ಸ್ಥಳೀಯ ಮಂದಿನ್ನ ಕೆಲಸಕ್ಕೆ ಇಟಗೋರಿ: ಶಿವಸೇನಾ

ಕಳದ ಶನಿವಾರ, ಜುಲೈ 28. ಮುಂಬೈ ನಗರದಾಗ್ ಶಿವಸೇನಾ ತನ್ನ ಮಣ್ಣಿನ ಮಕ್ಕಳ ಹಕ್ಕಿನ ಸಲುವಾಗಿ, ಅಲ್ಲಿ ನೆಲೆಗೊಂಡಿರುವ ರಿಲಯನ್ಸ್ ಸಂಸ್ಥಾ ಹೆಂಗ ಅಲ್ಲಿನ ಸ್ಥಳೀಯ ಮರಾಠಿ ಮಂದಿನ್ನ ಮೂಲೆಗುಂಪ ಮಾಡುದ್ರಾಗ ಸಫಲ ಆಗೆತಿ ಅನ್ನು ವಿವರಣೆ ನೀಡಕೊಂತ, ರಿಲಯನ್ಸ್ ಕಂಪನಿಯ ಧೋರಣೆಯನ್ನು ಖಂಡಿಸುತ್ತ ಮರಾಠಿ ಮಂದಿಗ್ ನ್ಯಾಯ ಕೊಡಸು ಸಲುವಾಗಿ, ಅವರ ಪರವಾಗಿ ದೊಡ್ಡ ಮಟ್ಟದಾಗ್ ಪ್ರತಿಭಟನೆ ಹಮ್ಮಿಕೊಂಡಿತ್ತು ಅಂತ ಔರಂಗಾಬಾದ್ನ ಲೋಕಮತ ಟೈಮ್ಸ ವರದಿ ಮಾಡೇತಿ (ಚಿತ್ರ ನೋಡಿ).

ಬಹುರಾಷ್ಟ್ರೀಯ / ಬಹುರಾಜ್ಯ ಕಂಪನಿಗಳು ಅಂದಕೂಡಲೆ ಸ್ಥಳೀಯ ಮಂದಿಗ್ ಆದ್ಯತೆ ಮ್ಯಾಲ ಕೆಲ್ಸ ಕೊಡವಲ್ರು ಅಂದ್ರ ಹೆಂಗ್ಪಾ ಗುರು? ಈ ಕಂಪನಿ ನಡಸೋರ ತಲಿಯೊಳ್ಗ ಏನ್ರ ಐತಿ ಅನ್ನೋದಾದ್ರ ಸ್ಥಳೀಯ ಮಂದಿನ್ನ ಕೆಲ್ಸಕ್ ಇಟಗೊಂಡ್ರ ವೆಚ್ಚಾ ಕಡಮಿ ಆಗತೇತಿ ಅನ್ನೋದಾದರೂ ತಿಳೀಬಾರದೆ? ಅದ ಬಿಟ್ಟ ತಾ ಬಂದ ಊರಿಂದಲೇ ಕೆಲ್ಸಕ್ ಮಂದಿನ್ನೂ ಕರಕೊಂಡ ಬರ್ತೀನಿ ಅಂದ್ರ ಹೆಂಗ ಗುರು?

ಶಾಸಕರ ಬಾರಿಗೆ ರಾತ್ರೋರಾತ್ರಿ ಸೈ, ರಾಜ್ ಸ್ಮಾರಕಕ್ಕೆ ಮೀನ-ಮೇಷ!

ಗೋಕಾಕ್ ಚಳುವಳಿಯನ್ನ ಐದನೇ ಗೇರಿಗೆ ತೊಗೊಂಡೋದ ನಟ ಡಾ.ರಾಜ್ ಕುಮಾರ್ ಸಮಾಧಿಯನ್ನ ಒಂದು ಸ್ಮಾರಕ ಮಾಡೊ ವಿಷಯದಲ್ಲಿ ನಮ್ಮ ಸರ್ಕಾರ ಮೀನ-ಮೇಷ ಏಣಿಸ್ತಾ ಇರೋ ಬಗ್ಗೆ ಇವತ್ತಿನ ವಿ.ಕ. ವರದಿ ಮಾಡಿದೆ.

ನಂ ಬೆಂಗಳೂರಿನಾಗೆ ಶಿವಾಜಿ, ತಿರುವಳ್ಳುವರ್ ಅಂದ್ರೆ "ಪುಸುಕ್" ಅಂತ ಪ್ರತಿಮೆಗೆ ರಾತ್ರೋರಾತ್ರಿ ಒಪ್ಪಿಗೆ ಕೊಡೋರು, ಶಾಸಕರಿಗೆ ಅಂತ ಬಾರ್ ಕಟ್ಟಕ್ಕ್ ಹಿಂದ್-ಮುಂದ್ ನೋಡದೇ ಇರೋರಿಗೆ ಐದೂವರೆ ಕೋಟಿ ಕನ್ನಡಿಗರ ಕಣ್ಮಣಿ ಡಾ|| ರಾಜ್ ಸ್ಮಾರಕ ನಿಲ್ಸಕ್ ಏನು ಬೇನೆ?

ಹಣಕಾಸು ಸಮಸ್ಯೆ ಆದ್ರೆ ನಾವ್ ಕೊಡ್ತೀವೀಂತ ಔರ್ ಮನೇವ್ರು ಅಂದ್ರೆ "ಇಲ್ಲ, ಇಲ್ಲ, ಅದು ಸಮಸ್ಯೆ ಅಲ್ಲ" ಅನ್ನೋ ಥರ ಬ್ಯಾಡಾ ಅಂತಾರೆ, ಆದ್ರೆ ಕೆಲ್ಸ ಶುರೂ ಕೂಡಾ ಮಾಡಲವಲ್ಲ ಗುರು?
ಹುಟ್ಟಿದರೇ ಕನ್ನಡ ನಾಡಲ್ ಹುಟ್ತಬೇಕು
ಮೆಟ್ಟಿದರೇ ಕನ್ನಡ ಮಣ್ಣಾ ಮೆಟ್ಟಬೇಕು . . .
ಮುಂದಿನಾ ನನ್ನಾ ಜನ್ಮ
ಬರೆದಿಟ್ಟಾನಂತೆ ಬ್ರಹ್ಮ
ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನಿಲ್ಲಿಯೇ . . .

ರಾಜ್ ಸ್ಮಾರಕ ಕಟ್ಟೀಂತ ಪ್ರಪಂಚದ ಮೂಲೆಮೂಲೆಗಳಲ್ಲಿರೋ ಕನ್ನಡಿಗರಿಂದ ಬರ್ತಿರೋ ಕೂಗೇ "ಎಂದಿಗೂ" ಡಾ|| ರಾಜ್ "ಇಲ್ಲಿಯೇ" ಅನ್ನೋದರ ಗುರ್ತಲ್ವಾ ಗುರು?

ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು

ನಮ್ಮ ಜನಕ್ಕೆ ಸಂಸ್ಕೃತ ಅಂದ್ರೆ ಅದೇನೋ ಕುರುಡುಭಯ, ಕುರುಡುಭಕ್ತಿ. ಅದಕ್ಕೆ ಇಲ್ಲಸಲ್ಲದ ಪಟ್ಟ ಕಟ್ಟಕ್ಕೆ ಹಿಂದೇಟೇ ಹಾಕಲ್ಲ. 25ನೇ ತಾರೀಕಿನ ವಿ.ಕ. ದಲ್ಲಿ ಯಾರೋ ಸತ್ಯನಾರಾಯಣ ಭಟ್ಟ ಅನೋರು ಬರೀತಾರೆ:
ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದವರು ಭಾರತೀಯರು, ಭಾರತೀಯ ಜ್ಞಾನ ಪರಂಪರೆಯ ಮೂಲ ಅಸ್ತಿತ್ವ ಹುದುಗಿರುವುದೇ ಸಂಸ್ಕೃತದಲ್ಲಿ. ಒಂದು ಕಾಲದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ವಾಸಿಸುವ ಸರ್ವ ಸಾಮಾನ್ಯರ ಭಾಷೆ ಇದಾಗಿತ್ತು.

ಸಂಸ್ಕೃತದಿಂದ ಕನ್ನಡದ ಪದಸಿರಿ ಇತ್ತೀಚೆಗೆ ಹೆಚ್ಚಿರೋದು ನಿಜ, ಆದ್ರೆ ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ "ಸರ್ವಸಾಮಾನ್ಯರ ಭಾಷೆ" ಆಗಿತ್ತು ಅನ್ನೋದು ಅಪರಂಜಿ ಸುಳ್ಳು. ಹಿಂದ್-ಹಿಂದೆ ಹೋದಷ್ಟೂ ಕರ್ನಾಟಕದ ನುಡಿಯಲ್ಲಿ ಸಂಸ್ಕೃತದ ಪದಗಳೇ ಸಿಗೋದಿಲ್ಲ. ಹೆಸರಾಂತ ಭಾಷಾತಜ್ಞ ಶ್ರೀ ಡಿ.ಎನ್. ಶಂಕರಭಟ್ಟರು ತಮ್ಮ ಹೊತ್ತಿಗೆ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಅನ್ನೋದ್ರಲ್ಲಿ ವೈಜ್ಞಾನಿಕವಾಗಿ ಕನ್ನಡಕ್ಕೂ ಸಂಸ್ಕೃತಕ್ಕೂ ಮಗಳು-ತಾಯಿ ಸಂಬಂಧ ಇಲ್ಲ, ಎರಡು ಭಾಷೆಗಳ ವ್ಯಾಕರಣಗಳಿಗೆ ಸ್ವಲ್ಪವೂ ನಂಟಿಲ್ಲ ಅಂತ ತೋರ್ಸಿಕೊಟ್ಟು ಹೇಳ್ತಾರೆ:
ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿರುವುದೇ ಅವುಗಳ ವ್ಯಾಕರಣ ನಿಯಮಗಳಲ್ಲಿ ಇಷ್ಟೊಂದು ವ್ಯತ್ಯಾಸಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ. ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಮೂಲದಿಂದ ಬೆಳೆದು ಬಂದಿದೆ; ಆದರೆ ಕನ್ನಡ ಭಾಷೆ ಅದಕ್ಕಿಂತ ತೀರ ಭಿನ್ನವಾದ ದ್ರಾವಿಡ ಮೂಲದಿಂದ ಬೆಳೆದು ಬಂದಿದೆ.

ಹಿಂದೆ ಕರ್ನಾಟಕದಲ್ಲಿ ಮಾತಾಡುತ್ತಿದ್ದಿದ್ದು ಸಂಸ್ಕೃತ ಅಲ್ಲ, ಆದಿದ್ರಾವಿಡ ಅನ್ನೋ ಒಂದು ಭಾಷೆ ಅಂತ ನಿಜವಾದ ಭಾಷಾವಿಜ್ಞಾನಿಗಳ ಅನಿಸಿಕೆ. ಆ ಆದಿದ್ರಾವಿಡಭಾಷೆಗೆ ಒಂದು ನಿಘಂಟ್ನ ಬರೋ ಮತ್ತು ಎಮೆನೋ ಅನ್ನೋ ಇಬ್ರು ಬರೆದು ಅಂತರ್ಜಾಲದಲ್ಲಿ ಇಟ್ಟಿದಾರೆ, ಭೇಟಿಕೊಟ್ಟು ನೋಡಿ. ಭಾರತದ ಭಾಷಾ ಕುಟುಂಬಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪಟ ನೋಡಿ (ಕ್ಲಿಕ್ಕಿಸಿದರೆ ದೊಡ್ಡದಾಗತ್ತೆ):


ಕನ್ನಡ ಸಂಸ್ಕೃತದಿಂದ ಬೆಳೆದುಬಂದ ಭಾಷೆ ಅಲ್ಲವೇ ಅಲ್ಲ. ಇದು ಪ್ರಪಂಚದ ಭಾಷಾವಿಜ್ಞಾನಿಗಳಿಗೆಲ್ಲಾ ಗೊತ್ತು. ಇಷ್ಟೆಲ್ಲಾ ಇದ್ರೂ ಸುಳ್ಳು ಹೇಳ್ಕೊಂಡು ಸಂಸ್ಕೃತಕ್ಕೆ ಪೂಜೆ ಮಾಡ್ಕೊಂಡು ಕೂರೋ ಜನಕ್ಕೆ ಯಾವಾಗ ಬುದ್ಧಿ ಬರತ್ತೆ ಗುರು? ಆಧಾರವಿಲ್ದೆ ಬಾಯಿಗೆ ಬಂದಂಗೆ ಮಾತಾಡೋದ್ನ ಯಾವಾಗ ನಿಲ್ಸ್‍ತಾರೆ ಗುರು?

ಹೀಗೆ ಹೇಳಿದ ಮಾತ್ರಕ್ಕೆ "ನೀವು ಸಂಸ್ಕೃತವಿರೋಧಿಗಳು = ಸಂಸ್ಕೃತಿವಿರೋಧಿಗಳು = ರೌಡಿಗಳು" ಅನ್ನೋ ಪಟ್ಟ ಕಟ್ಟಕ್ಕೆ ಸಕ್ಕತ್ ಜನ ಮುಂದೆ ಬರ್ತಾರೆ. ಆದರೆ ಔರು ಪೆದ್ದರು, ಆಧಾರವಿಲ್ಲದೆ ಮಾತಾಡೋರು. ಸಂಸ್ಕೃತಕ್ಕೂ ನಮಗೂ ಸಂಬಂಧವಿಲ್ಲ ಅಂದ್ರೆ ಅದನ್ನ ವಿರೋಧಿಸಿದಂಗಲ್ಲ. ಸಂಸ್ಕೃತ=ಸಂಸ್ಕೃತಿ ಅನ್ನೋದೂ ಸುಳ್ಳು. ಸಂಸ್ಕೃತದಿಂದ ಕಲೀಬೇಕಾದ್ದನ್ನ ಕಲಿಯೋದು ಬಿಟ್ಟು, ಗೋವಿಂದನ್ನ ಬಿಟ್ಟು ಬರೀ ಡುಕೃಂಕರಣೇಲೇ ಜೀವನ ಕಳೀತಾರಲ್ಲ, ಬರೀ ಸಿಪ್ಪೆ ತಿನ್ನೋದ್ರಲ್ಲೇ ಜೀವನ ಕಳೀತಾರಲ್ಲ ಈ ಸಂಸ್ಕೃತಭಕ್ತರು ಅಂತ ಬೇಜಾರಾಗತ್ತೆ ಗುರು!
ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ ||

ಓ ಕನ್ನಡಜನಾಂಗದವನೇ, ನಿನ್ನ ಜನಾಂಗಕ್ಕೆ, ನಿನಗೆ ಕಾಲ ಸನ್ನಿಹಿತವಾಗಿದ್ದಾಗ, ನಿನ್ನ ಏಳ್ಗೆಯೇ ಒಂದು ಪ್ರಶ್ನೆಯಾಗಿರುವಾಗ ಡುಕೃಂಕರಣೆಯನ್ನು ಬಿಡು! ಇಲ್ಲದ, ನೀನೇ ಕಲ್ಪಿಸಿಕೊಟ್ಟ ಪಟ್ಟದಿಂದ ಸಂಸ್ಕೃತವನ್ನು ಇಳಿಸಿ ಗೋವಿಂದನನ್ನು ಭಜಿಸು, ಸಂಸ್ಕೃಭಾಷೆಗೂ ನಿನಗೂ ಯಾವ ಸಂಬಂಧವಿಲ್ಲದಿದ್ದರೂ ಅದರಲ್ಲಿರುವ ಜ್ಞಾನವನ್ನು ನಿನ್ನದಾಗಿಸಿಕೋ! ನಿಜವಾದ ಜ್ಞಾನವನ್ನು ಪಡೆ, ಯಾರೋ ಹೇಳಿಕೊಟ್ಟ ಸುಳ್ಳಿಗೆ ಮಾರುಹೋಗಬೇಡ! ಸಂಸ್ಕೃತದಲ್ಲಿರೋ ಅದ್ಭುತವಾದ ಜ್ಞಾನವನ್ನ ಪಡೀಬೇಕು, ನಿಜ. ಅದರಿಂದ ಕಲೀಬೇಕು (ಈಗಲಂತೂ ಸಂಸ್ಕೃತದಲ್ಲಿ ಓದಕ್ಕೆ ಯೋಗ್ಯವಾಗಿರೋದೆಲ್ಲ ಕನ್ನಡಕ್ಕೆ ಅನುವಾದ ಆಗಿದೆ), ನಿಜ. ಅದನ್ನ ಕಲಿಯಕ್ಕಾಗದೇ ಇರೋ ಪೆದ್ದರಲ್ಲಿ ಅರಸರೇ ಸಂಸ್ಕೃತ ಅನ್ನೋದಕ್ಕೆ ಇಲ್ಲಸಲ್ಲದ ಸ್ಥಾನ ಕೊಟ್ಟು ತಲೆಮೇಲೆ ಕೂಡಿಸಿಕೊಳ್ಳೋದು.

ಬೇರೆ ಭಾಷೆಗಳಲ್ಲಿರೋ ಜ್ಞಾನ ಪಡ್ಕೋಬೇಕು. ಆದ್ರೆ ಅವುಗಳ್ಗೆ ಇಲ್ಲಸಲ್ಲದ ಪಟ್ಟ ಕಟ್ಟೋದು ಬಿಡಬೇಕು ಗುರು!

ಭಾರತೀಯ ಅಂಚೆ ಇಲಾಖೆಗೆ ಮರೆತುಹೋಗಿರೋ ಕರ್ನಾಟಕ!

ಮೊನ್ನೆ ಕನ್ನಡಪ್ರಭದಲ್ಲಿ "ಕರ್ನಾಪೆಕ್ಸ್ 07 ಬಹಿಷ್ಕರಿಸೋಣ" ಅಂತ ಮೈಸೂರಿನ ಮುದ್ದುಕೃಷ್ಣ ಅವರು ತಮ್ಮ ಅಳಲು ತೋಡ್ಕೊಂಡಿದಾರೆ. ಈ ಕರ್ನಾಪೆಕ್ಸು ಅಂಚೆಚೀಟಿ (ಸ್ಟಾಂಪ್) ಪ್ರದರ್ಶನ "ಅಷ್ಟೇ", ಇದಕ್ಕ್ಯಾಕೆ ಇಷ್ಟೆಲ್ಲ ತಲೆ ಕೆಡಿಸಿಕೋಬೇಕು ಅಂತ ಅನ್ಸ್‍ಬೋದು. ಆದರೆ ಕರ್ನಾಟಕಕ್ಕೆ ಇಲ್ಲೂ ಮೋಸ ಆಗಿರೋದ್ನ ನೋಡಿದ್ರೆ ಕೋಪಾನೇ ಬರತ್ತೆ ಗುರು!

1947 ರಿಂದ 2007 ವರೆಗೆ 1,980 ಅಂಚೆಚೀಟಿಗಳ್ನ ಭಾರತ ಸರ್ಕಾರದ ಅಂಚೆ ಇಲಾಖೆ ಹೊರಡಿಸಿದೆ. ಇದರಲ್ಲಿ ಕನ್ನಡದ್ದು- ಕರ್ನಾಟಕಕ್ಕೆ ಸಂಭಂದ ಪಟ್ಟಿದು ಬೆರಳೆಣಿಕೆಯಷ್ಟು ಮಾತ್ರ. ಒಕ್ಕೂಟದಲ್ಲಿ ಇರೋ ಎಲ್ಲಾ ರಾಜ್ಯಗಳಿಗೆ ಸಂಬಂದ ಪಟ್ಟ ಮಹತ್ವದ ಘಟನೆಗಳ, ಮಹಾನ್ ಪುರುಷರ ನೆನಿಪಿಸಿಕೊಳ್ಳುವ , ಆಗು-ಹೋಗುಗಳ ಬಗ್ಗೆ ದಾಖಲಿಸಲು ಸಮನಾಗಿ ಸ್ಟಾಂಪುಗಳನ್ನು ಹೊರತಂದಿದ್ರೆ ಕರ್ನಾಟಕದ ಮಹತ್ವ ಸಾರೋ 75ಕ್ಕೂ ಹೆಚ್ಚು ಅಂಚೆ ಚೀಟಿ ಹೊರಬರಬೇಕಿತ್ತು.

ಕರ್ನಾಟಕಕ್ಕೆ ಸಂಬಂದಪಟ್ಟಂತೆ ಬಂದ ಮೊಟ್ಟಮೊದಲನೆ ಅಂಚೆಚೀಟೀಂದ್ರೆ 1960ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯನೋರಿರೋ ಒಂದು ಚೀಟಿ. ಆಮೇಲೆ 1979ರವರೆಗೆ ಬಿಡುಗಡೆಯಾದ ಚೀಟಿಗಳಲ್ಲಕಾಣಿಸಿಕೊಂಡಿದ್ದು ನಮ್ಮ ಬಸವಣ್ಣೋರು ಒಬ್ಬರು ಮಾತ್ರ. ನಂತರದಲ್ಲಿ ನಮ್ಮ ಜ್ಞಾನಪೀಠ ಸಾಹಿತಿಗಳಾದ ಕುವೆಂಪು-ಬೇಂದ್ರೆ-ಗೋಕಾಕ್-ಮಾಸ್ತಿ ಈ ನಾಕು ಕವಿಗಳನ್ನೂ ಒಂದೇ ಚೀಟೀಲಿ ಕುರಿ ತುಂಬಿದಂಗೆ ತುಂಬಿದ್ರು. ಶಿವರಾಮ ಕಾರಂತ ಒಬ್ಬರ ಅಂಚೆಚೀಟಿಯನ್ನ ಬಿಡಿಯಾಗಿ ಮಾಡಿದ್ದು ಬಿಟ್ಟರೆ ಕನ್ನಡಕ್ಕೆ ಸಂಬಂಧಪಟ್ಟ ಮತ್ಯಾವ ವ್ಯಕ್ತಿಗಳ ಅಂಚೆಚೀಟೀನೂ ಬಂದಿಲ್ಲ. ನಾಮಕಾವಸ್ಥೆಗೆ ಸ್ಯಾಂಡಲ್ವುಡ್ (2006) ಮತ್ತು ಬಂಡಿಪುರ ಅರಣ್ಯದ ಬಗ್ಗೆ (2007) ಎರಡು ಚೀಟಿಗಳು ಬಂದಿವೆ ಅಷ್ಟೆ.

ಇತರ ರಾಜ್ಯದ ವ್ಯಕ್ತಿಗಳ ಬಗ್ಗೆ ಹೇಳಬೇಕೆಂದ್ರೆ ಬರೀ 2006 ರಲ್ಲೇ ತಮಿಳುನಾಡಿನ ಬಗ್ಗೆ 17 ಅಂಚೆಚೀಟಿಗಳು ಬಿಡುಗಡೆ ಆಗಿವೆ. ಆ ಸಮಯದಲ್ಲಿ ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಮಂತ್ರಿಯಾಗಿದ್ದಿದ್ದು ಡಿ.ಏಂ.ಕೆ. ದಯಾನಿಧಿ ಮಾರನ್.

ಹೆಂಗಿದೆ ಫಿಟ್ಟಿಂಗು ಗುರು?

ಕರ್ನಾಟಕ ಅನ್ನೋ ಕನಸ್ನ ನನಸುಮಾಡಿದ ಆಲೂರ ವೆಂಕಟರಾಯರು, ಜಯ ಚಾಮರಾಜೇಂದ್ರ ಒಡೆಯರು, ಬಿ.ಎಂ. ಶ್ರೀ, ಸಂಗೊಳ್ಳಿ ರಾಯಣ್ಣ, ಟಿಪ್ಪೂ, ಕೆಂಪೇಗೌಡ, ಪುಲಕೇಶಿ, ಗುಬ್ಬಿ ವೀರಣ್ಣ, ಶಂಕರ್ನಾಗ್ ಇವರನ್ನು ನಾವು ಅಂಚೆಚೀಟಿಗಳಲ್ಲಿ ಕಾಣೋದು ಯಾವಾಗ ಅಂತ ಒಂದಪ್ಪ ಯೋಚ್ನೆ ಮಾಡು ಗುರು!

ಇತ್ತೀಚೆಗೆ ಕರ್ನಾಟಕದ 50 ವರ್ಷದ ಹುಟ್ಟಿದಹಬ್ಬಕ್ಕಾಗಲಿ ನಟಸಾರ್ವಭೌಮ ಡಾ|| ರಾಜಕುಮಾರ್ ನೆನಪಿಗಾಗಿ ಆಗ್ಲಿ ಅಂಚೆಚೀಟಿ ಮಾಡಕ್ಕಾಗಲ್ಲ ಅನ್ನೋ ಅಂಚೆ ಇಲಾಖೆ ನಿಲುವು ಕನ್ನಡಿಗರ್ನ, ಕರ್ನಾಟಕಾನ ಕಡೆಗಣಿಸಿರೋದಲ್ದೆ ಮತ್ತೇನು ಗುರು?

ಇದ್ರಿಂದೆಲ್ಲ ಸ್ಪಷ್ಟವಾಗಿ ಹೊರಗ್ ಬರ್ತಿರೋದು ಏನಪ್ಪಾ ಅಂದ್ರೆ: ಕನ್ನಡಿಗರು ಒಗ್ಗೂಡಿ ಕೇಂದ್ರದಲ್ಲಿ ಗಟ್ಟಿಯಾಗಲಿಲ್ಲಾಂದ್ರೆ, ಭಾರತಸರ್ಕಾರದ ಜುಟ್ಟು ತಕ್ಕಮಟ್ಟಿಗೆ ನಮ್ಮ ಕೈಯಲ್ಲಿಲ್ಲಾಂದ್ರೆ ಅಂಚೆಚೀಟೀನೂ ಹೋಗತ್ತೆ, ಊಟದ ಚೀಟೀನೂ ಹೋಗತ್ತೆ, ಕನ್ನಡಿಗರಿಗೆ ಪ್ರತಿಯೊಂದು ಹೆಜ್ಜೇಲೂ ಈಗಾಗಲೇ ಆಗ್ತಿರೋ ಮೋಸ ಎಂದ್ಗೂ ನಿಲ್ಲಕ್ಕೆ ಸಾಧ್ಯವೇ ಇಲ್ಲ. ಜುಟ್ಟು ನಮ್ಮ ಕೈಗೆ ಬರಲೇಬೇಕು.

ಅದಕ್ಕೆ ಮೊದಲು ಕನ್ನಡ-ಕನ್ನಡಿಗ-ಕರ್ನಾಟಕಗಳ ಹಿತಾಸಕ್ತೀನ ಕಾಯೋದೇ ಗುರಿಯಾಗಿಟ್ಟುಕೊಂಡಿರೋ ಒಂದಾದ್ರೂ ರಾಜಕೀಯ ಪಕ್ಷಾನ ಕನ್ನಡಿಗರು ಒಗ್ಗೂಡಿ ಕಟ್ಟಬೇಕು. ಇಲ್ದಿದ್ರೆ ಕನ್ನಡಪ್ರಭಕ್ಕೆ ಮುದ್ದುಕೃಷ್ಣಗಳು ಈರೀತಿ ಪತ್ರಗಳ್ನ ಬರೆಯೋದು ಎಂದ್ಗೂ ನಿಲ್ಲಲ್ಲ, ಕರ್ನಾಟಕ ಅನ್ನೋದು ಕೇಂದ್ರಾಡಳಿತದಲ್ಲಿರೋ ಇಲಾಖೆಗಳಿಗೆ ನೆನಪೂ ಆಗಲ್ಲ!

ಮೀರಾ ಮಾಧವ ರಾಘವ: ಸಕ್ಕತ್ತಾಗಿದ್ಯಂತೆ ಹೋಗುವ!

ಟಿ.ಎನ್."ಮುಕ್ತ"ಸೀತಾರಾಮ್ ನಿರ್ದೇಶಿಸಿರೋ ಮೀರಾ-ಮಾಧವ-ರಾಘವ ಅನ್ನೋ "ಮನೆಕತೆ" ಚಿತ್ರ ಇವತ್ತು ತೆರೇಗ್ ಬಂದೈತಿ. ಪ್ರಪಂಚದಲ್ಲಿ ಎಲ್ಲಾ ಕಡೆಯಿರೋ ಕನ್ನಡಿಗರ ಆಸೆಗಳನ್ನ ಮಡಿಲಿಗೆ ತುಂಬಿಕೊಂಡೈತಿ! ಇವತ್ತಿನ "ಸಿನಿವಿಜಯ"ದ ತುಂಬಾ ಇದ್ರುದೇ ರಂಗೋಲಿ. ಹಂಸಲೇಖ ನಿರ್ದೇಶಿಸಿರೋ ಇಂಪಾದ ಹಾಡುಗಳು ಆಗ್ಲೇ ಬೆಂಗ್ಳೂರಿನ್ ರೇಡಿಯೋ ಮಿರ್ಚೀಲಿ ತುಂಬ್ಕೊಂಡಿವೆ. ಸಾಲದಕ್ಕೆ ಈ ಚಿತ್ರದಲ್ಲಿ ಸರಿಗಮಪಾ ಹಾಡೊ ರೋಲಿನಲ್ಲಿ ರಮ್ಯ ಕಾಣಿಸಿಕೊಂಡಿರೋದು ಶ್ಯಾನೆ ಕಚುಗುಳಿ ಗುರುವೇ...

ಆದ್ರೆ ಇಂಥಾ ಒಳ್ಳೇ ಕನ್ನಡದ ನಿರ್ದೇಶಕ ಮಾಡಿರೋ ಸಿನಿಮಾಗೆ ಪ್ರೋತ್ಸಾಹ ಕೊಡಬೇಕಾಗಿರೋ ಕರ್ನಾಟಕದ ಪಟ್ಟಣ (ಪಟ್ಟ+ಅಣ=ರಾಜಧಾನಿ) ಬೆಂಗಳೂರಿನ ಒಳ್ಳೊಳ್ಳೆ ಚಿತ್ರಮಂದಿರಗಳು ಶಂಕರ್-ಶಿವಾಜಿಗಳನ್ನ ಮೆರೆಸಿಕೊಂಡಿರೋದ್ರಿಂದ ಬರೀ ಕಿತ್ತೋಗಿರೋ, ಇಲ್ಲಾ ಊರಾಚೆ ಇರೋ ಚಿತ್ರಮಂದಿರಗಳಲ್ಲಿ (ಆದೂ ರಾತ್ರಿ ಪಾಳಿಯಲ್ಲಿ!) ಬಿಡುಗಡೆ ಆಗ್ತಾ ಇದೆ ಅನ್ನೋದು ಕಟುಸತ್ಯ!

ಇದೇ ಹೊತ್ತಿಗೆ ಸರಿಯಾಗಿ ಬಿಡುಗಡೆ ಆಗಿರೋ ಯಾವ್ದೋ ಒಂದು ತೆಲ್ಗು ಚಿತ್ರಕ್ಕೆ ಊರೊಳಗಿರೋ 20 ಚಿತ್ರಮಂದಿರಗಳು ಸಿಕ್ಕಿವೆ! ಯಾಕೆ ಹೀಗೆ? ಕನ್ನಡನಾಡಲ್ಲೇ ಕನ್ನಡ ಚಿತ್ರಗಳಿಗೆ ಈ ಗತಿ ಯಾಕೆ...ಅಂತ ತಲೆ ಕೆರ್ಕೊಳೋದು ಬೇಕಾಗೇ ಇಲ್ಲ. ಆ ಚಿತ್ರದಲ್ಲಿ ಚಿರಂಜೀವಿ ಕೈಲಿ 2 ಕನ್ನಡದ್ ಪದ ಮಾತಾಡ್ಸಿ ಕರ್ನಾಟಕದ ತೆಲುಗು ಬಿಡ್ಡ ಚಾನೆಲ್ಗಳ್ಗೆ (ಹೆಚ್ಚಾಗಿ TV9 ಮತ್ತು ETV) ಹರ್ಡರ್ಲಾ ಈ ಪಿಚ್ಚರ್ನ ಅಂತ್ಯೋಳಿರ್ಬೇಕು ಗುರು! ಅಬ್ಬಬ್ಬಬ್ಬಬ್ಬಬ್ಬ! ಅದೇನು ಚಿರಂಜೀವಿ ಹಿರಿಮೆ ಹೇಳೋದು, ಅದೇನು ಈ ತೆಲುಗು ಚಿತ್ರದ್ ಪ್ರಚಾರ!!!


ಕನ್ನಡಿಗರು ಚಿತ್ರರಂಗದ ಸುತ್ತಲೇ ಒಂದು ಸಕ್ಕತ್ ವ್ಯಾಪಾರಸಾಮ್ರಾಜ್ಯ ಹುಟ್ಟಿಸೋದಕ್ಕೆ ಬೇಕಾದ್ದೆಲ್ಲ ಇದೆ. ಇತ್ತೀಚೆಗಂತೂ ಸಕ್ಕತ್ತಾಗಿ ಜನಕ್ಕೆ ಏನು ಬೇಕು ಅಂತ ತಿಳ್ಕೊಂಡ್ ಬಿಡ್ತಿರೋ ಕನ್ನಡ ಚಿತ್ರಗಳು, ಎಫ್.ಎಂ. ಚಾನೆಲ್ಗಳಿಗೆ ಕೊನೆಗೂ ಅರ್ಥವಾಗಿರೋ ಕನ್ನಡದ ಚಿತ್ರಗಳ/ಹಾಡುಗಳ ಮಾರುಕಟ್ಟೆ, ಹೊಸದಾಗಿ ಶುರುವಾಗ್ತಿರೋ ಕನ್ನಡ ಟೀವಿ ಚಾನೆಲ್ಲುಗಳು (ಅದ್ರಲ್ಲೂ ನಮ್ಮ ಮು.ಮ.ಗಳ ಮನೆಯೋರ ಕಸ್ತೂರಿ ಚಾನೆಲ್ಲು), ಪತ್ರಿಕೆಗಳು - ಇವೆಲ್ಲಾ ಸೇರಿ ಇದ್ನ ಮಾಡ್ಬೋದಲ್ವಾ ಗುರು?

ತಮ್ಮದೇ ಕಂಪನಿ ತೆಗ್ಯೋದು ಗಿಗ್ಯೋದೆಲ್ಲಾ ಯಾರೋ ಹಿಂದಿಯೋರು ಇಲ್ಲಾ ತೆಲುಗ್ರು ಇಲ್ಲಾ ತಮಿಳ್ರು ಮಾಡೋ ಕೆಲಸ, ನಮಗೆ ಔರ್ ಅಂಗಡೀಲಿ ಹೋಗಿ ಪೊಟ್ಟಣ ಕಟ್ಟಕ್ಕೆ ಮಾತ್ರ ಯೋಗ್ತೆ ಇರೋದು, ನಾವು "ರಿಸ್ಕು" ತೊಗೊಳಕ್ ಹೋಗಲ್ಲ ಅಂತೆಲ್ಲ ಅಂದುಕೊಂಡು ಕನ್ನಡಿಗರು ಕೂತ್ಕೊಳೋ ದಿನಗಳು ಕೊನೆಗೂ ಮುಗೀತವೆ ಅನ್ನೋದು ಎರ್ರಾಬಿರ್ರಿ ಒಳ್ಳೇ ಸುದ್ದೀನೇ ಗುರು! ಒಳ್ಳೇ ಕಾಫಿ ಕುಡಿದಾಗ ಆಗೋಷ್ಟು ಖುಷಿ ತರೋ ಬೆಳವಣಿಗೆ ಗುರು! ಉದ್ಯಮಶೀಲತೆ ಅನ್ನೋದು ಕುರ್ಚೀಗಿರೋ ನಾಕ್ ಕಾಲಲ್ಲಿ ಒಂದಿದ್ದಂಗೆ. ಅದು ಮುರ್ದ್ ಹೋದ್ರೆ ಕನ್ನಡ ಜನಾಂಗ ಎಡ್ವಿ ಬೀಳೋದು ಖಂಡಿತ. ತೊಗೋಬೇಕು, ರಿಸ್ಕು ತೊಗೋಬೇಕು. ಅದ್ನೇ ಎಲ್ರೂ ಮಾಡೋದು. ಅದ್ನ ಮಾಡ್ದೋನಿಗೇ ದುಡ್ಡು ಅನ್ನೋ ದೊಡ್ಡಪ್ಪ ಒಲ್ಯೋದು! ಈ ಒಂದು ಕಾಲು ನಿಲ್ಲದೇ ಹೋದರೆ ಅದೇ ಕುರ್ಚೀನ ನಿಲ್ಲಿಸಕ್ಕೆ ಬೇರೆಭಾಷೆಯೋರು ಮುನ್ನುಗ್ಗಿ ಬರ್ತಾರೆ, ನಮಗೆ ಬರಬೇಕಾಗಿರೋ ದುಡ್ನ ಹೊಡ್ಕೊಂಡ್ ಹೋಗ್ತಾರೆ ಗುರು!

ಮೀ-ಮಾ-ರಾಗ್ ಓಗ್ಮಾ?

ಹೋಗಿ ಬನ್ನಿ ಕಲಾಂ, ನಿಮಗೆ ಕನ್ನಡಿಗರ ಸಲಾಂ!

ಇದೀಗ ತಮ್ಮ ಸರದಿ ಮುಗಿಸಿದ ಮಾಜಿ ರಾಷ್ಟ್ರಪತಿ ಕಲಾಂ 2005 ನವೆಂಬರ್ರಲ್ಲಿ ಕರ್ನಾಟಕದ ಬೆಳವಣಿಗೆ ಆಗಬೇಕು ಅಂದ್ರೆ ಯಾವಯಾವ ಕೆಲ್ಸ ಸರೀಗೆ ಆಗಬೇಕೂಂತ ಗುರುತಿಸಿ, ಕರ್ನಾಟಕದ ಶಾಸಕರ ಮುಂದೆ ಗೋರ್ಕಲ್ಲಮೇಲೆ ಮಳೆಸುರಿದಂಗೆ ಅವರಿಗೆ ತಿಳಿಸಿದ್ರು. ಅವರು ಗುರುತಿಸಿದ ಕೆಲವು ಅಂಶಗಳು ಹೀಗಿವೆ:
  • ಕನ್ನಡಿಗನ ಸರಾಸರಿ ವರ್ಷದ ಆದಾಯ ತಲಾ 26,000 ರೂಪಾಯಿಂದ 75,000 ರೂಪಾಯಷ್ಟಾಗಬೇಕು ಮತ್ತು ಜೀವನ ಶೈಲಿ ಉತ್ತಮ ಆಗಬೇಕು
  • ಕರ್ನಾಟಕದಲ್ಲಿ ಅಕ್ಷರತೆ ಈಗ 67% ಇದೆ, ಅದು 2012 ಹೊತ್ತಿಗೆ 100% ಆಗಬೇಕು
  • ಕನ್ನಡಿಗರಿಗೆ ಹೆಚ್ಚು ಕೆಲಸ ಸಿಗಬೇಕು, ಅದಕ್ಕೆ ಹೆಚ್ಚು ಉದ್ಯಮಗಳು ಬರಬೇಕು, 2009 ರೊಳಗೆ ಹೆಚ್ಚು ಅವಕಾಶಗಳು ಬಂದು 2 ಕೋಟಿ ಕನ್ನಡಿಗರಿಗೆ ಉದ್ಯೋಗ ಕರ್ನಾಟಕದಲ್ಲಿ ಸಿಗಬೇಕು
  • ಕರ್ನಾಟಕ್ಕೆ ಬೇಕಾಗಿರುವ ವಿದ್ಯುತ್ ಶಕ್ತಿಯನ್ನು ಬಯೋ ಇಲ್ಲಾ ಕಸದಿಂದ ಉತ್ಪಾದಿಸಲು ಕ್ರಮ ಕೈಗೊಳ್ಳಬೇಕು
  • ಮ್ಯಾಂಚೆಸ್ಟರ್ ಆಗಿದ್ದ ದಾವಣಗೆರೆಯಲ್ಲಿ ಮತ್ತು ಇತರ ಕಡೆ ಮತ್ತೊಮ್ಮೆ ಜವಳಿ ಉದ್ಯಮ ತಲೆ ಎತ್ತಬೇಕು. ಹತ್ತಿ ಉತ್ಪಾದನೆ ಹೆಚ್ಚು ಮಾಡಿ ವಿದೇಶಗಳಿಗೆ ಕಳುಹಿಸುವ ಹಾಗೆ ಆಗಬೇಕು. 100 ಕೋಟಿ ಬಟ್ಟೆ ರಫ್ತು ಗುರಿ ಇಟ್ಟುಕೊಂಡರೆ ಇದರಿಂದ 4 ಲಕ್ಷ ಜನರಿಗೆ ಕೆಲಸ ಸಿಗುತ್ತದೆ
  • ಕೃಷಿ ಉತ್ಪಾದನೆ 6,000 ಕೋಟಿ ಇದೆ, 2009ರ ವೇಳೆಗೆ ಅದು 10,000 ಕೋಟಿ ಆಗಬೇಕು, ಈ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಶುದ್ಧತೆ ಬಗ್ಗೆ ಹೆಚ್ಚು ಗಮನ ಕೋಡಬೇಕು
  • ಪ್ರವಾಸೊದ್ಯಮ ಹೆಚ್ಚು ಅಭಿವೃದ್ದಿ ಹೊಂದಬೇಕು, ಕರ್ನಾಟಕವನ್ನು ನೋಡಲು ದೇಶ-ವಿದೇಶಗಳಿಂದ ಜನ ಮುಗಿದುಬಿದ್ದು ಬರಬೇಕು. ಪ್ರವಾಸಿಗರ ಸಂಖ್ಯೆ ಪ್ರತಿ ವರುಷ 90% ಹೆಚ್ಚಾಗಬೇಕು
  • ಹಳ್ಳಿಗಳು ಮತ್ತು ನಗರಗಳ ನಡುವೆ ಅಂತರ ಕಮ್ಮಿ ಆಗಬೇಕು. ಹಳ್ಳಿಗಳಲ್ಲಿ ಎಲ್ಲಾ ಸೌಲಭ್ಯಗಳು ದೊರಕಬೇಕು.
  • ಕರ್ನಾಟಕದ ಪ್ರಮುಖ ನಗರಗಳನ್ನು ಅಭಿವೃದ್ದಿಗೊಳಿಸಬೇಕು, ಮೈಸೂರು, ಮಂಗಳೂರು, ಗುಲ್ಬರ್ಗ, ಮಡಿಕೇರಿ, ಹುಬ್ಬಳ್ಳಿ-ಧಾರವಾಡ, ಬೆಳವಾವಿ ನಗರಗಳನ್ನು ಬೆಂಗಳೂರಿಗೆ ಎಲ್ಲಾ ರೀತಿಯಲ್ಲೂ ಸಂಪರ್ಕ ಇರುವ ಹಾಗೆ ಮಾಡಬೇಕು. ಆಗ ರಾಜ್ಯದ ಅಭಿವೃದ್ದಿ ಎಲ್ಲಾ ಪ್ರದೇಶಗಳಿಗೂ ವಿಸ್ತಾರ ಆಗುತ್ತದೆ. ಹಾಗೇ ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡಿ, ಸಂಚಾರದ ಭಾರ ಕಮ್ಮಿ ಮಾಡಬೇಕು.
  • ನೀರಿನ ಸಮಸ್ಯೆಯನ್ನು ಸರಿಯಾಗಿ ಬಳಸುವದರ ಮೂಲಕ ಬಗೆಹರಸಿಕೊಳ್ಳಬೇಕು
  • ಸರಕಾರ ಯುವಕರಲ್ಲಿ ಉದ್ಯಮಶೀಲತೆ ತರಬೇಕು ಮತ್ತು ಕನ್ನಡಿಗರು ಉದ್ಯಮಶೀಲರಾಗಲು ಸಹಾಯ ಮಾಡಬೇಕು.
ಇದೆಲ್ಲ ಕೇಳಿದ ನಮ್ಮ "ನಾಯಕರು" ಕಲಾಂ ಸಾಹೇಬ್ರಿಗೆ "ಉಘೇ ಉಘೇ" ಹಾಕಿ, ಸಕ್ಕತ್ ಸೂತ್ರಗಳು ರೀ ನಿಮ್ಮದು ಅಂತ ರಾಕೆಟ್ಟಪ್ಪಂಗೇ ರಾಕೆಟ್ ಬಿಟ್ರು , ಆ ರಾಕೆಟ್ಟು ಗಾಳೀಲಿ "ಪುರ್ರ್‍ರ್ರ್‍ರ್ರ್‍ರ್ರ್‍ರ್ರ್" ಆಗೋಗಿದೆ ಈಗ!

ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ನಮ್ಮ ಕಲಾಂ ಒಬ್ಬರು. ಇವರಿಂದ ಕನ್ನಡಿಗರು ಕಲಿಯಬೇಕಾಗಿರುವ ಅನೇಕ ಅಂಶಗಳಲ್ಲಿ ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕೂರುವ ಹೇಡಿತನವನ್ನ ಬುಡಸಮೇತ ಕಿತ್ತುಹಾಕಿ ಎಂಥಾ ಕತ್ತಲಲ್ಲೂ ಹೊಸಬೆಳಕಿನ ಕನಸನ್ನು ಮುಂದಿಟ್ಟುಕೊಂಡು ಮುನ್ನುಗ್ಗುವ ಗಟ್ಟಿ ಮನಸ್ಸು.

ಕಲಾಂಗೆ ವಿದಾಯ ಹೇಳುತ್ತ, ಹೋಗಿ ಬನ್ನಿ ಕಲಾಂ, ನಿಮಗೆ ಮತ್ತು ನಿಮ್ಮ ಕನಸುಗಳಿಗೆ ನಮ್ಮೆಲ್ಲರ ಸಲಾಂ! ನಿಮ್ಮ ಕನಸು ನಮ್ಮ ಕನಸೂ ಕೂಡ. ಇಂದಲ್ಲ ನಾಳೆ ನನಸಾಗಿಸದೆ ಬಿಡಲ್ಲ. ಇದು ನಾವು ನಿಮಗೆ ಕೊಡೋ ಮಾತು!

ಟೊಳ್ಳು ರಾಷ್ಟ್ರೀಯತೆ ಬೇಡ

ಇವತ್ತಿನ್ ವಿ.ಕ.ದಲ್ಲಿ ಶ್ರೀ ಅನಂತ್ ಚಿನಿವಾರ ಅನ್ನೋರು ಒಂದು ಎರ್ರಾಬಿರ್ರಿ ದೊಡ್ಡ ಬರಹ ಬರ್ದಿದಾರೆ. ನಡುನಡುವೆ ತುಸು ಜಾಸ್ತಿ ಅನ್ಸೋಷ್ಟು ಇಂಗ್ಲೀಷ್ ಬಳಕೆ, ಮಹಾಪ್ರಾಣ ಇರಬೇಕಾಗಿರೋ ಕಡೆ ಅಲ್ಪಪ್ರಾಣಗಳನ್ನ ಹಾಕಿ ಅನುಷ್ಠುಪ್ ಛಂದಸ್ಸು ಎದ್ಬಂದು ತಲೆ ಚೆಚ್ಚಿಕೊಳ್ಳೋ ಹಾಗೆ ಬರ್ದಿರೋ ಸಂಸ್ಕೃತದ ಶ್ಲೋಕ - ಇವೆಲ್ಲ ದೋಷಗಳ ನಡುವೆ ರಾಷ್ಟ್ರೀಯತೆಯ ಬಗ್ಗೆ ಹುರುಳಿಲ್ಲದ ನಿಲುವುಗಳನ್ನ ಮುಂದಿಟ್ಟಿದಾರೆ. "ನನ್ನ ಕೈಯಲ್ಲಿ ಏನೂ ಸರಿಮಾಡಕ್ಕೆ ಆಗಲ್ಲ" ಅಂತ ಸೋಲೊಪ್ಪಿಕೊಂಡಂತಿರೋ ಚಿನಿವಾರ ಅವರ ಬರಹಕ್ಕೆ ನಮ್ಮ ಉತ್ತರ ಇಲ್ಲಿದೆ. ಈ ನಿಲುವುಗಳನ್ನ ಚಿನಿವಾರ ಅವರು ಇಲ್ಲಿ ನಾವು ಕೊಟ್ಟಿರೋಹಂಗೇ ಬರೆದಿಲ್ಲ, ಆದರೆ ಅವರ ಬರಹದ ಸಾರಾಂಶವನ್ನ ಇಲ್ಲಿ "ಅವರ ನಿಲುವು" ಅಂದಿದೆ. ನಮ್ಮ ಉತ್ತರವನ್ನ "ನಮ್ಮ ಉತ್ತರ" ಅಂದಿದೆ.

ಅವರ ನಿಲುವು: ಭಾರತ ಸಾಂಸ್ಕೃತಿಕವಾಗಿ ಮೊದಲಿಂದಲೂ ಒಂದಾಗಿತ್ತು.

ನಮ್ಮ ಉತ್ತರ: ಒಪ್ಕೊಳಣ. ಅದ್ಕ? ಏನೀಗ? ಮುಂದ?

ಅವರ ನಿಲುವು: ಭಾರತ ರಾಜಕೀಯವಾಗಿ ಒಂದಾಗಿದ್ದು ಬ್ರಿಟೀಷರು ಒಂದುಮಾಡಿದ ಮೇಲೇನೇ ಎನ್ನುವುದು ಸರಿಯಲ್ಲ. ಬೇರೆಬೇರೆ ಭಾರತೀಯ ರಾಜಮನೆತನದವರು ಒಂದುಮಾಡಿದ್ದುಂಟು.

ನಮ್ಮ ಉತ್ತರ: ಬರಹಗಾರನ ನಿಲುವು ಇದು ಅಂತ ಅನುಮಾನದಿಂದ ಹೇಳ್ಬೇಕು, ಅಷ್ಟೆ. ಯಾಕೇಂದ್ರೆ ಔರೇ ಒಂದು ಕಡೆ
ಭಾರತವನ್ನು ಭಾರತ ಅಂತನ್ನುವ ಒಂದು ದೇಶವನ್ನಾಗಿ ಒಟ್ಟುಮಾಡಿದ್ದು ಬ್ರಿಟಿಷರೇ. ಅದರ ಬಗ್ಗೆ ಅನುಮಾನವಿಲ್ಲ.

ಅಂತಾರೆ, ಇನ್ನೊಂದ್ಕಡೆ:
ಭಾರತಕ್ಕೊಂದು territorial identity ಯನ್ನು ತಂದುಕೊಟ್ಟವರ ಪೈಕಿ ಬ್ರಿಟಿಷರು ಕೊಟ್ಟಕೊನೆಯವರೇ ಹೊರತು, ಮೊದಲಿಗರಲ್ಲ!"

ಅಂತಾರೆ. ಯಾವುದು ನಂಬೋದು? ಇವರ ವಾದದ ಹರಿವನ್ನ ನೋಡಿದರೆ ಇವರ ನಿಲುವು ಎರಡನೇದು ಅಂತ್ಲೇ ನಂಬಬೇಕು ಅನ್ಸತ್ತೆ. ಅದನ್ನೇ ನಂಬೋಣ. ಆದರೆ ಆ ನಿಲುವು ಸರಿಯಲ್ಲ, ಮೊದಲನೇದೇ ಸರಿ! ಯಾಕೇಂದ್ರೆ ಇವತ್ತು ಯಾವುದನ್ನ ಭಾರತ ಅಂತ ಕರೀತೀವೋ ಅದನ್ನ ಹತ್-ಹತ್ರ ೧೦೦% ಒಗ್ಗೂಡಿಸಿದ್ದು ಬ್ರಿಟಿಷರೇ ಹೊರತು ಇತಿಹಾಸದಲ್ಲಿ ಬರೋ ಯಾವ ರಾಜಮನೆತನಾನೂ ಅಲ್ಲ. ಭಾರತದಲ್ಲಿ ಬಂದುಹೋದ ರಾಜರು ೧೦%ರಿಂದ ಹಿಡಿದು ೬೦-೭೦% ತನಕ ಹೋಗಿದ್ರು, ಆದರೆ ಬ್ರಿಟಿಷರಷ್ಟು ಒಂದುಮಾಡಿದ್ದರ ಬಗ್ಗೆ ಯಾವ ಪ್ರಮಾಣವೂ ಇಲ್ಲ.

ಅವರ ನಿಲುವು: ಈಗ ಭಾರತದ ಮೈಯಲ್ಲಿ ಬಿರುಕುಗಳು ಹುಟ್ಟಿವೆ

ನಮ್ಮ ಉತ್ತರ: ಬರಹಗಾರಂಗೆ "ಬಿರುಕು" ಅನ್ನೋದು ಸಕ್ಕತ್ ತಲೆ ತಿಂತಿದೆ ಅನ್ನೋದು ಸ್ಪಷ್ಟ. ಆದ್ರೆ ಆ ಬಿರುಕು ಅನ್ನೋದನ್ನ ಒಡೆದು ನೋಡಿದರೆ ಎರಡು ಪಾಲಾಗತ್ತೆ. ಮೊದಲ್ನೇ ಪಾಲು ವಿವಿಧತೆ, ಎರಡನೇ ಪಾಲು ಹಗೆತನ. ಬರಹಗಾರಂಗೆ ಇವೆರಡರ ನಡುವೆ ಗೊಂದಲ ಇರೋದು ಸ್ಪಷ್ಟವಾಗಿ ಕಾಣ್ಸತ್ತೆ. ಗೊಂದ್ಲಾನ ಸೊಲ್ಪ ಬಿಡ್ಸೋಣ.

ಮೊದಲ್ನೇದು (ಅಂದ್ರೆ ವಿವಿಧತೆ) ಅನ್ನೋದು ಭಗ್ವಂತನ್ ವಿಭೂತಿಗಳಿದ್ದಂಗೆ. ತೈತ್ತಿರೀಯೋಪನಿಷತ್ತಲ್ಲಿ
ಸೋsಕಾಮಯತ | ಬಹು ಸ್ಯಾಂ ಪ್ರಜಾಯೇಯೇತಿ | ಸ ತಪೋsತಪ್ಯತ | ಸ ತಪಸ್ತಪ್ತ್ವಾ| ಇದಂ ಸರ್ವಮಸೃಜತ | ಯದಿದಂ ಕಿಂ ಚ | ತತ್ ಸೃಷ್ಟ್ವಾ | ತದೇವಾನುಪ್ರಾವಿಶತ್ |

ಅಂತಿದೆ. ತಿಳಿಗನ್ನಡದಲ್ಲಿ
ಅವನು ಕಾಮಿಸಿದ | ಬಹುವಾಗ್ಬೇಕು, ಪ್ರಜೆಗಳನ್ನ ಹುಟ್ಟಿಸಬೇಕು ಅಂತ | ಕಾಮಿಸಿ ತಪಸ್ಸಿಗೆ ಕೂತ | ಎದ್ದು ಇದ್ನೆಲ್ಲ ಹುಟ್ಟಿಸಿದ | ಏನೇನಿದ್ಯೋ ಅದ್ನೆಲ್ಲ | ಹುಟ್ಸಿ ಅದ್ನೇ ಹೊಕ್ಕ |

ಅಂತ ಅರ್ಥ. ಇಲ್ಲಿ ಈ ವಿವಿಧತೆಗಳಿರೋ ಪ್ರಪಂಚ ಅನ್ನೋದು ಆ ಬೊಮ್ಮನ ಕೆಲಸವೇ, ಬೊಮ್ಮನೇ. ಭಾರತೀದೇವಿ ಅನ್ನೋಳೊಬ್ಬಳನ್ನ ಉಪಾಸನೆಮಾಡಿಕೊಂಡರೆ ಅವಳೇ ಬಹುವಾಗಿ ಕನ್ನಡಿಗರು, ತಮಿಳರು, ತೆಲುಗರು, ಹಿಂದಿಯೋರು ಮುಂತಾದವರಾಗಿರೋದು. ಇವರನ್ನೆಲ್ಲ ಹುಟ್ಟಿಸಿ ಅವಳೇ ಇವುಗಳನ್ನೆಲ್ಲ ಹೊಕ್ಕಿರೋದು ಗುರು! ವಿವಿಧತೆಯನ್ನ (ಬಹುತ್ವವನ್ನ) ಎದುರಿಸಬೇಕಾಗಿರೋ ಒಂದು "ಬಿರುಕು" ಅನ್ಕೊಳೋದು ಸಿಕ್ಕಾಬಟ್ಟೆ ಪೆದ್ದತನ ಗುರು! ಈ ವಿವಿಧತೆಯಲ್ಲಿ ಕನ್ನಡವೇ ಬೇರೆ, ತಮಿಳೇ ಬೇರೆ, ಸಂಸ್ಕೃತವೇ ಬೇರೆ. ಈ ವಿವಿಧತೆಯನ್ನ ಇದೆ ಅಂತ್ಲೂ ಒಪ್ಪಿಕೊಳ್ಳದೇ ಇರೋದು ಪ್ರತ್ಯಕ್ಷವನ್ನೇ ಅಲ್ಲಗಳೆಯೋ ಪೆದ್ದತನವೇ ಹೊರತು ಮತ್ತೇನೂ ಅಲ್ಲ. ಇದು ಪ್ರತ್ಯಕ್ಷ-ಅನುಮಾನ-ಆಗಮಗಳೆಂಬ ಪ್ರಮಾಣಗಳನ್ನು ಒಪ್ಪುವ ಸನಾತನಧರ್ಮಕ್ಕೆ ವಿರುದ್ಧವೂ ಹೌದು.

ಇನ್ನು ಎರಡನೇದು (ಅಂದ್ರೆ ಹಗೆತನ). ಈ ಹಗೆತನವನ್ನ ಎದುರಿಸಬೇಕು ಅನ್ನೋದು ಒಪ್ಪಬೇಕಾದ ಮಾತೇ. ಹೇಗೆ ಎದುರಿಸೋದು? ಕಾದಾಡ್ತಿರೋರಿಗೆ "ನೀವೆಲ್ಲಾ ಒಂದೇ, ನಿಮ್ಮ ಇತಿಹಾಸವೆಲ್ಲಾ ಒಂದೇ, ನಿಮ್ಮ ಸಂಸ್ಕೃತಿಯೆಲ್ಲಾ ಒಂದೇ" ಅಂತ ಹೇಳ್ದ್ರೆ ಸಾಕಾ? "ಲೋ ಹೋಗೋಲೋ! ಬೆಂಕಿಹಾಕ ನಿನ್ನ ಒಗ್ಗಟ್ಟಿಗೆ!" ಅಂತ ಜನ ಅನ್ನೋದು ಇದ್ರಿಂದ್ಲೇ. ಈ ಕುರ್ಚಿ-ಸಿದ್ಧಾಂತ ಬಿಟ್ಟು ನಿಜವಾಗಲೂ ಈ ಹಗೆತನಾನ ನಿಲ್ಲಿಸಕ್ಕೆ ಇವತ್ತಿನ ಭಾರತದಲ್ಲಿರೋ ಆಡಳಿತ ವ್ಯವಸ್ಥೇನ ರಿಪೇರಿ ಮಾಡ್ಬೇಕು. ನದಿನೀರು-ಹಂಚಿಕೆಗೆ ಕಾನೂನು ಮಾಡದೆ ಕೇಂದ್ರದಲ್ಲಿ ಲಾಬಿ ಮಾಡಿದೋರಿಗೆ ನೀರು ಅನ್ನೋದು ಸರಿಯಾದ ವ್ಯವಸ್ಥೇನಾ ಗುರು? ಈ ವ್ಯವಸ್ಥೆಯನ್ನ ಸರಿಮಾಡೋದು ಬಿಟ್ಟು ಅಡುಗೋಲಜ್ಜಿ ಕತೆ ಹೆಳ್ದ್ರೆ ಬಾಯಾರಿಕೆಯಿಂದ ಸಾಯ್ತಿರೋರು ಸುಮ್ನಿರ್ತಾರಾ ಗುರು? ಒಟ್ನಲ್ಲಿ ಹಗೆತನಕ್ಕೆ ಪರಿಹಾರ ಇದೆ. ಅದು ಬೇಡದೇ ಇದ್ದಾಗ ಸಂಸ್ಕೃತದ ಶ್ಲೋಕ (ಅದೂ ತಪ್ಪುತಪ್ಪು) ಹೇಳೋದಲ್ಲ, ವ್ಯವಸ್ಥೆಗೆ ಆಗಬೇಕಾಗಿರೋ ರಿಪೇರಿ ಮಾಡೊದು.

ಅವರ ನಿಲುವು: ಜಾಗತಿಕ ಮಟ್ಟದಲ್ಲಿ ಇಂಗ್ಲಿಷಿಲ್ಲದೆ ನಾವು ಬೆಳೆಯಲು ಆಗುವುದಿಲ್ಲ

ನಮ್ಮ ಉತ್ತರ: ಸಕ್ಕತ್ತಾಗಿ ಸೋಲೊಪ್ಕೊಂಡಿದಾರೆ ಸಾಹೇಬ್ರು! ನಿಮಗೆ ಆಗದೇ ಇರಬೋದು ಸ್ವಾಮಿ, ನೀವು ಸೋಲೊಪ್ಕೊಂಡಿರಬೋದು. ಆದ್ರೆ ಇನ್ನೂ ಈಗ ತಲೆ ಎತ್ತುತ್ತಾ ಇರೋ ಕನ್ನಡ ನಾಡಿದೆ, ಮೈಯಲ್ಲಿ ಮಿಂಚಿರೋ ಕನ್ನಡಿಗರು ಇದಾರೆ! ಇವರ ಹುಮ್ಮಸ್ಸಿಗ್ಯಾಕೆ ನೀರು ಹಾಕಕ್ಕೆ ಹೊರಟಿದ್ದೀರಿ? ನಿಮಗೆ ಆಗದೇ ಹೋದ್ರೆ ತೆಪ್ಪಗೆ ಮನೇಲಿ ಮಲ್ಕೊಳಿ! ಜಪಾನ್, ಇಸ್ರೇಲ್, ಜರ್ಮನಿ - ಇವೆಲ್ಲಾ ಹೇಗೆ ಇಂಗ್ಲೀಷ್ ಇಲ್ದೆ ನಮಗಿಂತ ಮುಂದಿವೆ? ಅವುಗಳಲ್ಲಿ ಯಾವ ವ್ಯವಸ್ಥೆ ಇದೆ ಅಂತ ಅಧ್ಯಯನ ಮಾಡಿ! ತಿರ್ಗಾ ಅವರ ಇತಿಹಾಸ ಗಿತಿಹಾಸ, ಸಂಸ್ಕೃತಿ - ಇವೆಲ್ಲಾ ಮರೀರಿ. ವ್ಯವಸ್ಥೆ, ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ, ಇಲ್ಲಾ ಮಾಡಕ್ಕಾಗೋರಿಗಾದರೂ ಬಿಡಿ!

ಅವರ ನಿಲುವು: ಇಂಗ್ಲೀಷನ್ನು ವಿರೋಧಿಸಬೇಕು, ಆದರೆ ಆಗಲ್ಲ

ನಮ್ಮ ಉತ್ತರ: ಇದೂ ಒಬ್ಬ ಸೋಲೊಪ್ಪಿಕೊಂಡಿರೋನ್ ಮಾತು! ಇವರಿಗೆ ಇಂಗ್ಲೀಷು ತಿನ್ನಕ್ಕೂ ಆಗದೇ ಇರೋ, ಬಿಡಕ್ಕೂ ಆಗದೇ ಇರೋ ಲಾಡು! ವಿರೋಧಿಸಬೇಕು, ಆದರೆ ಆಗಲ್ಲ (ಸಾಹೇಬ್ರು ಉಪಯೋಗಿಸಿರೋ ಇಂಗ್ಲೀಷ್ ಪದಗಳ ಸಂಖ್ಯೆ ನೋಡಿದ್ರೆ ಗೊತ್ತಾಗತ್ತೆ)! ಯಾಕೆ ವಿರೋಧಿಸಬೇಕು? ಯಾಂಕೇಂದ್ರೆ ಅದು ಬೇರೆ ದೇಶದ ಭಾಷೆಯಲ್ಲವೇ, ಅದಕ್ಕೆ! - ಇದು ಇವರ ಸಿದ್ಧಾಂತ. ಇದರಲ್ಲಿ ಹುರುಳೇ ಇಲ್ಲ. ಇಂಗ್ಲೀಷನ್ನ ಯಾಕೆ ವಿರೋಧಿಸಬೇಕು? ವಿರೋಧಿಸೋ ಅವಶ್ಯಕತೆಯೇ ಇಲ್ಲ. ಅದರಿಂದ ಬರೋದನ್ನೆಲ್ಲ ತೊಗೋಬೇಕು, ಅದಕ್ಕೆ ಕೊಡೋದ್ನೆಲ್ಲ ಕೊಡಬೇಕು. ಬೇಕಾಗಿರೋ ತನಕ ಇಂಗ್ಲೀಷ್ ಉಪಯೋಗಿಸಿಕೊಳ್ಳೋದು, ಆಮೇಲೆ ಬಿಟ್ಟಾಕಿ ಮುಂದೆ ಹೋಗೋದು, ಅಷ್ಟೆ. ವಿರೋಧಿಸೋದೇನು ಬಂತು ಮಣ್ಣು? ಇವರಿಗೆ ಇಲ್ಲಾ ಒಂದನ್ನ ವಿರೋಧಿಸಬೇಕು, ಇಲ್ಲಾ ಹಾಡಿ ಹೊಗಳಬೇಕು ಅನ್ನೋದೆರಡೇ ಗೊತ್ತಿರೋಹಾಗಿದೆ. ಉಪಯೋಗಿಸಿ ಬಿಸಾಕೋದು ಅನ್ನೋ ಮೂರನೇದೂ ಇದೆ ಗುರು!

ಅವರ ನಿಲುವು: ಜಾಗತೀಕರಣವನ್ನು ವಿರೋಧಿಸಬೇಕು, ಆದರೆ ಆಗಲ್ಲ

ನಮ್ಮ ಉತ್ತರ: ಇದೂ ಇವರಿಗೆ ಇಂಗ್ಲೀಷ್ ಇದ್ದಂಗೇನೇ. ಇವರ ಪ್ರಕಾರ ಯಾಕೆ ವಿರೋಧಿಸಬೇಕು ಅಂದ್ರೆ ಇದರಿಂದ "ದೇಶ" ಅನ್ನೋದರ ಗಡಿ ಎಲ್ಲಿದೇಂತಾನೇ ಗೊತ್ತಾಗಲ್ವಲ್ಲ, ಅದು! ಆದರೆ ನಿಜವಾಗಲೂ ನೋಡಿದ್ರೆ ಜಾಗತೀಕರಣ ಅನ್ನೋದನ್ನ ವಿರೋಧಿಸೋ ಅವಶ್ಯಕತೇನೇ ಇಲ್ಲ. ಪುರಂದರದಾಸರು ಹೇಳೋ ಹಾಗೆ ಜಗತ್ತಿನಲ್ಲಿ
ಈಸಬೇಕು, ಇದ್ದು ಜಯಿಸಬೇಕು

ಅದುಬಿಟ್ಟು ಈಜಕ್ಕೇ ಹೆದ್ರುಕೋಬಾರ್ದು! ಜಗತ್ತಿನಲ್ಲಿ ಯಾವ ನನ್ನ ಮಗನ್ಗೂ ತಲೆ ಬಗ್ಗಿಸೋ ಅವಶ್ಯಕತೇನೇ ಬರದೇ ಇರೋ ಹಾಗೆ ನಮ್ಮನ್ನ ನಾವು ಗಟ್ಟಿ ಮಾಡ್ಕೋಬೇಕು. ಅದು ಬಿಟ್ಟು ಅದನ್ನ ವಿರೋಧಿಸಬೇಕು ಅನ್ನೋ ಇವರು ಸೋಲೊಪ್ಪಿಕೊಂಡು ತಮ್ಮ ಸೋಲ್ನ ಇನ್ನೊಬ್ಬ್ರಿಗೆ ಹರಡೋ ಕೆಲಸ ಮಾಡ್ತಿರೋದು ಸರಿಯಲ್ಲವೇ ಅಲ್ಲ. ಒಟ್ನಲ್ಲಿ ತಿರ್ಗಾ ಅದೇ ಗೋಳು: ಇಲ್ಲಾ ವಿರೋಧಿಸಬೇಕು, ಇಲ್ಲಾ ಹಾಡಿ ಹೊಗಳಬೇಕು ಅನ್ನೋದೆರಡೇ ಇವರಿಗೆ ಕಾಣಿಸ್ತಾ ಇರೋದು. ಸರಿಯಲ್ಲ. ಎಲ್ಲೀವರೆಗೆ, ಎಲ್ಲೆಲ್ಲಿ ನಮಗೆ ಜಾಗತೀಕರಣದಿಂದ ಉಪಯೋಗ ಆಗತ್ತೋ ಅಲ್ಲೀವರೆಗೆ ಬಳಸಿಕೊಳ್ಳೋದು, ಎಲ್ಲೆಲ್ಲಿ ನಮಗೇ ಕಷ್ಟಾನೋ ಅಲ್ಲೆಲ್ಲ ಕೈಬಿಡೋದು. ಇಷ್ಟು ಮಾಡಿದರೆ ಸಾಕು. ಈ ಮೂರನೇದನ್ನ ಸಾಹೇಬ್ರು ಸೊಲ್ಪ ಅರ್ಥ ಮಾಡ್ಕೋಬೇಕು.

ಅವರ ನಿಲುವು: ಮೇಲಿನೆರಡು ಆಗಬೇಕಾದರೆ ಭಾರತದ ರಾಜ್ಯಗಳೆಲ್ಲ ಬೇರೆ ಬೇರೆ ದೇಶಗಳಾಗಬೇಕು

ನಮ್ಮ ಉತ್ತರ: ಇದು ಒಂದು ರೀತಿ ಮನೆಹಾಳು ಬುದ್ಧೀನೇ. ವ್ಯವಸ್ಥೆ ಸರಿಮಾಡೋ ಯೋಗ್ಯತೆಯಿಲ್ಲ, ಸರಿಮಾಡಕ್ಕೆ ಆಗತ್ತೆ ಅನ್ನೋ ಭರವಸೆ ಇಲ್ಲಾ ಅಂತ ಸರಿ ಮಾಡಕ್ಕೆ ಹೊರಟಿರೋರಿಗೆ ದೇಶ ಒಡೆದರೇನೇ ನಿಮ್ಮ ಗುರಿ ಮುಟ್ಟಕ್ಕಾಗೋದು ಅನ್ನೋ ಮನೆಹಾಳು ಬುದ್ಧೀನ ಹೇಳ್ಕ್ಲೊಡ್ತಾ ಇರೋ ಇವರು ನಿಜವಾದ ಬಿರುಕು ತರ್ತಾ ಇರೋದು ಭಾರತದಲ್ಲಿ! ನಂಬಬೇಡ ಗುರು ಇವರನ್ನ! ಈ ಸೋತ ಜನರನ್ನ ಮರೆತು ನಿಜವಾದ ವ್ಯವಸ್ಥೆಯನ್ನ ಕಟ್ಟಬೇಕು, ಇದರಿಂದಲೇ ದೇಶ ಬಲಿಷ್ಠವಾಗೋದು. ಬೇರೆಬೇರೆ ದೇಶಗಳಾಗಬೇಕು ಅಂದುಕೊಳ್ಳೋದು ಒಬ್ಬ ಹತಾಶನಾಗಿರೋ, ಸೋತುಹೋಗಿರೋನು ಮಾತ್ರ!

ಅವರ ನಿಲುವು: ನನ್ನ ಕೈಯಲ್ಲಿ ಆಗದೇ ಇರೋ ಇಂಗ್ಲೀಷ್ ವಿರೋಧ ಮತ್ತು ಜಾಗತೀಕರಣ ವಿರೋಧ ಇವರಡಕ್ಕಿಂತ ಈಗಾಗಲೇ ಒಪ್ಪಿಕೊಂಡಿರುವ ಹಾಗೆ ಒಂದು ದೇಶವಾಗೇ ಉಳಿಯುವುದು ಮುಖ್ಯ

ನಮ್ಮ ಉತ್ತರ: ಇವರ ಮುಂದೆ ಎರಡು ಸೋಲುಗಳು ನಿಂತಿವೆ:
  • ಇಂಗ್ಲೀಷ್ ಮತ್ತು ಜಾಗತೀಕರಣಗಳ್ನ ಎದುರಿಸಕ್ಕೆ ಆಗದೇ ಇರೋದು
  • ಭಾರತ ಅಂತ ಒಂದು ದೇಶ ಈಗಾಗಲೇ ಇರೋದರಿಂದ ಇಂಗ್ಲೀಷ್ ಮತ್ತು ಜಾಗತೀಕರಣಗಳನ್ನ ಎದುರಿಸಕ್ಕೆ ಬೇಕಾಗಿರೋ ಬೇರೆಬೇರೆ ದೇಶಗಳು ಇಲ್ಲದೇ ಇರೋದು
ಇಂಗ್ಲೀಷ್ ಮತ್ತೆ ಜಾಗತೀಕರಣಗಳ್ನ ಎದುರಿಸಬೇಕು ಅನ್ಕೊಳೋದೇ ತಪ್ಪು ಅಂತ್ಲೂ ಹೇಳಿದ್ದಾಯ್ತು, ಬೇರೆಬೇರೆ ದೇಶಗಳಾಗಬೇಕು ಅನ್ನೋದು ಮನೆಹಾಳು ಮಾತು, ಸೋತೋನ ಮಾತು ಅಂತ್ಲೂ ಹೇಳಿದ್ದಾಯ್ತು. ಆದ್ರೆ ಇಲ್ಲಿ ಗಮನಿಸಬೇಕಾಗಿರೋ ವಿಷಯ ಏನೆಂದರೆ ಇವರು "ಆರು ಹಿತವರು ನಿನಗೆ ಇವೆರಡು ಸೋಲುಗಳೊಳಗೆ?" ಅನ್ನೋ ಪ್ರಶ್ನೇನ ಉತ್ತರಿಸೋ ಗುಂಗಲ್ಲಿದಾರೇ ಹೊರತು ಇವರ ಸಿದ್ಧಾಂತದಲ್ಲಿ ಯಾವ ಹೊಸಬೆಳಕೂ, ಹೊಂಬೆಳಕೂ, ಉಜ್ಜ್ವಲ ಭವಿಷ್ಯವೂ ಕಾಣ್ತಾ ಇಲ್ಲ. ಇಂಗ್ಲೀಷು, ಜಾಗತೀಕರಣ - ಇವುಗಳನ್ನ ಎಲ್ಲಿಡಬೇಕೋ ಅಲ್ಲಿಡಕ್ಕೆ ಇವರ ಕೈಯಲ್ಲಿ ಆಗ್ತಾನೇ ಇಲ್ಲ, ಇಡಕ್ಕೆ ಯಾವ ವ್ಯವಸ್ಥೆ-ರಿಪೇರಿ ಆಗ್ಬೇಕು ಅಂತ್ಲೂ ಇವರಿಗೆ ಅರ್ಥ ಆಗ್ತಾ ಇಲ್ಲ. ಭಾರತದ ಏಕತೆಗೆ ಧಕ್ಕೆ ಬರದೇ ಇರುವ ಹಾಗೆ, ಇಂಗ್ಲೀಷ್ ಮತ್ತು ಜಾಗತೀಕರಣಗಳನ್ನು ನಮಗೆ ಬೇಕಾದಂಗೆ ಉಪಯೋಗಿಸಿಕೊಳ್ಳೋ ಹಾಗೆ ಮಾಡಕ್ಕೆ ಸಾಧ್ಯ. ಸೊಲ್ಪ ತಲೆ ಉಪಯೋಗಿಸಬೇಕು, ಸೊಲ್ಪ ದುಡೀಬೇಕು, ಅಷ್ಟೆ.

ಅವರ ನಿಲುವು: ಜನ ತಮ್ಮ ಭಿನ್ನತೆಯನ್ನು ತೋರಿಸಿಕೊಳ್ಳಲು ಇಂಗ್ಲೀಷ್, ಜಾಗತೀಕರಣ ಮತ್ತು ಧರ್ಮಗಳೆಂಬ ಮೂರನ್ನು ವಿರೋಧಿಸುತ್ತಿದ್ದಾರೆ, ಇದರಿಂದ ದೇಶ ಒಡೆದುಹೋಗುವ ಭಯವಿದೆ

ನಮ್ಮ ಉತ್ತರ:
ಮೊದಲೆರಡನ್ನು ವಿರೋಧಿಸೋದು ಪೆದ್ದತನ, ಸೋಲೊಪ್ಪಿಕೊಳ್ಳೋದು ಅಂತ ಆಗಲೇ ಹೇಳಿದ್ದಾಯ್ತು. ಇನ್ನು ಧರ್ಮವನ್ನ ವಿರೋಧಿಸಬಾರ್ದು ಅನ್ನೋದೂ ನಿಜವೇ. ಆದರೆ ಆ ಧರ್ಮ ಅನ್ನೋದನ್ನ ಜನಕ್ಕೆ ಹರಡೋದಾದರೂ ಹೇಗೆ? ಹರಡಕ್ಕೆ ಅದ್ನ ಔರ್ ಭಾಷೇಲಿ ಹೇಳಬೇಕು ಅನ್ನೋದನ್ನ ಹೊಸದಾಗಿ ಹೇಳ್ಬೇಕಾ ಗುರು? ತಮಿಳ್ರುಗೂ ಕನ್ನಡಿಗರಿಗೂ ಧರ್ಮ ಹೇಳ್ಕೊಡಕ್ಕೆ ಹೊರಡೋರು ಇಬ್ರುಗೂ ಸಂಸ್ಕೃತಾನೇ ಮದ್ದು ಅನ್ಕೊಳೋದು ಪೆದ್ದತನ ಗುರು! ತಮಿಳರಿಗೆ ತಮಿಳಲ್ಲೇ ಹೇಳ್ಬೇಕು, ಕನ್ನಡಿಗರಿಗೆ ಕನ್ನಡದಲ್ಲೇ ಹೇಳಬೇಕು. ನಿಜವಾದ ಧರ್ಮ ಪ್ರಚಾರಕನಿಗೆ ಇದು ಅರ್ಥ ಆಗತ್ತೆ. ಅದು ಬಿಟ್ಟು ತಿರ್ಗಾ ಅದೇ "ಧರ್ಮ=ಸಂಸ್ಕೃತ" ಅನ್ನೋ ನಿಲ್ದೇ ಇರೋ ಸಮೀಕರಣ ಹಾಕ್ಕೊಂಡು ಕೂತಿದ್ರೆ ಚೊಂಬುಲಿಂಗ! ಒಗ್ಗಟ್ಟು ನಿಜವಾಗಲೂ ಉಳಿಯಕ್ಕೆ ವಿವಿಧತೇನ ಕಾಪಾಡ್ಕೊಳೋ ಅಗತ್ಯದ ಅರಿವಾಗೋದು ಸಕ್ಕತ್ ಮುಖ್ಯ ಗುರು!

ಅವರ ನಿಲುವು: ಭಾರತದೇಶ ಒಡೀಬಾರ್ದು

ನಮ್ಮ ಉತ್ತರ: ಖಂಡಿತ ಒಡೀಬಾರ್ದು. ಒಡೀದೇ ಇರಕ್ಕೆ ತುಕ್ಕು ಹಿಡಿದಿರೋ ವ್ಯವಸ್ಥೆ ರಿಪೇರಿ ಆಗ್ಬೇಕು, ವಿವಿಧತೆಯನ್ನ ಕಾಪಾಡಬೇಕು.

ಒಟ್ನಲ್ಲಿ ಚಿನಿವಾರ ಅವರ ಬರಹದಲ್ಲಿ ಕಾಣ್ಸೋದು ಬರೀ ಸೋಲೊಪ್ಪಿಕೊಂಡಿರೋರ ಅಳು. ಮಾತಾಡೋದು ಮಾತ್ರ ರಾಷ್ಟ್ರೀಯತೆ! ಈ ಟೊಳ್ಳು ರಾಷ್ಟ್ರೀಯತೆಯಿಂದ ಏನೂ ಉಪಯೋಗವಿಲ್ಲ, ನಿಜವಾದ ರಾಷ್ಟ್ರೀಯತೆ ಅಂದ್ರೆ ಇರೋ ವಿವಿಧತೆಯನ್ನ ಮುಚ್ಚಿಹಾಕೋದಲ್ಲ, ಅಥವಾ ಇಲ್ಲದಿರೋ ಏಕತೆಯನ್ನ ಹುಟ್ಟಿಹಾಕೋದಲ್ಲ - ವಿವಿಧತೆಯಲ್ಲಿ ಏಕತೆ.

ಇದೂ ಎರ್ರಾಬಿರ್ರಿ ದೊಡ್ಡ ಬರಹಾನೇ ಆಯ್ತು. ಸರಿ. ಕಾಫೀಗ್ ಓಗ್ಮ?

ಬಂಗಾಳಿ ಸಂಸ್ಕೃತಿ ಬಾಳಲಿ, ಕನ್ನಡ ಸಂಸ್ಕೃತಿ ಸಾಯಲಿ!

ಕೊಲ್ಕೋತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಾನ ಹೊಸದಾಗಿ ಕಟ್ಟೋ ಬಗ್ಗೆ ಕೇಂದ್ರದ ಮಂತ್ರಿ ಪ್ರಫುಲ್ಲ ಪಟೇಲ ಅವರು "ಈ ಹೊಸ ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆಯೆ ಎಲ್ಲರಿಗೂ ರವಿಂದ್ರನಾಥ ಠಾಗೋರ್ ಕನಸು ಕಂಡಿದ್ದ ಬಂಗಾಲಿ ಲೋಕ ಅನಿಸಬೇಕು" ಅಂತ ಅಂದಿದ್ದಾರೆ. ಕೊಲ್ಕೊತ್ತದ "ದಿ ಟೆಲಿಗ್ರಾಫ್" ನಲ್ಲಿ ಬಂದ ನೆನ್ನೆ ಸುದ್ದಿ ನೋಡಿ.

ಈ ವಯ್ಯಂಗೆ ಬಂಗಾಳಿ ಸಂಸ್ಕೃತಿ ಕಾಪಾಡಬೇಕು ಅನ್ನಿಸಿರೋದು ಒಳ್ಳೇದೇ ಅನ್ನಿ. ಆದ್ರೆ ಇದೇ ಆಸಾಮಿ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕರ್ನಾಟಕದ ಸಂಸ್ಕೃತಿ ಬಿಂಬಿಸೋ ವಿನ್ಯಾಸಾನ ಬೇಡಾಂತ ತಡೆ ಹಿಡಿದಿದ್ದು ನೆನಪಿದ್ಯಾ ನಿಮಗೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರೋ ವಿಮಾನ ನಿಲ್ದಾಣಕ್ಕೆ ಹಂಪಿಯ ವಿನ್ಯಾಸ ಒಂದು ಕಪ್ಪು ಚುಕ್ಕೆ ಅನ್ನೋ ಮನೆಹಾಳು ಮಾತಾಡಿದ್ದರು ಇದೇ ಪ್ರಫುಲ್ಲ ಪಟೇಲರು. ಇವರಿಗೆ ಹಂಪಿಯ ಸಂಸ್ಕೃತಿ ಆಗಿಬರಲಿಲ್ಲ, ಮೈಸೂರು ರೇಶ್ಮೆ ಪರದೆಗಳು ಆಗಿ ಬರಲಿಲ್ಲ, ಹಂಪಿಯ ಮಂಡಲ ಆಗಿ ಬರಲಿಲ್ಲ, ಇಲ್ಲೀದು ಯಾವುದೂ ಆಗಿ ಬರಲಿಲ್ಲ. ಇಂಥೋರು ಧೈರ್ಯವಾಗಿ ನಮ್ಮ ನಾಡಲ್ಲಿ ತಲೆ ಎತ್ಕೊಂಡು ಓಡಾಡ್ತಾರಲ್ಲ, ಅದಕ್ಕೆ ಬಡ್ಕೋಬೇಕು! ಇಂಥೋರನ್ನ ತಲೆ ಎತ್ಕೊಂಡು ಓಡಾಡಕ್ಕೆ ಬಿಡ್ತೀವಲ್ಲ, ನಮ್ಗೆ ನಾವೇ ಜೋಡು ತೊಗೊಂಡು ಹೊಡ್ಕೋಬೇಕು!

ಕೊಲ್ಕೊತ್ತಾನಲ್ಲಿ ಮಾತ್ರ ರವೀಂದ್ರರ ಕನಸು ನನಸಾಗಬೇಕು, ಬೆಂಗಳೂರಲ್ಲಿ ನಮ್ಮ ಆಲೂರ ವೆಂಕಟರಾಯರ ಕನಸಿಗೆ ಕೆಸರು ಎಸದರೂ ಪರವಾಗಿಲ್ಲ! ಇದ್ಯಾವ್ ನ್ಯಾಯ ಗುರು? ಕೇಂದ್ರಸರ್ಕಾರಕ್ಕೆ ಕರ್ನಾಟಕ ಅನ್ನೋ ಒಂದು ರಾಜ್ಯ ಇದೆ, ಅದಕ್ಕೂ ತನ್ನದೇ ನುಡಿಯಿದೆ, ನಡವಳಿಕೆಯಿದೆ ಅನ್ನೋದು ಮರ್ತುಹೋಗಿದೆ ಅನ್ನೋದನ್ನ ಪದೇ ಪದೇ ತೋರಿಸ್ತಾ ಇದಾರಲ್ಲ ಗುರು? ಕರ್ನಾಟಕ ಅಂದ್ರೆ ಇಷ್ಟು ಅಗ್ಗಾನಾ ಗುರು?

ಬಂಗಾಳಿಗಳಿಗೆ ಬಂಗಾಳಿ ಸಂಸ್ಕೃತಿ ಎಷ್ಟು ಮುಖ್ಯಾನೋ ಕನ್ನಡಿಗರಿಗೆ ಕನ್ನಡದ ಸಂಸ್ಕೃತೀನೂ ಅಷ್ಟೇ ಮುಖ್ಯ ತಾನೆ? ನಮ್ಗೆ ನಿಮ್ಗೆ ಗೊತ್ತೇ ಇದೆ, ಬಿಡಿ. ಗೊತ್ತಾಗಬೇಕಾಗಿರೋದು ಕೇಂದ್ರಸರ್ಕಾರಕ್ಕೆ. ಮೊದ್ಲು ಔರಿಗೆ ಕನ್ನಡ ಅಂತ ಒಂದು ನುಡಿ ಇದೆ, ಕನ್ನಡಿಗ ಜನಾಂಗ ಅಂತ ಒಂದಿದೆ, ಕರ್ನಾಟಕ ಅಂತ ಒಂದು ರಾಜ್ಯ ಇಲ್ಲೇ, ಇದೇ ಭಾರತದಲ್ಲೇ ಇದೆ, ಇದು ಬರೀ "ರಿಯಲ್-ಎಸ್ಟೇಟ್ " ಅಲ್ಲ ಅಂತ ಯಾರಾದ್ರೂ ಒಸಿ ಯೋಳಿ ಗುರು!

ಮರಾಠಿಗಳಿಂದ್ಲೂ ಕಲೀಬೇಕ್ರಿ ನಾವು!

ಮೊನ್ನೆ ತಾನೆ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೀತಲ್ಲಾ ಆಗ ನಮ್ಮ ಪಕ್ಕದ ಮಹಾರಾಷ್ಟ್ರದಲ್ಲಿರೋ ರಾಜಕೀಯ ಪಕ್ಷಗಳು ನಡೆದುಕೊಂಡ ರೀತಿ ನೋಡಿ ಸ್ವಲ್ಪ ನಾವೂ ಕಲೀಬೇಕ್ರಿ. ಶಿವಸೇನೆ ಮತ್ತು ಭಾಜಪದ ಮೈತ್ರಿಗೆ ಕುತ್ತು ಬರೋ ಸ್ಥಿತಿ ಹುಟ್ಟುದ್ರೂ ಲೆಕ್ಕಿಸ್ದೆ, ಶಿವಸೇನೆ, ಶ್ರೀಮತಿ ಪ್ರತಿಭಾ ಪಾಟೀಲರನ್ನು ಬೆಂಬಲಿಸ್ತು. ಇದರ್ ಬಗ್ಗೆ ಶಿವಸೇನೆ ಮುಖಂಡರ ಹೇಳಿಕೆ ನೋಡಿ.


ಮೊದಲಿಗೆ ನಾವು ಮರಾಠಿಗರು, ಆಮೇಲೆ ಆ ಪಕ್ಷ ಈ ಪಕ್ಷಕ್ಕೆ ಸೇರಿದವರು ಅನ್ನೋ ಸಂದೇಶಾನ ಇಡೀ ದೇಶಕ್ಕೆ ಕೊಟ್ರು. ಹುಟ್ಟಿದಾಗಿಂದ ವಿರೋಧಿಸ್ತಿದ್ದ ಕಾಂಗ್ರೆಸ್ ಮುಂದಾಳ್‌ತನದ ಯು.ಪಿ.ಏ ಸರ್ಕಾರದ ಅಭ್ಯರ್ಥಿಯಾದ ಪ್ರತಿಭಾ ಪಾಟೀಲ್‌ರನ್ನು ಅವರು ಮರಾಠಿಗರು ಅನ್ನೋ ಕಾರಣ ಮಾತ್ರದಿಂದ ಬೆಂಬಲ ನೀಡ್ತಿದೀವಿ ಅಂತ ಹೇಳಿದ್ದನ್ನು ಮೆಚ್ಚದೇ ಇರಕ್ ಆಗಲ್ಲ ಬಿಡಿ. ಇದೇ ತರಹವೇ ಬೆಂಗಾಲಿಗಳು ಸೋಮನಾಥ ಚಟರ್ಜಿ ಪರವಾಗಿ ಪಕ್ಷಭೇದ ಮರೆತು ಬೆಂಬಲವಾಗಿ ನಿಂತ್ರು.

ನಮ್ಮ ಕನ್ನಡ ನಾಡಿನ ರಾಜಕೀಯ ಮುಖಂಡರುಗಳು ಇನ್ನಾದ್ರೂ ಕಣ್ ಬಿಡ್ತಾರ ನೋಡೋಣ. ಕರ್ನಾಟಕ ಏಕೀಕರಣ ಆಗ್ಲಿ ಅಂತ ದೊಡ್‌ದೊಡ್ಡೋರು ಹೋರಾಟ ಮಾಡ್ತಿದ್ರೆ ಒಕ್ಕಲಿಗರ ಪ್ರಾಬಲ್ಯ ಬೆಳಿಯುತ್ತೆ ಅಂತ ಇವ್ರೂ, ಲಿಂಗಾಯಿತರ ಪ್ರಾಬಲ್ಯ ಬೆಳ್ಯುತ್ತೆ ಅಂತ ಅವ್ರೂ ಏಕೀಕರಣಾನೆ ಬೇಡ ಅಂತ ಕನ್ನಡಿಗರ ಬದುಕು ಭವಿಷ್ಯಾನೇ ಬಲಿಕೊಡಕ್ಕೆ ಹೊರಟಿದ್ರು. ತೊಂಬತ್ತರ ದಶಕದಲ್ಲಿ ದೇವೇಗೌಡ್ರು ಪ್ರಧಾನಿ ಆಗೋ ಸಂದರ್ಭದಲ್ಲಿ ನಮ್ಮ ಹಲವಾರು ರಾಜಕಾರಣಿಗಳು ಕನ್ನಡದವ್ರು ಪ್ರಧಾನ್ ಮಂತ್ರಿ ಆಗ್ತಿದಾರೆ ಅಂತ ಖುಷಿ ಪಡೋದಕ್ಕಿಂತ್ಲೂ ಅವ್ರು ನಮ್ಮ ಪಕ್ಷದವ್ರು ಅಲ್ಲ ಅನ್ನೋ ಕಾರಣಕ್ಕೆ ಖಂಡಿಸಿ, ಹಂಗಿಸಿ ಮಾತಾಡೋದ್ನ ಕಂಡ್ವಿ. ನಾವೂ ನಮ್ಮ ರಾಜಕೀಯದವ್ರೂ, ಜಾತಿ, ಧರ್ಮ ಮೀರಿ ಕನ್ನಡಿಗ ಪಕ್ಷಪಾತಿಗಳಾಗೋ ವಿಷಯದಲ್ಲಿ ಮರಾಠಿಗರಿಂದ ಕಲೀಬೋದಲ್ವಾ ಗುರೂ . . .

ಜ್ಞಾನಪೀಠ ಪಡೆದೋರ ಬಗ್ಗೆ ಹೇಳಿಕೊಂಡು ತಿರುಗಿದರೆ ಸಾಲದು!

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಲ್ಲಿ ಶಾಲೆಯಿಂದ ಶಾಲೆಗೆ ಜ್ಞಾನಪೀಠ ಪ್ರಶಸ್ತಿ ಪಡೆದೋರ ಬಗ್ಗೆ ಭಾಷಣಗಳನ್ನ ತೊಗೊಂಡು ಹೋಗೋ ಕಾರ್ಯಕ್ರಮ ಹಮ್ಮಿಕೊಂಡಿದೆ ಅಂತ ಇವತ್ತಿನ ಡೆಕನ್ ಹೆರಾಲ್ಡಲ್ಲಿ ಸುದ್ದಿ. ವಿಶೇಷವಾಗಿ ಇಂಗ್ಲೀಷ್ ಮಾಧ್ಯಮ ಓದೋರಿಗೆ ಇದರಿಂದ ಉಪಯೋಗ ಆಗತ್ತೆ ಅಂತ ಅವರ ಆಶಯವಂತೆ. "ಫ್ಲೋರೆನ್ಸ್ ಪಬ್ಲಿಕ್ ಸ್ಕೂಲ್"ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲನೇ ಸರಿ ಅಂತ ವಿ.ಕೃ.ಗೋಕಾಕ್ ಅವರ ಪರಿಚಯ ಮಾಡ್ಕೊಟ್ರಂತೆ.

ಆದ್ರೆ ಇಷ್ಟು ಸಾಕಾ ಗುರು? ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಸಿಕ್ಕಾಪಟ್ಟೆ ಸಿಕ್ಕಿರೋದೇನೋ ನಿಜ, ಅದು ಹೆಮ್ಮೇನೂ ನಿಜ. ಅವರ ಬಗ್ಗೆ ಹೈಕಳಿಗೆ ಹೇಳೋದೂ ತಪ್ಪೇನಿಲ್ಲ. ಆದ್ರೆ ಅಷ್ಟೆಲ್ಲಾ ದುಡ್ಡು ಹಾಕ್ಕೊಂಡು ಶಾಲೆಯಿಂದ ಶಾಲೆಗೆ ಹೋಗೋ ಕ.ಸಾ.ಪ. ಮೊದಲು ಹೈಕಳಲ್ಲಿ ಮೂಡಿಸಬೇಕಾದ್ದು ಕನ್ನಡತನದ ಜಾಗೃತಿಯಲ್ಲವೆ? ಕನ್ನಡ ಭಾಷೆಯ ಹಿರಿಮೆಯೇನು? ಅದೆಷ್ಟು ಹಳೇದು? ಅದು ಬೇರೆ ಭಾರತೀಯ ಭಾಷೆಗಳಿಗಿಂತ ಹೇಗೆ ಬೇರೆ? ನಮ್ಮ ಜೀವನದಲ್ಲಿ ಕನ್ನಡದ ಸ್ಥಾನ ಏನು? ಇಂಥದ್ದನ್ನೆಲ್ಲ ಹೈಕಳಿಗೆ ಹೇಳಬೇಕಾಗಿರೋದು ಮೊದಲನೇ ಕೆಲಸ. ಗೋಕಾಕರ ಬಗ್ಗೆ ಹೇಳ್ತಿದ್ದಾಗ ಹೈಕ್ಳು ಆಕಳ್ಸಿ ಆಕಳ್ಸಿ ತಲೆತೂಗಿ ಮನೇಗ್ ಹೋಗಿ "ಹ್ಯಾರಿ ಪಾಟರ್ರು ಹ್ಯಾರಿ ಪಾಟರ್ರು" ಅಂದ್ರೆ? "ಯಾರಪ್ಪಾ ಇವ್ರು? ಇವರ ಬಗ್ಗೆ ನಮಗ್ಯಾಕೆ ತಲೆ ತಿಂದಿದಾರೆ?" ಅಂದ್ರೆ?

ಅಡುಗೆ ಮನೇಲಿ ಪಾತ್ರೆ ಜೋಡ್ಸೋರು ದೊಡ್ಡ ಪಾತ್ರೆ ಮೊದ್ಲು ಕೆಳಗಿಡಬೇಡ್ವಾ ಗುರು? ಮೊದ್ಲು ಲೋಟ ಇಡೋ ಪೆದ್ದತನ ಯಾಕೆ ನಮ್ಮ ಜನಕ್ಕೆ?

ಬೆಳಗಾವಿಯಲ್ಲಿ ಮರಾಠಿ ಸಮ್ಮೇಳನ ಬೇಡ: ಮರಾಠ ಮಹಾಸಭಾ

ಕಾಲ್ ಕೆರಕೊಂಡು ಪಕ್ಕದ ಮನೇಲಿ ಕಿತಾಪತಿ ಮಾಡೋದೇ ಪ್ರಣಾಳಿಕೆಯಾಗಿಟ್ಟುಕೊಂಡಂತಿರೋ ಎಂ.ಇ.ಎಸ್. ತಲೆಹರಟೆ ಕಂಡು ಮರಾಠ ಮಹಾಸಭೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂದಿರೋದು, ಶರದ್ ಪವಾರ್ ಮತ್ತು ಮಹಾರಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಇವರಿಗೆ ಈ ಬಗ್ಗೆ ಮನವಿ ಕೊಡಲು ಹೊರಟಿರುವುದು ಸ್ವಾಗತಿಸಬೇಕಾದದ್ದೇ. ವಲಸಿಗರು ಕನ್ನಡ-ಕನ್ನಡಿಗ-ಕರ್ನಾಟಕಗಳ ಪರವಾಗಿದ್ದರೆ ಅಂಥವರು ನಮ್ಗೆ ಭಾರ ಅನ್ಸಲ್ಲ ಗುರು! ಅಂಥವರಿಂದ್ಲೇ ನಿಜವಾದ ಕೊಟ್ಟು-ತೊಗೊಳ್ಳುವಿಕೆ ಸಾಧ್ಯ.

ಎಲ್ಲಾ ಓಕೆ, ಈಗ ಬೆಳಗಾವಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಯಾಕೆ?

ನೆರೆರಾಜ್ಯ ಮಹಾರಾಷ್ಟ್ರದ "ಮಹಾರಾಷ್ಟ್ರ ಏಕೀಕರಣ ಸಮಿತಿ" ಅನ್ನೋ ರಾಜಕೀಯ ಪಕ್ಷಕ್ಕೆ ಈಗಾಗಲೇ ಮಹಾರಾಷ್ಟ್ರಕ್ಕೆ ಇರೋ ಮಹತ್ತು ಸಾಕಾಗ್ತಿಲ್ಲ ಅನ್ಸತ್ತೆ - ಬೆಳಗಾವಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಮಾಡ್ಬೇಕು ಅಂತ ಕಾಲ್ ಕೆರಕೊಂಡು ಜಗಳಕ್ಕೆ ಬರ್ತಿದೆ (ಇವತ್ತಿನ ವಿ.ಕ.)! ಸಾಂಗ್ಲಿಯಲ್ಲಿ ನಡೀಬೇಕಾಗಿದ್ದ ಸಮ್ಮೇಳನಾನ ಮರ್ಯಾದೆಯಾಗಿ ಅಲ್ಲೇ ಬಿಟ್ಟಿದ್ರೆ ಆಗ್ತಿರಲಿಲ್ವಾ? ಬೆಳಗಾವಿ ಕರ್ನಾಟಕಕ್ಕೇ ಸೇರಬೇಕಾಗಿರೋದು ಅಂತ ಮಹಾರಾಷ್ಟ್ರಕ್ಕೆ ಗೊತ್ತೇ ಇದೆ. ಆದರೂ ತನ್ನ ರಾಜ್ಯದೊಳಗೆ ಮರಾಠಿ ನುಡಿಯ ಏಳ್ಗೆಗಾಗಿ ದುಡಿದು ಅದನ್ನ ಜಾಗತಿಕ ಮಟ್ಟಕ್ಕೆ ಏರಿಸೋ ಬದ್ಲು, ಮರಾಠಿಗರನ್ನ ಜಗತ್ತಿನಲ್ಲಿ ಜನ ಮರ್ಯಾದೆ ಕೊಟ್ಟು ನೋಡೋಹಂಗೆ ಮಾಡೋ ಬದ್ಲು, ಈಗಿರೋ ಮಹಾರಾಷ್ಟ್ರದಲ್ಲಿ ಮರಾಠಿ ಅನುಷ್ಠಾನ ಸರಿಯಾಗಿ ಮಾಡೋ ಬದಲು ಪಕ್ಕದ ಮನೇಲಿ ಕಿರೀಕ್ ಮಾಡಕ್ಕೆ ಯಾಕೆ ಬರಬೇಕು ಗುರು? ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೇ ಸೇರಬೇಕಾದ್ದು. ಕಿತ್ತೂರು ರಾಣಿ ಚೆನ್ನಮ್ಮ(ಚಿತ್ರ ನೋಡಿ), ಸಂಗೊಳ್ಳಿ ರಾಯಣ್ಣರ ಬೆಳಗಾವಿಗೆ ಇವತ್ತಿನ ದಿನ ಮರಾಠಿಗರಿಂದ ಆಗ್ತಿರೋ ತೊಂದರೆಗೆ ಕಾರಣ ಕರ್ನಾಟಕದ ಜನರು ಕ್ಷಾತ್ರಗುಣವನ್ನೇ ಕೆಟ್ಟದು ಅಂದ್ಕೊಂಡಿರೋದು. ಇದರಲ್ಲಿ ಸಂದೇಹವೇ ಇಲ್ಲ. ಬಹಳ ವರ್ಷಗಳಿಂದ ಕ್ಷತ್ರಿಯರಿಲ್ಲದೆ ಕರುನಾಡು ಕರುಗಳ ನಾಡಾಗಿತ್ತು, ಆದರೆ ಇವತ್ತಿನ ದಿನ ಕನ್ನಡದ ಕ್ಷತ್ರಿಯ ಎದ್ದೇಳುತ್ತಿದ್ದಾನೆ. ಕನ್ನಡಿಗನಲ್ಲಿ ಕ್ಷಾತ್ರಗುಣ ಮತ್ತೊಮ್ಮೆ ಮೊಳಕೆ ಒಡೀತಿದೆ ಗುರು!

Belgaum ಅನ್ನೋದನ್ನ Belagavi ಅಂತ ಬರೀಬೇಕು ಅನ್ನೋದಕ್ಕೆ ಕೇಂದ್ರ ಸೈ ಅಂದಿರೋದು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರೋದು, ವಿಧಾನಸಭಾ ಅಧಿವೇಶನ ನಡೆಸಿದ್ದು, ಕರವೇ ನೋರು ವಿಜಯ ಮೋರೆಗೆ ಫೇರ್-ಅಂಡ್-ಲವ್ಲಿ ಹಾಕಿ ಸನ್ಮಾನ ಮಾಡಿದ್ದು - ಎಲ್ಲಾ ಮಿಕ್ಸ್ ಆಗಿ ಲೈಫಲ್ಲಿ ರಿಪೇರಿ ಮಾಡಕ್ಕಾಗದೇ ಇರೋ ಅಷ್ಟು ಗಾಯ ಆಗಿದ್ರೂ ಕುಟುಕು-ಕುಟುಕು ಜೀವ ಇನ್ನೂ ಇದ್ದಂತಿದೆ!

ಅದಿರಲಿ, ಈ "ಮಹಾರಾಷ್ಟ್ರ ಏಕೀಕರಣ ಸಮಿತಿ" ಅನ್ನೋ ಹೆಸರಿಟ್ಟುಕೊಂಡಿರೋ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲೋ ಹಕ್ಕಾದರೂ ಯಾಕೆ ಕೊಟ್ಟಿದೆ? ಇನ್ನೂ ಯಾವ ಮಣ್ಣು-ಏಕೀಕರಣ ಮಾಡಬೇಕಂತೆ ಇವರು? ಆಗಿಹೋಯಿತು ಆ ಕಾಲ ಮಹಾಜನ್ ತಮ್ಮ ವರದಿ ಬರೆದ ಮೇಲೆ. ಬೆಳಗಾವೀನ ಕನ್ನಡಿಗರು ಎಂದೆಂದಿಗೂ ಬಿಟ್ಕೊಡಕ್ಕಾಗಲ್ಲ ಗುರು! ಆಗಲೇ ಸೊಲ್ಲಾಪುರ ಮುಂತಾದ ಎಷ್ಟೋ ಊರುಗಳನ್ನ ಮಹಾರಾಷ್ಟ್ರಕ್ಕೆ ನೀಗಾಗಿದೆ!

ಸ್ಲಂ ಸುಧಾ, ಆಟೋ ನಾಣಿ!

ಕನ್ನಡ ಚಿತ್ರಗಳ್ನ ನೋಡೋರು ಆಟೊ ಓಡ್ಸೋರು ಇಲ್ಲಾ ಸ್ಲಮ್ಮಲ್ಲಿ ಇರೊ ಜನ ಅಂತ ಭೂಮೀಗ್-ಭಾರ-ಅನ್ನಕ್-ದಂಡ ಅನ್ನೋ ಬಿರುದಿಗೆ ಹೊಂದೋರು, ತಿಂದಮನೆಗೆ ೨ ಬಗೆಯೋರು ಕೆಲವರು ಬ್ಲಾಗಿಸಿದ್ದು, ಜನ ಅದನ್ನು ಓದಿ ನಕ್ಕಿದ್ದು ನಿಮಗೆ ತಿಳಿದೇ ಇದೆ. ಕನ್ನಡ ಚಿತ್ರಗಳ ಬಗ್ಗೆ, ಅಭಿಮಾನಿಗಳ ಬಗ್ಗೆ ಬೆಂಗಳೂರಲ್ಲೇ ಒಕ್ಕರಿಸಿಕೊಂಡಿರೋ ಬ್ಯಾಂಗಲೋರ್ ಟಾರ್ಪೆಡೋ ಅನ್ನೋನ ದಿಮಾಕ್ ಎಷ್ಟಿದೆ ನೋಡಿ. ಸ್ಲಮ್ಮು, ಆಟೋಗಳ ಕೊಳೆ/ಧೂಳುಗಳಲ್ಲಿ ಬಿದ್ದು ಒದ್ದಾಡ್ತಿರೋ ಕೆಲವರು ಮುಂಗಾರುಮಳೆ ತಂಡದ ಜೊತೆ ಇಲ್ಲಿದಾರೆ ನೋಡಿ:


ಮೊನ್ನೆ ಇನ್ಫೊಸಿಸ್ ಸಂಸ್ಥೆಯಲ್ಲಿ ಮುಂಗಾರು ಮಳೆಯ ಚಿತ್ರತಂಡ ಶ್ರೀ/ಶ್ರೀಮತಿ ಮೂರ್ತಿಯವರ ಅಹ್ವಾನದ ಮೇರೆಗೆ ಬಂದು, ತಮ್ಮ ಅನುಭವಗಳನ್ನು ಹಂಚಕೋತು, ಸನ್ಮಾನ ಮಾಡಿಸಿಕೋತು. ಇವೆಲ್ಲ ಆಗಕ್ಕೆ ಕಾರಣ ಎನಪ್ಪ ಎಂದರೆ ಸುಧಾ ಮೂರ್ತಿಯವರಿಗೆ ಮುಂಗಾರು ಮಳೆ ಬೋ ಹಿಡಿಸಿ, ಒಂದು ಸಲ ಸಾಲೊಲ್ಲ ಅಂತ ಪದೇ ಪದೆ ನೋಡಿದರಂತೆ, ಅದೂ ಸಾಲಲ್ಲ ಅಂತ ಮುಂಗಾರುಮಳೆ ತಂಡದೋರ್ನ ಮುಖಾಮುಖಿ ಭೇಟೀನೇ ಆಗಬೇಕು ಅನ್ನಿಸಿತಂತೆ.
ಈ ಸಮಾರಂಭಕ್ಕೆ ಶ್ರೀ ನಾರಾಯಣ ಮೂರ್ತಿಗಳು ಬಂದು ಚಿತ್ರತಂಡದ ಜೊತೆ ಸಂತಸ ಹಂಚಿಕೊಂಡಿದ್ದು ವಿಶೇಷ. ನಮ್ಮ ಗಣೇಶಗೆ ಶಾಲು ಹೊದ್ಸಿ ಸನ್ಮಾನ ಮಾಡಿ ತ್ರಿಲ್ ಕೊಟ್ಟಿದ್ದು ಈಗ ಬೆಂಗಳೂರಲ್ಲಿರೋ ಪ್ರತಿಯೊಬ್ಬನ ಮಿಂಚೆಪೆಟ್ಟಿಗೆ (mailbox) ನಲ್ಲೂ ಓಡಾಡ್ತಿದೆ.
ಅಷ್ಟೆ ಅಲ್ಲಾ ಗುರು, ಸುಧಾ ಮೂರ್ತಿ ಇದೇ ರೀತಿ ಉಪ್ಪಿ ಮನೆಗೆ ಕೂಡ ಹೋಗಿದ್ದು, ಅವರು ಮಕ್ಕಳು ಉಪ್ಪಿ ಫ್ಯಾನ್ ಅಂದಿದ್ದು ಎಲ್ಲಾ ಹಳೇ ಸುದ್ದಿ.
ನಮ್ಮ ಸುಧಾ ಮೂರ್ತಿ ಮ್ಯಾಡಮ್ ಕೂಲಿನಾಲಿ ಮಾಡೋರಾ? ಇಲ್ಲಾ ನಮ್ಮ ನಾರಾಯಣ ಮೂರ್ತಿ ಆಟೊ ಓಡಿಸ್ತಾರಾ? (ಹಾಗಾಗಿದ್ರೆ ಔರು ಕೀಳು ಇಲ್ಲಾ ಔರು ನೋಡೊ ಚಿತ್ರಗಳು ಕೀಳು ಅಂತೇನಲ್ಲ, ಬಾಯಿಗೆ ಬಂದಂಗೆ ಬೊಗಳೋ ನಾಯಿಗಳಿಗೆ ಇದರಿಂದ ಸೊಲ್ಪ ಅರ್ಥ ಆಗ್ಲಿ ಅಂತ, ಅಷ್ಟೆ).

ನಂ ನಾಡ್ನ "ಗಂಧದ್ ಗುಡಿ" ಅನ್ನೋದು ಕಾಟಾಚಾರಕ್ಕಲ್ಲ ಗುರು!

"ನಾವಾಡುವ ನುಡಿಯೇ ಕನ್ನಡ ನುಡಿ...ನಾವಿರುವಾ ತಾಣವೆ ಗಂಧದಗುಡಿ" ಅಂತ ಪಿ.ಬಿ.ಶ್ರೀನಿವಾಸು ಡಾ ರಾಜ್ ಗೆ ಹಿನ್ನೆಲೆ ಸಂಗೀತ ಕೊಟ್ಟಿರೋದೇನೋ ನಮಗೆ ಗೊತ್ತೇ ಇದೆ. ಏನು ಹಾಡು ಗುರು ಅದು! ಅದೆಷ್ಟು ಸರಿ ಕೇಳ್ದ್ರೂ ಬೇಜಾರಾಗಲ್ಲ! ಅದೆಷ್ಟು ಸರಿ ನೋಡಿದರೂ ಇನ್ನೊಂದ್ಸಾರಿ ನೋಡ್ಮ ಅನ್ಸತ್ತಲ್ಲ ಗುರು! ಇನ್ನೊಂದ್ಸಲಿ ನೋಡ್ಮ:


ಹಾಗೇ....ನಿಜಕ್ಕೂ ಗಂಧದಗುಡಿ ಅಂದ್ರೆ ಕರ್ನಾಟಕಾನೇ ಅನ್ನೋದು ಗೊತ್ತಿತ್ತಾ? ಶ್ರೀಗಂಧ ಇನ್ನೆಲ್ಲೂ ಬೆಳ್ಯಲ್ಲ ಗುರು! ಇಲ್ಲಿ ನೋಡಿ:



ಪೂರ್ತಿ ಬರಹಕ್ಕಾಗಿ 1990ರಲ್ಲಿ ಹವಾಯಿಯಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಓದಲಾದ ಬರಹ ನೋಡಿ. ಇಲ್ಲಿ ಯಾವುದನ್ನ ತಮಿಳುನಾಡು ಅಂತ ಕರೀತಿದಾರೋ ಅದು ಇವತ್ತು ಭೌಗೋಳಿಕವಾಗಿ ತಮಿಳ್ನಾಡೇನೋ ನಿಜ. ಆದರೆ ಅಲ್ಲಿರೋರೆಲ್ಲ ಹೆಚ್ಚು-ಕಡಿಮೆ ಬಡಗರು ಮತ್ತು ಕನ್ನಡಕ್ಕೆ ಹತ್ತಿರವಿರೋ ಇನ್ನೂ ಕೆಲವು ಭಾಷೆಗಳನ್ನು ಆಡೋರೇ. ಬಡಗರು ಅಂದ್ರೆ ಕನ್ನಡಿಗರೇ. ಮೈಸೂರು-ಚಾಮರಾಜನಗರದ ಕನ್ನಡಕ್ಕೆ ಸಕ್ಕತ್ ಹತ್ರ ಬಡಗರ ನುಡಿ. ತಮಿಳ್ಗೂ ಬಡಗಕ್ಕೂ ಒಂಚೂರೂ ನಂಟಿಲ್ಲದಿದ್ದರೂ ಈಗ ಬಡಗನಾಡು ತಮಿಳ್ನಾಡಲ್ಲಿದೆ ಅನ್ನೋದು ಕಟುಸತ್ಯ. ಭಾಷಾವಾರು ರಾಜ್ಯಗಳ ವಿಂಗಡನೆಯಾಗುವಾಗ ಕರ್ನಾಟಕ ಬಡಗನಾಡನ್ನು ಕಳ್ಕೋತು, ಅಷ್ಟೆ. ಈಗ ನಾವು ಕಣ್ ಮುಚ್ಕೊಂಡಿದ್ರೆ ಬೆಳಗಾವಿ ಹೇಗೆ ಕೈಬಿಟ್ಟುಹೋದೀತೋ ಹಾಗೆ.

ಕರ್ನಾಟಕದಲ್ಲೇ ಕನ್ನಡ ಜನಾಂಗದ ಭಾಷಾ ಹಕ್ಕುಗಳ ಉಲ್ಲಂಘನೆ ಆಗ್ತಿದ್ಯಾ?

ಭಾಷಾವಾರು ಜನಾಂಗಗಳ ರಕ್ಷಣೆ ಮತ್ತು ಏಳ್ಗೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿಶ್ವಸಂಸ್ಥೆಯ (ಯು.ಎನ್.) ಅಂಗವಾದ ಯುನೆಸ್ಕೋ ೧೯೯೬ರಲ್ಲಿ ಬಾರ್ಸೆಲೋನಾ ನಲ್ಲಿ ಹೊರಡಿಸಿದ ಭಾಷಾ ಹಕ್ಕುಗಳ ಪಟ್ಟಿಯಲ್ಲಿ ಇಲ್ಲಿ ಕೆಲವನ್ನು ನೋಡೋಣ, ಆ ಹಕ್ಕುಗಳು ಕರ್ನಾಟಕದಲ್ಲಿ ಕನ್ನಡ ಜನಾಂಗಕ್ಕೆ ನಿಜವಾಗ್ಲೂ ಇವ್ಯಾ ಅಂತ ಪ್ರಶ್ನೆ ಹಾಕೋಣ.

Article 10
1. All language communities have equal rights.
2. This Declaration considers discrimination against language communities to be inadmissible, whether it be based on their degree of political sovereignty, their situation defined in social, economic or other terms, the extent to which their languages have been codified, updated or modernized, or on any other criterion.
3. All necessary steps must be taken in order to implement this principle of equality and to render it effective.


Article 15
1. All language communities are entitled to the official use of their language within their territory.
2. All language communities have the right for legal and administrative acts, public and private documents and records in public registers which are drawn up in the language of the territory to be valid and effective and no one can allege ignorance of this language.

ಕರ್ನಾಟಕದಲ್ಲಿ ಕನ್ನಡಿಗರಿಗೆ ಹಿಂದಿಯವರಷ್ಟೇ ಹಕ್ಕಿದೆಯಾ? ಇದ್ದಿದ್ರೆ ಕೇಂದ್ರಾಡಳಿತ ಕಚೇರಿಗಳಲ್ಲಿ ಕೆಲಸ ಮಾಡ್ಬೇಕಾದ್ರೆ ಹಿಂದಿ ಕಲೀಬೇಕು ಇಲ್ಲಾ ಇಂಗ್ಲೀಷ್ ಕಲೀಬೇಕು ಅನ್ನೋ ನಿಯಮ ಯಾಕಿದೆ? ಕನ್ನಡಕ್ಕೆ ಹಿಂದಿಗಿಂತ ಕೆಳಗಿನ ಸ್ಥಾನ ಅನ್ನೋದನ್ನ ಕನ್ನಡಿಗರ ಮೇಲೆ ಶಿಕ್ಷಣ ವ್ಯವಸ್ಥೆಯಿಂದ ಹಿಡಿದು ಮಾಧ್ಯಮಗಳಲ್ಲಿ, ಮನರಂಜನೆಯಲ್ಲಿ, ಕೇಂದ್ರಕಚೇರಿಗಳಲ್ಲಿ, ಬ್ಯಾಂಕುಗಳಲ್ಲೆಲ್ಲ ಕನ್ನಡದ ಅನುಷ್ಠಾನ ಮಾಡದೆ ಹಿಂದಿ ಹೇರಿರೋದು ಈ ಸಮಾನತೆಯ ನಿಯಮವನ್ನ ಉಲ್ಲಂಘಿಸಿದಂತಲ್ವಾ? ಭಾರತೀಯ ಸಂವಿಧಾನದಲ್ಲಿ ಎಲ್ಲೂ ಹಿಂದೀನ "ರಾಷ್ಟ್ರಭಾಷೆ" ಅಂತ ಕರೀದೇ ಹೋದ್ರೂ ಇವತ್ತು ಹೆಚ್ಚು-ಕಡಿಮೆ ಪ್ರತಿಯೊಬ್ಬ ಕನ್ನಡಿಗನಿಗೂ ಈ ಸುಳ್ಳು ನಿಜದ್ ಥರಾನೇ ಅನ್ಸಿರೋದು ಸಮಾನತೆಯ ಪ್ರಚಾರ ನಡೆದಿರೋದನ್ನ ತೋರ್ಸತ್ತೋ ಹೇಗೆ? ಕಲಂ ೧೫.೧ರ ಪ್ರಕಾರ ಕರ್ನಾಟಕದಲ್ಲಿ ರಾಜ್ಯ ಕಚೇರಿಗಳಲ್ಲಾಗಲಿ ಕೇಂದ್ರ ಕಚೇರಿಗಳಲ್ಲಾಗಲಿ ಕನ್ನಡವನ್ನು ಬಿಟ್ಟು ಬೇರೆ ಯಾವ ಭಾಷೇನೂ "ಅಧಿಕೃತ ಭಾಷೆ" ಅನ್ನಿಸಿಕೊಳ್ಳಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ ಹಿಂದಿ ಕರ್ನಾಟಕದ ಕೇಂದ್ರ ಕಚೇರಿಗಳಲ್ಲಿ "ಆಧಿಕೃತ ಭಾಷೆ" ಅನ್ನೋ ಸ್ಥಾನ ಹೇಗೆ ಪಡಿಯಕ್ಕೆ ಸಾಧ್ಯ? ಐ.ಏ.ಎಸ್. ಅಫೀಸರುಗಳು ಕರ್ನಾಟಕಕ್ಕೆ ಬಂದು ಕನ್ನಡವೇ ಬರದೆ ಹಿಂದಿಯಲ್ಲೇ ಎಲ್ಲಾ ನಡೆಸ್ತೀನಿ ಅನ್ನೋದು ಸರೀನಾ ಗುರು? ಇವೆಲ್ಲ ಕಲಂ ೧೫ರ ಉಲ್ಲಂಘನೆಯಲ್ಲದೆ ಮತ್ತೇನು? ೧೫.೨ರ ಪ್ರಕಾರ ವಲಸಿಗರು ಕರ್ನಾಟಕದಲ್ಲಿ ಬಂದು "ನಮ್ಗೆ ಕನ್ನಡ ಅರ್ಥವಾಗಲ್ಲ, ಆದ್ದರಿಂದ ನಮಗೆ ಎಲ್ಲಾ ಸೇವೇನೂ ಹಿಂದೀಲಿ ಕೊಡಿ" ಅನ್ನೋಹಾಗಿಲ್ಲವೇ ಇಲ್ಲ. ಆದರೆ ಇವತ್ತು ಹಿಂದಿಯೋರು ಕನ್ನಡವನ್ನು ಅರ್ಥಮಾಡಿಕೊಳ್ಳೋದು ಹಾಗಿರಲಿ, ಕರ್ನಾಟಕದಲ್ಲಿ ನಮ್ಮನ್ನೇ ಯಾಕೆ ಹಿಂದಿ ಬರಲ್ಲ ಅಂತ ಕೇಳ್ತಾರಲ್ಲ ಗುರು!
Article 47.3
The use of other languages in this sphere can only be required in so far as it is justified by the nature of the professional activity involved. In no case can a more recently arrived language relegate or supersede the use of the language specific to the territory.

ಕನ್ನಡದ ಇತಿಹಾಸವನ್ನ ನೋಡ್ತಾ ಇದ್ರೆ ಹಿಂದಿ ಇನ್ನೂ ಅಂಬೇಗಾಲಲ್ಲಿರೋ ಭಾಷೆ. ಬರೆದ ಕನ್ನಡ ೨೦೦೦ ವರ್ಷಕ್ಕಿಂತ ಹಳೇದಾದರೆ ಹಿಂದಿ ಇನ್ನೂ ೧೦೦೦ವರ್ಷಕ್ಕಿಂತ ಇತ್ತೀಚಿನದು (ಎರಡೂ ವಿಕಿಪೀಡಿಯಾ ಮಾಹಿತಿ). ಅದೂ ಅಲ್ಲದೆ ಹಿಂದಿ ಅನ್ನೋದು ಕರ್ನಾಟಕದಲ್ಲಿ "ಇತ್ತೀಚೆಗೆ ಬಂದ ಭಾಷೆ" ಅನ್ನೋದು ನೂರಕ್ಕೆ ನೂರು ನಿಜ. ಈ ಹಿಂದಿ ದಾಳಿ ನಮಗೆ ಆಗ್ತಿರೋದು ಬ್ರಿಟಿಷರಿಂದ ಬಿಡುಗಡೆ ಹೊಂದಿದಮೇಲೇನೇ. ಇತ್ತೀಚೆಗೆ ಬಂದ ಭಾಷೆ ಹಿಂದಿ ಆಡಳಿತ ಭಾಷೆ ಅಥವಾ "ರಾಜ್-ಭಾಷಾ" ಆಗಿ ಕನ್ನಡವನ್ನೇ ಹಿಂದೆಹಾಕಕ್ಕೆ ಹೊರಟಿರೋದು ಹಾಡು-ಹಗಲಲ್ಲೇ ಯುನೆಸ್ಕೋ ನಿಯಮಗಳ ಉಲ್ಲಂಘನೆಯಲ್ವಾ ಗುರು?

ಸೊಲ್ಪ ಯೋಚನೆ ಮಾಡು ಗುರು! ನಮ್ಮ ನಾಡಲ್ಲೇ ನಮ್ಮ ನುಡಿಯನ್ನು ರಕ್ಷಿಸಿಕೊಳ್ಳುವ, ಬೆಳೆಸುವ, ಬೇಕಾದ ಕಡೆಯಲ್ಲಿ ಬಳಸುವ ಹಕ್ಕು ನಮಗೆ ನಿಜವಾಗಲೂ ಇದ್ಯಾ?

ಆದರೆ ಯು.ಎನ್. ಗೆ ಹಿಂದಿ ಏರಿಕೆ ಹೆಚ್ಚದೀತೆ ಕನ್ನಡಿಗನ ಮೇಲೆ ಹಿಂದಿ ಹೇರಿಕೆ?

ಭಾರತೀಯ ಭಾಷೆಗಳಲ್ಲಿ ಒಂದಾದ ಹಿಂದಿಯನ್ನು ಯು.ಎನ್. ನಲ್ಲಿ ಒಂದು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳಿ ಅಂತ ಭಾರತ ಸರ್ಕಾರ ಭಾರೀ ಲಾಬಿ ನಡೆಸಿದೆ. ನ್ಯೂಯಾರ್ಕಿನಲ್ಲಿ ವಿಶ್ವ ಹಿಂದಿ ಸಮ್ಮೇಳನ ಮಾಡುವುದೇನು, ಯು.ಎನ್. ಸೆಕ್ರೆಟರಿ ಜನರಲ್ ಕೈಲಿ ಹಿಂದಿ ಮಾತಾಡಿಸುವುದೇನು! ಬಾನ್ ಕಿ-ಮೂನ್ ತಮ್ಮ ಭಾಷಣದಲ್ಲಿ ಹೀಗನ್ನಬೇಕೆ?:
After all, as India's national language,...

ಇವರಿಗೆ ಯಾರು ಪಾಠ ಕಲಿಸಿದೋರು ಹಿಂದಿ ಇಂಡಿಯಾದ ರಾಷ್ಟ್ರಭಾಷೆ ಅಂತ? ಭಾರತೀಯ ಒಕ್ಕೂಟದ ಸಂವಿಧಾನದಲ್ಲೇನು ಹಾಗಿಲ್ಲವಲ್ಲ? ಇಂಗ್ಲೇಷಿನ ಜೊತೆ ಹಿಂದಿ ಒಂದು ಅಧಿಕೃತಭಾಷೆ ಅನ್ನೋ ಸ್ಥಾನವನ್ನ ಹಿಂದಿಯೋರು ತಮಗೆ ತಾವೇ ಕೊಟ್ಟಿಕೊಂಡಿರೋದು. ಅಷ್ಟು ಬಿಟ್ಟು ಹಿಂದಿಯನ್ನ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನ ಪಾಪ ಈ ವಯ್ಯನಿಗೆ ಹೇಳಿಕೊಟ್ಟಿರೋದು ಕೇಂದ್ರಸರ್ಕಾರವೇ ಇರಬೇಕು! ಸ್ವಲ್ಪವೂ ಹಿಂದೆ-ಮುಂದೆ ವಿಚಾರಿಸದೆ ವಿಶ್ವಸಂಸ್ಥೆಯ ಮುಖ್ಯಸ್ಥ ಅನ್ನಿಸಿಕೊಂಡೋರಿಗೆ ಇಷ್ಟು ಅಜ್ಞಾನ ಸ್ವಲ್ಪವೂ ಶೋಭಿಸಲ್ಲ. ಇವರ ವಿಶ್ವ ತಮ್ಮ ಸುತ್ತ ಮುತ್ತ ಲಾಬಿ ಮಾಡುತ್ತಿರೋರಿಗೆ ಮೀಸಲಾಗಿರೋ ಬಾವಿ-ಕಪ್ಪೆಯ ವಿಶ್ವ ಅನ್ನೋದು ಇದರಿಂದ ಸ್ಪಷ್ಟ ಗುರು!

ಐ.ಬಿ.ಎನ್. ಲೈವ್ ಪ್ರಕಾರ ಈ ಸಮ್ಮೇಳನಕ್ಕೇಂತ ಕೇಂದ್ರ ಸರ್ಕಾರ (ರಾಮನ ಲೆಕ್ಕದಲ್ಲಿ; ಕೃಷ್ಣನ ಲೆಕ್ಕದಲ್ಲಿ ಗೋವಿಂದ!) ೩ ಕೋಟಿ ಕರ್ಚು ಮಾಡಿದೆ ಬೇರೆ! ಮತ್ತೆ ಬಾಲೀವುಡ್ಡು ತುಂಬ ಜನಪ್ರಿಯವಂತೆ, ಅದಕ್ಕೆ ವಿಶ್ವಸಂಸ್ಥೆಯಲ್ಲಿ ಅಧಿಕೃತಭಾಷೆ ಸ್ಥಾನ ಸಿಗಬೇಕಂತೆ! ಕೇಂದ್ರ ಸರ್ಕಾರಕ್ಕೆ ಯಾವುದೋ ಒಂದು ಭಾಷೆಗೆ ಇಷ್ಟು ಹಣ ಕರ್ಚು ಮಾಡೋ ಹಕ್ಕು ಕೊಟ್ಟೋರು ಯಾರು? ಕುವೈತಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡಿಯತ್ತಲ್ಲ, ಅದು ನಡೆಯೋದಾದರೂ "ನಮ್ಮ" ಕೇಂದ್ರ ಸರ್ಕಾರಕ್ಕೆ ಗೊತ್ತಾ? ಅದಕ್ಕೆಷ್ಟು ದುಡ್ಡು ಕೊಟ್ರು? ಎಷ್ಟು ಕೊಟ್ರು? ಒಂದು ಬಿಡಿಗಾಸು ಕೊಟ್ರಾ? ಈಗ್ಲೇ ಹೀಗಿರುವಾಗ ಇನ್ನು ಹಿಂದಿಗೆ ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಕ್ಕರೆ ಕನ್ನಡ ಅಂತ ಒಂದು ಭಾಷೆ ಇದೆ, ಕರ್ನಾಟಕ ಅಂತ ಒಂದು ರಾಜ್ಯ ಇದೆ ಅನ್ನೋದನ್ನೇ ಕೇಂದ್ರಸರ್ಕಾರ ಮರೆತುಬಿಡೋದ್ರಲ್ಲಿ ಸಂದೇಹ ಇದ್ಯಾ?

ಈಗಾಗಲೇ ಹಿಂದಿಯನ್ನ ರಾಷ್ಟ್ರಭಾಷೆ ಅಂತ ಇಡೀ ಭಾರತದಲ್ಲಿ ಕೃಷ್ಣನ ಲೆಕ್ಕದಲ್ಲಿ ಪ್ರಚಾರ ಮಾಡಾಯಿತು, ನಮ್ಮ ಪಠ್ಯಪುಸ್ತಕಗಳಲ್ಲೂ ಅದೇ ಸುಳ್ಳು ಬರೆದು ಹಿಂದಿಬಾರದವರಿಗೆಲ್ಲ ತಲೆತಿರುಗಿಸಿದ್ದಾಯಿತು, ಇನ್ನು ಯು.ಎನ್. ಸೆಕ್ರೆಟರಿ ಜನರಲ್ಗೂ ಬಾಯಿಪಾಠ ಮಾಡಿಸಿದ್ದಾಯಿತು, ಇನ್ನು ಹಿಂದಿಗೆ ವಿಶ್ವಸಂಸ್ಥೆಯ ಅಧಿಕೃತಭಾಷೆ ಅನ್ನೋ ಸ್ಥಾನ ಸಿಕ್ಕರೆ ಕನ್ನಡ ಗೋಓಓಓಓಓಓಓವಿಂದ! ಕರ್ನಾಟಕದಲ್ಲಿರೋ ಹಿಂದಿ ವಲಸಿಗರಿಗಂತೂ ಅಹಂಕಾರ ನೆತ್ತಿಗೇರೋದರಲ್ಲಿ ಸಂದೇಹವೇ ಇಲ್ಲ! ಮುಂದೆ ಇವೆಲ್ಲ ಕೇಳಿಸಿಕೊಳ್ಳಬೇಕಾದೀತು:

"ಕರ್ನಾಟಕದಲ್ಲಿ ’ಕನ್ನಡ್’ ತೆಗೀರಿ, ಹಿಂದಿ ಹಾಕಿ, ಹಿಂದಿ ವಿಶ್ವಸಂಸ್ಥೆಯ ಅಧಿಕೃತಭಾಷೆ". "ಬಂದ್ರು ಬಂದ್ರು ವಿಶ್ವಸಂಸ್ಥೆಯ ಅಧಿಕೃತಭಾಷೆಯಾದ ಹಿಂದಿ ಮಾತಾಡುವ ಅರಸರು ಬಂದ್ರು, ದಾರಿ ಬಿಡಿ!". "ಏನು ಕನ್ನಡಾನಾ? ಅದೇನದು? ಸ್ಲಮ್ಮುಗಳಲ್ಲಿ ಮಾತಾಡೋ ಭಾಷೆ ಅದು! ಹಿಂದಿ ನೋಡಿ - ವಿಶ್ವಸಂಸ್ಥೆಯ ಅಧಿಕೃತ ಭಾಷೆ".

ಇಷ್ಟೇ ಅಲ್ಲ. ನಮ್ಮ ದುಡಿಮೆಯಿಂದ ನಮ್ಮ ಮೊದಲನುಡಿ, ನಮ್ಮ ತೊದಲನುಡಿ, ನಮ್ಮೊಲುಮೆಯ ಕನ್ನಡಕ್ಕೆ ಸಿಗಬೇಕಾದ ಹಣ ಸಂಬಂಧವಿಲ್ಲದ ಹಿಂದಿಗೆ ಕಡ್ಡಾಯವಾಗಿ ಕೊಡಿ ಅಂತ ಕಿತ್ತುಕೊಂಡು ಹೋಗ್ತಾರೆ, ನಾವು ಬೆಪ್ಪರಂಗೆ ನೋಡ್ತಾ ಕೂತಿರಬೇಕಾಗತ್ತೆ!

ಈ ಸಮಯದಲ್ಲಿ ಕನ್ನಡಿಗ ಏನು ಮಾಡಬೇಕು? ನಮ್ಮ ಕಾಸಿಂದ ಪಕ್ಕದ ಮನೇಲಿ ಕೂಸು ಹುಟ್ಟಿತು ಅಂತ ನಮ್ಮನೇಲಿ ತೊಟ್ಟಿಲು ತೂಗೋದನ್ನ ಬಿಟ್ಟು ಕನ್ನಡಿಗ ನಿಜವಾಗಲೂ ಭಾರತದಲ್ಲಿ ನಮಗೆ ಯಾವ ಸ್ಥಾನ ಇದೆ ಅನ್ನೋದನ್ನ ಯೋಚನೆ ಮಾಡಬೇಕು. ಆದರ್ಶವಾದ ಒಕ್ಕೂಟ ವ್ಯವಸ್ಥೆಯ ರೀತಿಯಲ್ಲಿ ಭಾರತ ಕೆಲಸ ಮಾಡಬೇಕಾದರೆ ಈ ನಾಟಕವೆಲ್ಲ ನಡಿಯಲ್ಲ ಅಂತ ಅರ್ಥ ಮಾಡ್ಕೋಬೇಕು! ಕನ್ನಡದ ಮನೆಗೆ ಬೆಂಕಿ ಬಿದ್ದಿರುವಾಗ ಹಿಂದಿಯ ಮನೆಗೆ ಸುಣ್ಣ-ಬಣ್ಣಕ್ಕೆ ದುಡ್ಡು ಕೊಡಲ್ಲ ಅಂತ ಪಣ ತೊಡಬೇಕು! ಈ ಹಗಲು ದರೋಡೆಯನ್ನ ನಿಲ್ಲಿಸಬೇಕು!

ಇಲ್ದಿದ್ರೆ ನಾವೂ ಗೋವಿಂದ ನಮ್ಮ ಕನ್ನಡವೂ ಗೋವಿಂದ, ನಮ್ಮ ಕರ್ನಾಟಕವೂ ಗೋವಿಂದ! ಅಲ್ಲಲ್ಲ. "ಗೋವಿಂದ್"!

ಕನ್ನಡ ಬಾರದ ಆದಾಯ ತೆರಿಗೆ ಇಲಾಖೆ!

ಈ ಥರಾ ಕಚಡಾ ಜಾಹೀರಾತ್ನ ನಾಲ್ಕು ಜನರ ಮುಂದೆ (ನಾವು ನೋಡಿದ್ದು ನೆನ್ನೆ ವಿ.ಕ.ದಲ್ಲಿ) ಬಿಡೋ ಧೈರ್ಯವಾದರೂ ಬರತ್ತಲ್ಲ ಆದಾಯ ತೆರಿಗೆ ಇಲಾಖೆಯೋರಿಗೆ, ಅದಕ್ಕೇನು ಹೇಳ್ತೀರಿ?



ಮೇಲಗಡೆ "ರಿಟರ್ನ ಭರ್ತಿ ಮಾಡುವದು..." ಅನ್ನೋ ವಾಕ್ಯಕ್ಕೆ ಉಪಯೋಗಿಸಿರೋ ಫಾಂಟ್ ಯಾವ್ದು ಅಂತ ಸೊಲ್ಪ ಕೇಳಿ! ಯಾವುದೋ ಮಗು ಕೈಲಿ ಬರೆಸಿದಂಗಿದೆಯಲ್ಲ ಗುರು! ಹಾಗೇ "ತುಂಬಾಸರಳ" ಅನ್ನೋದು ಒಂದು ಪದ ಕನ್ನಡದಲ್ಲಿ ಯಾವಾಗಿಂದ ಆಯ್ತು? ಇನ್ನು ಜಾಹೀರಾತಿನ "ಮೈ"ಯಲ್ಲೆಲ್ಲ "ಆದಾಯಕರ" ಅನ್ನೋ ಪದ ಉಪಯೋಗಿಸಿದೆ, ಕೆಳಗಡೆ ಮಾತ್ರ "ಆದಾಯ ತೆರಿಗೆ ಇಲಾಖೆ" ಅಂದಿದೆ. ಹಿಂದಿಯಿಂದ ಅನುವಾದ ಮಾಡುವಾಗ ಮೈಯಲ್ಲಿ ಮಾತ್ರ "ಕರ" ಅನ್ನೋದನ್ನ ಹಾಗೇ ಬಿಟ್ಟಿರೋದು ನಗೆಪಾಟಲಾಗಿದೆ! ಹಿಂದಿಯಲ್ಲಿ "ಆದಾಯ್ ಕರ್" ಅಂದಿರ್ತಾರೆ, ಅದನ್ನ ಹಾಗೇ ಕನ್ನಡದ ಲಿಪಿಯಲ್ಲಿ ಯಾರೋ ಅನುವಾದಕಲಾವಿಶಾರದ ಬಿಟ್ಟಿದಾನೆ, ಅಷ್ಟೆ.

ಇನ್ನು ಈ ಕೆಳಗಿನ ವಾಕ್ಯಕ್ಕೆ ಏನಾದರೂ ಅರ್ಥ ಇದ್ಯಾ ಗುರು?

ನೀವು ವೇತನ ಪಡೆಯುವರು ಕಾರ್ಪೊರೇಟ ಮೌಲ್ಯಮಾಪನಕ್ಕೆ ಒಳಪಡದವರು ಹಾಗೂ ನಿಮ್ಮ ಲೆಕ್ಕ ಪತ್ರಗಳನ್ನು ಆಡಿಟ್ ಮಾಡುವ ಅಗತ್ಯವಿಲ್ಲದಿದ್ದರೆ ದಯವಿಟ್ಟು ಜುಲೈ 31, 2007 ರೊಳಗಾಗಿ ರಿಟರ್ನ ಭರ್ತಿಮಾಡಿ.

ಏನು ಹಿಂಗಂದ್ರೆ? "ಪಡೆಯುವರು" ಅನ್ನೋದರಲ್ಲಿ ಒಂದು "ವ" ದಿಲ್ಲಿಯಿಂದ ಬೆಂಗಳೂರಿಗೆ ಬರೋ ರೈಲಲ್ಲಿ ತಪ್ಪಿಸಿಕೊಂಡಂಗಿದೆಯಲ್ಲ? ಸೊಲ್ಪವಾದರೂ ಕನ್ನಡ ವ್ಯಾಕರಣದ ಗಂಧ ಇರಬಾರದೇ ಈ ಜಾಹೀರಾತು ಮಾಡೋರಿಗೆ? ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ಸೇರೋರಿಗೆ ಇಂಗ್ಲೀಷ್/ಹಿಂದಿ ಕಡ್ಡಾಯವಾಗಿ ಬರಬೇಕು ಅಂದ್ರೆ ಇನ್ನೇನಾಗತ್ತೆ ಗುರು? ಮೇಲಿನ ವಾಕ್ಯವನ್ನ ನಿಜವಾದ ಕನ್ನಡಿಗ ಬರೆದಿದ್ದರೆ ಹೀಗಿರುತ್ತಿತ್ತು, ಅದಕ್ಕೆ ಇಂಥದ್ದು ಅಂತ ಅರ್ಥ ಇರುತ್ತಿತ್ತು:

ನೀವು ವೇತನ ಪಡೆಯುವವರೂ ಕಾರ್ಪೊರೇಟ ಮೌಲ್ಯಮಾಪನಕ್ಕೆ ಒಳಪಡದವರೂ ಆಗಿದ್ದು ನಿಮ್ಮ ಲೆಕ್ಕ ಪತ್ರಗಳನ್ನು ಆಡಿಟ್ ಮಾಡುವ ಅಗತ್ಯವಿಲ್ಲದಿದ್ದರೆ ದಯವಿಟ್ಟು ಜುಲೈ 31, 2007 ರೊಳಗಾಗಿ ರಿಟರ್ನ ಭರ್ತಿಮಾಡಿ.


ಇದನ್ನ ಇಲಾಖೆಯೋರು ಓದ್ತಿದಾರಾ ಗುರು? ಸೊಲ್ಪ ಕೇಳಿ! ಇಷ್ಟು ಬೇಕಾಬಿಟ್ಟಿ ಜಾಹೀರಾತು ಮಾಡೋದು ಇವರಿಗೆ ಒಳ್ಳೇ ಹೆಸರು ತರುತ್ತಾ? ಇದಕ್ಕಾದರೂ ಕನ್ನಡಿಗರನ್ನ ನೇಮಿಸಿಕೊಳ್ಳಬಾರದೆ?

ಅಂದಹಾಗೆ ಅಲ್ಲಿ ಕೊಟ್ಟಿರೋ ಅಂತರ್ಜಾಲ ತಾಣಕ್ಕೆ ಹೋಗಿ ನೋಡಿ. ಅದು ಕನ್ನಡದಲ್ಲಿ ಯಾಕಿಲ್ಲ ಅಂತ ಕೇಳಿ. ಆದಾಯ ತೆರಿಗೆ ಬಗ್ಗೆ ಮಾಹಿತಿ ಪಡ್ಕೊಳಕ್ಕೆ ನಮ್ಮದಲ್ಲದ ಭಾಷೆಗಳಾದ ಇಂಗ್ಲೀಷೋ ಹಿಂದೀನೋ ಬರಬೇಕು ಅನ್ನೋದು ಒಂದು ಪ್ರಜಾಪ್ರಭುತ್ವಕ್ಕೆ ಶೋಭಿಸುತ್ತಾ? ಸೊಲ್ಪ ಯೋಚನೆ ಮಾಡು ಗುರು!

ಬಸ್ ಮನರಂಜನೆ ಇನ್ನು ಕನ್ನಡದಲ್ಲಿ ಮಾತ್ರ

ಇಲ್ಲೀ ವರೆಗೆ ಕರ್ನಾಟಕದ ಒಂದು ಊರಿಂದ ಇನ್ನೊಂದು ಊರಿಗೆ ಹೋಗೋ "ಕರಾರಸಾಸಂ" ಬಸ್ಸುಗಳಲ್ಲಿ ನಮಗೆ ಒಂಚೂರೂ ಸಂಬಂಧವಿಲ್ಲದ ಭಾಷೆಗಳ ಚಿತ್ರಗಳನ್ನು, ಹಾಡುಗಳನ್ನು ಹಾಕ್ತಿದ್ರಲ್ಲ, ಆ ಅಸಂಬದ್ಧತೆಗೆ ಇನ್ನೇನು ತೆರೆ ಬೀಳಲಿದೆ. ಕೊನೆಗೂ ಕರಾರಸಾಸಂಗೆ ಜ್ಞಾನೋದಯ ಆಗಿ ಇನ್ನು ಮೇಲೆ ಕಡ್ಡಾಯವಾಗಿ ಮನರಂಜನೆ ಕನ್ನಡದಲ್ಲೇ ಇರಬೇಕು ಅಂತ ಸುತ್ತೋಲೆ ಹೊರಡಿಸಿದೆ.

ಬೇರೆ ರಾಜ್ಯಗಳ ನಡುವ ಓಡಾಡುವ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಕರು ಕೇಳಿದರೆ ಬೇರೆ ಭಾಷೆಯಲ್ಲಿ ಮನರಂಜನೆ ಸಿಗತ್ತಂತೆ. ಇದು ಸಾಧುವೇ ಸರಿ. ಇನ್ನು ಕನ್ನಡಿಗರು ಚೆನ್ನೈಗೆ ಹೋಗ್ತಿದ್ರೆ "ನಮಗೆ ಕನ್ನಡ ಚಿತ್ರ ಬೇಕು" ಅಂತ ಕೇಳಬೇಕಷ್ಟೆ. ಕೇಳಿದರೆ ಇಲ್ಲ ಅನ್ನೋಹಂಗಿಲ್ಲ. ಇಬ್ಬರು ಹಿಂದಿಯೋರು ಎದ್ದು ಹಿಂದಿ ಬೇಕು ಅಂದ್ರೆ, ಇಲ್ಲಾ ಇಬ್ಬರು ತಮಿಳ್ರು ಎದ್ದು ತಮಿಳ್ ಬೇಕು ಅಂದ್ರೆ ಮಿಕ್ಕ ನಲವತ್ತು ಜನ ಕನ್ನಡದೋರು ಸುಮ್ಕೆ ಕೂತಿರಬಾರ್ದು, ಅಷ್ಟೆ. ಎದ್ದು ಹಕ್ಕು ಚಲಾಯಿಸಿಕೊಳ್ಳಬೇಕು. ಸೊಲ್ಪ ಮುನ್ನುಗ್ಗೋದನ್ನ ಕಲೀಬೇಕಷ್ಟೆ. "ಅಯ್ಯೋ ಔರು ಬೇಜಾರ್ ಮಾಡ್ಕೊತಾರೆ" ಅನ್ಕೊಂಡ್ ಕೂತಿದ್ದಕ್ಕೇ ಇಷ್ಟು ತಡವಾಗಿ ಕರಾರಸಾಸಂಗೆ ಬುದ್ಧಿ ಬರ್ತಿರೋದು.

ಇನ್ನೊಂದು ವಾರ ಆದಮೇಲೆ Bangalore ಅಲ್ಲ, Bengaluru!

ಇನ್ನೊಂದು ವಾರದಲ್ಲಿ Bangalore ಆಗತ್ತೆ Bengaluru ಅಂತ ಇವತ್ತಿನ ವಿ.ಕ. ಮತ್ತು ಡೆಕನ್ ಹೆರಾಲ್ಡ್ ಸುದ್ದಿ. ಅದಕ್ಕೆ ಬೇಕಾದ ಅಪ್ಪಣೆ ಕೇಂದ್ರದಿಂದ ಸಿಕ್ಕಿದೆಯಂತೆ. ಡೆಕನ್ ಹೆರಾಲ್ಡಲ್ಲಿ ಬೆಂಗಳೂರು ಜೊತೆಗೆ...
Other places set to change their names are: Mysore as Mysuru, Ballary(Bellary), Mangaluru (Mangalore), Vijapura (Bijapur), Belagavi (Belgaum), Chikkamagaluru (Chickmagalur); Kalaburgi (Gulbarga), Hosapete (Hospet), Shivamogga (Shimoga), Hubballi (Hubli), Tumakuru (Tumkur) and Kapu (Kaup).

ಅಂತಿದೆ.

ಬ್ರಿಟಿಷರು ಹೋದ ಕಡೆಯೆಲ್ಲಾ ಊರುಗಳ ಹೆಸರುಗಳನ್ನು ತಮ್ಮ ನಾಲಿಗೆಗೆ ಹೊರಳೋ ಹಾಗೆ ಮಾರ್ಪಡಿಸಿಕೊಂಡಿದ್ದರು (ಬೆಂಗಳೂರು "Bangalore" ಆಗಿದ್ದು, ಅದರಿಂದ್ಲೇ ಬೆಳಗಾವಿ "Belgaum" ಆಗಿದ್ದು ಇದರಿಂದಾನೇ). ಆಡಳಿತದಲ್ಲಿ ತಮ್ಮ ಭಾಷೆಯಾದ ಇಂಗ್ಲೀಷನ್ನ ಎಕ್ಕಾಮುಕ್ಕಾ ಉಪಯೋಗಿಸುತ್ತಿದ್ದ ಬ್ರಿಟೀಷ್ ಸರ್ಕಾರ ತನ್ನ ದಾಖಲೆಗಳಲ್ಲೆಲ್ಲ ಈ ಮಾರ್ಪಟ್ಟ ಹೆಸರುಗಳನ್ನೇ ಉಪಯೋಗಿಸುತ್ತಿತ್ತು. ಬಂತು ಬ್ರಿಟಿಷರಿಂದ ಬಿಡುಗಡೆ. ಕಳೀತು ೬೦ ವರ್ಷ. ಇವತ್ತಿಗೂ ಕೇಂದ್ರಸರ್ಕಾರ ಆಡಳಿತಕ್ಕೆ ಇಂಗ್ಲೀಷನ್ನೇ ಬಳಸುತ್ತಾ ಬಂದಿದ್ದು ನಮ್ಮ ಭಾಷೆಗಳನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಸೋಲೊಪ್ಪಿಕೊಂಡಂತೆಯೇ ಇದೆ. ಯೂರೋಪಿನ ಒಕ್ಕೂಟ ವ್ಯವಸ್ಥೆಯಲ್ಲಿ ಸದಸ್ಯ ರಾಜ್ಯಗಳೆಲ್ಲವುಗಳ ಭಾಷೆಗಳಲ್ಲೂ ಎಲ್ಲಾ ದಾಖಲೆಗಳೂ ಸಿಗುವಂತೆ ಭಾರತೀಯ ಒಕ್ಕೂಟದಲ್ಲೂ ಸಿಗಬೇಕು. ಅದು ಬಿಟ್ಟು ಇಂಗ್ಲೀಷ್ನ ತಲೇಮೇಲೆ ಕೂರಿಸಿಕೊಂಡಿರೋದು ಮೊದಲಾಗಿ ಸರಿಯೇ ಅಲ್ಲ. ಇನ್ನು ಲೆಕ್ಕಕ್ಕಿಲ್ಲದಿದ್ದರೂ ಆಟಕ್ಕೆ ಅಂತ ಹಿಂದೀನ ಮೆರಸುತ್ತಿರೋದಂತೂ ದಂಡವೋ ದಂಡ.

ಏನೇ ಇರಲಿ, ಸದ್ಯಕ್ಕಂತೂ ಇಂಗ್ಲೀಷ್ನ ತಲೆಮೇಲೆ ಕೂಡಿಸಿಕೊಂಡಿರುವಂಥಾ ವ್ಯವಸ್ಥೇನೇ ಇರೋದು. ಈ ವ್ಯವಸ್ಥೆಯಲ್ಲಿ ಓಡಾಡೋ ದಾಖಲೆಗಳ ಮೇಲೆ ನಮ್ಮೂರ ಹೆಸರುಗಳು ನಮ್ಮೂರ ಹೆಸರುಗಳಂತೆಯೇ ಮತ್ತೊಮ್ಮೆ ಕೇಳಿಸುತ್ತವೆ ಅಂದ್ರೆ ಸ್ವಲ್ಪವಾದರೂ ಖುಷಿಪಡಬೇಕಾದ್ದೇ.

ಒಂದೇನಪ್ಪಾ ಅಂದರೆ - ಹಳೇ ಹೆಸರುಗಳ ಬಳಕೆ ೦% ಆಗುವುದಕ್ಕೆ ಒಂದು ಕಡೇದಿನಾಂಕ ಅಂತ ಸರ್ಕಾರದೋರು ಇಟ್ಟುಕೋಬೇಕು. ಅದು ೬ ತಿಂಗಳಾದರೂ ಆಗಲಿ, ೧ ವರ್ಷವಾದರೂ ಆಗಲಿ. ಆ ದಿನಾಂಕ ಮುಗಿದ ಮೇಲೆ ಯಾವಯಾವ ದಾಖಲೆಗಳ ಮೆಲೆ ಊರಿನ ಹೆಸರು ತಪ್ಪಾಗಿರತ್ತೋ ಅವುಗಳನ್ನ ಕಸದಬುಟ್ಟಿಗೆ ಹಾಕ್ತೀವಿ ಅಂತ ಮೊದ್ಲೇ ಜನರಿಗೆ ಎಚ್ಚರಿಕೆ ಕೊಡಬೇಕು. ಆಗ್ಲೇ ಹೆಸರಿಟ್ಟಿದ್ದು ನಿಜವಾಗ್ಲೂ ಇಟ್ಟಂಗೆ. ಇಲ್ಲದಿದ್ದರೆ ನಾಯಿಬಾಲ ಡೊಂಕು ಅಂದಂಗೆ ಇನ್ನೂ Bangalore, Mysore, Belgaum... ಅಂತ ಜನ ಬಳಸೋದು ನಿಲ್ಲಿಸೋದಿಲ್ಲ (ಅವರಲ್ಲೂ ವಲಸಿಗರು, ಹೊರದೇಶ/ಹೊರರಾಜ್ಯದೋರು). ಬೆಂಗಳೂರಿನ ಬಿ.ಟಿ.ಎಂ. ಲೇಔಟಿಗೆ "ಕುವೆಂಪುನಗರ" ಅಂತ ಹೆಸರಿಟ್ಟರೂ ಅದನ್ನ ಸರಿಯಾಗಿ ಜನ ಪಾಲಿಸೋಹಾಗೆ ಮಾಡಲಿಲ್ಲವಲ್ಲ, ಹಾಗಾಗಬಾರದು.

ಇದು ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಒಂದು ಪುಟ್ಟ ಹೆಜ್ಜೆ. "ಹೆಸರಲ್ಲೇನಿದೆ?" ಅಂತ ತಮ್ಮನ್ನ ತಾವೇ ಅತೀಬುದ್ಧಿವಂತರು ಅಂದುಕೊಂಡಿರೋರು ಅನ್ನಬೋದು, ಆದರೆ ಅವರಿಗೇನು ಗೊತ್ತು ಸಂಸ್ಕೃತಿ, ಅವರಿಗೇನು ಗೊತ್ತು ನುಡಿಯ ಹಿರಿಮೆ? ಅವರಿಗೇನು ಗೊತ್ತು ಒಗ್ಗಟ್ಟು ಅಂದ್ರೆ? ಅವರಿಗೇನು ಗೊತ್ತು ಸ್ವಾಭಿಮಾನ ಅಂದ್ರೆ? ಅವರಿಗೇನು ಗೊತ್ತು ಇದರಿಂದ ನಮ್ಮ ಜನರಿಗೆ ಎಷ್ಟು ಸಂತಸವಿದೆ ಅಂತ? ಅವರಿಗೇನು ಗೊತ್ತು ಹಳ್ಳಿಯಿಂದ ಈ ಊರುಗಳಿಗೆ ಬಂದವನಿಗಾಗುವ ಬವಣೆ?

ಹಳ್ಳಿ ಮನೆಯಿಂದ ಬೇರೆ ಹೋಟಲ್ಗಳು ಕಲೀಬೇಕು

ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ಬೀದಿಯಲ್ಲಿರೋ "ಹಳ್ಳಿಮನೆ" ಅನ್ನೋ ಹೋಟಲ್ಲಲ್ಲಿ ಊಟದ್ ಚೀಟಿ ಹೇಗಿರತ್ತೆ ನೋಡಿ:

ಒಳಗೆ ಕಾಲಿಟ್ಟ ಕೂಡಲೆ ನಿಮ್ಮ ಮನೆಗೆ ಹೋದ ಅನುಭವ, ನಿಮಗಲ್ಲಿ ಅಚ್ಚಕನ್ನಡದ ಸುಸ್ವಾಗತ. ಅಲ್ಲಿನ ತಿಂಡಿ / ದರ ಪಟ್ಟಿ ಇತರ ಎಲ್ಲಾ ವಿವರಣೆ, ಜತೆಗೆ ಮನೆಗೆ ಕೊಂಡೊಯ್ಯುವ ಬುತ್ತಿ ಚೀಲದ ಹೆಸರೂ ಕನ್ನಡದಲ್ಲಿ. ಬಣ್ಣ ಬಣ್ಣದ ಕನ್ನಡದ ರಶೀದಿ ಜತೆ ನಿಮಗೆ ಸಿಗತ್ತೆ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಬೇಳೆ, ಕಾಫಿ, ಮಲೆನಾಡ ಸಂಡಿಗೆ, ಹಪ್ಪಳ, ಹೀಗೆ ರುಚಿ ರುಚಿಯಾದ ಕನ್ನಡದ ಮನೆತಿಂಡಿ ಮನೆತಿನಿಸುಗಳು. ಏನ್ ಗುರು? ಒಂದ್ಸರಿ ಓಗ್ಮ?

ಇವರಿಂದ ಮಿಕ್ಕ ಹೋಟಲ್ನೋರು ಎನ್ ಕಲೀಬೇಕಪ್ಪಾ ಅಂದ್ರೆ - ಮೆನೂನಿಂದ ಹಿಡಿದು ಬಚ್ಚಲುಮನೆ ಅಂತ ಹೇಳೋ ಬೋರ್ಡೂ, ಮಾಣಿ ಮಾತಾಡೋ ಮಾತೂ ಇಂಗ್ಲೀಷಲ್ಲೇ ಇರಬೇಕು ಅನ್ನೋದು ಅವರ ಕೀಳರಿಮೆಯಷ್ಟೆ. ಅಚ್ಚಗನ್ನಡದಲ್ಲಿ ಹಾಕಿನೋಡಿ, ಜನ ಹೇಗ್ ತುಂಬ್ತಾರೆ ಅಂತ!

[ಏನ್ ಗುರು ನುಡಿಪೋಲೀಸ್: "ರಸ್ತೆ" ಅಂತ ಒಂದಕ್ಕರಕ್ಕೆ ಬೇರೆಯೊಂದು ಒತ್ತಾಗಿ ಬರೋ ಪದದ ಬದಲು "ಬೀದಿ" ಅನ್ನೋ ಅಚ್ಚಗನ್ನಡ ಪದ ಬಳಸಿರೋದು ಸಕ್ಕತ್ ಒಳ್ಳೇದು! "ಅಡ್ಡರಸ್ತೆ" ಬದಲು "ತಿರುವು" ಅಂದಿರೋದು ಕೂಡ ಒಳ್ಳೇದು! "ನಗರ" ಅನ್ನೋದಕ್ಕಿಂತ "ಪಟ್ಟಣ" ಒಳ್ಳೇದು (ಪಟ್ಟಣ = ಪಟ್ಟ + ಅಣ = "ರಾಜಧಾನಿ"). ಆದರೆ, "ಗೃಹಭೋಜನ" ಯಾಕೆ? "ಮನೆಯೂಟ" ಅಂದ್ರೆ ಸಾಲ್ದೆ? "ಗ್ರಾಮೀಣ ಭಕ್ಷ್ಯಗಳ ಭಂಡಾರ" ಯಾಕೆ? "ಹಳ್ಳಿ ತಿಂಡಿಗಳ ಕಣಜ" ಸಾಲ್ದೆ?]

ಇದೇ ತರಹ: ಹಿಂದೀನೇ ಕನ್ನಡ ಲಿಪಿಯಲ್ಲಿ ಬರೆದರೆ ಅದು ಕನ್ನಡ ಅನ್ನಿಸಿಕೊಳ್ಳಲ್ಲ

ಹಳಿ ತಪ್ಪಿದ ರೈಲು: ಬೆಂಗಳೂರಲ್ಲಿ ಟಿಕೆಟ್ ಕಾದಿರಿಸೋ ಅರ್ಜಿ ತಮಿಳಲ್ಲಿ!

ರೈಲ್ವೇ ಇಲಾಖೆಯೋರು ಕಾದಿರಿಸೋ ಅರ್ಜಿಯಲ್ಲಿ ಈಗ ಕನ್ನಡ ಕಿತ್ತುಹಾಕಿ ಇಂಗ್ಲೀಷ್-ತಮಿಳು ಅರ್ಜಿಗಳ್ನ ಸದ್ದಿಲ್ಲದೆ ಕನ್ನಡಿಗರ ಮೇಲೆ ತುರುಕ್ತಿರೋದನ್ನ ಕನ್ನಡಪ್ರಭ ಬಯಲು ಮಾಡಿದೆ.


ರೈಲ್ವೆ ಇಲಾಖೆಯ ತಮಿಳೊಲವನ್ನು ಹೊಸದಾಗಿ ಹೇಳಬೇಕಾಗೇನಿಲ್ಲ ಬಿಡಿ. ಯಾಕೆ ಹೀಗೆ? ಯಾಕೆ ಈ ರೈಲ್ವೆಯೋರಿಗೆ ಕನ್ನಡಾಂದ್ರೆ ಅಷ್ಟು ಅಸಡ್ಡೆ? ಯಾಕಿವರಿಗೆ ತಮಿಳೂಂದ್ರೆ ಅಷ್ಟು ಒಲವು? ಉತ್ತರ ಸಕ್ಕತ್ ಸುಲಭ: ಬ್ರಿಟಿಷರಿಂದ ಬಿಡುಗಡೆ ಹೊಂದಿದಮೇಲೆ ತಮ್ಮ ಬೇರೆತನವನ್ನ ದಿಲ್ಲಿಯಲ್ಲಿ ಕಾಣಿಸೋ ಹಾಗೆ ಎತ್ತಿಹಿಡಿದೋರು ಅಂದ್ರೆ ತಮಿಳ್ರು. ತಮ್ಮ ಕೂಗು ಕೂಗಿ ಕೂಗಿ ಒಳಗೊಳಗೇ ಒಗ್ಗಟ್ಟಾಗಿ ಕೇಂದ್ರದಲ್ಲಿ ತಮಗೆ ಬೇಕಾದ ಸೌಲತ್ತು ಪಡ್ಕೊಂಡ್ರು. ತಮಿಳ್ರನ್ನ ಕಡೆಗಣಿಸಕ್ಕೆ ಆಗಲ್ಲ ಅನ್ನೋದನ್ನ ತೋರಿಸಿದರು. ರೈಲ್ವೇ ಇಲಾಖೆ ಕೇಂದ್ರಾಡಳಿತಕ್ಕೆ ಬರೋದ್ರಿಂದ ಅಲ್ಲೆಲ್ಲ ಹರಡಿದರು. ಬೆಂಗಳೂರಿಂದ ಮೈಸೂರಿಗೆ ಹೋಗೋ ರೈಲಲ್ಲೂ ಟಿ.ಟಿ.ಗಳಾಗಿ ತುಂಬ್ಕೊಂಡ್ರು, ರೈಲು ಓಡ್ಸೋರಾಗಿ ತುಂಬ್ಕೊಂಡ್ರು, ನಿಲ್ದಾಣದಲ್ಲಿ ಕಾಫಿ ಮಾರೋರಾಗಿ ತುಂಬ್ಕೊಂಡ್ರು.

ಆಗ ಕನ್ನಡಿಗ ಮಲಗಿದ್ದ. ಬಗ್ಗು ಅಂದ್ರೆ ಬಗ್ತಿದ್ದ, ಏಳು ಅಂದ್ರೆ ಏಳ್ತಿದ್ದ, ಕೂರು ಅಂದ್ರೆ ಕೂರ್ತಿದ್ದ. ತಮಿಳ್ನಾಡಲ್ಲಿ ೪ ರೈಲು ಶುರುವಾದರೆ ದೇಶ ಮುಂದುವರೀತು ಅಂತ ಪಾಯಸದ ಊಟ ಮಾಡ್ತಿದ್ದ. ಅದ್ಕೇ ಈಗ ೨೦೦೭ರಲ್ಲಿ ಬೆಂಗಳೂರಲ್ಲಿ ತಮಿಳು ಅರ್ಜಿ!

ಆದ್ರೆ ಈಗ ಕನ್ನಡಿಗ ಎಚ್ಚೆತ್ತಿದ್ದಾನೆ! ಜಾಸ್ತಿ ದಿನ ನಿಲ್ಲಲ್ಲ ಈ ನಾಟ್ಕ.

ಇನ್ನೊಂದು ಸಾರಿ ರೈಲು ಕಾದಿರಿಸಕ್ಕೆ ಹೋದಾಗ ಇಂಗ್ಲೀಷಲ್ಲಿ ಅರ್ಜಿ ತುಂಬದೆ ಕನ್ನಡದಲ್ಲಿ ಇರ್ಬೇಕು ಅಂತ ಹೋಗಿ ನಾವೆಲ್ಲ ಕ್ಯಾಕರಿಸಿ ಉಗೀಬೇಕು. ಕನ್ನಡದ ಅರ್ಜಿ ತರಿಸಿ ಕನ್ನಡದಲ್ಲೇ ತುಂಬಬೇಕು. ಅದನ್ನ ಸರಿಯಾಗಿ ಅವರ ಗಣಕಜಾಲದಲ್ಲಿ ಹಾಕಿಕೊಳ್ಳೋ ಗೋಳು ಇಲಾಖೇದು. ಟಿಕೇಟ್ ಮೇಲೆ ಕನ್ನಡದಲ್ಲಿಲ್ಲದಿದ್ದರೆ ಅದಕ್ಕೂ ಪ್ರತಿಭಟನೆ ಮಾಡಬೇಕು. "ಕಂಪ್ಯೂಟರಲ್ಲಿ ಕನ್ನಡ ಬರಲ್ಲ" ಅಂದ್ರೆ "ಅವೆಲ್ಲ ನಂಗೊತ್ತಿಲ್ಲ, ಹೇಗಾದ್ರೂ ಮಾಡಿ ಕನ್ನಡದಲ್ಲೇ ಟಿಕೆಟ್ ಮುದ್ರಿಸಿ" ಅನ್ನಬೇಕು (ಕನ್ನಡದ ತಂತ್ರಾಂಶ ತಯಾರಿಸೋ ಕಂಪನಿಗಳಿಗೂ ಇದರಿಂದ ಒಳ್ಳೇದಾಗತ್ತೆ). ಅಧಿಕಾರಿಗಳ್ಗೆ ಬರೀಬೇಕು. ಕರ್ನಾಟಕದ ಎಂಪಿಗಳಿಗೆ ಬರೀಬೇಕು. ನಮ್ಮನಮ್ಮ ಕ್ಷೇತ್ರಗಳಿಗೆ ಅವರು ಬಂದಾಗ ಅರ್ಜಿ, ಟಿಕೆಟ್ಟು ಕನ್ನಡದಲ್ಲಿರೋ ಹಾಗೆ ಮಾಡದೆ ಹೋದರೆ ಮುಂದಿನ ಸಾರಿ ವೋಟು ಬೀಳಲ್ಲ ಅಂತ ತೋರಿಸಿಕೊಡಬೇಕು.

ಆಗ ರೈಲು ಹಳೀಗ್ ಬರತ್ತೆ ನೋಡಿ!


ಇದೇ ತರಹ: ಭವ್ಯಕರ್ನಾಟಕದ ಕನಸಿಗೆ ಹುಬ್ಬಳ್ಳಿಯಲ್ಲಿ ತಮಿಳ್ ಹುಳಿ?

ಸರ್ವಜ್ಞ ಚೆನ್ನೈನಲ್ಲಿ ಬೇಡ, ತಿರುವಳ್ಳುವರ್ ಬೆಂಗಳೂರಲ್ಲಿ ಬೇಕು!

ಕಳೆದ ವಾರ ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಇದ್ದಕ್ಕಿದ್ದಂತೆ ಹಲಸೂರು ಕೆರೆ ದಂಡೆಯಲ್ಲಿ ಪ್ರತ್ಯಕ್ಷಗೊಂಡು ಮತ್ತೆ ಗೋಣಿಚೀಲ ಹೊದ್ದು ಕೂತ ಘಟನೆ ನಡೆದಿದೆ.

೨೦೦೦ದ ಇಸವಿಯಲ್ಲಿ ಡಾ ರಾಜ್ ಅವರನ್ನು ಬಿಡಬೇಕಾದರೆ ಕರ್ನಾಟಕ ಏನೇನು ಮಾಡಬೇಕು ಎಂದು "ಅಪ್ಪಣೆ"ಯಿತ್ತಿದ್ದ ಕಾಡುಗಳ್ಳ ವೀರಪ್ಪನ ಪಟ್ಟಿಯಲ್ಲಿ ಈ ಕವಿಯ ಪ್ರತಿಮೆಯನ್ನು ಬೆಂಗಳೂರಲ್ಲಿ ನಿಲ್ಲಿಸಬೇಕು ಅಂತ್ಲೂ ಇತ್ತು. ಇದಕ್ಕೆ ಆಗಿನ ನಮ್ಮ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕರುಣಾನಿಧಿಯ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ತಮಿಳುನಾಡಲ್ಲಿ ಕನ್ನಡದ ಹಿರಿಯ ಕವಿ ಸರ್ವಜ್ಞನ ಪ್ರತಿಮೆ ನಿಲ್ಲಿಸಬೇಕಿತ್ತು.

ಆದರೆ ಅದು ಮಾತ್ರ ಇವತ್ತಿನ ವರೆಗೂ ಆಗಿಲ್ಲ. ಹೀಗಿರುವಾಗ ತಿರುವಳ್ಳುವರ್ ಪ್ರತಿಮೆಯ ಮೇಲಿನ ಹೊದಿಕೆಯನ್ನು ತೆಗೆದರೆ ಕನ್ನಡಿಗರು ಹೇಗೆ ತಾನೆ ಸುಮ್ಮನಿರುತ್ತಾರೆ ಗುರು? ತಿರುವಳ್ಳುವರ್ ಹೇಳಿಕೊಟ್ಟ ಕೊಟ್ಟು ತೊಗೋಬೇಕು ಅನ್ನೋ ಸಂಸ್ಕೃತಿಯೇ ಅವನ ಭಕ್ತರಿಗೆ ಇಲ್ಲದಂತಿದೆಯಲ್ಲ ಸರ್ವಜ್ಞ!
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು,
ತನ್ನಂತೆ ಪರರ ಬಗೆದೊಡೆ,
ಕೈಲಾಸ ಬಿನ್ನಾಣವಕ್ಕು ಸರ್ವಜ್ಞ.

ತನ್ನಂತೆ ಪರರ ಬಗೆಯದ ತಿರುವಳ್ಳುವರ್ ಭಕ್ತರಿಗೆ ತನಗವರು ಬಗೆದಂತೆ ಸರ್ವಜ್ಞಭಕ್ತರು ಬಗೆದಾರೆಯೇ ಸರ್ವಜ್ಞ?

ಕರ್ನಾಟಕಕ್ಕೆ ನಿಜವಾಗಲೂ ಜನಸಂಖ್ಯೆ ತೊಂದರೇನಾ?

ಇವತ್ತು ಜಗತ್ತಿನ ಜನಸಂಖ್ಯಾ ದಿನ. ಜನಸಂಖ್ಯೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಇವತ್ತಾದರೂ ಚರ್ಚೆ ನಡೀಲಿ ಅನ್ನೋದೇ ಇದರ ಉದ್ದೇಶ. ಈ ದಿನ ಕರ್ನಾಟಕಕ್ಕೆ ಜನಸಂಖ್ಯೆ ನಿಜವಾಗಲೂ ಒಂದು ತೊಂದರೇನಾ ಅಂತ ನೋಡ್ಮ. ಬೀದೀಲಿ ಕಲ್ಲು - ಜನಸಂಖ್ಯೆ ಕಾರಣ. ತುಂಬಿ ತುಳುಕುತ್ತಿರೋ ಭ್ರಷ್ಟಾಚಾರ - ಜನಸಂಖ್ಯೆ ಕಾರಣ. ಉಗ್ರರ ಹಾವಳಿ - ಜನಸಂಖ್ಯೆ ಕಾರಣ. ಒಟ್ಟಿನಲ್ಲಿ ಈ ಜನಸಂಖ್ಯೆ ಅನ್ನೋದನ್ನ ಪ್ರತಿಯೊಂದಕ್ಕೂ ಉಗ್ದೂ ಉಗ್ದೂ ಇಡೋದು ನಮ್ಮ ಜನಕ್ಕೆ ಅದೇನು ಇಷ್ಟವೋ ಏನೋ.

ನಿಜವಾಗಲೂ ನೋಡಿದರೆ ಕರ್ನಾಟಕದ ಜನಸಂಖ್ಯೆಯ ಸಾಂದ್ರತೆ (೧ ಚದರ ಕಿ.ಮಿ.ನಲ್ಲಿರುವ ಜನ) ನೋಡಿದರೆ ಅಷ್ಟೇನಿಲ್ಲ ಅನ್ನಿಸತ್ತೆ. ಕೆಳಗಿರುವ ಪಟ್ಟಿ ನೋಡಿದರೆ ಅರ್ಥವಾಗುತ್ತೆ - ಕರ್ನಾಟಕದ ಸಾಂದ್ರತೆ ೨೦೨೬ರ ವರೆಗೆ ಅಷ್ಟೇನು ಹೆಚ್ಚಲಿಕ್ಕಿಲ್ಲ ಅಂತ. ಈ ಪಟ್ಟಿಯನ್ನು ಇಲ್ಲಿಂದ ತಯಾರಿಸಿದ್ದು. ಕರ್ನಾಟಕದ ಜನಸಂಖ್ಯೆ ಅಷ್ಟೇನು ಬೆಳಿಯಲಿಕ್ಕಿಲ್ಲ ಎನ್ನುವುದಾದರೆ ಅಕ್ಕಪಕ್ಕದ ರಾಜ್ಯಗಳಿಂದ ಜನ ಹೆಚ್ಚುಹೆಚ್ಚಾಗಿ ಇಲ್ಲಿಗೆ ವಲಸೆ ಬರುವುದರಲ್ಲಿ ಸಂದೇಹವಿಲ್ಲ. ತಡೆಯಿಲ್ಲದ ವಲಸೆಯಿಂದ ಕರ್ನಾಟಕದಲ್ಲಿ ಕನ್ನಡಿಗರ ಪಾಲೇನಾದೀತು ಎಂದು ನೀವೇ ಯೋಚಿಸಿ. ಒಟ್ಟಿನಲ್ಲಿ ಕರ್ನಾಟಕದ ಜನಸಂಖ್ಯಾ ಸಾಂದ್ರತೆ ಅಷ್ಟೇನು ಹೆಚ್ಚಾಗಿಲ್ಲ. ಇನ್ನೂ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಸುಳ್ಳೇ.










































































































ರಾಜ್ಯ200120062011201620212026
ಕರ್ನಾಟಕ276293310325338349
ಆಂಧ್ರ277293308321333342
ಮಹಾರಾಷ್ಟ್ರ315341366390413433
ಹರಿಯಾಣ478527575621664703
ತಮಿಳುನಾಡು480501519534545552
ಪಂಜಾಬ್484517550578602622
ಉ.ಪ್ರದೇಶ6907618339059741033
ಕೇರಳ819856889918941959
ಬಿಹಾರು8819641038110311621209
ಪ.ಬಂಗಾಳ9039601008105410971133

ಹಾಗೇ ಒಂದೆರಡು ಬೆಳವಣಿಗೆಹೊಂದಿರುವ ಹೊರದೇಶಗಳ ಇವತ್ತಿನ (೨೦೦೭ರ ಮಾಹಿತಿ; ಕರ್ನಾಟಕದ ಸಾಂದ್ರತೆಯನ್ನು ಮೇಲಿನ ಪಟ್ಟಿಯಿಂದ ತೊಗೊಂಡಿದೆ, ಇತರ ದೇಶಗಳ ಮಾಹಿತಿಯನ್ನು ವಿಕಿಪೀಡಿಯಾದಿಂದ ತೊಗೊಂಡಿದೆ) ಜನಸಂಖ್ಯಾ ಸಾಂದ್ರತೆಯನ್ನು ಕರ್ನಾಟಕದ ಸಾಂದ್ರತೆಗೆ ಹೋಲಿಸೋಣ:

























ಕರ್ನಾಟಕ293
ಜರ್ಮನಿ231
ನೆದರ್ಲ್ಯಾಂಡ್ಸ್394
ಜಪಾನ್337
ಇಸ್ರೇಲ್303

ಇದರಿಂದ ಸ್ಪಷ್ಟವಾಗಿ ಗೊತ್ತಾಗುವುದೇನೆಂದರೆ - ನಮ್ಮ ಸಮಸ್ಯೆಗಳಿಗೆ ಜನಸಂಖ್ಯೆಯೇ ಮೂಲ ಎನ್ನುವುದು ಸರಿಯಲ್ಲವೇ ಅಲ್ಲ! ಕರ್ನಾಟಕಕ್ಕೆ ಜರ್ಮನಿ-ನೆದರ್ಲ್ಯಾಂಡ್ಸ್-ಜಪಾನ್-ಇಸ್ರೇಲ್-ಗಳಿಗಿಲ್ಲದ ಜನಸಂಖ್ಯೆಯ ಸಮಸ್ಯೆ ಇಲ್ಲ. ಹೌದು, ಉತ್ತರಪ್ರದೇಶಕ್ಕಿದೆ, ಕೇರಳಕ್ಕಿದೆ, ಬಿಹಾರಕ್ಕಿದೆ, ಪ.ಬಂಗಾಳಕ್ಕಿದೆ, ಆದರೆ ನಮಗೇನಿಲ್ಲ. ನಮ್ಮ ಸಮಸ್ಯೆಗಳ ಮೂಲ ಜನಸಂಖ್ಯೆಯಲ್ಲ, ಆ ಜನಸಂಖ್ಯೆ ನಾಡಿನ ಏಳ್ಗೆಗಾಗಿ ಏನು ಮಾಡುತ್ತಿದೆ ಅನ್ನೋದು. ಜರ್ಮನ್ನರು, ಡಚ್ಚರು, ಜಪಾನಿಯರು, ಇಸರೇಲಿಗಳಿಗೂ ಕನ್ನಡಿಗರಿಗೂ ಬೆಳವಣಿಗೆಯಲ್ಲಿ, ಜೀವನಶೈಲಿಯಲ್ಲಿ ವೆತ್ಯಾಸವಿದೆ ಅಂದರೆ ಕಾರಣ ಜನಸಂಖ್ಯೆಯಲ್ಲ ಅನ್ನೋದು ಇದರಿಂದ ಸ್ಪಷ್ಟವಾಗಬೇಕು. ಸುಮ್ಮನೆ ಭಾರತದ ಜನಸಂಖ್ಯೆ ಜಾಸ್ತಿ ಇದೆ ಅಂತ ಒಬ್ಬ ಕನ್ನಡಿಗ ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹುಟ್ಟಿಸಬೇಕು, ಕನ್ನಡಿಗರು ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕು!

ನಮ್ಮ ಮೇಷ್ಟ್ರೇ "ಮನೆಗೆ ಮಾರಿ, ಪರರಿಗೆ ಉಪಕಾರಿ" ಆದರೆ?

ಇವತ್ತಿನ ವಿ.ಕ.ದಲ್ಲಿ ನಮ್ಮ ಶಿಕ್ಷಕರು ಹೇಗೆ ಅಮೇರಿಕಕ್ಕೆ ಸೇವೆ ಸಲ್ಲಿಸಬಹುದು ಅಂತ ಬೋ ಪಸಂದಾಗಿ ಸುಧನ್ವಾ ದೇರಾಜೆ ಅನ್ನೋರು ಹೇಳಿದಾರೆ ನೋಡಿ.

ಅಮೇರಿಕಕ್ಕೆ ಸೇವೆ ಮಾಡಿ ದುಡ್ಡು ಮಾಡಿಕೊಳ್ಳೋದು ತಪ್ಪಲ್ಲ. ಗಣಕದ ಮುಂದೆ ಕೂತು ಅಲ್ಲಿಯ ವಿದ್ಯಾರ್ಥಿಗಳಿಗೆ ಕಲಿಸುವುದು ತಪ್ಪಲ್ಲ. ಆದರೆ ತೊಂದರೆಯೇನು ಗೊತ್ತಾ? ಇಂಥವರೇ ಸಮಾಜದಲ್ಲಿ ಮೇಲುಗರು (ಶ್ರೇಷ್ಠರು) ಅನ್ನಿಸಿಕೊಳ್ಳುವ ಕಾಲವೂ ಬರುವ ಸಾಧ್ಯತೆಯಿದೆ. ದುಡ್ಡಿನ ಆಸೆಗಾಗಿ ಬರಬರುತ್ತಾ ನಮ್ಮ ಒಳ್ಳೊಳ್ಳೇ ಶಿಕ್ಷಕರು ಈ ಕೆಲಸಕ್ಕೆ ಅರ್ಜಿ ಹಾಕಲು ಶುರುಮಾಡಿದರೆ ಚೊಂಬೋ ಚೊಂಬು!

ಸಮಾಜದಲ್ಲಿರುವ ಬುದ್ಧಿವಂತ ಶಿಕ್ಷಕರು ಈ ಬಲೆಗೆ ಬಿದ್ದರೆ ಇಲ್ಲಿನ - ಎಂದರೆ ನಮ್ಮ ಕನ್ನಡನಾಡಿನ ಶಿಕ್ಷಣ ವ್ಯವಸ್ಥೆ ಬಂಜರುಭೂಮಿಯಾಗುವುದಿಲ್ಲವೆ? "ಓ" ಎಂದರೆ "ಟೋ" ಅನ್ನಕ್ಕೆ ಬರದೇ ಇರೋರೆಲ್ಲ ಕನ್ನಡದ ಮಕ್ಕಳಿಗೆ ಪಾಠ ಹೇಳಿಕೊಡಕ್ಕೆ ಮುಂದಾಗುವುದಿಲ್ಲವೆ?

ಈ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ ನಮ್ಮ ಶಿಕ್ಷಕರಿಗೆ ಕರ್ನಾಟಕದಲ್ಲೇ, ಕನ್ನಡದಲ್ಲಿ ಪಾಠ ಮಾಡುತ್ತಲೇ ಒಳ್ಳೇ ಸಂಬಳ ಸಿಗಬೇಕು, ಒಳ್ಳೊಳ್ಳೆ ಯೋಜನೆಗಳನ್ನು ಇಲಾಖೆಯವರು ಹಾಕಿಕೊಂಡು ಶಿಕ್ಷಣ ವ್ಯವಸ್ಥೆಯನ್ನು ಕೆಳಗಿಂದ ಮೇಲುವರೆಗೂ ರಿಪೇರಿ ಮಾಡಬೇಕು. ಹಾಗೆ ರಿಪೇರಿಯಾದ ಶಿಕ್ಷಣ ವ್ಯವಸ್ಥೆಯಿಂದ ಕನ್ನಡಿಗರಿಗೆ ಕೇಳಿಕೇಳಿದಷ್ಟು ಅನ್ನ ಹುಟ್ಟಬೇಕು. ಪಡೆದವರು "ಕೆರೆಯ ನೀರನು ಕೆರೆಗೆ ಚೆಲ್ಲಿ" ಅಂದಹಾಗೆ ತಿರುಗಿ ಅದೇ ಶಿಕ್ಷಣ ವ್ಯವಸ್ಥೆಗೆ ದೇಣಿಗೆಗಳನ್ನು ಕೊಡಬೇಕು.

ಒಟ್ಟಿನಲ್ಲಿ ಈ ಕೆಲಸಕ್ಕೆ ನಮ್ಮ ಜನ ಹೋಗಲಿ, ದುಡ್ಡು ಮಾಡಲಿ, ಆದರೆ ಅವರೇ ಈ ನಾಡಿನ ಶ್ರೇಷ್ಠ ಶಿಕ್ಷಕರು ಅಂತ ಜನರು ಅನ್ನೋ ಕಾಲ ಬಂದರೆ ನಾವು ಉಣ್ಣುತ್ತಿರುವುದು ಮುದುಕಿ ಹಬ್ಬದಲ್ಲಿ ಅಂತ್ಲೇ ಅರ್ಥ. ಮೊದಲನೇದು (ಹೋಗೋದು ಬಿಡೋದು) ಜನರಿಗೆ ಬಿಟ್ಟಿದ್ದು. ಎರಡನೇದು (ಜನ ನಾಮುಂದು ತಾಮುಂದು ಅಂತ ಹೋಗದಂತೆ ಮಾಡೋದು) ಸರ್ಕಾರಕ್ಕೆ ಬಿಟ್ಟಿದ್ದು, ಉದ್ಯಮಿಗಳಿಗೆ ಬಿಟ್ಟಿದ್ದು. ಸರ್ಕಾರ ಮತ್ತು ಉದ್ಯಮಿಗಳು ನಾಡನ್ನು ಕಾಪಾಡಲು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯ ಮಾಡುವುದು ನಮ್-ನಿಮ್ಗೆ ಬಿಟ್ಟಿದ್ದು. ಪ್ರತೀ ಚುನಾವಣೆಯಲ್ಲೂ ಸುಳ್ಳು ಹೇಳಿ ಹೇಳಿ ಮತ ಗಿಟ್ಟಿಸಿಕೊಳ್ಳೋ ರಾಜಕಾರಣಿಗಳಿಗೆ ಕೇಳಬೇಕು - "ಕನ್ನಡದ ಶಿಕ್ಷಣ ವ್ಯವಸ್ಥೆಯನ್ನು ಸರಿಮಾಡಲು ಏನು ಯೋಜನೆ ಹಾಕಿಕೊಂಡಿದ್ದೀರಿ?" ಅಂತ, "ನಮ್ಮ ಗುರುಗಳೆಲ್ಲ ನಮಗೆ ಪಾಠ ಹೇಳದೆ ಅಮೇರಿಕಕ್ಕೆ ಹೇಳಿಕೊಡುತ್ತಿದ್ದಾರಲ್ಲ, ಕನ್ನಡನಾಡು ಒಳ್ಳೆಯ ಶಿಕ್ಷಕರಿಲ್ಲದೆ ಕೊರಗುವ ದಿನ ಬರುವಂತಿದೆಯಲ್ಲ, ಅದಕ್ಕೇನು ಮಾಡುತ್ತೀರಿ?" ಅಂತ.

ಅಂದಹಾಗೆ...ಹೀಗೆ ಭಾರತದ ಹಳ್ಳಿ-ಹಳ್ಳಿಗಳಲ್ಲಿ ಆಳುಗಳನ್ನಿಟ್ಟುಕೊಂಡು ಇಂಗ್ಲೀಷಿನವರು ಲಾಭ ಪಡೀಬೋದು ಅಂತಾನೇ ಮೆಕಾಲೆ ಇಲ್ಲಿ ಇಂಗ್ಲೀಷ್ ಶಿಕ್ಷಣ ವ್ಯವಸ್ಥೆಯ ಬೀಜವನ್ನು ಬಿತ್ತಿದ್ದ ಅಂತ ಕಾಣತ್ತೆ! ನಮ್ಮ ಜನರಿಗೆ ಈಗಲೂ ಅರ್ಥವಾಗಿಲ್ಲ - ಇದರಿಂದ ನಾವೇ ನಮ್ಮ ಮನೆಗೇ ಮಾರಿಗಳಾಗ್ತಿದೀವಿ, ಪರರಿಗೆ ಉಪಕಾರಿಗಳಾಗ್ತಿದೀವಿ ಅಂತ.

ಈ ಸುಡುಗಾಡನ್ನು ಸುಡಬೇಕು! ಎದ್ದೇಳಬೇಕು, ಸಾಧನೆಯ ಬೆಟ್ಟದ ತುದಿಯನ್ನು ಮುಟ್ಟಿಸುವಂತಹ ಕನ್ನಡದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಕನ್ನಡಿಗ ಎದ್ದೇಳಬೇಕು! ಸಾಧ್ಯ! ಇದು ಸಾಧ್ಯ! ಬನ್ನಿ! ಎದ್ದೇಳಿ!

ನಮ್ಮ ದುಡ್ಡಿಂದ ಕನ್ನಡದ ಬೆಳವಣಿಗೆಯಲ್ಲ, ಹಿಂದಿ ಪ್ರಚಾರ!

ನಮ್ಮ ರಾಜಕಾರಣಿಗಳಿಗೆ ಭಾರತದ ಒಕ್ಕೂಟ ವ್ಯವಸ್ಥೆ ಅಂದ್ರೆ ಏನು ಅಂತ ಎಷ್ಟು ಅರ್ಥ ಆಗಿದೆ ಅನ್ನೋದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ (ಇವತ್ತಿನ ವಿ.ಕ.):

ರಾಜ್ಯ ಹಿಂದಿ ಪ್ರಚಾರ ಸಮಿತಿಯ ೩೩ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ [ಡಿ.ಎಚ್. ಶಂಕರಮೂರ್ತಿ] ಭಾನುವಾರ ಮಾತನಾಡಿ, ಹಿಂದಿ ದೇಶದ ಸಂಪರ್ಕ ಭಾಷೆ, ಇದರ ಪ್ರಸಾರಕ್ಕೆ ಮಹತ್ವ ಕೊಡಬೇಕು ಎಂದರು.

ಹಿಂದಿ ದೇಶದ ಸಂಪರ್ಕ ಭಾಷೆ ಈಗಾಗಲೇ ಆಗಿದೆ ಅನ್ನೋದು ಎಷ್ಟು ನಿಜ? ಹಾಗಾಗಬೇಕು ಅನ್ನೋದಾದರೂ ಎಷ್ಟು ಸರಿ? ಕನ್ನಡನಾಡಿಗೂ ತಮಿಳುನಾಡಿಗೂ ಮಾತುಕತೆ ಹಿಂದಿಯಲ್ಲೇಕೆ ಆಗಬೇಕು? ಕನ್ನಡಕ್ಕೂ ಹಿಂದಿಗೂ ಯಾವುದೇ ನಂಟೂ ಇಲ್ಲ ಅಂತ ಇಡೀ ಜಗತ್ತೇ ಸಾರಿ ಸಾರಿ ಹೇಳುತ್ತಿರುವಾಗ ಇದ್ಯಾವ ಪೆದ್ದತನ? ಇದು ಒಂದು ಪ್ರಜಾಪ್ರಭುತ್ವಕ್ಕೆ ಸರಿಹೊಂದುತ್ತಾ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಾವು, ಪ್ರಭುಗಳು ಹಿಂದಿಯವರು ಎಂದರೆ ಹೇಗೆ? ಹಿಂದಿಯನ್ನು ರಾಜ್-ಭಾಷಾ ಎಂದು ಮೆರೆಸುವುದು ಸರಿಯೆ? ವಾದಕ್ಕಾಗಿ ಸಂಪರ್ಕಭಾಷೆ ಎಂದು ಒಪ್ಪಿಕೊಂಡರೂ ಹಿಂದಿಯ ಪ್ರಚಾರಕ್ಕಾಗಿ ಪ್ರತಿಯೊಂದು ಊರಿನಲ್ಲೂ "ಹಿಂದೀ ಪ್ರಚಾರ ಸಭಾ" ಯಾಕೆ ಬೇಕು? ಕೆಲವೇ ಕೆಲವು ತರ್ಜುಮೆಗಾರರಿಗೆ ಕಲಿಸಿದರೆ ಸಾಲದೆ?

ಶಂಕರಮೂರ್ತಿಗಳು ಕರ್ನಾಟಕದಲ್ಲಿ ಹಿಂದಿ ಪ್ರಚಾರಕ್ಕೆ ದುಡ್ಡು ಬೇರೆ ಕೊಡಿಸುತ್ತಾರಂತೆ!

ಹಿಂದಿ ಪ್ರಚಾರ ಸಮಿತಿ, ಎಷ್ಟು ಅನುದಾನ ಅಗತ್ಯವಿದೆ ಎಂಬ ಮಾಹಿತಿಯೊಡನೆ ಮನವಿ ಸಲ್ಲಿಸಬೇಕು. ನಿಶ್ಚಿತವಾಗಿಯೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಅಬ್ಬಬ್ಬಬ್ಬಬ್ಬ! ಕನ್ನಡನಾಡಿನಲ್ಲಿ ಕನ್ನಡಿಗರು ಕಟ್ಟುವ ತೆರಿಗೆಯಿಂದ ಕನ್ನಡಿಗರಿಗೇ ಹಿಂದಿ ಪ್ರಚಾರ! ಅದ್ಭುತ ಕಣ್ರೀ! ಎರಡು ನಿಮಿಷ ರಾಜ್ಯಗಳ ನಡುವೆಯ ಮಾತುಕತೆಗೆ ಹಿಂದಿಯನ್ನು ಉಪಯೋಗಿಸುವುದು ಸರಿ ಅಂತ ಒಪ್ಪಿಕೊಂಡರೂ ಅದು ರಾಜ್ಯಸರ್ಕಾರದ ಜೇಬಿನಿಂದ ಯಾಕೆ ಹೋಗಬೇಕು? ಕನ್ನಡ ಸಾಹಿತ್ಯ ಪರಿಷತ್ತಿಗೆ ಹಣ ಕೊಡಕ್ಕೆ ಮೀನ-ಮೇಷ ಏಣಿಸೋ ಸರ್ಕಾರಕ್ಕೆ ಹಿಂದಿಗೆ ಎಲ್ಲಿಂದ ಹಣ ಬಂತು ಸ್ವಲ್ಪ ಕೇಳು ಗುರು!

ಇಷ್ಟು ಸಾಲದು ಅನ್ನೋ ಹಾಗೆ ಕೃಷ್ಣಯರ್ ಅನ್ನೋ ಒಬ್ಬ ಹಿಂದೀಭಕ್ತ ಅದೇ ಸಭೆಯಲ್ಲಿ ಹೇಳಿದ್ದು ನೋಡಿ:

ಸಂಸತ್ತಿನಲ್ಲಿ ಹಿಂದಿ ಮಾತಾಡದಿದ್ದಲ್ಲಿ ಇತರರಿಂದ ಪ್ರತಿಕ್ರಿಯೆ ಬರುವುದು ಕಷ್ಟ

ಅಲ್ಲ ಗುರು - ಯಾವ ಸಂಸತ್ತಿನಲ್ಲಿ ನಮ್ಮ ಭಾಷೆಯಲ್ಲಿ ಮಾತಾಡಿದರೆ ಪ್ರತಿಕ್ರಿಯೆ ಬರೋದು ಕಷ್ಟವೋ ಅದು ನಿಜವಾಗಲೂ ನಮ್ಮ ಸಂಸತ್ತಾ ಅನ್ನೋ ಸಂದೇಹವೇ ಬರಲ್ವಾ? ಅದೇ ಇವತ್ತಿನ ದಿನ ಕಟ್ಟುತ್ತಿರೋ ಯೂರೋಪು ಒಕ್ಕೂಟದಲ್ಲಿ ಒಕ್ಕೂಟದ ಸದಸ್ಯ ರಾಜ್ಯಗಳ ಭಾಷೆಗಳಿಗೆ ಯಾವ ಸ್ಥಾನ ಇದೆ ಅಂತ ಇಲ್ಲಿ ನೋಡಿ. ಇದನ್ನು ನೋಡಾದ್ರೂ ಭಾರತ ಕಲೀಬಾರದೆ? ಯೂರೋಪಿನವರಿಗೆ ಇಡೀ ಯೂರೋಪಿನಲ್ಲಿ ಫ್ರೆಂಚನ್ನೋ ಜರ್ಮನ್ನನ್ನೋ "ಸಂಪರ್ಕಭಾಷೆ" ಅಂತೇನಾದ್ರೂ ಅಂದ್ರೆ ರಾತ್ರೋರಾತ್ರಿ ಯೂರೋಪ್ ಒಡೆದು ಚಿಂದಿಯಾಗೋಗತ್ತೆ! ಇರಲಿ. ಈ ಭೂಪ ಶಂಕರಮೂರ್ತಿಗಳಿಗೆ "ನೀವು ಮುಂದೆ ಲೋಕಸಭೆಗೇನಾದರೂ ಹೋದರೆ ನಿಮಗೆ ಹಿಂದಿ ಬೇಕಾಗತ್ತೆ", ಅದ್ದರಿಂದ (ಮೂರ್ತಿಗಳಿಗೆ ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲಿ) ಹಿಂದಿ ಪ್ರಚಾರಕ್ಕೆ ಕಾಸು ಕೊಡಿ ಅಂದಂಗಿಲ್ವಾ?

ಅಲ್ಲೇ ಕೂತಿದ್ದ ಮುಂದಿನ ಮಹಾನುಭಾವ ಯಾರೋ ಸುಧಾಕರ್ ಚತುರ್ವೇದಿ ಅಂತೆ. ಈ ವಯ್ಯ ಹೇಳೋದು ನೋಡಿ:

[...]ಹಿಂದಿಯನ್ನು ವಿಶೇಷ ಸಂಪರ್ಕ ಕೊಂಡಿಯೆಂದು ಮಾನ್ಯ ಮಾಡಲಾಗಿದೆ. ಇದರಿಂದ ಪ್ರಾಂತೀಯ ಭಾಷೆಗಳ ಅಸ್ತಿತ್ವಕ್ಕೆ ಭಂಗ ಬರುವುದಿಲ್ಲ [...]

ಇವರಿಗೆ ಹಿಂದಿ ಬಿಟ್ಟು ಮಿಕ್ಕಿದ್ದೆಲ್ಲ "ಪ್ರಾಂತೀಯ ಭಾಷೆ" - ಬ್ರಿಟಿಷರು ಹೇಳಿದಂಗಿದೆ ಮಾತು! ಇವರಿಗೆ ಈ ಭಾಷೆಗಳು ಅಸ್ತಿತ್ವದಲ್ಲಿದ್ದರೆ ಸಾಕು. ಇವರಿಗೇನು ಗೊತ್ತು ಭಾಷೆಯ ಹಿರಿತನ? ಇವರಿಗೇನು ಗೊತ್ತು ಕನ್ನಡಿಗನ ಕನಸು? ಇವರಿಗೇನು ಗೊತ್ತು ಕನ್ನಡದಲ್ಲಿ ಇನ್ನೂ ಏನೇನು ಆಗಬೇಕು ಅಂತ? ಇವರಿಗೇನು ಗೊತ್ತು ಕನ್ನಡಿಗ ಕಾಣುತ್ತಿರುವ ಕನ್ನಡದಲ್ಲೇ ಉನ್ನತ ಶಿಕ್ಷಣದ ಕನಸು? ಇವರಿಗೆ ಕನ್ನಡದ ಅಸ್ತಿತ್ವ ಒಂದೇ ಸಾಕು. ಆದರೆ ಅಸ್ತಿತ್ವ ಏನು ಬಿಟ್ಟಿ ಬರಲ್ಲ - ಆ ಅಸ್ತಿತ್ವಕ್ಕೂ ಮಚ್ಚಿನ ಏಟು ಬೀಳ್ತಿದೆ - ಯಾಕೆ ಅಂದರೆ ಈ ಉಪಯೋಗವಿಲ್ಲದ ಹಿಂದಿ ಪ್ರಚಾರಕ್ಕೆ ಹಾಕೋ ದುಡ್ಡನ್ನ ಕನ್ನಡದ ಪ್ರಚಾರಕ್ಕೆ ಹಾಕಬಹುದು. ಕನ್ನಡದಲ್ಲಿ ಆಗಬೇಕಾದ್ದು ಬಹಳ ಇದೆ.

ಹೋಗಲಿ. ಕರ್ನಾಟಕದ ಉನ್ನತಶಿಕ್ಷಣ ಸಚಿವರಿಗೆ ನಾವು ಸಂಬಳ ಕೊಡೋದು ಯಾಕೆ? ಕನ್ನಡಿಗರ ಉನ್ನತ ಶಿಕ್ಷಣಕ್ಕಾಗಿ ನಾಡಿನಲ್ಲಿ ಯಾವಯಾವ ಏರ್ಪಾಟಿರಬೇಕು? ಕನ್ನಡದಲ್ಲೇ ಉನ್ನತಶಿಕ್ಷಣ ಸಿಗಬೇಕಾದರೆ ಏನು ಮಾಡಬೇಕು? ಉನ್ನತಶಿಕ್ಷಣದ ಮೂಲಕ "ಮೇಲುಗರಲ್ಲಿ ಮೊದಲ್" ಅನ್ನೋ ಬಿರುದನ್ನ ಕನ್ನಡಿಗರು ಪಡೆಯಬೇಕು ಅನ್ನೋ ನಮ್ಮ ಕನಸನ್ನ ಆಗುಮಾಡಿಸಲಿ ಅಂತ ತಾನೆ? ಅದನ್ನು ಬಿಟ್ಟು ನಮ್ಮ ಡಿ.ಎಚ್. ಶಂಕರಮೂರ್ತಿಗಳಿಗೆ ಹಿಂದಿ ಪ್ರಚಾರಕ್ಕೆ ಸಹಾಯ ಮಾಡಬೇಕು ಅಂತ ಹೇಳಿದೋರು ಯಾರು? ಉನ್ನತಶಿಕ್ಷಣ ಮಂತ್ರಿಗೂ ಹಿಂದಿ ಪ್ರಚಾರಕ್ಕೂ ಎತ್ತಣಿಂದೆತ್ತಣ ನಂಟಯ್ಯ?

ಕೇಳಣ್ಣ..ಮಿರ್ಚಿಗೆ ಬಂತು ಬ್ಯಾಡಗಿ ಬಣ್ಣ!

ಕೊನೆಗೂ ಮಿರ್ಚಿಗೆ ಒಸಿ ಬ್ಯಾಡಗಿ ಬಣ್ಣ ಬಂತು ನೋಡಿ!

ಕರ್ನಾಟಕದಲ್ಲಿ ಕನ್ನಡಕ್ಕೆ "ಮಾರುಕಟ್ಟೆ ಇಲ್ಲ", "ಕನ್ನಡದ ಹಾಡುಗಳಿಗೆ ಹಕ್ಕುಗಳನ್ನು ಪಡೆಯುವುದು ಬಹಳ ಕಷ್ಟ"...ಅಂತೆಲ್ಲ ಅಂದುಕೊಂಡು ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದ ಬೆಂಗಳೂರಿನ ಎಫ್.ಎಂ. ವಾಹಿನಿಗಳಲ್ಲಿ ಮಿರ್ಚಿಯೂ ಒಂದು.

powered by ODEO

ನಿಮಗೆ ನೆನಪಿರಬಹುದು, ೨೦೦೬ ರ ಏಪ್ರಿಲ್ ನಲ್ಲಿ ೯೩.೩ ಕಂಪನಾಂಕದಲ್ಲಿ ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ವಾಹಿನಿಯನ್ನು ಆರಂಭಿಸಿದಾಗ ಕೇಳುಗರನ್ನು ತನ್ನತ್ತ ಸೆಳೆಯಲು ಬಳಸಿಕೊಂಡದ್ದು ನಾಗಾಭರಣ, ಕವಿತ ಲಂಕೇಶ್, ಗಿರೀಶ್ ಕಾಸರವವಳ್ಳಿ, ಜಗ್ಗೇಶ್ ಮುಂತಾದ ಕನ್ನಡ ಮನರಂಜನೆ-ಲೋಕದ ದೊಡ್ಡದೊಡ್ಡ ಹೆಸರುಗಳನ್ನೇ. ಆದರೆ ಬರಬರುತ್ತ ಅದೇನು ತಲೆ ತಿರುಗಿತೋ ಕಾಣೆ...ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಾಲ್ಕು ಜನ ವಲಸಿಗರನ್ನು ಕಂಡು ಅಂಥವರೇ ಇಡೀ ಬೆಂಗಳೂರಿನಲ್ಲೆಲ್ಲ ಇರುವ ಜನ ಅಂತ ತಮಗೆ ತಾವೇ ಅಂದುಕೊಂಡು ಹಿಂದಿಯ ಹುಚ್ಚು ಹಿಡಿಸಿಕೋತು. ಹಿಂದಿ ಹಾಡು, ಹಿಂದಿ ಜಾಹೀರಾತು...ಹೀಗೆ. ಜನ ಕೇಳಲಿ ಬಿಡಲಿ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಬೆಂಗಳೂರಿನ ನಂಬರ್ ೧ ವಾಹಿನಿ ಎಂದು ಕೊಚ್ಚಿಕೊಂಡಿದ್ದೇನು! ಅಬ್ಬಬ್ಬಬ್ಬಬ್ಬ! ಎಷ್ಟು ಸರಿ ಸುಳ್ಳು ಹೇಳಿದರೂ ಕೇಳುಗರನ್ನು ಸಕ್ಕತ್ತಾಗಿ ಕಳೆದುಕೊಂಡಿದ್ದು ಸುಳ್ಳಾಗಲ್ಲವಲ್ಲ? ಕನ್ನಡ ಹಾಡು ಕಡಿಮೆ ಮಾಡಿದ್ದರಿಂದ ಬೆಂಗಳೂರಿನಲ್ಲಿ ನೆಲೆ ಕಳೇದುಕೊಳ್ಳುವ ಸ್ಥಿತಿ ಬಂದಿತ್ತು ಮಿರ್ಚಿಗೆ.

೨೪ ಘಂಟೆಗಳ ಏಕೈಕ ಕನ್ನಡ ವಾಹಿನಿ ಎಂದು ಒಳ್ಳೇ ಹೆಸರು ಮಾಡಿದ್ದ ಎಸ್ ಎಫ್. ಎಂ. ೯೩.೫ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಸಮಯದಲ್ಲಿ ತನ್ನ ಒಲವು ಎಲ್ಲಿಗೆ ಎನ್ನುವುದನ್ನು ತೋರಿಸುತ್ತ ಕನ್ನಡವನ್ನು ಕಡಿಮೆ ಮಾಡಿದೆ ಬೇರೆ! ಹೀಗಾಗಿ ಒಂದು ಕಡೆ ಕನ್ನಡ ಹಾಡುಗಳಿಗಾಗಿ ಹಾತೊರೆಯುತ್ತಿರುವ ಬೆಂಗಳೂರಿನ ಜನತೆ, ಮತ್ತೊಂದು ಕಡೆ ಕನ್ನಡ ಪ್ರಸಾರವನ್ನು ಕಡಿಮೆ ಮಾಡಿದ್ದ ಎಸ್ ಎಫ್. ಎಂ., ಮಗದೊಂದು ಕಡೆ ಬೆಂಗಳೂರಿನ ಕೇಳುಗರನ್ನು ಕಳೆದುಕೊಂಡು ಸಾಯುತ್ತಿರುವ ಮಿರ್ಚಿ. ವ್ಯಾಪಾರಿಗೆ ಇಲ್ಲಿ ಒಳ್ಳೇ ಅವಕಾಶ ಕಾಣದೆಯೇನಿಲ್ಲ, ಮಿರ್ಚಿ ಗಬಕ್ಕನೆ ಅವಕಾಶ ಹಿಡೀತು! ಸ್ವಲ್ಪ ತಲೆ ಉಪಯೋಗಿಸಿ, ಮೀನ-ಮೇಷ ಏಣಿಸದೆ ಕಳೆದ ವಾರದಿಂದ ಮಿರ್ಚಿ ಇನ್ಮೇಲೆ "ಓನ್ಲಿ ಕನ್ನಡ", "ಶೇಕಡ ೧೦ ಅಲ್ಲ, ೫೦ ಅಲ್ಲ, ೭೫ ಅಲ್ಲ ೧೦೦ ಕ್ಕೆ ೧೦೦ ಕನ್ನಡ" ಎಂದು ಡೋಲು ಹೊಡಿತಿದೆ!

ಇದು ಮಿರ್ಚಿಯ ಭವಿಷ್ಯಕ್ಕೆ ಒಳ್ಳೇ ಹೆಜ್ಜೇನೇ. ಬೆಂಗಳೂರಿನ ಇತರ ವಾಹಿನಿಗಳಿಗೂ ಇಷ್ಟು ತಲೆ ಬರಲಿ ಅಂತ ಹರಸಬೇಕು!

ಹೊರನಾಡಿನ ಕನ್ನಡ ಸಮ್ಮೇಳನಗಳಲ್ಲಿ ಕರ್ನಾಟಕದ ಏಳ್ಗೆಯ ಬಗ್ಗೆ ಚರ್ಚೆಗಳು ನಡೆಯಬೇಕು

ಕುವೈತಿನಲ್ಲಿ ಇದೇ ವರ್ಷದ ನವಂಬರ್ ೩೦ ಮತ್ತು ಡಿಸೆಂಬರ್ ೧ ರಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ ಅಂತ ಸುದ್ದಿ. ಈ ಸಮ್ಮೇಳನಗಳಲ್ಲಿ ಸಾಹಿತ್ಯ, ಕವಿಗೋಷ್ಠಿ, ಹಾಸ್ಯ ಹಾಗೂ ಮಾಧ್ಯಮ ಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ, ವಸ್ತು ಮತ್ತು ಪುಸ್ತಕ ಪ್ರದರ್ಶನಗಳು, ಬಹುಮಾನ ಕೊಡುವಿಕೆಗಳು - ಇವೆಲ್ಲ ನಡೆಯಲಿವೆ.


ಈ ಎಲ್ಲಾ ಕಾರ್ಯಕ್ರಮಗಳೇನೋ ಸರಿ. ನಡೀಬೇಕು. ಇದರಿಂದ ಹೊರನಾಡು ಕನ್ನಡಿಗರಿಗೆ ಆಗಾಗ ನಾಡಿನ ಅಗಲಿಕೆಯ ನೋವು ಕಡಿಮೆಯಾಗುವುದೇನೋ ನಿಜ, ಕನ್ನಡ ಸಂಸ್ಕೃತಿಯ ಸವಿಯನ್ನು ಸವಿಯುವ ಸದವಕಾಶ ಸಿಗುವುದೇನೋ ನಿಜ. ಆದರೆ ಇಷ್ಟಕ್ಕೇ ನಿಲ್ಲಿಸದೆ "ಕರ್ನಾಟಕದ, ಕನ್ನಡದ, ಕನ್ನಡಿಗರ ಏಳ್ಗೆ ಹೇಗೆ?", "ಕರ್ನಾಟಕದ ಸ್ಥಿತಿ ಇವತ್ತು ಹೇಗಿದೆ?", "ಕನ್ನಡ ಹೇಗೆ ಬೆಳೆಯುತ್ತಿದೆ?", "ಅದು ಎದರಿಸುತ್ತಿರುವ ತೊಂದರೆಗಳೇನು?", "ಇದಕ್ಕೆಲ್ಲ ಪರಿಹಾರ ಏನು?", "ಕರ್ನಾಟಕ ಬೆಳವಣಿಗೆ ಹೊಂದುವುದು ಹೇಗೆ?", "ಕನ್ನಡಿಗರ ಕೀರುತಿ ಮುಗಿಲುಮುಟ್ಟಬೇಕಾದರೆ ಏನೇನಾಗಬೇಕು?" - ಇಂತಹ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯಬೇಕು. ಹಾಗೇ ಕುವೈತಿನಿಂದ ಹ್ಯೂಸ್ಟನ್ನು, ಹ್ಯೂಸ್ಟನ್ನಿನಿಂದ ಸಿಡ್ನಿ, ಸಿಡ್ನಿಯಿಂದ ಟೋಕ್ಯೋ, ಟೋಕ್ಯೋದಿಂದ ದಿಲ್ಲಿ, ದಿಲ್ಲಿಯಿಂದ ಮುಂಬೈ, ಮುಂಬೈ...ಹೀಗೆ ಈ ಬಗೆಯ ಚಿಂತನೆ ನಡೆಯುತ್ತಾ ಹೋಗಬೇಕು, ಒಂದು ದೇಶದಿಂದ ಮತ್ತೊಂದಕ್ಕೆ ಸಮ್ಮೇಳನದ ತೇರು ಹೊರಟಂತೆ ಏಳ್ಗೆಯ ಚಿಂತನೆಯೂ ಹೋಗಬೇಕು. ಜೊತೆಗೆ ಒಳನಾಡಿನ ಕನ್ನಡಿಗರೂ ಒಗ್ಗೂಡಬೇಕು. ಆಗ ನಮ್ಮ ಕನಸು ನನಸಾದೀತು.
ಕುವೈತಿನಿಂದಲೇ ಇದು ಶುರುವಾದರೆ ಎಷ್ಟು ಚೆನ್ನ! ಕುವೈತ್ ಕನ್ನಡ ಕೂಟದ ತಾಣ ಇಲ್ಲಿದೆ.

ಭವ್ಯಕರ್ನಾಟಕದ ಕನಸಿಗೆ ಹುಬ್ಬಳ್ಳಿಯಲ್ಲಿ ತಮಿಳ್ ಹುಳಿ?

ತಮಿಳರು ಕೇಂದ್ರದಲ್ಲಿ ಲಾಬಿ ಮಾಡಿದ ಪ್ರಭಾವವಾಗಿ ಕರ್ನಾಟಕಕ್ಕೆ ಬರುವ "ಭಾರತೀಯ" ರೈಲುಗಳೂ ಇತ್ತೀಚೆಗೆ ತಮಿಳುಮಯವಾಗಿರುವುದು ನಾವೆಲ್ಲ ಕಂಡೇ ಇದೀವಿ. ಹುಬ್ಬಳ್ಳಿಯಲ್ಲಿ ಇಂಥಾ ಒಂದು ರೈಲಿಗೆ ಕೊಬ್ಬು ಹೆಚ್ಚಾಗಿ ಕನ್ನಡ ಶಾಲೆಗಳನ್ನೇ ಮುಚ್ಚುಹಾಕುವ, ಬದಲಿಗೆ ತಮಿಳು ಶಾಲೆ ತೆಗೆಯುವ ಹುನ್ನಾರ ಹತ್ತಿದೆ ಅಂತ ಇವತ್ತಿನ ಕನ್ನಡಪ್ರಭ ಹೇಳತ್ತೆ ನೋಡಿ.

ಪ್ರಪಂಚದಲ್ಲಿ ಉದ್ಧಾರವಾಗಿರೋ ಕೆಲವು ದೇಶಗಳ ಕಡೆಗೆ ಸ್ವಲ್ಪ ಕಣ್ಣು ಹಾಯಿಸಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ - ಜರ್ಮನಿಗೆ ಜರ್ಮನ್ ಹೇಗೋ, ಇಸ್ರೇಲಿಗೆ ಹೀಬ್ರೂ ಹೇಗೋ, ಜಪಾನಿಗೆ ಜಪಾನೀಸ್ ಹೇಗೋ, ಹಾಗೆ ಕರ್ನಾಟಕಕ್ಕೆ ಕನ್ನಡ ಅಂತ. ಜರ್ಮನ್ನರು ಎಂಜಿನಿಯರಿಂಗಿನಲ್ಲಿ ಪ್ರಪಂಚದಲ್ಲೇ ಮುಂಚೂಣಿಯಲ್ಲಿದ್ದರೆ ಅದು ಅವರ ಭಾಷೆಯಲ್ಲೇ ಅವರು ಕಲಿಕೆ ಪಡೆಯುವುದರಿಂದ. ಇಸ್ರೇಲಿಗಳು ತಂತ್ರಜ್ಞಾನದಲ್ಲಿ ಎಲ್ಲರಿಗಿಂತ ಮುಂದಿದ್ದರೆ ಅದು ಅವರ ಹೀಬ್ರೂ ಕಲಿಕೆ ವ್ಯವಸ್ಥೆಯಿಂದ. ಜಪಾನೀಯರು ಪ್ರಪಂಚಕ್ಕೇ ಎಲೆಕ್ಟ್ರಾನಿಕ್ ಸಾಮಾನುಗಳನ್ನು ಮಾರುವಂತಾಗಿದ್ದರೆ ಅದು ಅವರು ತಮ್ಮೆಲ್ಲಾ ಕಲಿಕೆಯನ್ನು ಅವರ ಭಾಷೆಯಲ್ಲೇ ಪಡೆಯೋದರಿಂದ. ಜ್ಞಾನಪ್ರಧಾನವಾದ ಜಾಗತೀಕರಣ-ನಂತರದ ಪ್ರಪಂಚದಲ್ಲಿ ನಾವು ಮೇಲೆ ಬರಬೇಕಾದರೆ ನಮ್ಮ ಕಲಿಕೆ ಕೂಡ (ಅದು ಇಂಗಿನಿಯರಿಂಗೇ ಆಗಿರಲಿ ವೈದ್ಯಕೀಯವೇ ಆಗಿರಲಿ, ಯಾವ ಪಿ.ಎಚ್.ಡಿ.ನೇ ಆಗಿರಲಿ) ನಮ್ಮ ಭಾಷೆಯಲ್ಲೇ ಸಾಧ್ಯ ಅನ್ನೋದರಲ್ಲಿ ಸಂದೇಹವೇ ಇಲ್ಲ (ಹೌದು, ಇವತ್ತಿನ ದಿನ ಇದನ್ನ ಆಗುಮಾಡಿಸುವುದು ಕಷ್ಟ. ಹಾಗೆಂದ ಮಾತ್ರಕ್ಕೆ ಸೋಲೊಪ್ಪಿಕೊಳ್ಳಕ್ಕಾಗಲ್ಲವಲ್ಲ? ಕಷ್ಟ ಅನ್ನೋದನ್ನೆಲ್ಲ ಬಿಟ್ಟು ಕೂರಕ್ಕೆ ನಮಗೇನು ಕೊನೆ ಘಳಿಗೆ ಬಂದೊಕ್ಕರಿಸಿಲ್ಲವಲ್ಲ? ಕಷ್ಟವಾಗಿರೋದೆಲ್ಲ ಅಸಾಧ್ಯ ಅಂತೇನಿಲ್ಲವಲ್ಲ? ಸುಲಭವಾಗಿರೋದನ್ನೇ ಮಾಡುವುದಾದರೆ ನಾಡು ಕಟ್ಟೋದಾದರೂ ಹೇಗೆ? ಸುಮ್ಮನೆ ಹೊಟ್ಟೆ ಬೆಳೆಸಿಕೊಂಡು ಟೀವಿ ನೋಡ್ತಾ ಕೂತುಕೊಳ್ಳೋದೇ ಸುಲಭ!). ಈ ಮೇಲಿನ ದೇಶಗಳು ಉದಾಹರಣೆಗೆ ಮಾತ್ರ. ಉದ್ಧಾರವಾಗುತ್ತಿರುವ, ಆಗಿರುವ ದೇಶಗಳಾವುವೂ ತಮ್ಮ ಭಾಷೆಯನ್ನು ಬಿಟ್ಟುಕೊಟ್ಟಿಲ್ಲ.

ಒಟ್ಟಿನಲ್ಲಿ ನಮ್ಮ ಏಳ್ಗೆಗೆಗೆ ನಾಡಿನಲ್ಲೆಲ್ಲ ಒಳ್ಳೇ ಕನ್ನಡ ಮಾಧ್ಯಮ ಶಾಲೆಗಳು ಬೇಕೇ ಬೇಕು. ಇರುವ ಶಾಲೆಗಳನ್ನೂ ತಮಿಳರಿಗೆ "ನೀಗುವ" ಪ್ರಶ್ನೆಯೇ ಹುಟ್ಟುವುದಿಲ್ಲ. ತಮಿಳು ಶಾಲೆಗಳಿಗೆ ಅಂತ್ಲೇ ಒಂದು ಇಡೀ ರಾಜ್ಯವೇ ಇದೆಯಲ್ಲ? ಅಲ್ಲಿ ತಮಿಳನ್ನ ನಿಜವಾಗಲೂ ಉದ್ಧಾರ ಮಾಡುವ ಬದಲು ಹುಬ್ಬಳ್ಳಿಗೆ ಭಾರತೀಯ ರೈಲು ಹಾಕಿಕೊಂಡು ಬಂದು ಇಲ್ಲಿ ತಮಿಳು ಶಾಲೆ ಕಟ್ಟುವ ಪೆದ್ದತನ / ಹುನ್ನಾರ ಯಾಕೆ ಗುರು?

ಮೊದಮೊದಲು ಅಂಕಿ-ಅಂಶ ಹುಟ್ಟಿಸು, ಬರ್ತಾ ಬರ್ತಾ ಅದೂ ಇಲ್ಲದೆ ಬೇಕಾದ್ದು ಒದರು!

ನೆನ್ನೆ ನಡೆದ "ನಿನ್ನದೇ ನೆನಪು" ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಬಂದು ಕೂತಿದ್ದ ನೋಡಿ ಬಿಗ್ ಎಫ್ ಎಂ ೯೨.೭ ನ ಭೂಪ ಕಿರಣ್ ಶ್ರೀಧರ್ರು. ಪಾಪ ಅವನ ಕಂಪನಿಯೋರು ಬಾಯಿಪಾಠ ಮಾಡ್ಸಿದಾರೆ ಅಂತ ಕಾಣತ್ತೆ - "ಬೆಂಗಳೂರಿನಲ್ಲಿ ಕನ್ನಡ ಲೆಕ್ಕಕ್ಕಿಲ್ಲ, ಇಲ್ಲಿರೋದು ಇಂಗ್ಲೀಷೇ" ಅಂತ, ಮಹಾನುಭಾವ ಈ "ಕಲಿಕೆ"ಯನ್ನೇ ಅಲ್ಲಿ ನೆರೆದಿದ್ದವರ ಮುಂದೆ ಪ್ರದರ್ಶಿಸುತ್ತ "ಬೆಂಗಳೂರಿನ ಭಾಷೆ ಇಂಗ್ಲೀಷ್" ಅಂತ ಒದರಿದ್ದಾನೆ. ಅಲ್ಲಿದ್ದ ಪತ್ರಕರ್ತರು ಚೆನ್ನಾಗಿ ತರಾಟೆಗೆ ತೊಗೊಂಡು "ಮೊದಲು ಅಂಕಿ-ಅಂಶ ತೋರಿಸು ಮಗ್ನೆ" ಅಂದಿದಾರೆ. ಎಲ್ಲಿಂದ ತೋರಿಸುತ್ತಾನೆ? ಬೆಪ್ಪಾಗಿ ಹ್ಯಾಪೆಮೋರೆ ಹಾಕಿಕೊಂಡು ಚಡಪಡಾಯಿಸಿಬಿಟ್ಟನಂತೆ.


ಈ ಎಫ್.ಎಂ. ವಾಹಿನಿಯವರ ಯೋಗ್ಯತೆಯೇ ಇಷ್ಟು. ಅಲ್ಲೆಲ್ಲೋ ದಿಲ್ಲಿ-ಗಿಲ್ಲಿಯಲ್ಲೋ ಮುಂಬಾಯಲ್ಲೋ ಹಿಂದಿ ಹಾಡಿಗೆ ಕಾಸು ಕೊಟ್ಟಿರ್ತಾರೆ, ಅದನ್ನೇ ಭಾರತದಲ್ಲೆಲ್ಲ ಹಾಕಿ ಕಾಸು ಉಳಿಸಬೇಕು ಅನ್ನೋ ನೆಪಕ್ಕೆ ನಮ್ಮೂರಲ್ಲಿ ಇಲ್ಲದಿರೋ ಮಾರುಕಟ್ಟೆ ಇದೆ ಅಂತ ಸುಳ್ಳು ಹುಟ್ಟುಹಾಕುತ್ತಾರೆ. ಅಂಕಿ ಅಂಶಗಳನ್ನೂ ತೋರಿಸುತ್ತಾರೆ - ತಮಗೆ ಬೇಕಾದ ಹೊತ್ತಲ್ಲಿ ತಮಗೆ ಬೇಕಾದ ರಸ್ತೆಯಲ್ಲಿ ಹೋಗಿ ತಮಗೆ ಬೇಕಾದ ೪ ಜನರನ್ನು ಕೇಳಿದಂತೆ ಮಾಡಿ ಇಲ್ಲಸಲ್ಲದ ಅಂಕಿ-ಅಂಶಗಳನ್ನ ಹುಟ್ಟಿಸುತ್ತಾರೆ, ಅದನ್ನ ಇಡೀ ಬೆಂಗಳೂರಿಗೆ, ಇಡೀ ಕರ್ನಾಟಕಕ್ಕೆ ತಳಕು ಹಾಕುತ್ತಾರೆ. ಎಲ್ಲೋ ಎಂ.ಜಿ. ರಸ್ತೆಯಲ್ಲಿ ಸಿಕ್ಕ ನಾಲ್ಕು ಜನರು ಒದರಿದ್ದನ್ನ ಆಧಾರವಾಗಿಟ್ಟುಕೊಂಡು ಇಡೀ ಬೆಂಗಳೂರೇ ಹಂಗೆ ಹಿಂಗೆ ಅಂತ ಬರೀತಾರೆ. ಕೋರ್ಟು ಕಚೇರೀಗೆ ಎಳೀದೇ ಇರಲಿ ಅಂತ ಒಂದು ಸಣ್ಣ "*" ಹಾಕಿ ಕಾಣದೇ ಇರೋ ಹಂಗೆ "ನಾವು ಕೇಳಿದ್ದು ಎಂ. ಜಿ. ರಸ್ತೆಯಲ್ಲಿ ೪ ಜನರನ್ನ" ಅಂತ ನಾಚಿಕೆ ಇಲ್ಲದೆ ಬರೆದುಕೊಳ್ಳುತ್ತಾರೆ.


ಒಟ್ಟಿನಲ್ಲಿ ಅಂಕಿ-ಅಂಶ ಹುಟ್ಟಿಸೋ ಕೆಲ್ಸ ಈ ವಾಹಿನಿಗಳಿಗೆ ಹೊಸದೇನಲ್ಲ ಬಿಡಿ. ಆದರೆ ಆ ಸುಳ್ಳು ಅಂಕಿ-ಅಂಶವೂ ಇಲ್ಲದೆ ಬಾಯಿಗೆ ಬಂದಿದ್ದನ್ನ ಒದರಿದ್ದಾನಲ್ಲ ಕಿರಣ್ ಶ್ರೀಧರ್ರು...ಇವನಿಗೇನಂತೀರಿ?

ಇವತ್ತಿನ ಸಂಜೆವಾಣಿಯಲ್ಲಿ ಈ ಬಗ್ಗೆ ಬಂದ ಸುದ್ದಿ ಇಲ್ಲಿದೆ ನೋಡಿ.

ವಿನಾಯಕನಿಗೆ ಗಣೇಶನ ಮಳೆ ಕಲಿಸಿದ ಪಾಠ!

೨೫ ಚಿತ್ರಮಂದಿರದಲ್ಲಿ ಬೆಳ್ಳಿಹಬ್ಬ, ೪೧ ಚಿತ್ರಮಂದಿರದಲ್ಲಿ ನೂರುದಿನದಹಬ್ಬ ಆಚರಿಸಿಕೊಂಡು ಇನ್ನೂ ಅಬ್ಬರ ಕಡಿಮೆಗೊಳಿಸದೆ ಮುನ್ನುಗ್ಗುತ್ತಿರುವ ಮುಂಗಾರು ಮಳೆ, ೨೯ ನೆ ಡಿಸಂಬರ್ ೨೦೦೬ ರಂದು ಬಿಡುಗಡೆಗೊಳ್ಳುವ ಸಮಯದಲ್ಲಿ ಚಿತ್ರಮಂದಿರದ ಕೊರತೆ ಎದುರಿಸಿತ್ತು ಅಂದರೆ ನೀವು ನಂಬ್ತೀರಾ?







ಈ ವಾರದ "ಚಿತ್ರಪ್ರಭ" ಸಿನಿಮಾ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಸುದ್ಢಿಯಲ್ಲಿ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಿದ್ದ - ಮೂಗು ಮುರಿಯುತ್ತಿದ್ದ ಚಿತ್ರಮಂದಿರವೊಂದರ ಮಾಲಿಕ ಕಾಸಿಗಾಗಿ ಕನ್ನಡದ ಹಿಂದೆ ಹೇಗೆ ಬಿದ್ದ ಅನ್ನೋದನ್ನ ಓದಿದರೆ ಅಚ್ಚರಿ ಖಂಡಿತ! ಮತ್ತೊಂದು ವಿಶೇಷವೆಂದರೆ ಓಡದ ಬೇರೆಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಗುಂಗಿಗೆ ಬಿದ್ದಿದ್ದ ಬೆಂಗಳೂರಿನ ವಿನಾಯಕ, ನಟರಾಜ್ ಚಿತ್ರಮಂದಿರಗಳಲ್ಲಿ ಮುಂಗಾರು ಮಳೆ ನೂರುದಿನ ಆಚರಿಸಿಕೊಂಡಿದೆ. ವಿನಾಯಕ ಈಗ ಖಾಯಂ ಕನ್ನಡ ಚಿತ್ರ ಪ್ರದರ್ಶಿಸುತ್ತಿದೆ, ಕನ್ನಡ ಚಿತ್ರಗಳನ್ನು ನಾಮುಂದು-ತಾಮುಂದು ಎಂದು ನುಗ್ಗಿ ಪಡೆಯುತ್ತಿವೆ. ಇದರಿಂದ ಕಾಸು ಸಾಕಷ್ಟು ಎಣಿಸುತ್ತಿದ್ದಾರೆ! ಕನ್ನಡ ಚಿತ್ರರಂಗದ ಬಗ್ಗೆ ಯಾರುಯಾರಿಗೆ ಸಂದೇಹಗಳಿದ್ದವೋ ಅವರಿಗೆಲ್ಲ ಉತ್ತರ ಸಿಕ್ಕಿದಂತಾಗಿದೆ.
ಕಾಫಿ ತೊಗೊಳಿ, ಯೂಟ್ಯೂಬ್ ನಲ್ಲಿ ಹಾಡು ಕೇಳಿ/ನೋಡಿ!

ತಪ್ಪೊಪ್ಪಿಕೊಂಡ ಬ್ಯಾಂಗಲೋರ್ ಬಯಾಸ್?

"ಬ್ಯಾಂಗಲೋರ್ ಬಯಾಸ್" ಎಂಬ ಪುಡಿಪತ್ರಿಕೆಯ ಬರಹವೊಂದು ನಮ್ಮ ಅವಹೇಳನ ಮಾಡಿ, ನಮ್ಮನ್ನು ಕೀಳು ಜನಾಂಗ ಅಂತ ಕರೆದ ೨೪ ಗಂಟೆಯಲ್ಲಿ ಅದನ್ನು ವಿರೋಧಿಸಿ ಬೆಂಗಳೂರಿನಿಂದ ಮತ್ತು ಪ್ರಪಂಚದ ಮೂಲೆ ಮೂಲೆಗಳಿಂದ ಕನ್ನಡಿಗರು ಕ್ಯಾಕರಿಸಿ ಉಗಿದಿದ್ದಾರೆ. ಉಗಿದವರ ಸಂಖ್ಯೆ ಕಂಡು ಬೆರಗಾಗೋ ಏನೋ ಆ ಪುಡಿ-ಪತ್ರಿಕೆಯ ಸಂಪಾದಕ "ಬರಹಗಾರರ ಅನಿಸಿಕೆಗಳನ್ನು ಪತ್ರಿಕೆ ಕಡ್ಡಾಯವಾಗಿ ಒಪ್ಪುತ್ತದೆ ಅಂತೇನಿಲ್ಲ" ಎಂದು ಬರೆದಿದ್ದಾರೆ. ಅಲ್ಲ ಗುರು - ಪತ್ರಿಕೆಯ ಸಂಪಾದಕ ಅನ್ನಿಸಿಕೊಂಡವನಿಗೆ ತನ್ನ ಪತ್ರಿಕೆಯಲ್ಲಿ ನಿಂತ ನಾಡನ್ನೇ ಅವಹೇಳನ ಮಾಡುವಂತಹ ಬರಹಗಳನ್ನು ಹಾಕಬಾರದು ಅನ್ನೋ ತಿಳುವಳಿಕೆ ಬೇಡವಾ? "ಪತ್ರಿಕೆಗೂ ಬ್ಯಾಂಗಲೋರ್ ಟಾರ್ಪೆಡೋ ಅನಿಸಿಕೆಗಳಿಗೂ ಸಂಬಂಧ ಇಲ್ಲ" ಅಂತ ಅಡ್ಡಗೋಡೆಮೇಲೆ ದೀಪ ಇಟ್ಟಂತೆ ಅಂದುಬಿಟ್ಟರೆ ಸಾಲಲ್ಲ! ಇನ್ನು ಮುಂದೆ ಸಂಬಂಧ ಇಟ್ಟುಕೋಬೇಕು, ಇಂತಹ ನಾಡದ್ರೋಹಿಗಳು ಗೀಚಿದ್ದನ್ನೆಲ್ಲ ಮುದ್ರಿಸುವುದನ್ನ ಬಿಡಬೇಕು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

ಹಿಂದೀನೇ ಕನ್ನಡ ಲಿಪಿಯಲ್ಲಿ ಬರೆದರೆ ಅದು ಕನ್ನಡ ಅನ್ನಿಸಿಕೊಳ್ಳಲ್ಲ


ಕನ್ನಡದ ಪತ್ರಿಕೆಗಳಲ್ಲಿ ಓಡಾದುತ್ತಿರೋ ಈ ಎರಡು ಜಾಹೀರಾತುಗಳ ತುಣುಕುಗಳನ್ನ ಸೊಲ್ಪ ನೋಡಿ. ಮೇಲ್ನೋಟಕ್ಕೆ ಇವುಗಳಲ್ಲಿ ಯಾವ ದೋಷವೂ ಕಾಣದೆ ಇರಬಹುದು. ಆದರೆ ಮತ್ತೊಮ್ಮೆ ಗಮನ ಇಟ್ಟು ನೋಡಿ. ಒಂದು ನಾವು ಹುಟ್ಟಿದಾಗಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಎಸ್.ಬಿ.ಐ. ಬ್ಯಾಂಕಿಂದು, ಇನ್ನೊಂದು ಇತ್ತೀಚೆಗೆ ಶುರುವಾಗಿರುವ ಟೈಟನ್ ಐ+ ಎಂಬ ಕನ್ನಡಕದ ಅಂಗಡೀದು.

ಎಸ್.ಬಿ.ಐ. ಅನ್ನತ್ತೆ "ನಿಮ್ಮ ಜೊತೆ - ಸದಾ ಸರ್ವದಾ" ಅಂತ. "ಸದಾ" ಅನ್ನೋದನ್ನ ಕನ್ನಡದಲ್ಲಿ ಕೇಳಿದೀವಿ, ಆದರೆ "ಸದಾ ಸರ್ವದಾ" ಅನ್ನೋರು ನಾವಲ್ಲ ಸಾರ್, ದೂರ ಸಾವಿರಾರು ಕಿ.ಮಿ. ದೂರದಲ್ಲಿರೋ ಹಿಂದಿಯೋರು! ಹಿಂದಿಗೂ ಕನ್ನಡಕ್ಕೂ ಯಾವ ನಂಟೂ ಇಲ್ಲ. ಎರಡೂ ಬೇರೆಬೇರೆ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳು.

ಇನ್ನು ಟೈಟನ್ ಐ+ ನೋರು ಉಪಯೋಗಿಸಿರೋ "ಚಶ್ಮಿಶ್" ಅಂದ್ರೆ ಏನು ಅಂತ ಎಷ್ಟು ತಲೆ ಕೆಡಿಸಿಕೊಂಡರೂ ಕನ್ನಡಿಗರಿಗೆ ಅರ್ಥವಾಗಲ್ಲ ಬಿಡಿ. ಜಾಹೀರಾತು ಜನರಿಗೆ ನೇರವಾಗಿ ತಲುಪಬೇಕು ತಾನೆ? ಅದಕ್ಕೆ ಅವರು ಉಪಯೋಗಿಸೋ ಭಾಷೇನೇ ಸರಿ ತಾನೆ? ಅವರ ಮನಸ್ಸಿನಲ್ಲಿ ಚಿರಪರಿಚಿತವಾಗಿರೋ ವಿಷಯಗಳನ್ನ ಉಪಯೋಗಿಸಿಕೊಳ್ಳಬೇಕು ತಾನೆ? ಹಾಗಾದರೆ "ಸದಾ ಸರ್ವದಾ", "ಚಶ್ಮಿಶ್" - ಇವುಗಳಿಗೂ ಕನ್ನಡಿಗರಿಗೂ ಎಲ್ಲೆಲ್ಲಿಯ ನಂಟೂ ಇಲ್ಲವಲ್ಲ? ಈ ಕಂಪನಿಗಳು ಜಾಹೀರಾತು ಮಾಡಕ್ಕೆ ಹಾಕಿದ ದುಡ್ಡಿಗಾದರೂ ಬೆಲೆ ಬೇಡವಾ?

ಹಿಂದಿಯಲ್ಲಿದ್ದ ಜಾಹೀರಾತನ್ನು ಕನ್ನಡಕ್ಕೆ ಇಷ್ಟು ಕೆಟ್ಟದಾಗಿ ಅನುವಾದ ಮಾಡಿರೋದನ್ನ ನೋಡಿದರೆ ನಗಬೇಕೋ ಅಳಬೇಕೋ ಗೊತ್ತಿಲ್ಲ! ಘಂ ಅಂತ "ನಿಮ್ಮ ಜೊತೆ - ಎಂದೆಂದಿಗೂ" ಅನ್ನಕ್ಕೇನು? ಹಂಗೇ "ಸೋಡಾ-ಬುಡ್ಡಿ ಅಲ್ಲ" ಅನ್ನಕ್ಕೇನು ಈ ಜಾಹೀರಾತು ಮಾಡೋರಿಗೆ?

ಕನ್ನಡದಲ್ಲಿ ಜಾಹೀರಾತು ಮಾಡೋದಕ್ಕೆ ಯಾರನ್ನಾದರೂ ಇವರು ನೇಮಿಸಿಕೊಂಡಿದ್ದಾರೋ ಇಲ್ಲವೋ ಅನ್ನೋದೇ ಸಂಶಯಾಸ್ಪದವಾಗಿದೆ! ಅಥವಾ ನೇಮಿಸಿಕೊಂಡಿದ್ದರೆ ಆ ಮಹಾನುಭಾವನಿಗೆ ಬೆಳ್ಳಗಿರೋದೆಲ್ಲ ಹಾಲಲ್ಲ, ಕನ್ನಡದ ಲಿಪಿಯಲ್ಲಿ ಬರೆದಿದ್ದೆಲ್ಲ ಕನ್ನಡವಲ್ಲ ಅಂತ ತುರ್ತಾಗಿ ಅರ್ಥವಾಗಬೇಕಿದೆ! ಅದೇನು ಕನ್ನಡದಲ್ಲಿ ಹೊಸ ಜಾಹೀರಾತು ಮಾಡದೆ ಹಿಂದಿಯಲ್ಲಿರೋದನ್ನೇ ಕನ್ನಡ ಲಿಪಿಯಲ್ಲಿ ಬರೆಯೋ ಅಷ್ಟು ಸೋಮಾರಿತನವೋ ಏನೋ ಗೊತ್ತಿಲ್ಲ! ಕರ್ನಾಟಕದಲ್ಲಿ ಮಾರಾಟ ಆಗಬೇಕಾದರೆ ಕನ್ನಡದಲ್ಲಿ ಜಾಹೀರಾತು ಮಾಡಬೇಕು ಅನ್ನೋದು ಅರ್ಥವಾಗಿದೆ ಇವರಿಗೆ, ಆದರೆ ಅದರ ಲಾಭ ದಕ್ಕಬೇಕಾದರೆ ಬಳಸೋ ಕನ್ನಡ ಅಷ್ಟೇ ಸರಿಯಾಗಿರಬೇಕು ಅಂತ ಅರ್ಥವಾಗಬೇಡವೆ? ಇದೊಳ್ಳೆ ಎಲ್ಲಾ ಜಾಣ, ತುಸ ಕೋಣ ಅಂದಂಗಾಯ್ತು ಗುರು!
Related Posts with Thumbnails