ಹೊಗೇನಕಲ್ಲಿಗೇ ಹೊಗೆ!

ಹೊಗೇನಕಲ್ಲು ಪ್ರದೇಶದಲ್ಲಿ ತಮಿಳುನಾಡು ಕುಡಿಯುವ ನೀರಿನ ಯೋಜನೆಯೊಂದನ್ನು ಕೈಗೊಳ್ಳಲು 2008ರಲ್ಲೇ ಶಂಕುಸ್ಥಾಪನೆಯನ್ನು ನಡೆಸಿತ್ತು. ಇದು ನದಿ ನೀರು ಹಂಚಿಕೆ ಸಮಸ್ಯೆಯಲ್ಲ, ನಮ್ಮ ನಾಡಿನ ಗಡಿ ಒತ್ತುವರಿ ಸಮಸ್ಯೆ. ಆವತ್ತಿನಿಂದ ಈ ಬಗ್ಗೆ ಕರ್ನಾಟಕ ಸರ್ಕಾರ ಏನೇನು ಕ್ರಮ ತೆಗೆದುಕೊಂಡಿದೆ? ಅಂತಾ ನೋಡಿದರೆ ಸಮಸ್ಯೆಯ ಕಂಬಳಿ ಎಲ್ಲಿತ್ತೋ ಅಲ್ಲೇ ಇದೆ. ತಮಿಳುನಾಡು ಮಾತ್ರಾ ನೀವು ಏನಾರಾ ಬೊಗುಳ್ಕೊಳ್ಳಿ ನಾವು ಮಾತ್ರಾ ಕಾಮಗಾರಿ ಮಾಡ್ತಾ ಇರ್ತೀವಿ ಎನ್ನುವಂತೆ ಕೆಲಸ ಶುರು ಮಾಡಿದೆ. ಕರ್ನಾಟಕ ಸರ್ಕಾರ ಮಾತ್ರಾ ಈ ಬಗ್ಗೆ ಪರಿಣಾಮಕಾರಿಯಾಗಿ ಕ್ರಮ ತೊಗೊಳ್ತಿಲ್ಲ. ಬಹುಶಃ ಪೆರಿಯಣ್ಣನ ಮಾತು ಮೀರಿ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡಬಾರದೆಂದೋ, ಯಾವುದೇ ಕ್ರಮ ತೆಗೆದುಕೊಂಡರೆ ಸೌಹಾರ್ದತೆ ಹಾಳಾದೀತು ಎಂದೋ ಚಿನ್ನತಂಬಿ ಸುಮ್ಮನಿರಬಹುದು... ಹೀಗೇ ಇದ್ದರೆ ಮುಂದೊಂದು ದಿನ ಇದೇ ಚಿನ್ನತಂಬಿ ಹೊಗೇನಕಲ್ ಕುಡಿಯುವ ನೀರು ಯೋಜನೆಯನ್ನು (ತಮಿಳು)ನಾಡಿಗೆ ಅರ್ಪಿಸಿ ಉದ್ಘಾಟನೆ ಮಾಡಿಬಂದರೂ ಬರಬಹುದು ಎಂಬುದು ಜನರಾಡುತ್ತಿರೋ ಮಾತು. 2008ರಲ್ಲಿ ಏನ್‌ಗುರುವಿನಲ್ಲಿ ಬರೆದಿದ್ದ ಹೊಗೇನಕಲ್ಲಿಗೆ ಹೊಗೆ ಈ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತುತ. ಓದಿ - ಸಂಪಾದಕ


ಹೊಗೇನಕಲ್ಲಿಗೇ ಹೊಗೆ!


ಕನ್ನಡಿಗರೇ... ಲಗೂ ತಯಾರಾಗ್ರೀಪಾ! ನಮ್ಮ ಹೊಗೆನಕಲ್ ನಡುಗಡ್ಡೆಗೆ ಎಳ್ಳು ನೀರು ಬಿಟ್ಟು ಪೂಜೆ ಮಾಡಿ ಹೊಗಿ ಹಾಕಾಕ. ಮೊನ್ನಿ ಮೊನ್ನಿ ವಿಜಯ ಕರ್ನಾಟಕದ ವರದಿ ಪ್ರಕಾರ ತಮಿಳನಾಡಿನ ಸರ್ಕಾರ ಕಾವೇರಿ ನದಿಯಿಂದ ಕುಡಿಯು ನೀರು ಮತ್ತು ವಿದ್ಯುತ್ ಸ್ಥಾವರ ಯೋಜನೆಗೆ ಶಿಲಾನ್ಯಾಸ ಮಾಡೇತಿ. ಇನ್ನೂ ನಾವು ಕೈ ಕಟಕೊಂಡು ಕುಂತ್ರ ಪೂರ್ತಿ ಹೊಗೆನಕಲ್ ತಮಿಳುನಾಡಿನ ಪಾಲಾಗೊದನ್ನ ತಪ್ಪಸಾಕ್ ಸಾಧ್ಯನೇ ಇಲ್ಲ.


ಹೊಗೆನಕಲ್ ನಮ್ಮದು


ಮೊನ್ನಿ ವಿ.ಕ ಹೇಳುದನ್ನ ಸ್ವಲ್ಪ ನೋಡ್ರಿ:
ಕಾನೂನು ಪಂಡಿತರು ಹೇಳು ಪ್ರಕಾರ ಹೊಗೆನಕಲ್ ಪೂರ್ತಿ ಕರ್ನಾಟಕಕ್ಕೆ ಸೇರಿದ್ದು, ಹಿಂದಿನ ಮದ್ರಾಸ್ ಸರ್ಕಾರ ಮಾಡಿದ್ದ ನಕ್ಷೆದಾಗೂ ( ಟ್ರೋಪ ಶೀಟ್) ಇದು ಸ್ಪಷ್ಟ ಐತಿ. ಆದ್ರ ತಮಿಳ್ನಾಡಿನ ಸರ್ಕಾರ ತನ್ನ ಕಡಿ ಇರೂ ನಕ್ಷೆ ತೋರ್ಸಾಕ್ ಬಿಲಕುಲ್ ತಯಾರಿಲ್ಲ!
ಹೊಗೆನಕಲ್ಲಿನ ಸ್ಥಳೀಯರ ಹೆಸರು ಕರ್ನಾಟಕದ ಮತದಾರರ ಪಟ್ಟಿನಾಗ್ ಐತ್ರಿ.
ಹೊಗೆನಕಲ್ನಾಗ್ ಏನರಾ ಎಪರಾ ತಪರಾ ನಡೀತಂದ್ರು, ಅದು ದಾಖಲಾಗುದು ನಮ್ಮ ಮಲೆ ಮಹದೇಶ್ವರ್ ಪೊಲೀಸ್ ಠಾಣೆದಾಗರೀ.
ಅಲ್ಲಿ ಮಂದಿ ಕೈಯ್ಯಾಗಿರೂದು ನಮ್ಮ ಕರ್ನಾಟಕ ಸರ್ಕಾರ ಕೊಟ್ಟಿರು ಪಡಿತರ ಚೀಟಿ ರೀ.
ಅಷ್ಟ ಅಲ್ರಿ, ಗಡಿ ವಿವಾದ ಸಂಬಂಧ ಅರ್ಮುಗಂ ಅನ್ನೋರು ಹಾಕಿದ್ದ ಕೇಸನ್ನ " ನಮ್ಮ ವ್ಯಾಪ್ತಿಗೆ ಬರುದಿಲ್ಲ" ಅಂತ ತಮಿಳುನಾಡಿನ ನ್ಯಾಯಾಲಯ ಕರ್ನಾಟಕಕ್ಕ ವರ್ಗ ಮಾಡೇತ್ರಿ.

ಮ್ಯಾಲಿನ ಸಾಕ್ಷಿಗಳು ಏನ್ ಹೇಳತೇತಿ ಅಂದ್ರ ಹೊಗೆನಕಲ್, ನಮಗ ಸೇರಿರೂ ಜಗಾರೀ. ಅಂತದ್ರಾಗ್ ತಮಿಳುನಾಡು ನಮ್ಮ ರಾಜ್ಯದಾಗ ಸರ್ಕಾರ ಇಲ್ಲದ ಹೊತ್ತು ನೋಡಿ ಹೊಂಚು ಹಾಕಿ ಚಲೋತಂಗ ನಮಗ ಟೋಪಗಿ ಹಾಕಾಕ್ ನಿಂತೆತಿ ನೋಡ್ರಿ. ಈ ಪರಿ ಮರಾಮೋಸದ ಪ್ಲಾನ್ ಸಣ್ಣದಿಲ್ರಿ... 1956ರಾಗ ರಾಜ್ಯ ವಿಂಗಡಣೆ ಆದಾಗ್ ನಮಗ ಮೋಸ ಆಗಿ ಹೊಗೆನಕಲ್ ನ ಒಂದು ಭಾಗ ತಮಿಳುನಾಡಿಗ ಸೇರ್ಕೊಂಡ್ತು. ಈಗ ನೋಡಿದ್ರ ಪ್ರವಾಸೋದ್ಯಮ ಅಭಿವೃದ್ಧಿ ಮಾಡ್ತೇನಿ, ರಸ್ತಿ ಮಾಡ್ತೆನಿ, ಅದು ಇದು ಅನ್ಕೊಂತ ನಮ್ಮ ಪಾಲಿನ ನೆಲಾನು ಅಕ್ರಮವಾಗಿ ಆಕ್ರಮಿಸಿಕೊಂಡಾರ್ ರೀ.


ಏನ್ ಕಿಸಿಯಾಕ್ ಆಗತೆತಿ ಕಿಸಿರಿ ಅಂತ ಸೊಕ್ ಮಾಡ್ಯಾರ


ಈಗ ಕಾವೇರಿ ರಗಳಿ ನ್ಯಾಯಲಯದಾಗ್ ಇರಬೇಕಾರ ಯಾರ ಪರ್ಮಿಷನ್ನು ತಗೊಳ್ಳದೆ ಅಣಿಕಟ್ಟು ಕಟ್ಟಾಕ್ ನಿಂತಿರುದು ದೊಡ್ಡ ಮೋಸ. ಇದೆ ತಮಿಳುನಾಡು ನಮ್ಮ ಮಲೆ ಮಹದೇಶ್ವರ ಬೆಟ್ಟಕ್ಕ ಬರು ಭಕ್ತರಿಗೆ ನಮ್ಮ ಪಾಲಿನ ನೀರಿನಾಗ್ ಕುಡಿಯು ನೀರು ವ್ಯವಸ್ಥೆ ಮಾಡಾಕ್ ಒಂದ ಸಣ್ಣ ಯೋಜನೆ ಹಾಕಿದ್ರ ಲಬ ಲಬ ಬಾಯಿ ಬಡ್ಕೊಂಡು ಅದಕ್ಕ ಕಲ್ಲ ಹಾಕ್ತ್ರಿ. ಈಗ ನೋಡಿದ್ರ ಈ ಯೋಜನೆಗೆ ತಮಿಳನಾಡು ಬಳಸಕೊಳ್ಳು ನೀರೆಷ್ಟು? ಅದು ಆ ರಾಜ್ಯಕ್ಕೆ ನಿಗದಿ ಮಾಡಿರು ನೀರಿನ ಪಾಲನಾಗ್ ಐತೊ ಇಲ್ಲೊ ? ಅರಣ್ಯ ಪ್ರದೇಶದಾಗ್ ಆಣೆಕಟ್ಟು ಕಟ್ಟುದ್ರಿಂದ ನಮ್ಮ ರಾಜ್ಯದ ವನ್ಯ ಜೀವಿಗಳಿಗೆ ಏನ್ ಅಪಾಯ ಆಗತೆತಿ ? ಅಂತಾರ ಕರ್ನಾಟಕದ ಕೂಡಾ ಚರ್ಚಿ ಮಾಡಾರೇನ? ಉಹೂ.. ಒಂದೂ ಇಲ್ಲ. ಕಣ್ ಮುಚಗೊಂಡು ಯೋಜನಾ ಚಾಲೂ ಮಾಡ್ಯಾರ್ ರೀ. ’ನಾವು ಏನಾರ್ ಮಾಡ್ತೆವಿ, ನಿಮ್ಮ ಕೈಯಾಗ್ ಏನ್ ಕಿಸಿಯಾಕ್ ಆಗತೆತಿ? ಕಿಸಿರಿ ನೋಡೇ ಬಿಡ್ತೆವಿ’ ಅನ್ನೋರ ಹಾಗೆ ಸವಾಲ್ ಮಾಡೊ ಹಂಗ ನಡ್ಕೊಂಡಾರ್ರೀ. ಕೇಂದ್ರ ಸರ್ಕಾರನೆ ಅವರ ಕೈಯಾಗ್ ಇರಬೇಕಾದ್ರ ಅವರಿಗೆ ಯಾವ ಭಯ?

ತಮಿಳರು ಭಾರತಿಯರೇ, ತಮಿಳುನಾಡು ಭಾರತವೇ

ತಮಿಳರು ಭಾರತಿಯರೇ, ತುಸಾ ನಮ್ಮ ಪಾಲಿನ ಕಾವೇರಿ ನೀರು ಅವರು ತಗೊಂಡ್ರ ಏನ್ ತಪ್ಪು? ಅವರು ಉದ್ಧಾರ ಆದ್ರ ಏನ್ ಸಮಸ್ಯೆ ಅನ್ನು ಮಂದಿಗೆ ಕಮ್ಮಿ ಇಲ್ಲ. ಅವರು ಉದ್ಧಾರ ಆಗ್ಲಿ, ನಾವು ಖುಷಿ ಪಡೋಣು, ಆದ್ರ ನಮ್ಮ ನೆಲ, ಜಲ ಕಬಳಿಸಿ, ನಮ್ಮ ಮಂದಿ ಬಾಳಿಗೆ ಬೆಂಕಿ ಹಾಕಿ ಅವರು ಉದ್ಧಾರ ಆಗ್ಲಿ ಅಂದ್ರ ಸುಮ್ಮ ಗಪ್ ಕುಂಡರಾಕ ನಮಗೇನ್ ಹುಚ್ಚ ನಾಯಿ ಕಡದಿಲ್ಲ. ಎರಡೂ ಮಂದಿ ಭಾರತಿಯರೇ, ಏನಿದು ಕನ್ನಡ ತಮಿಳು ಅಂತ ಬೇಧ-ಭಾವ ಅನ್ನು ಮಂದಿ ತಮ್ಮ ಮನ್ಯಾಗಿನ ಒಂದು ಕೋಣೆ ತಮಿಳನಿಗೋ ಬಿಹಾರಿಗೋ ಬಿಟ್ಟು ಕೊಡು ಅಂದ್ರ ಕೊಡತಾರೆನ್? ಅಷ್ಟ್ಯಾಕ ಪಕ್ಕದ ಮನಿಯಾತಂಗ ಕೊಡ್ತಾರೇನೂ? ಇದಕ್ಕೆ ಕೊನೆ ಹೆಂಗ್? ಭಾರತ ಅನ್ನೋದು ಭಾಷಾವಾರು ರಾಜ್ಯಗಳ ಒಕ್ಕೂಟ, ಅಲ್ಲಿನ ಎಲ್ಲ ಜನಕ್ಕೂ, ಎಲ್ಲ ವಿಷಯಗಳಲ್ಲೂ ಸಮಾನ ಹಕ್ಕಿರಬೇಕು, ಈ ರೀತಿ ಹಿಂದಿಯವರಿಗೆ, ತಮಿಳರಿಗೆ ಒಂದು ನ್ಯಾಯ , ಬ್ಯಾರೆ ಮಂದಿಗೆ ಒಂದು ನ್ಯಾಯ ಅಂದ್ರೆ ಆಗುದಿಲ್ರಿ. ನಮ್ಮ ಪಾಲಿನ ರೊಟ್ಟಿ ಕಿತ್ಕೊಂಡು, ನಮ್ಮನ್ನ ಉಪವಾಸ ಕೆಡವಿ, ನಮ್ಮ ಮುಂದ ಕುಂತು, ಎಣಗಾಯಿ ಪಲ್ಲ್ಯ ಹಚ್ಚಕೊಂಡ ತಿಂದು " ಬಾಳ್ ಚಲೋ ಇತ್ತು ಕನ್ನಡಿಗ, ಖರೇನು ನೀನು ಭಾರತೀಯ ಅಂತ ಸಾಬೀತು ಮಾಡಿದಿ" ಅಂತ ಸರ್ಟಿಫಿಕೇಟ್ ತಗೊಳ್ಳಾಕ್ ನಾವೇನು ಹುಚ್ಚರಲ್ರಿ. ಇಂಥ ಅನ್ಯಾಯಗಳನ್ನ ಖಂಡ ತುಂಡ ವಿರೋಧ ಮಾಡಿ, ನಮ್ಮ ನೆಲ ಜಲ ರಕ್ಷಸ್ಕೊಬೇಕು ಅಂದ್ರ ನಮಗ ಅರ್ಜೆಂಟ್ ಆಗಿ ಬೇಕಾಗಿರೋದು ನಮ್ಮ ನಾಡು ನುಡಿ ಬಗ್ಗ ಕಾಳಜಿ, ಬದ್ಧತೆ ಇರುವಂತ ಪ್ರಾದೇಶಿಕ ಚಿಂತನಾ ರೀ. ನೀವೇನ್ ಅಂತಿರಿ ಗುರುಗಳೇ?

‘ದೇಶದ ಬಗ್ಗೆ ಗೌರವಾ’ ಅನ್ನೋ ಹಿಂದೀ ಹೇರಿಕೆಯ ಹೊಸ ಅಸ್ತ್ರ!

ಮೊನ್ನೆ, ಅಂದ್ರೆ ೧೯ನೇ ಏಪ್ರಿಲ್ ೨೦೧೦ರ ವಿಜಯ ಕರ್ನಾಟಕದ ಆರನೇ ಪುಟದಲ್ಲಿ ಒಂದು ಸುದ್ದಿ ಬಂದಿದೆ. ಸುದ್ದಿ ಏನಪ್ಪಾ ಅಂದ್ರೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಶ್ರೀ ಶ್ರೀ ಹನ್ಸ್ ರಾಜ್ ಭಾರಧ್ವಾಜ್ ಅವ್ರು ನಮ್ಮ ಜನುಕ್ಕೆ ದೇಶದ ಬಗ್ಗೆ ಗೌರವಾ ತೋರಿಸೋದು ಹೆಂಗೆ ಅಂತಾ ಸಕ್ಕತ್ತಾಗಿ ಉಪದೇಶ ಕೊಟ್ಟಿದಾರೆ ಗುರೂ!

ದೇಶದ ಬಗ್ಗೆ ಗೌರವ!

ಕನ್ನಡನಾಡಿನ ಐಕ್ಳುಗಳಿಗೆ ‘ನಿಮಗೆಲ್ಲಾ ದೇಶದ ಬಗ್ಗೆ ಗೌರವಾ ಇರೋದೇ ಆದ್ರೆ ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಹಾಗೆ ಗೌರವ ಇಲ್ಲದೇ ಇರೋದ್ರಿಂದಾನೆ ಯುವುಕ್ರು ಪರದೇಶಿ ಸಂಸ್ಕೃತಿಗೆ ಮಾರು ಹೋಗ್ತಿರೋದು’ ಅನ್ನೋ ದನೀಲಿ ಭಾಷಣ ಮಾಡಿದ್ದಾರೆ. ಇಲ್ಲಿ ತಂಕಾ ಇವರು ಹೇಳಿದ್ದನ್ನು ಒಪ್ಪೋದು ಬಿಡೋದು ಅವರವ್ರಿಗೆ ಬಿಟ್ಟಿದ್ದು... ಬಿಡಿ. ಆದ್ರೆ ಇನ್ನೂ ಮುಂದುವರೆದ ಘನ ರಾಜ್ಯಪಾಲರು ಕನ್ನಡಿಗರು ಯಾಕೆ ಹಿಂದೀ ಮತ್ತು ಉರ್ದೂನ ಕಲೀಬಾರ್ದು ಅಂತಾ ಕೇಳಿದಾರೆ. ಮತ್ತೂ ಮುಂದುವರೆದು ಸಂಸ್ಕೃತ ಭಾರತದ ಎಲ್ಲಾ ಭಾಷೆಗಳಿಗೆ ತಾಯಿ ಭಾಷೆ ಅನ್ನೋ ಶತಶತಮಾನಗಳ ಸುಳ್ಳುನ್ನ ಪುಂಗಿದಾರೆ.

ಹಿಂದೀ ಒಪ್ಪಿಸಲು ಮಾಡೋ ತಂತ್ರ!

ಸೂಕ್ಷ್ಮವಾಗಿ ಗಮನಿಸಿ ನೋಡಿ. ಇವರ ಮಾತಿನಲ್ಲಿ ದೇಶದ ಬಗ್ಗೆ ಗೌರವಾ ಇರೋದು ಅಂದ್ರೆ ಬೇರೆ ಭಾಷೆಗಳ ಬಗ್ಗೆ ಗೌರವಾ ಇರೋದು ಅನ್ನೋ ಸಾಧುತನದ ಒಳ್ಳೇ ಮಾತಿದೆ. ಇದರ ಬೆನ್ನಹಿಂದೆ ಆಡಿರೋ ಮಾತಲ್ಲಿ ‘ಜನರೆಲ್ಲಾ ಹಿಂದೀ ಕಲೀಬೇಕು’ ಅನ್ನೋ ಸಲಹೆ ಮೂಲಕ ಹಿಂದೀನಾ ಒಪ್ಪಿಸೋ ಕುತಂತ್ರ ಇದ್ದಂಗಿದೆ ಅಂತಾ ಅನುಮಾನ ಬರಲ್ವಾ? ಇವರು ಯಾಕೆ ಬೆಂಗಳೂರಿಗೆ ವಲಸೆ ಬಂದಿರೋ ಭಾರತೀಯರೆಲ್ಲಾ ಕನ್ನಡ ಕಲೀಬೇಕು, ಕನ್ನಡದಲ್ಲಿರೋ ಅದ್ಭುತ ಸಾಹಿತ್ಯಾನಾ ಓದಿಕೊಳ್ಬೇಕು, ಚಿರಂಜೀವಿ ಸಿಂಗ್ ಅವರಂತೆ ವಲಸಿಗರೆಲ್ಲಾ ಕನ್ನಡ ಕಲೀಬೇಕು... ಅನ್ನಲಿಲ್ಲಾ ಅನ್ನುಸ್ತಿಲ್ವಾ? ನಿಜವಾಗ್ಲೂ ಹೋದಲ್ಲಿ ಬಂದಲ್ಲೆಲ್ಲಾ ದೇಶಪ್ರೇಮದ ಸೋಗಲ್ಲಿ ಹಿಂದೀ ಹೇರಿಕೆ ಮಾಡೋದು ಯಾವ ದೇಶದ್ರೋಹದ ಕೆಲಸಕ್ಕಿಂತಲೂ ಕಮ್ಮಿಯಿಲ್ಲಾ ಅನ್ನೋದೇ ಸತ್ಯಾ ಅಲ್ವಾ ಗುರೂ? ಈ ಹಿಂದೆ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ಅವ್ರೂ ಕೂಡಾ ಹಿಂದೀ ಪ್ರಚಾರದ ಪವಿತ್ರ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದನ್ನು ಜನಾ ಇನ್ನೂ ಮರೆತಿಲ್ಲ. ಇದುನ್ನೆಲ್ಲಾ ನೋಡುದ್ರೆ ಕೇಂದ್ರದೋರು ಕರ್ನಾಟಕಕ್ಕೆ ರಾಜ್ಯಪಾಲರನ್ನು ನೇಮಿಸೋ ಬದಲು ಹಿಂದೀ ಪ್ರಚಾರಕರನ್ನು ನೇಮುಸ್ತಾ ಇದಾರಾ... ಅಂತಾ ಅನ್ನುಸ್ತಿಲ್ವಾ ಗುರೂ?!

ನಾಳಿನ ಅಂತರ್ಜಾಲಗಳಲ್ಲಿ ಕನ್ನಡವೇ ಮುಂದಾಗಲಿದೆ...ಗೊತ್ತಾ?

Juxt Consult ಅನ್ನೋ ಮಾರುಕಟ್ಟೆ ಸಮೀಕ್ಷೆ ಸಂಸ್ಥೆ ಬಿಡುಗಡೆ ಮಾಡಿರೋ ಒಂದು ಅಂಕಿಅಂಶದ ಪ್ರಕಾರ ಭಾರತದಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ 7 ಕೋಟಿ ಇದ್ದು, ಅದರಲ್ಲಿ ಇಂಗ್ಲಿಷಲ್ಲಿ ಅಂತರ್ಜಾಲವನ್ನು ಬಳಸೋರ ಸಂಖ್ಯೆ 13% ಅಂದ್ರೆ ಸುಮಾರು 91 ಲಕ್ಷದಷ್ಟು ಮಾತ್ರವಿದ್ದು ಬಾಕಿ ಆರು ಕೋಟಿ ಒಂಬತ್ತು ಲಕ್ಷ ಜನರು ತಮ್ಮ ತಮ್ಮ ಭಾಷೆಗಳಲ್ಲೇ ಬಳಸ್ತಾರಂತೆ. ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳಿಗೆ ಇರೋ ಈ ಪಾಟಿ ಬೇಡಿಕೆ ನೋಡಿ ಐ.ಬಿ.ಎಮ್, ಗೂಗಲ್, ಎಚ್.ಪಿ, ಮೈಕ್ರೋಸಾಫ್ಟ್ ನಂತಹ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಭಾಷೆಯಲ್ಲಿ ತಂತ್ರಾಂಶ ಅಭಿವೃದ್ಧಿಯತ್ತ ಅದ್ಯತೆ ಕೊಡ್ತಾ ಇದೆ ಅನ್ನೋ ಸುದ್ದಿ ಇತ್ತೀಚೆಗೆ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಬಂದಿತ್ತು ಗುರು.

ಮುಂದಿನ ದಿನಗಳನ್ನು ಬದಲಾಯಿಸಲಿರುವ ಅಂತರ್ಜಾಲ !
ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ 65 ಕೋಟಿ ಇದೆ. ಅದರಲ್ಲಿ 35 ಕೋಟಿ ಜನ ಅಂತರ್ಜಾಲ ಬಳಸಲು ಶಕ್ತರಿರುವ ಮಧ್ಯಮ ವರ್ಗದವರು. ಈ 35 ಕೋಟಿಯಲ್ಲಿ ಈಗ ಅಂತರ್ಜಾಲ ಬಳಸ್ತಾ ಇರೋರು ಬರೀ 7 ಕೋಟಿ ಜನ. ಅಂದ್ರೆ ಬರೀ 20% ಜನ. ಬಾಕಿ 80% ಜನರು ಅಂತರ್ಜಾಲದ ಗಾಡಿ ಏರಿದಾಗ, ಭಾರತೀಯ ಭಾಷೆಗಳಿಗೆ ಯಾವ ಮಟ್ಟದಲ್ಲಿ ಬೇಡಿಕೆ ಬರಬಹುದು ಅನ್ನೋದನ್ನ ನೀವೇ ಊಹೆ ಮಾಡಿ ಗುರು. ಇನ್ನೂ ಕೆಲವೇ ವರ್ಷಗಳಲ್ಲಿ ಆಡಳಿತ, ಕಲಿಕೆ, ಮನರಂಜನೆ ಸೇರಿದಂತೆ ದಿನ ನಿತ್ಯದ ಎಲ್ಲ ವಹಿವಾಟಿನಲ್ಲೂ ಅಂತರ್ಜಾಲ ಅವಿಭಾಜ್ಯ ಅಂಗವಾಗೋ ದಿನಗಳು ಬರ್ತಾ ಇವೆ. ಬಹುರಾಷ್ಟ್ರೀಯ ಕಂಪನಿಗಳು ಇದನ್ನು ಗಮನಿಸಿಯೇ ಇತ್ತ ಗಮನಹರಿಸುತ್ತಿರುವುದು. ಈ ಪ್ರಯತ್ನದಲ್ಲಿ ಕನ್ನಡ ಯಾವ ಕಾರಣಕ್ಕೂ ಹಿಂದೆ ಬೀಳಬಾರದು. ಅಂತರ್ಜಾಲದ ಬಳಕೆಯ ಎಲ್ಲ ಹಂತದಲ್ಲೂ ಕನ್ನಡಕ್ಕೆ ಅರ್ಹವಾಗಿ ಸಿಗಬೇಕಾದ ಸ್ಥಾನ ಸಿಗುವಂತೆ ಮಾಡುವುದು ನಮ್ಮೆಲ್ಲರ ಕೈಯಲ್ಲಿ ಇದೆ. ಅದು ಗೂಗಲ್ ನ್ಯೂಸ್ ಇರಲಿ, ಫೇಸ್-ಬುಕ್ ಇರಲಿ, ಇಲ್ಲವೇ ಯಾವುದೇ ಬ್ಯಾಂಕಿಂಗ್, ವಿಮೆ, ಸರ್ಕಾರಿ, ಖಾಸಗಿ ತಾಣಗಳಿರಲಿ, ಎಲ್ಲ ಕಡೆ ಕನ್ನಡದಲ್ಲಿ ಅಂತರ್ಜಾಲ ಸೇವೆ ನೀಡುವಂತೆಯೂ, ಮತ್ತು ಕನ್ನಡದಲ್ಲಿ ನೀಡುವ ಸೇವೆಯನ್ನು ಬಳಸುವುದರ ಮೂಲಕ ಕನ್ನಡಕ್ಕೆ ಬೇಡಿಕೆ ಕೊಡಿಸುವ ಕೆಲಸವನ್ನು ಅಂತರ್ಜಾಲದಲ್ಲಿರುವ ನಾವೇ ಮಾಡಬೇಕು. ಏನಂತೀರಾ ಗುರು?

ಆರಂಕುಸವಿಟ್ಟೊಡಂ ನೆನೆಯಲೆಮ್ಮ ಮನಂ ಬನವಾಸಿ ದೇಶಮಂ !

ಕನ್ನಡಿಗರ ಕುಲದೈವ ಮಧುಕೇಶ್ವರನ ಮೇಲಾಣೆ ಅನ್ನೋ ಒಂದು ಸಂಭಾಷಣೆ ಮಯೂರ ಚಿತ್ರದಲ್ಲಿ ಬರುತ್ತೆ. ಯಾವುದಿದು ಮಧುಕೇಶ್ವರನ ಗುಡಿ ಅಂತಾ ನೋಡುದ್ರೆ ನಮಗೆ ಕಾಣೋದು ಅದೇ ಕದಂಬರ ರಾಜಧಾನಿ ಬನವಾಸಿ. ಈ ಮಧುಕೇಶ್ವರನೇ ಆ ಕದಂಬರ ಕುಲದೈವ. ಕನ್ನಡಿಗರ ಸ್ವಾಭಿಮಾನದ ಮೊದಲ ರಾಜ್ಯದ ರಾಜಧಾನಿಯೇ ಬನವಾಸಿ. ಕನ್ನಡದ ಆದಿಕವಿ ಪಂಪ. ಅವನ ಪ್ರಖ್ಯಾತ ಬರಹ "ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ". ಅಂಥದ್ದೇನಿದೆ ಈ ಬನವಾಸಿಯಲ್ಲಿ? ಕ್ರಿ.ಶ. 3ನೇ ಶತಮಾನದಿಂದ 9ನೇ ಶತಮಾನದವರೆಗೂ ರಾಜಕೀಯ ಕೇಂದ್ರಗಳಲ್ಲೊಂದಾಗಿದ್ದ ಈ ಬನವಾಸಿ ಎಲ್ಲಿದೆ? ಈಗ ಇದು ಹೇಗಿದೆ? ಅಲ್ಲಿ ಏನಿದೆ? ಹೇಗೆ ಹೋಗೋದು?

ಬನವಾಸಿಯೆಂಬ ಹಸಿರ ಗುಡಿ...
ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ 22 ಕಿಮೀ ದೂರದಲ್ಲಿದೆ ಬನವಾಸಿ. ಇಲ್ಲಿಗೆ ಶಿವಮೊಗ್ಗೆಯ ಸೊರಬದಿಂದಲೂ ಹೋಗಬಹುದಾಗಿದೆ. ಬನವಾಸಿ ಬಹಳ ಪುಟ್ಟದಾದ ಊರು. ಇಲ್ಲಿಗೆ ಹೋಗೋ ರಸ್ತೆಯೂ ಪುಟ್ಟದು. ಏರಿಳಿತಗಳ, ತಿರುವುಗಳ, ಹಳ್ಳಕೊಳ್ಳಗಳ ರಸ್ತೆ ಇದು. ಆದಿಕವಿ ಪಂಪ ಜೈನ ಮತಾವಲಂಬಿ ಎಂಬುದನ್ನು ನೆನಪಿಸುವಂತೆ ಜೈನರ ಕಟ್ಟಡಗಳು, ಜೈನರ ಹೆಸರಿನ ಬೀದಿಗಳು ಅನೇಕವು. ಚಾಲುಕ್ಯರ ದೊರೆ ಅರಿಕೇಸರಿಯ ಕಾಲದಲ್ಲೇ ಇಲ್ಲಿ ಜೈನಮತ ಪ್ರಾಬಲ್ಯ ಹೊಂದಿತ್ತಂತೆ. ಇಂಥಾ ಬನವಾಸಿ ಪ್ರಕೃತಿಯ ರಮ್ಯ ಸೊಬಗಿನ ನಡುವೆ ಹಸಿರನುಟ್ಟು ಕಂಗೊಳಿಸುತ್ತಿದೆ. ಮಲೆನಾಡಿನ ಸೊಗಡಿನ ಈ ಊರಿನಲ್ಲಿ ನೋಡಲು ಇರುವ ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇಲ್ಲಿರುವುದು ಒಂದು ಗುಡಿ. ಮಧುಕೇಶ್ವರನ ಗುಡಿ. ಬಲು ಸುಂದರವಾದ ಕೆತ್ತನೆಯ ಪೀಠವನ್ನು ಈ ಲಿಂಗ ಹೊಂದಿದೆ.

ಗರ್ಭಗುಡಿಯ ಎದುರಿನ ಬಸವಣ್ಣ ಮೋಹಕವಾಗಿದ್ದಾನೆ. ಶಿಥಿಲವಾಗಿರುವ ಗುಡಿಯ ಕಂಭಗಳ ವಿನ್ಯಾಸ ಮನಸೂರೆ ಮಾಡುತ್ತದೆ. ಗರ್ಗುಡಿಯ ಹೊರಾಂಗಣದಲ್ಲಿ ಶಿವಗಣದ ಹತ್ತಾರು ದೇವ ದೇವಿಯರ ಪುಟ್ಟ ಪುಟ್ಟ ಗುಡಿಗಳಿವೆ. ಮಧಕೇಶ್ವರನ ಗುಡಿಯಲ್ಲಿ ನಿತ್ಯಪೂಜೆ ನಡೆಯುತ್ತದೆ. ಗುಡಿಯ ಒಂದು ಭಾಗದಲ್ಲೊಂದು ಸುಂದರ ಕೆತ್ತನೆಯ ಕಲ್ಲಿನ ಮಂಚವಿದೆ.

ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಲಿ!
ಈ ಮಂಚವನ್ನು ಕಡೆದ ಕಾಲ ಕಾಲ ಯಾವುದೋ? ಈ ಗುಡಿಯನ್ನು ಕಟ್ಟಿದ ಕಾಲ ಯಾವುದೋ? ಈ ಜಾಗದ ಐತಿಹಾಸಿಕ ಮಹತ್ವವೇನು? ಇತ್ಯಾದಿ ಮಾಹಿತಿಗಳನ್ನು ಸಂದರ್ಶಕರಿಗೆ ಒದಗಿಸಬೇಕಾದ ಅಗತ್ಯವಿದೆ. ಕನ್ನಡಿಗರ ಸ್ಪೂರ್ತಿಕೇಂದ್ರವನ್ನಾಗಿ ಬನವಾಸಿಯನ್ನು ರೂಪಿಸಬೇಕಾಗಿದೆ. ಈಗೆಲ್ಲಾ ಕದಂಬೋತ್ಸವ ಎನ್ನುವ ಕಾರ್ಯಕ್ರಮ ವರ್ಷಕ್ಕೊಮ್ಮೆ ನಡೆಯುತ್ತಿದೆ. ಆದರೂ ಇಷ್ಟು ಸಾಲದು. ಈ ಜಾಗವನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕಾಗಿದೆ. ಉತ್ತಮ ಹೋಟೆಲ್ ಸೌಲಭ್ಯ, ಒಳ್ಳೇ ರಸ್ತೆಗಳು, ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿ ಸಿಗುವಂತೆ ಮಾಡುವುದು ಮುಂತಾದ ಅನೇಕ ಕೆಲಸಗಳನ್ನು ಪ್ರವಾಸೋದ್ಯಮ ಇಲಾಖೆಯು ಕೂಡಲೇ ಕೈಗೆತ್ತಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಬನವಾಸಿಗೆ ಹೋಗಿಬಂದರೊಮ್ಮೆ ಕನ್ನಡಿಗರ ಮೈ ಮಯೂರನ ಪರಾಕ್ರಮ, ಪಂಪನ ಕಾವ್ಯವನ್ನು ನೆನೆದು ಪುಳಕಗೊಳ್ಳುವುದು ಖಚಿತ. ನೀವು ನೋಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಹೋಗಿ ಬನ್ನಿ ಗುರುಗಳೇ.

ಚಲನಚಿತ್ರ ವಿತರಕರ ಸಂಘದ ಆದ್ಯತೆ ಕನ್ನಡ ಚಿತ್ರಗಳಾಗಲಿ!


ಏಪ್ರಿಲ್ 2ನೇ ತಾರೀಖು ಬೆಂಗಳೂರಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘದ ಉದ್ಘಾಟನೆ ಆಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯಾತೀಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದರು ಅಂತ ಏಪ್ರಿಲ್ 3ರ ವಿಜಯ ಕರ್ನಾಟಕದ ಒಂದು ವರದಿ ಹೇಳುತ್ತೆ. ಈ ಕಾರ್ಯಕ್ರಮದಲ್ಲಿ ಒಂದು ವಿಚಿತ್ರವಾದ ವಿಷಯ ಬೇರೇ ಚರ್ಚೆ ಆಯ್ತಂತೆ.

ವಿತರಕ ಸಂಘದ ಆದ್ಯತೆ ಏನು?

ಈ ಸಂಘದ ಜನ ಕನ್ನಡ ಚಿತ್ರಗಳ ವಿತರಣೆಯಲ್ಲಿ ಎದುರಾಗೋ ತೊಡಕುಗಳನ್ನು ಬಗೆಹರಿಸಿಕೊಳ್ಳೋದು ಹೇಗೆ? ಕನ್ನಡ ಸಿನಿಮಾಗಳ ಮಾರುಕಟ್ಟೇನಾ ಭದ್ರ ಮಾಡ್ಕೊಳ್ಳೋದು ಹೇಗೆ? ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳೋದು ಹೇಗೆ? ತಮ್ಮ ವಿತರಣಾ ಜಾಲಾನಾ ಹೆಚ್ಚಿಸಿಕೊಳ್ಳೋದು ಹೇಗೆ? ಸಿನಿಮಾದ ಯಶಸ್ಸಿಗಾಗಿ ಪ್ರಚಾರದ ಯಾವ ಹೊಸತಂತ್ರಗಳನ್ನು ಬಳಸಿಕೊಳ್ಳಬೇಕು? ಲಾಭ ಹಂಚಿಕೆ ಹೇಗೆ? ಕನ್ನಡಚಿತ್ರಗಳು ಪರಭಾಷಾ ಚಿತ್ರಗಳ ಪೈಪೋಟಿಯನ್ನು ಎದುರಿಸೋ ಹಾಗೇ ಮಾಡೋದು ಹೇಗೆ? ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡುದ್ರಾ ಅಂದ್ರೆ ನಿರಾಸೆ ಆಗುತ್ತೆ ಗುರೂ! ಅಲ್ಲಿರೋರಲ್ಲಿ ಒಗ್ಗಟ್ಟಾಗಿ ಗೆಲುವಿನತ್ತಾ ಸಾಗೋ ಮನಸ್ಥಿತಿ ಇತ್ತಾ ಅನ್ನೋದೆ ದೊಡ್ಡ ಪ್ರಶ್ನೆ. ಯಾಕಂದ್ರೆ ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಜೊತೇಲ್ ಸೇರಸ್ಕೊಂಡು ಮಾತಾಡಿದ್ ಏನು ಗೊತ್ತಾ?

ಪರಭಾಷಾ ಚಿತ್ರದ ವಿತರಣೆ ಹಕ್ಕಿಗಾಗಿ ಭಿಕ್ಷೆ!

ಕರ್ನಾಟಕದಲ್ಲಿ ಇಲ್ಲೀ ತನಕ ತೆಲುಗು ಚಿತ್ರಗಳ ಪ್ರದರ್ಶನದ ಹಕ್ಕು ಕರ್ನಾಟಕದ ಯಾವುದೋ ಒಬ್ಬ ವಿತರಕನಿಗೇ ಸಿಕ್ತಾ ಇತ್ತು. ಈಗೀಗ ಬಳ್ಳಾರಿ-ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಸಿನೆಮಾಗಳ ವಿತರಣೆ ಹಕ್ಕನ್ನು ಆಂಧ್ರದವರೇ ಇಟ್ಕೊಂತಾ ಇದಾರೆ. ಇದುನ್ನ ಹಿಂದಿನ ಹಾಗೇ ಕರ್ನಾಟಕದವರಿಗೇ ಕೊಡಿಸಬೇಕು, ಅದಕ್ಕೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತಂತೆ. ವಿತರಕರ ಸಂಘದೋರಿಗೆ ದಕ್ಷಿಣ ಭಾರತ ವಾಣಿಜ್ಯ ಮಂಡಳಿಯ ಕಲ್ಯಾಣ್ ಅನ್ನೋರು, ತೆಲುಗು ಸಿನಿಮಾ ವಿತರಣಾ ಹಕ್ಕುನ್ನ ಕನ್ನಡದೋರಿಗೇ ಕೊಡ್ಸಕ್ ಪ್ರಯತ್ನಾ ಮಾಡ್ತೀವಿ ಅಂತಾ ಭರವಸೆ ಬೇರೇ ಕೊಟ್ರಂತೆ. ಈ ಸುದ್ದಿ ಕೇಳಿ ನಗಬೇಕೋ ಅಳಬೇಕೋ ಗೊತ್ತಾಗದೆ ಕನ್ನಡ ಚಲನಚಿತ್ರರಂಗದ ಹಿತೈಶಿಗಳು ತಬ್ಬಿಬ್ಬಾಗಿದಾರಂತೆ! ಇದ್ನ ನೋಡುದ್ರೆ ಕರ್ನಾಟಕದ ಚಲನಚಿತ್ರ ವಿತರಕರು ತೀರಾ ದಯನೀಯ ಸ್ಥಿತೀಲಿ ಇದಾರೆ ಅಂತ ಜನುಕ್ ಅನ್ಸುದ್ರೆ ಆಶ್ಚರ್ಯ ಏನಿಲ್ಲಾ ಗುರೂ!

ಎರೆಹುಳುವಿನಾಸೆ ಬಿಡಬೇಕು!

ಕರ್ನಾಟಕದ ಮೂಲ ಮಾರುಕಟ್ಟೆ ಕನ್ನಡ ಸಿನಿಮಾಗಳದ್ದು. ಈ ಮಾರುಕಟ್ಟೇನ ಕನ್ನಡ ಸಿನಿಮಾ ಸರಿಯಾಗಿ ಬಳಸಿಕೊಳ್ಳದಿದ್ರೆ ಮಣ್ಣುಮುಕ್ಕಬೇಕಾಗುತ್ತೆ. ಕರ್ನಾಟಕವು ತಮಿಳು, ತೆಲುಗು, ಹಿಂದಿ ಮೊದಲಾದ ಚಿತ್ರೋದ್ಯಮಗಳಿಗೆ ಮೂಲಮಾರುಕಟ್ಟೆ ಅಲ್ಲ. ಕರ್ನಾಟಕವೇನಿದ್ರೂ ಬೋನಸ್ ಮಾರುಕಟ್ಟೆ. ಹೀಗಾಗಿ ಇಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಕ್ಕೆ ಆ ಚಿತ್ರಗಳೋರು ನಾನಾತಂತ್ರಗಳನ್ನು ಬಳಸೋದು ಸಹಜ. ಒಂದು ಹತ್ತಿಪ್ಪತ್ತು ವರ್ಷ ಹೀಗೆ ಮಾಡಿದ್ರೆ ಸಾಕು, ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗುತ್ತೆ ಅನ್ನೋದು ಈ ತಂತ್ರದ ಭಾಗ. ಹೀಗೆ ಆಗೋದ್ರಿಂದ ಕನ್ನಡ ಚಿತ್ರಗಳ ಮೇಲೆ ದೊಡ್ಡ ಹೊಡೆತ ಬೀಳುತ್ತೆ ಅಂತಾ ವಿತರಕರ ಸಂಘದೋರಿಗೇನು ಗೊತ್ತಿಲ್ವಾ? ಆದ್ರೆ ಇವತ್ತು ಸಿಗ್ತಾ ಇರೋ ಪುಡಿಗಾಸಿನ ಆಸೆಗೆ ನಮ್ಮ ಕರ್ನಾಟಕದ ಚಿತ್ರ ವಿತರಕರು ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೊ ಕೆಲಸ ಮಾಡ್ತಾ ಇದ್ದಾರಾ? ಅನ್ನೋ ಪ್ರಶ್ನೆ ಕಾಡುತ್ತೆ. ಎರೆಹುಳುವಿಗೆ ಆಸೆ ಪಟ್ಟು ಜೀವ ಕಳ್ಕೊಳ್ಳೋ ಪರಿಸ್ಥಿತಿ ಕನ್ನಡ ಚಿತ್ರರಂಗದ್ದಾದೀತು ಅನ್ನೋ ಅರಿವು ವಿತರಕರ ಸಂಘಕ್ಕೆ ಇಲ್ಲದಿದ್ರೇನಂತೆ? ಕಡೇ ಪಕ್ಷ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾದ್ರೂ ಇರಬೇಕಲ್ವಾ ಗುರೂ?
Related Posts with Thumbnails