ಕರ್ನಾಟಕ ರಾಜ್ಯಸರ್ಕಾರದ ಶಿಕ್ಷಣ ಮಂತ್ರಿಗಳಾದ ಮಾನ್ಯಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ರಾಜ್ಯದಲ್ಲಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರು ಮಾಡುವ ಬಗ್ಗೆ ತುಮಕೂರಿನಲ್ಲಿ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ. ಶ್ರೀಯುತರು ತಮ್ಮ ಹೇಳಿಕೆಯಲ್ಲಿ “ಜನರಿಂದ ಬೇಡಿಕೆ ಬಂದಲ್ಲಿ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಆರನೇ ತರಗತಿಯಿಂದ ಆರಂಭಿಸುತ್ತೇವೆ. ಇದು ಸರ್ಕಾರದ ಭಾಷಾನೀತಿಗೆ ವಿರುದ್ಧವಾಗಿಲ್ಲ, ಏಕೆಂದರೆ ಸರ್ಕಾರದ ಭಾಷಾನೀತಿ ಒಂದರಿಂದ ಐದನೇ ತರಗತಿಯವರೆಗಿನ ಕಲಿಕೆಗೆ ಮಾತ್ರಾ ಅನ್ವಯವಾಗುತ್ತದೆ” ಎಂದಿದ್ದಾರೆ. ಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದಾಗ ಸರ್ಕಾರವು ಶಿಕ್ಷಣದಲ್ಲಿನ ಭಾಷಾನೀತಿಯ ಬಗ್ಗೆ ಹೊಂದಿರುವ ನಿಲುವನ್ನು ಸಡಿಲಗೊಳಿಸುತ್ತಿರುವುದು ಕಾಣುತ್ತದೆ ಮತ್ತು ತಪ್ಪುದಾರಿಯೆಡೆಗೆ ನಾಡನ್ನು ಒಯ್ಯುತ್ತಿರುವಂತೆ ತೋರುತ್ತದೆ.
ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ರಾಜ್ಯಸರ್ಕಾರ ಹೊತ್ತಿರುವುದು ಸರಿಯಾಗಿದೆ. ಆದರೆ ನಿಭಾಯಿಸುತ್ತಿರುವ ರೀತಿ ನಿರಾಶಾದಾಯಕವಾಗಿದೆ.
ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ...ಪ್ರಪಂಚದ ಮುಂದುವರೆದ ನಾಡುಗಳಲ್ಲೆಲ್ಲಾ ಕಲಿಕೆಯೆಂಬುದು ತಾಯ್ನುಡಿಯಲ್ಲೇ ಇರುವುದನ್ನು ನಾವು ಬಹುತೇಕ ಕಡೆ ನೋಡಬಹುದು. ಜಪಾನ್, ಚೀನಾ, ಇಂಗ್ಲೇಂಡು, ಫ್ರಾನ್ಸ್, ಜರ್ಮನಿ... ಮೊದಲಾದ ಅನೇಕ ದೇಶಗಳು ಇದಕ್ಕೆ ಉದಾಹರಣೆಯಾಗಿ ನಿಂತಿವೆ. ಯುನೆಸ್ಕೋ ಕೂಡಾ ತಾಯ್ನುಡಿಯಲ್ಲಿನ ಕಲಿಕೆಗೆ ಒತ್ತು ನೀಡಿ ನಿಲುವನ್ನು ಘೋಷಿಸಿದೆ. ಪ್ರಪಂಚದ ನಾನಾ ವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಈ ಬಗ್ಗೆ ಗೊಂದಲವಿಲ್ಲದ ಒಂದೇ ತೆರನಾದ ಅನಿಸಿಕೆ ಹೊಂದಿದ್ದಾರೆ. ಕರ್ನಾಟಕ ರಾಜ್ಯಸರ್ಕಾರವೂ ಸುಪ್ರಿಂಕೋರ್ಟಿನ ಒಂದು ಆಶಯದಂತೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟು ಭಾಷಾನೀತಿ ರೂಪಿಸಿಕೊಂಡಿದೆ. ಹಾಗಾಗಿ ತಾಯ್ನುಡಿಯಲ್ಲಿ ಕಲಿಕೆಯು ಪರಿಣಾಮಕಾರಿ ಎನ್ನುವುದರ ಬಗ್ಗೆ ಈ ಹಿನ್ನೆಲೆಯಲ್ಲಿ ಯಾವ ಅಪಸ್ವರವೂ ಇಲ್ಲ ಎನ್ನುವುದು ವಾಸ್ತವವಾಗಿದೆ. ಅಷ್ಟೇ ಏಕೆ ಯಾವುದೇ ವಿಷಯವನ್ನು ನಮ್ಮ ತಾಯ್ನುಡಿಯಲ್ಲಿ ಕಲಿಯುವುದು ಸಮರ್ಪಕವೂ ಸುಲಭವೂ ಆಗಿದೆಯೆನ್ನುವುದು ಎಲ್ಲರಿಗೂ ಅನುಭವ ವೇದ್ಯವಾಗಿದೆ.
ಕರ್ನಾಟಕದ ಪರಿಸ್ಥಿತಿ
ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೫ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ” ಎನ್ನುವ ಅನಿಸಿಕೆಯಿದೆ. ವಾಸ್ತವವಾಗಿ ಇವುಗಳಲ್ಲಿ ಕೆಲವಲ್ಲಿ ಹುರುಳೂ ಇಲ್ಲದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದಲ್ಲಿ ಮಾತ್ರವೇ ಉನ್ನತ ಶಿಕ್ಷಣವಿರುವಾಗ ಅದಕ್ಕೆ ಹೋಗುವಾಗ ತೊಡಕಾಗುತ್ತದೆ ಎನ್ನುವುದು ದಿಟ. ವಾಸ್ತವವಾಗಿ ಉನ್ನತ ಶಿಕ್ಷಣವೂ ಸೇರಿದ ಹಾಗೆ ಎಲ್ಲ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕೆಂಬುದೇ ಸರಿಯಾದದ್ದಾದರೂ ಇಂದು ಪರಿಸ್ಥಿತಿ ಹಾಗಿಲ್ಲ ಅನ್ನುವುದು ವಾಸ್ತವ. ಹಾಗಾದರೆ ಈ ಕಲಿಕಾಮಾಧ್ಯಮ ಬದಲಾವಣೆಯೆನ್ನುವುದನ್ನು ಸಲೀಸಾಗಿ ಆಗಿಸುವಂತಹ ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ. ಒಂದು ಹಂತದವರೆಗೆ ಕನ್ನಡದಲ್ಲಿ ಕಲಿಕೆ ನಡೆಯಿಸಿ, ಇಂಗ್ಲೀಶ್ ಭಾಷೆಯನ್ನು ಸರಿಯಾಗಿ ಕಲಿಸುವುದರ ಮೂಲಕ ತೊಡಕನ್ನು ಕಡಿಮೆ ಮಾಡಿಸಬಹುದಾಗಿದೆ. ಕನ್ನಡದಲ್ಲೇ ಕಲಿತ ಪೋಶಕರನೇಕರು ತಾವು ಇಂಗ್ಲೀಶ್ ಬರದೆ ಅನುಭವಿಸಿದ್ದ ಪಾಡು ನೆನೆದು ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸಲು ಸಜ್ಜಾಗುತ್ತಾರೆ. ಹಾಗೆ ಮಾಡುವ ಭರದಲ್ಲಿ ಮಗುವಿನ ವಾತಾವರಣವನ್ನೇ ಬದಲಿಸಲೂ ಮುಂದಾಗುತ್ತಾರೆ. ಹೀಗೆ ಪರಿಸರದ ನುಡಿಯೇ ಬದಲಾಗುವುದಾದರೆ ಮಗುವಿನ ಇಂಗ್ಲೀಶಿನಲ್ಲಿನ ಕಲಿಕೆ ಸಲೀಸೇ.. ಆದರೆ ಇಡೀ ಕನ್ನಡನಾಡಿನ ಪರಿಸರವನ್ನು ಬದಲಿಸಲಾಗದಲ್ಲಾ? ಇಂದು ಪರಿಸರದಲ್ಲಿ ಇಂಗ್ಲೀಶಿನ ಗಂಧಗಾಳಿಯಿಲ್ಲದ ಮಗುವನ್ನು ಇಂಗ್ಲೀಶ್ ಮಾಧ್ಯಮದ ಕಲಿಕೆಗೆ ಒಡ್ಡುವುದು ’ಈಜು ಬಾರದ ಕೂಸನ್ನು ನೀರಲ್ಲಿ ಮುಳುಗಿಸಿ ಕೊಂದಂತೆ’! ಹಾಗಾಗಿ ಪೋಶಕರು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸುವ ಮುನ್ನ ತಮ್ಮ ಮಕ್ಕಳು ಕನ್ನಡವೂ ಬಾರದ, ಇಂಗ್ಲೀಶಿನಲ್ಲೂ ಪರಿಣಿತಿಯಿಲ್ಲದೇ ಎಡಬಿಡಂಗಿಗಳಾಗುವ ಅಪಾಯವನ್ನು ಮನಗಾಣಬೇಕಾಗಿದೆ. ಇದನ್ನು ತಿಳಿಸಿ ಹೇಳುವವರಾರು? ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ, ಆದರೆ ಇಂಗ್ಲೀಶ್ ಮಾಧ್ಯಮಕ್ಕೆ ಮುಂದೆ ಬದಲಾಗುವಾಗ ತೊಡಕಾಗದಂತೆ ಜೊತೆಯಲ್ಲಿ ಇಂಗ್ಲೀಶನ್ನೂ ಕಲಿಸುತ್ತೇವೆ ಎನ್ನುವ ಭರವಸೆಯನ್ನು ಕೊಡಬೇಕಾದದ್ದು ಕರ್ನಾಟಕ ರಾಜ್ಯ ಸರ್ಕಾರ.
ಬುದ್ಧಿವಂತರಾಗುತ್ತಾರೆ ಅನ್ನೋ ಮಾರುಕಟ್ಟೆ ತಂತ್ರ!ಮಕ್ಕಳು ಬುದ್ಧಿವಂತರಾಗುತ್ತಾರೆ ಎನ್ನುವುದು ಇಂಗ್ಲೀಶ್ ಮಾಧ್ಯಮ ಶಾಲೆಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಹಬ್ಬಿಸಿರುವ ಪೊಳ್ಳು ವದಂತಿ. ವಾಸ್ತವವಾಗಿ ತಾಯ್ನುಡಿಯಲ್ಲಿ ಕಲಿತ ಮಕ್ಕಳು “ಕಾನ್ಸೆಪ್ಚುಯಲ್ ಥಿಂಕಿಂಗ್”ನಲ್ಲಿ (ತಿರುಳು ಚಿಂತನೆ/ ಕಲಿಕೆಯಲ್ಲಿ) ಅತ್ಯುತ್ತಮರಾಗಿರುತ್ತಾರೆ ಎನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಟುಸ್ ಪುಸ್ ಇಂಗ್ಲೀಶ್ ಮಾತಾಡುವುದನ್ನೇ ಬುದ್ಧಿವಂತಿಕೆ ಎಂದು ನಂಬುವ ಅಮಾಯಕ ತಾಯ್ತಂದೆಯರು ಇಂಗ್ಲೀಶ್ ಮಾಧ್ಯಮದ ಮೊರೆ ಹೋಗುವುದು ಸಹಜ. ಈ ಪೊಳ್ಳನ್ನು ದೂರಮಾಡುವ ಹೊಣೆಗಾರಿಕೆ ಯಾರದ್ದು? ಕರ್ನಾಟಕ ರಾಜ್ಯ ಸರ್ಕಾರದ್ದು.. ಅಲ್ಲವೇ?
ಒಳ್ಳೇ ದುಡಿಮೆಯ ಅವಕಾಶಇನ್ನು ಮೂರನೆಯ ಅನಿಸಿಕೆ ಎಂದರೆ ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವುದು. ಹೌದೂ, ಓದಿನಲ್ಲಿ ಹೆಚ್ಚಿನ ಅಂಕ ಪಡೆದು, ಸಂದರ್ಶನದಲ್ಲಿ ಚೆನ್ನಾಗಿ ಪಾಲ್ಗೊಳ್ಳುವವರಿಗೆ ಒಳ್ಳೆ ಕೆಲಸ ಸಿಗುವುದು ಸಹಜ. ಆದರೆ ಹೀಗೆ ಒಳ್ಳೆಯ ಅಂಕ ಗಳಿಸಲಾಗಲೀ, ಸಂದರ್ಶನದಲ್ಲಿ ಚೆನ್ನಾಗಿ ಮಾಡಲಾಗಲೀ ಬೇಕಿರುವುದು ಆತ್ಮವಿಶ್ವಾಸ ಮತ್ತು ಅರಿವು ಎನ್ನುವುದು ಇಂತಹ ಸಂದರ್ಶನಗಳನ್ನು ಎದುರಿಸಿದ ಮತ್ತು ನಡೆಸುತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜನರು, ಒಳ್ಳೆಯ ಕೆಲಸ ದಕ್ಕಿಸಿಕೊಳ್ಳಲು ಇಂಗ್ಲೀಶ್ ಭಾಷೆಯ ಕಲಿಕೆ ಸಾಕೋ, ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಕೆ ಬೇಕೋ ಎಂಬುದನ್ನು ಯೋಚಿಸಿ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂತಹ ಪರಿಣಿತಿಯನ್ನು, ನಿಮ್ಮ ಮಕ್ಕಳಿಗೆ ಅವರು ’ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುತ್ತಿರುವಾಗಲೂ’ ಒದಗಿಸಿಕೊಡುವ ಹೊಣೆಗಾರಿಕೆ ನಮ್ಮದು ಎನ್ನಬೇಕಾಗಿದೆ. ಯಾರು ಹೀಗೆನ್ನಬೇಕೆಂದರೆ ಅದು ಕರ್ನಾಟಕ ರಾಜ್ಯಸರ್ಕಾರ.
ಯಾವ ಕಟ್ಟುಪಾಡನ್ನೂ ಒಪ್ಪಬೇಕಿಲ್ಲ!ಇವೆಲ್ಲಾ ಮಾಡುತ್ತಲೇ ಕನ್ನಡದಲ್ಲಿ ಕಲಿಕೆಯನ್ನು ಇಂದು ಪ್ರಾಥಮಿಕ ಹಂತದವರೆಗೆ ಕಡ್ಡಾಯ ಎನ್ನುವ ನಿಲುವನ್ನು ಹೊಂದಿದ್ದರೂ ಕಡ್ಡಾಯದ ಕಟ್ಟುಪಾಡು ಬಿಟ್ಟು ಕನ್ನಡದ ಕಲಿಕೆಯನ್ನು ಉನ್ನತ ಶಿಕ್ಷಣದವರೆಗೂ ವಿಸ್ತರಿಸಬೇಕಾದ ಹೊಣೆ ಸರ್ಕಾರದ್ದೇ ಆಗಿದೆ. ಹಾಗಿರುವಾಗ ’ನಮ್ಮ ಭಾಷಾನಿಯಮ ಬರೀ ಐದನೇ ತರಗತಿವರೆಗೆ ಮಾತ್ರಾ ಅನ್ವಯವಾಗುತ್ತೆ, ಹಾಗಾಗಿ ಆರರಿಂದ ಇಂಗ್ಲೀಶ್ ಮಾಧ್ಯಮ ಮಾಡ್ತೀವಿ’ ಅನ್ನೋದು ಆತ್ಮವಂಚನೆ ಮಾತ್ರವಲ್ಲಾ, ಆತ್ಮವಿಶ್ವಾಸದ ಕೊರತೆಯೂ ಹೌದು. ಸರ್ಕಾರಕ್ಕೆ ಕನ್ನಡ ಮಾಧ್ಯಮದ ಕಲಿಕೆಯಿಂದ ಕನ್ನಡಿಗರ ಬದುಕನ್ನು ಹಸನುಗೊಳಿಸಲು ಅಸಾಧ್ಯ ಅನ್ನಿಸಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಮಾಧ್ಯಮ ಆರಂಭಿಸಲಿ. ಹಾಗೆ ಆರಂಭಿಸುವ ಮುನ್ನ ಪರಿಸರದ ನುಡಿಯಲ್ಲಿನ ಕಲಿಕೆಗಿಂತಾ ಪರಭಾಷಾ ಮಾಧ್ಯಮವೊಂದರ ಮೂಲಕ ಯಾವುದೇ ಜನಾಂಗದ ಕಲಿಕೆ ಅತ್ಯುತ್ತಮವಾಗುತ್ತದೆ ಎನ್ನುವುದಕ್ಕೆ ಒಂದು ವೈಜ್ಞಾನಿಕ ಅಧ್ಯಯನದ ಆಧಾರ ಕೊಡಲಿ. ಈ ಹೊಣೆಗಾರಿಕೆ ಕರ್ನಾಟಕ ಸರ್ಕಾರದ್ದು!
ಬಲು ಮುಖ್ಯವಾಗಿ ಮೇಲಿನ ಮೂರು ಕಾರಣಗಳಿಂದಾಗಿ ಕನ್ನಡಿಗ ಪೋಶಕರು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಶ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಶ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ಸಮಾನತೆಯ ಆಕರ್ಶಕವಾದ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಶ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಸೆಳೆತಕ್ಕೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ,
ರಾಜ್ಯದ ನಿಯಮ ಯಾರನ್ನೋ ನೋಡಿ ನಿಕ್ಕಿಯಾಗದುಅಂತೆಯೇ ಜನರು ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ” ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಇಂದು ಯಾರೇ ತಾಯ್ನುಡಿಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿಲ್ಲವಾದಲ್ಲಿ ಅದು ಅವರು ತಮ್ಮ ಮಕ್ಕಳಿಗೆ ಬಗೆಯುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು. ಯಾರೋ ಕೆಲವರು (ಇದು ಹಲವರಾದರೂ...) ತಮ್ಮ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದ ಶಿಕ್ಷಣ ಕೊಡಿಸಿಬಿಟ್ಟರು ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಯನ್ನೇ ತೀರ್ಮಾನಿಸುವುದು ಸರಿಯಲ್ಲ. ಹಾಗಾಗಿ ರಾಜ್ಯಸರ್ಕಾರ ಕನ್ನಡದಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸಿ ಜಾರಿಮಾಡಲಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅವರ ಆಯ್ಕೆಯ ವಿದೇಶಿ ಭಾಷೆಯನ್ನು ಪ್ರಾಥಮಿಕ ಹಂತದ ನಂತರ ಒಂದು ಭಾಷೆಯಾಗಿ ಕಲಿಸಲು ಏರ್ಪಾಟು ಮಾಡಲಿ. ಈಗ ಇನ್ನೂ ಉನ್ನತ ಶಿಕ್ಷಣವು ಇಂಗ್ಲೀಶಿನಲ್ಲಿ ಮಾತ್ರಾ ಲಭ್ಯವಿರುವುದರಿಂದ, ಕನ್ನಡ ಮಾಧ್ಯಮದ ಮಕ್ಕಳಿಗೆ-ಇಂಗ್ಲೀಶ್ ಮಾಧ್ಯಮ ಕಲಿಕೆಗೆ ಬದಲಾಗುವಾಗ-ಆದಷ್ಟು ತೊಡಕನ್ನು ಕಡಿಮೆ ಮಾಡುವಂತಹ ಯೋಜನೆಗಳನ್ನು ತಾತ್ಕಾಲಿಕವಾಗಿ ರೂಪಿಸಿ ಜಾರಿಗೊಳಿಸಲಿ. ಇದೆಲ್ಲಾ ಬಿಟ್ಟು, ತಾನೇ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರುಮಾಡೋ ಮೂಲಕ, ಕನ್ನಡದ ಮಕ್ಕಳ ಕಲಿಕೆಯನ್ನು ಅವರ ಪರಿಸರದಲ್ಲಿಲ್ಲದ ಭಾಷೆಯೊಂದರಲ್ಲಿ ಮಾಡಿಸುವ ಮೂಲಕ, ಒಳ್ಳೇ ಕೆಲಸ – ಒಳ್ಳೇ ಓದು – ಬುದ್ಧಿವಂತಿಕೆ ಎನ್ನುವ ಬಣ್ಣದ ಸಕ್ಕರೆಕಡ್ದಿಯ ಮಾತುಗಳ ಮೂಲಕ... ಜನರನ್ನು ಏಳಿಗೆಯ ದಾರಿಯಿಂದ ಮತ್ತಷ್ಟು ದೂರ ಒಯ್ಯುವುದು ನಿಶ್ಚಿತ.