ಕಾವೇರಿ ಐತೀರ್ಪು ಭಾರತದ ರಾಜಪತ್ರದಲ್ಲಿ ಸೇರ್ಪಡೆಯಾಗಿ ಅಧಿಕೃತವಾಗಿ ಘೋಷಣೆಯಾದ ದಿನದಂದು ಕನ್ನಡಿಗರ ಕಾವೇರಿ ಹೋರಾಟದ ಒಂದು ಪ್ರಮುಖ ಹಂತ ಮುಗಿದಂತಾಗಿದೆ. ಇದರಲ್ಲಿ ಕನ್ನಡನಾಡು ಘೋರವಾಗಿ ಸೋಲುಕಂಡಿದೆ. ಕನ್ನಡನಾಡಿನ ಪರವಾಗಿ ಯೋಗ್ಯವಾಗಿ ಹೋರಾಟ ನಡೆಸಲಾಯಿತೇ ಇಲ್ಲವೇ? ನಮ್ಮ ವಕೀಲರುಗಳು ಯೋಗ್ಯರೇ ಅಲ್ಲವೇ? ನಮ್ಮ ರಾಜಕೀಯ ಪಕ್ಷಗಳು ಲಾಬಿ ಮಾಡಿದವೇ ಇಲ್ಲವೇ? ನಮ್ಮ ರಾಜಕಾರಣಿಗಳಿಗೆ ಇಚ್ಛಾ ಶಕ್ತಿ ಇದೆಯೋ ಇಲ್ಲವೋ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಮುಗಿದುಹೋದಂತಾಗಿದೆ. ಒಟ್ಟಾರೆ ಇಡೀ ಕಾವೇರಿ ಕೊಳ್ಳದಲ್ಲಿ ಸೂತಕದ ವಾತಾವರಣ ಮೂಡಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಕನ್ನಡಿಗನ ಮನದಲ್ಲಿ ಸೋಲುಂಡ ಅಪಮಾನ, ಅನ್ಯಾಯಕ್ಕೊಳಗಾದ ನಿರಾಶೆ, ವಂಚನೆಗೀಡಾದಾಗ ಆಗುವ ಸಂಕಟಗಳು ಮನೆಮಾಡಿವೆ. ಒಟ್ಟಾರೆ ಆಕ್ರೋಶದಿಂದ ಕನ್ನಡಿಗ ದಿಕ್ಕೆಟ್ಟಂತಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ನಾಡಿನ ಹೆಚ್ಚಿನ ಜನಪರ ಸಂಘಟನೆಗಳೆಲ್ಲಾ ಮುಂದೇನೂ ದಾರಿಯಿಲ್ಲವೆಂಬಂತೆ ಕಂಗೆಟ್ಟು ಮೌನವಾಗಿವೆ. ಈ ಹೋರಾಟದ ದನಿಗೆ ನಾಡಿನ ಜನರೆಲ್ಲಾ ದನಿಗೂಡಿಸದಿದ್ದರೆ ಕನ್ನಡಿಗರ ಈ ಕಗ್ಗೊಲೆ ಕೂಡಾ ಒಂದು ಸಣ್ಣ ಆರ್ತನಾದವೂ ಇಲ್ಲದೆ ಮುಗಿದುಹೋಗುತ್ತದೆ. ಆದರೆ ಜನರನ್ನು ಈ ಬಗ್ಗೆ ಜಾಗೃತಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸಬೇಕಾದ, ಕನ್ನಡಿಗರಿಗಾದ ಈ ಅನ್ಯಾಯವನ್ನು ಜನರಿಗೆ ಮುಟ್ಟಿಸುವ ಹೊಣೆಗಾರಿಕೆ ಮತ್ತು ಕ್ಷಮತೆಯುಳ್ಳವರೂ ಆಗಿರುವ ಕನ್ನಡನಾಡಿನ ಮಾಧ್ಯಮಗಳು ಕಣ್ಮುಚ್ಚಿ ಕುಳಿತುಬಿಟ್ಟಿವೆ. ಬರೀ ಕಣ್ಮುಚ್ಚಿಕೊಂಡಿದ್ದರೂ ಪರವಾಗಿರಲಿಲ್ಲಾ!! ಬದಲಿಗೆ ಆಗಿರುವ ಅನ್ಯಾಯವನ್ನು, ಈ ಅನ್ಯಾಯದ ತೀರ್ಪನ್ನು ನಮ್ಮ ಪಾಲಿನ ಅತ್ಯುತ್ತಮ ತೀರ್ಪು ಅನ್ನುವಂತೆ ಬಿಂಬಿಸುತ್ತಿವೆ ಎನ್ನುವುದು ನಮ್ಮ ದುರಂತವಾಗಿದೆ!
ಬಿಟ್ಟಿ ಉಪದೇಶ ಕನ್ನಡಿಗನಿಗೆ ಮಾತ್ರಾ!
ನಾಡಿನ ಎರಡು ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳನ್ನು ನೋಡಿದಾಗ ಇಂಥದ್ದೊಂದು ಅನಿಸಿಕೆ ಮೂಡದಿದ್ದರೆ ಕೇಳಿ. ಒಂದರಲ್ಲಿ "ಇಷ್ಟಕ್ಕೇ ಏನೂ ಆಗಿಲ್ಲಾ, ಇದರಲ್ಲೂ ನಮಗೆ ಲಾಭವಾಗಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು" ಎನ್ನುವ ದನಿಯಿದ್ದರೆ... ಇನ್ನೊಂದರಲ್ಲಿ "ಇದನ್ನು ರಾಜಕೀಯವಾಗಿ ಬಳಸದಂತೆ, ಮುಂದಿರಬಹುದಾದ ಅವಕಾಶಗಳಲ್ಲಿ ಸಮರ್ಥವಾಗಿ ವಾದ ಮಂಡಿಸಿ ನಮ್ಮ ಹಕ್ಕನ್ನು ಗಿಟ್ಟಿಸಿಕೊಳ್ಳುವಂತೆ" ಉಪದೇಶ ನೀಡಿ ಬರೆಯಲಾಗಿದೆ. ಇದು ಕನ್ನಡಿಗರಿಗೆ ಸಹನೆಯನ್ನು ಬೋಧಿಸುವ, ಈಗಾಗಿರುವ ನಷ್ಟ ಮುಂದೆ ಸರಿಪಡಿಸಲು ಸಾಧ್ಯವೆನ್ನುವ ಬೆಣ್ಣೆ ಮಾತಿನ ಮುಲಾಮು ಹಚ್ಚುತ್ತಿರುವಂತೆ ಇವೆ. ಇದಷ್ಟೇ ಅಲ್ಲದೆ "ಕಾವೇರಿ ಜಲಮಂಡಳಿ" ರಚನೆಯಾಗಿಬಿಟ್ಟರೆ ನಮ್ಮ ಅಣೆಕಟ್ಟೆಗಳ ಕೀಲಿಕೈ ಅವುಗಳ ವಶವಾಗುತ್ತದೆ ಎನ್ನುವ ಭಯ ಬೇಡವೆಂದೂ, ಅಂತಹ ಮಂಡಳಿಯ ರಚನೆಯೇ ಆಗದಿರಬಹುದೆಂದೂ ಸುಮ್ಮನೆ ಸಾಂತ್ವನ ನೀಡಲಾಗಿದೆ. ನಲವತ್ತು ವರ್ಷಗಳ ಕಾಲ ನೆಟ್ಟಗೆ ವಾದ ಮಾಡಲಾಗದ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ವೈಫಲ್ಯವನ್ನು ಒಟ್ಟಾರೆಯಾಗಿ ಮರೆಮಾಚುತ್ತಾ "ಆದದ್ದೆಲ್ಲಾ ಒಳಿತೇ ಆಯಿತು, ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು" ಎಂದು ಹಾಡುತ್ತಿವೆ... ಈ ಪತ್ರಿಕೆಗಳ ಸಂಪಾದಕೀಯಗಳು. ಈಗಾಗಿರುವ ಅನ್ಯಾಯಗಳನ್ನು ಸರಿಪಡಿಸಿಕೊಳ್ಳಬೇಕಾದರೆ ಕನ್ನಡಿಗರು ದೊಡ್ಡಕ್ರಾಂತಿಯನ್ನೇ ನಡೆಸಬೇಕಾದೀತು ಎನ್ನುವ ದಿಟದ ನೆರಳೂ ಕೂಡಾ ಈ ಬರಹಗಳಲ್ಲಿಲ್ಲಾ! ಇದ್ದುದ್ದರಲ್ಲಿ ರಾಷ್ಟ್ರೀಯವಾದಿ ಹೊಸದಿಗಂತವೇ ಈ ವಿಶಯದಲ್ಲಿ ವಾಸಿ. ಈ ಪತ್ರಿಕೆಯಲ್ಲಿ ಕನ್ನಡಿಗರನ್ನು ಕನ್ನಡಿಗರೆಂದೂ, ತಮಿಳರನ್ನು ತಮಿಳರೆಂದೂ ಗುರುತಿಸಿದಂತೆ ಕಾಣುತ್ತಿದ್ದು ಈಗ ಆಗಿರುವ ಅನ್ಯಾಯದ ಬಗ್ಗೆ ಆಕ್ರೋಶದ ದನಿಯೆತ್ತಲಾಗಿದೆ.
ಇನ್ನು ಈ ಅನ್ಯಾಯದ ವಿರುದ್ಧ ಕನ್ನಡಿಗರನ್ನು ಒಗ್ಗೂಡಿಸಿ ಹೋರಾಟದ ಮೂಲಕ ಜನಜಾಗೃತಿ ಮಾಡುವ ಸಂಘಟನೆಗಳಂತೂ ನಮ್ಮ ಮಾಧ್ಯಮಗಳ ಕಣ್ಣಿಗೆ ರಾಷ್ಟ್ರದ್ರೋಹಿಗಳಂತೆ, ಸಾಮರಸ್ಯ ನಾಶಕರಂತೆ ಕಾಣುತ್ತಿದ್ದಾರೇನೋ ಎನ್ನುವ ಅನುಮಾನಕ್ಕೆ ಕಾರಣವಾಗುವಂತೆ ಕಾವೇರಿ ಹೋರಾಟದ ಬಗ್ಗೆ ಕಾಟಾಚಾರದ ವರದಿ ಬರೆಯುತ್ತಿವೆಯೇನೋ ಅನ್ನಿಸುತ್ತಿವೆ. ಹೀಗೆ ಮಾಡುತ್ತಿರುವ ಮಾಧ್ಯಮಗಳಲ್ಲಿ ಬರೀ ಪತ್ರಿಕೆಗಳಲ್ಲದೆ ಟಿವಿ ಮಾಧ್ಯಮದವರೂ ಸೇರಿರುವುದು ಅಚ್ಚರಿಯಾಗುತ್ತದೆ. ಅಂದು ಕಾವೇರಿ ಐತೀರ್ಪಿನ ಗೆಜೆಟ್ ಪ್ರಕಟವಾಗಿದ್ದ ದಿನ ಹೆಚ್ಚಿನ ಸುದ್ದಿವಾಹಿನಿಗಳಲ್ಲಿ ಇದು ಮುಖ್ಯವಾದ ಸುದ್ದಿಯಾಗಲೇ ಇಲ್ಲಾ! ಅದಕ್ಕೆ ತಕ್ಕಂತೆ ಹೈದರಾಬಾದಿನ ಸ್ಪೋಟ ನಡೆದು ನಾಡಿನ ಗಮನವನ್ನು ಬೇರೆಡೆಗೆ ತಿರುಗಿಸಲು ಸುಲಭವಾಗಿಬಿಟ್ಟಿತು. ಒಟ್ಟಾರೆ ಕಾವೇರಿಕೊಳ್ಳದ ಕೋಟ್ಯಾಂತರ ಕನ್ನಡಿಗರ ಬದುಕು ನಿರ್ನಾಮವಾಗುತ್ತಿದ್ದಾಗ ನಮ್ಮದೇ ನಾಡಿನ ಮಾಧ್ಯಮಗಳಿಗೆ ಈ ಬಗ್ಗೆ ಕುರುಡು ಮತ್ತು ಕಿವುಡು, ಜೊತೆಯಲ್ಲಿ ರಾಷ್ಟ್ರೀಯ ಪಕ್ಷಗಳೆಡೆ ಧೃತರಾಷ್ಟ್ರ ಪ್ರೇಮ!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!