|
(ಚಿತ್ರಕೃಪೆ: ಪ್ರಜಾವಾಣಿ) |
ಡಬ್ಬಿಂಗ್ ತಡೆಯುತ್ತೇವೆ ಎನ್ನುವ ಕೂಗು ತಾರಕಕ್ಕೇರಿರುವ ಈ ಹೊತ್ತಿನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಚಿತ್ರನಿರ್ಮಾಪಕರಲ್ಲಿ ಹಲವರು ನಡೆಸಿದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು. ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಈ ವರದಿಯನ್ನು ನೋಡಿದರೆ ನಿರ್ಮಾಪಕರುಗಳು ಡಬ್ಬಿಂಗ್ ಪರವಾಗಿದ್ದಾರೆ ಎಂಬುದು ಅರಿವಾಗುತ್ತದೆ. ಆದರೆ ಇದಕ್ಕೂ ಮಿಗಿಲಾದದ್ದೇನೆಂದರೆ ಸಿನಿಮಾ ಕಲೆಯಷ್ಟೇ ಅಲ್ಲಾ, ಅದು ವ್ಯಾಪಾರ ಎನ್ನುವುದು ಮನದಟ್ಟಾಗುತ್ತದೆ.
ನಿರ್ಮಾಪಕ ಅನ್ನದಾತನೇ? ಪ್ರೇಕ್ಷಕ ಗ್ರಾಹಕನೇ?
ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು "ಅನ್ನದಾತ"ರೆಂದೂ ಪ್ರೇಕ್ಷಕರನ್ನು "ಅಭಿಮಾನಿ ದೇವರು"ಗಳೆಂದೂ ಕರೆಯುತ್ತಿದ್ದುದನ್ನು ಎಲ್ಲರೂ ಬಲ್ಲೆವು. ಆದರೆ ಚಿತ್ರರಂಗದ ಕೆಲಮಂದಿ "ಸಿನಿಮಾ ಒಂದು ಕಲೆ, ಇದು ಉದ್ಯಮವಲ್ಲ" "ಪ್ರೇಕ್ಷಕ ಕಲಾರಸಿಕ, ಗ್ರಾಹಕನಲ್ಲ" ಎಂದು ಆಡುವ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ವಾಸ್ತವವಾಗಿ ಮೇಲಿನ ಸುದ್ದಿ ಅದನ್ನು ಅಲ್ಲಗಳೆಯುತ್ತಿದೆ. ಸಿನಿಮಾ ಕಲೆಯೂ ಹೌದು, ಪ್ರೇಕ್ಷಕ ರಸಿಕನೂ ಹೌದು. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ಉದ್ಯಮವೂ ಆಗಿದೆ. ಪ್ರೇಕ್ಷಕ ಗ್ರಾಹಕನೂ ಆಗಿದ್ದಾನೆ ಎಂಬುದನ್ನು ಅಲ್ಲಗಳೇಯಲಾಗದು.
ಡಬ್ಬಿಂಗ್ ಬಂದೊಡನೆ ಕನ್ನಡ ಚಿತ್ರರಂಗ ಉದ್ಧಾರವಾಗಿಬಿಡುತ್ತದೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಸಿನಿಮಾ ರಂಗ ಅಳಿದು ಹೋಗುತ್ತದೆ ಎನ್ನಲೂ ಆಗದು. ಚಿತ್ರವೊಂದು ಎಷ್ಟೇ ಕಲಾತ್ಮಕವಾಗಿದೆ ಎಂದರೂ ಅಲ್ಲಿ "ಎಕನಾಮಿಕ್ಸ್" (ಲಾಭ ನಷ್ಟದ ಲೆಕ್ಕಾಚಾರ) ಇದ್ದೇ ಇರುತ್ತದೆ. ಯಾಕೆಂದರೆ ಯಾವ ಸಿನಿಮವನ್ನೂ ಪುಗಸಟ್ಟೆ ತೆಗೆಯಲು ಸಾಧ್ಯವಾಗದು. ಅದಕ್ಕೆ ಹಣ ಬೇಕೇ ಬೇಕು ಮತ್ತು ಹಾಗೆ ತೊಡಗಿಸಿದವನು ಹಾಕಿದ್ದನ್ನು ಕಳೆದುಕೊಳ್ಳಲು ಎಂದೂ ಸಿದ್ಧನಾಗನು. ಹೀಗಿದ್ದಾಗ ಸಹಜವಾಗೇ ಬಂಡವಾಳ ಹಾಕುವವನು ಸಿನಿಮಾ ತಯಾರಾದ ನಂತರದ ಲಾಭ-ನಷ್ಟವನ್ನೂ ಎಣಿಕೆ ಹಾಕಲೇಬೇಕಾಗುತ್ತದೆ. ಆದರೆ ನಿರ್ದೇಶಕ, ತಂತ್ರಜ್ಞರು, ನಟರೂ ಸೇರಿದಂತೆ ಎಲ್ಲಾ ಕಲಾವಿದರಿಗೂ ತಮ್ಮ ಸಂಭಾವನೆ ಸಿಕ್ಕರೆ ಮುಗಿಯಿತು. ಇದನ್ನೆಲ್ಲಾ ನೀಡುವ ನಿರ್ಮಾಪಕನೇ ಚಿತ್ರರಂಗದ ಎಲ್ಲಾ ಕಾರ್ಮಿಕರ ಅನ್ನದಾತ! ನಿರ್ಮಾಪಕರನ್ನು ಹೊರತುಪಡಿಸಿ ಉಳಿದವರಿಗೆ ಒಂದು ಸಿನಿಮಾ ತಯಾರಾದ ನಂತರ ಅದು ಬಿಡುಗಡೆಯಾಗುತ್ತಾ, ಬಿಡುಗಡೆಯಾದರೂ ಓಡುತ್ತಾ, ದುಡ್ಡು ಮಾಡುತ್ತಾ ಅನ್ನೋದೆಲ್ಲಾ ಮಹತ್ವದ್ದಲ್ಲವೇನೋ ಎನ್ನಿಸುತ್ತದೆ. "ವರ್ಷವೊಂದಕ್ಕೆ ನೂರಿಪ್ಪತ್ತು ಸಿನಿಮಾ ಬರುತ್ತೆ, ಅದರಲ್ಲಿ ಐದೋ ಆರೋ ಮಾತ್ರಾ ಲಾಭ ತರುತ್ತೆ ಎಂದು ಒಪ್ಪಿಕೊಳ್ಳುತ್ತಲೇ ನಮ್ಮ ಕಾರ್ಮಿಕರಿಗೆ ೧೨೦ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ, ಅದರಿಂದ ಹೊಟ್ಟೆ ಹೊರೆಯಬೇಕು, ಡಬ್ಬಿಂಗ್ ಬಂದರೆ ಅದು ನಿಲ್ಲುತ್ತದೆ" ಎಂದು ಇವರಾಡುವ ಮಾತಿನ ಹಿಂದಿರುವ ಗೂಡಾರ್ಥವೇನು? ನಷ್ಟವೆಲ್ಲಾ ನಿರ್ಮಾಪಕರದ್ದಾಗಲಿ, ನಮ್ಮ ಸಂಭಾವನೆ ನಮಗೆ ಸಿಗುತ್ತಿರಲಿ ಎಂದಲ್ಲವೇ? ಹೀಗಿದ್ದಾಗ ನಿರ್ಮಾಪಕರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸಹಜವೇ ಅಲ್ಲವೇ? ಬಂಡವಾಳವನ್ನು ಹೂಡುವುದಷ್ಟೇ ಅಲ್ಲದೆ ಅತಿ ಹೆಚ್ಚು ಮಾರುಕಟ್ಟೆ ಗಂಡಾಂತರಕ್ಕೆ(ರಿಸ್ಕಿಗೆ) ತನ್ನನ್ನು ತಾನು ಒಡ್ಡಿಕೊಳ್ಳುವ ನಿರ್ಮಾಪಕನಿಗೇ ಸಿನಿಮಾ ಮಾರುಕಟ್ಟೆಯ ಬಗ್ಗೆ ಮಾತಾಡುವ, ತೀರ್ಮಾನಿಸುವ ಹಕ್ಕಿರುವುದಲ್ಲವೇ? ವಾಸ್ತವ ಹೀಗಿರುವಾಗ ಕನ್ನಡ ಚಿತ್ರರಂಗದ ಮಂದಿ ಡಬ್ಬಿಂಗ್ ಬೇಕೆನ್ನುವ ನಿರ್ಮಾಪಕರನ್ನು "ಕನ್ನಡ ದ್ರೋಹಿ"ಗಳ ಪಟ್ಟಿಗೆ ಸೇರಿಸಲಾರರು ಎಂದುಕೊಳ್ಳೋಣ.
ಇನ್ನು ಸಿನಿಮಾ ಎಷ್ಟೇ ಕಲಾತ್ಮಕವಾದರೂ ಅದನ್ನು ತನ್ನ ದುಡ್ಡು ಮತ್ತು ಸಮಯ ಖರ್ಚು ಮಾಡೇ ನೋಡುವ ಪ್ರೇಕ್ಷಕನು ಕಲಾರಸಿಕನೇ ಆಗಿದ್ದರೂ ಜೊತೆಯಲ್ಲೇ ಗ್ರಾಹಕನೂ ಆಗಿರುತ್ತಾನೆ. ಇಲ್ಲಿ ಸಾಮಾನ್ಯ ಗ್ರಾಹಕನಿಗೆ ಇರುವ ಎಲ್ಲಾ "ಹಕ್ಕುಗಳು" ಅವನಿಗೆ ಇರಬೇಕೆನ್ನುವುದಕ್ಕಿಂತಲೂ "ಗೌರವ" ಇರಬೇಕೆನ್ನುವುದು ಮುಖ್ಯವಾದುದಾಗಿದೆ. ಇಡೀ ಡಬ್ಬಿಂಗ್ ಚರ್ಚೆಯಲ್ಲಿ ಡಬ್ಬಿಂಗ್ ತಡೆಯುವ ಮಾತಾಡುತ್ತಿರುವವರು ಒಮ್ಮೆಯಾದರೂ ಗ್ರಾಹಕನ ಈ ಬೇಕು ಬೇಡಗಳಿಗೆ ಸ್ಪಂದಿಸಿದ್ದಾರೆಯೇ? ಇವರು "ನಾವೆಷ್ಟೊಂದು ಅದ್ಭುತ ಸಿನಿಮಾಗಳನ್ನು ತೆಗೆದಿದ್ದೇವೆ, ಕನ್ನಡಿಗರು ಅವನ್ನು ನೋಡಲ್ಲಾ, ಅವರಿಗೆ ಬೇರೆ ಭಾಷೇದೇ ಬೇಕು" ಎಂದು ದೂರಲು ಮಾತ್ರಾ ಪ್ರೇಕ್ಷಕ ಬಳಕೆಯಾಗುತ್ತಾನೆ! ಸತ್ಯಮೇವ ಜಯತೇ ಬೇಕೆಂದರೆ ಬದುಕು ಜಟಕಾ ಬಂಡಿ ನೋಡಿ ಎನ್ನುವ ಉದ್ಧಟತನ ಇವರದ್ದು! ಈ ಮಂದಿ ನಮಗೇನು ಬೇಕು ಬೇಡ ಎಂಬುದನ್ನು ತೀರ್ಮಾನಿಸುವ ದೊಣೆನಾಯಕರಾಗಿಬಿಡುತ್ತಾರೆ! ಇದು ಬಿಟ್ಟು ಇನ್ನುಳಿದಂತೆ ಗ್ರಾಹಕನ ಯಾವುದೇ ಬೇಕು ಬೇಡಗಳಿಗೆ ಇವರಿಂದ ಸ್ಪಂದನೆಯೂ ಇಲ್ಲಾ, ಬೆಲೆಯೂ ಇಲ್ಲಾ. ಹಾಗೆ ಗ್ರಾಹಕ, ಇವರದೇ ಭಾಷೆಯಲ್ಲಿ ಪ್ರೇಕ್ಷಕ, ಕಲಾರಸಿಕನ ಬಗ್ಗೆ ಕಿಂಚಿತ್ತದರೂ ಗೌರವವಿದ್ದಿದ್ದರೆ ಅಷ್ಟೊಂದು ಮಂದಿ ಬೇಕು ಬೇಕು ಎನ್ನುತ್ತಿದ್ದರೂ... ಮೂರೇ ದಿನದಲ್ಲಿ ಮೂವತ್ತು ಸಾವಿರ ಮಂದಿ ಅಂತರ್ಜಾಲ ತಾಣದಲ್ಲಿಯೇ ನೋಡಿ ತಣಿಯುತ್ತಿದ್ದುದನ್ನು ಸಹಿಸದೇ "ಸತ್ಯಮೇವ ಜಯತೇ" ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ತೆಗೆಸಿ ಹಾಕುತ್ತಿರಲಿಲ್ಲಾ!! (ಅಯ್ಯೋ, ಅದು ನಾವು ತೆಗೆಸಿದ್ದಲ್ಲಾ, ಅವರೇ ತೆಗೆದದ್ದು ಎನ್ನುವ ಗೋಸುಂಬೆ ಮಾತುಗಳನ್ನು ಇನ್ನು ನಿರೀಕ್ಷಿಸಬಹುದು!) ಹೀಗಿದ್ದಾಗ ಚಲನಚಿತ್ರವನ್ನು ನೋಡುವವನೊಬ್ಬ ತನ್ನ ಬೇಕು ಬೇಡಗಳ ಹಕ್ಕನ್ನು ಗ್ರಾಹಕನಾಗಿ ಚಲಾಯಿಸದೇ ಇರುತ್ತಾನೆಯೇ? ತೀರಾ ಸಾರಾಸಗಟು ನಿಶೇಧ ಎನ್ನುತ್ತಾ ನೋಡುಗನ ಅವಕಾಶಗಳ ಬಾಗಿಲುಗಳನ್ನು ಮುಚ್ಚಿದರೆ ಅವನಾದರೋ ಏನು ತಾನೇ ಮಾಡಬಲ್ಲ? ಇರುವ ಕಾನೂನಿನ ಎಲ್ಲ ಅವಕಾಶಗಳನ್ನು ಬಳಸಿ ಕೊಳ್ಳುವುದು ಸಹಜ!
ಇರಲಿ, ನಿರ್ಮಾಪಕ ವ್ಯಾಪಾರಿಯೋ ಅಲ್ಲವೋ, ಸಿನಿಮಾ ಸರಕೋ ಅಲ್ಲವೋ ಬೇರೆಯದೇ ಮಾತು. ಆದರೆ ಸಿನಿಮಾವನ್ನು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನೊಬ್ಬನಿಗೆ ತನಗೆ ಬೇಕಾದುದನ್ನು ನೋಡುವ, ಮೆಚ್ಚುವ, ತಿರಸ್ಕರಿಸುವ ಆಯ್ಕೆ ಸ್ವಾತಂತ್ರ್ಯವಿರುವುದನ್ನಾದರೂ ಚಿತ್ರರಂಗ ಗೌರವಿಸಬೇಕಾಗುತ್ತದೆ. ಇದನ್ನು ಕಡೆಗಣಿಸಿದಾಗ ಕಾನೂನು ಈ ಹಕ್ಕನ್ನು ಎತ್ತಿಹಿಡಿಯುವುದು ಮಾತ್ರಾ ದಿಟ! ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲಾ, ದೇಶದ ಪ್ರಧಾನಿಯೇ ಮಧ್ಯಸ್ತಿಕೆಗಿಳಿದರೂ ಆಗಬೇಕಾದ್ದೂ, ಆಗುವುದೂ ಇದೇ!