
ಕನ್ನಡಿಗರ ಹೆಮ್ಮೆಯ ಸಾಮ್ರಾಜ್ಯ ಕರ್ನಾಟಕ ಸಾಮ್ರಾಜ್ಯ. ಇದರ ರಾಜಧಾನಿ ವಿಜಯನಗರ. ಅಂದಿನ ವಿಜಯನಗರವೇ ಇಂದಿನ ಹಂಪಿ. ಈ ಸಾಮ್ರಾಜ್ಯದ ಸ್ಥಾಪಕರು ರಾಜಋಷಿ ಶ್ರೀ ವಿದ್ಯಾರಣ್ಯರು. ಈ ಸಾಮ್ರಾಜ್ಯಾಧೀಶರುಗಳು ಕುಳಿತು ಆಳಿದ ಸಿಂಹಾಸನವೇ ಕರ್ನಾಟಕ ರತ್ನ ಸಿಂಹಾಸನ. ಪುರಾಣದಲ್ಲಿ ಪಾಂಡವರು ಅಲಂಕರಿಸಿದ್ದರೆಂದು ನಂಬಿದ್ದ ಈ ಸಿಂಹಾಸನವನ್ನು ನೆಲದಡಿಯಲ್ಲಿ ಹೂತಿಟ್ಟಿದ್ದರಂತೆ. ನೆಲದಿಂದ ಹೊರ ತೆಗೆಸಿ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯಾಧೀಶರಾದ ವಿಜಯನಗರದ ದೊರೆಗಳಿಗೆ ಇದನ್ನು ಒಪ್ಪಿಸಿದ್ದರೆಂಬ ಪ್ರತೀತಿಯಿದೆ. ಇಂತಹ ಐತಿಹಾಸಿಕ ಮಹತ್ವವಿರೋ ಸಿಂಹಾಸನ ಏನಾಯಿತು? ಈಗೆಲ್ಲಿದೆ? ಎಂಬ ಕುತೂಹಲವೇ? ಇಗೋ, ಇಲ್ಲಿದೆ ಕರ್ನಾಟಕ ರತ್ನ ಸಿಂಹಾಸನ. ವಿಜಯನಗರದ ವಿನಾಶದ ನಂತರ ಸುಮಾರು 1609ರಲ್ಲಿ ಮೈಸೂರಿನ ಯದುವಂಶದ ವಡೆಯರ್ ರಾಜವಂಶದ ಪಾಲಾದ ಈ ಸಿಂಹಾಸನ ಇಂದು ಮೈಸೂರು ಅರಮನೆಯಲ್ಲಿದೆ. ಇದೇ ಸಿಂಹಾಸನವನ್ನೇ ನಾವು ದಸರಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ.
ಅಂತಿಂಥದ್ದಲ್ಲ ಈ ಸಿಂಹಾಸನ!
ಹಕ್ಕಬುಕ್ಕರಾದಿಯಾಗಿ ಮಹಾ ಮಹಾ ರಾಜಾಧಿರಾಜರು ಇದರಲ್ಲಿ ಕುಳಿತೇ ರಾಜ್ಯ ನಡೆಸಿದ್ದರು. ಕರ್ನಾಟಕ ರತ್ನ ಸಿಂಹಾಸನಾಧೀಶನೆಂದೇ ಖ್ಯಾತಿ ಪಡೆದ ಶ್ರೀ ಕೃಷ್ಣದೇವರಾಯರು ಇದರ ಮೇಲೆ ಕುಳಿತೇ ಆಳ್ವಿಕೆ ನಡೆಸಿದ್ದು. ಈ ಸಿಂಹಾಸನವನ್ನು ಬರಿಯ ರಾಜರುಗಳು ಮಾತ್ರಾ ಅಲಂಕರಿಸಿಲ್ಲ. ಮಾಧ್ವಸಂಸ್ಥಾನಾಧೀಶರೂ, ಯತಿರಾಜರೂ ಆಗಿದ್ದ ಶ್ರೀ ವ್ಯಾಸರಾಯರು ಕೂಡಾ ಅಲಂಕರಿಸಿದ್ದರಂತೆ. ಹೌದೂ! ಶ್ರೀಕೃಷ್ಣದೇವರಾಯನಿಗೆ ಒದಗಿದ್ದ ಕುಹ ಯೋಗವನ್ನು ಪರಿಹರಿಸಲು ಇಡೀ ವಿಜಯನಗರ ಸಾಮ್ರಾಜ್ಯವನ್ನು ದಾನವಾಗಿ ಪಡೆದು, ಇದೇ ಸಿಂಹಾಸನದ ಮೇಲೆ ವಿರಾಜಮಾನರಾಗಿ ಇವರು ಕುಳಿತಿದ್ದರಂತೆ. ಹಾಗಾಗೇ ಇವರಿಗೆ ವ್ಯಾಸರಾಜರೆಂಬ ಹೆಸರು ಬಂತೆಂದು ಇತಿಹಾಸ ಹೇಳುತ್ತದೆ.
ಪ್ರೇರಣೆ ನೀಡಲಿ ಇತಿಹಾಸ
ಇತಿಹಾಸದ ಸಕಾರಾತ್ಮಕ ಅಂಶಗಳು ಶೌರ್ಯ, ಸಾಹಸ, ತ್ಯಾಗ, ಬಲಿದಾನ, ಉದಾತ್ತತೆ, ಸಾಧನೆಗಳ ಯಶೋಗಾಥೆಯ ಖಜಾನೆಯಾಗಿವೆ. ಇತಿಹಾಸ ಕಟ್ಟಿದ ನಮ್ಮ ಹಿರಿಯರ ಸಾಧನೆಗಳು ನಮ್ಮ ಇವತ್ತುಗಳನ್ನು ಕ್ರಿಯಾಶೀಲವಾಗಿಸಿ ಒಳ್ಳೆಯ ನಾಳೆಗಳನ್ನು ಕಟ್ಟಲು ಪ್ರೇರಣೆ ನೀಡಲಿ. ನಮ್ಮೊಳಗಿನ ಸ್ಪೂರ್ತಿ ಚಿಲುಮೆ ಸದಾ ಉಕ್ಕುತ್ತಿರಲು ಇತಿಹಾಸದ ಇಂತಹ ಸ್ಮರಣೆಯುಳಿಕೆಗಳು ಕಾರಣವಾಗಲಿ.
1 ಅನಿಸಿಕೆ:
ವಾವ್, ತುಂಬಾ ಸಂತೋಷ ಆಯಿತು ಕಣ್ರೀ ಸಿಂಹಾಸನ ನೋಡಿ, ನಮ್ಮ ಇತಿಹಾಸ ಎಷ್ಟು ಶ್ರೀಮಂತ, ದೇಶದ ಇತಿಹಾಸದಲ್ಲಿ ಅದೆಷ್ಟು ಕನ್ನಡ ಸಾಮ್ರಾಜ್ಯಗಳು, ಗಂಗಾ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಕದಂಬರು, ವಿಜಯನಗರ, ಮೈಸೂರು, ಬೇಸರದ ಸಂಗತಿ ಅಂದರೆ ಈಗ ಅವರಾಳಿದ ಎಷ್ಟು ಭೂಪ್ರದೇಶ ಬೇರೆ ಭಾಷೆಯವರದ್ದಾಗಿದೆ.ಏನ್ರಿ ಆಗಿದೆ ನಮಗೆ?, ನಮ್ಮ ಕೆಟ್ಟ ರಾಜಕಾರಣಿಗಳಿಗೆ?, ಇತಿಹಾಸ ತಿಳಿದವನು ಇತಿಹಾಸ ಬರೆಯ ಬಲ್ಲ ಅಂತ ಹೇಳುತ್ತಾರೆ, ನಮ್ಮ ಇತಿಹಾಸ ನಮಗೆ ನಿಜವಾಗಲು ತಿಳಿದಿಲ್ಲ, ಅದರ ಬಗ್ಗೆ ಹೆಮ್ಮೆ ಕೂಡ ಇಲ್ಲ, ಅದಕ್ಕೆ ಈ ಪರಿಸ್ಥಿತಿ. ನಿಜ, ನಮ್ಮೊಳಗಿನ ಸ್ಪೂರ್ತಿ ಚಿಲುಮೆ ಸದಾ ಉಕ್ಕುತ್ತಿರಲು ಇತಿಹಾಸದ ಇಂತಹ ಸ್ಮರಣೆಯುಳಿಕೆಗಳು ಬೇಕೇ ಬೇಕು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!