ಕಾವೇರಿ ಅನ್ಯಾಯ: ಮಾಧ್ಯಮಗಳ ನಿರ್ಲಿಪ್ತತೆ!


ಕಾವೇರಿ ಐತೀರ್ಪು ಭಾರತದ ರಾಜಪತ್ರದಲ್ಲಿ ಸೇರ್ಪಡೆಯಾಗಿ ಅಧಿಕೃತವಾಗಿ ಘೋಷಣೆಯಾದ ದಿನದಂದು ಕನ್ನಡಿಗರ ಕಾವೇರಿ ಹೋರಾಟದ ಒಂದು ಪ್ರಮುಖ ಹಂತ ಮುಗಿದಂತಾಗಿದೆ. ಇದರಲ್ಲಿ ಕನ್ನಡನಾಡು ಘೋರವಾಗಿ ಸೋಲುಕಂಡಿದೆ. ಕನ್ನಡನಾಡಿನ ಪರವಾಗಿ ಯೋಗ್ಯವಾಗಿ ಹೋರಾಟ ನಡೆಸಲಾಯಿತೇ ಇಲ್ಲವೇ? ನಮ್ಮ ವಕೀಲರುಗಳು ಯೋಗ್ಯರೇ ಅಲ್ಲವೇ? ನಮ್ಮ ರಾಜಕೀಯ ಪಕ್ಷಗಳು ಲಾಬಿ ಮಾಡಿದವೇ ಇಲ್ಲವೇ? ನಮ್ಮ ರಾಜಕಾರಣಿಗಳಿಗೆ ಇಚ್ಛಾ ಶಕ್ತಿ ಇದೆಯೋ ಇಲ್ಲವೋ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಮುಗಿದುಹೋದಂತಾಗಿದೆ. ಒಟ್ಟಾರೆ ಇಡೀ ಕಾವೇರಿ ಕೊಳ್ಳದಲ್ಲಿ ಸೂತಕದ ವಾತಾವರಣ ಮೂಡಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಕನ್ನಡಿಗನ ಮನದಲ್ಲಿ ಸೋಲುಂಡ ಅಪಮಾನ, ಅನ್ಯಾಯಕ್ಕೊಳಗಾದ ನಿರಾಶೆ, ವಂಚನೆಗೀಡಾದಾಗ ಆಗುವ ಸಂಕಟಗಳು ಮನೆಮಾಡಿವೆ. ಒಟ್ಟಾರೆ ಆಕ್ರೋಶದಿಂದ ಕನ್ನಡಿಗ ದಿಕ್ಕೆಟ್ಟಂತಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ನಾಡಿನ ಹೆಚ್ಚಿನ ಜನಪರ ಸಂಘಟನೆಗಳೆಲ್ಲಾ ಮುಂದೇನೂ ದಾರಿಯಿಲ್ಲವೆಂಬಂತೆ ಕಂಗೆಟ್ಟು ಮೌನವಾಗಿವೆ. ಈ ಹೋರಾಟದ ದನಿಗೆ ನಾಡಿನ ಜನರೆಲ್ಲಾ ದನಿಗೂಡಿಸದಿದ್ದರೆ ಕನ್ನಡಿಗರ ಈ ಕಗ್ಗೊಲೆ ಕೂಡಾ ಒಂದು ಸಣ್ಣ ಆರ್ತನಾದವೂ ಇಲ್ಲದೆ ಮುಗಿದುಹೋಗುತ್ತದೆ. ಆದರೆ ಜನರನ್ನು ಈ ಬಗ್ಗೆ ಜಾಗೃತಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸಬೇಕಾದ, ಕನ್ನಡಿಗರಿಗಾದ ಈ ಅನ್ಯಾಯವನ್ನು ಜನರಿಗೆ ಮುಟ್ಟಿಸುವ ಹೊಣೆಗಾರಿಕೆ ಮತ್ತು ಕ್ಷಮತೆಯುಳ್ಳವರೂ ಆಗಿರುವ ಕನ್ನಡನಾಡಿನ ಮಾಧ್ಯಮಗಳು ಕಣ್ಮುಚ್ಚಿ ಕುಳಿತುಬಿಟ್ಟಿವೆ. ಬರೀ ಕಣ್ಮುಚ್ಚಿಕೊಂಡಿದ್ದರೂ ಪರವಾಗಿರಲಿಲ್ಲಾ!! ಬದಲಿಗೆ ಆಗಿರುವ ಅನ್ಯಾಯವನ್ನು, ಈ ಅನ್ಯಾಯದ ತೀರ್ಪನ್ನು ನಮ್ಮ ಪಾಲಿನ ಅತ್ಯುತ್ತಮ ತೀರ್ಪು ಅನ್ನುವಂತೆ ಬಿಂಬಿಸುತ್ತಿವೆ ಎನ್ನುವುದು ನಮ್ಮ ದುರಂತವಾಗಿದೆ!

ಬಿಟ್ಟಿ ಉಪದೇಶ ಕನ್ನಡಿಗನಿಗೆ ಮಾತ್ರಾ!

ನಾಡಿನ ಎರಡು ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳನ್ನು ನೋಡಿದಾಗ ಇಂಥದ್ದೊಂದು ಅನಿಸಿಕೆ ಮೂಡದಿದ್ದರೆ ಕೇಳಿ. ಒಂದರಲ್ಲಿ "ಇಷ್ಟಕ್ಕೇ ಏನೂ ಆಗಿಲ್ಲಾ, ಇದರಲ್ಲೂ ನಮಗೆ ಲಾಭವಾಗಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು" ಎನ್ನುವ ದನಿಯಿದ್ದರೆ... ಇನ್ನೊಂದರಲ್ಲಿ "ಇದನ್ನು ರಾಜಕೀಯವಾಗಿ ಬಳಸದಂತೆ, ಮುಂದಿರಬಹುದಾದ ಅವಕಾಶಗಳಲ್ಲಿ ಸಮರ್ಥವಾಗಿ ವಾದ ಮಂಡಿಸಿ ನಮ್ಮ ಹಕ್ಕನ್ನು ಗಿಟ್ಟಿಸಿಕೊಳ್ಳುವಂತೆ" ಉಪದೇಶ ನೀಡಿ ಬರೆಯಲಾಗಿದೆ. ಇದು ಕನ್ನಡಿಗರಿಗೆ ಸಹನೆಯನ್ನು ಬೋಧಿಸುವ, ಈಗಾಗಿರುವ ನಷ್ಟ ಮುಂದೆ ಸರಿಪಡಿಸಲು ಸಾಧ್ಯವೆನ್ನುವ ಬೆಣ್ಣೆ ಮಾತಿನ ಮುಲಾಮು ಹಚ್ಚುತ್ತಿರುವಂತೆ ಇವೆ. ಇದಷ್ಟೇ ಅಲ್ಲದೆ "ಕಾವೇರಿ ಜಲಮಂಡಳಿ" ರಚನೆಯಾಗಿಬಿಟ್ಟರೆ ನಮ್ಮ ಅಣೆಕಟ್ಟೆಗಳ ಕೀಲಿಕೈ ಅವುಗಳ ವಶವಾಗುತ್ತದೆ ಎನ್ನುವ ಭಯ ಬೇಡವೆಂದೂ,  ಅಂತಹ ಮಂಡಳಿಯ ರಚನೆಯೇ ಆಗದಿರಬಹುದೆಂದೂ ಸುಮ್ಮನೆ ಸಾಂತ್ವನ ನೀಡಲಾಗಿದೆ. ನಲವತ್ತು ವರ್ಷಗಳ ಕಾಲ ನೆಟ್ಟಗೆ ವಾದ ಮಾಡಲಾಗದ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ವೈಫಲ್ಯವನ್ನು ಒಟ್ಟಾರೆಯಾಗಿ ಮರೆಮಾಚುತ್ತಾ "ಆದದ್ದೆಲ್ಲಾ ಒಳಿತೇ ಆಯಿತು, ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು" ಎಂದು ಹಾಡುತ್ತಿವೆ... ಈ ಪತ್ರಿಕೆಗಳ ಸಂಪಾದಕೀಯಗಳು. ಈಗಾಗಿರುವ ಅನ್ಯಾಯಗಳನ್ನು ಸರಿಪಡಿಸಿಕೊಳ್ಳಬೇಕಾದರೆ ಕನ್ನಡಿಗರು ದೊಡ್ಡಕ್ರಾಂತಿಯನ್ನೇ ನಡೆಸಬೇಕಾದೀತು ಎನ್ನುವ ದಿಟದ ನೆರಳೂ ಕೂಡಾ ಈ ಬರಹಗಳಲ್ಲಿಲ್ಲಾ! ಇದ್ದುದ್ದರಲ್ಲಿ ರಾಷ್ಟ್ರೀಯವಾದಿ ಹೊಸದಿಗಂತವೇ ಈ ವಿಶಯದಲ್ಲಿ ವಾಸಿ. ಈ ಪತ್ರಿಕೆಯಲ್ಲಿ ಕನ್ನಡಿಗರನ್ನು ಕನ್ನಡಿಗರೆಂದೂ, ತಮಿಳರನ್ನು ತಮಿಳರೆಂದೂ ಗುರುತಿಸಿದಂತೆ ಕಾಣುತ್ತಿದ್ದು ಈಗ ಆಗಿರುವ ಅನ್ಯಾಯದ ಬಗ್ಗೆ ಆಕ್ರೋಶದ ದನಿಯೆತ್ತಲಾಗಿದೆ.

ಇನ್ನು ಈ ಅನ್ಯಾಯದ ವಿರುದ್ಧ ಕನ್ನಡಿಗರನ್ನು ಒಗ್ಗೂಡಿಸಿ ಹೋರಾಟದ ಮೂಲಕ ಜನಜಾಗೃತಿ ಮಾಡುವ ಸಂಘಟನೆಗಳಂತೂ ನಮ್ಮ ಮಾಧ್ಯಮಗಳ ಕಣ್ಣಿಗೆ ರಾಷ್ಟ್ರದ್ರೋಹಿಗಳಂತೆ, ಸಾಮರಸ್ಯ ನಾಶಕರಂತೆ ಕಾಣುತ್ತಿದ್ದಾರೇನೋ ಎನ್ನುವ ಅನುಮಾನಕ್ಕೆ ಕಾರಣವಾಗುವಂತೆ ಕಾವೇರಿ ಹೋರಾಟದ ಬಗ್ಗೆ ಕಾಟಾಚಾರದ ವರದಿ ಬರೆಯುತ್ತಿವೆಯೇನೋ ಅನ್ನಿಸುತ್ತಿವೆ. ಹೀಗೆ ಮಾಡುತ್ತಿರುವ ಮಾಧ್ಯಮಗಳಲ್ಲಿ ಬರೀ ಪತ್ರಿಕೆಗಳಲ್ಲದೆ ಟಿವಿ ಮಾಧ್ಯಮದವರೂ ಸೇರಿರುವುದು ಅಚ್ಚರಿಯಾಗುತ್ತದೆ. ಅಂದು ಕಾವೇರಿ ಐತೀರ್ಪಿನ ಗೆಜೆಟ್ ಪ್ರಕಟವಾಗಿದ್ದ ದಿನ ಹೆಚ್ಚಿನ ಸುದ್ದಿವಾಹಿನಿಗಳಲ್ಲಿ ಇದು ಮುಖ್ಯವಾದ ಸುದ್ದಿಯಾಗಲೇ ಇಲ್ಲಾ! ಅದಕ್ಕೆ ತಕ್ಕಂತೆ ಹೈದರಾಬಾದಿನ ಸ್ಪೋಟ ನಡೆದು ನಾಡಿನ ಗಮನವನ್ನು ಬೇರೆಡೆಗೆ ತಿರುಗಿಸಲು ಸುಲಭವಾಗಿಬಿಟ್ಟಿತು. ಒಟ್ಟಾರೆ ಕಾವೇರಿಕೊಳ್ಳದ ಕೋಟ್ಯಾಂತರ ಕನ್ನಡಿಗರ ಬದುಕು ನಿರ್ನಾಮವಾಗುತ್ತಿದ್ದಾಗ ನಮ್ಮದೇ ನಾಡಿನ ಮಾಧ್ಯಮಗಳಿಗೆ  ಈ ಬಗ್ಗೆ ಕುರುಡು ಮತ್ತು ಕಿವುಡು, ಜೊತೆಯಲ್ಲಿ ರಾಷ್ಟ್ರೀಯ ಪಕ್ಷಗಳೆಡೆ ಧೃತರಾಷ್ಟ್ರ ಪ್ರೇಮ!

ಸಾಹಿತ್ಯ ಸಮ್ಮೇಳನದ ನಿರ್ಣಯಗಳೂ ಮತ್ತು ತೊಡಕಿನ ಬೇರುಗಳೂ...

(ಚಿತ್ರ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಫ಼ೆಬ್ರವರಿ ೯,೧೦ ಮತ್ತು ೧೧ರಂದು ಸೊಗಸಾಗಿ, ಅಚ್ಚುಕಟ್ಟಾಗಿ ಬಿಜಾಪುರದಲ್ಲಿ ನಡೆದ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಗಿದಿದೆ. ಗಡಿಜಿಲ್ಲೆಯಾದ ಬಿಜಾಪುರದಲ್ಲಿ ನಡೆದ ಮೂರುದಿನಗಳ ಈ ನುಡಿಹಬ್ಬದಲ್ಲಿ ನಡೆದ ಕಾರ್ಯಕ್ರಮಗಳು ಅನೇಕ. ದೊಡ್ಡದಾದ ಸೈನಿಕ ಶಾಲೆಯ ಆವರಣದಲ್ಲಿ ಜಾಗಕ್ಕೆ ಕೊರತೆಯಿರಲಿಲ್ಲ. ಎಲ್ಲೆಲ್ಲೂ ಜನರು, ಹಾರಾಡುತ್ತಿದ್ದ ಕನ್ನಡ ಬಾವುಟಗಳು ನೂರಾರು ಅಂಗಡಿಗಳು, ತುಂಬಿ ತುಳುಕುತ್ತಿದ್ದ ಸಭಾಂಗಣ, ವಿಶಾಲವಾದ ಮಂಟಪ, ನಡೆದ ಗೋಷ್ಟಿಗಳು.. ಎಲ್ಲವೂ ರಸವತ್ತಾಗಿದ್ದವು. 

ಮಹತ್ವದ ನಿರ್ಣಯಗಳು

ಕೊನೆಯ ದಿವಸ ಸಾಹಿತ್ಯ ಸಮ್ಮೇಳನದ ವತಿಯಿಂದ ಒಂಬತ್ತು ಮಹತ್ವದ ನಿರ್ಣಯಗಳನ್ನು ಮಂಡಿಸಲಾಯಿತು. ಬಿಜಾಪುರಕ್ಕೆ ಸಂಬಂಧಿಸಿದಂತೆ ಮೂರು, ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದಂತೆ ಎರಡು, ಕಲಿಕೆಗೆ ಸಂಬಂಧಿಸಿದಂತೆ ಒಂದು ನಿರ್ಣಯವನ್ನು ಮಂಡಿಸಲಾಯಿತು. ಕಾವೇರಿ ನದಿ ಹಂಚಿಕೆ ವಿಷಯದಲ್ಲಿ ಸುಪ್ರಿಂಕೋರ್ಟು ಮಾನವೀಯ ನೆಲೆಯಲ್ಲಿ ಕರ್ನಾಟಕದ ಅಹವಾಲನ್ನು ಆಲಿಸಬೇಕು ಎನ್ನುವ ಒಂದು ನಿರ್ಣಯ ಮಂಡಿಸಲಾಯ್ತು. ಈ ನಿರ್ಣಯಗಳಲ್ಲಿ ನಮ್ಮ ಬದುಕಿಗೆ ಹತ್ತಿರವಾಗಿರುವ, ನಮ್ಮನ್ನೆಲ್ಲಾ ನಿಧಾನವಾಗೇ ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿರುವ ಅಪಾಯದ ವಿರುದ್ಧ ಎತ್ತಿದ ದನಿಯೂ ಒಂದು. ಎಪ್ಪತ್ತೊಂಬತ್ತು ಸಮ್ಮೇಳನಗಳಲ್ಲಿ ಇದೇ ಮೊದಲಬಾರಿಗೆ ಭಾರತದ ಸಂವಿಧಾನವೇ ಕನ್ನಡಿಗರ ಬದುಕಿಗೆ ಒಡ್ಡಿರುವ ಅಪಾಯದ ವಿರುದ್ಧ ನಿರ್ಣಯ ಮಂಡಿಸಿದ್ದು ವಿಶೇಷ! ಭಾರತದ ಹುಳುಕಿನ ಭಾಷಾನೀತಿಗೆ ಕಾರಣವಾಗಿರುವ ಸಂವಿಧಾನದ ೩೪೩ನೇ ಪರಿಚ್ಛೇದದಿಂದ ೩೫೧ನೇ ಪರಿಚ್ಛೇದದವರೆಗಿನ "ದೇಶದ ಭಾಷಾನೀತಿಗೆ ಮಾರ್ಗಸೂಚಿಯಾಗಿರುವ" ಕಲಮ್ಮುಗಳಿಗೆ ತಿದ್ದುಪಡಿ ಮಾಡಿ, ಕನ್ನಡವೂ ಸೇರಿದಂತೆ ಸಂವಿಧಾನದ ಎಂಟನೇ ಅನುಬಂಧದಲ್ಲಿ ಸೂಚಿಸಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳಿಗೆ "ದೇಶದ ಆಡಳಿತ ಭಾಷೆ"ಯ ಸ್ಥಾನಮಾನ ನೀಡಬೇಕೆನ್ನುವುದೇ ಆ ನಿರ್ಣಯವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಶತ್ತಿನ ಜೊತೆಯಲ್ಲಿ ಈ ವಿಷಯವಾಗಿ ಕನ್ನಡನಾಡಿನ ಜನರು, ನಾಡಿನ ರಾಜಕೀಯ ಪಕ್ಷಗಳೂ ದನಿಗೂಡಿಸಬೇಕಾಗಿದೆ. ಇಲ್ಲದಿದ್ದರೆ ಮುಂದೊಮ್ಮೆ ಹಿಂದೀ ಸಾಮ್ರಾಜ್ಯದಲ್ಲಿ ನಾವು ಗುಲಾಮರಾಗಿರುವ ದಿನಗಳು ಕಟ್ಟಿಟ್ಟ ಬುತ್ತಿ!!

ಡಬ್ಬಿಂಗ್ ಬೇಡೆನ್ನುವ ನಿರ್ಣಯ

ಮತ್ತೊಂದು ಮಹತ್ವದ ನಿರ್ಣಯವೆಂದರೆ ಕನ್ನಡಕ್ಕೆ ಡಬ್ಬಿಂಗ್ ಬರಬಾರದಂತೆ ತಡೆಯಬೇಕು ಎನ್ನುವುದು. ಈ ನಿರ್ಣಯ ಇಡಿಯ ಕನ್ನಡ ಸಮಾಜವನ್ನು ಗಣನೆಗೆ ತೆಗೆದುಕೊಳ್ಳದೆ ಚಿತ್ರೋದ್ಯಮಕ್ಕೆ ಸೇರಿದ ಒಂದು ವರ್ಗವನ್ನು ಮಾತ್ರಾ ಗಮನದಲ್ಲಿಟ್ಟುಕೊಂಡು  ತೆಗೆದುಕೊಂಡಂತಿದೆ. ಆರುಕೋಟಿ ಕನ್ನಡಿಗರ ಬದುಕಿನ ಪುಟಗಳಲ್ಲಿ "ಕನ್ನಡದಲ್ಲಿ ಮನರಂಜನೆ" ಎನ್ನುವ ಪುಟ ಹರಿದುಹೋಗುತ್ತಿರುವುದನ್ನು ಅದೇಕೋ ಕನ್ನಡ ಸಾಹಿತ್ಯ ಪರಿಶತ್ತು ಗಮನಿಸಿದಂತಿಲ್ಲ!

ಸಮ್ಮೇಳನ ನಡೆದ ಬಿಜಾಪುರದಲ್ಲಿ ಒಟ್ಟು  ಏಳು ಚಿತ್ರಮಂದಿರಗಳಿವೆ. ಬರುವ ಫ಼ೆಬ್ರವರಿ ೧೪ರಂದು ಆ ಊರಿನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳು ಐದು. ವೀರಪ್ಪನ್ ಅಟ್ಟಹಾಸ ಎನ್ನುವ ಕನ್ನಡ ಚಿತ್ರದ ಜೊತೆಯಲ್ಲಿ ಒಂದು ಮರಾಟಿ, ಒಂದು ಹಿಂದೀ ಮತ್ತು ಎರಡು ತೆಲುಗು ಚಿತ್ರಗಳು ತೆರೆಕಾಣುತ್ತಿವೆ ಎನ್ನುವುದನ್ನು ನೋಡಿದರೆ ಕನ್ನಡಿಗರು ಕನ್ನಡದ ಮನರಂಜನೆಯಿಂದ ದೂರಸಾಗುತ್ತಿರುವ ಸುಳಿವು ಸಿಗುತ್ತದೆ. ಇದು ಒಂದು ಬಿಜಾಪುರದ ಕಥೆಯಲ್ಲ! ಇಕೊಳ್ಳಿ ನಮ್ಮ ಮಂಡ್ಯದಲ್ಲಿ ನೋಡಿ. ಇಲ್ಲಿರುವುದೂ ಏಳು ಚಿತ್ರಮಂದಿರಗಳೇ! ಈ ಏಳರಲ್ಲಿ ಕನ್ನಡದ ಸಿನಿಮಾಗಳು ಇರೋದು ಎರಡೇ! ಎರಡು ಕಡೆ ಸಂಗೊಳ್ಳಿ ರಾಯಣ್ಣ, ಒಂದರಲ್ಲಿ ಚಾರ್‌ಮಿನಾರ್ ಇದೆ. ಇನ್ನುಳಿದಂತೆ ತೆಲುಗಿನ ಮಿರ್ಚಿ, ತೆಲುಗಿನ ವಿಶ್ವರೂಪಂ, ಹಿಂದೀಯ ವಿಶ್ವರೂಪಂ, ಹಿಂದೀಯ ಎಬಿಸಿಡಿ ಚಿತ್ರಗಳಿವೆ. ಇದು ಬರೀ ಎರಡು ಊರುಗಳ ಕಥೆಯಲ್ಲ! ಇಡೀ ಕರ್ನಾಟಕದ ಕಥೆ! ತಾಯ್ನುಡಿಯಲ್ಲಿ ಮನರಂಜನೆಯನ್ನು ಪಡೆದುಕೊಳ್ಳಲಾಗದ ಕನ್ನಡಿಗರ ವ್ಯಥೆ!! ಇದನ್ನು ಗಮನಿಸದೇ ಸಾಹಿತ್ಯ ಸಮ್ಮೇಳನ ಕಳೆದ ಸಲದಿಂದ ಡಬ್ಬಿಂಗ್ ವಿರೋಧಿ ನಿರ್ಣಯವನ್ನು ಮಂಡಿಸುತ್ತಾ ಬಂದಿದೆ!

ಸಾಹಿತ್ಯ ಸಮ್ಮೇಳನದ ನಿರ್ಣಯದ ಮಹತ್ವ!

ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳು ಮಹತ್ವದ್ದಾಗಿವೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ! ಈ ನಿರ್ಣಯಗಳನ್ನು ಇಡೀ ಕನ್ನಡ ಸಮಾಜ, ಕನ್ನಡದ ಜನತೆ ತೆಗೆದುಕೊಂಡ ನಿರ್ಣಯವೆಂದು ಬಿಂಬಿಸುವುದು ಸರಿಯೇ ಎಂದು ಯೋಚಿಸಬೇಕಾಗಿದೆ. ನಾಡಿನ ಸಾಹಿತ್ಯ ವಲಯವು, ನಮ್ಮ ನಾಡಿನ ಜನರಿಗೆ ಇದು ಒಳಿತು ಎಂದು ತನಗೆ ಅನ್ನಿಸಿದ್ದನ್ನು ತನ್ನ ವಾರ್ಷಿಕ ಸಮ್ಮೇಳನಗಳಲ್ಲಿ ನಿರ್ಣಯಗಳ ಮೂಲಕ ವ್ಯಕ್ತಪಡಿಸುತ್ತದೆ. ಇದು ವಾಸ್ತವ. ಈ ನಿರ್ಣಯಗಳು ಜನಸಾಮಾನ್ಯರ ಒಪ್ಪಿಗೆ ಗಳಿಸಿ, ಅವರಿಂದ ಸ್ವೀಕರಿಸುವುದೋ ತಿರಸ್ಕರಿಸುವುದೋ ಆಗಬೇಕಾಗುತ್ತದೆ ಅಷ್ಟೇ! ಯಾವುದನ್ನೇ ಆಗಲಿ, ಜನರಿಗೆ ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅವಕಾಶವನ್ನೇ ಇಲ್ಲವಾಗಿಸಿರುವುದು ‘ಡಬ್ಬಿಂಗ್ ನಿಶೇಧ’ವೆನ್ನುವ ಅಸಾಂವಿಧಾನಿಕ ಆಚರಣೆ. ಹಾಗಾಗಿ ಪರಿಶತ್ತಿನ ಈ ನಿರ್ಣಯ ಜನವಿರೋಧಿ ಎನ್ನದೇ ವಿಧಿಯಿಲ್ಲ!

ಸಮಸ್ಯೆಗೆ ಮೇಲುಮೇಲಿನ ಪರಿಹಾರಗಳು!

ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳತ್ತ ಒಮ್ಮೆ ನೋಡಿದರೆ ನಮ್ಮ ಸಾಹಿತ್ಯ ಪರಿಶತ್ತು ಇನ್ನಷ್ಟು ಆಳಕ್ಕೆ ಇಳಿದು, ಸಮಸ್ಯೆಗಳ ಬೇರನ್ನು ಶೋಧಿಸಬೇಕಾಗಿದ್ದುದರ ಅಗತ್ಯ ಕಾಣುತ್ತದೆ. ಇಲ್ಲಿ ಹಿಂದೀ ಹೇರಿಕೆಯ ವಿರುದ್ಧವಾಗಿ ಕೈಗೊಂಡ ನಿರ್ಣಯವೊಂದೇ ಹೆಚ್ಚೂ ಕಡಿಮೆ ಅಂತಹ ಬುಡಕ್ಕೆ ಕೈಹಾಕಿರುವಂತಹದ್ದಾಗಿದೆ.

ಕಾವೇರಿ ನೀರುಹಂಚಿಕೆಯಲ್ಲಿ ನ್ಯಾಯಾಲಯ ಮಾನವೀಯತೆಯಿಂದ ನೋಡುವುದಿಲ್ಲ! ಅದು ಕಾನೂನಾತ್ಮಕವಾಗಿ ನೋಡುತ್ತದೆ. ಭಾರತದ ಸಂವಿಧಾನದಲ್ಲಿ ಅಂತರರಾಜ್ಯ ನದಿನಂಚಿಕೆಗೆ ರಾಷ್ಟ್ರೀಯ ಜಲನೀತಿಯೇ ಇಲ್ಲದಿರುವಾಗ ನ್ಯಾಯಾಲಯ ಏನು ತೀರ್ಪು ಕೊಡುತ್ತದೆ? ನ್ಯಾಯಾಧಿಕರಣದಲ್ಲಿ ಆಗಿರುವ ಅನ್ಯಾಯಗಳನ್ನು ಸುಪ್ರಿಂಕೋರ್ಟು ಅದು ಹೇಗೆ ಸರಿಪಡಿಸುತ್ತದೆ? ಇದು ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡಂತೆ ಮಾತ್ರವಲ್ಲವೇ? ಕಾವೇರಿ ಐತೀರ್ಪನ್ನು ಈ ಸಮ್ಮೇಳನ ಒಪ್ಪುವುದಿಲ್ಲಾ ಎಂದಿದ್ದರೂ ಸ್ವಲ್ಪ ಅರ್ಥಪೂರ್ಣ ಪ್ರತಿಭಟನೆಯೆನ್ನಿಸುತ್ತಿತ್ತು!!

ಇನ್ನು ಸರೋಜಿನಿ ಮಹಿಷಿ ವರದಿ, ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಎನ್ನುವ ನಿರ್ಣಯಗಳು. ಇವು ಇಂದಿನ ಸಂವಿಧಾನದ ಪ್ರಕಾರ ಎಂದಿಗೂ ಜಾರಿಯಾಗಲಾರದ ನಿರ್ಣಯಗಳು ಎನ್ನುವ ನಿಷ್ಠುರ ಸತ್ಯವನ್ನು ಹೇಳಬೇಕಾಗಿದೆ. ಹೀಗೆ ನಮ್ಮ ನಾಡಿನಲ್ಲಿ ಕೆಲಸ ನಮ್ಮ ಹಕ್ಕು ಎನ್ನುವುದಕ್ಕೂ ಬೇಕಾದದ್ದು ಸಂವಿಧಾನಕ್ಕೆ ತಿದ್ದುಪಡಿಯೇ! ಯಾರು ಎಲ್ಲಿಗೆ ಬೇಕಾದರೂ ಹೋಗಿ ಬದುಕಬಹುದೆನ್ನುವ, ಯಾವುದೇ ಕಟ್ಟುಪಾಡಿರದ ವಲಸೆಗೆ ಉತ್ತೇಜನ ನೀಡುವಂತಹ ಸಾಲುಗಳು ಸಂವಿಧಾನದಲ್ಲಿ ಇರುವಾಗ ಈ ನಿರ್ಣಯಗಳ ಜಾರಿ ಹೇಗೆ? ನ್ಯಾಯಾಲಯಗಳು ಇಂತಹ ವರದಿ ಜಾರಿ ಮಾಡುವುದನ್ನು ನೇರವಾಗಿ ಅಸಿಂಧುಗೊಳಿಸಿಬಿಡುತ್ತವೆ.

ನಿರ್ಣಯದಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳ ಹಾಜರಾತಿ ಕೊರತೆಯಾಗದಂತಹ ವಾತಾವರಣ ನಿರ್ಮಿಸಬೇಕು ಎಂದುಬಿಟ್ಟರೆ ಸಾಕೇ? ಏನದು ಅಂತಹ ವಾತಾವರಣ? ಕನ್ನಡದಲ್ಲಿ ಕಲಿತೂ ಮೃಷ್ಟಾನ್ನ ಗಳಿಸಿಕೊಳ್ಳಬಹುದು ಮತ್ತು ಜಗತ್ತಿನ ಯಾವಮೂಲೆಯಲ್ಲಾದರೂ ಏನನ್ನಾದರೂ ಸಾಧಿಸಲು ಸಾಧ್ಯ ಎನ್ನುವ ನಂಬಿಕೆ ಹುಟ್ಟುವಂತಹ ವಾತಾವರಣ ಕಟ್ಟದೆ, ಕನ್ನಡದಲ್ಲಿಯೇ ಎಲ್ಲಾ ಉನ್ನತ ಕಲಿಕೆಗಳನ್ನು ತರದೆ ಇಂತಹ ವಾತಾವರಣ ಹುಟ್ಟುವುದಾದರೂ ಹೇಗೆ? ಈ ಬಗ್ಗೆ ಮಾತಾಡದೆ ಬರೀ ವಾತಾವರಣ ನಿರ್ಮಿಸಿ ಎಂದುಬಿಟ್ಟರೆ ಸಾಕೇ?

ಒಟ್ಟಾರೆ ನಾವುಗಳು, ನಮ್ಮ ಸಾಹಿತಿಗಳು, ನಮ್ಮ ಪರಿಶತ್ತುಗಳು ಇನ್ನಷ್ಟು ಆಳವಾಗಿ ಯೋಚಿಸುವುದನ್ನೂ... ಸಮಸ್ಯೆಯ ಆಳಕ್ಕಿಳಿದು ಪರಿಹಾರ ಹುಡುಕುವುದನ್ನೂ ಕಲಿಯಬೇಕಾಗಿದೆ. ಏನಂತೀ ಗುರೂ?!
Related Posts with Thumbnails