ಇದೇ ನವೆಂಬರ್ ಹತ್ತರ ವಿಜಯಕರ್ನಾಟಕದ ಮುಖಪುಟದಲ್ಲೊಂದು ಸಮೀಕ್ಷೆ "ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನಡೆಸಲಾದ ವಿಶೇಷ ಸಮೀಕ್ಷೆ"ಯೊಂದು ಪ್ರಕಟವಾಗಿದೆ. ಈ ಸಮೀಕ್ಷೆಯನ್ನು ವಿಜಯ ಕರ್ನಾಟಕ - ಲೀಡ್ ಕ್ಯಾಪ್ ನಡೆಸಿದೆಯೆಂದು ಹೇಳಲಾಗಿದೆ. ಇದರಲ್ಲಿ ಕನ್ನಡನಾಡಿನ ನಾಲ್ಕು ನಗರಗಳ ಗೃಹಿಣಿಯರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಇದನ್ನು ಎರಡು ಆಯಾಮಗಳಲ್ಲಿ ನಾವು ನೋಡಬಹುದು.
ಸಮೀಕ್ಷೆ ಯಾರದ್ದು?!
ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಯಾರು? ಇವರುಗಳ ಸಂಖ್ಯೆ ಎಷ್ಟು? ಯಾವ ಯಾವ ಊರಿನ ಎಷ್ಟು ಜನ ಪಾಲ್ಗೊಂಡಿದ್ದರು? ಹೀಗೆ ಪಾಲ್ಗೊಂಡವರು ಯಾವ ವರ್ಗದವರು? ಬಡವರು, ಮಾಧ್ಯಮವರ್ಗದವರು, ಶ್ರೀಮಂತರು, ಮುಂದುವರೆದವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೇಲ್ಜಾತಿಯವರು, ಕೆಳಜಾತಿಯವರು, ವಲಸಿಗರು, ಕನ್ನಡ ತಾಯ್ನುಡಿಯವರು, ಕನ್ನಡೇತರ ತಾಯ್ನುಡಿಯವರು.. ಹೀಗೆ ಯಾವುದನ್ನು ಪ್ರತಿನಿಧಿಸುವ ಗುಂಪು ಇದು? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತವೆ. ಇವೆಲ್ಲಾ ವಿವರಗಳಿಲ್ಲದಿದ್ದರೆ ಸಾಮಾನ್ಯವಾಗಿ ಇಂತಹ ಸಮೀಕ್ಷೆಗಳ ಉದ್ದೇಶವನ್ನೇ ಅನುಮಾನಿಸುವಂತಾಗಿ... ಇದ್ಯಾವುದೋ ಇಂಗ್ಲೀಶ್ ಪರವಾದ ಲಾಬಿ ಎನ್ನಿಸಿಬಿಡುತ್ತದೆ.
ಯಾಕೆ ಹೀಗನ್ನಿಸುತ್ತದೆ ಎಂದರೆ, ಸಮೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ಒಮ್ಮೆ ನೋಡಿ. ಇದು ಕನ್ನಡದ ಬಳಕೆ, ಉಪಯುಕ್ತತೆಗಳ ಬಗ್ಗೆ ಮಾತಾಡದೇ ಇಂಗ್ಲೀಶ್ ಮಾತಾಡಲು ಬಾರದಿರುವ ಬಗ್ಗೆ ಮುಜುಗರ ಆಗಿದೆಯೇ? ಇಂಗ್ಲೀಶ್ ಭಾಷೆಯ ಬಳಕೆ, ಮನದಲ್ಲಿರುವ ಇಂಗ್ಲೀಶ್, ಮನೆಯೊಳಗೆ ಇಂಗ್ಲೀಶ್ ಮಾತಾಡುವವರು, ಇಂಗ್ಲೀಶ್ ಪ್ರಮುಖ ಭಾಷೆ ಎನ್ನುವುದಕ್ಕೆ ನೀಡಿರುವ ಕಾರಣಗಳು ಮತ್ತು ಇಂಗ್ಲೀಶ್ ಕಲಿಕೆ ಎನ್ನುವ ತಲೆಬರಹದಡಿ ನಡೆಸಲಾದ ಸಮೀಕ್ಷೆಯಾಗಿದೆಯೇ ಹೊರತು ಕನ್ನಡದ ನೆಲೆಯಲ್ಲಿ ನಡೆದಿಲ್ಲ. ಬಹುಶಃ ಇಂಗ್ಲೀಶ್ ಎಂದಿರುವ ಕಡೆಯಲ್ಲೆಲ್ಲಾ ಕನ್ನಡ ಎಂದಿದ್ದರೆ... ಇವರನ್ನು ಅನುಮಾನಿಸದೇ ಇರಬಹುದಿತ್ತು! ಒಟ್ಟಾರೆಯಾಗಿ ಸಮೀಕ್ಷೆಯ ಉದ್ದೇಶವೇ ಅನುಮಾನ ಹುಟ್ಟಿಸುವಂತಿದೆ. ಇರಲಿ... ಈ ಸಮೀಕ್ಷೆಯಲ್ಲಿ ದಿಟವೇ ಇಲ್ಲ ಎಂದೇನೂ ಇಲ್ಲಾ! ಇರುವ ದಿಟಗಳ ಬಗ್ಗೆ ನೋಡಿದಾಗ ಇಂತಹ ಪರಿಸ್ಥಿತಿಗೆ ಕಾರಣ ಹುಡುಕಿಕೊಳ್ಳುವುದು ಕನ್ನಡಿಗರಿಗೆ ತುಂಬಾ ಅಗತ್ಯವಾದುದಾಗಿದೆ.
ಯಾವುದು ಇದರ ಮೂಲ?
ಈ ಸಮೀಕ್ಷೆಯಲ್ಲಿ ವಲಸಿಗರ ಜೊತೆ ಮಾತಾಡಲು ಇಂಗ್ಲೀಶ್ ಬೇಕು ಎನ್ನುವುದನ್ನು ಗಮನಿಸಿದರೆ ಇದು ಮಧ್ಯಮ, ಮೇಲ್ವರ್ಗದ ಇಂಗ್ಲೀಶ್ ಬಾರದ ಗೃಹಿಣಿಯರ ಅನಿಸಿಕೆ ಮಾತ್ರಾ ಎನ್ನಲು ಅಡ್ಡಿಯಿಲ್ಲ! ಯಾಕೆಂದರೆ ಕೆಳವರ್ಗದ ಜನಕ್ಕೆ ವಲಸಿಗರೊಂದಿಗೆ ಮಾತಾಡುವ ಸಂದರ್ಭವಿದ್ದರೂ ಅಂತಹ ವಲಸಿಗರಿಗೇ ಇಂಗ್ಲೀಶ್ ಬರುತ್ತಿರುವ ಸಾಧ್ಯತೆ ಕಡಿಮೆ! ಇನ್ನು ಶಾಲೆಗಳ ಜೊತೆ ಇಂಗ್ಲೀಶ್ ನುಡಿಯಲ್ಲಿ ವ್ಯವಹರಿಸಬೇಕು ಎನ್ನುವ ಪರಿಸ್ಥಿತಿಯಿದ್ದಲ್ಲಿ ಅದು ಶೋಚನೀಯ! ಮಕ್ಕಳಿಗೆ ಇಂಗ್ಲೀಶ್ ಕಲಿಸುವ ಶಾಲೆಗಳು ಪೋಶಕರಿಂದಲೂ ಇಂಗ್ಲೀಶಿನ ಬಳಕೆ/ ವ್ಯವಹಾರವನ್ನು ನಿರೀಕ್ಷೆ ಮಾಡುತ್ತಿವೆ ಎನ್ನುವುದು ಈ ಅಭಿಪ್ರಾಯದ ಹಿಂದಿರುವುದು. ಇದೆಷ್ಟು ಸರಿ? ಇದಕ್ಕೇನು ಪರಿಹಾರ? ಇನ್ನು ಮಕ್ಕಳ ಜೊತೆ ಮಾತಾಡಲು ಇಂಗ್ಲೀಶ್ ಬೇಕು ಎನ್ನುವುದಂತೂ ಕನ್ನಡದ ಬಗ್ಗೆ ಕೀಳರಿಮೆ ಹಾಗೂ ಇಂಗ್ಲೀಶಿನ ಬಗ್ಗೆ ಇರುವ ಮೇಲರಿಮೆಯ ಫಲ ಎನ್ನಬಹುದು!
ಇನ್ನು ಮಾರುಕಟ್ಟೆಯಲ್ಲಿ ಇಂಗ್ಲೀಶ್ ಬೇಕು ಎನ್ನಿಸುವ ಅನಿಸಿಕೆಯೂ ಕೂಡಾ ಯಾವ ಮಾರುಕಟ್ಟೆ ಎನ್ನುವ ಯೋಚನೆಗೆ ಹಚ್ಚುತ್ತದೆ. ಬೆಂಗಳೂರಿನಲ್ಲಂತೂ ಗಾಂಧಿಬಜಾರ್, ಕೋರಮಂಗಲ, ಮಲ್ಲೇಶ್ವರ, ಕೃಷ್ಣರಾಜ ಮಾರುಕಟ್ಟೆಯೂ ಸೇರಿದಂತೆ ಎಲ್ಲೂ ಇಂಗ್ಲೀಶಿನ ಅಗತ್ಯ ಬೀಳದು. ಇನ್ನು ಯಾವುದೋ ಮಾಲ್‌ಗಳನ್ನು ಲೆಕ್ಕಕ್ಕಿಟ್ಟುಕೊಂಡಿದ್ದರೆ ಇಂತಹ ಮಾಲುಗಳಲ್ಲೂ ಕನ್ನಡ ನಡೆಯದು ಎನ್ನುವ ಪರಿಸ್ಥಿತಿ ಎಲ್ಲಿದೆ? ಕನ್ನಡ ಬಾರದೆ ಇಲ್ಲೆಲ್ಲಾ ವ್ಯವಹರಿಸಲು ಆಗುವುದಿಲ್ಲಾ ಎನ್ನುವ ಪರಿಸ್ಥಿತಿಯಂತೂ ಇಲ್ಲಾ! ಇವುಗಳನ್ನೆಲ್ಲಾ ಗಮನಿಸಬೇಕಾಗುತ್ತದೆ.
ಸಮೀಕ್ಷೆ ಒಂದು ಎಚ್ಚರಿಕೆಯ ಗಂಟೆ!
ಒಟ್ಟಾರೆ ನೋಡಿದಾಗ ಈ ಸಮೀಕ್ಷೆಯನ್ನು ಒಂದು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬಹುದು! ಕಲಿಕೆಯಲ್ಲಿ ಕನ್ನಡವಿಲ್ಲದಿದ್ದರೆ... ಮಾರುಕಟ್ಟೆಯಲ್ಲಿ ಕನ್ನಡವಿಲ್ಲದಿದ್ದರೆ... ವಲಸಿಗನಿಗೆ ಕನ್ನಡ ಕಲಿಸದಿದ್ದರೆ... ಏನೆಲ್ಲಾ ಆದೀತು? ಹೇಗೆ ಕನ್ನಡಿಗರಿಂದ ಕನ್ನಡ ಮರೆಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಇಲ್ಲಿ ಪರಿಸ್ಥಿತಿ ಸುಧಾರಿಸುವುದು ಗೃಹಿಣಿಯರು, ಮಕ್ಕಳು ಮರಿ ಇಂಗ್ಲೀಶ್ ಕಲಿಯುದರಿಂದಲ್ಲಾ! ಕನ್ನಡವನ್ನು ಪರಿಣಾಮಕಾರಿಯಾಗಿ ಕಲಿಕೆ, ದುಡಿಮೆ, ಮಾರುಕಟ್ಟೆಗಳ ನುಡಿಯಾಗಿಸಿ ಸಾರ್ವಭೌಮತ್ವವನ್ನು ಗಟ್ಟಿಗೊಳಿಸುವುದರಿಂದ! ಇನ್ನೊಂದು ವಿಷಯವೆಂದರೆ ಇಂತಹ "ಇದು ಹೀಗೇ" ಎನ್ನುವ ಸಮೀಕ್ಷೆಗಳಿಂದಾಗುವ ಉಪಯೋಗವೇನು? ಕನ್ನಡಿಗರಲ್ಲಿ ಇನ್ನಷ್ಟು ಕೀಳರಿಮೆ ತುಂಬುವ ಪ್ರಯತ್ನವೇ ಇದು ಎನ್ನಿಸುತ್ತದೆ. ಇನ್ನಷ್ಟು ಕನ್ನಡಿಗರು ಇಂಗ್ಲೀಶ್ ಕಲಿಯದೆ ಬದುಕೇ ಇಲ್ಲ ಎಂದುಕೊಳ್ಳುವ, ಅದಕ್ಕಾಗಿ ಇಂಗ್ಲೀಶ್ ಪತ್ರಿಕೆ ಕೊಳ್ಳಲಿ (ತಮ್ಮ ಇಂಗ್ಲೀಶ್ ಮಾರುಕಟ್ಟೆ ಹೆಚ್ಚಲಿ), ಇಂಗ್ಲೀಶ್ ವಾಹಿನಿ ನೋಡಲಿ (ತಮ್ಮ ಇಂಗ್ಲೀಶ್ ವಾಹಿನಿಗಳ ಟಿಆರ್‌ಪಿ ಹೆಚ್ಚಲಿ) ಎನ್ನುವ ಲಾಬಿಗಳು ಇಲ್ಲಿ ಕೆಲಸ ಮಾಡಿವೆಯೇನೋ ಎನ್ನಿಸುತ್ತದೆ! ಹೌದಲ್ವಾ ಗುರೂ?!