ಇತಿಹಾಸದ ಪ್ರಾಮುಖ್ಯ

ಇತಿಹಾಸವನ್ನು ಕಡೆಗಣಿಸುವ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲಿ ಹೆಚ್ಚುತ್ತಿರುವುದು ಸರಿಯಲ್ಲ. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ "ಕರ್ನಾಟಕ ಗತವೈಭವ" ಎನ್ನುವ ಗ್ರಂಥದಲ್ಲಿ ಆ ಹೊತ್ತಿಗಾಗಲೇ ಕನ್ನಡಿಗರು ಮರೆತಿದ್ದ ವೈಭವದ ಕರ್ನಾಟಕದ ಪರಿಚಯವನ್ನು ಮಾಡಿಕೊಟ್ಟು ಇತಿಹಾಸದ ಪ್ರಾಮುಖ್ಯವನ್ನು ಒತ್ತಿ ಹೇಳುತ್ತ ಕನ್ನಡಿಗರಿಗೆ ಕೊಟ್ಟ ಕರೆಯನ್ನು ನೋಡಿ:

ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ. ಭ್ರಾಮಕ ಕಲ್ಪನೆಗಳನ್ನು ಬಿಟ್ಟು ಬಿಡೋಣ. ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕದ ಆರ್ಯಸಂಸ್ಕೃತಿಯನ್ನು ನಾವು ಉದ್ಧರಿಸದೆ ಇನ್ನಾರು ಉದ್ಧರಿಸುವವರು? ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನ ಶೂನ್ಯರು ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವಿನಿ ಮಾತ್ರೆಯನ್ನು ಹಾಕಿ ಚೇತನಗೊಳಿಸೋಣ. ನಮ್ಮ ಆಶಾವೃಕ್ಷವನ್ನು ಕೊಳೆಯಿಸಿ ಬಿಡುವಂಥ ಹುಳುಗಳನ್ನು ಕೊಲ್ಲಲು ಇತಿಹಾಸವೇ ಮದ್ದು.

ಕರ್ನಾಟಕವು ಇತಿಹಾಸದಲ್ಲಿ ಕೋಟಿಸೂರ್ಯಗಳ ಹೊಳಪಿನಿಂದ ಹೊಳೆಯುತ್ತಿತ್ತು. ಇಂದಿನ ತಮಿಳುನಾಡು, ಆಂಧ್ರಪದೇಶ, ಕೇರಳ, ಒರಿಸ್ಸಾ, ಶ್ರೀಲಂಕಾಗಳನ್ನೆಲ್ಲ ಆಳುತ್ತಿದ್ದ ವಿಜಯನಗರ ಸಾಮ್ರಾಜ್ಯದ ಕನ್ನಡಿಗ ಅರಸರನ್ನು ನೆನೆಸಿಕೊಂಡರೇ ಮೈ ಜುಂ ಎನ್ನುತ್ತದೆ ಇವತ್ತು. ಇಂಥಾ ಇತಿಹಾಸವನ್ನು ನಾವು ಮರೆತಿರುವುದರಿಂದಲೇ ಇವತ್ತಿನ ದಿನ ನಮ್ಮನ್ನು ಅನಾದಿಕಾಲದಿಂದ ತಮಿಳರು ಆಳುತ್ತಿದ್ದರು ಎಂದು ಅನೇಕ ಭಾರತೀಯರು ನಂಬಿರುವುದು. ಏನ್ ಗುರು?

ಮೋದಿ ಗೆಲುವಿನ ಚಿತ್ತಾರ

ಇತ್ತೀಚೆಗೆ ನಡೆದ ಗುಜರಾತಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಂದಾಳ್ತನದಲ್ಲಿ ಭಾಜಪ ಜಯಭೇರಿ ಬಾರಿಸಿದ್ದು ಯಾಕಪ್ಪಾ ಅಂತ ಸಕ್ಕತ್ ವಿಶ್ಲೇಷಣೆಗಳು ನಡೀತಿವೆ. ನಿಜಕ್ಕೂ ಮೋದಿ ಗೆಲುವಿನ ಒಳಗುಟ್ಟು ಏನು ಅಂತ ನೋಡ್ಮ.

ಗುಜರಾತ್, ಗುಜರಾತ್, ಗುಜರಾತ್

ಈ ಬಾರಿ ಚುನಾವಣೆಯಲ್ಲಿ ಮೋದಿ ಅವರು ಮುಖ್ಯ ಅಸ್ತ್ರವಾಗಿ ಬಳಸಿದ್ದು ಇಡೀ ಭಾರತಕ್ಕೆ ಅನ್ವಯಿಸುವ ಯಾವುದೇ ಸಿದ್ಧಾಂತವನ್ನಲ್ಲ, ಬದಲಾಗಿ ಪ್ರತ್ಯೇಕವಾಗಿ ಗುಜರಾತ್ ರಾಜ್ಯದ ಏಳಿಗೆಯನ್ನು ಮತ್ತು ಎಲ್ಲಾ ರೀತಿಯಲ್ಲೂ ಸ್ಥಳೀಯತೆಯ ಮಂತ್ರವನ್ನು. ಮೋದಿಯ ಚುನಾವಣೆ ಪ್ರಚಾರದಲ್ಲಿ ಕೇಳಿಬಂದಿದ್ದು ಬರೀ "ಗುಜರಾತ್, ಗುಜರಾತಿ".

"ಗುಜರಾತಿ ಅಸ್ಮಿತಾ" ಮತ್ತು "Vibrant Gujarat" ಎಂಬ ಘೋಷಣೆಗಳು ಗುಜರಾತಿನಲ್ಲಿ ಈ ಬಾರಿ ಭಾಜಪದ ಮೂಲಮಂತ್ರವಾಗಿದ್ದವೇ ಹೊರತು ಗುಜರಾತಿಗಳಿಗೆ ಅರ್ಥವಾಗದ ಮತ್ತು ಸಂಬಂಧ ಎಲ್ಲಿ ಅಂತ ಹುಡುಕಬೇಕಾದ "ಭಾರತೀಯ ಅಸ್ಮಿತಾ" ಅಥವಾ "Vibrant India" ಗಳಲ್ಲ. "ಭಾರತಾನ ಹಂಗ್ ಉದ್ಧಾರ ಮಾಡ್ತೀನಿ ಹಿಂಗ್ ಉದ್ಧಾರ ಮಾಡ್ತೀನಿ" ಅಂತ ಗುಜರಾತಿನಲ್ಲಿ ಎಷ್ಟು ಬಡ್ಕೊಂಡ್ರೂ ಉಪಯೋಗವಿಲ್ಲ ಅಂತ ಅರ್ಥ ಮಾಡ್ಕೊಂಡು ಗುಜರಾತಿಗೇ ತಮ್ಮ ಬದ್ಧತೆ ಇರೋದು ಅಂತ ತೋರಿಸಿಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು. ಪಕ್ಷ ರಾಷ್ಟ್ರೀಯ ಆದ್ರೂ ನಿಜವಾದ ಕೆಲಸ ಸ್ಥಳೀಯವಾಗೇ ಇರಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ನಡ್ಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು.

ನಿಜವಾದ ಏಳಿಗೆಗೆ ಮಂತ್ರ ಸ್ಥಳೀಯತೆ

ಮೋದಿ ಅವರು "2010ರ ವೇಳೆಗೆ ಗುಜರಾತ್ ವಿಶ್ವದ ಅಭಿವೃದ್ಧಿ ಹೊಂದಿರುವ ದೇಶಗಳ ಜೊತೆ ಹೆಮ್ಮೆಯಿಂದ ಸ್ಪರ್ಧೆಗೆ ಇಳಿಯಬೇಕು" ಅಂತ ಘೋಷಿಸಿದ್ದಾರೆ. ಇಲ್ಲೆಲ್ಲೂ ಮೋದಿ ಭಾರತ ಅನ್ನುತ್ತಿಲ್ಲ. ಬೇರೆ ದೇಶಗಳ ಜೊತೆಗೇ ಪೈಪೋಟಿ ಮಾಡಬೇಕಾಗಿರೋದು ಗುಜರಾತೇ ಹೊರತು ಭಾರತ ಅಲ್ಲ ಅನ್ನೋ ವೈಜ್ಞಾನಿಕ ಸಂದೇಶವನ್ನ ಕೊಟ್ಟಿದ್ದಾರೆ. ನಿಜಕ್ಕೂ ಭಾರತವನ್ನ ಜರ್ಮನಿಗೋ ಫ್ರಾನ್ಸಿಗೋ ಹೋಲಿಸೋದು ಮೂರ್ಖತನವೇ ಸರಿ.

ಅರೆ, ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಕತೆಗೆ ಮಹತ್ವ ನೀಡತೊಡಗಿತು ಅಂತ ಗಾಬರಿಯಾಗಬೇಡಿ. ಗುಜರಾತಿನ ಏಳಿಗೆಯಿಂದ ಭಾರತದ ಏಳಿಗೆ ಅನ್ನೋದನ್ನು ಮೋದಿ ಮಾತಾಡ್ತಿರೋದನ್ನು ಗಮನಿಸಿ. ಗುಜರಾತಿನ ಅಸ್ಮಿತಾ ಅನ್ನುತ್ತಾ ಗುಜರಾತಿ ಸಂಸ್ಕೃತಿಯ ಅನನ್ಯತೆ ಮತ್ತು ಸ್ವಾಭಿಮಾನದ ಉದ್ದೀಪನೆಯೊಂದಿಗೆ ಏಳಿಗೆ ಆಗೋಣ ಎನ್ನುತ್ತಿರುವುದನ್ನು ಗಮನಿಸಿ. ಇದಕ್ಕಿಂತ ಮುಖ್ಯವಾಗಿ ಇಂಥಾ ನಿಲುವಿನಿಂದ ಜಯಗಳಿಸಿದ್ದನ್ನೂ ಗಮನಿಸಿ. ಕಾರಣ ಏನೇ ಇರಲಿ, ಈ ನಿಲುವು ಸರಿಯಾದದ್ದಾಗಿದೆ ಮತ್ತು ಆ ಕಾರಣದಿಂದಲೇ ಜನರ ಮನಸ್ಸನ್ನು ತಟ್ಟಿದೆ ಅನ್ನೋದು ಮಾತ್ರ ಸತ್ಯ.

ಕನ್ನಡತನದಿಂದಲೇ ಭಾರತೀಯತೆ

ಕನ್ನಡ, ಕರ್ನಾಟಕ, ಕನ್ನಡಿಗರ ಏಳಿಗೆ ಅಂತ ಮಾತೋಡದನ್ನು ಸಂಕುಚಿತತೆ, ಪ್ರಾದೇಶಿಕತೆ, ದೇಶದ ಏಳಿಗೆಗೆ ಮಾರಕ ಅಂತೆಲ್ಲಾ ಕೊಂಕು ಮಾತಾಡೋ ಜನ ಅರ್ಥ ಮಾಡ್ಕೋಬೇಕಿರೋದು ಕೂಡಾ ಇದನ್ನೇ. ಗುಜರಾತಿನೋರು ಗುಜರಾತನ್ನು, ಕರ್ನಾಟಕದೋರು ಕರ್ನಾಟಕವನ್ನು... ಉದ್ಧಾರ ಮಾಡಿದರೆ ಸಾಕು, ಭಾರತ ತಾನೇ ತಾನಾಗಿ ಉದ್ಧಾರವಾಗುತ್ತೆ ಅಂತ ಆಲೂರು ವೆಂಕಟರಾಯರಂತಹ ಮಹನೀಯರು ಹೇಳಿದ್ದೂ ಕೂಡಾ ಇದನ್ನೇ. ಗುಜರಾತಿನ ಜನ ಗುಜರಾತಿಗಳಾಗಿ ಒಗ್ಗೂಡಿ ಏಳಿಗೆ ಹೊಂದುವುದೇ ಭಾರತದ ಏಳಿಗೆಗೆ ದಾರಿ. ಅಂತೆಯೇ ತನ್ನತನದ ಹಿರಿಮೆಯನ್ನು ಅರಿತು ನಡೆಯುವ ಮೂಲಕ ಭಾರತೀಯನಾಗಿರುವುದೇ ನಿಜವಾದ ರಾಷ್ಟ್ರೀಯತೆ. ಏನ್ ಗುರು?

ಬೆಂಗಳೂರಿನ ಚರ್ಚಿನಲ್ಲಿ ಕನ್ನಡ ಅಲ್ಲದೆ ಇನ್ನೇನಿರಬೇಕು?

ಮೊನ್ನೆಮೊನ್ನೆ ಬೆಂಗಳೂರಿನ ಒಂದು ಚರ್ಚಿಗೆ ಸಂಬಂಧಿಸಿದ ಘಟನೆ ನಡೀತು. ಕನ್ನಡನಾಡಿನಲ್ಲಿ ತಮಿಳು ಮತ್ತು ಮಲಯಾಳಂ ನಾಮಫಲಕಗಳು ಹೋಗಿ ಕನ್ನಡದವೇ ಬರಬೇಕು ಅಂತ ಹೇಳಿದ್ದಕ್ಕೆ ಕೆಲ ಪರಭಾಷಾ ಕಿಡಿಗೇಡಿಗಳ ಕುಮ್ಮಕ್ಕಿನಿಂದಾಗಿ ಒಬ್ಬ ಕನ್ನಡಿಗ ತನ್ನ ಕೈಗೆ ಕೋಳ ತೊಡಿಸಿಕೊಳ್ಳಬೇಕಾಯ್ತು.

ಒಂದಲ್ಲ ಒಂದು ನೆಪ ಮಾಡ್ಕೊಂಡು ಕನ್ನಡ ಕಡೆಗಣಿಸಿ ತಮ್ಮದೇ ಭಾಷೆಯ ಬಾವುಟ ಊರೋದು ಬೆಂಗಳೂರಿಗೆ ಬರೋ ವಲಸಿಗರಿಗೆ ವಾಡಿಕೆ ಆಗೋಗಿದೆ. ಆ ನೆಪಗಳಲ್ಲಿ ಧರ್ಮಾನೂ ಒಂದು, ಅಷ್ಟೆ. ಇದಕ್ಕೆ ಉತ್ತಮ ನಿದರ್ಶನ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಇತ್ತೀಚಿನ 25 ವರ್ಷದಿಂದ ತಲೆ ಎತ್ತಿರುವ ಅಯ್ಯಪ್ಪ, ಮುರುಗನ್, ಓಂ ಶಕ್ತಿ, ಗುರುದ್ವಾರ, ಕಾಳಿ, ಬಾಲಾಜಿ ಮಂದಿರಗಳು. ಈಗ ಈ ಗುಡ್ಡದ ಹಳ್ಳಿಯ ಚರ್ಚು ಅದೇ ಸಾಲಿಗೆ ಸೇರಿದೆ, ಅಷ್ಟೆ.

ಕರ್ನಾಟಕದ ಹಲವು ಭಾಗಗಳಲ್ಲಿ ಚರ್ಚುಗಳ ಹೆಸರನ್ನು ಮಲಯಾಳಿ ತಮಿಳು ತೆಲುಗಿನಲ್ಲಿ ಬರೆಸಲಾಗಿದೆ. ಅಲ್ಲಿನ ಪ್ರಾರ್ಥನೇನೂ ಈ ಭಾಷೆಗಳಲ್ಲಿ ಮಾಡೋ ಪರಿಪಾಠವಿದೆ. ಆದರೆ ಕನ್ನಡ ಕ್ರೈಸ್ತರು ಹೊರರಾಜ್ಯಗಳಿಗೆ ಹೋದಾಗ ಅವರಿಗೆ ಈ ಸೌಲಭ್ಯವಿದೆಯಾ? ಅವರು ಹೋದ ಕಡೆಯೆಲ್ಲಾ ಅಲ್ಲಲ್ಲೀ ಭಾಷೆಗಳಿಗೆ ಯಾಕೆ ಹೊಂದಿಕೊಳ್ಳುತ್ತಾರೆ? ಬೇರೆ ಕಡೆಯಿಂದ ಇಲ್ಲಿಗೆ ನೆಲೆಸಕ್ಕೆ ಬರೋರಿಗೆ ಈ ವಿನಿಮಯ ವಿಧಾನ ಯಾಕೆ ತಿಳಿದಿಲ್ಲ ಅನ್ನೋದು ಕನ್ನಡಿಗ ಕ್ರೈಸ್ತಮತದೋರ ಮುಂದಿರೋ ದೊಡ್ಡ ಪ್ರಶ್ನೆ. ಕನ್ನಡಿಗರು ಎಲ್ಲಿಗೆ ಹೋದರೂ, ಯಾವ ಮತದವರೇ ಆಗಿದ್ದರೂ ಎಲ್ಲೆಲ್ಲೂ ಬೇರೆ ಭಾಷೆಗಳ ಜನರಿಗಿಂತ ಕೀಳು ಅಂತ ಸಾರ್ತಿರೋ ಈ ವ್ಯವಸ್ಥೆ ಎಷ್ಟು ಸರಿ?

ಕರ್ನಾಟಕದ ಯಾವುದೇ ಧಾರ್ಮಿಕ ಸಂಸ್ಥೆಗಳಿರಲಿ ಅಲ್ಲಿನ ವ್ಯವಹಾರದಲ್ಲಿ ಕನ್ನಡಕ್ಕೆ ಆಧ್ಯತೆ ಇರಬೇಕು ಎನ್ನುವ ನೀತೀನ ಸರ್ಕಾರ ಜಾರಿಗೆ ತರಬೇಕು. ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲೇ ಈ ಸಮಸ್ಯೆ ಉದ್ಭವಿಸಿರುವುದು ಕಾಕತಾಳೀಯ! ಸಮಸ್ತ ಕ್ರೈಸ್ತ ಬಾಂಧವರಿಗೆ ಶುಭ ಕೋರುತ್ತ, ಕ್ರೈಸ್ತ ಮತ ಬೋಧಿಸೋದನ್ನ ನಿಜಕ್ಕೂ ಆಳವಾಗಿ ಅರ್ಥ ಮಾಡ್ಕೋಬೇಕಾದ್ರೆ ಅದನ್ನ ಕನ್ನಡದ ಕ್ರೈಸ್ತಮತದೋರು ಕನ್ನಡದಲ್ಲಿ ಕಲೀಬೇಕೇ ಹೊರತು ತಮಿಳಲ್ಲಾಗಲಿ ಮಲಯಾಳಿಯಲ್ಲಾಗಲಿ ತೆಲುಗಿನಲ್ಲಾಗಲಿ, ಇಂಗ್ಲೀಷಲ್ಲಾಗಲಿ ಅಲ್ಲ ಅಂತಾನೂ ಹೇಳೋಣ. ಏನ್ ಗುರು?

ಗ್ರಾಹಕನ ಭಾಷೇನೇ ಕೈಬಿಟ್ಟ ಗ್ರಾಹಕ ದಿನಾಚರಣೆ

"ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಯ ಸಂಬಂಧವಾಗಿ ಬೆಂಗಳೂರಿನಲ್ಲಿ ನಿನ್ನೆ (ಡಿಸೆಂಬರ್ 24) ಒಂದು ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದ ತುಂಬ ಗ್ರಾಹಕರ ಹಕ್ಕುಗಳ ಜಾಗೃತಿಯ ಬಗ್ಗೆ ಅನೇಕ ಗಣ್ಯರು ಮಾತಾಡುದ್ರು ಅಂತ ವರದೀಲಿ ಬರ್ದಿದಾರೆ. ಆದರೆ ಗ್ರಾಹಕನ ಭಾಷೆಗೆ ಇರೋ ಮಹತ್ವದ ಬಗ್ಗೇನೇ ಚಕಾರ ಎತ್ತದೇ ಇನ್ನೆಂಥಾ ಗ್ರಾಹಕ ಜಾಗೃತಿ ನಡೆದೀತು?


ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಆಗಬೇಕು

ಗ್ರಾಹಕರ ಹಕ್ಕುಗಳ ಬಗ್ಗೆ ನಮ್ಮ ಜನರಲ್ಲಿ ಜಾಗೃತಿ ಮತ್ತಷ್ಟು ವ್ಯಾಪಕ ಮಟ್ಟದಲ್ಲಿ ಹುಟ್ ಹಾಕ್ಬೇಕು ಅನ್ನೋದು ಈ ಸಭೆಯ ಒಮ್ಮತದ ಅಭಿಪ್ರಾಯ ಆಗಿತ್ತು. ನಗರಗಳಲ್ಲಿ ಇಂಥಾ ಜಾಗೃತಿ ಇದ್ರೂ ಕೂಡಾ ಜನ ತಲೆ ಕೆಡುಸ್ಕೋತಾ ಇಲ್ಲ, ಹಳ್ಳಿಗಳ ಕಡೆ ಇಂಥಾ ಜಾಗೃತಿಯ ಕೊರತೆ ತೀವ್ರವಾಗಿ ಇದೆ ಅನ್ನೋದನ್ನೂ ಅಲ್ಲಿ ಪ್ರಸ್ತಾಪ ಮಾಡಿದಾರೆ. ಗ್ರಾಹಕ ಹಕ್ಕುಗಳ ಬಗ್ಗೆ ನಗರ, ಹಳ್ಳಿ ಎಲ್ಲ ಕಡೆ ಜಾಗೃತಿ ಮೂಡಿಸಬೇಕು ಅನ್ನೋ ಕಾಳಜಿಯೇನೋ ಸರಿಯಿದೆ. ಆದರೆ ಜಾಹಿರಾತುಗಳು, ಅರ್ಜಿಗಳು, ಸೂಚನೆಗಳು, ಬಿಲ್ಲುಗಳು, ರಸೀತಿಗಳೂ ಸೇರಿದಂತೆ ಗ್ರಾಹಕನ ಜೊತೆ ನಡೀತಿರೋ ವ್ಯವಹಾರವೆಲ್ಲಾ ಕನ್ನಡದಲ್ಲಿ ನಡೆಯೋ ವ್ಯವಸ್ಥೆ ಮಾಡದೆ, ಸರ್ಕಾರ ಜನ ಜಾಗೃತಿ ಆಗ್ತಿಲ್ಲಾ ಅಂತ ಎಷ್ಟು ಪೇಚಾಡುದ್ರೂ ಪರಿಣಾಮ ಅಷ್ಟಕ್ಕಷ್ಟೇ ಗುರು.

ಜಾಗೃತಿ ಪರಿಣಾಮಕಾರಿ ಮಾಡೋದು ಹ್ಯಾಗೆ?

ಗ್ರಾಹಕರ ಹಕ್ಕುಗಳ ಬಗ್ಗೆ ಜನರಿಗೆ ನಾವು ಎಷ್ಟೇ ಹೇಳಿ ಕೊಟ್ರೂ, ಗ್ರಾಹಕ ಸೇವೆ ಕನ್ನಡದಲ್ಲಿ ಇಲ್ಲದೇ ಇದ್ರೆ ಅದು ಪರಿಣಾಮಕಾರಿ ಆಗಲ್ಲ. ಉದಾಹರಣೆಗೆ ಯಾವುದೋ ಒಂದು ವಸ್ತು ಕೊಂಡುಕೊಳ್ಳೋ ಗ್ರಾಹಕನಿಗೆ, ಅದರ ಮೇಲೆ ಬರೆದಿರೋ ಸೂಚನೆಗಳು ಅವನದಲ್ಲದ ಭಾಷೇಲಿ ಇರೋ ಕಾರಣದಿಂದ ಸರಿಯಾಗಿ ಅವುಗಳ್ನ ಪಾಲಿಸಕ್ಕೆ ಆಗಲಿಲ್ಲ ಅಂದ್ರೆ ಅಥವಾ ಆ ಕಾರಣಕ್ಕೇ ನಿಬಂಧನೆಗಳು ಅರ್ಥ ಆಗ್ದೆ ಇದ್ರೆ ಅದಕ್ಕೆ ಯಾರು ಹೊಣೆ? ಯಾವ್ದೋ ಅಂಗಡಿಗೆ ಹೋಗಿ ಅಲ್ಲಿ ಬರೆದಿರೋ ನಾಮಫಲಕ ಕನ್ನಡದಲ್ಲಿ ಇಲ್ಲದ ಕಾರಣಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದರೆ ಅಥ್ವಾ ಅವರ ಸೇವೆಯ ವ್ಯಾಪ್ತಿ ಅರ್ಥವಾಗದೆ ಎಡವಟ್ಟಾದ್ರೆ ಯಾರು ಹೊಣೆ?

ಭಾಷೆ ಮತ್ತು ಗ್ರಾಹಕನ ಹಕ್ಕು

ತೂಕ, ಪ್ರಮಾಣ, ಅಳತೆ ಇವೆಲ್ಲವೂ ಸರಿಯಾಗಿ ಇರಬೇಕು ಅನ್ನೋದ್ರ ಜೊತೆಜೊತೆಗೇ ಗ್ರಾಹಕನಿಗೆ ಏನೇನೆಲ್ಲಾ ಹಕ್ಕುಗಳಿವೆ, ಅವನ ಸಹಾಯಕ್ಕೆ ಏನೇನೆಲ್ಲಾ ಸಂಸ್ಥೆಗಳು, ವ್ಯವಸ್ಥೆಗಳು ಇವೆ ಅಂತೆಲ್ಲಾ ಜಾಗೃತಿ ಮೂಡಿಸಬೇಕು ಅನ್ನೋದೇನೋ ಸರಿ. ಎಲ್ಲಾ ವಸ್ತುಗಳ ಮೇಲಿನ ಸೂಚನೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು, ಅಲ್ಲಿನ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಇರಬೇಕಾದದ್ದು ಕಡ್ಡಾಯ ಆಗಬೇಕು ಗುರು. ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದನ್ನ ನಾವು ಮರೀಬಾರ್ದು ಗುರು.

ಭಾಷಾ ಆಯಾಮವಿಲ್ಲದೆ ಯಾವ ತೆರನಾದ ಜಾಗೃತಿ ಮೂಡುಸ್ತೀನಿ ಅಂತಂದ್ರೂ ಅದು ಪರಿಣಾಮಕಾರಿ ಆಗಲ್ಲ. ಇದನ್ನು ಸಂಬಂಧ ಪಟ್ಟವರು ಅರ್ಥ ಮಾಡ್ಕೋಬೇಕು. ಇಲ್ಲದಿದ್ದಲ್ಲಿ ಪ್ರತೀ ವರ್ಷ "ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಗಳು ನಡೀತಲೇ ಇರ್ತವೆ. ಗಣ್ಯರು ಜಾಗೃತಿ ಕೊರತೆ ಇದೆ ಅಂತ ಭಾಷಣ ಮಾಡ್ತಾನೇ ಇರ್ತಾರೆ. ಏನಂತೀ ಗುರು?

ಇಂಗ್ಲೀಷ್ ಬರದೇ ಇರೋರು ಕೆನರಾ ಬ್ಯಾಂಕಿಂದ ದೂರ ಇರಿ!

೨೨ ಕೋಟಿ ರೂ ವೆಚ್ಚದಲ್ಲಿ ಕರ್ನಾಟಕದ ತನ್ನ ೫೯೦೦ ಶಾಖೆಗಳಲ್ಲಿ ಹೊಸ ನಾಮಫಲಕಗಳನ್ನು ಅಳವಡಿಸಲು ನಮ್ಮ ಕೆನರಾ ಬ್ಯಾಂಕು ಸಜ್ಜಾಗುತ್ತ ಅಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವ ಬಗ್ಗೆ ೨೦ ನೇ ಡಿಸಂಬರ್ ೨೦೦೭ ರ ವಿ.ಕ. ದಲ್ಲಿದೆ ಒಂದು ಸುದ್ಧಿ.

ಮಂಗಳೂರಿನ ಅಮ್ಮೆಂಬಳ ಸುಬ್ಬರಾಯ ಪೈ ಎಂಬ ಮಹನೀಯರೊಬ್ಬರು ಬಹಳ ದೂರದೃಷ್ಟಿಯಿಟ್ಟು ೧೯೦೬ ರಲ್ಲೆ ಆರಂಭಿಸಿದ ಈ ಕೆನರಾ ಬ್ಯಾಂಕ್ ಹಣಕಾಸು ಸಂಸ್ಥೆ. ನಂತರದಲ್ಲಿ ಕನ್ನಡಿಗರೆಲ್ಲರ ಬೆಂಬಲದೊಂದಿಗೆ ಬೆಳೆದು ಇಂದು ಇಡೀ ವಿಶ್ವಕ್ಕೆ ಚಿರಪರಿಚಿತ.

ನಮ್ಮ ಕನ್ನಡಿಗರದೇ ಬ್ಯಾಂಕು ಎಂದು ನಾವು ಹೆಮ್ಮೆಯಿಂದ ಹೇಳುತ್ತಿದ್ದ ಕರ್ನಾಟಕ, ಕಾರ್ಪೋರೇಷನ್, ವಿಜಯ, ಸಿಂಡಿಕೇಟ್, ವೈಶ್ಯ ಮತ್ತು ಕೆನರಾ ಬ್ಯಾಂಕುಗಳು ನಮ್ಮೂರುಗಳಲ್ಲಿ ಕನ್ನಡಿಗರಿಗೇ ಹೆಚ್ಚು ಕೆಲಸದ ಅವಕಾಶ ಒದಗಿಸಿದ್ದವು. ಶಾಖೆಗಳೆಲ್ಲೆಡೆ ಕನ್ನಡತನ ತುಂಬಿ ತುಳುಕಿರುತ್ತಿತ್ತು. ಸಂಪೂರ್ಣ ಕನ್ನಡಮಯವಾಗಿದ್ದ ಬ್ಯಾಂಕಿನೊಳಗೆ ಕಾಲಿಟ್ಟೊಡನೆ ನಮ್ಮದೇ ಮನೆಯೊಳಗೆ ದೊರಕುವ ಸ್ವಾಗತ ನಮಗಲ್ಲಿ ಸಿಗುತ್ತಿತ್ತು. ಕನ್ನಡಿಗರ ಆಶೀರ್ವಾದದಿಂದ ಬೆಳೆದ ಈ ಬ್ಯಾಂಕುಗಳು ದೇಶದೆಲ್ಲೆಡೆ ಟಿಸಿಲೊಡೆದು ಆರ್ಥಿಕವಾಗಿ ಸಾಕಷ್ಟು ಲಾಭ ಮಾಡಿಕೊಂಡವು. ಆದರೆ ತಾವು ಬೆಳೆದಂತೆ ತಮ್ಮನ್ನು ಬೆಳೆಸಿದ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಲು ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳು ವಿಫಲವಾಗುತ್ತಿರುವುದು ವಿಪರ್ಯಾಸವಾಗಿದೆ.

ಇದರ ಜತೆಗೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ನಮ್ಮ ಬ್ಯಾಂಕಿರುವುದು ಎಂಬ ಭಾವನೆ ಮೂಡಿಸುತ್ತ ಇಂದು ಅನೇಕ ವಿದೇಶಿ ಬ್ಯಾಂಕುಗಳು ನಮ್ಮಲ್ಲಿ ಲಗ್ಗೆ ಇಟ್ಟಿವೆ. ಈ ಬ್ಯಾಂಕಿನ ಕರ್ನಾಟಕದ ಶಾಖೆಗಳಲ್ಲಿ ಕನ್ನಡಿಗ ಇಂದು ಪರಕೀಯ. ತಾವು ಬೆಳೆಯುವುದರ ಜತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಸಂಸ್ಕೃತಿಗೆ ಕಿಂಚಿತ್ತಾದರೂ ಪ್ರತ್ಯಕ್ಷವಾಗಿ ಸಹಕಾರಿಯಾಗಬೇಕಾದದ್ದು ಇಲ್ಲಿಗೆ ಬರುವ ಯಾವುದೇ ವ್ಯಾಪಾರಿಗಳ ಮನೋಧರ್ಮವಾಗಬೇಕು. ಅದರಲ್ಲೂ ಕೆನರಾ ಬ್ಯಾಂಕ್ ನಂತಹ ಸ್ಥಳೀಯ ಸಂಸ್ಥೆಗಳಿಗೆ ಅದು ಮೂಲಮಂತ್ರವಾಗಬೇಕು. ಅದೇ ಅವರ ಸ್ವಸ್ವರೂಪ ಮತ್ತು ಸ್ವವ್ಯಕ್ತಿತ್ವಕ್ಕೆ ಕೈಗನ್ನಡಿಯಾಗುವುದು. ಇವೇ ಅವರಲ್ಲಿಗೆ ಬರುವ ಗ್ರಾಹಕರು ಇದು ನಮ್ಮ ಬ್ಯಾಂಕು ಎಂದು ಗುರುತಿಸಿಕೊಳ್ಳಲು ಸಹಕಾರಿಯಾಗುವುದು. ನ್ಯಾಯಾಲಯ ನಾಮಫಲಕದ ಈ ವ್ಯವಹಾರದಲ್ಲಿ ತಾನು ಏನೂ ಹೇಳಲಿಚ್ಚಿಸುವುದಿಲ್ಲ ಎಂದು ಕೈ ತೊಳೆದುಕೊಂಡಿದೆ. ಇದು ಕೆನರಾ ಬ್ಯಾಂಕ್ ತನಗೆ ದೊರೆತ ಜಯ ಎಂದು ಭಾವಿಸಿರಬಹುದು. ಆದರೆ, ಕೆನರಾ ಬ್ಯಾಂಕ್ ನಮ್ಮ ನಾಡಿನ ತನ್ನ ಶಾಖೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡದಿರುವುದು ತನ್ನ ಅನನ್ಯತೆ ಮತ್ತು ಅಭಿನ್ನತೆಗೆ ಮಸಿಬಳಿದುಕೊಂಡತಲ್ವ ಗುರು.

ಕರ್ನಾಟಕದ ಎಲ್ಲಾ ಅಂಗಡಿ, ಮುಂಗಟ್ಟು, ವಾಣಿಜ್ಯೋದ್ದೇಶಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಬೇಕು ಅನ್ನೋ ಆದೇಶ ಇಂತಹವರ ಕಣ್ಣು ತೆರಸಬೇಕಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಕನ್ನಡಕ್ಕೆ ಅಗ್ರಸ್ಥಾನ ನೀಡಲು ಗಮನಹರಿಸಬೇಕಿದೆ. ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರುವ ಕನ್ನಡಿಗರೆಲ್ಲರೂ ಬ್ಯಾಂಕ್ ನ ಈ ನಿಲುವಿನ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ.

ಊರುಗಳ ಹೆಸರುಗಳು: ನಾವು ನಿಯಮ ಪಾಲಿಸಿದ್ದಕ್ಕೆ ಶಿಕ್ಷೆ

ಕರ್ನಾಟಕದ 13 ಊರುಗಳ ಹೆಸರನ್ನು ಇಂಗ್ಲೀಷಿನಲ್ಲಿ ಬರೆಯುವಾಗ ಕನ್ನಡಕ್ಕೆ ಆದಷ್ಟೂ ಹತ್ತಿರವಾಗೋಹಂಗೆ ಮಾಡುವುದಕ್ಕೆ ಕೇಂದ್ರದ ಮುಂದಿಟ್ಟಿರೋ ಕರ್ನಾಟಕ ಸರ್ಕಾರದ ಮನವಿ ಒಂದು ವರ್ಷದಿಂದ ಫ್ರಿಜ್ಜಲ್ಲಿ ಕೊಳೀತಿರೋದು 18ನೇ ತಾರೀಖಿನ ಹಿಂದು ಪತ್ರಿಕೆಯಲ್ಲಿ ವರದಿಯಾಗಿದೆ. 13 ಹೆಸರುಗಳಲ್ಲಿ 12ಕ್ಕೆ ಸರಿ ಅಂದಿದ್ರೂ ಬೆಳಗಾವಿ ವಿಚಾರದಲ್ಲಿ ಮಾತ್ರ ಕೇಂದ್ರ ನಕಾರಾತ್ಮಕ ನಿಲುವು ತೋರಿದೆ. ಮನ್ನಣೆ ಪಡೆಯುವ ಕ್ರಮವನ್ನು ನಿಯತ್ತಾಗಿ ಪಾಲಿಸಿದ್ದರೂ ನಮಗೆ ಮೋಸ ಆಗಿದೆ. ಆದ್ರೆ ಇಂತಹ ನಿಯಮ ಪಾಲನೆ ನಡೀದಿದ್ರೂ ಈ ಹಿಂದೆ ತಮಿಳುನಾಡಿನ, ಮಹಾರಾಷ್ಟ್ರ ಮತ್ತು ಬಂಗಾಳದ ಹೆಸರುಗಳ ಬದಲಾವಣೆ ಮಿಂಚಿನ ವೇಗದಲ್ಲಿ ಸಾಗಿತ್ತು. ಈ ವಿಷಯದಲ್ಲಿ ನಿಯಮಗಳ್ನ ಪಾಲಿಸಿದ್ದಕ್ಕೆ ಕನ್ನಡಿಗರಿಗೆ ಒಳ್ಳೆ ಫಲ ಸಿಕ್ಕ ಹಾಗಾಯ್ತು ಗುರು!

ಹೆಸರಲ್ಲೇನಿದೆ ಅಂತೀರಾ?

ನಮ್ಮ ಊರುಗಳು, ನಮ್ಮ ಬೀದಿಗಳು, ನಮ್ಮ ಮನೆಗಳು, ನಮ್ಮ ಮಕ್ಕಳು, ನಮ್ಮ ಮುಂದಿನ ಪೀಳಿಗೆ ಮತ್ತವುಗಳ ಹೆಸರುಗಳ ಮಧ್ಯೆ ನಿಕಟ ಸಂಬಂಧವಿರತ್ತೆ. ಇವುಗಳ ಮೇಲೆ ಇರ್ಬೇಕಾದ್ದು ನಮ್ಮ ಪ್ರಭಾವವೋ ಹೊರಗಿನ ದೇಶದವರ ಪ್ರಭಾವವೋ ಅಂತ ಇಲ್ಲಿ ಕಾಣಬೇಕು. ಹೆಸರುಗಳಲ್ಲಿ ಅಡಗಿರೋ ನಮ್ಮ ಭಾಷೆಯ ಬಳಕೆ ಬಹಳ ಮುಖ್ಯ, ಅದನ್ನ ನಾವು ಬಿಟ್ಟುಕೊಡ್ಬಾರ್ದು.

ನಮ್ಮೂರುಗಳನ್ನು ನಾವು ಯಾವ ಹೆಸರುಗಳಿಂದ ಕರೀತೀವೋ ಅದು ನಮ್ಮ ಮುಂದಿನ ಪೀಳಿಗೆ ಯಾವ ಸಂಪ್ರದಾಯ ಆಚರಿಸ್ತಾರೋ ಅದನ್ನ ನಿರ್ಧರಿಸತ್ತೆ. ನಮ್ಮ ಸಂಪ್ರದಾಯ/ಸಂಸ್ಕೃತಿ ಉಳೀಬೇಕು ಅಂದ್ರೆ, ಕನ್ನಡಿಗ ಕನ್ನಡಿಗನಾಗೇ ಉಳೀಬೇಕು ಅಂದ್ರೆ ಈ ಹೆಸರುಗಳು ಬದಲಾಗ್ಲೇಬೇಕು.

ಒಂದು ಊರಿನ ಹೆಸರು ಅದ್ರಲ್ಲಿ ನೆಲೆಸಿರುವ ಜನರ ಪ್ರತಿನಿಧಿ ಹೊರತು ಹೊರಗಿನೋರದಾಗೋದು ಸರಿಯಲ್ಲ. ಮೈಸೂರು ಅನ್ನೋದರ ನಿಜವಾದ ಇತಿಹಾಸ ಮಹಿಶೂರು ಅನ್ನೋದ್ರಲ್ಲಿ ಇದೆ ಹೊರತು ಮೆಸೂರು ಅನ್ನೋದ್ರಲ್ಲಿಲ್ಲ. ಹೊರಗಿನಿಂದ ಬಂದ ಬ್ರಿಟಿಷರು ಅವರಿಗೆ ನಮ್ಮೂರುಗಳ ಹೆಸರು ಹೇಳಲು ಕಷ್ಟ ಆಯ್ತು ಅಂತ ಅವಾಗ ಹೆಸ್ರನ್ನೇ ಬದಲಾಯ್ಸಿದ್ರು. ಈಗ ಅವರು ಯಾರೂ ಇಲ್ಲಿ ಉಳಿದಿಲ್ಲ. ಇನ್ನು ಏಕೆ ಅದೇ ಹಳೆ ಹೆಸರು? ಶ್ರೀರಂಗಪಟ್ಟಣ ಅನ್ನೋ ಹೆಸರಿಂದ ಅಲ್ಲಿಯ ಜನರಿಗೆ ತಿಳಿಯುವುದಾದ್ರು ಏನು, ಅದೇ ಸೆರಿಂಗಪಾಟಿನಂ ಅನ್ನೋದ್ರಿಂದ ತಿಳಿದುಬರೋದು ಏನು? ಇಂತಹ ದೊಡ್ಡ ವ್ಯತ್ಯಾಸವೇ ನಮ್ಮ ಜನರು ನಮ್ಮತನವನ್ನು ಮರೆತು ಹೋಗುವ ಹಾಗೆ ಮಾಡ್ತಿರೋದು.

ನಿಯಮ ಪಾಲಿಸಿದ್ದಕ್ಕೆ ಪಂಗನಾಮ

ಹೆಸರಿನಲ್ಲಿ ಕಂಡಿರೋ ಇಂತಹ ವ್ಯತ್ಯಾಸಗಳಿಂದ ಕನ್ನಡಿಗನಿಗೆ ತನ್ನದೇ ಆದ ನಿಜವಾದ ಇತಿಹಾಸ ತಿಳಿಯದೇ ಹೋಗಿ ತನ್ನ ನಾಡಿನಲ್ಲಿ ಬಂದು ನೆಲೆಸಿದ್ದ ಹೊರಗಿನೋರ ಮಾಹಿತಿಯೇ ಇತಿಹಾಸ ಅಂತಾಗಿದೆ. ಇದರಿಂದ ದಿನ-ನಿತ್ಯವೂ ತನ್ನ ಭಾಷೆಯ ಒಂದೊಂದು ಅಂಶ ಬೇರೆ ಭಾಷೆಗಳಿಂದ ಹೇರಿಕೆಗೀಡಾಗುತ್ತಿರೋದು ಕಂಡು ಬರ್ತಿದೆ. ನಮ್ಮ ಅಡಿಗೆ ತೊಡುಗೆಗಳಲ್ಲೂ ಇಂದು ಹೊರಗಿನೋರ ಉಚ್ಚಾರ ದೋಶದಿಂದ ಬದಲಾವಣೆಯಾಗ್ತಿದೆ. ದೋಸೆ-ದೋಸಾ, ವಡೆ-ವಡ, ಬೇಳೆ-ದಾಲ್, ಕೋಸು-ಗೋಬಿ ಆಗಿದೆ. ಹಿಂಗೇ ಉಪ್ಯೋಗವಾಗ್ತಿದ್ದ ನಮ್ಮ ಹೆಸರುಗಳೆಲ್ಲಾ ಮಾಯವಾಗ್ತಿವೆ.

ಕನ್ನಡ ನಾಡಿನಲ್ಲಿ ಸೇರೋದೇ ಸರಿ ಅಂತ ಭಾಷಾವಾರು ಪ್ರಾಂತ್ಯ ರಚನೆ ಸಮಯದಲ್ಲಿ ನಿರ್ಧಾರವಾಗಿ ನಮ್ಮ ರಾಜ್ಯಕ್ಕೆ ಬೆಳಗಾವಿ ಸೇರಿಸಿತ್ತು. ಬೆಳ್ಗಾವಿ ಅನ್ನೋ ಒಂದು ಹಳ್ಳಿಯನ್ನು ಬ್ರಿಟಿಷರು ಅಂದು ಬೆಳ್ಗಾಮ್ ಅಂತ ಕರ್ದಿದ್ರು, ಆದ್ರೆ ಇಂದೂ ಕೂಡ ಅಲ್ಲಿಯ ಜನರು ಬೆಳ್ಗಾವಿ ಅಂತ ಉಪ್ಯೋಗ ಮಾಡೋದೇ ಹೆಚ್ಚು. ಹೀಗಿರುವಾಗ ಈ ವ್ಯತ್ಯಾಸವೇಕೆ? ಬೇರೆ ರಾಜ್ಯಗಳ ಇದೇ ರೀತಿಯ ಬೇಡಿಕೆಗಳಿಗೆ ಕೂಡಲೆ ಮನ್ನಣೆ ನೀಡಿದ್ದು ನಮ್ಮ ರಾಜ್ಯಕ್ಕೆ ಮಾಡ್ತಿರೋದು ಇದು ಮಾತ್ರ ಮಲ-ತಾಯಿ ಧೋರಣೆ ಅಲ್ದೆ ಇನ್ನೇನು ಗುರು? ವ್ಯವಸ್ಥೆಗೆ ಸರಿಯಾಗಿ ಮರ್ಯಾದೆ ಕೊಟ್ಟು ಅದರ ನಿಯಮ ಪಾಲಿಸಿದಕ್ಕೆ ಕೇಂದ್ರ ಸರ್ಕಾರ ನಮಗೆ ಇಟ್ಟಿರೋ ಈ ಪಂಗನಾಮ ಕನ್ನಡಿಗರಿಗೆ ಎಲ್ಲೀ ನ್ಯಾಯ ಗುರು?!

ಕನ್ನಡಿಗರಿಂದ ಚುನಾಯಿತರಾಗಿರೋ ಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಾಯ ಕೊಟ್ಟು ಈ ಕೆಲ್ಸ ಮಿಂಚಿನ ವೇಗದಲ್ಲಿ ಮಾಡಿಸಿಕೊಡ್ಬೇಕು ಗುರು! ನಿಧಾನವಾಗಿ ಬೆಳಗಾವಿ ಇಂದ ಬೆಳ್ಗಾವ್, ಮುಂದೆ ಈಗಾಗಲೇ ಕಂಡಂತೆ ಮಂಗಳಾಪುರಂ, ಹೀಗೇ ನಮ್ಮ ಗಡಿ ಭಾಗದಿಂದ ಅಕ್ಕಪಕ್ಕದ ರಾಜ್ಯದೋರು ಒಳಬಂದು ನಮ್ಮೂರುಗಳ ಹೆಸರನ್ನು ಬದಲಾಯಿಸೋದಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿ, ಕ್ರಮೇಣ ಕನ್ನಡ ನಾಡಿನೆಲ್ಲೆಡೆ ಕನ್ನಡವೇ ಅನಿಸದ ಹೆಸರುಗಳು ತುಂಬಿಹೋಗತ್ತೆ ಗುರು! ಆ ದಿನ ನೋಡ್ಬೇಕಾ?

ಕರ್ನಾಟಕ ಪ್ರವಾಸೋದ್ಯಮ ಕನ್ನಡಿಗರಿಗೇ ಅನ್ನ ಕೊಡ್ಬೇಕು!

ಕರ್ನಾಟಕ ರಾಜ್ಯ ಸರ್ಕಾರ, ಪ್ರವಾಸೋದ್ಯಮದ ಬೆಳವಣಿಗೆಗಾಗಿ ಹೊಸ ಹೊಸ ಯೋಜನೆಗಳನ್ನುರೂಪುಸ್ತಾ ಪಕ್ಕಾ ಕಾರ್ಪೋರೇಟ್ ಆಗ್ತಿರೋ ಸುದ್ದಿ ಸಖತ್ ಖುಷಿ ತರ್ತಿದೆ . ನಿಜವಾಗ್ಲೂ ಪ್ರವಾಸೋದ್ಯಮವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿಬಿಟ್ರೆ ಕರ್ನಾಟಕ ಬೇಜಾನ್ ಉದ್ಧಾರ ಆಗಿಬಿಡುತ್ತೆ ಗುರು.

ಪ್ರವಾಸೋದ್ಯಮದ ಮಹತ್ವ


ನಮ್ಮ ಹಳಮೆ, ಹಿರಿಮೆಗಳನ್ನು ನೋಡಲು ಪ್ರಪಂಚದ ಮೂಲೆ ಮೂಲೇಲಿರೋ ಜನರನ್ನು ಆಕರ್ಷಿಸಿ ಇಲ್ಲಿಗೆ ಬರೋ ಹಾಗೆ ಮಾಡಬೇಕು. ಇದರಿಂದ ನಮ್ಮ ಜನಕ್ಕೆ ಕೆಲಸ ಸಿಗಬೇಕು. ನಮ್ಮ ಸರ್ಕಾರಕ್ಕೆ ಸಂಪತ್ತು ಹರಿದು ಬರಬೇಕು ಅನ್ನೋ ವಿಷಯಗಳನ್ನು ಸದಾ ನೆನಪಲ್ಲಿ ಇಟ್ಕೊಂಡು ಬೆಳವಣಿಗೆಯ ಹೆಜ್ಜೆಗಳನ್ನು ಇಡಬೇಕು. ಅದರ ಜೊತೆಜೊತೆಗೆ ಈ ಹೆಜ್ಜೆ ಸರಿಯಾಗಿ ಇಡ್ದೇ ಇದ್ರೆ ನಮ್ಮ ನಾಡು, ನುಡಿ, ಸಂಸ್ಕೃತಿ, ಇತಿಹಾಸ... ಎಲ್ಲದರಲ್ಲೂ ನಮ್ಮತನಾನ ಕಳ್ಕೋಬೇಕಾಗುತ್ತೆ ಅನ್ನೋದನ್ನೂ ನೆನಪಲ್ಲಿ ಇಟ್ಕೊಬೇಕು ಗುರು.

ಪ್ರವಾಸೋದ್ಯಮ ಇಲಾಖೆ ಇದನ್ನು ಗಮನಿಸಲಿ..


ಈ ಪ್ರವಾಸಿ ತಾಣಗಳ ಬೆಳವಣಿಗೆಯಲ್ಲಿ ಹೊರ ನಾಡಿನ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆಗೆ ಅವಕಾಶ ನೀಡುವಾಗ ಮೊದಲೇ ಸರಿಯಾದ ನಿಬಂಧನೆಗಳನ್ನು ಹಾಕಬೇಕು.
  1. ಪರನಾಡಿನಿಂದ ಬಂಡವಾಳ ಮಾತ್ರ ಹರಿದು ಬರಬೇಕು. ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನಗಳಲ್ಲ
  2. ಕನ್ನಡ ಮತ್ತು ಕನ್ನಡ ಸಂಸ್ಕೃತಿಗಳು ನಮ್ಮ ಪ್ರವಾಸಿ ತಾಣಗಳ ಮೂಲ ಸರಕಾಗಬೇಕು.
  3. ಪ್ರವಾಸಿ ತಾಣಗಳ ಎಲ್ಲೆಡೆ ಕನ್ನಡದ ಹೆಸರುಗಳು, ನಮ್ಮತನದ ಪ್ರತೀಕಗಳಾಗಿ ನಮ್ಮ ಉಡುಗೆ ತೊಡುಗೆಗಳು, ತಿಂಡಿ ತಿನಿಸುಗಳು, ನಮ್ಮೂರ ಶೈಲಿಯ ತಂಗುದಾಣಗಳು... ಇವುಗಳು ಇರ್ಬೇಕು.
  4. ಕನ್ನಡಿಗರಿಗೇ ಎಲ್ಲ ಕೆಲಸಗಳು ಸಿಗಬೇಕು.
  5. ಪ್ರವಾಸಿ ಮಾರ್ಗದರ್ಶಕರು, ಭಾಷಾಂತರಕಾರರ ವ್ಯವಸ್ಥೆ ಯೋಗ್ಯವಾಗಿ ನಡೆಯಬೇಕು.
  6. ದೇಶ ವಿದೇಶಗಳಲ್ಲಿ ಆಯಾ ಭಾಷೆಗಳಲ್ಲಿಯೇ ನಮ್ಮ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಬೇಕು ಆದರೆ ನಮ್ಮ ಪ್ರವಾಸಿ ತಾಣಗಳಲ್ಲಿ ಮಾತ್ರಾ ನಮ್ಮತನ ಮೆರೆದಾಡಬೇಕು.
ಕೊನೆಹನಿ : ಕನ್ನಡನಾಡಲ್ಲಿ ಇರುವಷ್ಟು ಪ್ರವಾಸಿ ತಾಣಗಳನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ನಿರುದ್ಯೋಗ ಸಮಸ್ಯೆಗೂ, ಉದ್ಯಮಶೀಲತೆಯ ಕೊರತೆ ನಿವಾರಣೆಗೂ ತಕ್ಕ ಮಟ್ಟಿಗೆ ಕೊನೆಹಾಡಲು ಸಾಧ್ಯ ಗುರು!

ಏಕೀಕರಣ : ತಿರುವು ನೀಡಿದ ಹುಬ್ಬಳ್ಳಿ ಹೋರಾಟ

ಈ ನಮ್ಮ ತಾಯಿನಾಡು ನಮಗೆ ಪುಗಸಟ್ಟೆ ಸಿಕ್ಕಿಲ್ಲ. ಇದಕ್ಕಾಗಿ ಜೈಲು ಸೇರಿದವರೂ, ಮನೆಮಠ ಗಳನ್ನು ತೊರೆದವರೂ, ಅಷ್ಟೇಕೆ ತಮ್ಮ ಜೀವವನ್ನೇ ಬಲಿಕೊಟ್ಟೋರೂ ಇದಾರೆ. ಕರ್ನಾಟಕ ಏಕೀಕರಣದ ಹೋರಾಟದ ಈ ತ್ಯಾಗ ಬಲಿದಾನಗಳ ಕಥನಗಳ ಮಾಲೆಯಲ್ಲಿ ಮಾಣಿಕ್ಯವಾಗಿ ಫಳ ಫಳಿಸುತ್ತಿರುವುದು ಹುಬ್ಬಳ್ಳಿ ಹೋರಾಟದ ಘಟನೆ.
1953ರ ಕೊನೆಯ ವಾರದಲ್ಲಿ ಹುಬ್ಬಳ್ಳಿಯ ಸಮೀಪದ ಅದರಗುಂಚಿಯ ಶಂಕರ ಗೌಡ ಪಾಟೀಲರು ಆರಂಭಿಸಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಎಂಟು ದಿನಗಳನ್ನು ದಾಟಿ ಕಾವು ಪಡೆದುಕೊಂಡಿತ್ತು. ಜನರಲ್ಲಿ ಹೋರಾಟದ ಮನೋಭಾವ ತೀವ್ರವಾಗಿ ಜಾಗೃತವಾಗಿ, ಪ್ರಜಾ ಪ್ರತಿನಿಧಿಗಳೆಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಡಲೇ ಬೇಕೆಂದು ಜನ ಒತ್ತಾಯಿಸತೊಡಗಿದ್ದರು. ಇದೇ ಸಮಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಏಪ್ರಿಲ್ 19ರಂದು ಹುಬ್ಬಳ್ಳಿಯ ಪುರಭವನದಲ್ಲಿ ಸಭೆ ನಡೆಸಲು ಮುಂದಾಯಿತು. ಆಗ ನಡೆದ ಘಟನೆ ಬಗ್ಗೆ ಏಕೀಕರಣದ ಹೋರಾಟಗಾರರಾದ ಶ್ರೀ ಏ. ಜೆ. ಮುಧೋಳರು ಹೀಗಂತಾರೆ.

1953ನೇ ಹುಬ್ಬಳ್ಳಿಯ ಘಟನೆ: ಶ್ರೀ. ಏ ಜೆ ಮುಧೋಳರ ನುಡಿಗಳಲ್ಲಿ
ಏಪ್ರಿಲ್ 19ರ ಬೆಳಗಿನಿಂದಲೇ ಹುಬ್ಬಳ್ಳಿಯ ಗುಳಕವ್ವ ಮೈದಾನದಲ್ಲಿ (ಈಗಿನ ನೆಹ್ರೂ ಸ್ಟೇಡಿಯಂ) ಜನ ಸೇರಲಾರಂಭಿಸಿದರು. ನಾಲ್ಕು ಗಂಟೆಯ ಹೊತ್ತಿಗೆ ಸುಮಾರು 25,000 ಜನ ಸೇರಿದ್ದರು. ಅವರ ಕೂಗೆಲ್ಲಾ ಒಂದೇ 'ಅವರು ರಾಜಿನಾಮೆ ಕೊಟ್ಟರೇನು?' ನಾನು ಮತ್ತು ಸಿದ್ದಪ್ಪ ಕಮ್ಮಾರ ಮುಂದೆ ಇದ್ದೆವು. ಪೊಲೀಸ್ ಬಂದೋಬಸ್ತ್ ಜೋರಾಗಿತ್ತು. ಆಗ ರೆಬೆಲೋ ಎಸ್.ಪಿ, ಕಾಂಬ್ಳಿ ಡಿ.ಎಸ್.ಪಿ ಆಗಿದ್ದರು. ಗುಳಕವ್ವನ ಕೆರೆ ಮೈದಾನದಲ್ಲೇ ಆಗ ಪ್ರಕಾಶ್ ಸರ್ಕಸ್ ನಡೀತಿತ್ತು. ಜನ ಗುದ್ಲೆಪ್ಪ ಹಳ್ಳಿಕೇರಿಯ ಜೀಪಿಗೆ ಬೆಂಕಿ ಇಟ್ಟರು. ಜನ ಟೌನ್ ಹಾಲಿನೊಳಗೆ ನುಗ್ಗಿದರು. ನಿಜಲಿಂಗಪ್ಪನವರಿಗೆ ಬಳೆ ತೊಡಿಸಿದರು. ನೇಸ್ವಿಯವರಿಗೆ ಏಟು ಬಿತ್ತು. ಜನ ಕೇಳಿದ್ದು 'ರಾಜಿನಾಮೆ ಕೊಡಿ'. ಗಲಭೆ ಹೆಚ್ಚಾದಾಗ ಪೊಲೀಸರು ಲಾಠಿ ಛಾರ್ಜ್ ಮಾಡುವುದಾಗಿ ಬೆದರಿಸಿದರು. ಜನ 'ಮಾಡಿ' ಅಂತ ಎದೆಯೊಡ್ಡಿದರು.

ಸಿಡಿದವು ಗುಂಡುಗಳು: ಹಾರಿದವು ಹುಲಿಗಳು
ಜನ ಕದಲಲಿಲ್ಲ. ಲಾಠಿ ಛಾರ್ಜ್ ಗೆ ಆಜ್ಞೆ ಮಾಡಲಾಯಿತು. ಆಗ ಪ್ರಕಾಶ್ ಸರ್ಕಸ್ ನಲ್ಲಿ ಹುಲಿ ಪ್ರದರ್ಶನ ನಡೆಯುತ್ತಿತ್ತು. ಗಲಭೆಯಲ್ಲಿ ಎರಡು ಹುಲಿಗಳೂ ಹೊರಬಿದ್ದವು. ಇಲ್ಲಿ ಜನರ ಗಲಭೆ. ಜನರೂ ಪೊಲೀಸರ ವಿರುದ್ಧ ತಿರುಗಿ ಬಿದ್ದು ಕಲ್ಲು ತೂರಾಟ ಆರಂಭವಾಯಿತು. ಟೌನ್ ಹಾಲ್ ತುಂಬಾ ಕಲ್ಲು ಬಿದ್ದವು. ಲಾಠೀ ಛಾರ್ಜ್ ಆರಂಭವಾಗುತ್ತಿದ್ದಂತೆಯೇ ಹೆದರಿದ ಜನ ಗುಳಕವ್ವ ಕೆರೆಯ ಒಂದು ಅಂಚಿಗಿದ್ದ ದೊಡ್ಡ ಚರಂಡಿಯನ್ನು ದಾಟಿ ಮರಾಟ ಗಲ್ಲಿಯತ್ತ ಓಡಿದರು. ಗಲಭೆ ಇನ್ನೂ ಮುಂದುವರೆದೇ ಇತ್ತು.
ಆಗ ಪೊಲೀಸರು ಗೋಲಿಬಾರ್ ಗೆ ಆದೇಶ ನೀಡಿದರು. ಗುದ್ಲೆಪ್ಪನವರ ಜೀಪಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ಫೈರ್ ಎಂಜಿನ್ ಮೇಲೂ ಜನ ದಾಳಿ ಮಾಡಿದರು.
ಹನ್ನೆರಡು ಗಂಟೆಯವರೆಗೂ ಗಲಭೆ ನಡೆಯಿತು. ಬೆಳಗಿನ ಜಾವ 4 ಗಂಟೆಗೆ ನಮ್ಮನ್ನೆಲ್ಲಾ ಹಿಡಿದರು. ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿಗೆ ಬಂತು. ಹುಬ್ಬಳ್ಳಿಯ ಗೋಲಿಬಾರ್ ಕಟ್ಟಲೆ ಎಂದೇ ಪ್ರಸಿದ್ಧವಾದ ಅದು ಮೂರುವರೆ ವರ್ಷ ಕೋರ್ಟಿನಲ್ಲಿ ನಡೆಯಿತು. ಅದರಲ್ಲಿ ಮುದ್ದೇಮಾಲು ಐದುಗಾಡಿ ಚಪ್ಪಲಿಗಳು ಮತ್ತು ಬೂಟುಗಳು. ಇವೆಲ್ಲಾ ಗಲಭೆ ಸಮಯದಲ್ಲಿ ಮೈದಾನದಲ್ಲಿ ಬಿದ್ದಿದ್ದು ನಂತರ ಸಂಗ್ರಹಿಸಲ್ಪಟ್ಟವುಗಳು.....

ಕೇಸು ವಜಾ ಆದದ್ದು ಹೀಗೆ...
ವಿಚಾರಣೆಯ ಸಮಯದಲ್ಲಿ ಉಚಿತವಾಗಿ ನಮ್ಮ ಪರವಾಗಿ ವಾದ ಮಾಡಿದ ಎಸ್. ಆರ್. ಬೊಮ್ಮಾಯಿಯವರ ಜಾಣತನದಿಂದಾಗಿ ಈ ಕೇಸು ಬಿದ್ದು ಹೋಯಿತು. ವಿಚಾರಣೆಗಾಗಿ ನಮ್ಮ ಒತ್ತಾಯದ ನಂತರ ಮುಂದಿನ ಬಾರಿ ನಿಜಲಿಂಗಪ್ಪನವರು ಬಂದರು. ವಿಚಾರಣೆಯ ಸಂದರ್ಭದಲ್ಲಿ ಮುದ್ದೇಮಾಲಾಗಿದ್ದ ಚಪ್ಪಲಿ ರಾಶಿಯನ್ನು ತೋರಿಸಿ 'ತಮಗೆ ಏಟು ಬಿದ್ದ ಚಪ್ಪಲಿಯನ್ನು ಗುರುತಿಸಲು' ನಿಜಲಿಂಗಪ್ಪನವರಿಗೆ ಕೇಳಲಾಯಿತು.ಅವರು ಗುರುತಿಸಲು ಸಾಧ್ಯವಿಲ್ಲ ಅಂದರು. ಜೀಪಿಗೆ ಬೆಂಕಿ ಇಟ್ಟವರನ್ನು ಗುದ್ಲೆಪ್ಪನವರಿಗೂ ಗುರುತಿಸಲಾಗಲಿಲ್ಲ. ಕೊನೆಗೆ ನಮ್ಮ ಮೇಲೆ ಯಾವ ಆರೋಪಗಳನ್ನೂ ಸಿದ್ಧಪಡಿಸಲಾಗದೆ , ಬಿಡುಗಡೆ ಮಾಡಿದರು.

ಕರ್ನಾಟಕ ಏಕೀಕರಣ ಇತಿಹಾಸ: ಡಾ. ಎಚ್. ಎಸ್. ಗೋಪಾಲ ರಾವ್
ನವಕರ್ನಾಟಕ ಪ್ರಕಾಶನದ ಈ ಪುಸ್ತಕದ ತುಂಬ ಇಂತಹ ಅನೇಕ ರೋಮಾಂಚಕಾರಿ ಸಂಗತಿಗಳು ಇವೆ. ನಮ್ಮ ನಾಡು ನಮಗೆ ಪುಗಸಟ್ಟೆ ಸಿಕ್ಕಿಲ್ಲ. ಕನ್ನಡಿಗರ ಇತಿಹಾಸದ ಪುಸ್ತಕ ಸ್ವಾಭಿಮಾನಿಗಳ, ಮಹಾ ಸಾಮ್ರಾಜ್ಯಗಳ, ಸಾಹಸದ ಪುಟಗಳಿಂದ ಕಂಗೊಳಿಸುತ್ತಿದ್ದರೆ ಆ ಇತಿಹಾಸ ಕಥನದ ರಕ್ಷಾಪುಟವಾಗಿಇಂತಹ ತ್ಯಾಗ ಬಲಿದಾನಗಳ ಕಥೆ ಇವೆ. ಈ ಹೊತ್ತಿಗೆಯನ್ನು ತಪ್ಪದೆ ಓದಿ... ಇಂದೇ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೀಳರಿಮೆ ರೋಗ!

ನಾಮಫಲಕಗಳಲ್ಲಿ ಕನ್ನಡ ದೊಡ್ದಾಗಿ ಇರಬೇಕು ಅಂತ ಅದೇಶ ಹೊರಡ್ಸಿರೋ ಕರ್ನಾಟಕ ಸರ್ಕಾರಕ್ಕೆ ಯಾಪಾಟಿ ಕನ್ನಡ ಪರ ಕಾಳಜಿ ಐತಲ್ಲಪ್ಪಾ ಅಂತ ಬೆಂಗಳೂರಿನ ಜನವೆಲ್ಲಾ ದಂಗಾಗ್ ನಿಂತ್ಕಂಬುಟವ್ರೆ ಗುರು.
'ಬೆಂಗಳೂರು ಮಹಾನಗರ ಪಾಲಿಕೆ ಅದ್ಯಾವಾಗ ಬೃಹತ್ ಬೆಂಗಳೂರು ಮಾನಗರ ಪಾಲಿಕೆ ಆಯ್ತೋ ಏನೋ ಸಿವಾ, ಗರ ಬಡ್ಕೊಂಬುಟೈತೆ ಅದ್ಕೆ. ಗಾಳಿ ಮೆಟ್ಕೊಂಡ್ ಬುಟೈತೆ ಅದ್ಕೆ . ರಸ್ತೆ ಬದೀನಾಗೆ ಗಿಡಾ ನೆಟ್ಟು ಅದಕ್ಕೊಂದು ಬೇಲಿ ಕಟ್ಸೋ ಪಾಲಿಕೆ ಆ ಬೇಲಿ ಮ್ಯಾಗೆಲ್ಲಾ ಟುಸ್ಸು ಪುಸ್ಸು ಅಂತ ಇಂಗ್ಲೀಸ್ ನಾಗ್ ಬರ್ದಿರೋದ್ನ ಒಸಿ ನೀನೂ ನೋಡು ಗುರು' ಅಂತ ಕಂಡ್ ಕಂಡವರ್ಗೆಲ್ಲಾ ಕರ್ದೂ ಕರ್ದೂ ತೋರುಸ್ತವ್ರೆ ಗುರು.

ಇಂಗ್ಲೀಸು ಇಂಟರ್ ನ್ಯಾಸನಲ್ ...

ನಮ್ ಬೆಂಗಳೂರು ಬರೀ ಬಾರತ ಅಲ್ಲಾ, ಇಡೀ ಪರ್ಪಂಚದಾಗೆಲ್ಲಾ ಹೆಸರಾಗಿರೋ 'ಇಂಟರ್ ನ್ಯಾಸನಲ್ ಸಿಟಿ'. ಇಲ್ಲಿ ಬೇರೆ ಬೇರೆ ಭಾಷೆಯೋರು, ಬೇರೆ ಬೇರೆ ದೇಶದೋರು ಬತ್ತಾನೆ ಇತ್ತಾರೆ. ಅವ್ರುಗೆಲ್ಲಾ ಕನ್ನಡ ತಿಳ್ಯಕಿಲ್ಲಾ, ಅದ್ಕೆಯಾ ಇಂಗ್ಲೀಸು ಅನ್ನೋ ಸಿಖಾಮಣಿಗಳಿಗೆ ಇಲ್ಲದೆ ನೋಡಿ ಉತ್ರ.

ನಮ್ಮೂರಿನ ಯವಸ್ತೆ ನಮಗೋಸ್ಕರ ಇರ್ಬೇಕು ಗುರು..

ಇಡೀ ಬಾರತದಾಗೆ ಪ್ರವಾಸಿಗಳು ಅತಿ ಎಚ್ಚು ಬರೋ ರಾಜ್ಯಗಳಲ್ಲಿ ದೊಡ್ ಹೆಸ್ರು ರಾಜಸ್ತಾನದ್ದು ಗುರು. ಅಲ್ಲಿ ದೊಡ್ ಪಟ್ಣ ಅಂದ್ರೆ ಜೈಪುರ. ಅಲ್ಲೂ ಒಂದು ನಗರ ಪಾಲಿಕೆ ಐತೆ. ಅವ್ರೂ ಗಿಡ ನೆಡ್ತಾರೆ, ಅವ್ರೂ ಅದಕ್ಕೆ ಬೇಲಿ ಕಟ್ತಾರೆ. ಆದ್ರೆ ಆ ಬೇಲಿ ಮ್ಯಾಗೆ ತಮ್ಮ ಬಾಸೇಲೆ ಬರ್ಕೊಳಕ್ಕೆ ಮಾತ್ರಾ ಒಂಚೂರು ನಾಚ್ಕೆ ಇಲ್ಲ ಗುರು ಅವ್ರಿಗೆ.
ಯಾರಾನಾ ಇದ್ಯಾಕ್ಲಾ ಇಂಗೇ ಅಂತ ಕೇಳುದ್ರೆ 'ಅಲ್ಲಾ ಪರದೇಸಿಗಳು ಇಲ್ಲಿಗ್ ಬರೋದು ರಾಜಸ್ತಾನ ನೋಡಕ್ಕೆ. ಇಲ್ಲೂ ಅವ್ರುಗಳ ಕಣ್ಣಿಗೆ ಇಂಗ್ಲೀಸೇ ರಾಚುದ್ರೆ ಅದ್ಯಾಕ್ ಇಲ್ಲಿಗ್ ಬತ್ತಾರೆ, ಇಂಗ್ಲೇಂಡ್ ಗೆ ಓಯ್ತಾರೆ ಅಷ್ಟೆಯಾ' ಅಂತ ತಮ್ ರಾಜ್ಯದ ಪ್ರವಾಸೋದ್ಯಮದ ಯಶಸ್ಸಿನ ಗುಟ್ಟನ್ನೇ ಬಿಚ್ಚಿಡ್ತಾರೆ. ಅಸ್ಟೇ ಅಲ್ಲಾ, 'ನಮ್ಮೂರಾಗ್ ನಮ್ ಬಾಸೆ ಬಳುಸೋದು ನಮ್ ಜನಕ್ ಅರ್ತ ಆಗ್ಲಿ ಅಂತ ಅಲ್ವಾ? ನಮ್ಮೂರಿನ ಯವಸ್ತೆಗಳೆಲ್ಲಾ ಇರೋದು ನಮ್ ಜನಕ್ಕೆ ಅನುಕೂಲ ಮಾಡ್ಕೊಡ್ಲಿ ಅಂತಲ್ವಾ, ಇದುನ್ ಬುಟ್ಟು ಅದ್ಯಾವ್ ಮಂಗ ನನ್ ಮಗ ಬೇರೆ ಬಾಸೆ ಆಕ್ತಾನೆ' ಅಂತ ಕೇಳ್ತಾರೆ ಗುರು.

ಈ ಕಡೆ ನಮ್ ಬೆಂಗ್ಳೂರಿನ ಜನ ಎಲ್ಲಾ 'ಅಲ್ಲಾ ಸಾಮಿ, ಕರ್ನಾಟಕದ ರಾಜಧಾನೀಲೆ ಕನ್ನಡ ಇಲ್ದಂಗಾದ್ರೆ ಇನ್ನೆಲ್ ತಾನೆ ಉಳ್ದೀತು 'ಅಂತ ಮಾತಾಡ್ಕೋತಾ ಔವ್ರೆ ಗುರು. ಇದೆಲ್ಲಾ ನಮ್ಮ ಮಾನಗರ ಪಾಲಿಕೆಗೆ ಅದ್ಯಾವಾಗ್ ತಿಳೀತದೋ, ಕನ್ನಡ ಬಳ್ಸೋದಕ್ಕೆ ಇರೋ ಕೀಳರಿಮೆ ರೋಗಾ ಅದ್ಯಾವಾಗ ಬಿಟ್ ಹೋಯ್ತದೋ ಅಂತ ತುದಿಗಾಲಲ್ಲಿ ಕಾಯ್ಕಂಡ್ ನಿಂತವ್ರೆ ಗುರು.

ಸುಖ ಪಯಣ : ಒಳಿತಾಗಲಿ - ಅನ್ನೋಕೇನು ಧಾಡಿ?

ಹಜ್ ಯಾತ್ರೆಗೆ ಕರ್ನಾಟಕದಿಂದ್ಲೂ ಜನ ಹೋಗ್ತಾರೆ. ಆದ್ರೆ ನಮ್ಮ ಸರ್ಕಾರ ಇವರೆಲ್ಲಾ ಕನ್ನಡದವರು ಅನ್ನೋದ್ನ ಅದ್ಯಾಕೊ ಮರೆತಂಗಿದೆ.
ಇವರ ಪ್ರಯಾಣ ಸುಖವಾಗಿರಲಿ ಅಂತ ಶುಭ ಕೋರಿ ಬೀಳ್ಕೊಡೊ ವಿಚಾರದಾಗೆ ನಮ್ ಘನ ರಾಜ್ಯ ಸರ್ಕಾರ ಹೆಂಗ್ ನಡ್ಕೋತಾ ಇದೆ ಒಸಿ ನೋಡು ಗುರು.
ಬೆಂಗಳೂರು ವಿಮಾನ ನಿಲ್ದಾಣದ ಬಾಗಿಲಲ್ಲಿ ಇರೋ ಹಜ್ ಯಾತ್ರೆಗೆ ಶುಭ ಕೋರುತ್ತಿರುವ, ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಫಲಕದಲ್ಲಿ ನಮ್ಮ ರಾಜ್ಯ ಸರ್ಕಾರ ಆಡಳಿತದಲ್ಲಿ ಕನ್ನಡದ ಅನುಷ್ಠಾನವನ್ನು ಎಷ್ಟು ಶ್ರದ್ಧೆಯಿಂದ ಮಾಡ್ತಿದೆ ಅನ್ನೋದು ಮುಖಕ್ ಹೊಡೆದಂಗೆ ಕಾಣ್ತಿದೆ ಗುರು.
ರಾಜಕಾರಣಿಗಳ ದೊಂಬರಾಟ
ನಮ್ಮ ರಾಜಕಾರಣಿಗಳು ಹಾಕಿರೋ ಫಲಕದ ಒಂದು ಸ್ಯಾಂಪಲ್ಲನ್ನೂ ನೋಡು ಗುರು.. ಕನ್ನಡ ನಾಡಲ್ಲಿ ರಾಜಕಾರಣ ಮಾಡೊ ಈ ಜನ ಈ ನೆಲ, ಇಲ್ಲಿನ ಭಾಷೆಗಳಿಗೆ ಪೂರಕವಾಗಿ ಬದುಕೋ ಬದಲಾಗಿ, ನಮ್ಮ ನುಡಿಯನ್ನೇ ಕಡೆಗಣಿಸೋದು ಯಾವ ತರಹದ ನಾಡದ್ರೋಹಕ್ಕೂ ಕಡಿಮೆಯಿಲ್ಲ. ಇದು ಯಾವುದೋ ಒಂದು ಪಕ್ಷಕ್ಕೆ ಮಾತ್ರಾ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳಲ್ಲೂ ಈ ಚಾಳಿ ಇರೋದು ನಮ್ಮ ನಾಡಿಗೆ ತಗುಲಿರೋ ಶಾಪ. ಇಂಥ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಬಗ್ಗೆ ನಾಡಿಗರೆಲ್ಲಾ ಎಚ್ಚರಗೊಳ್ಳಬೇಕಿದೆ ಗುರು.

ಮುಸ್ಲಿಮರೂ ಕನ್ನಡಿಗರೇ...
ಕನ್ನಡ ನಾಡಲ್ಲೇ ಹುಟ್ಟಿ, ಬೆಳೆದೂ, ಬದುಕ್ತಿರೋ ಮುಸ್ಲಿಮರೆಲ್ಲಾ ಕನ್ನಡದವರೇ ಆಗಿದ್ದಾಗ ಮುಸ್ಲಿಮರೆಲ್ಲ ಕನ್ನಡಿಗರಲ್ಲ ಅನ್ನೋ ರೀತಿ ಸರ್ಕಾರವೇ ನಡ್ಕೊಳ್ಳೋದು ತಪ್ಪು ಗುರು. ಇಲ್ಲಿ ಕನ್ನಡ ಬರದೇ ಇರೋ ಮುಸ್ಲಿಮರು ಭಾಳಾ ಕಮ್ಮಿ. ಹಾಗೆ ಕನ್ನಡ ಕಲೀದಿದ್ರೆ ಅದಕ್ಕೆ ಕಾರಣವೇ ಸರ್ಕಾರದ ಇಂಥಾ ನಡವಳಿಕೆಗಳು ಗುರು. ಒಟ್ನಲ್ಲಿ ಕನ್ನಡನಾಡಿನ ಮುಸ್ಲಿಮರಿಗೆಲ್ಲಾ ನಮ್ಮ ಸರ್ಕಾರವೇ 'ನೀವು ಕರ್ನಾಟಕದಲ್ಲಿ ಬದುಕೋದಕ್ಕೆ ಕನ್ನಡ ಕಲಿತುಕೊಳ್ಳೋ ಅಗತ್ಯ ಇಲ್ಲ' ಅಂತ ಸಾರಲಿಕ್ಕೆ ಹೊರ್ಟಿರೋದು ತಪ್ಪು ಗುರು.
ಸರ್ಕಾರ ಪ್ರತ್ಯೇಕತೆಗೆ ಪ್ರೋತ್ಸಾಹ ಕೊಡ್ದೆ ಮುಖ್ಯವಾಹಿನಿಗೆ ತರ್ಬೇಕು
ಇಷ್ಟರ ಮೇಲೂ ಯಾರೋ ಕೆಲವು ಮುಸಲ್ಮಾನರು ಉರ್ದುವನ್ನೋ ಮತ್ತೊಂದನ್ನೋ ತಮ್ಮ ತಾಯಿನುಡಿ ಅಂತ ಕರ್ಕೊಂಡು ನಾನು ಕನ್ನಡದವನಲ್ಲಾ ಅಂತಂದ್ರೆ 'ಕರ್ನಾಟಕದ ಆಡಳಿತ ಭಾಷೆ ಕನ್ನಡ, ಇಲ್ಲಿ ಬದುಕಬೇಕು ಅಂದ್ರೆ ಕನ್ನಡ ಕಲೀಬೇಕಾದ್ದು ಅನಿವಾರ್ಯ. ಕಲ್ತುಕೊಳ್ಳಿ ' ಅಂತ ಸರ್ಕಾರ ಹೇಳಬೇಕಾದ್ದೇ ಸರಿ ಗುರು.
ಮುಸಲ್ಮಾನರನ್ನು ಹೀಗೆ ಉರ್ದುವಿನಲ್ಲಿ ಹರಸೋ ಮೂಲಕ ನೀವು ಕನ್ನಡಿಗರಲ್ಲಾ ಅಂತ ಸಾರೋದನ್ನು ಮೊದಲು ನಿಲ್ಲಿಸ್ಬೇಕು ಗುರು. ಇಲ್ಲಾ ಅಂದ್ರೆ ಇವತ್ತು ಹಜ್ ಯಾತ್ರಿಕರಿಗೆ ಉರ್ದುವಿನಲ್ಲಿ ಶುಭ ಕೋರೋರು ನಾಳೆ ಅಯ್ಯಪ್ಪನ ಯಾತ್ರೆಗೆ ಮಲಯಾಳದಲ್ಲಿ, ಅಮರನಾಥ ಯಾತ್ರೆಗೆ ಹಿಂದಿಯಲ್ಲಿ , ರೋಮ್ ಜಾತ್ರೆಗೆ ಇಟಲಿಯನ್ ಭಾಷೇಲೂ, ಜೆರೂಸೆಲಮ್ ಯಾತ್ರೆಗೆ ಹೀಬ್ರೂನಲ್ಲೂ ಫಲಕ ಬರೆಸಿ ಹಾಕಬೇಕಾದೀತು ಅಷ್ಟೆ. ಭಾಷೆಗೂ ಧರ್ಮಕ್ಕೂ ತಳುಕು ಹಾಕೋದು ನಮ್ಮ ನಾಡಿನ ಒಗ್ಗಟ್ಟಿಗೆ, ಏಳಿಗೆಗೆ ಮಾರಕ ಅನ್ನೋದ್ನ ನಮ್ಮ ಸರ್ಕಾರಗಳು ಅರ್ಥ ಮಾಡ್ಕೋಬೇಕು ಗುರು.
ಈಗ ನಮ್ಮ ಸರ್ಕಾರ ನಡ್ಕೋಬೇಕಾದ ರೀತಿ ಏನಾಗಿರ್ಬೇಕು ಅನ್ನೋದು ಸರಳವಾಗೇ ಇದೆ. ನಾಡಿನ ಆಡಳಿತ ಭಾಷೆ ಕನ್ನಡ ಅನ್ನೋದನ್ನು ಜಾತಿ ಧರ್ಮ ಆಚರಣೆಗಳ ನಿರ್ಬಂಧವಿಲ್ಲದೆ ಜಾರಿಗೆ ತರಬೇಕು. ಕನ್ನಡದಲ್ಲಿ ಕೆಲಸ ಮಾಡೋ ಆದೇಶಾನ ಆಡಳಿತದ ಎಲ್ಲಾ ವಿಭಾಗಗಳಿಗೂ ಪರಿಣಾಮಕಾರಿಯಾಗಿ ಜಾರಿಗೆ ತರೋ ಮನಸ್ಸು ಮಾಡಬೇಕು. ಏನಂತೀಯಾ ಗುರು?

"ಕನ್ನಡಿಗರೇ! ಎರಡನೇ ದರ್ಜೆ ನಾಗರಿಕರಾಗಲು ಒಪ್ಪಬೇಡಿ" - ಶೇಷಗಿರಿರಾವ್

ಉಡುಪೀಲಿ ನಡೀತಿರೋ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶ್ರೀ. ಪ್ರೊ. ಎಲ್.ಎಸ್. ಶೇಷಗಿರಿರಾಯರು ಕನ್ನಡಿಗರಿಗೆ ಹೇಗೆ ಕರೆ ಕೊಟ್ಟಿದಾರೆ ಅಂದ್ರೆ ಸತ್ತಂತಿರೋರಲ್ಲ, ಸತ್ತೋಗಿರೋ ಕನ್ನಡಿಗರಿಗೂ ಬಡಿದು ಎಚ್ಚರಿಸೋಹಾಗಿದೆ. ಏನು ಆ ಕರೆ ಅಂತೀರಾ? ಇದು -
ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ. ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ.

ಶೇಷಗಿರಿರಾಯರು ನುಡಿದಿರೋ ಮೇಲಿನ ಒಂದೊಂದು ಪದಾನೂ ತೂಕ ಇರೋಂಥದ್ದು ಗುರು! ಮೇಲಿನ ಹೇಳಿಕೇಲಿ ಎರಡು ಮುಖ್ಯವಾದ ಸಂದೇಶಗಳಿವೆ. ಅವು ಯಾವ್ಯಾವ ಸಂದೇಶಗಳು ಅಂತ ಒಸಿ ಬೂದ್ಗಾಜಿಟ್ಟು ನೋಡಿ ಯಂಕ ಈ ಕೆಳಗಿನ ಕಾಜಗಾನ ನಮೀಗ್ ಕಳುಸ್ದ.

ಮೊದಲನೇ ಸಂದೇಶ

"ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ." ಅನ್ನೋದೇ ಮೊದಲ ಸಂದೇಶ. ಇದರ ಅರ್ಥ ಏನೂಂದ್ರೆ -
  1. ಕನ್ನಡಿಗರ ಮೇಲೆ "ನೀವು ಎರಡನೇ ದರ್ಜೆಯ ನಾಗರಿಕರಾಗಿ" ಅಂತ ಬೋಧಿಸೋಂಥಾ ತಾರತಮ್ಯದ ವ್ಯವಸ್ಥೆ ಇವತ್ತಿನ ದಿವಸ ಇದೆ ಅಂತ ಅರ್ಥ ಮಾಡ್ಕೊಳಿ. ಅರ್ಥ ಮಾಡ್ಕೊಂಡು ಅಂತಾ ವ್ಯವಸ್ಥೆ ಹೇಳಿದ್ದನ್ನ ನೀವು ಕೇಳಬೇಡಿ.
  2. ಎರಡನೇ ದರ್ಜೆಯ ನಾಗರಿಕನ ಬದುಕು ಅಂದ್ರೆ? ಕನ್ನಡಿಗಂಗೆ ತನ್ನ ಕನ್ನಡತನವನ್ನ ಉಳಿಸಿಕೊಂಡರೆ ಅವನಿಗೆ ಕಲಿಕೆ, ಕೆಲಸ, ಮನರಂಜನೆ, ಗ್ರಾಹಕ ಸೇವೆ ಮುಂತಾದ ಪ್ರತಿಯೊಂದು ಕ್ಷೇತ್ರದಲ್ಲೂ ಅವನಿಗೆ ಇಲ್ಲಿ ಸ್ಥಾನಾನೇ ಇಲ್ಲ; ಔನು ಇವುಗಳಿಗೆ ಬೇರೆ ಒಂದು ಭಾಷೆಯ ಸಾರ್ವಭೌಮತ್ವವನ್ನ ಒಪ್ಪಿಕೊಳ್ಳಬೇಕು ಅನ್ನೋ ವ್ಯವಸ್ಥೆ ಇದೆಯಲ್ಲ, ಆ ವ್ಯವಸ್ಥೆಯಲ್ಲಿ ಅವನ ಬದುಕೇ ಎರಡನೇ ದರ್ಜೆಯ ನಾಗರಿಕನ ಬದುಕು.
  3. ಹಾಗೆಯೇ ಇಡೀ ಭಾರತಕ್ಕೇ ಇದು ಅನ್ವಯಿಸುತ್ತೆ. ಭಾರತದಲ್ಲಿ ಎಲ್ಲಿಗೆ ಹೋದರೂ ನೀವು ಎರಡನೇ ದರ್ಜೆಯೋರು ಅಂತ ಅನ್ಕೋಬೇಡಿ. ಹೀಗಂದ್ರೆ? ಇನ್ನೇನೂ ಇಲ್ಲ, ಉದಾಹರಣೆಗೆ ದಿಲ್ಲಿಗೆ ಹೋದರೆ "ನಾನು ಕೇವಲ ಕರ್ನಾಟಕದೋನು, ನನ್ನ ಭಾಷೇನ ಇಲ್ಲಿ ಕೇಳೋರು ಯಾರು?" ಅನ್ನೋ ಕೀಳರಿಮೆ ಬೇಡ ಅಂತ ಅರ್ಥ. ಇವತ್ತಿನ ದಿನ ಹಿಂದಿಯೋರಿಗೆ ಮತ್ತೆ ಹಿಂದಿಗೆ ಕರ್ನಾಟಕದಲ್ಲಿ ಯಾವ ಸೌಲತ್ತುಗಳು ಇವೆಯೋ ಅದೇ ಸೌಲತ್ತುಳು ನಿಂಗೆ ದಿಲ್ಲೀಲಿ ಸಿಗಬೇಕು.
  4. ಯಾವ ಕಾರಣಕ್ಕೂ ಎರಡನೇ ದರ್ಜೆ ನಾಗರಿಕನಾಗಲು ಒಪ್ಪಬೇಡಿ ಅಂದ್ರೆ? ಕಾರಣಗಳು ಬಹಳ ಇವೆ ಇವತ್ತಿನ ದಿನ ನಿಂಗೆ ಹಾಗೆ ಒಪ್ಪಿಕೊಳ್ಳೋಹಾಗೆ ಪ್ರೇರೇಪಿಸಕ್ಕೆ. ಪ್ರತಿಯೊಂದು ದಿಕ್ಕಿಂದಾನೂ ನಿಂಗೆ ನೀನು ಕೀಳು, ನಿನ್ನ ಭಾಷೆ ಕೀಳು, ನಿನ್ನ ನಾಡು ಕೀಳು ಅನ್ನೋ ಸಂದೇಶಗಳು ಬಹಳ ಬರ್ತಿವೆ, ಅವುಗಳಲ್ಲಿ ಯಾವ ಒಂದರಿಂದಲೂ ನೀನು ಪ್ರಭಾವಿತನಾಗಬೇಡ.
ಎರಡನೇ ಸಂದೇಶ

"ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ." ಅನ್ನೋದೇ ಎರಡನೇ ಸಂದೇಶ. ಇದರಲ್ಲಿ ಅಡಗಿರೋ ಅರ್ಥಗಳು ಹೀಗಿವೆ:
  1. ಕನ್ನಡಿಗರು ಅಂದ್ರೆ ಔರಿಂದ ಬೇಕಾದಷ್ಟು ತೆರಿಗೆ ಕಿತ್ತಿ ಭಾರತದ ಗಡೀಲಿ ಸಾಯಕ್ಕೆ ನಿಲ್ಲಿಸಿ ಹಾಕಿದ್ದು ತಿನ್ಕೊಂಡು ಬಿದ್ದಿರೋ ಅಬ್ಬೇಪಾರಿಗಳು ಅನ್ನೋ ಅಭಿಪ್ರಾಯ ಕೇಂದ್ರಕ್ಕೂ ಕೆಲ ಕನ್ನಡಿಗರಿಗೂ ಬಂದಿದೆ. ಇದು ಸರಿಯಲ್ಲ. ನಾವು ತೆರಿಗೆ ಕೊಡೋದು ಕರ್ನಾಟಕದ ಉದ್ಧಾರಕ್ಕೆ, ಕನ್ನಡಿಗನ ಉದ್ಧಾರಕ್ಕೆ, ಕನ್ನಡದ ಉದ್ಧಾರಕ್ಕೇ ಹೊರತು ಬೀದೀಲಿ ಹೋಗೋ ರಾಜ್ಯಗಳ, ಜನರ, ಭಾಷೆಗಳ ಉದ್ಧಾರಕ್ಕಲ್ಲ!
  2. ಕೇಂದ್ರ ಕೊಟ್ಟಷ್ಟು ಸಾಕು, "ಅಪ್ಪಣೆ ಬುದ್ದಿ!" ಅಂತ ಹಾಕಿದಷ್ಟು ತಿನ್ಕೊಂಡಿರೋ ಪ್ರವೃತ್ತಿ ಕನ್ನಡಿಗರಲ್ಲಿ - ಹೆಚ್ಚಾಗಿ ರಾಜಕಾರಣಿಗಳಲ್ಲಿ - ಬಂದುಬಿಟ್ಟಿದೆ. ಇದು ಸರಿಯಲ್ಲ. ನಮ್ಮ ಹಕ್ಕುಗಳ್ನ ನಾವು ಗರ್ಜಿಸಿ ಕೇಳಬೇಕು, "ಕೊಡ್ತೀರೋ ಇಲ್ಲವೋ?" ಅಂತ ಬೆದರಿಸಿ ಕೇಳಬೇಕು, "ನಾವು ತೆರಿಗೆ ಕೊಡ್ತಿರೋದು ಈ ತಾರತಮ್ಯಕ್ಕಲ್ಲ" ಅಂತ ಗದರಬೇಕು.
  3. ದೈನ್ಯತೆ. ಈ ದೈನ್ಯತೆಗೆ ಕಾರಣ ಇನ್ನೇನೂ ಅಲ್ಲ, ರಾಜಕಾರಣಿಗಳಲ್ಲಿರೋ ಹೈಕಮಾಂಡ್-ದಾಸ್ಯ, ಅಷ್ಟೇ. ಈ ಹೈಕಮಾಂಡ್-ದಾಸ್ಯ ಇರೋದ್ರಿಂದ್ಲೇ ಹಾಕಿದ್ದು ತಿನ್ಕೊಂಡು ಬಿದ್ದಿರ್ತೀನಿ ಅನ್ನೋ ಪ್ರವೃತ್ತಿ ಕರ್ನಾಟಕದ ರಾಜಕಾರಣಿಗಳಿಗೆ ಇರೋದು.
ಒಟ್ಟಿನಲ್ಲಿ ಸಕ್ಕತ್ ಗಟ್ಟಿಯಾದ ಸಂದೇಶ ಕೊಟ್ಟಿದಾರೆ! ಅರ್ಥ ಮಾಡ್ಕೋಬೇಕು, ಜಾರಿಗೆ ತರಬೇಕು, ಅಷ್ಟೆ. ಏನ್ ಗುರು?

"ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ" - ಅನಕೃ

"ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೆ - ಕವಿ ಮಾನವೀಯತೆಯ ಪ್ರವಾದಿ" ಎಂಬ ಕರೆ ನೀಡಿ, ತಮ್ಮ ನಡೆ ನುಡಿ ಆಚಾರ ವಿಚಾರ ಕೃತಿ ಭಾಷಣಗಳೆಲ್ಲದರಲ್ಲೂ ಸಹಜಧರ್ಮ, ಮನುಷ್ಯತ್ವ ಮಾನವೀಯತೆಯನ್ನು ಎತ್ತಿ ಹಿಡಿದ ಕನ್ನಡ ಸಾಹಿತ್ಯ ಲೋಕದ ಸವ್ಯಸಾಚಿ, ಕಾದಂಬರಿ ಸಾರ್ವಭೌಮ 'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್' ಕನ್ನಡ ಕುಲಕೋಟಿಗೆ ಅನಕೃ ಎಂದೇ ಚಿರಪರಿಚಿತರು. ಇದು ಅಚ್ಚ ಕನ್ನಡ ಕಾರ್ಯಕರ್ತರಾಗಿದ್ದ ಅನಕೃ ಅವರ ಪರಿಚಯಿಸುವ ಒಂದು ಕಿರು ಪ್ರಯತ್ನ ಮಾತ್ರ. ಸಮುದ್ರದಿಂದ ಒಂದು ಬೊಗಸೆ ನೀರು ಪಡೆದಂತೆ.

ಈ ಶತಮಾನದ ಕರ್ನಾಟಕದ ಪವಾಡಪುರುಷ

ಅನಕೃ (ಜನನ: ಕೋಲಾರ ಮೇ ೯, ೧೯೦೮, ಮರಣ: ಬೆಂಗಳೂರು ಜುಲೈ ೮, ೧೯೭೧) ಈ ಶತಮಾನದ ಕರ್ನಾಟಕದ ಪವಾಡಪುರುಷ. ಅವರು ರಚಿಸಿದ ಸಾಹಿತ್ಯ ೮೦,೦೦೦ ಪುಟಕ್ಕೂ ಮೇಲ್ಪಟ್ಟಿದ್ದು; ಮಾಡಿದ ಭಾಷಣಗಳು ಲೆಕ್ಕವಿಲ್ಲದಷ್ಟು; ಅವರಿಂದ ಪ್ರಭಾವಿತರಾದವರು, ಮುಂದೆ ಬಂದವರು ಅನೇಕರು; ಅವರ ಕನ್ನಡ ಸೇವೆ, ಕೃತಜ್ಞನಾದ ಕನ್ನಡಿಗ ಋಣ ತೀರಿಸಲಾರದಷ್ಟು. ಅನಕೃ ತಮ್ಮ ಜೀವಿತಾವಧಿಯಲ್ಲಿ ತಮ್ಮ ಪ್ರತಿಭೆ, ಸಾಹಿತ್ಯ, ಕನ್ನಡಪ್ರೇಮ, ಮಾತುಗಾರಿಕೆಗಳಿಂದ ಕನ್ನಡಿಗರ ಮೇಲೆ ಮೋಡಿ ಮಾಡಿದ್ದರು. ೧೯೩೦ ರಿಂದ ೧೯೭೧ ರವರೆಗೆ, ನಾಲ್ಕು ದಶಕಗಳ ಕಾಲ ಅನಕೃ ಕರ್ನಾಟಕದ ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಿಕ್ತ ದೊರೆ ಯಂತೆ ಜೀವಿಸಿದ್ದರು.

ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಹುಟ್ಟು ಸೇನಾನಿ, ನಿಷ್ಕಪಟ ದಂಗೆಕೋರ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಪ್ರಗತಿಶೀಲತೆಯ ಅಧ್ವರ್ಯು, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ ಅನಕೃ ಅವರನ್ನು ಇಂದಿನ ಕನ್ನಡ ಪೀಳಿಗೆ ಬಹುವಾಗಿ ಗುರುತಿಸುವುದು ಕನ್ನಡ ಚಳುವಳಿಯ ಪಿತಾಮಹರೆಂದೆ!

ಇಂದು ಏಕೀಕೃತ ಕರ್ನಾಟಕದ ಭಾವೈಕ್ಯಪಥದಲ್ಲಿ ಕನ್ನಡಿಗರು ಸಾಗುತ್ತಿದ್ದರೆ; ಅವರಲ್ಲಿ ಬಹುಕಾಲ ಸುಪ್ತವಾಗಿದ್ದ ಸ್ವಾಭಿಮಾನ ಜಾಗೃತವಾಗಿದ್ದರೆ; ಕನ್ನಡ ವಾಚಕರು ಅಗಣಿತವಾಗಿ ಬೆಳೆದಿದ್ದರೆ, ಕನ್ನಡ ಲೇಖಕರು ಗಣನೀಯವಾಗಿ ಹೆಚ್ಚಿದ್ದರೆ, ಕನ್ನಡ ನಾಡಿನ ಕರ್ನಾಟಕ ಸಂಗೀತಗಾರರು ನೆಮ್ಮದಿಯಿಂದಿದ್ದರೆ, ಕನ್ನಡ ಚಲನಚಿತ್ರ ಕಲಾವಿದರು ವೈಭವ ಜೀವನ ನಡೆಸುತ್ತಿದ್ದರೆ; ಒಟ್ಟಿನಲ್ಲಿ ಕನ್ನಡ ಕನ್ನಡಿಗರು ಭಾರತದ-ಅಷ್ಟೇಕೆ ಜಗತ್ತಿನ ದೃಷ್ಟಿಯಲ್ಲಿದ್ದರೆ ಇದಕ್ಕೆಲ್ಲ ಅನಕೃ ಬಹುಮಟ್ಟಿಗೆ ಕಾರಣರೆಂದರೆ ಅತ್ಯುಕ್ತಿಯಲ್ಲ.

ಅನಕೃ ಎಂಬ ಆ ಮೂರಕ್ಷರ ಕನ್ನಡಿಗರ ಬೀಜಮಂತ್ರ. ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಗಳ ಮೇಲೆ ಅಭಿಯೋಗ ನಡೆದಾಗಲೆಲ್ಲ ಸೂಕ್ತ ಉತ್ತರಕ್ಕಾಗಿ, ಇಡೀ ಕನ್ನಡನಾಡು ಅನಕೃ ಅವರ ಪ್ರತಿಕ್ರಿಯೆಗಾಗಿ ಎದುರುನೋಡುತ್ತಿತ್ತು. ಕನ್ನಡ ಹಾಗು ಕರ್ನಾಟಕಗಳ ಶ್ರೇಷ್ಠ ವಕ್ತಾರರಾಗಿದ್ದ ಕೃಷ್ಣರಾಯರು ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ, ಕರ್ನಾಟಕದ ಸಂಸ್ಕೃತಿಯೊಂದಿಗೆ ಪ್ರೇಮದ ತಾದ್ಯಾತ್ಮ್ಯ ಹೊಂದಿ ಹಾಲಿನಲ್ಲಿ ಸಕ್ಕರೆ ಬೆರೆತಂಥ ಸಮೀಕರಣ ಸಾಧಿಸಿದ್ದರು.

ಕನ್ನಡತನದ ಅಳಿವು-ಉಳಿವಿಗಾಗಿ ಜಾತಿ-ಮತ-ಧರ್ಮ-ದೇವರನ್ನು ತೊರೆದು ಕನ್ನಡತ್ವವನ್ನು ಅಪ್ಪಿ ಹಿಡಿಯಲು ಅಂದೇ ಕರೆನೀಡಿದ್ದವರು ಅನಕೃ. ಅವರ ಅಚ್ಚ ಕನ್ನಡ ಪ್ರೇಮ ಅನೇಕ ಸಲ ಅವರ ಸ್ವಂತ ಅಣ್ಣನನ್ನೂ ಒಳಗೊಂಡಂತೆ ತಮ್ಮ ಸಮಕಾಲೀನ ಕನ್ನಡ ದಿಗ್ಗಜರನ್ನು ಎದುರು ಹಾಕಿಕೊಳ್ಳುವಂತೆ ಮಾಡಿತ್ತು.

ಕನ್ನಡಕ್ಕಾಗಿ ಕನ್ನಡ ದಿಗ್ಗಜರೊಡನೆಯೇ ಜಟಾಪಟಿ

ಕನ್ನಡ ಪ್ರೇಮಿಯಾಗಿದ್ದ ಶ್ರೀ ರಂ.ರಾ.ದಿವಾಕರರವರು ೧೯೩೯ ರಲ್ಲಿ, ಬಳ್ಳಾರಿಯಲ್ಲಿ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಕನ್ನಡದ ಕೈಂಕರ್ಯ ಮತ್ತು ಧೀಕ್ಷೆ ತೊಡುವ ಬದಲು ಹಿಂದಿ ಮೋಹಕ್ಕೆ ಬಲಿಯಾಗಿ, ಹಿಂದಿ ಪ್ರಚಾರವನ್ನು ಶುರುವಿಟ್ಟುಕೊಂಡರು.ಅಂದಿನ ಸರ್ಕಾರದ ಮೊರೆಹೊಕ್ಕು, ದೇಶದಲ್ಲೆಲ್ಲಾ ಸಂಚರಿಸಿ ಹಿಂದಿ ಪ್ರಚಾರ ಮಾಡುವುದನ್ನು ತಮ್ಮ ಧ್ಯೇಯ ಮಾಡಿಕೊಂಡರು. ಇದು ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದ್ದ ಕನ್ನಡದ ಕೆಲಸವನ್ನು ಕುಂಟಿತಗೊಳಿಸಿತ್ತು. ಅಂದು ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ನುಡಿಯ ಸಂಪಾದಕರಾಗಿದ್ದ ಅನಕೃ ಈ ಕುರಿತು ದಿವಾಕರರ ನಿಲುವನ್ನು ಖಂಡಿಸಿ ಕನ್ನಡ ನುಡಿಯಲ್ಲಿ ಲೇಖನವನ್ನು ಬರೆದರು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀ. ಅವರು ಅನಕೃ, ದಿವಾಕರರ ಕ್ಷಮೆ ಕೇಳಿ ಕನ್ನಡ ನುಡಿಯಲ್ಲಿ ಪ್ರಕಟಿಸಬೇಕೆಂದು ಪಟ್ಟು ಹಿಡಿದಾಗ ಅನಕೃ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಹೊರನಡೆದಿದ್ದರು. ಅನಕೃ ಗೆ ಆಗ ಕೇವಲ ೩೦ ವರ್ಷ. ಅಂದಿನಿಂದ ನಾನು ಕನ್ನಡದ ಹಿರಿಯರ ಕಣ್ಣಿಗೆ ಬಂಡಾಯಗಾರನಾಗಿ ಕಂಡುಬಂದೆ ಎಂದು ಅನಕೃ ತಮ್ಮ " ನನ್ನನ್ನು ನಾನೇ ಕಂಡೆ" ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಆಣ್ಣನನ್ನು ಎದುರು ಹಾಕಿಕೊಂಡ ತಮ್ಮ

ಅನಕೃ ನೇತೃತ್ವದಲ್ಲಿ ಕನ್ನಡ ಚಳವಳಿ ಎಷ್ಟೊಂದು ವ್ಯಾಪಕವಾಗಿ ಹಬ್ಬಿತೆನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಕನ್ನಡಕ್ಕೆ ಸಂಬಂಧಪಟ್ಟ ಯಾವ ಕ್ಷೇತ್ರವನ್ನೂ ತಮ್ಮ ಚಳವಳಿಯಿಂದ ಬಿಡಲಿಲ್ಲ. ಆಗ ಬೆಂಗಳೂರಿನ ಕೋಟೆ ಮೈದಾನದಲ್ಲಿ ನಡೆಯುತ್ತಿದ್ದ ಶ್ರೀರಾಮ ಸೇವಾ ಮಂಡಳಿಯ ರಾಮ ನವಮಿ ಸಂಗೀತೋತ್ಸವ ಹೆಸರುವಾಸಿ. ಆದರೆ ಅಲ್ಲಿಗೆ ಹಾಡಲು ಬರುವ ಗಾಯಕರೆಲ್ಲ ಕನ್ನಡೇತರರು. ಜತೆಗೆ ಅವರೆಲ್ಲ ಹೆಚ್ಛಾಗಿ ಹಾಡುತ್ತಿದ್ದುದು ತಮಿಳು ಮತ್ತು ತೆಲುಗು ರಚನೆಗಳನ್ನೇ. ಇದು ಅನಕೃ ಅವರನ್ನು ಕೆರಳಿಸಿತು. ಇಂಥ ದಿನ ಕೋಟೆ ಮೈದಾನದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮೀ ಕಛೇರಿ. ಸೀದಾ ಕೋಟೆ ಮೈದಾನಕ್ಕೆ ಲಗ್ಗೆ ಕಾಹಿದ ಅನಕೃ ನೇತೃತ್ವದ ದಂಡು ಪ್ರತಿಭಟನೆಯ ದನಿ ಮೊಳಗಿಸಿಯೇ ಬಿಟ್ಟಿತು. 'ಕರ್ನಾಟಕದ ಕಲಾವಿದರನ್ನೇ ಹೆಚ್ಚಾಗಿ ಕರೆಯಬೇಕು ಮತ್ತು ಕನ್ನಡ ಕೃತಿಗಳಿಗೇ ಪ್ರಾಶಸ್ತ್ಯ ಇರಬೇಕು' ಎಂದು ಅನಕೃ ಪಟ್ಟು ಹಿಡಿದರು. ಮಂಡಳಿಯೂ ಇದಕ್ಕೆ ಅಸ್ತು ಎಂದಿತು. ಅಂದಹಾಗೆ ಅನಕೃ ಹೀಗೆ ಸಿಡಿದೆದ್ದಾಗ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾಗಿದ್ದವರು ಎ.ಎನ್.ರಾಮರಾವ್. ಇವರು ಅನಕೃ ಅವರ ಸ್ವಂತ ಅಣ್ಣ! ಕನ್ನಡದ ವಿಚಾರದಲ್ಲಿ ಅನಕೃ ಯಾವ ರಾಜಿಗೂ ಸಿದ್ಧರಿರಲಿಲ್ಲ ಎನ್ನಲು ಇಷ್ಟು ಸಾಕು. (ಪುಟ ೨, ವಿಜಯ ಕರ್ನಾಟಕ, ೩ನೇ ಡಿಸಂಬರ್ ೨೦೦೭). ಈ ಸಂದರ್ಭದಲ್ಲೇ ಅನಕೃ ಅವರು ಕನ್ನಡ ಚಳವಳಿ ಸಂಯುಕ್ತ ರಂಗದ ಮಿತ್ರರ ಹೆಸರಿನಲ್ಲಿ ಕನ್ನಡ ಬಾರದವರಿಗೂ ಹಾಗು ಹೊರ ನಾಡವರಿಗೂ ನಮ್ಮ ಚಳವಳಿಯ ಧ್ಯೇಯೋದ್ದೇಶಗಳು ಪೂರ್ಣ ಮನವರಿಕೆಯಾಗಲೆಂದೇ ಇಂಗ್ಲೀಷ್‌ನಲ್ಲೊಂದು ಭಿತ್ತಿಪತ್ರ ಹೊರಡಿಸಿದರು.

ಕನ್ನಡದ ಕೆಲಸ ಮಾಡುವಾಗ ನಿನ್ನ ಸ್ವಂತದ್ದೇನಿದ್ದರೂ ಮದ್ಯೆ ತೂರಿಸಬೇಡ

ಒಮ್ಮೆ ಕನ್ನಡದ ಆಸ್ತಿ ಮಾಸ್ತಿ ಯವರೊಡನೆ ಅನಕೃ ಪರಿಷತ್ತಿನ ಕೆಲಸವೊಂದರ ಸಲುವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಂದು ಸರ್ಕಾರದಲ್ಲಿ ಹೆಸರು ಮಾಡಿದ್ದ ನಿಷ್ಠಾವಂತ ಅಧಿಕಾರಿ ಎ.ಸಿ.ದೇವೇಗೌಡ ಸಹ ಪ್ರಯಾಣಿಕರಾಗಿದ್ದರು. ಹಾಗೆಯೇ ಮಾತನಾಡುತ್ತ ಪ್ರಯಾಣಿಸುತ್ತಿದ್ದಾಗ, ಮಾಸ್ತಿಯವರು ಗೌಡರನ್ನು ತಮ್ಮ ಸ್ವಂತ ಪತ್ರಿಕೆ 'ಜೀವನ' ಕ್ಕೆ ಚಂದಾದಾರರಾಗಬೇಕಂದರು. ಆಗ ಅನಕೃ, ಮಾಸ್ತಿಯವರನ್ನು ಕುರಿತು ಹೇಳಿದ್ದು ಹೀಗೆ 'ಈಗ ನಾವು ಹೊರಟಿರುವುದು ಪರಿಷತ್ತಿನ ಕೆಲಸಕ್ಕೆ ಹೊರತು ನಮ್ಮ ಸ್ವಂತ ಕೆಲಸಕ್ಕಲ್ಲ. ಈಗ ನಾವು ಮಾಡಬೇಕಾಗಿರುವುದು ಪರಿಷತ್ತಿಗೆ ಸದಸ್ಯರನ್ನು ಕೂಡಿಸುವ ಕೆಲಸ ಮಾತ್ರ. ಅಂದು ಗೌಡರು ನಾನು 'ಜೀವನ'ಕ್ಕೂ ಚಂದಾದಾರನಾಗುತ್ತೇನೆ ಮತ್ತು ಪರಿಷತ್ತಿಗೂ ಸದಸ್ಯನಾಗುತ್ತೇನೆ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು (ಪುಟ ೩೦೩, "ಬರಹಗಾರನ ಬದುಕು", ಅನಕೃ)

"ನನಗಿರುವುದು ಒಂದೇ ಕನ್ನಡ!"

ಅನಕೃ ಪದೇ ಪದೇ ಒಂದು ವಿಷಯ ಪ್ರಸ್ತಾಪಿಸುತ್ತಿದ್ದರು: "ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ". ಈ ಮಾತುಗಳನ್ನ ಕನ್ನಡಿಗರೆಲ್ಲರೂ ತಮ್ಮ ಜೀವನದಲ್ಲಿ ಒಮ್ಮೆ ನೆನಸ್ಕೊಂಡು, ಕನ್ನಡದ ಏಳಿಗೆಗೆ ಕಿರುಬೆರಳನ್ನಾದ್ರೂ ಎತ್ತಿದ್ರೆನೇ ಕನ್ನಡಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಅನಕೃ ಅವರ ಕನ್ನಡ ಪರ ಕಾಳಜಿಗೆ ಸಾರ್ಥಕತೆ ಸಿಗೋದಲ್ವ ಗುರು!

ಮಹಾರಾಷ್ಟ್ರದ ಹಳ್ಳಿ-ಹಳ್ಳಿಗಳಲ್ಲಿ ಹರಡಿರೋ ಕನ್ನಡ!

ಕನ್ನಡಕುಲಪುರೋಹಿತ ಶ್ರೀ ಆಲೂರ ವೆಂಕಟರಾಯರು 1917ರಲ್ಲಿ ಪ್ರಕಟಿಸಿದ ತಮ್ಮ "ಕರ್ನಾಟಕ ಗತವೈಭವ" ಅನ್ನೋ ಹೊತ್ತಗೆಯಲ್ಲಿ ಇವತ್ತಿನ ಮಹಾರಾಷ್ಟ್ರದ ಇತಿಹಾಸದಲ್ಲಿ ಮಾತ್ರ ಅಲ್ಲ, ವರ್ತಮಾನದಲ್ಲೂ ಕನ್ನಡ ಎಷ್ಟು ಹರಡಿದೆ ಎನ್ನುವುದರ ಬಗ್ಗೆ ಹೀಗೆ ಬರೆಯುತ್ತಾರೆ:
ಮಹಾರಾಷ್ಟ್ರದಲ್ಲಿ ಮಾತ್ರ ಕನ್ನಡದ ಪ್ರವೇಶವಿರಲಿಲ್ಲವೆಂದು ಅನೇಕರು ಇನ್ನೂ ನಂಬುತ್ತಾರೆ. ಆದರೆ ಈ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿದ ನಮ್ಮ ಪರಮ ಸ್ನೇಹಿತರಾದ ನಾರಾಯಣ ಶ್ರೀನಿವಾಸ ರಾಜಪುರೋಹಿತ ಇವರು ’ಜ್ಞಾನೇಶ್ವರಿ’ ಯಲ್ಲಿ ಕನ್ನಡ ಶಬ್ದಗಳು ತುಂಬಿರುತ್ತವೆಂದೂ, ಗೋವೆಯಲ್ಲಿಯ ಲೆಕ್ಕಪತ್ರಗಳು ಮೊನ್ನೆ ಮೊನ್ನಿನ ವರೆಗೆ ಕನ್ನಡದಲ್ಲಿಯೆ ಇದ್ದುವೆಂದೂ, ಪಂಢರಪುರದ ಶ್ರೀವಿಟ್ಠಲನು ಮುಖ್ಯವಾಗಿ ಕನ್ನಡಿಗರ ದೇವತೆಯೇ ಎಂದೂ, ಪಂಢರಪುರದ ಸುತ್ತಲಿನ ಪ್ರದೇಶವು ಕನ್ನಡವೇ ಎಂದೂ, ಈಗ ೨೭ ವರ್ಷಗಳ ಕೆಳಗೆಯೇ ಮಾರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಪ್ರಸಿದ್ಧ "ಕೇಸರೀ" ಪತ್ರದಲ್ಲಿ "ಮಹಾರಾಷ್ಟ್ರ ವ ಕರ್ನಾಟಕ" ಎಂಬ ಲೇಖನಮಾಲೆಯಲ್ಲಿ ಸಪ್ರಮಾಣವಾಗಿ ಸಾಧಿಸಿರುವರು.

ಆದರೆ ಇದೇ ವಿಷಯವನ್ನು ವ್ಯಾಸಂಗ ಮಾಡುತ್ತಿರುವಾಗ ನಮಗೆ ಗೊತ್ತಾದ ಕೆಲವು ಮಹತ್ವದ ಹೆಚ್ಚಿನ ಸಂಗತಿಗಳನ್ನು ಇಲ್ಲಿ ನಾವು ಹೇಳುವೆವು. ಇತಿಹಾಸ ಸಂಶೋಧಕರು ಆ ಮಾರ್ಗದಿಂದ ಮುಂದೆ ಸಾಗಿ ಹೆಚ್ಚಿನ ಶೋಧಗಳನ್ನು ಮಾಡಿ, ಈಗಿನ ಮಹಾರಾಷ್ಟ್ರ ಭಾಷೆಯ ನಾಡಿನಲ್ಲಿ, ಕನ್ನಡಿಗರ ರಾಜ್ಯವಿಸ್ತಾರವಿದ್ದುದಲ್ಲದೆ, ಕನ್ನಡ ಭಾಷಾವಿಸ್ತಾರವು ಕೂಡ ಇತ್ತೆಂಬ ನಮ್ಮ ವಿಧಾನವನ್ನು ಹೆಚ್ಚಿಗೆ ಬಲಪಡಿಸಬೇಕೆಂದು ನಮ್ಮ ಪ್ರಾರ್ಥನೆ.

ನಮಗೆ ಗೊತ್ತಾದ ಸಂಗತಿಗಳು ಯಾವುವೆಂದರೆ -

(೧) ಮಹಾರಾಷ್ಟ್ರ ಭಾಷೆಯಲ್ಲಿ ಊರಿನ ಹೆಸರುಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆಂಬುದನ್ನು ಕೇಳಿ, ಕನ್ನಡಿಗರಿಗೆ ಆನಂದವೂ ಆಶ್ಚರ್ಯವೂ ಆಗದಿರದು. "ಕೆಂದೂರು" ಎಂಬ ಶುದ್ಧ ಕನ್ನಡದ ಹೆಸರಿನ ಊರು ಪುಣೆಯ ಹತ್ತರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತಾದ ಮರಾಠೀ ಜಿಲ್ಲೆಗಳಲ್ಲಿಯೂ, ಕನ್ನಡದ ಹೆಸರಿನ ಗ್ರಾಮಗಳು ತುಂಬಿರುತ್ತವೆ. ಉದಾಹರಣೆಗಾಗಿ -- ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೇರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗಡೆ, ಕಣಕವಲ್ಲಿ, ಬ್ರಹ್ಮನಾಳ, ಗಾಣಗಾಪುರ, ಕುರಡೀವಾಡಿ, ಕಳಸ ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡದವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಮೊನ್ನೆ ಮೊನ್ನೆ ಒಪ್ಪಿಕೊಂಡಿದ್ದಾರೆ.

(೨) ಅಣ್ಣಂಭಟ್ಟ, ಕೃಷ್ಣಂಭಟ್ಟ ಮುಂತಾದ ಅಲ್ಲಿ ರೂಢವಿರುವ ಹೆಸರುಗಳೊಳಗಿನ ಮಕಾರವು ಕನ್ನಡ ಪ್ರತ್ಯಯವಾಗಿದೆ.

(೩) ಸಾತಾರಾ ಮುಂತಾದ ಸ್ಥಳಗಳಲ್ಲಿಯ ಜೈನರು ಬುನಾದಿಯಿಂದಲೂ ಕನ್ನಡ ಭಾಷೆಯನ್ನು ಆಡುತ್ತಾರೆ.

(೪) ಕರ್ನಾಟಕದಲ್ಲಿಯ ಹಲವು ಮನೆತನದ ಕುಲದೇವತೆಗಳು ಮಹಾರಾಷ್ಟ್ರದಲ್ಲಿವೆ. ಧೌಮನರಸಿಂಹ, ನೀರಾನರಸಿಂಹ, ಕೋಹಳೆನರಸಿಂಹ, ತುಳಜಾಭವಾನಿ, ಇವೇ ಅವು.

(೫) ಕರ್ನಾಟಕದಲ್ಲಿಯ ಗುಡಿಗಳೊಳಗಿನ ಆಚಾರ-ಪದ್ಧತಿಗಳೇ ಮಹಾರಾಷ್ಟ್ರದಲ್ಲಿಯೂ ಕಂಡುಬರುತ್ತವೆ. ನಮ್ಮ ಮಿತ್ರರಾದ ಶ್ರೀ ರಾಜಪುರೋಹಿತರು ದೇವರಗುಡ್ಡದಲ್ಲಿಯ ಗುಡಿಗೂ, ಜೇಜೂರಿನಲ್ಲಿರುವ ಗುಡಿಗೂ ಇರುವ ಸಾಮ್ಯವನ್ನು ಸಿದ್ಧಪಡಿಸಿರುವರು. ಅದರಂತೆಯೇ ಚಿಪಲೂಣದ ಹತ್ತಿರವಿರುವ ಪರಶುರಾಮ-ರೇಣುಕಾ ಗುಡಿಯು ಸವದತ್ತಿಯ ಎಲ್ಲಮ್ಮನ ಗುಡಿಗೆ ಸಾಮ್ಯವಾಗಿರುತ್ತದೆ.

(೬) ಮುಂಬಯಿಯ ಸುತ್ತಮುತ್ತಲಿನ ದೇಶವನ್ನು ಆಳುತ್ತಿದ್ದ ಶಿಲಾಹಾರ ಅರಸರು ಕನ್ನಡಿಗರಾಗಿದ್ದರೆಂದು ಮುಂಬಯಿ ಗ್ಯಾಝೆಟಿಯರದಲ್ಲಿ (Bombay Gazzeteer) ಉಲ್ಲೇಖವಿದೆ.

(೭) ಕೊಲ್ಲಾಪುರದ ಅರಸುಮನೆತನದ ಲಗ್ನಗಳಲ್ಲಿ "ಬಿಸಿಲೂಟ" ಎಂಬುವ ಪದ್ಧತಿಯು ಉಂಟಂತೆ.

(೮) ಹಿಂದೂ ದೇಶದ ಬ್ರಾಹ್ಮಣರಲ್ಲಿ ಪಂಚದ್ರಾವಿಡರೆಂತಲೂ, ಪಂಚಗೌಡರೆಂತಲೂ ವರ್ಗಗಳು ಉಂಟು. ಮಹಾರಾಷ್ಟ್ರದೊಳಗಿನ ಕೊಂಕಣಸ್ಥ ಮತ್ತು ದೇಶಸ್ಥ ಬ್ರಾಹ್ಮಣರು ಪಂಚದ್ರಾವಿಡರಲ್ಲಿ ಸೇರುತ್ತಾರೆ. ಇದಕ್ಕೆ ಕಾರಣವೇನಿರಬಹುದು?

(೯) ಸಾವಂತವಾಡಿಯಿಂದ ಕೊಂಕಣಕ್ಕೆ ಹೋಗುವ ಮಾರ್ಗಕ್ಕೆ "ದೋಡಾಮಾರ್ಗ" (ದೊಡ್ಡಮಾರ್ಗ) ಎಂದು ಈಗಲೂ ಕರೆಯುತ್ತಾರೆ.

(೧೦) ಕೊಂಕಣದಲ್ಲಿಯ ಮಹಾರಾಷ್ಟ್ರ ಭಾಷೆಯಲ್ಲಿ "ಮಣೆ", "ನಿಚ್ಚಣೆ" ಮುಂತಾದ ಕನ್ನಡದ ಹೆಸರುಗಳಿರುತ್ತವೆ.

(೧೧) ಜಕಣಾಚಾರ್ಯರು ಕಟ್ಟಿದ ಕಟ್ಟಡಗಳು ಮಹಾರಾಷ್ಟ್ರದಲ್ಲಿಯೂ ಇವೆ. ಅವುಗಳಿಗೆ ಅವರು "ಹೇಮಾಡಪಂತೀ" ಗುಡಿಗಳೆಂದೂ ಹೇಳುತ್ತಾರೆ.

(೧೨) ಇನ್ನೂ ಮಹತ್ವವುಳ್ಳ ಸಂಗತಿಯೇನೆಂದರೆ, ಮಧ್ಯ ಮಹಾರಾಷ್ಟ್ರದಲ್ಲಿ ಕನ್ನಡ ಶಿಲಾಶಾಸನಗಳೂ, ವೀರಗಲ್ಲುಗಳೂ ದೊರೆತಿವೆ. ಸಾತಾರಾ ಜಿಲ್ಲೆಯ ಮಸವಡ ಎಂಬ ಗ್ರಾಮದಲ್ಲಿ ಒಂದು ಕನ್ನಡ ಶಿಲಾಶಾಸನ ದೊರೆತಿದೆ...

ಈಗ ನೀವೇ ಹೇಳಿ - ಇಂಥಾ ಕನ್ನಡ ನಾಡಿನಲ್ಲಿ ಇವತ್ತು ಬೆಳಾಗಾವಿ ಮರಾಠಿಗರ ಹಾವಳಿಯಿಂದ ಕಷ್ಟ ಪಡ್ತಿರೋದು ನೋಡುದ್ರೆ ನಗಬೇಕೋ ಅಳಬೇಕೋ ಗುರು?!

ಹಿಂದಿ ಹೇರಿಕೆಯಿಂದ ಹೆಚ್ಚೋದು ಬಾಂಧವ್ಯ ಅಲ್ಲ, ಅಸಮಾನತೆ

ಇವ್ರೊಬ್ರು ಬಾಕಿಯಾಗಿದ್ರು ಹಿಂದಿ ಹೇರಿಕೆಗೆ ಹಾಡಹಗಲಲ್ಲೇ ಪ್ರೋತ್ಸಾಹ ಕೊಡಕ್ಕೆ! ಕರ್ನಾಟಕದಲ್ಲಿ ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಸರ್ಕಾರ ಅದಕ್ಕೆ ದುಡ್ಡು ಕೊಡುತ್ತೆ ಅಂತ ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿರೋದು ಇವತ್ತಿನ ವಿ.ಕ.ದಲ್ಲಿ ವರದಿಯಾಗಿದೆ.

ಹಿಂದಿಗೆ ಕೊಂಬಿದೆ ಅನ್ನೋದಾದರೆ ಕನ್ನಡಕ್ಕೆ ಚಿನ್ನದ ಕೊಂಬಿದೆ!


ಭಾರತದಲ್ಲಿ ಹಿಂದಿ ಭಾಷೆಯೊಂದರ ಪ್ರಸಾರಕ್ಕಾಗಿ ಮಾತ್ರ ಅಕಾಡಮಿ ಯಾಕೆ ಪ್ರಾರಂಭಿಸಬೇಕು? ಕನ್ನಡ, ತೆಲುಗು, ತಮಿಳು, ಮಲಯಾಳಂ ಅಕಾಡಮಿಗಳನ್ನು ಮದ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ, ಬಂಗಾಲ, ಅಸ್ಸಾಮದಲ್ಲಿ ಏಕೆ ತೆರೆಯಕೂಡದು? ಕೇವಲ ಹಿಂದಿಗೆ ಮಾತ್ರ ಪ್ರಾಧಾನ್ಯ ನೀಡೋದು ಎಷ್ಟು ಸಮಂಜಸ? ಹಿಂದಿಯೇತರ ರಾಜ್ಯಗಳು ಹಿಂದಿ ಪ್ರಸಾರ ಮಾಡಕ್ಕೆ ಅಕಾಡಮಿ ಸ್ಥಾಪಿಸಲು ಯಾಕೆ ಒಪ್ಪಿಕೋಬೇಕು? ಹಿಂದಿಯೇತರ ರಾಜ್ಯ ಸರ್ಕಾರಗಳ ಬೊಕ್ಕಸದಿಂದ ಹಣ-ಜಾಗ-ಸಮಯವನ್ನು ಯಾಕೆ ನೀಡಬೇಕು? ಹಿಂದಿ ಭಾಷಿಕರಿಗರಿಗೆ ಇಲ್ಲದ ತ್ರಿಭಾಷಾ ಸೂತ್ರ ಇತರರಿಗೆ ಮಾತ್ರ ಯಾಕೆ? ಹಿಂದೀಗೇನು ಕೊಂಬಿದೆಯಾ? ಭಾಷೆಯ ಇತಿಹಾಸ-ಸೊಗಡು-ಹರವು-ಸಾಹಿತ್ಯ-ಸಾಮರ್ಥ್ಯಗಳೇ ಕೊಂಬು ಅನ್ನೋದಾದ್ರೆ ಕನ್ನಡಕ್ಕಿರೋದು ಬೆಲೆಬಾಳೋ ಚಿನ್ನದ ಕೊಂಬು, ಹಿಂದೀಗಿರೋದು ಮೂರುಕಾಸಿನ ತಗಡಿನ ಕೊಂಬು! ಹೀಗಿರುವಾಗ ಹಿಂದಿ ಹೇರಿಕೆ ಒಪ್ಪಿಕೊಳ್ಳಕ್ಕೆ ಕನ್ನಡಿಗ ಏನು ಕಿವಿಮೇಲೆ ಹೂ ಮಡೀಕೊಂಡಿಲ್ಲ ಗುರು!

ಹಿಂದಿ ಗೊತ್ತಿದ್ದರೇ ದೇಶಪ್ರೇಮ ಅನ್ನೋದು ಸುಳ್ಳು

ಠಾಕೂರ್ ಅವರು "ಇಡೀ ಭಾರತದಲ್ಲಿ ಹಿಂದಿಯನ್ನು ಬಳಸಿದರೆ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯ" ಅನ್ಕೊಂಡಿರೋದು ಆಧಾರವಿಲ್ಲದ ಬೊಗಳೆ. ಬಾಯಲ್ಲಿ "ವಿವಿಧತೆಯಲ್ಲಿ ಏಕತೆ" ಅಂತ ಹೇಳಿಕೊಂಡು ಕೈಯಲ್ಲಿ ಹಿಂದಿ-ಹೇರಿಕೆ ಮಾಡೋರು ಹೇಳಿಕೊಟ್ಟಿದ್ದನ್ನೇ ಉರು ಹೊಡೆದು ಹೇಳಿದಹಾಗಿದೆ ಇವರ ಮಾತು! ಯಾವನಿಗೆ ಬೇಕಾಗಿದೆ ಹೊಸದೊಂದು ಉಪಯೋಗವಿಲ್ಲದ ಭಾಷೆಯ ಕಲಿಕೆ? ಕನ್ನಡಕ್ಕೆ ಒಂದು ಚೂರೂ ಸಂಬಂಧವಿಲ್ಲದ ಹೊಸದೊಂದು ಭಾಷೆ ಕಲಿಯಬೇಕು, ಕಲಿತರೆ ಮಾತ್ರ ನಿಜವಾದ ದೇಶಪ್ರೇಮಿಯಾಗುವುದು ಅಂತೇನಾದರೂ ಹೇಳಿದರೆ "ಹೋಗ್ರೀ ಸ್ವಾಮಿ! ನಿಮ್ಮ ದೇಶಪ್ರೇಮ ನೀವೇ ಇಟ್ಟುಕೊಂಡು ಉಪ್ಪಿನಕಾಯಿ ಹಾಕ್ಕೊಳಿ! ನನ್ನ ಜೀವನ ನಡೆದುಕೊಂಡು ಹೋದರೆ ಸಾಕಾಗಿದೆ" ಎಂದಾನು!

ಹಿಂದಿ ಹೇರಿಕೆ ಅಸಮಾನತೆಯನ್ನು ಮೆತ್ತಗೆ ಒಪ್ಪಿಕೊಳ್ಳೋಹಾಗೆ ಮಾಡುವ ಕೆಲಸ
ಭಾರತ ಬಹುಭಾಷಾ ರಾಜ್ಯಗಳ ಒಕ್ಕೂಟ. ಹೆಚ್ಚು-ಕಡಿಮೆ ಭಾರತದ ಎಲ್ಲಾ ಭಾಷೆಗಳೂ ಹಿಂದಿಗಿಂತ ವೈಭವಯುತವಾದ, ಶಕ್ತಿ ಸಂಪನ್ನವಾದ, ಧಾರಣಶಕ್ತಿಯುಳ್ಳ, ಸರ್ವ ಸಾಮರ್ಥ್ಯವನ್ನು ಹೊಂದಿರುವ ಇತಿಹಾಸವುಳ್ಳವುಗಳಾಗಿವೆ, ವರ್ತಮಾನಗಳನ್ನುಳವುಗಳಾಗಿವೆ, ಭವಿಷ್ಯಗಳನ್ನುಳ್ಳವುಗಳಾಗಬೇಕಿವೆ. ಕನ್ನಡನಾಡಿನಲ್ಲಿ ಹಿಂದಿಯ ಅವಶ್ಯಕತೆ ಯಾವನಿಗೂ ಇಲ್ಲ ಅನ್ನೋ ಸಾಮಾನ್ಯಜ್ಞಾನವಾದರೂ ನಮ್ಮನ್ನ ಆಳೋರಿಗೆ ಬೇಡವಾ ಗುರು? ಕಣ್ಣು ಬಿಟ್ಟು ನೋಡಿದರೆ ಇದು ಕಾಣಿಸದೆ ಇಲ್ಲ. ಕಣ್ಣು ಬಿಡದೆ ಹಿಂದಿ ಹೇರಿಕೆ ಮೂಲಕ ಅಸಮಾನತೆಯೇ ಸರಿ ಅನ್ನೋದನ್ನ ನಮಗೆ ಒಪ್ಪಿಸೋದಕ್ಕೆ ಹೊರಟಿರೋದು ಸರಿಯಲ್ಲ ಗುರು! ಇದರಿಂದ ಹಿಂದಿ ತಾಯ್ನುಡಿಯೋರು ಯಾವತ್ತೂ ಹಿಂದಿಯೇತರ ತಾಯ್ನುಡಿಯೋರಿಗಿಂತ ಹೆಚ್ಚು ಸೌಲತ್ತುಗಳ್ನ ಪಡ್ಕೋತಾರೆ, ಹೆಚ್ಚು ಹೆಚ್ಚು ಸಂಬಳ ಪಡ್ಕೋತಾರೆ, ಹೆಚ್ಚು ಹೆಚ್ಚು ಹುದ್ದೆಗಳಿಗೆ ತುಂಬ್ಕೋತಾರೆ...ನಿಧಾನಕ್ಕೆ ಹೆಚ್ಚು ಹೆಚ್ಚು ಮಕ್ಕಳ್ನ ಹೆರ್ತಾರೆ...

ವಿವಿಧತೆ ಅಳಿಸಿಹಾಕಕ್ಕೆ ಹೋದರೆ ಏಕತೇನೂ ಹೋದೀತು!

ತಮಿಳುನಾಡು, ದೇಶದ ಆಗ್ನೇಯ ರಾಜ್ಯಗಳ ಬಹುತೇಕ ಭಾಗಗಳು, ಕೇರಳ, ಆಂಧ್ರ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಬಂಗಾಳದ ಒಳಪ್ರದೇಶಗಳಲ್ಲಿ ನಾವು ವ್ಯವಹರಿಸಬೇಕೆಂದರೆ ಅಲ್ಲಿಯ ಭಾಷೆಗಳಲ್ಲಿ ವ್ಯವಹರಿಸೋದೇ ಸರಿ ಅಂತ ಮನಗಾಣಬೇಕಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ, ಅಸ್ಸಾಮ ಹೀಗೆ ಪ್ರಾಂತೀಯ ವೈಶಿಷ್ಟ್ಯವನ್ನುಳಿಸ್ಕೊಂಡ ಒಟ್ಟು ಶಕ್ತಿಯೇ ಭಾರತದ ಭಾವೈಕ್ಯತೆಗೆ ಕಾರಣ. ಈ ಎಲ್ಲವನ್ನು ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತಹ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ವಿವಿಧತೆ ಅಳಿಸಿಹಾಕೋ ಪ್ರಯತ್ನಗಳೆಲ್ಲ ಏಕತೆ ಅಳಿಸಿಹಾಕೋ ಪ್ರಯತ್ನಗಳೇ. ಹಿಂದಿ ಹೇರಿಕೆ ಮೂಲಕ ಕೃತಕವಾಗಿ ಏಕತೆ ತರಕ್ಕೆ ಹೊರಡೋ ಮೂರ್ಖತನ ಕೈಬಿಡೋದೇ ನಮ್ಮ ಒಕ್ಕೂಟ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೇದು ಗುರು!

ಯಂತ್ರ ಹಳೆಯದಾದರೇನು ಮಂಕು ನವನವೀನ!

ಇವತ್ತಿಗೆ ಕೌಶಿಕ ಅನಂತಸುಬ್ಬರಾಯರು ಹುಟ್ಟಿ ನೂರು ವರ್ಷ ಕಳೆದವು. ಯಾರು ಇವ್ರು ಅಂತೀರಾ? ಇನ್ನು ಯಾರೂ ಇಲ್ಲ, ಸುಮಾರು ಐವತ್ತು ವರ್ಷಗಳ ಹಿಂದೆ ಕನ್ನಡದ ಕೀಲಿಮಣೆ ಕಂಡುಹಿಡಿದು ಕನ್ನಡಿಗರ ಬುದ್ಧಿಗೆ "ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆ" ಹೋಗಲಾಡಿಸಿದ ಮಹಾನುಭಾವ.

ಅದೇನು ಮಂಕು ಬಡಿದಿತ್ತೋ ಏನೋ ಕನ್ನಡಿಗರಿಗೆ ಆಗ - "ಟೈಪ್ರೈಟರ್ ಅನ್ನೋದು ಆಕಾಶದಿಂದ ಉದ್ರಿರೋ ಯಂತ್ರ, ಅದಕ್ಕೆ ಇಂಗ್ಲೀಷ್ ಮಾತ್ರ ಬರೋದು", "ನಮ್ಮ ದುರ್ದೈವ, ಅದರಲ್ಲಿ ಕನ್ನಡ ಬರೋದಿಲ್ಲ", "ಟೈಪ್ರೈಟರ್ ಉಪಯೋಗಿಸುವುದಕ್ಕೆ ಇಂಗ್ಲೀಷ್ ಕಲೀಬೇಕು" ಅನ್ನೋ ಹದಿನಾರಾಣೆ ಮೂರ್ಖತನ ನಮ್ಮಲ್ಲಿತ್ತು ಗುರು!

ಇಂಥಾ ಮೂರ್ಖರ ನಡುವೆ ಯೇಗಾಡಿ ಕನ್ನಡದಲ್ಲಿ ಕೀಲಿಮಣೆ ಮಾಡಲು ಸಾಧ್ಯ ಅಂತ ತೋರಿಸಿಕೊಟ್ಟ ಅನಂತಸುಬ್ಬರಾಯರನ್ನ ಇವತ್ತಿನ ದಿನ ಕನ್ನಡಕ್ಕೆ "ಕೈ ಎತ್ತಿದ" ಒಬ್ಬ ವ್ಯಕ್ತಿ ಅಂತಲ್ಲ, ಸುತ್ತಮುತ್ತಲ ಜನರೆಲ್ಲ "ಆಗಲ್ಲ, ಆಗಲ್ಲ!" ಅಂತಿದ್ದಾಗ ಒಂದು ಅದ್ಭುತವಾದ ಯಂತ್ರವನ್ನ ಕಂಡುಹಿಡಿದ ತಂತ್ರಜ್ಞಾನಿ ಅಂತ್ಲೇ ನೆನೆಸಿಕೋಬೇಕು ಗುರು!

ಹೊಸ ಯಂತ್ರ, ಅದೇ ಮಂಕು

ಅದ್ಭುತ ಏನೂಂದ್ರೆ ಯಾವ ಮಂಕು ಕೀಲಿಮಣೆ ಕಾಲದಲ್ಲಿ ಕನ್ನಡಿಗರಿಗೆ ಬಡಿದಿತ್ತೋ ಅದೇ ಮಂಕು ಇವತ್ತಿನ ಗಣಕಯಂತ್ರದ ಕಾಲದಲ್ಲೂ ಇದೆ. ನೂರು ವರ್ಷವಾದರೂ ನಾವೇನು ಉದ್ಧಾರವಾಗಿಲ್ಲ! ಇವತ್ತಿಗೂ "ಕಂಪ್ಯೂಟರ್ ಅನ್ನೋದು ಆಕಾಶದಿಂದ ಉದ್ರಿರೋ ಯಂತ್ರ, ಅದಕ್ಕೆ ಇಂಗ್ಲೀಷ್ ಮಾತ್ರ ಬರೋದು", "ನಮ್ಮ ದುರ್ದೈವ, ಅದರಲ್ಲಿ ಕನ್ನಡ ಬರೋದಿಲ್ಲ", "ಕಂಪ್ಯೂಟರ್ ಉಪಯೋಗಿಸುವುದಕ್ಕೆ ಇಂಗ್ಲೀಷ್ ಕಲೀಬೇಕು" ಅಂತ್ಲೇ ನಮ್ಮ ಜನ ಹೆಚ್ಚಾಗಿ ತಿಳ್ಕೊಂಡಿರೋದು. ಇದಕ್ಕೆ ಅಪವಾದ ಅನ್ನೋಹಾಗೆ ನಮ್ಮ ಬರಹ ವಾಸು ಅಂಥಾ ಬೆರಳೆಣಿಕೆಯ ಕೆಲವರು ಇದಾರೆ ಅನ್ನೋದು ಮನಸ್ಸಿಗೆ ತುಸು ನೆಮ್ಮದಿ ಕೊಡೋದೇನೋ ನಿಜ. ಆದ್ರೆ ಇವತ್ತಿಗೂ ಕನ್ನಡದ ಯಾವುದೇ ತಂತ್ರಾಂಶ ಇಂಗ್ಲೀಷಿನ ಹಂಗಿಲ್ಲದೆ ಇಲ್ಲ ಅನ್ನೋದು ಕಟು ಸತ್ಯ.

ಅವತ್ತು ಕೀಲಿಮಣೆ ಬಳಸ್ತಾ ಇದ್ದ ಜನ ಎಷ್ಟಿದ್ದರೋ ಅದರ ನೂರರಷ್ಟು ಜನ ಇವತ್ತು ಗಣಕ ಉಪಯೋಗಿಸುತ್ತಾ ಇದ್ದಾರೆ. ಅವತ್ತು ಕನ್ನಡದ ಕೀಲಿಮಣೆ ಬರದೇ ಹೋಗಿದ್ದಿದ್ದರೆ ಯಾವ ಅನಾಹುತ ಆಗ್ತಿತ್ತೋ ಅದರ ನೂರರಷ್ಟು ಅನಾಹುತ ಕನ್ನಡದ ಗಣಕಯಂತ್ರ ಬರದೇ ಹೋದರೆ ನಾಳೆ ನಮಗೆ ಕಾದಿದೆ. ಸುಬ್ಬರಾಯರ ಕಾಲದಲ್ಲಿ ಗಣಕ ತಂತ್ರಜ್ಞಾನ ಓದಿದ ಇಂಜಿನಿಯರ್ ಗಳು ಇರಲಿಲ್ಲ. ಆದ್ರೆ ಇವತ್ತು ಬೀದಿಬೀದೀಲಿ ಇದಾರಲ್ಲ, ಅವರೆಲ್ಲ ಏನ್ ಕಿಸೀತಿದಾರೆ ಅನ್ನೋ ಪ್ರಶ್ನೆ ಹುಟ್ಟುತ್ತೆ ಗುರು! ಒಟ್ನಲ್ಲಿ ಟೈಪ್ರೈಟರ್ ಅನ್ನೋ ಯಂತ್ರ ಹಳೇದಾದ್ರೂ ನಮ್ಮ ಮಂಕು ಇನ್ನೂ ನವನವೀನ!

ಐವತ್ತು ವರ್ಷದ ಹಿಂದೆ ಅನಂತಸುಬ್ಬರಾಯರಿಗಿದ್ದ ಮೀಟ್ರು ಇವತ್ತು ಯಾರಿಗೂ ಇಲ್ಲವಾ?

"ಬೆಂಗಳೂರು ಹಬ್ಬ" ಅಂತ ಹೆಸ್ರಿಡಕ್ಕೆ ಇವ್ರಿಗೆ ಯಾರ್ ಬಿಟ್ರು?

ಬೆಂಗಳೂರಿನಲ್ಲಿ ಡಿಸೆಂಬರ್ 2ರಿಂದ ಹತ್ತು ದಿನಗಳ "ಬೆಂಗಳೂರು ಹಬ್ಬ" ಶುರು ಆಗಿದೆ. ಈ ಬಾರಿಯ ಹಬ್ಬದಲ್ಲಿ ಕನ್ನಡ-ಇಂಗ್ಲೀಷು ಎರಡರಲ್ಲೂ ಹಬ್ಬದ ಹೆಸರಿನಲ್ಲಿ ಬೆಂಗಳೂರು ಅಂತ್ಲೇ ಹೆಸರು ಉಪ್ಯೋಗ್ಸಿರೋದು ಖುಶಿ ಏನೋ ತಂದಿದೆ, ಆದ್ರೆ ಈ ಹಬ್ಬದಲ್ಲಿ ಬರೀ ಕನ್ನಡೇತರರ ಕಲಾವಿದರ ದರ್ಬಾರು ನೋಡಿದರೆ ಉರಿಯತ್ತೆ ಗುರು! ಈ ವಿಷಯದ ಬಗ್ಗೆ ಹೆಸರಾಂತ ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ಔರ ಅನುಭವದ ಪ್ರಕಾರ -
ಬಾಂಬೆ ಹಬ್ಬದ ಕಲಾವಿದರ ಪಟ್ಟಿ ಒಮ್ಮೆ ತೆಗೆದು ನೋಡಿ. ನಿಮಗೆ ಮಹಾರಾಷ್ಟ್ರದ ಹೊರಗಿನವರ ಒಬ್ಬರ ಹೆಸರೂ ಸಿಗೋದಿಲ್ಲ! ಸ್ಥಳೀಯ ಕಲಾವಿದರ ಕಡೆಗಣಿಕೆ ಆಗುತ್ತಿರುವುದು ಇಲ್ಲಿ (ಕರ್ನಾಟಕದಲ್ಲಿ) ಮಾತ್ರ.

ಅಲ್ಲ - ಈ ರೋಗ ಕರ್ನಾಟಕದಲ್ಲಿ ಮಾತ್ರ ಯಾಕೆ ಗುರು? ಇನ್ನೇನೂ ಇಲ್ಲ, ಕನ್ನಡಿಗರ ವಿಶ್ವಮಾನವತ್ವಕ್ಕೆ ಇದೂ ಒಂದು ಬಹುಮಾನ, ಅಷ್ಟೇ. 1962ರಲ್ಲಿ ಬೆಂಗಳೂರಿನ ರಾಮೋತ್ಸವಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯಂಥಾ ಹೊರಗಿನೋರಿಗೇ ಮಣೆ ಹಾಕಲಾಗಿ ಕನ್ನಡದ ಕಲಾವಿದರಿಗೆ ಅವಕಾಶ ಸಿಗದೆ ಇದ್ದಾಗ ಅ.ನ.ಕೃ. ಅವರು ಕನ್ನಡೇತರರಿಗೆ ಕಲಿಸಿದ ಪಾಠ ಇವತ್ತು ಇನ್ನೊಂದ್ಸತಿ ಕಲಿಸಬೇಕಾದ ಪರಿಸ್ಥಿತಿ ಬಂದಿದೆ ಗುರು! ಸ್ಥಳೀಯ ಕಲಾವಿದರಿಗೆ ಸ್ಥಾನ ಇಲ್ಲದೇ ಇರೋ ಹಬ್ಬ ಕಟ್ಕೊಂಡ್ ನಮಗೇನು? ಈ ನಾಡಿನ ಸಂಸ್ಕೃತಿಯನ್ನ ಬಿಂಬಿಸದೇ ಹೋದ್ರೆ ಇಂಥಾ ಕಾರ್ಯಕ್ರಮಗಳಿಗೆ ಬೆಂಗಳೂರಿನ ಹೆಸರು ಇಡಕ್ಕೆ ಬಿಡೋದೇ ತಪ್ಪು!

ಕನ್ನಡ ಸಂಸ್ಕೃತಿ ಬಿಂಬಿಸದ ಹಬ್ಬ "ಬೆಂಗಳೂರು ಹಬ್ಬ" ಅಲ್ಲ

ಅಷ್ಟೇ ಅಲ್ಲ, ಕನ್ನಡದ ಸಂಸ್ಕೃತಿ ಬಿಂಬಿಸದ ಈ ಕನ್ನಡೇತರರ ಹಾವಳಿಗೆ "ಬೆಂಗಳೂರು ಹಬ್ಬ" ಅನ್ನೋ ಹೆಸರು ಇಡೋ ಹಕ್ಕನ್ನೇ ಕಿತ್ತುಕೊಳ್ಳಬೇಕು. ಕರ್ಕೊಳ್ಳಿ ಇನ್ನೇನಾದ್ರೂ ಹೆಸರಿಟ್ಟು, ಬೇಡ ಅನ್ನಲ್ಲ. ಆದ್ರೆ "ಬೆಂಗಳೂರು ಹಬ್ಬ" ಅನ್ನೋದಾದ್ರೆ ಈ ಹಬ್ಬದಲ್ಲಿ ಕನ್ನಡದ ಕಲಾವಿದರದೇ ಮೇಲುಗೈ ಇರಬೇಕು. ನಮ್ಮ ಜಾನಪದದೋರು, ನಮ್ಮ ಸಂಪ್ರದಾಯದ ಹಾಡುಗರು, ನಮ್ಮ ಭಾವಗೀತೆಯೋರು, ನಮ್ಮ ಲಾವಣಿಯೋರು, ನಮ್ಮ ಹೊಸ ಕಲಾವಿದರು - ಇವೆರಿಗೆಲ್ಲ ಬೆಂಗಳೂರು ಹಬ್ಬದಲ್ಲಲ್ಲದೆ ಏನಾದ್ರೂ ಚೆನ್ನೈ ಹಬ್ಬದಲ್ಲೋ ಅಥವಾ ಮುಂಬೈ ಹಬ್ಬದಲ್ಲೋ ಅವಕಾಶ ಸಿಗತ್ತಾ? ಖಂಡಿತ ಇಲ್ಲ!

ಕನ್ನಡಿಗರು ಮುನ್ನುಗ್ಗಿ ಈ ಹೆಸರು ತಮ್ಮದಾಗಿಸಿಕೊಳ್ಳಬೇಕು, ಇಂಥಾ ಹಬ್ಬಗಳ್ನ ನಡೆಸಿ ಕನ್ನಡ ಸಂಸ್ಕೃತಿಯನ್ನ ಇಡೀ ಪ್ರಪಂಚದ ಮುಂದೆ ಇಡಬೇಕು, ದುಡ್ಡೂ ಮಾಡ್ಕೋಬೇಕು. ಇಲ್ಲದೇ ಹೋದ್ರೆ ಇವತ್ತು ಕನ್ನಡದಲ್ಲಿ ಹೆಸರಾದ್ರೂ ಬರೀತಿದಾರೆ, ನಾಳೆ ಅದೂ ಹೋಗಿ ಹಿಂದೀಲೋ ತಮಿಳಲ್ಲೋ ತೆಲುಗಲ್ಲೋ ಇಂಗ್ಲೀಷಲ್ಲೋ ಬರೆಯಕ್ಕೆ ಶುರು ಮಾಡ್ತಾರೆ, ಈಗ ಕಾಟಾಚಾರಕ್ಕೆ ಕನ್ನಡಕ್ಕೆ ಕೊಡ್ತಿರೋ ಸ್ಥಾನಾನೂ ಕಿತ್ತಾಕ್ತಾರೆ. ಆಗ ಕನ್ನಡದ ಕಲಾವಿದರು ಬೀದೀಲಿ "ಅಮ್ಮಾ! ತಾಯಿ!" ಅಂತ ನಾಕಾಣಿ-ಎಂಟಾಣಿ ಏಣುಸ್ಕೊಂಡಿರಬೇಕಾಗತ್ತೆ, ಅಷ್ಟೆ!

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಯಾಕೆ, ಏನು, ಎತ್ತ?

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಬೇಕು, ಇದು ನಮಗೆ ನೀವು ಕೊಡೋ ಭಿಕ್ಷೆ ಅಲ್ಲ, ನಮ್ಮ ಹಕ್ಕು ಅಂತ ಹಿರಿಯ ಸಾಹಿತಿಗಳಾದ ಶ್ರೀ ಎಲ್.ಎಸ್. ಶೇಷಗಿರಿರಾಯರು ನಿನ್ನೆ ಒಂದು ಕಾರ್ಯಕ್ರಮದಲ್ಲಿ ಗುಡುಗಿದ್ದಾರೆ.

ಕನ್ನಡ ಭಾಷಾ ಸಾಹಿತ್ಯಕ್ಕೆ ಕೇಂದ್ರ ಸರ್ಕಾರ ಹೊಸದಾಗಿ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಕ್ಕೆ ನಿಗದಿ ಮಾಡಿರೋ ಎಲ್ಲಾ ಅರ್ಹತೆಗಳೂ ಇವೆ ಅಂತ ತಜ್ಞರ ವರದಿ ಕೇಂದ್ರಕ್ಕೆ ಸಲ್ಲಿಕೆ ಆಗೇ ಹತ್ತು ತಿಂಗ್ಳು ಕಳ್ದು ಒಂದು ವರ್ಷ ಅಗ್ತಾ ಬಂದ್ರೂ ಇನ್ನೂ ಯಾವ ಬೆಳವಣಿಗೇನೂ ಆದಂಗೆ ಕಾಣ್ತಾ ಇಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಸಾಮಾನ್ಯವಾಗಿ ಕೇಳಿಬರೋ ಪ್ರಶ್ನೆಗಳು

ಕನ್ನಡ ನುಡಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಗೋದ್ರಿಂದ ಒಂದಷ್ಟು ಕೋಟಿ ಅನುದಾನ ಬರುತ್ತೆ, ಭಾರತದ, ಪ್ರಪಂಚದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಅಧ್ಯಯನಕ್ಲ್ಕೆ ಅವಕಾಶ ಸಿಗುತ್ತೆ, ಕನ್ನಡ ಓದಿದವ್ರಿಗೆ ಇಂಥಾಲ್ಲೆಲ್ಲಾ ಚೂರುಪಾರು ಕೆಲ್ಸದ ಅವಕಾಶ ಸಿಗುತ್ತೆ, ಪ್ರಪಂಚದ ಕಣ್ಣಲ್ಲಿ ಕನ್ನಡಕ್ಕೆ ಪುರಾತನವಾದ ಭಾಷೆ ಅಂತ ಒಸಿ ಮರ್ವಾದೇನೂ ಸಿಗುತ್ತೆ ಅನ್ನೋದೇನೋ ನಿಜ. ಆದ್ರೆ ಇದಕ್ಕೋಸ್ಕರ ಇಷ್ಟೆಲ್ಲಾ ಅತ್ತೂ ಕರೆದೂ ಈ ಸ್ಥಾನಮಾನ ಗಿಟ್ಟಿಸ್ಕೋಬೇಕಾ ಅನ್ನೋ ಪ್ರಶ್ನೆ ಅನೇಕರಿಗೆ ಇದೆ.

"ಹತ್ತು ವರ್ಷದ ಹಿಂದೆ ಯಾಕೆ ಈ ಕೂಗು ಎದ್ದಿರ್ಲಿಲ್ಲ? ಈಗ ತಮಿಳಿಗೆ ಆ ಸ್ಥಾನ ಸಿಕ್ಕಿದ ಕೂಡಲೇ ನಮಗೂ ಶಾಸ್ತ್ರೀಯ ಭಾಷಾಸ್ಥಾನಮಾನ ಬೇಕು ಅಂದ್ರೆ ಸರೀನಾ? ಇದು ಸಣ್ಣ ಬುದ್ಧಿ ಅಲ್ವಾ?" ಅಂತ ಕೊಂಕು ಮಾತಾಡೋರ್ಗೇನು ಕೊರತೆ ಇಲ್ಲ. ಆದರೆ ನಿಜವಾಗ್ಲೂ ಕನ್ನಡಕ್ಕೆ ಈ ಸ್ಥಾನಮಾನ ಯಾಕೆ ಬೇಕು? ಇದಕ್ಕಾಗಿ ಯಾಕೆ ಕನ್ನಡಿಗ್ರು ಹೋರಾಡ್ಬೇಕು? ಈ ಪ್ರಶ್ನೆಗಳಿಗೆ ಉತ್ತರ ಏನೂಂತ ಒಸಿ ನೋಡ್ಮ.

ಗೌರವಕ್ಕಾಗಲ್ಲ, ಒಕ್ಕೂಟ ವ್ಯವಸ್ಥೆಯ ಘನತೆಗಾಗಿ

ನಿಜವಾಗ್ಲೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಗೋದ್ರಿಂದ ಒಂದೇ ಒಂದು ನಯಾಪೈಸ ಲಾಭ ಇಲ್ಲಾಂದ್ರೂ ಪರ್ವಾಗಿಲ್ಲ (ತಮಿಳ್ರು ಈ ಸ್ಥಾನಮಾನದಿಂದ ಕಿಸ್ದಿರೋದು ಅಷ್ಟಕ್ಕಷ್ಟೇ!), ನಮಗದು ಬೇಕೇ ಬೇಕು! ಯಾಕಂದ್ರೆ ಒಂದು ಒಕ್ಕೂಟ ವ್ಯವಸ್ಥೇಲಿ ಇದ್ದು, ಒಂದೊಂದು ಭಾಷೆಗೆ ಒಂದೊಂದು ಮಾನದಂಡ ಅನುಸರಿಸೋ ರೀತಿ ಬದ್ಲಾಗಬೇಕು. ತಮಿಳು ಭಾಷೆಗೆ ಅಂಥಾ ಸ್ಥಾನ ಕೊಡ್ಬೇಕಾದಾಗ ಇಲ್ದೇ ಇದ್ದ ನಿಯಮಗಳ್ನ ಈಗ ಕನ್ನಡದ ವಿಷ್ಯಕ್ ಬಂದಾಗ ಹೇರುದ್ರೆ ಅದು ಒಕ್ಕೂಟ ವ್ಯವಸ್ಥೆಗೆ ಬಗೆಯೋ ದ್ರೋಹ ಆಗುತ್ತೆ ಗುರು!

ಭಾರತೀಯ ಒಕ್ಕೂಟದಲ್ಲಿ ಎಲ್ರುಗೂ ಸಮಾನವಾದ ಹಕ್ಕಿದೆ, ಸ್ಥಾನಮಾನ ಇದೆ ಅನ್ನೋದು ಬರೀ ಪುಸ್ತಕದ ಬದ್ನೇಕಾಯಿ ಆಗ್ದೆ, ಎಲ್ಲರ ನಡುವೆ ನಿಜವಾದ ಸಮಾನತೆ ಬರ್ಬೇಕು. ತಮಿಳು ಕಣ್ಣಿಗೆ ಬೆಣ್ಣೆ, ಕನ್ನಡದ ಕಣ್ಣಿಗೆ ಸುಣ್ಣ ಹಚ್ಚೋದ್ನ ಇನ್ ಸಹಿಸಕಾಗಲ್ಲ ಅನ್ನೋದ್ನ ಸಾರಬೇಕಾಗಿದೆ ಗುರು. ಇದು ಬರೀ ಶಾಸ್ತ್ರೀಯ ಭಾಷೆ ವಿಷ್ಯಕ್ ಮಾತ್ರ ಅಲ್ಲ. ಆಪತ್ತಿನ ಕಾಲದಲ್ಲಿ ಪರಿಹಾರ ಹಂಚಿಕೆ ಮಾಡೋವಾಗ, ಹೊಸ ಯೋಜನೆಗಳ್ನ, ಸಂಪನ್ಮೂಲಗಳ್ನ ಹಂಚಿಕೆ ಮಾಡೋವಾಗೆಲ್ಲಾ ಇನ್ನು ಕನ್ನಡಿಗರನ್ನು ಕಡೆಗಣನೆ ಮಾಡ್ಬೇಡಿ ಅನ್ನೋ ಸಂದೇಶಾನ ಈ ಮೂಲಕ ಕೇಂದ್ರ ಸರ್ಕಾರಕ್ಕೆ ಕೊಡಲೇ ಬೇಕಾಗಿದೆ. ಏನ್ ಗುರು?

"ಕಳ್ಳೇಕಾಯ್! ಕಳ್ಳೇಕಾಯ್!"

ಪ್ರತಿವರ್ಷದಂತೆ ಬೆಂಗಳೂರಿನ ಬಸವನಗುಡಿ ದೇವಸ್ಥಾನದ ಬಳಿ ಕಡಲೆಕಾಯಿ ಪರಿಷೆ (ಜಾತ್ರೆ) ಪ್ರಾರಂಭವಾದ ಬಗ್ಗೆ ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಒಂದು ಸುದ್ಧಿ. ಪ್ರತಿ ಕಾರ್ತಿಕ ಮಾಸದ ಕಡೆಯ ಸೋಮವಾರವಾದಂದು ಅಣಿಗೊಳ್ಳುವ ಈ ಜಾತ್ರೆ ನಿರಂತರವಾಗಿ 500 ವರ್ಷಗಳಿಂದ ಯಶಸ್ವಿಯಾಗಿ ಆಚರಣೆಗೊಳ್ಳುತ್ತಿರುವುದು ಸಂತಸ ಪಡಬೇಕಾದ ವಿಷಯವೇ ಗುರು.


ಪರಿಷೆ ಮುಂದಿನ ಹಂತಕ್ಕೆ ಹೋಗಬೇಕು

ಅಚ್ಚರಿಯ ಇತಿಹಾಸದ ಹಿನ್ನಲೆ ಇರುವ ಈ ಕಡಲೆಕಾಯಿ ಜಾತ್ರೆಯಲ್ಲಿ ಕರ್ನಾಟಕದೆಲ್ಲೆಡೆಗಳಲ್ಲಿ ಬೆಳೆಯುವ ವಿವಿಧ ತಳಿಗಳ ತರಹಾವರಿ ಕಡಲೆಕಾಯಿಗಳನ್ನು ಕಾಣಬಹುದಾಗಿದೆ. ನಮ್ಮ ಸಂಸ್ಕೃತಿಯನ್ನು ಇಂದಿನ-ಮುಂದಿನ ಪೀಳಿಗೆಗೆ ತಲುಪಿಸುವ ಇಂತಹ ಜಾತ್ರಗಳು ಅತ್ಯವಶ್ಯಕ. ಆದರೆ ಈ ಜಾತ್ರೆ ಕೇವಲ ಕಡಲೆಕಾಯಿ ಮಾರುವ/ಕೊಳ್ಳುವ ತಾಣ ಮಾತ್ರ ಆಗಬಾರದು. ಕಡಲೆಕಾಯಿ ಬೆಳೆಗಾರರು ಮತ್ತು ಪರಿಷೆಯ ಆಯೋಜಕರು ಉತ್ಪನ್ನಗಳ ಪ್ರದರ್ಶನ, ಅವುಗಳ ಕುರಿತ ಮಾಹಿತಿ, ದೇಶ-ವಿದೇಶಗಳಲ್ಲಿ ಅವುಗಳಿಗಿರುವ ಬೇಡಿಕೆ, ಬೆಳೆಯಲು ಇರುವ ಅವಕಾಶಗಳು ಮತ್ತು ಸವಾಲುಗಳು ಹೀಗೆ ಕಡಲೆ ಕಾಯಿ ಬಗ್ಗೆ ಸಂಪೂರ್ಣ ವರ್ತಮಾನ ನೀಡುವ ವೇದಿಕೆ ಆಗಬೇಕು.

ಕಡಲೇಕಾಯಿಂದ ಹೊಸ ಹೊಸ ತಿಂಡಿ ತಯಾರಿಸಿ ಇಡೀ ಪ್ರಪಂಚಕ್ಕೇ ಮಾರಬೇಕು

ಕಡಲೇ ಕಾಯಿ ಬೆಳೆಗೆ ಪೂರಕವಾದ ಮಣ್ಣು, ನೀರು, ಹವಾಗುಣ ಕರ್ನಾಟಕದಲ್ಲಿ ವಿಫುಲವಾಗಿದೆ. ಭಾರತದಲ್ಲಿ ಕಡಲೆಕಾಯಿ ಬೆಳೆಯುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕದ್ದು ಸಹ ದೊಡ್ಡ ಪಾಲಿದೆ. ಈಗಿರುವ ಕಡಲೆ ಕಾಯಿ ವ್ಯವಸಾಯದ ವ್ಯಾಪ್ತಿಯನ್ನು ಮೀರಿ ಮೊದಲ ಸ್ಥಾನಕ್ಕೇರುವ ಎಲ್ಲ ಅರ್ಹತೆ ಮತ್ತು ಅವಕಾಶಗಳು ಸಹ ಹೇರಳವಾಗಿದೆ. ಅದರ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ರೈತರು ಕಾರ್ಯಯೋಜಿತರಾಗಬೇಕಿದೆ.

ಬ್ರೆಡ್ಡು, ಬನ್ನುಗಳ ಜತೆ ನೆಂಚಿಕೊಳ್ಳುವುದಕ್ಕೆ 'Peanut butter' (ಕಡಲೆಕಾಯಿ ಹಿಟ್ಟಿನಂಟು) ಇಂದು ಹೊರದೇಶಗಳಲ್ಲಿ ತುಂಬ ಜನಪ್ರಿಯ. ಈ ರೀತಿಯ ಪದಾರ್ಥಗಳನ್ನು ನಮ್ಮಲ್ಲೇ ತಯಾರು ಮಾಡಿ ಹೊರಕ್ಕಟ್ಟುವ ವ್ಯವಸ್ಥೆ ಆದಲ್ಲಿ ಬೆಳೆಗಾರರಿಗೆ ಹೆಚ್ಚಿನ ಸ್ಪೂರ್ತಿ ದೊರಕತ್ತಲ್ವ ಗುರು?

ಬೆಂಗಳೂರಿನ ಗಾಂಧಿ ಬಜಾರಿನ ಬೇರೆಬೇರೆ ರೀತಿಯ ಕಡಲೆಕಾಯಿ ಮಸಾಲಗಳನ್ನು ಮತ್ತು ತಿಂಡಿಗಳನ್ನು ಇತರೆಡೆಗಳಿಗೆ / ಹೊರದೇಶಗಳಿಗೆ ರುಚಿ ತೋರಿಸಬೇಕು. ಕಳ್ಳೇಕಾಯಿಂದ ಏನೇನು ಮಾಡಬೋದು ಅನ್ನೋದರ ಬಗ್ಗೆ ನಾವು ಯೋಚ್ನೆ ಮಾಡಿ ಜನಮೆಚ್ಚುವ ತಿಂಡಿಗಳ್ನ ಮಾರುಕಟ್ಟೇಗೆ ತರ್ಬೇಕು. ವನೀಲಾ ಕಳ್ಳೇಕಾಯಿ, ಚಾಕಲೇಟ್ ಕಳ್ಳೇಕಾಯಿ, ಕಳ್ಳೇಕಾಯಿ ಐಸ್ ಕ್ರೀಮ್ - ಹೀಗೆ ಹತ್ತು ಹಲವಾರು ರುಚಿಯ ತಿಂಡಿಗಳ್ನ ಮಾಡಿ ಮಾರುಕಟ್ಟೆಗೆ ಬರಬಹುದು. ಮಾರುಕಟ್ಟೆ ವಿಸ್ತರಿಸುವ ಜಾಣ್ಮೆಯನ್ನು ನಾವು ತೋರಿಸಬೇಕಿದೆ ಅಷ್ಟೆ. ನಾವು ಕನ್ನಡಿಗರು ತೋರಿಸದೇ ಹೋದರೆ ಹಿಂದಿಯೋನೋ ತಮಿಳನೋ ಅಥವಾ ಅಮೇರಿಕದೋನೋ ಯಾವನೋ ಒಬ್ಬ ತೋರುಸ್ತಾನೆ, ನಾವು ಎಂದೆಂದಿಗೂ ಕಡಲೇಕಾಯಿ ಬೆಳ್ಕೊಂಡು ಹೀಗೇ ಬೀದೀಲಿ ಕೂತ್ಕೊಂಡು ಮೂರುಕಾಸಿಗೆ ಕಳ್ಳೇಕಾಯಿ ಮಾರಾಟ ಮಾಡ್ಕೊಂಡಿರಬೇಕಾಗತ್ತೆ. ಏನ್ ಗುರು?

ಅಡಿಗೆ ಸಿಲಿಂಡ್ರಿಗೆ ಹತ್ತಿರೋ ಹಿಂದಿ ಕಿಡಿ

"ಭಾರತದ ಸ್ವತಂತ್ರ ಪ್ರಜೆಗಳೇ, ನೀವೆಲ್ಲಾ ಹಿಂದಿಯನ್ನು ನಿಮ್ಮ ಸುರಕ್ಷತೆಗಾಗಿ ಕಲಿಯಿರಿ, ಇಲ್ಲವೇ ಅಪಾಯ ಬರದಂಗೆ, ಏನ್ಮಾಡ್ಬೇಕು ಅಂತ ಬರ್ದಿರೋ ಸೂಚನೆಗಳ್ನ ಓದಕ್ಕಾಗ್ದೆ ನೆಗುದ್ ಬಿದ್ದು ಸಾಯ್ರಿ" ಅಂತಂದ್ರೆ ಎಂಗನ್ಸುತ್ತೆ ಗುರು?

ಈಗ... ಒಸಿ ನೋಡು, ಎಂಗದೆ ನಮ್ ಬಾರತದ ಯವಸ್ತೆ ಅಂತ. ಎಲ್ರು ಮನ್ಯಾಗಿರೋ ಅಡ್ಗೆ ಸಿಲಿಂಡ್ರು ಮೇಲಿರೋ ಸೂಚನೆಗಳನ್ನು ಓದಿ ತಿಳ್ಕೊಂಬೇಕು ಅಂದ್ರೆ ಇಲ್ಲಾ ಇಂಗ್ಲಿಸ್ ಬರ್ಬೇಕು, ಇಲ್ಲಾ ಇಂದಿ ಬರ್ಬೇಕು.

ಪರ್ಪಂಚದಾಗೆ ಬೇರೆ ಕಡೆ ಸುರಕ್ಸತೆ ಅನ್ನೋದಕ್ಕೆ ಅದೆಸ್ಟು ಮಹತ್ವ ಕೊಟ್ಟೌರೆ ಅಂದ್ರೆ ಓದು ಬರಾ ಬರ್ದೆ ಇರೋ ಪುಟ್ಟ ಮಗಿ ಕೂಡಾ ಚಿತ್ರ ನೋಡಿ ಅರ್ತ ಮಾಡ್ಕೊಂಡ್ ಬುಡ್ಬೇಕು. ಆದ್ರೆ ಇಲ್ನೋಡಿ, ನಮ್ಮೂರಲ್ಲೇ ನಮ್ಮ ಮನೆಗಳ್ಗೆ ಸರಬರಾಜು ಆಗೋ ಅಡ್ಗೆ ಸಿಲಿಂಡ್ರು ಮೇಲೆ ಚಿತ್ರಾನೂ ಇಲ್ಲಾ.. ಒಂದಕ್ಸರ ಕನ್ನಡಾನೂ ಇಲ್ಲ. ಅಲ್ಲಾ ಈ ದೇಸದಾಗ್ ಇರೋರ್ಗೆಲ್ಲಾ ಇಂದಿ ಬತ್ತದೆ ಅಂತ ಈ ಎಚ್ಪಿ, ಇಂಡೇನು, ಬಾರತ್ತು... ಇವುಕ್ಕೆಲ್ಲಾ ಅದ್ಯಾವ ಬಡ್ಡೇದ ಏಳವ್ನೆ ಗುರು?

"ಕರ್ನಾಟಕ್ದಾಗೆ ಇಂದೀ ಗಿಂದೀ ಏರಿಕೆ ನಡೀತಿಲ್ಲ, ಎಲ್ಲಾ ಕನ್ನಡದ ಐಕ್ಳು ಅವಾಗವೇ ಕಲೀತಿವೆ" ಅನ್ನೋ ಬುದ್ವಂತ್ರು ಇದಕ್ಕೇನಂತಾರೋ? "ಕನ್ನಡದ ಮಂದಿ ಇಂದೀ ಕಲ್ತುಕೊಳ್ಮ ಅಂತ, ದಿಲ್ಲಿ ದೊರೆಗಳ್ಗೆ ಉದ್ದುದ್ದಕ್ ಅಡ್ಬಿದ್ದು, ಇಂಗೇ ಸಿಲಿಂಡ್ರು ಮ್ಯಾಗೆಲ್ಲಾ ಒಸಿ ಇಂದಿ ಅಕ್ಸರ ಬರ್ಕೊಡಿ, ಕಲ್ತ್ ಕ್ಯಂತೀವಿ" ಅಂತ ಬ್ಯಾಡ್ಕಂಡವ್ರೆ ಅನ್ಬೋದೋ ಏನೋ!

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" - ಕರವೇ

ಡಿ.1 ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಆರನೆಯ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸ್ತಾ ಇದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡಿಗರು ಸೇರಿದ್ದ ಈ ಸಮಾವೇಶದಲ್ಲಿ ನಡೆದ ಮೆರವಣಿಗೆ ಇಡೀ ಪ್ರಪಂಚಕ್ಕೆ ಕನ್ನಡಿಗರ ಒಗ್ಗಟ್ಟಿನ ಬಲ ತೋರಿಸಿಕೊಟ್ಟಿದೆ. ಹಾಗೇ ಸಮಾವೇಶದ ನಿರ್ಣಯಗಳು ನಾಡು-ನುಡಿಯ ರಕ್ಷಣೆಗೆ ಆಗಲೇಬೇಕಾದ ಕೆಲಸಗಳನ್ನು ಸಾಮಾನ್ಯ ಜನರಿಗೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೂ, ಉದ್ದಿಮೆದಾರರಿಗೂ ನೆನಪಿಸಿವೆ.

ಈ ಸಮಾವೇಶದಿಂದ ಕೆಲಕಾಲ ಬೆಂಗಳೂರಿನ ರಸ್ತೆ ಸಂಚಾರ ಚೂರುಪಾರು ಅಸ್ತವ್ಯಸ್ತ ಆಗಿದೆ ಅನ್ನೋದೇನೋ ನಿಜ, ಆದ್ರೆ ಇದರಿಂದ ಕನ್ನಡನಾಡಿನ ಏಳಿಗೆಯ ದಾರಿ ಸುಗಮ ಆಗೋದು ಕಾಣ್ತಾ ಇರುವಾಗ ಇವೆಲ್ಲಾ ಓಕೆ ಗುರು!

ಸಮಾವೇಶದಲ್ಲಿ ನಾಡಕಟ್ಟೋ ಚರ್ಚೆ

ಈ ಸಮಾವೇಶಕ್ಕೆ ಕನ್ನಡನಾಡಿನ ಎಲ್ಲಾ ಜಿಲ್ಲೆಗಳಿಂದಲೂ ಬಂದಿದ್ದ ಕನ್ನಡಪರ ಹೋರಾಟಗಾರರಿಗೆ ದಾರಿ ತೋರಲು ಪಾಟೀಲ್ ಪುಟ್ಟಪ್ಪ, ದೇ ಜವರೇಗೌಡ, ಶಿಕ್ಷಣ ಕ್ರಾಂತಿ ಮತ್ತು ಅಧ್ಯಾತ್ಮದ ಮೂಲಕ ನಾಡಿಗರ ಸೇವೆ ಮಾಡುತ್ತಿರುವ ಅನೇಕ ಮಠಗಳ ಸ್ವಾಮೀಜಿಗಳು, ರೈತ ನಾಯಕರುಗಳು, ಚಿಂತಕರುಗಳು ಅಲ್ಲಿ ನೆರೆದಿದ್ದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು.

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
" ಎನ್ನುವ ಸಂದೇಶ ಸಾರಿದ ಈ ಸಮಾವೇಶ ಕೈಗೊಂಡ ನಿರ್ಣಯಗಳ ಹಿಂದೆ ಕನ್ನಡಿಗರ ಉಳಿವು-ಏಳ್ಗೆಗಳ ಬಗ್ಗೆ ಸಾಕಷ್ಟು ಚಿಂತನೆಯಾಗಿ ಕನ್ನಡಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆಯ ಗೌರವ ಹೆಚ್ಚಿಸಿದೆ ಅಂದ್ರೆ ತಪ್ಪಲ್ಲ. ಇದು ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆ ಕನ್ನಡ ನಾಡು ತುಂಬು ಭರವಸೆಯಿಂದ ನೋಡುವಂತೆ ಮಾಡಿರೋದು ಮಾತ್ರಾ ಹದಿನಾರಾಣೆ ನಿಜಾ ಗುರು.

ಇಂಥಾ ಸಮಾವೇಶ ನಡ್ಯೋದ್ರಿಂದ ನಾಡಿನ ಮೂಲೆಮೂಲೆಗಳ ಜನ ಒಂದೆಡೆ ಒಂದೇ ಉದ್ದೇಶಕ್ಕಾಗಿ ಒಟ್ಟು ಸೇರಿ ಚರ್ಚೆ ಮಾಡಿ, ಹಾಗೆ ಒಂದಾಗಿ ಸೇರಿದ್ದ ಕಾರಣಕ್ಕೇ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುಸ್ಕೊಳೋದು ಸಾಧ್ಯ ಆಗುತ್ತೆ ಗುರು. ರಾಜಧಾನಿಯ ಬೀದಿ-ಬೀದಿಗಳಲ್ಲಿ ಕನ್ನಡಿಗರ ಈ ಪಡೆ ಮೆರವಣಿಗೆ ನಡೆಸಿದ್ದು ಕನ್ನಡ ವಿರೋಧಿಗಳಿಗೊಂದು ಎಚ್ಚರಿಕೆ ಸಂದೇಶಾನೂ ಕೊಟ್ಟಂಗಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡ ಹೋರಾಟಗಾರರು ಒಂದಾಗಿ ಬಂದು, ಎಷ್ಟೊಂದು ಕನ್ನಡವನ್ನು ಕಡೆಗಣಿಸಿರೋ ಅಂಗಡಿ ಮುಂಗಟ್ಟುಗಳು ದಾರಿ ತುಂಬಾ ಇದ್ರೂ ಅತ್ಯಂತ ಸಂಯಮದಿಂದ ಯಾವ ಅಹಿತಕರ ಘಟನೆ ನಡೆಯದ ಹಾಗೆ ನಡೆದುಕೊಂಡ ರೀತಿ ನಿಜಕ್ಕೂ ವೇದಿಕೆಯ ಒಳಶಿಸ್ತನ್ನು ತೋರಿಸ್ತಿದೆ.

ಚಿಂತನೆ ಒಂದೇ ಸಾಲದು, ಸಂಘಟನಾಶಕ್ತಿಯೂ ಬೇಕು

ಹೌದು, ಇವತ್ತಿನ ದಿನ ಕನ್ನಡನಾಡಿನ ಏಳಿಗೆಗೆ ದಾರಿ ತೋರುವ ಚಿಂತಕರುಗಳ ಅಗತ್ಯ ಎಷ್ಟಿದೆಯೋ ಅದನ್ನು ಈಡೇರಿಸಲು ಕರ್ನಾಟಕ ರಕ್ಷಣಾ ವೇದಿಕೆಯಂತಹ ಒಂದು ಸಂಘಟನೆಯ ಅಗತ್ಯವೂ ಅಷ್ಟೇ ಇದೆ ಗುರು. ನೆನಪಿಡಿ, ಕರ್ನಾಟಕದ ಇತಿಹಾಸದಲ್ಲಿ ವಿಶೇಷವಾಗಿ ಈ ಐವತ್ತೊಂದು ವರ್ಷಗಳಲ್ಲಿ ನಾಡಿಗರನ್ನೆಲ್ಲಾ ಕನ್ನಡ ಬಾವುಟದ ಅಡಿಯಲ್ಲಿ ಸಂಘಟಿಸಿದ ಪುರಾವೆಗಳಿಲ್ಲ. ಅದು ಈಗ ನಾರಾಯಣ ಗೌಡ್ರ ಮುಂದಾಳತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರಲ್ಲಿ ಆಗ್ತಾ ಇದೆ ಅನ್ನೋದು ಸಂತಸದ ಸುದ್ದಿ ಗುರು! ಕನ್ನಡಿಗರ ಆತ್ಮವಿಶ್ವಾಸ ಇಮ್ಮಡಿಸಿ ಒಂದೇ ಸೂರಿನಡಿಯಲ್ಲಿ ನಾಡಿನ ಮೂಲೆಮೂಲೆಗಳಿಂದ ಬಂದ ಒಂದು ಲಕ್ಷಕ್ಕೂ ಹೆಚ್ಚು ಕನ್ನಡಿಗರನ್ನ ಒಗ್ಗೂಡಿಸಿ ಕನ್ನಡದ ದೀಕ್ಷೆ ಕೊಡಿಸೋ ಈ ಒಂದು ಸಮಾವೇಶವನ್ನ ನಡೆಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರಿಗೆ ಸಲಾಂ!

ಇಬ್ಬರು ಹೆಂಡಿರ ಮುದ್ದಿನ ಲಾಯರ್!

ಇತ್ತೀಚೆಗೆ ಕರ್ನಾಟಕದಲ್ಲಿನ ("ಕೆಳ") ನ್ಯಾಯಲಯಗಳಲ್ಲಿ "ಆದಷ್ಟೂ" ಕನ್ನಡದಲ್ಲೇ ಕೆಲಸ ನಡೀಬೇಕು ಅಂತ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ರು. ನ್ಯಾಯಾಲಯ ಇದನ್ನ ಯಶಸ್ವಿಗೊಳಿಸೋಕ್ಕೆ ಅಲ್ಲಿನ ವಕೀಲರಿಂದಲೇ ಸಾಧ್ಯ ಅಂತ ಹೇಳಿ, ವಕೀಲರ ಮೇಲೆ ತಮ್ಮ ವಾದಗಳಲ್ಲಿ ಕನ್ನಡದ ಬಳಕೆಯ ಮೇಲೆ ಹೆಚ್ಚಿನ ಒತ್ತಡ ತಂದಿದೆ. ವಕೀಲರು ಇದರಲ್ಲಿ ಮುಖ್ಯವಾದ ಪಾತ್ರ ವಹಿಸಿದಾರೆ ಅನ್ನೋದು ನಿಜವಾದರೂ ನ್ಯಾಯಲಯಗಳಲ್ಲಿ ಕನ್ನಡದ ಅನುಷ್ಠಾನ ಅಂದ್ರೆ ಅದು ಬರೀ ವಕೀಲರು ಉಪಯೋಗಿಸೋ ಭಾಷೆಯಲ್ಲಿ ಬದಲಾವಣೆ ಮಾತ್ರ ಅಲ್ಲ; ನ್ಯಾಯಾಲಯಗಳಲ್ಲಿ ಕಾನೂನಿಗೆ ಸಂಬಂಧ ಪಟ್ಟ ಪ್ರತಿಯೊಂದು ಕಡತಾನೂ, ನ್ಯಾಯಾಂಶಗಳೂ, ಒಳಾಡಳಿತವೂ, ಭಾರತೀಯ ಸಂವಿಧಾನವೂ, ಕಾನೂನು ಪುಸ್ತಕಗಳೂ - ಎಲ್ಲವೂ ಕನ್ನಡದಲ್ಲಿರಬೇಕು.

ಒಂದು ವ್ಯವಸ್ಥೆ ಸುಗಮವಾಗಿ ನಡೀಬೇಕು ಅಂದ್ರೆ ಅದರಲ್ಲಿರೋ ಜನರು ಒಂದೇ ಭಾಷೆ ಮಾತಾಡ್ತಾ ಇರಬೇಕು ಅನ್ನೋದು ಸ್ಪಷ್ಟ. ಕಾನೂನಿಗೆ ಸಂಬಂಧ ಪಟ್ಟ ಎಲ್ಲಾ ಕಡತಗಳು, ನ್ಯಾಯಾಂಶಗಳು, ನಮ್ಮ ಸಂವಿಧಾನ, ಇವೆಲ್ಲಾ ಇಂಗ್ಲಿಷಿನಲ್ಲೇ ಇದ್ರೆ ಕರ್ನಾಟಕದ ಜನರಿಗೆ ಏನ್ ಅರ್ಥ ಆಗತ್ತೆ ಗುರು? ಅರ್ಥವಾಗದ ಭಾಷೇಲಿರೋ ನ್ಯಾಯವನ್ನ ವಕೀಲಿ ಕಲೀತಿರೋರು ಅದೆಷ್ಟು ಚೆನ್ನಾಗಿ ಕಲಿತಾರು? ಆ ವ್ಯವಸ್ಥೆಯಲ್ಲಿರೋ ಲೋಪದೋಷಗಳ್ನ ಅದೆಷ್ಟು ತಿದ್ದಾರು? ವಕೀಲರಾದಮೇಲೆ ಇಂಗ್ಲೀಷ್ ಬಾರದ ಗಿರಾಕಿಗಳಿಗೆ ಅದೆಷ್ಟು ನ್ಯಾಯ ಕೊಡಿಸಾರು? "ಇಬ್ಬರು ಹೆಂಡಿರ ಮುದ್ದಿನ ಪೋಲೀಸ್" ಇದ್ದಂಗೆ ಈಕಡೆ ಕನ್ನಡದ ಜನ, ಆಕಡೆ ಇಂಗ್ಲೀಷಿನ ಪುಸ್ತಕಗಳು - ಇವುಗಳ ನಡುವೆ ವಕೀಲನ ಕತೆ ಏನಾಗಬೇಕು? ಈ ಇಂಗ್ಲೀಷ್ಮಯ ವ್ಯವಸ್ಥೆಯಿಂದ ನ್ಯಾಯ ಬೇಕಾದೋರಿಗೂ ಕಷ್ಟ, ಕೊಡೋರಿಗೂ ಕಷ್ಟ, ಕೊಡಿಸೋರಿಗೂ ಕಷ್ಟ!

ಕೊನೆ ಗುಟುಕು

ಕಾನೂನು ಅರ್ಥವಾಗೋದು ಇಂಗ್ಲೀಷ್ ಬರೋರಿಗೆ ಮಾತ್ರ ಅನ್ನೋ ಹುಚ್ಚುತನ ನಮ್ಮಲ್ಲಿ ಇರೋದ್ರಿಂದ್ಲೇ ಇತ್ತೀಚೆಗೆ ಬಿಟ್ಟಿ ಕಾನೂನು ಸಲಹೆ ಕೊಡೋ ಕೇಂದ್ರಗಳು ಹುಟ್ಟಿಕೊಂಡಿವೆ ಅನ್ನಿಸುತ್ತೆ! ಈ ನಾಟಕಗಳ್ನೆಲ್ಲಾ ಬಿಟ್ಟು ನ್ಯಾಯಾಲಯಗಳು ಸಂಪೂರ್ಣವಾಗಿ ಕನ್ನಡೀಕರಣಗೊಳ್ಳಬೇಕು ಗುರು!

ಮಿಲನದ ಹಾಡಿಗೆ ಎಂಕನ ಭಾಷ್ಯ

ಹುಚ್ಚುಹಿಡಿದ ಭಕ್ತ ಒಬ್ಬ ಪ್ರತಿಯೊಂದರಲ್ಲೂ ತನ್ನ ಪ್ರೀತಿಯ ಭಗವಂತನ್ನ ಕಾಣೋಹಾಗೆ, ಪ್ರೀತಿಸುತ್ತಾ ಇರೋ ಒಬ್ಬನಿಗೆ ಎಲ್ಲೆಲ್ಲೂ ತನ್ನ ನಲ್ಲೆ ಕಂಡಂಗೆ ಎಂಕನಿಗೆ ಮಿಲನ ಚಿತ್ರದಲ್ಲಿ ಜಯಂತ ಕಾಯ್ಕಿಣಿ ಬರೆದಿರೋ ಒಂದು ಹಾಡಲ್ಲಿ ಬರೀ ಕನ್ನಡಿಗನಿಗೆ ಏಳಿಗೆಯ ಕಿವಿಮಾತೇ ತುಂಬಿತ್ತು ಅಂತ ನಮಗೆ ಬಂದು ಹೇಳಿದ. "ಅದೆಂಗ್ಲಾ ಎಂಕ?" ಅಂತ ಕೇಳಿದಾಗ ಔನು ಆ ಹಾಡಿಗೆ ಕೊಟ್ಟ ಭಾಷ್ಯ ಒಸಿ ಹಿಂಗಿತ್ತು:

ಈ ಹಾಡಲ್ಲಿ ಒಬ್ಬ ಕನ್ನಡಿಗ ತನ್ನ ಕನಸಿನ ಕರ್ನಾಟಕದೆಡೆಗೆ ಹೊರ್ಟಿರ್ತಾನೆ ಗುರು! ಅವನಿಗೆ ಕವಿ ಹೀಗೆ ಹೇಳ್ತಾನೆ:
ಕಿವಿಮಾತೊಂದು ಹೇಳಲೇ ನಾನಿಂದು ದಾರಿ ನಿಂತಾಗ ಸಾಗಲೇ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೇ ಬೇಕಿಂದು ||ಪ||

ಕನ್ನಡಿಗನಿಗೆ ಏಳಿಗೆಯ ದಾರಿ ನಿಂತುಹೋಗಿದೆ ಅನ್ನಿಸಿದೆ. ಅವನಿಗೆ ಕವಿ ಹೇಳಿರೋದು ಏನು ಅಂದ್ರೆ - ನೀನು ನಿನ್ನೆ ಏನೇ ಆಗಿರು (ವಿಜಯನಗರದ ಅರಸನೇ ಆಗಿರು, ಇಲ್ಲವೇ ಬ್ರಿಟಿಷರ ಕಾಲಾಳೇ ಆಗಿರು), ಆ ನೆನ್ನೆ ಅನ್ನೋದು ಈಗಿಲ್ಲ. ನಾಳೆ ನೀನೇನಾಗ್ತ್ಯಾ ಅನ್ನೋದು ತಿಳಿದಿಲ್ಲ. ಆದ್ರೆ ಒಂದು ಖಂಡಿತ ಏನಪ್ಪಾ ಅಂದ್ರೆ ನೀನು ಇವತ್ತು ನಿನ್ನತನವನ್ನ ಬಿಟ್ಟು ಬಾಳಕ್ಕಾಗಲ್ಲ, ನೀನು ನೀನಾಗೇ ಬಾಳಬೇಕು. ಅಂದ್ರೆ - ನೀನು ನಿನ್ನ ಕನ್ನಡತನವನ್ನ ಬಿಡದೇ ಬಾಳಬೇಕು. ಹೀಗೆ ನೀನಾಗಿ ಬಾಳುವುದು ಬಿಡುವುದು ಎಂಬ ಆಯ್ಕೆ ನಿನ್ನದಲ್ಲ. ನೀನಿಲ್ಲಿ ಅಸ್ವತಂತ್ರ. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ನೀನಾಗಿ ಬಾಳಲೇಬೇಕು.
ಹಸಿರಾಗಿದೆ ದ್ವೀಪವು ನಿನಗಾಗಿ ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ||೧||

ಹಸಿರಾದ ದ್ವೀಪ ಅಂದರೆ ಕನಸಿನ ಕರ್ನಾಟಕ. ಹಸಿರು ಸಮೃದ್ಧಿಯ ಸೂಚಕ. ದ್ವೀಪ ಹೇಗೆ? ಹೇಗೆ ಎಂದರೆ ಇಡೀ ಪ್ರಪಂಚ ಎಂಬ ಸಾಗರದಲ್ಲಿರೋದರಿಂದ ದ್ವೀಪ. ಈ ಕನಸಿನ ಕರ್ನಾಟಕ - ಯಾವುದು ಗುರಿಯೋ ಆ ಕನಸಿನ ಕರ್ನಾಟಕ ನಿನಗಾಗೇ ಇದೆ, ಮತ್ತೊಬ್ಬನಿಗಲ್ಲ. ಮತ್ತೂ ಏನೆಂದರೆ ಆ ಹಸಿರಾದ ದ್ವೀಪ - ಎಂದರೆ ಸಮೃದ್ಧ ಕರ್ನಾಟಕ - ಮುಂದೆ ಇದ್ದೇ ಇದೆ. ಇದೆಯೋ ಇಲ್ಲವೋ ಎನ್ನುವ ಸಂದೇಹ ಬೇಡ. ಆ ಗುರಿಯ ಕಡೆಗೆ ನಸುನಗುತಲೇ ನೀನು ಗೆಲುವುಮೊಗದವನಾಗಿ ಸಾಗು! ಹೊಸ ಎಂದರೆ ಇವತ್ತಿನ ಜಾಗತೀಕರಣವಾಗಿರೋ. ತಂಗಾಳಿ ಯಾಕೆ ಅಂದರೆ ಅದರಿಂದ ಕನ್ನಡಿಗನಿಗೆ ಒಳಿತೇ ಆಗಿದೆ. ಅ ಹೊಸ ತಂಗಾಳಿ ಮೆಲುವಾಗಿ ಹೇಳಿದೆ. ಮೆಲುವಾಗಿ ಎಂದರೆ ಬುದ್ಧಿವಂತರ ಕಿವಿಗೆ ಮಾತ್ರ ಕೇಳಿಸುವ ಹಾಗೆ. ಏನು ಹೇಳಿದೆ? ಈ ಬಾಳುಂಟು ಬಾಳುವ ಸಲುವಾಗಿ. ಈ ಬಾಳು ಎಂದರೆ ಕನ್ನಡಿಗನಾಗಿ ಹುಟ್ಟಿರುವ ಈ ಬಾಳು. ಇದು ಬಾಳುವ ಸಲುವಾಗಿಯೇ ಇದೆ ಎಂದರೆ ನೀನು ಕನ್ನಡಿಗನಾಗಿಯೇ ಸದಾಕಾಲ ಬಾಳಬೇಕು ಎಂದರ್ಥ. ಬಾಳೇ ಬಾಳ್ತೀಯ, ಬಾಳದೆ ಹೇಗಿರಬಲ್ಲೆ ನೀನು? ಇದು ನಿನ್ನ ಕೈಯಲ್ಲಿ ಇಲ್ಲವೇ ಇಲ್ಲ!
ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು ಓಡಲೇಬೇಕು ನೀನಿಂದು ||೨||

ಕನ್ನಡಿಗ ಇವತ್ತಿನ ದಿನ ನಾಲ್ಕು ಗೋಡೆಗಳ ನಡುವ ಒಬ್ಬೊಬ್ಬನೇ ಇದ್ದಾನೆ, ಇತರ ಕನ್ನಡಿಗರೊಡನೆ ಒಗ್ಗೂಡಿಲ್ಲ. ಆ ನಾಲ್ಕುಗೋಡೆಗಳ ಬಾಗಿಲಿನಾಚೆಗೆ ಬಾಳು - ಎಂದರೆ ಜೀವನ - ಅವನನ್ನು ಬಾ ಎಂದು ಕರೆದಿದೆ. ಇಲ್ಲಿ ಕನ್ನಡಿಗ ಎಂದರೆ ಒಬ್ಬನೇ ಅಲ್ಲ, ಕೋಟಿಗಟ್ಟಲೆ ಜನ. ಇವರೆಲ್ಲ ಬಾಗಿಲಿನಾಚೆಗೆ ಬಂದಾಗಲೇ ಅದು ಬಾಳು. ಎಂದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಗೂಡಿನಿಂದ ಹೊರಬಂದು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟನ್ನೇ ಇಲ್ಲಿ ಬಾಳು ಎಂದಿರುವುದು. ಒಗ್ಗಟ್ಟಿಲ್ಲದೆ ತನ್ನ ನಾಲ್ಕು ಗೋಡೆಯೊಳಗೆ ಕೂತಿರುವುದು ಬಾಳೇ ಅಲ್ಲ, ಸಾವು! ಹೀಗೆ ಒಗ್ಗಟ್ಟೆಂಬ ಬಾಳು ಕೂಗಿದಾಗ ನೀನು ಸಂತಸದಿಂಡ ಓಗೊಟ್ಟು ಓಡಲೇಬೇಕು ಇಂದು - ಎಂದರೆ ನಿನಗೆ ಓಡದೆ ಬೇರೆ ದಾರಿಯಿಲ್ಲ; ಓಡದೆ ಇರುವುದು ನಿನ್ನ ನಿಯಂತ್ರಣದಲ್ಲಿಲ್ಲ!
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದೂ
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು ||೩||

ಸಮಯ - ಎಂದರೆ ಹಿಂದು, ಇಂದು ಮತ್ತು ಮುಂದು - ಇವೆಲ್ಲವೂ ನಿನಗಾಗಿ ಸಾವಿರ ಕಣ್ಣಿನ ನವಿಲಾಗಿ ನಿಂತಿದೆ. ಕಣ್ಣೇಕೆ ಎಂದರೆ ಅದು ನಿನ್ನನ್ನು ನೋಡುತ್ತಿರುವುದರಿಂದ. ಎಂದರೆ ನಿನ್ನ ಹಿಂದಿನವರು, ಇಂದಿನವರು ಮತ್ತು ಮುಂದಿನವರು - ಇವೆರಲ್ಲಾ ನಿನ್ನನ್ನು ಅಸಂಖ್ಯಾತ ಕಣ್ಣುಗಳಿಂದ ನೋಡುತ್ತಿದ್ದಾರೆ, ನಿನ್ನ ಪ್ರತಿಯೊಂದು ಹೆಜ್ಜೆಯನ್ನೂ ಆಲಿಸುತ್ತಿದ್ದಾರೆ. ಇಡೀ ಸಮಯವನ್ನು ಒಂದು ನವಿಲೆಂದಿರುವುದು ಅದರ ಅಂದವನ್ನು ಸೂಚಿಸಲು. ಹೀಗೆ ಸಮಯವೆನ್ನುವುದೇ ಹೆಪ್ಪುಗಟ್ಟಿ ನಿನ್ನನ್ನು ನೋಡುತ್ತಿದ್ದಾಗ ಹಗುರಾಗಿ ಕಣ್ಣನ್ನು ತೆರೆದು ನೀನು ಅದನ್ನು ನೋಡಲೇಬೇಕು ಬಂದು. ಹಗುರಾಗಿ ಏಕೆ ಎಂದರೆ ಪೂರ್ತಿ ನೋಡಲು ಹೊರಟರೆ ನಿನ್ನ ಕಣ್ಣು ಸುಟ್ಟುಹೋದೀತು, ಅದಕ್ಕೆ. ನೋಡಲೇ ಬೇಕು ಎಂದರೆ ಮತ್ತೆ ನಿನಗೆ ನೋಡದೆ ಆಯ್ಕೆಯೇ ಇಲ್ಲ ಎಂಬ ಅರ್ಥ. ಇಡೀ ಸಮಯವೇ ನಿನ್ನ ಮುಂದೆ ನಿಂತಿದ್ದಾಗ ನೀನು ನೋಡದೆ ಇರಲಾರೆ ಎನ್ನುವುದು ಕವಿವಾಣಿ. ಇಲ್ಲೂ ನೋಡುವುದು ಬಿಡುವುದು ನಿನ್ನ ಹತೋಟಿಯಲ್ಲಿಲ್ಲ; ಅಸ್ವತಂತ್ರನು ನೀನು.
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ ||೪||

ಕನ್ನಡಿಗನ ಮೇಲೆ ಕವಿದಿರುವ ಮೋಡಕ್ಕೆ ಒಂದು ಬೆಳ್ಳಿಯ ಅಂಚಿದೆ, ಆದ್ದರಿಂದ ಮೋಡ ಬಾನಲ್ಲಿ ನಗುವ ಬೀರಿದೆ. ಮೋಡ ಇವತ್ತಿನ ತೊಂದರೆಗಳು. ಆ ತೊಂದರೆಗಳೇ ಏಳಿಗೆಗೆ ಬೇಕಾದ್ದೆಲ್ಲವನ್ನೂ ತುದಿಯಲ್ಲಿ ಹೊಂದಿರುವುದರಿಂದ ಬೆಳ್ಳಿಯ ಅಂಚಿರುವುದು. ಹೀಗಿರುವಾಗ ನಿನ್ನ ಬಾಳಿನ ಸಂಗೀತವನ್ನ. ಸಂಗೀತ ಎಂದರೆ ಲಯಬದ್ಧವಾದ ಮತ್ತು ಎಲ್ಲರಿಗೂ ಇಷ್ಟವಾಗುವಂಥ ಒಂದು ಗುಂಪುಗಾಯನ. ಇಂತಹ ಒಗ್ಗಟ್ಟಿನ ಗುಂಪುಗಾಯನದಲ್ಲಿ ನಿನ್ನ ಪಾಲನ್ನು ನೀನು ಹಾಡಲೇಬೇಕು. ಹಾಡದೆ ಆಯ್ಕೆ ನಿನಗಿಲ್ಲ ಇಲ್ಲಿ!
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ ||೫||

ಆ ನಿನ್ನ ಕನಸಿನ ಕರ್ನಾಟಕ ಯಾವುದಿದೆಯೋ ಅದರ ಕಡೆಗೆ ನೀನು ಮಿಂಚುವ ಅಲೆಗಳ ನದಿಯಾಗಿ ಬೇಗನೆ ಚಲಿಸು. ಮಿಂಚುವ ಅಲೆ ಏತಕ್ಕೆ ಎಂದರೆ ಸೂರ್ಯನ ಶಕ್ತಿಯನ್ನು ಬಿಂಬಿಸುವುದರಿಂದ. ನದಿ ಬೇಗ ಏತಕ್ಕೆ ಚಲಿಸುತ್ತದೆ ಎಂದರೆ ಕಲ್ಲು-ಬಂಡೆಗಳ ಅಡಚಣೆಗಳಿಂದ. ಹೀಗೆ ಬೇಗ ಬೇಗನೆ ನದಿಯಾಗಿ ಹರಿದು ನೀನು ನಿನ್ನ ಪಾಲಿನ ಆಟವನ್ನು ಆಡಲೇಬೇಕು. ಏನು ಆಟ? ಈ ಬಾಳೆಂಬ ಆಟ - ಯಾವುದರಲ್ಲಿ ನೀನು ಕನಸಿನ ಕರ್ನಾಟಕವನ್ನು ಕಟ್ಟಲು ಹೊರಟಿದೆಯೋ ಆ ಆಟ. ಆಡಲೇಬೇಕು ಎಂದರೆ ಅದು ಕವಿ ಕನ್ನಡಿಗನಿಗೆ ಮಾಡಿರುವ ಆಜ್ಞೆಯಲ್ಲ, ಅವನ ಅಸ್ವತಂತ್ರತೆಯನ್ನ ಸೂಚಿಸುತ್ತಿದೆ. ಆ ಆಟವನ್ನು ನೀನು ಆಡುವುದಿಲ್ಲ ಎಂದುಕೊಂಡರೂ ನೀನು ಆಡಲೇಬೇಕು. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ಆಡಲೇಬೇಕು, ಕನ್ನಡಿಗನಾಗಿ ಬಾಳಲೇಬೇಕು, ನಿಂತ ದಾರಿಯಲ್ಲಿ ಮುಂದೆ ಸಾಗಲೇಬೇಕು, ಒಗ್ಗಟ್ಟಾಗಲೇಬೇಕು, ನಿನ್ನ ಕನಸಿನ ಕರ್ನಟಕವನ್ನು ನೀನು ಹೋಗಿ ಮುಟ್ಟಲೇಬೇಕು; ನಿನಗಿಲ್ಲಿ ಆಯ್ಕೆಯಿಲ್ಲ, ಇದಾವುದೂ ನಿನ್ನ ಹತೋಟಿಯಲ್ಲಿಲ್ಲ; ಎಲ್ಲಾ ಆಗಲೇಬೇಕು!

ಅಲ್ಲ - "ಅದೆಂಗ್ಲಾ ಎಂಕ?" ಅಂತ ಕೇಳಿದ ತಕ್ಷಣ ಇಷ್ಟೆಲ್ಲಾ ಹೇಳಿದನಲ್ಲ, ಎನಾದರೂ ಅರ್ಥವಾಯಿತಾ ಗುರು? ಸುಮ್ಮನೆ ಹೋಗಿ ಪೂಜಾ ಗಾಂಧೀನೂ ಐಟಂ ಹಾಡ್ನೂ ನೋಡ್ಕೊಂಡ್ ಬಾರ್ಲಾ ಅಂದ್ರೆ ಯೇನೋ ಬುಟ್ಟ ಸಿದ್ಧಾಂತ!

ಬ್ರಿಟಿಷರು, ಕನ್ನಡ, ಬೃಹದಾರಣ್ಯಕ ಉಪನಿಷತ್ತು ಮತ್ತು ನಾವು

ಬ್ರಿಟಿಷರು ಹೇಗೆ ಆಡಳಿತದಲ್ಲಿ ಕನ್ನಡದ ಬಳಕೆ ಮಾಡ್ತಿದ್ರು ಅನ್ನೋ ಬಗ್ಗೆ ವಿ.ಕ. ದಲ್ಲಿ ನಟರಾಜ್ ಅವರ ಬರಹದ ಬಗ್ಗೆ ಮೊನ್ನೆಮೊನ್ನೆ ಬರೆದಿದ್ದೆವು. ಆ ಬ್ರಿಟಿಷರು ಕನ್ನಡಕ್ಕಾಗಿ ಕೆಲಸ ಮಾಡಿದರು ಇಲ್ಲವೇ ಕನ್ನಡಕ್ಕಾಗಿ ಕೈ ಎತ್ತಿದರು ಇಲ್ಲವೇ ಕನ್ನಡವನ್ನ ಉದ್ಧಾರ ಮಾಡಿದರು ಅನ್ನೋದು ಗೌಣವಾಗಿ ಏರ್ಪಟ್ಟಿದ್ದರೂ ಅದೇ ಅವರಿಂದ ಕಲೀಬೇಕಾದ ಪಾಠ ಅಲ್ಲ. ಪಾಠ ಇನ್ನೂ ಆಳವಾದ್ದು.

ಆಡಳಿತದಲ್ಲಿ ಕನ್ನಡದ ಬಳಕೆ ಮಾಡ್ತಿದ್ದ ಬ್ರಿಟಿಷರ ಕತೆಯ ಮುಖ್ಯ ಸಂದೇಶ ಏನೂಂದ್ರೆ ಔರು ತಮ್ಮ ಆಡಳಿತ ಮತ್ತು ವ್ಯಾಪಾರದ ಕೆಲಸವನ್ನ ಆದಷ್ಟೂ ಸಮರ್ಪಕವಾಗಿ ಮಾಡಬೇಕಾದರೆ ಅದಕ್ಕೆ ಕನ್ನಡ ಕಲೀಬೇಕು, ಕನ್ನಡದಲ್ಲೇ ಮಾಡಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡಿದ್ರು ಅನ್ನೋದು. ಇವತ್ತು ನಮ್ಮ ಜನ ಇದನ್ನ ಮರೆತು ಬ್ರಿಟಿಷರಿಗೆ ಕನ್ನಡಾಭಿಮಾನ ಇತ್ತು ಅಂತ ತಪ್ಪು ಅರ್ಥ ಮಾಡ್ಕೊಳೋದು, ಔರ ಬಗ್ಗೆ ಭಯ ಭಕ್ತಿ ಬರೆಸಿಕೊಳ್ಳೋದು - ಇವೆಲ್ಲಾ ಮೂರ್ಖತನಾನೂ ಹೌದು, ನಿಜಕ್ಕೂ ನಮ್ಮ ಜೀವನದಲ್ಲಿ ನಮ್ಮ ಭಾಷೆಯ ಸ್ಥಾನ ಅಂದ್ರೆ ಏನು ಅಂತ ಅರ್ಥ ಮಾಡ್ಕೊಳ್ದೇ ಇರೋದೂ ಹೌದು.

ಔರು ಯಾರೂ ಕನ್ನಡ ಅನ್ನೋ ಒಂದು ವಸ್ತೂನ ಉದ್ಧಾರ ಮಾಡಕ್ಕೆ ಹೊರಡಲಿಲ್ಲ. ಔರು ತಮ್ಮ ಉದ್ಧಾರ ಮಾಡ್ಕೊಳಕ್ಕೇ ಹೊರಟಿದ್ದು. ಜೊತೆಗೆ ಕನ್ನಡ ಬೆಳೀತು, ಅಷ್ಟೆ. ಇವತ್ತಿನ ದಿನವೂ ಅಷ್ಟೆ, ಏನೋ ಕನ್ನಡ ಉದ್ಧಾರ ಮಾಡ್ತೀನಿ ಅಂತ ಯಾರೂ ಹೊರಡಬೇಕಾಗಿಲ್ಲ. ಉದ್ಧಾರ ಮಾಡ್ಕೋಬೇಕಾಗಿರೋದು ನಮ್ಮನ್ನ ಮಾತ್ರ. ಜೊತೆಗೆ ಕನ್ನಡ ಬೆಳೆಯತ್ತೆ, ಅಷ್ಟೆ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮೈತ್ರೇಯಿಗೆ ಯಾಜ್ಞ್ಯವಲ್ಕ್ಯ ಇದನ್ನೇ ಹೇಳಿದ್ದ:
ಸಂಸ್ಕೃತದಲ್ಲಿ:ನ ವಾ ಅರೇ ಭೂತಾನಾಂ ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ
ಆತ್ಮನಸ್ತು ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ |
ನ ವಾ ಅರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವತಿ
ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ |

ಕನ್ನಡದಲ್ಲಿ:
ಅರೇ! ಜೀವಿಗಳ ಬಯಕೆಯಿಂದ ಜೀವಿಗಳು ಪ್ರಿಯವಾಗವು
ಆತ್ಮದ ಬಯಕೆಯಿಂದ ಜೀವಿಗಳು ಪ್ರಿಯವಾಗುತ್ತವೆ |
ಅರೇ! ಎಲ್ಲದರ ಬಯಕೆಯಿಂದ ಎಲ್ಲವೂ ಪ್ರಿಯವಾಗದು
ಆತ್ಮದ ಬಯಕೆಯಿಂದ ಎಲ್ಲವೂ ಪ್ರಿಯವಾಗುತ್ತದೆ |

ಈ ಸಂದರ್ಭದಲ್ಲಿ ಈ ಶ್ಲೋಕವನ್ನ ಅರ್ಥ ಮಾಡ್ಕೋಬೇಕಾಗಿರೋದು ಹೀಗೆ:
ಅರೇ! ಕನ್ನಡದ ಬಯಕೆಯಿಂದ ಕನ್ನಡವು ಪ್ರಿಯವಾಗದು
ಆತ್ಮದ ಬಯಕೆಯಿಂದ ಕನ್ನಡವು ಪ್ರಿಯವಾಗುತ್ತದೆ |

ಒಟ್ನಲ್ಲಿ ಆ ಬ್ರಿಟಿಷರೂ ಯಾವುದೋ "ಕನ್ನಡ" ಅನ್ನೋ ತಮಗಿಂತ ಬೇರೆಯಾದ ಒಂದು ವಸ್ತುವನ್ನ ಬಯಸಿ ಅದನ್ನ ಉದ್ಧಾರ ಮಾಡಕ್ಕೆ ಹೊರಡಲಿಲ್ಲ, ನಾವೂ ಹೊರಡಬಾರದು. ನಮ್ಮ ಉದ್ಧಾರವನ್ನ ಬಯಸಿ ಕೆಲಸ ಮಾಡಿದಾಗ ತಾನೇ ಕನ್ನಡ ಉದ್ಧಾರವಾಗುತ್ತೆ. ಆ ಬ್ರಿಟಿಷರ ಕಾಲದಲ್ಲೂ ಇದೇ ಆಗಿದ್ದು. ಔರು ತಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಹೊರಟಿದ್ದಕ್ಕೇ ಔರು ಅಷ್ಟು "ಕನ್ನಡಕ್ಕಾಗಿ ಕೈ ಎತ್ತಿದ್ದು" ಗುರು! ನಮ್ಮ ಉದ್ಧಾರವನ್ನ ನಾವು ಬಯಸದೆ ಎಷ್ಟು "ಕನ್ನಡಕ್ಕಾಗಿ ಕೈ ಎತ್ತಿದರೂ" ಕನ್ನಡವೂ ಉದ್ಧಾರವಾಗಲ್ಲ, ನಾವೂ ಉದ್ಧಾರವಾಗಲ್ಲ (ಮೊದಲನೇದು ಗೌಣವಾಗಿ, ಎರಡನೇದು ನೇರವಾಗಿ). ಈ ಮಾತು ಆಡಳಿತ ಮತ್ತು ವ್ಯಾಪಾರಗಳಿಗೆ ಹೇಗೆ ಅನ್ವಯಿಸುತ್ತೋ ಹಾಗೇ ಅಧ್ಯಾತ್ಮದ ವಿಷಯದಲ್ಲೂ ಅನ್ವಯಿಸುತ್ತೆ. ಏನ್ ಗುರು?

ಕೊನೆ ಗುಟುಕು

"ಇದೇನಿದು? ಏನ್ಗುರು ಸಂಸ್ಕೃತದ ಶ್ಲೋಕ ಬರೆಯೋದೆ?" ಅಂತೀರಾ? ಹ್ಹ ಹ್ಹ! ಸಂಸ್ಕೃತದಿಂದ ಕಲೀಬೇಕಾಗಿರೋದನ್ನ ನಾವು ಕಲೀಲೇಬೇಕು. ಕಲೀಬಾರದ್ದನ್ನ ಕಲೀಬಾರದು, ಅಷ್ಟೆ (ಕಲೀಬೇಕಾಗಿರೋದನ್ನ ಕಲಿಯಕ್ಕಾಗದೇ ಇರೋರೇ ಕಲೀಬಾರದ್ದನ್ನ ಕಲಿಯೋದು). ಇದು ಸಂಸ್ಕೃತಕ್ಕೆ ಮಾತ್ರ ಅಲ್ಲ, ಎಲ್ಲಾದಕ್ಕೂ ಅನ್ವಯಿಸುತ್ತೆ ಗುರು!

ಸರ್ವಶಿಕ್ಷಾ ಅಭಿಯಾನದಲ್ಲಿ ಕೇಂದ್ರದ ಸೋಲು: ಗೊತ್ತಿದ್ದ ವಿಷಯವೇ!

"ಶಾಲೆಯ ಚಟುವಟಿಕೆಗಳಲ್ಲಿ ಸಮುದಾಯದ ಕ್ರಿಯಾತ್ಮಕ ಸಹಭಾಗಿತ್ವದ ಮೂಲಕ ಎಲ್ಲ ಸಾಮಾಜಿಕ ಮತ್ತು ಲಿಂಗ ಸಂಬಂಧಿ ಕಂದರಗಳನ್ನು ನಿವಾರಿಸಿ, 2010 ರೊಳಗೆ ಎಲ್ಲರಿಗೂ ತೃಪ್ತಿದಾಯಕ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡುವುದು" ಅನ್ನೋ ಉದ್ದೇಶ ಇಟ್ಕೊಂಡಿರೋ ಸರ್ವಶಿಕ್ಷಾ ಅಭಿಯಾನದಲ್ಲಿ ಶಿಕ್ಷಣ ಕೊಡಕ್ಕೆ ಹೊರ್ಟಿರೋರಿಗೂ ಪಡೆಯೋರಿಗೂ ಎಂಥಾ "ಕಂದರ" ಇದೆ ಅಂತ ಇವತ್ತಿನ ಪ್ರಜಾವಾಣೀಲಿ ಕನ್ನಡ ವಿ.ವಿ. ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಟಿ. ಆರ್. ಚಂದ್ರಶೇಖರ ತೋರಿಸಿಕೊಟ್ಟಿದ್ದಾರೆ.

ಕೇಂದ್ರಸರ್ಕಾರದ ಈ ಅಭಿಯಾನ ಸ್ಥಳೀಯ ಅಂಕಿ-ಅಂಶಗಳು, ಸ್ಥಳೀಯ ಪರಿಸ್ಥಿತಿಗಳ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡಕ್ಕಾಗದೆ ಹೇಗೆ "ದಿಕ್ಕು ತಪ್ಪಿದೆ" ಅಂತ ಚಂದ್ರಶೇಖರ ಅವರ ಪದಗಳಲ್ಲೇ ಓದಿ:
ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಕಾರ್ಯಕ್ರಮದ ಮುಖ್ಯ ಸಮಸ್ಯೆಯೇನೆಂದರೆ ಅದಕ್ಕೆ ಪ್ರಾದೇಶಿಕ ಆಯಾಮ ಇಲ್ಲದಿರುವುದು. ಇದ್ದರೂ ಅದಕ್ಕೆ ನೀಡಬೇಕಾದಷ್ಟು ಮಹತ್ವವನ್ನು ನೀಡಿಲ್ಲ. ತಾತ್ವಿಕವಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ, ಆದರೆ ಅವುಗಳನ್ನು ರಾಜ್ಯ ಮಟ್ಟದಲ್ಲಿ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಏಕರೂಪಿಯಾಗಿ ಮತ್ತು ಯಾಂತ್ರಿಕವಾಗಿ ತಯಾರಿಸಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಪ್ರಾದೇಶಿಕ ಅಂತರ-ಅಸಮಾನತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳು ತಯಾರಾಗುತ್ತಿಲ್ಲ.

[...]

ಈ ಬಗೆಯ ಸಮಸ್ಯೆಗೆ ಸಂಬಂಧಿಸಿದಂತೆ ಸರ್ವಶಿಕ್ಷಾ ಅಭಿಯಾನದಲ್ಲಿ ಗಮನ ನೀಡಿರುವುದು ಕಂಡುಬರುತ್ತಿಲ್ಲ. ಇದರಿಂದಾಗಿ ಸರ್ವರಿಗೂ ಶಿಕ್ಷಣವೆಂಬ ಉದ್ದೇಶವೇ ವಿಫಲಗೊಳ್ಳುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಗೆ ಗಮನ ನೀಡದಿದ್ದರೆ ಸರ್ವಶಿಕ್ಷಾ ಅಭಿಯಾನದ 2010ರ ಗುರಿಯನ್ನು ಸಾಧಿಸುವುದು ರಾಜ್ಯದಲ್ಲಿ ಕಷ್ಟಸಾಧ್ಯವಾಗುತ್ತದೆ.

[...]

ಪ್ರಾದೇಶಿಕ ಅಸಮಾನತೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಿರುವ ಡಾ. ಡಿ. ಎಂ. ನಂಜುಂಡಪ್ಪ ಸಮಿತಿಯು ರಾಜ್ಯದ 175 ತಲ್ಲೂಕುಗಳ ಪೈಕಿ 143 ಶೈಕ್ಷಣಿಕವಾಗಿ ಮುಂದುವರೆದ ತಾಲ್ಲೂಕುಗಳೆಂದೂ ಮತ್ತು 32 ಶೈಕ್ಷಣಿಕ ದುಃಸ್ಥಿತಿಯಲ್ಲಿವೆಯೆಂದೂ ಗುರುತಿಸಿದೆ...ಸರ್ವ ಶಿಕ್ಷಾ ಅಭಿಯಾನದ ತಜ್ಞರು ಇದರ ಬಗ್ಗೆ ಗಮನ ನೀಡಿದಂತೆ ಕಾಣುವುದಿಲ್ಲ.

ಒಟ್ನಲ್ಲಿ ಈ ಸರ್ವಶಿಕ್ಷಾ ಅಭಿಯಾನದಲ್ಲಿ ಕೇಂದ್ರ ಹಾಕಬಾರದ್ದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿರುವುದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ ಗುರು! ಸುಮ್ಮನೆ ಈ ಕೆಲಸವನ್ನ ರಾಜ್ಯಕ್ಕೇ ಬಿಟ್ಟು ಬೇಕಾದ ಅನುದಾನ ಕೊಟ್ಟಿದ್ದರೆ ಸಾಕಾಗಿತ್ತು. ಅಲ್ಲ, 100ಕೋಟಿ ಜನಸಂಖ್ಯೆಯಿರೋ ದೇಶದ ಮೂಲೆಮೂಲೆಗಳಲ್ಲಿ ಹೋಗಿ ಪ್ರಾಥಮಿಕ ಶಿಕ್ಷಣ ಕೊಡ್ತೀನಿ ಅಂತ ದಿಲ್ಲಿ ಅಂದುಕೊಳ್ಳೋದೇ ಮಹಾ ಮೂರ್ಖತನ ಗುರು! ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊನ್ನೆಮೊನ್ನೆ ದಿಲ್ಲಿಯಲ್ಲಿ ನಡೆದ ಒಕ್ಕೂಟ ವ್ಯವಸ್ಥೆಗಳ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ -
Defence, foreign policy and macro-economic management are clearly best dealt at the national level. Other policy issues like health care, education and law and order, are best dealt with at more decentralised levels of governance.

ಅಂತ ಹೇಳಿ ಈ ದೇಶದಲ್ಲಿ ಶಿಕ್ಷಣ ಹೇಗೆ ನಡೀಬೇಕು ಅಂತ ಕೇಂದ್ರ ಅರ್ಥ ಮಾಡ್ಕೊಂಡಿದೆ ಅನ್ನೋ ಭರವಸೆ ಕೊಟ್ಟಿದ್ದಾರಲ್ಲ, ಅದನ್ನ ಜಾರೀಗ್ ತರದೇ ಇರೋದ್ರಿಂದ್ಲೇ ತಾನೆ ಈ ಯೋಜ್ನೆ ಡುಮ್ಕಿ ಹೊಡೀತಿರೋದು? ನಿಜಕ್ಕೂ ಭಾರತೀಯ ಒಕ್ಕೂಟದಲ್ಲಿ ಕೇಂದ್ರ ರಕ್ಷಣೆ ಮತ್ತು ವಿದೇಶಸಂಪರ್ಕ ಮುಂತಾದ ಮಾಡಬೇಕಾದ್ದನ್ನು ಸರಿಯಾಗಿ ಮಾಡಿ ಮಿಕ್ಕಿದ್ದನ್ನು ರಾಜ್ಯಗಳಿಗೆ ಬಿಡೋದೇ ಸರಿಯಾದ ದಾರಿ. ಇದನ್ನ ಅರ್ಥ ಮಾಡ್ಕೊಳ್ದೇ ಇರೋ ಭಾರತೀಯ ಆಡಳಿತ ವ್ಯವಸ್ಥೇಲಿ ಇಂಥಾ ಯೋಜನೆಗಳು ಸೋಲುಣ್ಣೋದು ಖಂಡಿತ! ಭಾರತದ ಒಕ್ಕೂಟ ವ್ಯವಸ್ಥೇಲಿ ಕೇಂದ್ರದ ಪಾತ್ರ ಏನಿರಬೇಕು, ರಾಜ್ಯಗಳ ಪಾತ್ರ ಏನಿರಬೇಕು ಅಂತ ಇದ್ರಿಂದಾನಾದ್ರೂ ಸರಿಯಾಗಿ ಅರ್ಥ ಮಾಡ್ಕೊಳೋ ಪ್ರಯತ್ನ ನಡೀಬೇಕು. ಏನ್ ಗುರು?

ಕನ್ನಡ ಚಿತ್ರಗಳಿಂದ ನಾವೇ ದುಡ್ಡು ಮಾಡ್ಕೋಬೇಕು

ಗೋವಾದಲ್ಲಿ ನಡಿತಿರೋ 38ನೇ ಅಂತರ್ರಾಷ್ಟ್ರೀಯ ಚಲನ-ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಮಿನುಗುತ್ತಿವೆ ಅಂತ ಡೆಕ್ಕನ್ ಹೆರಾಲ್ಡ್ ನಲ್ಲಿ ಸುದ್ಧಿ. ಕನ್ನಡದಲ್ಲಿ ಒಳ್ಳೇ ಚಿತ್ರಗಳು ಇವೆಯಾ, ಅಥವಾ ಇರಕ್ಕೆ ಸಾಧ್ಯ ಇದೆಯಾ, ಜನ ಅದನ್ನು ನೋಡುತ್ತಾರಾ ಅಂತ ಕುಹಕ ಪ್ರಶ್ನೆಗಳ್ನ ಹಾಕೋರಿಗೆ ಈ ವರದಿ ಸರಿಯಾದ ಉತ್ತರ ನೀಡತ್ತೆ ಗುರು!

ಕಳೆದ ಎರಡು ವರ್ಷದಿಂದ ಅನೇಕ ಕನ್ನಡ ಚಿತ್ರಗಳು ಯಶಸ್ಸು ಕಂಡು ಬಂಡವಾಳ ಹಾಕೋರ ಜೇಬು ತುಂಬಿಸಿ ಕನ್ನಡ ಚಿತ್ರಗಳಿಗೆ ಬೇಜಾನ್ ಮಾರುಕಟ್ಟೆ ಇದೆ ಅಂತ ಸಾಬೀತು ಮಾಡಿವೆ. ಅನೇಕ ಯುವ ನಟ-ನಟಿಯರು, ಕಲಾವಿದರು, ತಂತ್ರಜ್ಞರು ಕನ್ನಡ ಚಿತ್ರರಂಗ ಪ್ರವೇಶಿಸಿ ಹೊಸ ಹೊಸ ಪ್ರಯೋಗಗಳ ಮೂಲಕ ಮೆರಗು-ಬೆರಗು ಹುಟ್ಟಿಸಿದ್ದಾರೆ.

ಆದ್ರೆ ಕನ್ನಡ ಚಿತ್ರಗಳಿಗಿರೋ ಮಾರುಕಟ್ಟೆಯಿಂದ ಇವತ್ತಿನ ದಿನ ಎರ್ರಾಬಿರ್ರಿ ದುಡ್ಡು ಮಾಡ್ಬೋದು ಅಂತ ಅರ್ಥ ಮಾಡ್ಕೊಂಡಿರೋ ನಿರ್ದೇಶಕ, ನಿರ್ಮಾಪಕರಲ್ಲಿ ಪರಭಾಷಿಕರು ಸಕ್ಕತ್ ಜನ ಇದಾರೆ ಅನ್ನೋದು ನಮ್ಮ ಮುಟ್ಠಾಳತನದ ಗುರುತು! ನಮ್ಮ ಭಾಷೆಯ ಚಿತ್ರಗಳ್ನ ಮಾಡ್ಕೊಂಡು ನಾವೇ ದುಡ್ಡು ಮಾಡ್ಕೊಳೋ ಯೋಗ್ಯತೇನೂ ನಮಗೆ ಇಲ್ಲವಾ? ನಮ್ಮ ಕನ್ನಡದ ನಿರ್ದೇಶಕ-ನಿರ್ಮಾಪಕರು ದುಡ್ಡು ಸುರಿದು ಒಳ್ಳೊಳ್ಳೇ ಚಿತ್ರಗಳ್ನ ತೆಗೀಬೇಕು, ಕನ್ನಡದ ಮಾರುಕಟ್ಟೆಯಿಂದ ಲಾಭ ಪಡ್ಕೋಬೇಕು. ಈ ಲಾಭಾನೂ ಬೀದೀಲಿ ಹೋಗೋರೆಲ್ಲಾ ಹೊಡ್ಕೊಂಡು ಹೋಗಕ್ಕೆ ಬಿಡಬಾರದು ಗುರು! ಸೋಲಿಗೆ ಹೆದರಿ "ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ" ಆಗದು ಗೆಲುವು ಎಂದೂ ಅಂತ ನಾವು ಅರ್ಥ ಮಾಡ್ಕೋಬೇಕು.

ತಕ್ಕಳಿ ಬಂದೈತೆ ಶಂಖದಿಂದ ತೀರ್ಥ!

ಕಳೆದ ಹದಿನೈದು ದಿನಗಳಿಂದ ವಿ.ಕ.ದಲ್ಲಿ ಪ್ರತಿ ದಿನ ನಟರಾಜ್ ಅನ್ನೋರು ಕರ್ನಾಟಕದ ಇತಿಹಾಸದಲ್ಲಿ ಆಂಗ್ಲರು ಕನ್ನಡಕ್ಕೆ ಸಲ್ಲಿಸಿದ್ದ ಸೇವೆಗಳನ್ನ ಬರಹ ರೂಪದಲ್ಲಿ ಪಟ್ಟಿ ಮಾಡಿಟ್ಟಿದಾರೆ. ಅಬ್ಬಬ್ಬ! ನಿಜಕ್ಕೂ ಬ್ರಿಟಿಷರೇ ಇಷ್ಟೆಲ್ಲಾ ಕನ್ನಡ ಪರವಾಗಿ ಕೆಲ್ಸ ಮಾಡಿ, ಮಾಡಿಸಿರೋದು ಕೇಳ್ದ್ರೆ ಔರಿಗಿದ್ದ ತಿಳುವಳಿಕೆ ನಮಗೆ ಇನ್ನೂ ಇಲ್ಲವಲ್ಲಾ ಅಂತ ತಲೆ ಚೆಚ್ಕೋಬೇಕು ಅನ್ನಿಸುತ್ತೆ ಗುರು!

ನಟರಾಜ್ ಅವರ ಎಲ್ಲಾ ಬರಹಗಳಲ್ಲೂ ಎತ್ತಿ ತೋರುಸ್ತಾ ಇರೋದೇನಪ್ಪಾ ಅಂದ್ರೆ ಆಗಿನ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿಯಲ್ಲೂ "ಎಲ್ಲೇ ಆಗಲಿ, ಆಡಳಿತ ವ್ಯವಸ್ಥೆ ಸ್ಥಳೀಯ ಭಾಷೇಲೇ ಇರಬೇಕು" ಅನ್ನೋ ಸತ್ಯದ ಅರಿವಿತ್ತು ಅನ್ನೋದು. ಕ್ಲಾರ್ಕ್ ಅನ್ನೋ ಪಾಲ್ಟಿ ಇದಕ್ಕೆ ಕೊಟ್ಟಿರೋ ಸಮರ್ಥನೆ ನೋಡಿದರೆ ಇಷ್ಟು ತಿಳುವಳಿಕೆ ಇನ್ನೂ ನಮ್ಮ ಜನಕ್ಕೆ ಬಂದಿಲ್ಲವಲ್ಲಾ ಅಂತ ಬೇಜಾರಾಗತ್ತೆ ಗುರು:
"ಎಲ್ಲಾ ಅರ್ಜಿಗಳು ಇಂಗ್ಲೀಷಿನಲ್ಲಿ ಬಂದರೆ ತಾಲೂಕ್ ಹಾಗು ವಿಭಾಗೀಯ ಮಟ್ಟದಲ್ಲಿ ಅದನ್ನ ಕನ್ನಡಕ್ಕೆ ಅನುವಾದಿಸಬೇಕಾಗುತ್ತದೆ. ಕನ್ನಡವಾದರೆ ಈ ಹೊರೆ ತಪ್ಪುತ್ತದೆ."

ಆಹಾ! ನಮ್ಮ ಇಂದಿನ ಸರ್ಕಾರವೂ ಅರ್ಥ ಮಾಡಿಕೊಳ್ಳದೇ ಇರೋ ಮಾತನ್ನ ಈ ಮನುಷ್ಯ ಎಂತಹ ಸುಲಭವಾಗಿ ಹೇಳಿದಾರೆ ನೋಡು ಗುರು! ನಮ್ಮ ಜನರ, ಜನರಿಗಾಗಿ, ಮತ್ತು ಜನರಿಂದ ರಚಿಸಲಾಗಿರೋ ಸರ್ಕಾರದ ಜೊತೆ ನಾವ್ಯಾಕೆ ಇಂಗ್ಲಿಷಿನಲ್ಲಿ ವ್ಯವಹಾರ ಮಾಡಬೇಕು? ಕನ್ನಡ ತಾನೆ ಅದಕ್ಕೆ ಸರಿಯಾದ ಮಾಧ್ಯಮ? ನಮ್ಮ ಸರ್ಕಾರಿ ಕಚೇರಿಗಳ ಇಂದಿನ ಹೆಸರುಗಳ್ನ ನೋಡು ಗುರು! ಎಲ್ಲಾ ಹೆಸ್ರುಗಳು ಮತ್ತವುಗಳ ಬೋರ್ಡುಗಳು ಎಲ್ಲಾ ಆಂಗ್ಲಮಯವಾಗಿವೆ! ರಾಜ್ಯಸರ್ಕಾರದ ವಿಭಾಗಗಳು ಕನ್ನಡದಲ್ಲಿ ಸ್ವಲ್ಪಮಟ್ಟಿಗೆ ಮಾಡ್ತಿವೆ, ಆದ್ರೆ ಪೂರ್ತಿ ಕನ್ನಡದಲ್ಲೇ ಎಲ್ಲಾ ಕೆಲಸಗಳ್ನೂ ಮಾಡೋ ದಿನ ಇನ್ನೂ ಬಂದಿಲ್ಲ. ಇನ್ನು ಕೇಂದ್ರಸರ್ಕಾರಗಳಿಗೆ ಹಿಂದೀರೋಗ ಹತ್ತಿರುವಾಗ ಕನ್ನಡ ಕೇಳೋರ್ಯಾರು?

ಇದಕ್ಕೆ ಹೋಲಿಸಿ ಈ ಕ್ಲಾರ್ಕ್ ಎಂಬಾತನ ಆಡಳಿತದಲ್ಲಿ ವ್ಯತ್ಯಾಸ ನೋಡು ಗುರು: ಈತ ಕನ್ನಡೇತರ ಭಾಷೆಗಳಲ್ಲಿ ಬಂದ ಅರ್ಜಿಗಳನ್ನ ಮುಲಾಜೇ ಇಲ್ದೆ ತಿರಸ್ಕರಿಸ್ತಿದ್ನಂತೆ! ಇದು ಒಂದು ಭಾಷೆಯ ಮೇಲಿನ ಅಭಿಮಾನ ತೋರ್ಸತ್ತೆ ಅನ್ನೋದಲ್ಲ ಮುಖ್ಯವಾದ ವಿಷಯ; ಇಲ್ಲಿಯ ಆಡಳಿತವನ್ನ ನಿಜವಾಗಲೂ ಸರಿಯಾಗಿ ನಡೆಸಕ್ಕೆ ಕನ್ನಡಾನೇ ಸಾಧನ ಅಂತ ಅರ್ಥ ಮಾಡ್ಕೊಂಡಿದ್ರು ಅನ್ನೋದು. ಜಾನ್ ಮೆಕ್ರಾಲ್ ಎಂಬ ಬ್ರಿಟಿಷ್ ಅಧಿಕಾರಿ ಆಡಳಿತದಲ್ಲಿ ಸ್ಥಳೀಯ ಭಾಷೆಗಳ ಮಹತ್ವದ ಕುರಿತು ಹೀಗೆ ಹೇಳಿದ್ರಂತೆ:
"ಪ್ರಾಂತೀಯ ಭಾಷೆಯ ಪರಿಜ್ಞಾನವಿಲ್ಲದೆ ಯಾವೊಬ್ಬ ಸರ್ಕಾರಿ ನೌಕರನು ತನ್ನ ಸರ್ಕಾರಕ್ಕಾಗಲಿ, ಜನತೆಗಾಗಲಿ, ಅಷ್ಟೇಕೆ ತನ್ನ ಆತ್ಮತೃಪ್ತಿಯಾಗುವಷ್ಟರ ಮಟ್ಟಿಗಾಗಲೀ ತನ್ನ ಪಾಲಿನ ಕರ್ತವ್ಯವನ್ನ ನಿರ್ವಹಿಸಲಾರ."

ಹೊರಗಿನಿಂದ ಬಂದಿದ್ದ ಈ ಆಂಗ್ಲದೋರು ಕನ್ನಡವನ್ನ ಕೇವಲ ಕಲಿತೋರಲ್ಲ, ಅದನ್ನ ಬೆಳೆಸೋಕ್ಕೆ ಏನೆಲ್ಲಾ ಸಾಧ್ಯವೋ ಅವೆಲ್ಲಾ ಮಾಡೂ ಇದ್ರು. ಕನ್ನಡವೇ ಬಾರದ ಈ ವಿದೇಶಿಗರು ಬೇರೊಂದು ಭಾಷೆ ಕಲಿತಿದ್ದಲ್ದೆ ಪುಸ್ತಕಗಳ್ನ ಕನ್ನಡಕ್ಕೆ ಅನುವಾದ ಮಾಡಿ, ಮಾಡಿಸಿ, ಕನ್ನಡದಲ್ಲಿ ಪುಸ್ತಕಗಳೂ ಬರ್ಯೋ ಕೆಲ್ಸಮಾಡಿದಾರೆ. ಫ್ಲೀಟ್ ಎಂಬಾತ "ಕನ್ನಡ ಜಿಲ್ಲೆಯ ರಾಜಮನೆತನಗಳು" ಎಂಬ ಪುಸ್ತಕವನ್ನ ಬರ್ದಿದ್ರು ಅಂತ ತಿಳ್ಸಿದಾರೆ. ಇದೇ ಮನುಷ್ಯ ಕನ್ನಡ ನಾಡಿನಲ್ಲಿ ತಾನು ಕಳೆದ ಜೀವನದ ದಿನಗಳನ್ನ ನೆನಪಿಸಿಕೊಂಡು 1901ರಲ್ಲಿ
"ಭಾರತದ ಭಾಷೆಗಳಲ್ಲೆಲ್ಲಾ ಅತ್ಯಂತ ಮಧುರವಾದ ಭಾಷೆ ಅಂದ್ರೆ ಕನ್ನಡ, ಶ್ರೀಮಂತ ಭಾಷೆ ಅಂದ್ರೆ ಕನ್ನಡ"

ಅಂತ ಹೇಳ್ಕೊಂಡಿದಾರೆ. ಹೊರಗಿನಿಂದ ಬಂದೋರಿಗೇ ಕನ್ನಡದ ಬಗ್ಗೆ ಇಂತಹ ಅಭಿಮಾನ ಇದ್ದಾಗ ಇನ್ನು ನಮಗೆ ನಮ್ಮ ನುಡಿಯ ಬಗ್ಗೆ ಇದಕ್ಕಿಂತ್ಲೂ ಹೆಚ್ಚಿರ್ಬೇಕು ಅಲ್ವ ಗುರು?! ನಮ್ಮ ಭಾಷೆ ನಿಜವಾಗ್ಲೂ ಎಷ್ಟು ಶಕ್ತಿ ಉಳ್ಳೋ ಭಾಷೆ ಅಂತ ತಿಳ್ಕೊಳೋದು ಮುಖ್ಯ ಗುರು!

ಆಡಳಿತ ಭಾಷೆ ಕನ್ನಡವೇ ಆಗಿರ್ಬೇಕು ಅಂತ ಶಾಸನಗಳ್ನ ಹೊರ್ಡ್ಸಿರೋ ಬ್ರಿಟಿಷ್ ಅಧಿಕಾರಿಗಳೇ ಹೆಚ್ಚು! ಉದಾಹರಣೆಗೆ ರೈಸ್ ಎಂಬಾತ ತನ್ನ ಅಧಿಕಾರಾವಧಿಯಲ್ಲಿ ಶಿಕ್ಷಣ ಮತ್ತು ಆಡಳಿತಗಳು ಕನ್ನಡದಲ್ಲೇ ಇರ್ಬೇಕು ಅಂತ ಕಡ್ಡಾಯಗೊಳಿಸಿದ್ರು. ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯನಿಗೆ ದಕ್ಕಬೇಕಾದ ಮಾಹಿತಿ ಎಷ್ಟು ಮತ್ತೆ ಯಾವ ರೀತಿಯಲ್ಲಿ ದಕ್ಕಬೇಕು ಅಂತ ಇಂದಿನ RTI ಮಾದರಿಯ ಅರಿವು ಆಗ್ಲೇ ಇತ್ತು ಅಂತ ಇದ್ರಿಂದ ಗೊತ್ತಾಗತ್ತೆ ಗುರು! ಆದ್ರೆ ಇವತ್ತಿನ ದಿನ ನಮ್ಮ ಸರ್ಕಾರದೋರು RTI ಅನ್ನೋ ಹೆಸರಲಲ್ಲಿ (ಮೊದಲಾಗಿ ಅದೇ ಇಂಗ್ಲೀಷು!) ಎಲ್ಲಾ ಇಂಗ್ಲೀಷುಮಯ ಮಾಡಿ ಕೂತಿರೋದು ಎಂಥಾ ಮೂರ್ಖತನ ಗುರು!

ಕುಂಟುನೆಪಗಳ್ನ ಹೇಳ್ಕೊಂಡು ಕೆಲಸ ತಪ್ಪಿಸಿಕೊಳ್ತಾ ಜನರನ್ನ ಕಷ್ಟಕ್ಕೆ ಸಿಕ್ಕಿಸುತ್ತಾ ಇರೋ ನಮ್ಮ ಸರ್ಕಾರದೋರು, ಆಡಳಿತಗಾರರು ಈ ಬ್ರಿಟೀಷರ ಕಾಲ್ಕೆಳಗೆ ನುಸುಳಬೇಕು! ಹೋಗ್ಲಿ, ಏನೂ ಬೇಡ, ಫಾರಿನ್ನೋರು ಹೇಳಿದ್ರು ಅಂತಾನಾದ್ರೂ ಕನ್ನಡಾನ ಜಾರಿಗೆ ತರಬಾರದೆ?! ಅಥವಾ ಈಗಿನ ಫಾರಿನ್ನೋರು ಯಾರ್ನಾದ್ರೂ ಕರ್ದು ಭಾಷಣ ಬಿಗಿಸಿ ಶಂಖದಿಂದ್ಲೇ ತೀರ್ಥ ಬರ್ಸೋಣವೆ?

"ನಮಸ್ಕಾರ! ಹೇಗಿದೀರಾ?"

ಮುಂಬೈನ DNA ಅನ್ನೋ ಇಂಗ್ಲೀಷ್ ಪತ್ರಿಕೇಲಿ ಈ ಹಿಂದೆ ನಮಗೆ "ಕನ್ನಡ ಗೊತ್ತಿಲ್ಲ" ಅಂತಿದ್ದ ಬೆಂಗಳೂರಿನ ವಲಸಿಗರು ಇವತ್ತು "ನಮಸ್ಕಾರ ಹೇಗಿದೀರಾ?" ಅನ್ನುತ್ತ ಕನ್ನಡ ಕಲೀತಿದಾರೆ ಅನ್ನೋ ಸುದ್ದಿ ವರದಿ ಆಗಿದೆ.

ನಿಧಾನವಾಗಾದರೂ ಕನ್ನಡ ಕಲಿಯೋ ನಿರ್ಧಾರ ತೊಗೊಂಡು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಒಲವು ತೋರುಸ್ತಿರೋ ವಲಸಿಗರಿಗೆ ಬೆನ್ನು ತಟ್ಟಿ ಹುರಿದುಂಬಿಸಬೇಕು ಗುರು! ಆಷ್ಟೇ ಅಲ್ಲದೆ ಇವರ ಕನ್ನಡ ಕಲಿಯುವ ಉತ್ಸಾಹ, ಕನ್ನಡದ ಪ್ರಾಮುಖ್ಯದ ತಿಳುವಳಿಕೆ, ಕನ್ನಡ ತಮ್ಮ ಬದುಕಿನ ಭಾಗ ಆಗ್ಬೇಕು ಅನ್ನೋ ನಿಲುವು, ಕನ್ನಡಿಗರೊಡನೆ ಬೆರೀಬೇಕು ಅನ್ನೋ ಆಸೆ, ಕನ್ನಡ ಸಂಸ್ಕೃಯಲ್ಲಿ ಒಂದಾಗಕ್ಕೆ ಇವ್ರು ತೋರುಸ್ತಿರೋ ಹವಣಿಕೆ - ಇವೆಲ್ಲಾ ಹೊಗಳಿಕೆಗೆ ಪಾತ್ರ ಗುರು!

ಒಂದು ಪ್ರದೇಶದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ, ಅಲ್ಲಿನ ಆಡಳಿತ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸುಧಾರಣೆಗೆ ಮತ್ತು ಪೂರ್ಣ ಒಗ್ಗಟ್ಟಿಗೆ ಅಲ್ಲಿನ ಭಾಷೆ ಮತ್ತು ಸಂಸ್ಕೃತಿ ಉತ್ತಮ ವಾಹಕವಾಗಿರುತ್ತದೆ. ಹಾಗಾಗಿ ವಲಸಿಗರು ತಾವು ನೆಲಸುವ ಪ್ರದೇಶದ ಭಾಷೆ ಮತ್ತು ಸಂಸ್ಕೃತಿಗೆ ಸಹಮತ ತೋರುವುದು ಆಯಾ ಪ್ರದೇಶದ ಏಳಿಗೆಗೆ ಬಹುಮುಖ್ಯವಾಗಿ ಬೇಕಾದ ಒಗ್ಗಟ್ಟನ್ನು ಒದಗಿಸುತ್ತೆ ಗುರು. ವಲಸಿಗನಿಗೆ ಇದು ಸ್ಥಳೀಯನ ಸ್ನೇಹದ ಜತೆಗೆ, ಅಲ್ಲಿರುವ ಅವಕಾಶ, ತನ್ನನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಸಾಣೆ ಹಿಡಿಯುತ್ತದೆ. ತಾನು ಈ ಊರಿನಲ್ಲಿ ಒಬ್ಬಂಟಿಯಲ್ಲ, ಎಲ್ಲರೊಡನೆ ಒಬ್ಬ ಎಂಬ ಹೆಮ್ಮೆಯನ್ನು ಸಂಪಾದಿಸಿಕೊಡುತ್ತೆ ಗುರು. ಇದು ವಲಸಿಗನಿಗೂ ಒಳ್ಳೇದು, ನಮಗೂ ಒಳ್ಳೇದು.

ಬೆಂಗಳೂರು-ಕರ್ನಾಟಕಕ್ಕೆ ಸಂಬಂಧಪಟ್ಟ ಈ ಸುದ್ಧಿ ಮುಂಬೈನಲ್ಲಿ ವಲಸಿಗರು ಮರಾಠಿ ಕಲಿಯಕ್ಕೆ, ಹಾಗೆಯೇ ಕೋಲ್ಕೋತ್ತಾದಲ್ಲಿ ಬಂಗಾಳಿ ಕಲಿಯಕ್ಕೆ, ಪ್ರೇರಕ ಆಗಬೇಕು. ಭಾರತ ಹಲವು ಭಾಷೆ-ಹಲವು ಸಂಸ್ಕೃತಿಗಳ ರಾಜ್ಯಗಳ ಒಕ್ಕೂಟ. ಈ ಒಕ್ಕೂಟದ ಒಳಿತಿನ ದೃಷ್ಟಿಯಿಂದ, ವಲಸಿಗರು ತಾವು ವಲಸೆ ಹೋದ ಜಾಗದ ನಾಡು-ನುಡಿ-ನಡೆಗಳ್ನ ಗೌರವಿಸಿ ಅವುಗಳಲ್ಲಿ ಒಂದಾಗೋದು ಬಹಳ ಮುಖ್ಯವಾದ ಪಾತ್ರ ವಹಿಸಿದೆ ಗುರು!

ನ್ಯಾಯವಾಗಿ ಬದ್ಧತೆ ಜೊತೆ ಯೋಜನೇನೂ ಬೇಕು

ರಾಜ್ಯದ ಎಲ್ಲಾ ಕೆಳನ್ಯಾಯಾಲಯಗಳಲ್ಲಿ (ಕನ್ನಡದ ಅನುಷ್ಠಾನ "ಕೆಳಗೆ" ಆದ್ರೆ ಸಾಕು ಅನ್ನೋ ಬುದ್ಧಿಗೆ ಬಡ್ಕೋಬೇಕು!) "ಆದಷ್ಟೂ" ಕನ್ನಡದಲ್ಲೇ ಕಲಾಪ ನಡಿಸಿ ಅಂತ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದಾರೆ.

ಈ "ಆದಷ್ಟೂ" ಅನ್ನೋದರ ಅರ್ಥವಾದರೂ ಏನು? ಪೂರ್ತಿ ಮಾಡಕ್ಕೆ ಏನು ಅಡ್ಡಿಗೆ ಬಂದಿದೆ? ಈ ಪ್ರಶ್ನೇನ ತೂಗಿ ತೂಗಿ ನೋಡಿದಾಗ ಗೊತ್ತಾಗೋದು ಇಷ್ಟೇ: ಇವರಿಗೆ ಯಾರಿಗೂ ಕನ್ನಡದಲ್ಲಿ ನಿಜವಾಗಲೂ ನ್ಯಾಯಾಲಯಗಳು ಕೆಲಸ ಮಾಡಬೇಕು ಅನ್ನೋ ಗುರಿ ನೆಲೆನಿಂತಿಲ್ಲ; ಉಪಚಾರಕ್ಕೆ ತಾವೂ ಕನ್ನಡಕ್ಕಾಗಿ "ಕೈ" ಎತ್ತುತ್ತಾರೆ, ಅಷ್ಟೆ!

ಕನ್ನಡ ಬರೋ ನ್ಯಾಯಾಧೀಶರು ಕಲಾಪಗಳ್ನ ಮತ್ತು ತೀರ್ಪನ್ನ ಕನ್ನಡದಲ್ಲಿ ನೀಡಬಹುದು ಅನ್ನೋ ಈ ಸುತ್ತೋಲೆ ಯಾಕೋ ಸಿನಿಮಾಗೆ ಹೋಗೋರು ಟಿಕೆಟ್ ತೊಗೊಂಡು ಹೋಗಬಹುದು ಅಂದಂಗಾಯ್ತು! ಅಂದ್ರೆ ಇದು ಒಪ್ಪಿಗೆ ಕೊಟ್ಟಿರೋಹಂಗಿದ್ಯೇ ಹೊರ್ತು ಅಪ್ಪಣೆ ಇದ್ದಂಗಿಲ್ಲ!

ಜನಕ್ಕಾಗಿ ವ್ಯವಸ್ಥೆಯಿರಬೇಕು, ವ್ಯವಸ್ಥೆಗಾಗಿ ಜನ ಅಲ್ಲ!


ಕನ್ನಡ ನಾಡಲ್ಲಿ ತಲತಲಾಂತರದಿಂದ್ಲೂ ನ್ಯಾಯ ಮತ್ತು ತೀರ್ಪುಗಳು ಇಂಗ್ಲಿಷ್ ಭಾಷೇಲೇ ಇರ್ತಿದ್ವಾ? ನಮ್ಮ ನ್ಯಾಯಾಲಯಗಳಲ್ಲಿ ನಮ್ಮದಲ್ಲದ ಭಾಷೇಲಿ ಕಲಾಪ ಮಾಡ್ತೀವಿ, ತೀರ್ಪು ನೀಡ್ತೀವಿ ಅನ್ನೋದು, ರಾಜ್ಯ ಉಚ್ಛನ್ಯಾಯಾಲಯದ ಕಲಾಪ ಇಂಗ್ಲಿಷ್ ಭಾಷೇಲೇ ಇರೋದು ಸರಿ ಅಂದುಕೊಳ್ಳೋದು - ಇವೆಲ್ಲಾ ಜನರಿಂದ ನ್ಯಾಯಾನ ಮತ್ತು ನ್ಯಾಯಾಲಯಾನ ದೂರ ಮಾಡಿದಹಾಗಾಗಲ್ವಾ ಗುರು? ನ್ಯಾಯಾಲಯಗಳು ಜನರಿಗೆ ಅರ್ಥವಾಗೋ ಭಾಷೇಲೇ ಕಲಾಪ ನಡೆಸಬೇಕು, ತೀರ್ಪುಗಳ್ನ ಕೊಡಬೇಕು ಅಂತ ಹೊಸದಾಗಿ ಬುದ್ಧಿವಂತರಿಗೆ ಹೇಳಬೇಕಾಗಿಲ್ಲ.

ಜನರಿಗಾಗಿ ವ್ಯವಸ್ಥೆಗಳು ಇರಬೇಕೇ ಹೊರತು ಇರೋ ವ್ಯವಸ್ಥೆಗಳಿಗಾಗಿ ಜನರಲ್ಲ ಅನ್ನೋದನ್ನ ಮರೀಬಾರದು. ಒಟ್ನಲ್ಲಿ ಈಗಿರೋ ವ್ಯವಸ್ಥೆಯಲ್ಲಿ ಮಾಡಬೇಕಾಗಿರೋದನ್ನ ಮಾಡಕ್ಕಾಗ್ತಿಲ್ಲ ಅನ್ನೋದಕ್ಕಿಂತ ಮಾಡಬೇಕಾಗಿರೋದನ್ನ ಮಾಡಕ್ಕೆ ಎಂಥಾ ವ್ಯವಸ್ಥೆ ಕಟ್ಟಬೇಕು ಅನ್ನೋ ಪ್ರಶ್ನೆ ನಮ್ಮ ಜನಕ್ಕೆ ಯಾವಾಗ ಬರತ್ತೋ! ಮುಟ್ಟಬೇಕಾದ ಗುರಿಗೆ ಬದ್ಧತೆ ಇದ್ದಿದ್ದರೆ ಈ ಕುಂಟುನೆಪಗಳ್ನೆಲ್ಲ ಕೊಡ್ತಿರ್ಲಿಲ್ಲ ಗುರು!

ಆಶಯ-ಬದ್ಧತೆಗಳು ಇದ್ದರೆ ಸಾಲದು, ಯೋಜನೆ ಇರಬೇಕು!

ನ್ಯಾಯಾಲಯಗಳಲ್ಲಿ ಕನ್ನಡದ ಅನುಷ್ಠಾನ ಮಾಡೋದು ನಿಜವಾಗಲೂ ನ್ಯಾಯಾಂಗದ ಆಶಯವೇ ಆಗಿದ್ದರೆ ಅದನ್ನ ಆಗುಮಾಡಿಸೋಕೆ ಹಾಕಿಕೊಂಡಿರೋ ಯೋಜನೆ ಎಲ್ಲಿ? ಆ ಗುರಿ ಮುಟ್ಟೋ ದಾರೀಲಿ ದಾಟಬೇಕಾದ ಮೈಲಿಗಲ್ಲುಗಳು, ಯಾವಾಗ ಯಾವ ಮೈಲಿಗಲ್ಲು ದಾಟಬೇಕು ಅನ್ನೋ ಮಾಹಿತಿಯನ್ನ ಇವರು ಬೆಳಕಿಗೆ ತರಬೇಕು. ಯೋಜನೆ ಇಲ್ಲದೆ ಅದೆಷ್ಟು ಸುತ್ತೋಲೆಗಳ್ನ ಹೊರಡ್ಸುದ್ರೂ ಅದು ಬರೀ ಕಾಟಾಚಾರ ಆಗ್ಬುಡುತ್ತೆ ಗುರು. ಇನ್ನು ನೂರು ವರ್ಷ ಆದ್ರೂ "ಆ ಕೊರತೆ ಇದೆ, ಈ ಕೊರತೆ ಇದೆ, ಅದಿಲ್ಲ, ಇದಿಲ್ಲ, ಮಣ್ಣಿಲ್ಲ ಮಸಿಯಿಲ್ಲ" ಅನ್ನುತ್ಲೇ ಇರ್ಬೇಕಾಗುತ್ತೆ ಅಷ್ಟೆ. ಒಟ್ನಲ್ಲಿ ಆಶಯ ನಿಜವಾಗಿರಬೇಕಾಗಿರೋದು ಒಂದಾದರೆ ಆಶಯದ ಜೊತೆ ಯೋಜನೇನೂ ಇರಬೇಕಾಗಿರೋದು ಇನ್ನೊಂದು. ಯೋಜನೆ ಎಲ್ಲಿ ಸ್ವಾಮಿ ಅಂತ ಕೇಳ್ಮ?

ಬೆಂಗ್ಳೂರಿನ ಗುಟ್ಟು ಬಾನುಲಿಯಲಿ ರಟ್ಟು

ಇತ್ತೀಚಿನ ಬಾನುಲಿ ಕೇಳುಗರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಮೂಂಚೂಣಿಯಲ್ಲಿರೋ ಎಫ್ ಎಂ ವಾಹಿನಿಗಳ ಪಟ್ಟಿ ಬಿಡುಗಡೆ ಆಗಿದೆ. ಹೆಚ್ಚಾಗಿ ಕನ್ನಡದಲ್ಲೇ ಪ್ರಸಾರ ಮಾಡೋ ಬಿಗ್ ಎಫ್.ಎಂ., ರೇಡಿಯೋ ಮಿರ್ಚಿ, ಎಸ್ ಎಫ್.ಎಂ. ಮತ್ತು ರೇಡಿಯೋ ಒನ್ - ಇವುಗಳು ಈ ಪಟ್ಟೀಲಿ ಪ್ರಮುಖ ಸ್ಥಾನದಲ್ಲಿದ್ದು ಬೆಂಗಳೂರಲ್ಲಿ ಕನ್ನಡಿಗ ಕೇಳುಗರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಅನ್ನೋದು ಇದರಿಂದ ಸ್ಪಷ್ಟವಾಗಿ ಹೊರಗೆ ಬಂದಿದೆ. ಬೆಂಗ್ಳೂರಲ್ಲಿ ಕನ್ನಡಿಗರು ಇಲ್ಲವೇ ಇಲ್ಲ, ಇರೋರೂ ಕನ್ನಡದ ಹಾಡು ಕೇಳಲ್ಲ ಅಂತ ಅನ್ಕೊಂಡಿರೋರ ಮುಖಕ್ಕೆ ಈ ಪಟ್ಟಿ ಮಂಗಳಾರತಿ ಎತ್ತಿದೆ ಗುರು!

ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಮನೆ ಮಾತಾಗಿರುವ ಆಕಾಶವಾಣಿ ಕೇಳುಗರ್ನ ಗಣನೆಗೆ ತೊಗೊಂಡಿಲ್ಲ ಅನ್ನೋದನ್ನ ಮರೀಬೇಡಿ! ಇವರನ್ನೂ ಸೇರಿಸಿಕೊಂಡರೆ ಶೇಕಡ 90ಕ್ಕೂ ಹೆಚ್ಚು ಬಾನುಲಿ ಕಾರ್ಯಕ್ರಮ ಕೇಳುಗರು ಕನ್ನಡ ಪ್ರಸಾರ ಮಾಡುವ ಬಾನುಲಿ ವಾಹಿನಿಗಳ ಜೊತೆಗೇ ಇರೋದು ಅನ್ನೋ ಅಂಕಿ-ಅಂಶ ಹೊರಗೆ ಬರತ್ತೆ.

ಈ ವಿವರಗಳು ಸಾರಿ ಸಾರಿ ಹೇಳ್ತಿರೋದು ಬೆಂಗಳೂರಲ್ಲಿ ಇರೋ ಮಾರುಕಟ್ಟೆ ಕನ್ನಡದ್ದು ಅನ್ನೋದನ್ನೇ. ಹಿಂದಿ ಹಾಡುಗಳ್ನ ಪ್ರಾಸಾರ ಮಾಡ್ಕೊಂಡು ಶುರುವಾಗಿದ್ದ ರೇಡಿಯೋ ಮಿರ್ಚಿಗೆ ರಂಗು ಬಂದಿದ್ದು ಔರು ಕನ್ನಡದ ಮಾರುಕಟ್ಟೇನ ಅರ್ಥ ಮಾಡ್ಕೊಂಡ ಮೇಲೆ ಮಾತ್ರ ಅಂತ ಈಗಾಗ್ಲೇ ತೋರಿಸಿಕೊಟ್ಟಾಗಿದೆ.

ಇನ್ನು ಕನ್ನಡ ಕಡೆಗಣಿಸಿರೋ ’ರೇಡಿಯೋ ಸಿಟಿ’ ನ ಇಡೀ ಸಿಟೀನೇ ಕಡೆಗಣಿಸಿದೆ ಅನ್ನೋದೂ ಇದೇ ಸಮೀಕ್ಷೆಯಿಂದ ಹೊರಕ್ಕೆ ಬಂದಿದೆ. ಹಿಂದಿಜ್ವರ ಹತ್ತಿರೋ ಫೀವರ್ ಎಫ್. ಎಂ. ಗಂತೂ ಆ ಜ್ವರದಿಂದ ಲಕ್ವಾ ಹೊಡೆಯೋ ಮುಂಚೆ ಕನ್ನಡದ ಮಾತ್ರೆ ತೊಗೊಂಡು ಚೇತರಿಸಿಕೊಳ್ಳಬೇಕು ಅನ್ನೋ ಉಪದೇಶಾನ ಈ ಸಮೀಕ್ಷೆ ಬಿಟ್ಟಿಯಾಗಿ ಕೊಟ್ಟಿದೆ! ಬುದ್ಧಿವಂತ್ರು ಅರ್ಥ ಮಾಡ್ಕೋಬೇಕು, ಅಷ್ಟೆ.

ವಾಹಿನಿಗಳಲ್ಲಿ ಹಿಂದೀಲಿ, ಇಂಗ್ಲೀಷಲ್ಲಿ ಜಾಹೀರಾತು ಕೊಟ್ಟಿರೋನಿಗೆ ಯಾಕೆ ನಾನಿನ್ನೂ ಬೆಂಗಳೂರಲ್ಲಿ ಹೆಚ್ಚು ವ್ಯಾಪಾರ ಮಾಡಕ್ಕಾಗಿಲ್ಲ ಅಂತ ನಿದ್ದೆ ಬರದೇ ಇರಬಹುದು. ಅವನಿಗೂ ಈ ಸಮೀಕ್ಷೆಯಲ್ಲೇ ಪಾಠ ಇದೆ. ಬುದ್ದಿವಂತನಾದೋನು ಆ ಪಾಠ ಕಲ್ತು, ಕನ್ನಡದಲ್ಲೇ ಜಾಹೀರಾತುಗಳ್ನ ಮಾಡಿ ತನ್ನ ವ್ಯಾಪಾರ ಹೆಚ್ಚುಸ್ಕೋತಾನೆ. ಈ ಬುದ್ಧಿವಂತಿಕೆ ತೋರಿಸೋರೂ ಸಕ್ಕತ್ ಜನ ಇದಾರೆ, ಇಲ್ಲದೆಯೇನಿಲ್ಲ. ಔರು ಮಾರುಕಟ್ಟೇಲಿ ಹೆಚ್ಚುಹೆಚ್ಚು ಜನರನ್ನ ಮುಟ್ತಾರೆ, ಪೆದ್ದರು ಸೋಲ್ತಾರೆ, ಅಷ್ಟೆ.

ಇದೆಲ್ಲಾ ಓದುದ್ರೆ ಬೆಂಗ್ಳೂರಲ್ಲಿ ಮತ್ತೊಮ್ಮೆ ಕನ್ನಡಿಗರ ಸಂಖ್ಯೆ ಹೆಚ್ತಾ ಇದೆ ಅಂತ ಯಾರಿಗಾದರೂ ಅನ್ನಿಸಬಹುದು. ಆದ್ರೆ ನಿಜಾಂಶ ಏನಪ್ಪಾ ಅಂದ್ರೆ - ಆ ಪ್ರಾಬಲ್ಯ ಹೋಗೇ ಇರಲಿಲ್ಲ. ಹೋದಂಗೆ ಮಾಧ್ಯಮಗಳು ಮಾಡಿದ್ವು, ಅಷ್ಟೆ.

ರಿಮೋಟುಗಳು ಕುಣಿಸಿದಂತೆ ಕುಣಿಯುವ ಒಕ್ಕೂಟ ವ್ಯವಸ್ಥೆಗಳು

ಮೊನ್ನೆ ಮೊನ್ನೆ ದಿಲ್ಲೀಲಿ ನಾಲ್ಕನೇ ಒಕ್ಕೂಟ ವ್ಯವಸ್ಥೆಗಳ ಅಂತರರಾಷ್ಟ್ರೀಯ ಸಮ್ಮೇಳನ (International conference on Federalism) ನಡೀತು. ಇದರ ಉದ್ಘಾಟನಾ ಭಾಷಣದಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಕ್ಕೂಟ ವ್ಯವಸ್ಥೆಗಳು, ಅವುಗಳಿಂದ ಆಗುತ್ತಿರುವ ಒಳಿತು, ಅವುಗಳು ಎದುರಿಸ್ತಾ ಇರೋ ಸವಾಲುಗಳು - ಇವುಗಳ ಬಗ್ಗೆ ಸಾಕಷ್ಟು ಚಿಂತನೆಗಳ್ನ ಮುಂದಿಟ್ರು. ಇವುಗಳಿಗೆ ಸೂಕ್ತವಾಗಿ ಭಾರತದ ಉದಾಹರಣೆಗಳ್ನೂ ಕೊಟ್ಟು ಮಾತಾಡಿದ ಸಿಂಗ್ ಹೇಳಿದಂಗೆ ಒಕ್ಕೂಟ ವ್ಯವಸ್ಥೆಗಳ ರಚನೆ, ಕೇಂದ್ರ ಮತ್ತು ರಾಜ್ಯಗಳ ನಡುವಣ ಜವಾಬ್ದಾರಿಗಳ ಹಂಚಿಕೆ ವಿಷಯದಲ್ಲಿ ಆಗಾಗ ಬದಲಾವಣೆಗಳು ಆಗಬೇಕಾಗಿರೋದೇನೋ ಸರೀನೇ; ಆದ್ರೆ ಈಗಿರೋ ಭಾರತೀಯ ಒಕ್ಕೂಟದಲ್ಲೇ ಕೇಂದ್ರ ತನ್ನ ಕೆಲಸ ಸರಿಯಾಗಿ ನಿಭಾಯಿಸ್ತಾ ಇದ್ಯಾ ಗುರು?

ಉದಾಹರಣೆಗೆ ಕೇಂದ್ರದ ರಿಮೋಟು ಇಟ್ಟುಕೊಂಡಿರೋದ್ರಿಂದ ತಮಿಳ್ನಾಡು ತಮಿಳಿಗೆ ಹೇಗೆ ಶಾಸ್ತ್ರೀಯ ಭಾಷೆ ಸ್ಥಾನ ಗಿಟ್ಟಿಸಿಕೊಳ್ತು, ರಿಮೋಟಿಲ್ಲದ ಕರ್ನಾಟಕಕ್ಕೆ ಹೇಗೆ ಗಿಟ್ಟಿಸಿಕೊಳ್ಳಕ್ಕಾಗಿಲ್ಲ ಅನ್ನೋದನ್ನೇ ತೊಗೊಳ್ಳಿ. ತಮಿಳ್ನಾಡು ತೋರಿಸುತ್ತಾ ಇರೋ "ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ("narrow political considerations") ಗೆ ತಲೆಬಾಗಿಸಿ, ಎಲ್ಲಿ ಸರ್ಕಾರ ಬಿದ್ದುಹೋಗತ್ತೋ ಅಂತ ಕೇಂದ್ರ ತಮಿಳ್ನಾಡಿಗೆ ಯಾವಾಗಲೂ ಮಣೆಹಾಕಿ, ಕರ್ನಾಟಕಕ್ಕೆ ಯಾವಾಗಲೂ ಸೋಲಾಗೋಹಂಗೇ ಮಾಡ್ತಾ ಇರೋದು ವ್ಯವಸ್ಥೆಯಲ್ಲಿರೋ ಕೊರತೆಗಳ್ನ ಮಾತ್ರ ಅಲ್ಲ, ಅದನ್ನ ನಡೆಸುತ್ತಾ ಇರೋ ರಾಜಕಾರಣಿಗಳ ಮುತ್ಸದ್ದಿತನದ ಕೊರತೇನೂ ತೋರಿಸುತ್ತೆ, ನಿಜವಾದ ನ್ಯಾಯದ ಬದಲಾಗಿ ತಂತಮ್ಮ ಕುರ್ಚಿಗಳಿಗೆ ಬದ್ಧವಾಗಿರೋದನ್ನೂ ತೋರಿಸುತ್ತೆ.

ಸಿಂಗ್ ಅವರ ಸರ್ಕಾರಕ್ಕೆ ನಿಜಕ್ಕೂ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಅದು ತಮಿಳ್ನಾಡಿನ ಒತ್ತಡಕ್ಕೆ ಹೆಜ್ಜೆಹೆಜ್ಜೆಗೂ ಮಣೀತಿರ್ಲಿಲ್ಲ. ಹಾಗೇ ತಮಿಳ್ನಾಡಿಗೂ ಕೇಂದ್ರದಲ್ಲಿ ರಿಮೋಟಿಂದ ತನ್ನ ಬೇಳೆ ಬೇಯಲ್ಲ ಅನ್ನೋ ಸಂದೇಶಾನೂ ಹೋಗ್ತಿತ್ತು. ಆದ್ರೆ ಸಿಂಗ್ ಅವರ ಸರ್ಕಾರಕ್ಕೆ ತಾನು ಬೀಳದೆ ಮುಂದುವರಿಯೋದೇ ಆದ್ಯತೆಯಾಗಿತ್ತಲ್ಲ? ಒಟ್ಟಿನಲ್ಲಿ ತಮಿಳ್ನಾಡು ಮತ್ತು ಕೇಂದ್ರ - ಇವರಿಬ್ಬರ "ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ("narrow political considerations") ಗಳಿಂದ ಕರ್ನಾಟಕ ಬಡವಾಯ್ತು, ಅಷ್ಟೆ! ಏನ್ ಗುರು?

ಕಲಿಕೆ ರಾಜ್ಯದ ಪಟ್ಟೀಲೇ ಇರಬೇಕು

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯೋರು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಯೊಂದರ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಗಳು ಬರ್ತಾ ಇವೆ. ಏನಪ್ಪಾ ಈ ಮನವಿ ಅಂದ್ರೆ - 1976ರಲ್ಲಿ ಶಿಕ್ಷಣವನ್ನ ರಾಜ್ಯದ-ಪಟ್ಟಿ (state-list) ಇಂದ ಕಿತ್ತಿ ಜಂಟಿ ಪಟ್ಟಿಯೊಳ್ಗೆ (concurrent-listಗೆ) ಸೇರ್ಸಿದ್ದು ಸರಿಯಲ್ಲ, ವಾಪಸ್ ರಾಜ್ಯದ ಪಟ್ಟಿಗೆ ಸೇರಿಸ್ಬೇಕು ಅನ್ನೋದು. ಇದಾದರೆ ಭಾರತದ ಎಲ್ಲಾ ಭಾಷಾವಾರು ರಾಜ್ಯಗಳಿಗೂ ಸಕ್ಕತ್ ಒಳ್ಳೇದು ಗುರು.

ಭಾಷಾವಾರು ರಾಜ್ಯಗಳ ಒಕ್ಕೂಟವಾಗಿರೋ ನೂರು ಕೋಟಿ ಜನರ ಭಾರತದಲ್ಲಿ ದೇಶದ ಎಲ್ಲಾ ಮೂಲೆಗಳಿಗೂ ಶಿಕ್ಷಣ ಸಮರ್ಪಕವಾಗಿ ತಲುಪಿಸೋ ಕೆಲಸಾನ ದಿಲ್ಲೀಲಿ ಕೂತ್ಕೊಂಡಿರೋ ಕೇಂದ್ರ ಸರ್ಕಾರ ಹೇಗೆ ಮಾಡೀತು?! ಕೇಂದ್ರ ಸರ್ಕಾರ ಕೂಡಲೆ ಈ ಮನವಿಗೆ ಗೌರವ ಕೊಟ್ಟು ಶಿಕ್ಷಣವನ್ನ ರಾಜ್ಯ ಪಟ್ಟಿಗೆ ಹಿಂತಿರುಗಿಸ್ಬೇಕು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗ ಶಿಕ್ಷಣ ರಾಜ್ಯ ಸರ್ಕಾರಗಳ ಹೊಣೆ-ಪಟ್ಟಿಯಲ್ಲಿತ್ತು. ಅದೇ ಸರಿ ಗುರು! ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಜಂಟಿ ಪಟ್ಟಿಯಲ್ಲಿರೋದು ಪ್ರತಿಯೊಂದು ರಾಜ್ಯದಲ್ಲೂ ಶಿಕ್ಷಣ ಪ್ರಭಾವಶಾಲಿಯಾಗಿಲ್ಲದೇ ಇರೋದಕ್ಕೆ ಒಂದು ಮುಖ್ಯವಾದ ಕಾರಣ. ಹೇಗೆ ಅಂತ ನೋಡ್ಮ.

ಕಲಿಕೆಯ "ಏನು" ಮತ್ತು "ಹೇಗೆ" ಗಳ ನಿರ್ಧಾರ ಸ್ಥಳೀಯವಾಗಿ ಆಗಬೇಕು

ಪ್ರತಿಯೊಂದು ಜನಾಂಗಾನೂ ಶಿಕ್ಷಣದ ಮೂಲಕ ಏನು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಅನ್ನೋದರ ನಿರ್ಧಾರ ಸ್ಥಳೀಯವಾಗೇ ಆಗಬೇಕು ಗುರು. ಉದಾಹರಣೆಗೆ ನಮ್ಮ ಇತಿಹಾಸದಲ್ಲಿ ಏನೇನಾಗಿತ್ತು, ಅದ್ರಿಂದ ನಾವು ಏನು ಕಲೀಬಹುದು, ನಮ್ಮ ನುಡಿಯ ಒಳಗುಟ್ಟುಗಳು ಮತ್ತು ವ್ಯಾಕರಣ, ನಮ್ಮ ರಾಜ್ಯದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು, ನಮ್ಮ ಹಿಂದೆ ಈ ನೆಲವನ್ನು ತುಳಿದ ದಿಗ್ಗಜರು, ನಮ್ಮಲ್ಲಿ ಹಿಂದೆ ಇದ್ದ ಜ್ಞಾನ-ವಿಜ್ಞಾನಗಳು, ನಮ್ಮ ಹಿಂದಿನೋರು ನಮಗೆ ಬಿಟ್ಟುಹೋದ ಜ್ಞಾನದ ಬಳುವಳಿಗಳು - ಇದನ್ನೆಲ್ಲಾ ಸರಿಯಾಗಿ ಒಬ್ಬ ಕನ್ನಡಿಗ ಅಲ್ಲದೆ ದಿಲ್ಲಿ ಇಂದ ಬಂದೋನು ಹೇಗೆ ಮಾಡಾನು? ಔನಿಗೇನು ಗೊತ್ತಿರತ್ತೆ ಮಣ್ಣು ಇಲ್ಲೀ ಬಗ್ಗೆ? ಒಟ್ಟಿನಲ್ಲಿ ನಮ್ಮ ಕಲಿಕೆಯ ವಸ್ತು ನಿರ್ಧಾರ ಮಾಡೊಕ್ಕೆ ನಾವೇ ಸರಿಯಾದೋರು ಹೊರತು ನಾವ್ಯಾರು ಅಂತ ಸರಿಯಾಗಿ ಗೊತ್ತೇ ಇಲ್ಲದೋರಲ್ಲ.

ಇನ್ನು ಕಲಿಕೆ ಹೇಗೆ ಕೊಡಬೇಕು ಅಂತ ನಿರ್ಧರಿಸೋದಕ್ಕೂ ರಾಜ್ಯವೇ ಸರಿ. ಈ ಕಲಿಕೆಯ ವಿಧಾನ ಅಂದಾಗ ಎರಡು ಮುಖ್ಯವಾದ ಅಂಶಗಳು ಮನಸ್ಸಿಗೆ ಬರತ್ವೆ:
  • ಯಾವ್ದೇ ಒಂದು ವಿಷ್ಯಾನ ಮನುಷ್ಯ ಸರಿಯಾಗಿ ಅರ್ಥ ಮಾಡ್ಕೊಳೋದು ಅವನ ಹತ್ತಿರದ ವಸ್ತುಗಳೊಡನೆ ಅದರ ಸಂಬಂಧ ಕಂಡಾಗ್ಲೇ ಗುರು! ಉದಾಹರ್ಣೆಗೆ ನಮ್ಮ ಒಂದು ಮಗುವಿಗೆ ಗಣಿತದಲ್ಲಿ ಏಣಿಸೋದು ಕಲಿಸುವಾಗ ಐದು ಲಾಡು ಮತ್ತೆ ತಂದು ಮುಂದೆ ಇಡಬೇಕೇ ಹೊರತು ಐದು ಆಗ್ರಾ-ಪೇಟ ಅಲ್ಲ! ದೂರದೋರು ಇದನ್ನೆಲ್ಲ ನಿರ್ಧಾರ ಮಾಡೋದ್ರಿಂದ ಒಂದು ಗಂಡಾಂತರವೇನಪ್ಪಾ ಅಂದ್ರೆ ನಿಧಾನವಾಗಿ ನಮ್ಮ ನಿಜವಾದ ಪರಿಸರವೇ ಮರ್ಥೋಗತ್ತೆ! ಇದೇ ಮುಂದುವರೆದರೆ ಹತ್ತಿರದ್ದೆಲ್ಲ ಹುಳುಕು, ಹತ್ತಿರದ್ದೆಲ್ಲ ಕೊಳಕು ಅನ್ನಿಸಕ್ಕೆ ಶುರುವಾಗತ್ತೆ. ಇದರಿಂದ ಕನ್ನಡಿಗ (ಹಾಗೇ ತಮಿಳ, ಹಾಗೇ ತೆಲುಗ...) ನಶಿಸಿಹೋಗ್ತಾನೆ ಗುರು!
  • ಇನ್ನು ಕಲಿಕೆಯಲ್ಲಿ ಭಾಷೆಯ ಪಾತ್ರಾನಂತೂ ಹೊಸದಾಗಿ ಹೇಳಬೇಕಾಗೇ ಇಲ್ಲ. ಕಲಿಕೆ ಪ್ರಭಾವಶಾಲಿಯಾಗಕ್ಕೆ ಅದು ನಮ್ಮ ಭಾಷೆಯಲ್ಲಿರ್ಬೇಕು. ಇದನ್ನ ನಾವಲ್ಲದೆ ಕೇಂದ್ರದೋರು ಏನು ಮಾಡಾರು ಗುರು?
ಮುಂದೆ ಏನು?

ಕೇಂದ್ರ ಸರ್ಕಾರ ಈ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಕೂಡಲೆ ಶಿಕ್ಷಣವನ್ನ ರಾಜ್ಯದ ಪಟ್ಟಿಗೆ ಸೇರಿಸಬೇಕು. ಇದರ ಜೊತೆ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯದ ಸರ್ಕಾರಗಳೂ ಕೇಂದ್ರದ ಮೇಲೆ ಒತ್ತಡ ತಂದು ತಂತಮ್ಮ ನಾಡಿಗರಿಗೆ (ನಾಡಿಗ = ನಾಡಿನಲ್ಲಿ ವಾಸಿಸುವವ) ಒಳ್ಳೇ ಶಿಕ್ಷಣ ಕೊಟ್ಟು ಅವರ ಏಳ್ಗೆಗೆ ಕಾರಣವಾಗ್ಬೇಕು. ಶಿಕ್ಷಣದ ವಿಚಾರದಲ್ಲಿ ಇದು ಎಂತಹ ಮುಖ್ಯ ಅಂಶ ಅಂತ ಅರ್ಥ ಮಾಡ್ಕೊಂಡು ನಾವು ನೀವೂ ಸರ್ಕಾರಗಳ ಮೇಲೆ ಒತ್ತಾಯ ಹಾಕ್ಬೇಕು. ಏನ್ ಗುರು?

ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು

ಮೈಸೂರಲ್ಲಿ ರಾಜೀವ ಸರಳಾಕ್ಷ ಅನ್ನೋರು ಒಲ್ಲದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಜೊತೆಗೆ ಏಗಿ ಏಗಿ ಕೊನೆಗೂ ಕನ್ನಡದಲ್ಲಿ ಎಂ.ಬಿ.ಎ. ಪರೀಕ್ಷೆ ತೊಗೊಂಡು ಪಾಸಾಗಿದಾರೆ ಅಂತ ಪ್ರಜಾವಾಣಿ ಕೆಲವು ದಿನದ ಹಿಂದೆ ವರದಿ ಮಾಡಿತ್ತು. ರಾಜೀವ ಇವತ್ತು ಒಬ್ಬ ವಿಚಿತ್ರ ಮನುಷ್ಯ ಅಂತ ಅನ್ನಿಸೋ ವ್ಯವಸ್ಥೆ ಸರಿಯಲ್ಲ ಗುರು! ನಮ್ಮ ಜನರಿಗಾಗೇ ಇರಬೇಕಾದ ನಮ್ಮ ವಿ.ವಿ.ಗಳು ನಮ್ಮದಲ್ಲದ ಒಂದು ಭಾಷೇಲಿ ಇಂಥಾ ಪದವಿಗಳ್ನ ಪಡ್ಕೋಬೇಕು ಅನ್ನೋ ಪೆದ್ದತನ ನಿಧಾನವಾಗಾದರೂ ನಿಲ್ಲಬೇಕು. ನಿಜವಾದ ಕಲಿಕೆಗೂ ನಮಗೂ ನಡುವೆ ಬೇರೆ ಒಂದು ಭಾಷೆ ಅಡ್ಡಗೋಡೆಯಾಗಿ ನಿಂತಿರೋದು ಸರೀನಾ ಅಂತ ಪ್ರಶ್ನೆ ಮಾಡೋಷ್ಟು ಸ್ವಂತ ಚಿಂತನೇನಾದ್ರೂ ನಮಗೆ ಬರಬೇಕು ಗುರು!

ಇವತ್ತಿನ ದಿನ ಕನ್ನಡದಲ್ಲಿ ಉನ್ನತ ಶಿಕ್ಷಣ ಇಲ್ಲ ಅನ್ನೋದೇನೋ ನಿಜ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕಲಿಕೆಯಾಗಲಿ ಮ್ಯಾನೇಜ್ಮೆಂಟಿನ ಕಲಿಕೆಯಾಗಲಿ ಇಲ್ಲ ಅನ್ನೋದು ನಿಜ. ಆದ್ರೆ ಇದೇ ವ್ಯವಸ್ಥೆ ಇನ್ನೆಂದೆಂದಿಗೂ ಇರಲಿ ಅಂತ ಒಂದು ರೀತಿ ಸೋಲೊಪ್ಪಿಕೊಂಡಿವೆಯಲ್ಲ ನಮ್ಮ ವಿ.ವಿ.ಗಳು, ಇದೆಷ್ಟು ಸರಿ? ನಮ್ಮ ವಿ.ವಿ.ಗಳ್ನ ನಾವು ಹುಟ್ಟಿಹಾಕಿಕೊಂಡಿರೋದು ನಿಜಕ್ಕೂ ನಮ್ಮ ಲಾಭಕ್ಕೇ ಅನ್ನೋದಾದರೆ ನಮ್ಮ ಜನರ ಭಾಷೆಯಲ್ಲೇ ಕಲಿಕೆಯ ಏರ್ಪಾಡು ಮಾಡೋದು ಇವರ ಗುರಿಯಾಗಬೇಡ್ವಾ ಗುರು?

ನಮ್ಮ ಎಷ್ಟು ವಿ.ವಿ.ಗಳಲ್ಲಿ ಇವತ್ತು ಬೇಡ, ಇನ್ನು ಐವತ್ತು ವರ್ಷದಲ್ಲಾದರೂ ಕನ್ನಡದಲ್ಲಿ ಉನ್ನತಶಿಕ್ಷಣ ಸಿಗೋಹಾಗೆ ಮಾಡಕ್ಕೆ ಯಾವ ಯೋಜನೆಗಳ್ನ ಹಾಕಿಕೊಂಡಿದಾರೆ? ನಿಧಾನವಾಗಿ - ಅಂದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆಯಿಂದ ಏನು ಪಡ್ಕೋಬೇಕೋ ಅದನ್ನೂ ಕೈಬಿಡದೆ - ಕಲಿಕೆಯ ಸೌಲಭ್ಯವನ್ನ ಕರ್ನಟಕದ ಮುಲೆಮೂಲೆಗಳಲ್ಲಿ ಅಡಗಿರೋ ಪ್ರತಿಭೆಗಳಿಗೆಲ್ಲಾ ಮುಟ್ಟಿಸೋ ಕೆಲಸಕ್ಕೆ ಧೈರ್ಯದಿಂದ ಕೈ ಹಾಕಬೇಕು. ಕನಸೇ ಕಾಣದೆ ಹೋದರೆ ನನಸಾಗೋದು ಹೇಗೆ ಗುರು?
Related Posts with Thumbnails