ಕನ್ನಡದಲ್ಲೇಕೆ ಇಷ್ಟು ಚಿಕ್ಕದಾಗಿದೆ?
ಇಲ್ಲಿ ಯಾಕೆ ಕನ್ನಡವನ್ನು ಇಷ್ಟು ಚಿಕ್ಕದಾಗಿ ಹಾಕಿದ್ದಾರೆ? ತ್ರಿಭಾಷಾ ಸೂತ್ರದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನವಾದ ಸೈಜು ಅಂತಾನಾ? ನೂರಕ್ಕೆ ತೊಂಬತ್ತರಷ್ಟು ಜನಕ್ಕೆ ಅನುಕೂಲವಾಗಬೇಕು ಅನ್ನೋ ಉದ್ದೇಶವಿದ್ದರೆ ಕನ್ನಡದಲ್ಲಿ ದೊಡ್ಡದಾಗಿ ಫಲಕಗಳನ್ನು ಹಾಕಬೇಡವೇ? ನಮ್ಮೂರಿನ ರೈಲು ಸಂಪರ್ಕ ನಮ್ಮ ಜನಕ್ಕೆ ಅನುಕೂಲ ಮಾಡಿಕೊಡಬೇಕು ಅನ್ನೋದಕ್ಕಿಂತ ಹಿಂದಿಯವರಿಗೆ ತೊಂದರೆಯಾಗಬಾರದು ಅನ್ನೋ ಮನಸ್ಥಿತಿ ಯಾಕೆ ನಮ್ಮ ಸರ್ಕಾರಕ್ಕೆ? ಇಷ್ಟಕ್ಕೂ ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಕೊಂಕಣಿ ಮೊದಲಾದ ನುಡಿಗಳಿಗೆ ಇಲ್ಲದ ಯಾವ ಕೋಡು ಹಿಂದಿಗೆ ಇದೆ. ಯಾಕೆ ಹೀಗೆ ಹಾಕಿದ್ದೀರಾ? ಎಂಬ ಆಕ್ಷೇಪಕ್ಕೆ ತ್ರಿಭಾಷಾ ಸೂತ್ರದತ್ತ ಬೊಟ್ಟು ಮಾಡಿ ತೋರುವುದಾದರೆ ಅಂತಹ ತ್ರಿಭಾಷಾ ಸೂತ್ರವಾದರೂ ಏಕೆ ಬೇಕು? ಅಲ್ರೀ, ಕನ್ನಡದಲ್ಲಿ ಹಾಕಿದ್ದಾರಲ್ಲಾ? ಸಾಲ್ದಾ? ನಿಮಗ್ಯಾಕೆ ಬೇರೆದ್ರು ಮೇಲೆ ಕಣ್ಣು ಅಂತೀರಾ?
ಸಮಸ್ಯೆ ಮೇಲೆ ಕಾಣುವಷ್ಟು ಚಿಕ್ಕದಲ್ಲ!
ಸಮಸ್ಯೆ ಮೇಲೆ ಕಾಣುವಷ್ಟು ಚಿಕ್ಕದಲ್ಲ!
ಇದು ಯಾವುದೋ ಒಂದು ಕೇಂದ್ರಸರ್ಕಾರಿ ಕಛೇರಿಯಲ್ಲ... ಇಡೀ ಬೆಂಗಳೂರಿನ ತುಂಬಾ ಹರಿದಾಡೋ ಮೆಟ್ರೋ ರೈಲುಗಳು ಅನ್ನೋ ಕಾರಣದಿಂದ ಕನ್ನಡಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇಷ್ಟು ದಿನ ಹಿಂದೀ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ, ಭಾರತದ “official language”ಗಳಲ್ಲೊಂದು ಅನ್ನೋ ನೆಪ ಹೇಳಿ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ರೈಲ್ವೇಯಲ್ಲಿ ಇದ್ದ ಹಿಂದೀ ದೇವತೆ ಈಗ ಮೆಟ್ರೋಗೂ ವಕ್ಕರಿಸ್ಕೊತಾ ಇರೋದನ್ನು ನೋಡುದ್ರೆ ಆತಂಕ ಆಗ್ತಾ ಇದೆ. ಕರ್ನಾಟಕ ಸರ್ಕಾರವೇ ಹೆಚ್ಚು ಪಾಲು ಹೂಡಿಕೆ ಮಾಡಿರುವ “ನಮ್ಮ ಮೆಟ್ರೋ”ಲಿ ಈಗ ತ್ರಿಭಾಷಾ ಸೂತ್ರವನ್ನು ಜಾರಿ ಮಾಡೋ ನೆಪದಲ್ಲಿ ಅನಿಯಂತ್ರಿತ ವಲಸೆಗೆ ಉತ್ತೇಜನ ಕೊಡ್ತಿದಾರೆ. ಭಾರತದ ಕೇಂದ್ರಸರ್ಕಾರದ ಅಂದಾಜು 15% ಈಕ್ವಿಟಿ ಪಾಲಿದೆ ಅನ್ನೋ ಒಂದೇ ಕಾರಣಕ್ಕೆ ಇಡೀ ಬೆಂಗಳೂರಿನ ಮುಖಚರ್ಯೆಯನ್ನು, ಬೆಂಗಳೂರಿನ ಆ ಮೂಲಕ ಕರ್ನಾಟಕದ ಮುಖಚರ್ಯೆಯನ್ನೇ ಬದಲಿಸಲು ಕಾರಣವಾಗಬಲ್ಲ ಈ ನಡೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ತುರ್ತು ನಮ್ಮ ಮುಂದಿದೆ.
ವಲಸೆ ಯಾಕೆ ಹೆಚ್ಚುತ್ತೆ ಅಂದ್ರೇ...
ಸುಮ್ಮನೆ ಯೋಚಿಸಿರಿ. ನೀವು ದೆಹಲಿ ನಗರಕ್ಕೆ ಹೋದರೆ ಅಲ್ಲಿನ ರೈಲು, ಬಸ್ಸು, ಬೀದಿಗಳಲ್ಲಿ ನಡೆಯುವಾಗ ನಿಮ್ಮ ಮನಸ್ಥಿತಿ ಹೇಗಿರುತ್ತದೆ ಎಂದು. ಈಗ ಮತ್ತೊಮ್ಮೆ ಯೋಚಿಸಿರಿ, ಅದೇ ದೆಹಲಿಯ ರೈಲು, ಬಸ್ಸು, ಕಛೇರಿ ಹಾಗೂ ಬೀದಿಗಳಲ್ಲಿ ಕನ್ನಡದಲ್ಲೂ ನಾಮಫಲಕಗಳು... ಕನ್ನಡದಲ್ಲಿ ವ್ಯವಹರಿಸುವ ಪಾಲಿಸಿ, ಕನ್ನಡದಲ್ಲೂ ವ್ಯವಹಾರ ಸಾಧ್ಯವಾಗುತ್ತದೆ ಎಂಬ ನಿಯಮ ಇದ್ದರೆ ಹೇಗಿರುತ್ತದೆ ಎಂದು. ಆಹಾ... ಇಡೀ ದಿಲ್ಲಿಯೇ ನಮ್ಮದೆನ್ನಿಸದೇ? ನಮ್ಮ ಮಕ್ಕಳು ಮರಿ ಕೋಳಿ ಕುರಿ, ಚಿಳ್ಳೆಪಿಳ್ಳೆಗಳಿಗೂ "ದಿಲ್ಲಿಗೆ ಹೋಗು ಮಾರಾಯಾ, ನೋ ಪ್ರಾಬ್ಲಮ್, ಅಲ್ಲಿ ಕನ್ನಡ ನಡ್ಯುತ್ತೆ" ಅಂತಾ ವಲಸೆ ಮಾಡ್ಸಲ್ವಾ? ಈಗ ಮೆಟ್ರೋ ಪಾಲನೆ ಮಾಡಕ್ ಮುಂದಾಗಿರೋ ಭಾಷಾನೀತಿಯಿಂದಲೂ ಇಂಥದೆ ಪರಿಣಾಮ ಆಗಲ್ವಾ?
ಈಗೇಳದಿದ್ದರೆ ಮುಂದೆ ಮಲಗಬೇಕಾದೀತು!
ಕನ್ನಡನಾಡಲ್ಲಿ ಕನ್ನಡದೋರಿಗಾಗಿ ಕನ್ನಡದಲ್ಲಿ ವ್ಯವಹಾರ ನಡ್ಸುದ್ರೆ ಸಾಲ್ದಾ? ಇಷ್ಟಕ್ಕೂ ಹಿಂದಿಗೆ ಇಲ್ಲಿ ಜಾಗ ಕೊಡೋದಾದ್ರೆ ತಮಿಳು, ಉರ್ದು, ಮಲಯಾಳಂ, ಒಡಿಯಾ, ಪಂಜಾಬಿ, ರಾಜಾಸ್ಥಾನಿ, ತೆಲುಗುಗಳಿಗೂ ಕೊಡಬೋದು ಅಲ್ವಾ? ಊಹೂಂ... ಕೇಂದ್ರಸರ್ಕಾರಕ್ಕೆ ಇರೋ ಗುರೀನೇ ಇವೆಲ್ಲಾ ವೈವಿಧ್ಯತೆಗಳನ್ನು ಅಳಿಸಿ ಹಿಂದೀನ ಇಡೀ ಭಾರತದ ತುಂಬಾ ಪ್ರತಿಷ್ಠಾಪಿಸೋ ಉಮ್ಮೇದಿ. ಇಲ್ಲೇ ಇರೋ ಕನ್ನಡಿಗನ ಹಿತ ಕಡೆಗಾಣಿಸಲ್ಪಟ್ಟರೂ ಸರಿಯೇ, ಹಿಂದಿಯವರಿಗೆ ಭಾರತದ ಯಾವ ಮೂಲೇಲೂ ತೊಡಕಾಗಬಾರದು ಅನ್ನೋ ಮನಸ್ಥಿತಿ. ಒಟ್ನಲ್ಲಿ ಹಿಂದೀ ವಸಾಹತುಶಾಹಿ ಮನಸ್ಥಿತಿಯನ್ನು ಕನ್ನಡಿಗರು ಗುರುತಿಸಿ ಮೊಳಕೆಯಲ್ಲೇ ಚಿವುಟದಿದ್ದರೆ ನಾಳೆ ನಮ್ಮ ಬದುಕು ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗಬೇಕಾದೀತು ಗುರೂ!
ಈಗೇಳದಿದ್ದರೆ ಮುಂದೆ ಮಲಗಬೇಕಾದೀತು!
ಕನ್ನಡನಾಡಲ್ಲಿ ಕನ್ನಡದೋರಿಗಾಗಿ ಕನ್ನಡದಲ್ಲಿ ವ್ಯವಹಾರ ನಡ್ಸುದ್ರೆ ಸಾಲ್ದಾ? ಇಷ್ಟಕ್ಕೂ ಹಿಂದಿಗೆ ಇಲ್ಲಿ ಜಾಗ ಕೊಡೋದಾದ್ರೆ ತಮಿಳು, ಉರ್ದು, ಮಲಯಾಳಂ, ಒಡಿಯಾ, ಪಂಜಾಬಿ, ರಾಜಾಸ್ಥಾನಿ, ತೆಲುಗುಗಳಿಗೂ ಕೊಡಬೋದು ಅಲ್ವಾ? ಊಹೂಂ... ಕೇಂದ್ರಸರ್ಕಾರಕ್ಕೆ ಇರೋ ಗುರೀನೇ ಇವೆಲ್ಲಾ ವೈವಿಧ್ಯತೆಗಳನ್ನು ಅಳಿಸಿ ಹಿಂದೀನ ಇಡೀ ಭಾರತದ ತುಂಬಾ ಪ್ರತಿಷ್ಠಾಪಿಸೋ ಉಮ್ಮೇದಿ. ಇಲ್ಲೇ ಇರೋ ಕನ್ನಡಿಗನ ಹಿತ ಕಡೆಗಾಣಿಸಲ್ಪಟ್ಟರೂ ಸರಿಯೇ, ಹಿಂದಿಯವರಿಗೆ ಭಾರತದ ಯಾವ ಮೂಲೇಲೂ ತೊಡಕಾಗಬಾರದು ಅನ್ನೋ ಮನಸ್ಥಿತಿ. ಒಟ್ನಲ್ಲಿ ಹಿಂದೀ ವಸಾಹತುಶಾಹಿ ಮನಸ್ಥಿತಿಯನ್ನು ಕನ್ನಡಿಗರು ಗುರುತಿಸಿ ಮೊಳಕೆಯಲ್ಲೇ ಚಿವುಟದಿದ್ದರೆ ನಾಳೆ ನಮ್ಮ ಬದುಕು ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗಬೇಕಾದೀತು ಗುರೂ!
ಆಗಲೇ ಬೇಕಂದ್ರೆ ಹೀಗಾಗಲೀ..
ನಿಜಕ್ಕೂ ಹಾಗೆ ಪರಭಾಷಿಕರೂ ಭಾರತೀಯರೇ, ಅವರಿಗೂ ತೊಂದರೆಯಾಗಬಾರದು ಅನ್ನುವ ಕಾಳಜಿ ಇದ್ದಲ್ಲಿ ನಮ್ಮ ಮೆಟ್ರೋದಲ್ಲಿ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಸೂಚನಾ ಫಲಕಗಳನ್ನು ಹಾಕಬೇಕು. ಆದರೆ ಇದು ಮೊದಲಿಗೆ ದಿಲ್ಲಿಯಿಂದ ಆರಂಭವಾಗಬೇಕು. ಭಾರತದ ಎಲ್ಲಾ ಕಡೆ ಎಲ್ಲಾ ಭಾಷೆಯ ಫಲಕ ಹಾಕೋ ನೀತಿ ಜಾರಿಯಾಗೋದಾದ್ರೆ ಒಪ್ಪಬಹುದು. ಇಲ್ದಿದ್ರೆ ಕನ್ನಡದೋರು ದಿಲ್ಲಿಗೆ ಹೋಗಬೇಕು ಅಂದ್ರೂ ಹಿಂದೀ ಕಲೀಬೇಕು ಹಾಗೂ ದಿಲ್ಲಿಯವರು ಕರ್ನಾಟಕಕ್ಕೆ ಬರಬೇಕು ಅಂದ್ರೂ ಇಲ್ಲಿರೋ ಕನ್ನಡದೋರು ಹಿಂದೀ ಕಲೀಬೇಕು ಅನ್ನೋದು ದೇಶದ ಒಗ್ಗಟ್ಟು ಉಳ್ಸೋ ನೀತೀನಾ ಗುರೂ?