ಕನ್ನಡಕ್ಕೆ ಡಬ್ಬಿಂಗ್ ಬರಲು ಬಿಡದೇ ತಡೆಯುತ್ತಿರುವ ಹತೋಟಿಕೂಟವೊಂದು ಇದೆ ಎನ್ನುವುದು ಈ ಬಾರಿ ಅನುಮಾನಕ್ಕೆಡೆಯಿರದ ರೀತಿಯಲ್ಲಿ ಸಾಬೀತಾಗುತ್ತಿದೆ. ಕನ್ನಡ ಗ್ರಾಹಕ ಕೂಟವು ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ - ಕಾಂಪಿಟೇಶನ್ ಕಮಿಶನ್ ಆಫ಼್ ಇಂಡಿಯಾ) ಸಲ್ಲಿಸಿದ್ದ ದೂರನ್ನು ಆಧರಿಸಿ ಆಯೋಗದ ಶೋಧನಾ ಸಮಿತಿಯು ಸಿದ್ಧಪಡಿಸಿದೆಯೆನ್ನಲಾದ ವರದಿಯೊಂದು ಅದು ಹೇಗೋ ಮಾಧ್ಯಮಗಳಿಗೆ ಸೋರಿ ಹೋಗಿ ಪ್ರಕಟವಾದ ಕ್ಷಣದಿಂದಲೇ ಕಲ್ಲುಬಿದ್ದ ಜೇನುಗೂಡಿನಂತೆ ಇಡೀ ಹತೋಟಿ ಕೂಟವು ಚಡಪಡಿಸಲು ಶುರುಮಾಡಿ ತಾನಾಗೇ ಹೊರಬಂದು ತನ್ನ ಅಸ್ತಿತ್ವವನ್ನು ಸಾರುತ್ತಿರುವುದು ಕಾಣುತ್ತಿದೆ. ಇದನ್ನು ಕಂಡಾಗ ಕನ್ನಡದಲ್ಲಿರುವ ಅಘೋಶಿತ ಡಬ್ಬಿಂಗ್ ನಿಶೇಧ ಇನ್ನಿಲ್ಲವಾಗುವ ಗಳಿಗೆ ಹತ್ತಿರವಾದಂತೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತಾದ ಕೆಲ ವಿಶಯಗಳತ್ತ ಕಣ್ಣು ಹಾಯಿಸೋಣ.
೬೦ರ ದಶಕದ ಐತಿಹಾಸಿಕ ನಿಶೇಧದಿಂದೀಚೆಗೆ...
ಕನ್ನಡ ಚಿತ್ರರಂಗ ಮದ್ರಾಸಿನ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ಡಬ್ಬಿಂಗಿನಿಂದಾಗಿ ಕನ್ನಡದಲ್ಲಿಯೇ ಚಿತ್ರ ತೆಗೆಯುವುದು ಕಡಿಮೆಯಾಗಿ ಕನ್ನಡ ಕಲಾವಿದರಿಗೆ, ಚಿತ್ರೋದ್ಯಮಿಗಳಿಗೆ ಅವಕಾಶ ಇಲ್ಲವಾಗುತ್ತಿದೆ ಎಂದು ಡಬ್ಬಿಂಗ್ ವಿರೋಧಿ ಹೋರಾಟವೊಂದು ನಡೆದು ನಮ್ಮ ನಾಡಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳು ಬಿಡುಗಡೆಯಾಗುವುದು ನಿಂತಿತು. ಆಗಲೂ ಇದು ಸಂವಿಧಾನ, ನೆಲದ ಕಾನೂನುಗಳಿಗೆ ವಿರುದ್ಧವಾಗಿಯೇ ಇತ್ತು. ಬಹುಷಃ, ಈ ಏರ್ಪಾಟಿನಿಂದಾಗಿ ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನು ಆ ಭಾಷೆಗಳು ಬಾರದು ಎನ್ನುವ ಕಾರಣಕ್ಕೆ ನೋಡದೆ (ಆ ಮೂಲಕ ಅವುಗಳಿಗೆ ಯಶಸ್ಸು ತಂದುಕೊಡದೆ) ಕನ್ನಡ ಚಿತ್ರಗಳನ್ನು ಮಾತ್ರಾ ನೋಡಿ ಮೆಚ್ಚಿ ಗೆಲ್ಲಿಸುವ ಹಂತಕ್ಕೆ ಬಂದರೇನೋ ಗೊತ್ತಿಲ್ಲಾ!
ನಿಜವಾದ ಭಯ ಏನೆಂದರೆ...
ಆದರೆ ನಿಧಾನವಾಗಿ ಪರಭಾಷೆಯ ಚಿತ್ರಗಳು ಪ್ರತಿಊರಿನಲ್ಲೂ ಬೆಳಗಿನ ಆಟ, ಒಂದು ಟಾಕೀಸಿನಿಂದ ಶುರುವಾಗಿ ಇದೀಗ ಕನ್ನಡನಾಡಲ್ಲೇ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿವೆ. ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿಯೂ ದೊಡ್ಡ ಕನ್ನಡ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗುತ್ತಿದ್ದ ದಿನಗಳು ಇತ್ತೀಚೆಗೆ ಮರೆಯಾಗಿ ಹಬ್ಬದ ಸಂದರ್ಭದಲ್ಲೂ ಪರಭಾಷೆಯ ದೊಡ್ಡಚಿತ್ರ ಬರುತ್ತಿದೆ ಎಂದು ಬೆದರಿ ಕನ್ನಡ ಚಿತ್ರಗಳು ಬಿಡುಗಡೆ ಆಗುವುದೇ ನಿಂತು ಹೋಗಿದೆ. ಇದು ಚಲನಚಿತ್ರಗಳಿಗೆ ಸಂಬಂಧಿಸಿದಂತಾದರೆ ದೂರದರ್ಶನಗಳದ್ದು ಮತ್ತೊಂದು ಕಥೆ! ಪ್ರತಿಮನೆಯಲ್ಲೂ ಮಕ್ಕಳು ನೋಡುವ ಕಾರ್ಟೂನ್ ಸಿನಿಮಾಗಳು, ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್ ಥರದ ಅನೇಕ ಚಾನೆಲ್ಲುಗಳಲ್ಲಿ ಕನ್ನಡವಿರದೆ, ಕನ್ನಡದ ಮಕ್ಕಳು ಚಿಕ್ಕಂದಿನಿಂದಲೇ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸುವ ಪರಿಸ್ಥಿತಿ ಹುಟ್ಟಿಕೊಂಡಿದೆ. ಹೀಗೆ ಬಾಲ್ಯದಿಂದಲೇ ಮನರಂಜನೆಯ ವಿಷಯದಲ್ಲಿ ಪರಭಾಷೆಗೆ ಅಂಟಿಕೊಳ್ಳುವ ಮಕ್ಕಳು ನಾಳೆ ಕನ್ನಡ ಚಿತ್ರಗಳನ್ನು ನೋಡುವುರಾದರೋ ಹೇಗೇ? ಡಬ್ಬಿಂಗ್ ನಿಶೇಧ ಎನ್ನುವುದು ಇಂದು ಕನ್ನಡಿಗರನ್ನು ಕನ್ನಡದಿಂದ ದೂರ ಮಾಡುವ ಕ್ರಮವಾಗಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ.
ಇಂದಿನ ಬೆಳವಣಿಗೆಗೆ ಕಾರಣ...
ಇಷ್ಟಕ್ಕೂ ನಮ್ಮ ವಿರೋಧವಿರುವುದು ಸಾರಾಸಗಟು ನಿಶೇಧಕ್ಕೆ ಮಾತ್ರವೇ! ಆದರೆ ಖಾಸಗಿ ಟಿ.ವಿ ವಾಹಿನಿಯವರು ಸತ್ಯಮೇವ ಜಯತೇ ಎಂಬ ಹಿಂದೀ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಮುಂದಾದಾಗ, ಚಿತ್ರೋದ್ಯಮದ ಕೆಲಗಣ್ಯರು ಸಾರ್ವಜನಿಕವಾಗಿ "ಸೌಹಾರ್ದತೆ"ಯಿಂದ ಮಾಲೀಕರೇ ಒಪ್ಪಿ ಹಿಂತೆಗೆದೆರೆನ್ನುತ್ತಾ ಕನ್ನಡ ಕಾರ್ಯಕ್ರಮವನ್ನು ಪ್ರಸಾರ ಮಾಡುವುದನ್ನು ತಡೆಹಿಡಿದದ್ದಲ್ಲದೆ... ವಾಹಿನಿಯವರು ವೆಬ್‌ಕ್ಯಾಸ್ಟ್ ಮಾಡಿದ್ದಕ್ಕೂ ಕತ್ತರಿ ಹಾಕಿಸಿದ್ದರಿಂದಾಗಿ ಬೇರೆ ದಾರಿಯಿರದ ನೋಡುಗರು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದರಿಂದಾಗಿ ಭಾರತೀಯ ಸ್ಪರ್ಧಾ ಆಯೋಗ(ಸಿ.ಸಿ.ಐ)ಕ್ಕೆ ದೂರು ಸಲ್ಲಿಸಲಾಯಿತು. ಸದರಿ ದೂರಿನ ತನಿಖೆಯನ್ನು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿಗೆ ಸಿ.ಸಿ.ಐ ಒಪ್ಪಿಸಿತು. ಈ ಸಮಿತಿಯ ವರದಿಯೇ ಇದೀಗ ಮಾಧ್ಯಮಗಳಿಗೆ ಸೋರಿ ಹೋಗಿ ಊರೆಲ್ಲಾ ಢಾಣಾಡಂಗೂರವಾಗಿರುವುದು! ಈ ವರದಿ ಪತ್ರಿಕೆಯಲ್ಲಿ ಪ್ರಕಟವಾದದ್ದೇ ತಡ ಡಬ್ಬಿಂಗ್ ವಿರೋಧಿ ಹೋರಾಟವನ್ನು ನಡೆಸುವುದಾಗಿ ಚಿತ್ರರಂಗ ಸಾರಿತು! ಅಲ್ಲೂ ಪರ ವಿರೋಧದ ವಾಗ್ವಾದಗಳು ನಡೆದವು. ಡಬ್ಬಿಂಗ್ ನಿಶೇಧ ಕಾನೂನುಬಾಹಿರ ಎನ್ನುವುದನ್ನು ಒಪ್ಪದ ಕೆಲವರಂತೂ ಸಿಸಿಐ ಅಸ್ತಿತ್ವವನ್ನೇ ಪ್ರಶ್ನಿಸಿದರು! ವಾಸ್ತವವಾಗಿ ನ್ಯಾಯಾಲಯವೊಂದು ನೀಡುವ ತೀರ್ಪು ಸಮ್ಮತವಲ್ಲದಿದ್ದರೆ ಮೇಲಿನ ನ್ಯಾಯಾಲಯಕ್ಕೆ ಹೋಗಬೇಕಲ್ಲದೇ ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನೆ ಮಾಡೊದು ಹತಾಶೆಯ ಪರಮಾವಧಿ ಎನ್ನಿಸುತ್ತದೆ! ಹಾಸ್ಯಾಸ್ಪದವಾಗುತ್ತದೆ!
ವಿಷಯ ಡಬ್ಬಿಂಗ್ ಅಲ್ಲಾ... ನುಡಿಹಮ್ಮುಗೆಯದು!
ವಾಸ್ತವವಾಗಿ ಮೇಲ್ನೋಟಕ್ಕೆ ಇದು ಕನ್ನಡದಲ್ಲಿ ಮನರಂಜನೆ ಬೇಕೆಂದು ಹಟ ಹಿಡಿದ ಕೆಲವರ ಕಾನೂನು ಹೋರಾಟದ ಹಾಗೆ ಕಂಡರೂ ಆಳದಲ್ಲಿ ಇದು ಕನ್ನಡದ ನುಡಿಹಮ್ಮುಗೆಯ ವಿಷಯಕ್ಕೆ ಸಂಬಂಧಿಸಿದಂತಹುದು. ಕನ್ನಡಕ್ಕೆ ಮಾತ್ರಾ ಸೀಮಿತವಲ್ಲದ ಈ ನುಡಿಹಮ್ಮುಗೆ, ನುಡಿಯೊಂದು ಎಷ್ಟೆಲ್ಲಾ ಹರವು ಹೊಂದಿರಬೇಕೆನ್ನುವುದನ್ನು ಹೇಳುತ್ತದೆ. ನುಡಿಯೊಂದರ ಇಂತಹ ಹರವು... ಆಯಾಜನಾಂಗದ ಕಲಿಕೆ, ಮನರಂಜನೆ, ದುಡಿಮೆ, ಗ್ರಾಹಕಸೇವೆ ಮೊದಲಾದ ಹತ್ತುಹಲವು ಆಯಾಮಗಳನ್ನು ಹೊಂದಿರುತ್ತದೆ ಮತ್ತು ಇಲ್ಲೆಲ್ಲಾ ನುಡಿಯೊಂದು ತನ್ನ ಅಸ್ತಿತ್ವವನ್ನು ಹೊಂದಿರಬೇಕಾದ್ದು ಮಹತ್ವದ್ದಾಗಿರುತ್ತದೆ. ಇದಕ್ಕೆ ಡಬ್ಬಿಂಗ್ ಕೂಡಾ ಒಂದು ಸಾಧನವಾಗಿದೆ ಎನ್ನುವುದನ್ನು ವಿಶ್ವಸಂಸ್ಥೆ(UNESCO)ಯೂ ಬಾರ್ಸಿಲೋನಾ ಭಾಷಾ ಘೋಷಣೆಯ ಮೂಲಕ ಎತ್ತಿಹಿಡಿದಿರುವುದನ್ನು ಗಮನಿಸಿದಾಗ "ಡಬ್ಬಿಂಗ್ ನುಡಿಯೊಂದಕ್ಕೆ ಮಾರಕವಲ್ಲಾ, ಬದಲಿಗೆ ಪೂರಕ" ಎನ್ನುವುದು ಅರಿವಾಗುತ್ತದೆ. ಒಟ್ಟಾರೆ ಡಬ್ಬಿಂಗ್ ಎನ್ನುವುದು "ನುಡಿಹಮ್ಮುಗೆ"ಯಲ್ಲೊಂದು ಪ್ರಮುಖ ಅಸ್ತ್ರವಾಗಿದೆ ಎಂಬುದು ಮಾತ್ರಾ ಸತ್ಯ. ಕನ್ನಡದ ನುಡಿಹರವಿನ ಒಂದು ಅಂಗ, ಕನ್ನಡಿಗರ ಮನರಂಜನೆ. ಇಲ್ಲಿ ಕನ್ನಡವಿರಬೇಕಾದ್ದು ಕನ್ನಡಿಗರ ಅಸ್ತಿತ್ವ ಮತ್ತು ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದಾಗಿದೆ. ಹಾಗೆಂದು ಇದು ಮನರಂಜನೆ ಮಾತ್ರಾ ಸೀಮಿತವಾದುದಲ್ಲಾ! ಮನರಂಜನೆಯೂ ಇದರಲ್ಲಿ ಸೇರಿರುವುದರಿಂದಾಗಿ ಇಂದು ಡಬ್ಬಿಂಗ್ ಹೋರಾಟ, ಡಬ್ಬಿಂಗ್ ಚರ್ಚೆ ಮುಂಚೂಣಿಗೆ ಬಂದು ನಿಂತಿದೆ...
ಡಬ್ಬಿಂಗ್ ಬಂದರೆ ಕನ್ನಡ ಬೆಳೆಯುತ್ತದೆಯೇ? ತೊಂದರೆ ಇಲ್ಲವೇ?
ಈ ಪ್ರಶ್ನೆಗೆ ಉತ್ತರ "ಹೌದು" ಮತ್ತು "ಇದೆ" ಎಂಬುದಾಗಿದೆ. ಬದಲಾವಣೆ ಎಂದಿಗೂ ನೋವಿನಿಂದಲೇ ಕೂಡಿರುವುದು ಸಹಜ. ಡಬ್ಬಿಂಗ್ ಬಂದೊಡನೇ ಕನ್ನಡ ಉದ್ಧಾರವಾಗಿಬಿಡುತ್ತದೆ ಎನ್ನುವ ಭ್ರಮೆ ನಮಗೂ ಇಲ್ಲಾ. ಮೊದಲಿಗೆ ಕೆಟ್ಟಾಕೊಳಕಾ ಚಿತ್ರಗಳ ಸುರಿಮಳೆಯೂ ಆದೀತು, ಗುಣಮಟ್ಟದಲ್ಲೂ ಡಬ್ ಆದವು ಕೆಟ್ಟದಾಗಿರಬಹುದು! ಮುಂದೆ ಇದು ಸುಧಾರಿಸುವುದಂತೂ ಖಂಡಿತಾ! ಯಾಕೆಂದರೆ ಮಾರುಕಟ್ಟೆಯೇ ಬದಲಾವಣೆಯನ್ನು ನಿರ್ಣಯಿಸುತ್ತದೆ! ಡಬ್ಬಿಂಗ್ ಬಂದೊಡನೆಯೇ ಮೂಲಚಿತ್ರಗಳ ಸಂಖ್ಯೆ ಕಡಿಮೆಯೂ ಆಗಬಹುದು. ಆದರೆ ಡಬ್ಬಿಂಗ್ ಎನ್ನುವುದು, ತಮ್ಮ ಮನರಂಜನೆಗಾಗಿ ನಿಧಾನವಾಗಿ ಕನ್ನಡದಿಂದಲೇ ದೂರಾಗುತ್ತಿರುವ ಪ್ರೇಕ್ಷಕರನ್ನು ಖಚಿತವಾಗಿ ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಡಬ್ಬಿಂಗ್ ಚಿತ್ರಗಳು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ನೆಲದ ಸೊಗಡಿನ, ನಮ್ಮ ಬೇರ್ಮೆಯನ್ನು ಎತ್ತಿಹಿಡಿವ ಚಿತ್ರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಾವಿರಾರು ಜನರಿಗೆ ಇದು ಅನ್ನವೇ ಆಗಿದ್ದರೂ ಕೋಟ್ಯಾಂತರ ಜನರಿಗೆ ಮನರಂಜನೆ ಎನ್ನುವುದನ್ನು ಕಡೆಗಣಿಸಲಾಗದು. ಕನ್ನಡದ ಮನರಂಜನೆ ನಿಧಾನ ಸಾವಿಗೆ ತುತ್ತಾಗುತ್ತಿರುವುದನ್ನು ಗಮನಿಸಬಲ್ಲ ಜನರು ಡಬ್ಬಿಂಗನ್ನು ಒಂದು ಮದ್ದು ಎಂದು ಗುರುತಿಸಬಲ್ಲರು. ಈ ಮದ್ದು ಕೆಲವರಿಗೆ ಕಹಿಯೂ ಆಗಿರಬಹುದು... ಆದರೆ ಡಬ್ಬಿಂಗಿನಿಂದಾಗಿ ನಮ್ಮ ಸಂಸ್ಕೃತಿ ಹಾಳಾಗುತ್ತದೆ, ಭಾಷೆ ಅಳಿಯುತ್ತದೆ ಮುಂತಾಗಿ ಹೇಳುವುದು ಮಾತ್ರಾ ಪೊಳ್ಳು ಎನ್ನಿಸುತ್ತದೆ. ಕನ್ನಡ ಚಿತ್ರೋದ್ಯಮವೂ ಕೂಡಾ ಡಬ್ಬಿಂಗ್ ಒಡ್ಡುವ ಗುಣಮಟ್ಟದ ಸವಾಲನ್ನು ಸರಿಯಾಗಿ ಸ್ವೀಕರಿಸಿ ಒಳ್ಳೊಳ್ಳೆಯ ಸ್ವಂತಿಕೆಯ ಚಿತ್ರಗಳನ್ನು ನೀಡುವ ಮೂಲಕವೇ ತನ್ನ ಅಸ್ತಿತ್ವ ಕಾಯ್ದುಕೊಳ್ಳಬೇಕಲ್ಲದೆ ಆ ಸಬ್ಸಿಡಿ, ಈ ವಿನಾಯಿತಿ, ಆ ನಿಶೇಧ, ಈ ಸಹಾಯಧನಗಳಿಂದ ಅಲ್ಲಾ!! ಇಷ್ಟಕ್ಕೂ ಕನ್ನಡದ ಪ್ರೇಕ್ಷಕನು ತನಗೇನು ಬೇಕೋ ಅದನ್ನು ಮಾತ್ರವೇ ಹೀರಿಕೊಳ್ಳಬಲ್ಲನಲ್ಲದೆ ಡಬ್ಬಿಂಗ್ ಆದವುಗಳನ್ನೆಲ್ಲಾ ಒಪ್ಪಿಕೊಂಡು ಮೂಲಚಿತ್ರಗಳಿಂದ ದೂರಾಗುತ್ತಾನೆ ಎನ್ನುವಂತಿಲ್ಲಾ! ಹಾಗಾಗಿ ಕನ್ನಡ ಚಿತ್ರರಂಗದ ಮಂದಿ ಸ್ಪರ್ಧೆಯನ್ನು ಎದುರಿಸುವ ರಾಜಮಾರ್ಗವನ್ನು ಹಿಡಿಯಲಿ ಮತ್ತು ಅದರಲ್ಲಿ ಗೆಲ್ಲಲಿ ಎಂದು ಆಶಿಸೋಣ. ಏನಂತೀ ಗುರೂ?
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!