ಕನ್ನಡಕ್ಕೆ ಸಂಸ್ಕೃತ ತಾಯಿ - ದಾಯಿ ಎಂಬ ಮತ್ತದೇ ಕಾಗಕ್ಕ ಗುಬ್ಬಕ್ಕನ ಕಥೆ!


ನಿನ್ನೆಯ ದಿವಸ, ಸಂಸ್ಕೃತ ಸಂಜೆ ಕಾಲೇಜು ಉದ್ಘಾಟನೆಯ ಕಾರ್ಯಕ್ರಮ ನಡೆಯಿತೆಂಬ ಸುದ್ದಿ ಇವತ್ತಿನ (೨೦.೧೦.೨೦೧೩ರ) ಸುದ್ದಿಹಾಳೆಗಳಲ್ಲಿ ಬಂದಿದೆ. ಇದರಲ್ಲಿ ಕರ್ನಾಟಕ ರಾಜ್ಯಪಾಲರು ಪಾಲ್ಗೊಂಡು ಮಾತಾಡಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ಼್ ಲಿವಿಂಗ್ ಆಶ್ರಮದಲ್ಲಿ ನಡೆದ ಮತ್ತೊಂದು ಇಂಥದ್ದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಕತೆಗಾರರಾದ ಶ್ರೀ ಎಸ್.ಎಲ್.ಭೈರಪ್ಪನವರೂ, ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರೂ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ಮಾತಾಡಿದ ಸುದ್ದಿ ಪ್ರಕಟವಾಗಿದೆ. ಎರಡೂ ಸುದ್ದಿಗಳ ಸಾರ ಒಂದೇ ಆಗಿರೋದು ಕಾಗೆ ಕೂತು ಟೊಂಗೆ ಮುರಿದ ಹಾಗೇನೂ ತೋರುತ್ತಿಲ್ಲ.

ಸುಳ್ಳುಗಳ ಸರಮಾಲೆ

ಸಂಸ್ಕೃತವನ್ನು ಒಪ್ಪಿಸುವ ಮತ್ತು ಮೆಚ್ಚಿ ಕೊಂಡಾಡುವ ಹುಮ್ಮಸ್ಸಿನಲ್ಲಿ ಎರಡೂ ಕಡೆ ಹೇಳಲಾದ ಸುಳ್ಳುಗಳನ್ನು ನೋಡಿ. ಇದುವರೆವಿಗೂ ಸಂಸ್ಕೃತವನ್ನು ಕನ್ನಡಕ್ಕೆ ತಾಯಿ ಎನ್ನುತ್ತಿದ್ದ ಸುಳ್ಳನ್ನೇ ರಾಜ್ಯಪಾಲರು ಮುಂದುವರೆಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಮತ್ತೊಬ್ಬ ಹಿರಿಯರಾದ ನ್ಯಾಯಮೂರ್ತಿ ಎನ್. ಕುಮಾರ್ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತೀಯ ಸಂಸ್ಕೃತಿ ಅಡಗಿರುವುದೇ ಸಂಸ್ಕೃತದಲ್ಲಿ.. ಸಂಸ್ಕೃತ ಅರಿಯದೇ ಭಾರತದ ಸಂಸ್ಕೃತಿ ಅರಿಯಲು ಕಷ್ಟ... ಕನ್ನಡ ಸಂಸ್ಕೃತದ ಮಗಳು.. ಎಂದೆಲ್ಲಾ ಹೇಳಿದ್ದಾರೆ. ಹೀಗೆ ಕನ್ನಡದ ತಾಯಿಯ ಹೊಣೆಗಾರಿಕೆಯನ್ನು ಸಂಸ್ಕೃತಕ್ಕೆ ಪುಕ್ಕಟೆಯಾಗಿ ಹೊರಿಸಿಬಿಟ್ಟಿದ್ದನ್ನು ನೋಡಿದರೆ ಹಿಂದೊಮ್ಮೆ ತಮಿಳ ಕರುಣಾನಿಧಿಯವರು "ಕನ್ನಡಿಗರು - ತಮಿಳರ ಚಿಕ್ಕತಮ್ಮಂದಿರು" ಎಂಬ ಹೇಳಿಕೆ ನೀಡಿ ಅಣ್ಣನ ದೊಡ್ಡಸ್ತಿಕೆ ತೋರಿದ್ದು ನೆನಪಾಗುತ್ತದೆ. ಇದೇ ದೊಡ್ಡತನ ತೋರುತ್ತಾ ಕುಮಾರ್ ಅವರು ಕನ್ನಡ ಬೆಳೆದರೆ ಸಂಸ್ಕೃತಕ್ಕೆ ಬೇಸರವಾಗದು ಎಂದು ಬೇರೆ ಹೇಳಿದ್ದಾರೆ.

ಆಶ್ರಮದಲ್ಲಿ ಮಾತಾಡಿದ ಸ್ವಾಮಿಯವರು ಸಂಸ್ಕೃತ ಭಾಷೆ ಉಲಿಯುವುದರಿಂದ ಮಕ್ಕಳ ಬುದ್ದಿಮಟ್ಟ ಹೆಚ್ಚುತ್ತೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡದ ತಾಯಿ ಸಂಸ್ಕೃತವಲ್ಲಾ ಎಂಬುದನ್ನು ಅರಿತವರಂತೆ ಮಾತಾಡಿರುವ ಭೈರಪ್ಪನವರು ಸಂಸ್ಕೃತಕ್ಕೆ ತಾಯಿಯ ಬದಲು ದಾಯಿಯ ಸ್ಥಾನ ನೀಡಿದ್ದಾರೆ. ಕನ್ನಡದಲ್ಲಿ ೮೦%ರಷ್ಟು, ಹಿಂದೀಯಲ್ಲಿ ೯೦%ರಷ್ಟು ಸಂಸ್ಕೃತವಿದೆ ಎಂದಿದ್ದಾರಲ್ಲದೆ ಕನ್ನಡ ವ್ಯಾಕರಣದ ೮೦% ಭಾಗ ಸಂಸ್ಕೃತವೇ ಎಂದಿದ್ದಾರೆ. ಕನ್ನಡ ಅಧ್ಯಾಪಕರಿಗೆ ಕನ್ನಡ ಬಾರದು... ಮತ್ತು ಇದಕ್ಕೆ ಕಾರಣ ಅವರಿಗೆ ಸಂಸ್ಕೃತ ಗೊತ್ತಿಲ್ಲದಿರುವುದು ಎಂದೆಲ್ಲಾ ಹೇಳಿದ್ದಾರೆ.

ದಿಟ ಹೇಳಲು ಹಿಂದೇಟೇಕೆ?

ಕನ್ನಡ ಸಂಸ್ಕೃತಗಳು ಬೇರೆ ಬೇರೆ ಬೇರಿನ ನುಡಿಗಳು. ಕನ್ನಡಿಗರಲ್ಲಿ ಓದು ಬರಹದ ಬಳಕೆ ಬಹಳವಾಗಿ ಹೆಚ್ಚಾಗಿರುವುದು ೨೦ನೇ ಶತಮಾನದಲ್ಲಿ. ಅದುವರೆವಿಗೂ ಕೆಲವೇ ಜನರ ಬಳಕೆಯಲ್ಲಿ ಓದು ಬರಹವಿತ್ತು ಮತ್ತು ಅಂತಹವರು ಸಂಸ್ಕೃತ ಬಲ್ಲವರೂ ಆಗಿದ್ದುದು ಸಾಮಾನ್ಯ. ಕಲಿಕೆಯ, ಅರಿಮೆಯ ವಿಷಯಗಳೆಲ್ಲಾ ಆಗ ಸಂಸ್ಕೃತದಲ್ಲಿರುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ. ಇದೇ ಕಾರಣಕ್ಕಾಗಿ ಕನ್ನಡದ ಬರಹಗಾರರ ಬರಹಗಳಲ್ಲೂ ಸಂಸ್ಕೃತದ ಬಳಕೆ ಹೆಚ್ಚಾಗಿ ತುಂಬಿರುತ್ತಿತ್ತು. ಇದೇ ಕಾರಣಕ್ಕೇ ಕನ್ನಡದ ಲಿಪಿಯಲ್ಲೂ ಸಂಸ್ಕೃತಕ್ಕೆ ಬೇಕಾದ ಅಕ್ಷರಗಳನ್ನು ಸೇರಿಸಲಾಯಿತು. ಇದೇ ಕಾರಣಕ್ಕಾಗೇ ಸಂಸ್ಕೃತದ ಕಟ್ಟುಪಾಡು ವಿವರಿಸುವ ವ್ಯಾಕರಣದ ಸಿದ್ಧ ಅಂಗಿಯನ್ನೇ ಕನ್ನಡಕ್ಕೂ ತೊಡಿಸಲಾಯಿತು...ಇದು ದಿಟವೋ ಅಲ್ಲವೋ? ಇದು ದಿಟವಾದರೆ ಹೇಳಲೇಕೆ ಹಿಂಜರಿಕೆ?

ಇಂದು ನಾಡಿನಲ್ಲಿ ಹೆಚ್ಚು ಜನರಿಗೆ ಕಲಿಕೆಯು ಬೇಕಾಗಿರುವುದರಿಂದ, ಈ ಹಿಂದಿನ ಏರ್ಪಾಟನ್ನು ತಿರುಗಿ ನೋಡಬೇಕಾಗಿದೆ. ನಿಜಕ್ಕೂ ಕನ್ನಡ ಯಾವುದು? ಯಾವುದು ಕನ್ನಡದ ಸೊಲ್ಲರಿಮೆ? ಯಾವುದು ಕನ್ನಡಪದ? ಕನ್ನಡದ ಕಸುವನ್ನು ಹೆಚ್ಚಿಸುವ ಬಗೆ ಯಾವುದು? ಕಲಿಕೆಯು ಹೆಚ್ಚು ಜನರನ್ನು ತಲುಪಬೇಕಾಗಿರುವುದರಿಂದಾಗಿ ಹೇಗೆ ಮುಂದುವರೆಯಬೇಕು? ಎಂಬುದಾಗೆಲ್ಲಾ ನಾವು ಯೋಚಿಸಬೇಕಾಗಿದೆ. ಹಲವೆಡೆ ಅಂತಹ ಪ್ರಯತ್ನಗಳೂ ಕೂಡಾ ನಡೆಯುತ್ತಿದೆ. ಇದನ್ನು ಸಹಿಸದ ಕೆಲವು ಮಂದಿ ಇಂತಹ ಪ್ರಯತ್ನವನ್ನೇ "ಸಂಸ್ಕೃತ ವಿರೋಧಿ" ಎಂದು ಕರೆಯುತ್ತಿರುವುದು ಇಂದು ಕಾಣುತ್ತಿದೆ. ಹೀಗೆ ಕರೆಯಲು ಅದ್ಯಾವುದೋ ದಿಗಿಲು ಕಾರಣವಾಗಿರುವಂತಿದೆ. ಈ ದಿಗಿಲೇ ಕನ್ನಡ ಕಟ್ಟುವ ಪ್ರಯತ್ನವನ್ನು "ತಮಿಳರ ನಕಲು" ಎನ್ನುತ್ತಿರುವುದು, "ಸಂಸ್ಕೃತ ವಿರೋಧಿ" ಎನ್ನುತ್ತಿರುವುದು.. ತಮಾಶೆ ಎಂದರೆ ಇದರ ಮುಂದುವರೆದ ಭಾಗವಾಗಿ ಭಾರತದ ಸಂಸ್ಕೃತಿಗೂ ಸಂಸ್ಕೃತಕ್ಕೂ ಸಲ್ಲದ ನಂಟನ್ನು ಬೆಸೆಯುವುದು ಮತ್ತು ಆ ಮೂಲಕ ಇಂತಹ ಪ್ರಯತ್ನಗಳನ್ನು ಸಂಸ್ಕೃತಿ ವಿರೋಧಿ ಎನ್ನುವುದು ಕೂಡಾ ಸಾಮಾನ್ಯವಾಗಿದೆ. ಸಂಸ್ಕೃತ ಕಲಿಯಬೇಕಾ? ಕಲಿಯಿರಿ... ಅದು ಬಿಟ್ಟು ಕನ್ನಡ - ಸಂಸ್ಕೃತದ ನಡುವೆ ಯಾವುದೋ ವೈರತ್ವ ಇರುವಂತೆ ಬಿಂಬಿಸುವುದು "ಪಾಕಿಸ್ತಾನದ ಭೀತಿ ಹುಟ್ಟಿಸಿ...ಇಂಡಿಯಾದ ಒಗ್ಗಟ್ಟು ಕಟ್ಟುವ" ಪ್ರಯತ್ನದ ಹಾಗೇ ಅನ್ನಿಸಿಬಿಡುತ್ತದೆ.

ಮೇಲಿನ ಕಾಯ್ರಕ್ರಮಗಳಲ್ಲಿ ಆಡಿದ ಒಂದು ಮಾತಿನಂತೆ ಕನ್ನಡದಲ್ಲಿ ೮೦%, ಹಾಗೇ ಹಿಂದಿಯಲ್ಲಿ ೯೦%ರಷ್ಟು ಸಂಸ್ಕೃತವಿದೆಯಂತೆ. ಹಿಂದೀಯಲ್ಲಿರದೆ ಕನ್ನಡದಲ್ಲಿ ಮಾತ್ರವಿರುವ ಸಂಸ್ಕೃತವನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಹೇಳುವುದಾದರೆ ಕನ್ನಡದಲ್ಲಿ ಸುಮಾರು ೭೦%ರಷ್ಟು ಹಿಂದೀ ಇದೆಯೆಂದಂತಾಗಲಿಲ್ಲವೇ? ಇಲ್ಲಿ ಸಮಸ್ಯೆಯಿರುವುದು ಸಂಸ್ಕೃತ ಶಾಲೆ ನಡೆಸುವುದರ ಬಗ್ಗೆ ಅಲ್ಲಾ! ಕನ್ನಡಿಗರು ಸಂಸ್ಕೃತವನ್ನು ಕಲಿಯಬೇಕು ಎನ್ನುವುದರ ಬಗ್ಗೆಯೂ ಅಲ್ಲಾ! ಪ್ರಶ್ನೆಯಿರುವುದು ಸಂಸ್ಕೃತವನ್ನು ಕನ್ನಡದ ತಾಯಿ ಎನ್ನುವ ಬಗ್ಗೆ! ಕನ್ನಡದ ಬೇರು ಎನ್ನುವ ಬಗ್ಗೆ! ಸಂಸ್ಕೃತ ಕಲಿಯದಿದ್ದರೆ ಕನ್ನಡ ಬರುವುದಿಲ್ಲಾ ಎನ್ನುವ ಬಗ್ಗೆ! ಸಂಸ್ಕೃತ ಭೂಯಿಷ್ಟ ಕನ್ನಡವೇ ಕನ್ನಡ ಎನ್ನುವ ಮನಸ್ಥಿತಿಯ ಬಗ್ಗೆ! ನಿಜವಾಗಿಯೂ ಆಡುಮಾತಿನಲ್ಲಿ ೬೦% - ೭೦% - ೮೦% ಸಂಸ್ಕೃತವಿದ್ದಿದ್ದರೆ... ಸಂಸ್ಕೃತವನ್ನು ಕಲಿಸಲು ಈ ಮಂದಿ ಈ ಪಾಟಿ ತಿಣುಕಬೇಕಿತ್ತಾದರೂ ಏಕೆ? ಸಂಸ್ಕೃತವನ್ನು ಇಡೀ ಕನ್ನಡ ಜನರ ಆಡುನುಡಿಯಾಗಿಸಬೇಕೆನ್ನುವ ದೀಕ್ಷೆ ಕೈಗೊಳ್ಳಬೇಕಿತ್ತಾದರೂ ಏಕೆ?

ಕೊನೆಹನಿ: ಕನ್ನಡಕ್ಕೆ ಸಂಸ್ಕೃತ ತಾಯಿ. ಕನ್ನಡ ಏಳಿಗೆ ಕಂಡು ಸಂಸ್ಕೃತಕ್ಕೆ ಬೇಸರವಿಲ್ಲಾ ಎಂದೆಲ್ಲಾ ಮುತ್ತು ಉದುರಿದ ಸದರಿ ಕಾರ್ಯಕ್ರಮದ ಫೋಟೋವನ್ನೊಮ್ಮೆ ನೋಡಿ. ವೇದಿಕೆಯ ಮೇಲೆ ಹಾಕಿರುವ ಬ್ಯಾನರಿನಲ್ಲಿ ಕನ್ನಡದ ಒಂದಕ್ಷರವೂ ಕಾಣುತ್ತಿಲ್ಲಾ! ಅಂದರೆ ಕನ್ನಡಿಗರಿಗೆ ಸಂಸ್ಕೃತವನ್ನು ಕಲಿಸಬೇಕೆನ್ನುವ ದೊಡ್ಡಜನರಿಗೆ, ಹೀಗೆ ಮಗಳನ್ನು ಕಡೆಗಣಿಸುವುದು ತಪ್ಪು ಎಂದು ಅನ್ನಿಸಲಿಲ್ಲವಾ ಗುರೂ!?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails