"ಹಿಂದೀ ಕಲೀರಿ: ರಾಷ್ಟ್ರಪ್ರೇಮ ಮೂಡುತ್ತೆ" ಅಂದ ಉದಯವಾಣಿ!


ತೊಂಬತ್ತು ವರ್ಷದ ಹಿಂದೆ ಮಹಾತ್ಮ ಗಾಂಧಿ ಯಾವ ಉದ್ದೇಶದಿಂದ "ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ" ಶುರು ಮಾಡಿದ್ರೋ, ಭಾರತದ ಸಂವಿಧಾನದ ಆಶಯ ಅನ್ನುತ್ತಾ ಭಾರತದ ಕೇಂದ್ರಸರ್ಕಾರವು ಅರವತ್ತು ವರ್ಷಗಳಿಂದ ಹಿಂದೀಯೇತರ ಭಾರತೀಯರಿಗೆ (ಹಿಂದಿ ಬರದೇ ಇರುವವರನ್ನೂ ಭಾರತೀಯರು ಅಂತೀರಾ? ಛೇ! ಅನ್ನುತ್ತೇನೋ) ಹಿಂದಿ ಕಲಿಸಿ ಸರಿಯಾದ ಭಾರತೀಯರನ್ನಾಗಿಸಲು ಪಣತೊಟ್ಟು ಏನೇನೆಲ್ಲಾ ಮಾಡ್ತಾ ಇದೆಯೋ, ಅದೆಲ್ಲಾ ಫಲ ಕೊಡ್ತಿದೆ ಅನ್ನೋಕೆ ಉದಯವಾಣಿಯಲ್ಲಿ ಜುಲೈ ಒಂಬತ್ತರಂದು ಪ್ರಕಟವಾಗಿರೋ "ಪ್ರೌಢಶಾಲಾ ಹಂತದಲ್ಲಿ ಹಿಂದಿ ಕಲಿಕೆಯ ಮಹತ್ವ" ಅನ್ನೋ ಲೇಖನ ಸಾಕ್ಷಿಯಾಗಿದೆ ಗುರೂ!

ಬರಹದಲ್ಲಿರೋ ಕೆಲ ಆಣಿಮುತ್ತುಗಳು!

ಹಿಂದೀ ಭಾರತದ ರಾಷ್ಟ್ರಭಾಷೆಯೆನ್ನುವ ಹಸಿಸುಳ್ಳನ್ನು ಚೂರೂ ನಾಚಿಕೆಯಿಲ್ಲದೆ ಬರೆದಿದ್ದಾರೆ ಈ ಬರಹದಲ್ಲಿ. ಬಹುತೇಕ ರಾಜ್ಯಗಳಲ್ಲಿ ಇದುನ್ನ ಕಲಿಸ್ತಾರೆ ಆದ್ದರಿಂದ ಇದು ಭಾರತೀಯ ಪೌರನ ಶಿಕ್ಷಣದಲ್ಲಿ ಮಹತ್ವದ್ದಂತೆ. ಗಾಂಧೀಜಿ ದೇಶ ಎಲ್ಲಾ ಸುತ್ತಿ ಹಿಂದೀನ ರಾಷ್ಟ್ರಭಾಷೆ ಮಾಡುದ್ರಂತೆ, ಅದುಕ್ಕೆ ಭಾರತೀಯರೆಲ್ಲಾ ಒಂದಾದ್ರಂತೆ. ಬ್ರಿಟೀಷರನ್ನು ಓಡಿಸುದ್ರಂತೆ! ತಮಾಶೆ ಅಂದ್ರೆ ಹಿಂದೀ ಸಾಹಿತ್ಯದ ಅಧ್ಯಯನಕ್ಕೆ ಹಿಂದೀ ಕಲೀಬೇಕು ಅದಕ್ಕೆ ಕಲೀರಿ ಅಂತಾರೆ ಲೇಖಕರು. (ಕನ್ನಡ ಸಾಹಿತ್ಯ ಓದಕ್ಕೆ ಹಿಂದೀ ಕಲೀರಿ ಅನ್ನಲಿಲ್ಲ! ನಮ್ಮ ಪುಣ್ಯ!!) ಈ ಬರಹ ಬರೆದಿರುವವರ ಪ್ರಕಾರ ಹಿಂದಿ ಕಲಿಯೋದ್ರಿಂದ ಜ್ಞಾನ ಹೆಚ್ಚುತ್ತಂತೆ. ನಮ್ಮೊಳಗೆ ದೇಶಪ್ರೇಮ ಹೆಚ್ಚಾಗುತ್ತದೆಯಂತೆ. ದೇಶದಲ್ಲಿ ಏಕತೆ ಮೂಡುತ್ತದೆಯಂತೆ. ಉತ್ತರ ಭಾರತಕ್ಕೆ ನಾವು ಹೋದಾಗ ಅಲ್ಲಿನ ಜನರ ಜೊತೆ ವ್ಯವಹರಿಸಲು ಅನುಕೂಲವಂತೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾವನ್ನು ಮಹಾತ್ಮಗಾಂಧಿಯವರು ಶುರು ಮಾಡುದ್ರಂತೆ, ಅದರಿಂದ ಇಲ್ಲಿ ನಾವು ಹಿಂದಿ ಕಲೀಬೇಕಂತೆ. ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಬೇಕಾದರೆ ಉತ್ತಮ ಶಿಕ್ಷಣದ ಅಗತ್ಯವಿದೆ ಎನ್ನುವ ಬರಹಗಾರರು ಅದಕ್ಕಾಗಿ ಹಿಂದೀ ಕಲೀರಿ ಅನ್ನುತ್ತಿದ್ದಾರೆ ಎನ್ನಿಸುವಂತೆ ಈ ಬರಹ ಬರೆದಿದ್ದಾರೆ.

ಇನ್ನು ಹಿಂದೀನಾ ಹೇಗೆ ಕಲೀಬೇಕು ಅನ್ನೋಕೆ ಶ್ರೀಯುತರು ಹಿಂದೀ ಸಿನಿಮಾ ನೋಡಿ, ಹಿಂದೀ ಟಿವಿ ನೋಡಿ, ಹಿಂದಿ ದಿನಪತ್ರಿಕೆ, ವಾರಪತ್ರಿಕೆ, ಕಥೆ ಪುಸ್ತಕ ತರಿಸಿ ಓದಿ, ಹಿಂದೀ ಕಾರ್ಟೂನ್ ನೋಡಿ, ಹಿಂದೀ ಶಿಕ್ಷಕರ ಜೊತೆ ಹಿಂದೀಲೇ ಮಾತಾಡಿ, ಪದಬಂಧ, ಶಬ್ದಬಂಡಿ ಆಡಿ ಕಲೀರಿ ಅಂತೆಲ್ಲಾ ಸಲಹೆ ಕೊಟ್ಟಿದ್ದಾರೆ. ಕೊನೆಯಲ್ಲಿ ಇವರು ಹೇಳೋ ಮಾತು ಕೇಳಿ... ನಮ್ಮ ಮಕ್ಕಳು ಹಿಂದೀ ಎಂಬ ಭಾರತದ ಅಖಂಡತೆಯ ಸಂಕೇತವಾದ ಸರಳ ಸುಂದರ ಭಾವನಾತ್ಮಕವಾದ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕಂತೆ. ಆ ಮೂಲಕ ಸಂವಿಧಾನಾತ್ಮಕ ಮನ್ನಣೆಯಿರುವ ಭಾಷೆಯನ್ನು ಕಲಿತು ದೇಶದ ಏಕತೆಯನ್ನು ಉಳಿಸಬೇಕಂತೆ!

ಇದು ಅರಿವುಗೇಡಿತನವೋ? ಅವಿವೇಕವೋ?

ಭಾರತದ ಏಕತೆಯನ್ನು ಹಿಂದಿಯಲ್ಲಿ ವ್ಯವಹರಿಸೋ ಮೂಲಕ ಉಳಿಸಬೇಕು ಎನ್ನೋ ಮನಸ್ಥಿತಿ, ಭಾರತೀಯರೆನ್ನಿಸಿಕೊಳ್ಳಲು ಹಿಂದೀ ಕಲಿತಿರಬೇಕು ಅನ್ನೋ ಮನಸ್ಥಿತಿ... ತುಂಬಿರೋ ಬರಹವನ್ನು ಬರೆದಿರೋ ಬರಹಗಾರರಿಗೇನೋ ಅರಿವಿನ ಕೊರತೆ ಎನ್ನೋಣ. ಆದರೆ ಇದನ್ನು ಪ್ರಕಟ ಮಾಡೋ ದಿನಪತ್ರಿಕೆಯವರಿಗೆ ಕೂಡಾ ಹಿಂದೀ ಮಾಯೆ ಮುಸುಕಿದೆ ಎನ್ನುವುದು ಆತಂಕಕಾರಿ. ಈ ಮಾಯೆಯ ವಿಷವು "ಹಿಂದೀ ಎಂಬ ಭಾರತದ ೨೯% ಜನರಾಡುವ ನುಡಿಯು ಭಾರತದ ಒಗ್ಗಟ್ಟಿಗೂ, ದೇಶಪ್ರೇಮಕ್ಕೂ ಅತ್ಯಗತ್ಯ" ಎನ್ನುವ ಸಿಹಿಯನ್ನು ತನ್ನಮೇಲೆ ಲೇಪಿಸಿಕೊಂಡು ಯಾರ್ ಯಾರುನ್ನೆಲ್ಲಾ ಯಾಮಾರಿಸುತ್ತಿದೆ ಅನ್ನೋದು ಕಂಡಾಗ ಆತಂಕವಾಗುತ್ತೆ ಗುರೂ. ಹಿಂದೀ ಭಾರತದ ರಾಷ್ಟ್ರಭಾಷೆಯಲ್ಲಾ ಅನ್ನೋ ಅರಿವು ಇಲ್ಲದೆ ಇಂಥಾ ತಪ್ಪೆಸಗಿದರೆ ಸಹಿಸಬಹುದು. ಆದರೆ ಗೊತ್ತಿದ್ದೂ ಹೀಗೆಲ್ಲಾ ಹಸಿಸುಳ್ಳು ಬರೆದರೆ ಏನೆನ್ನಬೇಕು? ಹಿಂದಿಯನ್ನು ನಾಡಿನ ಜನರೆಲ್ಲಾ ಒಪ್ಪಿ, ತಲೆ ಮೇಲಿಟ್ಟುಕೊಂಡು ಪೂಜಿಸಿದರೆ ನಾಳೆ ಇಡೀ ಕನ್ನಡ ಕುಲದ ಸರ್ವನಾಶವಾದೀತು ಎನ್ನುವ ಆಲೋಚನೆಯೂ ಇಲ್ಲದವರನ್ನು ಕಂಡಾಗ "ವಿಷದ ಮೊಲೆವಾಲನ್ನು ಅಮೃತವೆಂದು ಉಣ್ಣುತ್ತಿರುವ ಕನ್ನಡಿಗರನ್ನು ಪೊರೆವವರಾರು ನನ್ನಪ್ಪಾ?" ಎಂದನಿಸದೇ ಗುರೂ!

3 ಅನಿಸಿಕೆಗಳು:

ಚಿನ್ನು ಅಂತಾರೆ...

thhu! ಇವರ ಬಾಯಿಗೆ ಮಣ್ಣು ಹಾಕ!! ಯಾರಾದ್ರು ಉದಯವಾಣಿ ಓದುವವರು ಇವರಿಗೊಂದು ಪತ್ರ ಬರೆದು ಮುಖಕ್ಕೆ ಉಗೀರಪ್ಪ

ವಸಂತ ಕುಮಾರ್ ಅಂತಾರೆ...

ಉಅದಯವಾಣಿಯಂತಹ ಪ್ರಬುದ್ಧ ಪತ್ರಿಕೆ ಇಂತಹ ಲೇಖನವನ್ನು ಹೇಗೆ ಪ್ರಕಟಿಸಿತೋ.. ಅರ್ಥವಾಗುತ್ತಿಲ್ಲ ?!!!

Unknown ಅಂತಾರೆ...

ಉದಯವಾಣಿ ಎಂದೂ ಪ್ರಬುದ್ಧ ಪತ್ರಿಕೆ ಆಗಿರಲಿಲ್ಲ. ಅವಿಭಜಿತ ದ.ಕ. ಜಿಲ್ಲೆಯವರಿಗೆ ಇದನ್ನು ಬಿಟ್ಟು ಬೇರೆ ಪತ್ರಿಕೆ ಓದುವ ಅವಕಾಶ ದೊರೆಯದಂತೆ ಬಹಳ ದಶಕಗಳವರೆಗೂ ನೋಡಿಕೊಳ್ಳಲಾಗಿತ್ತು. ವಿಜಯ ಕರ್ನಾಟಕದವರು ಅತಿಕಡಿಮೆ ದರದಲ್ಲಿ ಪತ್ರಿಕೆ ತರದೇ ಹೋಗಿರುತ್ತಿದ್ದರೆ, ಇಂದಿಗೂ ಈ ಜಿಲ್ಲೆಗಳಲ್ಲಿ ಉ.ವಾ. ದ್ದೇ ಭಂಡಾಟ ನಡೆಯುತ್ತಿತ್ತು. ಈ ಪತ್ರಿಕೆಯ ಪ್ರಮುಖ ಆಕರ್ಷಣೆಗಳೇ ಇದರ 11-15ರವರೆಗಿನ ಪುಟಗಳು. ಈ ಪುಟಗಳಲ್ಲಿರುತ್ತಿದ್ದ "ಮರ ಬಿದ್ದು ಸೈಕಲ್ ಸವಾರನಿಗೆ ಗಾಯ", "ಯುವತಿ ಕಣ್ಮರೆ", "ಬ್ಯಾಂಕ್ ಜವಾನನಿಗೆ ವಿದಾಯ", ಹಾಗೂ "ಚಿರಸ್ಮರಣೆ" ಮುಂತಾದ ಐಟಂಗಳನ್ನು ಜನಪ್ರಿಯಗೊಳಿಸಿ ಪೀತ ಪತ್ರಿಕೆಗಳನ್ನು ಆರಂಭಿಸುವ ಭಂಡರಿಗೆ ಧೈರ್ಯ ನೀಡಿದ್ದೇ ಈ ಪತ್ರಿಕೆ ಸಾಧನೆ.

ಹಿರಿಯರೊಬ್ಬರು ಹೇಳುತ್ತಿದ್ದ ಹಾಗೆ "ಈ ಪತ್ರಿಕೆಯನ್ನು ಓದುವುದಕ್ಕಿಂತ ಗದ್ದೆಯಲ್ಲಿ ಗೊಬ್ಬರ ಹೊತ್ತರೆ" ಹೆಚ್ಚಿನ ಪ್ರಯೋಜನ. ಅಂದ ಹಾಗೆ ನಾನು ದ.ಕ. ಜಿಲ್ಲೆಯವನೇ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails