ಶಿಕ್ಷಣ ವ್ಯವಸ್ಥೆ ರೂಪಿಸೋ ಹೊಣೆ ಸರ್ಕಾರದ್ದು!
ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತದೆ.
ನಿಮ್ಮ ಸರ್ಕಾರದ ನಿಲುವು ಹೇಳಿ ಸಚಿವರೇ...
೧. ತಾಯ್ನುಡಿಯಲ್ಲಿ ಕಲಿಕೆ ಅತ್ಯುತ್ತಮ ಎನ್ನುವುದರ ಬಗ್ಗೆ ತಮ್ಮ ನಿಲುವೇನು?
೨. ಬೇರೆ ಬೇರೆ ಅಧ್ಯಯನಗಳು, ಯುನೆಸ್ಕೋ ಮೊದಲಾದವು ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ ತೋರಿರುವ ಅಭಿಪ್ರಾಯಗಳ ಬಗ್ಗೆ ನಿಮ್ಮ ನಿಲುವೇನು?
೩. ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಹೊಣೆಗಾರಿಕೆ ಕರ್ನಾಟಕ ರಾಜ್ಯಸರ್ಕಾರದ್ದು ಎಂದು ನೀವು ಒಪ್ಪುವಿರಾ?
೪. ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನೂ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊತ್ತಿದೆಯೇ?
೫. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಎನ್ನುವ ನೀತಿಯನ್ನು ಹೊಂದಿರುವುದರ ಬಗ್ಗೆ ತಮ್ಮ ಸರ್ಕಾರದ ನಿಲುವೇನು?
೬. ಅದು ಬರೀ ೫ನೇ ತರಗತಿ ತನಕ, ಹಾಗಾಗಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆ ಆರಂಭಿಸುತ್ತಿದ್ದೇವೆ ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಗೆ ಮಾರಕವಾದ ನಿಲುವಲ್ಲವೇ?
ಸಭ್ಯರೂ ಪ್ರಾಮಾಣಿಕರೂ ಅಂತಾ ಹೆಸರಾಗಿರೋ ಶ್ರೀ ಕಾಗೇರಿಯವರಿಗೆ ಇವುಕ್ಕೆಲ್ಲ ಉತ್ತರ "ಹೌದೂ" ಅನ್ನೋದು ತಿಳಿದಿರೋದಿಲ್ವೇ? ಅದ್ಯಾವ ರಾಜಕಾರಣದ ತಿರುಗಣಿ ಹೀಗೆ ಅವರನ್ನು "ಇಲ್ಲಾ" ಅನ್ನುವಂತೆ ನಡೆದುಕೊಳ್ಳುವಂತೆ ಆಡುಸ್ತಿದೆಯೋ.. ಆ ಕಾಶಿ ವಿಶ್ವೇಶ್ವರನೇ ಬಲ್ಲ!
8 ಅನಿಸಿಕೆಗಳು:
ಕನ್ನಡದ್ದಲ್ಲದ ಸರಕಾರ, ಇಂಗ್ಲೀಷಗೆ ಮಾರುಹೋಗಿರುವ ಜನ, ಇನ್ನೇನು ಆಗಲು ಸಾಧ್ಯ !!
ಇನ್ನು ಕೆಲವೇ ವರುಷಗಳಲ್ಲಿ ಕನ್ನಡ ಕೇವಲ ಆಡುನುಡಿಯಾಗಿ ಬಿಡುತ್ತೆ (ಆ ಆಡುನುಡಿಯಲ್ಲೂ ಇಂಗ್ಲೀಷನ ಬೆರಿಕೆ ಇರುತ್ತೆ)
ತಾಯ್ನುಡಿಯಲ್ಲಿ ಕಲಿಕೆ ವಿಷಯ ಕುರಿತು ಜಗತ್ತಿನಲ್ಲಿ ಯಾರಿಗಾದರೂ ಗೊಂದಲವಿದ್ದರೆ, ಅದು ಕನ್ನಡಿಗರಿಗೆ ಮಾತ್ರ.
ಕನ್ನಡ ಸರಕಾರ ಯಾವಾಗ ಬರುತ್ತೋ, ಕನ್ನಡಿಗರು ಯಾವಾಗ ತಾಯ್ನುಡಿ ಕನ್ನಡದ ಮಹತ್ವ ಅರ್ಥಮಾಡಕೊಳ್ತಾರೋ ?!
ಪ್ರಶಾಂತ್ ಅವರೆ - ಇಲ್ಲಿ ಡಬ್ಬಿಂಗ್ ವಿಚಾರವಾಗಿ ಇನ್ನೆಲ್ಲೋ ನಡೆದ ಚರ್ಚೆಯಲ್ಲಿ ನೀವೇ ಹೇಳಿದ್ದ ಮಾತು ನೆನಪಾಗಿದ್ರಿಂದ ನನ್ನ ಈ ಕಮೆಂಟು..
ಸಿನಿಮಾ ಒಂದು ಮಾರುಕಟ್ಟೆಯ ವಿಷಯ. ಆದರೆ ಕಲಿಕೆಯನ್ನೂ ಹಾಗೇ ಒಂದು ಮಾರುಕಟ್ಟೆಯ ವಿಷಯವಾಗಿ ಪರಿಗಣಿಸಿರುವ ಪರಿಣಾಮವೇ ಈ ನಮ್ಮ ಮಂತ್ರಿಗಳ ಹೆಜ್ಜೆಗೆ ಕಾರಣವೆಂದು ತಿಳಿಯಾಗಿ ಕಾಣುತ್ತಿದೆಯಲ್ಲವೇ?
"ಡಬ್ಬಿಂಗ್ ಬೇಕು ಬೇಡಗಳನ್ನು ’ಪ್ರೇಕ್ಷಕನೇ’ ನಿರ್ಧರಿಸಲಿ ಅನ್ನುವ ಮಾತು, ಕನ್ನಡ-ಇಂಗ್ಲೀಷ ಮಾಧ್ಯಮದ ಆಯ್ಕೆಯನ್ನು ’ಪಾಲಕರಿಗೇ’ ಬಿಟ್ಟುಬಿಡಿ ಅನ್ನುವ ಹಾಗೆಯೇ ಇದೆ" ಎಂದು ನೀವು ಹೇಳಿದ್ದಿರಿ.
ಈಗ ನೋಡಿ, ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಬಾಗಿ ಒಂದು ರೀತಿಯ ಪದಾರ್ಥವನ್ನೇ ಮಾರಲು ಮುಂದಾದಂತೆ ನಮ್ಮ ಸರ್ಕಾರ ಪಾಲಕರ ಅಚಾತುರ್ಯವನ್ನೇ ಗ್ರಾಹಕ ಬೇಡಿಕೆಯೆಂದು ನಂಬಿ ಅದಕ್ಕೆ ತಕ್ಕಂತೆ, ಮಾರುಕಟ್ಟೆಯಲ್ಲಿ ವರ್ತಿಸುವಂತೆ, ಕನ್ನಡ ಮಾಧ್ಯಮಕ್ಕೆ ಬೇಡಿಕೆ ಕಡಿಮೆ, ಆಂಗ್ಲ ಮಾಧ್ಯಮವನ್ನೇ ನೀಡುತ್ತೇವೆ ಎಂದು ಮುಂದಾಗಿರುವುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು, ಪ್ರಶ್ನಿಸಬೇಕು, ಈ ತಪ್ಪನ್ನು ಸರಿ ಪಡಿಸಿಕೊಳ್ಳಬೇಕೆಂದು ಹೇಳಬೇಕು.
@ Anonymous ಅವರೆ (ತಾವು ಹೆಸರು ಬರೆದಿದ್ದರೆ ಅನೂಕೂಲವಾಗತಿತ್ತು)
ನನ್ನ "ಹೇಳಿಕೆ/ಅನಿಸಿಕೆ"ಯಲ್ಲಿ ಎರಡುತನ (ದ್ವಂದ್ವ) ಇದೆ ಅಂತಾ ನಿಮ್ಮ ಅನಿಸಿಕೆನಾ ?
ಡಬ್ಬಿಂಗ್ ಚರ್ಚೆಯಲ್ಲೂ ನಾನು ಬರೆದದ್ದೂ ಇದನ್ನೆ, ಯಾವಾಗಲೂ "ಪ್ರಜಾಪ್ರಭುತ್ವ" ಅಂತಾ ಹೇಳಿ, ಎಲ್ಲವನ್ನೂ ಜನರೇ ನಿರ್ಧರಿಸಲು ಬಿಡಲಾಗುವುದಿಲ್ಲಾ.
ಕಲಿಕೆ ವಿಷಯದಲ್ಲಿ (ಕನ್ನಡ ಮಾಧ್ಯಮ) ಮತ್ತು ಚಿತ್ರರಂಗದ ವಿಷಯದಲ್ಲಿ (ಡಬ್ಬಿಂಗ ನಿಷೇಧ), ಮೇಲ್ನೋಟಕ್ಕೆ "ಕಡ್ಡಾಯ/ಒತ್ತಾಯ" ಅನಿಸಿದರೂ, ಅದರ ತಿರುಳಿರುವುದು ಕನ್ನಡಿಗರ ಏಳಿಗೆಗಾಗಿಯೇ
ಕರ್ನಾಟಕ ಸರ್ಕಾರದ ತಮಿಳು, ತೆಲುಗು, ಮರಾಠಿ, ಕೊಂಕಣಿ, ಸಿಂಧಿ, ಹಿಂದಿ ಮತ್ತು ಉರ್ದು ಮಾಧ್ಯಮದ ಶಾಲೆಗಳು ಚಾಲನೆಯಲ್ಲಿರುವ ಇಂಗ್ಲೀಷ್ ಮಾಧ್ಯಮದ ವಿಶೇಷ ಹಾನಿ ಏನು?
ಪ್ರಶಾಂತ್ ಸೊರಟೂರ,
೧. ನಿಮ್ಮ ಅನಿಸಿಕೆಯಲ್ಲಿ ದ್ವಂದ್ವವಿಲ್ಲ.
೨. ನಾಡಿನ ಶಿಕ್ಷಣ ವ್ಯವಸ್ಥೆ ಮತ್ತು ಮನರಂಜನೆಗಳನ್ನು ಒಂದೇ ಸಮನಾಗಿ ನೋಡುವುದು ಸರಿಯಲ್ಲ. ಏಕೆಂದರೆ ನಾಡಿನ ಶಿಕ್ಷಣ ವ್ಯವಸ್ಥೆ ಕಟ್ಟುವ, ನಿಭಾಯಿಸುವ ಹೊಣೆಗಾರಿಕೆ ಪ್ರಜಾಪ್ರಭುತ್ವದಲ್ಲಿ ಆಯಾ ನಾಡಿನ ಸರ್ಕಾರಗಳದ್ದು. ಆದರೆ ಮನರಂಜನೆಗೆ ಇದು ಅನ್ವಯಿಸದು.
೩. ಮಕ್ಕಳ ಕಲಿಕೆ ಅನ್ನುವುದು ಅವರ ನಾಳೆಗಳನ್ನು, ಏಳಿಗೆಯ ದಿಕ್ಕನ್ನೂ ನಿರ್ಧರಿಸುತ್ತದೆ. ಮನರಂಜನೆಯಲ್ಲ.
ಸರ್ಕಾರ ನಿಜವಾಗಿ ಮಕ್ಕಳ ಕಲಿಕೆ, ಮನರಂಜನಾ ಮಾಧ್ಯಮದ ಆಯ್ಕೆ ಇತ್ಯಾದಿ ಯಾವ ವಿಷಯದಲ್ಲೂ ಮೂಗುತೂರಿಸುವಂತಿಲ್ಲ ಅನ್ನುವುದು ಸರಿಯೇ.. ಆದರೆ ಒಂದು ಹಂತದವರೆಗೆ ಮಾತ್ರಾ ಹಾಗೆ ದೂರ ನಿಲ್ಲಬಹುದಾಗಿದೆ. ಉದಾಹರಣೆಗೆ ಮನರಂಜನೆಯ ಮಾಧ್ಯಮ ನಮ್ಮ ಹಕ್ಕು, ಹಾಗಂತಾ ಸಮಾಜದ ಮೇಲೆ ಅದು ಕೆಟ್ಟ ಪರಿಣಾಮ ಅದು ಬೀರಲಿದೆ ಎಂದಾಗ ಸರ್ಕಾರ ಸುಮ್ಮನಿರದು. ಇದು ಡ್ರಗ್ಸ್, ಕುಡಿತ, ಬ್ಲೂಫಿಲ್ಮ್.. ಮೊದಲಾದವುಗಳ ಮೇಲಿರುವ ನಿಯಂತ್ರಣವನ್ನು ಗಮನಿಸಿದರೆ ಅರಿವಾಗುತ್ತದೆ. ಆದರೆ ಇಂಥದೇ ನಿಯಂತ್ರಣವನ್ನು ಕಲಿಕಾ ಕ್ಷೇತ್ರದಲ್ಲಿ ಸರ್ಕಾರ ಹೇರುವುದು ಸರಿಯೆನಿಸದು. ಅಂದರೆ ಮಕ್ಕಳು ಇಂಥದ್ದೇ ಮಾಧ್ಯಮದಲ್ಲಿ ಓದುವುದು ಕಡ್ಡಾಯ ಎನ್ನುವುದು ಸರಿಯಲ್ಲ. ಹಾಗಾದರೆ ಇಲ್ಲಿ ನನ್ನ ಆಕ್ಷೇಪ ಯಾವುದರ ಬಗ್ಗೆ?
ಕನ್ನಡ ನಾಡಿನ ಕಲಿಕಾ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಹೊತ್ತುಕೊಂಡಿದೆ. ಕನ್ನಡಿಗರ ಏಳಿಗೆ ತಾಯ್ನುಡಿಯಲ್ಲಿ ಸಿಗುವ ಕಲಿಕೆಯಿಂದ ಮಾತ್ರವೇ ಅದ್ಭುತವಾಗಲಿದೆ ಮತ್ತು ಎಲ್ಲ ಕನ್ನಡಿಗರನ್ನು ತಲುಪಲು ಸಾಧನವಾಗಿದೆ. ಈ ಹೊಣೆಗಾರಿಕೆಯನ್ನು ನಿಭಾಯಿಸುವುದು ಅಂದರೆ ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನಮ್ಮಲ್ಲಿ ಕಟ್ಟುವ, ಜಗತ್ತಿನ ಎಲ್ಲಾ ಅರಿಮೆಗಳನ್ನೂ ಕನ್ನಡಿಗರಿಗೆ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾದ ಸರ್ಕಾರ ತಾನೇ ಆ ಹೊಣೆಯಿಂದ ಜಾರಿಕೊಳ್ಳುತ್ತಿರುವುದರ ಬಗ್ಗೆ.
Anonymous ಅವರೇ,
ನೀವು ಹೇಳಿದ ಅನಿಸಿಕೆಗೂ ಮೇಲಿನ ವಿವರಣೆ ಹೊಂದುತ್ತದೆ ಅಂದುಕೊಳ್ಳುತ್ತೇನೆ. ಕರ್ನಾಟಕ ಸರ್ಕಾರ ತನ್ನ ನಾಡಿನ ಮಕ್ಕಳಿಗೆ ತಾಯ್ನುಡಿಯಲ್ಲಿ ಶಿಕ್ಷಣ ಕೊಡಬೇಕೆನ್ನುವ ತೀರ್ಮಾನ ತೆಗೆದುಕೊಂಡರೆ ಅದು ಸರಿಯಾಗೇ ಇದೆ. ಆದರೆ ಇಲ್ಲಿ ಇಂಗ್ಲೀಷ್ ಹೆಚ್ಚಿನ ಯಾರ ತಾಯ್ನುಡಿಯೂ ಆಗಿಲ್ಲ ಅನ್ನುವುದು ವಾಸ್ತವವಾಗಿದೆ. ಹಾಗಾಗಿ ಇತರ ಭಾಷಾ ಮಾಧ್ಯಮ ಶಾಲೆಗಳನ್ನು ನಾವು ಇಂಗ್ಲೀಷ್ ಮಾಧ್ಯಮ ಶಾಲೆ ತೆರೆಯುವುದಕ್ಕೆ ಹೋಲಿಸುವುದು ಸಮಂಜಸವಾಗದು. ಇನ್ನು ಒಂದು ಬಡಾವಣೆಯಲ್ಲಿ ಹತ್ತು ತಾಯ್ನುಡಿಯ ಮಕ್ಕಳಿದ್ದರೆ ಅವರೆಲ್ಲರ ತಾಯ್ನುಡಿ ಶಾಲೆಗಳನ್ನು ಸರ್ಕಾರ ತೆರೆಯಲು ಆದೀತೆ ಎಂಬ ಪ್ರಶ್ನೆ ಮೂಡುತ್ತದೆ. ಅಂತಹ ಸಂದರ್ಭದಲ್ಲಿ ಸರ್ಕಾರ ಪರಿಸರದ ಭಾಷೆಯಾದ, ನಾಡಿನ ಭಾಷೆಯಾದ ಕನ್ನಡದಲ್ಲಿ ಶಿಕ್ಷಣ ಕೊಡಲು ತಾನು ಶಕ್ತ ಎನ್ನುವ ನಿಲುವು ತೆಗೆದುಕೊಳ್ಳುವುದು ಸರಿಯಾಗುತ್ತದೆ.
ಆಗುನ್ತಕರೆ - ಕಲಿಕೆಗೂ ಮನರಂಜನೆಗೂ ಅಪಾರ ವ್ಯತ್ಯಾಸವಿದೆ. ಕಲಿಕೆಯು ಮಕ್ಕಳ ವ್ಯಕಿತ್ವ ವಿಕಸನ, ಜೀವನ ದಾರಿ ಹಾಕಿಕೊಡುವಂಥದ್ದು ಅದೊಂದು ಬದುಕಿನ ಭದ್ರ ಅಡಿಪಾಯ.ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಹೇಳೋದು. ಮಕ್ಕಳು ತಾಯಿ ಭಾಷೆಯಲ್ಲಿ ಕಲಿತರೆ ಎಷ್ಟು ಸುಲಭ? ಮನರಂಜನೆ ಬಿಟ್ಟು ಕಲಿಕೆ ಬಗ್ಗೆ ಇಲ್ಲಿ ಚರ್ಚಿಸೋದು ಸೂಕ್ತ.
ಕಲಿಕೆ ಕನ್ನಡದಲ್ಲಿದ್ದರೆ ಕನ್ನಡದ ಮಗುವಿಗೆ ಒಳಿತು. ಡಬ್ಬಿಂಗ್ ಬಂದರೆ ಕನ್ನಡಕ್ಕೆ ಒಳಿತು. ಕಲಿಕೆ ಹಾಗೂ ಮನರಂಜನೆ ಬೇರೆಯಾದರೂ, ಕನ್ನಡವಸ್ಟೇ ಬಲ್ಲ ಕನ್ನಡಿಗನಿಗೆ (ಬಹುಸಂಕ್ಯಾತ) ಎರಡೂ ಅಚ್ಚುಕಟ್ಟಾಗಿ ತಲುಪುವುದು ಕನ್ನಡದಲ್ಲಿದರೆ ಮಾತ್ರ. ಕನ್ನಡದ ಮಗುವಿಗೆ ಕನ್ನಡದಲ್ಲಿ ಕಲಿಕೆಯನ್ನು ವಂಚಿಸುವುದು ಅವೈಜ್ಞಾನಿಕ ನಡೆಯಾದರೆ, ಡಬ್ಬಿಂಗ್ ನಿಷೇದಿಸಿ ಕನ್ನಡಿಗನಿಗೆ ಜಗತ್ತಿನಲ್ಲಿ ಲಬ್ಯವಿರುವ ಉತ್ತಮ ಮನರಂಜನೆಯನ್ನು ತಪ್ಪಿಸುವುದು ಕ್ರೌರ್ಯ. ಎಂಗ್ಲಿಷೇತರ ಎಲ್ಲಾ ಭಾಷೆಗಳಿಗೂ ತೊಂದರೆ ಇರುವ ಈ ಕಾಲದಲ್ಲಿ ನಾವು ಭಾಷೆಯನ್ನು ಸಲುಹದಿದ್ದರೆ, ಭಾಷೆ ನಮ್ಮನ್ನು ಹೇಗೆ ಸಲುಹೀತು?
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!