ತುಂಬಾ ರೋಮಾಂಚಕಾರಿಯಾಗಿ ಕೊನೆ ಎಸೆತದವರೆಗೂ ಕುತೂಹಲ ಕಾಯ್ದುಕೊಂಡ ಕೆಲಪಂದ್ಯಗಳೂ ನಡೆದವು. ನಮ್ಮವರೂ ಐ.ಪಿ.ಎಲ್‍ಗೆ ನಾವೇನು ಕಮ್ಮಿ ಇಲ್ಲ ಎಂದು ಸಡ್ಡು ಹೊಡೆದವರಂತೆ ಚಿಯರ್‍ಗರ್ಲ್‌ಗಳನ್ನು ಕರೆಸಿದ್ರು ಗುರು! ಹ ಹ್ಹಾ ಹ್ಹಾ... ಅಷ್ಟು ಬಣ್ಣತುಂಬುವ ಪ್ರಯತ್ನಗಳು ಇಲ್ಲಿ ನಡೆದವು!

ಮೆಚ್ಚಿಗೆಯಾದ ಅನೇಕ ಅಂಶಗಳು!

ಇಡೀ ಪಂದ್ಯಾವಳಿಯಲ್ಲಿ ಕನ್ನಡಕ್ಕೆ ಸುಮಾರಾಗಿ ಪ್ರಾಮುಖ್ಯತೆ ಸಿಕ್ಕಿದ್ದಂಗಿತ್ತು. ಕೆಪಿಎಲ್ ಹಾಡುಗಳು, ಎಲ್ಲ ತಂಡಗಳೋರು ಮಾಡಿಸಿಕೊಂಡಿದ್ದ ಹಾಡುಗಳು ಕನ್ನಡದಲ್ಲಿದ್ವು. ಆಟದ ಮೈದಾನದಲ್ಲೂ ವಿಜಯ ಕರ್ನಾಟಕ, ಅದೂ ಇದೂ ಅಂತ ಕನ್ನಡದ ಜಾಹೀರಾತುಗಳಿದ್ದವು. ಕನ್ನಡದ ಬಾವುಟಗಳು ಹಾರಾಡ್ತಿದ್ವು ಆಟದ ವೀಕ್ಷಕ ವಿವರಣೆಯಲ್ಲಿ ಕನ್ನಡವಿತ್ತು. ಈ ಪಂದ್ಯಾವಳಿಯಿಂದ ಹಳ್ಳಿಗಾಡಿನ ಅನೇಕ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಸಿಕ್ಕಲಿದೆ ಅನ್ನೋದೆಲ್ಲಾ ಖುಷಿ ವಿಷಯಾನೆ ಗುರು! ಇದು ಹೀಗೇ ಮುಂದುವರೀಲಿ... ಇದರ ಮೂಲಕ ನಮ್ಮ ನಾಡಿಂದ ಭಾರತೀಯ ಕ್ರಿಕೆಟ್ಟಿಗೆ ಒಳ್ಳೊಳ್ಳೆ ಆಟಗಾರರು ಸಿಗಲಿ!! ಯಾಕಂದ್ರೆ ಎರಡು ಕೋಟಿ ಜನರಿರೋ ಶ್ರೀಲಂಕಾ, ಆಸ್ಟ್ರೇಲಿಯಾ, 30 ಲಕ್ಷ ಜನರಿರೋ ವೆಸ್ಟ್‍ಇಂಡೀಸ್, 40 ಲಕ್ಷ ಜನರಿರೋ ನ್ಯೂಜಿಲ್ಯಾಂಡ್ ಮೊದಲಾದವು ಪ್ರಪಂಚದ ಬಲಿಷ್ಟ ತಂಡಗಳಾಗಿರೋವಾಗ 5 ಕೋಟಿ ಕನ್ನಡಿಗರ ಕರ್ನಾಟಕಕ್ಕೆ, ಭಾರತ ತಂಡದಲ್ಲಾಡೋ ಯೋಗ್ಯತೆಯಿರೋ ನಾಲ್ಕಾರು ಜನ ಆಟಗಾರರನ್ನು ಕೊಡಕ್ಕಾಗಲ್ವಾ ಗುರು?

ಸರಿಯಾಗಬೇಕಾದ ಕೆಲ ಅಂಶಗಳು

ಈ ಪಂದ್ಯಾವಳಿಗಳ ಪ್ರಾಯೋಜಕರಾದ ಮಂತ್ರಿ ಡೆವೆಲಪರ್ಸ್ ಅವರ ಜಾಹೀರಾತುಗಳು ಪಂದ್ಯದ ನಡುವೆ ಆಟದ ಮೈದಾನದಲ್ಲಿ ಹಾಕ್ತಾ ಇದ್ರು, ಅದಂತೂ ಪೂರ್ತಿ ಹಿಂದೀಲಿತ್ತು ಗುರು! ಅದ್ಯಾರಿಗೆ ಅರ್ಥ ಆಗ್ಲೀ ಅಂದ್ಕೊಂಡ್ರೋ ಏನೋ!! ಪುಣ್ಯಾತ್ಮರು. ಇನ್ನು ಆಟದ ನಡುನಡುವೆ ಹಾಡುಗಳನ್ನು ಹಾಕೋರು... ಕನ್ನಡದ ಹಾಡು ಹಾಕಿದಾಗೆಲ್ಲಾ ಜನಾ ಹೋ ಅಂತಾ ಖುಷಿ ಪಡ್ತಿದ್ರು. ಜಿಂಕೆ ಮರೀನಾ ಜಿಂಕೆ ಮರೀನಾ ಹಾಕಿದಾಗಂತೂ ಇಡೀ ಸ್ಟೇಡಿಯಂ ಎದ್ ಕುಣೀತಿತ್ತು. ಆದ್ರೆ ಅದ್ಯಾಕೋ ಅಲ್ಲಿನ ಕೆಲ ಪ್ರಭೃತಿಗಳು ಆಗಾಗ ಹಿಂದಿ ಹಾಡು ಹಾಕಿ ಜನರ ಉತ್ಸಾಹ ಬತ್ತುಸ್ತಿದ್ರು! ಈ ಜನ ಹಿಂದೀಜ್ವರ ಹಿಡ್ಸೋ ಪ್ರಯತ್ನಾ ಮಾತ್ರಾ ಇಲ್ಲೂ ಬಿಡಲಿಲ್ಲಾ ಅನ್ನೋದು ಬೇಸರದ ಸಂಗತಿ! ಒಂದೊಂದ್ ಮ್ಯಾಚ್ ಆದಮೇಲೂ ಆಟಗಾರರನ್ನು ಮಾತಾಡ್ಸೋರೂ, ಬಹುಮಾನ ಕೊಡೋರೂ ಕೊನೆಗೆ ಆಟಗಾರರೂ ಕೂಡಾ ಇಂಗ್ಲೀಷಲ್ಲಿ ಮಾತಾಡಿದ್ ಯಾಕೋ ಅನಗತ್ಯವಾಗಿತ್ತು ಅನ್ನುಸ್ತಿತ್ತು ಗುರು! ನಮ್ಮೋರು ಅರ್ಥ ಮಾಡ್ಕೋಬೇಕಾಗಿರೋದು ಇನ್ನೂ ಒಂದಿದೆ. ಈ ಪಂದ್ಯಗಳನ್ನು ಬೆಂಗಳೂರಿನಿಂದ ಆಚೆ ನಡ್ಸುದ್ರೆ ಹೆಚ್ಚು ಜನರನ್ನು ಸೆಳೆಯೋಕ್ ಆಗೋದು. ಬೆಂಗಳೂರಲ್ಲಿರೋ ಜನ ಇಂಟರ‍್ನ್ಯಾಷನಲ್ ಪಂದ್ಯ ನೋಡಿರೋರು, ಅವರನ್ನು ಇದಕ್ ಸೆಳೆಯೋದುಕ್ಕೆ ಹಿಂದೀ ಪಂದೀ, ಟುಸ್ಸು ಪುಸ್ಸು ಅಂತನ್ನೋ ಬದಲು ಸುಮ್ನೆ ಜಿಲ್ಲಾ ಕೇಂದ್ರಗಳಿಗೆ ಕೆ.ಪಿ.ಎಲ್‍ನ ಒಯ್ಯೋದ್ರಿಂದ ಹೆಚ್ಚು ಜನರನ್ನು ಮುಟ್ಟಬಹುದು. ಅಲ್ಲೆಲ್ಲಾ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ ಹಾಕ್ಬೋದಲ್ವಾ! ಒಟ್ನಲ್ಲಿ ಅಂದ್ಕೊಂಡ ಗುರೀನ ಮತ್ತಷ್ಟು ಪರಿಣಾಮಕಾರಿಯಾಗಿ ಮುಟ್ಟಕ್ಕೆ ನಮ್ಮತನದ ಸೊಗಡನ್ನು ಕೆ.ಪಿ.ಎಲ್‍ಗೆ ಒಸಿ ಜಾಸ್ತೀನೆ ಅಂಟುಸ್ಬೇಕಾಗಿದೆ ಗುರು!

ಐ.ಪಿ.ಎಲ್ ಕಂಡುಕೊಂಡ ಕನ್ನಡದ ಮಾರುಕಟ್ಟೆ


ಈ ಬಾರಿಯ ಐ.ಪಿ.ಎಲ್ ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೀತಾ ಇರೋದು ಸರಿಯಷ್ಟೆ. ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದೋರೂ ನಿನ್ನೆ ಒಂದು ಮ್ಯಾಚನ್ನು ಮುಂಬೈ ಇಂಡಿಯನ್ಸ್ ತಂಡದ ಜೊತೆ ಆಡಿದ್ರು. ಈ ಆಟಾನಾ ಆಸಕ್ತಿಯಿಂದ ನೋಡ್ತಾ ಇದ್ದಾಗ, ಅಲ್ಲಿ ವೀಕ್ಷಕರ ನಡುವೆ ಇದ್ದ ಕನ್ನಡದಲ್ಲಿ ಬರೆದ ಒಂದು ಬರವಣಿಗೆ, ಮ್ಯಾಚಿಗಿಂತ ಹೆಚ್ಚಿನ ಆಸಕ್ತಿ ಹುಟ್ಟುಹಾಕ್ತು. ಇದು ರಾಯಲ್ ಚಾಲೆಂಜರ್ಸ್ ತಂಡದ ಆಟ ನೋಡ್ತಿದ್ದ ಕನ್ನಡದೋರ್ ಮೈಯಲ್ಲಿ ರೋಮಾಂಚನ ಹುಟ್ಟುಹಾಕ್ತು ಗುರು! ಆ ಕ್ಯಾಮೆರಾದವ್ರು ಕೂಡಾ ಆಗಾಗ ಇದನ್ನು ತೋರಿಸುತ್ತಾ, ಅಭಿಮಾನಿಯೊಬ್ಬರ ಕೈಯ್ಯಲ್ಲಿದ್ದು ಆಫ್ರಿಕಾದ ಗಾಳೀಲಿ ಹಾರಾಡ್ತಿದ್ದ ಕನ್ನಡದ ಬಾವುಟಾನೂ ತೋರುಸ್ತಿದ್ರು. ಇಷ್ಟೂ ಸಾಲದೂ ಅಂತಾ ಕಡೆಗೆ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದ ರಾಬಿನ್ ಉತ್ತಪ್ಪನ ಹತ್ರ ಪಂದ್ಯದ ವೀಕ್ಷಕ ವಿವರಣೆಕಾರರು ಕನ್ನಡದಲ್ಲಿ ಮಾತೂ ಆಡುಸ್ಬುಟ್ರು ಗುರು!!

ಐ.ಪಿ.ಎಲ್ ಅರಿತ ಮನಗೆಲ್ಲೋ ತಂತ್ರ!

ಇದೆಲ್ಲಾ ಏನೋ ಆಕಸ್ಮಿಕ ಅಂತ ಆಗ ಅನ್ನುಸ್ತಿದ್ರೂ ನಿಜವಾಗ್ಲೂ ಐ.ಪಿ.ಎಲ್ ನವರು ಉದ್ದೇಶಪೂರ್ವಕವಾಗಿ ಹಿಂಗ್ ಮಾಡಿರಬೋದಾ ಅನ್ಸಿದ್ದು ಸುಳ್ಳಲ್ಲಾ ಗುರು! ನೀವೇ ನೋಡಿ, ಬೆಂಗಳೂರು ತಂಡ ಆಡೋ ಮ್ಯಾಚುಗಳು ಅಂತ ಕರ್ನಾಟಕದೋರೂ, ಕನ್ನಡದೋರೂ ಈ ಪಂದ್ಯಾವಳಿಗಳನ್ನು ನೋಡೋದ್ರಿಂದಲೇ ಐಪಿಎಲ್ ನ ಜನಪ್ರಿಯತೆ, ಅದರಿಂದಾಗಿ ಸಿಗೋ ಆದಾಯ ಎಲ್ಲ ಹೆಚ್ಚದು. ನಿಜವಾಗ್ಲೂ ವ್ಯಾಪಾರಿ ಆದವನು ಯಾವೆಲ್ಲಾ ತಂತ್ರಗಳು ತನ್ನ ವ್ಯಾಪಾರಾ ಹೆಚ್ಸುತ್ತೋ ಅದ್ಯಾವ್ದುನ್ನೂ ಬಿಡಲ್ಲ. ಹಾಗೇ ಕನ್ನಡದಲ್ಲಿ ಮಾತಾಡ್ಸೋದ್ರಿಂದ, ಬೆಂಗಳೂರು ತಂಡದ ಬಗ್ಗೆ ಇಡೀ ಕನ್ನಡನಾಡಿನ, ಕನ್ನಡದೋರ ಮನ್ಸಲ್ಲಿ ಇದು ನಮ್ ತಂಡ ಅನ್ನೋ ಭಾವನೇನಾ ಹುಟ್ಟುಹಾಕಿದ್ರೆ ತಾನೆ ಕರ್ನಾಟಕದ ಜನ ಇದನ್ನು ನೋಡೋದು? ಹಾಗನ್ನಿಸೋಕೆ ಏನೇನು ಬೇಕೋ ಅದೆಲ್ಲಾನೂ ಮಾಡ್ತಿದಾರೆ ಇವ್ರು ಅನ್ಸಲ್ವಾ ಗುರು? ಚೆನ್ನೈ ಆಡೋ ಪಂದ್ಯಗಳಲ್ಲಿ ತಮಿಳಲ್ಲಿ ಮಾತಾಡ್ಸೋದೂ, ಮುಂಬೈ ತಂಡದೋರ ಹತ್ರಾ ಮರಾಠೀಲಿ ಮಾತಾಡ್ಸೋದೂ ಆಯಾ ರಾಜ್ಯಗಳಲ್ಲಿ ಈ ಪಂದ್ಯಾವಳಿಗಳ ನೋಡುಗರ ಸಂಖ್ಯೇನಾ ನಿಜವಾಗ್ಲೂ ಹೆಚ್ಚುಸುತ್ತೆ. ಒಟ್ಟಾರೆ ಇಂತಹ ಕ್ರಮಗಳಿಂದಾಗಿ ಐ.ಪಿ.ಎಲ್ ಪಂದ್ಯಗಳ ನೋಡುಗರ ಸಂಖ್ಯೆ ಹೆಚ್ಚೋದೂ, ಇಡೀ ಪಂದ್ಯಾವಳಿ ಯಶಸ್ಸು ಗಳಿಸಲು ಇದು ನೆರವಾಗೋದೂ ಖಂಡಿತ. ಏನಂತೀ ಗುರು?

ಹಿಡಿದ ಗುರಿ, ಬಿಡದ ಪರಿ - ಅಂದು ಅನಿಲ್ : ಇಂದು ಸುನಿಲ್!

ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ 18ನೇ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಲ್ಲಿ ಗೆದ್ದ ಭಾರತ ತಂಡದಲ್ಲಿ ಆಡಿದ ಹೊಸ ಆಟಗಾರ ಸುನಿಲ್ ಕುಮಾರ್ ಅವರ ಬಗ್ಗೆ ಇವತ್ತಿನ (14.04.2009) ಕನ್ನಡ ಪ್ರಭದ ಮುಖಪುಟದಲ್ಲಿ ಒಂದು ವರದಿ ಬಂದಿದೆ ಗುರು! 15ವರ್ಷಗಳ ನಂತರ ಈ ಪ್ರಶಸ್ತಿಯನ್ನು ಗೆದ್ದ ಭಾರತ ತಂಡದೋರು ಇದನ್ನು ಸುನಿಲ್ ಕುಮಾರ್ ಅವರ ತಂದೆಗೆ ಅರ್ಪಿಸಿದ್ದಾರಂತೆ. ಅಲ್ಲಿ ಆಟವಾಡಲು ಹೋದ ಸುನಿಲ್ ಅವರಿಗೆ ಮೂರೇದಿನದಲ್ಲಿ ತಲುಪಿದ ಸುದ್ದಿ ತನ್ನಪ್ಪ ತೀರಿಹೋದದ್ದು. ಎದೆಗುಂದದ ಸುನಿಲ್ ಈ ಕೆಟ್ಟಸುದ್ದಿ ಕೇಳಿದ ಮೇಲೂ ಹಿಡಿದ ಕೆಲಸ ಕೈಬಿಡದೆ ಆಟವಾಡಿದರಂತೆ. ಇವರ ಈ ಮನೋಧೈರ್ಯಾನ ಎಲ್ರೂ ಕೊಂಡಾಡ್ತಿದಾರೆ. ಸುನಿಲ್ ಕುಮಾರ್ ಅವ್ರು ಕನ್ನಡನಾಡಿನ ಹೆಮ್ಮೆಯ ಕೂಸು ಎಂದು ಕನ್ನಡಿಗರೂ ಎದೆಯುಬ್ಬಿಸುವಂತೆ ನಡೆದುಕೊಂಡಿದಾರೆ ಸುನಿಲ್. ಇವರಿಗೆ ನಮ್ಮ ಅಭಿನಂದನೆಗಳು. ತಂದೆಯ ಸಾವಿನ ನೋವಿನ ಗಾಯ ಬೇಗ ಮಾಯಲಿ ಎಂದು ಹಾರೈಕೆ.

ಇದು ಕನ್ನಡಿಗರ ನಿಜಗುಣ!
ಹೌದು, ಹಿಡಿದ ಗುರಿ ಸಾಧಿಸೋ, ಆ ದಾರೀಲಿ ಎದುರಾಗೋ ಸವಾಲುಗಳನ್ನು ಮೀರಿನಿಲ್ಲೋ ಚೈತನ್ಯ ಈ ನಾಡಿನ ಮಕ್ಕಳಾದ ನಮ್ಮ ರಕ್ತದಲ್ಲೇ ಹರಿದುಬಂದಿರುವಂತಿದೆ. ಅಂದು ತನ್ನ ದವಡೆ ಚದರಿ ಹೋದಾಗಲೂ ಅಂಜದೆ, ನೋವಿಗೆ ಸೋತು ಕೂರದೆ ಕ್ರಿಕೆಟ್ ಆಟದಲ್ಲಿ ಚೆಂಡೆಸೆದ ಅನಿಲ್ ಕುಂಬ್ಳೆಯಲ್ಲೂ ಇದೇ ಹಿಡಿದ ಗುರಿಯ ಬಿಡದ ಪರಿ ಕಂಡಿತ್ತು.

1996ರ ವಿಶ್ವಕಪ್ ಪಂದ್ಯಾವಳಿಯಲ್ಲಿ ತಾನೆಸೆದ ಚೆಂಡನ್ನು ಬೌಂಡರಿಗಟ್ಟಿ ಅಟ್ಟಹಾಸದಿಂದ ಅಪಹಾಸ್ಯ ಮಾಡಿದ ಪಾಕಿಸ್ತಾನದ ಅಮೀರ್ ಸೋಹೆಲ್ಲನನ್ನು ಮರು ಎಸೆತದಲ್ಲೇ ಔಟ್ ಮಾಡಿದ ಛಲಗಾರ ವೆಂಕಟೇಶ್ ಪ್ರಸಾದ್ ಅವ್ರಲ್ಲೂ ಇದೇ ಹಟ ಕಂಡಿತ್ತು.
ಇವರುಗಳಿಗೆಲ್ಲಾ ಮಾದರಿಯಾಗಿ 34 ವರ್ಷಗಳ ಹಿಂದೆಯೇ ಬೆಂಕಿ ಚೆಂಡುಗಳನ್ನು ಎದುರಿಸಿ ಏಕಾಂಗಿಯಾಗಿ ಆಡಿದ್ದು ಜಿ.ಆರ್. ವಿಶ್ವನಾಥ್ ಅವ್ರು. ಅಂದು ಚನ್ನೈನಲ್ಲಿ ಭಾರತ ತಂಡ ಬ್ಯಾಟ್ ಮಾಡ್ತಾ ವೆಸ್ಟ್ ಇಂಡೀಸಿನ ಬೌಲಿಂಗ್ ದಾಳಿಗೆ ಪತರಗುಟ್ಟಿ ಹೋಗಿದ್ದಾಗ, ಒಂದೆಡೆಯಲ್ಲಿ ಏಕಾಂಗಿಯಾಗಿ ನೆಲಕಚ್ಚಿ ಹೋರಾಡಿದ್ದು ಇವರೇ. ಭಾರತದ 190 ರನ್ನುಗಳ ಅರ್ಧಕ್ಕಿಂತ ಹೆಚ್ಚು, ಅಂದರೆ 97 ರನ್ನು ಗಳಿಸಿ, ಇತಿಹಾಸದ ಅತ್ಯುತ್ತಮ ಆಟವಾಡಿ ಕೆಚ್ಚು ತೋರಿದವ್ರು ವಿಶಿ. ಈ ಆಟ ಇಂದಿಗೂ ವಿಶ್ವದ ಅತ್ಯುತ್ತಮ ಇನ್ನಿಂಗ್ಸುಗಳ ಪಟ್ಟಿಯಲ್ಲಿ ಅಳಿಯದೇ ನಿಂತಿದೆ.
ಆಟದ ಮೈದಾನ ಮಾತ್ರವಲ್ಲದೇ, ಯುದ್ಧರಂಗವೂ ಸೇರಿದಂತೆ ಎಲ್ಲಾ ರಂಗಗಳಲ್ಲೂ ಎದುರಾಗೋ ಸವಾಲುಗಳನ್ನು ಗಂಡೆದೆಯಿಂದ ಎದುರಿಸೋ ಛಲ ನಮ್ಮ ಹಿರಿಯರಲ್ಲಿಯೂ ಇತ್ತೆಂಬುದಾಗಿ ನಮ್ಮ ಇತಿಹಾಸ ಸಾರುತ್ತಿದೆ. ಇಂದಿಗೂ ಆ ಗುಣಗಳು ನಮ್ಮ ಮೈಯ್ಯಲ್ಲಿವೆ. ಸ್ವಲ್ಪ ಆತ್ಮನಂಬಿಕೆ, ಮತ್ತಷ್ಟು ದುಡಿಮೆಗಳು ಈ ಗುಣಗಳನ್ನು ನಮ್ಮಲ್ಲಿ ಹೆಚ್ಚಿಸಲಿ ಅನ್ನೋದು ಏನ್ ಗುರು ಅಂಬೋಣ!

ಇನ್ನು "ಆರ್ ಸಿ: ಉಡಾಯ್ಸಿ" ಅನ್ನೋ ಸರದಿ ಚಿತ್ರತಾರೆಗಳದ್ದು!


ನಿನ್ನೆ ದಿನದ ಅಂದ್ರೆ 21.03.2009ರ "ದಟ್ಸ್ ಕನ್ನಡ. ಕಾಮ್" ಪತ್ರೀಕೇಲಿ ಇಂಡಿಯನ್ ಪ್ರೀಮಿಯರ್ ಲೀಗಿನ ಪಂದ್ಯಗಳಲ್ಲಿ ಪಾಲ್ಗೊಂಡು ಸ್ಥಾನಿಕ ತಂಡವನ್ನು ಕನ್ನಡದ ಕೆಲ ಚಿತ್ರತಾರೆಯರು ಬೆಂಬಲಿಸಲು ಮುಂದಾಗಿದ್ದಾರೆ ಅನ್ನೋ ಸುದ್ದಿ ಪ್ರಕಟವಾಗಿದೆ. ಸ್ಥಾನಿಕ ತಂಡ ಅಂದ್ರೆ ಬೆಂಗಳೂರಿನ ತಂಡವಾದ ರಾಯಲ್ ಚಾಲೆಂಜರ್ಸ್ ಅನ್ನೋದು ನಮ್ಮ ಊಹೆ. ಸುದ್ದಿ ಇದೇ ಆಗಿದ್ರೆ ಇದು ನಿಜವಾಗ್ಲೂ ಒಂದೊಳ್ಳೆ ಬೆಳವಣಿಗೇನೆ ಆಗಿದೆ.

ಚಿನ್ನಸ್ವಾಮಿ ಮೈದಾನ ತಾರೆಗಳ ತೋಟವಾಗಲಿ!

ಕ್ರಿಕೆಟ್ ತಾರೆಗಳೂ ಅಂದ್ರೆ ನಮ್ಮ ಜನಕ್ಕೆಂಥದೋ ಅಭಿಮಾನ, ಇನ್ನು ಇವರ ಜೊತೆ ಚಿತ್ರತಾರೆಗಳೂ ಸೇರ್ಕೊಂಡ್ರೆ ಡಬ್ಬಲ್ ಮಜಾ. ಕನ್ನಡದ ಹಲವಾರು ತಾರೆಯರು ಬೆಂಗಳೂರಲ್ಲಿ ನಡೆಯೋ ಎಂಟು ಪಂದ್ಯಗಳಲ್ಲಿ ಏಳರಲ್ಲಿ ರಾಯಲ್ ಚಾಲೆಂಜರ್ಸ್ ಆಡಲಿದೆ, ಇನ್ನೊಂದು ಬೇರೆ ತಂಡಗಳದ್ದು. ಇರಲಿ, ನಮ್ಮ ಕನ್ನಡದ ತಾರೆಯರು ಬೆಂಗಳೂರು ತಂಡಕ್ಕೆ ಚಿಯರ್ ಮಾಡಲು ಇವುಗಳಲ್ಲಿ ಭಾಗವಹಿಸೋದು ಚೆನ್ನಾನೆ. ಈ ನೆಪದಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತಷ್ಟು ಬೆಂಬಲ ಸಿಕ್ಕೋದ್ರಲ್ಲಿ ಅನುಮಾನವಿಲ್ಲ.

ಇದು ಹೀಗಿರಬೇಕಿತ್ತಲ್ವಾ?

ಇದೆಲ್ಲಾ ಸರೀನೆ, ಆದ್ರೆ ರಮೇಶ್ ಅರವಿಂದ್, ಗಣೇಶ್, ಪುನೀತ್, ಶರ್ಮಿಳಾ ಮೊದಲಾದ ತಾರೆಯರೆಲ್ಲಾ ಈ ದಿಸೆಯಲ್ಲಿ ಐ.ಪಿ.ಎಲ್ ಆಡಳಿತ ಮಂಡಳಿನಾ ಸಂಪರ್ಕ ಮಾಡಿದಾರೆ ಅನ್ನೋ ಸುದ್ದಿ ಚೂರು ನಿರಾಸೆ ಉಂಟುಮಾಡಿರೋದೂ ನಿಜಾನೆ. ಇದರ ಬಗ್ಗೆ ನಿಜವಾಗ್ಲೂ ರಾಯಲ್ ಚಾಲೆಂಜರ್ಸ್ ತಂಡದ ವ್ಯವಸ್ಥಾಪಕರು ತಾವೇ ಮುಂದಾಗಿ ಕನ್ನಡದ ತಾರೆಯರನ್ನು ಆಹ್ವಾನಿಸಿ, ತಮ್ಮ ತಂಡ ಎಲ್ಲೆಲ್ಲಿ ಆಡುತ್ತೋ ಅಲ್ಲಿಗೆಲ್ಲಾ ಕರ್ಕೊಂಡು ಹೋಗಿ ಚಿಯರ್ಸ್ ಹೇಳಿಸಲು ಒಪ್ಪಂದ ಮಾಡ್ಕೊಂಡಿದ್ದಿದ್ರೆ ಸರಿಯಾದ ನಡೆಯಾಗ್ತಿತ್ತು! ಇದರಿಂದ ಇಬ್ಬರಿಗೂ ಲಾಭವಾಗ್ತಿತ್ತು ಅನ್ನೋದು ನಿಜಾ ಅಲ್ವಾ ಗುರು? ಆ ಮೂಲಕ ಬೆಂಗಳೂರು ತಂಡಕ್ಕೆ ಹೆಚ್ಚು ಹೆಚ್ಚು ಬೆಂಬಲ ಗಳಿಸಿಕೊಡೋದ್ರು ಜೊತೆಗೆ ತಂಡವಾಡೊ ಎಲ್ಲಾ ಪಂದ್ಯಗಳ ಪ್ರೇಕ್ಷಕರ/ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಿತ್ತು. ಇತ್ತೀಚಿನ ಬೆಳವಣಿಗೆ ನೋಡಿದರೆ ಈ ಪಂದ್ಯಗಳು ಹೊರದೇಶದಲ್ಲಿ ನಡ್ಯೋ ಸಾಧ್ಯತೆಗಳು ಎದ್ದು ಕಾಣ್ತಿವೆ. ಹಾಗಾಗೋದಾದ್ರೆ ನಮ್ಮ ಚಿತ್ರ ತಾರೆಯರನ್ನು ಅಲ್ಲಿಗೆ ಒಯ್ಯೋ ಮೂಲಕ ತಮ್ಮ ತಂಡ ಆಡೊ ಪಂದ್ಯಗಳ ವೀಕ್ಷಕರ ಸಂಖ್ಯೆಯನ್ನು ಕರ್ನಾಟಕದಲ್ಲಂತೂ ಹೆಚ್ಚಿಸ್ಕೋಬೌದು ಅನ್ನೋದು ಹದಿನಾರಾಣೆ ಸತ್ಯಾ ಗುರು!

ಐಪಿಎಲ್ ಕ್ರಿಕೆಟ್ ಕಾಮೆಂಟರಿ : "ಹಳದಿಕೆಂಪು-ಕನ್ನಡದ ಕಂಪು"

ಭಾರತೀಯ ಕ್ರಿಕೆಟ್ಟಿಗೆ ಹೊಸ ಬಣ್ಣ ತಂದುಕೊಟ್ಟಿರೋ ಐಪಿಎಲ್ ಸರಣಿ ಈ ಬಾರಿ ಪಂದ್ಯಾವಳಿಯಲ್ಲಿ ಕನ್ನಡದಲ್ಲೂ ಕಾಮೆಂಟರಿ ಕೊಡೋ ಯೋಜನೆ ಮಾಡಿದೆ ಅನ್ನೋ ಸೂಪರ್ ಸುದ್ದಿ 2009ರ ಮಾರ್ಚ್ 11ರ ಕನ್ನಡಪ್ರಭದ 12ನೇ ಪುಟದಲ್ಲಿ ಬಂದಿದೆ ಗುರು!! ಒಟ್ನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೇನೋ ನಿಜವಾದ ಒಕ್ಕೂಟ ವ್ಯವಸ್ಥೆ ಹೇಗಿರಬೇಕು ಅನ್ನೋದಕ್ಕೆ ಬಿ.ಸಿ.ಸಿ.ಐ ಒಂದು ಮಾದರೀನ ಹಾಕ್ಕೊಡ್ತಿದೆ!

ಕ್ರಿಕೆಟ್ : ಹಿಂದೀ ಹೇರಿಕೆಯ ಪ್ರಮುಖ ಸಾಧನ!

"ಭಾರತದೋರಿಗೆ ಕ್ರಿಕೆಟ್ಟು ಅನ್ನೋದು ಕ್ರೀಡೆ ಮಾತ್ರಾ ಆಗಿಲ್ಲಾ, ಅದು ಅವರ ರಾಷ್ಟ್ರೀಯತೆಯಾಗಿದೆ" ಅಂತ ಅದ್ಯಾರೋ ಪುಣ್ಯಾತ್ಮ ಅಂದಿದ್ರಂತೆ. ಹಾಗೆ ಕ್ರಿಕೆಟ್ ಪಂದ್ಯಗಳು ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಬೆಳೆದು ಆವರಿಸಿಕೊಂಡ ಪರಿ ಅದ್ಭುತವಾಗಿದೆ ಗುರು! ಇದೇ ಹೊತ್ತಲ್ಲಿ ತಂತ್ರಜ್ಞಾನದಲ್ಲಾದ ಬೆಳವಣಿಗೆ ನಮ್ಮ ಮನೆಗಳ ಒಳಗೆ ಟಿವಿ ಬರಲು ಕಾರಣವಾಯ್ತು. ಇದರ ಜೊತೆಯಲ್ಲೇ ದೂರದರ್ಶನವೆಂಬುದು ಭಾರತ ಸರ್ಕಾರ ತನ್ನ ಪ್ರಜೆಗಳ ಮೇಲೆ ಹಿಂದಿಯನ್ನು ಹೇರುವ ಹೆದ್ದಾರಿಯಾಯ್ತು. ತಕ್ಕಳಪ್ಪಾ, ಹೇಗಿದ್ರೂ ಜನಕ್ಕೆ ಕ್ರಿಕೆಟ್ ನೋಡೋ ಹುಚ್ಚು ಹಿಡ್ದಿದೆ, ಇದೇ ಸಮಯಾ ಅಂತ ನಮ್ಮ ಸರ್ಕಾರಗಳು ಹಿಂದೀ ಕಾಮೆಂಟರಿಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡಲು ಶುರು ಹಚ್ಕಂಡ್ವು.
ಪ್ರಪಂಚದ ಯಾವ್ದೇ ಮೂಲೇಲೆ ಕ್ರಿಕೆಟ್ ನಡುದ್ರೂ ನಡುರಾತ್ರಿ, ಮುಂಜಾನೆ ಅನ್ನೋ ಪರಿವೆ ಇಲ್ಲದೆ ಜನ ಟಿವಿ ಮುಂದೆ ಕೂಡ್ಲಿಕ್ಕೆ ಶುರು ಮಾಡ್ತಿದ್ದಂಗೇ ತಮಗೆ ಗೊತ್ತಿಲ್ದಂಗೇನೆ ಹಿಂದೀ ಕಲ್ಯಕ್ ಶುರು ಹಚ್ಕೊಂಡ್ರು. "ಅಣ್ಣಾ... ಏಕ್ ಸೌ ಉಂತೀಸ್ ಅಂದ್ರೆ ಎಷ್ಟಣ್ಣಾ?" "ಛೇ ವಿಕೆಟ್ ಖೋಕರ್, ನಿನ್ನಿಯಾನ್ಬೇ ರನ್ ಅಂದ್ರೆ ಎಷ್ಟು ಸಾರ್?" "ಓ ಇಕ್ಯಾವನ್ ಅಂದ್ರೆ ಐವತ್ತೊಂದಾ?" ಅನ್ನೋ ಡೈಲಾಗುಗಳು ಕನ್ನಡದ ಮನೆಮನೆಯಲ್ಲಿ ಕಾಮನ್ನಾಗೋಯ್ತು ಗುರು! ಹಾಗೇ, ಅಲ್ಲೀ ತಂಕಾ ನೀಲಕಂಠರಾವ್ ಥರದ ವೀಕ್ಷಕ ವಿವರಣೆಕಾರರಿಂದ ರೇಡಿಯೋಗಳಲ್ಲಿ ಕನ್ನಡದಲ್ಲಿ ಕೇಳಿಬರುತ್ತಿದ್ದ ಕಾಮೆಂಟರಿಗಳೂ ಕೊನೆಯಾಗಿಹೋದವು. ಇಷ್ಟೆಲ್ಲಾ ಬೆಳವಣಿಗೆ ಕಂಡ ಮೇಲೂ ನಮಗೆ ಕ್ರಿಕೆಟ್ ಕಾಮೆಂಟರಿ ಅನ್ನೋದು ಭಾರತ ಸರ್ಕಾರ ನಮಗೆಲ್ಲಾ ನುಂಗುಸಕ್ ಮುಂದಾಗಿರೋ ಹಿಂದಿ ಹೇರಿಕೆಯೆಂಬ ವಿಷಕ್ಕೆ ಮೆತ್ತಿದ ಸಿಹಿ ಲೇಪನ ಅನ್ನೋದು ಗೊತ್ತಾಗ್ಲಿಲ್ವಲ್ಲಾ?

ಕನ್ನಡದ ಕಾಮೆಂಟರಿ : ಒಕ್ಕೂಟ ವ್ಯವಸ್ಥೆಗೆ ಗೌರವ!

ನಿಜಾ ಗುರು, ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದು ನಮ್ಮ ಮೂಲಭೂತ ಹಕ್ಕಾಗಿದೆ. ಇವತ್ತು ಐಪಿಎಲ್ ಸರಣಿಯಲ್ಲಿ ಕನ್ನಡದ ಕಾಮೆಂಟರಿ ಕೊಡಕ್ಕೆ ಅವರು ಮುಂದಾಗಿರೋದು ಒಕ್ಕೂಟದ ಘನತೆ ಕಾಪಾಡಕ್ಕೇ ಅಂತೇನೂ ಅಲ್ಲ. ಇದರಿಂದ ಕನ್ನಡದ ಮಾರುಕಟ್ಟೇನಾ ಗೆಲ್ಲಕ್ ಸಾಧ್ಯಾ ಆಗಬಹುದು ಅನ್ನೋದೇ ಅವರ ಈ ನಿಲುವಿಗೆ ಕಾರಣ. ಏನೇ ಆಗಲಿ, ಇದರಿಂದಾಗಿ ಕನ್ನಡಿಗರು ತಮ್ಮ ನುಡಿಗೆ ಇರೋ ಮಾರುಕಟ್ಟೆ ಶಕ್ತೀನಾ ಮತ್ತೊಮ್ಮೆ ಅರಿತುಕೋಬೇಕು. ಬರೀ ಕಾಮೆಂಟರಿ ಅಲ್ಲ, ಟಿ.ವಿಯ ಜಾಹೀರಾತುಗಳು ಕೂಡಾ ಕನ್ನಡದಲ್ಲಿರೋದು ಆಯಾ ಉತ್ಪನ್ನಗಳ ಮಾರಾಟ ನಮ್ಮ ನಾಡಲ್ಲಿ ಹೆಚ್ಚೋದಕ್ಕೆ ಸಹಾಯಕ ಅಂತ ತೋರಿಸಿಕೊಡಬೇಕು. ಆಗ ಹಿಂದಿ ಹೇರಿಕೆಯೂ ಕೊನೆಯಾಗುತ್ತೆ, ಒಕ್ಕೂಟ ವ್ಯವಸ್ಥೆಗೂ ಗೌರವ ಬರುತ್ತೆ! ಹೌದಲ್ವಾ ಗುರು?

ಕನ್ನಡನಾಡಿನ ಪ್ರತಿಭಾ ಪಲಾಯನ ನಿಲ್ಲಲಿ!

ಇತ್ತೀಚೆಗೆ ಮದುರೈನಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕದ ಆಟಗಾರರದ್ದೇ ದರ್ಬಾರಂತೆ. ಚಿನ್ನ, ಬೆಳ್ಳಿ ಕಂಚು ಎಲ್ಲಾ ಬಗೆಯ ಪದಕಗಳ್ನ ನಮ್ಮವರು ಗೆದ್ದದ್ದೇ ಗೆದ್ದದ್ದು. ಆದ್ರೆ ಖುಷಿ ಪಟ್ಟಿದ್ದು ಮಾತ್ರಾ ಆಂಧ್ರ, ಜಾರ್ಖಂಡ್ ಥರದ ಬೇರೆ ಬೇರೆ ರಾಜ್ಯಗಳು ಅನ್ನೋ ಸುದ್ದಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ. ನಿಜಾಂಶ ಕೆದಕಿ ನೋಡಿದ್ರೆ ಕರ್ನಾಟಕದ ಕ್ರೀಡಾ ವ್ಯವಸ್ಥೆಯೊಳಗಿನ ದುರಂತ ಕಾಣತ್ತೆ ಗುರು! ಯಾಕಂದ್ರೆ ಇವರೆಲ್ಲಾ ಪ್ರತಿನಿಧಿಸಿದ್ದು ನಮ್ಮ ನಾಡನ್ನಲ್ಲ, ಬದಲಾಗಿ ಆ ರಾಜ್ಯಗಳನ್ನು. ಅರೆ! ನಮ್ಮೊರನ್ನು ಹೊರರಾಜ್ಯದೋರು ಆದರುಸ್ತಾರೆ ಅಂತಾ ಖುಷಿ ಪಡೋದು ಬಿಟ್ಟು ಕ್ಯಾತೆ ತೆಗೀತೀರಾ ಅನ್ನಬೇಡಿ. ಇವರೆಲ್ಲಾ ಅಲ್ಲಿಗೆ ಹೋಗಿದ್ದು, ನಮ್ಮ ನಾಡಲ್ಲಿ ಆ ಪ್ರತಿಭೆಗಳಿಗೆ ಅವಕಾಶ ಸಿಕ್ತಿಲ್ಲ ಅನ್ನೋ ಕಾರಣಕ್ಕೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ ಆಲ್ವಾ ಗುರು?

ಈ ಪ್ರತಿಭೆಯ ಪಲಾಯನ ಏಕೆ?
ನಿಜವಾಗ್ಲೂ ನಮ್ಮ ರಾಜ್ಯದ ಆಟಗಾರರು ಯಾಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಹುಟ್ಟುತ್ತಿದೆ ಅಂತ ನೋಡಿದ್ರೆ ಇಲ್ಲಿ ಆವರಿಗೆ ಸಾಕಷ್ಟು ಸೌಕರ್ಯ, ಹಣ ಸಹಾಯ ಮತ್ತು ಪ್ರೋತ್ಸಾಹಗಳು ಸಿಗದ ಕೊರತೆ ಇದೆಯೇನೋ ಅನ್ಸುತ್ತೆ. ಇಂಥಾ ಕೊರತೆಗಳ ಕಾರಣಗಳಿಂದಲೇ ನಮ್ಮ ನಾಡಿನ ಪ್ರತಿಭೆಗಳು ಅವಕಾಶವನ್ನು ಅರಸಿ ಹೊರರಾಜ್ಯಕ್ಕೆ ಹೋಗ್ತಿರೋದು.
ಇದು ಹೀಗಾಗಬಾರದು.
ಹೇಗಿರ್ಬೇಕು ಪರಿಸ್ಥಿತಿ?
ತಮ್ಮಲ್ಲಿರೋ ಕ್ರೀಡಾ ಪ್ರತಿಭೆಯನ್ನೇ ನಂಬಿರೋ ಹಲವಾರು ಆಟಗಾರರಿಗೆ ನಾಡಿನ ಸರ್ಕಾರ ಸಾಕಷ್ಟು ಉತ್ತೇಜನ ಕೊಡಬೇಕು. ಒಂದು ರಾಜ್ಯದಲ್ಲಿ ಹುಟ್ಟಿ ತಮ್ಮ ಪ್ರತಿಭೆ ಪ್ರದರ್ಶಿಸೊಕ್ಕೆ ಮಾತ್ರ ಮತ್ತೊಂದು ರಾಜ್ಯದ ಮೋರೆ ಹೋಗಿ ಅಲ್ಲೇ ನೆಲೆಸಿ, ಅಲ್ಲಿಯವರಾಗೋದು ಆಟಗಾರರಿಗೂ ಮನಸ್ಸಿಗೆ ಕಷ್ಟವಾಗೋ ವಿಷಯಾನೇ ಆಗಿರಬಹುದು ಮತ್ತು ಅನಿವಾರ್ಯವಾಗಿ ಅವ್ರು ಹಾಗೆ ನಡ್ಕೊತಿರಬಹುದು. ಹೀಗಾಗದಂತೆ ಸರ್ಕಾರದ ಕ್ರೀಡಾ ಇಲಾಖೆ, ಕ್ರಮ ಕೈಗೊಂಡು ಪಟುಗಳಿಗೆ ಪ್ರೋತ್ಸಾಹ ನೀಡಲು ಎಲ್ಲಾ ಬಗೆಯ ಯೋಜನೆಗಳ್ನೂ ಕೈಗೆತ್ತಿಕೊಳ್ಳಬೇಕು. ಒಳ್ಳೊಳ್ಳೆ ಪ್ರಾಯೋಜಕರನ್ನು ಹುಡುಕಿ, ಆಟಗಾರರಿಗೂ ಪ್ರಾಯೋಜಕರಿಗೂ ನಡುವಿನ ಸೇತುವೆಯಾಗಿ ಕ್ರೀಡಾ ಪ್ರಾಧಿಕಾರಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿ ನಮ್ಮವರ ಏಳಿಗೆಗೆ ಕಾರಣವಾಗಬೇಕು. ಒಟ್ಟಿನಲ್ಲಿ ಕನ್ನಡಿಗರ ಪಾಲಿಗೆ ಕನ್ನಡ ನಾಡು ಎಲ್ಲ ಕ್ಷೇತ್ರಗಳಲ್ಲಿನ ಸಾಧನೆಗೆ ಫಲವತ್ತಾದ ನೆಲವಾಗಬೇಕು.

ಕನ್ನಡ ಬೇಡ! ಕನ್ನಡದೋರ ಬೆಂಬಲ ಬೇಕನ್ನೋ ಮಲ್ಯ!!

ಇದೇನಪ್ಪ ಇಷ್ಟ ಬೇಗ ಮತ್ತೆ ಐ.ಪಿ.ಎಲ್ ಬಗ್ಗೆ ಏನ್ ಗುರು ಬರ್ದಿದ್ದಾರೆ ಅಂತ ಅಚ್ಚರಿ ಪಡಬೇಡಿ. ನಮ್ಮ ಬೆಂಗಳೂರಿನ ರಾಯಲ್ ಛಾಲೆಂಜರ್ಸ್ ತಂಡಾನ ಪರಿಚಯಿಸೋ ಸಲುವಾಗಿ ತಂಡದ ವ್ಯವಸ್ಥಾಪಕರು ಮಾಡಿರೋ ಹಾಡು ಹಿಂದೀಲಿರೋದೆ ಇದಕ್ಕೆ ಕಾರಣ ಗುರು!
ಅಭಿಮಾನಿಗಳ ಕನ್ನಡ ಹಾಡು!

ನಮ್ಮ ತಂಡಾನ ಹುರಿದುಂಬಿಸೋಕೆ ತಂಡದ ಅಭಿಮಾನಿಗಳೇ ಸೇರಿ ಮಾಡಿರೋ ತಾಕತ್ತು ಅನ್ನೋ ಕನ್ನಡದ ಹಾಡು ಇವತ್ತು ಕರ್ನಾಟಕದ ಜನರ ನಾಲಿಗೆ ಮೇಲೆ ನಲೀತಿದೆ. ತಾಕತ್ತು ಅನ್ನೋ ಸಕ್ಕತ್ತು ಹಾಡು ರೇಡಿಯೊದಲ್ಲಿ, ಟಿವಿಯಲ್ಲಿ, ಇಂಟರ್ನೆಟ್ಟಲ್ಲಿ... ಹೀಗೆ ಎಲ್ಲ ಕಡೆ ಕೇಳ್ತಾ ಇದೀವಿ. ಅಷ್ಟೆ ಅಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೀತಾ ಇರೋ ನಮ್ಮ ಪಂದ್ಯಗಳಲ್ಲಿ ತಾಕತ್ತು ಹಾಡು ಜೋರಾಗಿ ಕೇಳಿ ಬರ್ತಿದೆ!
ಅಭಿಮಾನಿಗಳನ್ನು ನೋಡಾದ್ರೂ ಕಲೀಬಾರ್ದಾ?
ಅಭಿಮಾನಿಗಳಿಗೆ ಇರೋ ಬುದ್ಧಿ ನಮ್ಮ ತಂಡದ ಮಾಲೀಕರಿಗೆ ಇಲ್ವಲ್ಲ ಗುರು! ಯಾರನ್ನ ಮೆಚ್ಚಸೋಕೆ ಹಿಂದೀಲಿ ಆ ಹಾಡು ಮಾಡಿದಾರೆ? ನಮ್ಮ ಜನರನ್ನ ಮೆಚ್ಚಿಸೋಕಾ? ಅದೇ ಉದ್ದೇಶ ಆಗಿದ್ದಿದ್ರೆ ಕನ್ನಡದಲ್ಲಿ ಮಾಡಿರೋರು. ಇಷ್ಟಕ್ಕೂ ಇವತ್ತು ಬೆಂಗಳೂರು ತಂಡಾನ ಹುರಿದುಂಬಿಸುತ್ತಿರೋರು ಯಾರು ಗುರು? ಕರ್ನಾಟಕದಲ್ಲಿರುವ ನಾವುಗಳು ತಾನೆ? ನಮ್ಮೂರ ತಂಡ ಅಂದ್ರೆ ನಮ್ಮ ತಂಡ ಅನ್ಕೊಂಡಿರೋ ನಮ್ಮ ಭಾಷೇಲಿ ಹಾಡು ಮಾಡೋದು ಬಿಟ್ಟು, ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಮಾಡೋ ಹುಂಬತನ ಯಾಕ್ ಗುರು?
ಹಿಂದಿ ಹಾಡು ಅಖಿಲ ಭಾರತದೋರ ಬೆಂಬಲ ಗಳ್ಸಕ್ಕಾ?
ಈ ಹಾಡು ಹಿಂದೀಲಿರೋದು ಬೇರೆಯವರ ಬೆಂಬಲ ಗೆಲ್ಲೋಕಾ? ಬೆಂಗಳೂರು ದಿಲ್ಲಿ ಮಧ್ಯೆ ಒಂದು ಪಂದ್ಯ ಆದ್ರೆ, ದಿಲ್ಲಿ ಜನತೆ ಯಾರನ್ನ ಬೆಂಬಲಿಸ್ತಾರೆ? ದಿಲ್ಲೀನ ತಾನೆ? ಬೆಂಗಳೂರೋರು ನಮ್ ಭಾಷೇಲಿ ಹಾಡು ಮಾಡಿದಾರೆ, ಅವ್ರು ಗೆಲ್ಲಲಿ ಅಂತಾರಾ? ಕೊನೆಗೆ ಬೆಂಗಳೂರು ತಂಡ ಗೆಲ್ಲಲಿ ಅಂತ ಚಪ್ಪಾಳೆ ತಟ್ಟೋರು ನಮ್ಮ ಜನಾ ತಾನೆ? ಹಾಗಿದ್ದಲ್ಲಿ ಇಲ್ಲಿನ ತಂಡಕ್ಕೆ ಒಳ್ಳೆದಾಗಲಿ ಅಂತ ಹಾರೈಸಿ ಮಾಡೋ ಹಾಡು ಕನ್ನಡದಲ್ಲಿ ತಾನೆ ಇರಬೇಕು? ಇನ್ನೂ ಅವ್ರುಗಳು "ಕನ್ನಡದವ್ರು ದಿಕ್ಕೆಟ್ಟ ಮುಂಡೇವು, ಅವರ ಭಾಷೇಲಿ ಒಂದು ಹಾಡು ಮಾಡಕ್ಕೂ ಆಗದೋರು" ಅಂತಾ ಆಡ್ಕೊಂಡು ನಗ್ತಾರೆ ಅಷ್ಟೆ!
ಅಂತರ ರಾಷ್ಟ್ರೀಯ ಆಟಗಾರರನ್ನು ಮೆಚ್ಚಿಸೋಕಾ?
ಹೋಗಲಿ, ಈ ಹಾಡು ಹಿಂದೀಲಿರೋದು ನಮ್ಮ ತಂಡದಲ್ಲಿರೋ ವಿದೇಶಿ ಆಟಗಾರರನ್ನು ಮೆಚ್ಚಿಸೋಕಾ? ಅಲ್ಲಾ ಜಾಕ್ ಕಾಲಿಸ್ ಆಗಲೀ, ಮಾರ್ಕ್ ಬೌಚರ್ ಆಗಲೀ ಅಥ್ವಾ ಟೇಲರ್ ಆಗಲಿ, ಅವರಿಗೆ ಹಿಂದೀನೂ ಒಂದೇ ಕನ್ನಡಾನೂ ಒಂದೇ ಅಲ್ವೇನ್ರಿ? ಅಷ್ಟ್ರ ಮೇಲೆ ಅವ್ರಿಗೆ ಇದೇನಾದ್ರೂ ಅರ್ಥ ಆದ್ರೂ, ಇಡೀ ಭಾರತಕ್ಕೆಲ್ಲಾ ಒಂದೇ ಭಾಷೆ ಅಂತ ತಪ್ಪು ತಿಳ್ಕಳಲ್ವಾ ಗುರು? ಹಾಗಿದ್ದಲ್ಲಿ ಯಾರನ್ನ ಮೆಚ್ಚಿಸೋಕೆ ಈ ಹಿಂದಿ ಹಾಡು?
ಮೊದ್ಲು ಮನೆ ಗೆದ್ದು ಆಮೇಲೆ ಊರು ಗೆಲ್ಲಬೇಕು!
ಮೊಹಾಲಿಯಂತ ತಂಡಗಳು ತಮ್ಮೋರನ್ನ ಪ್ರೋತ್ಸಾಹಿಸಲು ತಮ್ಮ ಮಣ್ಣಿನ ಸೋಗಡಿರೋ ಪಂಜಾಬಿ ಭಾಂಗ್ಡಾ ಶೈಲಿ ಹಾಡು ಮಾಡಿ ತಮ್ಮ ಭಾಷೆನ ಬಳುಸ್ತಿಲ್ವಾ? ಅಲ್ಲಿ ಹಂಗಿದ್ರೆ ಇಲ್ಲಿ ನಮ್ಮ ಮಲ್ಯ ಸಾಹೇಬರ ರಾಯಲ್ ಛಾಲೆಂಜರ್ಸ್ ತಂಡದೋರು ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಹಾಡು ಮಾಡಿ ನಮ್ಮ ತಲೆ ಮೇಲೆ ಹಾಕ್ತಾ ಇದಾರಲ್ಲ ಗುರು!
ಇವ್ರು ಏನೇ ತಿಪ್ಪರಲಾಗ ಹಾಕುದ್ರೂ ತಾಕತ್ತು ಹಾಡಿಗಿರೋ ಜನಪ್ರಿಯತೆ ಇವ್ರ ಹಿಂದಿ ಹಾಡಿಗೆ ಸಿಗಲ್ಲ. ಈ ತಾಕತ್ತಿನ ಹಾಡು ಬೆಂಗಳೂರಿನ ತಂಡಕ್ಕೆ ಬೆಂಬಲ ಹುಟ್ಸಕ್ಕೆ ಕನ್ನಡವೇ ಸಾಧನ ಅಂತ ಸಾರ್ತಿದೆಯಲ್ಲಾ ಗುರು! ತಾಕತ್ತು ಹಾಡಿಗೆ ಸಿಕ್ಕಿರೋ ಜನಪ್ರಿಯತೆ ನೋಡಾದ್ರು ರಾಯಲ್ ಛಾಲೆಂಜರ್ಸ್ ತಂಡದ ಎಲ್ಲ ಪ್ರಚಾರದ ವ್ಯವಸ್ಥೇಲಿ ಕನ್ನಡಕ್ಕೆ ಮಹತ್ವ ನೀಡಬೇಕು. ಇದ್ರಿಂದ ಅವ್ರಿಗೇ ಲಾಭ. ಇಷ್ಟಕ್ಕೂ ಕನ್ನಡ ಹಾಡು ಇರಬೇಕು ಅಂತಿರೋದು ನಮ್ಮ ಬೆಂಗಳೂರಿನ ತಂಡಕ್ಕೆ ತಾನೆ? ನಮ್ಮೂರಿನ ತಂಡದ ಹಾಡಲ್ಲದೆ ಇನ್ಯಾವ ತಂಡದ ಹಾಡು ಕನ್ನಡದಲ್ಲಿ ಇರಕ್ಕೆ ಸಾಧ್ಯಾ ಗುರು?

ತಾಕತ್ತು! ಈ ಹಾಡು ಸಕ್ಕತ್ತು!

ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ ಸೆಣುಸ್ತಾ ಇರೋ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರನ್ನು ಉತ್ತೇಜಿಸಕ್ಕೇ ಅಂತ ಸಕ್ಕತ್ತಾಗಿರೋ ಒಂದು ಹಾಡನ್ನು ಅಭಿಮಾನಿಗಳು ಮಾಡಿದಾರೆ! ಈ ಹಾಡು ಎಲ್ರು ಮನ್ಸನ್ ಗೆದ್ದು ಸಖತ್ ಮಿಂಚ್ತಿದೆ ಗುರು.
ಮೊದಲಿಗೆ, ಈ ತಂಡದೋರ ಬಟ್ಟೆ ಬಣ್ಣಾನೂ ಹಳದಿ, ಕೆಂಪು ಆಗಿರೋದುನ್ನ ನೋಡ್ತಿದ್ರೆ ಖುಷಿಯಾಗುತ್ತೆ. ಬೇರೆ ಬೇರೆ ದೇಶದ ಆಟಗಾರರನ್ನು ಈ ತಂಡ ಒಳಗೊಂಡಿದೆ, ಈ ಲೀಗಿನ ಪಂದ್ಯಗಳು ಭಾರತದ ಎಲ್ಲಾ ಮೂಲೆ ಮೂಲೆಲಿರೋ ಜನರೂ ನೋಡ್ತಾರೆ. ಅದರ ಜೊತೆಗೆ ಈ ಹಾಡನ್ನ ಕೂಡಾ!
ಕನ್ನಡದಲ್ಲಿರೋದು ಹೆಮ್ಮೆ, ಕೀಳರಿಮೆ ಅಲ್ಲ!
ಈ ತಂಡಕ್ಕಾಗಿ ಕಟ್ಟಿರೋ ಹಾಡು ಕನ್ನಡದಲ್ಲಿರೋದು, ಹಾಗಿಟ್ಟುಕೊಳ್ಳೋದನ್ನೇ ತಮ್ಮ ವಿಶೇಷತೆಯಾಗಿ ಮೆರುಸ್ತಾ ಇರೋದು ನಿಜವಾಗ್ಲೂ ನಾವು ಕನ್ನಡಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಇರೋ ಬಳಕೆಯ ಸಾಧ್ಯತೇನಾ ಕಣ್ ಬಿಟ್ ನೋಡ್ತಿರೋ ಸೂಚನೆ ಗುರು!
ಇಂಟರ್ ನ್ಯಾಷನಲ್ ಆಟ, ಇಂಟರ್ ನ್ಯಾಷನಲ್ ಆಟಗಾರ್ರು ಅಂತ ಇಲ್ಲಿ ಕನ್ನಡಾನ ಕಡೆಗಣಿಸ್ದೆ ಇರೋದು ನಮಗೆಲ್ಲ ಪಾಠವಾಗಬೇಕಿದೆ. ನಿಜಾ ಹೇಳ್ಬೇಕು ಅಂದ್ರೆ ಈ ಹಾಡಿಗೆ, ಈ ತಂಡಕ್ಕೆ ಒಂದು ಖಳೆ ಬಂದಿರೋದೆ ಆ ಹಾಡಲ್ಲಿ ಸ್ಥಳೀಯ ಸೊಗಡನ್ನ ತನ್ನದಾಗಿಸಿಕೊಂಡಿದ್ದಕ್ಕೇ. ಏನಂತೀ ಗುರು!
ಇದು ಕ್ಲಬ್ ಕ್ರಿಕೆಟ್ ಆಗಿದ್ರೂ ಕೂಡಾ, ಆಟ ನೋಡಕ್ ಬರೋರೆಲ್ಲಾ ಕೈಯ್ಯಲ್ಲಿ ಹಳದಿ ಕೆಂಪು ಬಾವುಟ ಹಿಡ್ಕೊಂಡ್ ಬನ್ನಿ ಅಂತಿರೋದನ್ನು ನೀವು ಗಮನಿಸಿ ನೋಡುದ್ರೆ, ಇದಕ್ಕಿರೋ ಮಹತ್ವಾ ರಾಷ್ಟ್ರೀಯ ಕ್ರಿಕೆಟ್ಟಿಗಿಂತ ಜಾಸ್ತಿ ಗುರು! ಸುಮ್ಮನೆ ಊಹಿಸಿಕೊಳ್ಳಿ, ಚಿನ್ನಸ್ವಾಮಿ ಕ್ರೀಡಾಂಗಣದ ತುಂಬಾ.... ಹಳದಿ ಕೆಂಪಿನ ಬಾವುಟಗಳು ರಾರಾಜಿಸ್ತಾ ಇದ್ರೆ, ಅದುನ್ನ ದೂರದರ್ಶನದಲ್ಲಿ ನೋಡ್ತಾ ಇದ್ರೆ ನಾಡಿನ ಮೂಲೆ ಮೂಲೇಲಿರೋ ಕನ್ನಡದೋರ ಮನಸ್ಸುಗಳು ಹೇಗೆ ಹಿಗ್ಗುತ್ವೆ, ಹೇಗೆ ಒಗ್ಗೂಡುತ್ವೆ ಅಂತಾ!

ಇಲ್ಲಿ ಯಾರು ಕುಂಬ್ಳೆ ಅಂದ್ರೆ? ಕೈ ಎತ್ತಿ!

ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ತಡವಾಗಾದ್ರೂ ಆಯ್ಕೆಯಾಗಿರೋದು ಹೆಮ್ಮೆ ತಂದಿದೆ ಗುರು! ಕುಂಬ್ಳೆಗೆ ಈ ಹೊಸ ಜವಾಬ್ದಾರಿಯಲ್ಲೂ ಯಶಸ್ಸು ಸಿಗಲಿ! ಅಂದಹಾಗೆ, ಅನಿಲ್ ಕುಂಬ್ಳೆಗೆ ಈ ಸ್ಥಾನ ಅಷ್ಟು ಸಲೀಸಾಗೇನು ದಕ್ಕಿಲ್ಲ. ನಾಯಕನ ಸ್ಥಾನಕ್ಕೆ ಏರಿದ ಕುಂಬ್ಳೆ ಸಾಗಿದ ದೂರ ಬಹಳ, ಸವೆಸಿದ ದಾರಿನೂ ದೂರದ್ದು. ಈ ಹಾದೀಲಿ ಸಾಗ್ತಾ ಸಾಗ್ತಾ ಕುಂಬ್ಳೆ 118 ಟೆಸ್ಟ್ ಪಂದ್ಯಗಳ್ನ ಆಡಿದಾರೆ, 566 ವಿಕೆಟ್ ಉರುಳಿಸಿ ಭಾರತದ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಕೂಡಾ ಆಗಿದಾರೆ, ಉಪನಾಯಕನಾಗಿ ಆಡಿ ಅನುಭವಾನೂ ಪಡೆದಿದಾರೆ.

ವೆಸ್ಟ್ ಇಂಡೀಸ್ ಎದುರು ಒಂದು ಪಂದ್ಯದಲ್ಲಿ ಚೆಂಡೇಟು ಬಿದ್ದು ದವಡೆ-ಮೂಳೆ ಚದರಿ ಹೋದಾಗ್ಲೂ ಬೌಲ್ ಮಾಡಿದ ಅನಿಲ್ ಕುಂಬ್ಳೆ, ಬದ್ಧತೆಗೊಂದು ಹೊಸ ಭಾಷ್ಯ ಬರೆದದ್ದು ಕ್ರಿಕೆಟ್ ಇರೋವರೆಗೂ ಮರೆಯಕ್ಕಾಗದೇ ಇರೋ ವಿಷ್ಯ! 1999ರಲ್ಲಿ ಪಾಕಿಸ್ತಾನದ ಜೊತೆ ಆಡಿದ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಹತ್ತೂ ವಿಕೆಟ್ ಗಳನ್ನು ಕಬಳಿಸಿದ ಆ ಆಟ ಅನಿಲ್ ಕುಂಬ್ಳೆಯ ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ ಗುರು! ಕುಂಬ್ಳೆ ತಂಡದ ನಾಯಕನಾಗಕ್ಕೆ ಕಾರಣ ಬರೀ ಆತನ ಪ್ರತಿಭೆಯೊಂದೇ ಕಾರಣ ಅಲ್ಲ; ಅದರ ಜೊತೆ ಜೊತೆಗೇ ಸಕ್ಕತ್ ಪರಿಶ್ರಮ, ಬಿಡುವಿಲ್ದಿರೋ ಪ್ರಯತ್ನ, ಛಲ ಮತ್ತು ಆಟಕ್ಕೆ ಬದ್ಧತೆಗಳು ಬಹಳ ಪಾತ್ರ ವಹಿಸಿವೆ.

ಕನ್ನಡ ನಾಡು ಏಳಿಗೆ ಹೊಂದಕ್ಕೆ ಇವತ್ತು ನಮ್ಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಉದ್ದಿಮೆ, ಮನರಂಜನೆ, ಶಿಕ್ಷಣ, ರಾಜಕಾರಣ... ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕುಂಬ್ಳೆಗಳು ಬೇಕು. ಆ ಛಲವಂತ ಬೇರೆಲ್ಲೂ ಇಲ್ಲ, ಕನ್ನಡಿಗ ಕನ್ನಡಿ ಮುಂದೆ ನಿಂತ್ರೆ ತಾನೇ ಕಾಣ್ಸ್ತಾನೆ! ಏನ್ ಗುರು?

ಕನ್ನಡಿಗರ ಒಗ್ಗಟ್ಟೇ ಮೋಸಕ್ಕೆ ಮದ್ದು

ರಾಹುಲ್ ದ್ರಾವಿಡ್ ಮುಂಬಯಿ ಲಾಬಿ ಎದುರು ಮುಗ್ಗರಿಸಿ ಹೇಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ಕಳ್ಕೋಬೇಕಾಯ್ತು ಅಂತ ವಿ.ಕ.ದಲ್ಲಿ ಬಂದಿದೆ ನೋಡಿ ಒಂದು ವಿಶ್ಲೇಷಣೆ.

ದ್ರಾವಿಡ್ ಜಾಗದಲ್ಲಿ ಗಂಗೂಲಿ ಏನಾದ್ರು ಇದ್ದಿದ್ದಿದ್ರೆ, ಏಕಾಏಕಿ ಈ ರೀತಿ ನಿರ್ಧಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಹುಟ್ಟಿಕೊಂಡು ಇಡೀ ಪ.ಬಂಗಾಳ ಇಷ್ಟು ಹೊತ್ತಿಗೆ ಹತ್ಕೊಂಡು ಉರೀತಿತ್ತು ಗುರು!

ಬೇರೆ ರಾಜ್ಯದೋರು ಒಗ್ಗಟ್ಟಿಂದ ಬಿಸಿಸಿಐ ನಲ್ಲಿ ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ತಾ ಇದಾರೋ, ಹಾಗೇ ಕ್ರಿಕೆಟ್ ಆಡಳಿತದಲ್ಲಿರೋ ಕನ್ನಡಿಗರು ಕೂಡ ಒಳಜಗಳಗಳ್ನ ಬದಿಗಿಟ್ಟು ಒಗ್ಗಟ್ಟಿಂದ ವರ್ತಿಸಬೇಕಾಗಿರೋದು ಇವತ್ತು ಅತ್ಯಗತ್ಯ ಗುರು! ಎಲ್ಲಕ್ಕಿಂತ ಮೊದಲು ನಾವು ಕನ್ನಡಿಗರು ಅಂತ ಇವರು ಗುರುತಿಸಿಕೊಳ್ಳಬೇಕಿದೆ, ಒಗ್ಗಟ್ಟಿಂದ ಬಿಸಿಸಿಐ ನಲ್ಲಿ ನಿಂತು ಕನ್ನಡದ ಆಟಗಾರರಿಗೆ ಹೀಗೆ ಮೋಸ ಆಗದೇ ಇರೋಹಾಗೆ ನೋಡ್ಕೋಬೇಕಿದೆ. ಇದನ್ನ ಮಾಡದೇ ಇರೋದ್ರಿಂದ್ಲೇ ಹಿಂದೇನೂ ಗುಂಡಪ್ಪ ವಿಶ್ವನಾಥು, ಪ್ರಸನ್ನ ಮುಂತಾದೋರಿಗೂ ಪಂಗನಾಮ ಸಿಕ್ಕಿದ್ದು ಗುರು!

ತಿರ್ಗಾ ಅದೇ ಪಾಠ: ಕನ್ನಡಿಗ್ರು ತಾವು ಕನ್ನಡಿಗ್ರು ಅಂತ ಎಂದಿಗೂ ಮರೀದೆ ಒಗ್ಗಟ್ಟಿಂದ ಇರಬೇಕು. ಬಿಸಿಸಿಐ ನಲ್ಲೂ ಅಷ್ಟೇ, ಬೆಂಗಳೂರಿನ ಐಟಿ ಕಂಪನಿಗಳಲ್ಲೂ ಅಷ್ಟೇ. ಇಲ್ದೇ ಹೋದ್ರೆ ಎಲ್ಲೀಗ್ ಹೋದ್ರೂ ಕನ್ನಡಿಗಂಗೆ ಪಂಗನಾಮಾನೇ ಗುರು! ಒಗ್ಗಟ್ಟಾಗಿರೋದು ಬಿಟ್ಟು ನಾನೊಬ್ಬ "ವಿಶ್ವಮಾನವ", ನನಗೆ ಕನ್ನಡತನ ಇಲ್ಲ, ನನಗೆ ವಿಶ್ವಮಾನವತ್ವ ಒಂದೇ ಇರೋದು ಅಂತೇನಾದ್ರೂ ಇನ್ನೂ ಕೂತಿದ್ರೆ ಕನ್ನಡಿಗ ಮಟೇಸ್! ಯಾರು ಮಟೇಸ್ ಮಾಡೋರು ಅಂತೀರಾ? ಯಾರು "ಕನ್ನಡಿಗರು ವಿಶ್ವಮಾನತ್ವಕ್ಕೆ ಹೆಸರುವಾಸಿಯಾಗಿರೋರು, ನೀವು ಹಾಗೇ ಇರಿ" ಅಂತ ಮಾರ್ಜಾಲನ್ಯಾಯ ಹೇಳಿಕೊಂಡು ತಮ್ಮ ಬೇಳೆಕಾಳು ಬೇಯಿಸಿಕೋತಾರೋ ಔರು!
Related Posts with Thumbnails