ವಿ.ಐ.ಎಸ್.ಎಲ್ - ಕನ್ನಡಕ್ಕೆ ಕವಡೆ ಕಿಮ್ಮತ್ತೂ ಕೊಡದ 'ಸರ್ ಎಂ.ವಿ ಕೈಗೂಸು'!


ಭದ್ರಾವತಿ ಉಕ್ಕು ಕಾರ್ಖಾನೆ

ಸರ್ ಎಂ.ವಿಯವರು ಕಟ್ಟಿದ ಒಂದು ಮಹತ್ವದ ಕಾರ್ಖಾನೆ ಅಂದಿನ ಮೈಸೂರು ಕಬ್ಬಿಣ ಕಾರ್ಖಾನೆ. ಮುಂದಿನ ದಿನಗಳಲ್ಲಿ ಇದನ್ನು ಭಾರತ ಸರ್ಕಾರಕ್ಕೆ ವಹಿಸಿಕೊಡಲಾಯಿತು. ಮುಂದೆ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಾಗಿ ಬೆಳೆದ ಈ ಸಂಸ್ಥೆಗೆ ಇದೀಗ ಅದರ ಸ್ಥಾಪಕರಾದ ಸರ್ ಎಂ.ವಿಯವರ ಹೆಸರನ್ನು ಇಡಲಾಗಿದೆ. ಪಾಪ! ಇವರು ವಿಶ್ವೇಶ್ವರಯ್ಯ ಅಂತಾ ಇಂಗ್ಲಿಷ್ ಭಾಷೇಲಿ ಬರೆದಿರೋ ಕಾಗುಣಿತವನ್ನೇ ಆಧಾರ ಮಾಡ್ಕೊಂಡು ಅದೇ ಹೆಸರನ್ನು visvesvaraya iron and steel limited ಅಂತ ಹೆಸರಿಟ್ಟಿದ್ದಾರೆ. ಸರಿ, ಸರ್.ಎಂ.ವಿಯೋರು ಕೂಡಾ ಹಾಗೇ ಬರೀತಿದ್ರು ಅಂತಲೇ ಇಟ್ಕೊಳ್ಳೋಣ. ಅದೇ ಹೆಸರನ್ನು ಕನ್ನಡದಲ್ಲಿ ಬರೀಬೇಕಾದ್ರೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅಂತ ಬರೆದಿದ್ದಾರಲ್ಲಾ ಗುರು! ಹೀಗೆ ಕನ್ನಡದಲ್ಲಿ ಯಾಕ್ರಪ್ಪಾ ತಪ್ಪು ತಪ್ಪಾಗಿ ಬರ್ದಿದೀರಾ ಅಂತ ಅಲ್ಲಿ ಕೆಲಸ ಮಾಡೋ ಸಾವಿರಾರು ಕನ್ನಡಿಗ್ರಲ್ಲಿ ಒಬ್ರೂ ಕೇಳಿಲ್ಲ ಅಂದುಕೊಳ್ಳಕ್ ಸಾಧ್ಯಾನೆ ಇಲ್ಲಾ ಗುರು. ಅವ್ರು ಕೇಳುದ್ರೂ ಇದನ್ನು ಬದಲಾಯ್ಸಕ್ಕೂ ದಿಲ್ಲಿ ಧಣಿಗಳ ಅಪ್ಪಣೆ ಬೇಕು ಅಂತ ಅಲ್ಲಿರೋ ಯಾವುದೋ ಕನ್ನಡದವನಲ್ಲದ ಅಧಿಕಾರಿ ನಮ್ಮವರ ಬಾಯಿ ಮುಚ್ಚಿಸಿರ್ತಾರೆ ಅನ್ನೋ ಸಾಧ್ಯತೇನೆ ಹೆಚ್ಚು ಗುರು! ತಮಾಷೆ ಅಂದ್ರೆ ಮೇಲಿನ ಚಿತ್ರದಲ್ಲಿ ಸ್ವಲ್ಪ ಗಮನಿಸಿ ನೋಡಿ, ಇಂಗ್ಲಿಷ್ ಭಾಷೇಲೂ ಸರ್ ಎಂ.ವಿ ಹೆಸರನ್ನು ತಪ್ಪುತಪ್ಪಾಗಿ ಬರ್ದಿರೋದು ಕಾಣುತ್ತೆ! ಕನ್ನಡದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅಂತ ಇರೋದನ್ನು ದೇವನಾಗರಿ ಲಿಪೀಲಿ ಐರನ್ ಅಂಡ್ ಸ್ಟೀಲ್ ಪ್ಲಾಂಟ್ ಅಂತಾ ಬರ್ದಿರೋದ್ರು ಉದ್ದೇಶಾ ಏನು? ಕನ್ನಡದೋರಿಗೆ ಹಿಂದೀ ಲಿಪಿ ಕಲ್ಸದಾ?

ಹೆಸರಷ್ಟೇ ಅಲ್ಲ! ಆಡಳಿತವೂ ಹೀಗೇ ಇರೋದು

ಇದು ಈಗ ಭಾರತ ಸರ್ಕಾರದ ಒಂದು ಉದ್ದಿಮೆಯಾಗಿದೆ. ಅಂದ್ರೆ ಇದರಲ್ಲಿ ಕೆಲಸಗಾರರು ಕನ್ನಡಿಗರೇ ಆಗಿದ್ರೂ ಇದರ ಉನ್ನತ ಅಧಿಕಾರಿಗಳು ಹೊರಗಿನವರೇ. ಹಾಗಾಗಿ ಇಲ್ಲಿ ಬಳಸೋ ಪ್ರತಿ ಹಾಳೆ ಮೇಲೂ ಇಂಗ್ಲಿಷು ಮತ್ತು ಹಿಂದೀಲಿ ಮುದ್ರಣ ಮಾಡಿದ್ದಾರೆ. ಈ ಸಂಸ್ಥೆಯ ಕಡತದ ಒಳಕವಚಗಳನ್ನು ನೋಡಿ.
ಒಂದರಲ್ಲಿ standard draft ಅಂತನ್ನೋದ್ರ ಪಟ್ಟಿ ಇದ್ರೆ ಮತ್ತೊಂದ್ರಲ್ಲಿ commonly used phrases ಅನ್ನೋ ಪಟ್ಟಿ ಇದೆ. ಎರಡ್ರಲ್ಲೂ ಹಿಂದೀ ಕಲಿಸೋ ಪ್ರಯತ್ನವೇ ಕಾಣೋದು! ತ್ರಿಭಾಷಾ ಸೂತ್ರಾ, ಅದೂ ಇದೂ ಮಣ್ಣು ಮಸಿ ಎಲ್ಲಾ ಕೇಂದ್ರ ಸರ್ಕಾರಕ್ಕೆ ಅನ್ವಯ ಆಗೋದಿಲ್ವಾ ಗುರು? ಈ ಸಂಸ್ಥೆಯ ಅಧಿಕಾರಿಗಳು ಸಾಮಾನ್ಯವಾಗಿ ಬಳ್ಸೋ ವಾಕ್ಯಗಳು ಅಂತ ಹಿಂದಿ/ ಇಂಗ್ಲಿಷ್ ಮಾತ್ರಾ ಹಾಕೋದ್ರ ಅರ್ಥ, ಹಿಂದಿಬ ರ್ದೆ ಇರೋರು ಅಧಿಕಾರಿಯಾಗಕ್ಕೆ ನಾಲಾಯಕ್ ಅಂತಾ ಅಲ್ವಾ? ಈ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಏರಬೇಕೂ ಅಂದ್ರೆ ಹಿಂದಿ ಕಲಿತಿರಲೇ ಬೇಕೆಂಬ ರೀತೀಲಿ ನಡ್ಕೊಳ್ತಾ ಇರೋದು ಸರೀನಾ? ಈ ಪಾಟಿ ಹಿಂದೀಲಿ ಕಡತಗಳಿದ್ರೆ ಈ ಸಂಸ್ಥೆಯ ಅಟೆಂಡರ್ ಹುದ್ದೆಗೂ ಹಿಂದಿ ಕಲಿತಿರಬೇಕೆನ್ನೋ ನಿಯಮ ಹುಟ್ಕೊಳಲ್ವಾ ಗುರು? ಈ ಸಂಸ್ಥೇನಾ ಕಟ್ಟಿದೋರು ಕನ್ನಡಿಗರು. ಇಲ್ಲಿ ಉಕ್ಕಾಗಿ ಬದಲಾಗೋ ಅದಿರು ಕನ್ನಡನಾಡಿನದು, ಹಾಗೆ ಬದಲಾಯಿಸೋರೂ ಕನ್ನಡಿಗರು(?). ಇಲ್ಲಿ ಆಡಳಿತ ಮಾತ್ರಾ ಇಂಗ್ಲಿಷ್ ಮತ್ತು ಹಿಂದೀಲಿ. ಇದನ್ ಕಂಡಾಗ ಒಂದು ದಾಸವಾಣಿ ನೆನಪಾಗುತ್ತೆ!

ಅಕ್ಕಾ ನಿನ್ನ ಮಾತ ಕೇಳಿ
ಚಿಕ್ಕದೊಂದು ಗಿಣಿಯ ಸಾಕಿ
ರೆಕ್ಕೆ ಬಂದ ರಾಮ ರಾಮನ
ಬೆಕ್ಕು ಕೊಂಡುಹೋಯಿತಲ್ಲೇ

ಅಂಗೈಯಾಗೆ ಆಡುವ ಗಿಣಿ
ಮುಂಗೈ ಮೇಲೆ ಓಡುವಾ ಗಿಣಿ
ಕಂಗಳೀಗೆ ಕಾಣದಂತೆ
ಮಂಗಾಮಾಯವಾಯಿತಲ್ಲೇ

ಗಿಳಿಯು ಪಂಜರದೊಳಿಲ್ಲ!
ನಮ್ಮಾ ಗಿಳಿಯು ಪಂಜರದೊಳಿಲ್ಲಾ!! (ವಿ ಐ ಎಸ್ ಎಲ್ ಕನ್ನಡನಾಡಲ್ಲಿಲ್ಲಾ!! ಅಂತಾ ಹಾಡ್ಕೊಳ್ಳಿ)


ಜೈ ಪುರಂದರ ವಿಠಲ!

ಕೊನೆಹನಿ : ಹೊರನಾಡಿನಿಂದ ಇಲ್ಲಿಗೆ ವಲಸೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸಕ್ಕೆ ’ನಿಮಗೆ ದಿನನಿತ್ಯಾ ಇಲ್ಲಿನ ಕೆಲಸಗಾರರ ಜೊತೆ, ಈ ಊರಿನ ಜನರ ಜೊತೆ ವ್ಯವಹರಿಸಲು ಕನ್ನಡ ಬರಬೇಕು, ಅದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಬಳ್ಸೋ ಪದಗಳ ಪಟ್ಟೀನಾ ಕೊಡ್ತಿದೀವಿ ತೊಗೊಳ್ಳಿ’ ಅಂತಾ ಆಡಳಿತ ಮಂಡಳಿಯೋರು ಯಾಕೆ ಕೊಟ್ಟಿಲ್ಲಾ? ಅಂತಾ ಕೇಳೋರು ಯಾರು ಗುರು?

ಹೆರಿಟೆಜ್ ಟೂರಿಸಂ ನಾಡಿನ ಹಿರಿಮೆ ಸಾರಲಿ

ಕರ್ನಾಟಕದ ಭವ್ಯ ಪರಂಪರೆ, ಇತಿಹಾಸವನ್ನು ಮುಖ್ಯವಾಗಿಟ್ಟುಕೊಂಡು "ಹೆರಿಟೆಜ್ ಟೂರಿಸಂ" ಅನ್ನುವ ಹೆಸರಿನಲ್ಲಿ ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರನ್ನು ಕರ್ನಾಟಕದತ್ತ ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ ಗುರು. ಇಂತಹದೊಂದು ಹೊಸ ಬಗೆಯ ಪ್ರಚಾರ ತಂತ್ರ ಬಳಸಿ, ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ, ಆ ಮೂಲಕ ಕರ್ನಾಟಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟಿರುವ ಇಲಾಖೆಗೆ ನಮ್ಮ ಅಭಿನಂದನೆ ಹೇಳ್ತಾನೇ ಈ ಯೋಜನೆ ನಿಜಕ್ಕೂ ಯಶಸ್ವಿ ಆಗಲು ಇನ್ನೂ ಏನೇನ್ ಆಗಬೇಕು ಸ್ವಲ್ಪ ನೋಡೋಣ ಗುರು.


ಹೆರಿಟೆಜ್ ಟೂರಿಸಂ ಅಂದ್ರೇನು?
ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಇತಿಹಾಸವಿರುತ್ತೆ. ಆ ಇತಿಹಾಸ ಅಲ್ಲಿನ ಜನರ ಜೀವನ, ಅವರ ಆಚಾರ ವಿಚಾರ, ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ, ಆಹಾರ ಒಟ್ಟಾರೆ ಆ ಜನರು ನಡೆದು ಬಂದ ದಾರಿಗೊಂದು ಕನ್ನಡಿಯಾಗಿರುತ್ತೆ. ಇಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಸಿಕೊಡುವ, ಅಲ್ಲಿನ ಜನ ಜೀವನದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಪ್ರಯತ್ನವೇ ಹೆರಿಟೆಜ್ ಟೂರಿಸಂ. ಅದ್ಭುತ ಇತಿಹಾಸವಿರುವ ಜಗತ್ತಿನ ಎಲ್ಲ ಮುಖ್ಯ ದೇಶಗಳು ಹೆರಿಟೆಜ್ ಟೂರಿಸಂಗೆ ಹೆಚ್ಚಚ್ಚು ಉತ್ತೇಜನ ನೀಡುತ್ತಿವೆ. ಕರ್ನಾಟಕಕ್ಕಂತೂ ಜಗತ್ತಿನ ಕೆಲವೇ ಕೆಲವು ಪ್ರದೇಶಗಳಿಗಿರುವಂತ ಭವ್ಯ ಇತಿಹಾಸದ ಹಿನ್ನೆಲೆ ಇದ್ದು, ಕನ್ನಡ ನಾಡಿನ ಇತಿಹಾಸ, ಪರಂಪರೆಯನ್ನು ಜನಪ್ರಿಯಗೊಳಿಸುವ ಇಂತಹ ಯೋಜನೆಗಳು ನಿಜಕ್ಕೂ ಬೇಕು ಗುರು.

ಇನ್ನೂ ಏನೇನ್ ಆಗಬೇಕು?
ಈ ಯೋಜನೆ ಯುನೆಸ್ಕೊ ಪರಂಪರೆ ಪಟ್ಟಿಯಲ್ಲಿರುವ ಪಟ್ಟದಕಲ್ಲು, ಹಂಪಿ ಗಳಿಗೆ ಮಾತ್ರ ಸೀಮಿತವಾಗದೇ ಕದಂಬರಾಳಿದ ಬನವಾಸಿ, ರಾಷ್ಟ್ರಕೂಟರಾಳಿದ ಮಳಖೇಡ, ಹೊಯ್ಸಳರಾಳಿದ ಬೇಲೂರು, ಹಳೆಬೀಡು ಮುಂತಾದ ಕನ್ನಡ ನಾಡಿನ ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳನ್ನು ಈ ಪಟ್ಟಿಗೆ ಸೇರಿಸಿಕೊಳ್ಳಬೇಕು. ಜಗತ್ತಿನ ಹಲವೆಡೆ ಇರುವಂತೆ ಶಬ್ದ-ಬೆಳಕಿನ ಪ್ರಾತ್ಯಕ್ಷಿತೆ (sound and light show) ಮೂಲಕ ಕರ್ನಾಟಕದ ಇತಿಹಾಸವನ್ನು ಮರು ಸೃಷ್ಟಿಸಿ ಪ್ರವಾಸಿಗರ ಮುಂದಿಡುವ ಯೋಜನೆಗಳು ಬರಬೇಕು. ಅಷ್ಟೇ ಅಲ್ಲದೇ ಪ್ರವಾಸಿಗರಿಗೆ ಈ ಬಗ್ಗೆ ಸರಿಯಾದ ಮಾಹಿತಿ, ಸಹಾಯ ನೀಡಲು, ತರಬೇತಿ ಪಡೆದ ವೃತ್ತಿಪರ ಪ್ರವಾಸಿ ಗೈಡ್ ಗಳ ನೇಮಕವಾಗಬೇಕು. ಇಷ್ಟೆಲ್ಲ ಆದ್ರೆ ಜಗತ್ತಿನ ಪ್ರವಾಸೋದ್ಯಮದ ನಕ್ಷೆಯಲ್ಲಿ ಕರ್ನಾಟಕದ ಸ್ಥಾನ ಇನ್ನೂ ಎತ್ತರಕ್ಕೆ ಏರೋದ್ರಲ್ಲಿ ಅನುಮಾನಾನೇ ಇಲ್ಲ, ಏನಂತೀಯಾ ಗುರು?

ಕರ್ನಾಟಕದಲ್ಲಿ ಹಿಂದೆಂದೂ ನಿಜವಾದ ಪ್ರಾದೇಶಿಕ ಪಕ್ಷಗಳೇ ಇರಲಿಲ್ಲ!

ಪದ್ಮರಾಜ ದಂಡಾವತೆ ಅನ್ನೋ ಒಬ್ಬ ಬರಹಗಾರರು, ನಾಲ್ಕನೇ ಆಯಾಮ ಅನ್ನೋ ಅಂಕಣದಲ್ಲಿ, ಇವತ್ತಿನ (26.04.2009) ಪ್ರಜಾವಾಣಿಯ ಏಳನೇ ಪುಟದಲ್ಲಿ ಪ್ರಾದೇಶಿಕ ಪಕ್ಷ ಬೇಕು, ಆದ್ರೆ ಕಟ್ಟೋರು ಯಾರು?" ಅನ್ನೋ ವಿಷಯವಾಗಿ ಬರೆದಿದ್ದಾರೆ. ಶ್ರೀಯುತರು ತಮ್ಮ ಬರಹದಲ್ಲಿ ಕರ್ನಾಟಕದಲ್ಲಿ ಈ ಹಿಂದೆ ಇದ್ದ(?) ಪ್ರಾದೇಶಿಕ ಪಕ್ಷಗಳ ಬಗ್ಗೆ ಮತ್ತು ಅವುಗಳ ವೈಫಲ್ಯಗಳ ಬಗ್ಗೆ ತಮ್ಮ ಅನಿಸಿಕೇನಾ ಬರ್ದಿದಾರೆ! ಇವ್ರು ಬರ್ದಿರೋ ಹಾಗೇ ಇವತ್ತಿನ ದಿವಸ ಕೇಂದ್ರದಲ್ಲಿ ಯಾವುದೇ ಒಂದು ಪಕ್ಷ ಅಧಿಕಾರ ಹಿಡ್ಯಕ್ ಆಗೋ ಪರಿಸ್ಥಿತಿ ಇಲ್ಲ. ಹಾಗಾಗಿ ಇವತ್ತು ಪ್ರಾದೇಶಿಕ ಪಕ್ಷಗಳಿಗೆ ಹಿಂದಿಗಿಂತಲೂ ಹೆಚ್ಚಿನ ಮಹತ್ವ ಸಿಕ್ಕಿದೆ.

ಪ್ರಾದೇಶಿಕ ಪಕ್ಷಗಳೆಂದರೇನು?

ಇವರು ಕೊಡಮಾಡಿದ ಪಟ್ಟೀಲಿ 1956ರ ಕರ್ನಾಟಕ ವಿಕಾಸ ವೇದಿಕೆಯಿಂದ ಹಿಡ್ದು ಇವತ್ತಿನ ರೈತಸಂಘದತನಕ ಕರ್ನಾಟಕದ ಭೌಗೋಳಿಕ ವ್ಯಾಪ್ತಿಗೆ ಸೀಮಿತವಾಗಿದ್ದ ಪಕ್ಷಗಳನ್ನೆಲ್ಲಾ ಪ್ರಾದೇಶಿಕ ಎಂದೇ ಕರೆಯಲಾಗಿದೆ. ಒಟ್ನಲ್ಲಿ ಇದನ್ನು ಓದಿದಾಗ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿತವ್ಯವೇ ಇಲ್ಲ ಅನ್ನುವಂತೆ ತೋರುತ್ತದೆ. ಇದನ್ನೇ ರಾಷ್ಟ್ರೀಯ ಪಕ್ಷಗಳು ಪದೇಪದೇ ಹೇಳಿಕೊಳ್ಳುತ್ತಾ ಬಂದಿವೆ. ಅಸಲಿಗೆ ಪ್ರಾದೇಶಿಕ ಪಕ್ಷವೊಂದರ ಸ್ವರೂಪವೇನು? ಕರ್ನಾಟಕಕ್ಕೆ ಸೀಮಿತವಾದ ಪಕ್ಷಗಳನ್ನೆಲ್ಲಾ ಪ್ರಾದೇಶಿಕ ಪಕ್ಷ ಅನ್ನೋದು ಸರೀನಾ? ಇವುಗಳಲ್ಲಿ ಯಾವ ಪಕ್ಷ ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗುಳ್ಳ ಸಿದ್ಧಾಂತಾನ ಹೊಂದಿತ್ತು? ಇವುಗಳಲ್ಲಿ ಯಾವ ಪಕ್ಷಕ್ಕೆ ನಾಡಿನ ಎಲ್ಲ ವರ್ಗಗಳ ಜನರನ್ನು ಪ್ರತಿನಿಧಿಸೋ, ಅವರ ಏಳಿಗೆಗೆ ಶ್ರಮಿಸೋ ಯೋಜನೆ ಇತ್ತು? ಯಾವ ಪಕ್ಷಕ್ಕೆ ತಳಮಟ್ಟದ ಸಂಘಟನೆಯಿತ್ತು? ಇವೆಲ್ಲಾ ಇಲ್ಲದೇ ಇದ್ದ ಪಕ್ಷದಲ್ಲಿ ಅದು ಪ್ರಾದೇಶಿಕ ಪಕ್ಷ ಹೇಗಾದೀತು? ಇಂಥಾ ಪಕ್ಷ ಇಷ್ಟು ದಿನ ಕನ್ನಡನಾಡಲ್ಲಿ ಇರಲಿಲ್ಲ ಅನ್ನೋದು ಎಷ್ಟು ಸತ್ಯವೋ ಬರಹದಲ್ಲಿ ಪಟ್ಟಿ ಮಾಡಲಾದ ಯಾವೊಂದು ಪಕ್ಷವೂ ಮಾದರಿ ಪ್ರಾದೇಶಿಕ ಪಕ್ಷ ಆಗಿರಲಿಲ್ಲ ಅನ್ನೋದೂ ಅಷ್ಟೇ ಸತ್ಯಾ ಗುರು! ನಿಜವಾದ ಪ್ರಾದೇಶಿಕ ಪಕ್ಷದ ಗುರಿಯೇ ತನ್ನ ನಾಡಿನ ಜನಗಳ ಏಳಿಗೆ, ತನ್ನ ನಾಡಿಗೆ ಕೇಂದ್ರಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ದಕ್ಕಿಸಿಕೊಂಡು ತನ್ನ ನಾಡಿಗೆ ಅನ್ಯಾಯವಾಗದಂತೆ ನೋಡಿಕೋಳ್ಳೋದೇ ಅಲ್ವಾ?

ಭಾರತದ ಬಗ್ಗೆ ಪ್ರಾದೇಶಿಕ ಪಕ್ಷಕ್ಕೆ ಚಿಂತನೆಯಿರುವುದಿಲ್ಲವೇ?

ಕರ್ನಾಟಕದಲ್ಲಿನ ಪ್ರಾದೇಶಿಕ ಪಕ್ಷ ಅದು ಬರೀ ಕನ್ನಡ ನಾಡಿನ ಬಗ್ಗೆ ಮಾತ್ರಾ ಕಾಳಜಿ ಹೊಂದಿರುತ್ತೆ, ಭಾರತದ ವಿಷಯವಾಗಿ ಅದಕ್ಕೆ ಚಿಂತನೆಯಿರುವುದಿಲ್ಲ, ದೇಶ ಮುನ್ನಡೆಸೋ ಯೋಗ್ಯತೆ ಇರಲ್ಲಾ... ಇತ್ಯಾದಿ ಮಾತುಗಳನ್ನು ಜನರ ತಲೇಲಿ ತುಂಬೋ ಪ್ರಯತ್ನಾನ ರಾಷ್ಟ್ರೀಯ ಪಕ್ಷಗಳು ಅನ್ನಿಸಿಕೊಂಡೋರು ಮಾಡ್ತಿದಾರೆ. ಇದಕ್ಕೆ ಸಮರ್ಥವಾದ ಉತ್ತರಾನ ಇಲ್ಲೀತಂಕ ಯಾರೂ ಕೊಟ್ಟಿಲ್ದೇ ಇರೋದ್ರಿಂದ ಜನರೂ ಇದನ್ನೇ ದಿಟವೆಂದು ನಂಬ್ಕೊಂಡಿದ್ದಂಗೆ ಕಾಣ್ತಿದೆ. ಆದ್ರೆ ಒಂದು ಪ್ರಾದೇಶಿಕ ಪಕ್ಷ ಹೇಗೆ ತನ್ನ ನಾಡಿನ ಹಕ್ಕುಗಳಿಗಾಗಿ ಹೋರಾಡಬಲ್ಲದೋ ಹಾಗೇ ನೆರೆಯ ಪ್ರದೇಶದ ಪ್ರಾದೇಶಿಕ ಪಕ್ಷವೂ ದನಿಯೆತ್ತಿ ಹೋರಾಡುತ್ತದೆ. ಆಗ ಸಮಾನ ಗೌರವದ ವ್ಯವಸ್ಥೆಯೊಂದು ಹುಟ್ಟಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸರಿಯಾಗುವ, ಯಾರಿಗೂ ಅನ್ಯಾಯವಾಗದ ಒಕ್ಕೂಟ ವ್ಯವಸ್ಥೆಯನ್ನು ಕಟ್ಟಲು ಸಾಧ್ಯವಾಗುತ್ತದೆ. ಎರಡು ರಾಜ್ಯಗಳ ನಡುವಿನ ಸಮಸ್ಯೆಗಳು ಇಂದಿರುವುದೇ ಇಂಥಾ ವ್ಯವಸ್ಥೆ ಭಾರತದಲ್ಲಿ ಪರಿಣಾಮಕಾರಿಯಾಗಿ ಇಲ್ಲದೇ ಇರೋದ್ರಿಂದ. ಇಂದು ಇಲ್ಲಿರೋ ರಾಷ್ಟ್ರೀಯ ಪಕ್ಷಗಳು, ಎರಡು ರಾಜ್ಯಗಳ ನಡುವೆ ತಗಾದೆ ಹುಟ್ಟಿಕೊಂಡರೆ, ಇವತ್ತು ಎರಡರಲ್ಲೊಂದು ಕಡೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾದೀತೆಂದು ಬೆದರಿ ಸಮಸ್ಯೆಯ ಬಗ್ಗೆ ಯಾವ ನಿಲುವನ್ನೂ ತೆಗೆದುಕೊಳ್ಳದೆ ಕೊಳೆಹಾಕುತ್ತವೆ. ಆದರೆ ಪ್ರಾದೇಶಿಕ ಪಕ್ಷಗಳಿಂದ ಕೂಡಿದ ಕೇಂದ್ರಸರ್ಕಾರ ಇಂತಹ ಸಮಸ್ಯೆಗಳ ಬಗ್ಗೆ ಸರಿಯಾದ ನೀತಿ ನಿಯಮ ರೂಪಿಸಲು, ಪರಿಹಾರ ಕಂಡುಕೊಳ್ಳಲು ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಭವಿಷ್ಯ ಅಡಗಿರೋದೇ ಇಂಥಾ ಪಕ್ಷಗಳ ಕೈಯ್ಯಲ್ಲಿ ಗುರು!

ಒಂದೇ ನಾಡು! ಒಂದೇ ಕುಲವು! ಒಂದೇ ದೈವವು!



ಇವತ್ತು ಕನ್ನಡನಾಡಿಗೆ ಏನು ಬೇಕಾಗಿದೆ ಅನ್ನೋದನ್ನು ಡಾ. ರಾಜ್ ಅವರ ಅಭಿನಯದ ಈ ಹಾಡು ಎಷ್ಟು ಸೊಗಸಾಗಿ ಸಾರುತ್ತಾ ಇದೆ ನೋಡು ಗುರು! ಇವತ್ತು ಚುನಾವಣೆ, ನಾವೆಲ್ಲಾ ನಾಯಕರುಗಳನ್ನು ನಮ್ಮ ನಾಡುಕಟ್ಟೋ ಮುಂದಾಳುಗಳು ಅಂತಾ ಆರಿಸೋ ದಿನ. ಈ ಹಾಡಲ್ಲಿ ನಮ್ಮ ನಾಡು ಬೆಳಗಕ್ಕೆ ಏನೇನು ಬೇಕು ಅಂತ ಎಷ್ಟು ಚೆನ್ನಾಗಿ ಇದೆ ನೋಡಿ.
ಒಂದೇ ನಾಡು, ಒಂದೇ ಕುಲವು, ಒಂದೇ ದೈವವು
ಒಮ್ಮನದಿಂದ ಎಲ್ಲರು ದುಡಿದರೆ, ಜಗವನೆ ಗೆಲ್ಲುವೆವೂ !!
ಬದುಕಲಿ ಏನೇ ಬರಲಿ, ಒಗ್ಗಟಲಿ ನಂಬಿಕೆಯಿರಲಿ!
ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ!!
"ಕನ್ನಡತನ ಬಿಡೆನೆಂಬ ಛಲ, ಒಗ್ಗಟ್ಟಲ್ಲಿ ಬಲವಿದೆ, ದುಡಿಮೆಯಿಂದಲೇ ಏಳಿಗೆ" ಹೀಗೆ ಸಾಲು ಸಾಲು ಸಂದೇಶದ ಈ ಹಾಡು ಮೇಯರ್ ಮುತ್ತಣ್ಣ ಚಿತ್ರದ್ದು. ಒಬ್ಬ ಸಾಮಾನ್ಯ ಹಳ್ಳಿಹೈದ ಹೇಗೆ ಜನನಾಯಕನಾಗ್ತಾನೆ ಅನ್ನೋ ಕತೆಯಿರೋ ಈ ಸಿನಿಮಾ ಅಂದಿನ ದಿನಗಳಲ್ಲಿ ನಾಡಿನಲ್ಲಿ ಸ್ಪೂರ್ತಿ ಸಂಚಲನವುಂಟು ಮಾಡಿತ್ತಂತೆ.
ಇಂದು ಚುನಾವಣೆ, ನಾಳೆ ಡಾ. ರಾಜ್ ಹುಟ್ಟುಹಬ್ಬ... ಅನ್ನೋ ಕಾರಣಗಳೆಲ್ಲಾ ಒಗ್ಗೂಡಿ ಇವತ್ತು ಈ ಹಾಡನ್ನು ನಿಮ್ಮ ಜೊತೆ ಹಂಚಿಕೊಳ್ಳೋ ಮನಸ್ಸಾಯ್ತು. ಇಂಥಾ ಹಾಡುಗಳು ಎದೆಯಲ್ಲಿ ನಾಡಪ್ರೇಮ ಹೊಳೆಯಾಗಿ ಹರಿದು, ನಾಡಿನ ಏಳಿಗೆಯ ಕನಸಿಗಾಗಿ ದುಡಿಯುವ ಮನಗಳಲ್ಲಿ ಪ್ರೇರಣೆಯಾಗಿ ಸದಾ ನೆಲೆ ನಿಂತಿರುತ್ತೆ ಗುರು! ಡಾ. ರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂಥಾ ಸ್ಪೂರ್ತಿಸೆಲೆಯುಕ್ಕಿಸೋ ಹಾಡುಗಳನ್ನು ತಮ್ಮ ಚಿತ್ರಗಳಲ್ಲಿ ನೀಡಿದ ಆ ಮಹಾನುಭಾವನಿಗೆ ನಮ್ಮ ನಮನಗಳನ್ನು ಸಲ್ಲಿಸಿ, ಆ ಚೇತನವನ್ನು ನೆನೆಯೋಣ ಗುರು!

ನಿಮ್ಮ ಓಟು ಯಾರಿಗೆ?


ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳ ಅಂಗವಾಗಿ 2009ರ ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎಲ್ಲಾ ತಪ್ಪದೆ ಮತ ಚಲಾವಣೆ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಯಾರಿಗೆ ನಮ್ಮ ಮತ ನೀಡಬೇಕು? ನಮ್ಮ ರಸ್ತೆಗೆ ಡಾಂಬರು ಹಾಕಿಸಿ, ನಮ್ಮ ನಲ್ಲಿಗೆ ನೀರು ಬರಿಸುವವರನ್ನು ಆರಿಸಿದರೆ ಸಾಕು ಅಂದುಕೊಳ್ಳದೆ ಕೇಂದ್ರದಲ್ಲಿ ಕುಳಿತು ಸಂಸದನಾಗಿ ತನ್ನ ಕರ್ತವ್ಯಾನ ಸರೀಗ್ ಮಾಡಬಲ್ಲರಾ ನೋಡಿ ಅಂತಹವರಿಗೆ ಮತ ಕೊಡಬೇಕಾಗಿದೆ ಗುರು!
ದಿಲ್ಲಿಯಲ್ಲಿ ನಾಡಿನ ದನಿಯಾಗಬೇಕು!
ತಾನು ಯಾವ ಪಕ್ಷಕ್ಕೇ ಸೇರಿದ್ದರೂ ತನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಆಗಬೇಕಾದ ಕೆಲಸಗಳಿಗೆ ಚಾಲನೆ ನೀಡೋದು ನಮ್ಮ ಸಂಸದರ ಮೂಲಕರ್ತವ್ಯ ಅನ್ನೋದೇನೋ ಸರೀನೆ. ಇದರ ಜೊತೆಗೆ ಸಂಸತ್ತಿನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳು ಬಂದಾಗ ರಾಜ್ಯಕ್ಕೆ ಅನ್ಯಾಯವಾಗದಂತೆ, ರಾಜ್ಯಕ್ಕೆ ಅನುಕೂಲವಾಗುವಂತೆ ಸಂಸತ್ತು ನಡೆದುಕೊಳ್ಳುವುದನ್ನು ಖಾತ್ರಿ ಪಡಿಸಿಕೊಳ್ಳುವುದೂ ಇವರ ಹೊಣೆಯಾಗಿದೆ. ನಮ್ಮ ಸಂಸದರುಗಳು ಲೋಕಸಭೆಯಲ್ಲಿ ಪಾಸ್ ಮಾಡಲಾಗುವ ಬಿಲ್ಲುಗಳ ಬಗ್ಗೆಯಾಗಲೀ, ಕೇಂದ್ರ ಸರ್ಕಾರ ನೀತಿ ನಿಯಮಾವಳಿ ರೂಪಿಸುವಾಗಾಗಲೀ ಸಕ್ರಿಯವಾಗಿ ತೊಡಗಿ ಯಾವ ರಾಜ್ಯಕ್ಕೂ ಹಾನಿಯಾಗದಂತೆ, ಎಲ್ಲರ ಏಳಿಗೆ ಸಾಧ್ಯವಾಗುವಂತೆ ನೀತಿಗಳು ರೂಪಿತವಾಗಲು ಶ್ರಮಿಸಬೇಕು. ಹಾಗಾಗಿ ನಾವುಗಳು ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯ ಜಾರಿಗೆ ಶ್ರಮಿಸುವ ಅಭ್ಯರ್ಥಿಗಳು ಮತ್ತು ಪಕ್ಷಗಳನ್ನು ಆರಿಸಬೇಕು. ಇಂದಿನ ದಿವಸ ಎಲ್ಲರ ಏಳಿಗೆಯ ಬಗ್ಗೆ ಸರಿಯಾಗಿ ಮಾತಾಡಬಲ್ಲ, ದನಿಯೆತ್ತಬಲ್ಲ ಶಕ್ತಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಇಲ್ಲವೆಂಬಂತೆ ತೋರುತ್ತಿದ್ದು, ಪ್ರಾದೇಶಿಕ ಹಿತ ಕಡೆಗಣಿಸುವ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಮೇಲಾಗಿ ಕಾಣುತ್ತಿವೆ. ಇಂತಹ ಸನ್ನಿವೇಶದಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡೇ ಏಕತೆ ಸಾಧಿಸಬಹುದು ಎಂದು ನಂಬುವ ಸರಿಯಾದ ಪ್ರಾದೇಶಿಕ ಪಕ್ಷವೊಂದು ನಮ್ಮ ನಾಡಲ್ಲಿ ಹುಟ್ಟುವವರೆಗೂ ಕಾಯುವ ಅನಿವಾರ್ಯತೆ ನಮಗಿದೆ. ಆದರೂ ಮತದಾನ ಪವಿತ್ರವಾಗಿದ್ದು ನಾಡಿನ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಬಲ್ಲ ಅಭ್ಯರ್ಥಿಗಳಿಗೇ ಮತ ನೀಡುವುದು ಸರಿಯಾದುದಾಗಿದೆ. ಬೆಳಗ್ಗೆ ಬೇಗಎದ್ದು ಹೋಗಿ ತಪ್ಪದೆ ಮತ ಚಲಾಯಿಸಿ. ಸಮಾಜವನ್ನು ಜಾತಿ ಧರ್ಮಗಳ ಹೆಸರಲ್ಲಿ ಒಡೆಯುವ, ಮತಕ್ಕಾಗಿ ಪರಭಾಷಿಕರ ಓಲೈಕೆಗೆ ಮುಂದಾದ ಅಭ್ಯರ್ಥಿಗಳಿಗೆ ಮತ ನೀಡದೆ ಯೋಗ್ಯರಿಗೆ ಮತ ನೀಡೋಣ ಗುರು!

ಚಿಂಟೂ ಜೊತೆ ಬೆಳೆಯಲಿದೆ ಮಕ್ಕಳ ನಂಟು!

"ಇದು ನಮ್ಮ ಏರಿಯಾ" ಅಂತ ಚಿಕ್ಕಮಕ್ಕಳ ಕಲರವದ ಹೊಸ ಜಾಹೀರಾತನ್ನು ನೀವು ಟಿ.ವಿಯಲ್ಲಿ ನೋಡ್ತಿರಬಹುದು, ಅದೇ ಗುರು! ಕನ್ನಡದ ಹೊಸವಾಹಿನಿ ಶುರುವಾಗಿದೆಯೆಲ್ಲಾ ಚಿಂಟೂ ಟಿ.ವಿ ಅಂತ, ಅದರ ಜಾಹೀರಾತು ಅದು. ಯಾವ್ದಪ್ಪಾ ಈ ಚಿಂಟೂ ಟಿ.ವಿ. ಅಂತೀರಾ? ಇದು ಸನ್ ಟಿ.ವಿಯ ಹೊಸವಾಹಿನಿ, ದಿನದ 24 ಗಂಟೆಯೂ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತದಂತೆ. ಇದನ್ನು ಚಿಕ್ಕಮಕ್ಕಳಿಗೆ ಅಂತ ಮಾಡಿದಾರಂತೆ. ಇದರಲ್ಲಿ ಬರೀ ಕಾರ್ಟೂನುಗಳದ್ದೇ ರಾಜ್ಯಭಾರ. ಕನ್ನಡದಲ್ಲಿ ಬರೋ ಈ ಚಾನೆಲ್ ಕರ್ನಾಟಕದಲ್ಲಿ ಕಾರ್ಟೂನ್ ನೆಟವರ್ಕ್, ಪೋಗೊ ಮುಂತಾದ ವಾಹಿನಿಗಳಿಗೆ ಸಡ್ಡು ಹೊಡೆಯೊಕ್ಕೆ ಅಂತಲೇ ತಯಾರಾಗಿ ಬಂದಿದೆ.

ಇನ್ಮುಂದೆ ಟಾಮ್ ಅಂಡ್ ಜೆರ್ರಿ ಚೆಲ್ಲಾಟ ಕನ್ನಡದಲ್ಲೇ!

ಹೌದೂ ಗುರು! ಇನ್ಮುಂದೆ ಟಾಮ್ ಮತ್ತು ಜೆರ್ರಿಗಳ ಚಿನ್ನಾಟವಿರಲೀ, ಸೂಪರ್ ಮ್ಯಾನಿನ ಹಾರಾಟವಿರಲೀ, ಸ್ಪೈಡರ್ ಮ್ಯಾನಿನ ತೂಗಾಟವಿರಲೀ ಎಲ್ಲಾನೂ ಕನ್ನಡದಲ್ಲಿ ನೋಡಬೌದು. ಡೊರಾ, ಪೋಕಿಮಾನ್, ಗಾಡ್ಜೀಲ್ಲಾ, ಪವರ್ ಪಫ್ ಗರ್ಲ್ಸ ಅನ್ನೋ ಕಾರ್ಟುನ್ಗಳು ಕನ್ನಡ ಮಾತನಾಡುತ್ತೆ. ಯಾಕಂದ್ರೆ ಚಿಂಟು ಟಿ.ವಿ. ಸಂಪೂರ್ಣ ಕನ್ನಡವಾಹಿನಿ. ಇದುವರೆಗೂ ಕಾರ್ಟೂನುಗಳ ನಿಜವಾದ ಸವಿಯನ್ನು ಸಂಪೂರ್ಣವಾಗಿ ಸವಿಯಕ್ಕೆ ತೊಡಕಾಗಿದ್ದ ’ಕನ್ನಡದಲ್ಲಿಲ್ಲ, ಅದಕ್ಕೇ ಪೂರ್ತಿ ಅರ್ಥವಾಗ್ತಿಲ್ಲಾ’ ಅನ್ನೋ ಕೊರತೆ ಇನ್ಮುಂದೆ ಇದರಿಂದಾಗಿ ಅಳಿಯುತ್ತೆ. "ಕನ್ನಡಿಗರೂ ಉನ್ನತ ಗುಣಮಟ್ಟದ ವಿಶ್ವದರ್ಜೆಯ ಕಾರ್ಟೂನುಗಳನ್ನು ಸೃಷ್ಟಿಸೋ ಅನಿಮೇಷನ್ ತಂತ್ರಜ್ಞಾನದಲ್ಲಿ ಪರಿಣಿತಿ ಸಾಧಿಸಬೇಕು" ಅನ್ನೋ ಮಾತಿನ ಜೊತೆಯಲ್ಲೇ ಕನ್ನಡಿಗರ ಮನರಂಜನೇನಾ ಕನ್ನಡದಲ್ಲೇ ಪಡ್ಯೋದು ನಮ್ಮ ಮೂಲಭೂತ ಹಕ್ಕು ಅನ್ನೋದನ್ನೂ ಈ ವಾಹಿನಿ ಸಾರುತ್ತಾ ಇದೆ ಗುರು!

ಕನ್ನಡ ಚಿತ್ರರಂಗದಲ್ಲೀಗ ಹೊಸದೊಂದು "ಜೋಷ್"!

ಸಿಕ್ಕಾಪಟ್ಟೆ ಮಜಾ,, ಸ್ವಲ್ಪ ಫೀಲಿಂಗ್ಸ್ ಅಂತ ಹೇಳ್ತಾ ಈ ಬೇಸಿಗೆ ರಜೆ ಟೈಮ್ ಅಲ್ಲಿ ಜೋಶ್ ಅನ್ನೋ ಸಿನೆಮಾ ಬಂದಿದೆ ಗುರು. ಇದ್ರಲ್ಲಿ ಹೆಚ್ಚಾಗಿ ಕನ್ನಡದ ಕಲಾವಿದರು, ತಂತ್ರಜ್ಞರನ್ನೇ ಬಳಸಿಕೊಂಡಿದಾರಂತೆ. ಹದಿಹರೆಯದ ಹುಡುಗರ ತಮಾಷೆ, ತಲ್ಲಣಗಳ ಸುತ್ತ ಸ್ವಂತ ಕಥೆ ಹೆಣದು ಮಾಡಿರೋ ಈ ಸಿನೆಮಾ ಈಗ ಸಕತ್ ಸುದ್ದೀಲಿದೆ! ಪತ್ರಿಕೆಗಳಲ್ಲಿ ಇದರ ಬಗ್ಗೆ ಒಳ್ಳೇ ಮೆಚ್ಚುಗೆಯ ಮಾತುಗಳು ಕಂಡುಬರ್ತಾ ಇವೆ.



ಹತ್ತಾರು ವರ್ಷಗಳ ಹಿಂದೆ ಬಂದಂತಹ ಪ್ರೇಮಲೋಕ, ಚೈತ್ರದ ಪ್ರೇಮಾಂಜಲಿ, ನೆನಪಿರಲಿ, ಮುಂಗಾರುಮಳೆ... ಮುಂತಾದ ಚಿತ್ರಗಳೆಲ್ಲಾ ತಾವು ಮಾತ್ರಾ ಯಶಸ್ಸು ಗಳಿಸದೆ, ಇಡೀ ಕನ್ನಡ ಚಿತ್ರರಂಗಕ್ಕೊಂದು ಹೊಸ ತಿರುವು ಮತ್ತು ಚೈತನ್ಯವನ್ನು ತಂದುಕೊಟ್ಟವು. ಇದಕ್ಕೆ ಮೂಲಕಾರಣವೇ ಇವುಗಳಲ್ಲಿನ ಹೊಸತನ. ಕನ್ನಡ ಚಿತ್ರರಂಗ ನಿಜವಾಗ್ಲೂ ಬೆಳೀಬೇಕೂ ಅಂದ್ರೆ ಇಂತಹ ಹೊಸತನದ ರಂಗು ಆಗಾಗ, ಮತ್ತೆಮತ್ತೆ ಹೊಮ್ಮುತ್ತಲೇ ಇರಬೇಕು. ಕಥೆ, ಸಂಗೀತ, ಕಲಾವಿದರ ಆಯ್ಕೆ, ತಾಂತ್ರಿಕತೆ, ಹೀಗೆ ಚಿತ್ರ ನಿರ್ಮಾಣದ ಎಲ್ಲ ಹಂತದಲ್ಲೂ ಹೊಸ ಹೊಸ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ಕೊಡೊ ಪ್ರಯತ್ನಗಳು ನಡೆಯಬೇಕು. ಅಂತಹ ಎಲ್ಲ ಪ್ರಯತ್ನಗಳಿಗೆ ನಮ್ಮ ಜನರು ಉತ್ತೇಜನ ಕೊಡಬೇಕು. ಇಂತಹದೊಂದು ಪ್ರಯತ್ನವನ್ನು ಜೋಶ್ ಮೂಲಕ ಮಾಡಿರೋ ಶಿವಮಣಿ ಮತ್ತವರ ತಂಡಕ್ಕೆ ಅಭಿನಂದನೆ ಹೇಳೋಣ ಹಾಗೂ ಇನ್ನಷ್ಟು ಇಂತಹ ಪ್ರಯತ್ನಗಳು ನಮ್ಮ ಚಿತ್ರರಂಗದಲ್ಲಿ ನಡೆಯಲಿ ಅಂತ ಹಾರೈಸೋಣ. ಏನಂತೀ ಗುರು?

ಹಿಡಿದ ಗುರಿ, ಬಿಡದ ಪರಿ - ಅಂದು ಅನಿಲ್ : ಇಂದು ಸುನಿಲ್!

ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ 18ನೇ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಲ್ಲಿ ಗೆದ್ದ ಭಾರತ ತಂಡದಲ್ಲಿ ಆಡಿದ ಹೊಸ ಆಟಗಾರ ಸುನಿಲ್ ಕುಮಾರ್ ಅವರ ಬಗ್ಗೆ ಇವತ್ತಿನ (14.04.2009) ಕನ್ನಡ ಪ್ರಭದ ಮುಖಪುಟದಲ್ಲಿ ಒಂದು ವರದಿ ಬಂದಿದೆ ಗುರು! 15ವರ್ಷಗಳ ನಂತರ ಈ ಪ್ರಶಸ್ತಿಯನ್ನು ಗೆದ್ದ ಭಾರತ ತಂಡದೋರು ಇದನ್ನು ಸುನಿಲ್ ಕುಮಾರ್ ಅವರ ತಂದೆಗೆ ಅರ್ಪಿಸಿದ್ದಾರಂತೆ. ಅಲ್ಲಿ ಆಟವಾಡಲು ಹೋದ ಸುನಿಲ್ ಅವರಿಗೆ ಮೂರೇದಿನದಲ್ಲಿ ತಲುಪಿದ ಸುದ್ದಿ ತನ್ನಪ್ಪ ತೀರಿಹೋದದ್ದು. ಎದೆಗುಂದದ ಸುನಿಲ್ ಈ ಕೆಟ್ಟಸುದ್ದಿ ಕೇಳಿದ ಮೇಲೂ ಹಿಡಿದ ಕೆಲಸ ಕೈಬಿಡದೆ ಆಟವಾಡಿದರಂತೆ. ಇವರ ಈ ಮನೋಧೈರ್ಯಾನ ಎಲ್ರೂ ಕೊಂಡಾಡ್ತಿದಾರೆ. ಸುನಿಲ್ ಕುಮಾರ್ ಅವ್ರು ಕನ್ನಡನಾಡಿನ ಹೆಮ್ಮೆಯ ಕೂಸು ಎಂದು ಕನ್ನಡಿಗರೂ ಎದೆಯುಬ್ಬಿಸುವಂತೆ ನಡೆದುಕೊಂಡಿದಾರೆ ಸುನಿಲ್. ಇವರಿಗೆ ನಮ್ಮ ಅಭಿನಂದನೆಗಳು. ತಂದೆಯ ಸಾವಿನ ನೋವಿನ ಗಾಯ ಬೇಗ ಮಾಯಲಿ ಎಂದು ಹಾರೈಕೆ.

ಇದು ಕನ್ನಡಿಗರ ನಿಜಗುಣ!
ಹೌದು, ಹಿಡಿದ ಗುರಿ ಸಾಧಿಸೋ, ಆ ದಾರೀಲಿ ಎದುರಾಗೋ ಸವಾಲುಗಳನ್ನು ಮೀರಿನಿಲ್ಲೋ ಚೈತನ್ಯ ಈ ನಾಡಿನ ಮಕ್ಕಳಾದ ನಮ್ಮ ರಕ್ತದಲ್ಲೇ ಹರಿದುಬಂದಿರುವಂತಿದೆ. ಅಂದು ತನ್ನ ದವಡೆ ಚದರಿ ಹೋದಾಗಲೂ ಅಂಜದೆ, ನೋವಿಗೆ ಸೋತು ಕೂರದೆ ಕ್ರಿಕೆಟ್ ಆಟದಲ್ಲಿ ಚೆಂಡೆಸೆದ ಅನಿಲ್ ಕುಂಬ್ಳೆಯಲ್ಲೂ ಇದೇ ಹಿಡಿದ ಗುರಿಯ ಬಿಡದ ಪರಿ ಕಂಡಿತ್ತು.

1996ರ ವಿಶ್ವಕಪ್ ಪಂದ್ಯಾವಳಿಯಲ್ಲಿ ತಾನೆಸೆದ ಚೆಂಡನ್ನು ಬೌಂಡರಿಗಟ್ಟಿ ಅಟ್ಟಹಾಸದಿಂದ ಅಪಹಾಸ್ಯ ಮಾಡಿದ ಪಾಕಿಸ್ತಾನದ ಅಮೀರ್ ಸೋಹೆಲ್ಲನನ್ನು ಮರು ಎಸೆತದಲ್ಲೇ ಔಟ್ ಮಾಡಿದ ಛಲಗಾರ ವೆಂಕಟೇಶ್ ಪ್ರಸಾದ್ ಅವ್ರಲ್ಲೂ ಇದೇ ಹಟ ಕಂಡಿತ್ತು.
ಇವರುಗಳಿಗೆಲ್ಲಾ ಮಾದರಿಯಾಗಿ 34 ವರ್ಷಗಳ ಹಿಂದೆಯೇ ಬೆಂಕಿ ಚೆಂಡುಗಳನ್ನು ಎದುರಿಸಿ ಏಕಾಂಗಿಯಾಗಿ ಆಡಿದ್ದು ಜಿ.ಆರ್. ವಿಶ್ವನಾಥ್ ಅವ್ರು. ಅಂದು ಚನ್ನೈನಲ್ಲಿ ಭಾರತ ತಂಡ ಬ್ಯಾಟ್ ಮಾಡ್ತಾ ವೆಸ್ಟ್ ಇಂಡೀಸಿನ ಬೌಲಿಂಗ್ ದಾಳಿಗೆ ಪತರಗುಟ್ಟಿ ಹೋಗಿದ್ದಾಗ, ಒಂದೆಡೆಯಲ್ಲಿ ಏಕಾಂಗಿಯಾಗಿ ನೆಲಕಚ್ಚಿ ಹೋರಾಡಿದ್ದು ಇವರೇ. ಭಾರತದ 190 ರನ್ನುಗಳ ಅರ್ಧಕ್ಕಿಂತ ಹೆಚ್ಚು, ಅಂದರೆ 97 ರನ್ನು ಗಳಿಸಿ, ಇತಿಹಾಸದ ಅತ್ಯುತ್ತಮ ಆಟವಾಡಿ ಕೆಚ್ಚು ತೋರಿದವ್ರು ವಿಶಿ. ಈ ಆಟ ಇಂದಿಗೂ ವಿಶ್ವದ ಅತ್ಯುತ್ತಮ ಇನ್ನಿಂಗ್ಸುಗಳ ಪಟ್ಟಿಯಲ್ಲಿ ಅಳಿಯದೇ ನಿಂತಿದೆ.
ಆಟದ ಮೈದಾನ ಮಾತ್ರವಲ್ಲದೇ, ಯುದ್ಧರಂಗವೂ ಸೇರಿದಂತೆ ಎಲ್ಲಾ ರಂಗಗಳಲ್ಲೂ ಎದುರಾಗೋ ಸವಾಲುಗಳನ್ನು ಗಂಡೆದೆಯಿಂದ ಎದುರಿಸೋ ಛಲ ನಮ್ಮ ಹಿರಿಯರಲ್ಲಿಯೂ ಇತ್ತೆಂಬುದಾಗಿ ನಮ್ಮ ಇತಿಹಾಸ ಸಾರುತ್ತಿದೆ. ಇಂದಿಗೂ ಆ ಗುಣಗಳು ನಮ್ಮ ಮೈಯ್ಯಲ್ಲಿವೆ. ಸ್ವಲ್ಪ ಆತ್ಮನಂಬಿಕೆ, ಮತ್ತಷ್ಟು ದುಡಿಮೆಗಳು ಈ ಗುಣಗಳನ್ನು ನಮ್ಮಲ್ಲಿ ಹೆಚ್ಚಿಸಲಿ ಅನ್ನೋದು ಏನ್ ಗುರು ಅಂಬೋಣ!

ಇವ ನಮ್ಮ ಕನ್ನಡದ ರಾಜಾಧಿರಾಜ!



ಕನ್ನಡದ ಮೊದಲ ದೊರೆ ಮಯೂರ ಎಂದೊಡನೇ ಕಣ್ಮುಂದೆ ಬರೋ ಚಿತ್ರ ಡಾ.ರಾಜ್ ಅವರದ್ದು. ಕನ್ನಡ ಇತಿಹಾಸವನ್ನು ಒಂದೊಂದಾಗಿ ಮುತ್ತಂತೆ ಕಟ್ಟಿಕೊಟ್ಟ ಮುತ್ತುರಾಜನಿಗೆ ಕನ್ನಡದ ಜನತೆ ಎಷ್ಟು ನಮನಗಳನ್ನು ಸಲ್ಲಿಸಿದ್ರೂ ಸಾಲ್ದು. ಮಯೂರ ಚಿತ್ರದ ಈ ಸನ್ನಿವೇಶಾನೇ ನೋಡಿ. ಎಂಥಾ ಅಭಿನಯಾ, ಎಂಥಾ ಸಂಭಾಷಣೆ, ಎಂಥಾ ದೃಶ್ಯಾವಳಿ. ಈ ಒಂದು ಸನ್ನಿವೇಶ ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚು ಬಡಿದೆಬ್ಬಿಸೋದು ಖಂಡಿತಾ.

ಬಹುದಿನಗಳಿಂದ ಮೈಮರೆವೆಯಿಂದ ಮೆತ್ತಿಕೊಂಡಿರುವ ಕೊಳೆಯನ್ನು ಕೊಚ್ಚಲು ಇಂಥಾ ಇತಿಹಾಸದ ಕಥೆಗಳು ಪ್ರೇರಣೆ ನೀಡುತ್ತವೆ. ಅದರಲ್ಲೂ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಮೂಡಿಸಿದ ಮಹತ್ಕಾರ್ಯ ಡಾ.ರಾಜಕುಮಾರ್ ಅವ್ರಿಂದ ಆಗಿದೆ. ರಾಜ್ ಏನ್ ಮಾಡಿದಾರೆ? ಏನ್ ಮಾಡಿದಾರೆ? ಅನ್ನೋರ್ಗೆಲ್ಲಾ ಉತ್ತರ "ಕನ್ನಡಿಗರ ಕಣಕಣದಲ್ಲಿ ಸ್ವಾಭಿಮಾನ, ನಾಡಭಿಮಾನ, ನುಡಿಯಭಿಮಾನ ತುಂಬಿ ಎದೆಯಲ್ಲಿ ಕೆಚ್ಚು ತುಂಬಿದ್ದಾರೆ" ಅನ್ನೋದೇ ಆಗಿದೆ ಗುರು!

ಇಂಥಾ ಮಹಾನುಭಾವ ನಮಗೆ ಪರಿಚಯಿಸಿದ ರಣಧೀರ ಕಂಠೀರವ, ಮಯೂರವರ್ಮ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ... ನಮ್ಮ ಕೋಟಿ ಕೋಟಿ ಕನ್ನಡಿಗರೆದೆಯಲ್ಲಿ ಸ್ವಾಭಿಮಾನದ ದೀಪ ಹಚ್ಚಿದೆ ಗುರು! ಈ ಬೆಳಕು ನೀಡಿದ ಕನ್ನಡ ಹೃದಯ ಸಿಂಹಾಸನಾಧೀಶ್ವರನಿಗೆ ನಮ್ಮ ನಮನ. ಡಾ. ರಾಜ್ ಪುಣ್ಯತಿಥಿಗೆ ಏನ್ ಗುರುವಿನ ಶ್ರದ್ಧಾಂಜಲಿ.

ಮತಕ್ಕಾಗಿ ರಾಷ್ಟ್ರೀಯ ಪಕ್ಷಗಳ ಹೊಸವರಸೆ!

ಲೋಕಸಭಾ ಚುನಾವಣೆಗಳು ಹತ್ತಿರವಾಗ್ತಿದ್ದಂಗೇ ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಮಟ್ಟದಲ್ಲಿ ಸಮಾಜ ಒಡ್ಯೋ ರಾಜಕಾರಣ ಶುರುವಾಗಿದೆ ಗುರು! ಅಧಿಕಾರ ಹಿಡ್ಯೋದೇ ಗುರಿಯಾಗಿರೋವಾಗ ಪಕ್ಷಗಳನ್ನು ಒಡ್ಯೋದೇನೋ ಇವತ್ತಿನ ಸಹಜ ರಾಜಕೀಯ ಆಗಿದೆ. ಆದ್ರೆ ಚುನಾವಣೇಲಿ ಮತ ಗಳ್ಸಕ್ಕೆ ಒಂದು ಸಮಾಜಾನೇ ಒಡ್ಯೋ ರಾಜಕಾರಣಕ್ಕೆ ಏನನ್ನಬೇಕು ಗುರು!

ಪಕ್ಷಭೇದವಿಲ್ಲದ ನಡವಳಿಕೆ!

ಈ ವಿಸ್ಯದಲ್ ಮಾತ್ರಾ ಎಲ್ಲಾರೂನೂ ಒಂದೇನೆ. "ರಾಜಕೀಯ ಪಕ್ಷಗಳೋರು ಎಲ್ಲಿ, ಯಾವ ಭಾಷೇಲಿ ಬೇಕಾದ್ರೂ ಪ್ರಚಾರ ಮಾಡೋದು ಸಂವಿಧಾನ ಬಾಹಿರ ಏನಲ್ಲಾ" ಅಂತಾ ನಮ್ ಕರ್ನಾಟಕದಾಗಿನ ಎಲ್ಲಾ ರಾಷ್ಟ್ರೀಯ ಪಕ್ಷಗಳು ಎಲ್ಲಾ ಜನರನ್ನು ಅವರವರ ಭಾಷೇಲಿ ಮತ ಕೇಳಕ್ಕೆ ಮುಂದಾಗಿದಾರೆ. ಪಾಪಾ, ಭಾರತೀಯ ಜನತಾ ಪಕ್ಷದೋರುನ್ನ ಕನ್ನಡದೋರು ಆ ಪಾಟಿ ಗೋಳು ಹೊಯ್ಕೊಂಡು, "ಬೆಳಗಾವಿ ಮರಾಠಿಗರಲ್ಲಿ ಮರಾಠಾತನವನ್ನು ಜಾಗೃತಿ" ಮಾಡಕ್ಕೆ ಮುಂದಾಗಿದ್ದ ಅಲ್ಲಿನ ಸಂಸದರ ಕೈ ತಡುದ್ ಬುಟ್ರಪ್ಪಾ, ಅದ್ಕೇ ಬಿಜೇಪಿಯೋರು ಬೇಜಾರಾಗಿ ಮುಖ್ಯಮಂತ್ರಿಗಳನ್ನು ಕರ್ದು ಅವರ ಅದುರಲ್ಲೇ ಅಲ್ಲಿನ ಶಾಸಕರ ಕಡೆಯಿಂದಲೇ ಮರಾಠೀಲಿ ಭಾಷಣ ಮಾಡುಸ್ಬುಟ್ಟು ಧನ್ಯರಾಗ್ಬುಟ್ರು.
ಇವ್ರುದ್ದು ಒಂದು ತೂಕಾ ಆದ್ರೆ ಜೆಡಿಎಸ್ಸೋರು ಜಯಮ್ಮನ ಪಾಲ್ಟೀಗೆ ಗಾಳ ಹಾಕ್ಕೊಂಡು ಕುಂತವ್ರಂತೆ, ನಮ್ಮ ಕಾಂಗ್ರೆಸ್ಸಿನೋರು ಇನ್ನೂ ಒಂದು ಹೆಜ್ಜೆ ಮುಂದೋಗಿ ತಮಿಳ್ರನ್ನು ಒಲುಸ್ಕೋಬೇಕು ಅಂತಾ ಕರುಣಾನಿಧಿಯೋರ್ಗೆ ಪತ್ರಾನೇ ಬರ್ದಿದಾರಂತೆ. "ಕರ್ನಾಟಕದಲ್ಲಿ ತಮಿಳು ಮತದಾರರನ್ನು ನಮಗೆ ಓಟ್ ಹಾಕಕ್ ಒಸಿ ಯೋಳಿ" ಅಂತ ಇವ್ರು ಅಂದಿದ್ಕೆ "ಬೆಂಗಳೂರು ಪಾಲಿಕೆ ಎಲೆಕ್ಷನ್ನಾಗೆ ಒಂದಷ್ಟು ಸೀಟು ಬುಟ್ಕೊಡಿ" ಅಂದ್ರಂತೆ ಅವ್ರು! ಒಟ್ನಲ್ ಎಲ್ಲಾ ರಾಜಕೀಯ ಪಾರ್ಟಿಗಳೋರು ಇಲ್ಲಿ ವಾಸ ಮಾಡೋ ಜನ್ರುನ್ನ ನೀವು ತಮಿಳ್ರು, ನಾವು ನಿಮ್ನ ಕಾಪಾಡ್ತೀವಿ, ನೀವು ಮರಾಠಿಗ್ರು, ನಾವು ನಿಮ್ನ ಕಾಪಾಡ್ತೀವಿ, ನೀವು ತೆಲುಗ್ರು ನಾವು ನಿಮ್ನ ಕಾಪಾಡ್ತೀವಿ ಅಂತಾ ಕನ್ನಡಿಗರಾಗಿರೋಕೆ ಹೊರ್ಟವ್ರ ತಲೇಲೂ ನೀವು ಕನ್ನಡದವ್ರಲ್ಲಾ ಅನ್ನೋ ಒಡಕು ಹುಟ್ ಹಾಕ್ತಿರೋದು ಭೋ ಅನ್ಯಾಯ! ನಮ್ ರಾಜಕೀಯ ಪಕ್ಷಗಳು ತಮಿಳ್ರು ಓಟಿಗೆ ಬೆಂಗಳೂರು ಪಾಲಿಕೇನಾ ತಮಿಳುನಾಡಿಗೆ, ಮರಾಠಿ ಓಟಿಗೆ ಬೆಳಗಾವಿ ಪಾಲಿಕೇನಾ ಮಾರಾಷ್ಟ್ರಕ್ಕೆ, ತೆಲುಗ್ರ ಓಟಿಗೆ ಬಳ್ಳಾರಿ ಪಾಲಿಕೇನಾ ಆಂಧ್ರಕ್ಕೆ, ಮಲಯಾಳಿ ಓಟಿಗೆ ಮಂಗಳೂರು ಪಾಲಿಕೇನಾ ಕೇರಳಕ್ಕೆ, ಕೊಂಕಣಿ ಓಟಿಗೆ ಕಾರವಾರಾನಾ ಗೋವಾಕ್ಕೆ ಬಿಟ್ಕೊಡಲ್ಲಾ ಅನ್ನಕ್ಕೇನೂ ಖಾತ್ರಿ ಇಲ್ಲಾ ಗುರು!

ರಾಜಕಾರಣ ಮಾಡಕ್ಕೆ ಕನ್ನಡ ಬೇಕಿಲ್ವಂತೆ!

ರಾಣಿ ಸತೀಶ್ ಎಂಬ ರಾಜ್ಯದ ಮಹಾನ್ ರಾಜಕಾರಣಿ ಉದುರ್ಸಿರೋ ಆಣಿಮುತ್ತು ಕೇಳ್ರಪ್ಪೋ. "ರಾಜಕಾರಣದಲ್ಲಿ ಬರಬೇಕಾದ್ದು ಭಾಷೆ ಅಲ್ಲ: ರಾಜಕಾರಣಿಗಳಿಗೆ ಕನ್ನಡ ಬರ್ದಿದ್ರೂ ಪರ್ವಾಗಿಲ್ಲ" ಅಂದವ್ರೆ ಅಂತಾ 07.04.2009ರ ವಿಜಯಕರ್ನಾಟಕದ ಎರಡನೇ ಪುಟದಲ್ಲಿ ವರದಿಯಾಗಿದೆ! ಈ ಮಾತುಗಳ್ನ ಎಲ್ಲೋ ಕೇಳ್ದಂಗೈತೆ ಅನ್ಕೋತಾ ಇದೀರಾ? ನಮ್ಮ ಕಲಾವಿದರು ಇದುವರೆಗೂ ಆಗಾಗ ಬಳುಸ್ತಿದ್ದ "ಕಲಾವಿದರಿಗೆ ಭಾಷೆಯಿಲ್ಲ" ಅನ್ನೋದ್ರ ಮುಂದುವರಿದ ರೂಪಾ ಇದು ಅನ್ನುಸ್ತಿಲ್ವಾ? ಗುರು!!

ಭಾಷಾ ಆಯಾಮ ಮತ್ತು ಪ್ರಜಾಪ್ರಭುತ್ವ

ಜನರಿಂದ ಜನರಿಗಾಗಿ ಅಂತ ಇರೋ ಈ ಜನಪ್ರತಿನಿಧಿ ಆಯ್ಕೆಯ ರಾಜಕಾರಣದಲ್ಲಿ ಜನರಿಂದ ಆಯ್ಕೆ ಆಗೋ ನಾಯಕರಿಗೆ ಜನರ ಭಾಷೇನೇ ತಿಳಿದಿಲ್ಲಾ ಅಂದಮೇಲೆ ಅವರ ಸಮಸ್ಯೆ ತಿಳಿದೀತೇ? ಯಾವುದೇ ಜನಾಂಗದ ಸಂಸ್ಕೃತಿ, ನಂಬಿಕೆ, ಜೀವನಶೈಲಿ, ಮೌಲ್ಯಗಳು ಇದನ್ನೆಲ್ಲಾ ಅರೀಬೇಕು ಅಂದ್ರೆ ಆಯಾ ಜನರ ನುಡಿ ಕಲೀಬೇಕು ಅನ್ನೋದು ಸಾಮಾನ್ಯಜ್ಞಾನ. ಅಂಥದ್ರಲ್ಲಿ ಆ ಜನರನ್ನು ಪ್ರತಿನಿಧುಸ್ತೀನಿ ಅನ್ನೋರಿಗೆ ಆಯಾ ಜನರ ಭಾಷೆ ಬರ್ದಿದ್ರೆ ಅದೆಂಗ್ ಸುಗಮವಾಗಿ ಕೆಲಸ ಮಾಡಕ್ಕಾಗುತ್ತೇ ಗುರು! ತಮ್ಮ ಪಕ್ಷ ನಿಲ್ಸಿದೇ ಅನ್ನೋಕಾರಣಕ್ಕೆ ಪರಭಾಷಿಕ ಅಭ್ಯರ್ಥಿಗಳನ್ನು ಸಮರ್ಥಿಸೋ ಭರದಲ್ಲಿ ರಾಜಕಾರಣಿಗಳು ಹಿಂಗ್ ಎಡವಟ್ಟು ಹೇಳಿಕೆ ಕೊಡ್ತಿದಾರೆ ಅಂತ ಜನರು ಬಾಯಿಗ್ ಸಿಕ್ಕಂಗ್ ಬಯ್ಯೋ ಮೊದಲು ಇವ್ರು ತಿದ್ಕೋಬೇಕು ಬೇಕು ಗುರು! ತಿದ್ಕೋಬೇಕು!!

ವಿಜ್ಞಾನದ ಕಲಿಕೆ ಕನ್ನಡದಲ್ಲೇ ಎಂದು ಸಾರೋ ಈ ಬೇಸಿಗೆ ಶಿಬಿರ!

ಬೇಸಿಗೆ ರಜಾ ಶಿಬಿರಗಳು ಸಾವಿರಾರು. ಇಂಥದ್ರಲ್ಲಿ ಇವತ್ತಿನ ದಿವ್ಸ ಮಕ್ಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟುಸ್ಬೇಕು, ಹೆಚ್ಚುಸ್ಬೇಕು ಅಂತಲೇ ಬೆಂಗಳೂರಲ್ಲಿ ಒಂದು ಶಿಬಿರ ನಡುಸ್ತಿದಾರೆ. ಇವತ್ತು ಈ ಶಿಬಿರದ ಬಗ್ಗೆ ಮಾತಾಡಕ್ಕೆ ಇರೋದಕ್ಕೆ ಕಾರಣ ಇಷ್ಟೇ ಅಲ್ಲಾ ಗುರು!

ಎಲ್ಲದರಂಥದಲ್ಲ ಈ ಶಿಬಿರ!

ಏಳನೇ ತರಗತಿ ಬರೆದಿರೋ ಮಕ್ಕಳಿಗೆ ಅಂತಾ ಈ ಶಿಬಿರಾನಾ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಶಾಲೆ ಮತ್ತು ದಿ ಬೆಂಗಳೂರು ಸೈನ್ಸ್ ಫೋರಂನೋರು ಜಂಟಿಯಾಗಿ ನಡುಸ್ತಿದಾರೆ. 2009ರ ಸಾಲಿನ ಶಿಬಿರ ಏಪ್ರಿಲ್ 4ರಂದು ಶುರುವಾಗಿದೆ. ಪ್ರತಿದಿನ ಬೆಳಗ್ಗೆ 9.30ರಿಂದ 11.30ರವರೆಗೆ 19.04.2009ರ ತನಕ ನಡ್ಯೋ ಈ ಕಾರ್ಯಕ್ರಮಾನ ಇಂಗ್ಲಿಷು ಮತ್ತು ಕನ್ನಡದಲ್ಲಿ ನಡುಸ್ತೀವಿ ಅಂತ ಹೇಳ್ಕೊಂಡ್ರೂ ಹೆಚ್ಚಾಗಿ ತರಗತಿಗಳು ನಡ್ಯದು ಕನ್ನಡದಲ್ಲೇ ಗುರು! ವಿಜ್ಞಾನದ ನಾನಾ ಕ್ಷೇತ್ರಗಳಿಗೆ ಸೇರಿದ ನಾಡಿನ ಅನೇಕ ಪರಿಣಿತರುಗಳು ಈ ಶಿಬಿರದಲ್ಲಿ ಭಾಗವಹಿಸ್ತಾರೆ. ಒಟ್ಟು ಹದಿನೈದು ದಿನ ನಡ್ಯೋ ಶಿಬಿರದ ಶುಲ್ಕ ಬರೀ 180 ರೂಪಾಯಿ.

ಶಿಬಿರದ ಭಾಷಣಕಾರರು!


ಈ ಶಿಬಿರದಲ್ಲಿ ಒಂದೊಂಡು ದಿನ ಒಬ್ಬೊಬ್ಬ ಪರಿಣಿತರು ಬಂದು ಮಕ್ಕಳಲ್ಲಿ ಆಸಕ್ತಿ ಹುಟ್ಟುಹಾಕೋ ರೀತೀಲಿ ತಮ್ಮ ಕ್ಷೇತ್ರದ ಬಗ್ಗೆ ಪರಿಚಯ ಮಾಡ್ಕೊಡ್ತಾರೆ. ಈ ಪರಿಣಿತರ ಪಟ್ಟೀನಾ ಒಸಿ ನೀವೂ ನೋಡಿ:
ಪ್ರೊ. ಎಚ್.ಆರ್.ರಾಮಕೃಷ್ಣರಾವ್ - ಇವರು ಕ್ರೈಸ್ತ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಅಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ.
ಪ್ರೊ. ವಿ.ಕೆ. ದೊರಸ್ವಾಮಿ - ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿದ್ದಾರೆ.
ಡಾ. ತಿರುಮಲಾಚಾರ್ - ಕರ್ನಾಟಕ ಸರ್ಕಾರದ ವೈದ್ಯಕೀಯ ಕಲಿಕೆ ಇಲಾಖೆಯ ನಿರ್ದೇಶಕರಾಗಿದ್ದವರು.
ಎಂ. ಶಿವಶಂಕರ್ (ಅಪರಂಜಿ) - ಇವ್ರು ಇಂಜಿನಿಯರಿಂಗ್ ವಿಜ್ಞಾನದವ್ರು.
ಡಾ. ಸಿ.ಆರ್. ಚಂದ್ರಶೇಖರ್ - ಇವರು ನಿಮ್ ಹ್ಯಾನ್ಸ್ ಸಂಸ್ಥೆಯ ಮನಶಾಸ್ತ್ರಜ್ಞರು ಮತ್ತು ವೈದ್ಯಕೀಯ ಬರಹಗಾರರು.
ಡಾ. ನಾ.ಸೋಮೇಶ್ವರ - ’ಥಟ್ ಅಂತ ಹೇಳಿ’ ಕಾರ್ಯಕ್ರಮ ಖ್ಯಾತಿಯ ಇವರು ವೈದ್ಯರು ಮತ್ತು ವೈದ್ಯಕೀಯ ಬರಹಗಾರರು.
ಡಾ. ಕೆ.ಎಸ್. ನಾಗೇಶ್ - ಆರ್.ವಿ ದಂತ ವಿದ್ಯಾಲಯದ ಪ್ರಾಂಶುಪಾಲರು.
ಪ್ರೊ. ಎಂ.ಆರ್. ನಾಗರಾಜ್ - ಇವರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರೊಫೆಸರ್ ಆಗಿರೋರು.
ಡಾ. ವೈ. ತುಳಜಪ್ಪ - ಬಸವನಗುಡಿ ನ್ಯಾಷನಲ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು.
ಡಾ. ಬಿ.ಎಸ್.ಶೈಲಜ - ಇವರು ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದಲ್ಲಿ ವಿಜ್ಞಾನಿಯಾಗಿದ್ದಾರೆ.
ಶ್ರೀ. ಬಿ.ಕೆ ವಿಶ್ವನಾಥರಾವ್ - ಇವರು ನಿವೃತ್ತ ಪ್ರಾಧ್ಯಾಪಕರು.
ಶ್ರೀ. ಟಿ.ಕೆ.ಅನಂತರಾಮು - ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯವರು.
ಶ್ರೀ. ಬಿ.ಆರ್ ಗುರುಪ್ರಸಾದ್ - ಇವ್ರು ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿ.
ಇವರಲ್ಲದೆ ಪ್ರಿಸ್ಮ್ ಪ್ರಕಾಶನ ಸಂಸ್ಥೆಯೋರಾದ ಶ್ರೀಮತಿ ವೀಣಾ ರಂಗನಾಥ್, ವಿಜ್ಞಾನ ಕಾರ್ಯಕರ್ತರಾದ ಶ್ರೀ. ಹುಲಿಕಲ್ ನಾಗರಾಜ್, ವಿಜ್ಞಾನ ಬರಹಗಾರರಾದ ಶ್ರೀಮತಿ ಇಂದಿರಾ ಮೂರ್ತಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಡಾ. ಎಂ.ಕೆ ಶ್ರೀಧರ್, ಆಕಾಶವಾಣಿಯ ಡಾ. ಎಚ್.ಆರ್. ಕೃಷ್ಣಮೂರ್ತಿಯವ್ರೂ ಈ ಶಿಬಿರದ ಬೋಧಕವರ್ಗದಲ್ಲಿದಾರೆ.
ಬೋಧನೆಯ ಜೊತೆಗೆ ತಾರಾಲಯ, ಭೂ ವಿಜ್ಞಾನ ವಸ್ತುಪ್ರದರ್ಶನಾಲಯಗಳಿಗೆ ಭೇಟಿ - ವೈಜ್ಞಾನಿಕ ಮಾದರಿಗಳನ್ನು ಮಾಡೋ ತರಬೇತಿಗಳೂ ಇದರಲ್ಲಿವೆ.


ಕಲಿಕೆ ಕನ್ನಡದಲ್ಲೇ ಬೆಸ್ಟು ಅಂದ ಎಚ್ಚೆನ್!


ಬೆಂಗಳೂರು ವಿಜ್ಞಾನ ವೇದಿಕೆ "The Bangalore Science Forum" ಸಂಸ್ಥೆಯನ್ನು ಹುಟ್ಟು ಹಾಕಿದೋರು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಗಾಂಧೀವಾದಿಗಳೂ, ಸ್ವತಂತ್ರ ಹೋರಾಟಗಾರರೂ, ಖ್ಯಾತ ಶಿಕ್ಷಣತಜ್ಞರೂ ಆಗಿದ್ದ ಡಾ. ಎಚ್. ನರಸಿಂಹಯ್ಯನೋರು. ಇವ್ರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳುಸ್ಬೇಕು ಅನ್ನೋದ್ರು ಜೊತೆ ಮಕ್ಕಳ ಕಲಿಕೆ ಕನ್ನಡದಲ್ಲೇ ಇರಬೇಕು ಅಂತಾ ಪ್ರತಿಪಾದುಸ್ತಿದ್ದೋರು. "ಅಯ್ಯಂದಿರಾ, ನಿಮಗೆ ದುಡ್ಡು ಬೇಕೂ ಅಂತಾ ನೀವೂ ಇಂಗ್ಲಿಷ್ ಮಾಧ್ಯಮ ಶಾಲೆ ನಡ್ಸಕ್ ಮುಂದಾಗಿರ್ಬೋದು, ಅದು ಹಾಳಾಗ್ ಹೋಗ್ಲಿ... ಬೋರ್ಡಲ್ ಏನಾದ್ರೂ ಬರ್ಕೊಳ್ಳಿ... ಆದ್ರೆ ಪಾಠ ಮಾಡೋವಾಗ ಮಕ್ಳಿಗೆ ಅರ್ಥ ಮಾಡ್ಸೋದೆ ನಿಮ್ ಉದ್ದೇಶ ಆಗಿದ್ರೆ ಕನ್ನಡದಲ್ಲಿ ಹೇಳ್ಕೊಡ್ರಯ್ಯಾ" ಅಂತಿದ್ರು ಎಚ್ಚೆನ್ ಅವ್ರು ಅಂತ ಬಲ್ಲವರು ನೆನಪು ಮಾಡ್ಕೋತಾರೆ. ಎಚ್ಚೆನ್ ಅವರು ಹೇಳಿದ್ನ ಅರ್ಥ ಮಾಡ್ಕೊಂಡು ಇವತ್ತು ಇಂಥಾ ಅರ್ಥಪೂರ್ಣ ಶಿಬಿರಗಳನ್ನು ನಡುಸ್ತಿರೋ ಬೆಂಗಳೂರು ಸೈನ್ಸ್ ಫೋರಂನೋರಿಗೆ ಒಂದು ಅಭಿನಂದನೆ ಸಲ್ಸೋಣಾ ಗುರು!

ಅಶೋಕ್ ನಾಯಕ್ ಏರಿದ ಎತ್ತರ ನಾಡಿಗೆ ಸ್ಪೂರ್ತಿ

ಬೆಂಗಳೂರಿನಲ್ಲಿರೋ ಹಿಂದುಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರಾಗಿ ಕನ್ನಡಿಗರಾದ ನಾಯಕ್ ಅವ್ರು ನೇಮಕವಾಗಿದಾರೆ ಅನ್ನೋ ಸುದ್ದಿ 2009ರ ಏಪ್ರಿಲ್ 1ರ ’ಕನ್ನಡಪ್ರಭ’ದ ಹನ್ನೊಂದನೇ ಪುಟದಲ್ಲಿ ವರದಿಯಾಗಿದೆ ಗುರು! ಇವರು ಕನ್ನಡಿಗ್ರು ಅನ್ನೋದು ತುಂಬಾ ಸಂತೋಷದ ವಿಷಯ. ಒಬ್ಬ ಕನ್ನಡಿಗ ತಂತ್ರಜ್ಞಾನದ ಮಹತ್ವದ ಸಂಸ್ಥೆಯ ಉನ್ನತ ಹುದ್ದೆಯನ್ನು ಗಳಿಸಿಕೊಳ್ಳೋದು ನಾಡಿನ ಕನ್ನಡಿಗರೆಲ್ರಿಗೂ ಹೆಮ್ಮೆ ತಂದಿದೆ. ಇವ್ರು ಈ ಹುದ್ದೆಗೆ ತಲುಪೋ ಮೊದಲು ಇಂಜಿನಿಯರ್ ಆಗಿ ಎಚ್.ಎ.ಎಲ್ ನ ಬೆಳವಣಿಗೆಗೆ ಮಹತ್ವದ ಕಾಣಿಕೆಗಳನ್ನು ನೀಡಿದಾರೆ. ನಮ್ಮ ಕನ್ನಡಿಗರು ಹೀಗೇ ಹೊಸಹೊಸ ಸಾಧನೆಗಳ ಮಜಲುಗಳನ್ನು ತಲುಪಬೇಕು ಅನ್ನೋದು ನಾಡಿನ ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದು. ಹಾಗೇ ಈ ಸುದ್ದಿ, ಈಗಾಗ್ಲೆ ಎನ್.ಎ.ಎಲ್, ಏ.ಡಿ.ಎ, ಇಸ್ರೋ, ಐಐಎಸ್ಸಿ ಮುಂತಾದ ಸಂಸ್ಥೆಗಳಲ್ಲಿ ದುಡೀತಿರೋ ಕನ್ನಡಿಗರಿಗೂ ಆಯಾ ಸಂಸ್ಥೆಗಳ ಉನ್ನತ ಹುದ್ದೇನ ತಾವೇ ದಕ್ಕಿಸಿಕೊಳ್ಳಬೇಕೂ ಅನ್ನೋ ಸ್ಪೂರ್ತಿ ಕೊಡೋದ್ರಲ್ಲಿ ಅನುಮಾನವಿಲ್ಲ. ಆ ದಿನಗಳು ಬೇಗ ಬರಲಿ ಅಂತಾ ಹಾರೈಸೋಣ ಗುರು! ನಮ್ಮ ನಮ್ಮ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಲು ಈ ಬೆಳವಣಿಗೆ ಸ್ಪೂರ್ತಿ ಕೊಡಲಿ. ಹಾಗೇ ಪರಿಣಿತ ಕನ್ನಡಿಗರೇ ಕನ್ನಡನಾಡಿನ ಏಳಿಗೆಯ ನಾಳೆಗಳ ಆಶಾಕಿರಣ ಅನ್ನೋದ್ರಲ್ಲಿ ಸಂಶಯವಿಲ್ಲ.
Related Posts with Thumbnails