ಹೊರದೇಶಗಳಿಗೆ ಹೋಗೋ ಮೊದಲು ಆಯಾ ದೇಶಗಳಿಂದ ವೀಸಾ ಪಡೆದುಕೊಳ್ಳೋದು ಸಾಮಾನ್ಯ ವಿಧಾನ. ಹೀಗೆ ಯುನೈಟೆಡ್ ಕಿಂಗ್‍ಡಮ್ ದೇಶಕ್ಕೆ ಹೋಗೋ ಜನಕ್ಕೆ ವೀಸಾ ಪಡೆದುಕೊಳ್ಳಲು ಅನುಕೂಲ ಮಾಡಿಕೊಡೋಕೆ ಒಂದು ಅಂತರ್ಜಾಲ ತಾಣ ಇದೆ. ಕನ್ನಡಿಗರು ಯು.ಕೆ ವೀಸಾ ದಕ್ಕಿಸಿಕೊಳ್ಳಲು ಅನುಕೂಲ ಆಗೋ ಹಾಗೆ ಈ ತಾಣ ಕನ್ನಡದಲ್ಲೂ ಇದೆ. ಇಗೋ ನೋಡಿ ಆ ತಾಣ.
ಗ್ರಾಹಕ ಸೇವೆಯ ಮಹತ್ವ!
ತನ್ನ ಗ್ರಾಹಕರಿಗಾಗಿ ಸದಾ ಮಿಡಿಯೋರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಯು.ಕೆ ಸರ್ಕಾರದೋರು ಮತ್ತು ವಿ.ಎಫ಼್.ಎಸ್ ಗ್ಲೋಬಲ್ ಸಂಸ್ಥೆಯೋರು ಒಟ್ಟಾಗಿ ಭಾರತದಲ್ಲಿ ಆರಂಭಿಸಿರೋ ಈ ಸಂಸ್ಥೆಯ ಅಂತರ್ಜಾಲ ತಾಣ ಕಂಡಾಗ ತಿಳಿಯುತ್ತೆ. ಜೊತೆಗೆ ಒಮ್ಮೆಲೇ.. ನಮ್ಮೋರು ಹೆಂಗೆ ನಡ್ಕೊತಾ ಇದಾರೆ ಅನ್ನೋದು ನೆನಪಾಗಿ ಬೇಸರವಾಗುತ್ತೆ. ನೀವೇ ನೋಡಿ ನಮ್ಮ ನೈರುತ್ಯ ರೈಲ್ವೇ ವಲಯದ ಈ ಅಂತರ್ಜಾಲ ತಾಣವನ್ನು. ಈ ತಾಣ ಇರೋದು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳೆಂದೂ, ಅಧಿಕೃತ ಸಂಪರ್ಕ ಭಾಷೆಗಳೆಂದೂ ಘೋಷಿಸಲಾಗಿರುವ ಹಿಂದೀ ಮತ್ತು ಇಂಗ್ಲೀಶಿನಲ್ಲಿ ಮಾತ್ರಾ. ಬೇಕಾರೆ ತೊಗೊಳ್ಳೀ ಇಲ್ಲಾ ನೆಗೆದು ಬಿದ್ದು ಸಾಯ್ರಿ...ಅನ್ನಬಹುದೇನೋ ನಮ್ಮ ರೈಲ್ವೇ...
ಭಾರತೀಯ ರೈಲ್ವೇ ಇಲಾಖೆಯ ನೈರುತ್ಯ ವಲಯದಲ್ಲಿ ಹೆಚ್ಚಿನ ಭಾಗ ಬರೋದು ನಮ್ಮ ಕರ್ನಾಟಕದಲ್ಲೇ... ಇದರ ಕೇಂದ್ರಕಛೇರಿ ಇರೋದೂ ಹುಬ್ಬಳ್ಳಿಯಲ್ಲೇ... ಈ ವಲಯದಲ್ಲಿ ಓಡಾಡೋ ಪ್ರಯಾಣಿಕರಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು ಕನ್ನಡದೋರೇ... ಆದರೆ ಇವರಿಗೆಲ್ಲಾ ಅನುಕೂಲ ಮಾಡಿಕೊಡಬೇಕು ಅನ್ನೋ ಆಶಯವೇ ರೈಲ್ವೇ ಇಲಾಖೆಗೆ ಇಲ್ಲ. ನಿಜಕ್ಕೂ ನಿಮಗೇನಾದರೂ ಕೆಲಸ ಆಗಬೇಕಿದ್ದರೆ ಹಿಂದೀ ಕಲೀರಿ... ಇಲ್ಲಾ ಇಂಗ್ಲೀಶ್ ಕಲೀರಿ ಎನ್ನೋ ಧೋರಣೆ ಇದರದ್ದು. ಯಾಕೆ ಹೀಗೇ? ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ರೆ ಇವರದ್ದೇನು ಗಂಟು ಹೋಗ್ತಿತ್ತೂ? ನಿಜವಾದ ಗ್ರಾಹಕಸೇವೆ ನೈರುತ್ಯ ರೈಲ್ವೇಯ ಗ್ರಾಹಕರಿಗೆ ಸಿಗ್ತಿರಲಿಲ್ವಾ? ಅಂತೀರಾ... ಊಹೂಂ, ಗ್ರಾಹಕರಿಗೆ ಅನುಕೂಲವೋ ತೊಡಕೋ ಏನಾದರೆ ಭಾರತ ಸರ್ಕಾರಕ್ಕೇನು? ಸಂವಿಧಾನದ ಆಶಯದಂತೆ ಭಾಷಾನೀತಿ, ಭಾಷಾನೀತಿಯಂತೆ ಎಲ್ಲಾ ಇಲಾಖೆಗಳು, ಇಲಾಖೆಯ ನಿಯಮದಂತೆ ಅಂತರ್ಜಾಲ ತಾಣ. ಇಲ್ಲಿ ಗ್ರಾಹಕ ಅನ್ನೋ ಪದವೇ ಮಾಯಾ! ಇದಕ್ಕೆಲ್ಲಾ ಕಾರಣ ಏನೆಂದರೆ... ಭವ್ಯ ಭಾರತ ಅಪ್ಪಿಕೊಂಡಿರೋ ರೋಗಗ್ರಸ್ತ ಭಾಷಾನೀತಿ.. ಹೇಳಿ ಗುರುಗಳೇ.... ಇದು ಬದಲಾಗಬೇಕೋ ಬೇಡವೋ?