ಯು.ಕೆ ವೀಸಾಗೆ ಕನ್ನಡ ಗೊತ್ತಿದ್ರೂ ಸಾಕು!


ಹೊರದೇಶಗಳಿಗೆ ಹೋಗೋ ಮೊದಲು ಆಯಾ ದೇಶಗಳಿಂದ ವೀಸಾ ಪಡೆದುಕೊಳ್ಳೋದು ಸಾಮಾನ್ಯ ವಿಧಾನ. ಹೀಗೆ ಯುನೈಟೆಡ್ ಕಿಂಗ್‍ಡಮ್ ದೇಶಕ್ಕೆ ಹೋಗೋ ಜನಕ್ಕೆ ವೀಸಾ ಪಡೆದುಕೊಳ್ಳಲು ಅನುಕೂಲ ಮಾಡಿಕೊಡೋಕೆ ಒಂದು ಅಂತರ್ಜಾಲ ತಾಣ ಇದೆ. ಕನ್ನಡಿಗರು ಯು.ಕೆ ವೀಸಾ ದಕ್ಕಿಸಿಕೊಳ್ಳಲು ಅನುಕೂಲ ಆಗೋ ಹಾಗೆ ಈ ತಾಣ ಕನ್ನಡದಲ್ಲೂ ಇದೆ. ಇಗೋ ನೋಡಿ ಆ ತಾಣ.

ಗ್ರಾಹಕ ಸೇವೆಯ ಮಹತ್ವ!

ತನ್ನ ಗ್ರಾಹಕರಿಗಾಗಿ ಸದಾ ಮಿಡಿಯೋರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಯು.ಕೆ ಸರ್ಕಾರದೋರು ಮತ್ತು ವಿ.ಎಫ಼್.ಎಸ್ ಗ್ಲೋಬಲ್ ಸಂಸ್ಥೆಯೋರು ಒಟ್ಟಾಗಿ ಭಾರತದಲ್ಲಿ ಆರಂಭಿಸಿರೋ ಈ ಸಂಸ್ಥೆಯ ಅಂತರ್ಜಾಲ ತಾಣ ಕಂಡಾಗ ತಿಳಿಯುತ್ತೆ. ಜೊತೆಗೆ ಒಮ್ಮೆಲೇ.. ನಮ್ಮೋರು ಹೆಂಗೆ ನಡ್ಕೊತಾ ಇದಾರೆ ಅನ್ನೋದು ನೆನಪಾಗಿ ಬೇಸರವಾಗುತ್ತೆ. ನೀವೇ ನೋಡಿ ನಮ್ಮ ನೈರುತ್ಯ ರೈಲ್ವೇ ವಲಯದ ಈ ಅಂತರ್ಜಾಲ ತಾಣವನ್ನು. ಈ ತಾಣ ಇರೋದು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳೆಂದೂ, ಅಧಿಕೃತ ಸಂಪರ್ಕ ಭಾಷೆಗಳೆಂದೂ ಘೋಷಿಸಲಾಗಿರುವ ಹಿಂದೀ ಮತ್ತು ಇಂಗ್ಲೀಶಿನಲ್ಲಿ ಮಾತ್ರಾ. ಬೇಕಾರೆ ತೊಗೊಳ್ಳೀ ಇಲ್ಲಾ ನೆಗೆದು ಬಿದ್ದು ಸಾಯ್ರಿ...ಅನ್ನಬಹುದೇನೋ ನಮ್ಮ ರೈಲ್ವೇ...


ಭಾರತೀಯ ರೈಲ್ವೇ ಇಲಾಖೆಯ ನೈರುತ್ಯ ವಲಯದಲ್ಲಿ ಹೆಚ್ಚಿನ ಭಾಗ ಬರೋದು ನಮ್ಮ ಕರ್ನಾಟಕದಲ್ಲೇ... ಇದರ ಕೇಂದ್ರಕಛೇರಿ ಇರೋದೂ ಹುಬ್ಬಳ್ಳಿಯಲ್ಲೇ... ಈ ವಲಯದಲ್ಲಿ ಓಡಾಡೋ ಪ್ರಯಾಣಿಕರಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು ಕನ್ನಡದೋರೇ... ಆದರೆ ಇವರಿಗೆಲ್ಲಾ ಅನುಕೂಲ ಮಾಡಿಕೊಡಬೇಕು ಅನ್ನೋ ಆಶಯವೇ ರೈಲ್ವೇ ಇಲಾಖೆಗೆ ಇಲ್ಲ. ನಿಜಕ್ಕೂ ನಿಮಗೇನಾದರೂ ಕೆಲಸ ಆಗಬೇಕಿದ್ದರೆ ಹಿಂದೀ ಕಲೀರಿ... ಇಲ್ಲಾ ಇಂಗ್ಲೀಶ್ ಕಲೀರಿ ಎನ್ನೋ ಧೋರಣೆ ಇದರದ್ದು. ಯಾಕೆ ಹೀಗೇ? ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ರೆ ಇವರದ್ದೇನು ಗಂಟು ಹೋಗ್ತಿತ್ತೂ? ನಿಜವಾದ ಗ್ರಾಹಕಸೇವೆ ನೈರುತ್ಯ ರೈಲ್ವೇಯ ಗ್ರಾಹಕರಿಗೆ ಸಿಗ್ತಿರಲಿಲ್ವಾ? ಅಂತೀರಾ... ಊಹೂಂ, ಗ್ರಾಹಕರಿಗೆ ಅನುಕೂಲವೋ ತೊಡಕೋ ಏನಾದರೆ ಭಾರತ ಸರ್ಕಾರಕ್ಕೇನು? ಸಂವಿಧಾನದ ಆಶಯದಂತೆ ಭಾಷಾನೀತಿ, ಭಾಷಾನೀತಿಯಂತೆ ಎಲ್ಲಾ ಇಲಾಖೆಗಳು, ಇಲಾಖೆಯ ನಿಯಮದಂತೆ ಅಂತರ್ಜಾಲ ತಾಣ. ಇಲ್ಲಿ ಗ್ರಾಹಕ ಅನ್ನೋ ಪದವೇ ಮಾಯಾ! ಇದಕ್ಕೆಲ್ಲಾ ಕಾರಣ ಏನೆಂದರೆ... ಭವ್ಯ ಭಾರತ ಅಪ್ಪಿಕೊಂಡಿರೋ ರೋಗಗ್ರಸ್ತ ಭಾಷಾನೀತಿ.. ಹೇಳಿ ಗುರುಗಳೇ.... ಇದು ಬದಲಾಗಬೇಕೋ ಬೇಡವೋ?

ಕಲಿಕಾ ವ್ಯವಸ್ಥೆ: ರಾಜ್ಯಸರ್ಕಾರದ್ದು ಹೊಣೆ ತಪ್ಪಿಸಿಕೊಳ್ಳೋ ಹುನ್ನಾರವೇ?

ನಿನ್ನೆಯ (೧೮.೦೬.೨೦೧೧ರ) ದಿನಪತ್ರಿಕೆಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ನಾಡಿನಾದ್ಯಂತ ಇಂಗ್ಲೀಶ್ ಮಾಧ್ಯಮದ ಶಾಲೆಗಳನ್ನು ಶುರು ಮಾಡಲು ಸಿದ್ಧವಾಗಿದೆ ಎಂದು ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ತುಮಕೂರಿನಲ್ಲಿ ನೀಡಿರುವ ಹೇಳಿಕೆಯ ಸುದ್ದಿ ಪ್ರಕಟವಾಗಿದೆ. ಕರ್ನಾಟಕ ರಾಜ್ಯಸರ್ಕಾರವೇ ಇಂಥದ್ದೊಂದು ನಡೆಗೆ ಮುಂದಾಗಿ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ.

ಶಿಕ್ಷಣ ವ್ಯವಸ್ಥೆ ರೂಪಿಸೋ ಹೊಣೆ ಸರ್ಕಾರದ್ದು!

ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತದೆ.

ನಿಮ್ಮ ಸರ್ಕಾರದ ನಿಲುವು ಹೇಳಿ ಸಚಿವರೇ...

೧. ತಾಯ್ನುಡಿಯಲ್ಲಿ ಕಲಿಕೆ ಅತ್ಯುತ್ತಮ ಎನ್ನುವುದರ ಬಗ್ಗೆ ತಮ್ಮ ನಿಲುವೇನು?

೨. ಬೇರೆ ಬೇರೆ ಅಧ್ಯಯನಗಳು, ಯುನೆಸ್ಕೋ ಮೊದಲಾದವು ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ ತೋರಿರುವ ಅಭಿಪ್ರಾಯಗಳ ಬಗ್ಗೆ ನಿಮ್ಮ ನಿಲುವೇನು?

೩. ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಹೊಣೆಗಾರಿಕೆ ಕರ್ನಾಟಕ ರಾಜ್ಯಸರ್ಕಾರದ್ದು ಎಂದು ನೀವು ಒಪ್ಪುವಿರಾ?

೪. ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನೂ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊತ್ತಿದೆಯೇ?

೫. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಎನ್ನುವ ನೀತಿಯನ್ನು ಹೊಂದಿರುವುದರ ಬಗ್ಗೆ ತಮ್ಮ ಸರ್ಕಾರದ ನಿಲುವೇನು?

೬. ಅದು ಬರೀ ೫ನೇ ತರಗತಿ ತನಕ, ಹಾಗಾಗಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆ ಆರಂಭಿಸುತ್ತಿದ್ದೇವೆ ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಗೆ ಮಾರಕವಾದ ನಿಲುವಲ್ಲವೇ?

ಸಭ್ಯರೂ ಪ್ರಾಮಾಣಿಕರೂ ಅಂತಾ ಹೆಸರಾಗಿರೋ ಶ್ರೀ ಕಾಗೇರಿಯವರಿಗೆ ಇವುಕ್ಕೆಲ್ಲ ಉತ್ತರ "ಹೌದೂ" ಅನ್ನೋದು ತಿಳಿದಿರೋದಿಲ್ವೇ? ಅದ್ಯಾವ ರಾಜಕಾರಣದ ತಿರುಗಣಿ ಹೀಗೆ ಅವರನ್ನು "ಇಲ್ಲಾ" ಅನ್ನುವಂತೆ ನಡೆದುಕೊಳ್ಳುವಂತೆ ಆಡುಸ್ತಿದೆಯೋ.. ಆ ಕಾಶಿ ವಿಶ್ವೇಶ್ವರನೇ ಬಲ್ಲ!

ಶಂಕರಬಟ್ ಅವರ ಮುಂದಾಳ್ತನದಲ್ಲಿ ತರಬೇತಿ ಶಿಬಿರ



ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವು ನಾಡಿನ ಏಳಿಗೆಯಲ್ಲಿ ಹಿರಿಯಪಾತ್ರವನ್ನು ವಹಿಸಲಿದೆ ಎಂಬ ಹಿನ್ನೆಲೆಯಲ್ಲಿ ಬನವಾಸಿ ಬಳಗವು ನುಡಿಯರಿಮೆಯ ಕ್ಷೇತ್ರದಲ್ಲಿ ದುಡಿಯುವವರಿಗೆ ಸರಿಯಾದ ದಾರಿತೋರಬಲ್ಲ ಹಿರಿಯರ ಮುಂದಾಳ್ತನದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲು ಮುಂದಾಗಿದೆ.
ದೇಶ ವಿದೇಶಗಳಲ್ಲಿ ತಮ್ಮ ಅರಿಮೆಯಿಂದ ವಿಖ್ಯಾತರಾಗಿರುವ, ಕನ್ನಡನಾಡಿನ ಹಿರಿಯ ನುರಿತ ನುಡಿಯರಿಗರಾದ ಡಾ. ಡಿ. ಎನ್. ಶಂಕರಬಟ್ಟರ ಮುಂದಾಳ್ತನದಲ್ಲಿ ನುಡಿಯರಿಮೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಶುರುವಾಗಲಿದ್ದು, ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ನಾಲ್ಕು ಶಿಬಿರಗಳು ನಡೆಯಲಿವೆ. ಪ್ರತೀ ಶಿಬಿರದಲ್ಲೂ ಮೂರು ದಿನಗಳ ತರಬೇತಿ ಇರುತ್ತದೆ. ಇದರಲ್ಲಿ ನುಡಿಯರಿಮೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ, ನುಡಿಯರಿಮೆಯ ಅಧ್ಯಯನ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಸಂದರ್ಶಿಸಿ ತರಬೇತಿ ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ನುಡಿಯರಿಮೆಯ ಕ್ಷೇತ್ರದಲ್ಲಿ, ಡಾII ಡಿ ಎನ್ ಶಂಕರಬಟ್ ಅವರ ಮುಂದಾಳ್ತನದಲ್ಲಿ ಸಂಶೋಧನೆಗಳನ್ನು ಮಾಡ ಬಯಸುವವರು ತಮ್ಮ ವಿವರಗಳನ್ನು ನಮಗೆ ಕಳಿಸಬೇಕಾಗಿ ಕೋರಿಕೆ. ಈ ಬಾರಿಯ ತರಬೇತಿ ಶಿಬಿರವು ಬೆಂಗಳೂರಿನಿಂದಾಚೆ ನಡೆಯಲಿದ್ದು ಬನವಾಸಿ ಬಳಗವೇ ಉಳಿದುಕೊಳ್ಳುವ, ಊಟ ತಿಂಡಿಯ ಏರ್ಪಾಟು ಮಾಡಲಿದೆ. ಇನ್ನುಳಿದ ವಿವರಗಳನ್ನು ಪಡೆದುಕೊಳ್ಳಲು, ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ: priyank@banavasibalaga.org

ವಲಸಿಗ ಕನ್ನಡ ಕಲಿಯೋಲ್ಲಾ ಅನ್ನೋದು ಧರ್ಮಾನಾ?

ಇಂದು (೦೭.೦೬.೨೦೧೧) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಸಲ್ಲಿಸಿರೋ ಒಂದು ವರದಿಯ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸರ್ಕಾರಕ್ಕೆ ಹಲವಾರು ಶಿಫಾರಸ್ಸುಗಳನ್ನು ಚಂದ್ರು ಅವರು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಒಂದು ಸಲಹೆ "ಕರ್ನಾಟಕದಲ್ಲಿ ವಲಸೆ ಬಂದು ನೆಲೆಸುವ ಪರಭಾಷಿಕರು ವರ್ಷವೊಂದರಲ್ಲಿ ಕನ್ನಡ ಕಲಿಯಬೇಕು. ೭ನೇ ತರಗತಿ ಹಂತದ ಕನ್ನಡ ಪರೀಕ್ಷೆಯನ್ನು ಪಾಸು ಮಾಡಬೇಕು" ಎನ್ನುವುದು. ಇಲ್ಲಿ ಇಂತಹ ಪರೀಕ್ಷೆ ಬೇಕಾ? ಹೇಗೆ ಪರೀಕ್ಷೆ ಮಾಡಬೇಕು? ಹೇಗೆ ಒಂದು ವರ್ಷದ ಅವಧಿ ಕಂಡು ಹಿಡಿಯಬೇಕು? ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮುಂದೇನು? ಅಸಲಿಗೆ, ಪರೀಕ್ಷೆ ಬೇಕಾ? ಎನ್ನುವುದನ್ನೆಲ್ಲಾ ಬದಿಗಿಟ್ಟು ನೋಡಿದಲ್ಲಿ ಈ ನಡೆಯ ಹಿಂದೆ "ವಲಸಿಗರು ಕನ್ನಡ ಕಲಿಯಬೇಕು" ಎನ್ನುವ ಕಾಳಜಿಯನ್ನು ಗುರುತಿಸಬಹುದಾಗಿದೆ. ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಅರ್ಥ ಮಾಡಿಕೊಂಡವರಿಗೆ ಚಂದ್ರು ಅವರ ಸಲಹೆ ಮೆಚ್ಚುಗೆಯಾಗುತ್ತದೆ.

ಪ್ರತಿಕ್ರಿಯೆ ಮತ್ತದರ ಹಿಂದಿನ ಮನಸ್ಥಿತಿ

ಹಾಗಾಗಿ ಇವತ್ತು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಅಂದ್ರೆ ಅದು ಎಂಥೆಂಥಾ ವರದಿಗೆ, ಪ್ರತಿಕ್ರಿಯೆಗೆ ಕಾರಣವಾಗುತ್ತೇ ಅನ್ನೋದನ್ನು ನೀವು ಬೆಂಗಳೂರು ಮಿರರ್ ಪತ್ರಿಕೆಯನ್ನು ನೋಡೇ ಅರಿಯಬೇಕು. ಬೆಂಗಳೂರ್ ಮಿರರ್ ಪತ್ರಿಕೆ ವರದಿ ಮಾಡಿರೋ ಶೈಲಿಯನ್ನು ನೋಡಿ. ಈ ಪತ್ರಿಕೆಯಲ್ಲಿ ಸುದ್ದಿಯನ್ನು ನೀಡಿರುವ ಶೈಲಿಯೇ ಕೆಣಕುವಂತಹ, ಆಕ್ಷೇಪದ ದನಿಯಲ್ಲಿದೆ ಎಂದು ಅನ್ನಿಸುವುದು ಸಹಜ. ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಹೀಗಿವೆ ನೋಡಿ:ನಮ್ಮ ನಾಡಲ್ಲಿ ಬಂದವರು ನಮ್ಮ ನುಡಿಯನ್ನು ಕಲೀರಿ ಅಂದರೆ ಹರಿದು ಬಂದ ಈ ಕಮೆಂಟುಗಳನ್ನು ತಲೆಕೆಟ್ಟವರು ಬರೆದಿದ್ದಾರೆ ಎಂದು ಸುಲಭವಾಗಿ ತಳ್ಲಿ ಹಾಕಿಬಿಡಬಹುದು. ಆದರೆ ಇಂಥಾ ಮನಸ್ಥಿತಿಗೆ ಯಾರು ಕಾರಣ ಎಂದು ನೋಡಿದರೆ ಕಾಣುವುದು ಭಾರತದ ಭಾಷಾನೀತಿ. ಹೆಚ್ಚಿನದಾಗಿ ಇಲ್ಲಿ ಚಂದ್ರು ಶಿಫಾರಸ್ಸನ್ನು ವಿರೋಧಿಸಿ ಬಂದಿರೋ ಕಮೆಂಟುಗಳೆಲ್ಲಾ ಹಿಂದಿಯ ಪರವಾಗಿರುವುದು ಅಚ್ಚರಿಯಾಗಿ ಕಂಡರೂ ಅದು ಹಾಗಿಲ್ಲದೇ ಅದಕ್ಕೊಂದು ಕಾರಣವಿದೆ.

ಹುಳುಕಿನ ಭಾಷಾನೀತಿ!

ಭಾರತ ಅಳವಡಿಸಿಕೊಂಡಿರೋ ಭಾಷಾನೀತಿಯಿಂದಾಗಿ ಇಂದು ಭಾರತದ ಯಾವಮೂಲೆಯಲ್ಲಿದ್ದರೂ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತದೆ. ಆ ಪ್ರಜೆ ತನ್ನ ಜೀವಮಾನದಲ್ಲೆಂದೂ ತನ್ನೂರು ಬಿಟ್ಟು ಹೊರಹೋಗದಿದ್ದರೂ ಹಿಂದಿಯನ್ನು ಓದಿ, ಕಲಿತು ಪಾಸಾಗಬೇಕಾಗಿದೆ. ಆದರೆ ಕನ್ನಡನಾಡಿಗೆ ಬದುಕಲು ಬರುವವರು ಕನ್ನಡ ಕಲಿಯಬೇಕಾದ್ದು ಕಡ್ಡಾಯವಲ್ಲ. ಮನರಂಜನೆ, ಆಡಳಿತ, ಜಾಹೀರಾತು, ಗ್ರಾಹಕಸೇವೆ ಎಲ್ಲದರಲ್ಲಿ ಹಿಂದಿಯನ್ನು ತುರುಕುವ ಮೂಲಕ ಭಾರತ ಸಾಧಿಸಿರುವುದೇನೆಂದರೆ "ಈ ದೇಶದ ಯಾವ ಮೂಲೆಗೆ ಹೋದರೂ ಹಿಂದಿಯವನಿಗೆ ಅನಾನುಕೂಲವಾಗಬಾರದು" ಎಂಬುದನ್ನು! ರಾಜ್ಯಸರ್ಕಾರವೇ ತ್ರಿಭಾಷಾ ಸೂತ್ರಾ ಅಂತಾ ಒಪ್ಕೊಂಡು ಮೆಟ್ರೋದಲ್ಲಿ ಹಿಂದೀನಾ ಬಳಸಕ್ ಶುರು ಮಾಡುದ್ರೆ ಯಾಕೆ ಅವರಿಗಾದ್ರೂ ಕನ್ನಡ ಕಲೀಬೇಕಾಗುತ್ತೇ? ಆದರೆ ಈ ಸಹಜ ನ್ಯಾಯ ಭಾರತ ಸರ್ಕಾರದ ಭಾಷಾನೀತಿಯ ಕಾರಣದಿಂದ ಇಂದು ಭಾರತದಲ್ಲಿ ಇಲ್ಲವಾಗಿದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆ ಕಲಿಯುವುದು ಕಡ್ಡಾಯ ಅಂತಾ ಕೇಂದ್ರಸರ್ಕಾರವಂತೂ ಎಂದಿಗೂ ಹೇಳಲಾರದು. ಆಡಳಿತ ಭಾಷೆಯಾಗಿ ಹಿಂದಿ/ ಇಂಗ್ಲೀಷ್ ಇರೋದ್ರಿಂದ ಕೇಂದ್ರಸರ್ಕಾರ ಕರ್ನಾಟಕದಲ್ಲಿರೋ ಕನ್ನಡಿಗರಿಗೆ ಹಿಂದಿಯನ್ನು ಕಡ್ಡಾಯ ಮಾಡೀತೇ ಹೊರತು ಪರಭಾಷಿಕರಿಗೆ ಕನ್ನಡವನ್ನಲ್ಲ. ಅರವತ್ತು ವರ್ಷಗಳಿಂದ ತಲೆಯಲ್ಲಿ ತುಂಬುತ್ತಾ ಬಂದಿರುವ ಹಿಂದಿ ಭಾರತದ ರಾಷ್ಟ್ರಭಾಷೆ, ಹಿಂದೀ ರಾಷ್ಟ್ರಪ್ರೇಮದ ಸಂಕೇತ, ಭಾರತದ ಒಗ್ಗಟ್ಟಿಗೆ ಸಾಧನ ಎಂಬೆಲ್ಲಾ ಸಿಹಿಲೇಪಿತ ವಿಷದ ಗುಳಿಗೆಗಳು ನಮ್ಮವರ ತಲೆಯಲ್ಲೇ ಹೊಕ್ಕಿರುವಾಗ ಪರಭಾಶಿಕರಿಂದ ಬಂದಿರೋ ಈ ಪ್ರತಿಕ್ರಿಯೆಗಳು ಹೀಗಿಲ್ಲದೇ ಇನ್ನು ಹೇಗೆ ಇರಲು ಸಾಧ್ಯಾ ಗುರೂ?

ವಲಸಿಗನ ಧರ್ಮ!

ಹೌದು, ವಲಸಿಗನಿಗೊಂದು ಧರ್ಮವಿದೆ. ತಾನು ವಲಸೆ ಹೋಗುವ ಪ್ರದೇಶದ ನುಡಿ, ಸಂಸ್ಕ್ರುತಿಗಳಿಗೆ ಧಕ್ಕೆ ತರದೆ ಪೂರಕವಾಗಿ ನಡೆದುಕೊಂಡು ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎನ್ನುವುದೇ ಅದು. ಯಾರಿಗೂ ಇನ್ನೊಂದು ನಾಡಿನ ಅನನ್ಯತೆಯನ್ನು ಅಳಿಸುವ ಹಕ್ಕಿಲ್ಲ. ಹಾಗಾಗಿ ಆಯಾ ಪ್ರದೇಶದ ನುಡಿಯನ್ನು ಕಲಿತು ಅದರಲ್ಲಿ ವ್ಯವಹರಿಸಲೇ ಬೇಕಾಗಿದೆ. ಇಂತಹ "ಬೇಕು"ವನ್ನು ವಲಸಿಗನಿಂದ ನಿರೀಕ್ಷಿಸುವುದು ಆಯಾ ನಾಡಿಗರ ಹಕ್ಕಾಗಿದೆ. ಇಷ್ಟಕ್ಕೂ ವಲಸಿಗರು ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಕಲೀರಿ ಅಂತಾ ಯಾರಾದ್ರೂ ಯಾಕೆ ಹೇಳಬೇಕು? "ಯಾವ ನಾಡಿನಲ್ಲಿ ನಾವು ಬದುಕುತ್ತೇವೋ ಆ ನಾಡಿನ ಭಾಷೆಯನ್ನು ಕಲಿತೇ ಕಲೀತೀವಿ" ಅನ್ನೋದು ಸಹಜ ಧರ್ಮವಲ್ಲವೇ? ನಾನ್ಯಾಕೆ ಕನ್ನಡ ಕಲೀಬೇಕು ಅನ್ನುವ ಉದ್ಧಟತನ ತೋರುವುದು ತಪ್ಪಲ್ಲವೇ? ಬೆಂಗಳೂರು ಭಾರತದ ಸ್ವತ್ತು ಅನ್ನೋದನ್ನು "ನಿಮ್ಮೂರಲ್ಲಾ ಇದು, ಇದು ಇಡೀ ಇಂಡಿಯಾಗೆ ಸೇರಿದ್ದು... ಇಲ್ಲಿ ನಾವು ನಿಮ್ಮ ಭಾಷೆ ಕಲಿಯಲ್ಲಾ, ಅದೇನು ಮಾಡ್ಕೋತೀರೋ ಮಾಡ್ಕೊಳ್ಳೀ" ಅನ್ನುವಂತಹ ಅನಿಸಿಕೆಯಿಂದಾಗಿ ಆಡಿದರೆ, ಆ ಮಾತುಗಳು ವಲಸಿಗ ಧರ್ಮಕ್ಕೆ ವಿರುದ್ಧವಾಗಿಲ್ಲವೇ? ಇಂಥಾ ಮನಸ್ಥಿತಿಗೆ ಕಾರಣವಾಗಿರೋ ಭಾರತದ ರೀತಿ ನೀತಿ, ಕಾಯ್ದೆ ಕಾನೂನುಗಳು ಬದಲಾಗಬೇಡವೇ?

ಗಾಡಿಗಳ ಮೇಲೆ ಕನ್ನಡದ ಫಲಕ ಕಾನೂನು ಬದ್ಧವಾಗಲಿ!

ಕರ್ನಾಟಕದಲ್ಲಿ ಓಡಾಡೋ ವಾಹನಗಳಲ್ಲಿ ಅನೇಕವು ಕನ್ನಡದಲ್ಲಿ ಇರುತ್ತವೆ. ಇಂಥವನ್ನು ನೋಡ್ದಾಗ ನಮಗೆ ಹೆಮ್ಮೆಯೂ ಆಗುತ್ತೆ. ನಾಡಿನ ಮೇಲಿನ ಅಭಿಮಾನದಿಂದ ನಮ್ಮ ಜನರೂ ಕೂಡಾ ತಮ್ಮ ಗಾಡಿಗಳ ನಂಬರ್ರನ್ನು ಕನ್ನಡದಲ್ಲಿ ಬರೆಸಿರುತ್ತಾರೆ.

ಅಷ್ಟೇ ಏಕೆ? ಬೆಂಗಳೂರಿನಲ್ಲಿ ಓಡಾಡೊ ಬಿಟಿಎಸ್ ಬಸ್ಸುಗಳಲ್ಲೂ ನೀವು ಕನ್ನಡದ ಅಂಕಿಗಳ ಬಳಕೆ ನೋಡಿರಬಹುದು. ರಾಜ್ಯೋತ್ಸವ ಬಂದಾಗ ಕನ್ನಡದಲ್ಲಿ ಅಂಕಿ ಬರೆಸುವ ಒಂದು ಕಾರ್ಯಕ್ರಮವನ್ನೂ ಕೆಲ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿವೆ.

ಆದರೆ ಇದು ಭಾರತದಲ್ಲಿ ಕಾನೂನು ಬಾಹಿರವಾದದ್ದು ಅಂತಾ ನಿಮಗೆ ಗೊತ್ತಾ ಗುರೂ!


ಸಾರಿಗೆ ಇಲಾಖೆಯ ಕಾಯ್ದೆ

ಭಾರತದ ಸಾರಿಗೆ ಇಲಾಖೆಯು ವಾಹನಗಳ ನಾಮಫಲಕ ಹೇಗಿರಬೇಕೆಂದು ಒಂದು ನಿಯಮ ಮಾಡಿದೆ. ಅದರಲ್ಲಿ ಹೀಗಿದೆ ನೋಡಿ.
All motorised road vehicles are tagged with a registration or licence number in India. The Licence plate (commonly known as number plates) number is issued by the district-level Regional transport office (RTO) of respective states — the main authority on road matters. The licence plates are placed in the front and back of the vehicle. By law, all plates are required to be in modern Hindu-Arabic numerals with Roman alphabet.

ಅಂದರೆ ಕರ್ನಾಟಕದಲ್ಲಿ ನಾವು ಕನ್ನಡದಲ್ಲಿ ನಮ್ಮ ಗಾಡಿಗಳಿಗೆ ಕನ್ನಡದಲ್ಲಿ ನಾಮಫಲಕ ಬರೆಸೋದು ಕಾನೂನು ಬಾಹಿರವಾದದ್ದಾಗಿದೆ. ಬೇರೆ ಬೇರೆ ದೇಶಗಳಲ್ಲಿ ವಾಹನಗಳ ನೋಂದಣಿ ಫಲಕ ಹೇಗಿರುತ್ತೆ ಅಂತಾ ಮಾಹಿತಿ ವಿಕಿಪೀಡಿಯಾದಲ್ಲಿದೆ. ನೋಡಿ. ಎಂಥಾ ದುರಂತಾ ನೋಡಿ, ನಮ್ಮ ನಾಡಲ್ಲಿ ನಾವು ದುಡ್ಡು ಕೊಟ್ಟು ಕೊಂಡುಕೊಳ್ಳೋ ಗಾಡಿಯ ನೋಂದಣಿ ಸಂಖ್ಯೆಯನ್ನು ನಮ್ಮ ನುಡಿಯಲ್ಲಿ ಬರೆಯೋದು ಕಡ್ಡಾಯ ಅಂತಾ ಇರೋ ದೇಶಗಳ ನಡುವೆ "ಹಾಗೆ ಬರೆಯೋದು ಕಾನೂನು ಬಾಹಿರ" ಅನ್ನೋ ವ್ಯವಸ್ಥೆ ಭಾರತದ್ದು!

ನಿಜಕ್ಕೂ ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆ ಕಡ್ಡಾಯ ಅಂತಾ ಮಾಡಿದ್ದಿದ್ರೆ ಸರಿ ಇರ್ತಿತ್ತು. ಆಗ ನಮ್ಮ ನಾಡಲ್ಲಿ ನಮ್ಮ ನುಡಿಯನ್ನು ಬಳಸೋದು ಅಪರಾಧ ಅನ್ನೋ ವಿಕೃತಿಗೆ ಅವಕಾಶ ಆಗ್ತಾ ಇರಲಿಲ್ಲ. ಆದರೂ ನಮ್ಮ ಪುಣ್ಯವೆಂದರೆ ಕೇಂದ್ರದ ಆಡಳಿತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಬರೆಯೋದು ಕಡ್ಡಾಯ ಅನ್ನೋ ದಿನಗಳು ಇನ್ನೂ ಬಂದಿಲ್ಲ ಅಂತಾ ಸಮಾಧಾನ ಮಾಡ್ಕೋಬೇಕಾಗಿದೆ ಅಲ್ವಾ ಗುರೂ!!
Related Posts with Thumbnails