ಕನ್ನಡ ಚಿತ್ರರಂಗ ಕುಂಭಕರ್ಣ ನಿದ್ದೆ ಬಿಟ್ಟೇಳಲಿ!

(ಚಿತ್ರ ಕೃಪೆ: ವಿಜಯ ನೆಕ್ಸ್ಟ್ ಪತ್ರಿಕೆ)
ಇಂಥದ್ದೊಂದು ವಿಚಾರ ೨೦೧೨ರ ಜುಲೈ ೬ನೇ ದಿನಾಂಕದ ವಿಜಯಾ ನೆಕ್ಸ್ಟ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ವರದಿಯಲ್ಲಿ ಕನ್ನಡ ಚಿತ್ರರಂಗ ಅವಸಾನದತ್ತ ಸಾಗುತ್ತಿದೆ ಎನ್ನುವ ಅನಿಸಿಕೆಯಿದೆ.

ಏನಿದೆ ಈ ವರದಿಯಲ್ಲಿ?

ಇಡೀ ವರದಿಯ ಸಾರವೇನೆಂದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ಹಣ ಹೂಡಲು ಬರುವವರು ಸೋಲನ್ನು ಕಂಡು ಹಿಂಜರಿದಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸ ನಿರ್ಮಾಪಕರನ್ನು ಸುಲಿಗೆ ಮಾಡುವಂತೆ ಅಗತ್ಯಕ್ಕಿಂತ ದುಪ್ಪಟ್ಟು ಮುಪ್ಪಟ್ಟು ಖರ್ಚು ಮಾಡಿಸಿದ ಉದಾಹರಣೆಗಳಿವೆ. ಚಿತ್ರನಿರ್ಮಾಣದಲ್ಲಿ ದುಂದುವೆಚ್ಚ, ಚಿತ್ರಮಂದಿರಗಳಿಗೆ ದುಬಾರಿ ಬಾಡಿಗೆ ಕೊಟ್ಟು ಮುಂಗಡ ಕಾದಿರಿಸಬೇಕಾದ ವ್ಯವಸ್ಥೆ, ಕಲಾವಿದರ ದುಬಾರಿ ಸಂಭಾವನೆ, ಒಳಗಿನ ಸಾರಕ್ಕಿಂತ ಪ್ರಚಾರದ ಥಳುಕುಬಳುಕನ್ನೇ ಬಂಡವಾಳವಾಗಿಸಿಕೊಂಡಿರುವುದು, ಹೀರೋಗಳ ಪ್ರಾಬಲ್ಯದಿಂದ ನಿರ್ಮಾಪಕರಿಗೆ ಬೆಲೆಯಿಲ್ಲದಿರುವುದು, ಇದೆಲ್ಲಕ್ಕಿಂತಾ ದೊಡ್ಡ ಸಮಸ್ಯೆ ಕುಗ್ಗಿರುವ ಸ್ಯಾಟಲೈಟ್ ಹಕ್ಕುಗಳ ಕೊಳ್ಳುವಿಕೆ... ಇವೆಲ್ಲಾ ಕಾರಣಗಳಿಂದಾಗಿ ಚಿತ್ರರಂಗದ ವಹಿವಾಟು ೬೦%~ ೭೦% ಕುಸಿದಿದೆ ಎನ್ನುತ್ತದೆ ಈ ವರದಿ! 

ಬಳಗ ತಂದಿದ್ದ ವರದಿ!

ಈ ಹಿಂದೆ ಚಿತ್ರರಂಗದ ಸ್ಥಿತಿಗತಿಗೆ ಸಂಬಂಧಿಸಿದ ವರದಿಯೊಂದನ್ನು ಬನವಾಸಿ ಬಳಗ ಮತ್ತು ಕರ್ನಾಟಕ ಚಲನಚಿತ್ರ ಅಕಾಡಮಿ ೨೦೧೦ರಲ್ಲೇ ಹೊರತಂದಿತ್ತು! ವರದಿಯನ್ನು ಚಿತ್ರರಂಗ ಸ್ವೀಕರಿಸಿದ ಬಗೆ ನಿರಾಶದಾಯಕವಾಗಿತ್ತು. ವಾಸ್ತವ ಒಪ್ಪಿಕೊಳ್ಳದೆಯೇ ಭ್ರಮೆಯಲ್ಲೇ ತೇಲುತ್ತಿರುವವರಂತೆ, ಇಡೀ ವರದಿಯನ್ನು ಅದರಲ್ಲಿ "ಡಬ್ಬಿಂಗ್ ಬಗ್ಗೆ ಪ್ರಸ್ತಾಪಿಸಲಾಗಿತ್ತು" ಎಂಬ ಕಾರಣ ನೀಡಿ ಸಾರಾಸಗಟಾಗಿ ಹಿಂಪಡೆಯುವಂತೆ ಮಾಡಲಾಯಿತು. ಆ ವರದಿಯಲ್ಲಿ ಚಿತ್ರೋದ್ಯಮವನ್ನು ವೃತ್ತಿಪರವಾಗಿಸುವ ಬಗ್ಗೆ ಮಾತಾಡಲಾಗಿತ್ತು. ಈ ವರದಿ ಬಗ್ಗೆ ನಾವು ಬರೆದಿದ್ದ ಬರಹವನ್ನು ನಿಮ್ಮ ಓದಿಗಾಗಿ ಕೆಳಗೆ ಕೊಡಲಾಗಿದೆ:
ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ E&Y ಮತ್ತು FICCI ಒಂದು ವರದಿಯನ್ನು ಹೊರತಂದಿದ್ದು ಅದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಇರುವ ಮಾಹಿತಿ ತಪ್ಪಾಗಿದ್ದು, ಉದ್ಯಮದ ಬೆಳವಣಿಗೆಗೆ ಮಾರಕವಾಗಿತ್ತು. ಈ ವರದಿಯನ್ನು ಚಿತ್ರರಂಗದ ಗಣ್ಯರ ಜೊತೆ ಬಳಗ ಹಂಚಿಕೊಳ್ಳಲು ಮುಂದಾಯಿತು. ಕರ್ನಾಟಕ ಚಲನಚಿತ್ರ ಅಕಾಡಮಿಯು ಇದರಲ್ಲಿ ಆಸಕ್ತಿ ತೋರಿ ಚಿತ್ರರಂಗದ ಎಲ್ಲಾ ಪ್ರಮುಖ ಕ್ಷೇತ್ರಗಳ ಪ್ರತಿನಿಧಿ ಸಭೆಯನ್ನು ಕರೆದು ವರದಿ ಬಗ್ಗೆ ಮಾಹಿತಿ ಹಂಚಿಕೊಂಡಿತು. ಆಗ ಸರಿಯಾದ ಮಾಹಿತಿ ನೀಡಲು ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಲಾಯಿತು. ಬಳಗ ಮತ್ತು ಅಕಾಡಮಿಗಳು ಒಗ್ಗೂಡಿ ಏಳು ತಿಂಗಳು ಶ್ರಮಿಸಿ "ಕನ್ನಡ ಚಿತ್ರರಂಗ: ಒಂದು ಸಮೀಕ್ಷೆ" ಯನ್ನು ಹೊರತಂದವು.
ಸಮೀಕ್ಷೆಯ ಬಿಡುಗಡೆ ಮತ್ತು ಪ್ರತಿಕ್ರಿಯೆ!

ಸದರಿ ಸಮೀಕ್ಷೆಯನ್ನು ಅಕಾಡಮಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯ್ತು. ಸಮಿತಿಯ ಸಮೀಕ್ಷೆಯಲ್ಲಿ ಮೂಡಿಬಂದಿದ್ದ ಕೆಲ ಅಂಶಗಳ ಬಗ್ಗೆ ಕೆಲವರಿಂದ ವಿರೋಧ ಮೂಡಿಬಂದಿತು. ಹಾಗಾಗಿ ವರದಿಯನ್ನು ಅಕಾಡಮಿ ಹಿಂಪಡೆಯಿತು.
ಕನ್ನಡ ಚಿತ್ರರಂಗಕ್ಕೆ ಬೇಡವಾದ ಸತ್ಯ!

ಕನ್ನಡ ಚಿತ್ರರಂಗಕ್ಕೆ E&Y ಮತ್ತು FICCI ನೀಡಿದ ವರದಿಯ ಅಪಾಯದ ಬಗ್ಗೆಯಾಗಲೀ, ಆ ವರದಿಗೆ ಉತ್ತರ ನೀಡಬೇಕಾದ ಅಗತ್ಯದ ಬಗ್ಗೆಯಾಗಲೀ ಅರಿವಿದ್ದಂತಿಲ್ಲ. ಅಕಾಡಮಿ ಮತ್ತು ಬಳಗ ನಡೆಸಿದ ಸಮೀಕ್ಷೆಯಲ್ಲಿನ ಅಭಿಪ್ರಾಯಗಳನ್ನು ತೂಗಿ ನೋಡಬೇಕೆನ್ನುವ, ನಿಜಕ್ಕೂ ಚಿತ್ರರಂಗದ ಸಮಸ್ಯೆಗಳೇನು? ಎದುರಿಸಬೇಕಾದ ಸವಾಲುಗಳೇನು? ಎಂದು ಯೋಚಿಸಬೇಕೆಂಬ ಮನಸ್ಥಿತಿ ಇರುವಂತೆಯೂ ಕಾಣಲಿಲ್ಲ. ಮುಂದೆ ಬರಲಿರುವ ದಿನಗಳು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತಂದಾವು ಅದನ್ನು ಎದುರಿಸಲು ಒಂದಾಗಿ ಯೋಚಿಸೋಣ ಎನ್ನುವ ಅರಿವೂ ಕಾಣಲಿಲ್ಲ.
ಚಿತ್ರರಂಗದ ಮುಂದಿರುವ ಸವಾಲು!

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ವಿಧಿಸಿರುವ ಪ್ರಿಂಟ್ ಸಂಖ್ಯೆಯ, ಏಳುವಾರದ ಗಡುವಿನ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಇರುವುದಿಲ್ಲ. ಇದರಿಂದಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿ ತಮಿಳು, ತೆಲುಗು, ಇಂಗ್ಲೀಷ್, ಹಿಂದೀ ಇತ್ಯಾದಿ ಚಿತ್ರಗಳು ರಾರಾಜಿಸುವುದರ ಜೊತೆಯಲ್ಲೇ ಇಡೀ ಕನ್ನಡ ಜನತೆ ನಿಧಾನವಾಗಿ ಕನ್ನಡ ಚಿತ್ರಗಳಿಂದ ದೂರವಾಗುವ ಸಾಧ್ಯತೆಗಳು ಕಾಣುತ್ತಿವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಈಗಲೇ ಇಲ್ಲದಂತಾಗಿದೆ. ಇದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಸದಸ್ಯರನ್ನು ಒಮ್ಮೆಗೇ ಅಮಾನತ್ತುಗೊಳಿಸಿದಾಗ ಸಾಬೀತಾಗಿದೆ. ಗೋವಾ ಚಿತ್ರೋತ್ಸವದಲ್ಲಿ ಆಗುತ್ತಿರುವ ಅಪಮಾನಗಳಿಗಂತೂ ಲೆಕ್ಕವೇ ಇಲ್ಲ. ಪಾಲಿಸಿ ಮಾಡುವಾಗ ನಮ್ಮವರ ಮಾತಿಗೆ ಸರ್ಕಾರ ಯಾಕಾದರೂ ಬೆಲೆ ಕೊಟ್ಟೀತು. "ನಾವು ತೆಗೆಯೋ ಚಿತ್ರಗಳ ರಿಮೇಕೆಂಬ ಎಂಜಲು ತಿನ್ನುವವವರು ನೀವು" ಎನ್ನುವ ಅವಹೇಳನ ಅದೆಷ್ಟು ಕಡೆ ತಾನೇ ಆಗಿಲ್ಲ. ನಮ್ಮ ಚಿತ್ರರಂಗ ಉದ್ಧಾರವಾಗಲು ಇದೀಗ ಗಂಭೀರವಾಗಿ ಚಿಂತಿಸಲು ಸಕಾಲ.
ಏನೇನಾಗಬೇಕು?

ಕನ್ನಡ ಚಿತ್ರರಂಗದಲ್ಲಿ ಹೊಸಬರ, ಹೊಸತನದ ಚಿತ್ರಗಳು ತಯಾರಾಗಬೇಕಾಗಿದೆ. ವೃತ್ತಿಪರತೆ ಹೆಚ್ಚಾಗಬೇಕಿದೆ. ಪ್ರತಿಭಾ ಶೋಧ, ತರಬೇತಿಗಳಿಗೆ ಗಮನ ಕೊಡಬೇಕಾಗಿದೆ. ಹಣಕಾಸು ವ್ಯವಸ್ಥೆಯೂ ಮೀಟರ್ ಬಡ್ಡಿ ರೂಪದಲ್ಲಿ ಹರಡಿಕೊಂಡಿರುವುದು ನಿಂತು ಸಂಸ್ಥಾ ಹಣಕಾಸು ವ್ಯವಸ್ಥೆಗೆ ಸಾಗಬೇಕಿದೆ. ತಯಾರಿಕೆಯ ವೆಚ್ಚ ಕೆಟ್ಟ ಯೋಜನೆಯಿಂದಾಗಿ ಹೆಚ್ಚಾಗದಂತೆ ಸಿನಿಮಾ ನಿರ್ಮಾಣದ ತರಬೇತಿಗಳು ನಡೆಯಬೇಕಾಗಿದೆ. ಚಿತ್ರಮಂದಿರಗಳ ಅವ್ಯವಸ್ಥೆ, ಟಿಕೆಟ್ ಮಾರಾಟದಲ್ಲಿನ ಹುಳುಕುಗಳನ್ನು ಇಲ್ಲವಾಗಿಸಬೇಕಾಗಿದೆ. ವಿತರಕ, ಪ್ರದರ್ಶಕ, ನಿರ್ಮಾಪಕರ ನಡುವೆ ಯೋಗ್ಯವಾದ ರೀತಿಯಲ್ಲಿ ಲಾಭ ಹಂಚಿಕೆ, ಕಾರ್ಮಿಕರಿಗೆ ಗುಂಪುವಿಮೆ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕನ್ನಡ ಚಿತ್ರಗಳ ಮಾರುಕಟ್ಟೆಗಳನ್ನು ನಾಡಿನೊಳಗಡೆ ಗಟ್ಟಿಮಾಡಿಕೊಳ್ಳಬೇಕಾಗಿದೆ. ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಬೇಕಾಗಿದೆ. ಅಂತರ್ಜಾಲ, ಆಡಿಯೋ ವೀಡಿಯೋ ಮಾರುಕಟ್ಟೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಪುಟ್ಟ ಪುಟ್ಟ ಚಿತ್ರಮಂದಿರಗಳನ್ನು ರಾಜ್ಯದ ಎಲ್ಲೆಡೆ ಕಟ್ಟುವ ಮೂಲಕ ಚಿತ್ರಮಂದಿರಗಳ ಕೊರತೆ ನೀಗಿಸಬೇಕಾಗಿದೆ. ಹೀಗೆ... ಮಾಡಲು ಹತ್ತಾರು ಕೆಲಸಗಳಿವೆ. ಇದನ್ನು ಬಿಟ್ಟು ಗತವೈಭವದಲ್ಲೇ ತೇಲಾಡಿಕೊಂಡು ಇರ್ತೀವಿ, ಕಾನೂನು ಬಾಹಿರವೂ ನ್ಯಾಯಬಾಹಿರವೂ ಆದ ಮಾರ್ಗದಲ್ಲಿ ಸ್ಪರ್ಧೆ ತಡೀತೀನಿ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ.

ಕನ್ನಡ ಚಿತ್ರರಂಗವು ಕೆಲವು ಸ್ವಹಿತಾಸಕ್ತಿಯ ನಾಯಕರ ಮಾತುಗಳಿಗೆ ಮರುಳಾಗದೆ ಇಡೀ ಚಿತ್ರರಂಗದ ನಾಳೆಗಳ ಬಗ್ಗೆ ಒಂದು ಆರೋಗ್ಯಕರವಾದ ಚರ್ಚೆಗೆ ತನ್ನನ್ನು ತಾನು ತೆರೆದುಕೊಂಡಿದ್ದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಾದರೂ ಇದೆ ಅನ್ನಿಸುವುದಿಲ್ಲವೇನು? ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯು ಕನ್ನಡದಲ್ಲೇ ಇರಬೇಕಾದ್ದು ಕನ್ನಡಿಗರು ಹಕ್ಕು ಎಂಬುದನ್ನೂ, ಈಗಿರುವಂತೆಯೇ ಪರಭಾಷಾ ಚಿತ್ರಗಳು ಆಯಾ ಭಾಷೆಗಳಲ್ಲೇ ಕನ್ನಡ ನಾಡಿನ ಹಳ್ಳಿಹಳ್ಳಿಗಳಲ್ಲಿ ನಡೆಯುವುದು ಮುಂದಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡವೆಲ್ಲಿ ಉಳಿದೀತು? ಕನ್ನಡ ಚಿತ್ರರಂಗವೆಲ್ಲಿ ಉಳಿದೀತು? ಅನಿಸುವುದಿಲ್ಲವೇ?
ಚಲನಚಿತ್ರಗಳ ಗ್ರಾಹಕನಾಗಿರುವ ಪ್ರೇಕ್ಷಕನೆಂಬ ಅನ್ನದಾತನ ಬಗ್ಗೆ ಗೌರವವಿಲ್ಲದ ಯಾವುದೇ ಇಂಡಸ್ಟ್ರಿ, ಪ್ರತಿಭೆಗಳನ್ನು ಮುರುಟಿಹಾಕುವ ಯಾವುದೇ ಇಂಡಸ್ಟ್ರಿ ಮಣ್ಣುಪಾಲಾಗೋದನ್ನು ತಪ್ಪಿಸಲು ಆಗೋದಿಲ್ಲ! ಬದುಕಿನಲ್ಲಿ ಓಡೋ ಪಾಠಾನ ತಾನೇ ಬಿದ್ದು ಕಲಿಯೋಕೆ ಹೋಗದೆ... ಸೋಮೇಶ್ವರ ಶತಕದಲ್ಲಿ ಬರೆದಿರುವಂತೆ "ಕೆಲವಂ ಬಲ್ಲವರಿಂದ ಕಲ್ತುI ಕೆಲವಂ ಶಾಸ್ತ್ರಗಳಂ ಕೇಳುತಂII ಕೆಲವಂ ಮಾಳ್ಪವರಿಂದ ಕಂಡುI ಕೆಲವಂ ಸುಜ್ಞಾನದಿಂ ನೋಡುತಂ..." ಬೇಗ ಕಲಿತುಕೊಂಡರೆ ಬೀಳೋದು ತಪ್ಪುತ್ತೆ! ಇಲ್ಲದಿದ್ದರೆ ಮತ್ತೆ ಏಳಕ್ಕಾಗದ ಹಾಗೆ ಬಿದ್ದು ಮಣ್ಣು ಮುಕ್ಕ ಬೇಕಾಗುತ್ತೆ... ಅಲ್ವಾ ಗುರೂ?!

2 ಅನಿಸಿಕೆಗಳು:

Prashanth Ragavendra ಅಂತಾರೆ...

yelladakku sarkara prothasaha koda beku mattu janaru prothsaha koda beku anthane helthairthare ee film mandi.
Sarkara mattu kannada janathe ivarannu ivara nadeyannu nirdakshinyavaagi virodhisabeku

Roopesh ಅಂತಾರೆ...

I had been to Ranga Shankara recently "Anabhigna Shakuntala". After the play ended, all the characters came on stage and looked in audience eyes and bowed down. I enjoyed the play more than the kananda movies.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails