ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...



ಅಕ್ಕರೆಯ ಓದುಗಾ,

೨೦೦೭ರಿಂದ "ಏನ್ ಗುರು? ಕಾಫಿ ಆಯ್ತಾ..." ಬ್ಲಾಗನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೊದಲಿಗೆ ಶ್ರೀ ಕಿರಣ್ ಬಾಟ್ನಿಯವರು ಇದನ್ನು ಶುರು ಮಾಡಿದರು. ಮುಂದೆ ನಾನೂ ಇದರಲ್ಲಿ ಬರಹಗಳನ್ನು ಬರೆಯುತ್ತಾ ನಂತರ ಸಂಪಾದಕ ಮತ್ತು ಬರಹಗಾರನಾಗಿ ಹಲವು ವರ್ಷಗಳಾದವು. ಇಷ್ಟು ಕಾಲ ನಮ್ಮ ಬೆನ್ತಟ್ಟಿ ಇದನ್ನು ಓದಿದ ತಮಗೆಲ್ಲಾ ಮನದುಂಬಿದ ವಂದನೆಗಳು.

ಈ ಬ್ಲಾಗಿನ ಹರವನ್ನು ಹೆಚ್ಚಿಸಲು ಇದೀಗ "ಕನ್ನಡ ಡಿಂಡಿಮ" ಎನ್ನುವ ತಾಣವನ್ನು ಶುರುಮಾಡಿದ್ದೇನೆ. ಇನ್ಮುಂದೆ ನನ್ನೆಲ್ಲಾ ಬರಹಗಳಿಗಾಗಿ ದಯಮಾಡಿ ಹೊಸತಾಣಕ್ಕೆ ಭೇಟಿ ಕೊಡಿ. ಕನ್ನಡ ಕನ್ನಡಿಗ ಕರ್ನಾಟಕ ಪರವಾದ ವಿಚಾರಗಳನ್ನು ಅಲ್ಲಿ ಮತ್ತಷ್ಟು ಆಳವಾಗಿ, ಪರಿಣಾಮಕಾರಿಯಾಗಿ ಚರ್ಚಿಸೋಣ.

ತಾಣದ ವಿಳಾಸ ಇಲ್ಲಿದೆ: http://bit.ly/TlTpRG

ಕಲಿಕೆಯ ಮಾಧ್ಯಮದ ತೀರ್ಪು: ಒಂದು ಸೀಳುನೋಟ


ಭಾರತದ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕದಲ್ಲಿನ ಕಲಿಕೆಯ ಮಾಧ್ಯಮದ ಬಗ್ಗೆ ಇಂದು ಒಂದು ತೀರ್ಪನ್ನು ನೀಡಿದೆ. ಕಲಿಕೆಯ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕು ಮಗುವಿನ ತಾಯಿ-ತಂದೆಯರದ್ದೇ ಹೊರತು ರಾಜ್ಯಸರ್ಕಾರದ್ದಲ್ಲಾ ಎಂದಿದೆ ಕೋರ್ಟು. ಇದು ಜನರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ತೀರ್ಪು ಎನ್ನುವ ದೃಷ್ಟಿಯಿಂದ ನೋಡಿದರೆ ಸರಿಯೆನ್ನಿಸುತ್ತದೆ. ಆದರೆ "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಮ್ಮ ನಾಡಿನ ಕಲಿಕೆಯ ಏರ್ಪಾಟನ್ನು ತೀರ್ಮಾನಿಸುವ ಹಕ್ಕು ನಮ್ಮ ರಾಜ್ಯಸರ್ಕಾರಕ್ಕೆ ಇಲ್ಲಾ" ಎನ್ನುವುದನ್ನು ಕಂಡಾಗ ಈ ತೀರ್ಪು ಸರಿಯೇ ಎಂಬ ಅನುಮಾನ ಮೂಡುತ್ತದೆ. ಇಷ್ಟಕ್ಕೂ ಈ "ಕಲಿಕೆಯ ಮಾಧ್ಯಮದ ಪ್ರಶ್ನೆ" ಕೋರ್ಟಿನ ಮುಂದೆ ಹೋದದ್ದೇ ಬೇರೆಯ ಕಾರಣದಿಂದಾಗಿ ಎನ್ನುವುದರ ಜೊತೆಗೇ ಸದರಿ ತೀರ್ಪಿನ ಬೆಂಬಲಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನದ ತಳಹದಿ ಇಲ್ಲದಿರುವನ್ನು ಕಂಡಾಗ ಈ ತೀರ್ಪು ಸರಿಯಿಲ್ಲಾ ಎನ್ನಿಸಿದರೆ ಅಚ್ಚರಿಯಿಲ್ಲ. ಒಟ್ಟಾರೆ ಇದಕ್ಕೆ ಕೆಲವಾರು ಆಯಾಮಗಳಿದ್ದು ಯೋಚಿಸಬೇಕಾದ ವಿಷಯವಾಗಿದೆ.

ಕಲಿಕೆ ಏರ್ಪಾಟಿನ ಹೊಣೆ ಸರ್ಕಾರದ್ದಲ್ಲವೇ?

"ತನ್ನ ನಾಡಿನ ಮಕ್ಕಳು ಏನನ್ನು ಕಲಿಯಬೇಕೆಂಬುದನ್ನು ತೀರ್ಮಾನಿಸುವ ಹೊಣೆ ಒಂದು ನಾಡಿನ ಸರ್ಕಾರಕ್ಕಿರುವುದಿಲ್ಲವೇ? ತನ್ನ ನಾಡಿನ ಶಾಲೆಗಳಲ್ಲಿ ಏನನ್ನು ಕಲಿಸಬೇಕೆನ್ನುವುದನ್ನು ತೀರ್ಮಾನಿಸುವ ಹೊಣೆ ಅಲ್ಲಿನ ಸರ್ಕಾರದ್ದಲ್ಲವೇ? ತನ್ನ ನಾಡಲ್ಲಿ ಯಾವ ಕಲಿಕೆಯ ಮಾಧ್ಯಮವಿರಬೇಕು ಎನ್ನುವುದನ್ನು ತೀರ್ಮಾನಿಸುವ ಹಕ್ಕನ್ನು ಸರ್ಕಾರ ಹೊಂದಿಲ್ಲವೇ?" ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಜಗತ್ತಿನ ಬೇರೆ ಬೇರೆ ಕಡೆ ಯಾವ ಏರ್ಪಾಟಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಜರ್ಮನಿಯಲ್ಲಿ ಯಾವ ಮಾಧ್ಯಮದ ಕಲಿಕೆಯಿರಬೇಕೆನ್ನುವುದನ್ನು ತೀರ್ಮಾನಿಸುವ ಹಕ್ಕು ಅಲ್ಲಿನ ಸರ್ಕಾರಕ್ಕಿದೆ. ಹಾಗೇ ಜಪಾನಿನ ಕಲಿಕೆಯ ಮಾಧ್ಯಮ ಯಾವುದಿರಬೇಕೆಂದು ತೀರ್ಮಾನಿಸುವ ಹಕ್ಕು ಜಪಾನಿನ ಸರ್ಕಾರಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಮಕ್ಕಳ ಕಲಿಕೆಯ ಏರ್ಪಾಡು ಕಟ್ಟುವ, ನಿರ್ವಹಿಸುವ ಹಕ್ಕನ್ನು ತಮ್ಮ ಸರ್ಕಾರಕ್ಕೆ ಬಿಟ್ಟುಕೊಟ್ಟಿರುವುದರಿಂದ ಯಾವುದೇ ಸರ್ಕಾರಕ್ಕೆ ತನ್ನ ನಾಡಿನ ಕಲಿಕೆಯ ಏರ್ಪಾಡನ್ನು ನಿರ್ಣಯಿಸುವ ಹಕ್ಕಿರುವುದು ಸಹಜನ್ಯಾಯವಾಗಿದೆ. ಯಾಕೆಂದರೆ ಶಿಕ್ಷಣ ವ್ಯವಸ್ಥೆ ಎನ್ನುವುದು ಒಂದು ಸರ್ಕಾರ, ತನ್ನ ನಾಡಿನ ನಾಳೆಗಳನ್ನು ಕಟ್ಟಿಕೊಳ್ಳುವ ಸಾಧನವಾಗಿದೆ ಮತ್ತು ಯಾವುದೇ ಸಂದರ್ಭದಲ್ಲಿ ಇಂತಹ ಹಕ್ಕನ್ನೇ ಇಲ್ಲವಾಗಿಸುವುದು ನ್ಯಾಯಯುತವಾದ ತೀರ್ಪು ಎನ್ನಿಸುತ್ತದೆಯೇ ಎನ್ನುವುದನ್ನು ಕೇಳಿಕೊಳ್ಳಬೇಕಾಗಿದೆ!

ನ್ಯಾಯಾಲಯದ ನಿಲುವಿನ ಕಾರಣ!

ನ್ಯಾಯಾಲಯವು "ಕರ್ನಾಟಕದ ಸರ್ಕಾರೇತರ ಶಾಲೆಗಳಲ್ಲಿ ಕಲಿಕೆಯ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯ ಮಾಡುವಂತಿಲ್ಲಾ" ಎನ್ನುವ ತೀರ್ಪು ನೀಡುತ್ತಾ ‘ಸರ್ಕಾರದಿಂದ ಸಹಾಯ ಪಡೆಯದ ಶಾಲೆಗಳಿಗೆ ಸರ್ಕಾರಿ ನೀತಿ ಅನ್ವಯವಾಗದು ಎಂದಿದೆ. ಆ ಮೂಲಕ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮೇಲೆ ಸರ್ಕಾರಕ್ಕೆ ಇರುವ ಹಿಡಿತವನ್ನು ಎತ್ತಿಹಿಡಿದಿದೆ ಎನ್ನಿಸಿ, ಆ ಮೂಲಕ ಒಂದು ಸರ್ಕಾರಕ್ಕೆ ಇದೆಯೆಂದು ಮೇಲೆ ವಿವರಿಸಿಲಾದ ‘ಸಹಜವಾದ ಅಧಿಕಾರ’ಕ್ಕೆ ಧಕ್ಕೆ ತಂದಿಲ್ಲಾ ಎನ್ನುವ ಮಾತನ್ನಾಡಬಹುದು. ಆದರೆ ಖಾಸಗಿ ಶಾಲೆಗಳು ಎನ್ನುವುದನ್ನು ಒಂದು ಉದ್ಯಮವೆಂದು ಪರಿಗಣಿಸಿ, ಶಾಲೆಗಳನ್ನು ನಡೆಸುವುದನ್ನು ‘ಉದ್ಯಮ ನಡೆಸುವ ಹಕ್ಕು’ ಎಂದು ನ್ಯಾಯಾಲಯ ಪರಿಗಣಿಸುತ್ತಿರುವುದೇ ಒಂದು ರೀತಿ ಗೊಂದಲಕಾರಿಯಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಮತ್ತು ನಿರ್ವಹಿಸುವ ಹೊಣೆಗಾರಿಕೆ ನಾಡಿನ ಸರ್ಕಾರದ್ದು ಎನ್ನುವುದು ಬೇರುಮಟ್ಟದ ದಿಟ. ಸರ್ಕಾರದ ಈ ಹೊಣೆಗಾರಿಕೆಯನ್ನು ಸಾಮಾಜಿಕ ಕಳಕಳಿಯ ಸಂಘಸಂಸ್ಥೆಗಳು ಹಗುರ ಮಾಡಲು, ಸರ್ಕಾರ ತಲುಪಲಾಗದ ಕಡೆ ಶಾಲೆಗಳನ್ನು ತೆರೆದು - ಅಂತಹ ಶಾಲೆಗಳ ನಿರ್ವಹಣೆಗೆ ಬೇಕಾದಷ್ಟು ಮಾತ್ರಾ ಹಣವನ್ನು ಸರ್ಕಾರದಿಂದ ಪಡೆಯಲು ಅರ್ಹರು - ನಡೆಸುವುದಕ್ಕೆ ಮಾತ್ರಾ ಸೀಮಿತ. ಸರಿಯಾದ ನಾಡುಗಳಲ್ಲಿ ಈ ಕಾರಣದಿಂದಲೇ ಶಿಕ್ಷಣ ಸಂಸ್ಥೆಗಳು ಬರಿಯ ಸರ್ಕಾರದ್ದಾಗಿದ್ದು ಉಚಿತವಾಗಿರುತ್ತದೆ. ಇಂತಹ ವ್ಯವಸ್ಥೆಯಾಗಬೇಕಾಗಿದ್ದ ನಮ್ಮ ನಾಡಿನ ಶಿಕ್ಷಣ ಕ್ಷೇತ್ರ, ನಿಧಾನವಾಗಿ ಖಾಸಗಿ ಉದ್ಯಮವಾಗಿದ್ದೂ.. ಇದನ್ನು ನ್ಯಾಯಾಲಯವೂ ಉದ್ಯಮವಾಗಿ ಪರಿಗಣಿಸಿದ್ದು ವಿಚಿತ್ರವಾದ ಸತ್ಯವಾಗಿದೆ! ನ್ಯಾಯಾಲಯಗಳು ಶಾಲೆ ನಡೆಸುವುದನ್ನು ಉದ್ಯಮವೆಂದದ್ದೂ, ಹಾಗಾಗಿ ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವುದೂ ನಮ್ಮ ಸರ್ಕಾರದ ಅಸಮರ್ಪಕ ಕಾನೂನು ಹೋರಾಟಕ್ಕೆ ಕನ್ನಡಿಯಾಗಿದೆ.

ಮುಂದೆ?!

ವಾಸ್ತವವಾಗಿ ರಾಜ್ಯದಲ್ಲಿರುವ ೭೫% ಕನ್ನಡ ಶಾಲೆಗಳ ಮೇಲಾಗಲೀ, ೮~೧೦% ಪರಭಾಷಾ ಮಾಧ್ಯಮದ ಶಾಲೆಗಳ ಮೇಲಾಗಲೀ ನೇರವಾಗಿ ಈ ತೀರ್ಪು ಪರಿಣಾಮ ಬೀರದು. ಅಲ್ಲೆಲ್ಲಾ ಸರ್ಕಾರದ ಭಾಷಾನೀತಿಯೇ ಮುಂದುವರೆಯಲಿದೆ. ಆದರೆ ಖಾಸಗಿ ಶಾಲೆಗಳು ಸರ್ಕಾರದ ಎಲ್ಲಾ ನಿಯಂತ್ರಣಗಳಿಂದ ಮುಕ್ತವಾಗಲಿವೆ ಮತ್ತು ಸರ್ಕಾರಕ್ಕೆ ತನ್ನ ನಾಡಿನ ಕಲಿಕೆಯ ಏರ್ಪಾಟನ್ನು ಕಟ್ಟಿ, ನಿರ್ವಹಿಸುವುದರ ಮೇಲಿನ ಹಿಡಿತ ಸಡಿಲವಾಗಲಿದೆ. ಶಾಲೆಗಳನ್ನು ತೆರೆಯುತ್ತೇವೆ ಎನ್ನುವವರಿಗೆ ಅನುಮತಿ ನೀಡುವುದನ್ನು ಬಿಟ್ಟು ಯಾವ ಹಿಡಿತವೂ ಸರ್ಕಾರಕ್ಕೆ ಇರುವುದಿಲ್ಲವಾದ್ದರಿಂದ ಲೆಕ್ಕವಿಲ್ಲದಂತೆ ಶಾಲೆಗಳ ಹೆಸರಲ್ಲಿ ಖಾಸಗಿ ಸುಲಿಗೆ ಕೇಂದ್ರಗಳು ಶುರುವಾಗಬಹುದು. ಇಂತಹ ಸಂದರ್ಭದಲ್ಲಿ ನಮ್ಮ ನಾಡಿನ ಜನರಲ್ಲೂ ಇಂಗ್ಲೀಶ್ ಮಾಧ್ಯಮದ ಬಗ್ಗೆ ಒಲವು ಉಕ್ಕುತ್ತಿರುವಾಗ ನ್ಯಾಯಾಲಯವು ಕನ್ನಡ ಮಾಧ್ಯಮದ ಪರವಾಗಿ ತೀರ್ಪು ನೀಡಿದ್ದರೂ ಜನರಿಂದ ವಿರೋಧ ಎದುರಿಸಬೇಕಾಗುತ್ತಿತ್ತು ಎನ್ನುವುದನ್ನು ಅಲ್ಲಗಳೆಯಲಾಗದು. ಹಾಗಾದಲ್ಲಿ ಮುಂದಿನ ದಾರಿಯೇನು?

ಈಗಿರುವ ಕನ್ನಡ ಮಾಧ್ಯಮದ ಶಾಲೆಗಳನ್ನು ಸೌಕರ್ಯ, ಅನುಕೂಲತೆ, ಕಲಿಕೆಯ ಗುಣಮಟ್ಟದ ದೃಷ್ಟಿಯಲ್ಲಿ ಅತ್ಯುತ್ತಮಗೊಳಿಸಬೇಕು. ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನೂ, ಕಲಿಕೆಯ ಎಲ್ಲಾ ವಿಭಾಗಗಳನ್ನೂ ತರಬೇಕು. ಇಂತಹ ಏರ್ಪಾಟಿನಲ್ಲಿ ಕಲಿಯುವುದರಿಂದ ನಮ್ಮ ಮಕ್ಕಳ ನಾಳೆಗಳು ಅತ್ಯುತ್ತಮವಾಗುತ್ತದೆ ಎನ್ನುವಂತಹ ಗುಣಮಟ್ಟದ ಕಲಿಕೆಯನ್ನು ಕನ್ನಡದಲ್ಲಿ ತರುವ ಮೂಲಕ ಜಗತ್ತೆಲ್ಲಾ ಅರಿತಿರುವ "ತಾಯ್ನುಡಿ ಕಲಿಕೆಯೇ ಅತ್ಯುತ್ತಮ" ಎನ್ನುವ ಏರ್ಪಾಟನ್ನು ಕಟ್ಟಿಕೊಳ್ಳಬೇಕು. ಇದೊಂದೇ ಇರುವ ದಾರಿ. ತಾಯ್ನುಡಿಯಲ್ಲಿ ಉನ್ನತ ಕಲಿಕೆಯನ್ನೂ ಮಾಡಲು ಸಾಧ್ಯವಾಗಿಸುವುದರ ಮೂಲಕ ಅತ್ಯುತ್ತಮ ಕಲಿಕೆಯನ್ನೂ, ಹೊರನಾಡುಗಳ ಭಾಷೆಗಳಾದ ಇಂಗ್ಲೀಶ್, ಜಪಾನೀಸ್, ಜರ್ಮನ್, ಫ್ರೆಂಚ್ ಮೊದಲಾದವನ್ನು ಕಲಿಸುವ ಏರ್ಪಾಟಿನ ಮೂಲಕ ಹೊರಜಗತ್ತಿನಲ್ಲಿ ಗೆಲ್ಲಬಲ್ಲ ಸತ್ವವನ್ನೂ ತಂದುಕೊಡುವ ಕಲಿಕೆಯ ಏರ್ಪಾಟನ್ನು ಕಟ್ಟಿಕೊಳ್ಳಬೇಕಾದ ಬದ್ಧತೆಯನ್ನು ರಾಜ್ಯಸರ್ಕಾರ ತೋರಬೇಕಾಗಿದೆ. ಸರ್ಕಾರಕ್ಕಿಂತಲೂ ಹೆಚ್ಚಿನ ಬದ್ಧತೆಯನ್ನು ಕನ್ನಡ ಸಮಾಜ ತೋರಬೇಕಾಗಿದೆ.
Related Posts with Thumbnails