ರಾಜಕೀಯ ಪಕ್ಷಗಳೇ! ಕೇಳ್ರಪ್ಪೋ ಕೇಳಿ.. ನಮಗೆ ಬೇಕಾದ್ದು ಇದು!

ಬರುವ ಮೇ ಐದರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಜನತಾದಳ, ಭಾರತೀಯ ಜನತಾಪಕ್ಷ, ಕರ್ನಾಟಕ ಜನತಾಪಕ್ಷ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಕಣದಲ್ಲಿವೆ. ಈ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಮಾಮೂಲಿನಂತೆ ಈ ಪ್ರಣಾಳಿಕೆಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಡುವ ಒಂದು ರೂಪಯಿ ಅಕ್ಕಿ, ಬಿಟ್ಟಿ ಕಂಪ್ಯೂಟರ್ ಮೊದಲಾದ ಕೊಡುಗೆಗಳ ಮಹಾಪೂರವೇ ಇದೆ. ನಿಜಕ್ಕೂ ಕರ್ನಾಟಕದ ಏಳಿಗೆಯ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಿಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಪಕ್ಷಗಳ ಪ್ರಣಾಳಿಕೆಯಲ್ಲಿ ಹೆಚ್ಚಾಗಿ ಅಗ್ಗದ ಜನಪ್ರಿಯತೆಯ ಯೋಜನೆಗಳನ್ನು ಬಿಟ್ಟರೆ ದೀರ್ಘಾವಧಿಯಲ್ಲಿ ಏನಾಗಬೇಕು ಎನ್ನುವ ಚಿಂತನೆಯೇ ಕಾಣದು. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಾಡು ಏನಾಗಬೇಕು? ನಾಡಿನ ಏಳಿಗೆಯ ನಾನಾ ಮೆಟ್ಟಿಲುಗಳಾವುವು? ಅವುಗಳನ್ನು ಹೇಗೆ ಈಡೇರಿಸುತ್ತೇವೆ? ಎಂಬುದರ ಬಗ್ಗೆ ಎಳ್ಳಷ್ಟೂ ಭರವಸೆಗಳಿಲ್ಲದಿರುವುದು ಕಾಣುತ್ತದೆ.

ನಾಡಿಗೆ ಬೇಕಿರುವುದು!

ಕನ್ನಡನಾಡಿನ ಏಳಿಗೆಗೆ ಆಗಬೇಕಾದ ಮಹತ್ವವಾದ ಅನೇಕ  ವಿಷಯಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ ನೋಡಿ.

ಕನ್ನಡಮಾಧ್ಯಮದಲ್ಲಿನ ಕಲಿಕೆಯನ್ನು ಜಗತ್ತಿನ ಅತ್ಯುತ್ತಮ  ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಏನೇನೆಲ್ಲಾ ಆಗಬೇಕೋ ಅದೆಲ್ಲವನ್ನೂ ಮಾಡಬೇಕು. ಯಾವ ಕಡ್ಡಾಯ ಮಾಧ್ಯಮ ಕಲಿಕೆಯೂ ಇಲ್ಲಿರುವುದಿಲ್ಲ. ಆದರೆ ಜನರಿಗೆ ತಾಯ್ನುಡಿ ಕಲಿಕೆಯ ಮಹತ್ವವನ್ನು ತಾವೇ ಕಣ್ಣಾರೆ ಕಾಣುವಂತಹ ದೂರದೃಷ್ಟಿಯನ್ನು ಹೊಂದಿರುವ ವ್ಯವಸ್ಥೆಯನ್ನು ಕಟ್ಟಬೇಕು. ಪ್ರಪಂಚದ ಎಲ್ಲಾ ಬಗೆಯ ಜ್ಞಾನ ವಿಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸವನ್ನು ಶುರುಮಾಡಬೇಕು. ಇದಕ್ಕೆ ಬೇಕಾದ ಗಡುವಿನೊಳಗೆ ಪೂರೈಸುವ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಹೊಂದಿಸುವುದು.

ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇಲ್ಲಿನ ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲೂ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯ. ಈ ನೆಲದಲ್ಲಿ ನೆಲೆಗೊಳ್ಳುವ ಯಾವುದೇ ಸಾರ್ವಜನಿಕ ಬಳಕೆಯ/ ಉಪಯುಕ್ತತೆಯ ಉದ್ದೇಶದ ಸಂಸ್ಥೆಗಳು ಕನ್ನಡದಲ್ಲಿ ವ್ಯವಹರಿಸತಕ್ಕದ್ದು.

ಈ ನಾಡಿಗಾಗಿ ಸಮಗ್ರವಾದ ನೀರಾವರಿ ಯೋಜನೆಗಳನ್ನು ರೂಪಿಸಿ ಗೊತ್ತುಮಾಡಿದ ಕಾಲಮಿತಿಯೊಳಗೆ ಜಾರಿಮಾಡತಕ್ಕದ್ದು. ರಾಜ್ಯದ ಒಳಗಿನ ಎಲ್ಲಾ ನದಿಗಳ ನೀರನ್ನು ಸದುಪಯೋಗ ಮಾಡಿಕೊಳ್ಳಲು, ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರತಿಯೊಂದು ನೀರಹನಿಯನ್ನೂ ವ್ಯರ್ಥವಾಗದಂತೆ ಸಂಗ್ರಹಿಸುವ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡುವುದು. ವ್ಯವಸಾಯ, ಕೈಗಾರಿಕೆ, ಉದ್ದಿಮೆಗಾರಿಕೆಯೇ ಮೊದಲಾದ ದುಡಿಮೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಗತ್ತಿನ ಉತ್ಕೃಷ್ಟ ಕಾರ್ಯವಿಧಾನಕ್ಕೆ ಸಾಟಿಯಾಗಬಲ್ಲ ತರಬೇತಿ, ಸಂಶೋಧನೆಯಂತಹ ಮೂಲಭೂತ ಕೆಲಸಗಳು ನಡೆಯಲು ಏರ್ಪಾಟು ಮಾಡುವುದು.

ನಾಡಿನ ಒಳಗಿನ ಪ್ರತಿನಗರಗಳ ನಡುವಿನ ರಸ್ತೆ ರೈಲು ವಿಮಾನ ಸಂಪರ್ಕಗಳನ್ನು ಅತ್ಯುತ್ತಮಗೊಳಿಸುವುದು. ಎಲ್ಲಾ ರಸ್ತೆಗಳನ್ನೂ ಆರ್ಥಿಕ ಬೆಳವಣಿಗೆಗೆ ಹೆದ್ದಾರಿಗಳಂತೆ ರೂಪಿಸುವುದು. ಇಡೀ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹುಟ್ಟಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜಿಸುವ ನೀತಿಯನ್ನು ರೂಪಿಸತಕ್ಕದ್ದು. ಯಾವುದೇ ಕಲಿಕೆಯನ್ನು ಮಾಡಿದವನಿಗೂ ತನ್ನ ಜಿಲ್ಲೆಯ ವ್ಯಾಪ್ತಿಯೊಳಗೇ ಅದಕ್ಕೆ ತಕ್ಕಂತಹ ಉದ್ಯೋಗಾವಕಾಶ ಇರುವಂತಹ ವ್ಯವಸ್ಥೆಯನ್ನು ಕಟ್ಟುವುದು. ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸುವುದು.

ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಅನುವಾಗುವಂತೆ ನಾನಾ ಯೋಜನೆಗಳನ್ನು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇಡೀ ರಾಜ್ಯಕ್ಕೆ ಸದಾಕಾಲ ಗುಣಮಟ್ಟದ ವಿದ್ಯುತ್ ಪೂರೈಸಲು ಬೇಕಾದ ಯೋಜನೆಗಳನ್ನು ರೂಪಿಸುವತ್ತಾ ದಾಪುಗಾಲಿಡುವುದು.

ಕೇಂದ್ರವು "ಭಾರತದ ದೇಶದ ಇಂದಿನ ಹುಳುಕಿನ ಭಾಷಾನೀತಿಯನ್ನು ಕೈಬಿಡತಕ್ಕದ್ದು. ಭಾರತದ ಆಡಳಿತ ಭಾಷೆಯಾಗಿ ಕನ್ನಡವನ್ನೂ ಪರಿಗಣಿಸತಕ್ಕದ್ದು. ಕನ್ನಡನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯತಕ್ಕದ್ದು. ಅಂತರರಾಜ್ಯ ವಲಸೆ ನಿಯಂತ್ರಣಕ್ಕೆ ಬಿಗಿನೀತಿಯನ್ನು ರೂಪಿಸತಕ್ಕದ್ದು" ಎಂಬ ನಿಟ್ಟಿನಲ್ಲಿ ಒತ್ತಾಯಿಸತಕ್ಕದ್ದು.

ಆರ್ಥಿಕ ಮತ್ತು ರಾಜಕೀಯ ಅಧಿಕಾರಗಳ ವಿಕೇಂದ್ರಿಕರಣಕ್ಕಾಗಿ ಕೇಂದ್ರವನ್ನು ಒತ್ತಾಯಿಸುವುದು. ಆಡಳಿತ ಪಟ್ಟಿಯನ್ನು ಮರು ರೂಪಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರಗಳನ್ನು ದಕ್ಕಿಸಿಕೊಳ್ಳುವುದು.

ಕರ್ನಾಟಕದಲ್ಲಿ ಭಾರತ ಸರ್ಕಾರ ಪ್ರಣೀತ ಕುಟುಂಬ ಯೋಜನೆಗೆ ವಿದಾಯ ಹೇಳತಕ್ಕದ್ದು. ನಮ್ಮ ನಾಡಿನ ಜನಸಂಖ್ಯೆ, ಜನದಟ್ಟಣೆ ಮತ್ತು ಹೆರುವೆಣಿಕೆಗಳನ್ನು (Target TFR) ನಾವೇ ತೀರ್ಮಾನಿಸತಕ್ಕದ್ದು.

ಕೊನೆಹನಿ: ಇವಿಷ್ಟನ್ನು ಮಾತ್ರವೇ ನಾವು ಜನಪರ ಎನ್ನುತ್ತಿಲ್ಲಾ. ಅಗ್ಗದ ಜನಪ್ರಿಯ ಯೋಜನೆಗಳನ್ನು ಒಮ್ಮೆಗೇ ಕೈಬಿಟ್ಟುಬಿಡಬೇಕು ಎನ್ನುತ್ತಿಲ್ಲಾ. ಭ್ರಷ್ಟಾಚಾರ ನಿಯಂತ್ರಣ ಮತ್ತು ಉತ್ತಮ ಆಡಳಿತಗಳ ಅಗತ್ಯವಿಲ್ಲಾ ಎನ್ನುತ್ತಿಲ್ಲಾ. ಅವೆಲ್ಲಾ ಬೇಕು. ಜೊತೆಯಲ್ಲಿ ದೀರ್ಘಾವಧಿ ಮತ್ತು ಶಾಶ್ವತವಾಗುವಂತಹ ಯೋಜನೆಗಳನ್ನು ರೂಪಿಸುವತ್ತ ನಮ್ಮ ರಾಜಕೀಯ ಪಕ್ಷಗಳು ಯೋಚಿಸಲಿ ಎನ್ನುತ್ತಿದ್ದೇವೆ.. ಇಂಥದ್ದೊಂದು ನಮ್ಮ ನಾಡಿಗೆ ಬೇಕು ಎನ್ನುವುದನ್ನು ಮತದಾರರು ಬಯಸುತ್ತಿದ್ದಾರೆ ಎಂದು ಹೇಳುತ್ತಿದ್ದೇವೆ...ಅಷ್ಟೇ!

ಕನ್ನಡಿಗರ ಕಣ್ಮಣಿಯ ನೆನಪಲ್ಲಿ...


(ವಿಡಿಯೋ ಕೃಪೆ: ಯೂಟ್ಯೂಬ್)

ಇಂದು ಡಾ. ರಾಜ್‌ಕುಮಾರ್ ಹುಟ್ಟಿದ ದಿನ. ಕನ್ನಡಪರರ ಪಾಲಿಗೆ ನಾಡಪರ ಬದ್ಧತೆಯನ್ನು ಮರುಖಾತ್ರಿ ಪಡಿಸುವ ದಿನವಿದು ಎಂದರೆ ತಪ್ಪಾಗಲಾರದು. ತನ್ನ ಚಿತ್ರಗಳಿಂದ, ಚಿತ್ರಗಳಲ್ಲಿನ ಪಾತ್ರಗಳಿಂದ ನಮ್ಮೆಲ್ಲರ ಮೈಮನಗಳನ್ನು ಆವರಿಸುವ ರಾಜ್ ಅವರು ನಮ್ಮ ಸಮಕಾಲೀನರು ಎನ್ನುವುದೇ ಒಂದು ಹೆಮ್ಮೆಯ ವಿಷಯ. ಈ ದಿನ ಅವರನ್ನು ನೆನೆಸದ ಕನ್ನಡಿಗರೇ ಇಲ್ಲಾ! ರಾಜ್! ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನದ ಮನವೇ ಇಲ್ಲಾ!

ತಾವು ಅಭಿನಯಿಸಿದ ಪಾತ್ರಗಳು ಎಂಥವೇ ಇರಲಿ.. ಎಂದಿಗೂ ಸಭ್ಯತೆಯನ್ನು ಮೀರದ ಪಾತ್ರಗಳು ಅವಾಗಿರುತ್ತಿದ್ದವು. ಕನ್ನಡಜನತೆಯ ಇತಿಹಾಸವನ್ನು ಮತ್ತೆ ಕಣ್ಮುಂದೆ ಕಟ್ಟಿಕೊಟ್ಟು ನಾವೇನೂ ಕುರಿಮರಿಗಳಲ್ಲಾ... ದೊಡ್ಡದನ್ನು ಸಾಧಿಸಲೆಂದೇ ಹುಟ್ಟಿರುವ ಸಿಂಹಗಳು ಎಂಬುದನ್ನು ಸದಾ ನೆನಪಿಸುವ ಮಯೂರ ಚಿತ್ರದ ಈ ದೃಶ್ಯ ಸದಾ ಪ್ರೇರಕ, ಸ್ಪೂರ್ತಿದಾಯಕ. ಡಾ. ರಾಜ್ ಹುಟ್ಟುಹಬ್ಬದ ಶುಭಾಶಯಗಳು!!

ಬಿಜೆಪಿ ಪ್ರಣಾಳಿಕೆಯಲ್ಲಿ ಡಬ್ಬಿಂಗ್‌ಗೆ ಪರವಾನಿಗೆ!

ಭಾರತೀಯ ಜನತಾಪಕ್ಷದ ವಿಧಾನಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಇದರಲ್ಲಿ ಬಹಳ ವಿಶೇಶವಾದ ಸಂಗತಿಯೆಂದರೆ ಡಬ್ಬಿಂಗ್ ಬಗ್ಗೆ ಬಿಜೆಪಿ ಮಾಡಿರುವ ಪ್ರಸ್ತಾಪ. ರಾಜಕೀಯ ಪ್ರಣಾಳಿಕೆಯ ಅಂಗವಾಗುವಷ್ಟರ ಮಟ್ಟಿಗೆ "ಡಬ್ಬಿಂಗ್" ಎನ್ನುವುದು ಕನ್ನಡ ಸಮಾಜದಲ್ಲಿ ಚರ್ಚೆಯ ಮುಖ್ಯ ಅಂಶವಾಗಿರುವುದು ಗಮನಾರ್ಹವಾದ ವಿಷಯವಾಗಿದೆ!

ಪ್ರಣಾಳಿಕೆಯಲ್ಲಿ ಡಬ್ಬಿಂಗ್

ಬಿಜೆಪಿಯ ಪ್ರಣಾಳಿಕೆಯಲ್ಲಿ ಡಬ್ಬಿಂಗ್ ಕುರಿತಾಗಿ ಹೀಗೆ ಬರೆಯಲಾಗಿದೆ: ಸಾರಾಸಗಟು ಡಬ್ಬಿಂಗ್ ಮಾಡುವುದಕ್ಕೆ ನಿಯಂತ್ರಣ; ಸಮುದಾಯಕ್ಕೆ ಶಿಕ್ಷಣ, ಜಾಗೃತಿ ನೀಡುವ ಸಾಕ್ಷ್ಯಚಿತ್ರಗಳಿಗೆ ಮೊದಲು ಕನ್ನಡದ ಸಬ್‌ಟೈಟಲ್; ಅತ್ಯಂತ ಅಗತ್ಯವಿದ್ದರೆ ಮಾತ್ರ ಸೂಕ್ತ ಪರವಾನಗಿ ವಿಧಾನದಲ್ಲಿ ಪರವಾನಗಿ.

ಈ ಭರವಸೆಯನ್ನು ಕಂಡಾಗ ಮನಸ್ಸೊಳಗೆ ಹೊಸ ಭರವಸೆ ಮೂಡ್ತಾಯಿದೆ ಗುರೂ! ಒಟ್ನಲ್ಲಿ ಕನ್ನಡಿಗರಿಗೆ ಶಾಪವಾಗಿದ್ದ "ಸಾರಾಸಗಟು ಡಬ್ಬಿಂಗ್ ನಿಶೇಧ"ವನ್ನು ಇಲ್ಲವಾಗಿಸಲಾಗುತ್ತದೆ ಎನ್ನುವ ಹಿಗ್ಗು ಒಂದೆಡೆಯಾದರೆ ಈ ಭರವಸೆಯ ಹಿಂದಿರುವ ಮನಸ್ಥಿತಿ ನಾಡಿನ ಆರುಕೋಟಿ ಜನರ ಪರವಾಗಿರದೆ ಕೆಲವು ಉದ್ಯಮದ ಮಂದಿಯ ಪರವಾಗಿದೆಯೇನೋ ಎನ್ನುವಂತಿರುವುದು  ಒಂಚೂರು ಕಸಿವಿಸಿಗೆ ಕಾರಣವಾಗಿದೆ.

ಮೊದಲು ಸಬ್‌ಟೈಟಲ್ಲು,ವಿಧಿಯಿಲ್ಲದಿದ್ದರೆ ಡಬ್ಬಿಂಗಿಗೆ ಪರವಾನಗಿ ಕೊಡಲಾಗುತ್ತದೆ ಎನ್ನುವುದರಲ್ಲೇ ನಲವತ್ತೈದಕ್ಕೂ ಹೆಚ್ಚು ವರ್ಷಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳು ಬರದಂತೆ ತಡೆಯುತ್ತಿರುವ  "ಹತೋಟಿಕೂಟ"ಕ್ಕೆ ಅಧಿಕೃತತೆಯನ್ನು ತಂದುಕೊಡುತ್ತಿರುವ ಧ್ವನಿಯಿದೆ! ಒಟ್ಟಿನಲ್ಲಿ ಭಾರತದ ಸಂವಿಧಾನ  ನೀಡಿರುವ ಮೂಲಭೂತಹಕ್ಕನ್ನು ಕಸಿದುಕೊಂಡಿರುವವರ ರಾಯಭಾರಿಗಳಾಗಿ "ಇನ್ನು ನಿಮಗಿಷ್ಟು ಸ್ವಾತಂತ್ರ್ಯ ಕೊಡುತ್ತಿದ್ದೇವೆ" ಎನ್ನುವ ದೊಣೆನಾಯಕರಾಗಿ ಬಿಜೆಪಿ ನೀಡಿರುವ ಪ್ರಣಾಳಿಕೆಯಿರುವುದು ಸೋಜಿಗದ ವಿಷಯವಾಗಿದೆ ಗುರೂ!

ಕುಮಾರಣ್ಣಾ... ಕರ್ನಾಟಕದಲ್ಲಿ ಸುಮಾರು ೬೦ ಸಾವಿರ ಶಾಲೆಗಳಿವೆ!


ಜಾತ್ಯಾತೀತ ಜನತಾದಳದವರು ಬರಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳಂತೆಯೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಒಂದಲ್ಲಾ ಎರಡು ಪ್ರಣಾಳಿಕೆಗಳು - ಕರ್ನಾಟಕಕ್ಕೊಂದು! ಬೆಂಗಳೂರಿಗೆ ಮತ್ತೊಂದು!! ಈ ಬೆಂಗಳೂರು ನಗರಕ್ಕಾಗಿ ಬಿಟ್ಟಿರುವ ಪ್ರಣಾಳಿಕೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಒಂದು ಪ್ರಮುಖವಾದ ಭರವಸೆಯನ್ನು ನೀಡಿದ್ದಾರೆ. "ನಗರದ ಪ್ರತಿ ವಾರ್ಡುಗಳಲ್ಲಿ ಇಂಗ್ಲೀಶ್ ಮಾಧ್ಯಮವಿರುವ ಮಾದರಿ ಶಾಲೆಗಳನ್ನು ತೆರೆಯಲಾಗುವುದು" ಎಂಬುದಾಗಿ ಇದರಲ್ಲಿ ಹೇಳಿದರೆ, ರಾಜ್ಯ ಪ್ರಣಾಳಿಕೆಯಲ್ಲಿ "ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಆರಂಭಿಸಿ ಬಡವರ ಮಕ್ಕಳು ಸರ್ಕಾರಿ  ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅನುಕೂಲ ಕಲ್ಪಿಸಲಾಗುವುದು" ಎನ್ನಲಾಗಿದೆ. ನಾಡು ನುಡಿ ಬಗ್ಗೆ ಬದ್ಧತೆ, ನಾಳೆಗಳ ಬಗ್ಗೆ ಗುರಿ ಸರಿಯಾಗಿದ್ದವರು ಆಡೋ ಮಾತಾ ಇದು ಅನ್ನೋಕ್ಕಿಂತಲೂ... ನಮ್ಮ ಮಕ್ಕಳ ಭವಿಷ್ಯ ಸರಿಯಾಗಿ ಕಟ್ಟಬೇಕೆಂದು ಬಯಸೋರು ಯೋಚಿಸೋ ರೀತೀನಾ ಇದು ಎಂದು ಜನತೆ ಆಡಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ ಗುರೂ!

ಪ್ರಾಥಮಿಕ ಶಿಕ್ಷಣ: ವೈಜ್ಞಾನಿಕತೆ ಮತ್ತು ಮರುಳು!

ಜಗತ್ತಲ್ಲಿ ಎಲ್ಲಾ ತಜ್ಞರೂ ತಾಯ್ನುಡಿಯಲ್ಲಿ ಕಲಿಕೆ ಅತ್ಯುತ್ತಮ ಎನ್ನುವುದನ್ನು ಸಾರುತ್ತಲೇ ಬಂದಿದ್ದರೂ ಯಾವ ಆಧಾರದ ಮೇಲೆ ಜನತಾದಳ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಬಗ್ಗೆ ಉತ್ಸುಕತೆ ತೋರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿಲ್ಲ! ಖಾಸಗಿ ಶಾಲೆಗಳ ಮಂದಿ, ಸಾಮಾನ್ಯ ಜನರಲ್ಲಿ... ಅವರ ಮಕ್ಕಳ ಭವಿಷ್ಯದ ಬಗ್ಗೆ ಭೀತಿ ಹುಟ್ಟಿಸಿ, ಇಂಗ್ಲೀಶ್ ಮಾಧ್ಯಮದ ಶಾಲೆಗಳಿಗೆ ಸೆಳೆಯುತ್ತಿರುವ ‘ಜನಮರುಳೋ ಜಾತ್ರೆ ಮರುಳೋ’ ಎನ್ನುವ ಇಂದಿನ ಪರಿಸ್ಥಿತಿಯಲ್ಲಿ... ಜನಪರವೆಂದು ಕರೆದುಕೊಳ್ಳುವ ರಾಜಕೀಯ ಪಕ್ಷವೊಂದು ತಾನು "ಜನರ ಮರುಳು ಕಳೆಯುವ ದಿಟದೆಡೆಗೆ ಸಾಗಬೇಕೋ ಅಥವಾ ಜನರನ್ನು ಕತ್ತಲೆಯಿಂದ ಕಗ್ಗತ್ತಲೆಗೆ ತಳ್ಳಬೇಕೋ?" ಇಷ್ಟಕ್ಕೂ ‘ಪ್ರಾಥಮಿಕ ಶಿಕ್ಷಣ’ ಎನ್ನುವ ತಲೆಬರಹ ಕೊಟ್ಟು ಅದರಲ್ಲಿ ಇವರು ಬರೆದುಕೊಂಡಿರುವ ಭರವಸೆಗಳನ್ನು ಕಂಡಾಗ ಅಷ್ಟೊಂದು ಹಳೆಯದಾದ ಅಷ್ಟೊಂದು ದೊಡ್ಡದಾದ ರಾಜಕೀಯ ಪಕ್ಷವೊಂದು ಇಷ್ಟೊಂದು ಕಳಪೆ ಮುನ್ನೋಟ ಹೊಂದಿರಲು ಸಾಧ್ಯವೇ ಎನ್ನುವ ಅಚ್ಚರಿಯಾಗುತ್ತದೆ. ಮಧ್ಯಾಹ್ನದ ಊಟ, ಶಿಕ್ಷಕರ ಕೆಲಸದ ಖಾಯಂಗೊಳಿಸುವಿಕೆಗಳ ಬಗ್ಗೆ ಮಾತಾಡುವ ಇವರು ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಬಗ್ಗೆ, ಶಾಲೆಗಳ ಗುಣಮಟ್ಟ ಮೂಲಸೌಕರ್ಯಗಳ ಬಗ್ಗೆ, ಮುಚ್ಚಲಾಗುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಕಮಕ್ ಕಿಮಕ್ ಅಂದಿಲ್ಲ!

ನಂಬಿದಂತೆ ನಡೆಯಲಿ...

ನಿಜಕ್ಕೂ ಜಾತ್ಯಾತೀತ ಜನತಾದಳದ ನಂಬಿಕೆಯು ಕನ್ನಡನಾಡಿನ ಮಕ್ಕಳ ಭವಿಷ್ಯ ಇಂಗ್ಲೀಶ್ ಮಾಧ್ಯಮದಲ್ಲಿದೆ ಎನ್ನುವುದಾದರೆ ಇದ್ಯಾಕೆ ಬರೀ ಬೆಂಗಳೂರಿನ ಶಾಲೆಗಳನ್ನು ಇಂಗ್ಲೀಶ್ ಮಾಧ್ಯಮ ಮಾಡೋ ಯೋಚನೆ ಇವರದ್ದು? ಪಾಪಾ!! ಬೆಂಗಳೂರಿನ ಆಚೆ ಬದುಕುತ್ತಿರುವ ಮಕ್ಕಳು ಏನು ಪಾಪ ಮಾಡಿದ್ದರು? ಅವರಿಗೆ ಮಾತ್ರಾ ಯಾಕೆ ಐದನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ? ನಿಜವಾಗ್ಲೂ ತಾವು ಏನು ಮಾಡಬೇಕೆಂದು ಹೊರಟಿದ್ದಾರೋ ಅದರ ಬಗ್ಗೆ ನಂಬಿಕೆಯಿದ್ದಲ್ಲಿ ಇಡೀ ಕರ್ನಾಟಕದ ಕಲಿಕಾ ಮಾಧ್ಯಮವನ್ನು ಅಂದರೆ ರಾಜ್ಯದಲ್ಲಿರುವ ೫೫~೬೦ ಸಾವಿರ ಶಾಲೆಗಳಲ್ಲಿ ಇಂಗ್ಲೀಶ್ ಮಾಧ್ಯಮ ಮಾಡುತ್ತೇವೆ ಎನ್ನಬೇಕಪ್ಪಾ!! ವಾಸ್ತವ ಏನಂದ್ರೆ ದಿಟವನ್ನು ಜನಕ್ಕೆ ಒಪ್ಪಿಸಿ ಸರಿಯಾದ ನಿಲುವನ್ನು ಎತ್ತಿಹಿಡಿಯಬೇಕಾದ ರಾಜಕೀಯಪಕ್ಷವೊಂದು ಮತಬೇಟೆಗಾಗಿ ಸುಳ್ಳನ್ನೇ ಮೆರೆಸುವ ಭರವಸೆ ನೀಡ್ತಿರೋದು ದುರಂತಾ ಅನ್ಸಲ್ವಾ?!

ಕೊನೆಹನಿ:  ಅಂದಂಗೆ ಜನತಾದಳದ ಮಹನೀಯರಿಗೆ ಇರುವ ಇನ್ನೊಂದು ನಂಬಿಕೆ ಅವರ ಪ್ರಣಾಳಿಕೆಯಲ್ಲಿ ಎದ್ದೆದ್ದು ಕಾಣ್ತಿದೆ... ಅದೆಂದರೆ ಇಂಗ್ಲೀಶ್ ಮಾಧ್ಯಮ ಶಿಕ್ಷಣವೆಂದರೆ ಗುಣಮಟ್ಟದ ಶಿಕ್ಷಣ ಎನ್ನುವುದು!! ಇದು ಬರೀ ಜನತಾದಳಕ್ಕೆ ಸೀಮಿತವಾಗಿಲ್ಲ. ಬೆಂಗಳೂರಿನ ಪಾಲಿಕೆ ಶಾಲೆಗಳನ್ನು ಕೇಂದ್ರೀಯ ಪಟ್ಯಕ್ರಮಕ್ಕೆ ಬದಲಿಸಿದ್ದು ರಾಜ್ಯ ಬಿಜೆಪಿ ಸರ್ಕಾರ ಅನ್ನೋದನ್ನು ಮರೆಯೋ ಹಾಗಿಲ್ಲ! ಇವರೆಲ್ಲಾ ಬಳಸೋದು ಇದೇ ಅಸ್ತ್ರ "ಬಡವರಿಗೆ ಗುಣಮಟ್ಟದ ಶಿಕ್ಷಣ - ಇಂಗ್ಲೀಶ್ ಮಾಧ್ಯಮದ್ದು" ಎನ್ನುವುದನ್ನೇ!

ಬರುವ ರವಿವಾರ ಹೊತ್ತಗೆ ಬಿಡುಗಡೆ ಕಾರ್ಯಕ್ರಮ... ಬನ್ನಿ!


ಬನವಾಸಿ ಬಳಗವು ಹೊಸದೊಂದು ಹೊತ್ತಗೆಯನ್ನು ಹೊರತರುತ್ತಿದೆ. ಬನವಾಸಿ ಬಳಗ ಪ್ರಕಾಶನದ ವತಿಯಿಂದ ಆನಂದ್ ಬರೆದಿರುವ ಹೊಸಹೊತ್ತಗೆ "ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ" ಎನ್ನುವ ಹೊತ್ತಗೆಯನ್ನು ಹೊರತರಲಾಗುತ್ತಿದೆ. ಈ ಹೊತ್ತಗೆಯ ಮುಖಪುಟ ಹೀಗಿದೆ:


 ಹೊತ್ತಗೆಯ ಮೊದಲಮಾತಿನಲ್ಲಿ ಹೀಗೆ ಬರೆಯಲಾಗಿದೆ:
ನಮ್ಮ ಬದುಕನ್ನು ಹಸನಾಗಿಸುವ, ನಮ್ಮ ಏಳಿಗೆಯ ಕನಸನ್ನು ನನಸಾಗಿಸುವ ಒಂದು ರಾಜಕೀಯ ವ್ಯವಸ್ಥೆಯನ್ನು ಕಟ್ಟಿಕೊಳ್ಳುವುದು ನಮ್ಮ ಹೊಣೆಗಾರಿಕೆ ಮತ್ತು ಉಳಿವಿನ ಅಗತ್ಯವಾಗಿದೆ. ಪ್ರಜಾಪ್ರಭುತ್ವ ಮಾದರಿಯೇ ಜಗತ್ತಿನ ಅತ್ಯುತ್ತಮ ಆಳ್ವಿಕೆಯ ಮಾದರಿಯೆಂಬುದನ್ನೂ, ಪ್ರಜಾಪ್ರಭುತ್ವದ ಮೂಲವೇ ಸ್ವಯಮಾಡಳಿತ ಮತ್ತು ಅಧಿಕಾರ ವಿಕೇಂದ್ರೀಕರಣವೆಂಬುದನ್ನೂ ಬಲ್ಲವರಿಗೆ ಭಾರತದ ಇಂದಿನ ರಾಜಕೀಯ ಏರ್ಪಾಟುಗಳಲ್ಲಿರುವ ತೊಡಕುಗಳು ಕಾಣುತ್ತವೆ. ಅತಿಯಾದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಬದುಕಿರುವ ನಾವು ಅದನ್ನು ಬದಲಿಸಬಲ್ಲಷ್ಟು ಸ್ವತಂತ್ರ್ಯರು ಎನ್ನುವುದು ಸಮಾಧಾನದ ವಿಷಯ!
ಭಾರತದ ರಾಜಕಾರಣದ ಕೇಂದ್ರೀಕೃತ ವ್ಯವಸ್ಥೆಯ ಪ್ರತೀಕವಾಗಿ ಇಲ್ಲಿ ರಾಷ್ಟ್ರೀಯ ಪಕ್ಷಗಳ ಅಸ್ತಿತ್ವವಿದೆ. ಯಾವುದೋ ಒಂದು ಸರ್ಕಾರ ದೂರದ ದೆಹಲಿಯಲ್ಲಿ ಕುಳಿತು ನಮ್ಮ ಬದುಕುವ ರೀತಿಯ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುವುದು ಸಾಧುವೂ ಅಲ್ಲಾ ಸಾಧ್ಯವೂ ಅಲ್ಲ! ಹೀಗಾಗಿ ಪ್ರಕೃತಿಯು ತನ್ನಲ್ಲಿನ ಏರುಪೇರುಗಳಿಗೆ ತಾನೇ ಸಮಾಧಾನ, ಪರಿಹಾರ ಕಂಡುಕೊಳ್ಳುವಂತೆ... ಭಾರತದ ಅತಿಕೇಂದ್ರಿತ ರಾಜಕೀಯ ವ್ಯವಸ್ಥೆಗೆ ಸಮಾಜ ತಾನೇತಾನಾಗಿ ಪರಿಹಾರಗಳನ್ನು ರೂಪಿಸಿಕೊಳ್ಳುತಿರುವುದನ್ನು ನಾವು ಪ್ರಾದೇಶಿಕ ಪಕ್ಷಗಳ ಅಸ್ತಿತ್ವ, ದಿನೇ ದಿನೇ ಹೆಚ್ಚುತ್ತಿರುವ ಪ್ರಾಬಲ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಅವುಗಳು ವಹಿಸುತ್ತಿರುವ ಪಾತ್ರಗಳ ಮೂಲಕ ಕಂಡುಕೊಳ್ಳಬಹುದಾಗಿದೆ.
ಈ ಹೊತ್ತಗೆಯಲ್ಲಿ ಭಾರತದ ರಾಜಕೀಯ ವ್ಯವಸ್ಥೆ, ಈ ವ್ಯವಸ್ಥೆಯ ಅಂಗವಾಗಿರುವ ರಾಜಕೀಯ ಪಕ್ಷಗಳ ಬಗ್ಗೆ, ಅವು ನಮ್ಮ ಬದುಕಲ್ಲಿ ವಹಿಸಿದ ಪಾತ್ರಗಳ ಬಗ್ಗೆ, ಈ ನಾಡಿನಲ್ಲಿ ಸರಿಹೋಗಬೇಕಾದ ವ್ಯವಸ್ಥೆಗಳ ಬಗ್ಗೆ, ಇದನ್ನು ರೂಪಿಸುವಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದೇನೆ. ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯೇ ಸರಿಯಾಗಿ ಇಲ್ಲದಿರುವ ಸಂದರ್ಭದಲ್ಲಿ ಒಪ್ಪುಕೂಟದ ಕನಸನ್ನು ನಿಮ್ಮ ಮುಂದಿಟ್ಟಿದ್ದೇನೆ. ಇದನ್ನು ಸಾಧಿಸಲು ಬೇಕಾದ ರಾಜಕೀಯ ಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇನೆ. ಇವೆಲ್ಲವೂ ನಾಳಿನ ನಮ್ಮ ನಾಡು ಕಟ್ಟುವಲ್ಲಿ ಹೊಸ ಕಸುವಿಗೆ ಕಾರಣವಾಗಲೆನ್ನುವುದು ನನ್ನ ಆಸೆ. ಈ ಹೊತ್ತಗೆಯಲ್ಲಿ ಭಾರತದ ಇಂದಿನ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಗಳು ಒಟ್ಟಾರೆ ಪ್ರಜಾಪ್ರಭುತ್ವದ ಆಶಯಗಳಿಗೆ ಹೇಗೆ ವಿರೋಧಿಯಾಗಿವೆ, ಹೇಗೆ ಕನ್ನಡನಾಡಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಯಲು ವಿಫಲವಾಗುತ್ತಿವೆ, ಹೇಗೆ ನಮ್ಮ ಏಳಿಗೆಗೆ ಅಡ್ಡಗಾಲಾಗಿ ನಿಂತಿವೆ ಎಂಬುದರ ಬಗ್ಗೆ ಓದುಗರ ಗಮನ ಸೆಳೆಯಲು ಯತ್ನಿಸಿದ್ದೇನೆ. ಹಾಗಾಗೇ ಈ ಹೊತ್ತಗೆಯ ಹೆಸರನ್ನು “ರಾಷ್ಟ್ರೀಯ ಪಕ್ಷಗಳ ಆಳ್ವಿಕೆ: ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ” ಎಂದು ಹೆಸರಿಸಿದ್ದೇನೆ.
ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ

ಬಿಡುಗಡೆಯ ದಿನ ನಮ್ಮೊಡನೆ ನೀವಿದ್ದರೆ ಚೆನ್ನ. ಬರುವ ಭಾನುವಾರ (೦೭.೦೪.೨೦೧೩)ರಂದು ಬೆಳಗ್ಗೆ ೧೦:೦೦ ಗಂಟೆಗೆ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯ ರವೀಂದ್ರಕಲಾಕ್ಷೇತ್ರದ ಆವರಣದಲ್ಲಿರುವ ಕನ್ನಡ ಭವನದ ತಳಮಹಡಿಯ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದೇವೆ. ಅಂದು ನಮ್ಮೊಡನೆ ಅನೇಕ ಗಣ್ಯರು ಇರಲಿದ್ದಾರೆ. ಅನೇಕ ಕನ್ನಡಪರರು ಇರಲಿದ್ದಾರೆ. ಜೊತೆಯಲ್ಲಿ ನೀವೂ ಇದ್ದರೆ ನಮ್ಮ ಹಿಗ್ಗು ಹೆಚ್ಚುವುದು! ಬನ್ನಿ... ಪಾಲ್ಗೊಳ್ಳಿ! ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಗಳಾಗಿ...
Related Posts with Thumbnails