ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ! ನಿಮ್ಮ ದನಿಯೂ ಜೊತೆಯಾಗಲಿ...


ಒಂದು ನಾಡಿನ ವ್ಯವಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಪ್ರಮುಖವಾದವುಗಳೆಂದರೆ, ಆ ನೆಲದ ಜನರಿಗೆ ಕಲಿಕೆಯ ಹಾಗೂ ದುಡಿಮೆಯ ಅವಕಾಶಗಳನ್ನು ಒದಗಿಸಿಕೊಡುವುದು. ಈ ದಿಕ್ಕಿನಲ್ಲಿ ನಾಡಿನ ಉದ್ದಿಮೆಗಳು, ಸರ್ಕಾರಿ, ಖಾಸಗಿ ಕಚೇರಿಗಳು ಮೊದಲಾದ ಎಲ್ಲೆಡೆ ಆ ನಾಡಿನ ಜನರಿಗೆ ದುಡಿಮೆ ಒದಗಿಸಿಕೊಡುವುದು, ಬಹು ಮುಖ್ಯವಾಗಿದೆ. ನಮ್ಮ ಕರ್ನಾಟಕದಲ್ಲಿ ಸ್ವಾತಂತ್ರ್ಯಾ ನಂತರ ಆರಂಭವಾದ ಅನೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕರ್ನಾಟಕದವರಲ್ಲದವರಿಗೆ ಹೆಚ್ಚಿನ ಅವಕಾಶ ದೊರೆಯುತ್ತಿದೆ ಮತ್ತು ಕನ್ನಡಿಗರ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ತೀವ್ರವಾದ ಕಳಕಳಿಗಳು ಹುಟ್ಟಿಕೊಂಡು... ಇವೆಲ್ಲಾ ಕನ್ನಡಿಗರಿಗೆ ನ್ಯಾಯ ಒದಗಬೇಕೆನ್ನುವ ಕೂಗಾಗಿ ತಿರುಗಿದವು. ಕರ್ನಾಟಕ ರಾಜ್ಯಸರ್ಕಾರವು ಈ ಹಿನ್ನೆಲೆಯಲ್ಲಿ ೧೯೮೩ರಲ್ಲಿ ನೇಮಿಸಿದ ಆಯೋಗ "ಡಾ. ಸರೋಜಿನಿ ಮಹಿಷಿ ಸಮಿತಿ".

ಡಾ ಸರೋಜಿನಿ ಮಹಿಷಿ ವರದಿ

ಈ ಸಮಿತಿಯು ಆಳವಾಗಿ ಅಧ್ಯಯನ ಮಾಡಿ, ಸರ್ಕಾರಕ್ಕೆ ೧೯೮೬ರಲ್ಲೇ ತನ್ನ ವರದಿಯನ್ನು ಸಲ್ಲಿಸಿತು. ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಶಿಫಾರಸ್ಸನ್ನು ಮಾಡಲಾಗಿತ್ತು. ಇದೀಗ ವರದಿ ಸಲ್ಲಿಕೆಯಾಗಿ ೨೬ ವರ್ಷಗಳೇ ಆಗಿಹೋದರೂ, ಅದ್ಯಾಕೋ ಏನೋ ನಮ್ಮ ಸರ್ಕಾರಗಳು ಇಂದಿಗೂ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಮುಂದಡಿಯಿಟ್ಟಿಲ್ಲ! 

ಈ ಸಂದರ್ಭದಲ್ಲಿ ಸರೋಜಿನಿ ಮಹಿಷಿ ವರದಿಯ ಜಾರಿ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಹಲವಾರು ಸಂಘಟನೆಗಳು ದನಿ ಎತ್ತಿವೆ. ಇದೀಗ ಈ ದನಿಗಳಿಗೆ ಮತ್ತೊಂದು ಹೊಸ ಕೊರಳಾಗಿರುವವರು ಶ್ರೀಮತಿ ವಿನುತಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಇವರು ನಡೆಸುತ್ತಿರುವ ನಾನಾ ಸ್ತರದ ಹೋರಾಟಗಳು ನಿಜಕ್ಕೂ ಸ್ಪೂರ್ತಿದಾಯಕ. ಈ ವರದಿ ಜಾರಿಗಾಗಿ ಇವರು ವಿಧಾನಸೌಧದ ಬಾಗಿಲಿಗೆ ಸಾಕಷ್ಟು ಎಡೆತಾಕಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದೀಗ ಜನರ ದನಿಯನ್ನು ಒಗ್ಗೂಡಿಸಲು ಒಂದು ಚಿಕ್ಕೋಲೆ (SMS) ಚಳವಳಿಯನ್ನು ಹುಟ್ಟುಹಾಕಿದ್ದಾರೆ. 

ಇಲ್ಲಿಗೆ ಚಿಕ್ಕೋಲೆ (SMS) ಕಳಿಸಿ ಈ ಹೋರಾಟವನ್ನು ಬೆಂಬಲಿಸಿ:  92430 00111

ಇಷ್ಟೇ ಅಲ್ಲದೇ, ಇದೀಗ ಮಿಂಬಲೆತಾಣದಲ್ಲಿ ಒಂದು ಹಕ್ಕೊತ್ತಾಯ ಮನವಿಯನ್ನು ಕೂಡಾ ಸಿದ್ಧಪಡಿಸಿದ್ದಾರೆ. ಮಿಂಬಲೆಯ ಈ ತಾಣದ ಕೊಂಡಿ ಇಲ್ಲಿದೆ: ಸರೋಜಿನಿ ಮಹಿಷಿ ವರದಿ ಜಾರಿಗೆ ಹಕ್ಕೊತ್ತಾಯ.

ನಾವೂ ಈ ಹೋರಾಟದಲ್ಲಿ ಪಾಲ್ಗೊಳ್ಳೋಣ. ಈ ಸಂಖ್ಯೆಗೆ ಚಿಕ್ಕೋಲೆ ಕಳಿಸುವ ಮೂಲಕವೂ, ಹಕ್ಕೊತ್ತಾಯಕ್ಕೆ ಸಹಿ ಹಾಕುವ ಮೂಲಕವೂ ನಮ್ಮ ಕೈಜೋಡಿಸೋಣ.

10 ಅನಿಸಿಕೆಗಳು:

ಸಂವಿಧಾನಾಸ್ತ್ರ ಅಂತಾರೆ...

ಇವೊತ್ತು ೨೦೧೨-ಜನವರಿ-೧೧ರ ವಿಜಯಕರ್ನಾಟಕದಲ್ಲಿ ಬಂದಿರುವಂತೆ..

ಸರೋಜಿನಿ-ಮಹಿಷಿ-ವರದಿಯಲ್ಲಿ ಹೇಳಿರುವ ಸಲಹೆಗಳು ಸಂವಿಧಾನವಿರುದ್ಧ.

ಆಯ್ತಾ!

ಆನಂದ್ ಅಂತಾರೆ...

ಮಾನ್ಯ ಸಂವಿಧಾನಾಸ್ತ್ರ ಅವರೇ,

ಭಾರತೀಯ ಸಂವಿಧಾನಕ್ಕೆ ಇದುವರೆಗೆ 104 ತಿದ್ದುಪಡಿಗಳಾಗಿವೆ! ಸಂವಿಧಾನ ಕೂಡಾ ಮನುಶ್ಯರೇ ಮಾಡಿರುವುದರಿಂದ ಅದರಲ್ಲೂ ತಪ್ಪುಗಳು ಸಹಜ! ಸಂವಿಧಾನದಲ್ಲಿ ಹೇಳಿದ್ದು ಸರಿಯಿಲ್ಲದಿದ್ದರೆ ತಿದ್ದುಪಡಿ ಮಾಡುವ ಅವಕಾಶ ಇದ್ದೇ ಇದೆ!

ಸಂವಿಧಾನಾಸ್ತ್ರ ಅಂತಾರೆ...

ತಿದ್ದುಪಡಿಗಳು ಆಗಿವೆ. ಸಂತೋಷ.

ಆದರೆ, ಈ ತಿದ್ದುಪಡಿ ಆಗಲ್ಲ. ನಮ್ಮ ದೇಶದಲ್ಲಿ ಭಾಷಾಧಾರಿತ ತಾರತಮ್ಯ ಅಪರಾಧ ಹಾಗು ಅದು ಅಮಾನವೀಯ.

ಹೀಗೆ ಸಕಲ ರಾಜ್ಯಗಳೂ ಕೇವಲ ಆ ಭಾಷಿಕರಿಗೆ ಮಾತ್ರ ಕೆಲಸ ಅಂತ ಮಾಡಿದರೆ, ನಷ್ಟ ಕನ್ನಡಿಗರಿಗೆ.

ಇನ್ನೂ ಈ ವರದಿಯಲ್ಲಿ ಕೆಲ-ಕೆಳ-ಶ್ರೇಣಿಯ ಉದ್ಯೋಗದಲ್ಲಿ ೧೦೦% ಕನ್ನಡಿಗರು ಇರಬೇಕು ಅಂದರೆ ಅದಕ್ಕೆ ತಕ್ಕ ಹಾಗು ಬೇಕಾದಷ್ಟು ಕನ್ನಡಿಗರು ಇಲ್ಲವಲ್ಲ.

ಇವೆಲ್ಲಕ್ಕಿಂತ ಕನ್ನಡಿಗರು ಉದ್ಧಾರ ಆಗಬೇಕು ಅಂದರೆ.... ಅವರಿಗೆ ಜಗತ್ತಿನಲ್ಲಿ ಅತಿಹೆಚ್ಚು ಸಂಬಳಗಳು ಬರುವ ಉದ್ಯೋಗಗಳನ್ನು ಪ್ರಾಪ್ತಿಸಿಕೊಳಲನುಕೂಲವಾದ ವಿದ್ಯೆಗಳು ಸಿಗುವುದು ಸುಲಭ ಹಾಗು ಅಲ್ಪವೆಚ್ಚದ್ದಾಗಬೇಕು.

ಇವೊತ್ತು ಅಂತಹ ವಿದ್ಯೆಗಳಲ್ಲಿ ಇಂಗ್ಲಿಶ್ ಭಾಷೆ ಒಂದು ಪ್ರಮುಖ ವಿದ್ಯೆ.

ಮನುಷ್ಯನಿಗೆ ಮೀನು ಹಿಡಿಯುವುದನ್ನು ಹೇಳಿಕೊಟ್ಟರೆ, ಅವನು ಜಗತ್ತಿನ ಯಾವ ಜಲಾಯಶದಲ್ಲೂ ಮೀನು-ಹಿಡಿಯಬಲ್ಲ. ಅದನ್ನು ಬಿಟ್ಟು, ಇರುವ ಒಂದು ಬತ್ತಿಹೋದ ಕೆರೆಯಲ್ಲಿರುವ ಸತ್ತ ಮೀನುಗಳನ್ನು ಒಬ್ಬ 'ದೊಣ್ಣೆನಾಯಕ'(ಇಲ್ಲಿ ಸರಕಾರ) ಹಂಚುತ್ತಾನೆ ಹಾಗು ಆ ವ್ಯವಸ್ಥೆಯೇ ಸರಿ ಹಾಗು ಶ್ರೇಷ್ಠ ಅನ್ನೋದು ದಡ್ಡತನ.

ಬರುವ ವಲಸಿಗರನ್ನು ಬಳಸಿ ಕನ್ನಡಿಗರು ಅವರಿಗಿಂತ ಸಿರಿವಂತರು ಬಲವಂತರು ಹಾಗು ಪ್ರಭಾವಶಾಲಿಗಳು ಆಗಬಹುದು. ಮಹಾರಾಷ್ಟ್ರ, ಗುಜರಾತ, ಪಂಜಾಬ್, ತಮಿಳ್ನಾಡು ಹಾಗು ಕೇರಳ ಇದ್ದನ್ನು ಆಗಲೇ ಮಾಡುತ್ತಿವೆ.

ಆನಂದ್ ಅಂತಾರೆ...

ತಿದ್ದುಪಡಿ ಆಗಲ್ಲಾ.. ಎನ್ನುವುದು ನಿಮ್ಮ ಅಭಿಪ್ರಾಯ. ಆಗಬೇಕು ಎನ್ನುವುದು ನಮ್ಮ ಆಶಯ ಮತ್ತು ಪ್ರಯತ್ನ. ಭಾಷಾಧಾರಿತ ತಾರತಮ್ಯ ಎಂದರೆ ಏನು? ನಮ್ಮ ನೆಲದ ಉದ್ದಿಮೆಗಳಲ್ಲಿ ನಮ್ಮ ಜನರಿಗೆ ಕೆಲಸ ಕೊಡಿ ಎನ್ನುವುದೇ? ಇಷ್ಟಕ್ಕೂ ಸರೋಜಿನಿ ಮಹಿಷಿ ವರದಿ ಇವತ್ತಿಗ್ಫ಼ೇನೂ ಸಂಪೂರ್ಣ ಹೊಂದುವಂತಿಲ್ಲಾ! ಅದನ್ನು ಮರುಪರಿಶೀಲಿಸಿ ಮರು ರೂಪಿಸಬೇಕಾಗಿದೆ. ನೀವೆನ್ನುವಂತೆ ವಲಸಿಗರನ್ನು ಬಳಸಿಕೊಳ್ಳುವ ಬಗ್ಗೆ ನನ್ನದೂ ಸಹಮತವಿದೆ. ನಾವಂತೂ ಸಾರಾಸಗಟು ವಲಸೆ ವಿರೋಧಿಗಳಲ್ಲಾ. ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕು ಎನ್ನುವುದು ನಮ್ಮ ನಿಲುವು. ಇಷ್ಟಕ್ಕೂ ಸರಕಾರ ನಮಗೆಲ್ಲಾ ಕೆಲಸ ಹಂಚಲಿ ಎನ್ನುತ್ತಿಲ್ಲಾ! ಸರ್ಕಾರ ನಮ್ಮ ನೆಲದಲ್ಲಿ ಉದ್ದಿಮೆಗಳಿಗೆ ಸವಲತ್ತು ಪುಗಸಟ್ಟೆ ನೀರು ನೆಲ ವಿದ್ಯುತ್ ಕೊಡುವಾಗ ಈ ನೆಲದ ಜನರಿಗೆ ಉದ್ಯೋಗ ಕೊಡಿರೆಂದು ಕಟ್ಟಲೆ ಮಾಡಬೇಕು. ಇದು ಸಂವಿಧಾನದ ಪ್ರಕಾರ ಆಗುವುದಿಲ್ಲಾ ಎನ್ನುವುದಾದರೆ ಅಂಥಾ ಸಂವಿಧಾನವನ್ನು ಬದಲಿಸಬೇಕು ಎನ್ನುತ್ತಿದ್ದೇವೆ... ಅಷ್ಟೆ!

ಸಂವಿಧಾನಾಸ್ತ್ರ ಅಂತಾರೆ...

ನೋಡಿ.. ನಿಮ್ಮ ಉದ್ದೇಶ ಸಾಧುವಾಗಿದ್ದಾರೂ, ಅದರ ಸಾಧನಮಾರ್ಗ ಹಾಗು ಕ್ರಮ ಭಾರತಿಯಾತೆ, ಅಖಂಡಭಾರತರಾಷ್ಟ್ರ, ಸಕಳಭಾರತವಾಸಿಗಳೂ ಸರ್ವತ್ರ ಭಾರತದಲ್ಲಿ ಮಾನ್ಯರು ಎಂಬ ಸಾಂವಿಧಾನಿಕ ತಳಹದಿಗೆ ವಿಪರೀತವಾಗಿದೆ. ನೀವು ಮಂಡಿಸುವ ಮಾರ್ಗ ಭೌಗೋಳಿಕ-ವಿಭಜನೆಯಲ್ಲದಿದ್ದರೂ ಅದೂ ಪ್ರಜತ್ವದಲ್ಲಿ ಹಾಗು ಜನಾಂಗ/ಪ್ರಾದೇಶಿಕತೆಯಲ್ಲಿ ಪ್ರತ್ಯೇಕತೆ. ಇಲ್ಲಿ ಪ್ರಶ್ನೆ ಸಾವಿರಾರು ವರ್ಷಗಳು ಕನ್ನಡ ಜನಾಂಗಿಯರು/ಬುಡುಕಟ್ಟುನವರು ೧೯೪೭ ನಂತರ ಸೇರಿಕೊಂಡ 'ಭಾರತೀಯತೆ'ಯಲ್ಲಿ ಇರಬೇಕೋ ಇಲ್ಲವೋ ಎಂದಾಗುವುದು.

ಕೆಲವು ದೇಶಗಳಲ್ಲಿ ಇರುವ ಕೆಲವು ಕಾನೂನುಗಳು ನಮಗೆ ಮಾದರಿಯಾಗಬಹುದು.
೧. ಕನ್ನಡದೇಶದಲ್ಲಿ ಸರ್ವ ಸರಕಾರೀ ಸಂಪರ್ಕ, ಸೌಕರ್ಯ ಹಾಗು ಆಡಳಿತ ಕನ್ನಡದಲ್ಲಿ ಮಾತ್ರ ಇರಬೇಕು. ಬೆಂಗಳೂರು ಸಿಟಿ-ಬಸ್ ಇಂದ ಮಂಡ್ಯದ ನೀರಿನ ರಸೀದಿ ತನಕ.
೨. ಕನ್ನಡದೇಶದಲ್ಲಿ ಸಾರ್ವಜನಿಕರೊಂದಿಗೆ ವ್ಯವಹಾರ ನಡೆಸುವ ಯಾವುದೇ ಸಂಸ್ತೆ ಕನ್ನಡಲ್ಲಿ ವ್ಯವಾಹರಿಸಲೇಬೇಕು. ಕನ್ನಡದಲ್ಲಿ ವ್ಯವಹಾರ ಇದ್ದಾರೆ ಮಾತ್ರ ಅನ್ಯಭಾಷೆಯಲ್ಲಿ ವ್ಯವಹರಿಸಬಹುದು.

ಇಷ್ಟು ಮಾಡಿದರೆ ಸಾಕು. ಕರ್ಣಾಟಕ ಬ್ಯಾಂಕ್ ಒಂದನ್ನು ಬಿದ್ದು ಯಾವ ಬ್ಯಾಂಕು ಯಾಕೆ ಕನ್ನಡದಲ್ಲಿ ವೆಬ್-ಸೈಟ್ ಮಾಡಿಲಲ್ಲ ಯಾಕೆ?!

ನ್ಯಾಯಾಲಯಲ್ಲಿ ನಿಲ್ಲದ, ಸಂವಿಧಾನಕ್ಕೆ ವಿಪರೀತವಾದ ದಾರಿಗಳಿಗಿಂತ ಸಂವಿಧಾನದೊಳಗೆ ಸಾಧಿಸಬಹುದಾದ ಸಾವಿರ ದಾರಿಗಳಿವೆ.!


ಆನಂದ್ ಅಂತಾರೆ...

ನಮಸ್ಕಾರ ಸಂವಿಧಾನಾಸ್ತ್ರ ಅವರೇ,
ನೀವೆನ್ನುವಂತೆ ಇರುವ ಸಾವಿರಾರು ದಾರಿಗಳನ್ನೆಲ್ಲಾ ಬಳಸುವ ಬಗ್ಗೆ ಯಾವ ತಕರಾರೂ ಇಲ್ಲಾ! ಆದರೆ ಹೀಗೆ ದಾರಿಗಳನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆಗೆ ನಮ್ಮನ್ನು ತಳ್ಳಿರುವುದು ಯಾವುದು ಎಂದು ನೋಡಿದಾಗ ಸಂವಿಧಾನದಲ್ಲಿರುವ ಹುಳುಕುಗಳು ಕಾಣುತ್ತವೆ. ಇವು ಬದಲಾಗುವುದು ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತವೆ.
ನೀವು ಹೇಳಿದಂತೆ ನಾಳೆ ಕರ್ನಾಟಕದಲ್ಲಿ ಕನ್ನಡದಲ್ಲೇ ಸೇವೆ ಕೊಡಬೇಕು ಎಂದು ಮಾಡಿದರೆ ಅದನ್ನೂ ಕೂಡಾ ನಮ್ಮ ಸಂವಿಧಾನ/ ನ್ಯಾಯಾಲಯ ಒಪ್ಪದಿರಬಹುದು! ಏಕೆಂದರೆ ಕನ್ನಡನಾಡಿಗೆ ವಲಸೆಬಂದ ಭಾರತೀಯನಿಗೆ ಇಲ್ಲಿನ ಸವಲತ್ತುಗಳು ಕನ್ನಡದಲ್ಲಿ ಮಾತ್ರಾ ಇದ್ದರೆ ಅವನ ಸರ್ವತ್ರ ಮಾನ್ಯತೆಗೆ ಧಕ್ಕೆ ಆಗುತ್ತಿದೆ ಎನ್ನಬಹುದಲ್ಲವೇ? ಇಂದಿನ ಸಂವಿಧಾನದ ಹುಳುಕಿನ ಕಾರಣದಿಂದಲೇ ನಮ್ಮೂರಿನ ಬ್ಯಾಂಕುಗಳು, ಸರ್ಕಾರಿ ಉದ್ದಿಮೆಗಳು, ಕೇಂದ್ರಸರ್ಕಾರಿ ಕಚೇರಿಗಳಲ್ಲಿ "ಕನ್ನಡ ಇಲ್ಲದಿದ್ದರೂ ನಡೆದೀತು! ಹಿಂದೀ ಇರಲೇ ಬೇಕು" ಎನ್ನುವ ಅನ್ಯಾಯದ ನಿಯಮ ಇರುವುದು. ಆದರೆ ಭಾರತದ ನ್ಯಾಯಾಲಯದ ಪ್ರಕಾರ ಇದು ಕಾನೂನುಬದ್ಧವಾದ ಸಂವಿಧಾನಾತ್ಮಕವಾದ ನಿಲುವು!!
ನಂಬುಗೆಯ
ಆನಂದ್

ಸಂವಿಧಾನಾಸ್ತ್ರ ಅಂತಾರೆ...

"ನೀವು ಹೇಳಿದಂತೆ ನಾಳೆ ಕರ್ನಾಟಕದಲ್ಲಿ ಕನ್ನಡದಲ್ಲೇ ಸೇವೆ ಕೊಡಬೇಕು ಎಂದು ಮಾಡಿದರೆ ಅದನ್ನೂ ಕೂಡಾ ನಮ್ಮ ಸಂವಿಧಾನ/ ನ್ಯಾಯಾಲಯ ಒಪ್ಪದಿರಬಹುದು! "

ಇದನ್ನು ನ್ಯಾಯಾಲಯವು ಒಪ್ಪಲ್ಲ. ನಾನು ಸೂಚಿಸಿದ್ದು ಇದನ್ನಲ್ಲ!

ಕನ್ನಡ-ದಲ್ಲಿ ಇರಲೇ ಬೇಕು ಹಾಗು ಬೇರೆಭಾಷೆಗಳಲ್ಲೂ ಇರಬಹುದು ಎಂದು. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಇರಬಾರದು ಎಂಬುದು ಸಂವಿಧಾನಕ್ಕೆ ವಿರುದ್ಧ. ಆದರೆ ಕನ್ನಡ-ದಲ್ಲಿ ಕಡ್ಡಾಯ ಸೇವೆ ನೀಡಬೇಕು, ಹಾಗು ಬೇರೆ ಭಾಷೆಯಲ್ಲಿ ಕನ್ನಡದ ಜತೆಗೆ ಸೇವೆ ನೀಡಬಹುದು ಎಂಬುದು ಸಂವಿಧಾನಬದ್ಧ.!

ಆನಂದ್ ಅಂತಾರೆ...

ಮಾನ್ಯ ಸಂವಿಧಾನಾಸ್ತ್ರ ಅವರೇ,
ನೀವು ಹೇಳುವಂತೆ ಮಾಡುವುದು ಈಗಿನ ಸಂವಿಧಾನದ ಪ್ರಕಾರ ಬಹುಶಃ ಸಾಧ್ಯವಿಲ್ಲ. ಭಾರತದ ಸಂವಿಧಾನ ತಿಳಿಸಿರುವ ಭಾಷಾನೀತಿಯದ್ದು ಇದಕ್ಕೊಂದು ಉದಾಹರಣೆ. ಭಾರತೀಯ ರೈಲ್ವೇಯಲ್ಲಿ ಟಿಕೆಟ್ಟುಗಳ ಮೇಲೆ ಕನ್ನಡದಲ್ಲೂ (ಕನ್ನಡದಲ್ಲಿ ಮಾತ್ರಾ ಅಲ್ಲಾ!) ವಿವರ ಮುದ್ರಿಸಿ ಎಂದರೆ ಸಾಧ್ಯವಿಲ್ಲ ಎನ್ನುತ್ತದೆ ಇಲಾಖೆ. ಕನ್ನಡದಲ್ಲೂ ಕೇಂದ್ರಸರ್ಕಾರದ ಅಧೀನದ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳಲ್ಲಿ ಕನ್ನಡದಲ್ಲೂ ಪ್ರಶ್ನೆಪತ್ರಿಕೆಗಳನ್ನು ಕೊಡಿ ಎಂದರೆ ಇದೇ ನ್ಯಾಯಾಲಯಗಳು "ಸಾಧ್ಯವಿಲ್ಲಾ" ಎನ್ನುವ ಕೇಂದ್ರದ ನಿಲುವನ್ನು ಎತ್ತಿಹಿಡಿಯುತ್ತವೆ. ಕನ್ನಡ ನಾಡಿನಲ್ಲೇ ಹರಡಿರುವ ನೈರುತ್ಯ ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲೂ ಮಾಡಿ ಎಂದರೆ ಇಲ್ಲಾ ಎಂದು ದೊಡ್ಡ ಹೋರಾಟಕ್ಕೆ ಕಾರಣವಾದದ್ದು ಇದೇ ಸಂವಿಧಾನದ ಹುಳುಕಿನ ಭಾಷಾನೀತಿಯೇ! ಒಟ್ಟಿನಲ್ಲಿ ಭಾರತದ ಸಂವಿಧಾನದಲ್ಲಿನ ಕೆಲವಾರು ಹುಳುಕುಗಳು ನಮ್ಮ ನಾಡಿನಲ್ಲಿ ನಮ್ಮದೇ ಬದುಕನ್ನು ಕಡೆಗಣಿಸುತ್ತಿದೆ. ಇದಕ್ಕೆ ಪರಿಹಾರ ಬೇಕಲ್ಲವೇ?

ಸಂವಿಧಾನಾಸ್ತ್ರ ಅಂತಾರೆ...

http://www.bbc.co.uk/news/business-21007477

ಒಮ್ಮೆ ನೋಡಿ. ವಿಷಯಾಂತರ.

"ನೀವು ಹೇಳುವಂತೆ ಮಾಡುವುದು ಈಗಿನ ಸಂವಿಧಾನದ ಪ್ರಕಾರ ಬಹುಶಃ ಸಾಧ್ಯವಿಲ್ಲ"
ಕೇಂದ್ರ ಸರಕಾರದ ಸಂಸ್ತೆಗಳ ಬಗ್ಗೆ ನಿಮ್ಮ ಮಾತು ಸರಿ. ಆದರೆ, ರಾಜ್ಯ ಸರಕಾರದ ಹಾಗು ಖಾಸಗೀ ಸಂಸೆಗಳ ಬಗ್ಗೆ ರಾಜ್ಯಸರಕಾರ ಸಂವಿಧಾನಬದ್ಧವಾಗಿಯೇ ಕನ್ನಡವನ್ನು ಮ್ಯಾಂಡೇಟರಿ ಮಾಡಬಹುದು.

ಯಾತಕ್ಕಾಗಿ ರಾಜ್ಯಸರಕಾರದ ಇಲಾಖೆಗಳು, ನಿಗಮಗಳು ಹಾಗು ಸಂಸ್ತೆಗಳು ಇಂಗ್ಲಿಷನ್ನು ಇಲ್ಲವೇ ಹಿಂದಿ ಬಳಸುತ್ತವೆ? ಮೊದಲು ಇವು ಕನ್ನಡ ಅಲ್ಲದೆ ಬೇರೆ ಭಾಷೆಯಲ್ಲಿನ ಸೇವೆ ಇವು ಕೊಡುವ ಭಾದ್ಯತೆ ಇಲ್ಲವಲ್ಲ.!

Center Stand ಅಂತಾರೆ...

ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಕೋರ್ಟ್ ಮೆಟ್ಟಿಲೇರಿದ ಶ್ರೀಮತಿ ವಿನುತರವರು ತಮ್ಮ ಅರ್ಜಿ ಹಿಂಪಡೆದಿದ್ದಾರಂತೆ..............!!!!!!!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails