(ಚಿತ್ರಕೃಪೆ: http://dreamsleep.ca/fast-facts/) |
ಹೊದ್ದು ಮಲಗಿಹರಯ್ಯಾ ಮುದ್ದು ಕನ್ನಡಿಗರು
ಗದ್ದಲವ ಮಾಡದಿರು...ನಿದ್ದೆ ಕೆಡಿಸದಿರು!
ನಾಡಹಬ್ಬದ ನೆಪದಿ ಡಿಂಡಿಮವ ಬಡಿಯದಿರು
ಕಹಳೆಗಳ ಊದದಿರು.. ಶ್! ಸದ್ದು ಮಾಡದಿರು
ಬಹುದಿನದ ನಿದ್ದೆಯಿದು - ಹಂಪಿ ಮೆರೆದಂದಿನದು
ಹೆಮ್ಮೆ ನೆಮ್ಮದಿ ತಂದಾ ಮೈಮರೆವ ನಿದಿರೆಯಿದು
ನುಗ್ಗಿದಾ ಎದುರಾಳಿ ಮುರಿದಿಟ್ಟ ನಾಳೆಗಳ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ನಿದ್ದೆಯಲ್ಲಿದ್ದಂತೇ ಹಂಪಿ ಮುಕ್ಕಾದರೇನು?
ರತ್ನ ಸಿಂಹಾಸನಕಿಂದು ತುಕ್ಕು ಹಿಡಿದರೇನು?
ಹಿರಿದು ನಾಡದು ಹರಿದು ಹೋಳಾದರೇನು...?
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ಒಡೆದ ನಾಡೊಂದಾಗೆ ನೂರಾರು ತೊಡರುಗಳು
ಕೂಡಲಾಗದೆ ನೊಂದವೆಷ್ಟೋ ಒಡಹುಟ್ಟುಗಳು
ನುಂಗಿದರೂ ನೆರೆನಾಡು.. ಬೆಂಕಿ ಬಿದ್ದರೂ ಮನೆಗೆ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ಬಿಡುಗಡೆಯು ತೊಡಿಸಿಹುದೇ ಮತ್ತೆ ಸಂಕೋಲೆ
ನುಡಿಜನರ ಹಿತಕಿಂತ ದೇಶವೇ ಮೊದಲೇ?
ತಾಯ್ನೆಲದೆ ತಾಯ್ನುಡಿಯ ಕಡೆಗಣನೆ ನಡೆದಿರಲು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ಏಳಿಗೆಯ ಬಂಡಿಗಿದೆ ಕಲಿಕೆ, ದುಡಿಮೆಯ ಗಾಲಿ
ಕೈಬಿಟ್ಟು ನೆಲದ ನುಡಿ ಸಾಗುವುದೇ ಗಾಡಿ
ಬಿತ್ತಲಾರದೆ ಬೀಜ,ಮರವೆಂತು ಬಹುದು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ನಾಡಿನಾಳ್ವಿಕೆಯಲ್ಲಿ ಹೆರನುಡಿಯೇ ಮಿಗಿಲು
ಕನ್ನಡವೇ ಕಾಣದಿದೆ ಕವಿದು ಕಾರ್ಮುಗಿಲು
ಕಟ್ಟುವವ ಕಡೆಗಣಿಸಿ ಮೈಮರೆತಂತಿರಲು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ದೇವನುಡಿ, ರಾಷ್ಟ್ರನುಡಿ, ದುಡಿಮೆನುಡಿ ಮೇರು
ತಾಯ್ನುಡಿಯೇ ಕೀಳೆಂದು ಬಗೆದಿಹರೆ ಇವರು?
ಕನ್ನಡದ ನುಡಿತೇರು ಎಳೆಯುವವರಾರು...
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ಬಿರುಗಾಳಿಯಾಗಿಹುದು ತಡೆಯಿರದ ವಲಸೆ
ಕನ್ನಡಿಗರ ಹೆರುವೆಣಿಕೆ ಕುಸಿದು ಕುಲವಳಿಸೆ
ಕೊನೆಗಾಲ ಬಲುಸನಿಹ ಕಾಣಲಾರನೇ ಮರುಳಾ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!
ಹೊತ್ತೀತೆ ಎಲ್ಲೆಲ್ಲೂ ಎಚ್ಚೆತ್ತ ಸೊಡರುಗಳು
ಬೆಳಗೀತೆ ಕರುನಾಡು...ಕನ್ನಡಿಗರೊಡಲು
ಮೊಳಗೀತೆ ಒಕ್ಕೊರಲ ನುಡಿಕಹಳೆ ಮೊದಲು
ಹೊದ್ದು ಮಲಗಿಹನನ್ನು ಎಚ್ಚರಿಸದೇ ಇರಲು!
ಕನ್ನಡದ ಡಿಂಡಿಮವು ಮೊಳಗಲೆಂದೆಂದು
ಸಾವಂತೆ ಕವಿದಿರುವ ನಿದಿರೆ ತೊಲಗಲಿ ಸರಿದು
ಮೈಕೊಡವಿ ಕನ್ನಡಿಗ ಎಚ್ಚೆತ್ತುಕೊಳಲು
ಕರುನಾಡ ತುಂಬೆಲ್ಲಾ ಸಂತಸದ ಹೊನಲು!
ಕರುನಾಡ ತುಂಬೆಲ್ಲಾ ಸಂತಸದ ಹೊನಲು!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!