ಕನ್ನಡ ಗೆಳೆಯರ ಬಳಗ: ಬೆಳ್ಳಿಹಬ್ಬಕ್ಕೆ ನಲ್‌ಬರವು...





ಕನ್ನಡ ಗೆಳೆಯರ ಬಳಗ, ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕನ್ನಡ ಕನ್ನಡಿಗ ಕರ್ನಾಟಕಗಳ ಪರವಾಗಿ ದುಡಿಯುತ್ತಿರುವ ಕನ್ನಡ ಸಂಘಟನೆಯಾಗಿದೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ದಿನಾಂಕ ೨೭ನೇ ನವೆಂಬರ್ ೨೦೧೧ರ ಭಾನುವಾರದಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಪುಸ್ತಕ ಬಿಡುಗಡೆ, ಕನ್ನಡ ಬೆಂಗಳೂರು : ಸುಂದರ ಬೆಂಗಳೂರು ಎನ್ನುವ ಚಿಂತನಾಗೋಷ್ಟಿ, ಕನ್ನಡ ಸಂಘಟನೆಗಳ ಸ್ನೇಹಸಂಗಮ ಮತ್ತು ಕಾರ್ಯಕರ್ತರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಕನ್ನಡಪರ ಮನಸ್ಸುಗಳು ಸೇರಲೊಂದು ಒಳ್ಳೆಯ ಸಂದರ್ಭ ಇದಾಗಿದ್ದು, ಎಲ್ಲರನ್ನೂ ಕನ್ನಡ ಗೆಳೆಯರ ಬಳಗದ ಪರವಾಗಿ ಆಮಂತ್ರಿಸುತ್ತಿದ್ದೇವೆ. ಬನ್ನಿ, ಪಾಲ್ಗೊಳ್ಳಿ... ನಲ್ಬರವು...!

ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮೊನ್ನೆ ಪಾರಿಭಾಷಿಕ ಪದಗಳ ಬಗ್ಗೆ ಭೈರಪ್ಪನವರು ಹೊಂದಿರುವ ನಿಲುವಿನ ಬಗ್ಗೆ ಮಾತಾಡಿದ್ದೆವು. ಇದೀಗ ಭೈರಪ್ಪನವರು ಪಾರಿಭಾಷಿಕ ಪದಗಳ ಬಗ್ಗೆ ತಮ್ಮ ಅನಿಸಿಕೆ ಹೇಳಲು ಪ್ರೇರೇಪಿಸಿದ ಪ್ರಶ್ನೆ ಮತ್ತು ಅದಕ್ಕೆ ನೀಡಿದ ಉತ್ತರದಲ್ಲಿನ ಮತ್ತೊಂದು ಮಹತ್ವದ ನಿಲುವಿನ ಬಗ್ಗೆ ಮಾತಾಡೋಣ.


ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆ!


ಹೌದು! ಈ ಪ್ರಶ್ನೆಗೆ ಭೈರಪ್ಪನವರು ನೀಡಿದ ಉತ್ತರದ ಬಗ್ಗೆ ಮಾತಾಡುವುದಕ್ಕೂ ಮುನ್ನ ಪ್ರಶ್ನೆಯ ಒಳಮರ್ಮದತ್ತ ನೋಡೋಣ. ಶ್ರೀ ಶತಾವಧಾನಿ ಗಣೇಶ್ ಅವರು ಹೀಗೆ ಪ್ರಶ್ನೆ ಕೇಳಿದ್ದಾರೆ:

೧೪. ಈ ಹೊತ್ತು ಪ್ರಾದೇಶಿಕ ಭಾಷೆಗಳ, ಪ್ರಾಂತಗಳ ಮತ್ತು ಸಂಸ್ಕೃತಿಗಳ ಬಗೆಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಷಣವೆನಿಸಿದೆ. ಆದರೆ ಭಾರತದ ಬಗ್ಗೆ ಮಾತನ್ನಾಡುವುದು ಸಂಕುಚಿತತೆ ಎನ್ನಿಸಿದೆ. ಏಕೆ?
ಮೊದಲಿಗೆ, `ಭಾರತದಲ್ಲಿ ನಾನಾ ಭಾಷೆಗಳೂ, ಪ್ರಾಂತಗಳೂ ಇರುವುದು ಎಷ್ಟು ಸ್ಪಷ್ಟವಾಗಿದೆಯೋ ಅಂತೆಯೇ ನಾನಾ ಸಂಸ್ಕೃತಿಗಳಿರುವುದೂ ಸ್ಪಷ್ಟವಾಗಿದೆ' ಎಂಬುದನ್ನು ಗಣೇಶರು ಒಪ್ಪಿರುವುದು ಸಂತಸದ ವಿಷಯ. ಆದರೆ ತಮ್ಮ ಪ್ರಶ್ನೆಯಲ್ಲೇ ಪ್ರಾದೇಶಿಕತೆಯನ್ನು ಭಾರತೀಯತೆಗೆ ಎದುರಾಳಿಯಾಗಿ ನಿಲ್ಲಿಸಿರುವುದು, ಅವರಿಗೆ ಪ್ರಾಂತೀಯ ವಾದದ ಬಗ್ಗೆ ತಪ್ಪುಗ್ರಹಿಕೆ/ ಪೂರ್ವಾಗ್ರಹಗಳು ಇವೆಯೇನೋ ಎನ್ನಿಸುವಂತಿದೆ. ಯಾಕೆಂದರೆ, ‘ಪ್ರಾದೇಶಿಕತೆ ಬಗ್ಗೆ ಮಾತಾಡುವುದು ವಿಶಾಲ ಮನೋಭಾವನೆಯೆಂದಾಗಲೀ, ಭಾರತದ ಬಗ್ಗೆ ಮಾತಾಡುವುದು ಸಂಕುಚಿತತೆ ಎನ್ನುವುದಾಗಲೀ’ ಶ್ರೀಯುತರಿಗೆ ಮನವರಿಕೆಯಾದದ್ದು ಹೇಗೆಂದು ಅವರೇನೂ ತಿಳಿಸಿಲ್ಲ. ಆದರೂ ಅದೇ ದಿಟವೆನ್ನುವಂತೆ ಪ್ರಶ್ನೆ ಕೇಳಿ ಆ ಮೂಲಕ "ಪ್ರಾದೇಶಿಕವಾದವುಗಳ ಬಗ್ಗೆ ಮಾತನ್ನಾಡುವುದು  ಭಾರತದ ಬಗ್ಗೆ ಮಾತನ್ನಾಡುವುದಕ್ಕೆ ವಿರೋಧವಾದದ್ದು" ಎನ್ನುವ ಮನೋಭೂಮಿಕೆಯನ್ನು ಓದುಗರಲ್ಲಿ ಹುಟ್ಟುಹಾಕಿ, ಅದಕ್ಕೆ ಕಾರಣವೇನು? ಎಂದು ಜಾಣ್ಮೆಯಿಂದ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ಆ ಮೂಲಕ ಉತ್ತರದ ದಿಕ್ಕನ್ನೂ ನಿರ್ದೇಶಿಸಿದ್ದಾರೆ. ಇದು ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆಯಾಗಿದೆಯಲ್ಲವೇ?


ಭೈರಪ್ಪನವರ ನಿಲುವು ಹುಟ್ಟು ಹಾಕಿದ ಪ್ರಶ್ನೆಗಳು!


ಭೈರಪ್ಪನವರು ಈ ಪ್ರಶ್ನೆಗೆ ಉತ್ತರಿಸುವಾಗ ಸ್ವಲ್ಪ ತಡವರಿಸಿ ಉತ್ತರವನ್ನು ಸುತ್ತಿ ಬಳಿಸಿ ನೀಡಲು ಯತ್ನಿಸಿರುವುದು ಕಾಣುತ್ತದೆ ಮತ್ತು ಈ ಉತ್ತರ ನೀಡುವ ಭರದಲ್ಲಿ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ತಿಳಿಯುತ್ತದೆ. ಹೇಗೆಂದು ನೋಡೋಣ...
ಈ ಭಾವನೆಯು ಪ್ರಧಾನವಾಗಿ ಡಿಎಂಕೆಯದು. ಮಹಾರಾಷ್ಟ್ರ, ಪಂಜಾಬ್, ಆಂಧ್ರ, ಗುಜರಾತುಗಳಲ್ಲಿಲ್ಲ.
> ಭಾರತದ ಮೊದಲ ಭಾಷಾವಾರು ರಾಜ್ಯ ಆಂಧ್ರ. ಇಲ್ಲಿ ತೆಲುಗು ನುಡಿ, ನಾಡಿನ ಬಗ್ಗೆ ದನಿಯೆತ್ತಿ ೫೮ ದಿವಸ ಉಪವಾಸ ಮಾಡಿ ಪ್ರಾಣ ತೆತ್ತವರು ಶ್ರೀ ಪೊಟ್ಟಿ ಶ್ರೀರಾಮುಲು. ಮೂಲತಃ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಕಾರಣವಾದದ್ದೇ ಆಂಧ್ರದ ಈ ಚಳವಳಿ.
> ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರನ್ನು ಕೇಂದ್ರವಾಗಿಸಿಕೊಂಡು ಹುಟ್ಟಿದ್ದು... ಶಿವಸೇನಾ. ಮರಾಠಿ ಕೇಂದ್ರಿತ ರಾಜಕೀಯ ಯುಗ ಆರಂಭವಾದದ್ದು ೧೯೬೬ರಲ್ಲೇ. ಮುಂದೆ ಅದು ಎಂ.ಇ.ಎಸ್, ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ಉದಯದವರೆಗೂ ಸಾಗಿ ಬಂದಿದೆ. 
> ಪಂಜಾಬ್ ಪ್ರಾಂತ್ಯದಲ್ಲಿ ಖಲೀಸ್ಥಾನದ ಬೇಡಿಕೆ, ಆ ಒಂದು ರಕ್ತಸಿಕ್ತ ಹೋರಾಟದ ಚಳವಳಿ, ಆನಂದ್‌ಪುರ್ ಸಾಹೇಬ್ ನಿರ್ಣಯವಾದ ಪ್ರತ್ಯೇಕ ಖಾಲಿಸ್ತಾನದ ಘೋಷಣೆಯೂ ಪಂಜಾಬಿ ಪ್ರಾಂತೀಯತೆಯ ಅಭಿವ್ಯಕ್ತಿಗಳೇ ಅಲ್ಲವೇ?
> ತನ್ನದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವ ಯಾವ ಪ್ರಾಂತ್ಯವೂ ತನ್ನ ಭಾಷೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನೂ, ತನ್ನ ಬೇರನ್ನು ಅದರಲ್ಲೇ ಗುರುತಿಸಿಕೊಳ್ಳುವುದನ್ನೂ ಬಿಡುವುದಿಲ್ಲಾ ಎನ್ನಲು ಕಟ್ಟಾ ರಾಷ್ಟ್ರೀಯವಾದದ ಬಿಜೆಪಿಯ ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ "ಗುಜರಾತಿ ಅಸ್ಮಿತಾ" ಘೋಷಣೆಯೇ ಸಾಕ್ಷಿಯಾಗಿದೆ. ಮತ್ತಿದು ಸರಿಯಾಗೂ ಇದೆ.
ಬೆಂಗಾಲಿಗಳ ಭಾಷೆ ಸಂಸ್ಕೃತಿಗಳ ಅಭಿಮಾನವಂತೂ ವಿಶ್ವವಿಖ್ಯಾತ. ರವೀಂದ್ರನಾಥರ ಸೋನಾರ್ ಬಾಂಗ್ಲಾ ಆಗಲೀ, ಬಂಕಿಮರ ವಂದೆಮಾತರಂ ಆಗಲೀ ಬಂಗಾಳಿ ಸಂಸ್ಕೃತಿಯ ಅಭಿವ್ಯಕ್ತಿಯೇ ಅಲ್ಲವೇನು?


ಇವೆಲ್ಲಾ ಒಂದು ಕಡೆಯಿದ್ದು ಮತ್ತೊಂದೆಡೆ ಪ್ರಾದೇಶಿಕ ಚಿಂತನೆಗಿಂತಾ ಮಿಗಿಲಾಗಿ ರಾಷ್ಟ್ರೀಯತೆಯ ಚಿಂತನೆಯೊಂದಿಗೇ ಕೈಗೂಡಿಸಿದ ಕನ್ನಡನಾಡಿನಲ್ಲಿ ಪ್ರಾದೇಶಿಕ ಚಿಂತನೆ ಮೂಡುವುದರ ಬಗ್ಗೆ ಗಣೇಶ್ ಮತ್ತು ಭೈರಪ್ಪನವರು ಎತ್ತಿದ ಆಕ್ಷೇಪದ ಮಾತುಗಳೇಕೋ ಉಚಿತವಾದುದಲ್ಲ ಅನ್ನಿಸುತ್ತದೆ. ಗಮನಿಸಿ ನೋಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಹೆಚ್ಚಿನವರೆಲ್ಲಾ ಈ ಮೇಲಿನ ಪ್ರದೇಶಗಳ ಜನರೇ ಆಗಿದ್ದಾರೆ. ಹಾಗಾದರೆ ಪ್ರಾದೇಶಿಕ ಚಿಂತನೆ ರಾಷ್ಟ್ರೀಯತೆಗೆ ಮಾರಕವಾಗುವುದಾದರೂ ಹೇಗೆ? ಕನ್ನಡಿಗರಿಗೆ ಕರ್ನಾಟಕತ್ವ ಎನ್ನುವುದೇ ಭಾರತೀಯತೆ ಅಲ್ಲವೇ? ಆಲೂರು ವೆಂಕಟರಾಯರ ಮಾತು "ಕರ್ನಾಟಕಾಂತರ್ಗತ ಭಾರತಮಾತೆ" ಎನ್ನುವುದನ್ನು ಅರಿತರೆ ಪ್ರಾದೇಶಿಕತೆ ಮತ್ತು ಭಾರತೀಯತೆಗಳೆರಡೂ ಒಂದೇ ಎನ್ನುವುದು ಅರಿವಾಗುತ್ತದೆ.


ಮುಂದುವರೆಯುತ್ತಾ ಭೈರಪ್ಪನವರು ಈ ಭಾವನೆಗೆ ಕಾರಣವನ್ನು ಸಂಸ್ಕೃತ ದ್ವೇಷ/ ವೇದದೆಡೆಗಿನ ದ್ವೇಷ/ ಪರಭಾಷಿಕರ ಪ್ರಾಬಲ್ಯಗಳಿಗೆ ಆರೋಪಿಸುತ್ತಾರೆ. ಆಂಗ್ಲರು ಭಾರತವನ್ನು ಒಡೆಯಲು ಬಳಸಿದ್ದ ತಂತ್ರಗಳ ಫಲ ಎಂದಿದ್ದಾರೆ. ವೈಜ್ಞಾನಿಕವಾಗಿ ಭಾಷಾ ವಿಜ್ಞಾನಿಗಳು ಗುರುತಿಸಿರುವ ದಿಟವಾದ ‘ಕನ್ನಡದ ಬೇರುಗಳು ಸಂಸ್ಕೃತದಲ್ಲಿಲ್ಲ’ ಎಂಬುದನ್ನು ಶ್ರೀಯುತರೂ ಒಪ್ಪುತ್ತಾರೆಂದುಕೊಳ್ಳೋಣ. ಹೀಗಿರುವಾಗ ನಮ್ಮತನದ ಬೇರನ್ನು ನಾವು ಅರಸುವುದೇ ಪಾಪವೆನ್ನುವಂತಹ ನಿಲುವು ಸರಿಯೇ? ನಮ್ಮ ಸಂಸ್ಕೃತಿಯ ಅನನ್ಯತೆಯ ಬಗ್ಗೆ ಮಾತಾಡಿದರೆ ಅದೆಂತು ಸಂಸ್ಕೃತ ದ್ವೇಷವಾಗುವುದೋ ತಿಳಿಯದು. ಕರ್ನಾಟಕದಲ್ಲಿ ಪರಭಾಷಿಕರ ಪ್ರಾಬಲ್ಯದ ಬಗ್ಗೆ ಹೇಳಿರುವ ಮಾತೊಂದೇ ಇದ್ದುದ್ದರಲ್ಲಿ   ಅರೆ ಸರಿಹೊಂದುವ ಮಾತು. ಆದರೂ ಭಾರತದ ಒಗ್ಗಟ್ಟನ್ನು ಆಂಗ್ಲರನ್ನು ತೋರಿಸಿ, ಚೀನೀಯರನ್ನು ತೋರಿಸಿ, ಪಾಕೀಸ್ತಾನಿಗಳನ್ನು ತೋರಿಸಿ, ಭಯೋತ್ಪಾದನೆಯನ್ನು ತೋರಿಸಿ... ಸಮಾನ ಶತೃತ್ವದ ಆಧಾರದ ಮೇಲೆ ಕಟ್ಟುವ ಹಾಗೂ ಉಳಿಸುವ ಪ್ರಯತ್ನಗಳನ್ನೇ ನಮ್ಮ ಸುತ್ತಮುತ್ತೆಲ್ಲಾ ಕಾಣುತ್ತಿರುವಾಗ, ಭೈರಪ್ಪನವರ ಈ ಅನಿಸಿಕೆ ಇನ್ನು ಹೇಗೆ ತಾನೇ ಇರಲು ಸಾಧ್ಯ ಅನ್ನಿಸದಿರದು. ಪ್ರಾದೇಶಿಕ ಚಿಂತನೆಗೆ ಕಾರಣ, ನಮ್ಮತನದ ಮೇಲೆ ನಡೆಯುವ ಭಾಷಾ, ಸಾಂಸ್ಕೃತಿಕ ಆಕ್ರಮಣಗಳಷ್ಟೇ ಅಲ್ಲಾ... ನಮ್ಮ ನಾಡು ಏಳಿಗೆ ಹೊಂದಬೇಕೆಂಬ ತುಡಿತವೇ ಮುಖ್ಯಕಾರಣವೆನ್ನುವುದನ್ನು ಭೈರಪ್ಪನವರೂ, ರಾ ಗಣೇಶರೂ ಗುರುತಿಸಿದ್ದರೆ ಚೆನ್ನಿತ್ತು.. ಒಟ್ಟಾರೆ ಶತಾವಧಾನಿಗಳ ಪ್ರಶ್ನೆಗೆ ಭೈರಪ್ಪನವರು ನೀಡಿರುವ ಉತ್ತರವು ನೇರವಾಗಿಲ್ಲದೆ ಕೊಂಕಣವನ್ನೆಲ್ಲಾ ಸುತ್ತಿಸಿ ಮೈಲಾರದ ಪಕ್ಕದೂರಿಗೆ ಕರೆತಂದು ನಿಲ್ಲಿಸಿದಂತಿದೆ.


ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಹಿರಿದಾದ ಸಾಧನೆಗೈದಿರುವ ಈ ಇಬ್ಬರು ಗೌರವಾನ್ವಿತ ಮಹನೀಯರ ಪ್ರಶ್ನೆ ಮತ್ತು ಉತ್ತರಗಳೆರಡನ್ನೂ ನೋಡಿದಾಗ ಒಟ್ಟಾರೆಯಾಗಿ ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳ ಬಗ್ಗೆ ಇವರುಗಳು ಹೊಂದಿರುವ ನಿಲುವುಗಳು ಸರಿಯಿಲ್ಲದಿರುವುದು ಕಾಣುತ್ತದೆ. ಸತ್ಯದ ಹುಡುಕಾಟವೇ ಪರಮಗುರಿಯಾಗಿದೆ ಎನ್ನುವ ಈರ್ವರೂ ಈ ದಿಕ್ಕಿನಲ್ಲಿ ಮುಂದಾದರೂ ಯೋಚಿಸಿಯಾರು ಅಂದ್ಕೊಳ್ಳೋಣ... ಅಲ್ವಾ ಗುರೂ!

ಪಾರಭಾಷಿಕ ಪದಗಳು ಮತ್ತು ಭೈರಪ್ಪನವರ ನಿಲುವು!

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದರಲ್ಲಿ ಮುಖ್ಯವಾಗಿ ಕನ್ನಡಿಗರ ನುಡಿ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಇವರ ಅನಿಸಿಕೆಗಳು ನಿಜಕ್ಕೂ ನಮ್ಮನ್ನು ಚಿಂತನೆಗೆ ಒಡ್ದುವಂತಿದೆ. ಇಡೀ ಭಾರತವೆಲ್ಲಾ ಒಂದೇ ಪದಗಳನ್ನು ಬಳಸಬೇಕು, ಆ ಕಾರಣಕ್ಕಾಗಿ ಅವು ಸಂಸ್ಕೃತ ಮೂಲದ್ದಾಗಿರಬೇಕು ಎನ್ನುವ ನಿಲುವಿನ ಶ್ರೀ ಭೈರಪ್ಪನವರು ಇಲ್ಲೂ ಅದನ್ನೇ ಪ್ರತಿಪಾದಿಸಿದ್ದಾರೆ.
೪೫ ವರ್ಷಗಳ ಹಿಂದಿನ ಶಾಸ್ತ್ರಗಳ ಪಾರಿಭಾಷಿಕ ಪದಗಳನ್ನು ಕಟ್ಟುವ ಬಗ್ಗೆ ನೇಮಿಸಿದ್ದ ಒಂದು ಸಮಿತಿಯ ಸಭೆಯಲ್ಲಿ ತಮಿಳರು ಇಂಥಹ ನಡೆಯನ್ನು ವಿರೋಧಿಸಿದ್ದನ್ನು ಶ್ರೀಯುತರು ಹೇಳುತ್ತಾ ಇದರ ಪರಿಣಾಮವಾಗಿ ತಮಿಳಿನ ಪಾರಿಭಾಷಿಕ ಪದಗಳು ತಮಿಳರಿಗಷ್ಟೇ ತಿಳಿಯಬೇಕು ಎಂದಿದ್ದಾರೆ. ಹೀಗೆ ತಮಿಳರು ತಮಿಳಲ್ಲೇ ಪದಗಳನ್ನು ಹುಟ್ಟುಹಾಕಿ ಬಳಸೋದು (ಕನ್ನಡಿಗರು ಕನ್ನಡದಲ್ಲೇ) ಬೇರೆ ಭಾಷೆಗಳವರಿಗೆ ಆಯಾ ಭಾಷೆಯ ವೈಜ್ಞಾನಿಕ ಸಂಶೋಧನಾ ಬರಹಗಳನ್ನು ಅರ್ಥ ಮಾಡ್ಕೊಳ್ಳೋಕೆ ತೊಂದರೆಯಾಗುತ್ತೆ ಎಂದಿದ್ದಾರೆ. ಇವರ ಮಾತಿನ ಒಟ್ಟು ಸಾರವೆಂದರೆ ಇಡೀ ದೇಶದ ಎಲ್ಲೆಡೆ ಒಂದೇ ಪಾರಿಭಾಷಿಕ ಪದಗಳು ಇರಬೇಕು ಎನ್ನುವುದು. (ಕನಿಷ್ಠ ಅದು ತಮಿಳರಿಗಾದರೂ ಅರ್ಥವಾಗುತ್ತದೆ, ಭೈರಪ್ಪನವರು ಪ್ರತಿಪಾದಿಸಿದ ಕನ್ನಡ ಪದಗಳು(?) ಕನ್ನಡದ ಮಕ್ಕಳಿಗೂ ಅರ್ಥವಾಗದಲ್ಲಾ ಗುರೂ? ಅವರು ಕೊನೆಯಲ್ಲಿ ಹೇಳಿದಂತೆ ತಮಿಳಿನ ಪದಗಳೂ ಸರಿಯಿಲ್ಲಾ ಅನ್ನುವುದೇ ನಿಜವಾದರೆ ಅದಕ್ಕೆ ಅವರು ಸಂಸ್ಕೃತ ಬೇರಿನ ಪದಗಳನ್ನು ಒಪ್ಪದ್ದು ಕಾರಣವಲ್ಲ, ಸರಿಯಾಗಿ ಪದಗಳನ್ನು ಕಟ್ಟದ್ದೇ ಹೋದದ್ದು ಕಾರಣ ಅನ್ನೋದು ನಂಬಲರ್ಹವಾಗಿದೆ.)

ಭಾಷೆ: ಸರಳ ಕಲಿಕೆಗೋ? ಪರಭಾಷೆಯವರು ತಿಳಿಯಲಿಕ್ಕೋ?

ಸರಳವಾದ ಒಂದು ಪ್ರಶ್ನೆ: ಭಾಷೆ ಇರುವುದು ಕಲಿಕೆಗೋ? ಪರಭಾಷಿಕರು ಅರ್ಥ ಮಾಡಿಕೊಳ್ಳಲಿಕ್ಕೋ?
ಕಲಿಕೆ ಶುರುವಾಗುವುದೇ ಮಗು ತನ್ನ ಸುತ್ತಮುತ್ತಲಿನ ವಸ್ತುಗಳನ್ನು ಗುರುತಿಸುವ ಮೂಲಕ. ಈಗ 'ಮಗು ಏನನ್ನಾದರೂ ಬಳಸುತ್ತಿರಲಿ, ಪಾರಿಭಾಷಿಕ ಪದ ಮಾತ್ರಾ ಆಡುನುಡಿಯಿಂದ ದೂರವಿರುವುದೇ ಸರಿ' ಎಂದರೆ ಹೇಗೆ? ಇದಕ್ಕೆ ಸಣ್ಣ ಉದಾಹರಣೆಯೆಂದರೆ ನೀರನ್ನು 'ನೀರು' ಎಂದು ಗುರುತಿಸಿ ಬೆಳೆಯುವ ಮಗು ಮುಂದೆ ಅದನ್ನೇ 'ಜಲ'ವೆಂದೋ 'ಉದಕ'ವೆಂದೋ ಎಂದು ಬಳಸಿ ಕಲಿಕೆ ಮಾಡಬೇಕೆನ್ನುವುದು. ಇದು ಸಣ್ಣ ಉದಾಹರಣೆಯಾದರೂ ಇಂತಹ ನೂರಾರು ನಮ್ಮ ಪಠ್ಯಗಳಲ್ಲಿವೆ. ಕನ್ನಡಿ = ದರ್ಪಣ, ಉಬ್ಬು = ನಿಮ್ನ, ತಗ್ಗು = ಪೀನ, ಎಲೆ = ಪತ್ರ... ಹೀಗೆ!

ಇವುಗಳಲ್ಲಿ ಯಾವುದರಲ್ಲಿ ಕಲಿಯುವುದು ಸೂಕ್ತವೆಂದು ಇವರನ್ನೇನಾದರೂ ಕೇಳಿದರೆ "ಕರ್ನಾಟಕದಲ್ಲಿ ಬೇರೆ ಬೇರೆ ಒಳನುಡಿಗಳಿವೆ, ಅವುಗಳಲ್ಲೆಲ್ಲಾ ಹೇಗೆ ಕಲಿಕೆ ಮಾಡೋದು" ಎಂಬ ಆಕ್ಷೇಪ ಎತ್ತುತ್ತಾರೆ. ನಿಜವಾಗಿ ಆಯಾ ಒಳನುಡಿಗಳಲ್ಲಿ ಕಲಿಯುವ ವ್ಯವಸ್ಥೆ ಇರಬೇಕಾದ್ದು ಕಲಿಕೆಯ ಪರಿಣಾಮದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಹಾಗೆ ಸಿದ್ಧಪಡಿಸುವಲ್ಲಿನ ತೊಡಕಿನ ಕಾರಣದಿಂದಾಗಿ ನಂತರದ ದೂರದ ನುಡಿಯನ್ನು ಆಶ್ರಯಿಸುತ್ತೇವೆ. ಕನ್ನಡದ ವಿಷಯಕ್ಕೆ ಬಂದರೆ ಇದನ್ನು ನಾವು ಎಲ್ಲರ ಕನ್ನಡ ಎಂದಿದ್ದೇವೆ. ಇರಲಿ, ನಮ್ಮ ನಡುವೆ ನಾನಾ ಒಳನುಡಿಗಳಿವೆ ಎನ್ನುವುದು ನಮ್ಮಿಂದ ದೂರದ ಸಂಸ್ಕೃತವನ್ನು ಆಶ್ರಯಿಸಲು ಕಾರಣವಾಗುವುದು ಹೇಗೆ ಸರಿ? ಹಾಗೆ ನಮ್ಮ ಸಂಶೋಧನೆಗಳನ್ನು ಪರಭಾಷಿಕರು ಓದಿ ಅರಿಯಬೇಕು ಎಂದರೆ ಎಷ್ಟು ಜನ ಪರಭಾಷೆಯವರು ಕನ್ನಡ ಸಂಶೋಧನಾ ಪ್ರಬಂಧ ಓದುತ್ತಾರೆ? ಅಥವಾ ಕನ್ನಡಿಗರು ಎಷ್ಟು ಪರಭಾಷಾ ಸಂಶೋಧನಾ ಪ್ರಬಂಧಗಳನ್ನು ಓದುತ್ತಾರೆ? ಅರೆರೆ, ಇಷ್ಟಕ್ಕೂ ನಮ್ಮ ಸಂಶೋಧನಾ ಪ್ರಬಂಧಗಳನ್ನು ಜಗತ್ತಿನ ಜನರೆಲ್ಲಾ ಓದುವುದು ಬೇಡವೇ? ಬರೀ ಭಾರತೀಯ ಪರಭಾಷಿಕರು ಓದಲು ಸಹಾಯವಾಗುವಂತೆ ಸಂಸ್ಕೃತ ಬೇರಿನ ಪದಗಳನ್ನು ಕಟ್ಟುವುದು, ತಮಿಳರ 'ತಮಿಳಿನಲ್ಲಿ ಮಾತ್ರಾ ಇರಲಿ' ಎನ್ನುವ ಸಂಕುಚಿತತೆ(?)ಗಿಂತಾ ಹೀನಾಯವಲ್ಲವೇ? ಇವರ ವಾದವನ್ನು ವಿಸ್ತರಿಸಿಕೊಂಡು ಹೋಗಿ ನಾವು ಪ್ರಪಂಚಕ್ಕೆಲ್ಲಾ ಒಂದೇ ಪಾರಿಭಾಷಿಕ ಪದಗಳಿರಬೇಕು ಎನ್ನಬೇಕಾಗುತ್ತದೆ. ಆದರೆ ಇಂತಹ ನಿಲುವು ವೈವಿಧ್ಯ ವಿರೋಧಿ, ಜೀವ ವಿರೋಧಿ ನಿಲುವಾಗುತ್ತದೆ. ನೀವೇ ಹೇಳಿ...ಈ ವಿಷಯದಲ್ಲಿ ತಮಿಳರ ನಿಲುವು ಸರಿಯಾಗಿದೆಯೋ? ಭೈರಪ್ಪನವರ ನಿಲುವೋ? ಎಂದು ನೋಡಿದರೆ ಭೈರಪ್ಪನವರ ನಿಲುವಿನಲ್ಲಿನ ತೊಡಕು ಕಾಣುತ್ತದೆಯಲ್ಲವೇ?

ಕಲಿಕೆ ಅತ್ಯುತ್ತಮವಾಗೋದು ಕಲಿಯುವವನು ಈಗಾಗಲೇ ಕಲಿತಿರುವುದನ್ನು ವಿಸ್ತರಿಸಿಕೊಂಡು ಹೋಗುವುದರಿಂದಲೇ. ಪರಿಸರದಲ್ಲಿರುವ ಗ್ರಹಿಕೆಗೆ ಸಿಗುವ ಕಾಣುವ ಎಟುಕುವ ವಸ್ತುಗಳಿಂದಲೇ ಆಳವಾದ ಅರಿವುಗಳನ್ನು ದಕ್ಕಿಸಿಕೊಳ್ಳುವುದು ಸಾಧ್ಯವಲ್ಲವೇ? ಅಂದರೆ ಕಲಿಕೆಯನ್ನು ಜನರ ಹತ್ತಿರ ಹತ್ತಿರಕ್ಕೆ ಒಯ್ಯಲು ಇರುವ ಸಾಧನ ಅವರಾಡುವ ನುಡಿಯಲ್ಲೇ ಅದನ್ನು ಒದಗಿಸಿಕೊಡುವುದೇ ಆಗಿದೆ. ಇವತ್ತು ಕನ್ನಡದಲ್ಲಿ ಇಂಥಾ ಏರ್ಪಾಟಿಲ್ಲಾ ಅನ್ನೋದು ಗೊತ್ತೊರೋದೆ... ಆದರೆ ನಾವು ಸಾಗಬೇಕಾದ ದಿಕ್ಕು ಯಾವ ಕಡೆಗಿರಬೇಕು? ಜನರಿಗೆ ಹತ್ತಿರದ ನುಡಿಯಲ್ಲಿ ಪದಗಳನ್ನು, ಅವು ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ್ದಿರಲಿ, ಕಟ್ಟುವ ಕಡೆಗಿರಬೇಕು. ಹೀಗೆ ಇಲ್ಲದ ಸಮಾನ ಪದಗಳನ್ನು ಕೃತಕವಾಗಿ ಕಟ್ಟುವುದರಲ್ಲಲ್ಲ ಮತ್ತು ಅಂತಹ ಕಟ್ಟುವಿಕೆಯ ಕಾರಣದಿಂದಾಗಿ ನಾಡಿನ ಜನರ ಕಲಿಕೆಯನ್ನು ತೊಡಕಾಗಿಸುವುದರಲ್ಲಲ್ಲ!

ಕೊನೆಹನಿ: ಮೇಲಿನ ನಿಲುವಿಗೆ ಎದುರಾಗಿ 'ಮಕ್ಕಳು ತುಂಬಾ ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ, ಅವರಿಗೆ ಚಿಕ್ಕಂದಿನಿಂದಲೇ ಈ ಪರದೇಶಿ ಪಾರಿಭಾಷಿಕ ಪದಗಳನ್ನು ಪರಿಚಯಿಸಿದರೆ ಅದನ್ನೇ ಕಲಿಯುತ್ತಾರೆ' ಎನ್ನುವ ವಾದವನ್ನು ಮುಂದಿಡಬಹುದು. ಒಪ್ಪೋಣ... ಹಾಗಾದರೆ ಈ ತೊಡಕಿನ ಕೆಲಸಕ್ಕೆ ಮುಂದೆಂದೂ ಉಪಯೋಗಕ್ಕೆ ಬಾರದ ಪದಗಳಿಗಿಂತ ಮೂಲ ಇಂಗ್ಲೀಶ್ ಅಥವಾ ಲ್ಯಾಟೀನ್ ಅಥವಾ ಗ್ರೀಕ್ ನುಡಿಯ ಪದಗಳನ್ನೇ ಕಲಿಸಬಹುದಲ್ವಾ?

"ಸರಸ್ವತಿ ಸಮ್ಮಾನ್" ಪುರಸ್ಕೃತ ಸರಸ್ವತಿಪುತ್ರನಿಗೆ ಅಭಿನಂದನೆಗಳು!

(ಫೋಟೋ ಕೃಪೆ: ವಿಕಿಪೀಡಿಯಾ)
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿ, ಕನ್ನಡದ ಅತ್ಯಂತ ಪ್ರಭಾವಶಾಲಿ ಕಾದಂಬರಿಕಾರರೆನ್ನಿಸಿದ ಕನ್ನಡಿಗ ಶ್ರೀ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರಿಗೆ ೨೦೧೧ರ ಸಾಲಿನ ಪ್ರತಿಷ್ಟಿತ ಸರಸ್ವತಿ ಸಮ್ಮಾನ ಪ್ರಶಸ್ತಿ ದೊರೆತಿದೆ. ಇವರು ಶಾಸ್ತ್ರೀಯ ಸಂಗೀತವನ್ನು ವಸ್ತುವಾಗಿಸಿಕೊಂಡು ಬರೆದಿದ್ದ "ಮಂದ್ರ" ಕಾದಂಬರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಸಂದ ಗೌರವವಾಗಿದ್ದು, ಪ್ರಶಸ್ತಿಗೆ ಪಾತ್ರರಾಗಿರುವ ಶ್ರೀ ಎಸ್.ಎಲ್.ಭೈರಪ್ಪನವರಿಗೆ ಬನವಾಸಿ ಬಳಗದ ಅಭಿನಂದನೆಗಳು.

ಬೆಂಗಳೂರು ಪುಸ್ತಕೋತ್ಸವದಲ್ಲಿ ಸಿಗೋಣ...

ಇದೇ ನವೆಂಬರ್ ತಿಂಗಳ ೧೮ನೇ ತಾರೀಕಿನ ಶುಕ್ರವಾರದಿಂದ ೨೭ನೇ ತಾರೀಕಿನವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂಬತ್ತನೇ "ಬೆಂಗಳೂರು ಪುಸ್ತಕೋತ್ಸವ"ವನ್ನು ಏರ್ಪಡಿಸಿದ್ದಾರೆ. ಈ ಪುಸ್ತಕ ಮೇಳದಲ್ಲಿ ನೂರಾರು ಪುಸ್ತಕ ಮಾರಾಟಗಾರರು/ ಪ್ರಕಾಶಕರು ಭಾಗವಹಿಸುತ್ತಿದ್ದು ಬೆಂಗಳೂರಿನ ಹೆಸರಾಂತ ಕಾರ್ಯಕ್ರಮಗಳಲ್ಲಿ ಇದೊಂದಾಗಿದೆ. ಇದನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ೧೧:೦೦ರಿಂದ ರಾತ್ರಿ ೮:೦೦ರವರೆಗೆ ಮಳಿಗೆಗಳು ತೆರೆದಿರುತ್ತವೆ.

ಬಳಗದ ಮಳಿಗೆ

ಬನವಾಸಿ ಬಳಗವೂ ಕೂಡಾ ಈ ಬಾರಿ ಈ ಪುಸ್ತಕೋತ್ಸವದಲ್ಲಿ ಮಳಿಗೆಯನ್ನು ತೆರೆಯಲಿದೆ. ನೀವೂ ಬನ್ನಿ... ನಿಮ್ಮವರನ್ನೂ ಕರೆತನ್ನಿ. ಈ ಮಳಿಗೆಯಲ್ಲಿ ಬನವಾಸಿ ಬಳಗದ ಹೊತ್ತಗೆಗಳ ಜೊತೆಯಲ್ಲಿ ನಾಡೋಜ ಡಾ. ಡಿ ಎನ್ ಶಂಕರ್ ಬಟ್ ಅವರ ಅನೇಕ ಹೊತ್ತಗೆಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಿದ್ದೇವೆ.

ಬನವಾಸಿ ಬಳಗ
ಮಳಿಗೆ ಸಂಖ್ಯೆ ೧೯೯,
ಬೆಂಗಳೂರು ಪುಸ್ತಕೋತ್ಸವ,
ಗಾಯತ್ರಿ ವಿಹಾರ, ಅರಮನೆ ಮೈದಾನ,
ಬೆಂಗಳೂರು

ನಮ್ಮ ಮೆಟ್ರೋ: ಮಾಹಿತಿ ಕೋರಿ ಆರ್.ಟಿ.ಐ. ಅರ್ಜಿ.


"ನಮ್ಮ ಮೆಟ್ರೋ"ಲಿ ಹಿಂದೀ ಭಾಷೆಯನ್ನು ಎಲ್ಲೆಡೆ ಬಳಸಿರುವುದರ ಬಗ್ಗೆ ನಮ್ಮ ಜನರಲ್ಲಿ ದಿನೇ ದಿನೇ ಎಚ್ಚರ ಮೂಡುತ್ತಿದ್ದು, ಇದೀಗ ಓದುಗರೊಬ್ಬರು ನಮ್ಮ ಮೆಟ್ರೋ ಅನುಸರಿಸುತ್ತಿರುವ ಭಾಷಾನೀತಿಯ ಬಗ್ಗೆ ಮಾಹಿತಿ ಕೋರಿ, ಆರ್.ಟಿ.ಐ ಒಂದನ್ನು ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಇವರು ಕೋರಿರುವ ಮಾಹಿತಿಯ ವಿವರ ಇಂತಿದೆ.

ಅಗತ್ಯವಾಗಿರುವ ಮಾಹಿತಿ
“ನಮ್ಮ ಮೆಟ್ರೋ “ನಲ್ಲಿ ಬಳಕೆಯಾಗಿರುವ ಭಾಷಾನೀತಿಯ ಬಗೆಗಿನ ಕೆಳಗಿನ ಅಂಶಗಳ ಬಗ್ಗೆ ವಿವರಣೆಗಳು ಬೇಕಾಗಿದೆ:
೧. ಬೆಂಗಳೂರಿನ ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಯಾವ ಯಾವ ಭಾಷೆಯಲ್ಲಿ ನೀಡಬೇಕೆನ್ನುವ ಬಗ್ಗೆ ಯಾವುದಾದರೂ ನಿಯಮ "BMRCL"ನಲ್ಲಿದೆಯೇ? ಇದ್ದಲ್ಲಿ ಅದರ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ. 
. ಪ್ರಶ್ನೆ ೧ ಕ್ಕೆ ಸಂಬಂದಪಟ್ಟಂತೆ ಗ್ರಾಹಕಸೇವಾ ನಿಯಮವನ್ನು ಜಾರಿಗೊಳಿಸಲು, ತೀರ್ಮಾನವನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ? 
. ಭಾರತದ ಕೇಂದ್ರಸರ್ಕಾರವು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇ? ಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ. 
. ಕರ್ನಾಟಕ ರಾಜ್ಯಸರ್ಕಾರ “ನಮ್ಮ ಮೆಟ್ರೋದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕ ಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಅಧಿಕೃತ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ.
. ಪ್ರಶ್ನೆ ಮತ್ತು ೪ ಕ್ಕೆ ನಿಮ್ಮ ಉತ್ತರ ಇಲ್ಲ ಎಂದಿದ್ದಲ್ಲಿ, ಇನ್ಯಾವ ಆದೇಶ/ಸೂಚನೆಯ ಮೇರೆಗೆ ಹಿಂದಿ ಬಾಷೆಯಲ್ಲಿ, ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಹಾಕಲಾಗಿದೆ? ಇದಕ್ಕೆ ಸಂಬಂಧಿಸಿದ ಆದೇಶ/ ಸೂಚನೆಯ ದಾಖಲೆಯ  ಧೃಢೀಕೃತ ಪ್ರತಿಯನ್ನು ನೀಡಿರಿ.
. ನಮ್ಮ ಮೆಟ್ರೋ ಸಿಬ್ಬಂದಿಗಳು ಮತ್ತು ಮೇಟ್ರೋ ನೇಮಕ ಮಾಡಿರುವ ಖಾಸಗೀ ಗುತ್ತಿಗೆ ಸಿಬ್ಬಂದಿಗಳು, ಸಾರ್ವಜನಿಕರ ಜೊತೆ ವ್ಯವಹರಿಸಬೇಕಾದಾಗ - ಸ್ಥಳೀಯ ಭಾಷೆ ಕನ್ನಡದ ಅರಿವು ಹೊಂದಿರಬೇಕೆನ್ನುವ ನಿಬಂಧನೆಯನ್ನು/ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆಯೇ? ಮಾಡಿಕೊಂಡಿದ್ದರೆ ಒಂದು ಅಧಿಕೃತ ಒಪ್ಪಂದದ ಪ್ರತಿಯ ಧೃಢೀಕೃತ ನಕಲು ಪ್ರತಿಯನ್ನು ಕೊಡಿ. 
. ಪ್ರಶ್ನೆ ೬ ಕ್ಕೆ ಸಂಬಂದಿಸಿದಂತೆ, ನಿಬಂಧನೆ/ಒಪ್ಪಂದ ಮಾಡಿದ್ದರೆ, ಕನ್ನಡದಲ್ಲಿ ಸೇವೆಯನ್ನು ನಿರಾಕರಣೆ ಮಾಡುವ ಸಿಬ್ಬಂದಿ/ ಗುತ್ತಿಗೆದಾರರ ಮೇಲೆ ದೂರನ್ನು ಯಾರಿಗೆ ಸಲ್ಲಿಸಬೇಕು?
. ಕನ್ನಡದಲ್ಲಿ ಗ್ರಾಹಕ ಸೇವೆ ನೀಡದ ಬಗ್ಗೆ ದೂರು ಬಂದಲ್ಲಿ ಅಂಥವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವುದಾದರೋ ನಿಯಮವಿದೆಯೇ? ಇದ್ದಲ್ಲಿ ಸದರಿ ನಿಯಮದ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ.
ತಿಂಗಳೊಂದರಲ್ಲಿ ಸಂಬಂಧಪಟ್ಟಿರುವ "ನಮ್ಮ ಮೆಟ್ರೋ" ಅಧಿಕಾರಿಗಳು ಇದಕ್ಕೆ ಯಾವ ಉತ್ತರ ನೀಡುತ್ತಾರೋ? ಎನ್ನುವ ಕುತೂಹಲ ನಿಮ್ಮಂತೆ ನಮಗೂ ಇದೆ. ಕಾದು ನೋಡೋಣ...ಗುರೂ!!!

ನಮ್ಮ ಮೆಟ್ರೋ: ಕೇಂದ್ರದ ಒಪ್ಪಿಗೆಪತ್ರದಲ್ಲೇನಿದೆ ಗೊತ್ತಾ?

(ಫೋಟೋ ಕೃಪೆ: http://sandeepvarma.com)

ಬೆಂಗಳೂರಿನ ನಮ್ಮ ಮೆಟ್ರೋ ಬಗ್ಗೆ ಬಿಎಂಆರ್‌‍ಸಿಎಲ್ ಸಂಸ್ಥೆಯ ಮಿಂಬಲೆಯಲ್ಲಿ ಕೊಂಚ ಹುಡುಕಾಟ ನಡೆಸಿದರೆ ಒಳ್ಳೊಳ್ಳೆ ಮಾಹಿತಿಗಳು ಸಿಗುತ್ವೆ! ಮೊನ್ನೆ ಅದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿವಸೈಲಂ ಅವರು "ಇದು ಕೇಂದ್ರಸರ್ಕಾರದ ಅಧೀನ ಸಂಸ್ಥೆ... ಅದುಕ್ಕೇ ಹಿಂದೀ ಹಾಕ್ತೀವಿ" ಎನ್ನುವ ಧ್ವನಿಯಲ್ಲಿ ಮಾತಾಡಿದ್ದನ್ನು ಓದಿಯೇ ಇದ್ದೇವೆ. ಆ ಹಿನ್ನೆಲೆಯಲ್ಲಿ ರಾಜ್ಯ ಕೇಂದ್ರಗಳ ನಡುವಿನ ಈ ಜಂಟಿ ಯೋಜನೆಯ ಇತಿಹಾಸ ನೋಡಿದರೆ, ಭಾರತ ಸರ್ಕಾರ ತನ್ನ ರಾಜ್ಯಗಳನ್ನು ಹೇಗೆ ನಡೆಸಿಕೊಳ್ಳುತ್ತದೆ? ಒಕ್ಕೂಟದಲ್ಲಿ ರಾಜ್ಯಗಳನ್ನು ಏನೆಂದು ಪರಿಗಣಿಸುತ್ತದೆ? ಎಂಬುದರ ಬಗ್ಗೆ ಸುಳುಹು ನೀಡೋ ಒಂದು ದಾಖಲೆಯನ್ನು ಇಲ್ಲಿ ನೋಡಿ!

ಕೇಂದ್ರದ ಕರಾರುಗಳು ರಾಜ್ಯದ ಕೊಡುಗೆ

ನಮ್ಮ ಮೆಟ್ರೋ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿದ್ದು ೧೯೯೪ರಲ್ಲಿ. ಇಡೀ ಯೋಜನೆಯನ್ನು ರೂಪಿಸಿ ರಾಜ್ಯಸರ್ಕಾರ ಚಾಲನೆ ನೀಡಿದ್ದು ೨೦೦೫ರಲ್ಲಿ. ಇದಕ್ಕೆ ಕೇಂದ್ರಸರ್ಕಾರವು ಒಪ್ಪಿಗೆ ನೀಡಿದ್ದು ೨೦೦೬ರಲ್ಲಿ. ಈ ಒಪ್ಪಿಗೆ ಪತ್ರದ ಸಾರಾಂಶ ನೋಡಿದಾಗ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳೆಲ್ಲಾ ಭಾಗೀದಾರರಲ್ಲದೆ ಸಾಮಂತರಾಗಿದ್ದಾವೆನ್ನುವ ಅನುಮಾನ ಓದುಗರಲ್ಲಿ ಮೂಡಿದಲ್ಲಿ ಅಚ್ಚರಿಯಿಲ್ಲ. ಈ ಒಪ್ಪಿಗೆ ಪತ್ರದಲ್ಲೇನಿದೆ ನೋಡೋಣ ಬನ್ನಿ:
೭. ಕೆಳಗಿನ ಸಮಿತಿಗಳನ್ನು ರಚಿಸತಕ್ಕದ್ದು:
ಉನ್ನತಾಧಿಕಾರವುಳ್ಳ ಜಾರಿ ಸಮಿತಿ: ಮೆಟ್ರೋ ಯೋಜನೆಯನ್ನು ಜಾರಿ ಮಾಡುವಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವ ಹೊಣೆ ಈ ಸಮಿತಿಯದ್ದು. ನೆಲ ವಶಪಡಿಸಿಕೊಳ್ಳುವಲ್ಲಿ, ಸೌಕರ್ಯ ಸರಬರಾಜು ಮಾರ್ಗ ಬದಲಾವಣೆ, ಮೆಟ್ರೋ ಯೋಜಿತ ಮಾರ್ಗಕ್ಕೆ ಅಡ್ಡಿಯಾಗುವ ಕಟ್ಟಡ/ ನಿರ್ಮಾಣಗಳ ಸ್ಥಳಾಂತರ, ಯೋಜನೆಯಿಂದಾಗಿ ಸಂತ್ರಸ್ತರಾಗುವ ಜನರ ಪುನರ್ವಸತಿಯೇ ಮೊದಲಾದವುಗಳನ್ನು ನಿಭಾಯಿಸುವುದು ಈ ಸಮಿತಿಯ ಹೊಣೆಯಾಗಿರುತ್ತದೆ. ಈ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮುಖ್ಯಸ್ಥರನ್ನಾಗಿ ಹೊಂದಿರುತ್ತದೆ. ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಜನಪ್ರತಿನಿಧಿ ಸಂಸ್ಥೆಗಳ ಮುಖ್ಯಸ್ಥರುಗಳು ಈ ಸಮಿತಿಯ ಇತರೆ ಸದಸ್ಯರಾಗಿರುತ್ತಾರೆ. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಸರ್ವೋನ್ನತ ಸಮಿತಿ: ಕರ್ನಾಟಕದ ಒಬ್ಬ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳುವ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋವನ್ನೂ ಕೂಡಾ ನವದೆಹಲಿಯಲ್ಲಿನ ಮೆಟ್ರೋ ಸಂಸ್ಥೆಯನ್ನು ನಿಯಂತ್ರಿಸುತ್ತಿರುವ ಉನ್ನತ ಸಮಿತಿಯ ವ್ಯಾಪ್ತಿಗೆ ಸೇರಿಸಲಾಗಿದೆ. 
ಮಂತ್ರಿಗಳ ಸಮಿತಿ: ಕರ್ನಾಟಕದ ಮುಖ್ಯಮಂತ್ರಿಯನ್ನು ಇದರ ಶಾಶ್ವತ ಆಹ್ವಾನಿತರನ್ನಾಗಿಸುವ ಮೂಲಕ “ನಿಯಮಗಳನ್ನು ರೂಪಿಸುವ ಹಾಗೂ  ದೆಹಲಿ ಮೆಟ್ರೋದ ಪ್ರಗತಿಯನ್ನು ಪರಿಶೀಲಿಸುವ" ಹೊಣೆಗಾರಿಕೆಯುಳ್ಳ ಸಮಿತಿಯ ವ್ಯಾಪ್ತಿಗೆ ಬೆಂಗಳೂರು ಮೆಟ್ರೋವನ್ನೂ ಸೇರಿಸಲಾಗಿದೆ.
೮. ನಿಬಂಧನೆಗಳು:
ಇಡೀ ಯೋಜನೆಗೆ ಬೇಕಾದ ಭೂಮಿಯ ಬೆಲೆಯನ್ನು ಕರ್ನಾಟಕ ಸರ್ಕಾರವು ಬಡ್ಡಿ ರಹಿತ ಅಧೀನ ಸಾಲದ ಮೂಲಕ ಭರಿಸತಕ್ಕದ್ದು.
ಕರ್ನಾಟಕ ಸರ್ಕಾರವು ಇಡೀ ಯೋಜನೆಗೆ ಅಗತ್ಯವಿರುವ ವಿದ್ಯುತ್ತನ್ನು ಯಾವುದೇ ಲಾಭ ನಷ್ಟವಿಲ್ಲದ ದರದಲ್ಲಿ ಪೂರೈಸತಕ್ಕದ್ದು.
ಮೂಲಯೋಜನೆಯ ಲೆಕ್ಕಾಚಾರದಂತೆ ಪ್ರಯಾಣಿಕರನ್ನು ಸೆಳೆಯಲು ಪ್ರಯಾಣ ಬೆಲೆ ನಿರ್ಧಾರವೇ ಮೊದಲಾದ ಕ್ರಮಗಳ ಮೂಲಕ ರಾಜ್ಯಸರ್ಕಾರವು ಕ್ರಮತೆಗೆದುಕೊಳ್ಳತಕ್ಕದ್ದು.
ಕರ್ನಾಟಕ ಸರ್ಕಾರವು ಮೆಟ್ರೋ ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರುವ ಪೂರಕ ಸಾರಿಗೆ ವ್ಯವಸ್ಥೆಯ ಯೋಜನೆಗಳಿಗೆ ಆದ್ಯತೆ ನೀಡತಕ್ಕದ್ದು.
ಭಾರತ ಸರ್ಕಾರವು ಯೋಜನೆಯ ಎರಡನೇ ವರ್ಷದಲ್ಲಿ ಕೊಳ್ಳಲಾಗುವ ಹೆಚ್ಚುವರಿ ರೈಲುಗಳನ್ನು ಕೊಳ್ಳಲು ಹಣನೀಡುವುದಿಲ್ಲ. ಏಕೆಂದರೆ ಇದು ಯೋಜನೆಯ ಅಂಗವಾಗಿರುವುದಿಲ್ಲ.
ಭಾರತ ಸರ್ಕಾರವು ಯೋಜನೆಯು ಜಾರಿಯಾಗುವ ಸಂದರ್ಭದಲ್ಲಾಗುವ ಹಣಕಾಸು ನಷ್ಟವನ್ನಾಗಲೀ, ಯೋಜನೆಯ ಚಾಲ್ತಿ ವೆಚ್ಚವನ್ನಾಗಲೀ ಭರಿಸುವುದಿಲ್ಲ.
ಇವೆಲ್ಲವನ್ನೂ ಕರ್ನಾಟಕ ಸರ್ಕಾರ/ ವಿಶೇಷ ಉದ್ದೇಶದ ವಾಹಕವೇ ಭರಿಸತಕ್ಕದ್ದು.ಯೋಜನೆಯನ್ನು ಜಾರಿಗೊಳಿಸಿದ ನಂತರ ಬಿಎಂಆರ್‍‍ಸಿಎಲ್ ಸಂಸ್ಥೆಯು ದೀರ್ಘಾವಧಿ ಸಾಲವನ್ನು ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಹುಟ್ಟಿಸಿಕೊಳ್ಳಬಹುದಾಗಿದೆ ಮತ್ತು ಇದರ ಬಗ್ಗೆ ಸರ್ಕಾರವು ಯಾವುದೇ ರೀತಿಯಲ್ಲಿ ಹೊಣೆಗಾರಿಕೆ ಹೊಂದಿರುವುದಿಲ್ಲ ಮತ್ತು ಗ್ಯಾರಂಟಿಯನ್ನು ನೀಡುವುದಿಲ್ಲ. ಆದಾಗ್ಯೂ ವಿದೇಶಿ ಸಾಲವನ್ನು ಪಡೆಯಲು ಉದ್ದೇಶಿಸಿದಲ್ಲಿ ಕೇಂದ್ರಸರ್ಕಾರವು ಅದಕ್ಕೆಂದೇ ರೂಪಿಸಿರುವ ನಿಯಮಗಳು ಇದಕ್ಕೂ ಅನ್ವಯವಾಗುತ್ತದೆ.
ಇದೆಲ್ಲಕ್ಕೂ ಕಲಶವಿಟ್ಟಂತೆ ನಮ್ಮ ಮೆಟ್ರೋದ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ಸಿವಸೈಲಂ ಅವರು "ನಮ್ಮ ಮೆಟ್ರೋ"ಲಿ ಹಿಂದೀ ಭಾಷೆಯನ್ನು ಹಾಕೋದು, ಹಿಂದೀ ಭಾಷಿಕರಿಗೆ ಎಲ್ಲಾ ಸೇವೆ ಹಿಂದಿಯಲ್ಲೇ ಸಿಗುವಂತೆ ಮಾಡೋದು, ಭಾರತದ ಏಕತೆಯನ್ನು ಹೆಚ್ಚಿಸುವ ಸಾಧನವೆಂದು ನಂಬಿದವರಂತೆ "ಇದು ಕೇಂದ್ರಸರ್ಕಾರದ ಯೋಜನೆ, ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ರಾಷ್ಟ್ರೀಯ ನಿಯಮದ ರೀತ್ಯಾ ಹಿಂದೀಯನ್ನು ಬಳಸಿದ್ದೇವೆ. ನೀವು ಸ್ವಲ್ಪ ಸಹಿಷ್ಣುಗಳಾಗಬೇಕು" ಎನ್ನೋ ಉಪದೇಶವನ್ನು ನೀಡುತ್ತಿರುವ ಈ ಸಂದರ್ಭದ ಹಿನ್ನೆಲೆಯಲ್ಲಿ ಮೆಟ್ರೋಗೆ ಕೇಂದ್ರಸರ್ಕಾರ ನೀಡಿರುವ  ಒಪ್ಪಿಗೆ ಪತ್ರವನ್ನು ನೋಡಿದಾಗ... ನಿಮಗೆಕೇಂದ್ರಸರ್ಕಾರವು ನಮ್ಮಮೆಟ್ರೋದ ಮೇಲೆ ಅಧಿಕಾರ ಹೊಂದಲು ಬಯಸುತ್ತದೆ ಮತ್ತು ಹೊಣೆಗಾರಿಕೆ ಹೊಂದಲು ಬಯಸುವುದಿಲ್ಲ. ನೀತಿ ನಿಯಮಗಳ ನಿಯಂತ್ರಣ ಬೇಕು, ಲಾಭದಲ್ಲಿ ಪಾಲು ಬೇಕು, ನಷ್ಟವೆಲ್ಲಾ ರಾಜ್ಯಸರ್ಕಾರ ಹೊರಬೇಕು, ಭೂಮಿಯ ಬೆಲೆಯನ್ನೆಲ್ಲಾ ರಾಜ್ಯ ಭರಿಸಬೇಕು, ರಾಜ್ಯಸರ್ಕಾರ ತೆರಿಗೆ ಹಾಕಬಾರದು, ಕೇಂದ್ರ ಮಾತ್ರಾ ತೆರಿಗೆ ವಿನಾಯ್ತಿ ನೀಡುವುದಿಲ್ಲ, ಸಂಸ್ಥೆ ಲಾಭದಾಯಕವಾಗಿ ನಡೆಯಲು ಫೀಡರ್ ವ್ಯವಸ್ಥೆಯನ್ನು ನಷ್ಟವಾದರೂ ರಾಜ್ಯಸರ್ಕಾರ ನಡೆಸಬೇಕುಮೆಟ್ರೋಲಿ ಅಗತ್ಯವಿರುವಷ್ಟು ಪ್ರಯಾಣಿಕರನ್ನು ಕರೆತರುವ ಹೊಣೆ ರಾಜ್ಯಸರ್ಕಾರದ್ದುಕೇಂದ್ರದ್ದು ಮೆಟ್ರೋನ ನಿಯಂತ್ರಣ ಮಾಡೋದಷ್ಟೇ ಕೆಲಸ, ಹಾಕಿರೋ ಮೂರು ಮತ್ತೊಂದು ಕಾಸಿಗೆ ಹಿಂದೀನ ನಮ್ಮ ಮೇಲೆ ಹೇರೋಕೆ ಮುಂದಾಗಿದ್ದಾರೆಎಂದು ಅನ್ನಿಸಿದರೆ ಅದು ನಮ್ಮ ತಪ್ಪಲ್ಲಾ ಗುರೂ! ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇರೋದೇ ಹೀಗೇ!

ರಾಜ್ಯೋತ್ಸವ ಸಂಭ್ರಮದ ಮೈಮರೆವು ಮತ್ತು ನಿಜ ಎಚ್ಚರ.


ಕನ್ನಡನಾಡಿನ ಜನರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ಈ ಬಾರಿಯ ಕನ್ನಡ ರಾಜ್ಯೋತ್ಸವ ಐವತ್ತೈದನೆಯದು. ೧೯೫೬ರ ನವೆಂಬರ್ ೧ರಂದು, ಹರಿದು ಹಂಚಿ ಹೋಗಿದ್ದ ನಮ್ಮ ಕನ್ನಡ ನಾಡು ಒಂದಾದ ದಿನ. ಕನ್ನಡ ಕುಲಪುರೋಹಿತರೆನ್ನಿಸಿಕೊಂಡ ಶ್ರೀ ಆಲೂರು ವೆಂಕಟರಾಯರು ಕನ್ನಡ ನುಡಿಯಾಡುವ ಪ್ರದೇಶವೆಲ್ಲಾ ಒಂದಾಗಲೆಂಬ ಕನಸು ಕಂಡವರಲ್ಲಿ ಪ್ರಮುಖರು. ಸಾವಿರಾರು ಹೋರಾಟಗಾರರು ಏಕೀಕರಣಕ್ಕಾಗಿ ದುಡಿದು ಇಂದಿನ ಕರ್ನಾಟಕ ರಾಜ್ಯವು ರೂಪುಗೊಳ್ಳಲು ಕಾರಣರಾದರು. ಕನ್ನಡ ರಾಜ್ಯೋತ್ಸವವೆಂಬುದು, ಕನ್ನಡನಾಡಿನ ಮೂಲೆಮೂಲೆಯಲ್ಲೂ ಜನರಿಂದ ಆಚರಿಸಲ್ಪಡುವ ನಿಜವಾದ ನಾಡಹಬ್ಬವಾಗಿದೆ. ಇಂದು ನಾಡ ತುಂಬ ಸಂಭ್ರಮವೇನೋ ಕಾಣುತ್ತಿದೆ. ಬರೀ ಬಾವುಟ ಹಾರಿಸುವಂತಹ ಆಡಂಬರದ ರಾಜ್ಯೋತ್ಸವ ಆಚರಣೆಯ ಆಚೆಗೆ, ಕನ್ನಡಿಗರ ಬದುಕು ಕಟ್ಟಿಕೊಳ್ಳುವ ಕನಸನ್ನು ಕಾಣುವ, ಕನಸನ್ನು ನನಸಾಗಿಸುವತ್ತ ಹೆಜ್ಜೆ ಇಡುವತ್ತ ನಾವಿಂದು ಯೋಚಿಸಬೇಕಾದ ಸಮಯ ಬಂದಿದೆ. ಕನ್ನಡವನ್ನಲ್ಲದೆ ಇನ್ನೊಂದನ್ನು ಅರಿಯದ ಸಾಮಾನ್ಯ ಕನ್ನಡಿಗನೊಬ್ಬ, ಬೇರೊಂದು ನುಡಿಯನ್ನು ತಿಳಿದಿರಬೇಕಾದ ಅನಿವಾರ್ಯತೆಯಿಲ್ಲದೆ ಸುಗಮವಾಗಿ, ಕೀಳರಿಮೆಯಿಲ್ಲದೆ ಬದುಕನ್ನು ನಡೆಸಬಲ್ಲಂತಹ ವ್ಯವಸ್ಥೆಯೊಂದು ಕರ್ನಾಟಕದಲ್ಲಿ ರೂಪುಗೊಂಡಿದೆಯೇ? ಯಾವ ವ್ಯವಸ್ಥೆಯ ಭಾಗವಾಗಿ ನಾವಿಂದು ಬದುಕುತ್ತಿದ್ದೇವೆಯೋ ಆ ವ್ಯವಸ್ಥೆಯು ನಮ್ಮ ಏಳಿಗೆಗೆ ಪೂರಕವಾಗಿದೆಯೇ? ಇಲ್ಲವೇ? ಎಂದು ನೋಡಿದರೆ ನಿರಾಸೆಯಾಗುತ್ತದೆ. ನಮ್ಮೂರಿನ ವಿಮಾನ ನಿಲ್ದಾಣ, ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತೊಡಕಿಲ್ಲದೆ ಕನ್ನಡಿಗ ಸೇವೆ ಪಡೆದುಕೊಳ್ಳಬಲ್ಲನೇ? ಕನ್ನಡನಾಡಿನಲ್ಲಿನ ಉದ್ಯೋಗದ ಎಲ್ಲಾ ಅವಕಾಶಗಳು ಕನ್ನಡಿಗರಿಗೆ ಸಿಗುತ್ತಿದೆಯೇ? ನಮ್ಮ ಜನರ ಕಲಿಕೆ, ಮನರಂಜನೆ, ಉದ್ಯೋಗ ಎಲ್ಲವೂ ನಮ್ಮ ತಾಯ್ನುಡಿಯಲ್ಲಿ ಸಿಗುತ್ತಿದೆಯೇ? ಎಂದು ನೋಡಿದರೆ ಬೇಸರವಾಗುತ್ತದೆ.  ಇಲ್ಲೆಲ್ಲಾ ಕನ್ನಡಿಗರನ್ನು ಶೂಲವಾಗಿ ತಿವಿದು ತಿವಿದು ಕಾಡುತ್ತಿರುವುದು ಹಿಂದೀ ಕಲಿಯಬೇಕೆಂಬ ಒತ್ತಡ. ಇದಕ್ಕೆ ಕಾರಣವಾಗಿರುವುದು ಭಾರತದ ಭಾಷಾನೀತಿ. ಕನ್ನಡಿಗರ ಏಳಿಗೆಗೆ ಇಂದಿರುವ ಅತಿದೊಡ್ಡ ತೊಡಕೆಂದರೆ ಭಾರತದ ಇಂದಿನ ಭಾಷಾನೀತಿಯೇ ಆಗಿದೆ. ಅಸಲಿಗೆ ಭಾರತದಂತಹ ಬಹುಭಾಷಾ ಜನಾಂಗಗಳ ನಾಡಿಗೆ ಚೂರೂ ಹೊಂದಿಕೆಯಾಗದ ತಾರತಮ್ಯದ ಭಾಷಾನೀತಿಯನ್ನು ಭಾರತವು ಆಚರಿಸುತ್ತಿದ್ದು, ಇದು ನಿಧಾನವಾಗಿ ಕನ್ನಡ ಕನ್ನಡಿಗರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಏನಿದು ಭಾರತದ ಭಾಷಾನೀತಿ? ಏನಿದರ ಹುಳುಕು? ಬನ್ನಿ ನೋಡೋಣ.

ಭಾರತದ ತಾರತಮ್ಯದ ಭಾಷಾನೀತಿ:


ಭಾರತವು, ಸಂವಿಧಾನದ ಮೂಲಕ ಹಿಂದೀಯನ್ನು ಭಾರತದೇಶದ ಏಕೈಕ ಆಡಳಿತ ಭಾಷೆಯನ್ನೆಂದು ಘೋಷಿಸಿತು. ಹಿಂದೀಯೇತರರ ವಿರೋಧದ ಕಾರಣದಿಂದಾಗಿ ಜೊತೆಯಲ್ಲಿ ಇಂಗ್ಲೀಷಿಗೂ ಅದೇ ಸ್ಥಾನಮಾನ ನೀಡಿತು. ಉಳಿದ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿ ಕಣ್ಣೊರೆಸಿತು. ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಹಿಂದೀಯನ್ನು ಆಡಳಿತ ಭಾಷೆಯಾಗಿಸಿದ ಬೆನ್ನಲ್ಲೇ ಆಡಳಿತ ಭಾಷಾ ಇಲಾಖೆ, ಆಡಳಿತ ಭಾಷಾ ನಿಯಮ, ಆಡಳಿತ ಭಾಷಾ ಕಾಯ್ದೆಗಳು ಜನ್ಮತಳೆದವು. ಇದರ ಅಂಗವಾಗಿ ಹಿಂದೀಯನ್ನು ಭಾರತದ ಎಲ್ಲೆಡೆ ಹರಡಲು ಒತ್ತಾಯ, ಆಮಿಷ ಮತ್ತು ವಿಶ್ವಾಸಗಳನ್ನು ಬಳಸುವುದು ಭಾರತ ಸರ್ಕಾರದ ನೀತಿಯೆಂದು ಘೋಷಿಸಲಾಯಿತು. ದೇಶದ ಉದ್ದಗಲಕ್ಕೆ ಹಿಂದೀ ಪ್ರಚಾರಕ್ಕೆ ಕೇಂದ್ರಸರ್ಕಾರ ಮುಂದಾಯಿತು. ಹಿಂದೀಯನ್ನು ಒಪ್ಪಿಸಲು ಹಿಂದೀ ಭಾರತದ ಸಂಪರ್ಕ ಭಾಷೆ ಎನ್ನಲಾಯಿತು. ಬಹುಮುಖ್ಯವಾಗಿ ಹಿಂದೀಯನ್ನು ಆಡಳಿತ ಭಾಷೆಯಾಗಿಸಲು ಕೊಡಲಾದ ಕಾರಣ ಅದು ಭಾರತೀಯ ಭಾಷೆಯೆನ್ನುವುದು ಮತ್ತು ಭಾರತದಲ್ಲಿ ಹೆಚ್ಚು ಜನರಿಗೆ ಅರ್ಥವಾಗುತ್ತದೆ ಎನ್ನುವುದು. ಹಿಂದೀಯನ್ನು ಒಪ್ಪಿಸಲು ಬಳಸಿದ ಕಾರಣಗಳು ಮುಂದಾಲೋಚನೆ, ಪರಿಣಾಮಗಳ ಬಗ್ಗೆ ಆಲೋಚನೆ ಮತ್ತು ವಾಸ್ತವಗಳ ಅರಿವಿಗಿಂತಾ ಹೆಚ್ಚಾಗಿ ಭಾವುಕತೆಯನ್ನು ಆಧರಿಸಿತ್ತು ಎಂದರೆ ತಪ್ಪಾಗಲಾರದು. “ಭಾರತ ಪರಾಧೀನವಾಗಲು ಒಗ್ಗಟ್ಟಿಲ್ಲದ್ದು ಕಾರಣ. ಒಗ್ಗಟ್ಟಿಗೆ ಒಂದೇ ಭಾಷೆ ಇರುವುದು ಅತ್ಯಗತ್ಯ, ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕೆ, ಕೇಂದ್ರ-ರಾಜ್ಯಗಳ ಸಂಪರ್ಕಕ್ಕೆ ಒಂದು ಭಾರತೀಯ ಭಾಷೆಯೇ ಇರಬೇಕು, ಇದಕ್ಕೆ ಸೂಕ್ತವಾದ ಭಾಷೆ ಹಿಂದೀ, ಸ್ವಾತಂತ್ರ ಹೋರಾಟದಲ್ಲಿ ಜನರ ಭಾಷೆ ಹಿಂದೀಯಾಗಿತ್ತು, ಹಾಗಾಗಿ ಹಿಂದೀಯೆಂದರೆ ದೇಶಪ್ರೇಮದ ಸಂಕೇತ, ಹಿಂದೀಯೆಂದರೆ ಭಾರತದ ಒಗ್ಗಟ್ಟಿನ ಸಾಧನ, ಪ್ರಪಂಚಕ್ಕೆ ತೋರಿಸಿಕೊಳ್ಳಲು ದೇಶಕ್ಕೆ ಒಂದು ಭಾಷೆ ಇರಬೇಕುಎಂಬ ಅನಿಸಿಕೆಗಳು ಇಂತಹ ನಿಲುವಿಗೆ ಕಾರಣವಾಯಿತು. ಅನಿಸಿಕೆಗಳು ಕಾಂಗ್ರೆಸ್ಸಿನ ಮಹಾತ್ಮಾಗಾಂಧಿಯವರಂತಹ ರಾಷ್ಟ್ರೀಯ ನಾಯಕರುಗಳಿಗೇ ಇದ್ದುದ್ದರಿಂದ ಅವರ ಅನುಯಾಯಿಗಳೆಲ್ಲಾ ಕಣ್ಣುಮುಚ್ಚಿ ತಮ್ಮ ತಮ್ಮ ರಾಜ್ಯಗಳಲ್ಲಿ ಹಿಂದೀ ಜಾರಿಗೆ ಪಣತೊಟ್ಟರು. ಇಂದಿಗೂ ಭಾರತದ ರಾಷ್ಟ್ರೀಯ ಪಕ್ಷಗಳ ಆಶಯವುಒಂದು ದೇಶ, ಒಂದು ಭಾಷೆಎನ್ನುವಂತೆಯೇ ಇದೆಯೆಂದರೆ ಅಚ್ಚರಿಯಾಗುತ್ತದೆ. ಇದರ ಒಂದು ಇತ್ತೀಚಿನ ಪರಿಣಾಮವನ್ನು ನಾವು ಬೆಂಗಳೂರಿನ ಮೆಟ್ರೋ ರೈಲು ಸೇವೆಯಲ್ಲಿ ಕಾಣಬಹುದಾಗಿದೆ.

ನಮ್ಮ ಮೆಟ್ರೋ ಮತ್ತು ಅಲ್ಲಿನ ಭಾಷಾ ನೀತಿ:

ಇತ್ತೀಚೆಗೆ ಆರಂಭವಾದ, ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಾಗಿದ್ದ ನಮ್ಮ ಮೆಟ್ರೋ ರೈಲು ವ್ಯವಸ್ಥೆಯಲ್ಲಿ ಅನುಸರಿಸಿರುವ ಭಾಷಾನೀತಿ ತಪ್ಪಾದುದಾಗಿದೆ. ಇಲ್ಲಿ ಕನ್ನಡದ ಜೊತೆಯಲ್ಲಿ ಇಂಗ್ಲೀಷ್ ಮತ್ತು ಹಿಂದೀ ಭಾಷೆಗಳನ್ನು ಬಳಸಲಾಗಿದೆ.  ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಮೂರು ಭಾಷೆಗಳಲ್ಲಿವೆ. ಈ ಮೂಲಕ ತ್ರಿಭಾಷಾಸೂತ್ರವನ್ನು ಕನ್ನಡನಾಡಿನೊಳಗೆ ತುರುಕಲಾಗುತ್ತಿದೆ. ಒಮ್ಮೆ ಇದು ಒಪ್ಪಿತವಾಗಿಬಿಟ್ಟರೆ ನಾಳೆ ಕೇಂದ್ರಸರ್ಕಾರಿ ಕಛೇರಿಯಿಂದ ಗ್ರಾಮ ಪಂಚಾಯ್ತಿಯವರೆಗಿನ ಆಡಳಿತದವರೆಗೂ ಇದು ವಿಸ್ತರಿಸಿಬಿಡುವ ಅಪಾಯವಿದೆ. ಹೀಗೆ ಮಾಡುವುದು ಸಾಧ್ಯವಾಗಿಬಿಟ್ಟರೆ ಕನ್ನಡನಾಡು ಹಿಂದೀ ಭಾಷಿಕರ ವಸಾಹತಾಗಿಬಿಡುತ್ತದೆ. ಮೆಟ್ರೋ ಸೇವೆಯಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಮಾಡಲಾಗಿದೆ ಎನ್ನುತ್ತಾರೆ ಸಂಬಂಧಪಟ್ಟವರು. ಆದರೆ ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ ಪ್ರತಿಯೊಂದು ಭಾಷಾಜನಾಂಗಕ್ಕೂ ಸಹಜವಾಗಿ ಇರಬೇಕಾದ ಹಕ್ಕುಗಳನ್ನು ಬೋಧಿಸುವ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ನಾಡಿನ ಆಡಳಿತದಲ್ಲಿ ಹಿಂದೀ ಇರುವುದರ ಪರಿಣಾಮವೇನಾಗುತ್ತದೆ ಎಂಬುದನ್ನು ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು ಬಳಗದ ಸಮೇತ ದೆಹಲಿಗೆ ವಲಸೆ ಹೋಗುವುದಿಲ್ಲವೇ? ಬೆಂಗಳೂರಿನಲ್ಲಿಯೂ ಹಿಂದೀಯಲ್ಲಿ ವ್ಯವಸ್ಥೆಗಳು ಬಂದರೆ ಅದೇ ಆಗದೇ? ಮೊದಲೇ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀಭಾಷಿಕ ಪ್ರದೇಶಗಳ ಜನರನ್ನು (ಬಿಹಾರ್೧೧೦೨, ಉತ್ತರಪ್ರದೇಶ೮೨೮ ಜನ/ .ಕಿ) ಜನರು, ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ (೩೧೯ ಜನ/.ಕೀಚಿನ್ನದನಾಡಿಗೆ ಸುನಾಮಿಯಂತೆ ನುಗ್ಗುವುದು ಖಂಡಿತಾ! ಇದರಿಂದಾಗಿ ನಮ್ಮೂರಿನಲ್ಲಿಯೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ನಮ್ಮ ಜನರ ಉದ್ಯೋಗಾವಕಾಶಗಳು ಪರಭಾಷಿಕರ ಪಾಲಾಗದೆ? ಹೀಗಾಗುತ್ತಾ ಹೋದಲ್ಲಿ ನಾಳೆ ಕನ್ನಡ ಉಳಿದೀತೇ? ಸಹಜವಾಗಿ ಹಿಂದೀ ತಾಯ್ನುಡಿ ಹೊಂದಿರುವವರ ಜೊತೆ ಶಾಲೆಯಲ್ಲಿ ಹಿಂದೀ ಕಲಿತ ಕನ್ನಡಿಗ ಸ್ಪರ್ಧಿಸಿ ಕೆಲಸ ಗಿಟ್ಟಿಸಿಕೊಳ್ಳಬಲ್ಲನೇ? ಊಹೂಂ... ಸಾಧ್ಯವೇ ಇಲ್ಲ. ಇದು ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಂದೀಭಾಷಿಕರನ್ನು ಎಂಬತ್ತು ಮೀಟರ್ ಮುಂದೆ ನಿಲ್ಲಿಸಿ ಸೀಟಿ ಹೊಡೆದಂತಾಗುತ್ತದೆ. ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ.

ಇದು ಬರೀ ವಲಸೆ ಪ್ರಶ್ನೆಯಲ್ಲ!

ಇಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆ ಮಾತ್ರವಲ್ಲ. ‘ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ’ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಭಾರತಸರ್ಕಾರವು, ಹಿಂದೀಯನ್ನು ಮಾತ್ರಾ ತಿಳಿದಿರುವ ಹಿಂದೀ ಭಾಷೆಯವನಿಗೆ ಇಡೀ ಭಾರತದ ಯಾವ ಮೂಲೆಯಲ್ಲೂ ಯಾವುದೇ ತೊಡಕಾಗದಂತೆ ಬದುಕಬಲ್ಲ ವ್ಯವಸ್ಥೆಯನ್ನು ಕಟ್ಟಿಕೊಡುತ್ತಿದೆ. ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲವೇ? ಕೊನೆಪಕ್ಷ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿಯಾದರೂ ಕಲಿಯಬಾರದೇ?

ಭಾರತವೆನ್ನುವ ಒಕ್ಕೂಟ ವ್ಯವಸ್ಥೆ:

ಭಾರತ ದೇಶವು ನಾನಾ ಭಾಷೆಯ ಜನರ ತವರು. ಇಲ್ಲಿ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಅನೇಕಾನೇಕ ಭಾಷಿಕ ಜನಾಂಗಗಳಿವೆ. ಪ್ರತಿಯೊಂದೂ ಒಂದು ಸಮೃದ್ಧವಾದ ಪರಂಪರೆಯನ್ನು ಬಿಂಬಿಸುತ್ತಿವೆ. ಪ್ರಪಂಚದ ಎಲ್ಲಾ ಭಾಷಿಕ ಜನಾಂಗಗಳಿಗಿರುವಂತೆಯೇ ಇಲ್ಲೂ ಭಾಷೆಯೆನ್ನುವುದು ಆಯಾ ಜನಾಂಗದ ಆಚರಣೆ, ನಂಬಿಕೆ, ಬದುಕು, ದುಡಿಮೆ, ಇತಿಹಾಸ, ಸಂವಹನ, ಸಹಕಾರಗಳ ವಾಹಿನಿಯಾಗಿದೆ. ಭಾಷೆಗಳು ತಮ್ಮವೇ ಆದ ಪ್ರಾದೇಶಿಕ ಚೌಕಟ್ಟನ್ನು ಬಹುತೇಕ ಹೊಂದಿವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳು ಪರಿಣಾಮಕಾರಿಯಾಗಬೇಕಾದಲ್ಲಿ, ಜನರಿಂದ- ಜನರಿಗಾಗಿ ಆಡಳಿತ ನಡೆಯಬೇಕಾದಲ್ಲಿ, ಜನರ ಹತ್ತಿರಕ್ಕೆ ಸರ್ಕಾರ ಹೋಗಬೇಕೆಂದಲ್ಲಿ... ಜನರ ಭಾಷೆಯಲ್ಲಿಯೇ ಆಡಳಿತ ನಡೆಯಬೇಕಾದ್ದು ಸರಿಯಾದದ್ದಾಗಿದೆ. ಜನರ ಭಾಷೆಯಲ್ಲೇ ವ್ಯವಸ್ಥೆಗಳು ರೂಪುಗೊಳ್ಳಬೇಕಾದ್ದು ಸರಿಯಾದದ್ದಾಗಿದೆ. ಹೀಗೆ ಮಾಡಿದಾಗಲೇ ಜನರು ಕಲಿಕೆಯಲ್ಲಿ ಸಾಧಿಸಿ, ದುಡಿಮೆಯಲ್ಲಿ  ಉನ್ನತಿ ಕಾಣಲು ಸಾಧ್ಯ. ಈ ಕಾರಣದಿಂದಲೇ ಭಾಷಾವಾರು ರಾಜ್ಯಗಳ ರಚನೆಯಾಗಿದ್ದು. ಜಗತ್ತಿನ ಮುಂದುವರೆದ ನಾಡುಗಳೆಲ್ಲಾ ತಮ್ಮ ನಾಡಿನೆಲ್ಲ ವ್ಯವಸ್ಥೆಗಳನ್ನು... ವಿಶೇಷವಾಗಿ ಕಲಿಕೆ ಮತ್ತು ದುಡಿಮೆಗಳನ್ನು ತಮ್ಮ ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಗಮನಿಸಿದಾಗ ಇದು ಮತ್ತಷ್ಟು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಂದರೆ ಭಾರತವೆನ್ನುವುದು ನಾನಾ ಭಾಷಾ ಜನಾಂಗಗಳ ನಾಡು. ಇಂತಹ ವೈವಿಧ್ಯಪೂರ್ಣ ನಾಡೊಂದರ ವ್ಯವಸ್ಥೆಯಲ್ಲಿ ಅದರ ಭಾಷಾನೀತಿಯು ಸಮಾನ ಗೌರವದ ಸಮಾನ ಅವಕಾಶವನ್ನು ಎಲ್ಲರಿಗೂ ಕಲ್ಪಿಸುವಂಥದ್ದಾಗಿರಬೇಕಾಗುತ್ತದೆ. ಆದರೆ ಭಾರತದ ಇಂದಿನ ತಾರತಮ್ಯದ ಭಾಷಾನೀತಿಯು ಇದಕ್ಕೆ ವಿರುದ್ಧವಾಗಿದ್ದು ಕನ್ನಡನಾಡನ್ನು ಅವನತಿಯತ್ತ ತಳ್ಳುತ್ತಿದೆ.

ಈ ಭಾಷಾನೀತಿಯು ಬದಲಾಗದೆ ಕನ್ನಡಿಗನ ರಾಜ್ಯೋತ್ಸವ ಸಂಭ್ರಮಕ್ಕೆ ಅರ್ಥವಿಲ್ಲ. ಜನತೆ ತಡಮಾಡದೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಸರ್ವನಾಶ ಹತ್ತಿರದಲ್ಲೇ ಇದೆ. ಯಾವ ಉದ್ದೇಶದಿಂದ ಏಕೀಕರಣವಾಗಬೇಕೆಂದು ನಮ್ಮ ಹಿರಿಯರು ಶ್ರಮಿಸಿದ್ದರೋ ಇಂದು ಆ ಉದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ? ನಾಡಿನ ಏಳಿಗೆಯತ್ತ ಒಂದೆರೆಡೆದಾದರೂ ಹೆಜ್ಜೆ ಇಡಲಾಗಿದೆಯೇ? ನಿಜವಾದ ರಾಜ್ಯೋತ್ಸವವು ಬಾವುಟ ಹಾರಿಸಿ, ವಾದ್ಯಗೋಷ್ಟಿ ಇಡಿಸಿ, ಜಾಥಾ ನಡೆಸಿ, ಸಿಹಿ ಹಂಚಿ, ಪ್ರಶಸ್ತಿ ನೀಡಿ ಸಂಭ್ರಮಿಸುವಷ್ಟರಲ್ಲಿ ಮಾತ್ರವಿದೆಯೇ? ಭಾರತದ ಹುಳುಕಿನ ಭಾಷಾನೀತಿಯ ಕಾರಣದಿಂದಾಗಿ ಇಂದು ಕನ್ನಡನಾಡಿನಲ್ಲಿ ಕನ್ನಡವನ್ನು ಮಾತ್ರಾ ಬಲ್ಲವನಿಗೆ ಯಾವುದೇ ತೊಡಕಿಲ್ಲದೆ ಬದುಕಲು ಸಾಧ್ಯವಿಲ್ಲದಂತಹ ವ್ಯವಸ್ಥೆ ರೂಪುಗೊಂಡಿದೆ. ಇದು ಬದಲಾಗದಿದ್ದರೆ ಕನ್ನಡಿಗ ವರ್ಷಕ್ಕೊಮ್ಮೆ ನವೆಂಬರ್ ಒಂದರಂದು ಕನ್ನಡ ಬಾವುಟ ಹಾರಿಸಿ ಹಾರಿಸಿ ಸುಸ್ತಾಗೇ ಭೂಪಟದಿಂದ ಮರೆಯಾಗಿ ನಶಿಸಿಹೋಗಿಬಿಡುತ್ತಾನೆ. ಕನ್ನಡಿಗನಿಗೆ ಇಂದು ತನ್ನ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವುದು ಭಾರತದ ಹುಳುಕಿನ ಭಾಷಾನೀತಿ ಎನ್ನುವುದು ಅರಿವಾಗಲಿ. ಈ ಭಾಷಾನೀತಿ ಬದಲಾಗದಿದ್ದರೆ, ಇದಕ್ಕಾಗಿ ದನಿಯೆತ್ತದಿದ್ದರೆ ನಾಳಿನ ಪೀಳಿಗೆ ನಮ್ಮನ್ನು ಮನ್ನಿಸೀತೇ? “ಸತ್ತಂತಿಹರನು ಬಡಿದೆಚ್ಚರಿಸುವ ಕನ್ನಡ ಡಿಂಡಿಮವನ್ನು ನುಡಿಸುವ ಹೃದಯ ಶಿವನಾರು? ಅದನ್ನು ಕೇಳಿ ಮೈಕೊಡವಿ ಮೇಲೆದ್ದು ತ್ರಿವಿಕ್ರಮನಾಗುವ ಕನ್ನಡಿಗನಾರು?” ಎಂದು.. ಅಂದು ಹಂಪೆಯಳಿದಾಗ ತತ್ತರಿಸಿದ್ದ ಕನ್ನಡಮ್ಮ, ಇಂದು ತನ್ನ ಮಕ್ಕಳ ಮೈಮರೆಯುವಿಕೆ ಕಂಡು ಹೀಗೆ ಮರುಗುತಿರಬಹುದೇ?
Related Posts with Thumbnails