ಜನಸಂಖ್ಯಾ ನಿಯಂತ್ರಣ ಮತ್ತು ವಲಸೆ...

ನಮ್ಮೆಲ್ಲಾ ಸಮಸ್ಯೆಗೆ ಮೂಲ ಜನಸಂಖ್ಯಾ ಸ್ಫೋಟ ಎನ್ನುವ ವದಂತಿಯನ್ನು ಸದಾಕಾಲ ಹರಡಲಾಗುತ್ತಿದೆ. ಅದರಲ್ಲೂ ಸರ್ಕಾರ ಎಲ್ಲಾ ಸಮೂಹ ಮಾಧ್ಯಮಗಳ ಮೂಲಕ ಜನರಿಗೆ ಕುಟುಂಬ ನಿಯಂತ್ರಣ ಮಾಡಿ ಎಂದು ಕರೆ ಕೊಡುತ್ತಲೇ ಇರುತ್ತದೆ. ನಿಜಕ್ಕೂ ಕರ್ನಾಟಕಕ್ಕೆ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆಯೇ? ಕನ್ನಡಿಗರನ್ನು ಕುಟುಂಬ ಯೋಜನೆಗೆ ಒಲಿಸುತ್ತಾ ಭಾರತ ಸರ್ಕಾರ ಮಾಡುತ್ತಿರುವುದಾದರೂ ಏನನ್ನು? ವಾಸ್ತವ ಸಂಗತಿ ಏನು? 

ಜನಸಂಖ್ಯೆ ಮತ್ತು ಜನದಟ್ಟಣೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚು ಅನ್ನೋ ಪ್ರಚಾರದಲ್ಲಿ ಆಯಾ ದೇಶದ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಳ್ಳಬೇಕಾದ್ದು ಸರಿಯಾದ ವಿಧಾನ. ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಚೀನಾ, ಅದರ ನಂತರ ಭಾರತ. ಜನಸಂಖ್ಯೆಯೇ ನಮ್ಮೆಲ್ಲಾ ಅವ್ಯವಸ್ಥೆ, ಸಮಸ್ಯೆಗಳಿಗೆ ಮೂಲ ಅನ್ನೋದು ಸಾಮಾನ್ಯವಾಗಿ ಹುಟ್ಟು ಹಾಕಲಾಗಿರುವ ನಂಬಿಕೆ. ಒಂದು ನಾಡಿನ ಜನಸಂಖ್ಯೆಗಿಂತಲೂ ಮಹತ್ವದ್ದು ಅಲ್ಲಿನ ಜನದಟ್ಟಣೆ. ಈ ಜನದಟ್ಟಣೆಯನ್ನು ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆಯ ಮೂಲಕ ಸೂಚಿಸುವುದು ಒಂದು ವಿಧಾನ. ಆ ಲೆಕ್ಕದಲ್ಲಿ ಚೀನಾಗಿಂತಲೂ ಭಾರತ ಮುಂದಿದೆ. ಚೀನಾ ಜನದಟ್ಟಣೆ ೧೪೦ ಇದ್ದಲ್ಲಿ ಭಾರತದ್ದು ೩೬೮. ವಾಸ್ತವವಾಗಿ ಅದಕ್ಕಿಂತಲೂ ಅರ್ಥಪೂರ್ಣವಾದ ಸೂಚಿ ಎಂದರೆ ಆಯಾಪ್ರದೇಶದಲ್ಲಿರುವ ಸಂಪನ್ಮೂಲದ ಪ್ರಮಾಣದೊಂದಿಗಿನ ಅನುಪಾತದ ಆಧಾರದ ಮೇಲಿನ ಜನದಟ್ಟಣೆ. ಸದ್ಯ ಭಾರತದ ಸಂಪನ್ಮೂಲಾಧಾರಿತ ಜನದಟ್ಟಣೆಯ ಅಂಕಿಅಂಶಗಳನ್ನು ಬದಿಗಿಟ್ಟು ವಿಸ್ತೀರ್ಣದ ಆಧಾರದ ಮೇಲಿನ ಜನದಟ್ಟಣೆಯ ಅಂಕಿಅಂಶಗಳನ್ನು ವಿಶ್ಲೇಷಿಸಿ ನೋಡೋಣ. ಅಂದರೆ ನಾಡಿನ ಜನಸಂಖ್ಯೆಯ ಹೆಚ್ಚಳ ಅಥವಾ ಕುಸಿತ ಎನ್ನುವುದು ಆ ಪ್ರದೇಶದ ವಿಸ್ತೀರ್ಣ ಆಧಾರಿತ ಜನದಟ್ಟಣೆಯಾಗಿದೆ. ಜನಸಂಖ್ಯಾ ದಟ್ಟಣೆಯನ್ನು ನಿಭಾಯಿಸಲು ಇರುವ ಸಾಧನ ಹುಟ್ಟಿನ ಪ್ರಮಾಣದ ಮೇಲಿನ ಹಿಡಿತ. ಈ ಪ್ರಮಾಣ ಆಯಾ ಪ್ರದೇಶದಲ್ಲಿನ ತಾಯಂದಿರು ಸರಾಸರಿ ಎಷ್ಟು ಮಕ್ಕಳನ್ನು ಹೆರುತ್ತಾರೆ ಎಂಬುದನ್ನು ಅವಲಂಬಿಸಿದೆ. ಈ ಹುಟ್ಟಿನ ಪ್ರಮಾಣವನ್ನು ಫಲವತ್ತತೆ ಎನ್ನಬಹುದಾಗಿದೆ. ಜನಸಂಖ್ಯಾ ನಿಯಂತ್ರಣವೆಂದರೆ ಈ ಫಲವತ್ತತೆಯನ್ನು/ ಹೆರುವಿಕೆಯ ಪ್ರಮಾಣವನ್ನು ನಿಯಂತ್ರಿಸುವುದೇ ಆಗಿದೆ.

ಜನಸಂಖ್ಯಾ ನಿಯಂತ್ರಣ

ಜನರು ಹುಟ್ಟುತ್ತಿರುವಂತೆಯೇ ಸಾಯುತ್ತಲೂ ಇರುವುದರಿಂದ ಈ ಎರಡು ಪ್ರಮಾಣಗಳ ನಡುವಿನ ಹೊಂದಾಣಿಕೆ ಆಯಾಪ್ರದೇಶದ ಜನಸಂಖ್ಯೆ ಏರುತ್ತಿದೆಯೇ, ಇಳಿಯುತ್ತಿದೆಯೇ ಅನ್ನುವುದನ್ನು ನಿಶ್ಚಯಿಸುತ್ತದೆ. ಜನಸಂಖ್ಯಾ ನಿಯಂತ್ರಣವೆಂದರೆ ಜನಸಂಖ್ಯೆಯ ಏರಿಕೆ ಪ್ರಮಾಣದ ಮೇಲೆ ಕಡಿವಾಣ ಹಾಕಿಕೊಳ್ಳುವುದೇ ಆಗಿದೆ. ಇದಕ್ಕಿರುವ ಅಳತೆಗೋಲು TFR, ಅಂದರೆ ಒಟ್ಟು ಫಲವತ್ತತೆಯ ಪರಿಮಾಣ. ಈ ಸೂಚ್ಯಂಕವು ೨.೦ ಇದ್ದಲ್ಲಿ ಜನಸಂಖ್ಯೆ ಹೆಚ್ಚೂ ಆಗದು ಕಮ್ಮಿಯೂ ಆಗದು. ಸರಾಸರಿಯಾಗಿ ಒಬ್ಬ ತಂದೆತಾಯಿಗೆ ಇಬ್ಬರು ಮಕ್ಕಳಿರುವುದು ಎಂದರೆ ಸೂಚ್ಯಂಕ ೨.೦ ಇದೆ ಎಂದರ್ಥ. ಎರಡಕ್ಕಿಂತ ಹೆಚ್ಚಿನ ಸೂಚ್ಯಂಕದ ಅರ್ಥ ಜನಸಂಖ್ಯೆ ಏರುಮುಖದಲ್ಲಿದೆ, ಇದು ಜನಸಂಖ್ಯಾ ಸ್ಫೋಟದ ಕಡೆಗಿನ ಹೆಜ್ಜೆ. ಇದೇ ಸೂಚ್ಯಂಕ ೨.೦ಕ್ಕಿಂತ ಕೆಳಗೆ ಇಳಿದರೆ ಜನಸಂಖ್ಯೆಯ ಇಳಿಮುಖವಾಗುತ್ತಿರುವ ಲಕ್ಷಣ. ಜನಸಂಖ್ಯಾ ನಿಯಂತ್ರಣ ಎನ್ನುವುದರ ಅರ್ಥ ಏರಮುಖವಾಗಿರುವ ಜನಸಂಖ್ಯಾ ಸೂಚ್ಯಂಕವನ್ನು ನೇರವಾಗಿಸುವುದು. ಅಂದರೆ ಸೂಚ್ಯಂಕವನ್ನು ೨.೦ಕ್ಕಿಳಿಸುವುದು. ಆದರೆ ಮದುವೆ ಮಾಡಿಕೊಳ್ಳದವರು, ಚಿಕ್ಕಮಕ್ಕಳ ಸಾವಿನ ಪ್ರಮಾಣ... ಮುಂತಾದುವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈಗಿರುವ ಜನಸಂಖ್ಯಾ ಪ್ರಮಾಣವನ್ನೇ ಕಾಯ್ದುಕೊಳ್ಳಬೇಕೆಂದರೆ ಸೂಚ್ಯಂಕವನ್ನು ೨.೧ರಲ್ಲಿಟ್ಟುಕೊಳ್ಳುವುದು ಒಳಿತು. ಯಾವ ದೇಶವೂ, ಯಾವ ಜನಾಂಗವೂ ಜನಾಂಗವೂ ಸದರಿ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕಿಂತ ಕೆಳಕ್ಕಿಳಿಸಲು ಒಪ್ಪದು. ಯಾಕೆಂದರೆ ಅದು ಕಾಲಾಂತರದಲ್ಲಿ ಆ ಜನಾಂಗವನ್ನೇ ಭೂಪಟದಿಂದ ಅಳಿಸಿಬಿಡುತ್ತದೆ.  ೨.೦ ಸೂಚ್ಯಂಕ ಅನುಸರಿಸಿದರೆ ಎಷ್ಟೇ ಶತಮಾನಗಳುರುಳಿದರೂ ಜನಸಂಖ್ಯೆ ಅದೇ ಪ್ರಮಾಣದಲ್ಲಿರುತ್ತದೆ. ೨ಕ್ಕಿಂತ ಕೆಳಗಿಳಿದರೆ ಹೇಗೆ ಕುಸಿತ ಕಂಡು ಕೊನೆಗೊಮ್ಮೆ ಆ ಜನಾಂಗ ನಿರ್ನಾಮವಾಗಿಬಿಡುತ್ತದೆ.

ಭಾರತ ದೇಶದ ಸ್ವರೂಪ ಮತ್ತು ಜನದಟ್ಟಣೆ

ಭಾರತವೂ ಕೂಡಾ ಏರುಮುಖವಾಗಿರುವ ಜನಸಂಖ್ಯೆ ಹೊಂದಿದ್ದು (ಈಗಿನ ಫಲವತ್ತತೆ ಸೂಚ್ಯಂಕ ೨.೯) ತನ್ನ ಜನಸಂಖ್ಯೆಯನ್ನು ಸ್ಫೋಟವಾಗಲು ಬಿಡದಂತೆಯೂ, ಈಗ ಇರುವಷ್ಟೇ ಕಾಪಾಡಿಕೊಳ್ಳಲೂ ಯೋಜಿಸಿದೆ. ಆ ಕಾರಣಕ್ಕಾಗಿಯೇ ೨೦೨೦ರ ಹೊತ್ತಿಗೆ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕೆ ಇಳಿಸಲು ಯೋಜಿಸಿದೆ. ಆದರೆ ಯೋಜನೆ ಜಾರಿ ಮಾಡುವ ಭರದಲ್ಲಿ ಕೆಲಜನಾಂಗಗಳ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಹೌದೂ.. ಭಾರತದ ಪ್ರಸ್ತುತ ಜನಸಂಖ್ಯಾ ನಿಯಂತ್ರಣ ಯೋಜನೆಯ ರೂಪುರೇಶೆಯನ್ನು ಅರಿತುಕೊಂಡರೆ ಈ ದಿಟವು ಗೋಚರವಾಗುತ್ತದೆ. ಇದು ಹುನ್ನಾರವೇ? ಅವಿವೇಕವೇ? ಉದ್ದೇಶಪೂರ್ವಕವೇ? ದಡ್ಡತನವೇ? ಎಂಬುದನ್ನು ವಿಶ್ಲೇಷಿಸುವುದು ನಿಮಗೆ ಬಿಟ್ಟದ್ದು. ಜನಸಂಖ್ಯಾ ದಟ್ಟಣೆಯ ವಸ್ತುಸ್ಥಿತಿ ನಿಯಂತ್ರಣೆಯ ಬಗ್ಗೆ ಮಾತಾಡುವ ಮೊದಲು ಕರ್ನಾಟಕದ ಜನಸಂಖ್ಯಾ ದಟ್ಟಣೆಯ ಬಗ್ಗೆ ಒಂದಷ್ಟು ಅಂಕಿ ಅಂಶಗಳತ್ತ ಕಣ್ಣು ಹಾಯಿಸೋಣ.

ಈ ಪಟ್ಟಿಯನ್ನೊಮ್ಮೆ ನೋಡಿ.


ಇದು ರಾಜ್ಯವಾರು ಜನದಟ್ಟಣೆಯ ಪಟ್ಟಿ. ಕರ್ನಾಟಕದ ದಟ್ಟಣೆ ಸೂಚ್ಯಂಕ ೩೧೯. ಅಂದರೆ ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆ ೩೧೯. ಭಾರತದ ಸರಾಸರಿ ಜನದಟ್ಟಣೆ ೩೬೮. ನಮಗಿಂತಾ ಜನದಟ್ಟಣೆಯಲ್ಲಿ ೧೮ ರಾಜ್ಯಗಳು ಮುಂದಿವೆ. ನಮ್ಮದು ೧೯ನೇ ಸ್ಥಾನ. ಅಂದರೆ ಕರ್ನಾಟಕದ ಇಂದಿನ ಜನದಟ್ಟಣೆಯು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡುವಿನಂತಹ ರಾಜ್ಯಗಳಲ್ಲಿ ಜನದಟ್ಟಣೆ ಕರ್ನಾಟಕದ ಎರಡು ಪಟ್ಟು ಮೂರು ಪಟ್ಟುಹೆಚ್ಚಿವೆ. ಇದರ ಪರಿಣಾಮ ನೇರವಾಗಿ ಕರ್ನಾಟಕಕ್ಕೆ ಪರಭಾಷಿಕರ ವಲಸೆಯೇ ಆಗಿದೆ. ಆ ಮೂಲಕ ನಮ್ಮ ನಾಡಿನ ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ನಮ್ಮದಾಗಿದೆ. ಇನ್ನು ಜಗತ್ತಿನ ಕೆಲವು ದೇಶಗಳ ಜೊತೆ ತುಲನೆ ಮಾಡೋಣ.

ಈ ಒಂದು ನಕ್ಷೆ ನೋಡಿರಿ.


ಕರ್ನಾಟಕದ ಜನದಟ್ಟಣೆ ಜಪಾನು, ಇಸ್ರೇಲುಗಳಂತಹವುಗಳಿಗಿಂತಲೂ ಕಡಿಮೆಯಿದೆ. ಸ್ವಲ್ಪ ಗಮನಿಸಿ ನೋಡಿದರೆ ಜಪಾನಿನಂತಹ ದೇಶ ತನ್ನ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಎಷ್ಟು ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿದೆಯೆಂದು ತಿಳಿಯುತ್ತದೆ. ಆ ಯಾವ ದೇಶಗಳಿಗೂ ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆ ಕರ್ನಾಟಕಕ್ಕಿದೆ ಎಂದು ಯಾರಾದರೂ ಹೇಳಿದರೆ ನಂಬಬೇಕೆ? ಆ ಯಾರಾದರೂ ಎನ್ನುವುದೂ ನಮ್ಮದೇ ಕೇಂದ್ರ ಮತ್ತು ರಾಜ್ಯಸರ್ಕಾರಗಳಾಗಿದ್ದಾಗಲೂ ಕೂಡಾ ನಂಬಬೇಕಾಗಿಲ್ಲ.

ನಮ್ಮನ್ನು ಇಲ್ಲವಾಗಿಸುವ ಹುನ್ನಾರ?


ಹೋಗಲೀ, ಕೇಂದ್ರಸರ್ಕಾರ ಕನ್ನಡಿಗರ ಈಗಿನ ಜನಸಂಖ್ಯೆಯನ್ನು ಉಳಿಸಿಕೊಂಡು ಹೋಗಬೇಕೆಂಬ ಉದ್ದೇಶವನ್ನಾದರೂ ಹೊಂದಿದೆಯೇ? ಇಲ್ಲ...ಇದು ಕನ್ನಡಿಗರ ಜನಸಂಖ್ಯೆಯನ್ನು ಇಳಿಮುಖವಾಗಿಸಬೇಕೆಂಬ ಗುರಿ ನಮಗಿತ್ತಿದೆ. ಹೌದೂ! ಇಂತಹ ಕ್ರಮಕ್ಕೆ ಭಾರತ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಮುಂದಾಗಿದೆ ಎಂದರೆ ನಂಬಲೇಬೇಕಾಗಿದೆ. ಯಾಕೆಂದರೆ ಕರ್ನಾಟಕದ ಮುಂದೆ ಕೇಂದ್ರಸರ್ಕಾರವು ಇಟ್ಟಿರುವ ಸೂಚ್ಯಂಕದ ಗುರಿ ೧.೯. ಕರ್ನಾಟಕ ಸರ್ಕಾರವೂ ತನಗೆ ತಾನೇ ವಿಧಿಸಿಕೊಂಡಿರುವ ಗುರಿ ೧.೬ ಆಗಿದ್ದು ವಿಚಿತ್ರವಾಗಿದೆ. ಈ ೧.೬ರ ಗುರಿಯನ್ನೇನಾದರೂ ಕನ್ನಡಿಗರು ಸಾಧಿಸಿಬಿಟ್ಟರೆ ಕನ್ನಡಿಗರು ನೂರಿನ್ನೂರು ವರ್ಷಗಳಲ್ಲಿ ಭೂಪಟದಿಂದ ಮರೆಯಾಗಬೇಕಾಗುತ್ತದೆ. ಈಗಾಗಲೇ ೨.೩ರಷ್ಟು ಸೂಚ್ಯಂಕ ಸಾಧಿಸಿರುವ, ೩೧೯ರ ಜನದಟ್ಟಣೆಯನ್ನು ಹೊಂದಿರುವ ಕರ್ನಾಟಕಕ್ಕೆ ೨.೧ಕ್ಕಿಂತ ಕೆಳಗಿನ ಗುರಿಯನ್ನು ಕೊಟ್ಟಿರುವುದರ ಉದ್ದೇಶವೇನಿರಬಹುದು? ಜನರಿಂದ ತುಂಬಿ ತುಳುಕುತ್ತಿರುವ ಉತ್ತರದ ಹಿಂದೀಭಾಷಿಕ ಪ್ರದೇಶಗಳಾದ ಬಿಹಾರ, ಉತ್ತರಪ್ರದೇಶ ಮೊದಲಾದ ಈಗಾಗಲೇ ಹೆಚ್ಚಿನ ಬಹಳ ಜನದಟ್ಟಣೆಯಿರುವ, ಹೆಚ್ಚಿನ ಫಲವತ್ತತೆ ಸೂಚ್ಯಂಕವಿರುವ ರಾಜ್ಯಗಳಿಗೆ ನೀಡಿರುವ ಗುರಿ ೩.೦ ಆಗಿದೆ. ಅಂದರೆ ‘ಕಾಲಾಂತರದಲ್ಲಿ ದಕ್ಷಿಣ ಭಾರತೀಯರೆಲ್ಲಾ ಜನಸಂಖ್ಯೆಯ ಕುಸಿತದ ಕಾರಣದಿಂದಾಗಿ ವಿನಾಶ ಹೊಂದಿರಿ, ಉತ್ತರದ ಹಿಂದೀ ಭಾಷಿಕರು ಮಕ್ಕಳು ಮರಿ ಹುಟ್ಟಿಸಿಕೊಂಡು ಮುಂದುವರಿಯಲಿ. ನಿಮ್ಮ ನಾಡಿನ ಸಂಪನ್ಮೂಲಗಳನ್ನೆಲ್ಲಾ ಅವರು ಬದುಕಲು ಬಿಟ್ಟುಕೊಡಿ’ ಅಂದಂತಾಯಿತಲ್ಲಾ?

ಸರಿಯಾದ ‘ಜನಸಂಖ್ಯಾ ಸ್ಫೋಟ ನಿಯಂತ್ರಣ’ಕ್ರಮ ಹೀಗಿರಲಿ!

ಭಾರತವು ನಾನಾಭಾಷಿಕ ಜನಾಂಗಗಳ ತವರಾಗಿದೆಯಷ್ಟೇ ಅಲ್ಲದೆ ನಾನಾ ತೆರನಾದ ಭೌಗೋಳಿಕ ವೈವಿಧ್ಯತೆಯನ್ನೂ ಹೊಂದಿದೆ. ಇಲ್ಲಿ ಸಹಜವಾಗಿಯೇ ಒಂದು ಪ್ರದೇಶಕ್ಕೂ ಮತ್ತೊಂದಕ್ಕೂ ಒಂದು ಜನಾಂಗಕ್ಕೂ ಮತ್ತೊಂದಕ್ಕೂ ಜನಸಂಖ್ಯಾ ದಟ್ಟಣೆಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣವೆನ್ನುವ ಅಸ್ತ್ರವನ್ನು ವಿವೇಚನೆಯೊಂದಿಗೆ ಸರಿಯಾಗಿ ಪ್ರಯೋಗಿಸಬೇಕಾಗಿದೆ. ಸರಿಯಾದ ವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ೨.೧ರ ಸೂಚ್ಯಂಕವನ್ನು ಸಾಧಿಸುವ ಗುರಿಯನ್ನು ನಿಗದಿ ಪಡಿಸಬೇಕಾಗಿದೆ. ಯಾವ ರಾಜ್ಯ ೨.೧ರ ಗುರಿ ಮುಟ್ಟುತ್ತದೋ ಆ ರಾಜ್ಯಕ್ಕೆ ಹೆಚ್ಚು ಯೋಜನೆಗಳ, ಸಂಪನ್ಮೂಲ ಹರಿಸುವಿಕೆಯ, ತೆರಿಗೆ ವಿನಾಯತಿಯ ಪ್ರೋತ್ಸಾಹಕ ಉಡುಗೊರೆ ಕೊಡುವ ಮೂಲಕ ಗುರಿ ಸಾಧನೆಯತ್ತ ದಾಪುಗಾಲಿಡಬಹುದಾಗಿದೆ. ಒಮ್ಮೆ ಒಂದು ರಾಜ್ಯ ಗುರಿ ಸಾಧಿಸಿದೆಯೆಂದ ಮೇಲೆ ಆ ರಾಜ್ಯದಲ್ಲಿನ್ನು ಜನಸಂಖ್ಯಾ ನಿಯಂತ್ರಣ ಪ್ರಚಾರಾಂದಲನಗಳಿಗೆ ಕೊನೆ ಹಾಡಬಹುದಾಗಿದೆ. ಆದರೆ ಇಂದು ಭಾರತ ಸರ್ಕಾರ ಅನುಸರಿಸುತ್ತಿರುವ ನೀತಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಸುರಿಯುವಂತಿದ್ದು ಕೆಲ ಜನಾಂಗಗಳನ್ನು ವಿನಾಶದೆಡೆಗೆ ತಳ್ಳುತ್ತಿದೆ. ಕಾಲಾಂತರದಲ್ಲಿ ಇವು ಹೇಳಹೆಸರಿಲ್ಲದಂತೆ ನಿರ್ನಾಮವಾಗಿಬಿಡುತ್ತವೆ. ಕಾಕತಾಳಿಯವೋ ಏನೋ, ಈ ಜನಾಂಗಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ್ದಾಗಿವೆ, ಹಿಂದಿಯೇತರ ಭಾಷಾ ಜನಾಂಗಗಳಾಗಿದೆ. ಭಾರತ ಬಹಳ ದೊಡ್ಡದು, ಹಾಗಾಗಿ ಕೇಂದ್ರಸರ್ಕಾರಕ್ಕೆ ನಾವು ಕಾಣಿಸದೇ ಇರಬಹುದು. ಆದರೆ ನಮ್ಮ ಹಿತ ಕಾಯಲೆಂದೇ ಅಸ್ತಿತ್ವದಲ್ಲಿರುವ ರಾಜ್ಯಸರ್ಕಾರಕ್ಕೆ, ರಾಜ್ಯದ ಆಡಳಿತ ಯಂತ್ರಕ್ಕೇನೂ ದೊಡ್ಡರೋಗ ಬಂದಿಲ್ಲವಲ್ಲಾ? ಇವರು ಒಟ್ಟು ಫಲವತ್ತೆತೆ ಸೂಚ್ಯಂಕವನ್ನು ಯಾವ ಕಾರಣಕ್ಕೂ ೨.೧ಕ್ಕಿಂತ ಕೆಳಗಿಳಿಸಲು ಯೋಜಿಸುವುದಾಗಲೀ, ಒಪ್ಪುವುದಾಗಲೀ ಮಾಡಬಾರದಲ್ಲಾ? ಅಂತರ ರಾಜ್ಯ ಅನಿಯಂತ್ರಿತ ವಲಸೆ ತಡೆಗಾಗಿ ಕಾಯ್ದೆ ರೂಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬಹುದಲ್ಲ. ನಮ್ಮಂತೇ ಸವೆಯುತ್ತಿರುವ ರಾಜ್ಯಗಳನ್ನು ಒಗ್ಗೂಡಿಸಿ ಸರಿಯಾದ ನೀತಿಯನ್ನು ರೂಪಿಸುವಂತೆ ಹಟ ಹಿಡಿಯಬಹುದಲ್ಲಾ? ಕಡೇಪಕ್ಷ ಗುಜರಾತಿನಂತೆ ಕರ್ನಾಟಕಕ್ಕೆ ೨.೨ನ್ನಾದರೂ ಸೂಚ್ಯಂಕ ಗುರಿಯಾಗಿಸಲು ಲಾಬಿ ಮಾಡಬಹುದಲ್ಲಾ?

ಕನ್ನಡದವರ ಬಗ್ಗೇನೂ ಇದೇ ಕಾಳಜಿ ಇದೆಯಾ?


ಘನ ಕರ್ನಾಟಕ ರಾಜ್ಯಸರ್ಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀಯುತ ಅಶೋಕ್‌ರವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಹೈಕಮಾಂಡಿನ ಅಪೇಕ್ಷೆಯಂತೆ ಮತ್ತು ನಿರೀಕ್ಷೆಯಂತೆ ಅಸ್ಸಾಮಿಗೆ ತೆರಳಿ, ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತಾಡಿ ಇಬ್ಬರೂ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಈ ವರದಿಯಲ್ಲಿನ ಒಂದು ತಮಾಶೆಯ ವಿಷಯ ಅಂದ್ರೆ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ತರುಣ್ ಗೊಗಾಯಿಯವರ  "ಎರಡೂ ರಾಜ್ಯಗಳಲ್ಲೂ ಉಭಯ ರಾಜ್ಯಗಳ ಜನ ಬಹುಸಂಖ್ಯೆಯಲ್ಲಿ ಉತ್ತಮ ಬಾಂಧವ್ಯ ಮತ್ತು ಸೌಹಾರ್ದದಿಂದ ವಾಸವಾಗಿದ್ದಾರೆ" ಎಂದಿದ್ದಾರೆ. ಕರ್ನಾಟಕದಲ್ಲಿ ಸುಮಾರು ೩,೫೦,೦೦೦ ಅಸ್ಸಾಮಿಗಳಿದ್ದರೆ ಅಸ್ಸಾಮಿನಲ್ಲಿ ಸುಮಾರು ೨,೦೫೯ ಜನ ಕನ್ನಡಿಗರಿದ್ದಾರೆ(೨೦೦೧ರ ಜನಗಣತಿ). ಕನ್ನಡನಾಡಿನ ಜನಲಕ್ಷಣ (ಡೆಮಾಗ್ರಫಿ) ಬದಲಾಗುತ್ತಿರುವುದರ ಪರಿಣಾಮಗಳ ಬಗ್ಗೆ, ವಲಸೆ ಉಂಟು ಮಾಡುವ ಎಲ್ಲಾ ತೊಂದರೆಗಳ ಬಗ್ಗೆ, ನಮ್ಮ ಜನರ ಕೆಲಸ, ಭಾಷೆ, ಸಂಸ್ಕೃತಿಗಳಿಗೆ ಎದುರಾಗುವ ತೊಂದರೆಗಳ ಬಗ್ಗೆ ಯೋಚಿಸಿದರೆ ೩,೫೦,೦೦೦ಕ್ಕೂ ೨,೦೬೦ಕ್ಕೂ ನಡುವಿನ ಅಂತರದ ಮಹತ್ವ ಅರಿವಾಗುತ್ತದೆ. ಈ ವಿಷಯ ಬಿಟ್ಟು ನೋಡಿದರೂ ಕರ್ನಾಟಕ ಸರ್ಕಾರವು ಪ್ರತಿಕ್ರಿಯಿಸುತ್ತಿರುವ ರೀತಿ ಮಾತ್ರಾ ಅತಿಕಾಳಜಿ ಅನ್ನಿಸುತ್ತದೆ. ನಿಜಕ್ಕೂ, ಅಸ್ಸಾಮಿಗಳ ಬಗ್ಗೆ ಕರ್ನಾಟಕ ರಾಜ್ಯಸರ್ಕಾರವು ತೋರಿಸುತ್ತಿರುವ ಕಾಳಜಿ "ತೊಂದರೆಯಲ್ಲಿರುವವರಿಗೆ ತೋರಿಸುತ್ತಿರುವ ಉದಾರತೆ ಎನ್ನಿಸಿದರೂ... ನಮ್ಮ ಸರ್ಕಾರಗಳು ಸಂಕಷ್ಟದಲ್ಲಿದ್ದ ಕನ್ನಡಿಗರ ಪರವಾಗಿಯೂ ಹೀಗೇ ದೊಡ್ಡತನ ತೋರಿಸಿವೆಯೇ?" ಎನ್ನುವ ಪ್ರಶ್ನೆಗೆ ದಾರಿ ಮಾಡಿಕೊಡುತ್ತದೆ!!

ಅಸ್ಸಾಮಿಯರಿಗೆ ಕೆಲಸದ ಭದ್ರತೆ! ಕನ್ನಡಿಗರಿಗೆ ಬೇಡವೇ?

ಹೀಗೆ ರಾಜ್ಯವೊಂದರ ಉಪಮುಖ್ಯಮಂತ್ರಿಯೊಬ್ಬರು, ರಾಜ್ಯರಾಜ್ಯಗಳಿಗೆ ಅಲೆದು "ನಮ್ಮೂರಿಂದ ವಾಪಸ್ಸು ಹೋಗಿರೋರು ದಯವಿಟ್ಟು ಬನ್ನಿ" ಎಂದಿರೋದು ಬಹುಶಃ ಭಾರತದಲ್ಲೇ ಇದೇ ಮೊದಲಸಲಾ ಅನ್ನಿಸುತ್ತೆ! ಒಳ್ಳೇದು. ಕನ್ನಡಿಗರ ಸಹೃದಯತೆಗೆ ಇದು ಒಂದು ಉದಾಹರಣೆ. ಆದರೆ ಈ ಸಹೃದಯತೆ ಇಂದು ಆಡಳಿತ ಮಾಡುತ್ತಿರುವ ಬಿಜೆಪಿಗಾಗಲೀ, ಹಿಂದೆ ಆಳಿದ  ಜೆಡಿಎಸ್, ಕಾಂಗ್ರೆಸ್ಸುಗಳಿಗಾಗಲೀ ಇದ್ದಂತಿರುವುದು ಬರೀ ಹೊರನಾಡಿಗರ ಬಗ್ಗೆ ಮಾತ್ರಾ ಆಗಿಬಿಟ್ಟರೆ ಅದಕ್ಕೇನೆನ್ನಬೇಕು? ವಲಸಿಗರ ಉದ್ಯೋಗ, ಬದುಕಿನ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ಇದೇ ನೆಲದ ಕನ್ನಡಿಗರಿಗೆ ಕೆಲಸ ದೊರಕಿಸಿ ಕೊಡುವ "ಸರೋಜಿನಿ ಮಹಿಷಿ ವರದಿ"ಯ ಬಗ್ಗೆ ಯಾಕೆ ಕ್ರಮ ತೆಗೆದುಕೊಳ್ಳದು? ನೆರೆಯ ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ ಮೊದಲಾದ ರಾಜ್ಯಗಳು "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ"ಯನ್ನು ೮೫%ಕ್ಕೆ ಕಡಿಮೆಯಿರದಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದಿರುವುದನ್ನು ನೋಡಿಯೂ ರಾಜ್ಯದಲ್ಲಿ ಕನ್ನಡಿಗರಿಗೆ ಕೆಲಸದ ಅವಕಾಶ ಒದಗಿಸುವ "ಸರೋಜಿನಿ ಮಹಿಷಿ" ವರದಿಯನ್ನು ಯಾಕೆ ಜಾರಿಗೊಳಿಸಲು ಇವರಲ್ಲಿ ಒಬ್ರೂ ಕಾಳಜಿ ತೋರುತ್ತಿಲ್ಲ? ಹೊರನಾಡುಗಳಲ್ಲಿರುವ ಕನ್ನಡಿಗರಿಗೆ, ಅವರ ಸಂಕಷ್ಟದ ಸಮಯದಲ್ಲಿ ಯಾವ ತೆರನಾದ ನೆರವನ್ನು ಇವರು ನೀಡಲು ಮುಂದಾಗಿದ್ದಾರೆ? ಗಡಿನಾಡಿನಲ್ಲಿ ಕನ್ನಡಶಾಲೆಗಳಲ್ಲಿ ಪಠ್ಯವಿಲ್ಲ, ಶಾಲೆ ಮುಚ್ಚಲಾಗುತ್ತಿದೆ ಅನ್ನೋ ಸಂದರ್ಭಗಳೆಲ್ಲಾ ಬಂದಾಗ ಏನು ಮಾಡಿದ್ದವು? ಹೋಗಲಿ... ಇದೇ ನಾಡಿನಲ್ಲಿ ಬರದಿಂದ, ನೆರೆಯಿಂದ ಕಂಗೆಟ್ಟು ವಲಸೆ ಹೋದವರಿಗೆ ಈ ತೆರನಾದ ಭರವಸೆಯನ್ನು ಎಂದಾದರೋ ಸರ್ಕಾರ ಕೊಟ್ಟಿತ್ತೇ?   ಒಟ್ಟಾರೆ ಮನೆಗೆ ಮಾರಿಯಾಗದೇ ಪರರಿಗೆ ಉಪಕಾರಿಯಾಗಿರಬೇಕು ಅನ್ನೋದು ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ಅರ್ಥವಾಗಲ್ವಾ ಗುರೂ!!

ಅಸ್ಸಾಂ: ಸಮಸ್ಯೆಯ ಮೂಲ ಸರಿಯಾಗಿ ಗುರುತಿಸಬೇಡವೇ?

(ಫೋಟೋ ಕೃಪೆ: NDTV ವೀಡಿಯೋ)
ಇಂದು (೧೯.೦೮.೨೦೧೨) ಎನ್‍ಡಿಟಿವಿಯಲ್ಲಿ ಕಾಂಗ್ರೆಸ್ಸಿನ ಮುಖ್ಯಸ್ಥೆಯಾದ ಶ್ರೀಮತಿ ಸೋನಿಯಾಗಾಂಧಿಯವರು ಮಾಡಿದ ಒಂದು ಭಾಷಣದ ವೀಡಿಯೋ ಪ್ರಸಾರವಾಗ್ತಾಯಿದೆ. ಈಶಾನ್ಯ ರಾಜ್ಯಗಳ ಜನರು ದೇಶದ ಬೇರೆ ಬೇರೆ ಭಾಗಗಳಿಂದ ದಿಕ್ಕೆಟ್ಟು ತವರಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರ ಈ ಮಾತುಗಳು ಮಹತ್ವದ್ದಾಗಿವೆ. ಇವರು ಮಾತನ್ನಾಡುತ್ತಾ ಮೊದಲಿಗೆ "ಅಸ್ಸಾಮಿನಲ್ಲಿ ಏನಾಗುತ್ತಿದೆಯೋ ಅದು ಬಹಳ ದುಃಖದ ವಿಷಯ" ಎಂದಿದ್ದಾರೆ. ಅಸ್ಸಾಮಿನಲ್ಲಿ ವಲಸಿಗರ ವಿರುದ್ಧವಾಗಿ ಸ್ಥಳೀಯರು ಬಂಡೆದ್ದು ನಡೆಸಿದ ಗಲಭೆ ಸರಿಯಲ್ಲವೆನ್ನುವುದು ಇವರ ಮಾತಿನ ಅರ್ಥವೇ ಎಂಬ ಗೊಂದಲ ಇದರಿಂದುಂಟಾಗುತ್ತದೆ. ಮಾತನ್ನು ಮುಂದುವರೆಸುತ್ತಾ ಇವರು "ಈ ದೇಶ ಎಲ್ಲಾ ಭಾರತೀಯರದ್ದು, ಇಲ್ಲಿ ಯಾರಿಗೆ ಎಲ್ಲಿಗೆ ಹೋಗಿಬೇಕಾದರೂ ನೆಲೆಸುವ ಸ್ವಾತಂತ್ರ್ಯವಿದೆ" ಎಂದಿದ್ದಾರೆ. ತುಂಬಾ ಸೊಗಸಾಗಿ ಏಕತೆಯ ಮಂತ್ರದಂತೆ ಕೇಳುವ ಈ ಮಾತುಗಳು ನಿಜವಾಗಿಯೂ ಸದ್ಭಾವನೆಯನ್ನು ಮೂಡಿಸಬಲ್ಲುದೇ? ನಿಜಕ್ಕೂ ಮೂಲ ಸಮಸ್ಯೆಯನ್ನು ಇಲ್ಲವಾಗಿಸುವುದೇ? ಎನ್ನಿಸುತ್ತಿದೆ!

ಸಮಸ್ಯೆಯ ಮೂಲ ಎಲ್ಲಿದೆ?

"ಯಾರು ಎಲ್ಲಿಯಾದರೂ ಹೋಗಿ ನೆಲೆಸಬಹುದು" ಎನ್ನುವ ಮಾತನ್ನು ಹಿಡಿದುಕೊಂಡು ಹೋಗಿ ಇದ್ದಕ್ಕಿದ್ದಂತೆ ಕರ್ನಾಟಕದಿಂದ ಒಂದಿಪ್ಪತ್ತು ಲಕ್ಷ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿಬಿಟ್ಟರು ಎಂದುಕೊಳ್ಳೋಣ. ಏನಾಗುತ್ತದೆ ಆಗ? ಗೋವಾದ ಜನಸಂಖ್ಯೆ ಇರೋದೇ ೧೪ ಲಕ್ಷ. ಇಲ್ಲಿಂದ ೨೦ ಲಕ್ಷ ಜನರು ಅಲ್ಲಿಗೆ ವಲಸೆ ಹೋದರೆ ಗೋವಾದ ಜನಲಕ್ಷಣ(Demography)ದ ಕಥೆ ಏನಾಗುತ್ತದೆ? ಗೋವಾದಲ್ಲಿ ಇವತ್ತು ಕೊಂಕಣಿ ಭಾಷೆಯಿದೆ. ನಾಳೆ ಗೋವಾದ ಆಡಳಿತ ಭಾಷೆ ಯಾವುದಾಗುತ್ತದೆ? ಕೊಂಕಣಿಯ ಮೇಲೆ ಏನು ಪರಿಣಾಮವಾಗುತ್ತದೆ? ಗೋವಾದಲ್ಲಿಯೂ ಎಲ್ಲಾ ನಾಡುಗಳಲ್ಲಿರುವಂತೆಯೇ ಯೋಗ್ಯರೂ, ಅಯೋಗ್ಯರೂ, ಓದಿದವರೂ, ಓದದವರೂ, ಸೋಮಾರಿಗಳೂ, ಕೈಲಾಗದವರೂ ಇದ್ದಾರಲ್ಲವೇ? ವಲಸಿಗರಂತೂ ಸಾಮಾನ್ಯವಾಗಿ ಸ್ಥಳೀಯರಿಗಿಂತಾ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವವರಾಗಿರುತ್ತಾರೆ ಎನ್ನುವುದನ್ನಂತೂ ಬಲ್ಲವಷ್ಟೇ? ಅದು ಅಮೇರಿಕೆಯಾದರೂ, ಬೆಂಗಳೂರಾದರೂ ಸಾಮಾನ್ಯವಾಗಿ ಇದು ರೂಢಿಯಲ್ಲಿರುವುದೇ ಆಗಿದೆ. ಹೀಗಿದ್ದಾಗ ವಲಸಿಗರಿಂದ ಗೋವನ್ನರ ಬದುಕು, ಸಂಸ್ಕೃತಿ, ಭಾಷೆಗಳಿಗೆ ಧಕ್ಕೆ ಬರುತ್ತದೋ ಇಲ್ಲವೋ?

ಸಮಸ್ಯೆ ರಾಷ್ಟ್ರೀಯತೆಯ ಮುಸುಕಲ್ಲಿ ಮರೆಯಾದೀತೇ?

ಕಾಂಗ್ರೆಸ್ಸೆಂಬ ರಾಷ್ಟ್ರೀಯ ಪಕ್ಷಕ್ಕೇನೋ ಗೋವನ್ನರೂ ಕನ್ನಡಿಗರೂ ಒಂದೇ ಇರಬಹುದು. ಇಲ್ಲಿಂದ ೨೦ ಲಕ್ಷ ಜನರು ಗೋವಾಕ್ಕೆ ಗುಳೆ ಹೋದರೆ ಏನೂ ಅನ್ನಿಸದೆಯೂ ಇರಬಹುದು. ಆದರೆ ಗೋವನ್ನರಿಗೆ? ವಲಸಿಗರಿಂದ ಗೋವಾದ ಅನನ್ಯತೆಗೆ ಒದಗುವ ಧಕ್ಕೆ ಎಂಥದ್ದು ಎನ್ನುವುದನ್ನು ಯಾರಾದರೂ ಊಹಿಸಬಹುದು. ಇಂತಹ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕಲ್ಲವೇ? ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರಿಗೆ, ಗೋವಾಕ್ಕೆ ನುಗ್ಗಿ ಅಲ್ಲಿನ ಭಾಷೆ, ಸಂಸ್ಕೃತಿ, ಅಲ್ಲಿನವರ ಬದುಕಿಗೆ ಧಕ್ಕೆ ಉಂಟು ಮಾಡುವವರು ಭಾರತೀಯರಾಗಿಬಿಟ್ಟರೆ ಪರ್ವಾಗಿಲ್ಲಾ...ಹಾಗೆ ಮಾಡುವವರು ಬೇರೆ ದೇಶದವರಾಗಿ ಮಾತ್ರಾ ಇರಬಾರದು ಎನ್ನಿಸಬಹುದೇನೋ? ಈ ಸಮಸ್ಯೆಗೆ ಶ್ರೀಮತಿ ಸೋನಿಯಾಗಾಂಧಿಯವರ ಆಶಯದಂತೆ ಪರಿಹಾರವೇನು? ಗೋವನ್ನರು ತಮ್ಮ ನಾಡಿಗೆ ಆಗಿರುವ ಕನ್ನಡಿಗರ ಅನಿಯಂತ್ರಿತ ವಲಸೆ ಬಗ್ಗೆ ದನಿ ಎತ್ತಬಾರದು ಮತ್ತು ಸೌಹಾರ್ದತೆಯಿಂದ ಅವರೊಡನೆ ಬಾಳಬೇಕು ಎನ್ನುವುದೇ? ನಿಜವಾಗಿ ನೋಡಿದರೆ ಈಗ ಯಾವುದರಿಂದಾಗಿ ಈ ಸಮಸ್ಯೆ ಹುಟ್ಟಿಕೊಂಡಿವೆಯೋ ಆ ಮೂಲಕಾರಣವನ್ನೇ ಪರಿಹಾರ ಎಂದು, ಹುಸಿ ರಾಷ್ಟ್ರೀಯತೆಯ ಸಿಹಿಯನ್ನು ಮೇಲೆ ಹಚ್ಚಿ ಶಿಫಾರಸ್ಸು ಮಾಡುತ್ತಿರುವಂತಿದೆ!

ಅಸ್ಸಾಮ್ ಆಗಿರಲೀ, ಗೋವಾ ಆಗಿರಲೀ,  ಕರ್ನಾಟಕವೇ ಆಗಿರಲೀ... ನಿಜವಾದ ಸಮಸ್ಯೆಯ ಮೂಲ ಯಾವುದು ಎನ್ನುವುದನ್ನು ಗುರುತಿಸದೇ ಹೋದಲ್ಲಿ ಸರಿಯಾದ ಪರಿಹಾರ ಸಿಗುವುದಾದರೂ ಸಾಧ್ಯವೇ? ರಾಷ್ಟ್ರೀಯ ಭಾವೈಕ್ಯವೆನ್ನುವ ಮಾತಿನ ಹೊದಿಕೆಯಿಂದ ನಿಜವಾದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಯಾವುದೇ ಒಂದು ಪ್ರದೇಶದ ಅನನ್ಯತೆ, ಭಾಷೆ, ಸಂಸ್ಕೃತಿಗಳಿಗೆ ಧಕ್ಕೆ ತರುವ ಅನಿಯಂತ್ರಿತ ವಲಸೆ ಒಂದು ಸಮಸ್ಯೆಯೇ ಅಲ್ಲವೇ? ನಾಡಿನ ಜನರ ಉದ್ಯೋಗ ಕಸಿದುಕೊಳ್ಳುವ ಅನಿಯಂತ್ರಿತ ವಲಸೆಯೆನ್ನುವ ತಡೆಯಿರದ ಅವಕಾಶವು, ಭಾರತದ ಇಂದಿನ ವ್ಯವಸ್ಥೆಯಲ್ಲಿರುವುದೇ ಇವತ್ತಿನ ಸಮಸ್ಯೆಗೆ ಮೂಲವೆನ್ನಿಸದೇ? ನಿಜಕ್ಕೂ ಅಂತರರಾಜ್ಯ ವಲಸೆಗೆ ಕಡಿವಾಣ ಬೇಕಾಗಿದೆ ಗುರೂ!

ಅಸ್ಸಾಂ: ವಲಸೆ ಅಕ್ರಮವಾದರೂ ಅಷ್ಟೇ! ಸಕ್ರಮವಾದರೂ ಅಷ್ಟೇ!


(ಚಿತ್ರಕೃಪೆ:  http://www.assamspider.com/gallery/328-The-map-Assam-state.aspx)
ಅಸ್ಸಾಮಿನಲ್ಲಿ ಅಲ್ಲೋಲ ಕಲ್ಲೋಲ! ನೆರೆಯ ಬಾಂಗ್ಲಾದಿಂದ ನುಗ್ಗುವ ವಲಸಿಗರು ಅಲ್ಲಿ ತಲೆನೋವಂತೆ! ಇದೀಗ ಅಸ್ಸಾಮಿನಲ್ಲಿ ಜನಾಂಗೀಯ ಘರ್ಷಣೆಗೆ ಕಾರಣವಾಗಿದೆಯಂತೆ! ಅಸ್ಸಾಮಿಗರ ಅದರಲ್ಲೂ ಸ್ಥಳೀಯ ಬೋಡೋಗಳ ಆಕ್ರೋಶ ಹಿಂಸಾಚಾರಕ್ಕೆ ತಿರುಗಿ ಅದು ದೊಡ್ಡ ಪ್ರಮಾಣದ ಹಿಂಸೆ ಪ್ರತಿಹಿಂಸೆಗಳಿಗೆ ಕಾರಣವಾಗಿದೆ. ಇದಕ್ಕೆ ದೇಶದಲ್ಲೆಡೆಯಿಂದ ಪ್ರತಿಕ್ರಿಯೆ... ಅಕ್ರಮ ವಲಸೆ ತಡೆಯಿರಿ ಅಂತಾ ದೇಶದ ಮೂಲೆಮೂಲೆಯಿಂದ ಕೂಗು! ಸಂಸತ್ತಿನಲ್ಲೂ ಪ್ರತಿಧ್ವನಿ!! ಹೀಗೆ ಕೂಗುವವರಿಗೆ ಕಾಣುತ್ತಿರುವುದು ಬಾಂಗ್ಲಾದೇಶವೆಂಬ ಮುಸಲ್ಮಾನರ ದೇಶದ ವಲಸಿಗರು...

ಅಸ್ಸಾಮಿಗಳಿಗೆ ವಲಸಿಗನ ಹಾವಳಿ ಹೊಸದಲ್ಲ!

ಅಸ್ಸಾಮಿಗೆ ವಲಸಿಗ ನುಗ್ಗುತ್ತಿರುವುದು ಇದೇನು ಹೊಸದಲ್ಲ... ಸುಮ್ಮನೆ ಅಸ್ಸಾಮಿನ ಭೂಪಟ ನೋಡಿದರೆ ಬಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳವೆನ್ನುವ ಎರಡೂ ಬಂಗಾಳಿ ಭಾಷಿಕರ ನಾಡುಗಳು ಹೆಚ್ಚುಕಡಿಮೆ ಒಂದೇ ಪ್ರಮಾಣದಲ್ಲಿ ಅಂಟಿಕೊಂಡಿರುವುದು ಕಾಣುತ್ತದೆ. ಅಸ್ಸಾಮಿಗಳ ಮೇಲೆ ಬಾಂಗ್ಲಾ ಮತ್ತು ಪಶ್ಚಿಮ ಬಂಗಾಳ ಎಂದು ಕರೆಯುವ ಬಂಗಾಳಿ ಜನರ ನಾಡುಗಳಿಂದ ಸದಾ ವಲಸೆ, ಸಾಂಸ್ಕೃತಿಕ ದಾಳಿಗಳು ಆಗುತ್ತಲೇ ಇದೆ. ಅಸ್ಸಾಮಿಗಳು "ಪರನಾಡಿನವರು ತಮ್ಮನಾಡಿಗೆ ವಲಸೆ ಬಂದು ತಮ್ಮ ಕೆಲಸ, ಸಂಸ್ಕೃತಿ ಕೆಡಿಸಿ ನಮ್ಮ ಅನ್ನದ ತಟ್ಟೆಗೆ ಕೈಯಿಕ್ಕುತ್ತಿದ್ದಾರೆ" ಎಂಬ ಅಳಲನ್ನು ಹಿಂದೂ ಇಂದೂ ವ್ಯಕ್ತಪಡಿಸುತ್ತಲೇ ಇದ್ದಾರೆ.

ನಮ್ಮನೆ ಸೂಜಿಲಿ ಕಣ್ಣು ಚುಚ್ಚಿದರೆ ಪರ್ವಾಗಿಲ್ವಾ?

ಬಿಹಾರಿಗಳ, ಬೆಂಗಾಲಿಗಳ ಅಸ್ಸಾಮ್ ವಲಸೆಯನ್ನು ರಾಷ್ಟ್ರೀಯ ಭಾವೈಕ್ಯತೆ/ ಭಾರತೀಯನ ಹಕ್ಕು ಎಂದು ಸಮರ್ಥಿಸುವವರು...ಸ್ವಲ್ಪ ಅಸ್ಸಾಮಿಗನ ಕಣ್ಣಿಂದ ಸಮಸ್ಯೆ ನೋಡಿದರೆ ಚೆನ್ನು! ವಲಸೆ ಬರುವವ ಬಾಂಗ್ಲಾದೇಶದವನಾದರೂ, ಪಶ್ಚಿಮ ಬಂಗಾಳದವನಾದರೂ, ಬಿಹಾರದವನಾದರೂ.... ಅಸ್ಸಾಮಿಗಳ ಅಸ್ತಿತ್ವ/ ಅಸ್ಮಿತೆಗೆ ಆಗುವ ಧಕ್ಕೆ ಒಂದೇ! ವಲಸಿಗ ಹಿಂದೂ ಆದರೂ, ಮುಸ್ಲಿಮ್ ಆದರೂ, ಕ್ರೈಸ್ತನಾದರೂ, ಬೌದ್ಧನಾದರೂ... ಅಸ್ಸಾಮಿನ ಸಂಸ್ಕೃತಿಯ ಮೇಲೆ ಅದು ಆಕ್ರಮಣವೇ! ಬಾಂಗ್ಲಾದಿಂದ ಆಗುತ್ತಿರುವ ಅಕ್ರಮ ವಲಸೆಗೆ ಕಡಿವಾಣ ಬೇಕು. ನಿಜಾ... ಆದರೆ ಸಕ್ರಮವಾಗೇ ಆಗುತ್ತಿರುವ ಅಂತರರಾಜ್ಯ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಡವೇ? ಇದು ಬರೀ ಅಸ್ಸಾಮಿಗೆ ಮಾತ್ರಾ ಅನ್ವಯವಾಗೋದಷ್ಟೇ ಅಲ್ಲಾ... ನಮ್ಮ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಅನ್ವಯವಾಗೋದೇ ಅಲ್ವಾ?! ಇಷ್ಟಕ್ಕೂ ಪಕ್ಕದ ಮನೆಯೋರು ಚುಚ್ಚುದ್ರೇ ಮಾತ್ರಾ ನೋವಾಗುತ್ತೆ, ನಮ್ಮನೆಯೋರು ಚುಚ್ಚುದ್ರೆ ಆನಂದವಾಗುತ್ತೇ ಅಂತಾ ಎಲ್ಲಾರ ಉಂಟಾ ಗುರೂ! 

ಸ್ವಾತಂತ್ರ್ಯ ದಿನವೆಂದರೆ ತೋರಿಕೆಯ ಮೇಲ್ಪದರದ ಆಚರಣೆ ಮಾತ್ರಾನೇ?


ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಶಾಲೆಗಳಲ್ಲಿ ಮಕ್ಕಳಿಂದ ಸಂಭ್ರಮದ ಕಾರ್ಯಕ್ರಮ, ಊರೂರುಗಳಲ್ಲಿ ಶಿಸ್ತಿನ ಸರ್ಕಾರಿ ಕಾರ್ಯಕ್ರಮ. ಇಂಥಾ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯವೆಂದರೆ ಆಂಗ್ಲರಿಂದ ಬಿಡುಗಡೆ ಪಡೆದು ಇಂತಿಷ್ಟು ವರ್ಷಗಳಾದವು ಎಂದು ನೆನಪಿಸಿಕೊಳ್ಳುತ್ತಾ... ಹೀಗೆ ಆಂಗ್ಲರನ್ನು ಓಡಿಸಿ ನಮ್ಮನ್ನು ನಾವು ಆಳಿಕೊಳ್ಳುತ್ತಿರುವುದೇ ಪರಮ ಭಾಗ್ಯವೆಂದೂ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಜೀವವನ್ನಾದರೂ ತೆತ್ತೇವು ಎಂಬಂತಹ ಭಾಷಣಗಳು ಕೇಳಿಸುವುದು ಕೂಡಾ ಸಹಜ.

ಸ್ವಾತಂತ್ರ್ಯ ದಿನಾಚರಣೆಯೆಂದರೆ...

ನಮ್ಮ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಕಾರು, ಸ್ಕೂಟರ್, ಬೈಕು, ಆಟೋಗಳ ಮೇಲೆ ದೊಡ್ಡ ದೊಡ್ಡ ಬಾವುಟಗಳನ್ನು ಕಟ್ಟಿಕೊಂಡು ಊರೆಲ್ಲಾ ಸುತ್ತೋದು, ಮೈಕೈ ಮುಖದ ಮೇಲೆಲ್ಲಾ ಮೂರು ಬಣ್ಣಗಳನ್ನು ಬಳಸಿಕೊಳ್ಳೋದು, ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡೋದು, ಸಂಗೀತ ಮನರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸೋದು... ಹೀಗೆ ಜನಸಾಮಾನ್ಯರ ಆಚರಣೆ. ಅದೇ ಸರ್ಕಾರದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಿಂದ ಕೆಂಪುಕೋಟೆ ಮೇಲಿನ ಭಾಷಣ. ಆ ಭಾಷಣಗಳಲ್ಲಿ ಭ್ರಷ್ಟಾಚಾರ ಅಳಿಯಬೇಕು, ಭ್ರಾತೃತ್ವ ಉಳಿಯಬೇಕು, ಸವಾಲುಗಳನ್ನು ಗೆಲ್ಲಬೇಕೆನ್ನುವ ಮಾತುಗಳು ಮಾಮೂಲಿಯಾಗಿವೆ. ಹಾಗಾದರೆ ಇವೆಲ್ಲಾ ಬೇಡ ಅನ್ನೋ ಅನಿಸಿಕೆ ನಮದಲ್ಲ. ಈ ಸಂಭ್ರಮವೆಲ್ಲಾ ಇಷ್ಟಕ್ಕೇ ಮುಗಿದುಹೋಗುವುದನ್ನು ನೋಡ್ತಿದ್ರೆ ಇವೆಲ್ಲಾ ಶಿವನಿಲ್ಲದ ಸೌಂದರ್ಯದ ಹಾಗೆ ಅಂತಾ ಅನ್ನಿಸೋದಿಲ್ವಾ ಗುರೂ!

ಸ್ವಾತಂತ್ರ್ಯಕ್ಕೂ ಬೇಕಿದೆ ಸಾರ್ಥಕತೆ!

ಆಂಗ್ಲರು ಭಾರತ ಬಿಟ್ಟು ಹೋದರು ಅನ್ನೋ ಮಾತನ್ನು "ಆಂಗ್ಲರು ಇದುವರೆಗೂ ನಮ್ಮನ್ನು ಆಳುತ್ತಿದ್ದರು, ಇನ್ಮುಂದೆ ಅವರು ವಾಪಸ್ಸು ಇಂಗ್ಲೇಂಡಿಗೆ ಹೋಗ್ತಾರೆ" ಎನ್ನುವಷ್ಟಕ್ಕೇ ಸೀಮಿತಗೊಂಡಂತೆ ಇಂದಿನ ಸ್ವಾತಂತ್ರ್ಯ ದಿನಾಚರಣೆ! ಜನರಿಗೆ ಸಂಬಂಧಪಟ್ಟ ನಿರ್ಣಯಗಳು ಆದಷ್ಟೂ  ಕೆಳಹಂತದಲ್ಲೇ ಆಗಬೇಕೆನ್ನುವ ವಿಕೇಂದ್ರೀಕರಣ ಜಾರಿಯಾಗದೆ, ಎಲ್ಲದರ ಮೇಲೂ ಕೇಂದ್ರದ ಹಿಡಿತವಿರುವುದು ಸ್ವಾತಂತ್ರ್ಯವೇ? ಅಧಿಕಾರವೆನ್ನುವುದು ಕೆಳಹಂತದಿಂದ ಮೇಲಕ್ಕೆ ಬಿಟ್ಟುಕೊಟ್ಟದ್ದಾಗಿರದೆ, ಕೆಳಗಿನ ಹಂತಕ್ಕೆ ಮೇಲಿನಿಂದ ದಾನ ಕೊಡಲ್ಪಟ್ಟಿದ್ದಾಗುವುದಾದರೆ ಸ್ವಾತಂತ್ರ್ಯವೇ? ಒಂದು ಕಡೆ ಸರ್ಕಾರವೇ ಹೆಚ್ಚಿನ ಜನರು ಬಳಸುವ ಭಾಷೆ ಎನ್ನುವ ಕಾರಣದಿಂದ ಉಳಿದವುಗಳ ಬಗ್ಗೆ ಅಸಹನೆ, ಅಗೌರವ, ದಬ್ಬಾಳಿಕೆಗಳನ್ನು ಜಾರಿಯಲ್ಲಿಡುತ್ತಿರುವುದು ಕಾಣುತ್ತಿದ್ದರೆ ಇನ್ನೊಂದೆಡೆ ಇಂಥದ್ದೇ ಹೆಚ್ಚಿನ ಜನರು ಆಚರಿಸುವ ಧರ್ಮ ಎನ್ನುವ ಹೆಚ್ಚುಗಾರಿಕೆಯ ಕಾರಣದಿಂದ ಉಳಿದವರ ಬಗ್ಗೆ ಅಸಹನೆ, ಅಪನಂಬಿಕೆ, ಅಪಪ್ರಚಾರಗಳನ್ನು ಇದೇ ಮೂರುಬಣ್ಣ ಬಳಿದುಕೊಂಡು ದೇಶಭಕ್ತಿಯ ಗುತ್ತಿಗೆ ತೆಗೆದುಕೊಂಡಂತೆ ಆಡುತ್ತಿರುವವರು ಮಾಡುತ್ತಿರುವುದು ಕಾಣುತ್ತಿದೆ.

ಭಾರತದಲ್ಲಿ ನಿಜವಾದ ಒಪ್ಪುಕೂಟ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಸಮಾಜದಲ್ಲಿ ತನ್ನದಲ್ಲದ ನಂಬಿಕೆ ಹೊಂದಿರುವವರನ್ನು ಅವಹೇಳನ ಮಾಡುವ, ಅಸಹನೆ ತೋರುವ ಪ್ರವೃತ್ತಿಗಳು ನಿಲ್ಲಬೇಕಾಗಿದೆ. ಭ್ರಷ್ಟಾಚಾರದಂತಹ ಪಿಡುಗುಗಳಿಗೆ ಲೋಕ್‌ಪಾಲ್, ಜನಲೋಕ್‌ಪಾಲ್‌ನಂತಹ ಮೇಲುಮೇಲಿನ ಪರಿಹಾರಗಳಾಚೆ ವಿಕೇಂದ್ರೀಕರಣದ, ಪಾರದರ್ಶಕತೆಯ, ಹೊಣೆ ತಪ್ಪಿಸಿಕೊಳ್ಳಲಾರದಂತಹ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಇವೆಲ್ಲಾ ಆಗುವ ನಿಟ್ಟಿನಲ್ಲಿ ಬೇಕಾಗಿರುವ ಜನಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚೆಚ್ಚು ಆಗದೆ ಬರೀ ತೋರಿಕೆಯ ಆಚರಣೆಗಳು ನಡೆಯುತ್ತಿದ್ದಲ್ಲಿ ಸ್ವಾತಂತ್ರ್ಯಕ್ಕೇನು ಸಾರ್ಥಕತೆ ಸಿಕ್ಕೀತು? ಕಪ್ಪುಬಿಳುಪಿನ ಫೋಟೋ ಬಣ್ಣದ್ದಾಗಿದ್ದು ಬಿಟ್ಟರೆ ಬೇರೇನೂ ಬದಲಾಗಲಿಲ್ಲಾ ಅನ್ನಿಸೋಲ್ವಾ ಗುರೂ?!

ಚೆನ್ನಾಗಿ ನಡೆದ "ಹೊತ್ತಗೆ ಬಿಡುಗಡೆ ಕಾರ್ಯಕ್ರಮ"


ಕಳೆದ ಶನಿವಾರ (೦೪.೦೮.೨೦೧೨) ಬೆಳಗ್ಗೆ ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ಬೀದಿಯಲ್ಲಿರುವ "ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್‌ಡ್ ಕಲ್ಚರ್" ಸಂಸ್ಥೆಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಬಳಗದ ಪ್ರಿಯಾಂಕ್ ಕತ್ತಲಗಿರಿ ಸಂಪಾದಿಸಿರುವ ಹೊಸ ಹೊತ್ತಗೆ "ಬೆಳಗಲಿ... ನಾಡ ನಾಳೆಗಳು" ಬಿಡುಗಡೆಯಾಯಿತು.

ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞರೂ, ಸಲಹೆಗಾರರೂ ಆದ ಡಾ. ನಿರಂಜನಾರಾಧ್ಯ, ಕನ್ನಡ ಸಾಹಿತ್ಯ ಪರಿಶತ್ತಿನ ಅಧ್ಯಕ್ಶರಾದ ಶ್ರೀ ಪುಂಡಲೀಕ ಹಾಲಂಬಿ, ಜನಶ್ರೀ ವಾಹಿನಿಯ ಸಂಪಾದಕರಾದ ಶ್ರೀ ಅನಂತ ಚಿನಿವಾರರವರು ಪಾಲ್ಗೊಂಡಿದ್ದರು. ಹೊತ್ತಗೆ ಬಿಡುಗಡೆಯ ನಂತರ ಬಳಗ ಮತ್ತು ಹೊತ್ತಗೆಯ ಕುರಿತಾಗಿ, ಬಂದಿದ್ದ ಅತಿಥಿಗಳು ಮಾತುಗಳನ್ನಾಡಿದರು.

ಈ ಹೊತ್ತಿನಲ್ಲಿ ಡಾ. ನಿರಂಜನಾರಾಧ್ಯರವರು ಶಿಕ್ಶಣ ವ್ಯವಸ್ಥೆಯ ಬಗ್ಗೆ, ಸರ್ಕಾರದ ಹೊಣೆಗಾರಿಕೆಗಳ ಬಗ್ಗೆ ಸೊಗಸಾಗಿ ಮಾತನ್ನಾಡಿದರು. ಶ್ರೀ ಅನಂತ ಚಿನಿವಾರರವರು ಕಲಿಕೆಯ ಮಹತ್ವದ ಬಗ್ಗೆ ಮಹತ್ವದ ಪ್ರಶ್ನೆಗಳನ್ನೆತ್ತಿದರೆ, ಶ್ರೀ ಪುಂಡಲೀಕ ಹಾಲಂಬಿಯವರು ಸಮಾನ ಶಿಕ್ಷಣದ ಅಗತ್ಯದ ಬಗ್ಗೆ ಪ್ರತಿಪಾದಿಸಿದರು. ಬನವಾಸಿ ಬಳಗದ ಆನಂದ್, ಕಡಿಮೆಯೆಂದರೆ ಮುಂದಿನ ಐವತ್ತು ವರ್ಷಗಳಾಚೆಗಿನ ದೂರದೃಶ್ಟಿಯಿಟ್ಟುಕೊಂಡು  ನಮ್ಮ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಅಗತ್ಯದ ಬಗ್ಗೆ ಗಮನ ಸೆಳೆದರು. ಈ ಕಾರ್ಯಕ್ರಮ ಚೆನ್ನಾಗಿ ನಡೆಯಲು ನೇರವಾಗಿ ಮತ್ತು ಬೆನ್ನೆಲುಬಾಗಿ ಪಾಲ್ಗೊಂಡ ಎಲ್ಲರಿಗೂ ನಮ್ಮ ಧನ್ಯವಾದಗಳು!

ಅಣ್ಣಾ ತಂಡ ರಾಜಕಾರಣಕ್ಕೆ: ಇದೇ ಸರಿಯಾದ ಹೆಜ್ಜೆ...

(ಫೋಟೋ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಕಳೆದ ಹತ್ತುದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಅಣ್ಣಾ ಹಜಾರೆ ಮತ್ತು ತಂಡದವರು ಉಪವಾಸ ಕೊನೆಗೊಳಿಸಿದ್ದಾರೆ. ಬಹುಮುಖ್ಯವಾದ ಮಾತೆಂದರೆ, ತಮ್ಮ ಹೋರಾಟದ ರೀತಿಯನ್ನು ಬದಲಿಸಿ ಜನಾಂದೋಲನದ ಜೊತೆಗೆ ರಾಜಕಾರಣದ ಪ್ರವೇಶದ ಬಗ್ಗೆಯೂ ಒಲವು ತೋರಿದ್ದಾರೆ. ಈ ಹೇಳಿಕೆ ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ನೀಡುತ್ತಿದ್ದ ದೇಶದ ಜನರಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆಗೆ ಕಾರಣವಾಗಿದೆ. ಅಣ್ಣಾ ಹಜಾರೆ ತಂಡದ ಮೇಲೆ ಭರವಸೆಯೇ ಕಳೆದುಹೋದಂತೆ, ರಾಜಕಾರಣಕ್ಕೆ ಬಂದು ಇವರೂ ಹಾಳಾಗುತ್ತಾರೆ ಎನ್ನುವ ನಂಬಿಕೆಯಿಂದಾಗಿ ಭ್ರಮನಿರಶನಗೊಂಡ ಜನರೂ ಕಾಣುತ್ತಿದ್ದಾರೆ.

ಈಗಿಟ್ಟಿರೋದೇ ಸರಿಯಾದ ಹೆಜ್ಜೆ!

ಹೌದೂ... ಅಣ್ಣಾ ತಂಡ ಈಗಿಟ್ಟಿರುವುದೇ ಸರಿಯಾದ ಹೆಜ್ಜೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ ಮತ್ತು ಒಳಿತನ್ನು ಹಾರೈಸುತ್ತೇವೆ. ಕಳೆದ ವರ್ಷ ನಡೆದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ನಾವು ಏನ್‌ಗುರುವಿನಲ್ಲಿ ಹೀಗೆ ಬರೆದಿದ್ದೆವು. ಆ ಮಾತು ಇಂದಿಗೂ ಹೊಂದುವ ಮಾತೇ!
ಅಣ್ಣಾ ಹೋರಾಟದ ಬಗ್ಗೆ!
ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?
ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡುಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ! 
ಅಣ್ಣಾ ಹಜಾರೆ ತಂಡಕ್ಕೆ ಭಾರತದ ವ್ಯವಸ್ಥೆಗಳನ್ನು ಸರಿಮಾಡಬೇಕೆಂಬ ಹುಮ್ಮಸ್ಸು/ ಕಾಳಜಿ ಇರುವುದನ್ನೂ ಮತ್ತು ಇಡೀ ತಂಡದ ಸದಸ್ಯರುಗಳು ಪ್ರಾಮಾಣಿಕರಾಗಿದ್ದಾರೆ ಎನ್ನುವುದನ್ನೂ ಒಪ್ಪುವುದಾದಲ್ಲಿ, ಇವರು ಶುರುಮಾಡುವ ರಾಜಕೀಯ ಪಕ್ಷವೂ ವಿಭಿನ್ನವಾಗಿರುತ್ತದೆ ಎನ್ನುವುದನ್ನೂ ಒಪ್ಪಬಹುದು. ಆದರೆ ಈ ರಾಜಕೀಯ ಪಕ್ಷವು ನಿಜಕ್ಕೂ ನಾಡಿಗೆ ಒಳಿತು ಮಾಡುತ್ತದೆಯೋ ಅಥವಾ ಇರುವ ಮೂರು ಮತ್ತೊಂದರಲ್ಲಿ ಒಂದಾಗಿ ಸೇರಿಬಿಡುತ್ತದೆಯೋ ಎನ್ನುವುದು ಗೊತ್ತಾಗಬೇಕೆಂದರೆ ಹಲವಾರು ವಿಷಯಗಳ ಬಗ್ಗೆ ಈ ಪಕ್ಷ ಯಾವ ನಿಲುವು ಹೊಂದಿರುತ್ತದೆ ಎನ್ನುವುದು ಮುಖ್ಯ.

ಉಳಿದವಕ್ಕಿಂತ ಭಿನ್ನ?

ಇವರ ಉದ್ದೇಶಿತ ರಾಜಕೀಯ ಪಕ್ಷವು ಭಾರತದ ಸ್ವರೂಪದ ಬಗ್ಗೆ ಎಂತಹ ನಿಲುವು ಹೊಂದಿದೆ? ಇಲ್ಲಿನ ಅನನ್ಯತೆ, ವೈವಿಧ್ಯತೆಗಳನ್ನು ಗೌರವಿಸಿ ಪೊರೆಯಲು ಮುಂದಾಗುವುದೇ? ಭಾರತವನ್ನು ಒಂದು ಒಕ್ಕೂಟವೆಂದು ಪರಿಗಣಿಸಿ ರಾಜ್ಯಗಳ ಹಕ್ಕುಗಳಿಗೆ ಮಾನ್ಯತೆ ನೀಡುವುದೇ? ಇದು ಅಧಿಕಾರ ವಿಕೇಂದ್ರೀಕರಣದ ಪರವೋ ಅಥವಾ ಇರುವ ಅಧಿಕಾರವೆಲ್ಲಾ ಕೇಂದ್ರದ ಕೈಲಿರುವುದರ ಪರವಾಗಿ ಇರುತ್ತದೋ? ಭಾರತದಲ್ಲಿ ಸರ್ಕಾರವೇ ಮುಂದೆ ನಿಂತು ನಡೆಸುತ್ತಿರುವ ಹಿಂದೀ ಹೇರಿಕೆಯ  ಪರವೋ ಇಲ್ಲಾ ವಿರುದ್ಧವೋ?... ಇವಲ್ಲಾ ವಿಷಯಗಳಲ್ಲಿ ಅಣ್ಣಾ ಹಜ಼ಾರೆ ತಂಡ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ ಎನ್ನುವುದು, ಇವರ ಪಕ್ಷ ಉಳಿದವುಗಳಿಗಿಂತಲೂ ಭಿನ್ನವೋ ಇಲ್ಲವೋ ಎನ್ನುವುದನ್ನು ತೀರ್ಮಾನಿಸುತ್ತದೆ. ಅಣ್ಣಾ ಹಜಾರೆಯವರ ಪಕ್ಷ ಭಿನ್ನವಾಗಿರಲಿ ಎಂಬುದೇ ನಮ್ಮ ಆಶಯ. ಇವರಿಗೆ ಒಳ್ಳೆಯದಾಗಲಿ.
Related Posts with Thumbnails