ಮೋದಿಯವರು "ಗೆಲ್ಲಿಸಿ" ಎಂದ "ಭಾರತ"ದಲ್ಲಿ ಕಾಣದ ಕರ್ನಾಟಕ!


ಭಾರತೀಯ ಜನತಾ ಪಕ್ಷದ ಘೋಷಿತ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ಶ್ರೀ ನರೇಂದ್ರಮೋದಿಯವರು ನಿನ್ನೆ (೧೭.೧೧.೨೦೧೩ರ ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. "ಭಾರತ ಗೆಲ್ಲಿಸಿ"  ಹೆಸರಿನ ಈ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ನರೇಂದ್ರಮೋದಿಯವರು "ಭಾರತದ ಗೆಲುವು ಎಂದರೇನು? ಭಾರತವನ್ನು ಗೆಲ್ಲಿಸುವುದು ಹೇಗೆ? ಭಾರತದ ಗೆಲುವಿನಲ್ಲಿ ಕರ್ನಾಟಕದ ಪಾತ್ರವೇನು? ಕರ್ನಾಟಕ ಈ ಗೆಲುವಿನಲ್ಲಿ ಹೇಗೆ ಪಾಲುದಾರ?" ಎಂಬುದನ್ನೆಲ್ಲಾ ವಿವರಿಸುತ್ತಾರೆ ಎಂದುಕೊಂಡವರಿಗೆ ಭಯಂಕರ ನಿರಾಸೆಯಾಗಿದೆ. ಕನ್ನಡಕ್ಕೆ ತರ್ಜುಮೆಯೂ ಆಗದ ನೇರ ಹಿಂದೀ ಭಾಷಣ ನೆರೆದಿದ್ದ ಎಷ್ಟು ಜನರಿಗೆ ಅರ್ಥವಾಯಿತೋ ದೇವರೇ ಬಲ್ಲಾ!

ಮೋದಿ ಮಾತಿನಲ್ಲಿ ಕಾಣದ ಕರ್ನಾಟಕ...

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂಬ ಪ್ರಚಾರವೇ ಮುಖ್ಯವಾಗಿದ್ದು, ಕೇಂದ್ರಸರ್ಕಾರದ ವೈಫಲ್ಯಗಳಲ್ಲಿ ಕೆಲವನ್ನು ಪಟ್ಟಿ ಮಾಡಿ ಮಾತಾಡಿದ ಶ್ರೀ ನರೇಂದ್ರಮೋದಿಯವರ ಮಾತುಗಳಲ್ಲಿ ಕರ್ನಾಟಕದ ಸಮಸ್ಯೆಗಳಿಗೆ ಯಾವ ಜಾಗವೂ ಇರಲಿಲ್ಲ! ಕನ್ನಡನಾಡಿನ ಜನರ ನಾಳೆಗಳ ಬಗ್ಗೆ ಯಾವ ಮಾತೂ ಇರಲಿಲ್ಲಾ! ಕರ್ನಾಟಕದ ಜನರಿಗೆ ಭಾವನಾತ್ಮಕವಾಗಿ ಮಹತ್ವದ್ದಾದ ಬೆಳಗಾವಿಯಾಗಲೀ, ಬದುಕಿನ ಪ್ರಶ್ನೆಯಾದ ಕೃಷ್ಣಾ ಕಾವೇರಿಯಾಗಲೀ, ಒಂದಿಡೀ ನಗರದ ಜನತೆಗೆ ಕುಡಿಯುವ ನೀರಿಗೆ ಬೇಕಿರುವ ಕಳಸಾ-ಭಂಡೂರವಾಗಲೀ, ಕನ್ನಡಿಗರಿಗೆ ಕೆಲಸ ಕೊಡಿಸಬಲ್ಲ ‘ಸ್ಥಳೀಯರಿಗೆ ಉದ್ಯೋಗ ಮೀಸಲಾತಿ’ಯಾಗಲೀ ಇವರ ಮಾತಿನಲ್ಲಿ ಇಣುಕಲೇ ಇಲ್ಲಾ! ಕೇಂದ್ರದ ಯು.ಪಿ.ಎ ಸರ್ಕಾರದ ಕಡುಭ್ರಷ್ಟತೆಯ ಬಗ್ಗೆ ಮಾತಾಡಿದ ಇವರ ವಿಶ್ವಾಸಾರ್ಹತೆಯನ್ನು ಕಳೆದ ಒಂಬತ್ತು ವರ್ಷಗಳ ಅವಧಿಯ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದ ಗಣಿ ಅಕ್ರಮವೂ ಸೇರಿದಂತೆ ಯಾವ ಹಗರಣದ ಬಗ್ಗೆಯಾಗಲೀ, ಲೋಕಾಯುಕ್ತ ವರದಿಯ ಬಗ್ಗೆಯಾಗಲೀ, ಜೈಲುಪಾಲಾದ ಸಚಿವರುಗಳ ಬಗ್ಗೆಯಾಗಲೀ ಚಕಾರವೆತ್ತದೆ ವಹಿಸಿದ ಮೌನ ನುಂಗಿ ಹಾಕಿತೆಂದರೆ ತಪ್ಪಾಗದು.

ಬಯಲಾದ ರಾಜ್ಯ ಬಿಜೆಪಿಯ ಬಣ್ಣ!

ಕಾರ್ಯಕ್ರಮಗಳಲ್ಲಿ ಬೇರೆ ಭಾಷೆಯಲ್ಲಿ ನಾಯಕರುಗಳು ಮಾತಾಡಿದಾಗ, ಜೊತೆಗಾರರೊಬ್ಬರು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ವಾಡಿಕೆ. ರಾಷ್ಟ್ರೀಯ ಮುಂದಾಳುಗಳೆನಿಸಿಕೊಂಡಿದ್ದ ಹಲವರು(ಎಷ್ಟೋ ಬಾರಿ ಬಿಜೆಪಿಯವರೇ) ಈ ಹಿಂದೆಲ್ಲಾ ಇದೇ ಕ್ರಮವನ್ನು ಅನುಸರಿಸಿದ್ದಾರೆ. ಆದರೆ ಈ ಬಾರಿ ಇಂತಹ ಯಾವುದೂ ನಡೆಯಲಿಲ್ಲ. ತಮ್ಮ ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತಾಡಿ, ನಂತರ ಹಿಂದೀಯಲ್ಲಿ ಭಾಷಣ ಮಾಡಿದ ನಾಯಕರನ್ನೇನು ಈ ಬಗ್ಗೆ ದೂಷಿಸಲಾಗದು. ಇದಕ್ಕೆ ಪ್ರಮುಖ ಕಾರಣವೇ ಇಲ್ಲಿನ ನಾಯಕರುಗಳ ಅಸಡ್ಡೆ. ರಾಜ್ಯ ಬಿಜೆಪಿಯ ನಾಯಕರಿಗೆ ಕನ್ನಡದ ಬಗ್ಗೆ ಇದೆಂಥಾ ಅಸಡ್ಡೆ ಎಂದುಕೊಳ್ಳುತ್ತಿರುವಷ್ಟರಲ್ಲೇ ಇದು ಬರೀ ಕನ್ನಡದ ಬಗೆಗಿನ ಅಸಡ್ಡೆಯಲ್ಲಾ, ದೆಹಲಿ ದಣಿಗಳನ್ನು ಓಲೈಸುವ ಪರಿ ಎನ್ನಿಸಿದ್ದು... ರಾಜ್ಯಾಧ್ಯಕ್ಷರಾದ ಪ್ರಹ್ಲಾದ್ ಜೋಷಿಯವರೇ ಕನ್ನಡದಿಂದ ಹಿಂದೀ ಭಾಷಣಕ್ಕೆ ಬದಲಾದಾಗ! ಕನ್ನಡ ಬಾರದವರು ಅನಿವಾರ್ಯವಾಗಿ ತಮ್ಮ ನುಡಿಯಲ್ಲಿ ಮಾತಾಡುವುದನ್ನು, ತರ್ಜುಮೆದಾರರಿದ್ದಾಗ ಒಪ್ಪಬಹುದು. ಕನ್ನಡಿಗರೇ ಕನ್ನಡಿಗರನ್ನು ಉದ್ದೇಶಿಸಿ ಹಿಂದೀಯಲ್ಲಿ ಭಾಷಣ ಮಾಡುವುದನ್ನು ಹೇಗೆ ಒಪ್ಪಲಾದೀತು? ಇದು ತೋರಿಸುವುದಾದರೋ ಏನನ್ನು? ಮುಂದೊಮ್ಮೆ ಹಿಂದೀಯನ್ನು ಇವರು ಕರ್ನಾಟಕದ ಆಡಳಿತ ಭಾಷೆಯನ್ನಾಗಿಸೋಲ್ಲಾ ಎನ್ನಲು ಯಾವ ಖಾತ್ರಿ?

ಇನ್ನು ರಾಷ್ಟ್ರೀಯ ನಾಯಕರೆನ್ನಿಸಿಕೊಂಡವರು ಬಂದಾಗ ವೇದಿಕೆಯ ಮೇಲಿದ್ದ ರಾಜ್ಯನಾಯಕರು ಓಡಾಡುತ್ತಿದ್ದ ರೀತಿ, ತಗ್ಗಿ ಬಗ್ಗಿ ನಡೆದುಕೊಂಡು ವಿಧೇಯತೆ ತೋರಿಸುತ್ತಿದ್ದ ರೀತಿಗಳನ್ನು ನೋಡಿದರೆ, ಹೈಕಮಾಂಡಿಗೆ ತಾವು ಸಾಮಂತರು ಎಂಬುದನ್ನು ಎತ್ತೆತ್ತಿ ತೋರಿಸುವಂತಿತ್ತು. ಹತ್ತೊಂಬತ್ತು ಜನ ಸಂಸದರಿದ್ದಾಗಲೇ ಕನ್ನಡಿಗರ ಹಿತಕಾಯಲು ಆಗದವರು ಈಗ ತಮ್ಮ ಅಜೆಂಡಾವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿ "ಕನ್ನಡನಾಡಿನ ಸಮಸ್ಯೆಗಳು ಪ್ರಾದೇಶಿಕ - ಅವು ಲೋಕಸಭೆಯಲ್ಲಿ ಚರ್ಚಿಸಲು ಅನರ್ಹ" ಎಂಬಂತೆ "ಭಾರತ ಗೆಲ್ಲಿಸಿ" ಘೋಷವಾಕ್ಯ ಮೊಳಗಿಸುತ್ತಿರುವುದನ್ನು ನೋಡಿದರೆ ಅಚ್ಚರಿಯೆನ್ನಿಸುತ್ತದೆ. ಇದೇ ಕಾರಣಕ್ಕಾಗೇ ನಮ್ಮ ರಾಜ್ಯನಾಯಕರುಗಳೂ ಕೂಡಾ ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಉಪಟಳ, ಚೈನಾದ ಅಪಾಯಗಳ ಬಗ್ಗೆ ಒತ್ತುಕೊಟ್ಟರೇ ಹೊರತು ಕನ್ನಡನಾಡಿನ ಏಳಿಗೆ ಅಥವಾ ಸಮಸ್ಯೆಗಳ ಬಗ್ಗೆ ಕಮಕ್ ಕಿಮಕ್ ಅನ್ನಲಿಲ್ಲಾ!

ಕೊನೆಹನಿ: ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಮುನ್ನ ಆ ಪಕ್ಷವು ಹೊಂದಿರುವ ನೀತಿನಿಲುವು ಸಿದ್ಧಾಂತಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಯಾವುದು ಭಾಷಾವಾರು ಪ್ರಾಂತ್ಯ ವಿರೋಧಿಯಾಗಿದೆಯೋ, ಯಾವುದು "ದೇಶ ಮೊದಲು" ಎನ್ನುತ್ತಾ ಕರ್ನಾಟಕದ ಹಿತ ನಂತರದ್ದು ಎಂಬ ನಿಲುವನ್ನು ಹೊಂದಿದೆಯೋ, ಯಾವುದು ಚಿಕ್ಕರಾಜ್ಯಗಳು ಆಳಲು ಸಲೀಸು ಎನ್ನುತ್ತಾ ರಾಜ್ಯಗಳನ್ನು ಒಡೆಯಲು ತುದಿಗಾಲಲ್ಲಿ ನಿಂತಿದೆಯೋ, ಯಾವುದು ಕೇಂದ್ರಸರ್ಕಾರ ಬಲಶಾಲಿಯಾಗಲು ರಾಜ್ಯಗಳ ಬಲ ಕುಂದಿಸಬೇಕು ಎಂಬಂತೆ ನಡೆದುಕೊಳ್ಳುತ್ತಿದೆಯೋ... ಅಂಥಾ ಯಾವುದೇ ರಾಜಕೀಯ ಪಕ್ಷದ ಕೈ ಹಿಡಿದರೆ ನಮ್ಮ ಪಾಲಿಗೆ ಸಿಕ್ಕುವುದು ಬರೀ ಚಿಪ್ಪು ಅಷ್ಟೇ!

ಶ್...! ಸದ್ದು ಮಾಡದಿರು...

(ಚಿತ್ರಕೃಪೆ: http://dreamsleep.ca/fast-facts/)












ಹೊದ್ದು ಮಲಗಿಹರಯ್ಯಾ ಮುದ್ದು ಕನ್ನಡಿಗರು
ಗದ್ದಲವ ಮಾಡದಿರು...ನಿದ್ದೆ ಕೆಡಿಸದಿರು!
ನಾಡಹಬ್ಬದ ನೆಪದಿ ಡಿಂಡಿಮವ ಬಡಿಯದಿರು
ಕಹಳೆಗಳ ಊದದಿರು.. ಶ್! ಸದ್ದು ಮಾಡದಿರು

ಬಹುದಿನದ ನಿದ್ದೆಯಿದು - ಹಂಪಿ ಮೆರೆದಂದಿನದು
ಹೆಮ್ಮೆ ನೆಮ್ಮದಿ ತಂದಾ ಮೈಮರೆವ ನಿದಿರೆಯಿದು
ನುಗ್ಗಿದಾ ಎದುರಾಳಿ ಮುರಿದಿಟ್ಟ ನಾಳೆಗಳ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ನಿದ್ದೆಯಲ್ಲಿದ್ದಂತೇ ಹಂಪಿ ಮುಕ್ಕಾದರೇನು?
ರತ್ನ ಸಿಂಹಾಸನಕಿಂದು ತುಕ್ಕು ಹಿಡಿದರೇನು?
ಹಿರಿದು ನಾಡದು ಹರಿದು ಹೋಳಾದರೇನು...?
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಒಡೆದ ನಾಡೊಂದಾಗೆ ನೂರಾರು ತೊಡರುಗಳು
ಕೂಡಲಾಗದೆ ನೊಂದವೆಷ್ಟೋ ಒಡಹುಟ್ಟುಗಳು
ನುಂಗಿದರೂ ನೆರೆನಾಡು.. ಬೆಂಕಿ ಬಿದ್ದರೂ ಮನೆಗೆ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಬಿಡುಗಡೆಯು ತೊಡಿಸಿಹುದೇ ಮತ್ತೆ ಸಂಕೋಲೆ
ನುಡಿಜನರ ಹಿತಕಿಂತ ದೇಶವೇ ಮೊದಲೇ?
ತಾಯ್ನೆಲದೆ ತಾಯ್ನುಡಿಯ ಕಡೆಗಣನೆ ನಡೆದಿರಲು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಏಳಿಗೆಯ ಬಂಡಿಗಿದೆ ಕಲಿಕೆ, ದುಡಿಮೆಯ ಗಾಲಿ
ಕೈಬಿಟ್ಟು ನೆಲದ ನುಡಿ ಸಾಗುವುದೇ ಗಾಡಿ
ಬಿತ್ತಲಾರದೆ ಬೀಜ,ಮರವೆಂತು ಬಹುದು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ನಾಡಿನಾಳ್ವಿಕೆಯಲ್ಲಿ ಹೆರನುಡಿಯೇ ಮಿಗಿಲು
ಕನ್ನಡವೇ ಕಾಣದಿದೆ ಕವಿದು ಕಾರ್ಮುಗಿಲು
ಕಟ್ಟುವವ ಕಡೆಗಣಿಸಿ ಮೈಮರೆತಂತಿರಲು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ದೇವನುಡಿ, ರಾಷ್ಟ್ರನುಡಿ, ದುಡಿಮೆನುಡಿ ಮೇರು
ತಾಯ್ನುಡಿಯೇ ಕೀಳೆಂದು ಬಗೆದಿಹರೆ ಇವರು?
ಕನ್ನಡದ ನುಡಿತೇರು ಎಳೆಯುವವರಾರು...
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಬಿರುಗಾಳಿಯಾಗಿಹುದು ತಡೆಯಿರದ ವಲಸೆ
ಕನ್ನಡಿಗರ ಹೆರುವೆಣಿಕೆ ಕುಸಿದು ಕುಲವಳಿಸೆ
ಕೊನೆಗಾಲ ಬಲುಸನಿಹ ಕಾಣಲಾರನೇ ಮರುಳಾ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಹೊತ್ತೀತೆ ಎಲ್ಲೆಲ್ಲೂ ಎಚ್ಚೆತ್ತ ಸೊಡರುಗಳು
ಬೆಳಗೀತೆ ಕರುನಾಡು...ಕನ್ನಡಿಗರೊಡಲು
ಮೊಳಗೀತೆ ಒಕ್ಕೊರಲ ನುಡಿಕಹಳೆ ಮೊದಲು
ಹೊದ್ದು ಮಲಗಿಹನನ್ನು ಎಚ್ಚರಿಸದೇ ಇರಲು!

ಕನ್ನಡದ ಡಿಂಡಿಮವು ಮೊಳಗಲೆಂದೆಂದು
ಸಾವಂತೆ ಕವಿದಿರುವ ನಿದಿರೆ ತೊಲಗಲಿ ಸರಿದು
ಮೈಕೊಡವಿ ಕನ್ನಡಿಗ ಎಚ್ಚೆತ್ತುಕೊಳಲು
ಕರುನಾಡ ತುಂಬೆಲ್ಲಾ ಸಂತಸದ ಹೊನಲು!
Related Posts with Thumbnails