ಶೇರುಮಾರುಕಟ್ಟೆಯ ಗುಟ್ಟು ಕನ್ನಡದಲ್ಲಿ ರಟ್ಟು

ಶೇರುಮಾರುಕಟ್ಟೆಯಲ್ಲಿ ದುಡ್ಡು ಸಂಪಾದಿಸಬೇಕಾ? ಹಾಗಾದ್ರೆ ಸೆಪ್ಟೆಂಬರ್ 9ನೇ ತಾರೀಕು, ಚಾಮರಾಜ್ ಪೇಟೆ, ಕನ್ನಡ ಸಾಹಿತ್ಯ ಪರಿಷತ್ಗೆ ಹೋಗೋದು ಮರೀಬೇಡಿ, ಹೆಚ್ಚಿನ ಮಾಹಿತಿಗಾಗಿ 9845413135 ಗೆ ಕರೆಮಾಡಿ ಅಂತ 29 ಆಗಸ್ಟಿನ ವಿ.ಕ. ವರದಿ ಮಾಡಿದೆ.

ಮಾರುಕಟ್ಟೆಗಳ ಒಳಸುಳಿ ಏರಿಳಿತಗಳನ್ನೆಲ್ಲಾ ಅರ್ಥ ಮಾಡ್ಕೊಳ್ತಾ ಬಂಡ್ವಾಳ ಹೂಡಿ ಕೂತಲ್ಲಿಂದ್ಲೇ ವ್ಯಾಪಾರ ಮಾಡೊ ವಿದ್ಯೆ ಈ ಶೇರು ಮಾರುಕಟ್ಟೆ ವ್ಯವಹಾರ. ಇದರ ಬಗ್ಗೆ ಮಾಹಿತಿಪೂರ್ಣ ಕಮ್ಮಟಗಳು ನಡೆಯೋದು ಅಪ್ರೂಪ ಏನಿಲ್ಲ. ಆದ್ರೆ ಅಂಥ ಒಂದು ಕಮ್ಮಟಾನ ನಮ್ ಕನ್ನಡದವರಿಗೆ ಅಂತ್ಲೇ, ನಮ್ ಕನ್ನಡ ಭಾಷೇಲೆ ಮಾಡೋ ಪ್ರಯತ್ನಗಳು ಈ ಹಿಂದ್ ನಡೆದ್ದಿದ್ದಂತೂ ಗೊತ್ತಿಲ್ಲ.
ಈಗ ಸವಿಗನ್ನಡ ಬಳಗ ಅನ್ನೋ ಒಂದ್ ಕನ್ನಡ ಸಂಘಟನೆಯೋರು ಇಂಥ ಪ್ರಯತ್ನಕ್ ಕೈ ಹಾಕಿರೋದು ನಿಜಕ್ಕೂ ಹೊಗಳಿಕೆಗೆ ಅರ್ಹ ಗುರೂ. ಅವತ್ತಿನ್ ದಿನ ಶೇರುಪೇಟೆ ಬಗ್ಗೆ ಕೆ.ಜಿ.ಕೃಪಾಲ್, ವಿನಯ್, ಅಶೋಕ್ ಐ.ಎನ್, ಕೆ.ರಾಜ್ ಕುಮಾರ್ ಅವರು ಮಾತಾಡುದ್ರೆ ಮ್ಯುಚುಯಲ್ ಫಂಡ್ ಬಗ್ಗೆ ಎಸ್.ಕೃಷ್ಣಮೂರ್ತಿಗಳು ಮಾಹಿತಿ ಕೊಡ್ತಾರೆ. ನಮ್ ಕನ್ನಡದವ್ರು ಆರ್ಥಿಕವಾಗ್ ಸಖತ್ ಬಲ ಪಡ್ಕೋಬೇಕು, ದುಡ್ ಮಾಡಕ್ ಇರೋ ಯಾವ್ ಸರಿಯಾದ್ ದಾರೀನೂ ಬಿಡ್ಬಾರ್ದು ಅನ್ನೋ ಉದ್ದೇಶ ಇಟ್ಕೊಂಡ್ ಮಾಡ್ತಿರೋ ಈ ಕಾರ್ಯಕ್ರಮಾನ ಶೇರುಗಳ ಬಗ್ಗೆ ಆಸಕ್ತಿ ಇರೋ ಕನ್ನಡದವ್ರೆಲ್ಲಾ ಭಾಗವಹಿಸೋ ಮೂಲಕ ಬೆಂಬಲ್ಸುದ್ರೆ ಮುಂದ್ ಇಂಥಾ ಹಲವಾರು ಕಾರ್ಯಕ್ರಮಗಳು ಬೇಜಾನ್ ನಡೀತಾವಲ್ಲಾ ಗುರು!

ಅಂದಹಾಗೆ ಜೇಬಲ್ಲಿ ನೂರು ರೂಪಾಯಿ ಇಟ್ಕೊಂಡ್ ಹೋಗಿ.

ಹಂಪಿ, ಪಟ್ಟದಕಲ್ಲುಗಳಿಗೆ ಒಂದು ಬೊಂಬಾಟ್ ರೈಲು!

ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಡೋ ನಿಟ್ನಲ್ಲಿ ಬೆಂಗ್ಳೂರು-ಗೋವಾ-ಬೆಂಗಳೂರು ನಡುವೆ ಓಡಾಡೋ ಒಂದು ಬೊಂಬಾಟ್ ರೈಲು ಹಾಕಿದಾರೆ ಅಂತ ಎಕನಾಮಿಕ್ ಟೈಮ್ಸಲ್ಲಿ ಸುದ್ದಿ. ಈ ರೈಲು ಮೈಸೂರು, ಕಬಿನಿ, ಶ್ರವಣಬೆಳಗೊಳ, ಹಂಪಿ, ಬಾದಾಮಿ ಮತ್ತು ಪಟ್ಟದಕಲ್ಲುಗಳಿಗೆ ಹೋಗತ್ತಂತೆ. ತಲಾ ೧೩ ಸಾವಿರ ರೂಪಾಯಿ ಟಿಕೇಟಂತೆ.

ಪ್ರವಾಸೋದ್ಯಮ ಒಂದು ಬಹಳ ಮುಖ್ಯವಾದ ಉದ್ಯಮ ಗುರು. ಸಾವಿರಗಟ್ಲೆ ಜನ ಕರ್ನಾಟಕಕ್ಕೆ ಪ್ರವಾಸಕ್ಕೇಂತ ಬರ್ತಾರೆ. ಔರಿಗೆ ಸರಿಯಾಗಿ ಸೌಲತ್ತುಗಳ್ನ ಒದಗಿಸಿಕೊಟ್ರೆ ಅದರಿಂದ ಎಷ್ಟು ದುಡ್ಡು ಮಾಡಬೋದು ಗುರು! ಪ್ರವಾಸೋದ್ಯಮಾನೇ ಒಂದು ಮುಖ್ಯವಾದ ಉದ್ಯಮಗಳಾಗಿ ಇಟ್ಕೊಂಡಿರೋ ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಿಂದ ಇದ್ನ ಕಲೀಬೇಕು ಗುರು.

ಸರ್ಕಾರ ನೋಡೋಂಥಾ ಜಾಗಗಳ್ನ ಮತ್ತಷ್ಟು ಕ್ಲೀನಾಗಿ ಇಟ್ಕೋಬೇಕು, ಅವುಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಬಿಟ್ಟಿ ಸಿಗೋಹಾಗೆ ಮಾಡಬೇಕು, ನಿಜವಾಗಲೂ ಆಯಾ ಜಾಗಗಳ ಬಗ್ಗೆ ತಿಳ್ಕೊಂಡಿರೋ ಗೈಡುಗಳ್ನ ನೇಮಿಸಿಕೋಬೇಕು. ಇದನ್ನೆಲ್ಲ ಖಾಸಗಿಯೋರಿಗೆ ಗುತ್ತಿಗೆ ಕೊಟ್ರೆ ಇನ್ನೂ ಬೇಗ ಎಲ್ಲಾ ಆಗತ್ತೆ ಗುರು.

ಪ್ರವಾಸೋದ್ಯಮ ಬೆಳೀಬೇಕಾದ್ರೆ ನಮ್ಮತನ ಬಿಟ್ಟುಕೊಡೋದಲ್ಲ, ಮೆರೆಸಬೇಕು

ಇದು ಬಹಳ ಮುಖ್ಯವಾದ ವಿಷಯ. ಇಲ್ಲಿಗೆ ನೋಡಕ್ಕೆ ಬರೋ ಜನ ನಮ್ಮತನವನ್ನ ನೋಡಕ್ಕೆ ಇಷ್ಟ ಪಡ್ತಾರೇ ಹೊರತು ಅವರತನವನ್ನಲ್ಲ. "ಬೇರೇದನ್ನ" ನೋಡಕ್ಕೇ ಜನ ಎಲ್ಲೀಗೇ ಆಗ್ಲಿ ಪ್ರವಾಸಕ್ಕೆ ಹೋಗೋದು. ಹೋಟೆಲಲ್ಲಿ ಬ್ರೆಡ್ಡು-ಬೆಣ್ಣೆ ತಿನ್ನಕ್ಕೆ ಬರಲ್ಲ ಔರು, ಇಡ್ಲಿ-ದೋಸೆಗಳ್ನ ತಿನ್ನಕ್ಕೆ. ಏನೋ ಹೊಸದನ್ನ ನೋಡಕ್ಕೆ ಬರ್ತಾರೇ ಹೊರತು ಅವರ ದೇಶದಲ್ಲೇ ಸಿಗೋದನ್ನಲ್ಲ. ಹಾಗೇ ಇಲ್ಲಿ ಬಂದ್ರೆ ಔರು ಕನ್ನಡವನ್ನ ಕೇಳಕ್ಕೆ ಬರ್ತಾರೇ ಹೊರತು ಬರೀ ಇಂಗ್ಲೀಷ್ನಲ್ಲ. ನಮ್ಮತನವನ್ನ ಬಿಟ್ಕೊಡ್ತಾ ಹೋದಷ್ಟೂ ಪ್ರವಾಸಿಗರು ಕಡ್ಮೆ ಆಗ್ತಾ ಹೋಗ್ತಾರೆ ಗುರು.

ಈ ಹೊಸಾ ರೈಲಲ್ಲೂ ಅಷ್ಟೆ. ಎಲ್ಲಾ ನಾಟಕೀಯವಾಗಿ ಉತ್ತರಭಾರತೀಯರ ತರಾನೋ ಅಮೇರಿಕದೋರ ತರಾನೋ ಬಟ್ಟೆ ಉಟ್ಕೊಂಡಿರೋ ಮಾಣಿಗಳು, ಬರೀ ಉತ್ತರಭಾರತೀಯರ ಅಥವಾ ಹೊರದೇಶದ ತಿಂಡಿ-ತಿನಿಸುಗಳು ಪ್ರವಾಸಿಗರ ಮುಖಕ್ಕೆ ಒಡ್ಡಿದರೆ ಇದರಿಂದ ಉಪಯೋಗ ಏನು ಗುರು? ಈ ರೈಲಿನ ಹೆಸರೂ ಅಷ್ಟೆ - "ಗೋಲ್ಡನ್ ಚ್ಯಾರಿಯಟ್" ಅಂತ ಇಂಗ್ಲೀಷಲ್ಲೇನೋ ಇರ್ಲಿ, ಆದರೆ ಜೊತೆಗೆ "ಬಂಗಾರ ತೇರು" ಅಥ್ವಾ "ಚಿನ್ನದ ರಥ" ಅಂತ್ಲೂ ಬರೆದಿದ್ದರೆ ನಮ್ಮತನವನ್ನ ಇಡೀ ಪ್ರಪಂಚಕ್ಕೆ ತೋರಿಸಿದಂಗಾಗತ್ತೆ, ಅವರಿಗೂ ಖುಷಿಯಾಗತ್ತೆ ಗುರು.

ಕರ್ನಾಟಕ ಅನ್ನೋದ್ನ ಪ್ರವಾಸಿಗರಿಗೆ ಒಂದು "ಬ್ರಾಂಡ್" ಮಾಡಬೇಕು. ಹಾಗೆ ಮಾಡಕ್ಕೆ ನಮ್ಮತನವನ್ನೆಲ್ಲಾ ಮುಚ್ಚಿಹಾಕಕ್ಕೆ ಹೋಗದೆ ಪ್ರತಿಯೊಂದನ್ನೂ ಮೆರೆಸಬೇಕು. "ಕರ್ನಾಟಕ ಅಂದ್ರೆ ಬೇರೆ" ಅನ್ನೋ ನಿಜವನ್ನ ಹೇಳಿಕೊಳ್ಳದೆ ಹೋದರೆ ಹೊರದೇಶದ ಜನರಿಗೆ "ರಾಜಾಸ್ತಾನಕ್ಕೆ ಬಂದು ಹೋಗಿದೀನಲ್ಲ, ಇನ್ನು ಪಟ್ಟದಕಲ್ಲಲ್ಲಿ ಹೊಸದೇನಿದೆ?" ಅನ್ನಿಸೋದಿಲ್ಲವೆ? ಇದರಿಂದ ಅವರಿಗೆ ಭಾರತದ ವಿವಿಧತೆ ಅರ್ಥವೂ ಆಗಲ್ಲ, ನಮಗೆ ಪ್ರವಾಸೋದ್ಯಮದಿಂದ ಸಿಗಬಹುದಾದ ದುಡ್ಡೂ ಸಿಗಲ್ಲ.

ಕಬ್ಬಿಣ ತಿನ್ನಕ್ಕೆ ಬಂದ ತೆಲುಗರಿಂದ ಕರ್ನಾಟಕವೇ ಗುಳುಂ!

ನಮಗೂ ಆಂಧ್ರಕ್ಕೂ ನಡುವೆಯಿರೋ ಬೆಟ್ಟಗಾಡಲ್ಲಿ ಸಿಗೋ ಕಬ್ಬಿಣದ ಅದಿರನ್ನು ನಿಧಾನವಾಗಿ ತೆಲುಗರು ಗುಳುಂ ಮಾಡ್ತಾ ಮಾಡ್ತಾ ಬೆಟ್ಟದ ತುದೀನೇ ಜರಗಿಸಿ ಬಳ್ಳಾರಿಯೊಳಗೆ ದೂಕಿದ್ದಾರೆ, ಆ ಬೆಟ್ಟದ ತುದಿ ಎರಡು ರಾಜ್ಯಗಳ ನಡುವೆಯ ಗಡಿಯ ಗುರುತಾಗಿದ್ರಿಂದ ಈಗ ಕರ್ನಾಟಕವೇ ಚಿಕ್ಕದಾಗಿಹೋಗಿದೆ ಅಂತ ದಿ ಹಿಂದೂನಲ್ಲಿ ಸುದ್ದಿ.

ಗಡಿ ಕಾಪಾಡೋದು ನಮ್ಮ ಸರ್ಕಾರದ ಮೊದಲನೇ ಕೆಲಸ. ಕರ್ನಾಟಕ ದಿನದಿನಕ್ಕೆ ಚಿಕ್ಕದಾಗ್ತಾ ಹೋದರೆ ನಾವು ಹೋಗೋದಾದರೂ ಎಲ್ಲಿಗೆ ಅಂತ ಯೋಚ್ನೆ ಮಾಡು ಗುರು! ನಮ್ಮ ಸರ್ಕಾರ ನಿಗಾ ವಹಿಸಿದ್ರೆ ಇಷ್ಟೆಲ್ಲ ಆಗ್ತಿರಲಿಲ್ಲ ಗುರು! ಎಲ್ಲಾ ಆದಮೇಲೆ ಕೇಂದ್ರಸರ್ಕಾರಕ್ಕೆ ದೂರು ಕೊಡ್ತೀನಿ ಅಂತ ನಮ್ಮ ಮು.ಮಂತ್ರಿ ಏನೋ ಹೇಳ್ತಿದಾರೆ, ಆದ್ರೆ ತಡೆಗಟ್ಟಬೋದಾಗಿದ್ದ ರೋಗ ಬರಿಸಿಕೊಳ್ಳೋದು, ಮೈಯೆಲ್ಲಾ ಹುಣ್ಣು ಮಾಡ್ಕೊಳೋದು, ಆಮೇಲೆ ಮದ್ದು ಚುಚ್ಚಿಸಿಕೊಳ್ಳೋದು ಎಲ್ಲಾ ಯಾಕೆ? ಮೊದಲಿಂದಲೇ ಹೀಗೆ ಆಗದಿರೋಹಾಗೆ ನೋಡ್ಕೋಬಾರದೆ? ಗಡಿಪ್ರದೇಶಗಳ ಆಗುಹೋಗುಗಳ ಮೇಲೆ ಮೊದಲಿಂದ್ಲೇ ನಿಗಾ ಇಡಕ್ಕೇನು ಬ್ಯಾನೆ ನಮ್ಮ ಸರ್ಕಾರಕ್ಕೆ?

ಕೆಲವರು ಹೇಳಬಹುದು - ಭಾರತದ ಒಳಗಡೆ ರಾಜ್ಯಗಳ ನಡುವಿನ ಗಡಿ ಬಗ್ಗೆ ಯೋಚ್ನೆ ಮಾಡಬೇಡಿ, ಭಾರತಕ್ಕೂ ಪಾಕಿಸ್ತಾನಕ್ಕೂ ನಡುವೆ ಇರೋ ಗಡಿ ಬಗ್ಗೆ ಯೋಚ್ನೆ ಮಾಡಿದರೆ ಸಾಕು ಅಂತ. ಅಂತೋರು ಏನಾದ್ರೂ ತಮ್ಮ 60x40 ಸೈಟಲ್ಲಿ ಪೂರ್ವಕ್ಕೆ 5 ಅಡೀನ ಪಕ್ಕದ ಸೈಟಿನ ಮಾಲೀಕಂಗೆ ಬಿಟ್ಕೊಡ್ತಾರಾ?!

ಸ್ವಲ್ಪ ಯೋಚ್ನೆ ಮಾಡಿ: ಹೀಗೇ ನಮ್ಮ ನಾಡ್ನ, ನಮ್ಮತನವನ್ನೆಲ್ಲಾ ಬಿಟ್ಟುಕೊಡ್ತಾ ಇದ್ರೆ ಕರ್ನಾಟಕಕ್ಕೆ ಹಿಂದೆ ಬ್ರಿಟೀಷರ ಕಾಲದಲ್ಲಿದ್ದ ಪಾಡೇ ಮತ್ತೊಮ್ಮೆ ಹಿಂತಿರುಗೆ ಬರತ್ತೆ, ಮತ್ತೊಮ್ಮೆ ಕರ್ನಾಟಕ ಚೂರುಚೂರಾಗಿಹೋಗತ್ತೆ, ಕನ್ನಡಿಗರು ಆಯಾ ಚೂರುಗಳಲ್ಲೆಲ್ಲಾ ಅಲ್ಪಸಂಖ್ಯಾತರಾಗಿಹೋಗ್ತಾರೆ, ಕನ್ನಡ ಕಸಕ್ಕಿಂತ ಕಡೆಯಾಗಿಹೋಗತ್ತೆ. ಹಿಂಗಾದ್ರೆ ಎಲ್ಲಾ ಕಲಿಕೆಗೂ ಎಲ್ಲಾ ಸಹಕಾರಕ್ಕೂ ಸಾಧನವಾದ ನಮ್ಮ ಭಾಷೇನೇ ಕಳ್ಕೊಂಡು, ನಮ್ಮ ಸ್ವಾಭಿಮಾನಾನೂ ಕಳ್ಕೊಂಡು, ಕನ್ನಡ ಜನಾಂಗದ ನಾವು ಸರ್ವನಾಶ ಆಗೋಗ್ತೀವಿ ಗುರು!

ಕಬ್ಬಿಣ ತಿನ್ನಕ್ಕೆ ಬಂದೋರು ನಾಡ್ನೇ ತೊಗೊಂಡು ಹೋಗ್ತಿದ್ರೂ ನಾವು ಎಚ್ಚೆತ್ತುಕೋಬೇಡ್ವಾ ಗುರು?

ಇಂಗ್ಲೀಷಲ್ಲಿ ನಮ್ಮ ಊರುಗಳ ಹೆಸರು ಬದಲಾಯಿಸೋದು ಒಳ್ಳೇದೇ

Bangalore ಅನ್ನೋದು ಇನ್ನುಮೇಲೆ Bengaluru ಅಂತ ಆಗ್ತಿರೋ ಹಿನ್ನೆಲೇಲಿ ಯಾರೋ ನಂದಿನಿ ಸುಂದರ್ ಅನ್ನೋರು "ಹೆಸರಲ್ಲಿ ಏನಿದೆ ?"ಅಂತ ಆಗಸ್ಟ 25ನೇ ತಾರೀಕಿನ ಡೆಕ್ಕನ್ ಹೆರಾಲ್ಡನಲ್ಲಿ ಆಕಾಶ ತಲೆ ಮೇಲೆ ಬಿದ್ದ ಹಾಗೆ ಬರೆದಿದ್ದಾರೆ.

ಇರ್ಲಿ. ಇಲ್ಲಿ ನಮ್ಮ ಕೆಲ್ಸ ಈವೆಂಗ್ಸಿಗೆ ಈ ವಿಷಯದಲ್ಲಿ ಅದೇನೇನೇನೋ ಪ್ರಸ್ನೆಗಳಿವ್ಯಂತಲ್ಲ, ಔಗಳ್ಗೆ ಉತ್ರ ಕೊಡೋದು. ಕೇಳ್ತಾರೆ ಮೇಡಮ್ಮು:
What is in a name? Does it have the power to change the character, culture of a place?

ಹೌದು ಮತ್ತೆ, ಹೆಸರು ಮುಖ್ಯಾನೇ. ಇಲ್ದೇ ಹೋದ್ರೆ ಮೇಡಮ್ಮು "ಕೆಟ್ಟಮುಖದವಳು" ಅಂತ ಹೆಸ್ರಿಟ್ಕೊಳ್ಳಿ! ತಮಾಷೆ ಇರಲಿ. Bangalore ಅನ್ನೋದನ್ನ Bengaluru ಅಂತ ಸರಿಯಾಗಿ ಕರಿಯಕ್ಕೆ ಹೊರಟಿರೋದ್ರಿಂದ ಈ ಊರಿಗೆ ಕನ್ನಡದ ಕಳೆ ವಾಪಸ್ ತಂದಂಗಾಗತ್ತೆ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಬೆಂಗಳೂರು ಅನ್ನೋದು ನಮ್ಮದೇ ಊರು ಅಂತ ಕನ್ನಡಿಗರಿಗೆಲ್ಲ ಅನ್ಸೋದ್ರಲ್ಲಿ ಸಂದೇಹವೇ ಇಲ್ಲ. ಈ ಊರ್ನ ಯಾವನೋ ಬ್ರಿಟಿಷನೋ ಯಾವನೋ ಹಿಂದಿಯೋನೋ ಇನ್ಯಾವನೋ ಕಟ್ಟಿಲ್ಲ, ಕನ್ನಡಿಗರೇ ಯಾರೋ ಕಟ್ಟಿರಬೇಕು ಅಂತ ಖಂಡಿತ ಕನ್ನಡಿಗ್ರುಗೂ ಗೊತ್ತಾಗತ್ತೆ, ಹೊರದೇಶದೋರ್ಗೂ ಗೊತ್ತಾಗತ್ತೆ ಗುರು. ಇವತ್ತಿನ ದಿನ ಇದು ಬಹಳ ಮುಖ್ಯವಾದ್ದು. ಬೆಂಗಳೂರಿನ ಸಂಸ್ಕೃತಿ ಕನ್ನಡದ ಸಂಸ್ಕೃತಿ, ಇಲ್ಲಿಯ ಇತಿಹಾಸ ಕನ್ನಡದ ಇತಿಹಾಸ, ಇಲ್ಲಿಯ ವರ್ತಮಾನ ಕನ್ನಡದ ವರ್ತಮಾನ, ಇಲ್ಲಿಯ ಭವಿಷ್ಯ ಕನ್ನಡದ ಭವಿಷ್ಯ ಅಂತ ಸಾರಿ ಸರಿ ಹೇಳತ್ತೆ ಈ ಬದಲಾವಣೆ. ಮೇಡಂ ಅಂತಾರೆ:
A new settler from varied background is never made to feel out of place, drawn into its comforting folds almost instantly. Unfortunately, the city has grown beyond its capacity to hold and comfort and that explains the many ills plaguing it.

ಇಲ್ಲಿ ಇವರ ಚಿಂತನೆಗೆ ಸ್ವಲ್ಪ ಲಕ್ವಾ ಹೊಡ್ದಂಗಿಲ್ವಾ? ಅಲ್ಲಾ - "new settler"ಗಳಿಗೋಸ್ಕರ ಇಲ್ಲಿ ನಮ್ಮದೆಲ್ಲವನ್ನು ಬಿಸಾಕಿ ಕಾಲಿಗೆ ಬೀಳಕ್ಕೆ ನಾವೇನು ಕಿವಿಮೇಲೆ ಹೂ ಮಡೀಕೊಂಡಿದೀವಾ ಗುರು? ಕರ್ನಾಟಕದ ಬೇರೆಬೇರೆ ಕಡೆಗಳಿಂದ ಬರೋರಿಗೆ ಇದು ತಮ್ಮ ರಾಜಧಾನಿ ಅನ್ನಿಸಬೇಕೋ ಬೇಡ್ವೋ? ನಂಜನಗೂಡಿಂದ್ಲೋ, ಗಲಗಲಿಯಿಂದ್ಲೋ, ಮತ್ತೊಂದು ಕಡೆಯಿಂದ್ಲೋ ಬಂದೋನಿಗೆ ಇಲ್ಲಿ ಹೂವಿನ ಹಾಸಿಗೆ ಹಾಸಿಕೊಡಬೇಕೋ ಕರ್ನಾಟದ ಹೊರಗಿಂದ ಬಂದೋನಿಗೋ? ಅದಿರ್ಲಿ, ತಮಾಷೆ ಅಂದ್ರೆ - ಒಂದು ಕಡೆ ಊರು ತುಂಬಾ ಬೆಳದಿದೆ ಅಂತಾರೆ, ಇನ್ನೊಂದು ಕಡೆ ವಲಸಿಗರ್ನ ಇನ್ನೂ ಕಣ್ಣೀರಿಟ್ಕೊಂಡು ತಬ್ಕೋಬೇಕು ಅಂತಾರಲ್ಲ ಗುರು - ತಲೇಲಿ ಸೊಲ್ಪ ಬುದ್ಧಿ ಇಟ್ಕೊಂಡ್ ಮಾತಾಡ್ಬೇಕು ಅಂತ ಹೊಸದಾಗಿ ಏನಾದ್ರೂ ಹೇಳಬೇಕಾ ಇವರಿಗೆ? ಇನ್ನೂ ಇವರ ಪೆದ್ದತನ ನೋಡಿ:
There is nothing wrong in changing a name if majority of a city’s residents desire it. But were the residents asked? Was a referendum held on this? Don’t the residents have the right to have a say in this? Why should the city undergo a change of name on the whim of a few individuals?

ಅಲ್ಲ - ಕರ್ನಾಟಕ ಸರ್ಕಾರ ಅನ್ನೋದು ಕನ್ನಡಿಗರು ಚುನಾಯಿಸಿರೋ ಸರ್ಕಾರ ತಾನೆ? ಇವರು ಇಂಥಾ ನಿರ್ಧಾರಗಳ್ನ ತೊಗೊಳ್ಳಿ ಅಂತಾನೇ ಕನ್ನಡಿಗರು ಇವರನ್ನ ಆಯ್ಕೆಮಾಡ್ಕೊಂಡಿರೋದು. ಜನಪ್ರಿಯ ಸರ್ಕಾರ ಜನರಿಗೆ ಬೇಕಾದ್ದನ್ನ ಮಾಡಿದ್ದೂ ಇವರಿಗೆ ಹಿಡ್ಸಲ್ಲ ಅಂದ್ರೆ ಇವರಿಗೆ ಪ್ರಜಾಪ್ರಭುತ್ವದ "ಅಆಇಈ"ನೂ ಗೊತ್ತಿಲ್ಲ ಅನ್ನೋದು ಸ್ಪಷ್ಟ. ಇವರು ಹೀಗೆ ಬದಲಾಗಬಾರದು ಅಂತ ಮೆತ್ತಮೆತ್ತಗೆ ಅಡ್ಡಗೋಡೆಮೇಲೆ ಇಟ್ಟಂಗೆ ಅನ್ತಿರೋದೇ "whim of a few individual"ಸು. ಇಡೀ ಕರ್ನಾಟಕ ಇದನ್ನ ಒಪ್ಕೊಂಡಿರುವಾಗ ಇವರದೇನು ಗೋಳು? ಇಂಥವರಿಗೆ ಪತ್ರಿಕೆಗಳಲ್ಲಿ ಬರೆಯೋದಕ್ಕೆ ಬಿಡ್ತಾರಲ್ಲ, ಅದಕ್ಕೆ ಬಡ್ಕೋಬೇಕು!
Perhaps the name Bengaluru, with its halli twang, is more appropriate to denote our city which now resembles more of a halli with its almost non-existent infrastructure than a hi-tech city.

ಎಂಥಾ ವ್ಯಂಗ್ಯದ ಮಾತು! ನಿಜವಾಗಲೂ ಬೆಂಗಳೂರಿನ ಸೌಲಭ್ಯಗಳ ಸಮಸ್ಯೆ ಬಗೆಹರಿಸೋದೇ ಇವರ ಉದ್ದೇಶವಾಗಿದ್ದರೆ ಈ ಬದಲಾವಣೆ ಯಾಕೆ ಮಾಡಬೇಕು ಅನ್ನೋದು ಖಂಡಿತ ಅರ್ಥವಾಗ್ತಿತ್ತು. ನಿಜವಾಗಲೂ ನೋಡಿದರೆ ಬೆಂಗಳೂರಿನ ಮೂಲ ಸಮಸ್ಯೇನೇ ಲಂಗು-ಲಗಾಮಿಲ್ಲದ ವಲಸೆ. ಯಾವುದೇ ನಿಯಂತ್ರಣಾನೂ ಇಲ್ದೆ ಇಲ್ಲಿಗೆ "new settler"ಗಳು ಬಂದೂ ಬಂದೂ ಒಕ್ಕರಿಸಿಕೊಳ್ತಿರೋದೇ ಇದರ ದೊಡ್ಡ ಸಮಸ್ಯೆ. ಈ ಸಮಸ್ಯೆ ಎಷ್ಟು ಹೆಚ್ಚಿದೆ ಅನ್ನಕ್ಕೆ ಉದಾಹರಣೇನೇ Bangalore ಅನ್ನೋ ಸ್ಪೆಲಿಂಗು. ಈ ಲಂಗು-ಲಗಾಮಿಲ್ಲದ ವಲಸೇನ ನಿಲ್ಲಿಸೋದಕ್ಕೆ ಏನ್ ಮಾಡಬೇಕು ಅಂತ ಯೋಚ್ನೆ ಮಾಡದೆ ಸುಮ್ನೆ ವ್ಯಂಗ್ಯದ ಮಾತು ಆಡ್ಕೊಂಡಿರೋರಿಗೆ ಡೆಕ್ಕನ್ ಹೆರಾಲ್ಡಲ್ಲಿ ಬರ್ಯಕ್ಕಾದ್ರೂ ಯಾಕ್ ಬಿಡ್ತಾರೋ ಏನೋ!

ಕೊನೆ 2 ಗುಟುಕು
  1. ಈಗ ಆಗ್ತಿರೋ ಬದಲಾವಣೆಯಾದರೂ ಏನು? ನಮ್ಮ ಊರುಗಳ ನಿಜವಾದ ಹೆಸರೇನು ಬದಲಾಗ್ತಿಲ್ಲ. ಇಂಗ್ಲೀಷಲ್ಲಿ ಆ ಹೆಸರುಗಳನ್ನ ಬರೆಯೋ ರೀತಿ ಬದಲಾಗ್ತಿದೆ, ಅಷ್ಟೆ. Bangalore ಅನ್ನೋದು Bengaluru ಅಂತ ಆಗ್ತಿದೆ, ಅಷ್ಟೆ. ಇದರಿಂದ ಕನ್ನಡ ಬರದೇ ಇರೋರಿಗೂ ಕನ್ನಡನಾಡಿನ ರಾಜಧಾನಿಯ ಹೆಸರು ಸರಿಯಾಗಿ ಹೇಳಕ್ಕೆ ಅನುಕೂಲ ಆಗ್ತಿದೆ, ಅಷ್ಟೆ. ಇಂಗ್ಲೀಷಿಗೂ ನಮಗೂ ಸಂಬಂಧ ಈ ನಂದಿನಿಯಂತೋರು ಅಂದ್ಕೊಂಡಿರೋಂಥದ್ದೇನಲ್ಲ. ಏನೇ ಇರಲಿ, ಸದ್ಯಕ್ಕಂತೂ ಇಂಗ್ಲೀಷ್ನ ತಲೆಮೇಲೆ ಕೂಡಿಸಿಕೊಂಡಿರುವಂಥಾ ವ್ಯವಸ್ಥೇನೇ ಇರೋದು. ಇಂಥಾ ವ್ಯವಸ್ಥೆಯಲ್ಲಿ ಓಡಾಡೋ ದಾಖಲೆಗಳ ಮೇಲೆ, ಇಂಗ್ಲೀಷು ಪತ್ರಿಕೆಗಳ ಮೇಲೆ ನಮ್ಮೂರ ಹೆಸರುಗಳು ನಮ್ಮೂರ ಹೆಸರುಗಳಂತೆಯೇ ಮತ್ತೊಮ್ಮೆ ಕಾಣಿಸುತ್ತವೆ ಅಂದ್ರೆ ಜಾಸ್ತಿ ಅಲ್ಲದೇ ಹೋದ್ರೂ ಸ್ವಲ್ಪವಾದರೂ ಖುಷಿಪಡಬೇಕಾದ್ದೇ.
  2. ಅಲ್ಲ - ನಿಜವಾಗಲೂ ನೋಡಿದರೆ ಇವರ "Nandini" ಅನ್ನೋ ಸ್ಪೆಲಿಂಗೂ ಸರಿಯಿಲ್ಲ. ಇದರಿಂದ ಹೊರದೇಶದೋರು ಇವರನ್ನ "ನ್ಯಾಂಡೀನಿ" ಅಂತ ಕರೀತಾರೆ. ಹೌದು ತಾನೆ? ಅದರ ಬದ್ಲು "Nundhinny" ಅಂತ ಬದಲಾಯಿಸಿದರೆ "ನಂದಿನಿ" ಅನ್ನೋದಕ್ಕೆ ಇನ್ನೂ ಹತ್ರ ಆಗತ್ತೆ (ದಕಾರ ಇಂಗ್ಲೀಷಿಗರ ಬಾಯಲ್ಲಿ ಬರ್ಸೋದು ಕಷ್ಟ, ಬಿಡಿ). ಹೌದು ತಾನೆ? ಇಷ್ಟೇ ಸಾಕು ಈ ಸ್ಪೆಲಿಂಗ್ ಬದಲಾವಣೆ ಸರಿ ಅಂತ ವಾದ್ಸಕ್ಕೆ.

ಎಲ್ಲಾ ಓಕೆ, ದಿಲ್ಲೀಲಿ ಕನ್ನಡದ ಯಕ್ಷಗಾನಕ್ಕಾಗಿ ಆತ್ಮಹತ್ಯೆ ಯಾಕೆ?

ಇವತ್ತಿನ್ ವಿ.ಕ ದಲ್ಲಿ ದೆಹಲಿಯಲ್ಲಿ ಒಂದು ಕನ್ನಡ ಸಂಘದೋರು ಹಿಂದೀಲಿ ಯಕ್ಷಗಾನ ಮಾಡ್ತಿದ್ದನ್ನು ವಿರೋಧ್ಸಿ ಒಬ್ಬ ಕನ್ನಡಿಗರು ಆತ್ಮಾಹುತಿ ಬೆದರಿಕೆ ಹಾಕಿದ್ರಂತೆ ಅಂತ ಸುದ್ದಿ.

ದಿಲ್ಲಿಯಲ್ಲಿ ಹಿಂದಿಯೇ ಸರಿ

ಮೇಲ್ ನೋಟಕ್ಕೆ ನೋಡುದ್ರೆ ಆತ ಮಾಡಿದ್ದು ತುಂಬಾ ಸರಿ ಅನ್ಸುತ್ತೆ. ಭಾವನಾತ್ಮಕವಾಗ್ ನೋಡುದ್ರೆ ಬೇರೆ ಭಾಷೆಯವರ್ನ ಮೆಚ್ಸಕ್ಕೆ ನಮ್ ಭಾಷೇನ ಕಡೆಗಣ್ಸೋದಾ ಅಂತ ಸಿಟ್ಟೂ ಬರ್ಬೋದು. ಇದೆಲ್ಲಾ ಕನ್ನಡ ನಾಡಿನ ಯಾವುದೋ ಊರಲ್ಲಿ ನಡೆದಿದ್ದರೆ ಗ್ಯಾರಂಟಿ ಸರಿ, ಆದ್ರೆ ದಿಲ್ಲೀಲಿ ಇದು ನಡೆದಿದ್ದು ಸರಿಯಲ್ಲ ಗುರು.

ಪ್ರತಿ ಪ್ರದೇಶಕ್ಕೂ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಜೀವನ ವಿಧಾನ ಇರುತ್ತೆ. ಕನ್ನಡನಾಡಿನ ಹೊರಗಡೆ ಹೋಗಿ ನಾವು ಕನ್ನಡಿಗರು ನಮ್ಮ ಪ್ರತ್ಯೇಕತೇನ ಮೆರಸಬಾರದು ಅನ್ನೋದು ಎಷ್ಟು ಸರೀನೋ ನಮ್ಮತನಾನ ಕಳ್ಕೋಬಾರ್ದು ಅನ್ನೋದು ಅಷ್ಟೇ ಸರಿಯಾದದ್ದು. ಆದ್ರೆ ಇವೆರಡನ್ನೂ ಹ್ಯಾಗ್ ತೂಗ್ಸೋದು ಅಂತೀರಾ?

ಹೊರನಾಡಿನಲ್ಲಿ ನಮ್ಮ ಕಾರ್ಯಕ್ರಮಗಳು ನಮ್ಮವರಿಗಾಗಿ ಮಾತ್ರ ಆದಾಗ (ಅಂದ್ರೆ ಖಾಸಗಿ ಕಾರ್ಯಕ್ರಮ ಆದಾಗ್ ಮಾತ್ರ) ನಮ್ಮ ಆಚಾರ ವಿಚಾರ ಪ್ರದರ್ಶಿಸಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯಾ ನಾಡಿನ ಭಾಷೆ ಸಂಸ್ಕೃತಿಗಳಿಗೆ ಪೂರಕವಾಗಿ ಇರೋದೇ ಸರಿ. ನಮ್ ಸಂಸ್ಕೃತಿನ ಅವರಿಗೆ ತೋರ್ಸೋ ಉದ್ದೇಶ ಇದ್ರೆ ಸಾಧ್ಯವಾದಷ್ಟೂ ಅಲ್ಲೀ ಜನರ ಭಾಷೆ ಬಳಸೋದೆ ಸರಿ ಗುರು. ಹಾಗ್ ಮಾಡ್ದೆ ಇರೋದು ಆಯಾ ಪ್ರದೇಶದ ಅನನ್ಯತೇನ ಹಾಳುಗೆಡುವೋ ಕ್ರಿಯೆ ಆಗ್ಬಿಡಲ್ವಾ?

ಕನ್ನಡನಾಡಲ್ಲಿ ಕನ್ನಡ ಸರಿ

ಮೇಲೆ ಹೇಳಿದ್ದೆಲ್ಲಾ ಕರ್ನಾಟಕಕ್ಕೂ ಅನ್ವಯಿಸತ್ತೆ ಅನ್ನೋದ್ನ ಮರೀಬೇಡಿ. ನಮ್ ಬೆಂಗಳೂರಲ್ಲೆ ನೋಡಿ. ಅಯ್ಯಪ್ಪನ ಭಜನೆ ಮಾಡೋ ನೆಪದಲ್ಲಿ ಮಲಯಾಳಂ ನುಗ್ಗುತ್ತೆ (ದಾಸರಹಳ್ಳಿ), ಕರಿಮಾರಿಯಮ್ಮನ್ ಉತ್ಸವದ್ ನೆಪದಲ್ಲಿ ತಮಿಳ್ ನುಗ್ಗುತ್ತೆ (ಮಲ್ಲೇಶ್ವರ - ಪಶ್ಚಿಮ). "ಕಡ್ವಾ ಸಚ್" ಅನ್ನೋ ಕಾರ್ಯಕ್ರಮ ಹಿಂದೀಲೆ ತಿಂಗಳುಗಟ್ಲೆ ನಡ್ಯತ್ತೆ (ಬಸವನ ಗುಡಿ). ಅದನ್ನು ನಡ್ಸೋ ಬೇರೆ ಭಾಷೆ ಜನ ಕನ್ನಡ ನೆಲದಲ್ಲಿ ಕನ್ನಡದಲ್ಲೇ ಕಾರ್ಯಕ್ರಮಾನ ನಡೆಸಬೇಕು ಅನ್ನೋದನ್ನ ಯಾವಾಗ ತಿಳ್ಕೋತಾರೆ, ಔರ್ಗೆ ನಾವ್ಯಾವಾಗ ತಿಳಿಸಿಕೊಡ್ತೀವಿ ಗುರು?

ಕನ್ನಡ ಕಲಿಕೆ ಕಡ್ಡಾಯ ಆಗಬೇಕಾದ್ರೆ ಪ್ರಾದೇಶಿಕ ಪಕ್ಷಗಳು ಹುಟ್ಟಬೇಕು, ಆಡಳಿತಕ್ಕೆ ಬರಬೇಕು

ತಮಿಳ್ನಾಡು ಸರ್ಕಾರ ಜಾರಿಗೆ ತಂದಿದ್ದ "ತಮಿಳು ಕಲಿಕೆಯ ಕಾಯ್ದೆ 2006" ವಿರೋಧಿಸಿ ತಮಿಳ್ನಾಡಲ್ಲೇ ತಮಿಳು ಕಲಿಯಲ್ಲ ಅನ್ನೋ ಹುನ್ನಾರ ತೋರಿಸಿ ನ್ಯಾಯಾಲಯಕ್ಕೆ ಕೆಲವರು ಸಲ್ಲಿಸಿದ್ದ ಮನವೀನ ಚೆನ್ನೈ ಉಚ್ಚನ್ಯಾಯಾಲಯ ತಳ್ಳಾಕಿ, ಕಾಯ್ದೇನ ಎತ್ತಿ ಹಿಡಿದಿದೆ ಅಂತ ಪ್ರಜಾವಾಣೀಲಿ ಹಾಗೂ ಇಂಡಿಯನ್ ಎಕ್ಸ್‍ಪ್ರೆಸ್‍ ನಲ್ಲಿ ಸುದ್ದಿ. ಆ ಕಾಯ್ದೇಲಿ ಏನಿದೆ ಒಸಿ ನೋಡಿ:

3. (1) Tamil shall be taught as a subject in standards I to X in all schools, in a phased manner, commencing from the academic year 2006-2007 for standard I, from the academic year 2007-2008 for standards I and II and shall be extended upto X standard in a like manner.

(2) For the purpose of sub-section (1), the pattern of education shall be as follows:-
Part-I Tamil (Compulsory)
Part-II English(Compulsory)
Part-III Other Subjects (Mathematics, Science, Social Science, etc.)
Part-IV Students who do not have either Tamil or English as their mother tongue can study their mother tongue as an optional subject.

ಅಂದ್ರೆ,
  • ತಮಿಳುನಾಡಲ್ಲಿ 1ನೇ ತರಗತಿಯಿಂದ 10ನೇ ತರಗತಿ ವರೆಗೆ ಎಲ್ಲಾ ವಿದ್ಯಾರ್ಥಿಗಳೂ ತಮಿಳ್ನ ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲೀಲೇಬೇಕು. ಅಂದ್ರೆ ನಾಡಿನ ಭಾಷೆಯನ್ನು ಕಲಿಯೋದಿಲ್ಲ ಅನ್ನುವುದು ತಮಿಳುನಾಡಲ್ಲಿ ಕಾನೂನುಬಾಹಿರ. ಆದರೆ ಕರ್ನಾಟಕದಲ್ಲಿ ನಾಡಿನ ಭಾಷೆಯಾದ ಕನ್ನಡವನ್ನ ಕಲೀದೇ ಹೋದರೂ ಪರವಾಗಿಲ್ಲ ಅನ್ನೋ ನಿಯಮ!
  • ಉಪಯೋಗವಿಲ್ಲದ ಹಿಂದಿ ಕಲಿಯೋ ಅವಶ್ಯಕತೆಯಿಲ್ಲ. ಆದರೆ ಕರ್ನಾಟಕದಲ್ಲಿ ಹಿಂದಿ ಕಲಿಕೆ ಕಡ್ಡಾಯ!
  • ತಮಿಳು ಮಕ್ಕಳಿಗೆ ಅನವಶ್ಯಕವಾಗಿ ನಮ್ಮ ಕರ್ನಾಟಕದಲ್ಲಿ ಹೇರೋ ಹಾಗೆ 3 ಭಾಷೆಗಳ್ನ (ಅದ್ರಲ್ಲಿ ಒಂದು ಯಾವುದಕ್ಕೂ ಉಪಯೋಗವಿಲ್ಲದಿರೋ ಹಿಂದಿ) ಹೇರಿಲ್ಲ! ಆದರೆ ಕರ್ನಾಟಕದಲ್ಲಿ ಕನ್ನಡದ ಮಕ್ಕಳ ಮೇಲೆ ಅನವಶ್ಯಕವಾಗಿ ಮೂರು ಭಾಷೆಗಳ ಹೊರೆ!
  • ತಮಿಳು ಅಥವಾ ಇಂಗ್ಲೀಷು ನಿಮ್ಮ ಮಾತೃಭಾಷೆಯಾಗಿಲ್ದೇ ಹೋದ್ರೆ ಆ (ಮೂರನೇ) ಭಾಷೇನ ಐಚ್ಛಿಕವಾಗಿ ಕಲೀಬೋದು, ಅಷ್ಟೆ. ಅಂದ್ರೆ - ನೀವು ತಮಿಳ್ನಾಡಲ್ಲಿರೋ ಕನ್ನಡಿಗರೋ ಹಿಂದಿಯೋರೋ ಆಗಿದ್ರೆ ನಿಮಗೆ ಕನ್ನಡ ಮತ್ತು ಹಿಂದಿಗಳು ಐಚ್ಛಿಕ ವಿಷಯಗಳೇ ಹೊರತು ತಮಿಳಲ್ಲ. ಅಂದ್ರೆ ಮಾತೃಭಾಷೆಗಿಂತ ಮೇಲಿನ ಸ್ಥಾನ ನಾಡಿನ ಭಾಷೆಗೆ. ಆದರೆ ಕರ್ನಾಟಕದಲ್ಲಿ ನಾಡಿನ ಭಾಷೆಗಿಂತ ಮಾತೃಭಾಷೆಗೇ ಮೇಲಿನ ಸ್ಥಾನ.ಇದೇ ತಮಿಳ್ರು ಬಂದು ಕರ್ನಾಟಕದಲ್ಲಿ "ನಾಡಿನ ಭಾಷೆ ಕಲಿಯೊಲ್ಲ, ಮಾತೃಭಾಷೇನೇ ಮೇಲು" ಅಂತ ವಾದಿಸಿ ಕನ್ನಡವನ್ನ ಕಸಕ್ಕಿಂತ ಕಡೆಯಾಗಿ ಕಂಡರೂ ಅದಕ್ಕೆ ವಿರುದ್ಧವಾದ ಯಾವ ಕಾನೂನೂ ಕರ್ನಾಟಕದಲ್ಲಿಲ್ಲ!
  • ಇದು ಸಿ.ಬಿಎಸ್.ಇ ಮತ್ತು ಐ.ಸಿ.ಎಸ್.ಇ. ನೋರಿಗೂ ಅನ್ವಯಿಸತ್ತೆ ಅನ್ನೋದನ್ನ ಮರೀಬೇಡಿ! ಆದರೆ ಕರ್ನಾಟಕದಲ್ಲಿ ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ. ಗಳಿಗೆ ಕರ್ನಾಟಕದ ಯಾವುದೇ ಕಲಿಕೆ ಕಾಯ್ದೆಗಳು ಅನ್ವಯಿಸುವುದಿಲ್ಲ!
ಕರ್ನಾಟಕದಲ್ಲಿ ಕನ್ನಡ ಕಲಿಕೇನ ಕಡ್ಡಾಯ ಮಾಡಕ್ಕೆ ಬೇಕಾಗಿರೋ ಗಂಡಸುತನ ಇಲ್ಲೀವರೆಗೆ ಬಂದ ಯಾವ ಕರ್ನಾಟಕ ಸರ್ಕಾರಕ್ಕೂ ಇರಲಿಲ್ಲವಲ್ಲ, ಯಾಕೆ? ಯಾಕೇಂದ್ರೆ ಇಲ್ಲೀವರೆಗೆ ಯಾವ ಕರ್ನಾಟಕ ಸರ್ಕಾರವೂ ನಮ್ಮದೇ ಆದ ಪಕ್ಷದ್ದು ಆಗೇ ಇರಲಿಲ್ಲವಲ್ಲ, ಅದೇ ಕಾರಣ ಗುರು. ನಮ್ನ ಆಳಿರೋ ಪಕ್ಷಗಳೆಲ್ಲ ಎಷ್ಟೇ ಆದ್ರೂ "ರಾಷ್ಟ್ರೀಯ" ಪಕ್ಷಗಳೇ ತಾನೆ? ಇವರ ಟೊಳ್ಳು ರಾಷ್ಟ್ರೀಯತೆಗೆ ಕನ್ನಡ-ಕನ್ನಡತನ-ಕರ್ನಾಟಕಗಳೆಲ್ಲ ಗೌಣ! ಇವರೆಲ್ಲ ಹಿಂದೀದಾಸರೇ. ಹೈಕಮ್ಯಾಂಡು "ಅಪಾರ್ಥ" ಮಾಡ್ಕೊಂಬುಡತ್ತೆ ಅಂತ ಹೇಡಿಗಳ ತರ ಹೆದ್ರುಕೊಂಡು ಕನ್ನಡಕ್ಕೆ ದ್ರೋಹ ಬಗೆದಿರೋ ಪಕ್ಷಗಳೇ ಇಲ್ಲೀವರೆಗೆ ನಮ್ನ ಆಳಿರೋದು ಗುರು!

ಒಟ್ಟಿನಲ್ಲಿ ಈ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು ತಮಗೆ ನರ ಸತ್ತುಹೋಗಿದೆ ಅನ್ನೋ ಕಾರಣಕ್ಕೆ ಇವತ್ತಿಗೂ ನಂ ನಾಡ್ನ ಬಲಿ ಕೊಡ್ತಿದಾರೆ ಗುರು! ಈ ಅಯೋಗ್ಯ "ರಾಷ್ಟ್ರೀಯ" ಪಕ್ಷಗಳ್ಗೆ ಬುದ್ಧಿ ಬರತ್ತೆ ಅಂತ ನಂಬೋದೇ ತಪ್ಪು ಗುರು! ಈ ಕೆಲಸ ನಿಜವಾಗಲೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗೇ ಹುಟ್ಟುನಿಂತ ಪ್ರಾದೇಶಿಕ ಪಕ್ಷಗಳಿಂದ್ಲೇ ಸಾಧ್ಯ. ಅಂತಹ ಪ್ರಾದೇಶಿಕ ಪಕ್ಷಗಳು ಹುಟ್ಟಬೇಕು, ನಾವು ಅವುಗಳಿಗೆ ಬೆಂಬಲ ಕೊಟ್ಟು ಗೆಲ್ಲಿಸಬೇಕು, ಆಡಳಿತಕ್ಕೆ ತರಬೇಕು ಗುರು!

ವಲಸಿಗರಿಗೆ ಕನ್ನಡ ಕಲಿಸದೇ ಇರುವುದು ನಮ್ಮ ಏಳ್ಗೆಗೇ ಮಾರಕ

ಮೊನ್-ಮೊನ್ನೆ ಡೆಕನ್ ಹೆರಾಲ್ಡಲ್ಲಿ ಕನ್ನಡದ ಕಲಿಕೆ ಹೇಗೆ ಕನ್ನಡ ಬರದೇ ಇರೋರ ಮನೆಮನೆಗೆ ತಲುಪ್ತಾ ಇದೆ ಅಂತ ಒಂದು ವರದಿ ಬಂದಿತ್ತು. ನಿಧಾನವಾಗಾದರೂ ವಲಸಿಗರಿಗೆ ಕನ್ನಡ ಕಲಿಸಬೇಕು ಅನ್ನೋ ಬುದ್ಧಿ ಕನ್ನಡ ಜನಾಂಗಕ್ಕೆ ಬರ್ತಿರೋದು ಬಹಳ ಒಳ್ಳೇದು ಗುರು! ಈ ವಿಷ್ಯಕ್ಕೆ ಕೊಡಬೇಕಾದ ಗೌರವ ಇಲ್ಲೀವರೆಗೆ ಕನ್ನಡಿಗರು ಕೊಟ್ಟಿಲ್ದೇ ಇರೋದ್ರಿಂದ ಸಕ್ಕತ್ ಕಷ್ಟಕ್ಕೆ ಸಿಕಾಕೊಂಡಿದೀವಿ! ಆದ್ರಿಂದ ಇದನ್ನ ಒಸಿ ಬೂದ್ಗಾಜ್ ಇಟ್ಟು ನೋಡ್ಮ.

ವಲಸಿಗರು ಸ್ಥಳೀಯ ಭಾಷೆ ಕಲೀದೇ ಇರೋದು ನಾಡಿನ ಏಳ್ಗೆಗೆ ಮಾರಕ

ನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಟಲಿ, ಯಾಕೆ ಇಡೀ ಯೂರೋಪು, ಇನ್ನು ಈಕಡೆ ಇಸ್ರೇಲು - ಇವೆಲ್ಲ ಪ್ರಪಂಚದಲ್ಲಿ ಸಕ್ಕತ್ ಬೆಳ್ವಣಿಗೆ ಹೊಂದಿರೋ ದೇಶಗಳು. ಇವುಗಳ್ಗೆಲ್ಲ ಕಾಮನ್ನಾಗಿರೋ ಇನ್ನೊಂದು ವಿಷ್ಯ ಏನು ಅಂದ್ರೆ - ಇಲ್ಲೆಲ್ಲ ಜೀವನದ ಎಲ್ಲಾ ಹಂತಗಳಲ್ಲೂ, ಕೆಲಸಗಳಲ್ಲೂ ಸ್ಥಳೀಯ ಭಾಷೆಗಳ್ನೇ ಬಳಸ್ತಾರೆ. ಸಮಾಜದಲ್ಲಿ ಎಲ್ಲಾ ವ್ಯವಹಾರಗಳಷ್ಟೇ ಅಲ್ಲ, ಎಲ್ಲಾ ರೀತಿಯ ಉನ್ನತ ಶಿಕ್ಷಣ (ಇಂಜಿನಿಯರಿಂಗು, ಮೆಡಿಕಲ್ಲು ಕೂಡ) ಮತ್ತು ಉದ್ಯೋಗಗಳು - ಇದ್ಯಾವ್ದೂ ಔರೌರ ಭಾಷೇಲಲ್ದೆ ಬೇರೆ ಒಂದು ಭಾಷೇಲಿ ಮಾಡಬೇಕು ಅನ್ನೋ ಕೆಟ್ಟ ಯೋಚನೇನ ಔರು ಮನಸ್ಸಿಗೇ ತಂದ್ಕೊಂಡಿಲ್ಲ! ಒಟ್ನಲ್ಲಿ ಇವುಗಳ ಏಳ್ಗೆಗೆ ಇವುಗಳು ತಂತಮ್ಮ ಭಾಷೆಗಳ್ನ ಚೆನ್ನಾಗಿ "ಇಟ್ಕೊಂಡ್" ಇರೋದು ಬಹಳ ಮುಖ್ಯವಾದ ಕಾರಣ ಅನ್ನೋದು ಸ್ಪಷ್ಟ.

ಈ ದೇಶಗಳಿಗೂ ವಲಸಿಗರು ಬರದೆ ಏನಿಲ್ಲ. ಆದರೆ ಇವುಗಳಲ್ಲಿ ಅಲ್ಲಲ್ಲೀ ಭಾಷೆ ಕಲೀದೆ ವಲಸಿಗರ್ಗೆ ಬದುಕೋದೇ ಕಷ್ಟ ಅಂತ ನಿಮಗೆ ಗೊತ್ತಿದ್ಯಾ? ಅಲ್ಲಿಗೆ ಹೋಗೋ ಜನ ಅಲ್ಲಲ್ಲೀ ಭಾಷೆ ಕಲ್ತೇ ಕಲೀತಾರೆ. ಯಾಕೆ? ಯಕೇಂದ್ರೆ ಅಲ್ಲೀ ಜನ (ಸರ್ಕಾರಾನೂ ಸೇರಿದಂತೆ) ತಂತಮ್ಮ ಭಾಷೆಗಳ್ನ ಅಷ್ಟು ಗೌರವಿಸಿ, ಅದನ್ನ ಕಲೀದೇ ಇರೋರು ಒಳಗೆ ಬಂದ್ರೆ ಔರು ನಿಧಾನವಾಗಿ ಸ್ಥಳೀಯರಲ್ಲಿ "ಒಬ್ಬರಾ"ಗದೆ ಅವರದೇ "ರಾಜ್ಯ" ಮಾಡ್ಕೊಳಕ್ಕೆ ಶುರು ಮಾಡ್ತಾರೆ ಅನ್ನೋದ್ನ ಅರ್ಥ ಮಾಡ್ಕೊಂಡಿರೋದೇ ಮುಖ್ಯವಾದ ಕಾರಣ.

ಇದನ್ನ ನಾವೂ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ನಾವೇ ಸರ್ವನಾಶ ಆಗಿಹೋಗೋಂಥಾ ಪರಿಸ್ಥಿತಿ ಇವತ್ತು ನಮ್ಮ ಮುಂದೆ ಐತೆ ಗುರು!

ಇವತ್ತಿನ ದಿನ ಬೆಂಗ್ಳೂರಲ್ಲಿ (ಮತ್ತು ನಿಧಾನವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮುಂತಾದ ಜಾಗಗಳಲ್ಲಿ) ವಲಸಿಗ್ರು ಬಂದು ಕನ್ನಡವನ್ನೇ ಮೂಲೆಗುಂಪು ಮಾಡಕ್ಕೆ ಹೊರ್ಟಿರೋದಕ್ಕೆ ನಮ್ಮ ಪೆದ್ದತನಾನೇ ಕಾರಣ, ನಮ್ಮ ಅತಿಯಾದ ವಿನಯಶೀಲತೇನೇ ಕಾರಣ ಗುರು! ಇದು ಹೀಗೇ ಮುಂದುವರೆದರೆ ಕನ್ನಡನಾಡು ಕನ್ನಡಿಗರದಾಗಿ ಉಳೀದೆ ಹಿಂದಿಯೋರ್ದೋ ತಮಿಳ್ರುದೋ ತೆಲುಗ್ರುದೋ ಬಂಗಾಳಿಗಳ್ದೋ ಆಗಿ ಚೂರುಚೂರಾಗೋಗತ್ತೆ ಗುರು. ಇದರಿಂದ ಕನ್ನಡಿಗರು ಸರ್ವನಾಶ ಆಗೋಗ್ತಾರೆ ಗುರು!

ಇದ್ನ ತಡೆಗಟ್ಟಕ್ಕೆ ಸರ್ಕಾರ ಮಾಡ್ಬೇಕಾಗಿರೋದು

ಇದನ್ನ ತಡೆಗಟ್ಟೋ ಕೆಲಸವನ್ನ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಮೂಲಕ ಸರಿಯಾಗಿ ಮಾಡ್ಕೊಂಡ್ ಹೋದ್ರೆ ಕನ್ನಡಕ್ಕೆ (ಮತ್ತು ಅದರ ಮೂಲಕ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ) ನಿಜವಾದ ರಕ್ಷಣೆ ಕೊಟ್ಟಂಗಾಗತ್ತೆ ಗುರು.

ನಮ್ಮ ಸರ್ಕಾರ ವಲಸಿಗರಿಗೆ ಕಡ್ಡಾಯವಾಗಿ ಕನ್ನಡ ಕಲೀಲೇಬೇಕು ಅನ್ನೋ ನಿಯಮ ಮಾಡ್ಬೇಕು. ವಲಸಿಗರು ಕನ್ನಡಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಕಡೆಗಣಿಸಕ್ಕೆ ಬಿಡಬಾರದು (CBSE/ICSE ನೌರು ಇದ್ನ ಸಕ್ಕತ್ತಾಗಿ ಕಲ್ತಿದಾರೆ!). ಹಾಗೇ ಕನ್ನಡದಲ್ಲಿ ಮಾತ್ರ ಸರ್ಕಾರದ ಯಾವುದೇ ಇಲಾಖೆ ಜೊತೆ ಸುಲಭವಾಗಿ ವ್ಯವಹಾರ ಮಾಡಕ್ಕಾಗೋದು ಅನ್ನೋ ವ್ಯವಸ್ಥೆ ಜಾರಿಗೆ ತರ್ಬೇಕು. ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡವಿಲ್ದೆ ಬದುಕಕ್ಕೇ ಕಷ್ಟ ಅನ್ನೋ ದಿನ ಬರ್ಬೇಕು ಗುರು. ಇದರಿಂದ ವಲಸಿಗರ್ಗೆ ಕಷ್ಟ ಕೊಡಬೇಕು ಅನ್ನೋದು ಉದ್ದೇಶವಾಗಿರಬಾರದು, ನಮಗೆ - ಅಂದ್ರೆ ಕನ್ನಡಿಗರಿಗೆ ಒಳ್ಳೇದಾಗಬೇಕು ಅನ್ನೋದೇ ಉದ್ದೇಶವಾಗಿರ್ಬೇಕು. ಕನ್ನಡನಾಡಲ್ಲಿ ವಲಸಿಗರಿಗೆ ಹೂವಿನ ಹಾಸಿಗೆ ಹಾಸಿಕೊಟ್ಟು ಕನ್ನಡಿಗರ್ನೇ ಮುಳ್ಳ ಮೇಲೆ ಬಿದ್ದುಗೊಳ್ಳಿ ಅಂತ ಹೇಳ್ತಿರೋ ಇವತ್ತಿನ ವ್ಯವಸ್ಥೇನ ಬದಲಾಯಿಸಬೇಕು ಗುರು!

ನಾವು-ನೀವು ಮಾಡಬೇಕಾಗಿರೋದು

ನಾಡಿನ ಏಳ್ಗೆಗಾಗಿ ಇನ್ನೇನು ಮಾಡದೇ ಹೋದರೂ ನಾವು ಹೊರಗಿನೋರ್ನ ಕನ್ನಡದಲ್ಲಿ ಮಾತಾಡಿಸೋದಕ್ಕಾದರೂ ಪ್ರಯತ್ನ ಪಡಬೋದಲ್ಲ? ಇದರ ಮೂಲಕಾನೇ ಕನ್ನಡ ಕಲಿಸಬೋದಲ್ಲ? ಎಷ್ಟೇ ಆದರೂ ಔರಿಗೂ ಅಕ್ಕ-ಪಕ್ಕ ಕೇಳಿ ಸೊಲ್ಪ ಕನ್ನಡ ಬಂದೇ ಬರ್ತಿರತ್ತೆ. ಔರ್ನ ಕನ್ನಡದಲ್ಲಿ ಮಾತಾಡ್ಸೋ ಪ್ರಯತ್ನ ಮಾಡದೆ ಔರೌರ್ನ ಔರೌರ್ ಭಾಷೇಲೇ ಮಾತಾಡಿಸ್ತೀವಲ್ಲ, ಅದೇ ನಾವು ಮಾಡೋ ಮೊದಲನೇ ತಪ್ಪು. ಇದ್ನ ತಿದ್ಕೋಬೇಕು ಗುರು. ಮೊದ್ಲಿಂದ್ಲೇ ಕನ್ನಡಾನ ನಾವು ಬಿಟ್ಕೊಟ್ಬುಟ್ರೆ ಔರಿಗೆ ಮೊದಲನೇ ಸೆಕೆಂಡಿಂದಾನೇ "ಓಹೋ ಇವರಿಗೇ ಕನ್ನಡ ಬೇಡ!" ಅನ್ನಿಸಿಬಿಡುತ್ತೆ. ಹೀಗಾಗಬಾರ್ದು.

ಹಾಗೇ ಕನ್ನಡ ಕಲ್ಸೋದನ್ನ ಕನ್ನಡಿಗರು "ಸಮಾಜಸೇವೆ" ಅಂತ ಯೋಚ್ನೆ ಮಾಡ್ದೆ ಅದನ್ನ ಒಂದು ಉದ್ಯಮ ಅಂತ ತೊಗೋಬೇಕು. ಇದೊಂದು ಹಳೇ ರೋಗ. ಕನ್ನಡಕ್ಕೆ ಸಂಬಂಧಪಟ್ಟಿದ್ದೆಲ್ಲ "ಸೇವೆ" ಅಂದ್ಕೊಳೋ ಅವಷ್ಯಕತೇನೇ ಇಲ್ಲ. ಇದೂ ಒಂದು ಉದ್ಯಮ. ಇದರಲ್ಲಿ ಸಕ್ಕತ್ ದುಡ್ಡಿದೆ ಗುರು! ಅಲ್ಲ - ಅದೆಲ್ಲಿಂದ್ಲೋ ಪ್ಯಾರಿಸ್ಸಿಂದ (Alliance Francaise), ಬರ್ಲಿನ್ನಿಂದ (Goethe Institut - Max Mueller Bhavan) ಬಂದು ನಮ್ಗೇ ಬೇರೆ ದೇಶಗಳ ಭಾಷೆ ಕಲಿಸ್ತಾ ಇರುವಾಗ ಕನ್ನಡನಾಡಲ್ಲೇ ಕನ್ನಡ ಕಲಿಸೋದನ್ನ ಒಂದು ಉದ್ಯಮ ಮಾಡ್ಕೊಂಡು ದುಡ್ಡು ಮಾಡ್ಕೊಳೋ ಯೋಗ್ತೇನೂ ನಮ್ಗೆ ಇಲ್ವಾ? ಖಂಡಿತ ಇದೆ ಗುರು!

ಇನ್ನು ನಮ್ಮ ನಮ್ಮ ಕಂಪನಿಗಳಲ್ಲಿ ಕನ್ನಡ-ಕಲಿ ಕಾರ್ಯಕ್ರಮಗಳ್ನ ನಡಿಸಕ್ಕೆ ಸಹಾಯ ಮಾಡಬೇಕು. ಮ್ಯಾನೇಜ್ಮೆಂಟಿನೋರು ಒಪ್ಪಲ್ಲ ಅಂತ ಮೊದಲಿಂದ್ಲೇ ಕೈಕಟ್ಟಿ ಕೂತ್ಕೋಬಾರ್ದು. [ಬನವಾಸಿ ಬಳಗದಿಂದ ಕನ್ನಡ-ಕಲಿ ಕಾರ್ಯಕ್ರಮಗಳನ್ನು ನಡೆಸೋದಕ್ಕೆ ನೆರವು ಬೇಕಾಗಿದ್ದರೆ ನಮಗೆ ಕೂಡ್ಲೆ ಮಿಂಚಿಸಿ.]

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು!

ಅಣ್ಣೋರ ಈವಾಡು ಒಸಿ ನೋಡ್ಮ:


ಕನ್ನಡ ನಾಡಲ್ ಹುಟ್ಟಕ್ಕೆ ಪುಣ್ಯ ಮಾಡಿರಬೇಕು ಗುರು! ಅದೆಷ್ಟೇ ಕಷ್ಟಗಳು ಇವತ್ತಿನ ದಿನ ನಮ್ಮ ಮುಂದೆ ಇರಲಿ, ಕನ್ನಡನಾಡು ಸಾಧಿಸಬೇಕಾಗಿರೋದು ಇನ್ನೂ ಬೆಟ್ಟದಷ್ಟೇ ಇರಲಿ, ಆ ಕಷ್ಟಗಳ್ನೆಲ್ಲ ಮೆಟ್ಟಿನಿಂತು, ಮೀರಿಹೋಗಲು ಶಕ್ತಿಯನ್ನೂ ಆ ಕನ್ನಡಾಂಬೆಯೇ ನಮಗೆ ಕೊಟ್ಟಿಲ್ಲವೆ? ಪ್ರಪಂಚದ ದೇಶಗಳ್ನೆಲ್ಲ ಸುತ್ತಿದರೂ, ಭಾಷೆಗಳನ್ನೆಲ್ಲ ನುಡಿದರೂ, ಜನರನ್ನೆಲ್ಲ ಭೇಟಿಯಾದರೂ ಕರ್ನಾಟಕಕ್ಕೆ, ಕನ್ನಡಕ್ಕೆ, ಕನ್ನಡಿಗರಿಗೆ ನಮ್ಮ ಕರ್ತವ್ಯಾನ ಪೂರೈಸಕ್ಕೆ ಮೈಯಲ್ಲಿ ಮಿಂಚಿರುವಾಗ ತೊಂದ್ರೆಯೇನು ಗುರು? ನಾವು ಒಗ್ಗಟ್ಟಾಗಿ ನಿಂತು ಯಾವ ಸ್ವರ್ಗಕ್ಕೂ ಕಡಿಮೆಯಿಲ್ಲದಂಥಾ ಕನ್ನಡನಾಡ್ನ ಕಟ್ಟಬಹುದು ಗುರು!

ಕಟ್ಟೇವು ಕನ್ನಡದ ನಾಡ, ಕೈ ಜೋಡಿಸು ಬಾರ!

"ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!"

ಕರ್ನಾಟಕದಲ್ಲಿ ಮೊಸರಿಗೂ ಹಿಂದೀರೋಗ ಹಿಡಿದಿರೋ ಉದಾಹರಣೆ ಇಲ್ಲಿ ನೋಡು ಗುರು (ರೋಮನ್ ಅಕ್ಷರದಲ್ಲಿ ಹಿಂದೀನ ಮೆತ್ತಗೆ ನಮ್ಮ ಮನೆಗಳಿಗೆ ತುರುಕೋ ಕೆಲಸ ಈ ಜಾಹೀರಾತು ಕೊಡೋರಷ್ಟೇ ಅಲ್ಲ, ಕೆಲವು ಪತ್ರಿಕೆಗಳೂ ಮಾಡ್ತಿವೆ. ಅದು ಬೇರೆ ವಿಷ್ಯ ಬಿಡಿ):


ಯಾರದು ತಪ್ಪು? ನೆಸ್ಲೆ ಎಷ್ಟೇ ಆದರೂ ಹೊರದೇಶದ ಕಂಪನಿ, ಅವರಿಗೇನು ಗೊತ್ತು? ಹಿಂದಿ ಹೇರಿಕೆಯನ್ನ ಒಂದು ಕಸುಬು ಮಾಡ್ಕೊಂಡಿರೋ ನಮ್ಮ ಕೇಂದ್ರಸರ್ಕಾರ, "ಬೊಂಬೆಯಾಟವಯ್ಯ, ಕರ್ನಾಟಕವೇ ಆ ಕೇಂದ್ರದವರ ಬೊಂಬೆಯಾಟವಯ್ಯ" ಅನ್ನೋ ಹಾಡಿಗೆ ಕುಣೀತಿರೋ ನಮ್ಮ ವಿಧಾನಸೌಧದ ತೂಗುತಲೆಯಪ್ಪನವರ್ಗಳು, ಕನ್ನಡಕ್ಕೆ ಬೆಂಕಿ ಬಿದ್ದಿದ್ದರೂ ಹಿಂದೀಭಕ್ತಿಯಲ್ಲಿ ತೂರಾಡ್ತಿರೋ ಕನ್ನಡದ ಜನ, ಕನ್ನಡಿಗರು ಕಂಪನಿಗಳಲ್ಲಿ ಇದ್ದರೂ ಸತ್ತಂತೆ ಕನ್ನಡದಲ್ಲಿ ಮಾತಡುವುದನ್ನೇ ಮರೆತಿರುವುದು, ನೆಸ್ಲೆಯಂಥಾ ಕಂಪನಿಗಳಲ್ಲಿ "ಛೆ! ಛೆ! ಹಿಂದಿಯಲ್ಲೇ ಜಾಹೀರಾತು ಹಾಕೋಣ, ಹಿಂದಿ ಎಷ್ಟೇ ಆದರೂ ರಾಷ್ಟ್ರಭಾಷೆ" ಅಂತ ತಪ್ಪು ತಿಳುವಳಿಕೆಯಿರೋ ಜನರು - ಇವೆಲ್ಲದರ ಕಲಸುಮೇಲೋಗರ ಕೊಳೆತು ನಾರ್ತಾ ಇರೋದಲ್ಲದೆ ಇದು ಇನ್ನೇನು ಗುರು?

ನಮ್ಮ ಕನ್ನಡ ನಾಡಲ್ಲಿ ಮುಂದೆ ಹುಟ್ಟುವ ಕನ್ನಡದ ಮಕ್ಕಳಿಗೆ ಮೊಸರು ಅಂದ್ರೆ ಏನು ಅಂತ ಗೊತ್ತಿಲ್ಲದೆ ದಹಿ ಅಂದ್ರೇನು ಅಂತ ಮಾತ್ರ ಗೊತ್ತಿರೋ ಪರಿಸ್ಥಿತಿ ಬಂದ್ರೆ ಹೆಂಗಿರತ್ತೆ ಗುರು? ಹೀಗೇ ಮುಂದುವರೆದರೆ ಮುಂದೆ ಈ ಮಕ್ಕಳು ತಾಯಂದಿರಿಗೆ "ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!" ಅಂತ ಕೇಳೋ ದಿನವೂ ಬಂದಾತು!

ನಮ್ಮ ಭಾಷೆ ಬದುಕಿರುವಾಗ್ಲೇ ಇನ್ನೊಂದು ಭಾಷೆಗೆ ಮೋರೆ ಹೋಗಿ ನಮ್ಮ ಭಾಷೆಗೆ ಎಳ್ಳು-ನೀರು ಬಿಡೋದು ಎಂತಾ ಮೂರ್ಖತನ ಅಂತ ಯೋಚನೆ ಮಾಡು ಗುರು!

ಮೊಸ್ರಿರುವಾಗ ದಹಿ ತಂದ್ ಮುಖಕ್ ಹಿಡೀತೀರಲ್ಲಾ ನಿಮಗೆ ಮೈಮೇಲೇನಾದ್ರೂ ಜ್ಞಾನ ಇದ್ಯಾ ಅಂತ ಈ ನೆಸ್ಲೆಯೋರ್ಗೆ ಕ್ಯಾಕರ್ಸ್ ಮಿಂಚೆ ಬರ್ದು, ಫೋನ್ ಹೊಡ್ದು, ಕಾಗ್ದ ಬರ್ದು, ಖುದ್ದಾಗಿ ಭೇಟಿಯಾಗಿ - ಎಲ್ಲಾ ರೀತಿಯಲ್ಲೂ ಉಗೀಬೇಕು ಗುರು! ಕರ್ನಾಟಕದಲ್ಲಿ ಮಾರಾಟ ಮಾಡಕ್ಕೆ ಕನ್ನಡದ್ ಹೊಸ ಅಂಟಿಕೆ (ಸ್ಟಿಕ್ಕರ್) ಮಾಡಿಸೋ ದುಡ್ನೂ ಉಳ್ಸಕ್ಕೆ ಹೊರ್ಟಿರೋ ನೆಸ್ಲೆಯೋರ್ಗೆ ಔರ್ ತಪ್ಪು ಗೊತ್ತಾಗೋಹಂಗ್ ಮಾಡ್ಬೇಕು ಗುರು!

ಬೆಳಗಾವಿ ಅಂತ ಹೆಸರಿಡಲು ನಮಗಿಲ್ಲ ಸ್ವಾತಂತ್ರ್ಯ

"ಬೆಳಗಾವಿಯನ್ನು ಬೆಳಗಾಂ ಅಂತಾನೇ ಕರೀಬೇಕು ಅಂತ" ಇವತ್ತಿನ ಡೆಕ್ಕನ್ ಹೆರಾಲ್ಡನ ೨೧/೮/೨೦೦೭ ಮುಖಪುಟದಲ್ಲಿ ಹಾಕಿದ್ದಾರೆ. ಏನೇ ಹೇಳಿ ಕೇಂದ್ರದಲ್ಲಿ ಲಾಬಿ ಮಾಡೋ ವಿಷಯಕ್ಕೆ ಬಂದರೆ ಮರಾಠಿಗರ ಒಗ್ಗಟ್ಟು ನಿಜಕ್ಕೂ ಬಲಶಾಲೀನೆ.

ನಮ್ಮ ನಾಯಕರಗಳ ಕಂಬಿ ಇಲ್ದ ರೈಲು

ಸುವರ್ಣ ಕರ್ನಾಟಕದ ಆಚರಣೆ ಸಂದರ್ಭದಲ್ಲಿ, ತಪ್ಪು ತಪ್ಪಾಗಿ ನಮ್ಮ ಊರುಗಳ್ನ ಕರೆಯುತ್ತಿದ್ದದ್ನ ಸರಿ ಮಾಡಕ್ಕೆ ೧೨ ಊರುಗಳ ಹೆಸರುಗಳ ಬದಲಾವಣೆ ಮಾಡೋ ಮನ್ಸ್ ಮಾಡ್ತು ನಮ್ ಸರ್ಕಾರ. ಅದಷ್ಟ್ ಸುಲಭಾನಾ? ಒಂದು ವಾರದಲ್ಲಿ ಮಾಡಿಬಿಡ್ತೀವಿ ಅಂತ ನಮ್ಮ ನಾಯಕರುಗಳು ಕಿವಿ ಮೇಲೆ ಹೂ ಇಟ್ಟರೇ ವಿನಹ ಬೇರೆ ಏನೂ ಮಾಡಲಿಲ್ಲ. ಈಗ ಒಂದೂಮುಕ್ಕಾಲು ವರ್ಷದ ಮೇಲೆ ಬೆಳಗಾವಿಯ ಹೆಸರನ್ನು ಬಿಟ್ಟು ಉಳಿದ ೧೧ ಊರುಗಳ ಹೆಸರುಗಳನ್ನು ಬದಲಾಯಿಸಿಕೊಳ್ಳಬಹುದು ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ಮಜಾ ಅಂದ್ರೆ ಬೆಳಗಾವಿ ಹೆಸರು ಯಾಕೆ ಕೇಂದ್ರ ಬೇಡ ಅನ್ತು ಅನ್ನೋ ಕಾರಣ ಖುದ್ದು ನಮ್ಮ ಮುಖ್ಯಮಂತ್ರಿಗಳಿಗೂ ಗೊತ್ತಿಲ್ವಂತೆ. ಆದ್ರು ನಾವು ನಮ್ಮ ನಿರ್ಧಾರದಲ್ಲಿ ಮುಂದುವರೆಯುತ್ತೇವೆ ಅಂತ ಹೇಳೋದು ನೋಡಿದ್ರೆ ನಗು ಬರುತ್ತೆ, ಹಾಗ್ ಇದ್ದಿದ್ರೆ ಯಾಕೆ 1 ವರ್ಷ 9 ತಿಂಗಳೂ ಕೇಂದ್ರದ ಒಪ್ಪಿಗೆಗೆ ಕಾಯಬೇಕಿತ್ತು ಅಂತ ಪ್ರಶ್ನೆ ಬರೋಲ್ವಾ?

ನಮ್ಮ ಜುಟ್ಟು ಕೇಂದ್ರದ ಕೈನಲ್ಲಿ

ಕಳೆದ ವಾರ ನಾವು ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷ ಆಯಿತು ಅಂತ ಬಾವುಟ ಹಾರಿಸಿ, ಚಪ್ಪಾಳೆ ತಟ್ಟಿ, ಸಿಹಿ ತಿಂದ್ವಿ. ಆದ್ರೆ ಈಗ ನಮ್ಮೂರ್ ಹೆಸ್ರು ಬದಲಾಯಿಸಿಕೊಳ್ಳೋ ಅಷ್ಟೂ ಸ್ವಾತಂತ್ರ ಹೊಂದಿಲ್ಲ ಅನ್ನೋದು ಸ್ವಾತಂತ್ರ ಅನ್ನೋ ಪದದ ಸಖತ್ ವಿಡಂಬನೆ ಅಲ್ವಾ ಗುರು?

ಇದೊಂದೇ ವಿಷ್ಯಾ ಅಲ್ಲಾ, ನಿಮ್ಮೂರಿನ ಕೆರೆ ಹೂಳೆತ್ತಕ್ಕೆ, ನಿಮ್ ಮಕ್ಕಳಿಗೆ ಏನು ಪಾಠ ಮಾಡ್ಬೇಕು ಅಂತ ತೀರ್ಮಾನ ಮಾಡಕ್ಕೆ, ನಿಮ್ಮ ವಿಮಾನ ನಿಲ್ದಾಣಕ್ಕೆ ನಿಮಗೆ ಬೇಕಾದ ಹೆಸ್ರಿಡಕ್ಕೆ...ಹೀಗೆ ತುಂಬಾ ವಿಷ್ಯಗಳಲ್ಲಿ ನಮಗೆ ಕೇಂದ್ರ ಸರ್ಕಾರದ್ ಒಪ್ಪಿಗೆ ಬೇಕು. ಅಷ್ಟೊಂದು ಸ್ವಾಯತ್ತತೆ (ಒಳಸ್ವಾತಂತ್ರ) ನಮಗಿದೆ. ಇದನ್ನೆಲ್ಲಾ ನೋಡಿದರೆ ನಮಗೆ ಸ್ವಾತಂತ್ರ ಬಂದಿಲ್ಲ, ಬಂದಿರೋದು ಕೇವಲ ಬ್ರಿಟಿಷರಿಂದ ಬಿಡುಗಡೆ ಮಾತ್ರ ಅಂತ ಅನ್ಸಲ್ವಾ ಗುರೂ?

ಭಾರತ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ ಕೇಂದ್ರದ ಹಿಡಿತದ ಪಟ್ಟಿ. ಇದರಲ್ಲಿ 97 ವಿಷಯಗಳಿದ್ದರೆ, ರಾಜ್ಯ ಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಕನ್‍ಕರೆಂಟ್ ಪಟ್ಟಿ ಅಂತ ಇದೆ. ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 210 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯ್ಯಲ್ಲಿ. ಉಳಿದ 144 ಕೇಂದ್ರದ ಕೈಯ್ಯಲ್ಲಿ. ಇದು ಅಂಕಿಗಳ ಲೆಕ್ಕಾಚಾರ ಅಷ್ಟೇ ಅಲ್ಲ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯ ಇರೋದೇನೋ ಸರಿ, ಆದರೆ ಈಗಿನ ವ್ಯವಸ್ಥೆಯಲ್ಲಿ ಬೇಕಾದ ಹಾಗೂ ಬೇಡವಾದ ವಿಷಯಗಳಲ್ಲೆಲ್ಲಾ ನಾವು ಕೇಂದ್ರದ ಹಿಡಿತದಲ್ಲಿಯೇ.

ಹೋಗ್ಲಿ 210ರಲ್ಲಿ 66 ಆದ್ರೂ ನಮ್ಮ ಕೈಯ್ಯಲ್ಲಿ ಇದೆ ಅಂತ ಖುಷಿ ಪಡೋಣ ಅಂದ್ರೂ, ಆ ಅಧಿಕಾರ ಇರೋ ನಮ್ಮ ವಿಧಾನ ಸಭೆ, ವಿಧಾನ ಪರಿಷತ್ ಗಳು ಇರೋದು ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿ. ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಅಂತ ಡೆಲ್ಲಿ ಕಡೆ ನೊಡ್ತಾರೆ ಅಂದ್ರೆ ಇವತ್ತಿಗೂ ನಾವು ಇನ್ನೊಬ್ಬರ ಅಧೀನವೇ ಅಲ್ವಾ ಗುರು?

ಒಟ್ಟಿನಲ್ಲಿ ನಮ್ಮ ಊರುಗಳ ಹೆಸರನ್ನು ಸರಿಪಡಿಸುವ ಕನಿಷ್ಠ ಸ್ವಾತಂತ್ರ ಕೂಡ ನಮಗಿನ್ನೂ ಸಿಕ್ಕಿಲ್ಲ ಅಂತ ಇದರ ಅರ್ಥ ಅಲ್ವಾ?

4.4 ಕೋಟಿಗೆ ಬರೀ 14 ಲಕ್ಷ ಓದುಗರು ಸಾಕಾ?

ಮೊನ್ನೆ ವಿಜಯಕರ್ನಾಟಕದಲ್ಲಿ ಕನ್ನಡ ದಿನಪತ್ರಿಕೆಗಳ ಪ್ರಸಾರದ ಬಗ್ಗೆ ಒಂದು ಜಾಹಿರಾತು ಬಂದಿದೆ(ಕೆಳಗಿರುವ ಚಿತ್ರ ನೋಡಿ).

ಅಲ್ರೀ ಪ್ರಪಂಚದಲ್ಲಿ ಕನ್ನಡಿಗರ ಜನಸಂಖ್ಯೆ 4.4 ಕೋಟಿ ಇದೆಯಂತೆ. ಅದರಲ್ಲಿ ಓದು ಬರಹ ತಿಳ್ದಿರೋರು ನೂರಕ್ಕೆ ಅರವತ್ತೇಳು ಜನ. ಅಂದ್ರೆ ಒಟ್ಟು 2.95 ಕೋಟಿ ಜನರು. ಆದ್ರೆ ಒಟ್ಟು ಮಾರಾಟವಾಗೋ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಕೂಡ್ಸುದ್ರೆ ಆ ಸಂಖ್ಯೆ ಬರೀ 14.2 ಲಕ್ಷಾನೂ (14,19,981) ದಾಟಲ್ಲ ಅಂದ್ರೆ ಸಂಕಟ ಆಗಲ್ವೇನ್ರಿ?

ಅದೇ ಪ್ರಪಂಚದ ಒಟ್ಟು ಮಲಯಾಳಿಗಳ ಜನಸಂಖ್ಯೆ 3.6 ಕೋಟಿ,
ಅಕ್ಷರ ಕಲ್ತೋರು ನೂರಕ್ಕೆ 70 ಜನ ಅಂದರೆ 2.50 ಕೋಟಿ ಜನ. ಆದ್ರೆ
ಮಲಯಾಳ ಮನೋರಮ ಅನ್ನೋ ಒಂದು ಪತ್ರಿಕೇನೇ ಎಷ್ಟು ಮಾರಾಟ ಆಗುತ್ತೆ ಗೊತ್ತಾ? 74 ಲಕ್ಷ ಪ್ರತಿಗಳು. ಅದನ್ನು ಓದೋರು 1.5 ಕೋಟಿ ಜನರು.

ಇದಕ್ಕೆ ಎನು ಕಾರಣ?

ದೊಡ್ಡಸ್ತಿಕೆಗಾಗಿ, ಕಲಿಕೆಗಾಗಿ, ವಿಶೇಷ ರೀತಿಯ ಮಾಹಿತಿಗಳಿಗಾಗಿ (ಆರ್ಥಿಕ, ವ್ಯಾಪಾರಿ, ಶೇರು ಸಂಬಂಧಿ ಮಾಹಿತಿ), ಬೇರೆಯವರು ಏನಂದುಕೋತಾರೊ ಅಂತ ಕೀಳರಿಮೆ ತೊಡೆದುಕೊಳ್ಳೋಕ್ಕಾಗಿ ಅಂತೆಲ್ಲಾ , ಇಂಗ್ಲಿಷ್ ಪತ್ರಿಕೇನ ಕೈಲಿಟ್ಟುಕೊಂಡು ಓಡಾಡ್ತೀವಿ.

ನಮ್ಮ ಮಾಧ್ಯಮದವರೂ ಕೂಡಾ ಕನ್ನಡದಲ್ಲೇ ಜಾಗತಿಕ ಗುಣಮಟ್ಟದ ಎಲ್ಲ ವಿಷಯಗಳಿಗೂ ಸಂಬಂಧಪಟ್ಟ ಬೇರೆ ಬೇರೆ ಅಭಿರುಚಿಗಳನ್ನು ತಣಿಸೋ ಪತ್ರಿಕೆಗಳನ್ನು ಹೊರತರಲೇ ಬೇಕಾಗಿದೆ. ಕನ್ನಡದಲ್ಲೇ India today ಬರಲಿ, ಜೊತೇಲೇ ಅದನ್ನು ಮೀರ್ಸೋ ಕನ್ನಡದ್ದೇ ಟುಡೇಗಳು ಬರ್ಬೇಕಲ್ವಾ ಗುರು? ಅಂತದ್ದನ್ನು ಬೆಳೆಸೋ ಹೊಣೆಗಾರ್ಕೆ ನಮ್ದು ನಿಮ್ದು ಎಲ್ರದ್ದೂ ಕೂಡಾ.

ಒಂದು ಸಣ್ಣ ತೀರ್ಮಾನ ಮಾಡೋಣ್ವಾ?
  • ನಾವು ಕೊಂಡ್ಕೊಳ್ಳೋ ಮೊದಲ್ನೇ ಪತ್ರಿಕೆ ಕನ್ನಡದ್ದೇ ಆಗಬೇಕಿದೆ. ಆಮೇಲೆ ಬೇಕಾದ್ರೆ ಎರಡನೇ ಪತ್ರಿಕೆಯಾಗಿ ಟೈಮ್ಸೋ, ಮತ್ತೊಂದೋ ಕೊಂಡ್ಕೊಳ್ಳೊಣ.
  • ಕೊಂಡ್ಕೊಳ್ಳೋ ಕನ್ನಡ ಪತ್ರಿಕೆಯನ್ನ ನಮ್ಮ ಕಾರಲ್ಲೋ, ಕ್ಯಾಬಲ್ಲೋ ಹೋಗ್ಬೇಕಾದ್ರೆ ಎಲ್ರೂಗೂ ಕಾಣೋ ಹಾಗೆ ಕೈಲಿಟ್ಟುಕೊಂಡು ಹೋಗೋಣ.
  • ನಮ್ಮ ಸಂಸ್ಥೆಗಳಲ್ಲಿ ಕನ್ನಡದ್ ಒಂದಾದ್ರೂ ಪತ್ರಿಕೆ ತರ್ಸಕ್ ವ್ಯವಸ್ಥೆ ಮಾಡೋಣ.

ಮನಸ್ಸು ಮಾಡಿದರೆ ಇದು ಖಂಡಿತ ಸಾಧ್ಯ. ಏನಂತ್ಯ ಗುರು?

ಬೆಳಗಾವಿ ವಿಷಯ ಬಿಡಿ, ಮೊದ್ಲು ಮುಂಬೈ ಉಳಿಸಿಕೊಳ್ಳಿ

ಮುಂಬೈನಾಗೆ ಮರಾಠಿ ಸಂಸ್ಕ್ರತಿ 'ವಿಠ್ಠಲ ವಿಠ್ಠಲ ಪಾಂಡುರಂಗ' ಅಂತ ಮಕಾಡೆ ಮಲ್ಗಿರೋದು ಎಲ್ರಿಗೂ ತಿಳ್ದ ವಿಷ್ಯ. ೯ನೇ ಆಗಸ್ಟ್ ೨೦೦೭ ರಂದು ಮಹಾರಾಷ್ಟ್ರದ ಮುಂಚೂಣಿ ನಾಯಕ್ರಲ್ಲಿ ಒಬ್ಬರಾದ 'ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ' ರಾಜ್ ಠಾಕ್ರೆ ದಿಡೀರ್ನೆ ಮುಂಬೈ ಮಹಾನಗರ ಪಾಲಿಕೆ ಕಛೇರಿಗೆ ದೌಡಾಯ್ಸಿ ಒಂದು ನಿವೇದ್ನೆ ಸಲ್ಸಿದ್ದ್ರ ಬಗ್ಗೆ ನಿಮ್ಗೆನಾದ್ರು ಗೊತ್ತಾ?

ಯಾವುದೇ ರೀತಿಯ ಹೆಸರಿನ ಹಲಗೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಕೊಡ್ಬೇಕು ಅನ್ನೊ ಇತ್ತೀಚ್ಗೆ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಹೊರಡ್ಸಿರೋ ಆದೇಶದ ಬೈಲಾನ ರಾಜ್ ಠಾಕ್ರೆ ಮುಂಬೈ ಪಾಲಿಕೆಗ್ ತೋರ್ಸಿ, 'ಮುಂಬೈಲಿ ಮರಾಠಿ ಉಳ್ಸ್ಕೊಳಕ್ ಈ ರೀತಿ ಒಂದ್ ದಾರಿ ಇದೆ, ಕರ್ನಾಟಕದ ತರ ನೀವೂ ಈ ನಿಯಮ ಜಾರಿಗ್ ತನ್ನಿ' ಎಂದಿದ್ದಾರೆ. ನಮ್ಮ ಸರ್ಕಾರದ ಈ ಆದೇಶ ಪರರಾಜ್ಯದ ಸಂಸ್ಕೃತಿ ಉಳ್ವಿಗೆ ನೆರುವಾಗೋಕೆ ಕೆಲವರ ಕಣ್ ತೆರ್ಸಿರೋದು ಸಂತೋಷದ್ ಸಂಗತಿನೇ! ಈ ಆದೇಶ ಇದ್ರೂನೂ ಅನುಷ್ಠಾನದ ನ್ಯೂನತೆ ಇನ್ನೂ ಕಂಡ್ಬರ್ತಿದೆ.

ಎಲ್ಲಾ ಹಲಗೆಗಳಲ್ಲೂ ಕನ್ನಡ ಎದ್ದು ಕಾಣ್ಬೇಕು, ಈ ಊರಿಗೆ ಯಾರೇ ಬಂದಿಳಿದ್ರೂ ಅವರ್ಗೆ ಕನ್ನಡ ಕಾಣ್ಸಿ, ನಮ್ಮ ಭಾಷೆ ಬಗ್ಗೆ ಗೌರವ ಮೂಡ್ಸ್ಬೇಕು. ಆಗ್ಲೇ ಅಲ್ವೇ ಆದೇಶಕ್ ದೊರಕುವ ಸಾರ್ಥಕತೆ? ಎಲ್ಲಾ ಇಲಾಖೆಯಾಲ್ಲೂ ಅದು ಕಡ್ಡಾಯವಾಗಿ ಅನುಷ್ಠಾನ ಆಗ್ಬೇಕು. ಅವುಗಳು ಬೇರೆ ರಾಜ್ಯದ್ ಸಂಸ್ಕೃತಿನೂ ಉಳ್ಸಕ್ಕೆ ಆಯಾ ರಾಜ್ಯದ್ ನಾಯಕರಿಗೆ ಮಾದರಿ ಆಗ್ಬೇಕು. ಕರ್ನಾಟಕದಲ್ಲಿ ಕನ್ನಡ ಅಂತ ನಾವು ಹೇಗೆ ಹೇಳ್ತಿದಿವೋ ಹಾಗೆ ತಮಿಳ್ನಾಡಲ್ ತಮಿಳ್, ಆಂಧ್ರದಲ್ಲಿ ತೆಲ್ಗು, ಗುಜ್ರಾತ್‍ನಲ್ಲಿ ಗುಜ್ರಾತಿ ಇರ್ಬೇಕು. ಅದೇ ಈ ಭಾರತ್ ಮಾತೆ ಈ ದೇಶಾನ್ ಹೆತ್ತಾಗ್ ಕಂಡಿರೋ ಕನಸು.

ಕೊನೆ ಸಿಡಿ: ಮುಂಬೈನಾಗ್ ಹೋಟೆಲ್ - ಡ್ಯಾನ್ಸ್ ಬಾರ್ - ಇತ್ರೆ ವ್ಯಾಪಾರ ನಡೆಸ್ತಿರೋ ನಮ್ಮ ದಕ್ಸಿಣ ಕನ್ನಡದ್ ಜನ ಹೇಗೆ ಹೋಂದುಕೊಂಡು ಹೋಗ್ತಾ ಇದ್ದಾರೋ, ಹಾಗೆ ಇರೋದು ಬಿಟ್ಟು ಬೆಳ್ಗಾವಿ ಮಹಾರಾಷ್ಟ್ರಕ್ ಸೇರ್ಬೇಕು ಅಂತ ಅಲ್ಲಿನ್ ಕೆಲ್ವು ಮರಾಠಿ ಪುಂಡ್ರು ಚೀರಾಡ್ಕೋತಾ ತೂರಾಡ್ತಿರೋ ಸುದ್ದಿ ಕೇಳಿದ್ರೆ ಒಸಿ ನಗು ಬರ್ತಿದೆ ಗುರು. ಮರಾಠಿ ಏಕೀಕರಣ ಬೆಳಗಾವಿನಾಗಲ್ಲ, ಮೊದ್ಲಿಗೆ ಮುಂಬೈ ಉಳ್ಸಿಕೊಳ್ಳಿ ಅಂತ ಅವರಿಗೆ ಕಿವಿಮಾತು ಹೇಳಬೇಕು.

ಲಕ-ಲಕ ಅಂತ ಹೊಳೆಯುತ್ತಿದೆ ನಮ್ಮ ಕನ್ನಡ ಚಿತ್ರೋದ್ಯಮ!

ಕನ್ನಡ ಚಿತ್ರರಂಗ ಎಂದೂ ಕಾಣದ ಯಶಸ್ಸು ಕಾಣುತ್ತ ಇದೆ ಅಂತ ಡೆಕ್ಕನ್ ಹೆರಾಲ್ಡನ ಆಗಸ್ಟ ೫ರ ಸುದ್ದಿ ಹೇಳತ್ತೆ. ತೆಲುಗು ಚಿತ್ರರಂಗಕ್ಕೆ ರೀಮೆಕ್ ಮಾಡಕ್ಕೆ ಈಗ ಕನ್ನಡ ಚಿತ್ರರಂಗ ಸ್ಪೂರ್ತಿ ಅಂತ ಇನ್ನೊಂದು ಸುದ್ದಿ ಹೇಳತ್ತೆ. ನಾವೇನು ಕಮ್ಮಿ ಅಂತ ಆಂಗ್ಲ ಸುದ್ಧಿ ವಾಹಿನಿಗಳು ಕನ್ನಡ ಹೊಸ ಮುಖಗಳ ಬಗ್ಗೆ ಸುದ್ದಿ ಹಾಕ್ತಾ ಇವೆ.

ಯಶಸ್ಸನ್ನು ಗಲ್ಲಾಪೆಟ್ಟಿಗೆಯಲ್ಲಿ ಮಾಡಿರುವ ಹಣಗಳಿಕೆ ಮತ್ತು ಅದರ ಮೇಲೆ ಮಾಡಿರುವ ಬಂಡವಾಳದ ಸಮೀಕರಣದಲ್ಲಿ ಅಳೆದರೆ, ಇವತ್ತು ಭಾರತ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳು ಕಾಣುತ್ತಿರುವ ಯಶಸ್ಸು ಬೇರೆ ಭಾಷೆಗಳಲ್ಲಿ ಆಗ್ತಾ ಇಲ್ಲ. ಕನ್ನಡ ಚಿತ್ರ ಒಂದು ಚಿತ್ರಮಂದಿರದಲ್ಲಿ ತೆರೆ ಕಂಡರೆ ಕನಿಷ್ಠ ೧೦೦ ದಿನದ ಪ್ರದರ್ಶನ ಕಾಣ್ತಾ ಇದೆ ಅಂತಾನೇ ಎಲ್ಲರ ಗಮನ ನಮ್ಮ ಮೇಲೆ ಬಂದಿದೆ.
ಹಿಂದೆ, ಸುಮ್ಕೆ ಒಂದು ಕನ್ನಡ ಚಿತ್ರ ನೋಡಿರದ ಯಾವ ಪರಭಾಷಿಕ "ಕನ್ನಡ ಚಿತ್ರನಾ, ಬೊ ಕಳಪೆ ಇರತ್ತೆ, ಗುಣಮಟ್ಟ ಸ್ವಲ್ಪಾನೂ ಇರೋದಿಲ್ಲ" ಅಂತ ಅಡಸಾ-ಉಡಾಸ ಮಾತು ಆಡ್ತಾ ಇದ್ದನೊ, ಅವನೇ ಇವತ್ತು ಕನ್ನಡ ಚಿತ್ರಗಳನ್ನು ನೋಡ್ತಾ ಇರೋದೇ ಇದ್ಕೆ ಸಾಕ್ಷಿ.

ಹೊಸ ಅಲೆ
ಮುಖ್ಯವಾಗಿ ೨೦೦೪ ನಂತರ ಕನ್ನಡ ಚಿತ್ರೊದ್ಯಮ ಬಹಳಷ್ಟು ರೀತಿಯಲ್ಲಿ ಬೆಳದಿದೆ. ಹೊಸ ಪ್ರತಿಭೆಗಳು ಎಲ್ಲಾ ರಂಗದಲ್ಲಿ ಗುರುತಿಸಿ, ಮನ್ನಣೆ ಕೊಟ್ಟಿದೆ, ಅದ್ಕೆ ನೋಡು ಬಂದೊರೆಲ್ಲ ಹೊಸ ಪ್ರಯೋಗ ಮಾಡ್ತಾ ಅವ್ರೆ. ಇದು ಒಂದು ಹೊಸ ತರಹದ ಆರೋಗ್ಯಕರ ಸ್ಪರ್ಧೆಯನ್ನು ಎರ್ಪಡಿಸಿದೆ. ಪ್ರತಿಯೊಬ್ಬನೂ ಒಳ್ಳೆ ಗುಣಮಟ್ಟದ ಚಿತ್ರ ಮಾಡಲೇ ಬೇಕು, ಇಲ್ಲಾಂದ್ರೆ ಉಳಿಗಾಲವಿಲ್ಲ ಅನ್ನೋ ಜವಾಬ್ದಾರಿಯನ್ನು ತಂದಿದೆ. ಏನೇ ಹೇಳು ಗುರು, ಇಂದು ಕನ್ನಡ ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗೆ ಕಾಣ್ತಾ ಇದೆ.

ಮಾರುಕಟ್ಟೆ ವಿಸ್ತರಣೆ
ಕನ್ನಡ ಚಿತ್ರ ಅಂದ್ರೆ ಕೇವಲ ಬಿ.ಕೆ.ಟಿ. ಕೇಂದ್ರಗಳಿಗೆ ಮಾತ್ರ ಅನ್ನೋ ಕಾಲ ಹೋಗಿದೆ. ಈಗ ದೇಶವಿದೇಶಗಳಲ್ಲಿ ಕನ್ನಡ ಚಿತ್ರಗಳು ಎಕಕಾಲದಲ್ಲಿ ತೆರೆ ಕಂಡು, ಅಲ್ಲಿ ಕೂಡ ಭರ್ಜರಿ ಯಶಸ್ಸನ್ನು ಕಾಣುತ್ತಾ ಇವೆ. ಅದಕ್ಕೆ ನೋಡು ಗುರು ಪುಣೆಯಲ್ಲಿ/ಅಮೇರಿಕಾ/ಲಂಡನ್/ಚೆನ್ನೈಯಲ್ಲಿ ಕೂಡ ಮುಂಗಾರು ಮಳೆ ಚಿತ್ರ ಜಯಭೇರಿ ಬಾರಿಸಿದೆ. ನಾವು ಬೇರೆ ಚಿತ್ರಗಳಿಗೆ ಇಲ್ಲಿ ಮಾರುಕಟ್ಟೆ ಕೊಟ್ಟು, ನಾವು ಅವರ ಮಾರುಕಟ್ಟೆಯ ಲಾಭ ಪಡೆಯದಿದ್ದರೆ ಅದು ನಮ್ಮ ಮೂರ್ಖತನವನ್ನು ತೋರಿಸುತ್ತದೆ ಅಷ್ಟೆ. ಒಟ್ಟಿನಲ್ಲಿ ಯಶಸ್ಸು ಹೀಗೆ ಇರಬೇಕಾದರೆ ಮಾರುಕಟ್ಟೆ ವಿಸ್ತಾರ ಆಗಲೇಬೇಕು.

ಹೆಚ್ಚಿದ ಬಂಡವಾಳ
ಮಾರುಕಟ್ಟೆ ವಿಸ್ತರಣೆ ಆದರೆ ಸ್ವಾಭಾವಿಕವಾಗಿ ಚಿತ್ರದ ಮೇಲೆ ಹಾಕುವ ಬಂಡವಾಳ ಕೂಡ ಹೆಚ್ಚಾಗುತ್ತದೆ. ಇದರಿಂದ ಉತ್ತಮ ತಂತ್ರಜ್ಞಾನವನ್ನು ನಮ್ಮ ಕನ್ನಡ ಚಿತ್ರಗಳಲ್ಲಿ ಕಾಣಬಹುದು. ಚಿತ್ರಕ್ಕೆ ಎಷ್ಟು ಖರ್ಚಾದರೂ ಚಿಂತೆ ಇಲ್ಲಾ, ಗುಣಮಟ್ಟದಲ್ಲಿ ರಾಜಿ ಬೇಡ ಅನ್ನುವ ಹೊಸ ಪ್ರಜ್ಞೆ ಮೂಡಿದೆ. ನಾಳೆ ಕನ್ನಡ ಚಿತ್ರೋದ್ಯಮ ಒಂದು ಲಾಭದಾಯಕ ಉದ್ಯಮ ಎಂದು ಅನಿಸಿದರೆ "ಕೊಲಂಬಿಯಾ","ವಾರ್ನರ್ " ಮುಂತಾದ ಹಾಲಿವುಡ್ ಚಿತ್ರ ನಿರ್ಮಾಣದವರೂ ಕೈ ಹಾಕ್ತಾರೆ, ಹಾಕಬೇಕು ಕೂಡ.

ಪ್ರಚಾರ
ಪ್ರತಿ ಚಿತ್ರಗಳೂ ಇಂದು ತಮ್ಮ ಪ್ರಚಾರಕ್ಕೆ ಎಲ್ಲಾ ಮಾಧ್ಯಮಗಳನ್ನು ಬಳಸಿಕೊಳ್ತವ್ರೆ. ಅದರಲ್ಲೂ ಎಫ್.ಎಮ್, ಟಿ.ವಿ. ವಾಹಿನಿಗಳು ಮತ್ತು ಪತ್ರಿಕೆಗಳು ಹೊಸ ಹೊಸ ಕನ್ನಡ ಚಿತ್ರಗಳ ಜೊತೆ ಒಪ್ಪಂದ ಮಾಡಿಕೊಂಡು ಅದರ ಬಗ್ಗೆ ಪ್ರಚಾರ ಕೊಟ್ಟು, ಹೆಚ್ಚು ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡ್ತಾನೆ ಅವ್ರೆ. ಅದ್ಕೆ ನೋಡಿ, ಚಿತ್ರ ತೆರೆಗೆ ಬರೋ ಮುಂಚೇನೇ ಅದರ ಹಾಡುಗಳು ಜನಪ್ರಿಯ ಆಗ್ತಾ ಇರೋದು. ಒಟ್ಟಾರೆ ಇದು ಕೂಡ ಒಂದು ಒಳ್ಳೆಯ ಹೆಜ್ಜೆ ಅಂತ ಹೇಳಬಹುದು.

ಹೆಚ್ಚು ಚಿತ್ರಮಂದಿರ
ಮೇಲೆ ಹೇಳಿದ ಹಾಗೆ ಚಿತ್ರೋದ್ಯಮದಲ್ಲಿ ಹೆಚ್ಚು ಚಿತ್ರಗಳು ಯಶಸ್ಸು ಕಂಡರೆ ಅದಕ್ಕೆ ಪೂರಕವಾಗಿ ಹೆಚ್ಚಿನ ಚಿತ್ರಮಂದಿರಗಳು ಇರಬೇಕು. ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಮೀಸಲು ಇರಬೇಕು. ಕನ್ನಡ ಚಿತ್ರಗಳು ಇರದ್ದಿದಾಗ ಮಾತ್ರ ಪರಭಾಷೆಗೆ ಬಿಡಬೇಕು. ಇಲ್ಲಾಂದ್ರೆ, ತೆರೆಗೆ ಬರಬೇಕಾಗಿರೋ ಚಿತ್ರಗಳಿಗೆ ಹೊಡೆತ ಬೀಳ್ತದೆ. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಗುನ್ನ.

ಕೊನೆ ಗುಟುಕು
Hollywood Economics ಹೇಳೋ ಹಾಗೆ
"The success rates for R-rated movies is just 6% ,where as 13% for G-PG rated movies are hit and 10% percent of PG13 movies are hits."

ಏನಪ್ಪಾ ಅಂದ್ರೆ, ತೆರೆಕಾಣೋ ೧೦೦ ಚಿತ್ರಗಳಲ್ಲಿ , ಕೇವಲ ೧೦% ಮಾತ್ರ ಯಶಸ್ಸನ್ನು ಹೊಂದುತ್ತವೆ. ಇನ್ನಾ ಸರಳವಾಗಿ ಹೇಳ್ಬೇಕು ಅಂದ್ರೆ, ಕನ್ನಡ ಚಿತ್ರರಂಗದಲ್ಲಿ ತೆರೆ ಕಾಣೊ ಚಿತ್ರಗಳೆಲ್ಲ ಮುಂಗಾರುಮಳೆ-ದುನಿಯಾ ಆಗಲಾರವು.ಇದನ್ನ ನಾವು ಮರೀಬಾರ್ದು.

ರೋಮಲ್ಲಿ ರೋಮನ್ ಆಗಿರಬೇಕು

ಕನ್ನಡಿಗರು ಸೌಜನ್ಯಶೀಲರು, ವಿಶಾಲ ಮನೋಭಾವದವರೂ, ಶಾಂತಿಪ್ರಿಯರು ಅಂತಾನೇ ಇಲ್ಲಿಗೆ ಬರೋ ಪ್ರತಿಯೊಬ್ಬ ವಲಸಿಗನೂ ನಮ್ಮ ಮೇಲೆ ಸವಾರಿ ಮಾಡಕ್ಕೆ ಹೋಗೋದು. ತೂಬಗೆರೆಯಲ್ಲಿ ಇವತ್ತು ಕೂಡ ನಡೆದಿದ್ದು ಅದೇ.

ಬಿಹಾರಿಂದ ಇಲ್ಲಿಗೆ ಬಂದಿರುವ ಜನಕ್ಕೆ ಸುಮ್ಮನೆ ಕೂಲಿ ಕೆಲ್ಸ ಮಾಡಿಕೊಂಡು ಹೊಟ್ಟೆಪಾಡು ನೋಡಿಕೊಂಡು ಹೊಗ್ರಪ್ಪ ಅಂದ್ರೆ, ಇಲ್ಲ ನಮಗೆ ಆ ತರ ಒಳ್ಳೆ ಅಭ್ಯಾಸ ಇಲ್ಲ ಅಂತ ಗುಲ್ಬರ್ಗದ ಒಂದು ಹುಡುಗಿಯನ್ನು ಕೆಣಕಿದ್ದಾರೆ. ಅದು ತಪ್ಪು ಅಂತ ಹೇಳಿದವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ೧೫ ಜನ ಕನ್ನಡಿಗರಿಗೆ ಗಾಯ ಆಗಿದೆ ಅಂತ ಸಂಜೆವಾಣಿ ಸುದ್ದಿ:



















ಅಲ್ಲ ಗುರು, ಕರ್ನಾಟಕಕ್ಕೆ ವಲಸೆ ಬಂದಿರೋ ಜನ ಸ್ಥಳೀಯ ಜನರ ಉದಾರತೆ ಮತ್ತು ಸಹನೆಯನ್ನು ಪರೀಕ್ಷಿಸೋ ಕೆಲ್ಸ ಮಾಡ್ತಾನೇ ಇದ್ದಾರಲ್ಲಾ? ಎಲ್ಲಿ ಹೋಗ್ತಾರೋ ಅಲ್ಲಿ ಜನರ ಜೊತೆ ಕಾಲು ಕೆರ್ಕೊಂಡು ಜಗಳ ಆಡೋದು, ಕನ್ನಡ ಕಲೀದೆ ಔರ್ ಭಾಷೇನೇ ನಮಗೆ ಕಲಿಸ್ತೀವಿ ಅನ್ನೋದು! ನಮ್ಮ ನೆಲದಲ್ಲಿ ಕನ್ನಡ ಬರೋಲ್ವಾ ಅಂದರೆ " ಕ್ಯಾ ಕನ್ನಡ " ಅಂತ ಅಸಡ್ಡೆಯಿಂದ ಮಾತಾಡೋದು ನಡ್ಕೊಂಡ್ ಬರ್ತಾನೇ ಇದೆ ಗುರು!

"ರೋಮಲ್ಲಿದ್ದಾಗ ರೋಮನ್ ಆಗಿರು" ಅನ್ನೋ ಧರ್ಮಾನ ವಲಸಿಗ ಪಾಲಿಸದಿದ್ದರೆ ಪಾಲ್ಸೋ ಹಂಗೆ ಮಾಡೋ ಕೆಲ್ಸ ಸ್ಥಳೀಯ ಜನರ ಮೇಲಿರತ್ತೆ. ಅದನ್ನ ಮಾಡದೇ "ಅತಿಥಿಗಳು ದೇವ್ರು, ಔರು ಮಾಡಿದ್ದೆಲ್ಲ ಮಾಡಿಸ್ಕೋತೀವಿ" ಅನ್ನೋ ರೀತೀಲಿ ನಾವು ಅತಿಯಾಗಿ ಭಕ್ತಿ ತೋರಿಸಿ, ಅವರ ಭಾಷೆಯಲ್ಲಿ ಮಾತಾಡಿ, ಅವರಿಗೆ ಬೇಕಾದ ಮನರಂಜನೆಯನ್ನು ಅವರ ಭಾಷೆಯಲ್ಲೇ ಕೊಟ್ಟರೆ ಮುಂದೆ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ ಗುರು!

ಹೀಗೆ ಉದಾರತೆ ತೋರಿದಕ್ಕೇ ನೋಡಿ ಇವತ್ತು ಮಹಾರಾಷ್ಟ್ರ ಮತ್ತೆ ಆಸ್ಸಾಮಲ್ಲಿ ವಲಸಿಗರದು ದೊಡ್ಡ ಸಮಸ್ಯೆಯಾಗಿ, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಗಲಾಟೆ ಆಗ್ತಾ ಇರೋದು.

ಔರ್ ರಾಜ್ಯದಲ್ಲಿ ಸಿಗ್ದೇ ಇರೋ ಅನ್ನ-ಬಟ್ಟೆ-ನೆಲೆಗಳ್ನ ನಾವು ಕೊಟ್ಟಿದ್ದೀವಿ ಅನ್ನೋದನ್ನ ಮನವರಿಕೆ ಅವರಿಗೆ ಮಾಡಿಸಬೇಕು. ಔರು ಬಂದಿರೋದು ಔರ್ ಹೊಟ್ಟೆಪಾಡಿಗಾಗಿಯೇ ಹೊರತು ನಮ್ನ ಆಳಕ್ಕಲ್ಲ ಅಂತ ನಾವು ತಿಳ್ಕೋಬೇಕು ಗುರು!

ಸುಳ್ಳು + ಸುಳ್ಳು = ನಿಜ ಅಲ್ಲ !!

ಕಾರವಾರದ ಮೂರ್ ತಾಲೂಕುಗಳನ್ನು ಗೋವಾಕ್ ಸೇರುಸ್ ಬಿಡ್ಬೇಕು ಅಂತ ಚಳುವಳಿಗೆ ಶುರು ಹಚ್ಕೊಂಡೀರೋ ಕೆಲ ಸಂಘಟನೆಗಳ ಪರವಾಗಿ ಗೋವಾದ ನವ್ ಹಿಂದ್ ಟೈಮ್ಸ್ ಹೇಳತ್ತೆ -
The Goans, who support the border merger movement, have also decried the hegemony of the Karnataka government for imposing the Dravidian culture, especially its Kannada language and its “strange script” on the majority of the Konkani speaking people.

ಅಂದ್ರೆ ಕೊಂಕಣಿ ಜನರು ಆರ್ಯರು, ಇವರ ಮೇಲೆ ಕನ್ನಡಿಗರ ವಿಚಿತ್ರ ಲಿಪಿ ಮತ್ತು ದ್ರಾವಿಡ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಅನ್ನೋ ಮಾತುಗಳು. ಇತಿಹಾಸಾನ ತಮ್ ಅನುಕೂಲಕ್ ತಿರುಚೋದು ಅಂದ್ರೆ ಇದೇ ಅಲ್ವಾ ಗುರೂ . . ಹಾಗ್ ಇತಿಹಾಸ ಕೆದುಕ್ ನೋಡೋದಾದ್ರೆ ಇಡೀ ಗೋವಾನೆ ನಮಗ್ ಕೊಡ್ಬೇಕಾಗುತ್ತೆ. ಇದಕ್ಕೆ ನಾವು ಕೊಂಕಣಿ ಭಾಷಿಕರ ಮೂಲ ನೋಡ್ಬೇಕು, ಗೋವಾದ ಮೂಲ ನಿವಾಸಿಗಳು ಯಾರು ಅನ್ನೋದ್ನ ನೋಡ್ಬೇಕು.
Origins : The Konkanis are Indo-Aryans who first settled in the Saraswati River basin between the Indus river system and the Gangetic river system. When the river started drying, up they migrated to various places, some to Kashmir, Rajasthan etc. Some came to settle in the region known as Konkan (which at that time referred to the entire western coast of India), particularly in and around Goa.
ಗೌಡರು (ಹಾಲಕ್ಕಿ) ಅಲ್ಲಿನ ಮೂಲ ಜನಾಂಗ. ಅವರನ್ನು ಒಕ್ಕಲೆಬ್ಬಿಸಿ ಈಗ ಅಲ್ಪಸಂಖ್ಯಾತರನ್ನಾಗಿ ಮಾಡಿರೋದು . . . ಸರಸ್ವತಿ ನದಿ ದಡದ ವಾಸಿಗಳಾಗಿದ್ದು ವಲಸೆ ಬಂದಿರುವ ಕೊಂಕಣಿ ಜನ.
Its original inhabitants were native Dravidians who where gradually conquered and outnumbered by the Aryans, who ambitiously advanced into the south around 1500 BC.
ಗೋವಾನ ಕದಂಬರು ಆಳಿದ್ದು, ವಿಜಯನಗರದವರು, ಬಿಜಾಪುರದವರು ಆಳ್ತಿದ್ರು ಅನ್ನೋದ್ನ ಮರ್ಯಕ್ ಆಗುತ್ತಾ ಗುರು? ಭಾರತ ದೇಶ ಅಂತ ಆಗೋವಾಗ, ತುಂಬಾ ಹಟ ಮಾಡ್ದೆ ಎಲ್ರ ಜೊತೆ ಹೊಂದ್ಕೊಂಡು ಬಾಳೋಣ, ನಮ್ಮದು ಸ್ವಲ್ಪ ಹೋದ್ರೂ ಪರ್ವಾಗಿಲ್ಲ (ಹೋಗಿದ್ದು ತುಂಬಾನೆ ಬಿಡಿ) ಅನ್ನೋ ದೊಡ್ಡ ಗುಣ ಕನ್ನಡದೋರು ತೋರುಸ್ದ್ರೂ ಅಕ್ಕ ಪಕ್ಕದೋರು ತೋರುಸ್ದೆ ಸುಮ್ನೆ ಕಿರಿಕ್ ಮಾಡ್ತಾನೆ ಬಂದಿದ್ದಕ್ಕೇ ಕೊನೇ ಪರಿಹಾರವಾಗಿ ಮಹಾಜನ್ ಆಯೋಗ ಬಂದಿದ್ದಲ್ವಾ?

ಈಗ ತಮಗೆ ಅನುಕೂಲ ಆಗಲ್ಲ ಅಂತ ಅದನ್ನ ತಿರಸ್ಕಾರ ಮಾಡ್ತಿರೋ ಮಹಾರಾಷ್ಟ್ರ, ಕೇರಳಗಳ ನಡವಳಿಕೆ... ಈಗ ಕೊಂಕಣಿ ಜನರನ್ನು ಎತ್ತಿಕಟ್ಟಿ ಕಾರವಾರ ಕಬಳ್ಸಕ್ ಹೊರ್ಟಿರೋ ಗೋವಾದ ನಡವಳಿಕೆ ಒಕ್ಕೂಟಕ್ಕೆ ತೋರ್ಸೋ ಅಗೌರವ ಅಲ್ವಾ ಗುರು?

ಸುಮ್ನೆ ಇಲ್ಲದ ಕಿತಾಪತಿ ಮಾಡೋ ಬದ್ಲು, ಇರೋ ವಾಸ್ತವ ತಿಳ್ಕೊಂಡು, ನಾಡು ಒಡೆಯೋ ಕೆಲ್ಸ ಕೈ ಬಿಟ್ಟು ನೆಮ್ಮದಿಯ ಸಹಬಾಳ್ವೆ ನಡೆಸೋದು ಒಳ್ಳೇದು ಮತ್ತು ಅದೇ ಮುಖ್ಯ ಅಲ್ವಾ ಗುರು!

ಬ್ರಿಟಿಷರಿಂದ ಬಿಡುಗಡೆ ಸ್ವಾತಂತ್ರ್ಯದ ಮೊದಲನೇ ಹೆಜ್ಜೆ ಮಾತ್ರ

ಇವತ್ತಿಗೆ ಭಾರತದಿಂದ ಬ್ರಿಟೀಷರನ್ನ ಒದ್ದೋಡಿಸಿ 60 ವರ್ಷಗಳು ಕಳೆದವು. ಅದೆಷ್ಟು ಜನರ ಬಲಿದಾನ, ಅದೆಷ್ಟು ಕಷ್ಟ ಪಟ್ಟು ಇದ್ನ ಗಳ್ಸಿದೀವಿ ಅನ್ನೋದನ್ನ ಮತ್ತೊಮ್ಮೆ ನೆನಪಿಸಿಕೊಳ್ಳುತ್ತ ಸಂತೋಷ ಪಡಕ್ಕೂ ಇದು ದಿನ, ಆ ಸಂತೋಷದ ಜೊತೆಗೆ ನಮ್ಮ ಕರ್ತವ್ಯಗಳನ್ನೂ ನೆನೆದು ಭವಿಷ್ಯದೆಡೆಗೆ ಧೈರ್ಯವಾಗಿ ಮುನ್ನುಗ್ಗೋಣ ಅಂತ ಪಣ ತೊಡಕ್ಕೂ ಇದು ದಿನ.


ಬ್ರಿಟೀಷರನ್ನ ಓಡಿಸಿದ್ದಷ್ಟಕ್ಕೆ "ಸ್ವಾತಂತ್ರ್ಯ" ಸಿಕ್ಕಂಗಲ್ಲ

"ಸ್ವಾತಂತ್ರ್ಯ" ಅನ್ನೋದಕ್ಕೆ ಬರೀ "ಬ್ರಿಟೀಷರನ್ನ ಭಾರತದಿಂದ ಓಡ್ಸೋದು" ಅಂತ ಅರ್ಥ ಮಾಡ್ಕೊಳೋದು ನಮ್ಮ ಜನಕ್ಕೆ ವಾಡಿಕೆ. ಆದರೆ ಅಷ್ಟಕ್ಕೇ ಸೀಮಿತವಾಗಿರೋದು "ಸ್ವಾತಂತ್ರ್ಯ" ಅಲ್ಲ, ಅದು ಬರೀ ಬ್ರಿಟಿಷರಿಂದ ಬಿಡುಗಡೆಯಷ್ಟೆ. ನಮ್ಮ ಆಳ್ವಿಕೆ ನಮ್ಮ ಕೈಯಲ್ಲೇ ಇದ್ದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಅಂತ ಹೇಳಕ್ಕಾಗೋದು. ನಮಗೆ ಸಿಕ್ಕಿರೋದು ಬ್ರಿಟಿಷರಿಂದ ಬಿಡುಗಡೆ ಮಾತ್ರ. ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕೇ ಇಲ್ಲ ಅನ್ನೋದು ನಮ್ಮ ವಾದ. "ಅಯ್ಯಯ್ಯೋ...ಇದೇನು ಗುರು? ನಮ್ನ ನಾವೇ ಆಳ್ಕೋತಾ ಇದೀವಲ್ಲ?" ಅಂತ ಅನ್ನಿಸ್ತಿದ್ಯಾ? ಯೋಚ್ನೆ ಮಾಡಿ ನೋಡಿ. ಮೊದಲು "ನಾವು" ಅಂದ್ರೆ ಯಾರು ಅಂತ ತಿಳ್ಕೊಳೋಣ.

ಯಾರು ನಾವು, "ಭಾರತೀಯರು" ಅಂದ್ರೆ?

ಬ್ರಿಟಿಷರನ್ನ ಒದ್ದೋಡಿಸೋ ಆತ್ರದಲ್ಲಿ "ಈ ಭಾರತದ ರಚನೆಯಾದರೂ ಹೇಗಿದೆ?", "ಇದರಲ್ಲಿರುವ ಜನರಾರು?", "ಇವರು ತಮ್ಮನ್ನು ತಾವೇ ಆಳಿಕೊಳ್ಳುವುದು ಎಂದರೆ ಅರ್ಥವಾದರೂ ಏನು?" ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಭಾರತದಲ್ಲಿರೋ ವಿವಿಧತೆಗೆ ಹೆಚ್ಚಾಗಿ ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ವಿವಿಧತೆ ಇದೆ ಅಂತ ಹೇಳಿಕೊಳ್ಳಕ್ಕೇ ನಾಚಿಕೆ ಅನ್ನೋ ರೀತಿಯಲ್ಲಿ ಭಾರತ ಅಂದ್ರೆ ಒಂದೇ ಸಂಸ್ಕೃತಿ, ಒಂದೇ "ಮುಖ್ಯ" ಭಾಷೆ, ಎಲ್ಲವೂ ಒಂದೇ ಅಂತ ಹೇಳ್ಕೊಂಡು ತಿರುಗಿದ್ದೇ ಹೆಚ್ಚು.

ಆದರೆ ನಿಜವಾದ ಸಂಗತಿಯೇನಪ್ಪಾ ಅಂದ್ರೆ ನಾವು - ಅಂದ್ರೆ ಭಾರತೀಯರು - ಬೇರೆಬೇರೆ ಭಾಷಾವಾರು ಜನಾಂಗಗಳಿಗೆ ಸೇರೋರು. ನಮ್ಮ ನಡೆ-ನುಡಿಗಳು ಬೇರೆ, ನಮ್ಮ ಆಚರಣೆಗಳು ಬೇರೆ, ನಮ್ಮ ಸಂಸ್ಕೃತಿಗಳು ಬೇರೆ, ನಮ್ಮ ಇತಿಹಾಸಗಳು ಬೇರೆ. ಈ ಬೇರೆಬೇರೆ ಜನಾಂಗಗಳು ಭಾರತ ಅನ್ನೋ ಹೆಸರಿನ ಉನ್ನತ ತತ್ವವೆಂಬ ದಾರಕ್ಕೆ ಪೋಣಿಸಿರೋ ಬೇರೆಬೇರೆ ಮಣಿಗಳಿದ್ದಂಗೆ ("ಸೂತ್ರೇ ಮಣಿಗಣಾ ಇವ"). ಒಂದು ಮಣಿ ಕರ್ನಾಟಕ, ಮತ್ತೊಂದು ತಮಿಳ್ನಾಡು, ಮತ್ತೊಂದು ಆಂಧ್ರ, ಮತ್ತೊಂದು ಮಹಾರಾಷ್ಟ್ರ, ಮತ್ತೊಂದು ಉತ್ತರಪ್ರದೇಶ...ಹೀಗೆ ಈ ಮಣಿಗಳಿಗೆ ಹೆಸರುಗಳು. ಈ ಮಣಿಗಳಿಲ್ಲದೆ ಸೂತ್ರಕ್ಕೆ ಬೆಲೆಯಾದ್ರೂ ಎಲ್ಲಿದೆ ಗುರು? ಮಣಿಗಳಿಂದಾನೇ ಸೂತ್ರಕ್ಕೆ ಬೆಲೆ!

ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಏನೇನಾಗಬೇಕು?
ಇಷ್ಟೆಲ್ಲ ಬೇರೆತನವಿದ್ದಾಗ "ನಾವು" ಸ್ವತಂತ್ರವಾಗೋದು ಅಂದ್ರೆ ಏನರ್ಥ? ಆ ದಾರ ಸ್ವತಂತ್ರವಾಗೋದು ಅಂತಲ್ಲ; ದಾರವೇ ಮಣಿಹಾರವಲ್ಲ. ಹಾಗೆಯೇ ಯಾವುದೋ ಒಂದು ಮಣಿ ಸ್ವತಂತ್ರವಾಗೋದು ಅಂತಲ್ಲ. ದಾರದಲ್ಲಿರೋದು ಒಂದೇ ಮಣಿ ಅಂತ ತಿಳ್ಕೊಂಡಿರೋ ವ್ಯವಸ್ಥೆ ಕಟ್ಟೋದಲ್ಲ.

ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಭಾರತದ ಭಾಷಾವಾರು ರಾಜ್ಯಗಳ ಸ್ವಾತಂತ್ರ್ಯ - ಅಂದ್ರೆ ಸಾಧನೆಯ ಶಿಖರಕ್ಕೇರಲು ತಮಗೆ ಬೇಕಾದ್ದನ್ನೆಲ್ಲ ಪೂರೈಸಲೆಂದೇ ಮೀಸಲಾಗಿರುವ ನಿಜಕ್ಕೂ ಅವುಗಳದೇ ಆಡಳಿತ - ಎಂಬ ಎರಡನೇ ಹೆಜ್ಜೆ ಇಡುವುದು ಬಹಳ ಮುಖ್ಯ. ಸ್ವಾತಂತ್ರ್ಯ ಅಂದ್ರೆ ಮಣಿಗಳಿಗೆ ದಾರದಿಂದ ಬಿಡುಗಡೆ ಅಲ್ಲ (ಭಗವಂತನಿಂದ ಬಿಡುಗಡೆಯೆಂದರೆ ಅರ್ಥವಿಲ್ಲದ್ದು ಗುರು!), ಆದರೆ ಅದೇ ದಾರದಲ್ಲಿದ್ದು ಒಂದೊಂದು ಮಣಿಯೂ ಫಳಫಳನೆ ಹೊಳೆಯಲು ಬೇಕಾದ್ದೆಲ್ಲ ಇರುವಂತಹ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಭಾರತದ ಬೇರೆಬೇರೆ ಭಾಷಾವಾರು ಜನಾಂಗಗಳ ಮೇಲೆ ಹಿಂದಿ ಹೇರಿಕೆಯಾಗಲಿ, ನಮ್ಮದಲ್ಲದ ಇಂಗ್ಲೀಷಿನಲ್ಲಿ ಕಲಿಕೆ ಇಲ್ಲವೇ ನಮ್ಮ ನಾಡಿನಲ್ಲಿ ನಮಗೇ ಕೆಲಸ ಕೊಡದ ಉದ್ಯಮಗಳಾಗಲಿ, ಆಯಾ ರಾಜ್ಯಗಳ ನಾಡು-ನುಡಿಗಳ ಏಳ್ಗೆಯ ಕನಸೇ ಇಲ್ಲದ "ರಾಷ್ಟ್ರೀಯ ಪಕ್ಷಗಳು" ಆಳುವುದಾಗಲಿ, ಕೇಂದ್ರಸರ್ಕಾರ ತನಗೆ ಸಂಬಂಧಪಡದ ವಿಷಯಗಳಿಗೆ ತಲೆಹಾಕುವುದಾಗಲಿ, ಕೇಂದ್ರದಲ್ಲಿ ಲಾಬಿ ಮಾಡೋರಿಗೇ ಕಾವೇರಿ ನೀರು ಎನ್ನುವ ಯಾವ ನಿಯಮಗಳೂ ಇಲ್ಲದ ವ್ಯವಸ್ಥೆಯಾಗಲಿ, ಇರಲಾರವು ಗುರು! ಪೂರ್ಣ ಸ್ವಾತಂತ್ರ್ಯಕ್ಕೆ ಅಡ್ಡಗಾಲು ಹಾಕಿಕೊಂಡು ನಿಂತಿರುವ ಇವುಗಳು ಹೋಗದೆ ಕರ್ನಾಟಕಮಣಿ ದಾರದಲ್ಲಿ ಹೊಳೆಯುವುದೆಂತು ನಮ್ಮಪ್ಪ? ಆ ದಾರಕ್ಕೆ ಬೆಲೆಯಾದರೂ ಬರುವುದೆಂತು ನಮ್ಮಪ್ಪ?

ನೀವು ಐಟಿ ಕನ್ನಡಿಗರಾ?

೬ ತಿಂಗಳ ಹಿಂದೆ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ ಎದುರು ಕಾವೇರಿ ಪ್ರತಿಭಟನೆ ನಡೆದಾಗ ಬರದ ಪತ್ರಿಕೆಗಳಿಲ್ಲ, ತೋರಿಸದ ಟಿ.ವಿ ವಾಹಿನಿಗಳಿಲ್ಲ. ಯಾಕಪ್ಪ ಅಂದ್ರೆ ಆವತ್ತು ಕನ್ನಡದ ಬಾವುಟ ಹಿಡಿದು ಘೋಷಣೆಗಳ್ನ ಕೂಗ್ದೋರು ಬೇರೆ ಯಾರು ಅಲ್ಲಾ, ಕರ್ನಾಟಕದ ಮೂಲೆಮೂಲೆಗಳಿಂದ ಬಂದು ಬೆಂಗಳೂರಿಗೆ ಸೇರಿರೋ ಐಟಿ ಮಂದಿ.

ದಿನಕ್ಕೆ ೧೦ ಅಪರಾಧವಾದರೂ ಸುದ್ದಿ ಆಗದಿರೋದು, ಒಬ್ಬ ಐಟಿ ತಂತ್ರಜ್ಞನ ಮೇಲೆ ಆದರೆ ದೊಡ್ಡ ಸುದ್ದಿಯಾಗೊತ್ತೆ.



ಇದೆಲ್ಲಾ ಯಾಕೆ ಗುರು?

ನೀವು ಚೆನ್ನಾಗಿ ಓದಿದೀರಿ, ಅಮೇರಿಕಾ-ಯುರೋಪನ ಕಾಲಾಸಿಪಾಳ್ಯ-ಮೆಜಸ್ಟಿಕ್ ತರ ಸುತ್ತಿದೀರಿ, ಚೆನ್ನಾಗಿ ಸಂಪಾದನೆ ಮಾಡ್ತೀರಿ, ಕೈ ಹಾಕಿದ ಕೆಲ್ಸ ಸಖತ್ ಆಗಿ ಮಾಡ್ತೀರಿ... ಇವೆಲ್ಲಾ ಇದೆ ಅಂತಾನೇ ಈ ಸಮಾಜಕ್ಕೆ ನಿಮ್ಮ ಬಗ್ಗೆ ಬೋ ಗೌರವ ಇದೆ ಗುರು! ಅದಕ್ಕೇ ನೋಡಿ, ನಿಮಗೆ ಬೇಕೊ ಬೇಡ್ವೊ ಜನ ನಿಮ್ಮ ಅನುಕರಣೆ ಮಾಡ್ತಾರೆ. ನೀವು ಕನ್ನಡದ ಬಗ್ಗೆ ಕಾಳಜಿ ಮಾಡಿದ್ರೆ ಅವ್ರೂ ಮಾಡ್ತಾರೆ, ನೀವು ಮಾಡಲಿಲ್ಲ ಅಂದ್ರೆ ಅವ್ರೂ ಮಾಡಕ್ಕಿಲ್ಲ.

"ಸರಿ ಗುರುವೇ, ಈಗ ನಾವೇನು ಮಾಡಬೇಕು ಅಂತ ಒಸಿ ಹೇಳಿ" ಅಂತೀರಾ?
ಕಾಫಿ ಕುಡೀತಾ ಇಲ್ಲಿ ಕೇಳಿರೋ ಪ್ರಶ್ನೆಗಳ ಬಗ್ಗೆ ಒಮ್ಮೆ ಯೋಚನೆ ಮಾಡಿ:
  • ಒಂದು ಒಳ್ಳೆ ಕನ್ನಡ ಚಲನಚಿತ್ರ ನೋಡಿ, ಅದನ್ನು ಬೇರೆಯವರ ಜೊತೆ ಹಂಚ್ಕೊಬೇಕು ಅಂತ ಅನಿಸ್ತಾ ಇದೆಯಾ?
  • ನಿಮ್ಮ ಸಂಸ್ಥೆಯಲ್ಲಿ ಕನ್ನಡ ಕಲಿಸೋದು ಹೇಗೆ ಅಂತ ತಲೆ ಕೆಡ್ತಾ ಇದೆಯಾ?
  • ಯಾವುದೋ ಸಂಸ್ಥೆಗೆ ಕೆಲ್ಸಕ್ಕೆ ಹಾಕಬೇಕು, ಅಲ್ಲಿ ಕೆಲ್ಸ ಮಾಡೊರ ಸಂಪರ್ಕ ಬೇಕಾ?
  • ನಿಮ್ಮ ಸಂಸ್ಥೆಯಲ್ಲಿ ಕೆಲ್ಸ ಖಾಲಿ ಇದೆ, ಯಾವ ಕನ್ನಡಿಗನೂ ಬರ್ತಾ ಇಲ್ಲಾ ಅಂತ ಬೇಜಾರಾ?
  • ಕನ್ನಡ ಇರೋ ಸಂಚಾರಿ ದೂರವಾಣಿ ಬಗ್ಗೆ ತಿಳ್ಕೊಬೇಕಾ?
  • ತಂತ್ರಜ್ಞಾನದಲ್ಲಿ ಕನ್ನಡ ತರೋದು ಹೇಗೆ ಅಂತ ಚರ್ಚೆ ಮಾಡಬೇಕಾ? ಅಥವಾ ತರಬೇಕಾ? ಅಥವಾ ತಂದಿರೋದರ ಬಗ್ಗೆ ಚರ್ಚೆ ಮಾಡಬೇಕಾ?
  • ಕನ್ನಡ ಅಂದ್ರೆ ಎನ್ನಡ ಅನ್ನೋ ಗ್ರಾಹಕ ಸೇವೆ ಬಗ್ಗೆ ಉರಿ ಇದೆಯಾ ?
  • ನಿಮ್ಮ ಸಂಸ್ಥೆಯಲ್ಲಿ ಕನ್ನಡ ಸಮಾರಂಭ ಮಾಡೊಕ್ಕೆ ಭರ್ಜರಿ ಐಡಿಯಾ ಬೇಕಾ?
  • ನೀವು ಕೆಲಸ ಹುಡುಕಕ್ಕೆ ಪಟ್ಟ ಕಷ್ಟ ಬೇರೆಯವರಿಗೆ ಬರೋದು ಬೇಡ, ಹೊಸಬರಿಗೆ ದಾರಿ ತೋರಿಸಿಕೊಡಬ್ಕು ಅಂತ ಅನ್ನಿಸ್ತಾ ಇದೆಯಾ ?
ಮೇಲಿನ ಪ್ರಶ್ನೆಗಳಲ್ಲಿ ಒಂದಕ್ಕಾದರೂ ನಿಮ್ಮ ಉತ್ತರ "ಹೌದು" ಅನ್ನೋದಾದ್ರೆ, ಇನ್ನಾ ಏನು ಯೋಚನೆ ಮಾಡ್ತಾ ಇದ್ದೀರಿ? ಬಲಭಾಗದಲ್ಲಿ ನಿಮ್ಮ ಮಿಂಚೆ ವಿಳಾಸ ಕೊಟ್ಟು ನೀವೂ ಬನವಾಸಿ ಬಳಗದ ಐಟಿ ಕನ್ನಡಿಗರ ಗುಂಪಿಗೆ ಸೇರ್ಕೊಂಡು, ನಿಮ್ಮ ಗೆಳೆಯರ್ನ ಸೇರ್ಸಿ ಮತ್ತೆ...

ಕರ್ನಾಟಕಕ್ಕೆ ಮಾತ್ರ ಎರಡನೇ ಪಾಸ್ಪೋರ್ಟ್ ಕಚೇರಿಯಿಲ್ಲ!

ಕರ್ನಾಟಕಕ್ಕೆ ಎರಡನೇ ಪಾಸ್ ಪೋರ್ಟ್ ಕಚೇರಿ ಕೊಡಕ್ಕೆ ಕೇಂದ್ರ ಸರ್ಕಾರ ಇಲ್ಲ ಅಂದಿರೋ ಬಗ್ಗೆ ಹೋದವಾರ ವಿ.ಕ. ವರದಿ ಮಾಡಿದೆ. ನಮಗೆ ಇದೇನು ಹೊಸದಲ್ಲಿ ಬಿಡಿ! ರೈಲು, ರೈಲು ಗೇಜ್ ಪರಿವರ್ತನೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಕರ್ನಾಟಕದಲ್ಲಿರುವ ಕೇಂದ್ರದ ಕಛೇರಿ-ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕೆಲಸಕ್ಕೆ ಆದ್ಯತೆ ಇವುಗಳೆಲ್ಲದರಲ್ಲಿಯೂ ನಮಗೆ ಇದು ಅಭ್ಯಾಸ ಆಗೋಗಿದೆ!

ಕರ್ನಾಟಕಕ್ಕೆ ಮಾತ್ರ ಬೇರೆಯ ಮಾನದಂಡವನ್ನು ಕೇಂದ್ರ ಅನುಸರಿಸುತ್ತಲೇ ಬಂದಿದೆ. ಮಹಾರಾಷ್ಟ್ರ, ಕೇರಳ, ಆಂಧ್ರ ಗಳಲ್ಲೆಲ್ಲ ಒಂದಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಕಛೇರಿಗಳಿದ್ದು ಅವುಗಳಿಗಿಲ್ಲದ 50,000 ಅರ್ಜಿಗಳ ಅಳತೆಗೋಲು ಕರ್ನಾಟಕಕ್ಕೆ ಮಾತ್ರ ಅನ್ವಯಿಸೋದು!

ಇದರಲ್ಲಿ ಕೇಂದ್ರದ ತಪ್ಪೇನಿಲ್ಲ ಬಿಡಿ. ಶಾಂತಿಪ್ರಿಯ ಕನ್ನಡಿಗರು ಯಾವುದೇ ರೀತಿಯ ಪ್ರತಿರೋಧ ಒಡ್ಡದೇ ತೆಪ್ಪಗೆ ಮಲಗಿರುವಾಗ, ಅಳದೇ, ರಚ್ಚೆ ಹಿಡಿಯದೇ ಸುಮ್ಮನೇ ಇರೋ ಕೂಸಿಗೆ ಹಾಲುಣಿಸಲು ಕೇಂದ್ರಕ್ಕಾದರೂ ಹುಚ್ಚೆ?

ಅಧಿಕಾರ ಒಂದಿದ್ದರೆ ಸಾಕು ಎನ್ನುವ ನಮ್ಮ ರಾಜ್ಯದ ಇಂದಿನ ರಾಷ್ಟ್ರೀಯ ಪಕ್ಷಗಳ ನಾಯಕರುಗಳಿಗೆ ಕೇಂದ್ರವನ್ನು ಒತ್ತಾಯಿಸಿ, ಬೆದರಿಸಿ ನಮ್ಮ ಪಾಲನ್ನು ಪಡೆಯುವ ನರ ಕೂಡ ಸತ್ತು ಹೋಗಿದೆ!

ಕನ್ನಡ-ಕರ್ನಾಟಕ-ಕನ್ನಡಿಗರ ಅನುಕೂಲ, ಏಳಿಗೆ ಇವುಗಳನ್ನೇ ಗುರಿಯಾಗಿಸಿಕೊಂಡಿರುವ ಪ್ರಾದೇಶಿಕ ಪಕ್ಷ ಮಾತ್ರ ಇವುಗಳಿಗೆಲ್ಲ ಮದ್ದು. ಕರ್ನಾಟಕಕ್ಕೆ ಸಿಗಬೇಕಾದ್ದು ಸಿಗದಿದ್ದರೆ ಕೇಂದ್ರ ಸರ್ಕಾರ ಅಲ್ಲಾಡೋಹಂಗೆ ಆಗೋವರ್ಗೂ ನಮಗೆ ಇದೇ ಪಾಡು ಗುರು!

ಹೊರಗಿಂದ ಹುಡುಗೀರ್ನ ಕರ್ಕೊಂಡ್ ಬರ್ತಿರೋದೇ ತಪ್ಪು

ಹೋದ ವಾರದ ವಿ.ಕ.ದಲ್ಲಿ "ಪ್ರೀತ್ಸೆ" ಚಿತ್ರದ ಸೊನಾಲಿ ಬೇಂದ್ರೆ ತಮಗೆ ಕನ್ನಡ ಚಿತ್ರಗಳ ಬಗ್ಗೆ ಗೌರವ ಇದೆ, ಆದರೆ ಕನ್ನಡ ಚಿತ್ರಗಳಲ್ಲಿ ನಟಿಸೋದು ನನಗೆ ಸ್ವಲ್ಪವೂ ಹಿಡಿಸಲಿಲ್ಲ, ನನಗಾದ ಆ ಕೆಟ್ಟ ಅನುಭವ ಖಂಡಿತ ತಿರ್ಗಾ ಬೇಡ, "ಕನ್ನಡ ಚಿತ್ರದಲ್ಲಿ ಇನ್ನೊಮ್ಮೆ ನಟಿಸಲಾರೆ" ಅಂದಿರೋದರ ಬಗ್ಗೆ ಒಂದು ವರದಿ ಐತಿ, ಓದ್ ನೋಡಿ.

ಇದೇ ಆಗೋದು ಹೊರಗಿನೌಳು ಯಾರೋ ಟಸುಕ್-ಪುಸುಕ್ ಅಂತ ಇಂಗ್ಲಿಷ್ ಮಾತಾಡ್ತಾಳೆ ಅಂತ ಕನ್ನಡ ಚಿತ್ರ ಮಾಡೋರು ಕರ್ಕೊಂಬಂದು ತಲೆ-ಮೇಲ್ ಕೂಡಿಸಿಕೊಂಡ್ರೆ. ಕನ್ನಡ ಬರದೇ ಇದ್ರೂ ಪರವಾಗಿಲ್ಲ ಇಂತೌಳ್ನ ಕರ್ಕೊಂಡ್ ಬರಬೇಕು ಅಂತ ಇವತ್ತಿನ ನಿರ್ದೇಶಕರು ಅನ್ಕೋತಿರೋದಾದರೂ ಯಾಕೆ ಗುರು?

ಅಲ್ಲ ಈವೆಣ್ಣು ಹೇಳೋಹಂಗೆ ವಂಶದಿಂದ ಸೌಂದರ್ಯ ಪಡ್ಕೊಂಬಂದ ಕನ್ನಡದ ಹುಡುಗೀರೇ ಇಲ್ವಾ? ಇಲ್ಲಾ ಕನ್ನಡದ ಹುಡುಗೀರಿಗೆ ಇವತ್ತಿನ ದಿನ ಚಿತ್ರನಟಿ ಆಗೋದರ ಬದ್ಲು ಯಾವುದೋ ಐಟಿ ಕಂಪನೀಲಿ ಇಡೀ ಜೀವನ ಕಂಪ್ಯೂಟರ್ ಮುಂದೆ ಕೂತ್ಕೋಬೇಕು ಅನ್ನೋ ಆಸೇನೋ?

ಕನ್ನಡದ ಹುಡುಗ/ಹುಡುಗೀರು ಚಿತ್ರರಂಗಕ್ಕೆ ಬರಕ್ಕೆ ಹಿಂದೇಟ್ ಹಾಕ್ಬಾರ್ದು. ಇವತ್ತಿನ ದಿನ ಕನ್ನಡ ಚಿತ್ರಗಳು ಮತ್ತೊಮ್ಮೆ ಜನಮನ ಗೆಲ್ತಿರುವಾಗ ಚಿತ್ರರಂಗದಲ್ಲಿರೋಷ್ಟು ದುಡ್ಡು ಇನ್ನೆಲ್ಲಿದೆ ಗುರು? ಇದ್ನಾದರೂ ನಮ್ಮ ಹುಡುಗ್ರು/ಹುಡುಗೀರು ಅರ್ಥ ಮಾಡ್ಕೋಬೇಕು ಗುರು! ನಟನೆ ಬರೋ ಅಂದದಮೈಯ ಹುಡುಗ/ಹುಡುಗೀರು ನಮ್ಮಲ್ಲಿ ಕಡ್ಮೆಯೇನಿಲ್ವಲ್ಲ?

ಅಂದಹಾಗೆ ಈ ಸೊನಾಲಿ ಬೇಂದ್ರೆ ಓದಿದ್ದು ಬೆಂಗ್ಳೂರಿನ ಕೇಂದ್ರೀಯ ವಿದ್ಯಾಲಯದಲ್ಲೇ. ಕೇಂದ್ರೀಯ ವಿದ್ಯಾಲಯ ಅಂದ್ರೆ ಕನ್ನಡ ಎಷ್ಟು ಕಲ್ತಿರಬಹುದು ಅಂತ ಗೊತ್ತಾಯ್ತು ತಾನೆ? ಕನ್ನಡ ಅಂದ್ರೆ ಎಷ್ಟು ಗೌರವ ಇರಬಹುದು ಅಂತ ಗೊತ್ತಾಯ್ತು ತಾನೆ? ಏನೂ ಬೇಡ, ಭಾರತದ "ರಾಷ್ಟ್ರಭಾಷೆ" ಯಾವುದು ಅಂತ ಕೇಳ್ನೋಡಿ!

ಏನ್ ಹಂಗ್ ನೋಡ್ತಿದ್ಯ? ಹೋಗಮ್ಮ ತಾಯಿ, ನೀನಿಲ್ಲಾಂತ ಇಲ್ಲಿ ಅಳೋರು ಯಾರೂ ಇಲ್ಲ!

ಬರೀ ಬ್ಯಾಂಕಿಂದಲ್ಲ, ಇಡೀ ಕರ್ನಾಟಕಕ್ಕೆ ಹತ್ತಿರೋ ಹಿಂದಿ ಗೆದ್ದಲು ಹೋಗಿಸಬೇಕು!

ಏನು? ಮಣಿಪಾಲಲ್ಲಿ ಸಿಂಡಿಕೇಟ್ ಬ್ಯಾಂಕಿಗೆ ಗುಮಾಸ್ತರ ಕೆಲಸಕ್ಕೆ ಅರ್ಜಿ ಹಾಕ್ತೀರಾ? ಹಾಗಾದ್ರೆ ಓದಿ:
Working knowledge of Hindi is essential. The candidates should have studied Hindi as one of the subjects till Secondary School level. The relevant mark sheet containing Hindi as one of the subjects should be highlighted.

ಇದರ ಅರ್ಥ ಏನು ಗೊತ್ತಾ?
ಏನು? ನೀವು ಕನ್ನಡಿಗ್ರಾ? ಹಿಂದಿ ಬರಲ್ವಾ? ಹಾಗಾದ್ರೆ ನಿಮಗೆ ಲಕ್ಕಿಲ್ಲ ಬಿಡಿ. ಉತ್ತರಪ್ರದೇಶದಲ್ಲೋ ಬಿಹಾರಲ್ಲೋ ಮಧ್ಯಪ್ರದೇಶದಲ್ಲೋ ಹುಟ್ಬೇಕಾಗಿತ್ತು, ಕನ್ನಡನಾಡಲ್ಲಿ ಹುಟ್ಟಿ ಕೇಟ್ರಿ, ಕನ್ನಡಾನ ತಾಯ್ನುಡಿಯಾಗಿಟ್ಕೊಂಡು ಕೆಟ್ರಿ. ಈ "ಕಪ್ಪು ಚುಕ್ಕೆ" ನಿಮ್ಮ ಮೇಲೆ ಇರೋ ತನಕ ನೀವು ಎಂಥಾ ಬುದ್ವಂತ್ರಾಗಿದ್ರೂ ಉಪ್ಯೋಗ್ವಿಲ್ಲ ಬಿಡಿ.

ಹಿಂದೀನೋ ಹಿಂದೀತರದ್ದು ಇನ್ನೊಂದು ಭಾಷೇನೋ ತಾಯ್ನುಡಿಯಾಗಿ ಹೊಂದಿರೋ ಒಂದೆರಡು ಉತ್ತರಭಾರತದ ರಾಜ್ಯಗಳ ಜನರನ್ನ ವಲಸೆ ಆದ್ರೂ ಮಾಡ್ಸಿ ಬ್ಯಾಂಕುಗಳಲ್ಲಿ ತುಂಬಕ್ಕೆ ಮಾಡ್ತಿರೋ ಸಂಚಲ್ಲದೆ ಇದಿನ್ನೇನು? ಕನ್ನಡಿಗರಿಗೆ ಹಿಂದಿ ಹೇಗಿದ್ರೂ ಬರಲ್ಲ, ಆದ್ರಿಂದ ಇವ್ರುಗೆ "ಬೇಕಾದ ಅರ್ಹತೆ ಇಲ್ಲ" ಅಂತ ಸುಲಭವಾಗಿ ಹಿಂದೆ ತಳ್ಳಬಹುದು ಅಂತ ಮಾಡ್ತಿರೋ ಮೋಸವಲ್ಲದೆ ಇದು ಇನ್ನೇನು?

ಬ್ಯಾಂಕ್ ಕೆಲಸಕ್ಕೆ ಸೇರೋ ಮೊದ್ಲೇ ಈ ತಾರತಮ್ಯ ಆದ್ರೆ ಇನ್ನು ಸೇರಿದಮೇಲೆ?

ಬ್ಯಾಂಕ್ ಕೆಲಸಗಾರರಿಗೆ ಹಿಂದಿ ಪರೀಕ್ಷೆಗಳ್ನ ಕೊಟ್ಟು ಅದ್ರಲ್ಲಿ ಪಾಸಾದೋರಿಗೆ ಬಡ್ತಿ ಕೊಡೋದು, ಹೆಚ್ಚು ಸಂಬಳ ಅಂತ ಆಮಿಷ ಒಡ್ಡೋದು - ಇವೆಲ್ಲ ಹೊಸದೇನಲ್ಲ. ಬ್ಯಾಂಕ್ ಮ್ಯಾನೇಜರುಗಳಿಗೆ ತಮ್ಮ ಬ್ಯಾಂಕಲ್ಲಿ ಹಿಂದಿ ಅನುಷ್ಠಾನ ಮಾಡೋ ಜವಾಬ್ದಾರಿ ಇರತ್ತೆ. ಅದಕ್ಕೇ ನೋಡಿ ಪ್ರತಿ ಬ್ಯಾಂಕಲ್ಲೂ - ಅದು ಎಂಥಾ ಹಳ್ಳೀಲಿದ್ರೂ ಸರಿ - ಒಂದು ಬೋರ್ಡಲ್ಲಿ "ದಿನಕ್ಕೊಂದು ಹಿಂದಿ ಪದ" ಕಣ್ಣಿಗೆ ಕುಕ್ಕತ್ತೆ. ಇನ್ನು ಗುಮಾಸ್ತರ ಹತ್ರ ಸ್ವಲ್ಪ ಬೆಳ್ಳಗಿರೋರು ಹೋದ್ರೆ "ಕ್ಯಾ ಚಾಯೀಯೆ" ಅಂತ ಹಿಂದಿಯಲ್ಲೇ ಮಾತಾಡ್ಸೋದೂ ಉಂಟು.

ಬ್ಯಾಂಕಲ್ಲಿ ಕನ್ನಡ ಕಾಲ ಕಸಕ್ಕಿಂತ ಕಡೆ ಅನ್ಕೊಳ್ತಿರೋ ಕನ್ನಡದ ಗ್ರಾಹಕ


ಇವತ್ತು ತನ್ನ ನಾಡಲ್ಲೇ ಕನ್ನಡಿಗ ಗ್ರಾಹಕನ ಸ್ಥಿತಿ ನೋಡುದ್ರೆ ಬೇಜಾರಾಗತ್ತೆ ಗುರು! ತನ್ನ ನಾಡಲ್ಲೇ ಇರೋ ಬ್ಯಾಂಕಲ್ಲಿ ಕೆಲಸ ಆಗಬೇಕು ಅಂದ್ರೆ ಕಷ್ಟ ಪಟ್ಟಾದ್ರೂ ಹಿಂದೀಲಿ ಮಾತಾಡಬೇಕಾದ ಅನಿವಾರ್ಯತೆ ಬಹಳ ಕಡೆ ಎದ್ರಾಗತ್ತೆ. ಕನ್ನಡದಲ್ಲಿ ಕೇಳ್ದ್ರೆ "ಇರಿ ಒಂದ್ಸೊಲ್ಪ" ಅಂತ ಶಬರಿ ಥರಾ ಕಾಯಿಸ್ತಾರೆ, ಕಾಯ್ಸಿ ಕಾಯ್ಸಿ "ಸಾರಿ, ಇಲ್ಲಿ ಕನ್ನಡ ಬರೋರು ಯಾರೂ ಇಲ್ಲ" ಅನ್ನೋದು, ಇಲ್ಲಾ "ಲೋ ಹೋಗೋ ಹಳ್ಳೀ ಗುಗ್ಗೂ ನನ್ ಮಗ್ನೆ!" ಅನ್ನೋಹಂಗೆ ಮಾತಾಡ್ಸೋದು - ಇವೆಲ್ಲಾ ದಿನಾ ನಡೆಯುವಂಥವು! ಇನ್ನು ಏಟೀಯಮ್ಗಳಲ್ಲಿ ಇಲ್ಲಾ ಹಿಂದಿ ಬರಬೇಕು ಇಲ್ಲಾ ಇಂಗ್ಲೀಷ್ ಬರಬೇಕು ಅನ್ನೋ ಪರಿಸ್ಥಿತಿ ಇವತ್ತಿದೆ.

ಇವೆಲ್ಲದರಿಂದ ಇವತ್ತಿನ ದಿನ ಕನ್ನಡಿಗನಿಗೆ ತನ್ನ ನುಡಿ ಕಾಲ ಕಸಕ್ಕಿಂತ ಕಡೆ, ಹಿಂದಿಯಲ್ಲಿ ಮಾತಾಡಿದರೇ ಕೆಲಸ ಆಗೋದು ಅಂತ ಅನ್ಸಿ ಹಿಂದಿ ಹೇರಿಕೆಗೆ ಕನ್ನಡಿಗ ಸೋಲ್ತಿದಾನೆ, ನಿಧಾನವಾಗಿ "ನಾನು ಕೀಳು, ನಮ್ಮಪ್ಪ ಕೀಳು, ನಿಮ್ಮವ್ವ ಕೀಳು, ನಿನ್ ನಾಡು ಕೀಳು, ನನ್ ನುಡಿ ಕೀಳು" ಅನ್ನೋ ವಿಷಾನ ನುಂಗ್ತಿದಾನೆ.

ಹಿಂದಿ ಹೇರಿಕೆ ಬ್ಯಾಂಕುಗಳನ್ನ ಮಾತ್ರ ಅಲ್ಲ, ಇಡೀ ಕರ್ನಾಟಕವನ್ನ ನಿಧಾನವಾಗಿ ತಿಂತಿರೋ ಗೆದ್ದಲು

ಮೇಲಿಂದ ಮೇಲೆ ಸಿಕ್ಕಸಿಕ್ಕ ಕಡೆಯೆಲ್ಲಾ "ಹಿಂದಿ ಭಾರತದ ಮಿಕ್ಕೆಲ್ಲ ಭಾಷೆಗಳಿಗಿಂತ ಮೇಲು", ಅದು "ರಾಷ್ಟ್ರಭಾಷೆ" ಅಂತೆಲ್ಲ ಸುಳ್ಳು ಹೇಳಿ ಹೇಳಿ, ಚಿಕ್ಕವಯಸ್ಸಿಂದ ಪಠ್ಯಪುಸ್ತಕಗಳಲ್ಲಿ ಇದನ್ನೇ ಮಕ್ಕಳ ತಲೆಗಳಿಗೆ ತುಂಬಿ, ಬಾಕಿ ಭಾಷೆಗಳೆಲ್ಲ ಬರೀ ಮನೇಲಿ ಆಡ್ಕೊಳೋಂಥವು, ಹಿಂದಿ ಮಾತ್ರ ಮೇಲ್ದರ್ಜೆ ಭಾಷೆ ಅನ್ನೋ ಹುಳವನ್ನ ಇಡೀ ದೇಶದಲ್ಲಿ ಬಿಟ್ಟು ದಾರಿ ತಪ್ಪಿಸೋ ಕೆಲಸ ಮಾಡ್ತಿರೋರು ಇನ್ಯಾರೂ ಅಲ್ಲ, ಕೇಂದ್ರಸರ್ಕಾರವೇ. ಇದರಿಂದ ಕರ್ನಾಟಕ ನಿಧಾನವಾಗಿ ನಾಶವಾಗ್ತಾ ಇದೆ.

ಹಿಂದಿ ಹೋಗಿ ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗೋ ವರಗೆ ನಮ್ಮ ಭವಿಷ್ಯದಲ್ಲಿ ಕತ್ತಲೇನೇ

ಈ ಹಿಂದಿ ಗೆದ್ದಲು ನಮ್ನ, ನಮ್ಮ ಆತ್ಮವಿಶ್ವಾಸವನ್ನ, ನಮ್ಮ ನುಡಿಯನ್ನ, ನಮ್ಮ ನಾಡ್ನ ತಿಂದುಹಾಕೋದಕ್ಕೆ ಹೊರ್ಟಿದೆ. ಇದನ್ನ ಮೊದ್ಲು ಅರ್ಥ ಮಾಡ್ಕೊಂಡೋರು ಅಂದ್ರೆ ತಮಿಳ್ರು. ಇವತ್ಗೂ ಅವರು ಈ ವಿರೋಧವನ್ನ ಬಿಟ್ಟಿಲ್ಲ. ಅಂದ ಮಾತ್ರಕ್ಕೆ ಅವರೇನು ವಿರೋಧಿಸೋದ್ರಲ್ಲಿ ಬಹಳ ಗೆಲುವು ಕಂಡಿದಾರೆ ಅಂತೇನಿಲ್ಲ, ನಮಗಿಂತ ತುಂಬ ಮುಂದಿದಾರೆ, ಅಷ್ಟೆ. ನಮ್ಮ ತೂಗುತಲೆ ದಾಸರು (=ರಾಜಕಾರಣಿಗಳು) ಹಿಂದಿಯಿಂದ್ಲೇ ತಮ್ಮ ಕುರ್ಚಿ ಭದ್ರವಾಗಿರೋದು ಅಂದ್ಕೊಂಡು ಕನ್ನಡಕ್ಕೆ ದ್ರೋಹ ಮಾಡೋದ್ರಲ್ಲೇ ಇನ್ನೂ ಇದಾರಲ್ಲ ಗುರು!

ಹಿಂದಿ ಎಲ್ಲೀವರೆಗೆ ಭಾರತದ ಬೇರೆಯೆಲ್ಲಾ ಭಾಷೆಗಳಂಗೆ "ಒಂದು ಭಾಷೆ" ಅನ್ನಿಸಿಕೊಂಡು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಲ್ವೋ ಅಲ್ಲೀ ವರೆಗೆ ನಮಗೆ ಹತ್ತಿರೋ ಗೆದ್ಲು ನಮ್ನ ನಿಧಾನವಾಗಿ ತಿಂತಾ ಇರತ್ತೆ, ಭವಿಷ್ಯದಲ್ಲಿ ಕತ್ತಲೇನೇ ತುಂಬಿರತ್ತೆ ಗುರು!

ಈಗ್ಲೂ ಕಾಲ ಮಿಂಚಿಲ್ಲ, ಕನ್ನಡಿಗರು ಎಚ್ಚೆತ್ತುಕೋಬೇಕು, ಕಾಲು ಒದ್ರುಕೋಬೇಕು, ಅಷ್ಟೆ.

ಇವತ್ತಿನ ರಾಷ್ಟ್ರೀಯ ಪಕ್ಷಗಳಿಂದ್ಲೇ ರಾಷ್ಟ್ರದ್ರೋಹ!

ಬೆಳಗಾವಿ ಎ.ಪಿ.ಏಂ.ಸಿ. ಚುನಾವಣೇಲಿ ಮೇಲುಗೈ ಸಾಧಿಸೋದಕ್ಕೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆಗೆ ಭಾ.ಜ.ಪ. ನೆನ್ನೆ ಕೈ ಕುಲುಕಿದೆ ಅಂತ ಇವತ್ತು ಕನ್ನಡಪ್ರಭ ವರದಿ ಮಾಡಿದೆ. ಇಂಡಿಯನ್ ಎಕ್ಸ್ರ್‍ಪ್ರೆಸ್ ನಲ್ಲಿ ಕೂಡ ಇದೇ ಸುದ್ದಿ. ಬರೋ ಎರಡು ತಿಂಗ್ಳಲ್ಲಿ ರಾಜ್ಯದ ಆಡಳಿತ ಕೈಗ್ ತೊಗೊಳಕ್ ಹೊರಟಿರೋ ಭಾ.ಜ.ಪ. ಅಧಿಕಾರಕ್ಕಾಗಿ ಕನ್ನಡವಿರೋಧಿಗಳ ಜೊತೆಗೂ ಕೈಗೂಡಿಸೋದಕ್ಕೆ ಹಿಂಜರಿಯಲ್ಲ ಅಂತ ತೋರಿಸಿಕೊಟ್ಟಿದಾರೆ. ಇವರಿಗೆ ಬೇಕಾಗಿರೋದು ಅಧಿಕಾರ, ಅಷ್ಟೆ. ಅದಕ್ಕೆ ಏನು ಮಾಡಕ್ಕೂ ತಯಾರು ಇವ್ರು. ಈ ರಾಷ್ಟ್ರೀಯ ಪಕ್ಷಗಳಿಗೆ ಕನ್ನಡನಾಡು ಬರೀ ರಿಯಲ್ ಎಸ್ಟೇಟು ಗುರು! ಯಾರ ಜೊತೆ ಕೈಜೋಡಿಸಿದರೆ ಕುರ್ಚಿ ಭದ್ರಾನೋ ಔರ ಜೊತೆ ಸೇರ್ಕೊಂಡು ನಾಡ್ನ ಹಿಂದ್-ಮುಂದ್ ನೋಡದೆ ಮಾರಿಹಾಕೋ ಜನ ಇವ್ರು.

ಕನ್ನಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ

ಈ "ಮಹಾರಾಷ್ಟ್ರ ಏಕೀಕರಣ ಸಮಿತಿ" ಅನ್ನೋದನ್ನ ಕರ್ನಾಟಕದಲ್ಲಿ ಕಾಲಿಡಕ್ಕೆ ಬಿಟ್ಟಿರೋದೇ ತಪ್ಪು. ಬೆಳಗಾವೀಲಿ ಬಂದು ಏನು ಮಹಾರಾಷ್ಟ್ರದ ಏಕೀಕರಣ ಮಾಡೋದು ಇವ್ರು? ಇವರ ಅಜೆಂಡಾನೇ ಅಕ್ಕಪಕ್ಕದ ರಾಜ್ಯಗಳ ಊರುಗಳ್ನ ನುಂಗೋದು. ಇಂಥಾ ರಾಜಕೀಯ ಪಕ್ಷಗಳು ಇರೋದಕ್ಕೆ ಒಪ್ಪಿಗೆ ಕೊಟ್ಟಿರೋದು ಭಾರತದ ಒಕ್ಕೂಟ ವ್ಯವಸ್ಥೆಗೇ ಒಂದು ಕಪ್ಪುಚುಕ್ಕೆ. ಈ ಎಂ.ಇ.ಎಸ್. ನೋರು ಮಾಡಿರೋ ಹಲ್ಕಾ ಕೆಲ್ಸ ಒಂದೊಂದಲ್ಲ. ಬೆಳಗಾವೀನ ಮಹಾರಾಷ್ಟ್ರಕ್ಕೆ ಸೇರಿಸ್ತೀವಿ ಅಂತ ಸಾರಿ ಸಾರಿ ಹೇಳೋದು, ಸಾಂಗ್ಲೀಲಿದ್ದ ಮರಾಠಿ ಸಮ್ಮೇಳನಾನ ಬೆಳಗಾವೀಲಿ ಮಾಡಿ ಅನ್ನೋದು, ಇಂಥಾ ಕನ್ನಡವಿರೋಧಿ ಚಟುವಟಿಕೆಗಳ್ನ ಮಾಡೋದೇ ಇವರ ಜಾಯಮಾನ.

ರಾಷ್ಟ್ರದ್ರೋಹಿ ರಾಷ್ಟ್ರೀಯ ಪಕ್ಷಗಳು

ಅಲ್ಲ, ಅಧಿಕಾರಕ್ಕಾಗಿ ಇಂಥೋರ ಜೊತೆ ಕೈಜೋಡಿಸುವುದಕ್ಕೂ ಹಿಂದೇಟಾಕ್ಲಿಲ್ಲವಲ್ಲ ಭಾ.ಜ.ಪ.? ಇವ್ರ ಕೈಲಿ ಕರ್ನಾಟಕದ ಆಡಳಿತ ಕೊಡಕ್ಕಾದ್ರೂ ಹೆಂಗಾಗತ್ತೆ ಗುರು? ಇವರಿಗೆ ಕರ್ನಾಟಕ ಅನ್ನೋದು ಗೌಣ, ಅಧಿಕಾರ ಅನ್ನೋದೇ ಮೊದ್ಲು. ಭಾ.ಜ.ಪ. ಅಷ್ಟೇ ಅಲ್ಲ, ಇವತ್ತಿನ ರಾಷ್ಟ್ರೀಯ ಪಕ್ಷಗಳಿಗೆಲ್ಲ ಇರೋ ರೋಗವೇ ಇದು. ಇವರಿಗೆ ಕನ್ನಡವೂ ಗೌಣ, ಕನ್ನಡಿಗರೂ ಗೌಣ, ಕರ್ನಾಟಕವೂ ಗೌಣ (ಆ ಮೂಲಕ ಭಾರತವೂ ಗೌಣ; ನಮಗೆ ಕರ್ನಾಟಕವೇ ಭಾರತ). ಇವತ್ತು ಭಾ.ಜ.ಪ. ಜಾಗದಲ್ಲಿ ಕಂಗ್ರೆಸ್ ಇದ್ದಿದ್ರೆ ಎಂ.ಇ.ಎಸ್. ಜೊತೆ ಅವರೇ ಕೈ ಜೋಡಿಸುತ್ತಾ ಇದ್ರು ಅಂತ ಹೇಳಬೇಕಾಗೇ ಇಲ್ಲ.

ಪ್ರತಿಯೊಂದು ತೀರ್ಮಾನವೂ ಈ "ರಾಷ್ಟ್ರೀಯ ಪಕ್ಷ"ಗಳ ತೂಗುತಲೆ ದಾಸರಿಗೆ ದಿಲ್ಲಿಯಿಂದಾನೇ ಬರಬೇಕು. ತಮ್ಮ ನಾಡಿಗೇ ದ್ರೋಹ ಬಗಿ ಅಂತ ಹೇಳ್ಕೊಟ್ರೂ ತಲೆ ಅಲ್ಲಾಡಿಸೋ ದ್ರೋಹಿಗಳು ಇವ್ರು. ಹಿಂದೆ ಬ್ರಿಟೀಷರು ನಾಡದ್ರೋಹಿ ಭಾರತೀಯರನ್ನ ಸಾಕ್ಕೊಂಡು ಭಾರತಕ್ಕೇ ದ್ರೋಹ ಬಗಿ ಅಂತ ಹೇಳಿಕೊಟ್ಟರೂ ತಲೆ ಅಲ್ಲಾಡಿಸಿಕೊಂಡು ಮಾಡ್ತಿದ್ರಲ್ಲ, ಅವ್ರಿಗೂ ಇವತ್ತಿನ ರಾಷ್ಟ್ರೀಯ ಪಕ್ಷಗಳಿಗೂ ಏನು ವೆತ್ಯಾಸ? ನಮ್ಮನ್ನ ಆಳೋರ್ನ ಅವತ್ತು ಬ್ರಿಟೀಷರು ಸಾಕ್ಕೊಂಡಿದ್ರು, ಇವತ್ತು ದಿಲ್ಲಿಯೋರು ಸಾಕ್ಕೊಂಡಿದಾರೆ, ಅಷ್ಟೆ. ಕರ್ನಾಟಕಕ್ಕೆ ಇವ್ರಿಬ್ರಿಂದ್ಲೂ ಸಿಗ್ತಿರೋ "ಸುಖ" ಒಂದೇ.

ಈ ಐವತ್ ವರ್ಷ್ದಲ್ಲಿ ಕರ್ನಾಟಕವನ್ನ ಆಳಿರೋ ಪಕ್ಷಗಳೆಲ್ಲ "ರಾಷ್ತ್ರೀಯ ಪಕ್ಷ"ಗಳೇ, ಎಲ್ಲರೂ ಕರ್ನಾಟಕದ್ರೋಹಿಗಳೇ, ರಾಷ್ಟ್ರದ್ರೋಹಿಗಳೇ. ಇವ್ರ್ಯಾರಿಂದ್ಲೂ ಕಾವೇರಿ ಸಮಸ್ಯೆ ಬಗೆಹರಿಸಕ್ಕಾಗ್ಲಿಲ್ಲ, ಮಹಾಜನ್ ವರದಿ ಜಾರೀಗ್ ಬರ್ಲಿಲ್ಲ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡ್ಸಕ್ಕಾಗಿಲ್ಲ. ಯಾವ್ದೇ ರೀತೀಲೂ ಇವ್ರು ಕರ್ನಾಟಕದ ಗಡಿ-ನುಡಿ, ನೆಲ-ಜಲ ಕಾಯ್ಲಿಲ್ಲ.

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆ ಇದೇ ಮಣ್ಣಿನಲ್ಲಿ ಹುಟ್ಟಿದ ಪಕ್ಷಗಳ ಕೈಲಿ ಮಾತ್ರ ಸಾಧ್ಯ

ನೆಲ-ಜಲಗಳ್ನ ಕಾಯೋ ಕೆಲ್ಸಗಳ್ನೇ ಮಾಡಕ್ಕೆ ಯೋಗ್ತೆ ಇಲ್ದೇ ಇರೋ ಭಾ.ಜ.ಪ., ಕಾಂಗ್ರೆಸ್ಸು, ಮುಂತಾದ "ರಾಷ್ಟ್ರೀಯ ಪಕ್ಷ"ಗಳಿಗೆ ಕರ್ನಾಟಕದ ಏಳ್ಗೆ ಬೇಡವೇ ಬೇಡ. ಇವರನ್ನ ನಂಬ್ಕೊಂಡ್ರೆ ಕನ್ನಡ ಹೀಬ್ರೂ, ಜರ್ಮನ್, ಫ್ರೆಂಚ್, ಇಂಗ್ಲೀಷ್ ಗಳಷ್ಟು ಬಲಿಷ್ಠ ಭಾಷೆ ಆದಂಗೇ, ಕರ್ನಾಟಕ ಪ್ರಪಂಚದಾದ್ಯಂತ ಹೆಸರು ಮಾಡಿದಂಗೇ, ಕನ್ನಡಿಗ ಸಾಧನೆಯ ಶಿಖರಕ್ಕೆ ಏರಿದಂಗೇ. ಇವರನ್ನ ನಂಬ್ಕೊಂಡ್ರೆ ಬೆಂಗಳೂರಿನ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಇವತ್ತು ಆಗ್ತಿರೋ ಅವಮಾನ ನಿಂತಂಗೇ, ಇವರನ್ನ ನಂಬ್ಕೊಂಡ್ರೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಕೆಲಸ ಸಿಕ್ಕಿದಂಗೇ.

ಈ ರಾಷ್ಟ್ರೀಯ ಪಕ್ಷಗಳ್ನ ನಂಬಕ್ಕಾಗಲ್ಲ ಗುರು. ನಮಗೆ ನಮ್ಮದೇ ಪಕ್ಷಗಳು ಬೇಕು. ಕರ್ನಾಟಕವನ್ನೇ ಕರ್ಮಭೂಮಿಯಾಗಿಟ್ಟುಕೊಂಡಿರೋ ಪಕ್ಷಗಳು ಬೇಕು. ಕನ್ನಡಿಗರ ಏಳ್ಗೆಯನ್ನೇ ಗುರಿಯಾಗಿ ಇಟ್ಟುಕೊಂಡಿರೋ ಪಕ್ಷಗಳು ಬೇಕು. ಕನ್ನಡಾಂಬೆಯನ್ನೇ ದೇವಿ ಅಂತ ನಂಬಿರೋ ಪಕ್ಷಗಳು ಬೇಕು. ಕನ್ನಡ-ಕನ್ನಡಿಗ-ಕರ್ನಾಟಕಗಳ ವಿಷ್ಯ ಬಂದಾಗ ಕೂದಲೆಳೆಯಷ್ಟೂ ರಾಜಿಮಾಡ್ಕೊಳಕ್ಕೆ ತಯಾರಿಲ್ಲದಿರೋ ಪಕ್ಷಗಳು ಬೇಕು, ಇದೇ ಮಣ್ಣಲ್ಲಿ ಹುಟ್ಟಿದ ಪಕ್ಷಗಳು ಬೇಕು.

ಮರ ಹತ್ತಿ ಶಾಸ್ತ್ರೀಯ ಮಾವಿನಕಾಯಿ ಕಿತ್ತುಕೊಳ್ಳಕ್ಕೆ ಮೊದಲು ಕಾಲು ಇರ್ಬೇಕು!

"ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ದೇ ಹೋದ್ರೆ ದುಕ್ಕ ಪಡಬೇಕಾಗಿಲ್ಲ, ಬೆಂಗಳೂರಲ್ಲಿ ಕನ್ನಡ ಸರಿಯಾಗ್ ಅನುಷ್ಠಾನಕ್ ಬಂದ್ರೆ ಸಾಕು" ಅಂತ ವಾದ್ಸೋ ಒಂದು ಬರಹವನ್ನ ಇವತ್ತಿನ ವಿ.ಕ.ದಲ್ಲಿ ನೋಡಬೋದು. ಬೆಂಗಳೂರಲ್ಲಿ ಕನ್ನಡ ಸರಿಯಾಗಿ ಅನುಷ್ಠಾನ ಆಗಬೇಕು ಅನ್ನೋದು ನಿಜವೇ. ಆದರೆ ಈ ಶಾಸ್ತ್ರೀಯ ಭಾಷೆ ವಿಷ್ಯದಲ್ಲಿ ನಾವು ಸೋತ್ರೆ ಅದು ಕನ್ನಡಿಗರ ಯಾವ ಮುಖ್ಯವಾದ ಕೊರತೇನ ಎತ್ತಿ ತೋರ್ಸತ್ತೆ ಗೊತ್ತಾ? ಕೇಂದ್ರದಲ್ಲಿ ನಮಗೆ ಸ್ವಲ್ಪವೂ ಹಿಡಿತ ಇಲ್ಲದೇ ಇರುವ ಕೊರತೆ.

ಶಾಸ್ತ್ರೀಯ ಭಾಷೆ ಅನ್ನುಸ್ಕೊಳಕ್ಕೆ ಏನೇನೋ ಸುಡುಗಾಡು-ಶುಂಠೀಹಾಳು ಶರತ್ತು ಪೂರೈಸ್ಬೇಕು, ತಜ್ಞರ ಸಮಿತಿ ವರದಿ ಕೊಡ್ಬೇಕು ಅಂತ ಕನ್ನಡದ ವಿಷಯಕ್ಕೆ ಹೇಳ್ತಿರೋ ಕೇಂದ್ರ ಸರ್ಕಾರ ತಮಿಳಿಗೆ ಅದೇ ಸ್ಥಾನಮಾನ ಕೊಟ್ಟಾಗ ಇದ್ನೆಲ್ಲಾ ಕೇಳಲೇ ಇಲ್ಲ ಅನ್ನೋದನ್ನ ಮರೀಬೇಡಿ. ಇವತ್ತಿನ ದಿನ ಕನ್ನಡ ಆ ಎಲ್ಲಾ ಶರತ್ತುಗಳನ್ನೂ ಪೂರೈಸುವಂಥಾ ಭಾಷೆ ಆಗಿದ್ರೂ ನಮಗೆ ಇನ್ನೂ ಆ ಸ್ಥಾನಮಾನ ಸಿಕ್ಕಿಲ್ಲ ಅನ್ನೋದನ್ನೂ ಮರೀಬೇಡಿ.

ಶಾಸ್ತ್ರೀಯ ಸ್ಥಾನ ಕೊಡಕ್ಕೆ ಒಂದು ನಿಯಮಾವಳಿ ಇದ್ದು, ಅದ್ನ ಪೂರೈಸೋ ಭಾಷೆಗೆಲ್ಲಾ ಆ ಸ್ಥಾನಮಾನ ಕೊಟ್ಟಿದ್ದಿದ್ರೆ ನಾವೂ ತಲೆ ಕೆಡುಸ್ಕೋಬೇಕಿತ್ತಿಲ್ಲ. ತಮಿಳು ಭಾಷೆಗೆ ಲೋಕಸಭೇಲಿ ಶಾಸ್ತ್ರೀಯ ಸ್ಥಾನಮಾನಾನ ಘೋಷಣೆ ಮಾಡ್ದಾಗ ಅವರ ಮುಂದೆ ಯಾವ ಸಮಿತಿಯ ವರದೀನೂ ಇರ್ಲಿಲ್ಲ. ಸರ್ಕಾರದ ಮುಂದೆ ಆಗ ಇದ್ದದ್ದು ಡಿ.ಎಂ.ಕೆ. ಲೋಕಸಭಾ ಚುನಾವಣಾ ಪ್ರಣಾಳಿಕೆಯ ಈ ಭಾಗ...
Tamil as a Classical Language

DMK will continue to insist for the declaration of Tamil as a Classical Language as it would enable the allocation of funds for Tamil research by the Central government and would also facilitate Tamil research in various universities in India and abroad.

... ಮತ್ತೆ ಇದನ್ನ ಡಿ.ಎಂ.ಕೆ.ಗೆ ಮಾಡಕ್ಕೆ ಬಿಡದೇ ಹೋದ್ರೆ ಎಲ್ಲಿ ಕೇಂದ್ರಸರ್ಕಾರದಿಂದ ಕಾಲು ಎತ್ತುಬಿಡ್ತಾರೋ ಅನ್ನೋ ಹೆದರಿಕೆ ಮಾತ್ರ.

ಇದರಿಂದೆಲ್ಲ ಅರ್ಥವಾಗಬೇಕಾಗಿರೋದು ಏನಪ್ಪಾ ಅಂದ್ರೆ...ನಂ ದೇಶದಲ್ಲಿ ಎಲ್ಲಾ ರಾಜ್ಯಗಳ್ಗೂ ಒಂದೇ ನಿಯಮ ಒಂದೇ ನೀತಿ ಒಂದೇ ಮಾನದಂಡ ಯಾವತ್ತು ಜಾರೀಗ್ ಬರತ್ತೋ ಅವತ್ತು ನಿಜವಾದ ಒಕ್ಕೂಟ ವ್ಯವಸ್ಥೆ ಅನ್ನೋ ಪದಕ್ಕೆ ಅರ್ಥ/ ಸಾರ್ಥಕತೆ ಬರೋದು. ಆ ಸಮಾನತೆ ಇವತ್ತಿನ ದಿನ ಮಂತ್ರಕ್ಕೆ ಉದುರೋ ಮಾವಿನಕಾಯಲ್ಲ, ಮರ ಹತ್ತಿ ಬಲವಂತವಾಗಿ ಕಿತ್ತುಕೋಬೇಕಾದ ಮಾವಿನಕಾಯಿ ಗುರು! ಕನ್ನಡಿಗರದು ಇವತ್ತಿನ ದಿನ ಕೇಂದ್ರದಿಂದ ಎತ್ತಕ್ಕೆ "ಕಾಲು" ಅನ್ನೋದು ಇಲ್ಲವೇ ಇಲ್ಲವಲ್ಲ ಗುರು!

ಕಾಲೇ ಇಲ್ಲದೆ ಹೇಗೆ ಮರ ಹತ್ತೋದು, ಹೇಗೆ ಮಾವಿನಕಾಯಿ ಕಿತ್ಕೊಳೋದು?! ನಿಜವಾದ "ಕಾಲು" ಕಟ್ಟದೆ ಕೈ ಕಟ್ಟಿಕೊಂದು ಕೂತಿದ್ರೆ ಮಾವಿನಕಾಯೂ ಇಲ್ಲ, ಯಾವ ಮಣ್ಣೂ ಇಲ್ಲ!

ಬಾನಲ್ಲೂ ನೀನೇ, ಭುವಿಯಲ್ಲು ನೀನೇ, ಸಿಂಗಾಪುರ್ ಏರ್ಲೈನ್ಸಲ್ಲೂ ನೀನೇ!

ಕಳೆದ ಭಾನುವಾರದ ವಿ.ಕ.ದಲ್ಲಿ ಶ್ರೀ ವಿಶ್ವೇಶ್ವರ ಭಟ್ಟರು ಸಿಂಗಾಪುರ್ ಎರಲೈನ್ನ್ ನಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಕನ್ನಡದ್ ಮೆನು ನೋಡಿ ಸಕ್ಕತ್ ಸಂತೋಷ ಪಟ್ಟು ಬರ್ದಿದಾರೆ. ಸಂತೋಷದ್ ವಿಷ್ಯಾನೇ, ಗುರು!

2004-2005 ರಲ್ಲಿ "ವಿಮಾನಗಳಲ್ಲಿ ಕನ್ನಡ" ಅನ್ನೋ ಬಗ್ಗೆ ಸಕ್ಕತ್ ಚರ್ಚೆಯಾಗಿ ವಿಮಾನಗಳಲ್ಲಿ ಓಡಾಡೋ ಬಹಳ ಕನ್ನಡಿಗರು ಬಳಗದ ಜೊತೆ ಸೇರಿ ಒಗ್ಗಟ್ಟಿಂದ ಲುಫ್ತಾನ್ಸಾ ಮತ್ತೆ ಸಿಂಗಾಪುರ್ ಎರಲೈನ್ಸಗಳ ಗ್ರಾಹಕ ಸೇವೆನೋರಿಗೆ ಕನ್ನಡದಲ್ ಸೇವೆ ಕೊಡಿ ಅಂತ ಮಿಂಚೆಗಳ ಹೊಳೆ ಹರಿಸಿ ಕೇಳ್ಕೊಂಡಿದ್ವು. ಅದಕ್ಕೆ ಸ್ಪಂದಿಸಿ ಸಿಂಗಾಪುರ್ ಎರಲೈನ್ಸ್ ನೋರು 2005 ಮಾರ್ಚಿಯಿಂದ ಕನ್ನಡದಲ್ಲಿ ಮೆನು ಇಡ್ತೀವಿ ಅಂತ ನಮಗೆ ಮಾತು ಕೊಟ್ಟಿದ್ರು:
From: SAA_Feedback@singaporeair.com.sg

Thank you for your email reply dated 19 February.

I appreciate the time and effort taken to convey your feedback to us. I have highlighted your comments to the relevant Departmental Heads for their attention and consideration.

I am also pleased to share with you that menu cards in KannaDa will be made available from March 2005 onwards.

Thank you for flying with Singapore Airlines. We look forward to welcoming you on board our flights again soon.

Yours sincerely

Chin Hsiang San (Ms)
Manager Customer Services

ಕೊಟ್ಟ ಮಾತ್ನ ಸಿಂಗಾಪುರ್ ಏರ್ಲೈನ್ಸ್ ನೋರು ಉಳಿಸಿಕೊಂಡಿದಾರೆ ಅನ್ನೋದು ಒಳ್ಳೇ ಸುದ್ದಿ ಗುರು!

ಇವತ್ತಿನ ದಿನ ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ವಿಮಾನಗಳಲ್ಲಿ ಕನ್ನಡ ಇಲ್ಲ, ಇರೋದು ಹಿಂದಿ ಮತ್ತೆ ಇಂಗ್ಲೀಷು. ಇದಕ್ಕೆ ಒಪ್ಪಿಕೊಂಡು ಯಾಕ್ ಕೂತ್ಕೋಬೇಕು? ಗಿರಾಕೀಗ್ ಬೇಕಾಗಿರೋದನ್ನ ಕಂಪನಿಯೋರು ಕೊಡಬೇಕೋ ಇಲ್ಲಾ ಔರು ಕೊಟ್ಟಿದ್ನ ಗಿರಾಕಿಗಳು ಇಸ್ಕೋಬೇಕೋ? ಹಿಂದೀನಂತೂ ಇಂತಾ ಕಡೆಯಲ್ಲಾ ಮೆರ್ಸಿ ಮೆರ್ಸಿ ಅದಕ್ಕೆ ಇಲ್ಲದ ಒಪ್ಪುಗೆ ಭಾರತದಲ್ಲಿ ಇದೆ ಅನ್ನೋ ಸುಳ್ನ ಪ್ರಪಂಚಕ್ಕೆಲ್ಲಾ ಇಲ್ಲೀವರೆಗೂ ಹೇಳ್ಕೊಂಡ್ ಬಂದಿರೋದಂತೂ ಮನೆಹಾಳು ಕೆಲ್ಸಾನೇ ಗುರು! ಬೆಂಗಳೂರಿಂದ ಚೆನ್ನೈಗೆ ಹೋಗೋ ವಿಮಾನಗಳಲ್ಲೂ ಹಿಂದೀಲಿ ಮಾತಾಡೋರ್ನ ಕೂರ್ಸಿ, ಹಿಂದೀಲಿ ಸೂಚನೆಗಳ್ನ ಕೊಡಿಸೋ ಪೆದ್ದತನ ಮೊದ್ಲು ಶುರುವಾಗಿದ್ದು ಇಂಡಿಯನ್ ಏರ್ಲೈನ್ಸ್ ನಿಂದ. ಅದೇ ರೋಗ ಈಗ ಜೆಟ್ಟು-ಕಿಂಗ್ಫಿಷರ್ರುಗಳಿಗೂ ಅಂಟ್ಕೊಂಡಿದೆ, ಲುಫ್ತಾನ್ಸಾ-ಗಿಫ್ತಾನ್ಸಾಗಳ್ಗೂ ಅಂಟ್ಕೊಂಡಿದೆ ಅಷ್ಟೆ.

ಕರ್ನಾಟಕದ ಯಾವುದೇ ಊರಿಂದ/ಊರಿಗೆ ಹಾರೋ ಈ ಹಕ್ಕಿಗಳಿಗೆ ಬಂದಿರೋ ರೋಗಕ್ಕೆ ಮದ್ದು ಇದ್ದೇ ಇದೆ, ಕುಡುಸ್ಬೇಕು, ಅಷ್ಟೆ:

"ವಿಮಾನದಲ್ಲಿ ಓಡಾಡುವಾಗ ಕನ್ನಡದಲ್ಲಿ ಮಾತಾಡೋದು ಅಂದ್ರೇನು? ಛೆ! ಛೆ!...ಇಷ್ಟು ಮೇಲೆ ಬಂದು ಕನ್ನಡ ಮಾತಾಡೋದು ಅಂದ್ರೇನು!" ಅಂದುಕೊಳ್ಳೋಷ್ಟು ಕೀಳರಿಮೇನ ಹೂತಾಕ್ಬೇಕು! ಕೇಳಬೇಕು, ಕನ್ನಡದಲ್ಲಿ ಸೇವೆ ಕೊಡಿ ಅಂತ ಒತ್ತಾಯ ಮಾಡ್ಬೇಕು! ಪಡ್ಕೊಳೋದು ನಮ್ಮ ಹಕ್ಕು, ಕೊಡೋದು ನಿಮ್ಮ ಕರ್ತವ್ಯ ಅಂತ ಗದರುಹಾಕ್ಬೇಕು! ಮೆನು ಅಷ್ಟೇ ಅಲ್ಲ, ಅಲ್ಲಿಟ್ಟಿರೋ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿ, ಬಾಂಗೆಳತಿಯರ/ಗೆಳೆಯರ ಮಾತು, ಅಲ್ಲಿಲ್ಲಿ ಅಂಟಿಸಿರೋ ಸೂಚನೆಗಳು, ಹತ್ತೋ ಪಾಸು, ಔರು ಕೊಡೋ ತಿಂಡಿಗಳ ಕವರ್ಗಳ ಮೇಲೆ ಬರ್ದಿರೋ ಮಾಹಿತಿ, ಮನರಂಜನೆ, ಕಾಗದದ್ ಲೋಟದ ಮೇಲೆ ಬರ್ದಿರೋ ಹಾಳು-ಮೂಳು, ಎಲ್ಲವೂ ಕನ್ನಡದಲ್ಲೇ ಇರಬೇಕು ಅಂತ ಒತ್ತಾಯ ಮಾಡ್ಬೇಕು.

ಅದು ಬಾನೇ ಆಗಲಿ ಭುವಿಯೇ ಆಗಲಿ, ಕನ್ನಡದಲ್ಲಿ ಸೇವೆ ಪಡ್ಕೊಳೋದು ನಮ್ಮ ಹಕ್ಕು. ಕಾನೂನು ಕೂಡ ಇದನ್ನೇ ಹೇಳೋದು. ಕನ್ನಡದಲ್ಲಿ ಸೇವೆ ಕೊಡಲ್ಲ ಅಂದ್ರೆ ಅಂತೌರಿಗೆ ಕನ್ನಡ ನಾಡಲ್ಲಿ ಯಾಪಾರ ಮಾಡಕ್ಕೆ ಹಕ್ಕೇ ಇಲ್ಲ ಗುರು!

ಇನ್ನೂ ಲುಫ್ತಾನ್ಸಾ ಆಗ್ಲಿ ಬೇರೆ ವಿಮಾನ ಸಂಸ್ಥೆಗಳಾಗ್ಲಿ ಉತ್ರ ಕೊಟ್ಟಿಲ್ಲ. ನೆ.ನ.ಪಿ.ರ.ಲಿ.!

ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ

ನೈಸ್ ಅಶೋಕ್ ಖೇಣಿ ಕನ್ನಡ್‍ದಲ್ಲಿ ಚಿತ್ರ ಮಾಡ್ತೀನಿ, ಒಳ್ಳೊಳ್ಳೆ ಬೇರೆಭಾಷೆ ಚಿತ್ರಗಳ್ನ ಕನ್ನಡಕ್ಕೆ ಡಬ್ ಮಾಡಿ ಕನ್ನಡಿಗರ ಮುಂದೆ ಇಡ್ತೀನೆ ಅಂದ್ರೆ ಮಾಜಿ ಕನ್ನಡ ಚಿತ್ರನಟ ಅಶೋಕ್ "ಅದೆಂಗೆ ಮಾಡ್ತೀರ ನೋಡ್ತೀನಿ!" ಅನ್ನೋ ರೀತೀಲಿ ತೊಡರುಗಾಲು ಹಾಕಿದಾರೆ ಅಂತ ಆಗಸ್ಟ್ 1ರ ವಿ.ಕ. ದಲ್ಲಿ ಸುದ್ದಿ.

ಅದ್ಯಾಕ್ ಇವ್ರುಗೂ ಡಬ್ಬಿಂಗ್ಗೂ ಎಣ್ಣೆ-ಸೀಗೇಕಾಯಿ ಸಂಬಂಧವೋ ಗೊತ್ತಿಲ್ಲ. ಹಿಂದೆ ಡಬ್ಬಿಂಗ್ ವಿರೋಧ್ಸಿ ಚಳುವಳಿ ಮಾಡಿದ್ರು ಅಂತ್ಲೋ ಏನೋ ಈಗ್ಲೂ "ಅಪ್ಪ ಹಾಕಿದ್ ಆಲದ್ ಮರಕ್ಕೆ" ಜೋತುಬೀಳೋದು ಸೊಲ್ಪ ತಮಾಷಿಯಾಗಿದೆ ಗುರು!

ಹಿಂದೆ ಅರವತ್ತರ ದಶಕದಲ್ಲಿ ಕನ್ನಡ ಸಿನಿಮಾಗಳ್ನ ಮಾಡೋರೇ ಜಾಸ್ತಿ ಇರ್ಲಿಲ್ಲ. ಮಾಡ್ತಿದ್ದ ಬೆರಳೆಣಿಕೆ ಸಂಸ್ಥೆಗಳೂ ಬೇರೆಭಾಷೆಯೋರ ಕೈಯಲ್ಲೇ ಇದ್ವು. ಆಗ ಔರು ಮಾಡ್ತಿದ್ದ ಡಬ್ಬಿಂಗಿಂದ ಕನ್ನಡ ಚಿತ್ರನಿರ್ಮಾಣ ಮತಷ್ಟು ಕಡ್ಮೆಯಾಗಿ ಕನ್ನಡ ಕಲಾವಿದರು ಮತ್ತು ಕನ್ನಡ ಚಿತ್ರಮಂದಿರಗಳು ಬದುಕಕ್ಕೇ ಕಷ್ಟ ಪಡ್ತಾ ಇದ್ವು. ಆಗ ಡಬ್ಬಿಂಗ್ ಬೇಡ ಅನ್ನೋ ನಿಲುವು ಸರಿಯಾಗೇ ಇತ್ತು. ಆಗ ಕನ್ನಡದ ಕಟ್ಟಾಳು ಅನಕೃ ಮತ್ತು ಇನ್ನೂ ಕೆಲವು ಹಿರಿಯರು ಚಳವಳಿ ಮಾಡಿದ್ದಕ್ಕೇ ಕನ್ನಡ ಚಿತ್ರರಂಗ ಬದುಕಿ ಬೆಳೀತು ಅಂದ್ರೆ ಸುಳ್ಳಲ್ಲ.

ಆ ಚಳುವಳಿಯ ಫಲವಾಗೇ ಅಂತ ಕಾಣತ್ತೆ, ಇವತ್ತು ನಂ ನಾಡಲ್ಲಿ ಚಿತ್ರನಿರ್ಮಾಣದ ಎಲ್ಲಾ ಸವಲತ್ತುಗಳೂ, ತಂತ್ರಜ್ಞಾನ, ಪ್ರತಿಭಾವಂತ ಕಲಾವಿದರ ತಂಡ ಎಲ್ಲವೂ ಸಿಗತ್ತೆ. ಆದ್ರೂ ಇವತ್ತು ಕನ್ನಡ ಚಿತ್ರರಂಗಕ್ಕೆ ಕಷ್ಟ ಇಲ್ಲದೆ ಇಲ್ಲ. ಕಷ್ಟ ಆಗ್ಲೂ ಇತ್ತು, ಈಗ್ಲೂ ಇದೆ, ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಡಬ್ಬಿಂಗ್ ಬೇಡಾಂತ ಅನಕೃ ಮುಂತಾದೋರು ಹೋರಾಡ್ತಿದ್ ಕಾಲಕ್ಕೆ ಹೋಲಿಸಿದರೆ ಈಗ ಮುಖ್ಯವಾಗಿ ಎರಡು ಬದಲಾವಣೆಗಳಾಗಿವೆ:
  1. ಕರ್ನಾಟಕಕ್ಕೆ ವಲಸೆ ಬರೋರು ಜಾಸ್ತಿಯಾಗಿ, ಅವರ ಜೊತೆ ಆಯಾ ಭಾಷೆಗಳ ಚಿತ್ರಗಳೂ ವಲಸೆ ಬರೋದು ಹೆಚ್ಚಾಗಿದೆ
  2. ಜಾಗತೀಕರಣದಿಂದಾಗಿ ಹೊರದೇಶಗಳಿಂದ ಬರೋ ಚಿತ್ರಗಳೂ ಹೆಚ್ಚಿವೆ
ಒಟ್ನಲ್ಲಿ ಇವತ್ತು ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಸಂಖ್ಯೆಗೂ ಬೇರೆಭಾಷೆ ಚಿತ್ರಗಳ ಸಂಖ್ಯೆಗೂ ಪೈಪೋಟಿ ಇದೆ. ಹೀಗಿರುವಾಗ ಎಷ್ಟೋ ಜನ ನಮ್ಮ ಕನ್ನಡಿಗರೂ "ರಜನೀ" ನೋಡ್ಬೇಕು, "ಚಿರು" ನೋಡ್ಬೇಕು, "ಬಿಪ್ಸ್" ನೋಡ್ಬೇಕು, "ಶ್ಯಾರನ್ ಸ್ಟೋನ್" ನೋಡ್ಬೇಕು ಅಂತ ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಚಿತ್ರಗಳಿಗೆ ಹೋಗೋದುಂಟು. ಹಿಂದಿ ಚಿತ್ರಗಳಂತೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆಗೆ ಒಂದು ಹೊಸ ಆಯಾಮವನ್ನೇ ತಂದುಕೊಟ್ಟಿವೆ. ಇಂಗ್ಲೀಷಿನ ಚಿತ್ರಗಳಂತೂ ನಾಕ್ ಅಕ್ಷರ ಇಂಗ್ಲೀಷ್ ಬರೋ ಕನ್ನಡಿಗರಿಗೆಲ್ಲ ಬೇಕೇ ಬೇಕು, ನೋಡದೇ ಇದ್ರೆ ಏನೋ ಜೀವನದಲ್ಲಿ ಕಡಿಮೆ ಆಗಿದೆ ಅನ್ನೋ ಅಷ್ಟು ಹುಚ್ಚು. ಈ ಬೇರೆಭಾಷೆ ಚಿತ್ರಗಳ ಹಾವಳೀಲಿ ಎಷ್ಟೇ ಚೆನ್ನಾಗಿದ್ರೂ ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ತಿಯೇಟ್ರು ಸಿಗೋದು ಕಷ್ಟ ಆಗಿದೆ.

ಇವೆಲ್ಲ ಬೇಕಾ ಗುರು? ಇದ್ರ ಬದ್ಲು ಅದೇ ಚಿತ್ರಗಳ್ನ ಕನ್ನಡಕ್ಕೆ ಡಬ್ಬಾರೂ ಮಾಡುದ್ರೆ ಅದನ್ನೇ ಕನ್ನಡಿಗ್ರು ನೋಡಲ್ವೆ? ಅದೇ "ರಜನೀ", ಅದೇ "ಚಿರು", ಅದೇ "ಬಿಪ್ಸು", ಅದೇ "ಶ್ಯಾರನ್ ಸ್ಟೋನ್" ಗಳ್ನ ಕನ್ನಡದಲ್ಲಿ ನೋಡಿದ್ರೆ ತಪ್ಪೇನು? ಈ ಮೂಲಕವಾದ್ರೂ ಕನ್ನಡಾನ ಉಳುಸ್ಕೋಬೋದಲ್ಲ? ಬೇರೆಭಾಷೆಯೋರೂ ಕನ್ನಡದಲ್ಲೇ ತಮ್ಮ ಮೆಚ್ಚಿನ ನಟ-ನಟಿಯರ್ನ ನೋಡೇ ನೋಡ್ತಾರೆ. ಇವೆಲ್ಲ ಬಿಟ್ಟು ಮಡಿಮಡಿಯಾಗಿ ಕನ್ನಡಾನ ಎಲ್ಲೋ ದೂರದಲ್ಲಿಟ್ರೆ ಅದೂ ಸಂಸ್ಕೃತದಂಗೆ ಮೇಲೆಲ್ಲೋ ಮೋಡದಲ್ಲಿ ಕಾಲ್ಪನಿಕ ಜನ್ರು ಮಾತಾಡೋ ಭಾಷೆಯಾಗೋಗಲ್ವಾ ಗುರು? ಡಬ್ಬಿಂಗಿಂದ "ಕನ್ನಡ ಸಂಸ್ಕೃತಿ" ಹಾಳಾಗತ್ತೆ ಅಂತ ವಾದ್ಸೋರು ಮೊದ್ಲು ಕನ್ನಡಿಗರ್ನ ಕನ್ನಡಿಗರಾಗೇ ಉಳಿಸಿಕೊಳ್ಳೋದ್ನ ಕಲೀಬೇಕು. ಚಟ ತೀರಿಸಿಕೋಬೇಕಾದ್ರೆ ನಂ ಭಾಷೇಲಿ ಆಗಲ್ಲ ಅನ್ನೋ ಪರಿಸ್ಥಿತಿ ಹುಟ್ಟು ಹಾಕಿದರೆ ಅದು ಕನ್ನಡದ ಉಳಿವಿಗೇ ಪೆಟ್ಟು ಗುರು!

ಇವತ್ತಿನ್ ದಿನ ಅಣ್ಣೋರಿದ್ದಿದ್ರೆ ಡಬ್ಬಿಂಗ್ ಬೇಡ ಅನ್ನೋರ್ಗೆ "ಲೋ ಪೆದ್ರಾ",
ಮುತ್ತಿನಂಥ ಮಾತೊಂದು ಗೊತ್ತೇನಮ್ಮ?
ನಿನಗೆ ಗೊತ್ತೇನಮ್ಮ?
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು
ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಅಂತ ಹೇಳಿ "ಮಾಡ್ರಪ್ಪ, ಡಬ್ಬಿಂಗ್ ಮಾಡಿ ತಪ್ಪೇನಿಲ್ಲ, ಇದ್ರಿಂದ್ಲೇ ಕನ್ನಡಕ್ಕೆ ಒಳ್ಳೇದು" ಅಂದಿರೋರು ಗುರು! ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ. ತಾಳ ಬದಲಾಯ್ತು.

ಬಿಸಿ ಸುದ್ದಿ: ಹುಬ್ಬಳ್ಳಿಯಲ್ಲಿ ಕೆಲಸ ಖಾಲಿ ಇದೆ. ಆದರೆ ಕನ್ನಡಿಗರು ದೂರ ಇರಿ!

ರೈಲ್ವೆ ಇಲಖೆಯೋರು ಕನ್ನಡಿಗರ್ನ ಕಡೆಗಣಿಸ್ತಾ ಇರೋದನ್ನ ಬನವಾಸಿ ಬಳಗ ಇದೇ ಬ್ಲಾಗಿನಲ್ಲಿ ಸಾಕಷ್ಟು ತೋರಿಸಿಕೊಟ್ಟಿದೆ. ಆದ್ರೆ ಇದು ಮಾತ್ರ ಅದ್ನೆಲ್ಲ ಮೀರ್ಸತ್ತೆ ಗುರು:

ಹುಬ್ಬಳ್ಳಿಯಲ್ಲಿ ರೈಲ್ವೇ ಇಲಾಖೆಯೋರು ಗ್ರೂಪ್-ಡಿ ಕೆಲಸಗಳಿಗೆ ಅರ್ಜಿಗಳನ್ನ ಕರೆದಿರೋದು ಹೀಗೆ:
Candidate should carefully read the instructions in this Employment Notice before filling up the application form. Application (including Personal Data Sheet) should be made on a good quality white paper of A4 size (210mm x 297mm) using ONE SIDE ONLY. The candidate should use the FORMAT published in the Employment Notice. The candidates have to fill up required information with Black Ink Pen/Black Ball Point pen in his/her own handwriting. The application should be written only in English or Hindi and not in any other language. The application has to be duly dated and signed by the candidate. Application filled in any language other than Hindi/English, and by any person other than the applicant, and having any change in the format will be rejected summarily.

ಇವರು ಯಾವ ವಯಸ್ಸಿನ ಜನರನ್ನ ಕರೆದಿರ್ತಾರೋ ಆ ಕನ್ನಡಿಗರಿಗೆ ಇಂಗ್ಲೀಷಾಗಲಿ ಹಿಂದಿಯಾಗಲಿ ಬರೋದೇ ಇಲ್ಲ. ಒಟ್ನಲ್ಲಿ ಕರ್ದಂಗ್ ಮಾಡಿ ಮೊದಲ್ನೇ ಹೆಜ್ಜೆಯಿಂದಾನೇ ಕನ್ನಡಿಗರನ್ನ ದೂರ ಇಡೋ ಹುನ್ನಾರವಲ್ದೆ ಇದು ಇನ್ನೇನು ಗುರು?

ಕನ್ನಡಿಗರಿಗೆ ಕಳೆದ ತಿಂಗಳಲ್ಲೇ ರೈಲ್ವೆ ಇಲಾಖೆಯೋರು ಮಾಡಿರೋ ಮೋಸಗಳಿಗೆ ಓದಿ:
ಹಳಿ ತಪ್ಪಿದ ರೈಲು: ಬೆಂಗಳೂರಲ್ಲಿ ಟಿಕೆಟ್ ಕಾದಿರಿಸೋ ಅರ್ಜಿ ತಮಿಳಲ್ಲಿ!, ಭವ್ಯಕರ್ನಾಟಕದ ಕನಸಿಗೆ ಹುಬ್ಬಳ್ಳಿಯಲ್ಲಿ ತಮಿಳ್ ಹುಳಿ?

ಕರಾರಸಾಸಂ: ಬಸ್ಸಿಗ್ಯಾಕೆ ಹಿಂದಿ ಹೆಸರು?

ಮೊನ್ನ್-ಮೊನ್ನೆ ಕರ್ನಾಟಕದಲ್ಲಿ ಓಡಾಡೋ ಬಸ್ಗಳಲ್ಲಿ ಕಡ್ಡಾಯವಾಗಿ ಮನರಂಜನೆ ಕನ್ನಡದಲ್ಲೇ ಇರ್ಬೇಕು ಅಂತ ಹೇಳಿ ಕನ್ನಡಿಗರಿಗೆ ಖುಷಿ ತಂದಿದ್ದ ಕ.ರಾ.ರ.ಸಾ.ಸಂ. ಬಾಲ ಮತ್ತೆ ಡೊಂಕಾಗಿರೋಹಂಗ್ ಇದ್ಯಲ್ಲ ಗುರು? ಹೊಸಾ ಬಸ್ಸಿಗೆ ಎಷ್ಟು ಚೆನ್ನಾಗಿ "ತಂಗಾಳಿ" ಅಂತ ಹೆಸ್ರು ಇಡ್ಬೋದಿತ್ತು...ಅದು ಬಿಟ್ಟು "ಶೀತಲ್" ಅಂತ ಹಿಂದೀ ಹೆಸ್ರು ಯಾಕ್ ಇಡಬೇಕಾಗಿತ್ತು?

ಇದೇನಿದು ಹೆಸ್ರುಗೆಲ್ಲ ಇಷ್ಟು ತಲೆ ಕೆಡುಸ್ಕೋತೀರ ಅಂತೀರಾ? ಇನ್ನೊಂದ್ಸರಿ ಯೋಚ್ನೆ ಮಾಡಿ: ಇಲ್ಲಿ ತಂಗಾಳಿ ಅಂತ ಹೆಸರಿಡೋ ಬದ್ಲು ಶೀತಲ್ ಅಂತ ಇಟ್ಟಿರೋದರ ಹಿಂದೆ ಹೆಸರಿಟ್ಟೋನು ಮಾಡಿರೋ ತಪ್ಪುಗಳು ನಮ್ಮ ಉಳಿವಿಗೇ ಮಚ್ಚಿನೇಟು ಹಾಕೋಂಥವು. ಯಾವ ತಪ್ಪುಗಳು ಅವು? ಸರಿಯೇನು? ಅಂದರೆ...
  1. ತಪ್ಪು: ಹೆಸ್ರಿಟ್ಟ್ರೆ ಅದು ಹಿಂದೀನಲ್ಲಿದ್ರೇ ಒಳ್ಳೇದು, ಯಾಕೇಂದ್ರೆ ಹಿಂದಿ "ರಾಷ್ಟ್ರಭಾಷೆ". ಸರಿ: ಹಿಂದಿ ರಾಷ್ಟ್ರಭಾಷೆ ಅನ್ನೋದು ಸುಳ್ಳು.
  2. ತಪ್ಪು: ಈ ಬಸ್ಸಲ್ಲಿ ಜಾಸ್ತಿ ಕನ್ನಡಿಗರು ಓಡಾಡಲ್ಲ. ಸರಿ: ಕರ್ನಾಟಕದೊಳಗೆ ಓಡಾಡೋ ಬಸ್ಸುಗಳಲ್ಲಿ ಕನ್ನಡಿಗರೇ ಹೆಚ್ಚು.
  3. ತಪ್ಪು: "ಶೀತಲ್" ಅಂತ ಹೆಸ್ರಿಟ್ರೆ ಅದು ಕನ್ನಡಾನೇ. ಸರಿ: "ಶೀತಲ್" ಅನ್ನೋ ಪದ ಅರ್ಥವಾಗೋ ಕನ್ನಡಿಗರ್ನ ಬೂದುಗಾಜು ಇಟ್ಕೊಂಡು ಹುಡುಕಿದ್ರೂ ಸಿಗಲ್ಲ! ಓದ್ತಿದೀರಲ್ಲ, ನಿಮಗೆ ಗೊತ್ತಾ ಶೀತಲ್ ಅಂದ್ರೆ? ಬೇಗ್ ಹೇಳಿ!
  4. ತಪ್ಪು: "ತಂಗಾಳಿ" ಅಂತ ಹೆಸ್ರಿಟ್ರೆ ಬೇರೆ ಭಾಷೆಯೋರಿಗೆ ಅರ್ಥವಾಗಲ್ಲ. ಸರಿ: ಕನ್ನಡವನ್ನ ಬೇರೆ ಭಾಷೆಯೋರ ಮುಂದೆ ಇಡಕ್ಕೇ ಇಷ್ಟು ಹಿಂದೇಟು ಹಾಕಿದರೆ ಇನ್ನೆಲ್ಲಿಂದ ಅರ್ಥವಾದೀತು? ಇಡಬೇಕು, ಅವರಿಗೂ ಕನ್ನಡದ ಸವಿ ಸವಿಯೋ ಅವಕಾಶ ಕೊಡಬೇಕು.
ಹಿಂದೀಲಾದ್ರೂ ಇಟ್ರಲ್ಲ, ಇಂಗ್ಲೀಷಲ್ಲಿ ಇಡಲಿಲ್ಲವಲ್ಲ ಅಂತ ಖುಷಿ ಪಡೋ ಜನ್ರೂ ಇರ್ತಾರೆ. ಆದರೆ ಪ್ರಶ್ನೆ ಕರ್ನಾಟಕಕ್ಕೆ ಅತಿ ಹತ್ತಿರವಾದ ಯಾವ ಭಾಷೇಲಿ ಹೆಸ್ರು ಇಡಬೇಕು ಅನ್ನೋದಲ್ಲ. ಪ್ರಶ್ನೆ: "ಕನ್ನಡದಲ್ಲೇ ಯಾಕ್ ಇಡಬಾರದು?" ಅನ್ನೋದು. ಕನ್ನಡದಲ್ಲೇ ಯಾಕ್ ಇಡಬಾರದು ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲ. ನಿಮ್ಮ ಬಗ್ಗೆ, ನಿಮ್ಮ ಭಾಷೆ ಬಗ್ಗೆ, ನಿಮ್ಮ ನಾಡಿನ ಬಗ್ಗೆ ನೀವೇ ಎಲ್ಲಾ ರೀತಿಯ ಕೀಳರಿಮೆ ಕಿತ್ತು ಎಸೆದಾಗ.

ಎಸೀಬೇಕು, ಕನ್ನಡದ ಬಗ್ಗೆ ಕೀಳರಿಮೆ ಕಿತ್ತೆಸೀಬೇಕು ಗುರು!

ಕನ್ನಡಿಗರೇ ಮೈಕ್ರೋಸಾಫ್ಟ್ ಕಟ್ಟಕ್ಕೆ ಏನೇನು ಬೇಕು?

ಜುಲೈ 29ರ ಹಿಂದೂನಲ್ಲಿ ಇ.ಸಿ. ಥಾಮಸ್ ಅನ್ನೋರು ಭಾರತದಲ್ಲಿ ಯಾವುದೇ ನಿಜವಾದ ಸಂಶೋಧನೆಗಳು ನಡೆಯುತ್ತಿಲ್ಲ, ಹೊಸ ತಂತ್ರಜ್ಞಾನದ ಬೆಳವಣಿಗೆ ಆಗ್ತಿಲ್ಲ, ಹೊಸ-ಹೊಸ ವಸ್ತುಗಳು ತಯಾರಾಗ್ತಿಲ್ಲ ಅಂತ ಅಳಲು ತೋಡ್ಕೊಂಡಿದಾರೆ ನೋಡಿ:

India has no products which have revolutionised the world scene...

Nor do we have innovative companies such as Google, Apple or Microsoft. Our IT giants are really glorified sub-contractors to the elite corporations of the world. Our great manufacturing enterprises are just makers of products engineered by others.


ಥಾಮಸ್ ಹೇಳೋದು ನಿಜ ಅಂತ ನಮಗೆ ಗೊತ್ತೇ ಇದೆ. ಎಲ್ಲಿವೆ ಪ್ರಪಂಚವನ್ನೇ ಅಲ್ಲಾಡಿಸೋ ಭಾರತೀಯ ಕಂಪನಿಗಳು? ಏನಿದ್ರೂ ಅದು-ಇದು ಚಿಕ್ಕ-ಪುಟ್ಟ ಕೆಲಸಗಳ್ನ ಗುತ್ತಿಗೆ ತೊಗೊಂಡು ಜೀವನ ಮಾಡೋದ್ರಲ್ಲೇ ಇದೀವಲ್ಲ ಗುರು?

ಕನ್ನಡಿಗನಿಗೆ ಕರ್ನಾಟಕವೇ ಭಾರತ

ಭಾರತದ ಬಗ್ಗೆ ಥಾಮಸ್ ಒಡ್ಡಿರೋಂಥಾ ಪ್ರಶ್ನೆಗಳ್ಗೆ ನಿಜವಾಗಲೂ ಉತ್ತರ ಕೊಡಬೇಕು ಅಂದ್ರೆ ಭಾರತದಲ್ಲಿರೋ ಭಾಷಾವಾರು ರಾಜ್ಯಗಳ್ನ ಮನಸ್ನಲ್ಲಿ ಇಟ್ಟುಕೊಳ್ದೇ ಇದ್ರೆ ಆಗಲ್ಲ. ಭಾರತ ಅಂದ್ರೆ ಅರ್ಥವಾದರೂ ಏನು? ಭಾಷಾವಾರು ರಾಜ್ಯಗಳ ಒಕ್ಕೂಟ. ಭಾರತದಲ್ಲಿ ಒಳ್ಳೇ ತಂತ್ರಜ್ಞಾನ ಹುಟ್ಬೇಕು ಅಂದ್ರೂ ಒಂದೇ ಕರ್ನಾಟಕದಲ್ಲಿ (ಹಾಗೇ ಪ್ರತಿಯೊಂದು ಭಾಷಾವಾರು ರಾಜ್ಯದಲ್ಲೂ) ಹುಟ್ಬೇಕು ಅಂದ್ರೂ ಒಂದೇ. ಭಾರತದೋರು ಉದ್ಯಮಶೀಲರಾಗಬೇಕು ಅಂದ್ರೂ ಒಂದೇ ಕನ್ನಡಿಗರು ಉದ್ಯಮಶೀಲರಾಗಬೇಕು ಅಂದ್ರೂ ಒಂದೇ.

ಕನ್ನಡಿಗರು ಉದ್ಧಾರ ಆಗದೆ ದೂರದ ಪ.ಬಂಗಾಳ ಉದ್ಧಾರವಾದರೆ ನಮಗೇನು? ಪಕ್ಕದ ಮನೇಲಿ ಕೂಸು ಹುಟ್ಟಿತು ಅಂತ ಇಲ್ಲಿ ತೊಟ್ಟಿಲು ತೂಗೋ ಪೆದ್ದರೇನು ನಾವಲ್ಲವಲ್ಲ? ನಮಗೆ ಕರ್ನಾಟಕವೇ ಭಾರತ. ಕರ್ನಾಟಕದ ಹೊರಗಿರೋ ಭಾರತ ಕರ್ನಾಟಕದ 99% ಜನರಿಗೆ ಭಾರತವೇ ಅಲ್ಲ ಅಷ್ಟೇ ಅಲ್ಲ, ಅದು ಅವರ ಮಟ್ಟಿಗೆ ಇಲ್ಲವೇ ಇಲ್ಲ; ಔರು ಆ ಮಣ್ನ ತಮ್ಮ ಜೀವನದಲ್ಲೇ ಮೆಟ್ಟಲ್ಲ. ಆ ಕಾಲ್ಪನಿಕ ಭಾರತವನ್ನ ಮನಸ್ಸಲ್ಲಿಟ್ಕೊಂಡು ಇಲ್ಲಿ ನಾವು ಉತ್ರ ಕೊಡಕ್ಕೆ ಹೊರ್ಟಿರೋಂಥಾ ಗಂಭೀರ ಪ್ರಶ್ನೆಗಳ್ಗೆ ಉತ್ರ ಕೊಡಕ್ಕಾಗಲ್ಲ. ಆದ್ದರಿಂದ ಕರ್ನಾಟಕವನ್ನೇ ಕ್ಷೇತ್ರವಾಗಿಟ್ಟುಕೊಂಡು ಉತ್ರ ಕೊಡೋಣ.

ಇದೇ ಭಾರತದ ಬೇರೆ ರಾಜ್ಯಗಳ್ಗೂ ಅನ್ವಯಿಸತ್ತೆ ಅನ್ನೋದು ನಮ್ಮ ಉತ್ತರದ ವಿಶೀಷ. ಈ ಮೂಲಕವೇ ಭಾರತದ ಉದ್ಧಾರ ಸಾಧ್ಯ. ಇರೋ ವಿವಿಧತೇನ ಮರೆತರೆ ಚೊಂಬು!

ಎರಡು ಉತ್ತರಗಳು

ಕರ್ನಾಟಕದಲ್ಲಿ ಹೊಸಹೊಸ ತಂತ್ರಜ್ಞಾನ ಹುಟ್ಟಬೇಕು, ಅದ್ಭುತವಾದ ಕಂಪನಿಗಳು ಬರ್ಬೇಕು ಅಂದ್ರೆ ಏನೇನ್ ಇರ್ಬೇಕು ಅಂತ ಯೋಚ್ನೆ ಮಾಡಿದ್ರೆ ಮುಖ್ಯವಾಗಿ ಎರಡು ಅಂತ ಉತ್ರ ಸಿಗತ್ತೆ ಗುರು:
  1. ನಮ್ಮ ಬೇಕು-ಬೇಡಗಳ ಅರಿವು ಮತ್ತು ಉದ್ಯಮಶೀಲತೆ
  2. ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣ
ಈ ಎರಡನ್ನೂ ಸ್ವಲ್ಪ ವಿವರವಾಗಿ ನೋಡ್ಮ, ಆಮೇಲೆ ಇವೆರ್ಡನ್ನ ಆಗುಮಾಡಿಸಕ್ಕೆ ನಾವಿಡಬೇಕಾದ ಮೊದಲ ಹೆಜ್ಜೆ ಏನು ಅಂತ ನೋಡ್ಮ.

ನಮ್ಮ ಬೇಕು-ಬೇಡಗಳ ಅರಿವು ಮತ್ತು ಉದ್ಯಮಶೀಲತೆ


"ಇಂಥದ್ದು ಬೇಕು" ಅಂತ ಯಾರಿಗೆ ಮೊದ್ಲು ಅನ್ನಿಸತ್ತೋ ಔನಿಗೇ ಅದನ್ನ ಮಾಡಕ್ಕೆ ತುಡಿತ ಬರೋದು, ಅವನೇ ಮಾಡೋದು. ಇದನ್ನ ಸಕ್ಕತ್ ವರ್ಷದಿಂದ ನಾವು ಮಾಡದೇ ಮಾಡದೇ ತೊಮ್ಮೆಗಳಾಗಿರೋದ್ರಿಂದ ನಮಗೆ "ಇಂಥದ್ದು ಬೇಕು" ಅಂತ್ಲೂ ಹೊರಗಿನೋರೇ ಅರ್ಥಮಾಡ್ಕೊಂಬುಟ್ಟಿದಾರೆ!
  • ಫಿನ್‍ಲ್ಯಾಂಡ್ ಜನಕ್ಕೆ (ನೋಕಿಯಾನೋರ್ಗೆ) ಕನ್ನಡಿಗರಿಗೆ ಮೊಬೈಲ್-ಫೋನು ಬೇಕು ಅಂತ ನಮಗಿಂತ ಮುಂಚೆ ಗೊತ್ತಾಗಿತ್ತು! ಅದಕ್ಕೆ ಔರೇ ಮೊದ್ಲು ಅದ್ನ ತಯಾರ್ಸಿದ್ದು, ನಾವು "ಅವರ ಅಂಗಡೀಲಿ ಪಟ್ನ ಕಟ್ಟಕ್" ಕೂತಿರೋದು ಈಗ!
  • ಗಣಕಯಂತ್ರ ಅನ್ನೋದು ಬೇಕು ಅಂತ ಮೊದ್ಲು ಅನ್ನಿಸಿದ್ದು ಇಂಗ್ಲೀಷ್ ಮಾತಾಡೊರಿಗೆ, ಅದಕ್ಕೇ ಇವತ್ತೂ ಕನ್ನಡದ ಕೀಲಿಮಣಿ ಇಲ್ಲದೆ ಇಂಗ್ಲೀಷ್ ಕೀಲಿಮಣೆ ಮೇಲೇ ಇಲ್ಲಸಲ್ಲದ ದೊಮ್ಮರಾಟ ಮಾಡ್ಕೊಂಡು ಕನ್ನಡ ಬರೀತಿರೋದು.
  • ಕರ್ನಾಟಕದ ಜನಕ್ಕೆ ಕನ್ನಡದ ಹಾಡುಗಳು ಬೇಕು ಅಂತ ನಮಗಲ್ದೆ ಇತ್ತೀಚೆಗೆ ಹೊರರಾಜ್ಯದೋರಿಗೆ ಅನ್ಸಿರೋದು ನೋಡಿದ್ರೆ ನಗು ಬರತ್ತೆ ಗುರು! ಅದಕ್ಕೇ ಔರು ಮುಂದುಬಂದು ಕನ್ನಡ ಎಫ್.ಎಂ. ಚಾನೆಲ್ಗಳ್ನ ತೆಗೀತಿರೋದು!
  • ಅದೆಲ್ಲ ಹಾಳಾಗೋಗ್ಲಿ ಗುರು, ದಿನಸಿ ಅಂಗಡಿ, ತರ್ಕಾರಿ ಅಂಗಡೀನೂ ಇತ್ತೀಚೆಗೆ ಬೇರೆಯೋರು ಬಂದು ಇಡ್ತಿದಾರಲ್ಲ, ನಾವು ಅದ್ರಲ್ಲೂ ಪಟ್ನ ಕಟ್ಕೊಂಡ್ ಇರ್ತೀವಿ ಅಂತಿದೀವಲ್ಲ, ಈ ನಮ್ಮ ಕಾಲ್ಮೇಲೆ ನಾವೇ ಚಪ್ಪಡಿ ಎಳ್ಕೊಳೋ ಸೋಮಾರಿತನ ಮೊದ್ಲು ಹೋಗ್ಬೇಕು ಗುರು!
ಈಗ್ಲೂ ಕಾಲ ಮಿಂಚಿಲ್ಲ. ನಿಜವಾದ ಉದ್ಯಮಶೀಲ ಬುದ್ಧಿ ಇರೋನಿಗೆ ಇವತ್ತೂ ಸುತ್ತ ಮುತ್ತ ನೋಡಿದ್ರೆ ಐಡಿಯಾಗಳ್ಗೇನು ಕಮ್ಮಿಯಿಲ್ಲ. ಉದ್ಯಮಶೀಲತೆ ಬೆಳಸಿಕೊಳ್ಳೋದು ಬಹಳ ಮುಖ್ಯ ಗುರು! ಕಂಪನಿ ಗಿಂಪನಿ ತೆಗ್ಯೋದೆಲ್ಲ ನಂ ಕೆಲಸ ಅಲ್ಲ, ನಾವೇನಿದ್ರೂ ಔರ್ ಕೈಕೆಳ್ಗೆ ಕೆಲ್ಸಾ ಮಾಡ್ಕೊಂಡಿರೋದಕ್ಕೇ ಲಾಯಕ್ಕು ಅಂದ್ಕೊಳೋದ್ನ ನಾವು ಮೊದ್ಲು ಬಿಡಬೇಕು.

ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣ


ಅಲ್ಲಿ-ಇಲ್ಲಿ, ಔರ್-ಇವರಿಗೆ ಚಿಲ್ಲರೆ ಕೆಲಸ ಮಾಡ್ಕೊಂಡು ಜೀವನ ಕಳೀತೀನಿ ಅಂದ್ರೆ ಯಾವ ಹೆಚ್ಚಿನ ಜ್ಞಾನವೂ ಬೇಕಾಗಿಲ್ಲ. ಆದ್ರೆ ಪ್ರಪಂಚದಲ್ಲಿ ಎಲ್ರಿಂದ್ಲೂ ಮೆಚ್ಚುಗೆ ಪಡೆಯೋಂಥಾ ವಸ್ತುಗಳ್ನ ತಯಾರಿಸ್ತೀನಿ, ಅತ್ಯುತ್ತಮ ತಂತ್ರಜ್ಞಾನ ಹುಟ್ಟಿಸ್ತೀನಿ ಅನ್ನೋ ನಮ್ಮ ಗುರಿ ಸಾಧಿಸಕ್ಕೆ ನಿಜವಾದ ತಿಳುವಳಿಕೆ ಬೇಕೇ ಬೇಕು. ಈ ನಿಜವಾದ ತಿಳುವಳಿಕೆ, ನಿಜವಾದ ಜ್ಞಾನಾನ ನಮ್ಮ ನುಡಿಯಲ್ಲೇ ಕಲಿಯಕ್ಕೆ ಸಾಧ್ಯ. ಇದಕ್ಕೆ ಇಸ್ರೇಲ್, ಜಪಾನ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್...ಮುಂತಾದ ದೇಶಗಳೇ ಉದಾಹರಣೆಗಳು. ಇವರು ಯಾರೂ ತಮ್ಮ ನುಡಿ ಬಿಟ್ಟು ಬೇರೆ ಒಂದ್ರಲ್ಲಿ ಶಿಕ್ಷಣ ಪಡ್ಕೋತೀನಿ ಅನ್ನಲ್ಲ. ನಮ್ಮ ನುಡಿಯಲ್ಲಿ ಕಲಿಯೋದೇ ಸುಲಭ ಅಂತ ಪ್ರಪಂಚದ ವಿಜ್ಞಾನಿಗಳು ಬೊಡ್ಕೋತಾನೇ ಇದಾರೆ, ಆದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಕಟ್ಟೋರ್ ಕಿವೀಗೂ ಬೀಳ್ತಿಲ್ಲ, ಇವತ್ತು ಕಾಸಿಗಾಗಿ ಇಂಗ್ಲೀಷಿಗೆ ಮೊರೆ ಹೋಗ್ತಿರೋರ್ ಕಿವೀಗೂ ಬೀಳ್ತಿಲ್ಲ.

ಕನ್ನಡದಲ್ಲೇ ಒಳ್ಳೇ ಕಲಿಕೆ ಕೊಡೋಂಥಾ ವ್ಯವಸ್ಥೆ ಇವತ್ತು ಇಲ್ಲಾಂತ ನಮಗೂ ಗೊತ್ತಿದೆ. ಆದರೆ ಆ ವ್ಯವಸ್ಥೆ ಕಟ್ಟದೆ ಬೇರೆ ದಾರಿಯೇ ಇಲ್ಲ. ಕನ್ನಡದಲ್ಲೇ ಉನ್ನತ ಶಿಕ್ಷಣವೂ ಸಿಗಬೇಕು, ಕನ್ನಡದಲ್ಲೇ ಇಂಜಿನಿಯರಿಂಗು, ಕನ್ನಡದಲ್ಲೇ ಮೆಡಿಕಲ್ಲುಗಳು ಕಲಿಯೋ ಹಾಗಿರಬೇಕು. ಅದೇ ನಿಜವಾದ ವ್ಯವಸ್ಥೆ, ಆ ವ್ಯವಸ್ಥೆಯಿಂದ್ಲೇ ನಮ್ಮ ಕನಸು ನನಸಾಗಕ್ಕೆ ಸಾಧ್ಯ.

ಇದಕ್ಕೆ ನಾವಿಡಬೇಕಾದ ಮೊದಲ ಹೆಜ್ಜೆಯೇನು?

ಉದ್ಯಮಶೀಲತೆ ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಕಟ್ಟಬೇಕು. ಇವೆಲ್ಲ ಆಗಬೇಕಾದ್ರೆ ನಾವು ಇಡ್ಬೇಕಾದ ಮೊದಲ ಹೆಜ್ಜೆ ಏನು? ಇದಕ್ಕೂ ಉತ್ರಾನ ಥಾಮಸ್ಸೇ ಕೊಟ್ಟಿದಾರೆ:
We should ensure that the best of us do not become available to the highest bidder.

ಇವತ್ತಿನ ದಿನ ಈ ರೀತಿ ಯೋಚ್ನೆ ಮಾಡ್ತಾ ಇರೋ ನಮ್ಮ-ನಿಮ್ಮಂಥವರು ಸಮಾಜದಲ್ಲಿ ಮೇಲ್ದರ್ಜೆಯೋರು ಅಂತ ಅನ್ನಿಸಿಕೊಂಡಿದೀವಿ. ನಮ್ಮ ಮುಂದೆ highest bidder ಗಳಿಗೆ ಕಡಿಮೆ ಏನು ಇಲ್ಲ. ಆದರೆ ಬರೀ ದುಡ್ಡಿಗೆ ಮುಗಿದುಬಿದ್ದು ನಾವು ನಮ್ಮ ಜೀವನವನ್ನ ಹಾಳು ಮಾಡಿಕೊಳ್ಳದೆ ನಾಡು ಕಟ್ಟಕ್ಕೆ ಏನು ಮಾಡಬೇಕು ಅಂತ ಗಂಭೀರವಾಗಿ ಯೋಚ್ನೆ ಮಾಡಬೇಕಾಗಿದೆ, ಹೀಗೆ ಚಿಂತನೆ ಮಾಡೋರೆಲ್ಲ ಒಗ್ಗೂಡಿ ಒಂದೊಂದೇ ಇಟ್ಟಿಗೆ ಇಟ್ಟು ಕನ್ನಡದ ಮನೇನ ಕಟ್ಟಾಬೇಕಿದೆ.

ಕಟ್ಮ ಬರ್ತ್ಯಾ ಗುರು?
Related Posts with Thumbnails