೨೯ ಜೂನಿನ "ಬ್ಯಾಂಗಲೋರ್ ಬಯಾಸ್" ಎಂಬ ಬೆಂಗಳೂರಿನ ಒಂದು ಇಂಗ್ಲೀಷ್ ಪುಡಿ-ಪತ್ರಿಕೆಯಲ್ಲಿ "ಬ್ಯಾಂಗಲೋರ್ ಟಾರ್ಪೆಡೋ" ಎಂಬ ಪುಣ್ಯಾತ್ಮನ ಉವಾಚಗಳಿಗೆ ಸ್ವಲ್ಪ ಗಮನ ಹರಿಸೋಣ. ಈ ಪತ್ರಿಕೆಯೇನು ಮನೆಮಾತಾಗಿದೆ, ಇವರು ಬರೆದಿದ್ದಕ್ಕೆಲ್ಲ ನಾವು ಉತ್ತರ ಕೊಡಬೇಕು ಅಂತೇನಲ್ಲ (ಯಾವ್ ಬಯಾಸೋ ಯಾರೂ ಕೇಳೇ ಇಲ್ಲ, ಬಿಡಿ!), ಆದರೆ ನಮ್ಮ ಮನೆಯಲ್ಲೇ ಇದ್ದುಗೊಂಡು ನಮ್ಮನ್ನೇ ಕೀಳು ಜನಾಂಗ ಅನ್ನುತ್ತಿರುವವನ ಮೀಟ್ರು ಎಷ್ಟು ಅಂತ ನೋಡಿ:
A few weeks after the release of Rajnikant's latest movie Sivaji - The Boss, one still encounters traffic jams outside theatres screening the movie, presumably running to a full house or close to it. Compare this to the sad state of Kannada cinema and its offerings and you wonder why actors and other stalwarts of this so called industry still indulge in pointless brinkmanship and bravado.
ಕನ್ನಡ ಚಿತ್ರರಂಗ ದುಃಖಕರ ಸ್ಥಿತಿಯಲ್ಲಿ ಇದೆ ಅನ್ನೋದು ಶುದ್ಧ ಸುಳ್ಳು, ಅಂಕಿ-ಅಂಶಗಳ ಆಧಾರವಿಲ್ಲದ, ಬಯಾಸ್ ತುಂಬಿದ ಬೊಗಳೆ. ಇತ್ತೀಚಿನ "ಜೋಗಿ" (ಅಂದಹಾಗೆ ಈ ಚಿತ್ರವನ್ನು ನಾಮುಂದು-ತಾಮುಂದು ಅಂತ ತಮಿಳರು ಬಂದು ತಮಿಳಲ್ಲಿ ರೀಮೇಕ್ ಮಾಡಿದ್ದನ್ನ ಮಿಸ್ಟರ್ ಟಾರ್ಪೆಡೋಗೆ ಯಾರಾದ್ರೂ ಹೇಳಬೇಕು!), "ಅಮೃತಧಾರೆ", "ಸಯನೈಡ್", "ಮುಂಗಾರುಮಳೆ", "ದುನಿಯಾ" - ಇವುಗಳೆಲ್ಲ ಕನ್ನಡ ಚಿತ್ರರಂಗದ ಜನಪ್ರಿಯತೆ ಮತ್ತು ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಿರುವಾಗ ಇವನಿಗೆ ಕಣ್ಣು ಕುರುಡಾಗಿತ್ತಾ? ಅಥವಾ ಕಿವುಡೇನಾದರೂ ಬಡಿದಿತ್ತಾ? "So called industry" ಅಂತಾನಲ್ಲ, ಕನ್ನಡ ಚಿತ್ರರಂಗ ಒಂದು ಉದ್ದಿಮೆಯೇ ಅಲ್ಲ ಅಂತ ಕನ್ನಡಿಗರಿಗೇನು ಅನ್ನಿಸುವುದಿಲ್ಲ! ಕನ್ನಡದ ನಟ-ನಟಿಯರೆಲ್ಲ ಸಮಯ ದಂಡ ಮಾಡ್ತಿದಾರೆ ಅಂತ ನಮಗೇನು ಖಂಡಿತ ಅನ್ನಿಸುವುದಿಲ್ಲ! ದಿನೇ ದಿನೇ ಜನಪ್ರಿಯವಾಗುತ್ತಿರುವ ಕನ್ನಡ ಚಿತ್ರಗಳು, ಕತೆಗಳು, ನಟ-ನಟಿಯರನ್ನು ನೋಡಿದರೆ ಸಕ್ಕತ್ ಸಂತೋಷವೇ ಆಗುತ್ತದೆ. ಹೀಗಿರುವಾಗ ನಮ್ಮ ಭೂಪ ಅನ್ನೋದು ನೋಡಿ:
Most Kannada movies...are boring and pointless
ಈ ಮಹಾನುಭಾವನಿಗೆ ಕನ್ನಡ ಚಿತ್ರಗಳು ಬೋರಂತೆ, ಅರ್ಥವಿಲ್ಲದ್ದಂತೆ. ಕನ್ನಡ ಚಿತ್ರರಂಗದ ಬಗ್ಗೆ ಈರೀತಿ ಬೈದು ಬರೆಯುವ ಇವನು ಎಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದಾನಂತೆ? ಅಥವಾ ಇವನಿಗೆ ತಮಿಳರು ಪೆದ್ದಪೆದ್ದಾಗಿ ಕುಣೀತಿಲ್ಲದ ಚಿತ್ರಗಳೆಲ್ಲ boring and pointless ಅನ್ನೋದಾದರೆ ತನ್ನ ಅನಿಸಿಕೆಯನ್ನ ತನ್ನಪಾಡಿಗೆ ತಾನಿಟ್ಟುಕೊಂಡಿದ್ದರೆ ಸಾಕಾಗಿತ್ತಲ್ಲ? ಹೀಗೆ ಅವಹೇಳನ ಮಾಡಿ ಕನ್ನಡಿಗರನ್ನ ಕೆಣಕುವ ಕೆಲಸಕ್ಕೆ ಯಾಕೆ ಕೈಹಾಕಬೇಕಿತ್ತು?
Why the need to compare when apparently there is no comparison?
ಇವನು ಹೇಳುತ್ತಿರುವುದೇನೆಂದರೆ - ತಮಿಳು ಚಿತ್ರಗಳಿಗೂ ಕನ್ನಡ ಚಿತ್ರಗಳಿಗೂ ಹೋಲಿಕೆಯೇ ಇಲ್ಲ, ಹೋಲಿಸುತ್ತಿದ್ದೀರಿ ಯಾಕೆ ಅಂತ. ಈ ತರ್ಕಕಲಾಚತುರನೇ ಹೋಲಿಕೆ ಮಾಡುತ್ತಿರುವುದು - ಕನ್ನಡ ಕೀಳು, ತಮಿಳು ಮೇಲು ಅಂತ, ನಾವಲ್ಲವಲ್ಲ? ಶಿವಾಜಿ ವಿರುದ್ಧ ಪ್ರತಿಭಟಿಸಿದವರು ಯಾರೂ ಕನ್ನಡ ಚಿತ್ರ ಮೇಲು, ತಮಿಳು ಕೀಳು ಎನ್ನಲಿಲ್ಲವಲ್ಲ? ಹೋಲಿಕೆ ತಾನೇ ಮಾಡಿ ತನ್ನ ತರ್ಕದಲ್ಲೇ ದೋಷ ಇಟ್ಟುಕೊಂಡು ಇವನು ನಮ್ಮನ್ನು ಕೀಳು ಎನ್ನುವುದು ಬೇರೆ! ಇಷ್ಟಕ್ಕೇ ಇವನ ಕನ್ನಡದ ಅವಹೇಳನ ನಿಲ್ಲಲ್ಲ. ಬರೀತಾನೆ:
It is quite clear that the dwindling number of Kannada movie fans have little in their own beloved Sandalwood to entertain them. There is a limit to the number of unimaginative movies with the same old scripts with the same ugly stars who cannot act scared on a sinking ship one can go watch.
ಕನ್ನಡ ಚಲನಚಿತ್ರ ಹಿಂದೆಂದೂ ಇಲ್ಲದಷ್ಟು ಜನಪ್ರಿಯತೆ ಪಡೆಯುತ್ತಿದೆ ಅನ್ನೋದು ಇವನಿಗೆ ಕಾಣಿಸುತ್ತಿಲ್ಲ, ಅದನ್ನ ನೋಡಕ್ಕೆ ಇವನಿಗೆ ಯೋಗ್ಯತೆಯಿಲ್ಲ ಅಂತ ಈಗಾಗಲೇ ಗೊತ್ತಾಗಿದೆ. ಯಾವ ಅಂಕಿ-ಅಂಶಗಳ ಆಧಾರದಮೇಲೆ ಕನ್ನಡ ಚಿತ್ರಗಳನ್ನು ನೋಡೋರು ಕಡಿಮೆಯಾಗುತ್ತಿದ್ದಾರೆ ಅಂತ ಹೇಳ್ತಿದಾನೆ ಸ್ವಲ್ಪ ಕೇಳಿ! ಅಂಕಿ ಅಂಶ ಇಲ್ಲದೆ ತಮಿಳರ ಬಯಾಸನ್ನು ಬೆಂಗಳೂರಿನಲ್ಲಿ ತುಂಬಲಿಕ್ಕೆ ಹೊರಟಿದ್ದಾನೆಯೇ ಹೊರತು ಇವನ ವಾದದಲ್ಲಿ ಯಾವ ನಿಜಾಂಶವೂ ಇಲ್ಲ, ಯಾವ ತರ್ಕವೂ ಇಲ್ಲ. ಮತ್ತೆ ಕನ್ನಡ ಚಿತ್ರಗಳು unimaginative ಅಂತೆ! ಎಷ್ಟು ಚಿತ್ರಗಳನ್ನು ವಿಮರ್ಶೆ ಮಾಡಿ ಈ ತೀರ್ಮಾನಕ್ಕೆ ಬಂದನಂತೆ? ಮತ್ತೆ ugly stars ಅಂತೆ! ಈ ಒಂದೇ ಮಾತು ಕನ್ನಡಿಗರ ವಿರುದ್ಧ ಜನಾಂಗೀಯ ದ್ವೇಷವನ್ನು ತೋರಿಸುತ್ತದೆ. ಹಿಂದೆ ಬ್ರಿಟಿಷರು ದಕ್ಷಿಣ ಆಫ್ರಿಕಾಗೆ ಹೋಗಿ ಅಲ್ಲಿಯ ಜನರು ugly ಎಂದಂತಿದೆ ಇವನ ಅಪವಾದ.
Nobody wants to watch your movies? Oh too bad! Try the auto-driver community...try offering them one-and-half.
ಇವನು ಹೇಳುತ್ತಿರುವುದು - ಕನ್ನಡ ಚಿತ್ರಗಳು ಕೀಳು, ಅದನ್ನ ನೋಡುವುದು ಕೇವಲ ಆಟೋಚಾಲಕರ "ಸಮಾಜ" ಮಾತ್ರ (ಆದ್ದರಿಂದ ಅವರೂ ಕೀಳು) ಅಂತ. ಮೊದಲನೆಯದಾಗಿ ಕನ್ನಡ ಚಿತ್ರಗಳು ಕೀಳು ಅನ್ನೋದನ್ನ ಯಾವ ಆಧಾರವೂ ಇಲ್ಲದೆ ತೀರ್ಮಾನಿಸಿದ್ದಾನೆ ಈ ಅಯೋಗ್ಯ. ಎರಡನೆಯದಾಗಿ ಆಟೋಚಾಲಕರು ಕೀಳು ಅಂತ ಹೇಳೋ ಅಧಿಕಾರ ಇವನಿಗೆ ಯಾರು ಕೊಟ್ಟೋರು? ಇಲ್ಲವೇ ಕನ್ನಡ ಚಿತ್ರಗಳನ್ನ ಅವರು ಮಾತ್ರ ನೋಡೋದು ಅಂತ ಯಾವ ಅಂಕಿ-ಅಂಶದ ಆಧಾರದ ಮೇಲೆ ಹೇಳಿದ್ದಾನೆ?
ನಮ್ಮ ಮನೇಲೇ ಇದ್ದು ನಮ್ಮನ್ನೇ ಕೀಳು ಜನಾಂಗ ಅಂತ ಕರೆಯುವ, ಉಂಡಮನೆಗೆ ಎರಡು ಬಗೆಯುವ ಕೃತಘ್ನರು ಇವರು. ಥೂ!