ಭಾರತದ ಸರ್ವೋಚ್ಚ ನ್ಯಾಯಾಲಯವು "ಕಲಿಕೆ ಹಕ್ಕು ಕಾಯ್ದೆ - ೨೦೦೯"ರ ಕುರಿತಾಗಿ ಒಂದು ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಅನುದಾನಿತ, ಅರೆಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲೂ ೨೫%ರಷ್ಟು ಸೀಟುಗಳನ್ನು ಬಡ ವಿದ್ಯಾರ್ಥಿಗಳಿಗೆ ಮೀಸಲಿಡಬೇಕಾಗುತ್ತದೆ. ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಎಚ್. ಕಪಾಡಿಯಾ, ಶ್ರೀ ರಾಧಾಕೃಷ್ಣನ್ ಮತ್ತು ಶ್ರೀ ಸ್ವತಂತರ್ ಕುಮಾರ್ ಇವರುಗಳನ್ನೊಳಗೊಂಡಿದ್ದ ತ್ರಿಸದಸ್ಯ ಪೀಠವು ತೀರ್ಪನ್ನು ನೀಡಿದೆ.
ಕಲಿಕೆಯ ಹಕ್ಕು ಕಾಯ್ದೆ - ೨೦೦೯
ಭಾರತೀಯ ಸಂವಿಧಾನಕ್ಕೆ ೨೦೦೨ನೇ ಇಸವಿಯಲ್ಲಿ ಮಾಡಲಾದ ಎಂಬತ್ತಾರನೇ ತಿದ್ದುಪಡಿಯು ಸಂವಿಧಾನದ ೨೧ನೇ ಅನುಚ್ಛೇಧಕ್ಕೆ ೨೧(ಎ) ಅನ್ನು ಸೇರಿಸಲು ಕಾರಣವಾಯ್ತು. ೨೧ನೇ ಅನುಚ್ಛೇಧದಲ್ಲಿ ವ್ಯಕ್ತಿಸ್ವಾತಂತ್ರ ಮತ್ತು ಜೀವಕ್ಕೆ ರಕ್ಷಣೆಯ ಬಗ್ಗೆ ಹೇಳಲಾಗಿದೆ. ಇದರ ಜೊತೆಯಲ್ಲಿ ಈಗ ೨೧(ಎ) ಮೂಲಕ ಕಲಿಕೆಯ ಹಕ್ಕನ್ನೂ ಸೇರಿಸಲಾಯಿತು. ಇದರ ಆಧಾರದ ಮೇಲೆ ರೂಪಿಸಲಾದ ಕಾಯ್ದೆಯೇ "ಕಲಿಕೆಯ ಹಕ್ಕು ಕಾಯ್ದೆ - ೨೦೦೫". ಇದರಲ್ಲಿ ಪ್ರತಿಯೊಂದು ಮಗುವಿಗೂ ಕಲಿಕೆಯು ಮೂಲಭೂತ ಹಕ್ಕಾಗಿದ್ದು ಸರ್ಕಾರಗಳಿಗೆ ಅದನ್ನು ಒದಗಿಸಿಕೊಡುವ ಹೊಣೆಗಾರಿಕೆಯನ್ನು ಹೊರಿಸಲಾಗಿದೆ. ಆರರಿಂದ ಹದಿನಾಲ್ಕು ವಯಸ್ಸಿನ ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ ಕೊಡಬೇಕೆನ್ನುವುದು ಈ ಕಾಯ್ದೆಯ ತಿರುಳು.
ಇದನ್ನು ಪ್ರಶ್ನಿಸಿದ ಖಾಸಗಿ ಶಿಕ್ಷಣಸಂಸ್ಥೆಗಳು
ರಾಜಸ್ಥಾನ ಮೂಲದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘವೊಂದೂ ಸೇರಿದಂತೆ ಅನೇಕರು ಈ ಕಾಯ್ದೆಯ ಹರವಿನ ಬಗ್ಗೆ ರಿಟ್ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ಅವುಗಳು ‘ಸಂವಿಧಾನದ ೧೯(ಜಿ)ರ ಅನ್ವಯ ವ್ಯಾಪಾರ ಮಾಡಲು ಇರುವ ಮೂಲಭೂತ ಹಕ್ಕನ್ನು ಈ ಕಾಯ್ದೆಯು ಉಲ್ಲಂಘಿಸುತ್ತಿದ್ದು ಇದು ಸಂವಿಧಾನಕ್ಕೆ ಪೂರಕವಾಗಿಲ್ಲ’ ಎನ್ನುವ ದನಿ ಎತ್ತಿದ್ದರು. ಈ ಹಿಂದಿನ ಹಲವು ತೀರ್ಪುಗಳನ್ನು ಪರಿಶೀಲಿಸಿ ಸಂವಿಧಾನದ ಎರಡೆರಡು ಅನುಚ್ಛೇದಗಳು ಒಂದಕ್ಕೊಂದು ಎದುರಾದಾಗ ಯಾವ ಸೂತ್ರವನ್ನು ಬಳಸಬೇಕೆಂದು ಪರಾಮರ್ಶಿಸಿ ಈ ತ್ರಿಸದಸ್ಯ ಪೀಠ ಮೇಲಿನಂತೆ ತೀರ್ಪು ನೀಡಿದೆ. ಆ ಮೂಲಕ ಮಕ್ಕಳ ಕಲಿಕೆಯ ಮೂಲಭೂತ ಹಕ್ಕನ್ನು ಎತ್ತಿಹಿಡಿದು "ಕಲಿಕೆಯ ಹಕ್ಕು ಕಾಯ್ದೆ - ೨೦೦೫" ಸಂವಿಧಾನ ಬದ್ಧವಾಗಿದೆ ಎನ್ನುವ ತೀರ್ಪು ನೀಡಿದೆ.
ತೀರ್ಪು ಎತ್ತಿ ಹಿಡಿದ ಕೆಲ ವಿಷಯಗಳು
ಈ ತೀರ್ಪು ಎತ್ತಿಹಿಡಿದಿರುವ ಕೆಲವು ಮಹತ್ವದ ವಿಷಯಗಳಲ್ಲೊಂದು ಸಮಾನ ಶಿಕ್ಷಣದ ಮಹತ್ವವನ್ನು ಸಾರುವಂತಿದೆ. ತೀರ್ಪು ನೀಡುವಾಗ ಗೌರವಾನ್ವಿತ ನ್ಯಾಯಮೂರ್ತಿಗಳು “moving towards composite classrooms with children from diverse backgrounds, rather than homogeneous and exclusivist schools” ಎಂದು ಹೇಳುವ ಮೂಲಕ ಈ ದಿಕ್ಕಿನೆಡೆಗೆ ಸರ್ಕಾರ ಸಾಗುವುದು ಸರಿಯಾದದ್ದು ಎಂದೂ ಹೇಳಿದಂತಿದೆ. ಕಲಿಕೆಯ ಹಕ್ಕನ್ನು ದಕ್ಕಿಸಿಕೊಡುವುದರ ಜೊತೆಯಲ್ಲಿ ನಾಡಿನ ಏಳಿಗೆಯು ಎಲ್ಲರಿಗೂ ಕಲಿಕೆಯು ಸಿಗುವುದರಿಂದಲೇ ಸಾಧ್ಯ ಎನ್ನುವುದನ್ನು ಎತ್ತಿ ಹಿಡಿದಿದೆ. ಇದೆಲ್ಲಕ್ಕಿಂತಾ ಮುಖ್ಯವಾಗಿ ಸರ್ಕಾರಗಳ ನಿಯಮಾವಳಿಗಳನ್ನು ಸಂವಿಧಾನದ ೧೯(ಜಿ) ಅಂಶವನ್ನು ಬಳಸಿಕೊಂಡು, ತಮಗೆ ಲಂಗುಲಗಾಮು ಇಲ್ಲವೇ ಇಲ್ಲಾ ಎನ್ನುವಂತೆ ನಡೆದುಕೊಳ್ಳುತ್ತಿದ್ದ ಖಾಸಗಿ ಶಾಲೆಗಳಿಗೆ ಕೊಂಚವಾದರೂ ಮೂಗುದಾರ ಹಾಕಿದ ಹಾಗಾಗಿದೆ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!