ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲೇ ನೋಡಿ ಅನ್ನೋದು ಕನ್ನಡಪರಾನಾ?


ಕರ್ನಾಟಕದಲ್ಲಿ ಕನ್ನಡಪರವಾಗಿ ದೊಡ್ಡದನಿಯಲ್ಲಿ ಹೋರಾಟ ಮಾಡುವವರಲ್ಲಿ ಶ್ರೀಯುತ ವಾಟಾಳ್ ನಾಗರಾಜ್ ಅವರದ್ದು ಪ್ರಮುಖವಾದ ಹೆಸರು. ಅರವತ್ತರ ದಶಕದಿಂದಲೇ ಕನ್ನಡಪರವಾಗಿ ಹೋರಾಟ ಮಾಡಿದ್ದಲ್ಲದೇ, ವಿಧಾನಸಭೆಯಲ್ಲೂ ಕನ್ನಡದ ಪರವಾಗಿ ಕೊರಳೆತ್ತಿದವರು ಅವರು. ಇವರು ಮೊನ್ನೆ ನೀಡಿರೋ ಡಬ್ಬಿಂಗ್ ವಿರುದ್ಧವಾಗಿ ರಾಜ್ಯಾದ್ಯಂತ ಹೋರಾಡುತ್ತೇವೆ ಅನ್ನೋ ಹೇಳಿಕೆ ಮಾತ್ರಾ ವಿಷಯದ ಪೂರ್ಣ ಅರಿವಿಲ್ಲದೆ, ತಪ್ಪು ಮಾಹಿತಿಯಿಂದ ಪ್ರೇರಿತವಾದಂತಿದೆ.

ಡಬ್ಬಿಂಗ್ ವಿರೋಧಿಗಳಿಗೆ ಈ ಪ್ರಶ್ನೆ!

ಹೀಗೆ ಆವೇಶದಲ್ಲಿ ಹೇಳಿಕೆ ಕೊಡೊ ಮುನ್ನ ಕನ್ನಡಪರವಾದದ್ದು ಯಾವುದು? ಕನ್ನಡಕ್ಕೆ ಮಾರಕವಾದದ್ದು ಯಾವುದು? ಅನ್ನೋದ್ರು ಬಗ್ಗೆ ತಾವೇ ಆಲೋಚಿಸಬೇಕಿತ್ತು. ಅಥವಾ ಡಬ್ಬಿಂಗ್ ಪರ ಮತ್ತು ವಿರೋಧದ ಬಗ್ಗೆ ಇರೋ ನಿಲುವುಗಳನ್ನು ಅರ್ಥ ಮಾಡ್ಕೊಂಡು ಮಾತಾಡಬೇಕಿತ್ತು. ಇರಲಿ, ಆದರೂ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಟ್ಕೊಂಡ್ರೆ ಒಳ್ಳೇದು...

- ಕನ್ನಡಿಗರಿಗೆ ಕನ್ನಡದಲ್ಲೇ ತಮ್ಮ ಮನರಂಜನೆಯನ್ನು ಪಡೆದುಕೊಳ್ಳೋ ಹಕ್ಕಿಲ್ವಾ? ಈ ಹಕ್ಕನ್ನು ನಿರಾಕರಿಸೋದು ಕನ್ನಡಪರಾನಾ?

- ಕನ್ನಡಿಗರು ಕನ್ನಡನಾಡಲ್ಲೇ ಪರಭಾಷಾ ಚಿತ್ರಗಳನ್ನು ಬೇರೆಭಾಷೇಲೇ ನೋಡಬೇಕಾ? ಇದು ಕನ್ನಡ ಪರಾನಾ?

- ಕರ್ನಾಟಕದ ಟಾಕೀಸುಗಳಲ್ಲಿ ಎಗ್ಗುಸಿಗ್ಗಿಲ್ದೇ ಪರಭಾಷಾ ಚಿತ್ರಗಳು ಓಡಬೇಕಾ? ಇದು ಕನ್ನಡ ಪರಾನಾ?

- ಕನ್ನಡಿಗರೆಲ್ಲಾ ನಿಧಾನವಾಗಿ ಸಿನಿಮಾ ನೋಡಕ್ಕೇ ಬೇರೆ ಬೇರೆ ಭಾಷೆಗಳನ್ನು ಕಲಿತು ಕೊಳ್ಳಬೇಕಾ? ಇದು ಕನ್ನಡ ಪರವಾದ ನಿಲುವಾ?

- ಹೀಗೆ ಕನ್ನಡನಾಡಲ್ಲಿ ಬೇರೆ ಬೇರೆ ಭಾಷೆಗಳ ಚಿತ್ರಗಳೆಲ್ಲಾ ಅವವೇ ಭಾಷೇಲಿ ಓಡ್ತಾ, ಅವುನ್ನೆಲ್ಲಾ ಆಯಾ ನಾಡಿಂದ ಬಂದವರು ನಮ್ಮ ನಾಡಲ್ಲಿ ಅವರ ಭಾಷೇಲೆ ನೋಡಿ ಮನರಂಜನೆ ಪಡ್ಕೋತಾ, ಕನ್ನಡ ಕಲಿಯೋ ಹಂಗಿಲ್ಲದೇ ಇರಬೇಕೇನು? ಇದು ಕನ್ನಡ ಪರವಾದ ನಿಲುವಾ?

- ಇದರಿಂದಾಗಿ ಕರ್ನಾಟಕದಲ್ಲಿ ಕನ್ನಡದ ವಾತಾವರಣ ಇಲ್ಲದಂತಾಗುವುದಿಲ್ಲವೇ?

ಕನ್ನಡಿಗರು ಕನ್ನಡದಲ್ಲಿ ಮನರಂಜನೆ ಪಡ್ಕೋತೀನಿ ಅನ್ನೋದ್ರು ವಿರುದ್ಧವಾಗೇ ದನಿಯೆತ್ತೋದು ಹೇಗೆ ಕನ್ನಡಪರ ಅಂತಾ ವಾಟಾಳರು ಆತ್ಮಾವಲೋಕನ ಮಾಡ್ಕೊಳ್ಳೋದು ಒಳ್ಳೇದು... ಅಲ್ವಾ ಗುರೂ!

ಸಂವಿಧಾನದ ೩೫೬ನೇ ವಿಧಿ!

ಭಾರತೀಯ ಸಂವಿಧಾನದಲ್ಲಿ ೩೫೨ನೇ ವಿಧಿಯಿಂದ ೩೬೦ರವರೆಗಿನ ವಿಧಿಗಳು ತುರ್ತು ಸಂದರ್ಭಗಳನ್ನು ನಿರ್ವಹಿಸುವ ಬಗ್ಗೆ ಮಾತನ್ನಾಡುತ್ತವೆ. ಅದರಲ್ಲೂ ವಿಶೇಷವಾಗಿ ೩೫೬ನೇ ವಿಧಿ ರಾಷ್ಟ್ರಪತಿಗಳಿಗೆ, ಅಂದರೆ ಆ ಮೂಲಕ ಕೇಂದ್ರಸರ್ಕಾರಕ್ಕೆ ರಾಜ್ಯಗಳ ಮೇಲೆ ಪರಮಾಧಿಕಾರ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತದೆ.ರಾಜ್ಯವೊಂದರ ಕಾನೂನು ಸುವ್ಯವಸ್ಥೆ ಕುಸಿದಿದ್ದರೆ, ರಾಜ್ಯವು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಆ ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುತ್ತಾರೆ. ಹಾಗೆ ನೀಡಿದ ವರದಿಯ ಆಧಾರದ ಮೇಲೆ ಅಥವಾ ಸ್ವತಃ ತಮಗೇ ಮನವರಿಕೆಯಾದಲ್ಲಿ ರಾಷ್ಟ್ರಪತಿಗಳು ಯಾವುದೇ ರಾಜ್ಯದ ಚುನಾಯಿತ ಸರ್ಕಾರವನ್ನು ಅಂದರೆ ವಿಧಾನಸಭೆಯನ್ನು ಅಮಾನತ್ತಿನಲ್ಲಿಡುವ, ವಜಾ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.

೩೫೬ ಬಳಕೆಯಾದ ಬಗೆ!

ಇಂತಹ ಅವಕಾಶವನ್ನು ಸಂವಿಧಾನ ನೀಡಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದು ಎನ್ನುವ ಕೂಗು ಬಲು ಹಿಂದಿನಿಂದಲೇ ಇದೆ. ಒಟ್ಟಾರೆಯಾಗಿ ರಾಜ್ಯ ಮತ್ತು ಕೇಂದ್ರಗಳ ನಡುವಿನ ಸಂಬಂಧಗಳ ಬಗ್ಗೆ ಪರಾಮರ್ಶೆ ನಡೆಸುವಾಗ ಈ ಆರ್ಟಿಕಲ್ ೩೫೬ ಅತ್ಯಂತ ಪ್ರಮುಖವಾದ ವಿಷಯಗಳಲ್ಲೊಂದಾಗಿದೆ. ಭಾರತೀಯ ಸಂವಿಧಾನ ಸಂವಿಧಾನ ಜಾರಿಯಾದ ನಂತರ (೧೯೫೦ರಿಂದ ೧೯೮೭ರವರೆಗೆ) ಚುನಾಯಿತ ರಾಜ್ಯ ಸರ್ಕಾರಗಳನ್ನು ೩೫೬ನೇ ವಿಧಿಯನ್ವಯ ವಜಾ ಮಾಡಿದ ಒಟ್ಟು ಪ್ರಕರಣಗಳ ಸಂಖ್ಯೆ ಎಪ್ಪತ್ತೈದು. ೧೯೫೦ ಮತ್ತು ೧೯೬೦ರ ದಶಕದಲ್ಲಿ ಹೆಚ್ಚಿನ ಸಲ ರಾಷ್ಟ್ರಪತಿ ಆಳ್ವಿಕೆ ಜಾರಿಯಾದದ್ದು ಆಡಳಿತ ಪಕ್ಷದ ಒಳಗಿನ ಬಿಕ್ಕಟ್ಟುಗಳು ತೀವ್ರವಾದಾಗಲೇ. ಅಂದರೆ ರಾಜ್ಯವೊಂದರಲ್ಲಿ ಆಡಳಿತ ಪಕ್ಷಕ್ಕೆ ಬಹುಮತವಿದ್ದೂ ಅದರ ಹಾಲಿ ನಾಯಕನ ಬಗ್ಗೆ ವಿರೋಧ ಉಂಟಾಗಿ ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಶಾಸನಸಭೆ ಸಫಲವಾಗದೇ ಇದ್ದಾಗ. ೧೯೭೭ರಲ್ಲಿ ಮೊದಲಬಾರಿ ಜನತಾ ಪಕ್ಷವು ಪ್ರಚಂಡ ಬಹುಮತದಿಂದ ಲೋಕಸಭಾ ಚುನಾವಣೆಯಲ್ಲಿ ಆರಿಸಿಬಂದಾಗ ಕಾಂಗ್ರೆಸ್ಸಿನ ಒಂಬತ್ತು ರಾಜ್ಯಸರ್ಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿತು. ಆಗ ಸಂವಿಧಾನದಲ್ಲಿ “ರಾಷ್ಟ್ರಪತಿಗಳ ನಿರ್ಧಾರವನ್ನು ಯಾವ ನ್ಯಾಯಲಯದಲ್ಲೂ ಪ್ರಶ್ನಿಸುವಂತಿಲ್ಲ” ಎಂದಿದ್ದುದರಿಂದಾಗಿ ಈ ವಜಾ ಪ್ರಕ್ರಿಯೆ ಸಿಂಧುವಾಯಿತು. ಇದೇ ಕೆಲಸವನ್ನು ೧೯೮೦ರಲ್ಲಿ ಕಾಂಗ್ರೆಸ್ ಲೋಕಸಭೆಗೆ ಭಾರಿ ಬಹುಮತದಿಂದ ಆರಿಸಿಬಂದಾಗ ತಾನೂ ಮಾಡಿತು. ಆಗಲೂ ಒಂಬತ್ತು ಕಾಂಗ್ರೆಸ್ಸೇತರ ರಾಜ್ಯಸರ್ಕಾರಗಳನ್ನು ವಜಾ ಮಾದಲಾಯಿತು. ಮುಂದೆ ಸಂವಿಧಾನದ ೪೪ನೇ ತಿದ್ದುಪಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂಬುದನ್ನು ಬದಲಿಸಿದ ನಂತರ ಈ ರಾಜಕೀಯ ಕಾರಣಗಳಿಂದ ೩೫೬ನೇ ವಿಧಿ ಜಾರಿಮಾಡುವ ಪರಿಪಾಠ ನಿಂತಿತು.

ದುರುಪಯೋಗದ ತಡೆಗಾಗಿ ಕೂಗು!

ಹೆಚ್ಚಿನ ಸಲ ೩೫೬ನೇ ವಿಧಿಯು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಎದುರಾಳಿ ಪಕ್ಷವು ಅಧಿಕಾರದಲ್ಲಿರುವ ರಾಜ್ಯಸರ್ಕಾರಗಳನ್ನು ವಜಾ ಮಾಡಲೆಂದೇ ಬಳಕೆಯಾಗಿದೆ ಎನ್ನುವ ಕೂಗು ೧೯೮೩ರಲ್ಲಿ ಎದ್ದಿತ್ತು. ವಿರೋಧಪಕ್ಷಗಳ ಒತ್ತಡಕ್ಕೆ ಮಣಿದು ಆಗ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ರಾಜೀಂದರ್ ಸಿಂಗ್ ಸರ್ಕಾರಿಯಾ ಅವರ ಮುಂದಾಳ್ತನದಲ್ಲಿ ಒಂದು ಸಮಿತಿಯನ್ನು ರಚಿಸಿ ರಾಜ್ಯ-ಕೇಂದ್ರಗಳ ಸಂಬಂಧದ ಬಗ್ಗೆ ಒಂದು ಅಧ್ಯಯನವನ್ನು ನಡಿಸಿ, ಸಂವಿಧಾನದ ಚೌಕಟ್ಟಿನಲ್ಲೇ ಸಾಧ್ಯವಾಗಬಲ್ಲ ಸಲಹೆ ಸೂಚನೆ ನೀಡುವಂತೆ ಸೂಚಿಸಲಾಯ್ತು. ಅಂತೆಯೇ ೧೯೮೮ರಲ್ಲಿ ಸರ್ಕಾರಿಯಾ ಆಯೋಗ ವರದಿಯನ್ನು ಕೊಟ್ಟಿತು. ೧೬೦೦ ಪುಟಗಳ ಆ ವರದಿಯಲ್ಲಿ ೨೪೭ ಶಿಫಾರಸ್ಸ್ಸುಗಳಿವೆ. ಹೆಚ್ಚಿನವವುಗಳು ಜಾರಿಯಾಗಿಲ್ಲಾ ಎನ್ನುವ ಮಾತಿದ್ದರೂ ೩೫೬ನೇ ವಿಧಿಗೆ ಅನ್ವಯಿಸುವಂತೆ ಆಯೋಗ ಏನು ಹೇಳಿದೆ ನೋಡೋಣ.

ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳು!

ಯಾವುದೇ ರಾಜ್ಯದಲ್ಲಿ ೩೫೬ನೇ ವಿಧಿಯನ್ನು ಜಾರಿ ಮಾಡಬೇಕೆಂದರೆ ಅಲ್ಲಿ ತೀವ್ರತೆರನಾದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಅದನ್ನು ಸರಿಪಡಿಸುವ ಬೇರೆಲ್ಲಾ ಪ್ರಯತ್ನಗಳು ವಿಫಲವಾಗಿರಬೇಕು. ಹೀಗೆ ವಜಾ ಮಾಡಲು ರಾಜ್ಯಪಾಲರ ವರದಿಯೊಂದೇ ಆಧಾರವಾಗಬೇಕು. ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ನಿಲುವಳಿ ಗೆದ್ದ ನಂತರವಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬಹುದು. ರಾಜ್ಯಪಾಲರ ವರದಿ ಸ್ಪಟಿಕದಂತೆ ಸ್ಪಷ್ಟವಾದ ವಿವರಣೆ ಹೊಂದಿರಬೇಕು, ಸಂವಿಧಾನ ವಿರೋಧಿಯಾಗಿ ಯಾವುದೇ ರಾಜ್ಯ ಸರ್ಕಾರ ನಡೆದರೆ ಮೊದಲಿಗೆ ಅದಕ್ಕೆ ಸೂಕ್ತ ಎಚ್ಚರಿಕೆ ಕೊಟ್ಟು, ನಂತರ ಅನಿವಾರ್ಯ ಪರಿಸ್ಥಿತಿ ಇದ್ದಲ್ಲಿ ಕೊನೆಯ ಅಸ್ತ್ರವಾಗಿ ಮಾತ್ರಾ ೩೫೬ ಜಾರಿ ಮಾಡಬಹುದು. ಹಾಗೆ ಜಾರಿ ಮಾಡುವ ಮುನ್ನ ಎಲ್ಲಾ ಮಾಧ್ಯಮಗಳಲ್ಲಿ ಅಂತಹ ಸನ್ನಿವೇಶಕ್ಕೆ ಕಾರಣವೇನು ಎನ್ನುವುದನ್ನು ಪ್ರಕಟಿಸಿ, ಜನತೆಗೆ ಮನವರಿಕೆ ಮಾಡಿಕೊಡಬೇಕು.

6.8.01— Article 356 should be used very sparingly, in extreme cases, as a measure of last resort, when all available alternatives fail to prevent or rectify a break-down of constitutional machinery in the State. All attempts should be made to resolve the crisis at the State level before taking recourse to the provisions of Article 356. The availability and choice of these alternatives will depend on the nature of the constitutional crisis, its causes and exigencies of the situation. These alternatives may be dispensed with only in cases of extreme urgency where failure on the part of the Union to take immediate action Under
Article 356 will lead to disastrous consequences. (Paragraph 6.7.04)

6.8.02 A warning should be issued to the errant State, in specific terms, that it is not carrying on the government of the State in accordance with the Constitution. Before taking action under Article 356, any explanation received from the State should be taken into account. However, this may not be possible in a situation when not taking immediate action would lead to disastrous consequences. (Paragraph 6.7.08)

6.8.03 When an 'external aggression' or 'internal disturbance' paralyses the State admin istration creating a situation drifting towards a potential breakdown of the Constitutional machinery of the State, all alternative courses available to the Union for discharging its paramount responsibility under Article 355 should be exhausted to contain the situation. (Paragraph 6.3.17)

6.8.04 (a) In a situation of political breakdown, the Governor should explore all possibilities of having a government enjoying majority support in the Assembly. If it is not possible for such a government to be installed and if fresh elections can be held without avoidable delay, he should ask the outgoing Ministry, if there is one to continue as a caretaker government, provided the Ministry was defeated solely on a major policy issue, unconnected with any allegations of mal admin istration or corruption and is agreeable to continue. The Governor should then dissolve the Legislative Assembly, leaving the resolution of the constitutional crisis to the electorate. During the interim period, the caretaker government should be allowed to function. As a matter of convention, the caretaker government should merely carry on the day-to-day government and desist from taking any major policy decision. ( Para graph 6.4.08)
(b) If the important ingredients described above are absent, it would not be proper for the Governor to dissolve the Assembly and install a caretaker government. The Governor should recommend proclamation of President's rule without dissolving the Assembly. (Paragraph 6.4.09)

6.8.05 Every Proclamation should be placed before each House of Parliament at the earliest, in any case before the expiry of the two month period contemplated in clause (3) of Article 356. (Paragraph 6.7.13)

6.8.06 The State Legislative Assembly should not be dissolved either by the Governor or the President before the Proclamation issued under Article 356(1) has been laid before Parliament and it has had an opportunity to consider it. Article 356 should be suitably amended to ensure this. (Paragraph 6.6.20)

6.8.07 Safeguards corresponding, in principle, to clauses (7) and (8) of Article 352 should be incorporated in Article 356 to enable Parliament to review continuance in force of a Proclamation. (Paragraph 6.6.23)

6.8.08 To make the remedy of judicial review on the ground of mala fides a little more meaningful, it should be provided, through an appropriate amendment, that notwithstanding anything in clause (2) of Article 74 of the Constitution, the material facts and grounds on which Article 356(1) is invoked should be made an integral part of the Proclamation issued under that Article. This will also make the control of Parliament over the exercise of this power by the Union Executive, more effective. (Paragraph 6.6.25)

6.8.09 Normally, the President is moved to action under Article 356 on the report of the Governor. The report of the Governor is placed before each House of Parliament. Such a report should be a “speaking document” containing a precise and clear statement of all material facts and grounds on the basis of which the President may satisfy himself as to the existence or otherwise of the situation contemplated in Article 356. (Paragraph 6.6.26)

6.8.10 The Governor's report, on the basis of which a Proclamation under Article 356(1) is issued, should be given wide publicity in all the media and in full. (Paragraph 6.6.28)

6.8.11 Normally, President's Rule in a State should be proclaimed on the basis of the Governor's report under Article 356(1). (Paragraph 6.6.29)

6.8.12 In clause (5) of Article 356, the word and occurring between sub-clauses (a) and (b) should be substituted by 'or'. (Paragraph 6.7.11)
ಸರ್ಕಾರಿಯಾ ಆಯೋಗದ ವರದಿಯಲ್ಲಿ ಇವಿಷ್ಟು ಮಾತ್ರಾನೇ ಹೇಳಿಲ್ಲ. ಇದುವರೆಗೂ (೧೯೮೭) ಯಾವ ಯಾವ ಸಂದರ್ಭಗಳಲ್ಲಿ ಆರ್ಟಿಕಲ್ ೩೫೬ ಜಾರಿಯಾಗಿದೆ. ಇದರ ಬಗ್ಗೆ ಏನೇನೆಲ್ಲಾ ಸಲಹೆಗಳನ್ನು ರಾಜ್ಯ ಸರ್ಕಾರಗಳು ನೀಡಿವೆ... ಹೀಗೆ ಪ್ರತಿಯೊಂದನ್ನೂ ವಿವರವಾಗಿ ಚರ್ಚಿಸಿದ್ದಾರೆ. ಇದರ ಜೊತೆಯಲ್ಲೇ ಸಂವಿಧಾನದ ಇತರೆ ಅಂಶಗಳ ಬಗ್ಗೇನೂ ಶಿಫಾರಸ್ಸುಗಳನ್ನು ಮಾಡಿದ್ದಾರೆ. ಅವುಗಳನ್ನು ಜಾರಿಗೆ ತರಲು ಕೇಂದ್ರ ಮುಂದಾದರೆ ಭಾರತವು ಒಕ್ಕೂಟ ರಾಷ್ಟ್ರವಾಗುವತ್ತ ಒಂದು ಹೆಜ್ಜೆಯಿಟ್ಟಂತಾಗುತ್ತದೆ.

ಕನ್ನಡದಲ್ಲಿ ದೇವರಪೂಜೆ: ಇಗೋ ಇಲ್ಲೊಂದು ಒಳ್ಳೆಯ ಯತ್ನ!

ಭಾರತವು ಜಗತ್ತಿಗೆ ಅಧ್ಯಾತ್ಮದ ಬೆಳಕನ್ನು ನೀಡಿದ ಹಿರಿಮೆ ಹೊಂದಿದೆ. ವೇದ ಪರಂಪರೆಯಲ್ಲಿ ಮೂಡಿಬಂದಿರುವ ಉಪನಿಶತ್ತುಗಳು, ಭಗವದ್ಗೀತೆಯಂತಹ ಮಹಾ ಕೃತಿಗಳೂ ಸೇರಿದಂತೆ ಭಾರತೀಯ ಅಧ್ಯಾತ್ಮವೆಲ್ಲಾ ಹೆಚ್ಚಿನದಾಗಿ ಸಂಸ್ಕೃತದಲ್ಲಿವೆ. ಹಾಗಾಗಿ ನಮ್ಮಲ್ಲಿ ಸಂಸ್ಕೃತ ಮಂತ್ರಗಳನ್ನು ಉಚ್ಚರಿಸಿ ದೇವರನ್ನು ಪೂಜಿಸುವ ಪದ್ದತಿಯಿದೆ. ಮಂತ್ರ, ಕೈಕರಣೆಗಳೇನೋ ಕಲಿತು ಪೂಜಿಸುವವರು ಬಹಳಷ್ಟು ಮಂದಿಯಿದ್ದರೂ ಆ ಮಂತ್ರಗಳ ಅರ್ಥ ತಿಳಿಸಿಕೊಡುವ ಪೂಜಾ ವಿಧಾನದ ಕಲಿಕೆ ಕಡಿಮೆ ಎನ್ನುವುದು ಕೆಲವರ ಅನಿಸಿಕೆ.

ವೇದ ಶಾಸ್ತ್ರ ಪುರಾಣಗಳನ್ನು ಸಾಮಾನ್ಯರಿಗೆ ಅರ್ಥ ಮಾಡಿಸುವಲ್ಲಿ ಕರ್ನಾಟಕದ ಹರಿದಾಸರುಗಳ ಪರಂಪರೆ ಮಹತ್ವದ ಪಾತ್ರ ವಹಿಸಿವೆ. ಅಂತೆಯೇ ವಚನಗಳೂ ಕೂಡಾ. ಹರಿದಾಸರುಗಳಲ್ಲಿ ಶ್ರೇಷ್ಠಾತಿಶ್ರೇಷ್ಠರೆನ್ನಿಸಿದ ಕನಕದಾಸ, ಪುರಂದರದಾಸ, ಜಗನ್ನಾಥದಾಸ, ವಿಜಯದಾಸರೇ ಮೊದಲಾದವರು ಕೀರ್ತನೆಗಳ ಮೂಲಕವೇ ಸರಳವಾಗಿ ಕನ್ನಡದಲ್ಲಿಯೇ ಭಗವಂತನ ಆರಾಧನೆ ಮಾಡುವ ಬಗೆ ತಿಳಿಸಿದರು.

ಇಂಥದೇ ಹರಿದಾಸ ಪರಂಪರೆಯ ಒಂದು ಕೊಂಡಿಯಾಗಿ ಶ್ರೀ ಖಗವರಧ್ವಜ ವಿಠಲದಾಸರು ಇಂದು ನಮ್ಮ ನಡುವೆಯಿದ್ದಾರೆ. ಇವರು ಅರ್ಥವಾಗದೆ ಮಾಡುವ ಪೂಜೆ ವ್ಯರ್ಥವೇ ಸರಿಯೆಂದು ದೇವರ ಪೂಜೆಯನ್ನು ಕನ್ನಡದಲ್ಲಿ ಧ್ವನಿತಟ್ಟೆಯ ರೂಪದಲ್ಲಿ ಹೊರತಂದಿದ್ದಾರೆ. ಈ ಸಿ.ಡಿಯಲ್ಲಿ ಪೂಜೆಯ ಮಂತ್ರಗಳಿಗೆ ಸರಳವಾದ ಅರ್ಥವನ್ನು ಕೊಟ್ಟಿದ್ದಾರೆ ಮತ್ತು ಕನ್ನಡದಲ್ಲೇ ಕೆಲವೆಡೆ ಪದ್ಯಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ದೇವರ ಪೂಜೆ ಸಾಧ್ಯ ಎಂಬುದನ್ನುಮನವರಿಕೆ ಮಾಡಿಕೊಡುವಲ್ಲಿ ಇದೊಂದು ಒಳ್ಳೆಯ ಯತ್ನವಾಗಿದೆ ಗುರೂ!

೬. ಭಾಷಾನೀತಿ: ಬದಲಾಗದೆ ಉಳಿಗಾಲವಿಲ್ಲ!

ಭಾರತದ ಭಾಷಾನೀತಿಯನ್ನು ಜಾರಿ ಮಾಡಲೊಂದು ಇಲಾಖೆ, ಅದು ನೇಮಿಸಿದ ಸಮಿತಿ, ಅದರ ವರದಿ ಮತ್ತು ಶಿಫಾರಸ್ಸುಗಳನ್ನು ನೋಡಿದಾಗ “ಅನೇಕತೆಯಲ್ಲಿ ಏಕತೆ” ಎಂಬುದು ಬರೀ ಬಾಯಲ್ಲಿ ಆಡುವ ತೋರಿಕೆಯ ಮಾತುಗಳು ಅನ್ನಿಸುವುದು ಸಹಜ. ಒಂದು ನುಡಿಯ ಬಳಕೆಯ ವ್ಯಾಪ್ತಿಯನ್ನು ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿಸುತ್ತೇವೆ ಎನ್ನುವ ಮಹತ್ವಾಕಾಂಕ್ಷೆಯು ಉಳಿದ ನುಡಿಗಳ ಅಸ್ತಿತ್ವಕ್ಕೇ ಕೊಡಲಿ ಪೆಟ್ಟಾಗುವ ಪರಿಯನ್ನು ನಮ್ಮ ನಾಡಲ್ಲಿ ಕಾಣಬಹುದಾಗಿದೆ. ಸಂಸತ್ ಸಮಿತಿಯು ನೀಡಿದ ವರದಿಯ ಎಂಟನೇ ಭಾಗದಲ್ಲಿ ಒಟ್ಟು ೭೫ ಶಿಫಾರಸ್ಸುಗಳಿವೆ. ಅವುಗಳಲ್ಲಿ ರಾಷ್ಟ್ರಪತಿಗಳು ಒಪ್ಪಿ ಆದೇಶ ಹೊರಡಿಸಿ ಹಾಗೆ ಒಪ್ಪಿರುವುದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿರುವುದು ಸುಮಾರು ೬೫ ಶಿಫಾರಸ್ಸುಗಳನ್ನು. ಉಳಿದ ಹತ್ತನ್ನು ತಿರಸ್ಕರಿಸಲಾಗಿದೆ. ಆ ಹತ್ತು ಶಿಫಾರಸ್ಸುಗಳು ಇಂತಿವೆ.


7. A minimum percentage of entries in Hindi in the Registers may be fixed for the offices located in Region ‘C’ and the provision of making entries in Hindi “as far as possible” in the registers may be deleted.

19. Some special schemes may be introduced to encourage publication of Hindi news papers/Hindi magazines and for those Hindi Journalists associated with them in the non-Hindi speaking areas especially in states like Tamilnadu, Kerala and Karnataka.

46. In the competitive exams conducted for recruitment in the Central Govt. a compulsory question paper of Hindi of the level of Matriculation or equivalent may be prescribed. A candidate not passing this paper may be disqualified.

47. In the Central Secretariat Official Language service, status-quo may be maintained in respect of the posts of Director (OL) in all the big Ministries/Departments and simultaneously the creation of higher posts of Joint Secretary (OL) may also be considered.

49. Special allowance as an incentive may be given for posting of Hindi personnel in Region ‘C’ and at the same time the posting should be for a limited period only so that candidates from Region ‘A’ accept postings in Region ‘C’ without hesitation.

51. In all the Kendriya Vidyalaya/Navodaya Vidyalaya alongwith the Government Schools controlled by the State Government situated in Region ‘A’ & ‘B’, study of all subjects upto the level of 10th Standard, should immediately be started in Hindi medium. Regional language and English can be taught as a separate subject. After a stipulated interval the situation may be reviewed and this may be extended to Region ‘C’.

52. Matric level knowledge of Hindi may be made compulsory in the recruitment of Lecturers in Universities/Colleges, Research & Professional Educational Institutes, so that after assuming duties, they do not have any difficulty in teaching their subject in Hindi medium.

54. In the national education programmes like Sarv Shiksha Abhiyan provision of study should be made only through Hindi medium.

69. Advertisement in Hindi can be given in English newpapers and similarly advertisement in English can be given in Hindi Newspapers. Therefore, all the offices should give advertisement in bi-lingual form to Hindi/English newspapers.

75. Details of Hindi knowledge and Hindi work done by the employees should also be reflected in their service books and ACRs respectively. Additionally, the Departmental Promotion Committees constituted for considering the promotions of the different cadres, except Official Language cadre, should award bonus marks for the officer/employee, being considered for promotion, on the basis of Hindi work done by him/her.

ಇಂದಲ್ಲಾ ನಾಳೆ ಇವು ಜಾರಿ ಆಗುವುದು ಖಚಿತ!

ಈ ಮೇಲ್ಕಾಣಿಸಿದ ಶಿಫಾರಸ್ಸುಗಳೂ ಒಂದಲ್ಲ ಒಂದು ದಿನ ಜಾರಿಯಾಗಿಬಿಡಬಹುದು ಎನ್ನುವ ಆತಂಕ ಹಿಂದಿಯೇತರ ಭಾಷಿಕರಿಗೆ ಇರುವುದಕ್ಕಿಂತಲೂ “ಹೀಗಾಗಬೇಕು, ಹೀಗೇ ಆಗುತ್ತದೆ” ಎನ್ನುವ ಭರವಸೆ ಭಾರತ ಸರ್ಕಾರಕ್ಕೇ ಹೆಚ್ಚಾಗಿದೆ. ಇಂದು ತಿರಸ್ಕೃತಗೊಂಡಿರುವ ಈ ಸಲಹೆಗಳನ್ನು ಮುಂದೆ ಮತ್ತೆ ಒಪ್ಪಿ ಜಾರಿಗೊಳಿಸುವುದಿಲ್ಲ ಎನ್ನಲಾಗುವುದಿಲ್ಲ. ಈಗಲೂ ಕೂಡಾ ತಿರಸ್ಕರಿಸಲು ಇರುವ ಕಾರಣವು ಬಹುಶಃ “ಜಾರಿಗೆ ಕಾಲ ಪಕ್ವವಾಗಿಲ್ಲ” ಎನ್ನುವುದಾಗಿದೆ. ಕಾಲ ಪಕ್ವವಾಗುವುದು ಎಂದರೆ, ಈ ಬದಲಾವಣೆಗಳನ್ನು ಭಾರತದ ಸಂಸತ್ತು ಒಪ್ಪುವುದೇ ಆಗಿದೆ. ಹಿಂದಿಪ್ರಚಾರವನ್ನು ಪ್ರಾಥಮಿಕ ಸದಸ್ಯತ್ವದ ಒಂದು ಅಂಶವಾಗಿಸಿಕೊಂಡಿರುವ ಒಂದು, ಹಿಂದೀಯೆನ್ನುವುದನ್ನು ಮಾತ್ರಾ ಭಾರತೀಯತೆಯ ಸಂಕೇತ ಎಂದುಕೊಂಡಿರುವ ಮತ್ತೊಂದು ರಾಷ್ಟ್ರೀಯ ಪಕ್ಷಗಳೇ ಸಂಸತ್ತಿನಲ್ಲಿ ಬಹುಸಂಖ್ಯಾತರಾದಲ್ಲಿ ಆ ಕಾಲವೂ ದೂರವೇನಿಲ್ಲ.

ಭಾರತದ ಒಗ್ಗಟ್ಟಿಗಾಗಿ ಹಿಂದಿ, ದೇಶಕ್ಕೊಂದು ಭಾಷೆ ಬೇಕು ಅನ್ನುವುದಕ್ಕಾಗಿ ಹಿಂದಿ, ದೇಶಪ್ರೇಮದ ಸಂಕೇತಕ್ಕಾಗಿ ಹಿಂದಿ, ಮನರಂಜನೆಗಾಗಿ ಹಿಂದಿ, ಬಹುಮಾನಕ್ಕಾಗಿ ಹಿಂದಿ, ಕೆಲಸದಲ್ಲಿ ಬಡ್ತಿಗಾಗಿ ಹಿಂದಿ, ರೈಲ್ವೇ ಬ್ಯಾಂಕುಗಳಲ್ಲಿ ಕೆಲಸ ಬೇಕಾಗಿ ಹಿಂದಿ, ರಾಜ್ಯಸರ್ಕಾರಗಳ ಮೇಲೆ ಹೇರಿರುವ ತ್ರಿಭಾಷಾ ಸೂತ್ರದ ಸಲುವಾಗಿ ಹಿಂದಿ… ಹೀಗೆ ನಿಧಾನವಾಗಿ ಹಿಂದಿಯನ್ನು ದೇಶದ ಜನರೆಲ್ಲಾ ಕಲಿಯುವ ದಿನಗಳ ನಿರೀಕ್ಷೆಯಲ್ಲಿ ಭಾರತ ಸರ್ಕಾರವಿದೆ. ಆದರೆ ಇಂತಹ ಪ್ರಯತ್ನಗಳ, ಕಲಿಸುವಿಕೆಯ ಪರಿಣಾಮ ಏನಾದೀತು? ಭಾರತದ ಉಳಿದೆಲ್ಲಾ ಭಾಷೆಗಳ ಬಳಕೆಯ ಸಾಧ್ಯತೆಯನ್ನು ಈ ಭಾಷಾನೀತಿ ಕುಂಠಿತಗೊಳಿಸುತ್ತಿಲ್ಲವೇ? ನಮ್ಮದಲ್ಲದ ನುಡಿಯಲ್ಲಿ ನಮ್ಮ ಆಡಳಿತ ನಡೆಯಬೇಕೆನ್ನುವುದು “ಅದ್ಯಾವ ಕಾರಣಕ್ಕೆ ಆಗಿದ್ದರೂ” ಅದು ಪ್ರಜಾಪ್ರಭುತ್ವ ಎಂದು ಹೇಗೆ ಅನ್ನಿಸಿಕೊಳ್ಳುತ್ತದೆ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತವೆ.

ಭಾರತದೇಶವು ಒಪ್ಪಿ ಅನುಸರಿಸುತ್ತಿರುವ ಭಾಷಾನೀತಿಯ ಕಾರಣದಿಂದಾಗಿ ಇಂದು ಕೇಂದ್ರಸರ್ಕಾರ ನೇಮಿಸಿರೋ ಸಂಸತ್ ಸಮಿತಿಯು ಇಡೀ ಭಾರತದ ಎಲ್ಲ ರಾಜ್ಯಗಳಲ್ಲಿ ಆಗಬೇಕಾದ ಸುಧಾರಣೆಗಳನ್ನು ಕೊಟ್ಟಿದೆ. ಅವುನ್ನೆಲ್ಲಾ ಜಾರಿ ಮಾಡಿದರೆ ಕರ್ನಾಟಕದಲ್ಲಿ ಕನ್ನಡದ ಗತಿ ಏನಾದೀತು? ಕನ್ನಡಿಗರ ಬದುಕಿನ ಪರಿಸ್ಥಿತಿ ಏನಾದೀತು? ಎಂದೆಲ್ಲಾ ಯೋಚಿಸಿದರೆ ಮೈನಡುಕವುಂಟಾಗುತ್ತದೆ. ಇಂಥಾ ಸಲಹೆಗಳನ್ನು ನೀಡೋ ಸಮಿತಿಗಳು, ಇಂಥಾ ಸಮಿತಿಗಳನ್ನು ನೇಮಿಸುವ ಸದನಗಳು, ಇವುಗಳಿಗೆ ದಿಕ್ಕು ತೋರಿಸೋ ಭಾರತದ ಭಾಷಾನೀತಿ ಮತ್ತು ಭಾರತದ ಆಡಳಿತ ಭಾಷಾ ಕಾಯ್ದೆಗಳು... ಇವೆಲ್ಲಕ್ಕೂ ತಾಯಿಯಂತಿರೋ ಭಾರತದ ಸಂವಿಧಾನ ನಿಜಕ್ಕೂ ಭಾರತದ ವೈವಿಧ್ಯತೆಗಳನ್ನು ಉಳಿಸಿಕೊಳ್ಳಲು ಬದ್ಧವಾಗಿವೆ ಎನ್ನುವುದನ್ನು ಒಪ್ಪಲಾಗುವುದಾ ಗುರೂ!

ಭಾರತದಲ್ಲಿ ಬದುಕಬೇಕೆಂದರೆ ಹಿಂದೀಯನ್ನು ಕಲಿತಿರಲೇಬೇಕು ಎನ್ನುವುದಕ್ಕೆಂದೇ ರೂಪಿಸುವ ಹತ್ತಾರು ಯೋಜನೆಗಳನ್ನು, ಅದಕ್ಕಾಗಿ ಹಾಕಿ ಕೊಳ್ಳೋ ಗುರಿಗಳನ್ನು, ಖರ್ಚು ಮಾಡುವ ಹಣವನ್ನು, ಹುಟ್ಟುಹಾಕುವ ಅನಿವಾರ್ಯತೆಯನ್ನು ಕಂಡಾಗ ಧರೆ ಹತ್ತಿ ಉರಿದಂತೆ, ಏರಿ ನೀರುಂಡಂತೆ, ಬೇಲಿ ಹೊಲ ಮೆಯ್ದಂತೆ, ದೇಶದ ಐಕ್ಯತೆಗಾಗಿ ಹಿಂದಿ-ದೇಶಪ್ರೇಮದ ಪ್ರತೀಕ ಹಿಂದಿ ಎಂದು ನಮ್ಮವರು ಕುಡಿಯುತ್ತಿರುವ ಭಾರತಾಂಬೆಯ ಮೊಲೆವಾಲು ನಂಜಾದಂತೆ ಅನ್ನಿಸುವುದಿಲ್ಲವಾ ಗುರೂ? ಇಂತಹ ವಿಷದ ಹಾಲನ್ನೇ ಅಮೃತವೆಂದು ಭ್ರಮಿಸುತ್ತಿರುವ ಕನ್ನಡದ ಕಂದಮ್ಮಗಳ ಕಣ್ತೆರೆಸುವವರಾರು? ನನ್ನಪ್ಪಾ...

೫. ಭಾಷಾನೀತಿ -ರಾಜ್ಯದ ಶಾಲೆಗಳೆಲ್ಲಾ ಹಿಂದೀ ಮಾಧ್ಯಮವಾಗಬೇಕಂತೆ!

ಸಂಸತ್ ಸಮಿತಿಯು ಕೇಂದ್ರಸರ್ಕಾರದ ಎಲ್ಲಾ ೪೩ ಇಲಾಖೆಗಳನ್ನೂ ಸಮೀಕ್ಷೆಗೊಳಪಡಿಸಿ, ಅಲ್ಲೆಲ್ಲಾ ಹೇಗೆ ಹಿಂದೀ ಅನುಷ್ಠಾನ ನಡೆದಿದೆ ಎನ್ನುವುದನ್ನು ಅಧ್ಯಯನ ಮಾಡಿ, ಹಲವಾರು ಶಿಫಾರಸ್ಸುಗಳನ್ನು ಸದನಕ್ಕೆ ಸಲ್ಲಿಸಿದೆ. ಈ ಬಾರಿ ನಾವು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸೂಚಿಸಿರುವ ಬದಲಾವಣೆಗಳ ಬಗ್ಗೆ ನೋಡೋಣ. ಸಂಸತ್ ಸಮಿತಿಯು ಹಲವಾರು ಶಿಕ್ಷಣ ಸಂಸ್ಥೆಗಳನ್ನು, ಸಂಶೋಧನಾ/ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಹಾಗೂ ನಾನಾ ಇಲಾಖೆಗಳ ತರಬೇತಿ ಕೇಂದ್ರಗಳನ್ನು ಸಮೀಕ್ಷೆಗೆ ಒಳಪಡಿಸಿತು. ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ, ಪೂನಾದ ಭಾರತೀಯ ರೈಲ್ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆ, ಕೊಲ್ಕತ್ತಾದ ಸತ್ಯಜಿತ್ ರೇ ಸಿನಿಮಾ ಮತ್ತು ದೂರದರ್ಶನ ಸಂಸ್ಥೆ, ಮೊಹಾಲಿಯಲ್ಲಿನ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಶಕ್ತಿ ತರಬೇತಿ ಸಂಸ್ಥೆ, ಕೇಂದ್ರೀಯ ಶಾಲೆ ನಡೆಸುವ ಸಿ.ಬಿ.ಎಸ್.ಇ ದೆಹಲಿ, ಜೈಸೆಲ್ಮೇರ್ ಮತ್ತು ಜೋಧ್‍ಪುರಗಳ ನವೋದಯ ಶಾಲೆಗಳನ್ನು ಸಮೀಕ್ಷೆಗೆ ಒಳಪಡಿಸಿತು. ಇವಿಷ್ಟೇ ಅಲ್ಲದೆ ರಕ್ಷಣಾ ವಿಭಾಗದ ತರಬೇತಿ ಕೇಂದ್ರಗಳು, ಆಹಾರ ಇಲಾಖೆಯ, ಕೃಷಿ ಇಲಾಖೆಯ… ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ಭಾರತದ ನಾನಾ ಸಂಸ್ಥೆಗಳನ್ನು ಸಮೀಕ್ಷೆ ಮಾಡಿ ವರದಿ ಸಲ್ಲಿಸಿದೆ. ಇದರಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ನೋಡಿ.

ಸಂಸತ್ ಸಮಿತಿಯ ಸಲಹೆಗಳ ಸಾರ:

1) A ಮತ್ತು B ವಲಯಗಳಲ್ಲಿರುವ (A ವಲಯ – ಹಿಂದೀ ತಾಯ್ನುಡಿ ಪ್ರದೇಶಗಳಾದ ಉತ್ತರಪ್ರದೇಶ, ಮಧ್ಯಪ್ರದೇಶ ಮೊದಲಾದವು, B ವಲಯ – ಹಿಂದಿಗೆ ನಂಟಿರುವ ನುಡಿಗಳ ರಾಜ್ಯಗಳಾದ ಪಂಜಾಬ್ ಥರದ ರಾಜ್ಯಗಳು, C – ಹಿಂದಿಗೆ ಚೂರೂ ಸಂಬಂಧವಿರದ ಬಾಂಗ್ಲಾ, ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳು) ನವೋದಯ ಸಂಸ್ಥೆಗಳು, ಸಿ ಬಿ ಎಸ್ ಇ ಶಾಲೆಗಳು, ರಾಜ್ಯ ಸರ್ಕಾರಗಳ ಹಿಡಿತದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕೂಡಲೇ ಹಿಂದೀ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಬೇಕು. ಆಯಾ ರಾಜ್ಯದ ರಾಜ್ಯಭಾಷೆ ಮತ್ತು ಇಂಗ್ಲೀಷನ್ನು ಬೇರೆಯೇ ವಿಷಯವಾಗಿ ಕಲಿಸಬಹುದು. ನಿಗದಿತ ಕಾಲಾವಧಿಯ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿ ಇದೇ ವ್ಯವಸ್ಥೆಯನ್ನು C ವಲಯದ ರಾಜ್ಯಗಳಲ್ಲೂ ಜಾರಿಮಾಡುವುದು.

2) ಕಾಲೇಜುಗಳಲ್ಲಿ/ ವಿಶ್ವವಿದ್ಯಾಲಯಗಳಲ್ಲಿ/ ಸಂಶೋಧನಾ ಕೇಂದ್ರಗಳಲ್ಲಿ ಶಿಕ್ಷಕರನ್ನು ನೇಮಕ ಮಾಡುವಾಗ ಅಭ್ಯರ್ಥಿಗಳು ಮೆಟ್ರಿಕ್ ಹಂತದವರೆಗೆ ಹಿಂದಿಯನ್ನು ಕಲಿತಿರಬೇಕಾದ್ದು ಕಡ್ಡಾಯ ಎನ್ನುವ ನಿಬಂಧನೆಯನ್ನು ಜಾರಿಮಾಡಬಹುದು. ಇದರಿಂದಾಗಿ ಮುಂದೆ ಹಾಗೆ ನೇಮಕವಾದವರಿಗೆ ಹಿಂದಿ ಮಾಧ್ಯಮದಲ್ಲಿ ತಮ್ಮ ವಿಷಯವನ್ನು ಬೋಧಿಸಲು ಕಷ್ಟವಾಗುವುದಿಲ್ಲ.

3) ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಹಿಂದಿ ವಿಭಾಗವನ್ನು ಆರಂಭಿಸುವುದು ಮತ್ತು ಅಲ್ಲಿ ಸ್ನಾತಕೋತ್ತರ ಪದವಿ ಹಂತದ ಹಿಂದಿ ಕಲಿಕೆ ಸಿಗುವ ಏರ್ಪಾಟು ಮಾಡುವುದು.

4) ರಾಷ್ಟ್ರೀಯ ಶಿಕ್ಷಣ ಯೋಜನೆಗಳಾದ ಸರ್ವಶಿಕ್ಷಾ ಅಭಯಾನದಂತಹ ಕಾರ್ಯಕ್ರಮಗಳಲ್ಲಿ ಕಲಿಕೆಯ ಅವಕಾಶವನ್ನು ಕಡ್ಡಾಯವಾಗಿ ಕೇವಲ ಹಿಂದೀ ಮಾಧ್ಯಮದಲ್ಲಿ ಮಾತ್ರವೇ ಸಿಗುವಂತೆ ಮಾಡುವುದು.

5) ವಿಶ್ವವಿದ್ಯಾಲಯಗಳ/ ತಾಂತ್ರಿಕ ಕೋರ್ಸುಗಳ/ ಸಂಶೋಧನಾ ಕೋರ್ಸುಗಳ ಪ್ರವೇಶ ಪರೀಕ್ಷೆಗಳು ಕಡ್ಡಾಯವಾಗಿ ಹಿಂದಿಯಲ್ಲೂ ನಡೆಯತಕ್ಕದ್ದು.

6) ವಿದ್ಯುನ್ಮಾನ ಮಾಧ್ಯಮಗಳಾದ ದೂರದರ್ಶನ, ರೇಡಿಯೋಗಳ ಮೂಲಕ ಪ್ರಸಾರ ಮಾಡಲಾಗುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳೂ ಹಿಂದಿಯಲ್ಲಿ ಮಾತ್ರವೇ ಇರತಕ್ಕದ್ದು.

7) ವಿಜ್ಞಾನ ಮತ್ತು ತಾಂತ್ರಿಕ ಪದಕೋಶ ಆಯೋಗಗಳಂತಹ ಸಂಸ್ಥೆಗಳು ಎಲ್ಲಾ ಸಬ್ಜೆಕ್ಟುಗಳಿಗೆ ಸಂಬಂಧಿಸಿದಂತೆ ತಾವು ಹೊರತಂದಿರುವ ಹಿಂದಿ/ ಹಿಂದಿ-ಇಂಗ್ಲೀಷ್ ಪುಸ್ತಕಗಳ ಪಟ್ಟಿಯನ್ನು ಸಿದ್ಧಮಾಡತಕ್ಕದ್ದು. ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳಲ್ಲಿ ಈ ಪಟ್ಟಿಯನ್ನು ಇಡತಕ್ಕದ್ದು. ಇಂತಹ ಪುಸ್ತಕಗಳ ಇರುವಿಕೆ ಬಗ್ಗೆ ನಾನಾ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡತಕ್ಕದ್ದು.

8) ಕೇಂದ್ರಸರ್ಕಾರಿ, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳು ಮತ್ತು ಸಂಸ್ಥೆಗಳಲ್ಲಿ ಅತಿ ಪ್ರಮುಖವಾದ ತಾಂತ್ರಿಕ ವಿಷಯಗಳನ್ನು ಹೊರತುಪಡಿಸಿ, ಉಳಿದೆಲ್ಲಾ ತರಬೇತಿ ಕಾರ್ಯಕ್ರಮಗಳನ್ನು ಹಿಂದಿ ಮಾಧ್ಯಮದಲ್ಲಿ ಮಾತ್ರವೇ ನಡೆಸತಕ್ಕದ್ದು.

9) ಪ್ರತಿಯೊಂದು ಸಂಸ್ಥೆಯ ಮುಖ್ಯಸ್ಥರು ಸಲ್ಲಿಸುವ ಗುಟ್ಟಿನ ವಾರ್ಷಿಕ ವರದಿಯಲ್ಲಿ ತಮ್ಮ ಸಂಸ್ಥೆ ಹಿಂದಿಯನ್ನು ಜಾರಿಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಕಡ್ಡಾಯವಾಗಿ ನಮೂದಿಸತಕ್ಕದ್ದು.

ಸಂಸತ್ ಸಮಿತಿಯ ಮನಸ್ಥಿತಿ!

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಸೂಚಿಸುವ ಮೂಲಕ ಭಾರತ ಸರ್ಕಾರಕ್ಕೆ ನಿಜಕ್ಕೂ ಇರುವುದು ತನ್ನ ಪ್ರಜೆಗಳಿಗೆ ಶಿಕ್ಷಣ ಕೊಡುವುದೋ ಅಥವಾ ಹಿಂದೀ ಕಲಿಸುವುದೋ ಎನ್ನುವ ಅನುಮಾನಕ್ಕೆ ಈ ಸಲಹೆಗಳು ಎಡೆ ಮಾಡಿಕೊಡುತ್ತಿದೆ. ಈ ಸಲಹೆಗಳನ್ನು ಸಮೀಕ್ಷೆಗೆ ಒಳಪಡಿಸುತ್ತಾ ಸದನ ಒಂದು ಮಾತು ಹೇಳುತ್ತದೆ..."ಈಗ ಶಿಕ್ಷಣ ಕ್ಷೇತ್ರವನ್ನು ಕಂಕರೆಂಟ್ ಪಟ್ಟಿಗೆ ತಂದಿರುವುದರಿಂದ ಮಾನವ ಸಂಪನ್ಮೂಲ ಇಲಾಖೆಯು ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಹಿಂದೀ ಕಲಿಸುವುದನ್ನು ಕಡ್ಡಾಯ ಮಾಡಲು ಮುಂದಾಗಬೇಕು" ಎಂಬುದಾಗಿ.
ಒಟ್ಟಾರೆ ಈ ವರದಿ ಸಲ್ಲಿಸಿದ ಸಂಸತ್ ಸಮಿತಿಯ ಮನಸ್ಥಿತಿಯ ಬಗ್ಗೆ ಅರಿಯಲು ವರದಿಯಲ್ಲಿ ಅವರು ಹಲವೆಡೆ ಬಳಸಿರುವ ವಾಕ್ಯಗಳನ್ನು ನೋಡಬೇಕು. ಯಾವ ಸಂಸ್ಥೆಯಲ್ಲಿ ಹಿಂದಿಯಲ್ಲಿ ಕಾರ್ಯಕ್ರಮವೇ ಇಲ್ಲವೋ ಅವುಗಳ ಬಗ್ಗೆ ಅಚ್ಚರಿ, ಗಾಬರಿ ತೋರಿಸೋದು. ಎಲ್ಲೆಲ್ಲಿ ಹಿಂದೀ ಇಂಗ್ಲೀಷ್ ಎರಡು ಭಾಷೆಯ ತರಬೇತಿ ಕಾರ್ಯಕ್ರಮಗಳೂ ನಡೆದಿವೆಯೋ ಅವುಗಳ ಬಗ್ಗೆ ಆದಷ್ಟು ಇನ್ಮುಂದೆ ಹಿಂದಿಯಲ್ಲೇ ಮಾಡಿ ಅನ್ನೋದು. ಹಿಂದಿಯಲ್ಲಿ ಇಲ್ಲದಿದ್ದರೆ ದೇಶಾನೇ ಮುಳುಗೋದ ಹಾಗೆ ಅಲವತ್ತುಕೊಳ್ಳೋದು. ಒಟ್ಟಾರೆ ಸಮೀಕ್ಷೆಯ ಸಾರವನ್ನು ಹೀಗೆ ಹೇಳಿದ್ದಾರೆ ನೋಡಿ:

Conclusion:

14.9 After assessment of the position of Hindi medium in educational/training institutions, the Committee has reached the conclusion that although Government has made efforts on a large scale in the direction of imparting training in Hindi, but it is still quite far from the target. While some progress has been seen in the direction of teaching in Hindi medium in Schools/ Colleges/ Universities. no specific progress has been noticed in the professional training organizations and research institutions. Most of the professional educational institutions are still conducting their entrance examinations only in English. The Committee has arrived at the conclusion that as this is a very vast issue, it is important to discuss the matter with the Heads and Representatives of Universities, Professional Training Institutions as also with the Chief Ministers of the State through Oral Evidence Programmes etc. Therefore, the Committee is of the view that this matter be taken up for consideration in detail. For this purpose, Committee has drafted a special questionnaire for the educational institutions. Thereafter, the Committee will require to study in detail to assess the position of Hindi medium in various educational/ training/ research institutions located throughout the country.
ಇದರರ್ಥ ಬಿಡಿಸಿ ಹೇಳಬೇಕೇನು? ಭಾರತ ಸರ್ಕಾರದ ಪ್ರತಿಯೊಂದು ಇಲಾಖೆ, ಪ್ರತಿಯೊಂದು ಯೋಜನೆಯ ಹಿಂದಿರುವುದು ನಮ್ಮ ಜನರ ಉದ್ಧಾರ ಮಾಡಬೇಕೆನ್ನೋ ಉದ್ದೇಶವೋ? ನಮಗೆಲ್ಲಾ ಹಿಂದಿಯನ್ನು ಕಲಿಯುವ ಮತ್ತಷ್ಟು ಅನಿವಾರ್ಯತೆಯನ್ನು ಹುಟ್ಟುಹಾಕುವ ಉದ್ದೇಶವೋ? ಮುಂದಿನಬಾರಿ ಈ ಶಿಫಾರಸ್ಸುಗಳಲ್ಲ್ಲಿ ಒಪ್ಪಿತವಾಗದವು ಯಾವುವು ಎಂದು ನೋಡೋಣ.

(ಮುಂದುವರೆಯುವುದು...)

೪. ಭಾಷಾನೀತಿ: ಸಂಸತ್ ಸಮಿತಿ ಕಂಡಕೊಂಡದ್ದು...

ಸಂಸತ್ ಸಮಿತಿ ಸಲ್ಲಿಸಿದ ವರದಿಯತ್ತ ಕಣ್ಣು ಹಾಯಿಸುವ ಮೊದಲಿಗೆ ಹೇಳಬೇಕಾದ ಮಾತೆಂದರೆ ಈ ಸಮಿತಿಯ ಶಿಫಾರಸ್ಸುಗಳೆಲ್ಲವನ್ನೂ ಸದನ ಒಪ್ಪಿಲ್ಲ. ಆದರೆ ಬಹುತೇಕ ಒಪ್ಪಿದೆ. ಹಾಗೆ ಕೆಲವನ್ನು ಒಪ್ಪಿಲ್ಲದಿರುವುದಕ್ಕೆ ಕಾರಣಗಳನ್ನು ಹೇಳಿಲ್ಲವಾದರೂ, ಎಲ್ಲಿ ಗಲಾಟೆಯಾದೀತೋ ಎನ್ನುವ ಕಾರಣದಿಂದಲೇ ಅವನ್ನು ಒಪ್ಪಿಲ್ಲವೆಂದು ವರದಿಯನ್ನು ಓದಿದಾಗ ಅನ್ನಿಸುವುದು ಸಹಜ. ಆದರೆ ಗೃಹಮಂತ್ರಿಯೇ ಅಧ್ಯಕ್ಷರಾಗಿದ್ದ, ಸಂಸತ್ತಿನ ಮೂವತ್ತು ಸದಸ್ಯರನ್ನು ಒಳಗೊಂಡ ಒಂದು ಸಮಿತಿ, ಹೇಗೆ ಹಿಂದಿಯನ್ನು ಎಲ್ಲೆಡೆ ಸ್ಥಾಪಿಸಿಬಿಡಬೇಕೆನ್ನುವ ಮನಸ್ಥಿತಿ ಹೊಂದಿತ್ತು ಎಂಬುದರ ಬಗ್ಗೆ ನಿಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ. ಹಾಗಾಗಿ ಶ್ರೀ ಶಿವರಾಜ್ ಪಾಟೀಲರ ಅಧ್ಯಕ್ಷತೆಯ ಸಂಸತ್ ಸಮಿತಿಯ ವರದಿಯ ಈ ಭಾಗದ ಬಗ್ಗೆ ಮಾತಾಡೋಣ. ಉಳಿದ ವರದಿಗಳಲ್ಲಿ ಹೆಚ್ಚಿನದಾಗಿ ಹಿಂದೀ ಪ್ರಚಾರಕ್ಕೆ ಬೇಕಾದ ಸಲಕರಣೆಗಳು, ತರ್ಜುಮೆಗಳು, ಕಂಪ್ಯೂಟರ್ ಮೊದಲಾದವುಗಳು, ತರಬೇತಿಗಳು... ಇತ್ಯಾದಿಗಳ ಬಗ್ಗೆ ಮಾತಿದೆ.


ಈ ವರದಿಯನ್ನು ಸಿದ್ಧಪಡಿಸುವ ಮುನ್ನ ಏನೆಲ್ಲಾ ಅಳೆಯಲಾಯಿತು ಎಂದು ನೋಡೋಣ. ವರದಿಯ ಯಾವ ಶಿಫಾರಸ್ಸನ್ನು ಒಪ್ಪಲಾಯಿತು, ಯಾವುದನ್ನು ಒಪ್ಪಲಾಗಿಲ್ಲ ಎಂಬುದರ ಬಗ್ಗೆಯೂ ಮುಂದೆ ಮಾತಾಡೋಣ.


ಏನೇನು ಅಳೆದರು?

ಈ ಇಲಾಖೆಗಳಿಗೆ ಸೇರಿದ ಕಚೇರಿಗಳಲ್ಲಿ ಹಲವನ್ನು ಭೇಟಿ ಮಾಡಿದ ಈ ಸಂಸತ್ ಸಮಿತಿಯು ಪ್ರತಿಯೊಂದು ಇಲಾಖೆಯಲ್ಲೂ ಕೆಳಕಂಡ ವಿಷಯಗಳ ಬಗ್ಗೆ ಸಮೀಕ್ಷೆ ನಡೆಸಿತು.
- ಇಲಾಖೆಯಲ್ಲಿರುವ ಒಟ್ಟು ಉದ್ಯೋಗಿಗಳಲ್ಲಿ ಎಷ್ಟು ಜನಕ್ಕೆ ಹಿಂದೀ ಬರುತ್ತದೆ? ಎಷ್ಟು ಜನಕ್ಕೆ ಹಿಂದೀ ಕಲಿಸಬೇಕಿದೆ?

- ಪ್ರತಿಯೊಂದು ಇಲಾಖೆಯಲ್ಲೂ ಎಷ್ಟೆಷ್ಟು ಜನ ಉದ್ಯೋಗಿಗಳು ಹಿಂದೀ ಭಾಷೆಯಲ್ಲಿ ಕೆಲಸ ಮಾಡುತ್ತಾರೆ? ಅಂದರೆ ೧೦೦%, ೭೫%, ೫೦%, ೨೫% ಮತ್ತು ಹಿಂದಿಯನ್ನು ಬಳಸುವುದೇ ಇಲ್ಲ ಎನ್ನುವಂತಹ ಉದ್ಯೋಗಿಗಳ ಪ್ರಮಾಣ.

- ಇಲಾಖೆಯ ಕಾರ್ಯಗಳಲ್ಲಿ ಹಿಂದಿಯಲ್ಲಿ ಎಷ್ಟು ಪ್ರತಿಶತ ದಾಖಲೆಗಳನ್ನು ನೀಡಲಾಗುತ್ತಿದೆ?

- ಹಿಂದಿಯಲ್ಲಿ ಬಂದ ಪತ್ರಗಳಿಗೆ ಹಿಂದಿಯಲ್ಲೇ ಉತ್ತರಿಸಬೇಕು ಎನ್ನುವ ನಿಯಮದ ಉಲ್ಲಂಘನೆಯ ಪ್ರಮಾಣವೆಷ್ಟು?

- ಇಲಾಖೆಯ ಕಡತಗಳು, ಕಡತಗಳ ತಲೆಬರಹಗಳು, ಇಂಗ್ಲೀಷಿನಲ್ಲಿ ಎಷ್ಟು, ಹಿಂದಿಯಲ್ಲಿ ಎಷ್ಟು, ಎರಡೂ ಭಾಷೇಲಿ ಎಷ್ಟಿವೆ?

- ಎಷ್ಟು ತರಬೇತಿ ಕಾರ್ಯಕ್ರಮಗಳನ್ನು ಹಿಂದಿಯಲ್ಲಿ ನಡೆಸಲಾಗುತ್ತಿದೆ? ಎಷ್ಟು ಬೇರೆ ಭಾಷೆಯಲ್ಲಿ ನಡೆದಿವೆ?

- ಹಿಂದೀ ಟೈಪಿಸ್ಟುಗಳು, ಸ್ಟೆನೋಗಳು ಇದ್ದಾರೆ? ಹಿಂದೀ ಉದ್ಯೋಗಗಳು ಎಷ್ಟಿವೆ? ಎಷ್ಟು ತುಂಬಿವೆ?

- ಎಷ್ಟು ಆದೇಶಗಳನ್ನು, ಅಧಿನಿಯಮಗಳನ್ನು ಹಿಂದಿಯಲ್ಲಿ ಹೊರಡಿಸಲಾಗಿದೆ? ಇಂಗ್ಲೀಷಲ್ಲಿ ಎಷ್ಟು? ಎರಡೂ ಭಾಷೆಯಲ್ಲಿ ಎಷ್ಟು?

- ಎಷ್ಟು ಪ್ರತಿಶತ ಹಣವನ್ನು ಹಿಂದೀ ಭಾಷೆಯ ಪುಸ್ತಕಗಳನ್ನು ಕೊಳ್ಳಲು ಖರ್ಚುಮಾಡಲಾಗುತ್ತಿದೆ? ಇಲಾಖೆಯಲ್ಲಿರುವ ಒಟ್ಟು ಅರ್ಜಿ ನಮೂನೆಗಳಲ್ಲಿ ಎಷ್ಟನ್ನು ಇಂಗ್ಲೀಷಿನಲ್ಲಿ ಅಚ್ಚು ಹಾಕಿಸಲಾಗಿದೆ?

- ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿಯ ಆಯ್ಕೆಯಿಲ್ಲದೆ ನಡೆಸಿದ ಪರೀಕ್ಷೆಗಳ ಪ್ರಮಾಣವೆಷ್ಟು? ಹಿಂದೀ ಸಲಹಾಕಾರ ಸಮಿತಿಯನ್ನು ರಚಿಸಲಾಗಿದೆಯೇ? ಇಲ್ಲವೇ?

- ಅಧಿಕೃತ ಭಾಷಾ ನೀತಿಯ ಜಾರಿ ಸಮಿತಿಯನ್ನು ರಚಿಸಲಾದೆಯೇ? ಅದು ವರ್ಷವೊಂದರಲ್ಲಿ ಎಷ್ಟು ಸಭೆಗಳನ್ನು ನಡೆಸಿದೆ?

- ಹಿಂದಿನ ವರ್ಷದಲ್ಲಿ ಎಷ್ಟು ಹಿಂದೀ ಕಲಿಕಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತು?

- ಕಳೆದ ವರ್ಷದ ಇಲಾಖೆಯ ಪರೀಕ್ಷಣಾ ವರದಿಗಳಲ್ಲಿ ಎಷ್ಟನ್ನು ಹಿಂದಿಯಲ್ಲಿ ತಯಾರಿಸಲಾಗಿದೆ? ಹಿಂದೀ ವಿಭಾಗವಲ್ಲದೆ ಒಟ್ಟು ಎಷ್ಟು ವಿಭಾಗಗಳು ಸಂಪೂರ್ಣವಾಗಿ ಹಿಂದೀ ಭಾಷೆಯಲ್ಲಿ ಕೆಲಸ ಮಾಡುತ್ತಿವೆ?

- ಹಿಂದೀ ಸಪ್ತಾಹವನ್ನು ಆಚರಿಸಿದ ನಂತರ ಕಚೇರಿಯಲ್ಲಿ ಹಿಂದೀ ಬಳಕೆಯ ಪ್ರಮಾಣದಲ್ಲಿ ಎಷ್ಟು ಪ್ರತಿಶತ ಹೆಚ್ಚಿದೆ?

ಹಿಂದಿಯೊಂದೇ ಇದ್ದರೆ ಸಡಗರ! ಇಲ್ಲದಿದ್ದರೆ ಕಳವಳ!

ಹೀಗೆ ನಾನಾ ದೇಶದ ನಾನಾ ಮೂಲೆಗಳಲ್ಲಿ ಕೆಲಸ ಮಾಡುತ್ತಿರುವ ಕೇಂದ್ರಸರ್ಕಾರಿ ಇಲಾಖೆಗಳಲ್ಲಿ ಹಿಂದೀ ಭಾಷೆಯ ಬಳಕೆಯನ್ನು ಅಳೆದ ಸಂಸತ್ ಸಮಿತಿ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದೆ.
ಹಿಂದಿಯನ್ನು ತಿಳಿಯದೇ ಇರುವ ನೌಕರರನ್ನು ಹೊಂದಿರುವ ಕೇಂದ್ರಸರ್ಕಾರಿ ಇಲಾಖೆಗಳಲ್ಲಿ ಮೊದಲ ಸ್ಥಾನ ಗೃಹಖಾತೆಯದ್ದು. ಇದರ ಜೊತೆಯಲ್ಲಿ ರಕ್ಷಣಾ ಇಲಾಖೆ, ಕಲ್ಲಿದ್ದಲು ಮತ್ತು ಗಣಿ, ರಾಸಾಯನಿಕ ಮತ್ತು ಗೊಬ್ಬರ, ಗ್ರಾಮೀಣ ಅಭಿವೃದ್ಧಿ, ವಿದ್ಯುತ್ ಮತ್ತು ಉಕ್ಕು ಸಚಿವಾಲಯಗಳ ಇಲಾಖೆಗಳಲ್ಲಿ ನೂರಕ್ಕೆ ಮೂವತ್ತಕ್ಕಿಂತಲೂ ಹೆಚ್ಚು ಜನಕ್ಕೆ ಹಿಂದೀ ಬರುತ್ತಿಲ್ಲ ಎನ್ನುವುದು ಗಂಭೀರವಾದ ಆತಂಕದ ವಿಷಯ. ಒಂದು ವರ್ಷದೊಳಗೆ ಇವರಿಗೆಲ್ಲಾ ತರಬೇತಿ ನೀಡಬೇಕು.

ಕೇವಲ ಹನ್ನೊಂದು ಇಲಾಖೆಗಳು ಮಾತ್ರವೇ ನೂರಕ್ಕೆ ಐವತ್ತಕ್ಕಿಂತ ಹೆಚ್ಚು ಹಿಂದಿಯಲ್ಲಿ ವಹಿವಾಟು ನಡೆಸುತ್ತಿವೆ.
ಹಿಂದಿಯ ಪತ್ರಕ್ಕೆ ಹಿಂದಿಯಲ್ಲೇ ಉತ್ತರವೆನ್ನುವ ಕಾಯ್ದೆಯನ್ನು ಕೆಲವೆಡೆ (ಯುವಜನ ಮತ್ತು ಕ್ರೀಡಾಇಲಾಖೆ) ೭೩% ವರೆಗೂ ಉಲ್ಲಂಘಿಸಲಾಗಿದೆ. ಆಡಳಿತ ಭಾಷಾ ಇಲಾಖೆಯ ಕಾರ್ಯದರ್ಶಿಗಳು ಉಳಿದ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಬೇಕು.

ಮಾನವ ಸಂಪನ್ಮೂಲ ಇಲಾಖೆ, ಸಂಸ್ಕೃತಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಮತ್ತು ಗ್ರಾಹಕ ವಹಿವಾಟು, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಗಳು ಇತರೆ ಭಾಷೆಗಳಲ್ಲಿ ಹೊರತಂದಿರುವ ಪ್ರಕಾಶನಗಳ ಸಂಖ್ಯೆಯು ಹಿಂದೀ ಭಾಷೆಯ ಪುಸ್ತಕಗಳ ಸಂಖ್ಯೆಗಿಂತಾ ಕಡಿಮೆಯಿದೆ. ೧೯೯೨ರ ಸರ್ಕಾರಿ ಆದೇಶದ ಪ್ರಕಾರ ಹಿಂದೀ ಭಾಷೆಯ ಪ್ರಕಾಶನಗಳಿಗಿಂತ ಇನ್ನುಳಿದ ಯಾವ ಭಾಷೆಯ ಪ್ರಕಾಶನವೂ ಹೆಚ್ಚಿರಬಾರದು.

ಹೀಗೆ ನಾನಾ ವಿಷಯಗಳತ್ತ ಬೊಟ್ಟು ಮಾಡಿರುವ ಸಂಸತ್ ಸಮಿತಿಯು, ಕೇಂದ್ರಸರ್ಕಾರದ ಎಲ್ಲಾ ಇಲಾಖೆಗಳೂ ಹಿಂದಿಯಲ್ಲಿ ಮಾತ್ರವೇ ವ್ಯವಹರಿಸಬೇಕೆಂಬ ಆಶಯ ತೋರಿಸುತ್ತಾ ಅದನ್ನು ಸಾಧ್ಯವಾಗಿಸಲು ಏನೆಲ್ಲಾ ಮಾಡಬೇಕೆಂಬ ಶಿಫಾರಸ್ಸುಗಳನ್ನು ನೀಡಿದೆ. ಈ ಸಮಿತಿಯು ಭಾರತದಲ್ಲಿನ ಕಲಿಕಾ ವ್ಯವಸ್ಥೆಯ ಬಗ್ಗೆ ನೀಡಿರುವ ಸಲಹೆ ಸೂಚನೆಗಳ ಬಗ್ಗೆ ಮುಂದಿನ ಬಾರಿ ನೋಡೋಣ.

(ಮುಂದುವರೆಯುವುದು)

೩. ಭಾರತದ ಭಾಷಾನೀತಿಯ ಬೆನ್ನೆಲುಬು: ಖೇರ್ ಆಯೋಗದ ವರದಿ!

೨೦೦೪ರ ಸಮಿತಿಯ ವರದಿಯ ಮೊದಲ ಭಾಗದಲ್ಲೇ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಲು ಮಾಡಿದ ಪ್ರಯತ್ನಗಳ ಬಗ್ಗೆ ಮಾತನ್ನಾಡಲಾಗಿದೆ. ಭಾರತೀಯರು ತಮ್ಮ ರಾಷ್ಟ್ರನಾಯಕರೆಂದು ಗೌರವಿಸುವ ಹಲವಾರು ಹಿರಿಯರು ಹಿಂದೀ ಪರವಾಗಿ ನೀಡಿರುವ ಹೇಳಿಕೆಗಳನ್ನು ನೀಡಲಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಕೆಲವು ರಾಜಾಜಿಯವರಂತಹ ನಾಯಕರುಗಳ ಮಾತನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ಹಿಂದೀ ಬೇಡವೆಂದವರೊಬ್ಬರ ಬಗ್ಗೆಯೂ, ಹಿಂದೀ ಹೇರಿಕೆ ವಿರೋಧಿಗಳ ನಿಲುವಿನ ಬಗ್ಗೆಯೂ ತುಟಿಪಿಟಕ್ ಇಲ್ಲ. ಈ ವರದಿಯಲ್ಲಿ ಮುಂದುವರೆಯುತ್ತಾ ಹಿಂದೀ ಭಾಷೆಯು ಭಾರತದ ಏಕೈಕ ಆಡಳಿತ ಭಾಷೆಯಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ವರದಿಯ ಕೆಲ ಮುಖ್ಯವಾದ ಅಂಶಗಳತ್ತ ಕಣ್ಣು ಹಾಯಿಸಿದರೆ ಮೊದಲಿಗೆ ಕಾಣುವುದು ಹಿಂದಿಗೇಕೆ ಪ್ರಾಮುಖ್ಯ ಎಂದು ಸಮರ್ಥನೆಗಳು. ಸಂವಿಧಾನದ ೩೪೪ನೇ ಕಲಮಿನ ಆಶಯ. ರಾಷ್ಟ್ರಪತಿಗಳು ಆ ಆಶಯದ ಈಡೇರಿಕೆಗೆ ಕೈಗೊಂಡ ಕ್ರಮಗಳು. ಇವುಗಳ ಹಿನ್ನೆಲೆಯಲ್ಲಿ ನೇಮಕವಾದ "ಅಫಿಶಿಯಲ್ ಲಾಂಗ್ವೇಜ್ ಇಲಾಖೆ". ಅದರ ಹಿನ್ನೆಲೆಯಲ್ಲಿ ರಚಿಸಲಾದ ಆಕ್ಟ್. ಆಮೇಲಿನ ಸಂಸತ್ ಸಮಿತಿಗಳು. ಅವುಗಳ ಕಾರ್ಯವ್ಯಾಪ್ತಿ.. ನೀಡಿದ ಶಿಫಾರಸ್ಸುಗಳು, ಪ್ರೆಸಿಡೆನ್ಶಿಯಲ್ ಆರ್ಡರ್‌ಗಳು... ಕೊನೆಗೆ ಮತ್ತಷ್ಟು ಶಿಫಾರಸ್ಸುಗಳು...

ಬಾಲಗಂಗಾಧರ ಖೇರ್ ವರದಿ

೧೯೫೫ರಲ್ಲಿ ರಾಷ್ಟ್ರಪತಿಗಳು ಸಂವಿಧಾನದ ೩೪೪ನೇ ವಿಧಿಯ ಅನ್ವಯವಾಗಿ ಬಾಲಗಂಗಾಧರ ಖೇರ್ ಎಂಬುವವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿದರು. ಈ ಸಮಿತಿಯು ಹಿಂದಿಯನ್ನು ಭಾರತದ ಆಡಳಿತಭಾಷೆಯಾಗಿ ಹೇಗೆ ಜಾರಿ ಮಾಡಬೇಕೆನ್ನುವ ಬಗ್ಗೆ ಶಿಫಾರಸ್ಸು ಮಾಡುವ ಉದ್ದೇಶದಿಂದ ನೇಮಕವಾಯ್ತು. ಮುಂದೆ ಸಂಸತ್ತಿನಲ್ಲಿ ವಿಸ್ತೃತವಾಗಿ ಚರ್ಚೆಯಾದ ಈ ವರದಿಯೇ ಭಾರತದ ಭಾಷಾನೀತಿಗೆ, ಆಡಳಿತ ಭಾಷಾ ಕಾಯ್ದೆಗಳಿಗೆ ಪ್ರೇರಕವಾಯಿತು. ಕೇಂದ್ರಸರ್ಕಾರ ನೇಮಿಸಿ ಮಾನ್ಯ ಮಾಡಿದ್ದ ಖೇರ್ ಆಯೋಗದ ಶಿಫಾರಸ್ಸುಗಳು ಕುತೂಹಲಕಾರಿಯಾಗಿವೆ. ಇದು ಹಿಂದೀವಾದಿಗಳ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತಲಿದೆ.

ಖೇರ್ ವರದಿಯಲ್ಲಿನ ಕುತೂಹಲದ ವಿಷಯಗಳು :

೧. ಭಾರತದ ಪ್ರಜಾಪ್ರಭುತ್ವದ ಮಾದರಿಯನ್ನು ಪರಿಗಣಿಸಿದರೆ ಇಂಗ್ಲೀಶನ್ನು ಅಖಿಲ ಭಾರತ ಮಟ್ಟದ ಸಂಪರ್ಕ ಭಾಷೆಯೆಂದು ಒಪ್ಪಲಾಗುವುದಿಲ್ಲ. ಭಾರತೀಯ ಭಾಷೆಗಳಲ್ಲಿ ಬೇರುಮಟ್ಟದ ಕಲಿಕೆಯನ್ನು ಏರ್ಪಡಿಸಬೇಕು. ಒಂದು ವಿದೇಶಿ ಭಾಷೆಯನ್ನು ದೇಶದ ಸಾರ್ವಜನಿಕ ಕಾರ್ಯಗಳಲ್ಲಿಯೂ, ದೈನಂದಿನ ಆಡಳಿತದಲ್ಲಿಯೂ ಬಳಸಲಾಗುವುದಿಲ್ಲ.
೨. ಹೆಚ್ಚು ಜನರು ಮಾತಾಡುತ್ತಿರುವ ಹಿಂದಿಯು ಸ್ಪಷ್ಟವಾಗಿ ಭಾರತದ ಭಾಷಾ ಮಾಧ್ಯಮವಾಗಬೇಕು.
೩. ಭಾರತದ ಪ್ರತಿಯೊಬ್ಬ ಪ್ರಜೆಗೂ ೧೪ ವರ್ಷದವರೆಗೆ ಕಡ್ಡಾಯವಾಗಿ ಹಿಂದಿಯನ್ನು ಕಲಿಸಬೇಕು.
೪. ಹಿಂದಿಯನ್ನು ಮಾಧ್ಯಮಿಕ ಹಂತದವರೆಗೆ ಭಾರತದ ಎಲ್ಲೆಡೆ ಕಲಿಸುವುದು ಕಡ್ಡಾಯ ಮತ್ತು ಹಿಂದೀ ಭಾಷೆಯ ಮಕ್ಕಳಿಗೆ ದಕ್ಷಿಣ ಭಾರತದ ಯಾವುದಾದರೊಂದು ಭಾಷೆಯನ್ನು ಕಡ್ಡಾಯವಾಗಿ ಕಲಿಯುವ ಅಗತ್ಯವಿಲ್ಲ.
೫. ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಹಿಂದೀ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ/ ಅನುಕೂಲ ಮಾಡಿಕೊಡಲೇಬೇಕು.
೬. ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಸುವಾಗ ಇರುವ ವಿದ್ಯಾರ್ಥಿಗಳೆಲ್ಲರೂ ಒಂದೇ ಭಾಷೆಯವರಾಗಿದ್ದರೆ ಮಾತ್ರಾ ಅವರ ನುಡಿಯಲ್ಲಿ ಕಲಿಸಬಹುದು. ಇನ್ನೊಂದು ಭಾಷೆಯ ವಿದ್ಯಾರ್ಥಿ ಅವರೊಟ್ಟಿಗೆ ಕಲಿಯುತ್ತಿದ್ದಲ್ಲಿ ಕಡ್ಡಾಯವಾಗಿ ಹಿಂದಿ ಮಾಧ್ಯಮದಲ್ಲೇ ಬೋಧಿಸತಕ್ಕದ್ದು.
೭. ಕೇಂದ್ರಸರ್ಕಾರದ ಕೆಲಸಗಾರರು ಇಂತಿಷ್ಟೇ ಸಮಯದಲ್ಲಿ ಹಿಂದಿಯನ್ನು ಕಲಿಯತಕ್ಕದ್ದು, ತಪ್ಪಿದರೆ ದಂಡ ತೆರಬೇಕೆಂಬ ಕಟ್ಟುನಿಟ್ಟಿನ ಕಾಯ್ದೆಯನ್ನು ಜಾರಿಮಾಡತಕ್ಕದ್ದು
೮. ಸಾರ್ವಜನಿಕರೊಡನೆ ವ್ಯವಹರಿಸುವಾಗ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬಹುದಾದರೂ ಕಚೇರಿಯ ಒಳಗಿನ ಎಲ್ಲಾ ವ್ಯವಹಾರಗಳೂ ಹಿಂದೀ ಭಾಷೆಯಲ್ಲೇ ನಡೆಯತಕ್ಕದ್ದು.
೯. ರಾಜ್ಯ ಮತ್ತು ಕೇಂದ್ರಸರ್ಕಾರಗಳ ನೌಕರರಿಗೆ ಒಂದು ಹಂತದ ಹಿಂದೀ ಜ್ಞಾನವು ಕಡ್ಡಾಯ ಮಾಡತಕ್ಕದ್ದು. ಮತ್ತು ಇದನ್ನು ಉತ್ತೇಜಿಸಲು ಹೆಚ್ಚು ಹೆಚ್ಚು ಬಹುಮಾನ ಕೊಡುವುದು.
೧೦. ಎಲ್ಲಾ ಸರ್ಕಾರಿ ಆದೇಶಗಳೂ ಹಿಂದಿಯಲ್ಲಿರತಕ್ಕದ್ದು ಮತ್ತು ಸೌಕರ್ಯಕ್ಕಾಗಿ ಸ್ಥಳೀಯಭಾಷೆಗೆ ತರ್ಜುಮೆ ಮಾಡಬಹುದು.
೧೧. ಈ ದೇಶದಲ್ಲಿ ನ್ಯಾಯಾಲಯದ ಆದೇಶಗಳು ಹಿಂದಿಯಲ್ಲೇ ಇರತಕ್ಕದ್ದು. ಆದೇಶಗಳನ್ನು ಸ್ಥಳೀಯ ಭಾಷೆಗೆ, ಅಗತ್ಯವಿದ್ದಲ್ಲಿ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟಿನ ನಡಾವಳಿಗಳು, ದಾಖಲೆಗಳೆಲ್ಲದರ ಸಮೇತವಾಗಿ ತರ್ಜುಮೆ ಮಾಡಿ ಲಗತ್ತಿಸಬೇಕಾಗಿರುತ್ತದೆ.
೧೨. ಭಾರತ ಸರ್ಕಾರದ ಸೇವೆಯಲ್ಲಿನ ಯಾವುದೇ ನೌಕರಿಗಾದರೂ ಹಿಂದೀ ಭಾಷೆಯಲ್ಲಿನ ಪರಿಣಿತಿಯು ಕಡ್ಡಾಯವಾಗಿ ಇರತಕ್ಕದ್ದು. ಇದಕ್ಕಾಗಿ ಕಡ್ಡಾಯವಾಗಿ ಒಂದು ಪ್ರಶ್ನೆಪತ್ರಿಕೆಯನ್ನು ಹಿಂದೀ ಭಾಷೆಯಲ್ಲಿಡಬೇಕು. ಇದು ಹಿಂದಿಯೇತರರಿಗೆ ತೊಡಕಾಗದಂತೆ ಸರಳವಾಗಿರಬೇಕು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಸಾಕ್ಷರತೆಯ ಪ್ರಮಾಣ ಕೇವಲ ೧೨% ಅಂತೆ. ಆ ಕಾಲದಲ್ಲಿ ಉಳಿದ ೮೮% ಜನಕ್ಕೆ ತಮ್ಮ ನುಡಿಯೇ ಓದಲು ಬರೆಯಲು ಬರುತ್ತಿರಲಿಲ್ಲ. ಸಾಕ್ಷರತೆಯ ಪ್ರಮಾಣವೇ ಅತ್ಯಲ್ಪವಿದ್ದ ಕಾಲದಲ್ಲಿ “ತನ್ನ ತಾಯ್ನುಡಿಯನ್ನೇ ಬರೆಯಲು ಓದಲು ಆಗದವರೇ ಹೆಚ್ಚಿರುವ ನಾಡಿನಲ್ಲಿ ಒಬ್ಬನು ತನ್ನದಲ್ಲದ ಹಿಂದಿಯನ್ನು ಹೇಗೆ ಕಲಿತಾನು?” ಎನ್ನುವ ಸಹಾನುಭೂತಿಯೇ ಭಾರತ ಸರ್ಕಾರಕ್ಕಿರಲಿಲ್ಲ ಎಂದು ಗಮನಿಸಿರಿ. ಇಡೀ ವರದಿಯಲ್ಲಿ ಕಾಣುವ ವಸಾಹತುಶಾಹಿ ಮನಸ್ಥಿತಿಯನ್ನು ಗಮನಿಸಬೇಕು. ಭಾರತ ಅಂದ್ರೆ ಹಿಂದಿ. ಇಲ್ಲಿ ಹಿಂದೀ ತಿಳಿಯದೇ ಇರೋರು ಇರೋದು ದೇಶದ ಒಗ್ಗಟ್ಟಿಗೆ ಮಾರಕ ಮತ್ತು ಅದೊಂದು ದೊಡ್ಡ ಕಿರಿಕಿರಿ. ಎಲ್ಲ ಹಿಂದಿಯೇತರರೂ ಚಕಚಕಾ ಅಂತಾ ಹಿಂದೀನಾ ಕಲೀಲೇಬೇಕು. ಇಲ್ಲಾ ಅಂದ್ರೆ ನಿಮಗೆ ಕೆಲಸ ಕೊಡಲ್ಲ. ನಿಮ್ಮ ವಿಶ್ವವಿದ್ಯಾಲಯಗಳಲ್ಲಿ ಹಿಂದೀಲಿ ಕಲಿಯೋಕೆ ಅವಕಾಶ ಇರಲೇಬೇಕು. ಹೀಗೆಲ್ಲಾ ಶಿಫಾರಸ್ಸುಗಳೂ, ಕಾಯ್ದೆಗಳೂ ಆಗುತ್ತಿರುವುದು ಜನರಿಂದ, ಜನರಿಗಾಗಿ ಆಡಳಿತವೆನ್ನುವ ಒಳ್ಳೆಯ ಉದ್ದೇಶದಿಂದಲೇ ಎಂದರೆ ನಂಬಲಾದೀತೆ? ನಮ್ಮದಲ್ಲದ ಇಂಗ್ಲೀಶಿನಲ್ಲಿ ಆಡಳಿತ ನಡೆಸುವುದು ಅಪಮಾನಕರವೆಂದು ಒಕ್ಕೊರಳಿನಿಂದ ತೀರ್ಮಾನಿಸುವ ಭಾರತ ಸರ್ಕಾರ ತನ್ನದಲ್ಲದ ಹಿಂದಿಯಲ್ಲಿ, ಹಿಂದಿಯೇತರರು ಆಡಳಿತ ನಡೆಸಬೇಕೆಂದು ನಿಬಂಧನೆ ಹೇರುವುದು ವಸಾಹತುಶಾಹಿ ಮನಸ್ಥಿತಿಯಲ್ಲವೇ?

ಭಾರತದ ಏಕತೆ ಬಯಸುವವರು, ವೈವಿಧ್ಯತೆಯನ್ನು ಶಾಪವೆಂದು ಬಗೆದು ಅಂತಹ ವೈವಿಧ್ಯತೆಯನ್ನು ಹೆಜ್ಜೆಹೆಜ್ಜೆಗೂ ಅಳಿಸಬೇಕೆಂಬ ಮನಸ್ಥಿತಿಯ ಪ್ರತಿಬಿಂಬವಾದ ಈ ಕಥೆಯ ಮುಂದಿನ ಭಾಗಗಳು ಮತ್ತಷ್ಟು ಕುತೂಹಲಕಾರಿಯಾಗಿವೆ.

(ಮುಂದುವರೆಯುವುದು…)
Related Posts with Thumbnails