"ಎಲ್ಲರ ಕನ್ನಡ" ಓದುಕೂಟ 2011 - ಚನ್ನಾಗಿ ನಡೀತು!


ಬನವಾಸಿ ಬಳಗವು, ಕನ್ನಡ ಭಾಷಾಧ್ಯಯನ ವೇದಿಕೆಯೊಡಗೂಡಿ ಬೆಂಗಳೂರಿನ ರಾಷ್ಟ್ರೀಯ ನರರೋಗ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ (ನಿಮ್ಹಾನ್ಸ್) ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ “ಎಲ್ಲರ ಕನ್ನಡ” ಓದುಕೂಟ – 2011 ಅತ್ಯಂತ ಯಶಸ್ವಿಯಾಗಿ ಜರುಗಿತು.

ಬನವಾಸಿ ಬಳಗದ ಶ್ರೀ ಕಿರಣ್ ಬಾ ರಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸಮಾಜದ ಏಳಿಗೆಯಲ್ಲಿ ನುಡಿ ಅಧ್ಯಯನದ ಮಹತ್ವವನ್ನು ತಿಳಿಸಿಕೊಟ್ಟರು. ಯಾವುದೇ ನಾಡಿನ ಏಳಿಗೆಗೆ ಆ ನಾಡಿನ ಜನರಲ್ಲಿನ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗುವುದು ಅಗತ್ಯವಾಗಿರುವುದು ಜಗತ್ತು ಕಂಡುಕೊಂಡಿರುವ ಸತ್ಯ. ಅಂತೆಯೇ ಕನ್ನಡಿಗರ ಏಳಿಗೆಗೆ ಕನ್ನಡಿಗರ ಕಲಿಕಾ ವ್ಯವಸ್ಥೆ ಅತ್ಯುತ್ತಮವಾಗಬೇಕಾಗಿದೆ. ಇದರೊಟ್ಟಿಗೆ ಕನ್ನಡ ನುಡಿಯು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಬಳಸಬಲ್ಲಷ್ಟು ಶಕ್ತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವು ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಎಂಬ ನಿಲುವಿನ ಹಿನ್ನೆಲೆಯಲ್ಲಿ ಕನ್ನಡನಾಡಿನ ಭಾಷಾಧ್ಯಯನ ಕ್ಷೇತ್ರದಲ್ಲಿ ದುಡಿಯುವುತ್ತಿರುವವರನ್ನು ಒಂದೆಡೆ ಸೇರಿಸಿ ಸದರಿ ಕೆಲಸಕ್ಕೆ ವೇಗ ತಂದುಕೊಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಸಮ್ಮೇಳನದಲ್ಲಿ ನಾಡಿನ ನಾನಾ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾಷಾಧ್ಯಯನದ ವಿದ್ಯಾರ್ಥಿಗಳು ಪಾಲ್ಗೊಂಡರು. ಸಮ್ಮೇಳನಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ, ಕನ್ನಡ ಭಾಷಾಧ್ಯಯನಕ್ಕೆ ಸಂಬಂಧಿಸಿದಂತೆ ಪಟ್ಟಿಮಾಡಿದ ಹತ್ತು ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಬರಮಾಡಿಕೊಳ್ಳಲಾಗಿತ್ತು. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಮಂಡಿಸಲಾಯಿತು. ಉತ್ತಮವಾದ ಮೊದಲ ಮೂರು ಪ್ರಬಂಧಗಳಿಗೆ ಬಹುಮಾನ ನೀಡಲಾಯಿತು.

ಮೊದಲನೇ ಬಹುಮಾನ : ಕನ್ನಡ ನುಡಿಯ ಚರಿತ್ರೆ - ಶ್ರೀ. ಟಿ. ಮಂಜುನಾಥ್
ಎರಡನೇ ಬಹುಮಾನ : ಕನ್ನಡ ಧ್ವನಿ ರಚನೆ - ಶ್ರೀಯುತರಾದ ಡಾII ಬಿ ಎಸ್ ಸತ್ಯನಾರಾಯಣ
ಮೂರನೇ ಬಹುಮಾನ : ಕನ್ನಡ ಕಲಿಕೆ - ಕುಮಾರಿ ನೇತ್ರಾವತಿ

ನಾಡಿನ ಖ್ಯಾತ ಭಾಷಾವಿಜ್ಞಾನಿಗಳಾದ ನಾಡೋಜ ಡಾII ಡಿ ಎನ್ ಶಂಕರ್ ಭಟ್ ಹಾಗೂ ಡಾII ಕೆ ವಿ ನಾರಾಯಣ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಾII ಕೆ ವಿ ನಾರಾಯಣ ಅವರು ಉಪಸ್ಥಿತರಿದ್ದು ಸಮ್ಮೇಳನದಲ್ಲಿ ಭಾಗಿಯಾಗಿದ್ದವರಿಗೆ ಭಾಷಾಧ್ಯಯನ ನಡೆಸುವ ಬಗೆಯನ್ನು ವಿವರಿಸಿದರು. ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವು ಚುರುಕುಗೊಳ್ಳಲು ಅನುಕೂಲವಾಗುವಂತೆ ಯಾವ ಯಾವ ಕ್ಷೇತ್ರಗಳಲ್ಲಿ ಅಧ್ಯಯನವಾಗಬೇಕೆಂಬುದನ್ನು ಇಲ್ಲಿ ಚರ್ಚಿಸಲಾಯ್ತು.

ನಾಡಿನ ಹಿರಿಯ ಭಾಷಾವಿಜ್ಞಾನಿಗಳಾದ ಡಾII ಸಿ. ಎಸ್ ರಾಮಚಂದ್ರ, ಡಾII ಸಿ. ಪಿ. ನಾಗರಾಜ್, ಡಾII ಮಹೇಶ್ವರಯ್ಯ, ಡಾII ರಾಜೇಶ್ವರಿ ಮಹೇಶ್ವರಯ್ಯ, ಡಾII ಪಿ ಮಹದೇವಯ್ಯ, ಡಾII ಸುಬ್ಬುಕೃಷ್ಣ, ಡಾII ಅಶೋಕ್ ಕುಮಾರ್ ರಂಜೇರೆ, ಮೊದಲಾದವರು ಭಾಗವಹಿಸಿದ್ದರು. ನಾಳೆಯತ್ತ ಕನ್ನಡ ಕನ್ನಡಿಗ ಎನ್ನುವ ಘೋಷವಾಕ್ಯ ಹೊಂದಿದ್ದ ಈ ಸಮ್ಮೇಳನದಲ್ಲಿ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷಾಧ್ಯಯನ ಕ್ಷೇತ್ರಕ್ಕೊಂದು ಹೊಸ ಮುನ್ನುಡಿಯನ್ನು ಬರೆಯಲಾಗಿದೆಯೆಂದು ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳಿಗೆ/ ಸಿಂಪೋಸಿಯಂಗೆ ಸಾಟಿಯಾಗುವಂತೆ ಇಡೀ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಎಂಬ ಅಭಿಪ್ರಾಯಗಳು ಸಮ್ಮೇಳನದಲ್ಲಿ ವ್ಯಕ್ತವಾದವು.

11 ಅನಿಸಿಕೆಗಳು:

ಮಾಯ್ಸ ಅಂತಾರೆ...

ತುಂಬಾ ಒಳ್ಳೇದು.

ಇದರ ವಿಡಿಯೋ ಇದ್ದರೆ ತೋರಿಸಿರಿ. ಹಾಗೇ ಬಹುಮಾನವನ್ನು ಕೊಟ್ಟ ಪ್ರಬಂಧಗಳನ್ನು ಓದಲು ಅನುವು ಮಾಡಿಕೊಡಿರಿ.

ನನ್ನಿ

ಸಂಪಿಗೆ ಕಂಪು ಅಂತಾರೆ...

ಎಲ್ಲರ ಕನ್ನಡ ಓದು ಕೂಟ ಏರ್ಪಡಿಸಿದ್ದ ಬನವಾಸಿ ಬಳಗ ಹಾಗೂ ಕನ್ನಡ ಭಾಷಾಧ್ಯಯನ ವೇದಿಕೆಗೆ ನನ್ನಿಗಳು! ಎಲ್ಲ ಸಂಸ್ಕೃತ ಪದಗಳನ್ನು ಕನ್ನಡದಿಂದ ತೆಗೆಯಬರದೆಂಬ ಬಗ್ಗೆ ಕೆಲವರು ತಿಳಿಸಿದ್ದಾರೆ. ಹಾಗಾದರೆ ಯಾವ ಸಂಸ್ಕೃತ ಪದಗಳನ್ನು ಮಾತ್ರ ಬಳಸಬಾರದು ಎನ್ನುವ ಪಟ್ಟಿ ಇದೆಯೇ? ಹಾಗೆ ಅಚ್ಚ ಕನ್ನಡ ಪದ ಬಳಸುವಿಕೆ ಹೆಚ್ಚುವಂತೆ ಮಾಡಲು ಕನ್ನಡ ನಾಡಿನ ಸುದ್ದಿ ಕಾಗದಗಳು(ಪತ್ರಿಕೆಗಳು?) ಹಾಗು ಸುದ್ಧಿ ಮಾಧ್ಯಮಗಳನ್ನು ಒತ್ತಾಯಿಸಬೇಕು. ಪ್ರಮುಖ ಸುದ್ದಿ ಕಾಗದಗಳು ಕನ್ನಡ ಅಂಕಿಗಳನ್ನೇ ಇನ್ನೂ ಬಳಸದೆ ಇರುವಾಗ ಎಲ್ಲರ ಕನ್ನಡ ಪದಗಳನ್ನು ಅವು ಬಳಸುವಂತೆ ಮಾಡುವುದು ಹೇಗೆ ಎನ್ನುವುದನ್ನು ಚಿಂತಿಸಿದ್ದಾರೆಯೇ ನುಡಿಯರಿಗರು? ಎಲ್ಲರ ಕನ್ನಡವನ್ನು ಜನಪ್ರಿಯಗೊಳಿಸುವುದು ಹೇಗೆ? ಮಾಧ್ಯಮಗಳಿಗೆ ಮಾತ್ರ ಇದು ಸಾದ್ಯ.

Priyank ಅಂತಾರೆ...

ಸಂಪಿಗೆ ಕಂಪು ಅವರೇ,

ಸಂಸ್ಕೃತ ಪದಗಳನ್ನು ಕನ್ನಡದಿಂದ ತೆಗೆಯಬೇಕು ಎಂದು ಯಾರೂ ಹೇಳಿಲ್ಲವಲ್ಲ.
ಹಾಗಿದ್ದಾಗ, ತೆಗೆಯಬೇಕಾದ ಪದಗಳ ಪಟ್ಟಿ ತಯಾರು ಮಾಡುವ ಪ್ರಶ್ನೆ ಹುಟ್ಟುವುದಿಲ್ಲ ಅಲ್ವಾ?

ಮಾಯ್ಸ ಅಂತಾರೆ...

ಎಲ್ಲರ ಕನ್ನಡವನ್ನು 'ಜನಪ್ರಿಯ'ಗೊಳಿಸು ಮಾತೇ ಬರಲ್ಲ..

ಶಂಕರಬಟ್ಟರ ಹಲವು ಹೊತ್ತಗೆಗಳನ್ನು ಓದಿ ನನ್ನ ಅರಿವಂತೆ, ಅವರು ಹೇಳೋದು, ಹೆಚ್ಚಿನ ಮಂದಿ ಆಡುನುಡಿ ಕನ್ನಡದಲ್ಲಿ ಯಾವ ಯಾವ ಪದಗಳನ್ನು ಬಳಸುವರೋ ಹಾಗು ಹೇಗೆ ಉಲಿಯುವರೋ ಅದಕ್ಕೆ ಹತ್ತಿರವಾಗಿ ಬರವಣಿಗೆಯನ್ನು ಮಾಡಿಕೊಳ್ಳಬೇಕು ಎಂದು. ಅಂದರೆ ಅವರು ಹೇಳುತ್ತಿರುವುದು ಈಗಾಗಲೇ ಎಲ್ಲದಕ್ಕಿಂತ ಹೆಚ್ಚಿನ ಮಂದಿ ಬಳಸುತ್ತಿರುವ ಪದಗಳನ್ನೇ ಬರಹದಲ್ಲಿ ಬಳಸಿ ಎಂದು..

ಮಾದರಿಯಾಗಿ.. "ಹೋಗು, ಬರು" ಎಂದು ಎಲ್ಲರೂ ಬಳಸುವರು ಯಾರೂ, "ನಿರ್ಗಮಿಸು, ಆಗಮಿಸು" ಎಂದು ಆಡುಮಾತಲ್ಲಿ ಬಳಸೋಲ್ಲ. ಮನೆಗೆ ಬಂದವರಿಗೆ ಹೆಚ್ಚಿನವರು "ಊಟ ಮಾಡಿ" ಎಂದು ಕರೆಯುವರೇ, ಹೊರತು "ಭೋಜನ ಖಾದಿಸಿ" ಎಂದು ಆಹ್ವಾನಿಸುವುದಿಲ್ಲ.

ಇದು ಒಂದು ಹೆಜ್ಜೆಯಾದರೆ, ಹೊಸ ಸಂಗತಿಗಳಗೆ ಪದಗಳನ್ನು ಮಾಡುವಾಗ ಈಗ ಹೆಚ್ಚಿನವರು ಸಂಸ್ಕೃತದ ಒಂದು ಹೊಸಪದವನ್ನು ಹುಟ್ಟಿಸಿ, ಅದನ್ನು ಕನ್ನಡವೆಂದು ಸೇರಿಸುತ್ತಿದ್ದಾರೆ. ಅದು ಸಲ್ಲದು. ಹೊಸ ಸಂಗತಿಗೆ ಬೇಕಾದ ಪದದ ಹುಟ್ಟು ಕನ್ನಡದಲ್ಲೇ ನಡೆಯಬೇಕು, ಇಲ್ಲವೇ, ಆ ಹೊಸ ಸಂಗತಿಯ ಮೂಲ/ಬೇರು ಯಾವ ನುಡಿಯಲ್ಲಿದೆಯೋ ಅದನ್ನೇ ಕನ್ನಡಕ್ಕೆ ಹೊಂದಿಸಿ ಬಳಸಬೇಕು..

ಮಾದರಿ: Injectionಗೆ ಕನ್ನಡದಲ್ಲಿ ಚುಚ್ಚುಮದ್ದು ಸರಿ, 'ಛೇದಕೋಷಧಿ'ಯಂತಲೋ ಇನ್ನೊಂದು ಅಲ್ಲ.
Chlorophyll ಗೆ ಕನ್ನಡದಲ್ಲಿ ಎಲೆಯ-ಹಸಿರು ಸರಿ ಹೊರತು ಪತ್ರಹರಿತ್ತು ಅಲ್ಲ!

ಇನ್ನು ಒಂದು ನುಡಿ ಬದುಕೋದು ಅದರ 'ಸಾಹಿತ್ಯ'ದಿಂದಲೂ ಅಲ್ಲ ಸುದ್ದಿ 'ಮಾಧ್ಯಮ'ದಿಂದಲೂ ಅಲ್ಲ.. ಅದು ಬದುಕೋದು ಅದನ್ನು ಆಡುವ ಹೆಚ್ಚಿನ ತಾಯ್ನುಡಿಗರಿಂದ!

Anonymous ಅಂತಾರೆ...

Ellarakannaḍa endu illi yāvudannu kareyutta iruvevō adu mātina Kannaḍa alla, barahada Kannaḍa. Adannu janapriyagoḷisuva 'mātu' 'baru'ttade. ~ Kiraṇ Bāṭni.

ಮಾಯ್ಸ ಅಂತಾರೆ...

ಕಿರಣ್,

ನನ್ನನಿಸಿಕೆಯಲ್ಲಿ ಅದು ಈಗಾಗಲೇ 'ಜನಪ್ರಿಯ'/'ಮಂದಿಗೆ ಹಿಡಿಸುವ'ಆಗೇ ಇದೆ. ಆದರೆ ಈ 'ಸಾಹಿತ್ಯ' ಹಾಗು 'ಮಾಧ್ಯಮ'ದಲ್ಲಿ ತುಂಬಿಕೊಂಡಿರುವ ಒಂದು 'ವರ್ಗ' ಬೇಕು ಬೇಕೆಂದಲೇ ಈ 'ಎಲ್ಲರ ಕನ್ನಡ'ಕ್ಕಿಂತ ಸಂಸ್ಕೃತ-ಕನ್ನಡವನ್ನು ಬಳಸುವುದು. ಆ ವರ್ಗದ ಲಾಬಿ ಬಲವಾಗಿ ಇರುವ ತನಕ.. 'ಎಲ್ಲರ ಕನ್ನಡ'ಕ್ಕೆ ಅಲ್ಲಿ ಎಡೆಯಿಲ್ಲ.

ಆದರೇ ಅದೇ ನೋಡಿ.. ಸಿನಿಮದಲ್ಲಿ ಆ 'ವರ್ಗ'ದ ಹಿಡಿತ ಕಡಮೆ, ಅದಕ್ಕೆ ಅಲ್ಲಿ 'ಎಲ್ಲರ ಕನ್ನಡ' ಇದೆ.

Kiraṇ Bāṭni ಅಂತಾರೆ...

Parampareyannu edurisalu janarige balavāda kāraṇa bēku. Avugaḷu nijakkū iddare ive endu tōrisuvudu parampareyalli badalāvaṇe bayasuvavara ati mukya kelasa.

ಮಾಯ್ಸ ಅಂತಾರೆ...

ಪರಂಪರೆ ಅಂದರೇನು? ಹಾಗು ನೀವು ಹೇಳುವ ಪರಂಪರೆಗೆ ಯಾರು ಯಾರು ಹೇಗೆ ಸೇರಿವೆರು? ಹೆಚ್ಚಿನವರು ಸೇರಿವರೇ? ಇವೆಲ್ಲ ಇರಲಿ.!

ಚಿಕ್ಕದಾಗಿ ಹೇಳಬೇಕೆಂದರೇ 'ಸಾಹಿತ್ಯ' ಹಾಗು 'ಮಾಧ್ಯಮ'ದಲ್ಲಿ ಇರುವ ಈ ಪರಂಪರೆ/ವರ್ಗ/ಲಾಬಿ(ಲಾಭಿ) ಇರುವ ವರೆಗೂ ಹೆಚ್ಚಿನ ಮಂದಿಗೆ ಬೇಕಾದ ಸವಲತ್ತು ಸಿಗುವುದಿಲ್ಲ. ಅದು ಏನೇ ಆಗಿದ್ದರೂ.! ಆದೇ ವರ್ಗ/ಹಿಂಡು/ಗುಂಪನ್ನು ಸಂಸ್ಕೃತಿ/ಪರಂಪರೆ ಎಂದು ಯಾವುದೇ ಅಂದವೆನಿಸುವಂತೆ ಸಂಸ್ಕೃತದಲ್ಲಿ ಕರೆದರೂ, ಅದರ ಹಾವಳಿ, ಹಾವಳಿಯೇ!

ಇನ್ನೂ ಮಾತಿನಿಂದ ಮಾತಿಗೆ ಬೆಳೆದು ಹಾರುವ ಮುಂಚೆ.....

'ಎಲ್ಲರ ಕನ್ನಡ'ದ ಕೆಲಸಗಳ ಬಗ್ಗೆ ಎದೆತುಂಬಿದ ನನ್ನಿಗಳು. 'ಎಲ್ಲರ ಕನ್ನಡ'ದ ಬಗ್ಗೆ ಅರಿವು ಹರಡಿಸುವಲ್ಲಿ ಈ ಬಗ್ಗೆ ಈ ಬಗೆಯ ತಿಕ್ಕಾಟಗಳು, ವಾದಗಳು, ತಿವಿತಗಳು ಹೆಚ್ಚಾಗ ಬೇಕು.

ಮೂರು-ನಾಲ್ಕು ವರುಶಗಳ ಹಿಂದೆಯ ಹಾಗೂ ಇವೊತ್ತಿನ ನಡುವೆಯ ಮಾರ್ಪಾಟುಗಳನ್ನು ( ಈ ದಿಟವಾದ ಕನ್ನಡದ ಬಗ್ಗೆಯ ಅರಿವಿನಲ್ಲಿ ) ಗಮನಿಸಿದರೆ, ಏನುಗುರುವಿನ ಪಾಂಗು ಇತ್ತ ತುಂಬಾ ದೊಡ್ಡದು. ಮೇರು-ಕೆಲಸ.!

Kiraṇ Bāṭni ಅಂತಾರೆ...

'Parampare' endare ēnendu praṣne mattu uttara eraḍū nimma kāmenṭinalli iruvudarinda, mattu nimma uttara nanage sari enisuvudarinda adara bagge bareyuvudu bēkilla endukonḍiddēne.

Nānu hēḷiddu iṣṭe: Ā (nammibbarigū oppitavāda artada) parampareyalli yāru iruvaro, mattu ā parampareyannē iṭṭukonḍu kaṭṭiruva samstegaḷalli yārāru iruvarō, avarige tamma aḍipāyavannu tāvē allāḍisuvudu kaṣṭa, ēkendare ā edurisuvike avarinda heccina kelasavannu kēḷuttade, hakkyondakke tanna gūḍannu mattondu kaḍe kaṭṭabēkādāga āguva anubavavu āguttade.

Ādare badalāvaṇe ēke bēkendū, adu āgadiddare tondare ēnendū, ādare oḷitu entaddendū tōrisikoṭṭare badalāgabēkādavaru badalāguttāre.

Hēge nānu nīvu badalādevō hāge.

Unknown ಅಂತಾರೆ...

ಮಾಯ್ಸ,
ಕರ್ನಾಟಕದ ಬೇರೆ ಬೇರೆ ಕಡೆ ಆಡು ನುಡಿ ಬೇರೆಯಾಗಿದೆ. ಆದರೆ ಎಲ್ಲ ಕನ್ನಡಿಗರ ಕಲಿಕೆಗೆ ಅನುವು ಮಾಡಿಕೊಡಲು ನಾವು ಒಂದು common ಕನ್ನಡವನ್ನ ಬೆಳೆಸಬೇಕಾಗಿದೆ. ಆ ಕನ್ನಡ ಕೆಲವರ ಆಡುನುಡಿಗೆ ಹತ್ತಿರ ಇದ್ದರೆ ಇನ್ನು ಕೆಲವರ ಆಡುನುಡಿಗೆ ತುಸು ದೂರ ಇರುತ್ತದೆ. ಆದರೆ ತುಂಬ ದೂರ ಇರಬಾರದು. ಎಲ್ಲರಕನ್ನಡ ನೀವು ಹೇಳಿದಂತೆ ಈಗಾಗಲೆ ಹಲವು ಕಡೆ(ಸಿನಿಮಾ) ಇದೆ. ಆದರೆ ಕಲಿಕೆಯಲ್ಲಿ ಅದು ಇನ್ನು ಗಟ್ಟಿಯಾಗಿ ಮಂದಿಗೆ ಹತ್ತಿರವಾಗಬೇಕಾಗಿದೆ.

ಪ್ರಜಾವಾಣಿಯಲ್ಲಿ ಬಂದಿದ್ದ ಒಂದು ಬರಹದಲ್ಲಿ ಬಂದದ್ದು:
ಒಬ್ರು ಕಲಿಸುಗರು ಒಬ್ಬ ಕಲಿಗ/ಹುಡುಗನಿಗೆ ನಿನ್ನ ಹೇಸರೇನು ಅಂದಾಗ ಅವನು ’ಅನ್ಮಂತ’ ಅಂತ ಹೇಳಿದನಂತೆ, ಆಮೇಲೆ ಹೆಸರು ಬರಿ ಅಂದಾಗ ’ಹನುಮಂತ’ ಅಂತ ಬರೆದನಂತೆ. ಅಂದರೆ ಆ ಹುಡುಗನಿಗೆ ಬರಹಗನ್ನಡ ಅವನ ಆಡುಗನ್ನಡದಿಂದ ತುಸು ಹತ್ತಿರದಲ್ಲೆ ಇದೆ.

ಶಂಕರಬಟ್ಟರು ಹೇಳುವಂತೆ ನಾವು ಬೇರೆ ಬೇರೆ ಆಡುನುಡಿಗಳನ್ನು ಮತ್ತು ಬರಹಗನ್ನಡವನ್ನು(ಎಲ್ಲರಗನ್ನಡವನ್ನು) ಬೇರೆ ಬೇರೆ ನೆಲೆಯಲ್ಲಿ ಬಳಸುವುದನ್ನ ಹೇಗೆ ಬಳಸಬೇಕು ಮತ್ತು ಅವುಗಳಿಗೆ ಇರುವ ಕೊಂಚ ಬೇರೆತನವನ್ನ ಮಕ್ಕಳಿಗೆ ತಿಳಿಸಿ ಕಲಿಸಿಕೊಟ್ಟರೆ ಅವರ ಕಲಿಕೆ ಚೆನ್ನಾಗುತ್ತದೆ.

ಮಾಯ್ಸ ಅಂತಾರೆ...

ಕಿರಣ್ ಹಾಗು ಬರತ್..

ನಿಮ್ಮಿಬ್ಬರ ಮಾತುಗಳನ್ನೋ ಒಪ್ಪುತ್ತೇನೆ. ಆ ಗುರಿಯ ಮೊದಲ ಹಂತವಾದ ಎಚ್ಚರಿಕೆ/ಗಮನಸೆಳೆತ ಬನವಾಸಿ ಬಳಗದಿಂದ ತುಂಬಾ ಚನ್ನಾಗಿ ನಡೆಯುತ್ತಿದೆ.

ಮೊನ್ನೆ ಬನವಾಸಿ ಬಳಗದ ನುಡಿಯರಿಮೆ ಆಗುಹದ ವೀಡಿಯೋ ಯೂಟ್ಯೂಬಲ್ಲಿ ನೋಡಿದೆ. ತುಂಬಾ ಚನ್ನಾಗಿತ್ತು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails