ಈಗ ಕಪಿಲ್ ಸಿಬಲ್ ಅವರು ಏನು ಮಾಡಬೇಕು?

ಕಳೆದ ವಾರ ಭಾರತದ ಮಾನವ ಸಂಪನ್ಮೂಲ ಮಂತ್ರಿ ಕಪಿಲ್ ಸಿಬಲ್ ಅವರು ಶಾಲಾ ಮತ್ತು ಉನ್ನತ ಕಲಿಕಾ ವ್ಯವಸ್ಥೆಗಳಲ್ಲಿ ಕ್ರಾಂತಿ ತರಲು ಹೊರಟು ವಿವಾದ ಎಬ್ಬಿಸುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಕಪಿಲ್ ಅವರ ಈ ಪ್ರಸ್ತಾಪಗಳು ಒಬ್ಬ ಪ್ರೊ || ಯಶ್ಪಾಲ್ ಎಂಬುವರ ಮುಂದಾಳ್ತನದ ಉನ್ನತ ಶಿಕ್ಷಣದ ನವೀಕರಣ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ಸಲಹಾ ಸಮಿತಿಯ ತೀರ್ಮಾನಗಳ ಮೇಲೆ ಆಧರಿತವಾಗಿವೆ ಎನ್ನಲಾಗಿದೆ. ದಿ ಹಿಂದು ದಿನ-ಪತ್ರಿಕೆಯ ಈ ತಾಣದಲ್ಲಿ ಮಾತ್ರ ಕಾಣಿಸಿಕೊಂಡಿರುವ ಈ ವರದಿಯನ್ನು ಸರ್ಕಾರದ ಅಂತರ್ಜಾಲದ ತಾಣದಲ್ಲಿ ಹಾಕಬೇಕು ಎಂದು ನಮ್ಮ ಸರ್ಕಾರಕ್ಕೆ ಅನಿಸಿದಂತಿಲ್ಲವಲ್ಲ, ಯಾಕೆ? ಇರಲಿ.

ಯಶ್ಪಾಲ್ ಸಮಿತಿಯ ಈ ವರದಿಯನ್ನು ಬನವಾಸಿ ಬಳಗದಲ್ಲಿ ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ. ಈ ವರದಿಯು ತಿಳಿಸಿಕೊಡುವ ಬದಲಾವಣೆಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತಂದರೆ, ಉನ್ನತ ಶಿಕ್ಷಣದಲ್ಲಿ ತಾತ್ಕಾಲಿಕವಾಗಿ ಸುಧಾರಣೆ ಕಂಡು ಬರಬಹುದು, ಆದರೆ ಕಾಲಕಳೆದಂತೆ ಸುಧಾರಣೆಯ ಫಲವು ಇಲ್ಲವಾಗುವುದು, ಇಲ್ಲವೇ ಪರಿಸ್ಥಿತಿಯು ಇನ್ನಷ್ಟು ಹಾಳಾಗಬಲ್ಲುದೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಇಂತಹ ಬದಲಾವಣೆಗಳ ಅನುಷ್ಠಾನದಿಂದ ಸಮಾಜದಲ್ಲಿ ಉನ್ನತ ಶಿಕ್ಷಣದ ಹರವು ಹೆಚ್ಚಲಾರದು. ಅಲ್ಲದೆ, ಜನರಲ್ಲಿ ಜಾತಿ ಮತ್ತು ವರ್ಗ ಆಧಾರಿತ ಮೇಲು-ಕೀಳು ಭಾವನೆಗಳು ಹೋಗಬೇಕೆಂಬ ಈ ಸಮಿತಿಯ ಆಸೆಯೂ ಪೂರೈಸಲಾರದು. ಭಾರತದ ಮೇಲೆ ದಬ್ಬಾಳಿಕೆಯ ಆಡಳಿತವನ್ನು ಮಾಡಿದ ವಸಾಹತುಶಾಹಿ ಬ್ರಿಟಿಷರ ಆಂಗ್ಲ ಭಾಷೆಯಲ್ಲಿ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಉನ್ನತ ಶಿಕ್ಷಣವು ಸಾಧ್ಯವೇ ಇಲ್ಲವೆಂದುಕೊಂಡಿರುವ ಹೆಚ್ಚಿನ ಭಾರತೀಯರ ಕೊರತೆಯು ಈ ಸಮಿತಿಯಲ್ಲೂ ಇರುವುದೇ ಈ ವಿಫಲತೆಗೆ ಕಾರಣವಾಗಿದೆ. ಈ ಸಮಿತಿಯ ಬದಲು ಭಾರತೀಯ ಭಾಷೆಗಳಲ್ಲೇ ಉನ್ನತ ಶಿಕ್ಷಣವನ್ನು ಒದಗಿಸಲು ಪರಿಹಾರ ಸೂಚಿಸುವ ಹೊಸ ಸಮಿತಿಯನ್ನು ಕಪಿಲ್ ಸಿಬಲ್ ಅವರು ರಚಿಸಬೇಕಾಗಿದೆ. ಅಂತಹ ಸಮಿತಿಯು ಒಂದು ಶಾಶ್ವತ, ಹೆಚ್ಚಿನ ಹರವಿನ, ಸಮರ್ಪಕ ಹಾಗೂ ಏಳಿಗೆಮಾಡಿಸುವಂತಹ
ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಉಪಯುಕ್ತವಾಗಬಲ್ಲದು. ಅಂತಹ ಸಮಿತಿಯು ಕೂಡ ವಿಕೇಂದ್ರೀಕರಣದ ಪ್ರಾಶಸ್ತ್ಯವನ್ನು ಅರಿತುಕೊಳ್ಳಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಕೇಂದ್ರೀಕರಣವನ್ನು ಮಾಡಹೊರಟಲ್ಲಿ ಇಡೀ ಭಾರತದ ಭವಿಷ್ಯಕ್ಕೇ ಮಾರಕವಾಗಲಿದ್ದು, ವಿಕೇಂದ್ರೀಕರಣದಿಂದ ಈಗಾಗಿರುವ ತುಸು ಏಳಿಗೆಯೂ ನೀರಿನಲ್ಲಿ ಹೋಮವಾಗುವುದು ಖಂಡಿತ!

ಇನ್ನು ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಶ್ಪಾಲ್ ಸಮಿತಿಯ ಚಿಂತನೆ ಮತ್ತು ತೀರ್ಮಾನಗಳು ಬೇಜಾರಾಗುವಂತಿದ್ದು, ಯಾವುದೇ ಆಳವಾದ ಚಿಂತನೆ ಇದರಲ್ಲಿ ನಮಗೆ ಕಾಣಿಸುತ್ತಿಲ್ಲ. ಅಲ್ಲದೆ, ಇದರಲ್ಲೂ ವಿಕೇಂದ್ರೀಕರಣದ ಬದಲು ಕೇಂದ್ರೀಕರಣವೇ ಕಣ್ಣಿಗೆ ರಾಚುತ್ತಿದೆ. ಭಾರತದ ಶೇಕಡ 90ರಷ್ಟು ಮಕ್ಕಳು ಸರಿಸುಮಾರು 20 ಭಾರತೀಯ ಭಾಷೆಗಳಲ್ಲಿಯೇ ಪಾಠ ಹೇಳುವಂತಹ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಶಾಳೆಗಳಲ್ಲಿ ಓದುತ್ತಿದ್ದಾರೆ ಎಂಬುದನ್ನೇ ಈ ಸಮಿತಿ ಕಡೆಗಣಿಸಿದೆ. ಈ ಎಲ್ಲಾ ಶಾಲೆಗಳ ಆಡಳಿತ ಒಂದು ಕೇಂದ್ರ ಸಂಸ್ಥೆಯ ಕೈಗೆ ಕೊಡಲಾಗದು; ಅಂತಹ ಕೇಂದ್ರ ಸಂಸ್ಥೆಗೆ ಇವೆಲ್ಲಾ ಭಾಷೆಗಳ ಶಿಕ್ಷಣ ವ್ಯವಸ್ಥೆಯನ್ನು ನಡೆಸುವ ಯೋಗ್ಯತೆಯಂತೂ ಎಂದಿಗೂ ಬರಲಾರದು. ಇಲ್ಲವೇ ಭಾರತದ ಶಾಲೆಗಳನ್ನೆಲ್ಲ ಆಂಗ್ಲ ಅಥವಾ ಹಿಂದಿ ಮಾಧ್ಯಮಕ್ಕೆ ಬದಲಾಯಿಸಿದರಂತೂ ಇಡೀ ಭಾರತವನ್ನು ನರಕಕ್ಕೆ ತಳ್ಳಿದಂತಾದೀತು. ಇಂತಹ ತಪ್ಪು ಆಧಾರಗಳ ಮೇಲೆ ನಿಂತಿರುವ ಯಶ್ಪಾಲ್ ಸಮಿತಿಯ ವರದಿಯನ್ನು ಮಂತ್ರಿ ಕಪಿಲ್ ಸಿಬಲ್ ಅವರು ತಿರಸ್ಕರಿಸುವುದು ಭಾರತೀಯರ ಹಿತಾಸಕ್ತಿಯ ದೃಷ್ಟಿಯಿಂದ ಮುಖ್ಯವಾಗಿದೆ.


ಅಲ್ಲದೆ, ಈ ವಿಚಾರದಲ್ಲಿ ಕಪಿಲ್ ಸಿಬಲ್ ಅವರ ನಡತೆ ಸ್ವತಂತ್ರ ದೇಶವೊಂದರ ಒಕ್ಕೂಟ ವ್ಯವಸ್ಥೆಯ ಸರ್ಕಾರದ ಒಬ್ಬ ಸೇವಕನ ನಡತೆಯಂತಿಲ್ಲದೆ ಹುಕುಂ ನೀಡುವ ವಸಾಹತುಶಾಹಿ ಸರದಾರನ ನಡತೆಯನ್ನೇ ಹೆಚ್ಚು ಹೋಲುತ್ತದೆ. ಸಿಬಲ್ ಅವರ ಈ ನಡವಳಿಕೆಯನ್ನು ಈಗಾಗಲೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಒರಿಸ್ಸಾ, ರಾಜಾಸ್ಥಾನದಂತಹ ರಾಜ್ಯಗಳು ವಿರೋಧಿಸಿವೆ. ಕಪಿಲ್ ಅವರು ತಾವಿರುವುದು ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಎಂದು ಮರೆಯದೆ, ಇನ್ನು ಮುಂದೆ ಈ ರೀತಿಯ ತೀರ್ಮಾನಗಳನ್ನು ಸುದ್ದಿ-ಮಾಧ್ಯಮಗಳಲ್ಲಿ ನೇರವಾಗಿ ತೇಲಿಬಿಡುವ ಮುನ್ನ ರಾಜ್ಯಸರ್ಕಾರಗಳೊಡನೆ ಚರ್ಚಿಸಿ, ಒಪ್ಪಿಗೆ ಪಡೆದು, ನಂತರವೇ ತೀರ್ಮಾನಕ್ಕೆ ಬರುವುದು ಉತ್ತಮ. ಅಲ್ಲದೆ,
ಸಂಬಂಧಿಸಿದ ದಾಖಲೆಗಳನ್ನು ಸಕಾಲದಲ್ಲಿ ಸರ್ಕಾರದ ಅಂತರ್ಜಾಲ ಪುಟಗಳಲ್ಲಿ ಹಾಕುವುದೂ ಮುಖ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಅಪ್ಪಣೆ ಕೊಡುವುದು ನಿಮ್ಮ ಕೆಲಸವಲ್ಲ ಸಿಬಲ್ ಅವರೆ, ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ತೀರ್ಮಾನಗಳಿಗೆ ಬರುವುದು ಮಾತ್ರ. ನೆನಪಿರಲಿ!

ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿದೆ, ಹೌದು. ಆದರೆ ಅರ್ಥವಿಲ್ಲದ, ಇರುವುದನ್ನೂ ಹಾಳುಮಾಡುವಂತಿರುವ ಯಶ್ಪಾಲ್ ಸಮಿತಿಯು ಸೂಚಿಸುವ ಬದಲಾವಣೆಯಲ್ಲ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಬೇಕಿದೆ, ಹೌದು, ಆದರೆ ಸಮಸ್ಯೆಯನ್ನೇ ಬಗೆಹರಿಸದ ಹಳೆಯ ವ್ಯವಸ್ಥೆಗೆ ಒಂದು ಹೊಸ ರೂಪವನ್ನು ಕೊಡಲು ಹೊರಟಿರುವ ಯಶ್ಪಾಲ್ ಸಮಿತಿಯು ಸೂಚಿಸಿರುವ ಬದಲಾವಣೆಯಿಂದ ಉಪಯೋಗವಿಲ್ಲ.


ಭಾರತದ ಜನರಿಗೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲದೆ ಇರುವುದಕ್ಕೆ ಶಿಕ್ಷಣವೆಂಬ ವಿಷಯವನ್ನು ಇನ್ನೂ ಸಂವಿಧಾನದ ಜಂಟಿ-ಪಟ್ಟಿಯಲ್ಲಿ ಇರಿಸಿರುವುದೇ ಮುಖ್ಯವಾದ ಕಾರಣವೆಂದು ಓದುಗರು ಮನಗಾಣಬೇಕು. ಇದರ ಬದಲು ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ-ಪಟ್ಟಿಗೆ ಸೇರಿಸಿ ಕೇಂದ್ರ-ಪಟ್ಟಿಯಲ್ಲಿ ಗಡಿ ರಕ್ಷಣೆಯಂತಹ ಕೆಲಸಗಳಿಗೆ ಮೀಸಲಿಡುವುದೇ ಸರಿ.

ಈ ಬರಹವನ್ನು ಬನವಾಸಿ ಬಳಗದ KARNATIQUE (English) ಮತ್ತು ಕಲಿಕೆಯು (ಕನ್ನಡ) ಬ್ಲಾಗುಗಳಲ್ಲಿ ಕೂಡ ಹಾಕಲಾಗಿದೆ.

ರೈಲು ಮಂತ್ರಿಗಳಿಂದ ‘ರೈಲ್ವೇಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ’ ಅನ್ನೋ ರೈಲು!

ಮೊನ್ನೆ ಮೊನ್ನೆಯಷ್ಟೇ ರೈಲ್ವೇ ರಾಜ್ಯ ಸಚಿವರಾಗಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಶ್ರೀ ಮುನಿಯಪ್ಪನವರು ರಾಜ್ಯಕ್ಕೆ ಮುಂದಿನ ರೈಲು ಬಜೆಟ್ಟಲ್ಲಿ ಒಳ್ಳೊಳ್ಳೇ ಕೊಡುಗೆ ಕೊಡಲಾಗುವುದು ಅನ್ನೋ ಭರವಸೆ ನೀಡಿದಾರೆ ಅನ್ನೋ ಸುದ್ದಿ 01.06.2009ರ ವಿಜಯ ಕರ್ನಾಟಕದ 5ನೇ ಪುಟದಲ್ಲಿ ಪ್ರಕಟವಾಗಿದೆ. ಭಾಳಾ ಸಂತೋಷ. ಆದ್ರೆ ಹಾಗನ್ನೋದ್ರು ಜೊತೇಲೆ, ಇದುವರೆಗೂ ಕರ್ನಾಟಕಕ್ಕೆ ರೈಲ್ವೇಯಲ್ಲಿ ಯಾವ ತೆರನಾದ ಅನ್ಯಾಯವೂ ಆಗಿಲ್ಲಾ ಅಂತ ಅಂದಿರೋದು ನೋಡುದ್ರೆ, ಇವರು ಕೊಟ್ಟಿರೋ ಹೊಸ ಭರವಸೆ ಬಗ್ಗೇನೂ ಅನುಮಾನ ಹುಟ್ಟುತ್ತೆ ಗುರೂ!

ಮಂತ್ರಿಗಳು ‘ಆಯಾ ಪ್ರದೇಶದ ಜನಸಂಖ್ಯೆ ಮತ್ತು ಇತರೆ (ಇತರೆ ಅಂದ್ರೆ ಯಾವ್ಯಾವ್ದು ಅಂತ ಮಂತ್ರಿಗಳು ಹೇಳಿಲ್ಲಾರೀ...) ಅಂಶಗಳ ಅನುಪಾತದ ಆಧಾರದ ಮೇಲೆ ರೈಲ್ವೇ ಯೋಜನೆಗಳನ್ನು ಮಂಜೂರು ಮಾಡಲಾಗುತ್ತೆ, ಆ ಲೆಕ್ಕದಲ್ಲಿ ರೈಲ್ವೇ ಯೋಜನೆಗಳ ವಿಷ್ಯದಲ್ಲಿ ಕನ್ನಡನಾಡಿಗೆ ಯಾವುದೇ ಅನ್ಯಾಯ ಆಗೇ ಇಲ್ಲ’ ಅಂತ ಹೇಳೋ ಮೂಲಕ ಮುಂದಿನ 5 ವರ್ಷದ ಅವಧಿಯಲ್ಲಿ ಅವರ ಆಳ್ವಿಕೆಯಲ್ಲಿ ಕರ್ನಾಟಕಕ್ಕೆ ರೈಲ್ವೇ ವಿಷ್ಯದಲ್ಲಿ ಎಷ್ಟು ನ್ಯಾಯ ಸಿಗಬಹುದು ಅನ್ನೋದರ ಸುಳಿವು ಕೊಟ್ಟಿದ್ದಾರೆ ಗುರು!


ಮಂತ್ರಿಗಳೇ ಇದೆಲ್ಲಾ ಏನು?


ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ಅಂತ ಕನ್ನಡಿಗರೆಲ್ಲ ಮೂಗಿನ ಮೇಲೆ ಬೆರಳಿಡೋ ತರಹ ಮಾಡಿರೋ ಮಾನ್ಯ ಸಚಿವರು ಒಸಿ ಈ ಕಡೆ ಗಮನ ಹರಿಸಿದ್ರೆ ನಾಡಿಗೆ ಒಳ್ಳೇದು ಗುರು! ಜನಸಂಖ್ಯೆ ದೃಷ್ಟಿಯಿಂದ ನೋಡುದ್ರೆ ತಮಿಳುನಾಡು ನಮಗಿಂತಾ (ಕರ್ನಾಟಕ : 5.28 ಕೋಟಿ, ತಮಿಳುನಾಡು : 6.24 ಕೋಟಿ, ಜಾರ್ಖಂಡ್ : 2.69 ಕೋಟಿ) 18% ಜಾಸ್ತಿ ಜನಸಂಖ್ಯೆ ಹೊಂದಿದ್ದಾಗ್ಯೂ ಯೋಜನೆಗಳ ವಿಷಯದಲ್ಲಿ ನಮಗಿಂತಾ ಮೂರುಪಟ್ಟು - ನಾಲ್ಕುಪಟ್ಟು ಹೆಚ್ಚು ಪಡ್ಕೊಂಡಿರೋದು ಯಾವ ಅನುಪಾತದ ಆಧಾರದ ಮೇಲೆ ಮಂತ್ರಿಗಳೇ? ಅಂತಾ ಕರ್ನಾಟಕದ ಜನ ಕೇಳಿದ್ದು ಅವ್ರ್ ಕಿವಿಗೆ ಬಿದ್ದಂಗಿಲ್ಲ...
- ಕರ್ನಾಟಕದ ಒಟ್ಟು ರೈಲು ಮಾರ್ಗಗಳ ಉದ್ದ : 2974 ಕಿಮೀ. ಅದೇ ನಮ್ಮ ನಾಡಿನ 2/3ರಷ್ಟಿರೋ ತಮಿಳುನಾಡಲ್ಲಿ 4188 ಕಿಮೀ, ನಮ್ಮ ಅರ್ಧದಷ್ಟಿರೋ ಬಿಹಾರದಲ್ಲಿ 3441 ಕಿಮೀ ಇರೋದು ಯಾವ ಅನುಪಾತದಲ್ಲಿ?
- ಕರ್ನಾಟಕದಲ್ಲಿ ಬರೀ 104 ಕಿಮೀ ರೈಲುಮಾರ್ಗ ವಿದ್ಯುತ್ ಮಾರ್ಗವಾಗಿದೆ. ಅಂದ್ರೆ ಶೇಕಡಾ 3 ರಷ್ಟು ಮಾತ್ರಾ. ಅದೇ ತಮಿಳುನಾಡಲ್ಲಿ ಶೇಕಡಾ 23, ಜಾರ್ಖಂಡಿನಲ್ಲಿ ಶೇಕಡಾ 97.. ಒಟ್ಟು ಭಾರತದ 16,000 ಕಿಮೀ ಉದ್ದವಿರೋ ವಿದ್ಯುತ್ ಮಾರ್ಗದಲ್ಲಿ ಕರ್ನಾಟಕದ ಪಾಲು ಬರೀ 0.65% ಮಾತ್ರಾ ಯಾಕೆ?
- ಕರ್ನಾಟಕದಲ್ಲಿ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಎಷ್ಟು ರೈಲುಗಳಿವೆ?
- ಕೊಡಗಲ್ಲಿ ಇನ್ನೂ ರೈಲು ಹಳಿ ಯಾಕಿಲ್ಲ?
- ಬೆಂಗಳೂರು ಮೈಸೂರು ನಡುವೆ ಜೋಡಿ ಮಾರ್ಗ ಯಾವಾಗ? ಅದೇನು ಲಾಭದಾಯಕವಾದ ಮಾರ್ಗವಲ್ಲವೇ?
- ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಜೀವ ತುಂಬಬಲ್ಲ ಶಕ್ತಿ ಇರೋ, ಹೆಚ್ಚು ಕಮ್ಮಿ ನೂರು ವರ್ಷದಿಂದ ಅನುಷ್ಠಾನಕ್ಕೆ ಕಾಯ್ತಿರೋ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಯಾಕೆ ಇನ್ನೂ ನೂರು ವರ್ಷದಲ್ಲಿ ಒಂದಿಂಚು ಮುಂದೆ ಹೋಗಿಲ್ಲ?
- ಯಾಕೆ ರಾಜ್ಯದ ಬಂದರು ನಗರಿ ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಭರ್ತಿ 11 ವರ್ಷಗಳೇ ಬೇಕಾಯ್ತು? ಇವತ್ತಿಗೂ ಮಂಗಳೂರು-ಬೆಂಗಳೂರಿನ ನಡುವೆ ಕೇವಲ ಒಂದೇ ಒಂದು ರೈಲಿನ ಸಂಪರ್ಕವಿದೆ, ಇಷ್ಟು ಸಾಕೇ?
- ರಾಜ್ಯಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಕೊಡಮಾಡಲಾಗಿರೋರೈಲುಗಳಲ್ಲಿ ಹೆಚ್ಚಿನವು ಹೊರರಾಜ್ಯಗಳಿಗೆ ಹೋಗಿ ಬರೋ ಅಂಥವೇ, ಯಾಕೆ? ರಾಜ್ಯಕ್ಕೆ ಇನ್ನಷ್ಟು ವಲಸೆ ಮಾಡಿಸೋದು ಇದರ ಹಿಂದಿನ ಉದ್ದೇಶವೇ?
- ಹೊಸ ರೈಲ್ವೇ ವಲಯಗಳನ್ನು ಮಾಡಿದ ಉದ್ದೇಶವೇ ಆ ವಲಯದ ಸ್ಥಳೀಯರಿಗೆ ರೈಲ್ವೇ ಉದ್ಯೋಗದಲ್ಲಿ ಹೆಚ್ಚಿನ ಪಾಲು ಸಿಕ್ಕಲಿ, ಆ ಭಾಗದ ಜನರ ಆದಾಯ ಹೆಚ್ಚಲಿ ಅನ್ನೋ ಕಾರಣಕ್ಕೆ, ಆದ್ರೆ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೇ ವಲಯದಲ್ಲಿ ಯಾಕೆ ಇದ್ಯಾವುದೂ ಆಗಿಲ್ಲ? ಯಾಕೆ ಡಿ - ದರ್ಜೆ ಹುದ್ದೇಗೂ ಬಿಹಾರಿಂದ ಜನನ್ನ ಕರೆತರಲಾಯಿತು?


ಅಷ್ಟ್ಯಾಕೆ? ಇವತ್ತಿಗೂ ಬೆಂಗಳೂರಿನಿಂದ ಬಾಗಲಕೋಟೆಯಂತಹ ಊರಿಗೆ ಹೋಗಲು 15-19 ಗಂಟೆಗಳ ಕಾಲ ರೈಲುಪ್ರಯಾಣ ಮಾಡುವ ಪರಿಸ್ಥಿತಿ ಇದೆ. ಬಸ್ಸಿನಲ್ಲಿ ಕೇವಲ 8-9 ಗಂಟೆಗಳಲ್ಲಿ ಸಾಗಿಸುವ ಈ ಹಾದಿ ರೈಲಿನಲ್ಲಿ ಇಷ್ಟು ತಡ ಆಗಲು ಕಾರಣವೇ ಈ ರೈಲುಗಳು ಅಂಧ್ರದಲ್ಲೆಲ್ಲಾ ಸುತ್ತಾಡಿ ಕರ್ನಾಟಕಕ್ಕೆ ಬರೋದ್ರಿಂದ. ಕರ್ನಾಟಕದಲ್ಲಿ ಸರಿಯಾದ ರೈಲ್ವೇ ಸಂಪರ್ಕಜಾಲ ಇಲ್ಲದೇ ಇರೋದೇ ಇದಕ್ಕೆಲ್ಲ ಕಾರಣವಲ್ಲವೇ? ನಾವೆಲ್ಲಾ ಇದುವರೆಗೂ ಆಗಿರೋದು ಅನ್ಯಾಯಾನೆ ಅಂದ್ಕೊಂಡಿದ್ವಿ. ಆದ್ರೂ ಮಾನ್ಯ ಮಂತ್ರಿಗಳು ಅನ್ಯಾಯಾನೇ ಆಗಿಲ್ಲಾ ಅಂತ ಹೇಳುದ್ಮೇಲೆ ಸುಮ್ನೆ ನಾವೂ ನೀವು ಬಾಯ್ಮುಚ್ಕೋಂಡು ಒಪ್ಕೋಬೇಕಪ್ಪಾ... ಅಲ್ವಾ ಗುರು!

"ಕನ್ನಡ ಕಲಿ"ಸೋಕೆ ಮುಂದಾಗಿರೋ ಫ್ರೆಂಚ್ ಕಲಿಸೋ ಸಂಸ್ಥೆ!


ಬೆಂಗಳೂರಿನಲ್ಲಿ ಫ್ರೆಂಚ್ ಭಾಷೆ ಕಲ್ಸಕ್ಕೇ ಅಂತಾ ಒಂದು ಸಂಸ್ಥೆ ಇದೆ. ಇದರ ಹೆಸ್ರು "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್" ಅಂತ. ಈ ಸಂಸ್ಥೆ ಫ್ರೆಂಚ್ ನುಡಿ ಮತ್ತು ಸಂಸ್ಕೃತಿಗಳನ್ನು ಜಗತ್ತಿನ ಮೂಲೆ ಮೂಲೇಲಿ ಹರಡಕ್ಕೆ ಅಂತ 1883ರಲ್ಲಿ ಶುರುವಾದ "ಅಲೈಯನ್ಸ್ ಫ್ರಾಂಸೈಸ್ ಡಿ"ಯ ಶಾಖೆ. ಈ ಸಂಸ್ಥೇಲಿ ಫೆಂಚ್ ನುಡಿಯನ್ನು ಕಲಿಸೋ ವಿಧಾನವೇ ಸೊಗಸು. ಮೂವತ್ತು ದಿನದಲ್ಲಿ ಕಲ್ತುಕೊಳ್ಳಿ ಅನ್ನೋ ಪುಸ್ತಕಗಳ ಥರದ ತರ್ಜುಮೆ ವಿಧಾನ ಇಲ್ಲಿಲ್ಲ. ಇಲ್ ಏನಿದ್ರೂ ತರಗತಿ ಒಳಗೆ ಹೋದಾಗಿಂದ ಹೊರಗೆ ಬರೊ ತನಕ ಬರೀ ಪ್ರೆಂಚ್ ಒಂದೇ ನಮಗೆ ಕೇಳೋದು. ಈ ವಿಧಾನದಲ್ಲಿ ಸುತ್ತಮುತ್ತ ಇರೋ ಕುರ್ಚಿ, ಮೇಜು, ದೀಪ, ಹೆಸರುಗಳು ಇಂಥವುಗಳ ಬಗ್ಗೆ ಮಾತಾಡ್ತಾ ಆಡ್ತಾನೆ ಫ್ರೆಂಚ್ ನುಡಿ ಕಲಿಸಿಬಿಡ್ತಾರೆ. ಭಾಷಾ ಕಲಿಕೇಲಿ ಇರೋ ಮುಖ್ಯವಾದ ಪರಿಣಾಮಕಾರಿ ವಿಧಾನ ಅಂದ್ರೆ ಇದೇ ಅನ್ನೋದು ಹಲವರ ಅಭಿಪ್ರಾಯ. ನೂರಾ ಇಪ್ಪತ್ತೈದು ವರ್ಷಗಳಿಗೂ ಮೀರಿದ ಅನುಭವ ಈ ಸಂಸ್ಥೆಗೆ ಸಕ್ಕತ್ ವೃತ್ತಿಪರತೆ ತಂದುಕೊಟ್ಟಿದೆ ಗುರು! ಅರೆರೆ... ಇದೇನ್ರಿ ಈ ಸಂಸ್ಥೆ ಬಗ್ಗೆ ಯಾಕ್ ಬರೀತಾ ಇದೀರಾ? ಇದಕ್ಕೂ ಕನ್ನಡಕ್ಕೂ ಏನು ಸಂಬಂಧಾ ಅಂದ್ಕೋತಾ ಇದೀರಾ? ಇದೆ... ಸಂಬಂಧ ಇದೆ.

ಕನ್ನಡ ಕಲಿ ಈಗ ಫ್ರೆಂಚ್ ಕಲಿಕಾ ಸಂಸ್ಥೆಯಲ್ಲೂ...

ಬೆಂಗಳೂರಿನ ಈ ಸಂಸ್ಥೆಯೋರು ಇದೀಗ ಕೆಲವು ಕನ್ನಡ ಕಲಿಸೋ ವೃತ್ತಿಪರರ ಜೊತೆ ಸೇರಿಕೊಂಡು ಕರ್ನಾಟಕದಲ್ಲಿರೋ ಹೊರದೇಶದವರಿಗೆ, ಪರಭಾಷಿಕರಿಗೆ ಕನ್ನಡ ಕಲಿ ತರಗತಿಗಳನ್ನು ಶುರು ಮಾಡುವ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಇದು ಕನ್ನಡ ಕಲಿಕೆಗೆ ಇರೋ ಮಾರುಕಟ್ಟೆ ಸಾಧ್ಯತೆಯನ್ನು ತೋರುಸ್ತಾ ಇದೆ. ನಮ್ಮ ನಾಡಿಗೆ ಏನಪ್ಪಾ ಇದರಿಂದ ಲಾಭಾ ಅಂದ್ರೆ ಈ ಸಂಸ್ಥೆ ಮೂಲಕ ಹಲವು ಪರಭಾಷಿಕರು ನಮ್ಮ ನುಡಿ ಕಲೀತಾರೆ. ನಮ್ಮ ಕನ್ನಡ ಕಲಿಕಾ ಸಂಸ್ಥೆಗಳಾದ ಕನ್ನಡ ಪ್ರಸಾರ ಪರಿಷತ್ ಮತ್ತಿತರ ಸಹಯೋಗಿ ಸಂಸ್ಥೆಗಳು "ಅಲೈಯನ್ಸ್ ಪ್ರಾಂಸೈಸ್ ಡಿ" ಸಂಸ್ಥೆಯ 125 ವರ್ಷಗಳ ಅನುಭವದ ಸಾಕಷ್ಟು ಸಾರವನ್ನು ಹೀರಿಕೊಳ್ಳಬಹುದು. ಆ ಮೂಲಕ ಮುಂದಿನ ದಿನಗಳಲ್ಲಿ ಕನ್ನಡ ಕಲಿಕಾ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಒಯ್ಯಬಹುದು! ಇವತ್ತಿನ ದಿವಸ ಬೆಂಗಳೂರಿನಲ್ಲಿ ಶುರುವಾಗ್ತಿರೋ ಕನ್ನಡ ಕಲಿಸೋ ತರಗತಿಗಳು ನಾಡೊಳಗೆ ಆಗಲೇ ಕಾಲಿಟ್ಟಿರೋ ಪರಭಾಷಿಕರನ್ನು ಗುರಿಯಾಗಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಕನ್ನಡ ನಾಡಿಗೆ ಬರಲು ಮನಸ್ಸು ಮಾಡೋ ಹೊರನಾಡಿಗರಿಗೆ ಅವರಿದ್ದಲ್ಲೇ ಕನ್ನಡ ಕಲಿಸೋ ವ್ಯವಸ್ಥೆಯಾಗಿ ಬೆಳೀಬೇಕು ಗುರು!
ಕೊನೆಹನಿ : ಬರೀ ಕನ್ನಡ ನುಡಿಯಾಡೋದ್ನ ಹೇಳಿಕೊಟ್ರೆ ಮಾತ್ರಾ ಸಾಕಾಗಲ್ಲ ಗುರು. ನಮ್ಮ ನುಡಿ ಜೊತೆಗೆ ನಮ್ಮ ನಡೆ, ನಂಬಿಕೆ, ಸಮಾಜ, ಸಂಸ್ಕೃತಿ, ಇತಿಹಾಸ, ಹಿರಿಮೆಗಳ ಪರಿಚಯಾನೂ ಕೊಡಬೇಕು. ಫ್ರೆಂಚರನ್ನೇ ನೋಡಿ, ಜಗತ್ತಿಗೆ ತಮ್ಮ ಸಣ್ಣ ಸಣ್ಣ ವಿಶೇಷತೆಗಳನ್ನು ಹೇಗೆ ತೋರುಸ್ಕೋತಾರೆ ಅನ್ನೋಕೆ "ಫೆಂಚ್ ಮುತ್ತು" ಹ್ಯಾಗೆ ಕೊಡೋದೂ ಅನ್ನೋದಕ್ಕೂ ಒಂದು ಪುಟ ಮಾಡಿಟ್ಟಿದ್ದಾರೆ.

ಇದುನ್ನ "ಇಂಟರ್ ನ್ಯಾಷನಲ್ ಹಿಂದೀ ಫಿಲ್ಮ್ ಅಕಾಡಮಿ" ಅನ್ನೋದೇ ಸರಿ!

"ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡಮಿ" ಅನ್ನೋ ಹೆಸರಿನ ಸಂಸ್ಥೆಯೊಂದು ಕಳೆದ ಹತ್ತು ವರ್ಷಗಳಿಂದ ಭಾರತೀಯ ಚಲನಚಿತ್ರೋತ್ಸವ ಅನ್ನೋ ಹೆಸರಲ್ಲಿ ಹಿಂದಿ ಚಿತ್ರಗಳ ಪ್ರದರ್ಶನವನ್ನು ಬೇರೆ ಬೇರೆ ದೇಶಗಳಲ್ಲಿ ನಡುಸ್ಕೊಂಡು ಬರ್ತಿದೆ. ಈ ಬಾರಿ ಇದು ಚೈನಾ ದೇಶದಲ್ಲಿ ಮಕಾಓ ಅನ್ನೋ ಊರಲ್ಲಿ ನಡೀತು. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಭಾರತೀಯ ನಟ/ ನಟಿ ಹೆಸರಿನ ಪ್ರಶಸ್ತಿಗಳನ್ನೂ ಕೊಟ್ಟಿದಾರೆ.

ಭಾರತ ಅಂದ್ರೆ ಬರೀ ಹಿಂದಿ ಅನ್ನೋ ಪ್ರಚಾರ ಒಂದು ಹುನ್ನಾರವೇ!

ಈ ಸಂಸ್ಥೆಯೋರು ಜಗತ್ತಿಗೆ ಸಾರಕ್ಕೆ ಹೊರಟಿರೋದಾದ್ರೂ ಏನಪ್ಪಾ ಅಂದ್ರೆ ಭಾರತೀಯ ಚಿತ್ರಗಳು ಅಂದ್ರೆ ಹಿಂದಿ ಚಿತ್ರಗಳು ಅಂತಾನೆ. ಈ ಮೂಲಕ ಭಾರತ ಅಂದ್ರೆ ಹಿಂದಿ ಅಂತ. ಹಾಗಾದ್ರೆ ಹಿಂದಿಯವರಲ್ಲದ ಉಳಿದ ಬಹುಸಂಖ್ಯಾತ ಜನಸಂಖ್ಯೆಯ ಜನರು ಭಾರತೀಯರಲ್ವಾ? ನಾವಾಡೋ ನುಡಿ ಭಾರತೀಯವಲ್ವಾ? ನಮ್ಮ ಚಿತ್ರರಂಗ ಭಾರತೀಯ ಚಿತ್ರರಂಗವಲ್ವಾ? ಇದು ಅನ್ಯಾಯ ಅಂತ ದಕ್ಷಿಣ ಭಾರತ ಚಲನ ಚಿತ್ರ ಮಂಡಳಿಯೋರಿಗೇನು ಅನ್ನುಸ್ತಿಲ್ವಾ? ಹೋಗಲೀ ಕನ್ನಡಚಿತ್ರರಂಗವನ್ನು ಪ್ರತಿನಿಧಿಸೋ "ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ" ಜನ ಏನು ಮಾಡ್ತಿದಾರೆ? ಇಂಥಾ ಸುಳ್ಳುನ್ನ ಜಗತ್ತಿನ ತುಂಬಾ ಹಬ್ಬುಸ್ತಿರೋ ಈ ಸಂಸ್ಥೆ ಒಟ್ನಲ್ಲಿ ಸಾರುತ್ತಿರೋದು ಹಿಂದೀ ನುಡಿಯಾಡದೇ ಇರೋರು ಭಾರತದಲ್ಲಿ ಲೆಕ್ಕಕ್ಕಿಲ್ಲಾ ಅನ್ನೋದನ್ನೇ ಅಲ್ವಾ ಗುರು!
ಬರೀ ಬಾಲಿವುಡ್ ಚಿತ್ರಗಳ ಮಾರುಕಟ್ಟೆ ಕಟ್ಟೋಕೆ ಮುಂದಾಗಿರೋ ಈ ಸಂಸ್ಥೆಗೆ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಅಂತ ಹೆಸರಿಟ್ಟುಕೊಳ್ಳೋಕೆ ಅದೆಂಗೆ ಈ ದೇಶದ ವ್ಯವಸ್ಥೆ ಸಾಧ್ಯ ಮಾಡ್ಕೊಡ್ತು? ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅನ್ನೋ ಬದಲು ಹಿಂದೀ ಫಿಲ್ಮ್ ಅಕಾಡಮಿ ಅಂತಾ ಹೆಸರಿಟ್ಟುಕೊಂಡು ಇವ್ರು ಏನಾರಾ ಮಾಡ್ಕೊಳ್ಳಿ. ಅದು ಬಿಟ್ಟು ಹೀಗೆ ಇದು ಹಿಂದಿ ಭಾಷಿಕರಲ್ಲದ ಎಲ್ಲಾ ಭಾರತೀಯ ಜನಾಂಗಗಳನ್ನು ಕಡೆಗಣಿಸೋ ತಂತ್ರ ಮಾಡೋದು ಮಾತ್ರಾ ಭಾರತದಲ್ಲಿ ಹಿಂದಿಯವರಲ್ಲದ ನಾವೆಲ್ಲಾ ನಿಜವಾಗ್ಲೂ ಎರಡನೇ ದರ್ಜೆಯ ಪ್ರಜೆಗಳಾಗಿದೀವಾ ಅಂತಾ ಶಂಕೆ ಹುಟ್ ಹಾಕ್ತಿಲ್ವಾ ಗುರು?

ರುಚಿ ರುಚಿಯಾದ ಕಲ್ಚರಲ್ ಕರ್ರಿ!


ಜೂನ್ 2 ರಿಂದ ಜೂನ್ 14 ರವರೆಗೆ ಕರ್ನಾಟಕದ ನಾನಾ ಭಾಗಗಳ, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ, ತಿನಿಸು ಊಟಗಳ ಹಬ್ಬವೊಂದು ಬೆಂಗಳೂರಿನ ಚಾನ್ಸರಿ ಹೋಟೆಲ್ ನಲ್ಲಿ ನಡದಿರೋ ಸುದ್ದಿ ಬಂದಿದೆ ಗುರು. "ಕರ್ನಾಟಕ ಫೆಸ್ಟಿವಲ್ - ಎ ಕಲ್ಚರಲ್ ಕರ್ರಿ" (Karnataka Festival - A Cultural curry) ಅನ್ನೋ ಹೆಸರಿನ ಈ ವಿಶೇಷ ಕಾರ್ಯಕ್ರಮದ ಮೂಲಕ ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸೋದು ಸಂಘಟಕರ ಉದ್ದೇಶ ಆಗಿದ್ದು, ಅದಕ್ಕೆ ಸಕತ್ ಪ್ರತಿಕ್ರಿಯೆ ಕೂಡಾ ಸಿಕ್ಕಿದೆಯಂತೆ. ಇದು ನಿಜಕ್ಕೂ ಸಕತ್ ಒಳ್ಳೆಯ ಬೆಳವಣಿಗೆ ಗುರು.
ಊಟ-ತಿಂಡಿಗೆ ರುಚಿ ಜೊತೆ ಇತಿಹಾಸವೂ ಇದೆ!
ನಮ್ಮ ಕಲೆ, ಸಂಸ್ಕೃತಿ, ಪರಂಪರೆಯಷ್ಟೇ ವೈವಿಧ್ಯತೆ, ಇತಿಹಾಸ ನಮ್ಮ ನಾಡಿನ ಆಹಾರಕ್ಕೂ ಇದೆ. ನಮ್ಮ ಆಹಾರ ಪದ್ಧತಿ ನಮ್ಮ ಸಂಸ್ಕೃತಿಯ ಒಂದು ಭಾಗವೂ ಹೌದು. ರಾಗಿ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ, ಎಣಗಾಯಿ ಪಲ್ಲ್ಯ, ಗುರೆಳ್ಳು ಚಟ್ನಿ, ಪುಳಿಯೋಗರೆ, ಬಿಸಿಬೇಳೆ ಬಾತ್, ಅಂಬೋಡೆ, ಮೈಸೂರು ಪಾಕ್, ಧಾರವಾಡ ಪೇಡೆ, ಕರಾವಳಿಯ ಅದ್ಭುತವಾದ ಮೀನಿನ ಅಡುಗೆ, ಹೀಗೆ ಉತ್ತರದ ಬೀದರಿನಿಂದ ಹಿಡಿದು, ದಕ್ಷಿಣದ ಮೈಸೂರಿನವರೆಗೂ ನಮ್ಮಲ್ಲಿ ವಿಧ ವಿಧವಾದ ರುಚಿಕರ ತಿಂಡಿ-ತಿನಿಸುಗಳು, ಆಹಾರ ಪದ್ಧತಿಗಳಿವೆಯಲ್ಲಾ, ಇವನ್ನೆಲ್ಲ ನಮ್ಮ ಹೋಟೆಲ್ ಉದ್ಯಮಿಗಳು ಅವರ ಮೆನುನಲ್ಲಿ ಹಾಕಬೇಕು, ಸರಿಯಾದ ಪ್ರಚಾರ ತಂತ್ರ ಬಳಸಿ ಕರ್ನಾಟಕ ಅಡುಗೆ ಅನ್ನುವುದನ್ನೇ ಒಂದು ದೊಡ್ಡ ಬ್ರಾಂಡ್ ಆಗಿಸಬೇಕು ಮತ್ತು ಇದರಿಂದ ದೊಡ್ಡ ಮಟ್ಟದಲ್ಲಿ ಲಾಭ ಮಾಡ್ಕೋಬೇಕು. ಒಟ್ಟಾರೆ ಕರ್ನಾಟಕದ ಅಡುಗೇನೂ ಕರ್ನಾಟಕ ಪ್ರವಾಸೋದ್ಯಮದ ಒಂದು ಪ್ರಮುಖ ಆಕರ್ಷಣೆ ಆಗ್ಬೇಕು ಗುರು.
ನಮ್ಮದು ಕೆಲವು ಜವಾಬ್ದಾರಿ ಇದೆ...
ನಾವೂ ಅಷ್ಟೆ! ಕನ್ನಡೇತರರ ಜೊತೆ ಹೊರಗೆ ಊಟಕ್ಕೆ ಹೋದಾಗ ನಮ್ಮ ಆಹಾರಗಳನ್ನ ಅವರಿಗೆ ಪರಿಚಯಿಸೋ ಜವಾಬ್ದಾರಿ ತಗೋಬೇಕು. ನಮ್ಮ ಕನ್ನಡದ ಆಹಾರಕ್ಕೆ ಆದ್ಯತೆ ಕೊಡ್ಬೇಕು. ನಮ್ಮ ನಮ್ಮ ಕಛೇರಿಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಊಟಕ್ಕೆ ಕರ್ನಾಟಕದ ಅಡುಗೆಯನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಬೇಕು. ಕರ್ನಾಟಕದ ಊಟ ಉಪಹಾರದ ಬಗ್ಗೆ ನಡೆಯುವ ಮೇಳಗಳಿಗೆ ನಿಮ್ಮ ಕನ್ನಡೇತರ ಸ್ನೇಹಿತರನ್ನು ತಪ್ಪದೇ ಕರೆದುಕೊಂಡು ಹೋಗ್ಬೇಕು. ಕರ್ನಾಟಕದ ಆಹಾರ, ವೈವಿಧ್ಯತೆಯಲ್ಲಿ ಸಂಪದ್ಭರಿತ ಅನ್ನೋದನ್ನ ತೋರಿಸಿಕೊಡಬೇಕು. ಏನಂತೀಯ ಗುರು ?

ಈ ಬರಹವನ್ನು ಹಿಂಪಡೆಯಲಾಗಿದೆ

NTSE ಕುರಿತ ಈ ಬರಹವನ್ನು ಹಿಂಪಡೆಯಲಾಗಿದೆ. ಇದರಲ್ಲಿದ್ದ ದೋಷಗಳನ್ನು ತೋರಿಸಿಕೊಟ್ಟು ನಾವು ತಪ್ಪುದಾರಿಗೆ ಹೋಗದಂತೆ ನೋಡಿಕೊಂಡ ನಮ್ಮ ಓದುಗರಾದ Datta ಅವರಿಗೆ ಧನ್ಯವಾದಗಳು (ಹೆಚ್ಚಿನ ಮಾಹಿತಿಗಾಗಿ ಅವರ ಅನಿಸಿಕೆಯನ್ನು ನೋಡಿ). ತಪ್ಪಾದರೆ ಅದನ್ನು ಒಪ್ಪಿಕೊಳ್ಳುವ, ತಿದ್ದುಕೊಳ್ಳುವ ಗುಣ ನಮ್ಮಲ್ಲಿದೆ. ಈ ಗುಣವಿಲ್ಲದಿದ್ದರೆ ನಾವು ಇಷ್ಟು ದಿನವೂ ನಿಮ್ಮ ವಿಶ್ವಾಸವನ್ನು ಪಡೆದುಕೊಳ್ಳಲು ಅರ್ಹರಾಗುತ್ತಿರಲಿಲ್ಲವೋ ಏನೋ.

ನಾವು "ಎಂದಿಗೂ ಮಾಹಿತಿಯನ್ನು ಸ್ಪಷ್ಟಪಡಿಸಿಕೊಳ್ಳುವುದೇ ಇಲ್ಲವೆ?" ಎನ್ನುವ ಪ್ರಶ್ನೆ ಬೇಡ. ಈ ಬಾರಿಯೊಮ್ಮೆ ತಪ್ಪಾಗಿದೆ, ಅಷ್ಟೆ. ಹಾಗೆಯೇ ಶಿಕ್ಷಣದ ಗುಣಮಟ್ಟ ಮತ್ತು ಪ್ರತಿಭಾನ್ವೇಷಣಾ ಪರೀಕ್ಷೆಗಳಲ್ಲಿ ಪ್ರಶ್ನೆಗಳ ಗುಣಮಟ್ಟ ಹೆಚ್ಚಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಬರಹವು ಇದಕ್ಕೆ ವಿರುದ್ಧವಾದ ಸಂದೇಶವನ್ನು ಕೊಟ್ಟಿದ್ದರೆ ಅದು ಬರವಣಿಗೆಯಲ್ಲಾದ ತಪ್ಪಷ್ಟೆ.

ಬನವಾಸಿ ಬಳಗದಲ್ಲಿ ಈ ವಿಷಯದ ಬಗ್ಗೆ, ಮತ್ತು ಈ ಬರಹದಲ್ಲಿ ಬರಹಗಾರರು ಮಾಡಿರುವ ತಪ್ಪಿನ ಬಗ್ಗೆ ಸಾಕಷ್ಟು ಚರ್ಚೆ ಇವತ್ತಿನ ದಿವಸ ಆಗಲೇ ನಡೆದಿದೆ. Datta ಅವರು ಹೇಳುವ ಮಾತುಗಳನ್ನು ಒಪ್ಪದವರು ಬಳಗದಲ್ಲಿ ಯಾರೂ ಇಲ್ಲ. ಎಲ್ಲೋ ಕೈಜಾರಿ ಈ ರೀತಿ ಆಗಿದೆ, ಅಷ್ಟೆ.

ಕ್ಷಮಿಸಿ, ಹಾಗೆಯೇ ಇದೇ ರೀತಿಯ ಹದ್ದಿನ ಕಣ್ಣಿನಿಂದ ನಮ್ಮ ಕೆಲಸವನ್ನು ಪರಿಶೀಲಿಸುವುದನ್ನು ಮುಂದುವರೆಸಿ. ಈ ರೀತಿಯ ತಪ್ಪು ಇನ್ನೊಮ್ಮೆ ಆಗದಿರುವಂತೆ ನಮ್ಮ ಒಳಗಿನ ಕಾರ್ಯವಿಧಾನವನ್ನು ಬದಲಾಯಿಸಿಕೊಳ್ಳುತ್ತೇವೆ. ಇದು ನಮ್ಮ ಆಣೆ.

--ಸಂಪಾದಕರು, ಏನ್ ಗುರು.

ಭಾರತೀಯ ರಿಜರ್ವ್ ಬ್ಯಾಂಕ್ : ಕ್ರೆಡಿಟ್ ಕಾರ್ಡ್ ಸೇವೆಯಲ್ಲಿ ಕನ್ನಡ - ಕನ್ನಡಿಗರ ಹಕ್ಕು!


ಭಾರತೀಯ ರಿಜರ್ವ್ ಬ್ಯಾಂಕಿನ ಭಾಷಾ ನೀತಿ ಬಗ್ಗೆ ಮಾಹಿತಿ ಕೊಡೋ ಒಂದು ಸುದ್ದಿ ಮಾರ್ಚ್ 28 - ಏಪ್ರಿಲ್ 10ರ ಫ್ರಂಟ್ ಲೈನ್ ನಿಯತಕಾಲಿಕೆಯಲ್ಲಿ ಬಂದಿದೆ ಗುರು! ಇವತ್ತು ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಕನ್ನಡ ಕಾಣದೇ ಇರೋದಕ್ಕೆ ಭಾರತೀಯ ರಿಜರ್ವ್ ಬ್ಯಾಂಕಿನ ನಿಯಮಾವಳಿಗಳು ಖಂಡಿತಾ ಕಾರಣವಾಗಿಲ್ಲ. ನಾವು ಕನ್ನಡದೋರು ಗ್ರಾಹಕರಾಗಿ ನಮ್ಮ ಹಕ್ಕು ಚಲಾಯುಸ್ತಿಲ್ಲಾ ಅನ್ನೋದೆ ನಿಜವಾದ ಕಾರಣವಾಗಿದೆ.

ಏನನ್ನುತ್ತೆ ರಿಜರ್ವ್ ಬ್ಯಾಂಕ್ ಮಾರ್ಗಸೂಚಿ?

ಎಲ್ಲಾ ಕ್ರೆಡಿಟ್ ಕಾರ್ಡ್ ಸೇವೆ ನೀಡೋ ಬ್ಯಾಂಕುಗಳು ಕಾರ್ಡುಗಳನ್ನು ತನ್ನ ಗ್ರಾಹಕರಿಗೆ ನೀಡೋವಾಗ ಅನುಸರಿಸಬೇಕಾದ ಭಾಷಾ ನೀತಿಯ ಬಗ್ಗೆ ಹೀಗೆನ್ನುತ್ತದೆ ರಿಜರ್ವ್ ಬ್ಯಾಂಕಿನ ನಿಯಮಾವಳಿ :

"While issuing cards, the terms and conditions for issue and usage of a credit card should be mentioned in clear and simple language (preferably in English, Hindi and local language) comprehensible to a card user."


ಅಂದರೆ ಕಾರ್ಡುಗಳನ್ನು ವಿತರಣೆ ಮಾಡುವಾಗ ಗ್ರಾಹಕನಿಗೆ ಅನುಕೂಲವಾಗುವಂತೆ ಸರಳವಾದ ಭಾಷೆಯಲ್ಲಿ ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ನಿಬಂಧನೆಗಳ ಬಗ್ಗೆ ಪೂರ್ಣವಾದ ಮಾಹಿತಿ ನೀಡಬೇಕಾದ್ದು ಆಯಾ ಬ್ಯಾಂಕುಗಳ ಹೊಣೆಯಾಗಿದೆ ಮತ್ತದು ಕಡ್ಡಾಯವಾಗಿದೆ.


ಗ್ರಾಹಕ ತನ್ನ ಹಕ್ಕು ಮರೆಯೋದು ದೊಡ್ಡತಪ್ಪು!


ಇಷ್ಟೆಲ್ಲಾ ನೀತಿ ನಿಯಮಗಳಿದೆ ಅನ್ನೋದೇ ನಮ್ಮ ಜನಕ್ಕೆ ತಿಳಿಯದೇ ಇರೋದು ಕನ್ನಡದಲ್ಲಿ ಗ್ರಾಹಕ ಸೇವೆ "ಕ್ರೆಡಿಟ್ ಕಾರ್ಡು"ಗಳ ವಿಷಯದಲ್ಲಿ ಅಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲದೇ ಇರಕ್ಕೆ ದೊಡ್ಡ ಕಾರಣವಾಗಿದೆ. ಇಂಥಾ ಹಕ್ಕು ಇರೋದನ್ನು ಜನತೆಗೆ ತಲುಪಿಸೋ ಕೆಲಸಾ ಆಗಬೇಕಾಗಿದೆ. ಅಷ್ಟೇ ಅಲ್ಲಾ, ನಾವು ಇನ್ಮುಂದೆ ನಮ್ಮ ಈ ಹಕ್ಕನ್ನು ಚಲಾಯಿಸಿ ಕ್ರೆಡಿಟ್ ಕಾರ್ಡುಗಳ ಲೋಕದಲ್ಲಿ ಕನ್ನಡ ಬಾವುಟ ಹಾರಿಸೋಣ ಗುರು!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಿಂಚಲಿರೋ ಕನ್ನಡತನ!


ಬೆಂಗಳೂರಲ್ಲಿ ನೆಲೆಸಿ ಚೆನ್ನಾಗಿ ವ್ಯಾಪಾರ-ವಹಿವಾಟು ನಡೆಸಲು ಕನ್ನಡದ ಮಹತ್ವವನ್ನು ಲೇಟ್ ಆದ್ರೂ ಲೇಟೆಸ್ಟ್ ಆಗಿ ಬೆಂಗಳೂರು ವಿಮಾನ ನಿಲ್ದಾಣ ನೋಡಿಕೊಳ್ಳೊ ಬಿ.ಐ.ಎ.ಎಲ್ ಕಂಪನಿಯವರು ಅರ್ಥ ಮಾಡಿಕೊಂಡಿರುವ ಹಾಗಿದೆ ಗುರು. ವಿಮಾನ ನಿಲ್ದಾಣದ ಸ್ವಾಗತದಲ್ಲಿ ಸ್ಥಳೀಯತೆಯ ಸೊಗಡನ್ನು ಬಿಂಬಿಸುವುದು, ಸ್ಥಳೀಯ ಕಲೆ, ಊಟ-ತಿಂಡಿ ರುಚಿಯ ಪರಿಚಯ, ನಾಡಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ, ನಮ್ಮ ಹಬ್ಬಗಳಾದ ರಾಜ್ಯೋತ್ಸವ, ಆಯುಧ ಪೂಜೆ, ದೀಪಾವಳಿಗಳ ಆಚರಣೆ ಹೀಗೆ ಅನೇಕ ಕ್ರಮಗಳ ಮೂಲಕ ಬಿ.ಐ.ಎ.ಎಲ್ ಕನ್ನಡಿಗರ ಮನಸ್ಸಿಗೆ ಹತ್ತಿರವಾಗೋ ಹಲವಾರು ಸರಿಯಾದ ಕ್ರಮಗಳನ್ನು ತಡವಾಗಿಯಾದರೂ ತೆಗೆದುಕೊಳ್ಳುವತ್ತ ಹೆಜ್ಜೆ ಇಟ್ಟಿದೆ ಅನ್ನೋ ಸುದ್ದಿ "ಎಕ್ಸ್ ಪ್ರೆಸ್ ಬಝ್"ನಲ್ಲಿ ವರದಿಯಾಗಿದೆ. ಇದು ಜನ ಪ್ರತಿನಿಧಿಗಳ, ಕನ್ನಡ ಪರ ಸಂಘಟನೆಗಳ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಜಾಗೃತ ಕನ್ನಡದ ಗ್ರಾಹಕರ ಒತ್ತಾಯಕ್ಕೆ ಸಿಕ್ಕ ಗೆಲುವು ಗುರು!
ಇದೆಲ್ಲ ಆಗಿದ್ದು ಕನ್ನಡದ ಗ್ರಾಹಕನಿಂದ

ಈ ಬದಲಾವಣೆಯಲ್ಲಿ ಜನ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳ ಪಾತ್ರ ಎಷ್ಟಿದೆಯೋ ಅದರ ಹಲವು ಪಟ್ಟು ಪ್ರಮುಖ ಪಾತ್ರ ಅಲ್ಲಿಗೆ ಹೋಗೊ ಕನ್ನಡದ ಗ್ರಾಹಕನದ್ದು ಗುರು. ವಿಮಾನ ನಿಲ್ದಾಣ ಶುರು ಆದಾಗಿನಿಂದ ಹಿಡಿದು ಇಲ್ಲಿಯವರೆಗೆ, ಅಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ವಾತಾವರಣ, ನಿಲ್ದಾಣದ ಒಳ-ಹೊರಗೆ ಕನ್ನಡದಲ್ಲಿ ಜಾಹೀರಾತು, ಕನ್ನಡದಲ್ಲಿ ಗ್ರಾಹಕಸೇವೆ ಹೀಗೆ ಸಕ್ರಿಯವಾಗಿ ಕನ್ನಡದ ಗ್ರಾಹಕನಾಗಿ ತಂದ ಒತ್ತಾಯ, ಪ್ರತಿಭಟನೆಗಳು ನಿಧಾನವಾಗಿಯಾದರೂ ಈ ಬದಲಾವಣೆ ತರಲು ಕಾರಣವಾಗಿವೆ. ಹೋರಾಟಗಳಿಗೆ ಇರೋ ಶಕ್ತಿ ಗ್ರಾಹಕನ ದೂರಿಗೂ ಇದೆ ಅನ್ನೋದು ಮತ್ತೆ ಮತ್ತೆ ರುಜುವಾತಾಗ್ತಿದೆ. ಹೀಗೆ ಮುಂದುವರಿದಲ್ಲಿ ಕೆಲವೇ ಕೆಲವು ಕಾಲದಲ್ಲಿ ಎಲ್ಲೆಡೆ ಕನ್ನಡದಲ್ಲಿ ಎಲ್ಲ ತರಹದ, ಎಲ್ಲ ಹಂತದ ಗ್ರಾಹಕಸೇವೆ ಸಿಗೋದ್ರಲ್ಲಿ ಅನುಮಾನ ಇಲ್ಲ, ಏನಂತೀಯಾ ಗುರು?

A.I.E.E.E ಪರೀಕ್ಷೆಗಳಲ್ಲಿ ಕನ್ನಡಿಗರು ಹೆಚ್ಚು ಭಾಗವಹಿಸಬೇಕು!

ಭಾರತದಲ್ಲೇ ಪ್ರತಿಷ್ಠಿತ ಅನ್ನಿಸಿಕೊಂಡಿರುವ, ಒಳ್ಳೆಯ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಹೆಸರಾದ ಐ.ಐ.ಟಿ/ ಎನ್.ಐ.ಟಿ (IIT/NIT) ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಎ.ಐ.ಇ.ಇ.ಇ (AIEEE) ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಕನ್ನಡಿಗರ ಸಂಖ್ಯೆ ನಿಜಕ್ಕೂ ತುಂಬಾ ಕಮ್ಮಿ ಇದೆ ಅನ್ನೋ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ ಗುರು! ಭಾರತದೆಲ್ಲೆಡೆಯಿಂದ ವಿದ್ಯಾರ್ಥಿಗಳು ಈ ಪರೀಕ್ಷೆ ತಗೋತಾ ಇದ್ದು, ಇದರಲ್ಲಿ ಕರ್ನಾಟಕದ ಪಾಲು ಕೇವಲ 2% ದಷ್ಟು ಮಾತ್ರ ಇದ್ದು, ಕನ್ನಡದ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಐ.ಐ.ಟಿ - ಜೆ.ಇ.ಇ/ ಎ.ಐ.ಇ.ಇ.ಇ (IIT-JEE / AIEEE) ಯಂತಹ ಪರೀಕ್ಷೆಗಳ ಬಗ್ಗೆ, ಈ ಸಂಸ್ಥೆಗಳಲ್ಲಿ ಕಲಿಯೋದ್ರಿಂದ ಆಗೋ ಲಾಭದ ಬಗ್ಗೆ ಹೆಚ್ಚಿನ ಅರಿವಿಲ್ಲದಿರೋದೇ ಇದಕ್ಕೆ ಕಾರಣ ಗುರು!

ಕಮ್ಮಿ ಅಂದ್ರೂ 50000 ಜನ ತಗೋಬೇಕಿತ್ತು

2009ರ ಸಾಲಿನಲ್ಲಿ ದೇಶದೆಲ್ಲೆಡೆಯಿಂದ ಸುಮಾರು 9,62,119 ವಿದ್ಯಾರ್ಥಿಗಳು ಈ ಪರೀಕ್ಷೆ ತಗೊಂಡ್ರೆ ಅದರಲ್ಲಿ ಕರ್ನಾಟಕದೋರು ಬರೀ 19,479 ಜನ ಅಂತೆ. ಅಂದ್ರೆ ಲೆಕ್ಕ ಹಾಕಿದ್ರೆ ಬರೀ 2.02% ಜನ ಮಾತ್ರ ಕರ್ನಾಟಕದಿಂದ ಇಂತಹ ಪರೀಕ್ಷೆ ತಗೊಂಡಿರೋದು. ಈ 19,479 ರಲ್ಲಿ ಬೆಂಗಳೂರು ಒಂದರಿಂದಲೇ 12,313 ಜನ ಈ ಪರೀಕ್ಷೆ ತಗೊಂಡ್ರೆ, ಕರ್ನಾಟಕದ ಉಳಿದ ಭಾಗದಿಂದ ತಗೊಂಡವರ ಸಂಖ್ಯೆ ಬರೀ 7,166. ಇನ್ನೂ ಬೆಂಗಳೂರಿನ ಅಂಕಿಅಂಶ ಬಿಟ್ಟು, ಕರ್ನಾಟಕದ ಬೇರೆ ಭಾಗದ ( ಹೆಚ್ಚು ಕಮ್ಮಿ ಕರ್ನಾಟಕದ 87% ಜನರು) ಅಂಕಿಅಂಶವನ್ನೇನಾದ್ರೂ ಭಾರತದೊಂದಿಗೆ ಹೋಲಿಸಿದ್ರೆ ಕರ್ನಾಟಕದ ಪಾಲು ಬರೀ 0.75% ಪ್ರತಿಶತದಷ್ಟು ಮಾತ್ರ ಗುರು. ಭಾರತದ ಜನಸಂಖ್ಯೆಯಲ್ಲಿ ಕಮ್ಮಿ ಅಂದ್ರೂ 5% ನಮ್ಮ ರಾಜ್ಯದ್ದು. ಜನಸಂಖ್ಯೆ ಲೆಕ್ಕದಲ್ಲೇ ಹೇಳೊದಾದ್ರೆ ಕಮ್ಮಿ ಅಂದ್ರೂ 50,000 ವಿಧ್ಯಾರ್ಥಿಗಳು ನಮ್ಮ ನಾಡಿಂದ ಈ ಪರೀಕ್ಷೆ ತಗೋಬೇಕಾಗಿತ್ತು. ಹಾಗಿದ್ರೆ ಪರೀಕ್ಷೆ ತೊಗೋಂಡೋರಲ್ಲಿ ನಮ್ಮ ಸಂಖ್ಯೆ ಇಷ್ಟ್ಯಾಕೆ ಕಮ್ಮಿ ಇದೆ ಗುರು?

ನಮ್ಮಲ್ಲಿರೋ ಕಾಲೇಜುಗಳು ಸಾಕು ಸಾಕನ್ನೋ ಅಸಡ್ಡೆ ಬೇಡ!

ನಮ್ಮ ಕರ್ನಾಟಕದಲ್ಲೇ ಸಾಕಷ್ಟು ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅದರಿಂದಾಗೇ ಕನ್ನಡದ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಐ.ಐ.ಟಿ /ಎನ್.ಐ.ಟಿ ಎಲ್ಲಾ ನಮಗ್ಯಾಕ್ ಬೇಕು ಅನ್ನೋ ಮನೋಭಾವನೆ ಇದ್ಯಾ ಅನ್ಸುತ್ತೆ. ಈ ಮನಸ್ಥಿತಿ ನಮಗಿದ್ರೆ ಇದರಿಂದಾಗಿ ನಾವು ಕಳೆದುಕೊಳ್ತಾ ಇರೋದು ತುಂಬಾ ಇದೆ ಗುರು. ಐ.ಐ.ಟಿ/ ಎನ್.ಐ.ಟಿ/ ಐ.ಐ.ಎಸ್.ಸಿ ತರಹದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರಿಗೆ ಒಳ್ಳೆಯ ಹುದ್ದೆಗಳಿಗೆ ನೇಮಕಾತಿ, ಒಳ್ಳೆಯ ಹಣ ಸಂಪಾದನೆ, ಸಮಾಜದಲ್ಲಿ ಹೆಚ್ಚಿನ ಗೌರವ, ಕೆಲಸದಲ್ಲಿ ಬೇಗನೆ ಭಡ್ತಿ ಸಿಗೋದು, ಬೇಗನೆ ಉನ್ನತ ಹುದ್ದೆಗಳಿಗೆ ಏರೋ ಅವಕಾಶ, ನಾಡಿನ ಅಭಿವೃದ್ಧಿಗೆ ಅನುಕೂಲವಾಗುವಂತ ಸಂಶೋಧನೆ, ಅಭಿವೃದ್ಧಿ ತರಹದ ಕೆಲಸಗಳನ್ನು ಮಾಡುವ ಅವಕಾಶ ಹೀಗೆ ಸಾಕಷ್ಟು ಪ್ರಯೋಜನಗಳಿದ್ದು, ಇದನ್ನೆಲ್ಲಾ ಕನ್ನಡಿಗರು ತಮ್ಮದಾಗಿಸಿಕೊಳ್ಳಬೇಕು ಗುರು. ನಮ್ಮ ನಾಡಿಗಿಂತಲೂ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳಿರುವ (ನಮಲ್ಲಿ 158 ಇದ್ದರೆ, ಅವರಲ್ಲಿರೋದು 250 ಕ್ಕೂ ಹೆಚ್ಚು) ತಮಿಳುನಾಡಿನ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಐ.ಐ.ಟಿ/ ಎನ್.ಐ.ಟಿ/ ಐ.ಐ.ಎಸ್.ಸಿ ತರಹದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಮ್ಮ ನಾಡಿನ ಪಾಲಕರು ಐ.ಐ.ಟಿ/ಎನ್.ಐ.ಟಿ/ ಐ.ಐ.ಎಮ್/ ಯು.ಪಿ.ಎಸ್.ಸಿ ತರಹದ ಸಮಾಜದ ಮೇಲೆ ಪ್ರಭಾವ ಬೀರುವ, ಪ್ರಭಾವಶಾಲಿ ಹುದ್ದೆಗಳನ್ನು ಸೃಷ್ಟಿಸುವ ಕಲಿಕೆಯತ್ತ ತಮ್ಮ ಮಕ್ಕಳನ್ನು ಹೆಚ್ಚೆಚ್ಚು ಕಳಿಸಬೇಕು. ಇದು ಕನ್ನಡ ನಾಡಿನ ಏಳಿಗೆಗೆ ಬಲು ಮುಖ್ಯವಾದದ್ದು. ಏನಂತೀಯಾ ಗುರು?

ಸಂಸದರ ಪ್ರಮಾಣವಚನ ನೋಡಿ ಆಲ್ ಕುಡ್ದಂಗಾಯ್ತು!

ನಿನ್ನೆ ಸಾಯಂಕಾಲಾ ಕಿಟಾರ್ ಅಂತ ಮನೆ ಒಳ್ಗಿಂದ ಕಿರ್ಚಿದ್ ಸದ್ದು ಕೇಳಿ ನಮ್ ಎಂಕ ಒಳಿಕ್ ಓಡಿ "ಯಾಕ್ಲಾ ಅಪ್ಪಯ್ಯಾ? ಏನಾಯ್ತು?" ಅಂದಿದ್ಕೆ ಹಣ್ಣು ಹಣ್ಣು ಮುದ್ಕ, ಎಂಕನ ಅಪ್ಪ, ಟೀ.ವಿ ಕಡೆ ಕೈ ತೋರುಸ್ತವ್ರೆ. ಅದ್ರೊಳ್ಗೆ ದಿಲ್ಲೀನಾಗೆ ಸಂಸದರೆಲ್ಲಾ ಪ್ರಮಾಣವಚನ ತೊಗೋತಾ ಇದ್ದ ನೋಟ ಕಾಣ್ತಾ ಇದೆ. "ಯಾಕ್ಲಾ ಅಪ್ಪಯ್ಯಾ ಅಂಗ್ ಕಿರುಚ್ದೆ?" ಅಂತ ನಮ್ ಎಂಕ ಅಂದಿದ್ಕೆ ಎಂಕನ ಅಪ್ಪಾ ಅಂತಾರೇ.. "ಯಂಕಾ, ಇವತ್ತು ಸೂರ್ಯ ಯಾಕಡೆ ಮುಳುಗವ್ನೆ ಒಸಿ ನೋಡ್ಲಾ? ನಾನೂ ಗಾಂಧಿತಾತನ್ ಕಾಲ್ದಿಂದ ವೋಟ್ ಹಾಕ್ಕೊಂಡ್ ಬತ್ತಾನೆ ಇವ್ನಿ. ಇವತ್ತಿನ್ ಗಂಟಾ ಇಂಥಾದ್ ನೋಡಿರ್ಲಿಲ್ಲ ಕಣಪ್ಪಾ, ನಂಗೂನೂವೆ ವಯಸ್ಸು ಎಪ್ಪತ್ತೈದು ಆಯ್ತು. ಇಲ್ಲಿಗಂಟಾ ಚುನಾವಣೆಯಾಗ್ ಗೆದ್ದೋರೆಲ್ಲಾ ಇಂಗ್ಲಿಸಲ್ಲೋ, ಇಂದೀನಲ್ಲೋ ಪ್ರಮಾಣವಚನ ತಕ್ಕಳದು ನೋಡಿವ್ನಿ, ಇದೇ ಪಸ್ಟು ಕರ್ನಾಟಕದೋರೆಲ್ಲಾ ಕನ್ನಡದಲ್ಲೇ ತೊಗೋತಾ ಅವ್ರೆ ಕಣ್ಲಾ! ಇವತ್ತೇ ಮೊದ್ಲು ಇವು ಏನ್ ಯೋಳ್ತವೇ ಅಂತ ನಂಗೂನೂವೆ ತಿಳ್ದಿದ್ದು" ಅನ್ನದಾ?
ರಾಜಕಾರಣದಲ್ಲಿ ಎಚ್ಚೆತ್ತ ಕನ್ನಡಪ್ರಜ್ಞೆ!
ನೋಡುದ್ಯಾ ಗುರು! ಇವತ್ತು ನೇಸರಾ ಪಡುವಣದಾಗ್ ಹುಟ್ಕಂಡ್ ಮೂಡಣದಲ್ ಮುಳುಗವ್ನಾ ಅಂತಾ? ಔದು, ಇವತ್ತು ದಿಲ್ಲಿನಾಗೆ ನಮ್ ಸಂಸದ್ರು ಕನ್ನಡದಾಗೆ ಪ್ರಮಾಣ ಮಾಡಿದ್ದು ಇಡೀ ಕನ್ನಡನಾಡು ಎದೆಯುಬ್ಸೋ ಅಂಗ್ ಮಾಡಿದ್ದು ದಿಟಾ ಗುರು! ಸ್ವಸಂತ್ರ ಬಂದ್ ಅರವತ್ ವರ್ಸಾದ ಮ್ಯಾಗೆ ಇಂತಾ ಬದಲಾವಣೆ ಕಾಣ್ತಾ ಐತೆ. ಇಂಗಾಗಕ್ಕೆ ಕಾರಣಾನೇ ನಮ್ ಕನ್ನಡದೋರಲ್ಲಿ ಆಗಿರೋ ಕನ್ನಡತನದ ಜಾಗೃತಿ. 2004ರಿಂದ ಇಲ್ಲಿಗಂಟಾ ನಡ್ದಿರೋ ಬೇಜಾನ್ ಓರಾಟಗಳಿಂದ ಇವತ್ತು ಚುನಾವಣೇಲಿ ಕನ್ನಡನಾಡಿನ್ ಇತ ಕಾಪಾಡೋದು, ದಿಲ್ಲಿಯಿಂದ ನಮ್ ಊರುಗಳಿಗೆ ದಕ್ಕುಸ್ಕೋಬೇಕಿರೋದನ್ನೆಲ್ಲಾ ದಕ್ಕುಸ್ಕೊಳ್ಳೋದು... ಇಂಗೆ ಜನರು ನಮ್ಮ ಸಂಸದರಿಂದ ಕನ್ನಡಕ್ಕೆ ಬದ್ದತೇನಾ ನಿರೀಕ್ಸೆ ಮಾಡಿದ್ ಸುಳ್ಳಲ್ಲಾ! ಮೊನ್ನೆ ಮೊನ್ನೆ ಕರ್ನಾಟಕ ರಕ್ಷಣಾ ವೇದಿಕೆಯೋರು, ಕನ್ನಡ ಅಭಿವೃದ್ಧಿ ಪ್ರಾದಿಕಾರದೋರು ಗೆದ್ದಿರೋ ಎಲ್ರೂಗೂ ಕನ್ನಡಾದಲ್ಲೇ ಪ್ರಮಾಣವಚನ ತಕ್ಕಳಕ್ಕೆ ಕೇಳ್ಕಂಡಿದ್ರು. ಈಗ ಅಂಗೇ ಆಗಿದ್ ನೋಡಿ ಆಲ್ ಕುಡ್ದಂಗಾಯ್ತು! ಬಿಜೇಪಿಯೋರಂತೂ ಇಂಗ್ ಕನ್ನಡದಲ್ಲೇ ಪ್ರಮಾಣ ಮಾಡಿ ಅಂತಾ ತಮ್ ಎಂಪಿಗೋಳ್ಗೆ ಆದೇಸಾನೇ ಕೊಟ್ಟಿದ್ರಂತೆ. ನೋಡ್ದಾ ಗುರು! ಇಂದೀವಾದಿ ಬಿಜೇಪೀನೂ ಇವತ್ ಕನ್ನಡಿಗರ ಮನಮೆಚ್ಸಕ್ಕೆ ಮುಂದಾಗಿರೋದು ಕನ್ನಡದೋರಲ್ಲಿ ಉಟ್ಕಂಡಿರೋ ರಾಜಕೀಯ ಪ್ರಜ್ಞೆಯಿಂದಾನೆ ಅನ್ನದು ಅದಿನಾರಾಣೆ ಸತ್ಯಾ! ನಾವೂನೂವೆ ಇಷ್ಟುಕ್ಕೇ ಕುಸಿ ಪಟ್ಕೊಂಡ್ ಸುಮ್ಕಾಗೋದ್ ಬ್ಯಾಡಾ! ನಾಡಿನ ಇತ ಕಾಯೋ ಇಸ್ಯದಲ್ಲಿ ಸಂಸದ್ರು ಮ್ಯಾಲೆ ಸದಾ ಒತ್ತಡ ಆಕ್ತಿರೋಣಾ. ಸರಿಯಿದ್ದಾಗ ಸಭಾಸ್ ಅನ್ನಮಾ, ಇಲ್ದಿದ್ದಾಗ್ ಬಯ್ಯಮಾ... ಅಲ್ವಾ ಗುರು!
Related Posts with Thumbnails