ಶಂಕರಭಟ್ಟರ ಹೊಸ ಹೊತ್ತಿಗೆ ಮಾರುಕಟ್ಟೆಗೆ!

ಕನ್ನಡ ನುಡಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭಾಷಾ ವಿಜ್ಞಾನಿ ಶ್ರೀ ಶಂಕರ ಭಟ್ ಅವರ, ನಾಡಿನ ಜನರಲ್ಲಿ ಬಹಳ ಕುತೂಹಲ ಮೂಡಿಸಿದ್ದ ಹೊಸ ಹೊತ್ತಿಗೆ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಇದೀಗ ಮಾರುಕಟ್ಟೆಗೆ ಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಈ ಸಂದರ್ಭದಲ್ಲೇ ಭಟ್ಟರ ಹೊಸ ಪುಸ್ತಕ ಬಿಡುಗಡೆಯಾಗಿರುವುದು ನಮ್ಮ ನುಡಿ ಎತ್ತ ಕಡೆಗೆ ಸಾಗಬೇಕೆಂಬ ದಾರಿತೋರುಕವಾಗಿದೆ.
ಕನ್ನಡದ್ದೇ ಹೊಸಪದಗಳನ್ನು ಹುಟ್ಟಿಸುವ ಬಗೆ!
ಈ ಹೊತ್ತಿಗೆ ಭಟ್ಟರೇ ಹೇಳುವಂತೆ ಇಂಗ್ಲಿಷ್ ಭಾಷೆಯ ಪದಗಳನ್ನು ಬಲ್ಲ ಕನ್ನಡಿಗರು, ಅದಕ್ಕೆ ಸಮಾನವಾದ ಕನ್ನಡದ್ದೇ ಆದ ಪದಗಳನ್ನು ಹುಡುಕಲು ಸಹಕಾರಿಯಾಗಿದೆ. ಇದರ ಮೊದಲಲ್ಲೇ ಕನ್ನಡದ ಪದಗಳನ್ನು ಕಟ್ಟುವ ಬಗೆಯನ್ನು ವಿವರಿಸಲಾಗಿದೆ. ಕನ್ನಡದ ನಾಮಪದ (ಹೆಸರುಪದ), ಕ್ರಿಯಾಪದ(ಎಸಗುಪದ), ಗುಣವಾಚಕ (ಪರಿಚೆಪದ), ಪ್ರತ್ಯಯ (ಒಟ್ಟು)ಗಳನ್ನು ಬಳಸಲು ಕನ್ನಡದಲ್ಲೇ ಇರುವ ರೀತಿ ನೀತಿಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ. ಇಂದಿನ ದಿನ ಕನ್ನಡದ ಅನೇಕ ಪಂಡಿತರೂ, ಬರಹಗಾರರೂ ಸಾಕಷ್ಟು ಪದಗಳನ್ನು ಹುಟ್ಟು ಹಾಕಿದ್ದು ಅವು ಕನ್ನಡದ್ದೂ ಆಗಿಲ್ಲದೆ, ಸಂಸ್ಕೃತದ್ದೂ ಆಗಿಲ್ಲದೆ ತ್ರಿಶಂಕು ಪದಗಳಾಗಿವೆ. ಕನ್ನಡದ ಬರಹಗಳೆಲ್ಲಾ ಇಂತಹ ತ್ರಿಶಂಕು ಪದಗಳಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ಭಟ್ಟರು ಈ ಪದಕೋಶದ ಬಗ್ಗೆ ಬರೆಯುತ್ತಾ ಹೀಗೆನ್ನುತ್ತಾರೆ :

ಕನ್ನಡದವೆಂದು ಹೇಳಿಕೊಳ್ಳುತ್ತಿರುವ ಪಾರಿಬಾಶಿಕ ಪದಕೋಶವೊಂದನ್ನು ಬಿಡಿಸಿ ನೋಡಿದೆವಾದರೆ ಅದರಲ್ಲಿ ನೂರಕ್ಕೆ ಎಂಬತ್ತರಶ್ಟು (ಇಲ್ಲವೇ ಅದಕ್ಕಿಂತಲೂ ಹೆಚ್ಚು) ತ್ರಿಶಂಕು ಪದಗಳಿರುವುದನ್ನು ಕಾಣಬಹುದು. ಅವುಗಳಿಂದಾಗಿ ಇವತ್ತು ಕನ್ನಡದಲ್ಲಿ ಬರೆದ ವಿಜ್ನಾನದ ಬರಹಗಳನ್ನು ಅರ್‍ತ ಮಾಡಿಕೊಳ್ಳುವುದು ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವೆಂದೆನಿಸುತ್ತದೆ. ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ಈ ರೀತಿ ಸಂಸ್ಕ್ರುತದ ಮೊರೆಹೊಕ್ಕು ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ. ಸಂಸ್ಕ್ರುತ ಪದಗಳಿಗಿರುವ ಮರ್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ.
ಇವೆರಡೂ ತಪ್ಪು ಅನಿಸಿಕೆಗಳು. ಆದರೆ ಇವುಗಳಿಂದಾಗಿ ಇವತ್ತು ಕನ್ನಡದ ಮೇಲೆ ಸಂಸ್ಕ್ರುತದ ಹೊರೆ ಹೆಚ್ಚುತ್ತಿದ್ದು, ಕನ್ನಡ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ್‍ತವಾಗದ ಕಗ್ಗಂಟುಗಳಾಗುತ್ತಿವೆ. ಹೆಚ್ಚು ಹೆಚ್ಚು ತ್ರಿಶಂಕು ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಬರೇ ’ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ತಮ್ಮ ಮೂಲಗುರಿಯನ್ನು ತಲುಪುವುದೇ ಇಲ್ಲ.
ಒಂದು ಹೊಸ ಮನೆಗೆ, ಹೊಸ ಅಂಗಡಿಗೆ ಇಲ್ಲವೇ ಹೊಸ ಉತ್ಪಾದನೆಗೆ ಹೆಸರು ಕೊಡಬೇಕಾದಾಗ ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ ಎಂಬುದನ್ನು ಗಮನಿಸಿದೆವಾದರೆ ನಿಜಕ್ಕೂ ಕನ್ನಡಕ್ಕೆ ಎಂತಹ ಹೀನಾಯ ಸ್ತಿತಿ ಬಂದೊದಗಿದೆಯೆಂಬುದನ್ನು ಊಹಿಸಬಹುದು. ನಮಗೆ ಬೇಕಾಗಿಬರುವ ಎಂತಹ ಪದಗಳನ್ನು ಬೇಕಿದ್ದರೂ ಸಂಸ್ಕ್ರುತದ ಸಹಾಯವಿಲ್ಲದೆ ಕನ್ನಡದಲ್ಲೇನೆ ಉಂಟುಮಾಡಬಲ್ಲೆವು. ಅಂತಹ ಕಸುವು ಕನ್ನಡಕ್ಕಿದೆ. ಇದನ್ನು ತೋರಿಸಿಕೊಡುವುದಕ್ಕಾಗಿಯೇ ನಾನು ಈ ಪದಕೋಶವನ್ನು ತಯಾರಿಸಲು ಹೊರಟಿದ್ದೇನೆ.
ಶಂಕರ ಭಟ್ ಅವರ ಈ ಹೊಸ ಹೊತ್ತಿಗೆ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಇದು ಕನ್ನಡ ನುಡಿ ಸಾಗಬೇಕಾದ ದಾರಿಯನ್ನು ನಿಚ್ಚಳವಾಗಿ ತೋರುತ್ತಿದೆ. ಇಂತಹ ಹೊತ್ತಿಗೆ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಲಿ ಅನ್ನೋದು ನಮ್ಮಾಸೆ. ಬಾಶಾ ಪ್ರಕಾಶನದೋರು ಹೊರತಂದಿರೋ ಈ ಹೊತ್ತಿಗೆ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ದೊರೆಯುತ್ತಿದೆ ಗುರು!

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ಇಂದಿನ ವಿ.ಕ. ಈ ಕೆಳಗಿನ ಭಯಾನಕ ಸುದ್ದಿ ಮಾಡಿದೆ (ದಪ್ಪಕ್ಷರ ನಮ್ಮದು). ಉಗ್ರರು ಬೆಂಗಳೂರನ್ನು ಮುಂದಿನ ಗುರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ, ಮತ್ತು ಉಗ್ರರ ’ಯೋಜನೆ’ಯ ಬಗ್ಗೆ ಇಷ್ಟೆಲ್ಲ ಮಾಹಿತಿ ಸಿಕ್ಕಿರುವಾಗ ಆಗಬಹುದಾದ ಅನಾಹುತವನ್ನು ತಡೆಗಟ್ಟಲು ಏನೇನು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಅಂತ ಒಂದ್ ಸೊಲ್ಪ ಪೋಲೀಸರಿಗೆ, ನಿಮ್ಮ ನಿಮ್ಮ ಎಮ್ಮೆಲ್ಲೆ, ಎಂಪಿ, ಕಾರ್ಪೊರೇಟರುಗಳಿಗೆ ಫೋನು ಮಾಡಿ ಕೇಳ್ತೀರಾ? ಹಾಗೇ ಈ ಸುದ್ದಿಯನ್ನ ನಿಮಗೆ ಗೊತ್ತಿರುವವರಿಗೆಲ್ಲಾ ಕಳಿಸಿ ಜನರು ಕೂಡಲೆ ಎಚ್ಚೆತ್ತುಕೊಳ್ಳುವಂತೆ ಮಾಡಿ.

ಬೆಂಗಳೂರು ಮುಂದಿನ ಗುರಿ, ಹುಷಾರಾಗಿರಿ

ಬೆಂಗಳೂರು: ಮುಂಬೈಯ ಮಾರಣ ಹೋಮ ಘಟನೆ ಹೊಣೆ ಹೊತ್ತಿರುವ ಡೆಕ್ಕನ್ ಮುಜಾಹಿದೀನ್ ಸಂಘಟನೆಯು ಬೆಂಗಳೂರನ್ನು ತನ್ನ ಮುಂದಿನ ಟಾರ್ಗೆಟ್ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

ಮುಂಬಯಿಯಲ್ಲಿ ದಾಳಿ ನಡೆದ 37 ದಿನದೊಳಗೆ ಬೆಂಗಳೂರು ನಗರದ ಪಂಚತಾರಾ ಹೋಟೆಲ್‍ಗಳು ಹಾಗೂ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಿ, ಅದೇ ಮಾದರಿಯಲ್ಲಿ ಹತ್ಯಾಕಾಂಡ ನಡೆಸಲು ಉಗ್ರರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ರಾಜ್ಯ ಪೋಲೀಸರಿಗೆ ಲಭ್ಯವಾಗಿದೆ.

ಮೂವರು ಉಗ್ರರ ಬಂಧನ

ಇದರ ಬೆನ್ನಲ್ಲೇ ಡೆಕ್ಕನ್ ಮುಜಾಹಿದೀನ್ ಸಂಘಟನೆಗೆ ಸೇರಿದವರೆನ್ನಲಾದ ಹಾಜಿ, ಖಾದರ್ ಹಾಗೂ ಮತ್ತೊಬ್ಬನನ್ನು ರಾಜ್ಯ ಪೋಲೀಸರು ವಿರಾಜಪೇಟೆ ಸಮೀಪದ ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ.

ಕಾಸರಗೋಡಿನ ಬೇಕಲ್ ಕೋಟೆ ಬಳಿ ಉಗ್ರರು ಬಳಸಿರುವ ಮೋಟಾರ್ ದೋಣಿಯನ್ನು ಕರಾವಳಿ ಪಡೆ ವಶಕ್ಕೆ ತೆಗೆದುಕೊಂಡಿದೆ. ಬಂಧಿತರು ಈ ದೋಣಿ ಮೂಲಕ ರಾಜ್ಯ ಪ್ರವೇಶಿಸಿರಬಹುದು. ಇವರಿಗೂ ಮುಂಬಯಿ ದಾಳಿಗೂ ಸಂಬಂಧವಿರುವ ಸಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಡೆಕ್ಕನ್ ಮುಜಾಹಿದೀನ್ ಕರ್ನಾಟಕದಲ್ಲೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಕೊಂಡಿರುವ ಅನುಮಾನವಿದೆ. ಈ ಸಂಬಂಧ ರಾಜ್ಯ ಪೋಲೀಸರು ಎರಡು ದಿನಗಳಿಂದ ಶೋಧ ನಡೆಸುತ್ತಿದ್ದು, ಬೆಳಗಾವಿ, ಹುಬ್ಬಳ್ಳಿ, ಉಡುಪಿಯಲ್ಲಿ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉಗ್ರ ಸಂಘಟನೆಗೂ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿಯೊಂದರ ಉದ್ಯೋಗಿಗಳಿಗೂ ಸಂಪರ್ಕವಿದ್ದು, ಈ ಎಂಜಿನಿಯರ್‍ಗಳ ನೆರವಿನಿಂದಲೇ ಬೆಂಗಳೂರು ನಗರದಲ್ಲಿ ದಾಳಿ ನಡೆಸಲು ಉಗ್ರರು ಯೋಜನೆ ಹಾಕಿದ್ದಾರೆ.

ಬ್ರಿಜ್ ಹೋಟೆಲ್ ಮುಖ್ಯ ಗುರಿ

ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿಂಡ್ಸರ್ ಮ್ಯಾನರ್ ಹೋಟೆಲ್ ಅನ್ನು ಉಗ್ರರು ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಇದನ್ನು ತಮ್ಮ ’ಕೋಡ್ ವರ್ಡ್’ನಲ್ಲಿ ’ಬ್ರಿಜ್ ಹೋಟೆಲ್’ ಎಂದು ಗುರುತಿಸಿಕೊಂಡಿದ್ದಾರೆ. ವಿಂಡ್ಸರ್ ಮ್ಯಾನರ್ ಹೋಟೆಲ್ ಪ್ರವೇಶಿಸಲು ಸೇತುವೆ ಮೇಲೆ ಹಾದು ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಉಗ್ರರು ಬ್ರಿಜ್ ಹೋಟೆಲ್ ಎಂದು ಗುರುತಿಸಿರುವ ಸಾಧ್ಯತೆ ಇದೆ.

ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ

ಬೆಂಗಳೂರೂ ಸೇರಿದಂತೆ ರಾಜ್ಯದಲ್ಲಿಯೂ ಡೆಕ್ಕನ್ ಮುಜಾಹಿದೀನ್ ಸಂಘಟನೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿದೆ.

ಕೇಂದ್ರದ ಸೂಚನೆ ಮೇರೆಗೆ ಸೂಕ್ಷ್ಮ ಪ್ರದೇಶಗಳಿಗೆ, ಪ್ರಮುಖ ಸ್ಥಳಗಳಿಗೆ ಹಾಗೂ ಪಂಚತಾರಾ ಹೋಟೆಲ್‍ಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಹೇಳಿದ್ದಾರೆ.


KARNATIQUEನಲ್ಲಿ ಓದಿ: Windsor Manor, Bengaluru: the Next Target of Terrorists?

ಮುಂಬೈ: ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ

ನಿನ್ನೆ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ನಾವೆಲ್ಲ ಕೇಳೇ ಇದ್ದೇವೆ, ಈಗಲೂ ಕೇಳುತ್ತಿದ್ದೇವೆ. ಇದೊಂದು ರೀತಿಯ ಯುದ್ಧವೇ ಸರಿ. ಹಿಂದೆ ಕನ್ನಡನಾಡೇ ಆಗಿದ್ದ, ಈಗ ಮಹಾರಾಷ್ಟ್ರವಾಗಿರುವ ನಾಡಿನಲ್ಲಿ ನಡೆಯುತ್ತಿರುವ ಈ ದಾಳಿಗಳನ್ನು ನೋಡಿದರೆ ನಮ್ಮ ಕರುಳು ಕಿವುಚಿದಂತಾಗುತ್ತದೆ. ಹಾಗೆಯೇ ಇಂಥದ್ದೇ ದಾಳಿಯು ನಾಳೆ ಬೆಂಗಳೂರಿನಲ್ಲೋ ಧಾರವಾಡದಲ್ಲೋ ಆಗುವುದಿಲ್ಲ ಎನ್ನುವುದಕ್ಕಾದರೂ ಏನು ಗ್ಯಾರಂಟಿ? ನಮ್ಮ ವ್ಯವಸ್ಥೆ ಅಂಥದ್ದೇನಾದರೂ ನಡೆದರೆ ಅದನ್ನು ತಡೆಗಟ್ಟುತ್ತದೆ ಎಂಬ ನಂಬಿಕೆಯೇನಾದರೂ ನಮಗಿದೆಯೆ?

ಮೇಲಿಂದಮೇಲೆ ಭಾರತದಲ್ಲೆಲ್ಲ ಆಗುತ್ತಿರುವ ಈ ರೀತಿಯ ದಾಳಿಗಳನ್ನು ಎದುರಿಸುವ ಶಕ್ತಿಯೇ ನಮಗೆ ಇಲ್ಲವೋ ಏನೋ ಎಂದು ಜನರಿಗೆ ಅನ್ನಿಸಿಬಿಟ್ಟಿದೆ. ಆದರೆ ಹಾಗಲ್ಲ. ಇವತ್ತಿನ ದಿನ ಮರಾಠಿ ಯುವಕರೆಲ್ಲ ಒಂದಾಗಿ, ತಮ್ಮ ನಾಡು-ನುಡಿಗಳ ಬಗೆಗಿನ ಒಲವು ಮತ್ತು ಕಾಳಜಿಗಳನ್ನು ಕೈಬಿಡದೆ ಸರಿಯಾದ ವ್ಯವಸ್ಥೆಯನ್ನು ಕಟ್ಟಿದ್ದರೆ, ತಮ್ಮ ನಾಡನ್ನು ಭದ್ರಮಾಡಿದ್ದರೆ ಈ ಪಾಡು ಮಹಾರಾಷ್ಟ್ರಕ್ಕೆ ಆಗುತ್ತಿರಲಿಲ್ಲ. ಹಾಗೆಯೇ ಕನ್ನಡದ ಯುವಕರೂ ಒಗ್ಗೂಡಿ ನಮ್ಮ ನಾಡು-ನುಡಿಗಳ ಬಗೆಗಿನ ಒಲವು-ಕಾಳಜಿಗಳನ್ನು ಕೈಬಿಡದೆ ನಾಡನ್ನು ರಕ್ಷಿಸುವ ಪಣ ತೊಟ್ಟರೆ ಈ ಭಯೋತ್ಪಾದಕರಷ್ಟನ್ನೇ ಏಕೆ, ಪ್ರಪಂಚದ ಯಾವುದೇ ದುಷ್ಟಶಕ್ತಿಯನ್ನೂ ತಡೆಯಲಾಗದೆಯೇನಿಲ್ಲ.

ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿ.ವಿ.ಜಿ. ಹೇಳುವ ಹಾಗೆ -

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ|
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ||
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕೊಡದಿಹುದೆ|
ಬಿದ್ದ ಮನೆಯನು ಕಟ್ಟೊ ಮಂಕುತಿಮ್ಮ||

ಹೌದು, ಬಿದ್ದಿರುವ ಶಾಂತಿಯೆಂಬ ಮನೆಯನ್ನು ಮತ್ತೆ ನಿಲ್ಲಿಸುತ್ತೇವೆ. ಶುದ್ಧಿಸುತ್ತೇವೆ ಈ ಧರೆಯನ್ನು ಮರಳಿ ಯುವಶಕ್ತಿಯ ಮಳೆಯಿಂದ. ನಮ್ಮ ಕೊಯ್ಲನ್ನು ಕದಿಯುವ ನಾಯಿಗಳನ್ನು ಕೊಂದು ಮತ್ತೆ ಬೆಳೆಯನ್ನು ಬೆಳೆಯುತ್ತೇವೆ. ಸರಿಪಡಿಸುತ್ತೇವೆ ನಮ್ಮ ಹದಗೆಟ್ಟ ವ್ಯವಸ್ಥೆಯನ್ನು. ಹೊಡೆದೋಡಿಸುತ್ತೇವೆ ಭ್ರಷ್ಟ ರಾಜಕಾರಣಿಗಳನ್ನು, ತರುತ್ತೇವೆ ಹೊಸ ಚೇತನವನ್ನು. ನಿಲ್ಲಿಸುತ್ತೇವೆ ನರಸತ್ತವರ ಹಾವಳಿಯನ್ನು. ಬನ್ನಿ, ಭಾರತವನ್ನು ಕಾಪಾಡುವ ಬಗೆಯೇನೆಂಬುದನ್ನು ಎಲ್ಲರಿಗೂ ತೋರಿಸೋಣ! ಎಚ್ಚೆತ್ತುಕೊಳ್ಳಿ! ಏಳಿ! ಎದ್ದೇಳಿ ಕನ್ನಡಿಗರೆ!

KARNATIQUEನಲ್ಲಿ ಓದಿ: State-level NSG Is the Need of the Hour: Deshmukh

ಈ ಪ್ಯಾಕಿನಲ್ಲಿ ವ್ಯಾಲ್ಯೂ ಇಲ್ಲ!

ಫೋನು ಇಂಟರ್ನೆಟ್ಟು ಅಂತ ಮಾರ್ಕೊಂಡು ಕುಂತಿದ್ದ ಏರ್ಟೆಲ್ ನೋರು ಇತ್ತೀಚೆಗೆ ಮನೆಯೊಳ್ಗಿನ ಟೀವಿಗೂ ಹೊಕ್ಕೋಣ ಅಂತ ಗುರಿ ಇಟ್ಕೊಂಡು ಡಿಜಿಟಲ್-ಟಿವಿ ಅಂತ ಹೊಸದೊಂದು ಯೋಜ್ನೆ ಹಾಕಿದಾರೆ. ಇದರ ಬಗ್ಗೆ ಮಾಹಿತಿಯನ್ನ ಮನ್-ಮನೆಗೂ ಸುತ್ತೋಲೆ ಹಂಚ್ತಿದಾರೆ. ಇದ್ರಲ್ಲಿ ಒಂದು ಬಾಳ ಒಳ್ಳೇ ವಿಷ್ಯ ಏನಂದ್ರೆ ನಾಡಲ್ಲೆಲ್ಲಾ ಈ ಯೋಜ್ನೆ ಬಗ್ಗೆ ಮಾಹಿತಿ ಕೊಡೋ ಸುತ್ತೋಲೆ ಪೂರ್ತಿ ಕನ್ನಡದಾಗೇ ಇದೆ. ಯೋಜ್ನೆ ವಿವರ, ಯಾವ್ಯಾವ ವಾಹಿನಿಗಳಿಗೆ ಎಷ್ಟೆಷ್ಟು ದುಡ್ಡು ಅಂತೆಲ್ಲಾ ಕನ್ನಡದಲ್ಲೇ ಅಚ್ಚ್ ಹಾಕ್ಸಿ, ಕರ್ನಾಟಕದಲ್ಲಿ ಗ್ರಾಹಕರ ನಾಡಿ ಮಿಡಿತ ಅರ್ಥ ಮಾಡ್ಕೊಂಡಿದೀವಿ ಅಂತ ಹೇಳ್ತಿರೋ ಹಾಗಿದೆ ಇವ್ರು. ಇದು ಕನ್ನಡ ನಾಡಿನ ಗ್ರಾಹಕರಿಗೆ ಖಂಡಿತವಾಗ್ಲೂ ಒಳ್ಳೇ ಸುದ್ದಿ!

ಯೋಜ್ನೆ ಬಗ್ಗೆ ಮಾಹಿತಿಯೇನೋ ಚೆನ್ನಾಗಿ ನೀಡಿದಾರೆ, ಯೋಜ್ನೆ ಹೆಂಗೋ? ಅಂತ ನೋಡಿದ್ರೆ ಯಾಕೋ ಇಲ್ಲಿ ಇವ್ರು ಎಡ್ವಿರೋ ಹಾಗೆ ಕಾಣ್ತಿದೆ ಗುರು! ಬೆಂಗ್ಳೂರಲ್ಲಿ ಈ ಹಿಂದೆ ಎಫ್.ಎಮ್ ವಿಷ್ಯದಲ್ಲೂ ತಡವಾಗಿ ಆದಂತೆ, ಇವ್ರೂ ಯಾಕೋ ಕರ್ನಾಟಕದ ಗ್ರಾಹಕರ ನಿಜವಾದ ಅವಶ್ಯಕಥೆಯನ್ನೇ ತಿಳ್ಕೊಳೋ ಪ್ರಯತ್ನ ಮಾಡಿಲ್ಲ ಅಂತ ಎದ್ದು ಕಾಣ್ತಿದೆ. ಉದಾಹರ್ಣೆಗೆ ಸೌತ್-ವ್ಯಾಲ್ಯೂ-ಪ್ಯಾಕ್ ಅಂತ ಹೆಸರಿನಡಿ ಕರ್ನಾಟಕದಲ್ಲಿ ಮಾರ್ತಿರೋ ವಾಹಿನಿಗಳನ್ನ ನೋಡಿದರೆ, ಕರ್ನಾಟಕದಲ್ಲಿ ಟಿವಿ ನೋಡುಗರಿಗೆ ಏನು ಬೇಕು, ಏನು ಬೇಡ ಅನ್ನೋದೇ ಇವ್ರಿಗೆ ಅರ್ಥ ಆಗಿಲ್ಲ ಅನ್ಸತ್ತೆ ಗುರು! ಒಟ್ಟು ಇರೋ ಕನ್ನಡ ವಾಹಿನಿಗಳಲ್ಲಿ ಶೇಕಡ ೫೦ ರಷ್ಟು ಮಾತ್ರ ಕಾಣ್ತಿವೆ ಈ ಪ್ಯಾಕಿನಲ್ಲಿ! ಕನ್ನಡ ನಾಡಿನ ಗ್ರಾಹಕರಿಗೆ ಇರೋ ಎಲ್ಲಾ ವಾಹಿನಿಗಳನ್ನೂ ನೋಡುವ ಅಸೆಯನ್ನ ಏರ್ಟೆಲ್ಲಾಗ್ಲಿ, ಡಿಶ್, ಟಾಟಾ-ಸ್ಕೈ ಅಥವಾ ರಿಲಯನ್ಸಾಗ್ಲಿ ಪೂರೈಸಿದಾಗ್ಲೇ ಈ ಪ್ಯಾಕಿನಲ್ಲಿ ವ್ಯಾಲ್ಯೂ ಕಾಣೋದು.

ಇದು ಸರಿ ಹೋಗಬೇಕು. ಒಂದು ಭಾಷೆಯ ಜನರಿಗೆ ಅಂತ ಹೇಗೆ ಅವರ ಭಾಷೆಯಲ್ಲೇ ಸುತ್ತೋಲೆ ಮುದ್ರಿಸಿದಾರೋ, ಒಂದು ನಾಡಿನ ಎಫ್.ಎಮ್ ವಾಹಿನಿಯಲ್ಲಿ ಹೇಗೆ ಅಲ್ಲಿಯ ಭಾಷೆಯ ಹಾಡುಗಳೇ ಕೇಳುತ್ತವೆಯೋ, ಹಾಗೆಯೇ ಅವರ ಭಾಷೆಯಲ್ಲಿ ದೊರೆಯೋ ಎಲ್ಲಾ ಟಿ.ವಿ ವಾಹಿನಿಗಳೂ ಆ ಜನರಿಗೆ ಸಿಗುವಂತೆ ಮಾಡೋದೇ ಈ ಏರ್ಟೆಲ್ ಮತ್ತಿತರರ ಬಿಜ್ನೆಸ್ ತಂತ್ರವಾಗಬೇಕು. ಇದನ್ನ ಸೇವಾದಾರರು ಅರಿಯೋದಲ್ದೆ, ನಾವೆಲ್ರೂ ಗ್ರಾಹಕರಾಗಿ ಬೇಡಿಕೆಯ ಮೂಲಕ ಒತ್ತಾಯ ಮಾಡಬೇಕು ಗುರು.

ಎಫ್.ಎಂಗಳು ಅರಿತ ದಿಟ! ಕಲಿತ ಪಾಟ!!

ಕರ್ನಾಟಕದಲ್ಲಿ ರೇಡಿಯೋ ನಡ್ಸಿ ಮಾರುಕಟ್ಟೆ ಗೆಲ್ಲೋಕೆ ಇರೋ ಒಂದೇ ದಾರಿ ಕನ್ನಡ ಅನ್ನೋದನ್ನ ಅಚ್ಚುಕಟ್ಟಾಗಿ ಅರ್ಥ ಮಾಡ್ಕೊಂಡು, ಬರೀ ಕನ್ನಡ ಹಾಡು ಹಾಕಿ, ಕನ್ನಡದಲ್ಲೇ ಸಕತ್ ಆಗಿ ಕಾರ್ಯಕ್ರಮ ನಡೆಸ್ಕೊಂಡು ಬಂದ ಬಿಗ್ ಎಫ್.ಎಮ್ ಇದೀಗ ಎಫ್.ಎಮ್ ರೇಡಿಯೋ ಮಾರುಕಟ್ಟೆಯಲ್ಲಿ ನಂಬರ್ 1 ಆಗಿದೆಯಂತೆ! ಅಷ್ಟೇ ಅಲ್ಲ, ನಂಬರ್ 2, 3 ಹಾಗೂ 4ನೇ ಸ್ಥಾನದಲ್ಲಿರೋ ವಾಹಿನಿಗಳು ಕೂಡಾ ಕನ್ನಡ ಹಾಡು ಹಾಕೋ ಸ್ಟೇಶನ್ನುಗಳೇ ಆಗಿದ್ದು ಬೆಂಗಳೂರಿನಲ್ಲಿ ಕನ್ನಡಕ್ಕಿರೋ ಅಗಾಧ ಮಾರುಕಟ್ಟೆನಾ ಎತ್ತಿ ತೋರಿಸುತ್ತಾ ಇದೆ ಗುರು!
ಬೆಂಗಳೂರಲ್ಲಿ ಕನ್ನಡವಿಲ್ಲ ಅನ್ನೋ ಸುಳ್ಳು ನಂಬಿ ಕೆಟ್ಟರು!
ಕೇವಲ ಎರಡು-ಮೂರು ವರ್ಷಗಳ ಹಿಂದೆ "ಬೆಂಗಳೂರು ಕಾಸ್ಮೋಪಾಲಿಟಿನ್ನು. ಇಲ್ಲಿ ಕನ್ನಡದೋರು ಬರೀ 35%. ಇಲ್ಲಿ ಕನ್ನಡಕ್ಕೆ ಮಾರುಕಟ್ಟೆನೇ ಇಲ್ಲ, ಬೆಂಗಳೂರಲ್ಲೇನಿದ್ರೂ ಹಿಂದಿನೇ ನಡೆಯೋದು" ಅಂತ ದೊಡ್ಡ ಸುಳ್ಳನ್ನು ನಂಬ್ಕೊಂಡು ಹಿಂದಿಗೆ ಇಲ್ಲದಿರೋ ಮಹತ್ವ ಕೊಟ್ಟು, ಕನ್ನಡಕ್ಕೆ ಸಹಜವಾಗೇ ಇದ್ದ ದೊಡ್ಡ ಮಾರುಕಟ್ಟೆನಾ ಕಡೆಗಣಿಸಿ ವಹಿವಾಟು ಶುರು ಮಾಡಿದೋರಿಗೆಲ್ಲಾ ದಿಟ ನಿಧಾನವಾಗಿ ಅರ್ಥ ಆದ ಹಾಗಿದೆ. ಕನ್ನಡಕ್ಕೆ ಮಾರುಕಟ್ಟೆ ಇಲ್ಲ ಅಂತಿದ್ದೋರ ಬಾಯಿಗೆಲ್ಲ ದೊಡ್ಡ ಬೀಗ ಬಿದ್ದು ಸುಮಾರು ದಿವಸಾನೇ ಆಯ್ತು. ಇದೀಗ ಮತ್ತೊಮ್ಮೆ ಕನ್ನಡಿಗರಲ್ಲೇ ತಮ್ಮ ನುಡಿಗಿರೋ ತಾಕತ್ತಿನ ಬಗ್ಗೆ ನಂಬಿಕೆ ಹುಟ್ಸೋ ಹಾಗೆ ಬೆಂಗಳೂರಿನ ನಂಬರ್ ಒನ್, ಟೂ, ತ್ರೀ ರೇಡಿಯೋಗಳೆಲ್ಲಾ ಕನ್ನಡ ಅಪ್ಪಿಕೊಂಡಿದ್ದಕ್ಕೇ ಆ ಸ್ಥಾನ ಪಡೆದದ್ದನ್ನು ಗಮನಿಸಬೇಕಿದೆ.
ಮೊದಲು ಮೆಣಸಿನಕಾಯಿ ಚುರುಕಾಯ್ತು!

ಆವತ್ತು ಸನ್ ಅವರ SFM ಪೂರ್ತಿ ಕನ್ನಡ ಹಾಕ್ತಿದ್ದೋರು ಇದ್ದಕ್ಕಿದ್ದ ಹಾಗೆ ಹಿಂದಿ ಶುರು ಮಾಡಿದಾಗ ಕನ್ನಡ ಮನರಂಜನೆಯ ಆ ಖಾಲಿಯಾದ ಸ್ಥಾನಾನ ತುಂಬೋ ಅವಕಾಶ ತನ್ನದು ಮಾಡಿಕೊಂಡಿದ್ದು, ರೇಡಿಯೋ ಮಿರ್ಚಿ. ಮಿರ್ಚಿ 100% ಕನ್ನಡ ಅನ್ನಕ್ ಶುರು ಮಾಡ್ತಿದ್ದ ಕೆಲವೇ ದಿನಗಳಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿತು.

ಒಂದರ ಹಿಂದೊಂದು ಸಾಲಾಗಿ...

ಇದಾದ ನಂತರ ಇತರೆ ವಾಹಿನಿಗಳಲ್ಲೂ ಕನ್ನಡದ ಅನಿವಾರ್ಯತೆ ಪ್ರಭಾವ ಬೀರಿತು. ಮುಂದೆ ಬೆಂಗಳೂರಿನ ಅತ್ಯಂತ ಜನಪ್ರಿಯ ರೇಡಿಯೋ ಸ್ಟೇಷನ್ ಅಂದ್ರೆ ಅಲ್ಲಿ ಕನ್ನಡವೇ ಪ್ರಧಾನ ಅನ್ನೋ ಪರಿಸ್ಥಿತಿ ಹುಟ್ತು. ಕೆಲವು ಚಾನೆಲ್ಲುಗಳು ಬೇರೆ ಬೇರೆ ಪ್ರಮಾಣದಲ್ಲಿ ಹಿಂದಿ ಕನ್ನಡ ಬೆರೆಸೋ ಪ್ರಯೋಗ ಮಾಡಿದರೂ ಅಂತಹ ಕ್ರಮ ಅವುಗಳಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆಯುಂಟು ಮಾಡಿತೆಂದೇ ಹೇಳಬೇಕು. ಇದಕ್ಕೆ ಸಾಕ್ಷಿ ಅಂದ್ರೆ ಹಿಂದೆಲ್ಲಾ ಬೊಂಬಾಟ್ ಕನ್ನಡ : ಬೊಂಬಾಟ್ ಹಿಂದಿ ಅನ್ನುತ್ತಿದ್ದ ಫೀವರ್ 104 ಕಳೆದೊಂದು ವಾರದಿಂದ ಬೊಂಬಾಟ್ ಕನ್ನಡ ಅಷ್ಟೆ ಅನ್ನಕ್ಕೆ ಶುರು ಮಾಡಿರೋದು.

ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?
ಇದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು! ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದೇ ಸರಿಯಾದದ್ದು. ಬೆಂಗಳೂರಿನಂತಹ ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡದಲ್ಲಿ ರೇಡಿಯೋ ನಡೆಸಿದ್ರೆ ಲಾಭ ಅಂತ ಎಫ್.ಎಂ ಗಳಿಗೆ ಮನವರಿಕೆ ಆಗಲು ಇಷ್ಟು ಕಾಲ ಬೇಕಾಯ್ತು. ಆದ್ರೂ ಕನ್ನಡ ಕಾಮನ ಬಿಲ್ಲು ಅಂತ ಗಳಿಗೆಗೊಮ್ಮೆ ವದರೋ ರೈನ್ ಬೋ ಗೆ ಮಾತ್ರಾ ಇದು ಮನವರಿಕೆ ಆದಂಗಿಲ್ಲ. ಸರ್ಕಾರಿ ಪ್ರಾಯೋಜಿತ ವಾಹಿನಿ ಆದ್ದರಿಂದ ಇದರಲ್ಲಿ ನಿರಂತರವಾಗಿ ಕನ್ನಡಿಗರ ಮೇಲಿನ ಹಿಂದಿ ಹೇರಿಕೆ ನಿರಾತಂಕವಾಗಿ ನಡೆದೇ ಇದೆ. ಬೆಂಗಳೂರಲ್ಲಿ ಜನಕ್ಕೆ ಬೇಕಿರೋದು ಕನ್ನಡದ ಮನರಂಜನೆ ಅಂತ ಅವ್ರಿಗೆ ಹೇಳೋರು ಯಾರು ಗುರು?

ವಲಸೆ ನಿಯಂತ್ರಣ ಕಾಯ್ದೆ ಜಾರಿಗೊಳ್ಳಲಿ!

ನಮ್ಮ ರಾಜ್ಯದ ಕಾರ್ಮಿಕ ಮಂತ್ರಿಗಳಾದ ಶ್ರೀ ಬಚ್ಚೇಗೌಡರು ವಲಸೆ ಬಂದಿರೋ ಜನರ ಸುರಕ್ಷತೆ ಬಗ್ಗೆ ಗಮನ ಕೊಡೋಕೆ, ಅವರ ಚಟುವಟಿಕೆಗಳ ಮೇಲೆ ನಿಗಾ ಇಡೋಕೆ, ಎಲ್ಲ ವಲಸಿಗರಿಗೂ ವಲಸೆ ಪ್ರಮಾಣ ಪತ್ರ ಕೊಡಬೇಕು ಅನ್ನೋ ಸಲಹೆ ಕೊಟ್ಟಿದ್ದಾರೆ ಗುರು. ವಲಸೆ ಬಂದು ಪುಂಡಾಟಿಕೆ ಮಾಡೋರನ್ನು ಕಂಡಾಗ ರಕ್ಷಣೆ ಯಾರಿಗೆ ಬೇಕು ಅನ್ನೋ ವಾದಾನ ಪಕ್ಕಕ್ಕಿಟ್ಟು ನೋಡುದ್ರೆ ವಲಸಿಗರ ಮೇಲೊಂದು ಕಣ್ಣಿಡಬೇಕು ಅನ್ನೋ ಅವರ ಮಾತೆನೋ ಸರಿಯಾಗೇ ಇದೆ, ಆದ್ರೆ ನಿಜವಾಗಿಯೂ ಆಗಬೇಕಾಗಿರೋ ಕೆಲ್ಸ ಇನ್ನೂ ದೊಡ್ಡದಿದೆ ಗುರು!
ಅಂತರರಾಜ್ಯ ವಲಸೆ ನಿಯಂತ್ರಣ ಕಾಯಿದೆ ಬೇಕು
ಕರ್ನಾಟಕಕ್ಕೆ ಬೀಸಿದ ಆರ್ಥಿಕ ಬದಲಾವಣೆಯ ಗಾಳಿಯಲ್ಲಿ ಎಲ್ಲೆಲ್ಲಿಂದಲೋ ಜನ ದಂಡಿಯಾಗಿ ಕರ್ನಾಟಕಕ್ಕೆ ವಲಸೆ ಬಂದ್ರು. ನಮ್ಮ ರಾಜ್ಯದ ಸರ್ಕಾರಾನೂ ನಮ್ಮ ನೆಲ, ಜಲ, ವಿದ್ಯುತ್ ಹೀಗೆ ಇರೋ ಬರೋ ಸಂಪತ್ತನ್ನೆಲ್ಲ ಎಗ್ಗಿಲ್ಲದೆ ಅಗ್ಗದ ದರಕ್ಕೆ ನೀಡಿತು. ಹಾಗೆ ನೀಡೋವಾಗ ಈ ನೆಲದ ಮಕ್ಕಳಿಗೆ ಕೆಲಸ ಸಿಗುತ್ತಾ? ಕರ್ನಾಟಕ-ಕನ್ನಡಿಗನ ಉದ್ಧಾರ ಆಗುತ್ತಾ ? ಅಂತ ಒಂದು ನೋಡದೆ ಕಣ್ಣು ಮುಚ್ಚಿ ನಿದ್ದೆಗೆ ಹೋಗಬಿಡ್ತು. ಹೊರರಾಜ್ಯಗಳಿಂದ ಅನಿಯಂತ್ರಿತವಾಗಿ ಹರಿದು ಬಂದ ಕನ್ನಡೇತರರ ವಲಸೆನಾ ಕಂಡು ಕಾಣದಂತೆ ಸುಮ್ಮನಾಗ್ ಬಿಡ್ತು. ಅದರಿಂದಾ ಆಗಿದ್ದೇನು? ಅವ್ಯಾವಹತ ವಲಸೆಯಿಂದ ನಮ್ಮ ಬೆಂಗಳೂರಿನ ಮೂಲಭೂತ ಸೌಕರ್ಯ ಕುಸಿದೋಗಿದೆ, ಅಪರಾಧ ಪ್ರಕರಣಗಳು ಯದ್ವಾ ತದ್ವಾ ಏರಿವೆ, ಕನ್ನಡಿಗನಿಗೆ ತನ್ನ ನೆಲದಲ್ಲಿ ಕೆಲಸ ಸಿಗದೇ ಪರದಾಡೋ ಸ್ಥಿತಿ ಬಂದಿದೆ. ಕನ್ನಡಿಗರು ಸೌಜನ್ಯಶೀಲರು, ವಿಶಾಲ ಮನೋಭಾವದವರು, ಶಾಂತಿಪ್ರಿಯರು ಅಂತಾ ತಾನೇ ಇಲ್ಲಿಗೆ ಬರೋ ಪ್ರತಿಯೊಬ್ಬ ವಲಸಿಗನೂ ನಮ್ಮ ಮೇಲೆ ಸವಾರಿ ಮಾಡಕ್ಕೆ ಹೋಗೋದು? ಹಾಗಿದ್ದಲ್ಲಿ, ಇದಕ್ಕಿರೋ ಪರಿಹಾರ ಏನ್ ಗುರು? ಅನಿಯಂತ್ರಿತ ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರಾಜ್ಯದವರ ಜೊತೆ ಸೇರಿ ಕೆಲಸ ಮಾಡಬೇಕು, ಕೇಂದ್ರದ ಮೇಲೆ ಒತ್ತಾಯ ತಂದು ಅನಿಯಂತ್ರಿತ ಅಂತರ್ ರಾಜ್ಯ ವಲಸೆಗೆ ಕಡಿವಾಣ ಹಾಕಬೇಕು. ಈ ಸಮಸ್ಯೆಯಿಂದ ನರಳ್ತಿರೋ ಎಲ್ಲಾ ರಾಜ್ಯಕ್ಕೂ ನ್ಯಾಯ ದೊರಕಿಸಬೇಕು.
ವಲಸೆ ಬೇಡ್ವೇ ಬೇಡ್ವಾ?
ಹಾಗಿದ್ರೆ ವಲಸೆ ಬೇಡ್ವೇ ಬೇಡ್ವಾ ಅನ್ನೋ ಪ್ರಶ್ನೆ ಬರುತ್ತೆ. ವಲಸಿಗರು ಒಂದು ನಾಡು ಕಟ್ಟಲು ಎಷ್ಟು ಅಗತ್ಯ ಅನ್ನೋ ಅರಿವು ಎಲ್ಲರಿಗೂ ಇದೆ. ಆದರೆ ಬೇಕಿರೋದು ಅನಿಯಂತ್ರಿತ ವಲಸೆಗೆ ಕಡಿವಾಣ. ಹೀಗೆ ಕಡಿವಾಣ ಹಾಕಿದರೆ ಆಗುವುದು ಅನಿಯಂತ್ರಿತ ಅಂತರ ರಾಜ್ಯ ವಲಸೆಯ ನಿಯಂತ್ರಣ. ನಮ್ಮ ಜನರ ಅವಕಾಶ, ಬದುಕನ್ನು ಕಿತ್ತುಕೊಳ್ಳೂವ ವಲಸೆ ನಮಗೆ ಬೇಡ. ನಮ್ಮವರ ಬದುಕನ್ನು ಹಸನು ಮಾಡುವ ವಲಸೆ ಬೇಕು. ನಮ್ಮೂರಲ್ಲಿ ನಮ್ಮೋರ ಮೇಲೆ ಸವಾರಿ ಮಾಡೋ ವಲಸೆ ನಮಗೆ ಬೇಡ, ನಮ್ಮ ಊರಲ್ಲಿ ನಮ್ಮ ಜನರ ಉದ್ಧಾರಕ್ಕೆ ಪೂರಕವಾದ ವಲಸೆ ನಮಗೆ ಬೇಕು. ಇದೇ ರೀತಿ ಅನಿಯಂತ್ರಿತ ವಲಸೆ ಮುಂದುವರೀತಿದ್ರೆ, ಜನಸಂಖ್ಯೆನಾ ನಿಯಂತ್ರಣದಲ್ಲಿಟ್ಟು, ವ್ಯಾಪಾರ-ವ್ಯವಹಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ, ಅತ್ಯುತ್ತಮ ವಿದ್ಯಾ ಕೇಂದ್ರಗಳನ್ನ ಸ್ಥಾಪಿಸಿ ತಮ್ಮ ತಮ್ಮ ರಾಜ್ಯಾನಾ ಮುಂದೆ ತರಬೇಕು ಅಂತ ಶ್ರಮ ಪಡೋ ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳು ಯಾವತ್ತು ಉದ್ಧಾರ ಆಗಲ್ಲ. ಕಡೆಗೆ ಒಂದಿನ ಮಿತಿ ಮೀರಿದ ವಲಸಿಗರಿಂದ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ! ಇನ್ನಾದರೂ ಕರ್ನಾಟಕ ಸರ್ಕಾರ, ಅನಿಯಂತ್ರಿತ ವಲಸೆ ನಿಯಂತ್ರಣ ಕಾನೂನಿನ ಬಗ್ಗೆ ಯೋಚಿಸಬೇಕಾಗಿದೆ ಗುರು!

ಪ್ರಾದೇಶಿಕ ಪಕ್ಷ ಅಂದ್ರೆ...

ಜಾತ್ಯಾತೀತ ಜನತಾ ದಳದೋರ ಒಂದು ಸಮಾವೇಶ ಬೆಂಗಳೂರಲ್ಲಿ ನಿನ್ನೆ ನಡೀತು. ಆ ಸಭೇಲಿ ಜೆಡಿಎಸ್ಸಿನ ರಾಜ್ಯಾಧ್ಯಕ್ಷರಾದ ಶ್ರೀ ಕುಮಾರಣ್ಣೋರು, ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ದ್ಯಾವೇಗೌಡರ ಸಮ್ಮುಖದಲ್ಲಿಯೇ "ತಮ್ಮದು ಪ್ರಾದೇಶಿಕ ಪಕ್ಷ, ನೀವೆಲ್ಲಾ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ" ಅನ್ನೋ ಹೇಳಿಕೆ ಕೊಟ್ರು! ಈ ಮಾತಿನ ನಿಜಾಯ್ತಿ ಬಗ್ಗೇನೆ ಅನುಮಾನ ಹುಟ್ತಿದೆ ಗುರು!

ನಾಡಿನ ಏಳಿಗೆ ಪ್ರಾದೇಶಿಕ ಪಕ್ಷದಿಂದಲೇ!

ನಿಜಾ, ಇವತ್ತು ನಮ್ಮ ನಾಡಿನ ಎಲ್ಲ ಸಮಸ್ಯೆಗಳ ಬೇರು ಹುಡುಕ್ಕೊಂಡು ಹೊರಟ್ರೆ ಕಾಣೋದು ಕನ್ನಡ- ಕನ್ನಡಿಗ-ಕರ್ನಾಟಕದ ಏಳಿಗೆಯನ್ನು ಭಾರತದ ಏಳಿಗೆಯಿಂದ ಭಿನ್ನ ಅಂದುಕೊಂಡಿರೋ ರಾಷ್ಟ್ರೀಯ ಪಕ್ಷಗಳ ನಿಲುವುಗಳು. ಕರ್ನಾಟಕದ ಪರವಾಗಿ ದನಿ ಎತ್ತುದ್ರೆ ಪಕ್ಕದ ರಾಜ್ಯದಲ್ಲಿ ಎಲ್ಲಿ ನೆಲೆ ಕಳ್ಕೋಬೇಕಾಗುತ್ತೋ ಅನ್ನೋ ಆತಂಕದಿಂದಲೇ ಇವುಗಳು ನಾಡಹಿತಕ್ಕೆ ಅಗತ್ಯವಿರೋ ಗಟ್ಟಿ ನಿಲುವು ತೊಗೊಳ್ಳೋದ್ರಲ್ಲಿ ಸೋತು ನಮ್ಮ ಏಳಿಗೆಯನ್ನು ಕಡೆಗಣ್ಸಿವೆ. ಇದಕ್ಕೆ ಪರಿಹಾರ ನಮ್ಮದೇ ನಾಡಿನ ಪ್ರಾದೇಶಿಕ ಪಕ್ಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅದು ಎಂತಹ ಪಕ್ಷ ಆಗಿರಬೇಕು ಅನ್ನೋದೇ ನಮ್ಮ ಮುಂದಿರೋ ಪ್ರಶ್ನೆ.

ಪ್ರಾದೇಶಿಕ ಪಕ್ಷವೆಂದರೆ...
ಪ್ರಾದೇಶಿಕ ಪಕ್ಷಾ ಅಂದ್ರೆ ಮತ ಗಳಿಸಬೇಕು ಅಂತ ಸಮಾಜಾನಾ ಜಾತಿ ಮತಗಳ ಆಧಾರದ ಮೇಲೆ ಒಡೆಯೋದಾಗಲೀ, ವೋಟು ಸಿಗಲಿ ಅಂತ ವಲಸಿಗರಿಂದ ತುಂಬಿರೋ ಕೊಳೆಗೇರಿಗಳನ್ನು ಸಕ್ರಮ ಮಾಡಿ ಅವರಿಗೆ ಹಕ್ಕುಪತ್ರ ನೀಡ್ತೀವಿ ಅನ್ನೋದಾಗಲೀ, ದಿಲ್ಲೀಲಿ ಸಲ್ಲಲಾಗದ ಕಾರಣದಿಂದ ಇಲ್ಲಿ ಪ್ರಾದೇಶಿಕ ಪಕ್ಷ ಅನ್ನೋ ದೊಂಬರಾಟಗಳಾಗಲೀ ಅಲ್ಲ ಗುರು! ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿ ಹೊಂದಿರುವ ಸಿದ್ಧಾಂತ ಈ ಪಕ್ಷದ್ದಾಗಿರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ನಾಡಿನ ಹಕ್ಕುಗಳನ್ನು ಉಳಿಸಿಕೊಳ್ಳಲು, ಹಿತವನ್ನು ಕಾಪಾಡಿಕೊಳ್ಳಲು ಟೊಂಕಕಟ್ಟಿ ನಿಂತಿರಬೇಕು. ಜಾತಿ, ಧರ್ಮ, ಮತಗಳನ್ನು ಮೀರಿದ ಕನ್ನಡತನದ ಸಿದ್ಧಾಂತದ ಬೆನ್ನೆಲುಬಿರಬೇಕು. ಇವೆಲ್ಲಾ ಇವತ್ತಿನ ಜಾತ್ಯಾತೀತ ಜನತಾದಳಕ್ಕೆ ಇದೆಯಾ? ಅಥ್ವಾ ಇವತ್ತಿನ ದಿವಸ ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ತಾಯಿದೆ, ಜನ ಪೊಳ್ಳು ರಾಷ್ಟ್ರೀಯತೆಗೂ ನಿಜವಾದ ರಾಷ್ಟ್ರೀಯತೆಗೂ ಇರೋ ವ್ಯತ್ಯಾಸ ಗುರುತ್ಸಕ್ಕೆ ಶುರು ಮಾಡ್ತಿದಾರೆ, ಇವತ್ತು ಕನ್ನಡದ ಹೆಸರು ಹೇಳುದ್ರೆ, ಕನ್ನಡಿಗರ ಸ್ವಾಭಿಮಾನದ ಹೆಸರು ಹೇಳುದ್ರೆ ಯಶಸ್ವಿಯಾಗಿ ರಾಜಕೀಯ ಮಾಡಬಹುದು ಅನ್ನೋ ದುರಾಲೋಚನೇನಾ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳದಷ್ಟು ದಡ್ಡರು ನಮ್ಮ ಜನಾ ಅಂದ್ಕೊಂಡಿದಾರಾ ಇವ್ರು ಗುರೂ?

ಕನ್ನಡ ಅನ್ನೋದೆ ಕಬ್ಬಿಣದ ಕಡ್ಲೆ ಆದ್ರೆ ಎಂಗಣ್ಣಾ..

ನನ್ ಮಗೀನಾ ಇಸ್ಕೂಲ್ಗೆ ಸೇರುಸ್ಬೇಕು ಅಂತ ಒಂಟಾಗ ನಮ್ ಮನ್ಯಾಗೆ ಬೋ ಮಾತುಕತೆ ಆತು ಗುರುಗಳೇ... ನಮ್ ಎಂಡ್ರು ’ಎಂಕಾ, ಮಗಾ ಉದ್ದಾರ ಆಗ್ಬೇಕಂದ್ರೆ ಅದುನ್ ಇಂಗ್ಲಿಸ್ ಬಾಸೇಲೆ ಓದುಸ್ಬೇಕು ಕಣ್ಲಾ...’ ಅಂತಾ ಒಂದೇ ಅಟ. ನಾನಾರಾ ಸುಮ್ಕಿದ್ನಾ? ’ಅಲ್ ಕಣಮ್ಮಿ, ನಮ್ಗೆ ಕನ್ನಡಾನೆ ಏಳ್ ಕೊಡೋದು ಸುಲಬ, ಅದು ನಮ್ ಬಾಸೆ ಅಲ್ವಾ... ಮಗೀಗೆ ಕಲ್ಯದೆಲ್ಲಾ ಅರ್ತ ಆಗ್ಬೇಕಲ್ವಾ? ಕನ್ನಡದಾಗೇ ಓದ್ಲಿ. ನಮ್ ಶಾಲೇ ಮಾಸ್ತರ್ರು ಕನ್ನಡದೋರೆಯಾ... ಅವ್ರೇನು ಇಂಗ್ಲೇಂಡಿಂದ ಬಂದಿಲ್ಲಾ, ಮಗಾ ಕನ್ನಡದಲ್ಲೇ ಓದ್ಲಿ’ ಅಂತ ಕನ್ನಡ ಶಾಲೆಗೇ ಸೇರುಸ್ದೆ ಕಣ್ರಣ್ಣಾ....
ಕನ್ನಡ ಅನ್ನೋ ಕಬ್ಬಿಣದ ಕಡಲೆ!
ಮಗಾ, ಇಸ್ಕೂಲಲ್ಲಿ ಕಲ್ತಿದ್ನ ನಾನೂ ಅಂಗೇ ಓದುಸ್ತಾ ಓದುಸ್ತಾ ಇದ್ರೆ ಇದೇನ್ ಕನ್ನಡ ಅಂದ್ರೆ ನಾ ಮಾತಾಡಾದೋ, ಇಲ್ಲಾ ಈ ಪುಸ್ಕದಲ್ಲಿ ಬರ್ದಿರೋದೋ ಅಂತ ಗೊಂದಲಾ ಸುರು ಅತ್ಕಂಬುಡ್ತು.. ಕೂಡೋದಕ್ಕೆ ಸಂಕಲನ ಅನ್ನಬೇಕು, ಕಳೆಯೋದಕ್ಕೆ ಯವಕಲನ ಅನ್ನಬೇಕು. ನನ್ ಮಗ ಯವಕಲನ ಅಂದ್ರೆ ಆ ಮೇಸ್ಟ್ರಪ್ಪ ಏಯ್ ಮೊದ್ಲು ಉಚ್ಚರಣೆ ಸರಿ ಮಾಡ್ಕೊ ಅಂತ ಬಯ್ಯೋದಾ? ಅಲ್ಲಾ ಕಳೆಯದ್ನ ಕಲ್ಸಕ್ಕೆ ಯವಕಲನ ಅನ್ನೋ ಪದ ಯಾಕ್ ಸರಿಯಾಗ್ ಉಚ್ಚರುಸ್ಬೇಕು ಅಂತಾ ಗೊತ್ತೇ ಆಗ್ಲಿಲ್ಲ. ಮುಂದ್ ಅಂಗೇ ಯಾಕರಣದ ಪಾಟ ಮಾಡೋವಾಗ ಅದೆಂತದೋ ಜಸ್ವ ಸಂದಿ, ಚುಸ್ವ ಸಂದಿ, ಸವರ್ಣ ದೀರ್ಗ ಸಂದಿ ಅಂತ ಯೋಳ್ ಕೊಟ್ರು. ದಂದುವ ಸಮಾಸ, ಬವುರೀವಿ ಸಮಾಸ, ಅವ್ಯಯೀ ಬಾವ ಸಮಾಸ ಅಂತೆಲ್ಲಾ ಮಗಾ ಕೇಳ್ತಿದ್ರೆ ಇದ್ಯಾಕೋ ಶಾಲೇಲಿ ಕಲ್ಸೋ ಕನ್ನಡ ಬಾಸೇ ನಾವ್ ಆಡೊ ಅಷ್ಟು ಸುಲುಬದ್ ಅಲ್ಲಾ ಅನ್ಸಕ್ ಸುರುವಾಯ್ತು.
ಇಗ್ನಾನದ ಪಾಟದಲಿ ಎಲೆ ಅಸ್ರು ಅನ್ನೋದ್ನಾ ಪತ್ರ ಅರಿತ್ತು ಅಂತಾ ಏಳ್ ಕೊಟ್ಟವ್ರೆ. ಅದೇನೋ ಪೀನ ದರ್ಪಣ, ನಿಮ್ನ ದರ್ಪಣ ಅಂತೆ. ಅಂಗಂದ್ರೇನ್ ಬುದ್ದಿ ಅಂತ ಮಾಸ್ತರಪ್ಪನ್ ಕೇಳುದ್ರೆ... ’ನಿಮ್ನ ದರ್ಪಣ ಅಂದ್ರೆ ಕನ್ನಡಿ ತಗ್ಗಾಗಿರದೂ, ಪೀನ ದರ್ಪಣ ಅಂದ್ರೆ ಕನ್ನಡಿ ಉಬ್ಬಾಗಿರದೂ’ ಅಂದ್ರು. ಅದುಕ್ಕೆ ನಮ್ ಮಗಾ ’ಅಪ್ಪಯ್ಯ ಅದ್ನ ಉಬ್ಬುಗನ್ನಡಿ, ತಗ್ಗುಗನ್ನಡಿ ಅಂತಲೇ ನಮ್ ಬುಕ್ಕಲ್ಲಿ ಬರೀಬೋದಲ್ಲಪ್ಪಾ... ನಿಮ್ನ, ಪೀನ ಅನ್ನದು ಕನ್ ಪ್ಯೂಜ್ ಆಯ್ತುದೆ, ಯಾವ್ದ್ ಏನು ಅಂತ ಜಪ್ತಿಲ್ ಇರಕ್ಕಿಲ್ಲ’ ಅಂದಾಗ ಇದ್ಯಾಕೋ ಕನ್ನಡದ ಶಾಲೇಲಿ ಕನ್ನಡದಲ್ ಕಲ್ಸದ್ ಬುಟ್ಟು ಇನ್ಯಾವ ಬಾಸೇಲಿ ಕಲ್ಸಕ್ ಸುರು ಅಚ್ಕಂಡವ್ರಲ್ಲಾಪ್ಪೋ ಅನ್ಸಕ್ ಸುರುವಾಯ್ತು ಗುರುಗಳೇ...ನೀವಾರ ಯೋಳಿ, ನಾವ್ ಮಾತಾಡೋದು ಕೀಳು ಕನ್ನಡಾನಾ? ನಮ್ ಐಕ್ಳುಗಳಿಗೆ ಅರ್ತ ಆಗೋ ಅಂಗೆ ಪುಸ್ಕ ಬರೆಯೋದ್ ಆಗಾಕಿಲ್ವಾ? ಕನ್ನಡದ ಮಕ್ಳಿಗೆ ಕನ್ನಡದಲ್ಲೇ ಪಾಟ ಮಾಡಬೇಕಪ್ಪಾ.. ನೀವೇನಂತೀರೀ ಗುರುಗಳೇ?

ತೆಲುಗು ಅಕಾಡೆಮಿಯಿಂದ ಕನ್ನಡಿಗರ ಕಿವಿ ಮೇಲೆ ಲಾಲ್ಬಾಗ್

ಮೊನ್ನೆ ಮೊನ್ನೆಯ ಮಾಧ್ಯಮದ ವರದಿಯೊಂದರ ಪ್ರಕಾರ ಕರ್ನಾಟಕ ತೆಲುಗು ಅಕಾಡೆಮಿಗೆ ಎಣಿಸೋದು ಮರೆತುಹೋಗಿ ಕರ್ನಾಟಕದಲ್ಲಿ ೧.೩೫ ಕೋಟಿ ತೆಲುಗರಿದ್ದು, ಈ ಸದ್ಯದ ಕರ್ನಾಟಕದ ವ್ಯವಸ್ಥೆಯಲ್ಲಿ ಅವರ ಶೈಕ್ಷಣಿಕ ಹಾಗೂ ಸಾ೦ಸ್ಕೃತಿಕ ಅಭಿವೃದ್ಧಿ ಆಗ್ತಾ ಇಲ್ಲ ಅಂತಾ ಕಿವಿ ಮೇಲೆ ಲಾಲ್ಬಾಗ್ ಮಡಗೋಕೆ ಹೊರಟಿರೋ ಇವರ ಬಗ್ಗೆ ಏನ್ ಹೇಳೋದು ಗುರು?

೨೦೦೧ ನೆಯ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ನೆಲೆಸಿರುವ ತೆಲುಗು ಮಾತೃ ಭಾಷೆ ಆಗಿರೋರ ಸ೦ಖ್ಯೆ ೩೬ ಲಕ್ಷ ಅ೦ದರೆ ಸುಮಾರು ೬% ಮಾತ್ರ. ಈ ೩೬ ಲಕ್ಷ ಜನ್ರು ಅಕಾಡೆಮಿಗೆ ಅದೆಂಗೆ ೧.೩೫ ಕೋಟಿಯಾಗಿ ಕಂಡ್ರು ಅನ್ನೋದೇ ಒಂದು ಸೋಜಿಗ. ಅದೇನಾದ್ರೂ ನಾಕ್-ನಾಕ್ ಕಾಣ್ಸೋ ಕನ್ನಡ್ಕ ಏನಾರ ಆಕ್ಕಂಡಿದ್ರಾ ಇವ್ರು? ಇರ್ಲಿ. ಈ ೬% ಜನಾನೂ ಏನ್ ನಿನ್ನೆ ಮೊನ್ನೆ ಬಂದವರಲ್ಲ, ಹತ್ತಾರು-ನೂರಾರು ವರ್ಷಗಳ ಹಿಂದೆನೇ ಬಂದು ಇಲ್ಲಿ ನೆಲೆಗೊಂಡು ಕನ್ನಡಿಗರೇ ಆಗೋಗಿರೋರು. ಅಂತಾದ್ರಲ್ಲಿ, ಕಳೆದ ೫-೧೦ ವರ್ಷದಲ್ಲಿ ವಲಸೆ ಬಂದ ತೆಲುಗರನ್ನ ಇಲ್ಲಿನ ಮುಖ್ಯ ವಾಹಿನಿಗೆ ಸೇರೋ ಹಂಗೆ ಮಾಡೋದು ಬಿಟ್ಟು, ನಾವು ಒಂದೂವರೆ ಕೋಟಿ ಇದೀವಿ, ನಮ್ಮ ಉದ್ಧಾರ ಕನ್ನಡದಿಂದ ಆಗಲ್ಲ ಅನ್ನೋ ಹಸಿ ಸುಳ್ಳು ಹೇಳ್ತಾ, ಇಲ್ಲಿ ನೆಲೆಗೊಂಡು ಕನ್ನಡಿಗರೇ ಆಗಿರೋರನ್ನು "ನೀನು ತೆಲುಗ, ನೀನು ಬೇರೆ, ನೀನು ಕನ್ನಡಿಗನಲ್ಲ, ನೀನು ಹೊರಗಿನವನು, ನಿನ್ನ ಮನೆ ಅಲ್ಲಿದೆ" ಅಂತ ಪ್ರತ್ಯೇಕತೆ ತುಂಬಿ ಕನ್ನಡದ ಮುಖ್ಯವಾಹಿನಿಗೆ ಸೇರದಂತೆ ತಡೆಯೋ ಮನೆ ಮುರುಕ ಕೆಲ್ಸ ಇದು.

ನೂರಾರು ವರ್ಷಗಳಿ೦ದ ಇಲ್ಲೇ ನೆಲೆಸಿರುವ ತೆಲುಗು ಮಾತಾಡೋರು ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಕೊ೦ಡು ಕನ್ನಡಿಗರೇ ಆಗೋಗಿದ್ದಾರೆ. ಮನೆಮಾತು ತಲುಗಾಗಿದ್ರೂ ಕನ್ನಡಕ್ಕಾಗಿ ದುಡಿದ ಮಹನೀಯರು ತು೦ಬಾ ಇದಾರೆ. ಆ ಮಹನೀಯರಲ್ಲಿ ಕೆಲವ್ರು ದೇವುಡು ನರಸಿಂಹ ಶಾಸ್ತ್ರಿ, ಮ.ರಾಮಮೂರ್ತಿ, ವೀರಕೇಸರಿ ಸೀತಾರಾಮ ಶಾಸ್ತ್ರಿ, ಬೀಚಿ, ಟಿ ಎಸ್ ವೆಂಕಣ್ಣಯ್ಯ, ಲಲಿತಾ ಶಾಸ್ತ್ರಿ ಮು೦ತಾದವರು. ಇನ್ನುಳಿದ ವಲಸೆ ಬ೦ದ ತೆಲುಗರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡೋ ಬದಲು ತೆಲುಗು ಬರೀ ಮನೆಮಾತಾಗಿರೋ ಕನ್ನಡಿಗರನ್ನೂ ಕೂಡ ಕನ್ನಡಿಗರ ಮೇಲೆ ಎತ್ತುಕಟ್ಟೋ ಪ್ರಯತ್ನ ಅಲ್ಲದೆ ಇದು ಇನ್ನೇನು ಗುರು ? ಇಂತ ಪ್ರತ್ಯೇಕತೆ ಬಿತ್ತೋ ಕೆಲಸಕ್ಕೆ ನಮ್ಮ ಸರ್ಕಾರ ಯಾವ ರೀತಿಯ ಬೆಂಬಲಾನೂ ಕೊಡಬಾರದು. ಏನಂತೀಯಾ ಗುರು?

ಹಂಪಿ ಉತ್ಸವ ಅಂದರೇನು?

ನವೆಂಬರ್ ಮೂರರಿಂದ ಐದರವರೆಗು ಹಂಪಿ ಉತ್ಸವ ನಡೆಯಿತು. ಊರಲ್ಲೆಲ್ಲಾ ಹಬ್ಬದ ವಾತಾವರಣ. ಪ್ರತಿ ವರ್ಷದಂತೆ, ಈ ವರ್ಷ ಕೂಡ ಹಂಪಿಯನ್ನು ನೋಡಿ, ವಿಜಯನಗರದ ಸೊಬಗನ್ನು ಸವಿಯುವ, ಮೆಲಕುಹಾಕುವ ಮಹದಾಸೆಯಿಂದ ದೇಶ-ವಿದೇಶಗಳಿಂದ ಜನ ನೆರೆದಿದ್ದರು. ಉತ್ಸವವನ್ನು ವಿಜ್ರಂಬಣೆಯಿಂದ ನಡೆಸಿದ್ದರಲ್ಲಿ ಕರ್ನಾಟಕ ಸರ್ಕಾರದ ಇಲಾಖೆಗಳ ಪಾತ್ರ ಗಣನೀಯ. ಆದರೆ ಈ ಬಾರಿಯ ಹಂಪಿ ಉತ್ಸವದ ಕಾರ್ಯಕ್ರಮ ಪಟ್ಟಿ ನೋಡಿದರೆ, ಇಲ್ಲಿಯ ಕಲೆಯ, ಪ್ರಾಚೀನ ತಂತ್ರಜ್ಞಾನದ ಮತ್ತು ಈ ನಾಡಿನ ಐತಿಹಾಸಿಕ ವೈಭವದ ವಿಷಯಾಸಕ್ತರಿಗೆ ಈ ಕಾರ್ಯಕ್ರಮಗಳು ಹಂಪಿಯ, ಅಥವಾ ಕರ್ನಾಟಕ ಸಾಮ್ರಾಜ್ಯದ ಗತವೈಭವದ ದರ್ಶನ ಕೊಡಿಸುವ ಹಾಗೆ ಕಾಣಲಿಲ್ಲ ಗುರು!

ಈ ಉತ್ಸವ ಹಂಪಿಯ ಪ್ರಾಚೀನ ಉತ್ಸವ. ಈ ಸಂದರ್ಭದಲ್ಲಿ ಹಂಪಿಯ ಸುಮಾರು ಸಾವಿರ ವರ್ಷ ಹಳೆಯ ಇತಿಹಾಸದಲ್ಲಿ ಕಂಡಿರುವ ಸಾಂಸ್ಕೃತಿಕ ವೈಭವ, ವಿಶೇಷವಾಗಿ ಅದರಲ್ಲೇ ಅಡಗಿರುವ ತಂತ್ರಜ್ಞಾನ, ಮತ್ತಿತರ ವಿಭಿನ್ನ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಿದ್ದರೆ ಹಂಪಿಯ ವೈಭವಕ್ಕೆ ನಿಜವಾದ ಮರ್ಯಾದೆ! ವಿಜಯನಗರ ಸಾಮ್ರಾಜ್ಯದ ಕಾಲದಿಂದ, ಇಂದಿನವರೆಗೂ ಅಲ್ಲಿಯ ಸುತ್ತ-ಮುತ್ತಲಿನ ಜನರಲ್ಲಿ ತಲೆಮಾರುಗಳಿಂದ ಉಳಿದುಕೊಂಡು ಬಂದಿರುವ ಕಲೆಯ ವೈಭವ ಪ್ರದರ್ಶನಕ್ಕೆ ಈ ಉತ್ಸವ ವೇದಿಕೆಯಾಗಬೇಕಿತ್ತು. ಹೀಗಿರುವಾಗ, "ಹಂಪಿ ಭಾರತದಲ್ಲಿದೆ, ಆದ್ದರಿಂದ ಹಂಪಿಯಲ್ಲಿ ನಡ್ಯೋ ಉತ್ಸವ ಭಾರತವನ್ನು ಬಿಂಬಿಸಬೇಕು," ಅನ್ನೋ ಭಾವನೆಯಿಂದ ಭಾರತದ ಮೂಲೆ-ಮೂಲೆಯಿಂದ ಕಲಾವಿದರನ್ನು ಕರೆತಂದು ಹಂಪಿಯಲ್ಲಿ ಪ್ರದರ್ಶಿಸುವುದರಿಂದ ಏನುಪಯೋಗ? ಇದರಿಂದ ಹಲವಾರು ಅರ್ಹ ಕನ್ನಡಿಗ ಕಲಾವಿದರಿಗೆ ಅವಕಾಶ ಕೈತಪ್ಪಿ ಹೋಯ್ತು, ಅಲ್ಲದೆ ವಿಜಯನಗರದ ಸಂದೇಶ ಸಾರಲು ಮೀಸಲಿಟ್ಟಿದ್ದ ಮೂರು ದಿನಗಳಲ್ಲಿ ಅಮೂಲ್ಯ ಸಮಯವೂ ವ್ಯರ್ಥವಾದಂತಾಯ್ತು!

ಹಂಪಿ ಉತ್ಸವದ ಅಧಿಕೃತ ತಾಣದಲ್ಲಿ ಈ ಒಂದು ಭಾಗ ಓದಿದರೆ ಹಂಪಿಯಲ್ಲಿ ಇವೇ ಹಿಂದಿನ ಕಾಲದಲ್ಲಿತ್ತೇನೋ ಅನ್ನುವ ಭಾವನೆ ಅಲ್ಲಿ ಬಂದವರಲ್ಲಿ ಮೂಡಿಸೋದು ಖಚಿತ:

Noted film actor Hema Malini would be among the star performers at
the utsav. The high-powered committee for organising the Hampi Utsav under the
Chairmanship of Tourism Minister Sri Janardhana Reddy is orgainising the mega
cultural festival on a grand scale and to hold the celebrations in a befitting
manner. Some of the big names from the world of entertainment will perform at
this year’s Hampi Utsav. Asha Bhonsle, Kishori Amonkar, Sonu Nigam, Gazal singer
Pankaj Udhas, actor Vasundhara Das, and legendary Ilayaraja will be the star
performers.

ಹಂಪಿ ಉತ್ಸವವೆಂದರೆ ಕೇವಲ ಹಾಡು, ಕುಣಿತ ರೂಪಗಳ ಕಲಾ ಪ್ರದರ್ಶನವೆಂಬ ಸಂಕುಚಿತ ನೋಟದಲ್ಲಿ ಕಂಡಾಗ, ಕರ್ನಾಟಕ ಸಾಮ್ರಾಜ್ಯದ ವೈಭವ ಸಾರಲು ಈಗಿನ ಕಲಾವಿದರು ಸಾಕಾಗದು ಅನ್ನಿಸುವುದು ಸಹಜವಿರಬಹುದು. ಆದರೆ ಅಂತಹ ಜನರ ಪೀಳಿಗೆಯನ್ನು ಪ್ರೋತ್ಸಾಹಿಸಿ ಕಾಪಾಡಿಕೊಂಡು ಬರಲೆಂತೇ ಈ ಉತ್ಸವ ನೆರವಾಗ್ಬೇಕು, ಅಲ್ವ ಗುರು? ಅಲ್ಲದೆ ಈಗಾಗಲೇ ಕಂಡಂತೆ, ಹಂಪಿಯು ಕೇವಲ ಇಂತಹ ಕಲೆಯ ರೂಪಗಳ ಬೀಡಷ್ಟೇ ಅಲ್ಲ, ಅವುಗಳ ಹಿಂದಿರುವ ವಿಶಿಷ್ಟ ವಿಜ್ಞಾನ, ತಂತ್ರಜ್ಞಾನದ ಗಣಿಯೇ ಆಗಿದೆ. ಇಂತಹ ವಿಷಯಗಳನ್ನು ಎತ್ತುಹಿಡಿದು, ಶಿಲ್ಪ-ಕಲೆಯಿರಬಹುದು, ನಗರ-ಯೋಜನೆಯ ವಿಶಿಷ್ಟ ಚಾತುರ್ಯವಿರಬಹುದು, ಆಧುನಿಕ ಕಾಲದ ನಗರಗಳಲ್ಲಿ ಬಳಕೆಯಾಗುತ್ತಿರೋ ತಂತ್ರಜ್ಞಾನದ ಮಾದರಿ ಆಗಲೇ ಹಂಪಿಯಲ್ಲಿದ್ದ ಉದಾಹರಣೆಗಳಿರ್ಬೋದು ಇವುಗಳಿಗೆ ಇಂತಹ ಉತ್ಸವಗಳು ವೇದಿಕೆಯಾಗಬೇಕು ಗುರು.

ಇವೆಲ್ಲಾ ಬಿಟ್ಟು, ದೇಶದ ಇತಿಹಾಸದಲ್ಲೇ ಪ್ರಮುಖ ಪಾತ್ರ ವಹಿಸಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಎಳ್ಳಿನಷ್ಟೂ ಸಂಬಂಧವಿರದ ಹಲವು ಕಲಾ-ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು! ಕನ್ನಡಿಗರ ಹೆಮ್ಮೆ ಎತ್ತು ಹಿಡಿವ ಈ ಹಂಪಿ ಉತ್ಸವದಲ್ಲಿ ಕನ್ನಡಿಗರಿಗೆ ಇದಕ್ಕಿಂತ ದೊಡ್ಡ ಅವಮಾನ ಸಾಧ್ಯವಾ ಗುರು?

ಹೊಸ ಬಸ್ಸು, ಹಳೇ ರೋಗ

ಅಲ್ಲಾ ಗುರು, ಮೊನ್ನೆ ಮೊನ್ನೆಯಷ್ಟೆ ಪೂರ್ತಿ ಕೆಂಪೇಗೌಡ ಬಸ್ ನಿಲ್ದಾಣವನ್ನು ಕನ್ನಡಮಯವಾಗಿಸುವತ್ತ ಹೆಜ್ಜೆ ಇಡುವುದಾಗಿ ಹೇಳಿ ಜನರ ಮನಸ್ಸನ್ನು ಗೆದ್ದಿದ್ದ ಬಿ.ಎಮ್.ಟಿ.ಸಿ ಇಷ್ಟು ಬೇಗ ಇಂತಹ ಶೆಗಣಿ ತಿನ್ನೊ ಕೆಲಸ ಮಾಡಬಹುದಾ? ಹೊಸದಾಗಿ ಬೆಂಗಳೂರಿನ ಬೀದಿಗಳಿಗೆ ಇಳಿದಿರೋ ಮಾರ್ಕೊ ಪೋಲೊ ಬಸ್ಸಲ್ಲಿ ಸೂಚನೆಗಳೆಲ್ಲ ಹಿಂದಿ-ಇಂಗ್ಲೀಷ್ ನಲ್ಲಿ ಹಾಕಿರೋ ಇವರ ಬುದ್ಧಿಗೆ ಅದ್ಯಾವ ಮಂಕು ಕವಿದಿದೆ?

ಯಾರಿಗಾಗಿ ಸೂಚನೆ ?

ಅಲ್ಲಾ ಗುರು, ಇಡೀ ಪ್ರಪಂಚದ ಎಲ್ಲ ಕಡೆ ಸಾರ್ವಜನಿಕ ಸಾರಿಗೆ ಬಸ್ಸಗಳಲ್ಲಿ ಎಲ್ಲ ರೀತಿಯ ಸೂಚನೆಗಳನ್ನು ಅಲ್ಲಿನ ಜನರಿಗೆ ಅರ್ಥವಾಗೋ ಭಾಷೇಲಿ ಹಾಕಬೇಕು, ಅದಕ್ಕಿಂತ ಮೊದಲು ಓದು ಬರಹ ಬರದೇ ಇರೋರಿಗೂ ಅನುಕೂಲ ಆಗೋ ಥರ ಚಿತ್ರಗಳನ್ನು ಹಾಕ್ಬೇಕು ಅನ್ನೋ ವ್ಯವಸ್ಥೆ ಇದೆ. ಅಷ್ಟಕ್ಕೂ ಸೂಚನೆಗಳನ್ನು ಹಾಕೋ ಉದ್ದೇಶ ಆದ್ರೂ ಏನು? ಜನ ಅದನ್ನ ಓದಿ ಅದನ್ನ ಪಾಲಿಸಲಿ ಅಂತಾ ತಾನೇ? ಯಾರಿಗೋಸ್ಕರ ಈ ಸೂಚನೆಗಳನ್ನು ಮಾಡಿದೆಯೋ ಅವರ ಮನಕ್ಕೆ ನೇರವಾಗಿ ನಾಟಬೇಕು ಅಂತ ತಾನೇ? ಹೀಗಿರುವಾಗ ಅರ್ಥವಾಗದ ಭಾಷೆಯಲ್ಲಿ ಸಕ್ಕತ್ ತಲೆ ಉಪಯೋಗಿಸಿ ಏನ್ ಸೂಚನೆ ಕೊಟ್ರೆ ಏನ್ ಬಂತು ಮಣ್ಣು?

ಇದನ್ನೆಲ್ಲ ನೋಡಿದ್ರೆ ಕೇಂದ್ರ ಸರ್ಕಾರ ಪ್ರಾಯೋಜಿತ ಹಿಂದಿ ಹೇರಿಕೆ ಸಾಕಾಗಿಲ್ಲ ಅಂತ ಈಗ ಬಿ.ಎಂ.ಟಿ.ಸಿ.ನೂ ಇಂತ ಹಲ್ಕಾ ಕೆಲ್ಸ ಶುರು ಹಚ್ಚಕೊಂಡಿದ್ಯಾ ಅನ್ನೊ ಸಂದೇಹ ಬರ್ತಾ ಇದೆ ಗುರು. ಬಡ್ಕೊಂಡ.

ಜಪಾನಿನಲ್ಲಿ ಕನ್ನಡದ ನಾಳಿನ ಪರಿಣಿತರು!




ಮೊನ್ನೆ ಮೊನ್ನೆ ನಂ ರಾಜ್ಯೋತ್ಸವ ಆಯ್ತಲ್ಲಾ, ಅದರ ಆಚರಣೆ ಮಾಡ್ತಾ ಅಣ್ಣಾವ್ರ ಹಾಡಿಗೆ ಅಲ್ಲಿದ್ದವ್ರು ಕುಣಿದು ಕುಪ್ಪಳಿಸುತ್ತ ಇರೋ ಈ ವಿಡಿಯೋ ನೋಡಿ. ಇದು ಜಪಾನಿನಲ್ಲಿ ಇಕಾಕು ಅಂತ ಒಂದು ಊರಲ್ಲಿ ಅಲ್ಲಿರೋ ಕನ್ನಡಿಗರು ಸೇರಿ ರಾಜ್ಯೋತ್ಸವ ಮಾಡಿದಾಗ ತೆಗೆದದ್ದು. ಅದೇನ್ ಗುರು? ಅಲ್ಲಿ ಆ ಪಾಟಿ ಕನ್ನಡ ಮಂದಿ ಇದಾರಾ ಅಂತ ಅಚ್ಚರಿ ಪಡಬೇಡಿ. ಅಲ್ಲಿ ಇಷ್ಟು ಜನ ಕನ್ನಡಿಗರು ಇರೋದೂ ನಿಜ, ಸೇರಿದ್ದೂ ನಿಜ, ನಾಡಹಬ್ಬಕ್ಕೆ ಬಾವುಟ ಹಾರಿಸಿದ್ದೂ ನಿಜ. ಇದರಲ್ಲೇನು ವಿಶೇಷ? ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕನ್ನಡದ ಜನ ಇಲ್ವಾ? ಅವರೂ ರಾಜ್ಯೋತ್ಸವ ಮಾಡ್ತಿಲ್ವಾ? ಅಂತ ಹುಬ್ಬು ಹಾರುಸ್ಬೇಡಿ. ವಿಷಯ ಅಲ್ಲಿ ಕನ್ನಡದ ಜನ ಇದಾರೆ ಅನ್ನೋದೂ ಅಲ್ಲ, ಅವರು ರಾಜ್ಯೋತ್ಸವ ಮಾಡುದ್ರು ಅನ್ನೋದೂ ಅಲ್ಲ. ಮತ್ತೇನಪ್ಪಾ ಸಮಾಚಾರಾ ಅಂತೀರಾ?

ಕುಶಲ ಕನ್ನಡಿಗ ರೂಪುಗೊಳ್ಳುತ್ತಿದ್ದಾನೆ!

ಇವರೆಲ್ಲಾ ಬೆಂಗಳೂರಿನ ಟಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇರೋ ಇಂಜಿನಿಯರುಗಳು. ಬೆಂಗಳೂರಿಂದ ವರ್ಷ, ಎರಡು ವರ್ಷ, ಮೂರು ವರ್ಷ ಅಂತ ಜಪಾನಿಗೆ ತರಬೇತಿಗಾಗಿ ಅಂತ ಸಂಸ್ಥೆಯೋರು ಇವರನ್ನು ಕಳಿಸಿದ್ದಾರೆ. ಇವರು ತರಬೇತಿ ಮುಗಿಸಿದ ಮೇಲೆ ಮತ್ತೆ ಕರುನಾಡಿಗೆ ಮರಳಿ ಬರ್ತಾರೆ... ಹಾಂ! ಬರಿ ಇಂಜಿನಿಯರ್ ಗಳಾಗಿ ಅಲ್ಲ! ಕಾರು ತಯಾರಿಕೆಯ ಪ್ರಮುಖ ವಿಷಯಗಳಲ್ಲಿ ತರಬೇತಿ ಪಡೆದು ಪರಿಣಿತರಾಗಿ ಬರ್ತಾರೆ. ಹೌದು ಗುರು! ನಮ್ಮ ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಬೇಕು. ಇವತ್ತಿನ ದಿನ ನಮ್ಮಲ್ಲಿ ಅಂತಹ ತಂತ್ರಜ್ಞಾನ ಇಲ್ಲ ಅನ್ನೋದು ನಿಜ ಇರಬಹುದು. ಆದರೆ ನಾಳೆಗಳಿಗೆ ಆ ಯೋಗ್ಯತೇನ ಸಂಪಾದಿಸಿಕೋ ಬೇಕು ತಾನೆ? ಅಂತಹ ತರಬೇತಿಯನ್ನು ಇವತ್ತು ಜಗತ್ತಿನ ಮುಂಚೂಣಿಯ ಪರಿಣಿತರಿಂದ ಪಡೆದುಕೊಂಡೆ ಮುಂದೆ ಸಾಗಬೇಕಾಗಿದೆ! ಇವತ್ತು ಜಪಾನಿನಲ್ಲಿ ಇಂತಹ ತರಬೇತಿಯನ್ನು ಪಡೀತಾ ಇರೋ ಕನ್ನಡಿಗರ ಸಂಖ್ಯೆ ಸುಮಾರು ಐವತ್ತರಷ್ಟು ಇದೆ ಅನ್ನೋದು ನಮ್ಮ ನಾಡಿನ ಕಾರು ತಯಾರಿಕೆಯ ಸಾಮರ್ಥ್ಯ ಅಷ್ಟರ ಮಟ್ಟಿಗೆ ಹೆಚ್ಚಲು ನೆರವುಂಟು ಮಾಡ್ತಿದೆ ಅಂದ ಹಾಗಲ್ವಾ? ಗುರು! ಪ್ರಪಂಚದ ಅತ್ಯುತ್ತಮವಾದದ್ದನ್ನೆಲ್ಲಾ ಇವತ್ತು ನಾವು ಕಲಿತು ನಮ್ಮದಾಗಿಸಿಕೋ ಬೇಕು. ನಾಳಿನ ದಿನಗಳಲ್ಲಿ ಕನ್ನಡಿಗರೇ ಕಾರು ತಯಾರಿಸಬೇಕು. ಕಾರೊಂದೇ ಏಕೆ? ಎಲ್ಲ ಕ್ಷೇತ್ರಗಳ ಪರಿಣಿತರಾಗಿ ಕನ್ನಡಿಗರು ಜಗತ್ತಿನ ತುಂಬಾ ಮಾನ್ಯತೆ ಪಡೆಯಬೇಕು ಗುರು!

"ಎಲ್ಲರ" ಕನ್ನಡದ ಅಧ್ಯಯನಕ್ಕೊಂದು ಸಂಸ್ಥೆ ಬೇಕು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ "ಎಲ್ಲರ" ಕನ್ನಡದ ಅಧ್ಯಯನವನ್ನು ಮಾಡುವ ಒಂದು ಸಂಸ್ಥೆ ಬೇಕೆಂದೂ, ಅದರ ಕೊರತೆ ಇವತ್ತು ನಾಡನ್ನು ಕಾಡುತ್ತಿದೆಯೆಂದೂ ತಿಳಿದುಬರುತ್ತದೆ. ಆ ಸಂಸ್ಥೆಯ ಜವಾಬ್ದಾರಿಗಳು ಮತ್ತು ಧ್ಯೇಯೋದ್ದೇಶಗಳು ಹೀಗಿರಬೇಕೆನಿಸುತ್ತದೆ:
  • "ಎಲ್ಲರ" ಕನ್ನಡವು ಶಾಸ್ತ್ರೀಯ ಕನ್ನಡಕ್ಕಿಂತ ಬೇರೆಯಾಗಿದ್ದು, ಇವತ್ತಿನ ದಿನ ಕನ್ನಡಿಗರೆಲ್ಲರೂ ಬರಹ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಬಳಸುತ್ತಿರುವ ಕನ್ನಡವೇ ಆಗಿದೆ. ಕೆಳಗೆ ಕೊಟ್ಟಿರುವ ದ್ಯೇಯೋದ್ದೇಶಗಳಲ್ಲಿ ಹಾಗೂ ಪ್ರಪಂಚದಲ್ಲೆಲ್ಲ ಯಾವುದೇ ವಿಶೇಷಣವಿಲ್ಲದೆ "ಕನ್ನಡ" ಎಂದರೆ ಅದು ಎಲ್ಲರಕನ್ನಡವೆಂದೇ ತಿಳಿದುಕೊಳ್ಳತಕ್ಕದ್ದು.
  • ಕನ್ನಡವನ್ನು ತನ್ನ ಕಾಲ ಮೇಲೇ ನಿಂತ ಒಂದು ನುಡಿಯೆಂದು ಪರಿಗಣಿಸಿ ಹೊಸದಾಗಿ ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಸಂಶೋಧನೆ ಮಾಡುವುದು.
  • ಕನ್ನಡವನ್ನು ಮತ್ತಷ್ಟು ಸಿರಿವಂತ ನುಡಿಯಾಗಿಸಲು ಕನ್ನಡದ ಎಲ್ಲಾ ಒಳನುಡಿಗಳ ಅಧ್ಯಯನ ಮಾಡುವುದು, ಹಾಗೂ ಎಲ್ಲಾ ಪ್ರದೇಶ, ವೃತ್ತಿ ಹಾಗೂ ಪಂಗಡಗಳ ಕನ್ನಡದ ಅಧ್ಯಯನ ಮಾಡುವುದು. ಈ ಅಧ್ಯಯನಗಳಿಂದ ಹೊರಹೊಮ್ಮುವ ಯಾವಯಾವ ಅಂಶಗಳನ್ನು ಎಲ್ಲರಕನ್ನಡಕ್ಕೆ ಅಳವಡಿಸಬೇಕು ಎಂದು ತೀರ್ಮಾನಿಸಿ, ಹಾಗೆ ತೀರ್ಮಾನಿಸಿದ ಅಂಶಗಳನ್ನು ಐದು ವರ್ಷಗಳ ಒಳಗೆ ಎಲ್ಲರಕನ್ನಡಕ್ಕೆ ಅಳವಡಿಸುವುದು.
  • ಕಲಿಕೆ ಹಾಗೂ ಬಳಕೆಯ ಬೇರೆಬೇರೆ ಕ್ಷೇತ್ರಗಳಲ್ಲಿ (ಆಡಳಿತ, ಮ್ಯಾನೇಜಮೆಂಟು, ಇಂಜಿನಿಯರಿಂಗು ಮುಂತಾದವು) ಕನ್ನಡದಲ್ಲೇ ಕಲಿಕೆ-ಕಲಿಸುವಿಕೆ-ಬಳಕೆ-ಸಂಶೋಧನೆಗಳು ನಡೆಯಲು ಉಪಯೋಗವಾಗುವಂತೆ ಬೇರೆಬೇರೆ ಹಂತಗಳ ಹಾಗೂ ಕ್ಷೇತ್ರಗಳ ಪದಕೋಶಗಳನ್ನು ತಯಾರಿಸುವುದು. ಈ ಪದಕೋಶಗಳನ್ನು ತಯಾರಿಸುವಲ್ಲಿ ಪ್ರಪಂಚದ ಬೇರೆ ನುಡಿಗಳಿಂದ ಪದಗಳನ್ನು ಯಾವಾಗ ಆಮದು ಮಾಡಿಕೊಳ್ಳಬೇಕು, ಮಾರ್ಪಾಡುಗಳು ಬೇಕಾದಲ್ಲಿ ಆಮದು ಮಾಡಿಕೊಂಡ ಪದಗಳನ್ನು ಹೇಗೆ ಮಾರ್ಪಡಿಸಿ ಕನ್ನಡಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಧ್ಯಯನ ಮಾಡುವುದು. ಮೇಲೆ ಹೇಳಿರುವ ಪದಕೋಶಗಳನ್ನು ಐದು ವರ್ಷಕ್ಕೊಮ್ಮೆ ಮರುಪರಿಶೀಲನೆ ಮಾಡಿ ಮರುಮುದ್ರಿಸುವುದು.
  • ಬೇರೆಬೇರೆ ಕ್ಷೇತ್ರಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡದಲ್ಲಿ ಕಲಿಕೆ-ಕಲಿಸುವಿಕೆ-ಸಂಶೋಧನೆಗಳು ಎಷ್ಟರ ಮಟ್ಟಿಗೆ ಜಾರಿಯಲ್ಲಿವೆ, ಯಾವ ಸ್ಥಿತಿಯಲ್ಲಿವೆ, ಕನ್ನಡವನ್ನು ಈ ಕೆಲಸಗಳಿಗೆ ಎಷ್ಟು ಬಳಸಲಾಗುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕಿ ಐದು ವರ್ಷಕ್ಕೊಮ್ಮೆ ಒಂದು ವರದಿಯನ್ನು ಒಪ್ಪಿಸುವುದು. ಆ ವರದಿಯಲ್ಲಿ ಆಯಾ ಕೆಲಸಗಳಿಗೆ ಕನ್ನಡವನ್ನು ಹೆಚ್ಚುಹೆಚ್ಚು ಬಳಸಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ ಸಲಹೆಗಳಿರಬೇಕು.
ಇಂಥದ್ದೊಂದು ಸಂಸ್ಥೆ ಹುಟ್ಟಿ ಸರಿಯಾಗಿ ಕಾರ್ಯನಿರ್ವಹಿಸಿದರೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಭವಿಷ್ಯವು ಹಸನಾಗಿರುವುದರಲ್ಲಿ ಸಂದೇಹವಿಲ್ಲ ಎಂದು ನಮ್ಮ ಅನಿಸಿಕೆ. ಇಂತಹ ಸಂಸ್ಥೆಗಳು ಫ್ರಾನ್ಸ್, ಜರ್ಮನಿ, ಇಸ್ರೇಲ್ ಮುಂತಾದ ನಾಡುಗಳಲ್ಲಿ ಕಾಣಸಿಗುತ್ತವೆ. ಒಮ್ಮೆ ವಿಕಿಪೀಡಿಯಾದಲ್ಲಿ ತಮ್ಮಿಂದಲೇ ಹುಡುಕುವಂತಾಗಲಿ ಗುರುವರ್ಯರೆ! ಈ ಸಂಸ್ಥೆಯ ಪರಿಕಲ್ಪನೆಯ ಬಗ್ಗೆ ತಮ್ಮ ಅಂಬೋಣವೇನೆಂದು ಪೇಳುವಂತಾಗುವಿರಾ ಗುರುವರ್ಯರೆ?

ನಿಜವಾಗಿಯೂ ಕಾನೂನು ಮುರಿಯುತ್ತಿರುವವರು ಯಾರು?


ನವೆಂಬರ ಒಂದರ ನಂತರ ಬೆಂಗಳೂರಿನಲ್ಲಿ ಕನ್ನಡದಲ್ಲಿರದ ನಾಮ ಫಲಕಗಳಿಗೆ ಮಸಿ ಬಳಿತೀವಿ ಅಂದಿರೋ ಕನ್ನಡ ಪರ ಸಂಘಟನೆಗಳ ಮಾತಿಗೆ ಪ್ರತಿಕ್ರಿಯಿಸಿರುವ ನಗರ ಪೋಲಿಸ್ ಮುಖ್ಯ ಆಯುಕ್ತರಾದ ಶ್ರೀ ಶಂಕರ ಬಿದರಿಯವರು, ಅಂತಹ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರೋ ಸುದ್ದಿ ಮೊನ್ನೆ ಮೊನ್ನೆ ಎಲ್ಲ ಪತ್ರಿಕೆಯಲ್ಲಿ ಬಂದಿತ್ತು ಗುರು. ಕಾನೂನು ಕೈಗೆತ್ತಿಕೊಳ್ಳೋರ ವಿರುದ್ಧ ಕ್ರಮ ತೆಗೆದುಕೊಳ್ಳೋದೇನೋ ಸರಿಯಾದದ್ದೇ, ಆದ್ರೆ ಇದೇ ಉತ್ಸಾಹವನ್ನು ಕನ್ನಡದ ಅನುಷ್ಠಾನಕ್ಕೆ ತಾನೇ ಮಾಡಿರೋ ಕಾನೂನುಗಳ ಜಾರಿಗೂ ತೋರಿಸಬೇಕು ತಾನೆ? ಆಗಲೇ ತಾನೆ ಸರಕಾರ ಪೂರ್ತಿ ಕಾನೂನು ಕಾಪಾಡಿದಂಗಾಗೋದು? ಒಂದ್ ಕಾನೂನ್ನ ಕಾಪಾಡ್ತೀನಿ, ಇನ್ನೊಂದ್ನ ಕಡೆಗಣಿಸ್ತೀನಿ ಅಂದ್ರೆಂಗೆ ಗುರು?

ನಾಮಫಲಕ - ಸರ್ಕಾರಿ ಆಜ್ಞೆ

ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ ೨೪ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಎಲ್ಲೆಲ್ಲಿ ಇತರ ಭಾಷೆಗಳನ್ನು ಬಳಸಬೇಕಾಗುತ್ತದೆಯೋ ಅಲ್ಲೆಲ್ಲಾ ಮೊದಲು ಕನ್ನಡದಲ್ಲಿ ದೊಡ್ಡದಾಗಿ ಬರೆದು ನಂತರ ಇತರ ಭಾಷೆಗಳಲ್ಲಿ ಅದರಡಿಯಲ್ಲಿ ಬರೆಯತಕ್ಕದ್ದು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕುವುದು. ಸರ್ಕಾರವೇ ಇಂತದೊಂದು ನಿಯಮ ಮಾಡಿರುವಾಗ ಅದನ್ನು ಪಾಲಿಸದೇ ಕಾನೂನು ಮುರಿಯುತ್ತಿರುವವರು, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದಿರುವ ಅಂಗಡಿ ಮುಂಗಟ್ಟುಗಳ ಮಾಲೀಕರು ತಾನೇ ಗುರು? ಅವರ ವಿರುದ್ಧ ಸರಕಾರವೇ ಕ್ರಮ ತೆಗೆದುಕೊಂಡಿದ್ದರೆ ಜನ ಯಾಕೆ ಕನ್ನಡ ನಾಮ ಫಲಕಗಳಿಗಾಗಿ ಹೋರಾಡುತ್ತಿದ್ದರು ? ಯಾಕೆ ಮಸಿ ಬಳಿತೀವಿ ಅಂತಿದ್ರು? ಇದು ಯೋಚಿಸಬೇಕಾದ ವಿಚಾರ ಅಲ್ವಾ ಗುರು ?

ಇಂದು ನಿನ್ನೆಯದಲ್ಲ ಈ ನಿಯಮ

ಕನ್ನಡದಲ್ಲಿ ನಾಮಫಲಕ ಹಾಕಬೇಕು ಅನ್ನೊ ನಿಯಮ ಇವತ್ತು-ನಿನ್ನೆಯದಲ್ಲ. 1985ರಲ್ಲೇ ಈ ಕಾನೂನು ಬಂದಿದೆ. ಕಾನೂನು ಬಂದಾಗ ಇದ್ದದ್ದು 50 ರೂಪಾಯಿ ದಂಡ. ಇವತ್ತು 23 ವರ್ಷದ ನಂತರ ಆ ದಂಡದ ಮೊತ್ತ 10,000 ವರೆಗೂ ಹೋಗಿದೆ. ಈಗ ನೀನೇ ಹೇಳು ಗುರು, ಒಂದು ಸರಳವಾದ ಕಾನೂನು ಅನುಷ್ಟಾನಕ್ಕೆ 23 ವರ್ಷ ಸಾಕಾಗಲ್ವ? ಹಾಗಾದ್ರೆ ಇನ್ನೂ ಯಾಕೆ ಅದು ಆಗಿಲ್ಲ? ಇಷ್ಟು ವರ್ಷಗಳ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಾನೇ ಇವತ್ತು ಜನಸಾಮಾನ್ಯರೇ ಈ ಕಾನೂನು ಉಳಿಸಲು ಹೋರಟಿರೋದು? ಇನ್ನಾದ್ರೂ ಸರ್ಕಾರ, ಕನ್ನಡಕ್ಕಾಗಿ ಧ್ವನಿ ಎತ್ತಿರುವವರ ವಿರುದ್ಧ ಗುಡುಗಿದಷ್ಟೇ ಉತ್ಸಾಹವನ್ನು ತಾನೇ ಮಾಡಿರುವ ಕಾನೂನ್ನ ಉಲ್ಲಂಘಿಸೋ ಅಂಗಡಿ ಮಾಲಿಕರ ಮೇಲೂ ತೋರಿಸಿದರೆ ಬೆಂಗಳೂರಿನಲ್ಲಿ ಕನ್ನಡದ ನಾಮ ಫಲಕಗಳ ಅನುಷ್ಠಾನ ನಿಜಕ್ಕೂ ಅಷ್ಟು ದೊಡ್ಡ ಸವಾಲಾಗದು. ಅದು ಬಿಟ್ಟು ಒಂದ್ ಕಾನೂನ್ನ ಕಾಪಾಡಿ ಇನ್ನೊಂದ್ನ ಕಡೆಗಣಿಸಬೋದು ಅನ್ನೋ "ಪಾಠ"ವನ್ನ ಸರಕಾರವೇ ಜನಕ್ಕೆ ಕಲಿಸಿದರೆ ಹೆಂಗೆ ಗುರು?
Related Posts with Thumbnails