ಮೈಸೂರು ಅರಸರ ವಂಶಜರಾದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿನ್ನೆ ನಿಧನರಾಗಿದ್ದಾರೆ. ಪ್ರಜಾಪ್ರಭುತ್ವವಾಗಿ ಬದಲಾದ ನಂತರ ಮೈಸೂರು ಹೇಗೇ ಬದಲಾದರೂ... ಅಂದಿನ ಮೈಸೂರು ರಾಜ್ಯದ ಏಳಿಗೆಗಾಗಿ ಮೈಸೂರು ಒಡೆಯರ್ ವಂಶಸ್ಥರು ಮಾಡಿದ ಒಳಿತನ್ನು ಮರೆಯಲಾಗದು. ಸ್ವತಂತ್ರರಾಷ್ಟ್ರವೊಂದಕ್ಕಿರುವ ಎಲ್ಲಾ ಲಕ್ಷಣಗಳನ್ನೂ ರೂಢಿಸಿಕೊಂಡಿದ್ದ ಅಂದಿನ ಮೈಸೂರು ತನ್ನದೇ ಆದ ಉದ್ದಿಮೆಗಳನ್ನು, ಬ್ಯಾಂಕು, ವಿದ್ಯುತ್, ಗಣಿ, ಶಿಕ್ಷಣ ವ್ಯವಸ್ಥೆಗಳೆಲ್ಲವನ್ನೂ ಹೊಂದಲು ಸಾಧ್ಯವಾಗಿದ್ದು ಮೈಸೂರು ರಾಜವಂಶಸ್ಥರ ಜನಪರ ಕಾಳಜಿಯಿಂದಾಗಿಯೇ. ಮೊದಲ ಜನಪ್ರತಿನಿಧಿ ಸಭೆಯನ್ನು ಹೊಂದುವ ಮೂಲಕ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಂಡಿತ್ತು ಅಂದಿನ "ಮಾದರಿ ಮೈಸೂರು".
ಭಾರತದಲ್ಲೇ ಅತ್ಯಂತ ಮುಂದುವರೆದ ನಾಡೆಂದು ಗುರುತಿಸಲಾಗುತ್ತಿದ್ದ ಮೈಸೂರಿನ ಉನ್ನತಿಗೆ ಅದನ್ನಾಳಿದ ರಾಜರುಗಳೇ ಕಾರಣವೆಂದರೆ ತಪ್ಪಾಗದು. ತಮ್ಮ ನೀರಾವರಿ ಯೋಜನೆಗಳೂ ಸೇರಿದಂತೆ ಹಲವಾರು ಮುಂದಾಲೋಚನೆಯ ಜನಪರ ಯೋಜನೆಗಳಿಂದಾಗಿ ಇಂದಿಗೂ ಅದೆಷ್ಟೋ ಮನೆಗಳ ಒಲೆ ಹೊತ್ತಲು ಕಾರಣರಾದ ಮೈಸೂರು ಅರಸು ವಂಶಜರೆಂದರೆ ಈ ಭಾಗದ ಜನರಲ್ಲಿ ಪ್ರೀತಿ ತುಂಬಿದ ಗೌರವ, ಭಕ್ತಿ.
ಈ ಎಲ್ಲ ಪ್ರೀತಿ, ಭಕ್ತಿ ಮತ್ತು ಗೌರವಗಳಿಗೆ ತಾನೂ ಪಾತ್ರರಾಗಿದ್ದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಾವು ರಾಜ್ಯದ ಜನರಿಗೆ ಅಪಾರ ನೋವಿನ ಅನಿರೀಕ್ಷಿತ ಆಘಾತ ತಂದಿದೆ. ರಾಜಾಡಳಿತ ಇಲ್ಲದಿದ್ದರೂ ರಾಜ ಹೋದಾಗ ಮತ್ತೇನೋ ಕಳೆದುಕೊಂಡ ಭಾವ.. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!