ಸಿಬಿಎಸ್‌ಇ: ಇನ್ಮುಂದೆ ಕಡಿವಾಣವಿಲ್ಲದ ಕುದುರೆ!

(ಚಿತ್ರಕೃಪೆ: ಉದಯವಾಣಿ)
ಇದುವರೆವಿಗೆ ರಾಜ್ಯಸರ್ಕಾರದ ಅನುಮತಿ (ನಿರಾಕ್ಷೇಪಣಾ ಪತ್ರ) ಇಲ್ಲದೆ ಸಿ.ಬಿ.ಎಸ್.ಇ ಶಾಲೆಗಳನ್ನು ಶುರುಮಾಡುವಂತಿಲ್ಲಾ ಎಂದಿದ್ದ ನಿಯಮವನ್ನು ಸಡಿಲ ಮಾಡಿರುವ ಕೇಂದ್ರದ ಕ್ರಮದಿಂದಾಗಿ, ರಾಜ್ಯಸರ್ಕಾರದ ಬಳಿಯಿದ್ದ ಒಂದೇ ಒಂದು ಅಂಕುಶವೂ ಇಲ್ಲದಂತಾಗಿರುವ ಕಳವಳಕಾರಿ ಸುದ್ದಿ ೨೭.೧೦.೨೦೧೩ರ ಉದಯವಾಣಿ ದಿನಪತ್ರಿಕೆಯಲ್ಲಿ ಬಂದಿದೆ.

ರಾಜ್ಯಸರ್ಕಾರದ ಬಳಿಯಿದ್ದ ಕಡಿವಾಣ

ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ ಶಾಲೆಗಳು ಸಿಬಿಎಸ್‌ಇ ಬೋರ್ಡ್ ಅಧೀನ ಬರುತ್ತವೆ ಮತ್ತು ಇವುಗಳನ್ನು ಆರಂಭಿಸಲು ರಾಜ್ಯಸರ್ಕಾರದ ಅನುಮತಿ ಕಡ್ಡಾಯ ಎನ್ನಲಾಗಿತ್ತು. 
ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು ವಿಧಿಸಿರೋ ಕರಾರು...
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (N.O.C) ಸಲ್ಲಿಸಬೇಕು ಅನ್ನೋ ನಿಯಮಾನ ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆ ಇಲ್ಲ.
ನಿರಾಕ್ಷೇಪಣಾ ಪತ್ರ ಕೊಡಲು ಇರೋ ನಿಯಮಾ...
ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ ಕೊಡಕ್ಕೆ ಅಂತಾನೆ ಒಂದು ನಿಯಮಾನಾ 1989ರಲ್ಲೇ ಮಾಡಿದೆ. ಅದುಕ್ಕೆ ಆಗಿಂದಾಗ್ಗೆ ತಿದ್ದುಪಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.
- ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
ಇದಕ್ಕೆ 2002ರಲ್ಲಿ ಒಂದು ತಿದ್ದುಪಡಿ ಮಾಡಿ, ‘ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು’ ಎಂದು ಸೇರಿಸಿದ್ದಾರೆ. ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
ಇಂಥಾ ನಿಯಮವಿದ್ದಾಗಲೂ ರಾಜ್ಯಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿಮಾಡುವಲ್ಲಿ ಪೂರ್ತಿ ಯಶಸ್ವಿಯಾಗದಿದ್ದರೂ, ಹೀಗೆ ಹೇಳಿಕೊಳ್ಳಲಿಕ್ಕಾದರೂ ಒಂದು ನಿಯಮವನ್ನು ರಾಜ್ಯಸರ್ಕಾರ ಮಾಡಿತ್ತು. ಇದೀಗ ರಾಜ್ಯಸರ್ಕಾರದ ಅನುಮತಿಯ ಅಗತ್ಯವಿಲ್ಲ ಎಂದು ಸಿಬಿಎಸ್‌ಇ ಬೋರ್ಡು ನಿಯಮ ಬದಲಾಯಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಎಗ್ಗುಸಿಗ್ಗಿಲ್ಲದೆ ಸಿಬಿಎಸ್‌ಇ ಶಾಲೆಗಳು ಇನ್ಮುಂದೆ ಆರಂಭವಾಗಲಿವೆ.

ಇದು ಒಕ್ಕೂಟದ ಮೇಲಿನ ದಾಳಿ

ಕಲಿಕೆ ಎನ್ನುವುದು ೧೯೭೬ಕ್ಕೆ ಮೊದಲು ರಾಜ್ಯಪಟ್ಟಿಯಲ್ಲಿದ್ದದ್ದು ಇದೀಗ ಜಂಟಿಪಟ್ಟಿಯಲ್ಲಿದೆ. ಅಂದರೆ ಕೇಂದ್ರ ಮಾಡುವ ಕಟ್ಟಳೆಗಳೇ ಅಂತಿಮ. ಇಂಥಾ ನಿಯಮದಿಂದಾಗಿ ರಾಜ್ಯಗಳು ತನ್ನ ನಾಡಿನ ಪ್ರಜೆಗಳಿಗೆ ಏನು ಕಲಿಸಬೇಕು ಎನ್ನುವುದನ್ನು ಕೇಂದ್ರ ನಿರ್ಧರಿಸುತ್ತಿದೆ. ಇದು ಸರಿಯಾಗಬೇಕೆಂದರೆ ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣವೆನ್ನುವುದು ರಾಜ್ಯಪಟ್ಟಿಗೆ ಮರಳಿ ಬರಬೇಕು. ಅಧಿಕಾರ ವಿಕೇಂದ್ರೀಕರಣ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎನ್ನುವುದಕ್ಕೆಲ್ಲಾ ಆಗ ಅರ್ಥ ಸಿಕ್ಕೀತು! ಒಕ್ಕೂಟ ವ್ಯವಸ್ಥೆಯ ಮೇಲಿನ ಈ ದಾಳಿಯನ್ನು ಕೊನೆಗೊಳಿಸಲು ರಾಜ್ಯಸರ್ಕಾರಗಳು ಒಟ್ಟಾಗಿ ದನಿಯೆತ್ತಬೇಕು.

ಕನ್ನಡಕ್ಕೆ ಸಂಸ್ಕೃತ ತಾಯಿ - ದಾಯಿ ಎಂಬ ಮತ್ತದೇ ಕಾಗಕ್ಕ ಗುಬ್ಬಕ್ಕನ ಕಥೆ!


ನಿನ್ನೆಯ ದಿವಸ, ಸಂಸ್ಕೃತ ಸಂಜೆ ಕಾಲೇಜು ಉದ್ಘಾಟನೆಯ ಕಾರ್ಯಕ್ರಮ ನಡೆಯಿತೆಂಬ ಸುದ್ದಿ ಇವತ್ತಿನ (೨೦.೧೦.೨೦೧೩ರ) ಸುದ್ದಿಹಾಳೆಗಳಲ್ಲಿ ಬಂದಿದೆ. ಇದರಲ್ಲಿ ಕರ್ನಾಟಕ ರಾಜ್ಯಪಾಲರು ಪಾಲ್ಗೊಂಡು ಮಾತಾಡಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ಼್ ಲಿವಿಂಗ್ ಆಶ್ರಮದಲ್ಲಿ ನಡೆದ ಮತ್ತೊಂದು ಇಂಥದ್ದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಕತೆಗಾರರಾದ ಶ್ರೀ ಎಸ್.ಎಲ್.ಭೈರಪ್ಪನವರೂ, ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರೂ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ಮಾತಾಡಿದ ಸುದ್ದಿ ಪ್ರಕಟವಾಗಿದೆ. ಎರಡೂ ಸುದ್ದಿಗಳ ಸಾರ ಒಂದೇ ಆಗಿರೋದು ಕಾಗೆ ಕೂತು ಟೊಂಗೆ ಮುರಿದ ಹಾಗೇನೂ ತೋರುತ್ತಿಲ್ಲ.

ಸುಳ್ಳುಗಳ ಸರಮಾಲೆ

ಸಂಸ್ಕೃತವನ್ನು ಒಪ್ಪಿಸುವ ಮತ್ತು ಮೆಚ್ಚಿ ಕೊಂಡಾಡುವ ಹುಮ್ಮಸ್ಸಿನಲ್ಲಿ ಎರಡೂ ಕಡೆ ಹೇಳಲಾದ ಸುಳ್ಳುಗಳನ್ನು ನೋಡಿ. ಇದುವರೆವಿಗೂ ಸಂಸ್ಕೃತವನ್ನು ಕನ್ನಡಕ್ಕೆ ತಾಯಿ ಎನ್ನುತ್ತಿದ್ದ ಸುಳ್ಳನ್ನೇ ರಾಜ್ಯಪಾಲರು ಮುಂದುವರೆಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಮತ್ತೊಬ್ಬ ಹಿರಿಯರಾದ ನ್ಯಾಯಮೂರ್ತಿ ಎನ್. ಕುಮಾರ್ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತೀಯ ಸಂಸ್ಕೃತಿ ಅಡಗಿರುವುದೇ ಸಂಸ್ಕೃತದಲ್ಲಿ.. ಸಂಸ್ಕೃತ ಅರಿಯದೇ ಭಾರತದ ಸಂಸ್ಕೃತಿ ಅರಿಯಲು ಕಷ್ಟ... ಕನ್ನಡ ಸಂಸ್ಕೃತದ ಮಗಳು.. ಎಂದೆಲ್ಲಾ ಹೇಳಿದ್ದಾರೆ. ಹೀಗೆ ಕನ್ನಡದ ತಾಯಿಯ ಹೊಣೆಗಾರಿಕೆಯನ್ನು ಸಂಸ್ಕೃತಕ್ಕೆ ಪುಕ್ಕಟೆಯಾಗಿ ಹೊರಿಸಿಬಿಟ್ಟಿದ್ದನ್ನು ನೋಡಿದರೆ ಹಿಂದೊಮ್ಮೆ ತಮಿಳ ಕರುಣಾನಿಧಿಯವರು "ಕನ್ನಡಿಗರು - ತಮಿಳರ ಚಿಕ್ಕತಮ್ಮಂದಿರು" ಎಂಬ ಹೇಳಿಕೆ ನೀಡಿ ಅಣ್ಣನ ದೊಡ್ಡಸ್ತಿಕೆ ತೋರಿದ್ದು ನೆನಪಾಗುತ್ತದೆ. ಇದೇ ದೊಡ್ಡತನ ತೋರುತ್ತಾ ಕುಮಾರ್ ಅವರು ಕನ್ನಡ ಬೆಳೆದರೆ ಸಂಸ್ಕೃತಕ್ಕೆ ಬೇಸರವಾಗದು ಎಂದು ಬೇರೆ ಹೇಳಿದ್ದಾರೆ.

ಆಶ್ರಮದಲ್ಲಿ ಮಾತಾಡಿದ ಸ್ವಾಮಿಯವರು ಸಂಸ್ಕೃತ ಭಾಷೆ ಉಲಿಯುವುದರಿಂದ ಮಕ್ಕಳ ಬುದ್ದಿಮಟ್ಟ ಹೆಚ್ಚುತ್ತೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡದ ತಾಯಿ ಸಂಸ್ಕೃತವಲ್ಲಾ ಎಂಬುದನ್ನು ಅರಿತವರಂತೆ ಮಾತಾಡಿರುವ ಭೈರಪ್ಪನವರು ಸಂಸ್ಕೃತಕ್ಕೆ ತಾಯಿಯ ಬದಲು ದಾಯಿಯ ಸ್ಥಾನ ನೀಡಿದ್ದಾರೆ. ಕನ್ನಡದಲ್ಲಿ ೮೦%ರಷ್ಟು, ಹಿಂದೀಯಲ್ಲಿ ೯೦%ರಷ್ಟು ಸಂಸ್ಕೃತವಿದೆ ಎಂದಿದ್ದಾರಲ್ಲದೆ ಕನ್ನಡ ವ್ಯಾಕರಣದ ೮೦% ಭಾಗ ಸಂಸ್ಕೃತವೇ ಎಂದಿದ್ದಾರೆ. ಕನ್ನಡ ಅಧ್ಯಾಪಕರಿಗೆ ಕನ್ನಡ ಬಾರದು... ಮತ್ತು ಇದಕ್ಕೆ ಕಾರಣ ಅವರಿಗೆ ಸಂಸ್ಕೃತ ಗೊತ್ತಿಲ್ಲದಿರುವುದು ಎಂದೆಲ್ಲಾ ಹೇಳಿದ್ದಾರೆ.

ದಿಟ ಹೇಳಲು ಹಿಂದೇಟೇಕೆ?

ಕನ್ನಡ ಸಂಸ್ಕೃತಗಳು ಬೇರೆ ಬೇರೆ ಬೇರಿನ ನುಡಿಗಳು. ಕನ್ನಡಿಗರಲ್ಲಿ ಓದು ಬರಹದ ಬಳಕೆ ಬಹಳವಾಗಿ ಹೆಚ್ಚಾಗಿರುವುದು ೨೦ನೇ ಶತಮಾನದಲ್ಲಿ. ಅದುವರೆವಿಗೂ ಕೆಲವೇ ಜನರ ಬಳಕೆಯಲ್ಲಿ ಓದು ಬರಹವಿತ್ತು ಮತ್ತು ಅಂತಹವರು ಸಂಸ್ಕೃತ ಬಲ್ಲವರೂ ಆಗಿದ್ದುದು ಸಾಮಾನ್ಯ. ಕಲಿಕೆಯ, ಅರಿಮೆಯ ವಿಷಯಗಳೆಲ್ಲಾ ಆಗ ಸಂಸ್ಕೃತದಲ್ಲಿರುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ. ಇದೇ ಕಾರಣಕ್ಕಾಗಿ ಕನ್ನಡದ ಬರಹಗಾರರ ಬರಹಗಳಲ್ಲೂ ಸಂಸ್ಕೃತದ ಬಳಕೆ ಹೆಚ್ಚಾಗಿ ತುಂಬಿರುತ್ತಿತ್ತು. ಇದೇ ಕಾರಣಕ್ಕೇ ಕನ್ನಡದ ಲಿಪಿಯಲ್ಲೂ ಸಂಸ್ಕೃತಕ್ಕೆ ಬೇಕಾದ ಅಕ್ಷರಗಳನ್ನು ಸೇರಿಸಲಾಯಿತು. ಇದೇ ಕಾರಣಕ್ಕಾಗೇ ಸಂಸ್ಕೃತದ ಕಟ್ಟುಪಾಡು ವಿವರಿಸುವ ವ್ಯಾಕರಣದ ಸಿದ್ಧ ಅಂಗಿಯನ್ನೇ ಕನ್ನಡಕ್ಕೂ ತೊಡಿಸಲಾಯಿತು...ಇದು ದಿಟವೋ ಅಲ್ಲವೋ? ಇದು ದಿಟವಾದರೆ ಹೇಳಲೇಕೆ ಹಿಂಜರಿಕೆ?

ಇಂದು ನಾಡಿನಲ್ಲಿ ಹೆಚ್ಚು ಜನರಿಗೆ ಕಲಿಕೆಯು ಬೇಕಾಗಿರುವುದರಿಂದ, ಈ ಹಿಂದಿನ ಏರ್ಪಾಟನ್ನು ತಿರುಗಿ ನೋಡಬೇಕಾಗಿದೆ. ನಿಜಕ್ಕೂ ಕನ್ನಡ ಯಾವುದು? ಯಾವುದು ಕನ್ನಡದ ಸೊಲ್ಲರಿಮೆ? ಯಾವುದು ಕನ್ನಡಪದ? ಕನ್ನಡದ ಕಸುವನ್ನು ಹೆಚ್ಚಿಸುವ ಬಗೆ ಯಾವುದು? ಕಲಿಕೆಯು ಹೆಚ್ಚು ಜನರನ್ನು ತಲುಪಬೇಕಾಗಿರುವುದರಿಂದಾಗಿ ಹೇಗೆ ಮುಂದುವರೆಯಬೇಕು? ಎಂಬುದಾಗೆಲ್ಲಾ ನಾವು ಯೋಚಿಸಬೇಕಾಗಿದೆ. ಹಲವೆಡೆ ಅಂತಹ ಪ್ರಯತ್ನಗಳೂ ಕೂಡಾ ನಡೆಯುತ್ತಿದೆ. ಇದನ್ನು ಸಹಿಸದ ಕೆಲವು ಮಂದಿ ಇಂತಹ ಪ್ರಯತ್ನವನ್ನೇ "ಸಂಸ್ಕೃತ ವಿರೋಧಿ" ಎಂದು ಕರೆಯುತ್ತಿರುವುದು ಇಂದು ಕಾಣುತ್ತಿದೆ. ಹೀಗೆ ಕರೆಯಲು ಅದ್ಯಾವುದೋ ದಿಗಿಲು ಕಾರಣವಾಗಿರುವಂತಿದೆ. ಈ ದಿಗಿಲೇ ಕನ್ನಡ ಕಟ್ಟುವ ಪ್ರಯತ್ನವನ್ನು "ತಮಿಳರ ನಕಲು" ಎನ್ನುತ್ತಿರುವುದು, "ಸಂಸ್ಕೃತ ವಿರೋಧಿ" ಎನ್ನುತ್ತಿರುವುದು.. ತಮಾಶೆ ಎಂದರೆ ಇದರ ಮುಂದುವರೆದ ಭಾಗವಾಗಿ ಭಾರತದ ಸಂಸ್ಕೃತಿಗೂ ಸಂಸ್ಕೃತಕ್ಕೂ ಸಲ್ಲದ ನಂಟನ್ನು ಬೆಸೆಯುವುದು ಮತ್ತು ಆ ಮೂಲಕ ಇಂತಹ ಪ್ರಯತ್ನಗಳನ್ನು ಸಂಸ್ಕೃತಿ ವಿರೋಧಿ ಎನ್ನುವುದು ಕೂಡಾ ಸಾಮಾನ್ಯವಾಗಿದೆ. ಸಂಸ್ಕೃತ ಕಲಿಯಬೇಕಾ? ಕಲಿಯಿರಿ... ಅದು ಬಿಟ್ಟು ಕನ್ನಡ - ಸಂಸ್ಕೃತದ ನಡುವೆ ಯಾವುದೋ ವೈರತ್ವ ಇರುವಂತೆ ಬಿಂಬಿಸುವುದು "ಪಾಕಿಸ್ತಾನದ ಭೀತಿ ಹುಟ್ಟಿಸಿ...ಇಂಡಿಯಾದ ಒಗ್ಗಟ್ಟು ಕಟ್ಟುವ" ಪ್ರಯತ್ನದ ಹಾಗೇ ಅನ್ನಿಸಿಬಿಡುತ್ತದೆ.

ಮೇಲಿನ ಕಾಯ್ರಕ್ರಮಗಳಲ್ಲಿ ಆಡಿದ ಒಂದು ಮಾತಿನಂತೆ ಕನ್ನಡದಲ್ಲಿ ೮೦%, ಹಾಗೇ ಹಿಂದಿಯಲ್ಲಿ ೯೦%ರಷ್ಟು ಸಂಸ್ಕೃತವಿದೆಯಂತೆ. ಹಿಂದೀಯಲ್ಲಿರದೆ ಕನ್ನಡದಲ್ಲಿ ಮಾತ್ರವಿರುವ ಸಂಸ್ಕೃತವನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಹೇಳುವುದಾದರೆ ಕನ್ನಡದಲ್ಲಿ ಸುಮಾರು ೭೦%ರಷ್ಟು ಹಿಂದೀ ಇದೆಯೆಂದಂತಾಗಲಿಲ್ಲವೇ? ಇಲ್ಲಿ ಸಮಸ್ಯೆಯಿರುವುದು ಸಂಸ್ಕೃತ ಶಾಲೆ ನಡೆಸುವುದರ ಬಗ್ಗೆ ಅಲ್ಲಾ! ಕನ್ನಡಿಗರು ಸಂಸ್ಕೃತವನ್ನು ಕಲಿಯಬೇಕು ಎನ್ನುವುದರ ಬಗ್ಗೆಯೂ ಅಲ್ಲಾ! ಪ್ರಶ್ನೆಯಿರುವುದು ಸಂಸ್ಕೃತವನ್ನು ಕನ್ನಡದ ತಾಯಿ ಎನ್ನುವ ಬಗ್ಗೆ! ಕನ್ನಡದ ಬೇರು ಎನ್ನುವ ಬಗ್ಗೆ! ಸಂಸ್ಕೃತ ಕಲಿಯದಿದ್ದರೆ ಕನ್ನಡ ಬರುವುದಿಲ್ಲಾ ಎನ್ನುವ ಬಗ್ಗೆ! ಸಂಸ್ಕೃತ ಭೂಯಿಷ್ಟ ಕನ್ನಡವೇ ಕನ್ನಡ ಎನ್ನುವ ಮನಸ್ಥಿತಿಯ ಬಗ್ಗೆ! ನಿಜವಾಗಿಯೂ ಆಡುಮಾತಿನಲ್ಲಿ ೬೦% - ೭೦% - ೮೦% ಸಂಸ್ಕೃತವಿದ್ದಿದ್ದರೆ... ಸಂಸ್ಕೃತವನ್ನು ಕಲಿಸಲು ಈ ಮಂದಿ ಈ ಪಾಟಿ ತಿಣುಕಬೇಕಿತ್ತಾದರೂ ಏಕೆ? ಸಂಸ್ಕೃತವನ್ನು ಇಡೀ ಕನ್ನಡ ಜನರ ಆಡುನುಡಿಯಾಗಿಸಬೇಕೆನ್ನುವ ದೀಕ್ಷೆ ಕೈಗೊಳ್ಳಬೇಕಿತ್ತಾದರೂ ಏಕೆ?

ಕೊನೆಹನಿ: ಕನ್ನಡಕ್ಕೆ ಸಂಸ್ಕೃತ ತಾಯಿ. ಕನ್ನಡ ಏಳಿಗೆ ಕಂಡು ಸಂಸ್ಕೃತಕ್ಕೆ ಬೇಸರವಿಲ್ಲಾ ಎಂದೆಲ್ಲಾ ಮುತ್ತು ಉದುರಿದ ಸದರಿ ಕಾರ್ಯಕ್ರಮದ ಫೋಟೋವನ್ನೊಮ್ಮೆ ನೋಡಿ. ವೇದಿಕೆಯ ಮೇಲೆ ಹಾಕಿರುವ ಬ್ಯಾನರಿನಲ್ಲಿ ಕನ್ನಡದ ಒಂದಕ್ಷರವೂ ಕಾಣುತ್ತಿಲ್ಲಾ! ಅಂದರೆ ಕನ್ನಡಿಗರಿಗೆ ಸಂಸ್ಕೃತವನ್ನು ಕಲಿಸಬೇಕೆನ್ನುವ ದೊಡ್ಡಜನರಿಗೆ, ಹೀಗೆ ಮಗಳನ್ನು ಕಡೆಗಣಿಸುವುದು ತಪ್ಪು ಎಂದು ಅನ್ನಿಸಲಿಲ್ಲವಾ ಗುರೂ!?

ನಿಮ್ಮ ಸಲಹೆ ಬರಲಿ! ಆದರೆ ಅದು ನಮ್ಮ ನುಡಿಯಲ್ಲಿರಲಿ!!

ಮಾಹಿತಿ ಹಕ್ಕು ಕಾಯ್ದೆ(೨೦೧೩)ನ್ನು ಸಂಸತ್ತಿನ ಮುಂದಿಡಲಾಗಿದ್ದು, ಇದನ್ನು ಸಾರ್ವಜನಿಕರ ಆಕ್ಷೇಪಣೆ, ಸಲಹೆ ಸೂಚನೆಗಳಿಗೆ ತೆರೆದಿಡಲಾಗಿದ್ದು ಸಾರ್ವಜನಿಕರು, ಸಂಘಸಂಸ್ಥೆಗಳು ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು - ಅಂತರ್ಜಾಲದಲ್ಲಿ ಸಿಗುವ ಕರಡು ಮಸೂದೆಯನ್ನು ಅಧ್ಯಯನ ಮಾಡಿ - ನೀಡಬೇಕೆಂದು ಒಂದು ಸಾರ್ವಜನಿಕ ಜಾಹೀರಾತನ್ನು ರಾಜ್ಯಸಭಾ ಸೆಕ್ರೆಟೆರಿಯೇಟ್ ಹೊರಡಿಸಿದೆ.

ಪ್ರಜಾಪ್ರಭುತ್ವಕ್ಕೆ ಮಸಿ ಬಳಿದ ಜಾಹೀರಾತು

ಓಹೋ! ಬಹಳ ಒಳ್ಳೆಯದು ಎಂದು ಯಾರಾದರೂ ಈ ಜಾಹೀರಾತಿಗೆ ಪ್ರತಿಕ್ರಿಯೆ ನೀಡಲು ಮುಂದಾಗಿ ತಮ್ಮ ಸಲಹೆ ನೀಡಲು ಹೋದರೆ ಭಾರತದ ಭಾಷಾನೀತಿಯ ಹುಳುಕು ಮುಖಕ್ಕೆ ರಾಚುತ್ತದೆ. ಈ ಜಾಹೀರಾತಿನ ಪ್ರಮುಖವಾದ ಕಟ್ಟಳೆಯೇನೆಂದರೆ ಸಾರ್ವಜನಿಕರು ಸಲಹೆಗಳನ್ನು "ಇಂಗ್ಲೀಷ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವೇ ನೀಡತಕ್ಕದ್ದು" ಎನ್ನುವುದು. ಅಂದರೆ ಸರ್ಕಾರಿ ಅಂಕಿಅಂಶದಂತೆ ೪೧% ಹಿಂದೀಯವರೂ(ಒಟ್ಟು ಹಿಂದೀಯವರನ್ನು ೪೧% ಎಂದು ಭಾರತ ಕರೆಯುತ್ತಿದ್ದರೂ ಅದರಲ್ಲಿ ಹಿಂದೀ ನುಂಗಿರುವ ೪೯ ಭಾಷೆಗಳಿದ್ದು ಬರಿಯ ಹಿಂದೀ ತಾಯ್ನುಡಿಯ ಜನಸಂಖ್ಯೆ ೨೯% ಮಾತ್ರಾ ಇದೆ.), ಇನ್ನೊಂದು ೪% ಇಂಗ್ಲೀಷ್ ಬಲ್ಲ ಹಿಂದೀಯೇತರರು (ಒಟ್ಟು ಇಂಗ್ಲೀಷ್ ಬಲ್ಲವರ ಸಂಖ್ಯೆ ೭%ರ ಆಸುಪಾಸಿನಲ್ಲಿದೆ. ಆ ಏಳರಲ್ಲಿ ೩% ಹಿಂದೀಯವರೂ ಆಗಿರಬಹುದು ಎನ್ನುವ ಅಂದಾಜು) ಮಾತ್ರವೇ ಸಲಹೆ ಕೊಡಲು ಸಾಧ್ಯ ಎಂದಾಯಿತಲ್ಲಾ! ಹೀಗಾದರೆ ಪ್ರಜಾಪ್ರಭುತ್ವಕ್ಕೇನು ಅರ್ಥ? ಇಡೀ ಪ್ರಕ್ರಿಯೆಯೇ ಪೊಳ್ಳಿನದ್ದು ಎಂದಾಯಿತಲ್ಲಾ! ದೇಶದ ಅರ್ಧಕ್ಕಿಂತ ಹೆಚ್ಚು ಜನರನ್ನು ಒಂದು ಮಸೂದೆಗೆ ಸಲಹೆ ನೀಡುವುದರಿಂದ ಹೊರಗಿಡುವುದು ಎಂಥಾ ಪ್ರಜಾಪ್ರಭುತ್ವ? ಇಂಥಾ ಘಟನೆಗಳು ಭಾರತದಲ್ಲಿ ಮೂಲಭೂತವಾಗಿ ಸರಿಹೋಗಬೇಕಾದ್ದೇ ಸಾಕಷ್ಟಿದೆ ಎನ್ನುವುದನ್ನು ಸಾರುತ್ತಿದೆ. ಇದೀಗ ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ಎಂಬ ಸರ್ಕಾರೇತರ ಸಂಸ್ಥೆ ಈ ಬಗ್ಗೆ ದನಿ ಎತ್ತಿದೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದರೆ...

ಭಾರತ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದರೆ ಎಲ್ಲಾ ಭಾಷೆಯ ಪತ್ರಿಕೆಗಳಲ್ಲೂ ಆಯಾ ಭಾಷೆಯಲ್ಲಿ ಈ ಜಾಹೀರಾತನ್ನು ಹೊರಡಿಸಿ ಯಾವುದೇ ಭಾಷೆಯಲ್ಲೂ ತಮ್ಮ ಸಲಹೆ ಕೊಡಬಹುದು ಎನ್ನುತ್ತಿತ್ತು! ಅಂಥದ್ದೊಂದು ದಿನ ಬೇಗನೆ ಬರಲಿ ಎಂಬ ಆಶಯ ನಮ್ಮದು. ಹಾಗಾಗಬೇಕಾದರೆ ಭಾರತದ ಹುಳುಕಿನ ಭಾಷಾನೀತಿ ಬದಲಾಗಲೇ ಬೇಕು. ರಾಜ್ಯಗಳು ಈ ನಿಟ್ಟಿನಲ್ಲಿ ದನಿಯೆತ್ತದಿದ್ದರೆ ನಾವೆಲ್ಲಾ ಈ ದೇಶಕ್ಕೆ ಜೈಕಾರ ಹಾಕುತ್ತಾ ಹಾಕುತ್ತಲೇ ಗುಲಾಮಗಿರಿಗೆ ಒಳಗಾಗುವ ಎರಡನೇ ದರ್ಜೆಯ ಪ್ರಜೆಗಳಾಗಬೇಕಾದೀತು!

ಸಾರ್ವಜನಿಕ ಶಿಕ್ಷಣ ಇಲಾಖೆ: ಆರ್.ಟಿ.ಐ ಮೇಲ್ಮನವಿ ಸಲ್ಲಿಕೆ!


ಕಳೆದ ತಿಂಗಳ ಮೊದಲಲ್ಲಿ "ಮಕ್ಕಳ ಕಲಿಕೆಯಲ್ಲಿ ತ್ರಿಭಾಷಾ ಸೂತ್ರವೆಂಬ ಶೂಲವಿದೆಯೇ?" ಎಂಬ ತಲೆಬರಹದಡಿಯಲ್ಲಿ ಒಂದು ಬರಹವನ್ನು ಬರೆದಿದ್ದೆವು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾಮಕ್ಕಳ ಕಲಿಕೆಯಲ್ಲಿ ಅಳವಡಿಸಿಕೊಳ್ಳಲಾಗಿರುವ ಭಾಷಾನೀತಿಯ ಬಗ್ಗೆ ಕೆಲವಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೀಗ ಮೊದಲ ಮೇಲ್ಮನವಿಯನ್ನು ಸಲ್ಲಿಸಲಾಗಿದೆ.

ಮಾಹಿತಿ ಹಕ್ಕು!

ಮಾಹಿತಿ ಹಕ್ಕು ಕಾಯ್ದೆ ೨೦೦೫ರ ಪ್ರಕಾರ ಯಾವುದೇ ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಮೂವತ್ತು ದಿನಗಳೊಳಗಾಗಿ ವಿಲೇವಾರಿ ಮಾಡಬೇಕು. ಹಾಗೆ ಮಾಡದಿದ್ದಲ್ಲಿ ಕೇಳಿದ ಮಾಹಿತಿಯನ್ನು ನಿರಾಕರಿಸಿದ ಹಾಗೇ ಎನ್ನುತ್ತದೆ ಕಾಯ್ದೆ. ಅದರಂತೆಯೇ ಈಗ ಕೇಳಿದ ಮಾಹಿತಿಯು ಮೂವತ್ತು ದಿನಗಳಲ್ಲಿ ಬಾರದ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊದಲ ಮೇಲ್ಮನವಿಯನ್ನು ಸಲ್ಲಿಸಲಾಗಿದೆ. ಈ ಮೇಲ್ಮನವಿಗೆ ಸೂಕ್ತ ಉತ್ತರವನ್ನು ಗೊತ್ತುಮಾಡಿದ ಹೊತ್ತಿನೊಳಗೆ ಸಂಬಂಧಿಸಿದವರು ಕೊಡುತ್ತಾರೆಂದು ಆಶಿಸೋಣ.

ಬಂಡಿಪುರ: ಸರಿಯಾದ ನಿಲುವು ತೋರಿದ ಸರ್ಕಾರ!

(ಫೋಟೋ ಕೃಪೆ: ಉದಯವಾಣಿ)

ಬಂಡಿಪುರದ ಕಾಡಿನ ನಡುವೆ ಕರ್ನಾಟಕ - ಕೇರಳ - ತಮಿಳುನಾಡಿಗೆ ಸಾಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ದಾರಿಗಳಲ್ಲಿ ಇರುಳು ಸಂಚಾರವನ್ನು ನಿಶೇಧಿಸಲಾಗಿದೆ. ಇದಕ್ಕೆ ಈ ದಾರಿಗುಂಟಾ ಇರುವ ವೈವಿಧ್ಯಮಯ ವನ್ಯಜೀವಿಗಳ ಜೀವ ಮತ್ತು ಖಾಸಗಿತನದ ರಕ್ಷಣೆಯ ಬಗ್ಗೆ ಇರುವ ಕಾಳಜಿಯೇ ಕಾರಣವಾಗಿದ್ದು... ಕರ್ನಾಟಕ ಸರ್ಕಾರ ತನ್ನ ನೆಲದಲ್ಲಿ ಈ ನಿಶೇಧವನ್ನು ಜಾರಿಮಾಡಿದೆ. ಈ ನಿಲುವಿನಿಂದಾಗಿ ಕೇರಳ ಕಸಿವಿಸಿಗೊಳಗಾಗಿದ್ದು ಈ ಇರುಳು ಸಂಚಾರ ನಿಶೇಧವನ್ನು ತೆಗೆದುಹಾಕುವಂತೆ ಎಲ್ಲಾ ಬಗೆಯಲ್ಲಿ ಒತ್ತಡವನ್ನು ಕರ್ನಾಟಕದ ಮೇಲೆ ಹಾಕುತ್ತಾ ಬಂದಿದೆ.

ಇಂಥದ್ದೇ ಒತ್ತಡ ಹಾಕಲು ಈ ಬಾರಿಯೂ ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಉಮ್ಮಾನ್ ಚಾಂಡಿಯವರು ಬೆಂಗಳೂರಿಗೆ ಬಂದಿದ್ದರು. ಇವರನ್ನು ಭೇಟಿ ಮಾಡಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿಯೇ ನಿಶೇಧ ತೆರವು ಮಾಡಲಿಕ್ಕಾಗದು ಎಂದಿದ್ದಾರೆ. ಬದಲಿ ಮಾರ್ಗವನ್ನು ಕಂಡುಕೊಳ್ಳುವ ಬಗ್ಗೆ ಒಲವು ತೋರಿದ್ದಾರೆ.. ಕರ್ನಾಟಕದ ಆನೆ, ಹುಲಿ, ಕಾಡೆಮ್ಮೆ, ಜಿಂಕೆಗಳೇ ಸೇರಿದಂತೆ ವನ್ಯಜೀವಿ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿನಿಲುವು ತೋರಿದ್ದಾರೆ. ಅಭಿನಂದನೆಗಳು.

ಕೊನೆಹನಿ: ಕರ್ನಾಟಕದ ಜನರಿಂದಲೇ ಆಯ್ಕೆಯಾಗಿರುವ ವಲಸಿಗರಾದ ಒಬ್ಬ ಸಚಿವಮತ್ತೊಬ್ಬ ಶಾಸಕರು ಈ ವಿಷಯವಾಗಿ ಕೇರಳದ ಪರವಾದ ಲಾಬಿಯನ್ನು ನಡೆಸಿ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಲು ಮುಂದಾದರು ಎಂಬ ಸುದ್ದಿಯನ್ನು ನೋಡಿದಾಗ ನಮ್ಮವರೇ ನಮ್ಮ ಜನಪ್ರತಿನಿಧಿಗಳಾಗಿರಬೇಕಾದ ಅಗತ್ಯ ಅರಿವಾಗುತ್ತದೆ. ಯೋಚಿಸಿ ನೋಡಿ... ರಾಜಕೀಯದ ಈ ಏರಿಳಿತದಾಟದಲ್ಲಿ ನಾಳೆ ನಮ್ಮ ನಾಡಿನವರಲ್ಲದ ವ್ಯಕ್ತಿಯೇ ಕರ್ನಾಟಕದ ಮುಖ್ಯಮಂತ್ರಿಯಾಗಿಬಿಟ್ಟರೆ ನಾಡನ್ನು ತಮ್ಮ ತವರಿನ ಪದತಳಕ್ಕೆ ಅರ್ಪಿಸುವುದಿಲ್ಲಾ ಎನ್ನಲಾಗುವುದೇ!




Related Posts with Thumbnails