(ಫೋಟೋ: ವಿಜಯ ಕರ್ನಾಟಕದ ಮುಖಪುಟ) |
ಕರ್ನಾಟಕದ ಅತಿಯಾಗಿ ಹಿಂದುಳಿದಿರುವ ಆರು ಜಿಲ್ಲೆಗಳನ್ನು ಒಳಗೊಂಡ ಭಾಗ ಹೈದರಾಬಾದ್ ಕರ್ನಾಟಕ. ಇದರಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಮತ್ತು ಬೀದರ್ ಸೇರಿವೆ. ಈ ಭಾಗ ಐತಿಹಾಸಿಕವಾಗಿ ಹೈದರಾಬಾದಿನ ನಿಜಾಮರ ಆಳ್ವಿಕೆಗೆ ಸೇರಿದ್ದ ಭಾಗವಾಗಿತ್ತು. ಇದು ತೀರಾ ಹಿಂದುಳಿದಿದೆ, ಹಾಗಾಗಿ ಇದಕ್ಕೆ ಸಂವಿಧಾನದ ವಿಶೇಷ ವಿಧಿಯನ್ನು ರೂಪಿಸಿ ಅದರನ್ವಯ ಏಳಿಗೆಗೆ ಗಮನ ನೀಡಬೇಕೆಂಬ ಕೂಗು ಐವತ್ತು ವರ್ಷಗಳಿಂದಲೂ ಕೇಳಿಬರುತ್ತಿದ್ದು ಇದೀಗ ಭಾರತದ ಸಂಸತ್ತು ಸಂವಿಧಾನದ ೩೭೧ನೇ ಜೆ ವಿಧಿಗೆ ಒಪ್ಪಿಗೆ ನೀಡಿದೆ. ಇಡೀ ನಾಡು ಮತ್ತು ಮಾಧ್ಯಮಗಳು ಇದನ್ನು ದೊಡ್ಡ ಸಾಧನೆಯಾಗಿ ಸಂಭ್ರಮವಾಗಿ ಆಚರಿಸುತ್ತಿದೆ. ಇರಲಿ, ಹೈದರಾಬಾದ್ ಕರ್ನಾಟಕ ಏಳಿಗೆ ಹೊಂದಲಿ ಎಂಬುದೇ ನಮ್ಮದೂ ಹಾರೈಕೆ.
ಜೆ - ಒಕ್ಕೂಟ ಸ್ವರೂಪದ ವಿಡಂಬನೆ!
ಈ ವಿಧಿಯನ್ನು ಜಾರಿಗೊಳಿಸಲು ಮುಂದಾದಾಗ ಇದರ ಸ್ವರೂಪದ ಬಗ್ಗೆ ರಾಜ್ಯಸರ್ಕಾರ ಒಂದು ತಕರಾರನ್ನು ಎತ್ತಿತ್ತು. ಬಿಜೆಪಿ ಮತ್ತು ಜೆಡಿಎಸ್, ಎರಡೂ ಪಕ್ಷಗಳು ಎತ್ತಿದ್ದ ‘ಸದರಿ ವಿಧಿಯಲ್ಲಿ ಕೇಂದ್ರಸರ್ಕಾರ ರಾಜ್ಯಪಾಲರ ಮೂಲಕ ಹೊಂದಲು ಮುಂದಾಗಿರುವ ಹಿಡಿತ ಸರಿಯಲ್ಲ’ ಎನ್ನುವ ತಕರಾರು ನಿಜಕ್ಕೂ ಸರಿಯಾಗಿಯೇ ಇತ್ತು. ಏಕೆಂದರೆ ಇದು, ಈ ಭಾಗದ ಎಲ್ಲಾ ಯೋಜನೆಗಳು ಇನ್ಮುಂದೆ ರಾಜ್ಯಪಾಲರ ಮೂಲಕ ಜಾರಿಯಾಗಲು ಅನುವು ಮಾಡಿಕೊಡುತ್ತದೆ. ಇದು ದೇಶವು ಒಕ್ಕೂಟ ವ್ಯವಸ್ಥೆಯತ್ತ ಸಾಗುವ ಬದಲಿಗೆ ವಿರುದ್ಧ ದಿಕ್ಕಿಗೆ ಸಾಗುತ್ತಿರುವಂತಿದೆ.
ಪಾಪಾ! ಎರಡೂ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಹೇಳಿಕೊಳ್ಳಲಿಕ್ಕೂ ಬಿಡದೆ ಇವರು ಹೈ-ಕ ವಿರೋಧಿಗಳು ಎನ್ನುವಂತೆ ಕಾಂಗ್ರೆಸ್ ಯಶಸ್ವಿಯಾಗಿ ಬಿಂಬಿಸಿದ್ದೂ, ಹತ್ತಿರದಲ್ಲೇ ಇರುವ ಮುಂದಿನ ಚುನಾವಣೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರೀತು ಎನ್ನುವ ದಿಗಿಲಿನಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ತೆಪ್ಪಗಾಗಿದ್ದೂ ನಡೆಯಿತು. ವಾಸ್ತವವಾಗಿ ಒಕ್ಕೂಟದ ಪರವಾಗಿ ದನಿಯೆತ್ತಿದ್ದ ಈ ಎರಡೂ ಪಕ್ಷಗಳು ಸರಿಯಾದ ನಿಲುವನ್ನೇ ಹೇಳಿದ್ದವು!
ಪ್ರಜಾಪ್ರಭುತ್ವ ಎಂದರೇನೇ ನಮ್ಮನ್ನು ನಾವು ಆಳಿಕೊಳ್ಳುವುದು, ಅದರ ಆಶಯಕ್ಕೆ ಬೆಂಬಲವಾಗಿರುವುದು ಅಧಿಕಾರ ವಿಕೇಂದ್ರೀಕರಣ. ಇದೀಗ ಅಂತಹ ವಿಕೇಂದ್ರೀಕರಣವನ್ನು ವಿಡಂಬನೆ ಮಾಡುವಂತೆ ಈ ವಿಧಿಯಲ್ಲಿ ರಾಜ್ಯಪಾಲರಿಗೆ, ಆ ಮೂಲಕ ಕೇಂದ್ರಸರ್ಕಾರಕ್ಕೆ ಅಧಿಕಾರ ಒಪ್ಪಿಸಿದಂತಾಗಿದೆ. ನಾವು ಅನುದಾನ ನೀಡುತ್ತೇವೆ ಮತ್ತು ನಾವೇ ಅದನ್ನು ಯೋಜನೆಗಳಾಗಿ ಜಾರಿಗೊಳಿಸುತ್ತೇವೆ ಎನ್ನುವುದು ಕೇಂದ್ರಕ್ಕೆ ರಾಜ್ಯಸರ್ಕಾರದ ಮೇಲೆ ನಂಬಿಕೆ ಇಲ್ಲದಂತೆಯೂ, ತಾನೇನೋ ಅನುದಾನವನ್ನು ತನ್ನ ಪಾಕೇಟಿನಿಂದ ಕೊಡುತ್ತಿರುವ ಮನಸ್ಥಿತಿಯಂತೆಯೂ ಕಾಣುತ್ತದೆ. ಒಟ್ಟಾರೆಯಾಗಿ ಯೋಜನೆಯ ಅನುಶ್ಟಾನದ ಅಧಿಕಾರಗಳು ರಾಜ್ಯಸರ್ಕಾರದ ಬಳಿಯೇ ಇರಬೇಕಾಗಿತ್ತು! ಹೌದಲ್ವಾ ಗುರೂ!?