ಬಿಬಿಎಂಪಿ ಶಾಲೆಗಳು ಇನ್ಮುಂದೆ ಇಂಗ್ಲೀಷ್ ಮಾಧ್ಯಮದಲ್ಲಿ !!!

ದಿನಾಂಕ 12.11.2010ರ ವಿಜಯಕರ್ನಾಟಕ ದಿನಪತ್ರಿಕೆಯ ಆರನೇ ಪುಟದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಅನ್ನೋ ಒಂದು ಸುದ್ದಿ ಬಂದಿದೆ. ಮಹಾನಗರ ಪಾಲಿಕೆಯ ಒಂದು ‘ಸ್ಥಾಯಿಸಮಿತಿ’ಯು ಈ ಶಿಫಾರಸ್ಸನ್ನು ಮಾಡಿದೆಯಂತೆ. ಈ ಸುದ್ದಿ ಕನ್ನಡನಾಡಿನ ಕಲಿಕೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಮತ್ತು ಈಗಿನ ಸರ್ಕಾರವು ಮಾತೃಭಾಷಾ ಕಲಿಕೆಯ ಪರವಾದ ತನ್ನ ನಿಲುವಿನಿಂದ ಹಿಂದೆ ಸರಿದಿರುವ ಅನುಮಾನಕ್ಕೆ ಕಾರಣವಾಗಿದೆ. ಇದು ಯಾವುದೋ ಒಂದು ನಗರ ಪಾಲಿಕೆಯ, ಒಂದು ಸ್ಥಾಯಿ ಸಮಿತಿಯ ಶಿಫಾರಸ್ಸು ಮಾತ್ರವಾಗಿರದೆ ಇಡೀ ಸರ್ಕಾರವನ್ನು ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ನಿಲುವಾ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.

ಉದ್ಯಮಿಯ ಅನಿಸಿಕೆ!

ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಕನ್ನಡ ಮಾಧ್ಯಮದಲ್ಲೇ ಕಲಿತು ಅಷ್ಟೆತ್ತರಕ್ಕೇರಿದ ಇನ್ಫೋಸಿಸ್ಸಿನ ಶ್ರೀಯುತ ನಾರಾಯಣಮೂರ್ತಿಗಳು ಇಂತಹದ್ದೇ ನಿಲುವಿನ ಒಂದು ಹೇಳಿಕೆ ನೀಡಿದ್ದಾರೆ. ಇವರಂತೂ ಆಗ್ಗಿಂದಾಗ್ಗೆ ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಇಂಗ್ಲೀಷ್ ಶಾಲೆಗಳನ್ನು ಆರಂಭಿಸಬೇಕೆಂದೂ, ಕನ್ನಡದ ಮಕ್ಕಳ ಕಲಿಕೆ ಇಂಗ್ಲೀಷಿನಲ್ಲಿರಬೇಕೆಂದೂ ಆಗ್ಗಾಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಬಹುಷಃ ಜಾಗತೀಕರಣದ ಇಂದಿನ ಯುಗದಲ್ಲಿ ಬೃಹತ್ತಾಗಿ ಬೆಳೆದಿರುವ ಕಾಲ್ ಸೆಂಟರ್, ಸಾಫ್ಟ್‍ವೇರ್ ಉದ್ಯಮಗಳಲ್ಲಿನ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀಯುತರು ಹೀಗೆ ಹೇಳಿಕೆ ನೀಡಿರಬಹುದು. ಇರಲಿ... ಆದರೆ ಇಡೀ ಕನ್ನಡನಾಡು ಒಂದು ಕಾಲ್ ಸೆಂಟರ್ ಆಗಿರಬೇಕು ಎನ್ನುವ ನಿಲುವಂತೂ ಇವರದ್ದಲ್ಲಾ ಎಂದೇ ಭಾವಿಸೋಣ. ಮೇಲ್ನೋಟಕ್ಕೆ ಅತ್ಯಂತ ಜನಪರವೆಂಬಂತೆ ಕಾಣುವ ಈ ನಿಲುವಿನ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು. ಶ್ರೀಯುತರು ಯಶಸ್ವಿ ಉದ್ಯಮಿ ಮಾತ್ರವೇ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಇವರ ಹೇಳಿಕೆಗೆ ಕೊಡಬೇಕಾದ ಮಹತ್ವ ಎಷ್ಟು ಎಂಬುದು ಅರಿವಾಗುತ್ತದೆ.

ಕನ್ನಡದ ನಾಲಗೆ ಕಿತ್ತು ಇಂಗ್ಲೀಷ್ ನಾಲಗೆ ಸಿಕ್ಕಿಸಲಾದೀತೆ?
ಹೌದು. ಇಂಗ್ಲೀಷ್ ಶಾಲೆಗಳನ್ನು ಸರ್ಕಾರವೇ ಎಲ್ಲಾಕಡೆ ಶುರುಮಾಡಬಹುದು, ಆದರೆ ಕಲಿಕೆಯೆನ್ನುವುದು, ಜ್ಞಾನಾರ್ಜನೆ ಎನ್ನುವುದು ಕನ್ನಡದ ಮಕ್ಕಳಿಕೆ ತಾಯ್ನುಡಿಯಾದ ಕನ್ನಡಕ್ಕಿಂತಾ ಪರನುಡಿಯಾದ ಇಂಗ್ಲೀಷಿನಲ್ಲಿ ಸುಲಭವಾಗುತ್ತದೆಯೇ? ನಮ್ಮ ನಾಡಿನ ಎಲ್ಲಾ ಮಕ್ಕಳಿಗೂ ಇಂಗ್ಲೀಷಿನಲ್ಲಿನ ಕಲಿಕೆ ಸುಲಭವಾಗುತ್ತದೆಯೇ? ಇಂಗ್ಲೀಷಿನ ಮೂಲಕ ಕಲಿಯಬೇಕೆಂಬುದೇ ಒಂದು ಓಟದ ಸ್ಪರ್ಧೆಯಲ್ಲಿ ಕಾಲಿಗೆ ಕಲ್ಲುಕಟ್ಟಿ ಓಡಲು ಬಿಟ್ಟಂತಾಗುವುದಿಲ್ಲವೇ? ಮಕ್ಕಳ ಕಲಿಕೆ ತಾಯ್ನುಡಿಯಲ್ಲಿ ಉತ್ತಮವೆಂದ ವಿಜ್ಞಾನಿಗಳ ಸಂಶೋಧನೆಗಳು ಪೊಳ್ಳೇ? ಜಗತ್ತಿನ ಅತ್ಯಂತ ಮುಂದುವರೆದ ರಾಷ್ಟ್ರಗಳಲ್ಲಿ ಬಹುತೇಕವುಗಳೆಲ್ಲಾ (ಜಪಾನು, ಜರ್ಮನಿ, ಇಸ್ರೇಲು, ಫ್ರಾನ್ಸು, ಇಟಲಿ, ಕೊರಿಯಾ... ಸೇರಿ) ತಾಯ್ನುಡಿಯಲ್ಲೇ ತಮ್ಮ ಮಕ್ಕಳ ಕಲಿಕೆಯನ್ನು ನಡೆಸೇ ಯಶ ಗಳಿಸಿರುವುದು ಸುಳ್ಳೇ? ಜ್ಞಾನ ವಿಜ್ಞಾನ ತಂತ್ರಜ್ಞಾನಗಳೆಲ್ಲವನ್ನೂ ಇಂಗ್ಲೀಷ್ ಮಾಧ್ಯಮದ ಮೂಲಕ ಕಲಿಸುತ್ತೇನೆನ್ನುವ ಸರ್ಕಾರದ ನಿಲುವು ಎಷ್ಟು ಆತ್ಮಹತ್ಯಾತ್ಮಕವೆಂದರೆ ನಾಳಿನ ನಮ್ಮ ಮುಂದಿನ ಪೀಳಿಗೆಯವರು ಕನ್ನಡದಲ್ಲೂ ಇಂಗ್ಲೀಷಲ್ಲೂ ಪರಿಣಿತಿಯಿಲ್ಲದ ಅರೆಬೆಂದಮಡಿಕೆಗಳಾಗುವುದಿಲ್ಲವೇ? ಕರ್ನಾಟಕ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕರ್ನಾಟಕ ರಾಜ್ಯದ ಮಕ್ಕಳ ಕಲಿಕೆ ಇಂಗ್ಲೀಷಿನಲ್ಲಾಗಬೇಕೆಂಬ ನಿಲುವು ಹೊಂದಿದೆಯೇ? ಈ ನೆಲದ ಸಂಸ್ಕೃತಿ ಇತಿಹಾಸ ಹೇಳುವ ಸಮಾಜಶಾಸ್ತ್ರದ ಕಲಿಕೆ ನಮ್ಮ ಮಕ್ಕಳಿಗೆ ಇಲ್ಲದೆ ನೆಲದ ಸಂಸ್ಕೃತಿಯ ಬೇರಿನಿಂದ ದೂರಾಗುವುದು ಬಿಜೆಪಿಗೆ ಪರವಾಗಿಲ್ಲವೇ? ಹಾಗಿದ್ದಲ್ಲಿ ಅದು ತನ್ನ ನಿಲುವನ್ನು ಹಾಗೆಂದು ಘೋಷಿಸಿಕೊಳ್ಳಲಿ... ಆದರೆ ಇದು ನಾಡನ್ನು ಹಿಂದಕ್ಕೊಯ್ಯುವ ಕಾರ್ಯವಾಗುತ್ತದೆ ಎಂಬುದನ್ನು ಮರೆಯದಿರಲಿ.

ಮಾಡಬೇಕಾದ್ದು...!

ರಾಜ್ಯಸರ್ಕಾರವು ಈ ನಾಡಿನ ಮಕ್ಕಳ ಏಳಿಗೆಯನ್ನು ರೂಪಿಸಬಲ್ಲ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಜವಾಬ್ದಾರಿ ಹೊಂದಿದೆ. ಈಗಿರುವ ವ್ಯವಸ್ಥೆಯು ಸರಿಯಿಲ್ಲವೆನ್ನುವುದು ಮತ್ತು ಅದರಲ್ಲಿ ಸುಧಾರಣೆಯಾಗಬೇಕಿದೆ ಎನ್ನುವುದು ಮನವರಿಕೆಯಾಗಿದ್ದರೆ ಅದು ಒಳ್ಳೆಯದೇ. ಆದರೆ ಅದನ್ನು ಸರಿ ಮಾಡಬೇಕಾದ ಬಗೆ ಏನು? ತಾನೇ ಸರಿಮಾಡಬೇಕಾದ ವ್ಯವಸ್ಥೆಯನ್ನು ತಿಪ್ಪೆಗೆಸೆದು ಬೇರೊಂದು ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಮುಂದಾಗುವ ಮೂಲಕವೇ? ಇದಕ್ಕೆ ಬದಲಾಗಿ "ಕನ್ನಡನಾಡಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ? ಮೂಲಭೂತವ್ಯವಸ್ಥೆಯನ್ನು ಸುಧಾರಿಸುವ ಬಗೆ ಹೇಗೆ?" ಎಂದು ಚಿಂತಿಸಿ ಎಂದು ಸರಿಯಾದ ಯೋಜನೆಗಳನ್ನು ರೂಪಿಸುವುದಕ್ಕೆ ಬೇಕಾದ ಕ್ರಮ ಕೈಗೊಳ್ಳುವುದಲ್ಲವೇ? ಕನ್ನಡಿಗರು ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಕನ್ನಡದಲ್ಲಿ ಕಲಿಯುವುದೇ ದಾರಿಯೆನ್ನುವುದನ್ನು ಅರಿಯಬೇಕಾಗಿದೆ. ಇಂದು ಕನ್ನಡದ ಶಿಕ್ಷಣ ಅಷ್ಟು ಪ್ರಬುದ್ಧವಾಗಿಲ್ಲದಿದ್ದರೆ ಅದನ್ನು ಆ ಹಂತಕ್ಕೆ ಹಂತಹಂತವಾಗಿ ಒಯ್ಯುವ ಬಗ್ಗೆ ಯೋಚಿಸಬೇಕಾಗಿದೆ. ಆಗ ಮಾತ್ರಾ ಜ್ಞಾನದ ಭಂಡಾರ ಕನ್ನಡದ ಎಲ್ಲಾ ಮಕ್ಕಳಿಗೆ ಎಟುಕಲು ಸಾಧ್ಯ, ಆಗ ಮಾತ್ರವೇ ನಮ್ಮ ಮಕ್ಕಳಿಂದ ಜಗತ್ತಿನ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸಲು ಸಾಧ್ಯ. ನಾಡಿನ ಆರ್ಥಿಕ ಏಳಿಗೆ, ಜನಶಕ್ತಿಯ ಸದುಪಯೋಗ ಸಾಧ್ಯ. ನಾಳೆಗಳನ್ನು ಹಸನು ಮಾಡಲು ಸಜ್ಜಾಗಬೇಕಾದರೆ ಅದಕ್ಕೆ ಪೂರಕವಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ದೀರ್ಘಾವಧಿಯಲ್ಲಿ ಇದೊಂದೇ ಏಳಿಗೆಗೆ ದಾರಿ... ಹೆದ್ದಾರಿಯಾಗಿದೆ. ನಮ್ಮನ್ನಾಳುವವರಿಗೆ, ನಮ್ಮ ಮಕ್ಕಳ ಭವಿಷ್ಯದ ಹೊಣೆ ಹೊತ್ತವರಿಗೆ ಇದರ ಅರಿವಿಲ್ಲದಿರುವುದು ನಾಡಿನ ದುರಂತವಲ್ಲವಾ ಗುರೂ!

7 ಅನಿಸಿಕೆಗಳು:

Unknown ಅಂತಾರೆ...

ಈ ವಿಚಾರದ ಬಗ್ಗೆ ಕನ್ನಡ ಚಿಂತಕರು(ಬನವಾಸಿ ಬಳಗ), ಕನ್ನಡ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಚರ್ಚಿಸಿ ಮನವರಿಕೆ ಮಾಡಿದರೆ ಉತ್ತಮ ಅಂತ ಅನಿಸುತ್ತೆ. ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಓದಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಮಾತೃ ಭಾಷೆಯಲ್ಲಿ (ಕನ್ನಡ ಭಾಷೆ) ಹೆಚ್ಚು ಅರ್ಥ ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಂಗ್ಲಿಷ್ ಭಾಷೆಯನ್ನೂ ಸಹ ೧ ನೇ ತರಗತಿ ಯಿಂದ ಕಲಿತರೆ ಕನ್ನಡ ಶಾಲೆ ಮಕ್ಕಳಿಗೆ ಯಾವುದೇ ರೀತಿ ಮೋಸ ಆಗುವುದಿಲ್ಲ. ಅತ್ತ ಸರ್ಕಾರಿ ಹುದ್ದೆಗಳಿಗೂ, ಇತ್ತ MNC ಉದ್ಯೋಗಗಳಿಗೂ ಹೋಗಲು ಅನುಕೂಲ ಆಗುತ್ತೆ. ಇನ್ನು ಅಂಗ್ಲ ಮಾಧ್ಯಮದಲ್ಲಿ(ಶಾಲೆಯಲ್ಲಿ) ಓದುವ ವಿದ್ಯಾರ್ಥಿಗಳು ಒಂದನೇ ತರಗತಿಯಿಂದ ಪ್ರಥಮ ಭಾಷೆಯಾಗಿ ನಮ್ಮ ಭಾಷೆ(ಕನ್ನಡ)ಯನ್ನು ೧೨೫ ಅಂಕಗಳ ಪರೀಕ್ಷೆ ಬರೆಯುವಹಾಗೆ ಪಾಠಕ್ರಮ ರೂಪಿಸುವ ಬಗ್ಗೆ ಸರ್ಕಾರವನ್ನು ಆಗ್ರಹ ಪಡಿಸಬೇಕು. ಇಂಗ್ಲಿಷ್ ಶಾಲೆ ಹಾವಳಿಯಿಂದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ನಗರದ ಮಕ್ಕಳಿಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೂ ವಿಪರೀತ ಅಂತರ ಆಗ್ತಾ ಇದೆ. ಈಗಲೇ ಇದಕ್ಕೆ ತುರ್ತು ಚಿಕಿತ್ಸೆ ಕೊಡಬೇಕು. ಈ ಕುರಿತು ನಮ್ಮ ಸಹಕಾರವೂ ಇದೆ.

Jnaneshwara ಅಂತಾರೆ...

It cannot happen as lot of opposition will come definitely..ಕನ್ನಡಕ್ಕೆ ಕರ್ನಾಟಕ ಸರ್ಕಾರದ ದಿವ್ಯ ನಿರ್ಲಕ್ಷ್ಯ

Anonymous ಅಂತಾರೆ...

ಸ್ವಾಮಿ!
ಪಾಲಿಕೆಯಲ್ಲಿ ಇಂಗ್ಲಿಶ ಕಲಿಸುವದರಿಂದ ಕಂಗ್ಲೀಶ್ ಹಾವಳಿ ಕಡಿಮೆಯಾಗುತ್ತದೆ! FM ಅನ್ನು ಯಾವುದೇ ಭಿಡೆ ಇಲ್ಲದೆ ಸರಿಯಾಗಿ ಕೇಳಬಹುದು
ಮೂರ್ತಿ ಸಾಹೇಬರು ಹೇಳಿದ್ದು ಸರಿಯಾಗಿದೆ, ಯಾಕೆಂದರೆ ಕೋಳೀ ಸೆಂಟರ್ ಹಾಗು ಬದ್ನೆಕಾಯಿ ಸೆಂಟರ್ ಗಳಿಗಾಗಿ ಇವರುಗಳು ಕೊಡೊ ಸಂಬಳದಲ್ಲಿ ತಂಗಳೂರಿನಲ್ಲಿ ಯಾರು ಕೆಲಸ ಮಾಡಲು ಒಪ್ಪುವದಿಲ್ಲ. ಉದಾ: ಜಿಂದಾಲ್ ನವರು ಕೋಳಿ ಸೆಂಟರ್ ಅನ್ನು ಬಳ್ಳಾರಿಯ ಒಂದು ಹಳ್ಳಿಯಲ್ಲಿ ಮಾಡಿದ್ದು ಇದೇ ಕಾರಣಕ್ಕಾಗಿ. ಇತ್ತೀಚಿಗೆ ಇವರು ಡಿಗ್ರೀ ಕಾಲೇಜುಗಳಿಗೆ ಹೋಗಿ Appointment ಮಾಡಿಕೊಳ್ಳುತ್ತಿದ್ದಾರೆ, ಇವರು ಕೊಡುವ ಸಂಬಳ ಕೇಳಿ ನಮ್ಮ ಹುಡುಗ್ರು ಮಳ್ಳಾಗ್ತಾವೆ

ಪುಟ್ಟ PUTTA ಅಂತಾರೆ...

Think of it in this way.. Some believe that we grasp things more easily if we are taught in our mother tongue. But what is the point if you can not reproduce that in English. I have not heard of any MNC that does business in Kannada. Even German and French companies do it in English. What is most necessary is to impose Kannada as first language(and not medium of instruction) in all schools across Karnataka whether CBSE or ICSE. I can not emphasize the importance of English any further. Our children need to compete with not just Tamilians and Telugus but also with Americans and Britons.

ಪುಟ್ಟ PUTTA ಅಂತಾರೆ...

And... a strict NO to Hindi or any other Indian language for that matter.

ಅನಂತ ಭಟ್ಟ ಅಂತಾರೆ...

@Putta
Started thinking in your way...... Realized..... what is the need of a mother-tongue / kannada(for us) at all???!!! What is the need of imposing kannada as first language in that case?

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಆರಾಮೆ ಗುರು?
ನಾವು ವಿಧ್ಯೆ ಅನ್ನೊದ್ನ ನೋಡೂ ತರ್ವೇ ತಪ್ಪು ಗುರು. ಇಂಗ್ಲೀಶ್ ಮಾದ್ಯಮ್ದಲ್ ಓದೋದು ಒಳ್ಳೇದು ಅನ್ನೋದು ಸರಿಯೆ ಗುರು? ನಾವು ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಅಳವದಿಸ್ಕೊಲ್ದೆಇರೊದು, ಎಡ್ ವಾಟ್ ಆಗಿದ್ದು. ಕುವೆಂಪು ಕಾಲ್ಡಲ್ಲಿ ಮೈಸೂರ್ ಉನೀವೆರ್ಸಿಟಿನೋರು ಟ್ರೈ ಮಾದುದ್ರನ್ತೆ. ಆದ್ರೆ ಅಲ್ಲಿಗೆ ನಿನ್ತೊಗದೆ. ಈಗ ಶುರುವಿಂದ ಇಂಗ್ಲೀಶ್ ನಲ್ಲ್ಲಿ ವಿದ್ಯೆ ಕಲ್ತಾವ್ರನ್ನೇ ತಗೋ ಗುರು. ಎಸ್ಟ್ ಜನ ಕಲ್ತೀರೋ ವಿದ್ಯೆ ಇಂದ ಇಟ್ ಉಣ್ತಾವ್ರೆ? ಕಾಲ್ ಸೆಂಟರ್ ನಲ್ ಕೆಲ್ಸಾ ಮಾಡೋರು, M ನ್ ಸೀ ನಲ್ ಕೆಲ್ಸಾ ಮಾಡೋರು, ವಿದೆಸುಕ್ ಬುಟ್ಟಿ ಕಟ್ಟೋರು. ಮುಗೀತು. ಬೇರೆ ಲಕ್ಷಾಂತರ ಉದ್ಯೊಗಗಳ್ಗೆ ಕನ್ನಡ ಬೇಕು..ಕನ್ನಡ ಸಾಕು. ಕಾಲ್ ಸೆಂಟರ್ ನಲ್ ಕೆಲ್ಸಾ ಮಾಡೋರು ಎಂಗಿದ್ರು ಇಂಗ್ಲೀಶ್ ಗಿಲಿಪಾಟ ಮಾಡ್‌ಕೊಳ್ತಾರೆ, ವಿದೇಸುಕ್ಕೊಗೋರು ಎಂಗಿದ್ರು ಇಂಗ್ಲೀಶ್ ಕಲೀತರೆ (ಇಂಗ್ಲೀಶ್ ಗೊತ್ತಿಲ್ಡೆ ಇರೋ ಚೀನದಾವ್ರು ಎಂಗೋ ಇಂಗ್ಲೀಶ್ ಕಲ್ತಕೊಂಡು ಅಮೇರಿಕುಕ್ ಬತ್ತರೆ). "ಈಗ ಕನ್ನಡಿಗ್ರ್ ಇಂಗ್ಲೀಶ್ ನಲ್ ಪಾಟ ಕಲ್ತಬುಟ್ಟ್ ಸಾದಿಸ್ಥಿರೊದ್ನ ಕನ್ನಡ್ ದಲ್ಲೇ ಪಾಟ ಕಲ್ತು, ಬರೀ ಇಂಗ್ಲೀಶ್ ಅಸ್ಟೆ ಕಲ್ತು ಸಾಧೀಸ್‌ಬೋದು". ಇಂಗ್ಲೀಶ್ ನಲ್ ಪಾಟ ಕಲಿತರೆ, ಬರೀ ಎರಡೇ ತಲೆಮಾರ್‌ನಲ್ಲಿ ಕನ್ನಡ ಸತ್ತೋಗುತ್ತೆ ಗುರು. UNESCO ಪ್ರಕಾರ, ಕಳೆದ ೨೫ ವರ್ಷ್ದಲ್ಲಿ ಸತ್ತೋಗಿರೋ ೩೦೦೦ (ಒಟ್ಟು ೬೦೦೦) ಭಾಷೆಗಳ್ ಗತಿ ಇದೇ ಆಗಿದ್ದು. ಲಾಬ ನಷ್ಟ ನೋಡುದ್ರೆ, ಇಂಗ್ಲೀಶ್ ನಲಿ ಪಾಟ ಕಲಿತು ಅನ್ಯಾಯ ಮಾಡ್ಕೋತಾ ಇದೀವಿ ಅಲ್ವೇ? ಇಂಗ್ಲೀಶ್ ಗಾಯ, ಹಿಂದಿ ಗಾಯುದ್ ಮೇಲ್ ಬರೆ. ಬರೀ ೧೬೦೦೦ ಬಿಳಿಯರ್‍ನ ಓಡಿಸ್‌ಬುಟ್ಟ್ ರೆ ನಾವು ಸ್ವಾತಂತ್ರಿ ಗಳೆ ಗುರು? ನಾವ್ಯಾರೂ ಅನ್ನೋದ್ನೇ ಬಿಟ್ಬಿಟ್ರೆ, ಸ್ವಾತಂತ್ರ, ಸಾಟುಕ್ ಸಮ. ನಾವ್ಯಾವತ್ತಿದ್ರೂ ಗುಲಾಮ್ರೆ.
ಸಿಗುವ ಗುರು,
ಸಿದ್ರಾಜು ಬೋರೇಗೌಡ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails